ಶುಕ್ರವಾರ, ಡಿಸೆಂಬರ್ 24, 2021

ಸಾಹಿತ್ಯ ಪ್ರೀತಿ ಮತ್ತು ಹೊಸ ತಲೆಮಾರಿನ ವೈರುಧ್ಯ

ಡಿಸೆಂಬರ್ 2021ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾದ ಲೇಖನ

ಈಗಿನ ಯುವಜನರಲ್ಲಿ ಭಾಷೆ-ಸಾಹಿತ್ಯ ಪ್ರೀತಿ ಹೇಗಿದೆ ಎಂದು ಸೂಕ್ಷ್ಮವಾಗಿ ಗಮನಿಸಿದರೆ ಎರಡು ವೈರುಧ್ಯಗಳು ಗೋಚರಿಸುತ್ತವೆ: ಒಂದು ಕಡೆ, ಭಾಷೆ-ಸಾಹಿತ್ಯದ ಕುರಿತು ಸಾಕಷ್ಟು ಅಭಿಮಾನ ಬೆಳೆಸಿಕೊಂಡಿರುವ, ಸಾಹಿತ್ಯದ ಅಧ್ಯಯನ ಮತ್ತು ರಚನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿರುವ ಯುವಜನತೆ; ಇನ್ನೊಂದು ಕಡೆ, ಭಾಷೆ-ಸಾಹಿತ್ಯದ ಕುರಿತು ಯಾವ ಆದರಾಭಿಮಾನವೂ ಇಲ್ಲದ, ಬದುಕು ಹಾಗೂ ಭವಿಷ್ಯದ ಕುರಿತು ಹೇರಳವಾದ ಸಿನಿಕತೆಯನ್ನು ಬೆಳೆಸಿಕೊಂಡಿರುವ ಯುವಜನತೆ. ಈ ಎರಡು ಅಂಚುಗಳು ನಮ್ಮನ್ನು ಚಕಿತರನ್ನಾಗಿಯೂ, ವಿಷಣ್ಣರನ್ನಾಗಿಯೂ ಮಾಡುವುದಿದೆ. ಸಮಾಜದಲ್ಲಿರುವ ಎಲ್ಲರೂ ಏಕಪ್ರಕಾರವಾಗಿ ಸಾಹಿತ್ಯ-ಮಾನವಿಕಶಾಸ್ತ್ರಗಳ ಬಗ್ಗೆ ಪ್ರೀತಿಯನ್ನೋ ಅಭಿಮಾನವನ್ನೋ ಬೆಳೆಸಿಕೊಳ್ಳಬೇಕಾಗಿಲ್ಲ ನಿಜ, ಆದರೆ ಅವುಗಳಿಂದ ತೀರಾ ದೂರಸರಿದರೆ ಬದುಕಿಗೇನು ಸ್ವಾರಸ್ಯ? ನಾವಿರುವ ಕ್ಷೇತ್ರ, ಮಾಡುತ್ತಿರುವ ಉದ್ಯೋಗಗಳು ಭಿನ್ನವಾಗಿರಬಹುದು, ಆದರೆ ಭಾಷೆ-ಸಾಹಿತ್ಯದ ಪ್ರೀತಿ ಒಟ್ಟಾರೆ ಜೀವನಕ್ಕೆ ತಂದುಕೊಡುವ ವೈವಿಧ್ಯತೆ, ಜೀವಂತಿಕೆ, ಚೆಲುವು, ಒಲವುಗಳು ಸುಖಾಸುಮ್ಮನೆ ಹೇಗೆ ಬರುವುದು ಸಾಧ್ಯ?

ಇಂತಹದೊಂದು ಸನ್ನಿವೇಶ ಉದ್ಭವಿಸಲು ಏನು ಕಾರಣ ಎಂದು ಯೋಚಿಸಿದರೆ ಅನೇಕ ಅಂಶಗಳು ಕಣ್ಣಮುಂದೆ ಬರುತ್ತವೆ. ಕಾಲದ ಓಟದಲ್ಲಿ ನಾವು ಬಹಳ ದೂರ ಸಾಗಿ ಬಂದಿದ್ದೇವೆ. ಬದುಕಿನ ಉದ್ದೇಶ, ವಿಧಾನ, ದೃಷ್ಟಿಕೋನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದರಲ್ಲೂ ಬದುಕಿನ ಮೊದಲ ಹದಿನೈದು-ಇಪ್ಪತ್ತು ವರ್ಷಗಳು ಅನೇಕ ಪ್ರಭಾವಗಳಿಂದ ಸುತ್ತುವರಿದಿವೆ. ಜೀವನ ರೂಪೀಕರಣಗೊಳ್ಳುವ ಈ ಸುವರ್ಣಕಾಲದಲ್ಲಿ ವಾಸ್ತವವಾಗಿಯೂ ಏನು ನಡೆಯುತ್ತಿದೆ ಎಂದು ನೋಡೋಣ.

ಕೌಟುಂಬಿಕ ವಾತಾವರಣ:

ಬಾಲ್ಯಕಾಲವು ನಮ್ಮ ಜೀವನವನ್ನು ನಿರ್ಧರಿಸುವ ಬಹುಮುಖ್ಯ ಘಟ್ಟ ಎಂಬುದನ್ನು ಎಲ್ಲರೂ ಬಲ್ಲೆವು. ಈ ಬಾಲ್ಯ ಎಷ್ಟರಮಟ್ಟಿಗೆ ಬಾಲ್ಯವಾಗಿ ಉಳಿದಿದೆ? ಯೋಚಿಸಿದರೆ ಅನೇಕ ಸಲ ಆತಂಕವಾಗುತ್ತದೆ. ಸಮಾಜದ ವಿನ್ಯಾಸ, ಚಲನೆ, ಚಟುವಟಿಕೆಗಳು ಬದಲಾಗಿವೆ. ಕುಟುಂಬದ ಸ್ವರೂಪದಲ್ಲಿ ಮಹತ್ವದ ಸ್ಥಿತ್ಯಂತರಗಳುಂಟಾಗಿವೆ. ಕೂಡುಕುಟುಂಬಗಳು ಇಲ್ಲವೇ ಇಲ್ಲ ಎಂಬಷ್ಟು ಇಲ್ಲ. ನ್ಯೂಕ್ಲಿಯರ್ ಕುಟುಂಬಗಳ ದೆಸೆಯಲ್ಲಿ ಅಜ್ಜಿ, ತಾತ, ಅತ್ತೆ, ಮಾವ, ದೊಡ್ಡಪ್ಪ, ಚಿಕ್ಕಮ್ಮ, ಅತ್ತಿಗೆ, ಸೊಸೆ ಇತ್ಯಾದಿ ಸಂಬಂಧಗಳೆಲ್ಲ ಬಹುತೇಕ ಹೊರಟುಹೋಗಿವೆ. ಪರಿಚಯವಾಗುವ ಹೊಸ ವ್ಯಕ್ತಿ ಒಂದೋ ಅಂಕಲ್ ಇಲ್ಲವೇ ಆಂಟಿ. 

ಕೌಟುಂಬಿಕ ಸಮಾರಂಭಗಳು, ಹಬ್ಬ-ಹರಿದಿನಗಳು ಇತ್ಯಾದಿಗಳೆಲ್ಲ ಮಾಯವಾಗಿವೆ; ಇದ್ದರೂ ಎಲ್ಲವೂ ಯಾಂತ್ರಿಕ, ಎಲ್ಲದರಲ್ಲೂ ವಾಣಿಜ್ಯಕ ದೃಷ್ಟಿಕೋನ. ಎಲ್ಲರೂ ತಮ್ಮ ಉದ್ಯೋಗ, ಸಾಧನೆಗಳಲ್ಲಿ ವ್ಯಸ್ತರಾಗಿದ್ದಾರೆ. ಬಾಲ್ಯಕಾಲದಲ್ಲಿ ವ್ಯಕ್ತಿಯ ಭಾವಪೋಷಣೆ ಮಾಡುವ ಸಹಜ ಸುಂದರ ವಾತಾವರಣ ಈಗ ಹಳ್ಳಿಗಳಲ್ಲೂ ಉಳಿದುಕೊಂಡಿಲ್ಲ. ಮನೆಗಳಲ್ಲಿ ಪತ್ರಿಕೆ, ಪುಸ್ತಕ ಓದುವ ವಾತಾವರಣ ಇದ್ದರೆ ಮಕ್ಕಳಲ್ಲೂ ಆ ಪ್ರೀತಿ ಸಹಜವಾಗಿಯೇ ಬೆಳೆಯುತ್ತದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಬದುಕನ್ನು ಸ್ಪರ್ಧೆಯನ್ನಾಗಿ ತೆಗೆದುಕೊಂಡಿರುವ ಅನೇಕ ಕುಟುಂಬಗಳಲ್ಲಿ ಇಂತಹ ಸನ್ನಿವೇಶ ನಿಧಾನಕ್ಕೆ ಮರೆಯಾಗುತ್ತಿದೆ. ದೊರೆತ ಅಲ್ಪಸ್ವಲ್ಪ ಸಮಯವನ್ನು ಮೊಬೈಲ್, ಟಿವಿಗಳು ಆವರಿಸಿಕೊಂಡಿವೆ.

ಶಾಲಾ ಪರಿಸರ:

ಮೊದಲ ಪಾಠಶಾಲೆಯೆನಿಸಿದ ಮನೆಯಲ್ಲಿ ಆರಂಭವಾದ ಭಾವಪೋಷಣೆ ಶಾಲೆಯಲ್ಲಿ ಮುಂದುವರಿಯಬೇಕು; ಅದು ಎರಡನೆಯ ಮನೆ, ಅಥವಾ ಮನೆಯ ವಿಸ್ತರಣೆ. ಆದರೆ ಅಂತಹ ವಾತಾವರಣವೂ ಉಳಿದುಕೊಂಡಿಲ್ಲ. ಬದುಕಿನ ವೇಗದ ಓಟಕ್ಕೆ ಶಾಲೆಯಲ್ಲಿಯೇ ಟೊಂಕ ಕಟ್ಟಿಯಾಯಿತು. ಇದು ಸ್ಪರ್ಧಾತ್ಮಕ ಜಗತ್ತು, ನೀನು ಓಡದೇ ಇದ್ದರೆ ಹಿಂದೆ ಉಳಿಯುತ್ತೀಯಾ ಎಂಬ ಮಂತ್ರಪಠನೆ ಅಲ್ಲಿಯೇ ಆರಂಭವಾಗುತ್ತದೆ. ಅಲ್ಲಿಗೆ ಪಠ್ಯಪುಸ್ತಕ, ಪರೀಕ್ಷೆಗಳ ಹೊರತಾಗಿ ಬೇರೇನೂ ಬೇಡ ಎಂಬ ಮನಸ್ಥಿತಿ ಮೂಡಿಯಾಯಿತು; ಈ ಮಕ್ಕಳಿಗೆ ಇನ್ನೇನೂ ಮುಖ್ಯವಲ್ಲ. ಮೊದಲಾದರೆ ಆರಂಭದ ಆರು ವರ್ಷದ ಅವಧಿಯಾದರೂ ಮನೆಯಲ್ಲಿಯೇ ಕಳೆದುಹೋಗುತ್ತಿತ್ತು. ಈಗ ಮಗುವಿಗೆ ಉಸಿರಾಡಲೂ ಸಮಯವಿಲ್ಲ. ಅಂಬೆಗಾಲಿಕ್ಕುವ ಮಗು ಹಾಗೆ ಎದ್ದುನಿಲ್ಲಲು ಪ್ರಯತ್ನಿಸುವ ಹೊತ್ತಿಗೆ ಪ್ಲೇಹೋಂ ಸೇರಿಯಾಯಿತು. ಆಮೇಲೆ ಪ್ರೀನರ್ಸರಿ, ನರ್ಸರಿ, ಕೇಜಿಗಳ ಗೌಜು ಆರಂಭ. ಹಾಗೆ ಕಳೆದುಹೋದ ಮಗು ಮತ್ತೆ ಕೈಗೆ ಸಿಗುವುದೇ ಇಲ್ಲ.

ಬದಲಾದ ವಿದ್ಯಾರ್ಥಿ ಜೀವನ:

ದಶಕಗಳ ಹಿಂದೆ ಶಾಲಾ-ಕಾಲೇಜುಗಳಲ್ಲಿ ಭಾಷೆ-ಸಾಹಿತ್ಯ-ಸಂಸ್ಕೃತಿಯ ಪ್ರೀತಿ ಪೋಷಣೆಗೆ ಹೇರಳ ಅವಕಾಶಗಳಿದ್ದವು. ವಾರಕ್ಕೊಂದಾದರೂ ಚರ್ಚಾಕೂಟ, ಆಗಿಂದಾಗ್ಗೆ ಸ್ಪರ್ಧೆಗಳು, ವ್ಯಕ್ತಿತ್ವ ವಿಕಸನ ಶಿಬಿರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರವಾಸ, ಸಂಭ್ರಮದ ವಾರ್ಷಿಕೋತ್ಸವ- ಎಲ್ಲವೂ ವಿದ್ಯಾರ್ಥಿ ಬದುಕಿನ ಭಾಗವಾಗಿದ್ದವು. ಈಗ ಅವುಗಳಿಗೆ ಬಿಡುವಿಲ್ಲ, ಇದ್ದರೂ ಎಲ್ಲವೂ ಪ್ರಚಾರಕ್ಕಾಗಿ ಎಂಬಷ್ಟು ಕೃತಕ.

ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಬಿಡುವಿನ ವೇಳೆ ಎಂಬುದೇ ಇಲ್ಲ. ಗ್ರಂಥಾಲದ ಅವಧಿ, ಆಟದ ಅವಧಿಗಳಿಲ್ಲ. ಅನೇಕ ಶಾಲೆ-ಕಾಲೇಜುಗಳಲ್ಲಿ ಗ್ರಂಥಾಲಯಗಳೇ ಇಲ್ಲ. ಲಕ್ಷಗಟ್ಟಲೆ ಶುಲ್ಕ ಪೀಕುವ ಸಂಸ್ಥೆಗಳು ಎಲ್ಲವನ್ನೂ ‘ರೆಡಿ-ಟು-ಈಟ್’ ಮಾದರಿಯಲ್ಲಿ ವಿದ್ಯಾರ್ಥಿಗಳೆದುರು ತಂದು ಸುರಿಯುತ್ತಿರುವಾಗ ಅವರಿಗೆ ಗ್ರಂಥಾಲಯ ಅವಶ್ಯಕ ಎಂದು ಅನಿಸುವುದೂ ಇಲ್ಲ. ಗ್ರಂಥಾಲಯ ಮಾಡಿ ಜಾಗ ಕಳೆಯುವ ಬದಲು ಹೊಸದೊಂದು ಸೆಕ್ಷನ್ ತೆರೆಯಬಹುದಲ್ಲ ಎಂಬುದೇ ಈ ಸಿರಿ ಗರ ಬಡಿದ ಆಡಳಿತ ಮಂಡಳಿಗಳ ಯೋಚನೆ.

ವೃತ್ತಿಪರ ಕೋರ್ಸೇ ಸರ್ವಸ್ವ:

ಸ್ಪರ್ಧೆಯಲ್ಲಿ ಗೆಲ್ಲುವುದೇ ಶ್ರೇಷ್ಠ ಎಂಬ ಭಾವನೆ ಬಿತ್ತುವುದರ ಜೊತೆಗೆ ಈ ಶಿಕ್ಷಣ ಸಂಸ್ಥೆಗಳು ವೃತ್ತಿಪರ ಕೋರ್ಸುಗಳಿಂದಲೇ ಜೀವನ ಉದ್ಧಾರವೆಂಬ ಭಾವನೆಯನ್ನು ವಿದ್ಯಾರ್ಥಿಗಳಲ್ಲೂ ಪೋಷಕರಲ್ಲೂ ಪರಿಣಾಮಕಾರಿಯಾಗಿ ಬೆಳೆಸಿಬಿಟ್ಟಿವೆ. ಇದರ ಹಿಂದಿರುವುದು ಇವರ ದುಡ್ಡಿನ ದುರಾಸೆಯ ರಾಜಕಾರಣ. ಇಂತಹದೊಂದು ಮನಸ್ಥಿತಿಯನ್ನು ಬೆಳೆಸದೆ ಹೋದರೆ ಲಕ್ಷಗಟ್ಟಲೆ ಶುಲ್ಕ ವಿಧಿಸುವುದಾದರೂ ಹೇಗೆ?

ಎಂಬಲ್ಲಿಗೆ ಇಂಟರ್‍ನ್ಯಾಷನಲ್ ಶಾಲೆ-ಕಾಲೇಜುಗಳ ಮೆರವಣಿಗೆ, ಎಂಟನೇ ತರಗತಿಯಿಂದಲೇ ಇಂಜಿನಿಯರಿಂಗ್-ಮೆಡಿಕಲ್ ಸೀಟುಗಳಿಗೆ ತರಬೇತಿ, ಇದೇ ಅಧ್ಯಾಪಕರು ಹೊರಗೆ ತಮ್ಮದೇ ಕೋಚಿಂಗೆ ಸೆಂಟರುಗಳನ್ನು ತೆರೆದು ಕೋಚಿಂಗ್‍ಗೆ ಸೇರದ ವಿದ್ಯಾರ್ಥಿಗಳು ನಿಷ್ಪ್ರಯೋಜಕರು ಎಂಬ ಭಾವನೆಯನ್ನು ಬಿತ್ತುವುದು: ಎಲ್ಲವೂ ಆರಂಭವಾಯಿತು. ಜತೆಗೆ ವೃತ್ತಿಪರ ಕೋರ್ಸುಗಳನ್ನು ಓದುವವರಿಗೆ ಭಾಷಾ ಪಾಠಗಳು ಮುಖ್ಯವಲ್ಲ ಎಂಬ ಭಾವನೆಯನ್ನೂ ವ್ಯವಸ್ಥಿತವಾಗಿ ಬಿತ್ತುವ ಪ್ರವೃತ್ತಿ ಆರಂಭವಾಯಿತು. ಇವರಿಗೆಲ್ಲ ಭಾಷಾ ಶಿಕ್ಷಕರುಗಳು ಎಂದರೆ ಉಳಿದ ಅಧ್ಯಾಪಕರಿಗೆ ಪಾಠದ ನಡುವೆ ಕೊಂಚ ವಿರಾಮ ಒದಗಿಸುವ ಗ್ಯಾಪ್ ಫಿಲ್ಲರುಗಳು ಮತ್ತು ವಿದ್ಯಾರ್ಥಿಗಳಿಗೆ ಒಂದಿಷ್ಟು ನಿರಾಳತೆ ನೀಡುವ ಹಾಸ್ಯಗಾರರು.

ಅಧ್ಯಾಪಕರು ಹೇಗಿದ್ದಾರೆ?

ವಿದ್ಯಾರ್ಥಿಗಳಲ್ಲಿ ಸಾಹಿತ್ಯ-ಸಂಸ್ಕೃತಿ-ಭಾಷೆಗಳ ಬಗ್ಗೆ ಪ್ರೀತಿ, ಅಭಿಮಾನ ಬೆಳೆಸುವಲ್ಲಿ ಅಧ್ಯಾಪಕರ ಪಾತ್ರವೂ ಮಹತ್ವದ್ದು. ಈ ವಿಚಾರದಲ್ಲಿ ಅವರು ಏನು ಮಾಡುತ್ತಿದ್ದಾರೆ ಎಂದರೆ ಮತ್ತೆ ಅಲ್ಲಿಯೂ ಕಾಡುವುದು ನಿರಾಶೆಯೇ. ಪ್ರಾಥಮಿಕ ಶಾಲೆಯಲ್ಲಿ ಭಾಷೆಯನ್ನು ಸುಪುಷ್ಟವಾಗಿ ಬೋಧಿಸುವ ಕೆಲಸ ಬಹುತೇಕ ಕಡೆ ಯಶಸ್ವಿಯಾಗಿ ನಡೆದಿಲ್ಲ. ಅಧ್ಯಾಪಕರೇ ಸಮರ್ಪಕವಾಗಿ ಕಲಿತಿಲ್ಲವೋ, ಮಕ್ಕಳಿಗೆ ಕಲಿಸುವಲ್ಲಿ ಆಸಕ್ತಿ-ಬದ್ಧತೆಗಳಿಲ್ಲವೋ, ಅಂತೂ ಎಲ್ಲಿ ಗಟ್ಟಿ ತಳಹದಿ ದೊರೆಯಬೇಕಿತ್ತೋ ಅಲ್ಲಿ ದೊರೆಯುತ್ತಿಲ್ಲ. ಇದೇ ಸಡಿಲ ಪಾಯದೊಂದಿಗೆ ಮಕ್ಕಳು ಪ್ರೌಢಶಾಲೆ, ಅಲ್ಲಿಂದ ಪಿಯುಸಿ, ಅಲ್ಲಿಂದ ಕಾಲೇಜುಗಳಿಗೆ ಭಡ್ತಿ ಪಡೆಯುತ್ತಿದ್ದಾರೆ. ಆಗಿರುವ ತಪ್ಪುಗಳಿಗೆ ಒಬ್ಬರು ಇನ್ನೊಬ್ಬರೆಡೆಗೆ ಬೆರಳು ತೋರಿಸುವ ಕೆಲಸ ನಡೆಯುತ್ತಿದೆಯೇ ಹೊರತು ಆತ್ಮಾವಲೋಕನ ನಡೆಸಲು ಯಾರೂ ಸಿದ್ಧರಿಲ್ಲ. ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ನಡೆಸುತ್ತಿರುವ ವಿದ್ಯಾರ್ಥಿಗಳಲ್ಲೂ ಕಾಗುಣಿತ ತಿದ್ದಿಲ್ಲ, ಸ್ವತಂತ್ರವಾಗಿ ಅರ್ಥಪೂರ್ಣ ವಾಕ್ಯಗಳನ್ನು ರಚಿಸಲು ಬರುತ್ತಿಲ್ಲ ಎಂದರೆ ಏನರ್ಥ?

ಅಧ್ಯಾಪಕರು ಮನಸ್ಸು ಮಾಡಿದರೆ ಭಾಷೆ, ಸಾಹಿತ್ಯ ಎರಡರ ಕಡೆಗೂ ಮಕ್ಕಳನ್ನು ಧಾರಾಳವಾಗಿ ಸೆಳೆಯಬಹುದು. ಪ್ರೌಢಶಾಲೆ, ಕಾಲೇಜು ಹಂತದಲ್ಲಂತೂ ಇದಕ್ಕೆ ಹೇರಳ ಅವಕಾಶ ಇದೆ. ಸಾಹಿತ್ಯ ಪ್ರೀತಿ ಮೂಡಿಸುವ ನಾಲ್ಕು ಒಳ್ಳೆಯ ಕಾರ್ಯಕ್ರಮಗಳನ್ನು ಏರ್ಪಡಿಸುವುದು, ಕಡೇ ಪಕ್ಷ ತಮ್ಮ ವಿದ್ಯಾರ್ಥಿಗಳಿಗೆ ಒಳ್ಳೊಳ್ಳೆಯ ಪುಸ್ತಕಗಳನ್ನು ಓದಿಸುವುದು, ಅವರು ಆ ಬಗ್ಗೆ ವಿಚಾರ ವಿನಿಮಯ ಮಾಡುವಂತೆ ನೋಡಿಕೊಳ್ಳುವುದು- ಇಷ್ಟನ್ನು ಮಾಡಿದರೂ ಹೊಸ ತಲೆಮಾರಿನ ಹುಡುಗರಿಗೆ ಉಪಕಾರ ಮಾಡಿದ ಪುಣ್ಯ ಅವರಿಗೆ ಸಲ್ಲುತ್ತದೆ. ಆದರೆ ಅವರಿಗೇ ಸ್ವತಃ ಭಾಷೆ-ಸಾಹಿತ್ಯಗಳ ಮೇಲೆ ಅಭಿಮಾನ ಇಲ್ಲದೇ ಹೋದರೆ ಮುಂದಿನದನ್ನು ಮಾತಾಡುವುದು ವ್ಯರ್ಥ. ಸಂಬಳ, ಭಡ್ತಿ, ವರ್ಗಾವಣೆ- ವೃತ್ತಿಜೀವನಕ್ಕೆ ಮುಖ್ಯವಾದ ವಿಚಾರಗಳು ನಿಜ, ಆದರೆ ಉಳಿದ ಉದ್ಯೋಗಗಳಿಗಿಂತ ಭಿನ್ನವಾದ ಬದ್ಧತೆಯೊಂದು ಅಧ್ಯಾಪಕರಿಗೆ ಇದೆಯಲ್ಲ?

ಪಠ್ಯಪುಸ್ತಕಗಳ ಕಥೆ 

ಪ್ರಾಥಮಿಕ ಹಂತದಿಂದ ತೊಡಗಿ ಉನ್ನತಶಿಕ್ಷಣದವರೆಗೆ ಪಠ್ಯಪುಸ್ತಕಗಳ ಸ್ವರೂಪವೇ ಬದಲಾಗಿದೆ. ಮೂವತ್ತು ವರ್ಷಗಳ ಹಿಂದಿನ ಪಠ್ಯವನ್ನೇ ಈಗಲೂ ಬೋಧಿಸಲು ಬರುತ್ತದೆಯೇ ಎಂಬುದು ನ್ಯಾಯವಾದ ಪ್ರಶ್ನೆ. ಆದರೆ ಕಾಲ ಎಷ್ಟೇ ಬದಲಾದರೂ ಶಿಕ್ಷಣದ ಮೂಲ ಉದ್ದೇಶ ಬದಲಾಗಬಾರದಲ್ಲ? ಹೊಸ ಕಾಲಕ್ಕೆ ಹೊಂದುವ ನೆಪದಲ್ಲಿ, ಹೊಸ ಚಿಂತನೆಗಳನ್ನು ಬೆಳೆಸುವ ನೆಪದಲ್ಲಿ ನಾವು ಪಠ್ಯಪುಸ್ತಕಗಳ ಸೊಗಸನ್ನೇ ಹಾಳುಗೆಡವಿದ್ದೇವೆಯೇ ಎಂದು ಅನೇಕ ಸಲ ಅನಿಸುವುದಿದೆ. 

ಖಾಸಗಿ ಶಾಲೆಗಳ ದರ್ಬಾರಿನಲ್ಲಂತೂ ಪಠ್ಯಪುಸ್ತಕಗಳಲ್ಲಿ ವಿವಿಧ ಮಾದರಿಗಳು ಬಂದಿವೆ. ಒಂದೊಂದು ಶಾಲೆ ಒಂದೊಂದು ‘ಕಂಪೆನಿ’ಯ ಪಠ್ಯಕ್ರಮವನ್ನು ಅನುಸರಿಸುವುದೂ ಇದೆ. ಈ ಪುಸ್ತಕಗಳೆಲ್ಲ ಬಣ್ಣಬಣ್ಣ, ಫಳಫಳ, ಸಾಮಾನ್ಯರ ಕೈಗೆ ಎಟುಕದಷ್ಟು ತುಟ್ಟಿ. ಹಾಗೆ ನೋಡಿದರೆ ಅವುಗಳಲ್ಲಿರುವ ಹೂರಣವೂ ಚೆನ್ನಾಗಿದೆ, ಆದರೆ ದಶಕದ ಹಿಂದೆ ಇರುತ್ತಿದ್ದ ಪಠ್ಯಗಳ ಸೊಗಸು ಅಲ್ಲಿ ಕಾಣುತ್ತಿಲ್ಲ. ಅವೆಲ್ಲ ಮುಗ್ಧತೆ ಮಾಸಿದ ಮಕ್ಕಳಂತೆ ಪೇಲವವಾಗಿವೆ ಎನಿಸುತ್ತದೆ. ಬಾಲ್ಯಕ್ಕೆ ತರ್ಕಕ್ಕಿಂತಲೂ ಭಾವಪೋಷಣೆಯೇ ಮುಖ್ಯವಲ್ಲವೇ?

ಹೊಸ ಸಾಧ್ಯತೆಗಳು

ಕಾಲದೊಂದಿಗೆ ಓದು-ಅಧ್ಯಯನದ ಸ್ವರೂಪ ಬದಲಾಗಿದೆ. ಮಾಧ್ಯಮಗಳು ಬದಲಾಗಿವೆ. ಹೊಸ ತಲೆಮಾರಿನ ಆಯ್ಕೆಗಳು ಬದಲಾಗಿವೆ. ಎಲ್ಲವನ್ನೂ ಮುದ್ರಿತ ಪುಸ್ತಕ ರೂಪದಲ್ಲೇ ಓದಬೇಕಾಗಿಲ್ಲ. ಯುವಕರು ಅಂತರಜಾಲವನ್ನು ಧಾರಾಳವಾಗಿ ಬಳಸುತ್ತಿದ್ದಾರೆ. ಅಂತರಜಾಲದ ಬಳಕೆಯೂ ಸಾಹಿತ್ಯದ ಓದಿನ ಒಂದು ಪ್ರಮುಖ ಭಾಗ ಆಗಿರಬಹುದು. ಪುಸ್ತಕಗಳು ಡಿಜಿಟಲ್ ರೂಪದಲ್ಲಿ, ಆಡಿಯೋ ರೂಪದಲ್ಲಿ ದೊರೆಯುತ್ತಿವೆ. ಹೊಸ ತಲೆಮಾರಿಗೆ ಅವುಗಳನ್ನು ಬಳಸುವುದು ಸುಲಭವೆನಿಸಬಹುದು. ಹೀಗಾಗಿ ಇಂದಿನ ವಿದ್ಯಾರ್ಥಿಗಳು ಮುದ್ರಿತ ಪುಸ್ತಕಗಳನ್ನು ಓದುವುದು ಕಡಿಮೆಯಾಗಿದೆ ಎಂದು ತೀರಾ ಆತಂಕಪಡುವ ಅಗತ್ಯವೇನೂ ಇಲ್ಲ. ಆದರೆ ಈ ಪ್ರವೃತ್ತಿಯಲ್ಲಾದರೂ ಇರುವವರ ಸಂಖ್ಯೆ ಎಷ್ಟು ಎಂದು ಯೋಚಿಸಬೇಕು.

ಕಂಪ್ಯೂಟರ್, ಮೊಬೈಲ್ ಬಳಸುವ ಯುವಕರೆಲ್ಲರೂ ಅವುಗಳನ್ನು ಸಾಹಿತ್ಯ-ಭಾಷೆ ಇತ್ಯಾದಿಗಳ ಅಭ್ಯಾಸಕ್ಕೂ ಬಳಸುತ್ತಿದ್ದಾರೆ ಎಂದು ಹೇಳಲು ಬರುವುದಿಲ್ಲ. ಬಹುಪಾಲು ಮಂದಿ ಸೋಶಿಯಲ್ ಮೀಡಿಯಾದಲ್ಲಿ, ವೀಡಿಯೋ ಗೇಮ್‍ಗಳಲ್ಲಿ ಕಳೆದುಹೋಗುತ್ತಿದ್ದಾರೆ. ಆಧುನಿಕ ಮಾಧ್ಯಮಗಳನ್ನು ಬಳಸುತ್ತಿರುವ ಈ ತಲೆಮಾರು ಅವುಗಳನ್ನು ಒಳ್ಳೆಯ ಓದು, ಅಧ್ಯಯನಕ್ಕೆ ಬಳಸುವಂತೆ ಮಾಡುವ ಜವಾಬ್ದಾರಿ ನಾಗರಿಕ ಸಮಾಜಕ್ಕೆ ಇದೆ.

ಕೊರೋನೋತ್ತರ ಕಾಲದಲ್ಲಂತೂ ಶಿಕ್ಷಣ-ಸಂವಹನದ ಪರಿಕರಗಳು ಆಮೂಲಾಗ್ರ ಬದಲಾವಣೆ ಕಂಡಿವೆ. ಗೂಗಲ್ ಮೀಟ್, ಜೂಮ್‍ನಂತಹ ಆನ್ಲೈನ್ ವೇದಿಕೆಗಳು ಪ್ರಸಿದ್ಧಿಗೆ ಬಂದಿವೆ. ಇವುಗಳು ಭಾಷೆ, ಸಾಹಿತ್ಯ, ಸಮಾಜ ಹಿತಚಿಂತನೆಯ ಸಂವಾದಗಳಿಗೂ ಒಳ್ಳೆಯ ವೇದಿಕೆಗಳಾಗಿ ಬಳಕೆಯಾಗುತ್ತಿವೆ. ಕ್ಲಬ್‍ಹೌಸಿನಂತಹ ಪರಿಕರಗಳನ್ನೂ ಒಳ್ಳೆಯ ಅಧ್ಯಯನಕೂಟಗಳನ್ನಾಗಿ ಬಳಸಿಕೊಳ್ಳುವುದಕ್ಕೆ ಅವಕಾಶವಿದೆ. ಉಪಕ್ರಮ ವಹಿಸುವವರಿದ್ದರೆ ಅವರನ್ನು ಅನುಸರಿಸುವ ಮಂದಿಯೂ ಇರುತ್ತಾರೆ. ಇಂತಹ ಸಾಕಷ್ಟು ಪ್ರಯತ್ನಗಳೂ ವಿದ್ಯಾರ್ಥಿಗಳ ನಡುವೆ, ಯುವತಲೆಮಾರಿನ ನಡುವೆ ಈಚೆಗೆ ನಡೆಯುತ್ತಿವೆ. ಒಳ್ಳೆಯದು ಎಲ್ಲಿ, ಹೇಗೆ ನಡೆದರೂ ಸಂತೋಷದ ವಿಷಯವೇ. ಆದರೆ ಇವೆಲ್ಲ ಆರಂಭಶೂರತನ ಆಗಬಾರದು ಅಷ್ಟೇ.

- ಸಿಬಂತಿ ಪದ್ಮನಾಭ ಕೆ. ವಿ.

ಬುಧವಾರ, ಡಿಸೆಂಬರ್ 22, 2021

ಶುಭಾಶಯಗಳ ನಡುವೆ ಬಂದ ಒಂದು ವಿಷಾದಪತ್ರ

ಹ್ಯಾಪಿ ಬರ್ತ್ ಡೇ ಹ್ಯಾಪಿ ಬರ್ತ್ ಡೇ.. ಒಂದರ ಮೇಲೊಂದು ಬರುತ್ತಿದ್ದ ಭರಪೂರ ಸಂದೇಶಗಳ ನಡುವೆ ಒಂದು ವಿಷಾದಪತ್ರವೂ
ನುಸುಳಿಕೊಂಡಿತ್ತು.

ಅದು ನವದೆಹಲಿಯ ಫುಲ್'ಬ್ರೈಟ್ ಕಮೀಷನ್ನಿಂದ ಬಂದ ಈ-ಮೇಲು: "2022-23ರ Fulbright-Nehru Postdoctoral Research Fellowshipಗಾಗಿ ನೀವು ಸಲ್ಲಿಸಿದ ಅರ್ಜಿ ಮುಂದಿನ ಪ್ರಕ್ರಿಯೆಗೆ ಆಯ್ಕೆಯಾಗಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ. ಪ್ರತೀ ಅರ್ಜಿಯ ಬಗ್ಗೆ ನಿರ್ದಿಷ್ಟ ಪ್ರತಿಕ್ರಿಯೆ ನೀಡಲು ನಮಗೆ ಸಾಧ್ಯವಾಗುತ್ತಿಲ್ಲ, ಕ್ಷಮಿಸಿ. ನಿಮ್ಮ ಭವಿಷ್ಯದ ಶೈಕ್ಷಣಿಕ ಹಾಗೂ ವೃತ್ತಿ ಬದುಕಿಗೆ ಶುಭಾಶಯಗಳು." ಇದು ಪತ್ರದ ಸಾರಾಂಶ.

ಪಾಸು-ಫೇಲು ಎರಡಕ್ಕೂ ಸಿದ್ಧನಿದ್ದ ವಿದ್ಯಾರ್ಥಿಯಂತೆ ನಾನು ಫಲಿತಾಂಶವನ್ನು ನೋಡಿದ್ದರಿಂದ ಅದು ನನ್ನ ಮೇಲೆ ಅಂತಹ ಪರಿಣಾಮವನ್ನೇನೂ ಬೀರಲಿಲ್ಲ. "ಮಾಹಿತಿ ನೀಡಿದ್ದಕ್ಕೆ ಧನ್ಯವಾದ. ಆದರೆ ಅರ್ಜಿಯ ಕುರಿತ ನಿರ್ದಿಷ್ಟ ಪ್ರತಿಕ್ರಿಯೆಯನ್ನೂ ತಿಳಿಸಿದ್ದರೆ ಸ್ವಸುಧಾರಣೆಗೆ ಅನುಕೂಲವಾಗುತ್ತಿತ್ತು" ಎಂದಷ್ಟೇ ಉತ್ತರಿಸಿ, ಫೆಲೋಶಿಪ್ಪಿನ ಪ್ರಸ್ತಾವನೆಯನ್ನು ಸಾಮುಗೊಳಿಸುವಲ್ಲಿ ನೆರವಾದ ಎಲ್ಲ ಹಿರಿಯರಿಗೆ, ಗೆಳೆಯರಿಗೆ ಈ ವರ್ತಮಾನವನ್ನು ತಿಳಿಸಿ ಸುಮ್ಮನಾದೆ.

ಹಣ್ಣಾಗದ ಹೂವಿನ ಕಥೆಯನ್ನು ಬಿತ್ತರಿಸಬೇಕೇ ಎಂದು ಯೋಚಿಸಿದೆ. ಆದರೆ ಹೇಳುವುದರಿಂದ ಇದರ ಬಗ್ಗೆ ಗೊತ್ತಿಲ್ಲದ ನಾಕು ಮಂದಿಗೆ ಮುಂದಕ್ಕೆ ಪ್ರಯೋಜನವಾಗಬಹುದು ಅನಿಸಿತು. ಹಾಗಾಗಿ ಈ ಪ್ರವರ.

Fulbright-Nehru Fellowship ಭಾರತ-ಅಮೇರಿಕ ಜಂಟಿಯಾಗಿ ಕೊಡಮಾಡುವ ಒಂದು ಪ್ರತಿಷ್ಠಿತ ಫೆಲೋಶಿಪ್. ವಿದ್ಯಾರ್ಥಿಗಳು, ಅಧ್ಯಾಪಕರು, ವೃತ್ತಿಪರರು ಉನ್ನತ ವ್ಯಾಸಂಗ ಹಾಗೂ ಸಂಶೋಧನೆ ನಡೆಸುವುದಕ್ಕೆ ವಿವಿಧ ವಿದ್ಯಾರ್ಥಿವೇತನಗಳನ್ನು ಪ್ರತಿವರ್ಷವೂ ನೀಡಲಾಗುತ್ತದೆ. ಇದು 1950ರಿಂದಲೂ ಚಾಲ್ತಿಯಲ್ಲಿದೆ. ಅಮೇರಿಕವು ಇತರ 150 ದೇಶಗಳೊಂದಿಗೆ ನಡೆಸುವ ಈ ಫೆಲೋಶಿಪ್ ಯೋಜನೆ ವಿಶ್ವದಲ್ಲೇ ಅತ್ಯಂತ ದೊಡ್ಡ ವಿದ್ಯಾರ್ಥಿವೇತನ ಯೋಜನೆಯೆಂಬ ಹೆಗ್ಗಳಿಕೆ ಹೊಂದಿದೆ.

ನನ್ನ ಕೆಲವು ಅಧ್ಯಾಪಕರು ಹಿಂದೆ ಈ ಫೆಲೋಶಿಪ್ಪಿಗೆ ಆಯ್ಕೆಯಾಗಿ ಅಮೇರಿಕಕ್ಕೆ ಹೋಗಿ ಸಂಶೋಧನೆ ನಡೆಸಿ ಬಂದ ವಿಚಾರದ ಹೊರತಾಗಿ, ಅದರ ಬಗ್ಗೆ ನನಗೆ ಇನ್ನೇನೂ ತಿಳಿದಿರಲಿಲ್ಲ. ಪಿಎಚ್.ಡಿ ಆದ ಮೇಲೆ ನಾನೂ ಒಮ್ಮೆ ಪ್ರಯತ್ನಿಸಬೇಕು ಎಂಬ ಕನಸು ಇಟ್ಟುಕೊಂಡಿದ್ದುಂಟು. ಈ ವರ್ಷ ಅದನ್ನು ಜಾರಿಗೊಳಿಸುವ ಸಂದರ್ಭ ಬಂತು.

ಅರ್ಜಿ ಸಲ್ಲಿಸುವ ಯೋಚನೆ ಗಟ್ಟಿಯಾದದ್ದೇ, ದಶಕಗಳ ಹಿಂದೆ ಈ ಫೆಲೋಶಿಪ್ ಪಡೆದ ಹಿರಿಯ ಪ್ರಾಧ್ಯಾಪಕರೊಂದಿಗೆ ಮಾತಾನಾಡಿ, ನನ್ನಂತಹ ಹುಲುಮಾನವರು ಇದಕ್ಕೆ ಪ್ರಯತ್ನಿಸಬಹುದೇ ಎಂದು ಚರ್ಚಿಸಿದೆ. ಅವರೆಲ್ಲ ತಮ್ಮ ಕಾಲದ ಅನುಭವಗಳನ್ನು ನೆನಪಿಸಿಕೊಂಡು “ಆ ಕಾಲ ಬೇರೆ, ಈ ಕಾಲ ಬೇರೆ. ಆದರೆ ಖಂಡಿತ ಪ್ರಯತ್ನಿಸು, ಚೆನ್ನಾಗಿ ತಯಾರಿ ಮಾಡು, ಆಲ್ ದಿ ಬೆಸ್ಟ್” ಅಂದರು. ಇದಕ್ಕೂ ಮೊದಲು ನಮ್ಮ ಹೋಂ ಮಿನಿಸ್ಟ್ರಿಗೆ ಸವಿನಯದಿಂದ ಅರ್ಜಿ ಸಲ್ಲಿಸಿ, “ಹೇಗೆ, ನಾನು ಒಂದು ವರ್ಷ ದೇಶ ಬಿಟ್ಟರೆ ಇಲ್ಲಿ ಪರವಾಗಿಲ್ಲವಾ?” ಎಂದು ತಗ್ಗಿಬಗ್ಗಿ ಕೇಳಿ ಅನುಮತಿ ಪಡೆದಿದ್ದೆ ಎಂದು ಬೇರೆ ಹೇಳಬೇಕಿಲ್ಲ. ಹೈಕಮಾಂಡ್ ಒಪ್ಪಿಗೆಯಿಲ್ಲದೆ ನಾವು ಒಂದು ಹೆಜ್ಜೆ ಹಿಂದೆ ಮುಂದೆ ಇಡುವುದಕ್ಕುಂಟಾ!

ಅಲ್ಲಿಂದ ತಯಾರಿ ಶುರು. ತಿಂಗಳಾನುಗಟ್ಟಲೆ ಪರಿಶ್ರಮ ಬಯಸುವ ಕೆಲಸ ಅದು. ಅತಿಂಥ ಸ್ಪರ್ಧೆಯಲ್ಲ ಅದು. ಪೋಸ್ಟ್ ಡಾಕ್ಟೋರಲ್ ಫೆಲೋಶಿಪ್ಪಿಗಂತೂ ಇಡೀ ದೇಶದಿಂದ ಆಯ್ಕೆಯಾಗುವವರು ಹತ್ತೋ ಹದಿನೈದೋ ಮಂದಿ. ಕಳೆದ ಕೆಲವು ವರ್ಷಗಳಲ್ಲಿ ಫೆಲೋಶಿಪ್ ಪಡೆದವರ ಬಯೋಡಾಟ ನೋಡಿದರೆ ಎದೆಯೊಳಗೆ ಸಣ್ಣ ನಡುಕ ಹುಟ್ಟುತ್ತಿತ್ತು. ಅವರೆಲ್ಲ ಪ್ರತಿಷ್ಠಿತ ಸಂಶೋಧನ ಸಂಸ್ಥೆಗಳಿಂದ ಹೊರಬಂದವರು.

ನೀರಿಗೆ ಇಳಿದವನಿಗೆ ಎಂಥಾ ಚಳಿ ಎಂದು ತಯಾರಿ ಶುರು ಮಾಡಿದೆ. ಅದು ಬರೀ ಅರ್ಜಿ ಬರೆವ ಕೆಲಸ ಅಲ್ಲ. ಅಂತಾರಾಷ್ಟ್ರೀಯ ಮಟ್ಟದ ವಿದ್ವಾಂಸರು ಮೆಚ್ಚುವ ಸಂಶೋಧನ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಬೇಕು. ಅದು ಅವರೇ ಸೂಚಿಸಿದ 23 ಕ್ಷೇತ್ರಗಳ ವ್ಯಾಪ್ತಿಯಲ್ಲೇ ಇರಬೇಕು. ನನ್ನ ದುರದೃಷ್ಟಕ್ಕೆ ನನ್ನ ಕ್ಷೇತ್ರವಾದ Mass Communication & Journalism ಅವರ ಪಟ್ಟಿಯಲ್ಲಿ ಇರಲಿಲ್ಲ. ಹಾಗಾಗಿ ಅಲ್ಲಿ ಕೊಟ್ಟಿರುವುದರಲ್ಲೇ ಯಾವುದಾದರೊಂದನ್ನು ಆಯ್ದುಕೊಳ್ಳಬೇಕು. ಸದ್ಯಕ್ಕೆ ಅವರು ಕೊಟ್ಟ ಪಟ್ಟಿಯಲ್ಲಿ Performing Arts ನನಗೆ ಸಮೀಪವೆನಿಸಬಲ್ಲ ಒಂದು ಕ್ಷೇತ್ರವಾಗಿತ್ತು. ಯಕ್ಷಗಾನ ಹಾಗೂ ಅಭಿವೃದ್ಧಿ ಸಂವಹನದ ವಿಚಾರವಾಗಿ ನಾನು ಪಿಎಚ್.ಡಿ ಮಾಡಿದ್ದರಿಂದ ಆ ನಿರ್ಧಾರಕ್ಕೆ ಬಂದೆ.

ಸರಿ; ನಾವು ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳುವ ವಿಷಯ ಭಾರತ-ಅಮೇರಿಕ ಎರಡಕ್ಕೂ ಪ್ರಸ್ತುತವಾಗಬೇಕು. ನಮ್ಮ ವೃತ್ತಿಬದುಕಿಗೆ ಪೂರಕವಾಗಿರಬೇಕು. ಅದು ಆಯ್ಕೆ ಮಾಡಿಕೊಂಡ ಕ್ಷೇತ್ರದೊಳಗೆ ಬರಬೇಕು. ಅಂತಹದೊಂದು ವಿಷಯದ ಅಸ್ಪಷ್ಟ ಚಿತ್ರಣ ಸಿಗುವುದಕ್ಕೇ ಎರಡು ತಿಂಗಳು ಹಿಡಿಯಿತು. ಹಾಗೆ ಮಾಡಬಹುದೋ, ಹೀಗೆ ಮಾಡಬಹುದೋ ಎಂದು ಹತ್ತಾರು ಮಂದಿಯೊಂದಿಗೆ ಚರ್ಚಿಸಿದೆ. ಇದಕ್ಕಿಂತಲೂ ಪ್ರಮುಖ ಸವಾಲೆಂದರೆ, ಅರ್ಜಿ ಸಲ್ಲಿಸುವ ಮೊದಲೇ ಅಮೇರಿಕದ ಯಾರಾದರೂ ಒಬ್ಬ ಪ್ರಾಧ್ಯಾಪಕರಿಂದ ಅಲ್ಲಿಗೆ ಬರುವುದಕ್ಕೆ ನಮಗೆ ಆಹ್ವಾನ ಬೇಕು. ಯಾರನ್ನು ಕೇಳುವುದು? ನನಗೆ ಅಂತಹ ಸಂಪರ್ಕ ಇಲ್ಲ. ಗಾಡ್ ಫಾದರುಗಳೂ ಇಲ್ಲ. ಮೊದಲು ಅಂತಹವರೊಬ್ಬರನ್ನು ಹುಡುಕಬೇಕು, ಸಂಪರ್ಕಿಸಬೇಕು, ಅವರಿಗೆ ನಮ್ಮ ಸಂಶೋಧನ ಯೋಜನೆ ಇಷ್ಟವಾಗಬೇಕು, ಬೆಂಬಲಿಸಲು ಒಪ್ಪಬೇಕು, ಆಮೇಲೆ ಅವರ ಪತ್ರ ಕೇಳಬೇಕು.

ಆ ಕೆಲಸವನ್ನೂ ಜತೆಜತೆಗೇ ಮಾಡಿದೆ. ಅಮೇರಿಕದ ಟಾಪ್-50 ವಿಶ್ವವಿದ್ಯಾನಿಲಯಗಳ ಪಟ್ಟಿ ತಯಾರಿಸಿದೆ. ಅಲ್ಲಿನ Performing Arts/Mass Communication ವಿಭಾಗಗಳನ್ನು ಹುಡುಕಿ, ನನ್ನ ಆಸಕ್ತಿಗೆ ಸರಿಹೊಂದುವ ಪ್ರಾಧ್ಯಾಪಕರಿದ್ದಾರೆಯೇ ಎಂದು ನೋಡಿದೆ. ಏಳೆಂಟು ಮಂದಿಯನ್ನು ಶೋಧಿಸಿ, ಅವರಲ್ಲಿ ಅಂತಿಮವಾಗಿ ಮೂವರಿಗೆ ಮೈಲ್ ಮಾಡಿದೆ. ನನ್ನ ಪಿಎಚ್.ಡಿ.ಯ ಸಾರಾಂಶ, ಬಯೋಡಾಟಾ, ಅಲ್ಲಿಗೆ ಹೋಗಿ ಮಾಡಬೇಕು ಅಂದುಕೊಂಡಿರುವ ಸಂಶೋಧನೆ- ಇಷ್ಟನ್ನು ಕಳಿಸಿ, ನನಗೆ ಸಹಾಯ ಮಾಡುವಿರಾ ಎಂದು ಕೇಳಿಕೊಂಡೆ. ಆಶ್ಚರ್ಯ ಎನಿಸುವ ಹಾಗೆ ಒಬ್ಬರು ಪ್ರಾಧ್ಯಾಪಕರು ಮರುದಿನವೇ ಉತ್ತರಿಸಿದರು.

ಅವರೇ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ (ಬರ್ಕ್ಲೀ)ದ Theatre, Dance and Performance Studies ವಿಭಾಗ ಸಹಪ್ರಾಧ್ಯಾಪಕ ಡಾ. ಪೀಟರ್ ಗ್ಲೇಸರ್. ಆ ಪುಣ್ಯಾತ್ಮನ ಬಗ್ಗೆ ಇನ್ನೊಮ್ಮೆ ಪ್ರತ್ಯೇಕವಾಗಿ ಬರೆಯುತ್ತೇನೆ. ಅಂತಹ ವಿಶಿಷ್ಟ ವ್ಯಕ್ತಿ ಅವರು. ನಾನು ಯಾರೋ, ಅವರು ಯಾರೋ. ಈ ತುಮಕೂರೆಂಬ ಊರಲ್ಲಿರುವ ಪದ್ಮನಾಭ ಎಂಬ ಹುಲ್ಲುಕಡ್ಡಿಯ ಬಗ್ಗೆ ಅವರಿಗೆ ಯಾವ ಕಲ್ಪನೆಯೂ ಇರದು. ಯಾರ ರೆಫರೆನ್ಸೂ ಇಲ್ಲದೆ ಅವರನ್ನು ಸಂಪರ್ಕಿಸಿದ್ದೆ. “ನಿಮ್ಮ ಯೋಜನೆ ಆಸಕ್ತಿದಾಯಕವಾಗಿದೆ. ಆದರೆ ನಾನು ನಿಮ್ಮೊಂದಿಗೆ ಒಮ್ಮೆ ಮುಖಾಮುಖಿ ಮಾತಾಡಬೇಕು. ಸಾಧ್ಯವಾದಷ್ಟು ಬೇಗ ಒಂದು ಜೂಮ್ ಮೀಟಿಂಗ್ ಶೆಡ್ಯೂಲ್ ಮಾಡಿ” ಎಂದು ಉತ್ತರಿಸಿದರಲ್ಲದೆ, ಯಕ್ಷಗಾನ ಹಾಗೂ ಭಾರತೀಯ ರಂಗಭೂಮಿ ಕುರಿತಂತೆ ವಿದೇಶೀಯರು ನಡೆಸಿದ ಒಂದಷ್ಟು ಸಂಶೋಧನೆಗಳನ್ನೂ ಪ್ರಸ್ತಾಪಿಸಿದರು. ನಿಜವಾಗಿಯೂ ಬೇಸ್ತು ಬೀಳುವ ಸರದಿ ನನ್ನದಾಗಿತ್ತು. ಒಂದು ಗಂಟೆಯ ಮಾತುಕತೆ ಬಳಿಕ ನನ್ನ ಪ್ರಸ್ತಾವನೆಯನ್ನು ಬೆಂಬಲಿಸುವ ಭರವಸೆ ನೀಡಿದರು. ಆಮೇಲೆ ಎರಡು ಮೂರು ಬಾರಿ ಮೀಟಿಂಗ್ ನಡೆಸಿದ್ದುಂಟು; ಹತ್ತಾರು ಈಮೇಲುಗಳನ್ನು ವಿನಿಮಯ ಮಾಡಿದ್ದುಂಟು. ಅವರ ಶೈಕ್ಷಣಿಕ ಶಿಸ್ತು, ಮಾರ್ಗದರ್ಶನ ಮಾಡುವ ರೀತಿ ನೋಡಿಯೇ ಅಲ್ಲಿ ಖಂಡಿತ ಒಂದು ವರ್ಷ ಕಳೆಯಬೇಕೆಂದು ಆಸೆಪಟ್ಟೆ.

ಆಮೇಲೆ ನನ್ನ ಪ್ರಸ್ತಾವನೆ ಸಿದ್ಧಪಡಿಸುವ ಕಾರ್ಯಕ್ರಮ. ಮೂರೂವರೆಸಾವಿರ ಪದಗಳ ಪ್ರಸ್ತಾವನೆ ಬರೆಯುವುದಕ್ಕೆ ಮೂರೂವರೆ ತಿಂಗಳು ಹಿಡಿಯಿತು. ಬಹುಶಃ ರಾತ್ರಿ ಎರಡು ಗಂಟೆಯಲ್ಲದೆ ಮಲಗಿದ್ದೇ ಇಲ್ಲ. ಕೆಲವೊಮ್ಮೆ ಬೆಳಗಾದದ್ದೂ ಉಂಟು. ಅಷ್ಟೊಂದು ಕೆಲಸ ಅನಿವಾರ್ಯವಾಗಿತ್ತು. ಈ ನಡುವೆ ವಿದ್ವಾಂಸರೊಂದಿಗೆ, ಅಮೇರಿಕದಲ್ಲಿರುವ ಸ್ನೇಹಿತರೊಂದಿಗೆ, ಯಕ್ಷಗಾನ, ರಂಗಭೂಮಿಗೆ ಸಂಬಂಧಿಸಿದ ಹಿರಿಯರೊಂದಿಗೆ ಮಾತುಕತೆ ನಿರಂತರವಾಗಿತ್ತು. ಎರಡೂ ದೇಶಗಳಿಗೆ ಪ್ರಸ್ತುತವಾಗುವ ಸಂಶೋಧನ ಯೋಜನೆಯೊಂದು ತಯಾರಾಗಬೇಕಾದರೆ ನನಗೆ ಮೊದಲು ಆ ದೇಶದ ಕಲೆ-ಸಮಾಜ-ರಂಗಭೂಮಿಯ ಸಣ್ಣ ಚಿತ್ರಣವಾದರೂ ಬೇಕಲ್ಲ?

ಪ್ರಸ್ತಾವನೆಯನ್ನು 10-15 ಮಂದಿ ಹಿರಿಯರು, ಸ್ನೇಹಿತರು ಓದಿ ಪರಿಷ್ಕರಣೆಗಳನ್ನು ಸೂಚಿಸಿ “ಆಲ್ ದಿ ಬೆಸ್ಟ್” ಅಂದರು. ಸ್ವತಃ ಡಾ. ಗ್ಲೇಸರ್ ವಾಕ್ಯವಾಕ್ಯವನ್ನೂ ಓದಿ ತಿದ್ದುಪಡಿ ಹೇಳಿದರು. ತಮ್ಮ ಯೋಚನೆಗಳನ್ನು ಸೇರಿಸಿದರು. ಓದಿದ ಎಲ್ಲರೂ “ಇದು ಬಹಳ ಪ್ರಬಲವಾದ ಪ್ರಸ್ತಾವನೆ. ಖಂಡಿತ ಫೆಲೋಶಿಪ್ ಗೆಲ್ಲುತ್ತದೆ” ಎಂದು ಅಭಿಪ್ರಾಯಪಟ್ಟರು.

ಇತ್ತ ನನ್ನ ವಿಶ್ವವಿದ್ಯಾನಿಲಯವೂ, ಆಯ್ಕೆಯಾದರೆ ಒಂದು ವರ್ಷ ಅಧ್ಯಯನ ರಜೆ ಮಂಜೂರು ಮಾಡುವುದಾಗಿ ಪತ್ರ ನೀಡಿತು. ಇಷ್ಟೆಲ್ಲ ಆದಲ್ಲಿಗೆ ಅರ್ಧ ದಾರಿ ಕ್ರಮಿಸಿದ ಹಾಗಾಯಿತು. ಅಂತೂ ಸೆಪ್ಟೆಂಬರ್ 9ರ ಸರಿರಾತ್ರಿ ಎರಡೂವರೆ ಹೊತ್ತಿಗೆ ಅರ್ಜಿಯ ಎಲ್ಲ ಅವಶ್ಯಕತೆಗಳನ್ನೂ ಪೂರೈಸಿ, ಸಲ್ಲಿಸಿದ್ದಾಯಿತು.

ನಂತರದ ಬೆಳವಣಿಗೆ ಮೊನ್ನೆ ಬಂದ ವಿಷಾದಪತ್ರ. ಅರ್ಜಿ ಆಯ್ಕೆಯಾಗಲಿಲ್ಲ. ಕಾರಣಗಳು ತಿಳಿದಿಲ್ಲ. ಯಾವುದೋ ಒಂದು ಹಂತದಲ್ಲಿ ಅರ್ಜಿ ಸೋತಿದೆ. ಆಯ್ಕೆಗೆ ಹತ್ತಾರು ಮಾನದಂಡಗಳಿವೆ. ಅವರ ನಿರೀಕ್ಷೆಗಳು ಭಿನ್ನವಾಗಿರಬಹುದು. ಇನ್ನೂ ಏನೋ ಇರಬಹುದು. ಅರ್ಜಿ ಆಯ್ಕೆಯಾದರೆ ಸಾಲದು, ಮುಂದೆ ರಾಷ್ಟ್ರಮಟ್ಟದ ಸಂದರ್ಶನ ಎದುರಿಸಬೇಕು; ಅಲ್ಲಿ 1:2 ಅಭ್ಯರ್ಥಿಗಳ ಆಯ್ಕೆ. ಅಂತಿಮವಾಗಿ ಉಳಿದವರು ಅಮೇರಿಕಕ್ಕೆ ಹೋಗುತ್ತಾರೆ. ಆ ನಂತರದ ಎಲ್ಲ ಖರ್ಚು ಅವರದ್ದೇ.

ಸೋತರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಆರಂಭದಲ್ಲೇ ಪ್ರತಿಜ್ಞೆ ಮಾಡಿ ಹೊರಟಿದ್ದರಿಂದ ಇನ್ನು ಆ ಬಗ್ಗೆ ಯೋಚನೆಯಿಲ್ಲ. ಆಯ್ಕೆಯಾಗಿ ಹೋಗಲು ಸಾಧ್ಯವಾಗದಿದ್ದರೆ ನಾನು ಇಲ್ಲಿ ಮಾಡಬೇಕಾಗಿರುವ ಕೆಲಸಗಳೇನು ಎಂಬುದನ್ನೂ ಮೊದಲೇ ನಿರ್ಧರಿಸಿಯಾಗಿದೆ.

ನನ್ನ ಪ್ರಸ್ತಾವನೆಯನ್ನು ಓದಿದ್ದವರಿಗೆ ಮತ್ತು ಪರಿಷ್ಕರಣೆಗಳನ್ನು ಸೂಚಿಸಿದ್ದವರಿಗೆ ಫೆಲೋಶಿಪ್ ಫಲಿತಾಂಶ ತಿಳಿಸಿದಾಗ ಅವರೆಲ್ಲ ಚಕಿತರಾದರು. “ನಿಜವಾಗಿಯೂ ನೀವು ಆಯ್ಕೆಯಾಗುತ್ತೀರಿ ಎಂದುಕೊಂಡಿದ್ದೆವು… ಹೋಗಲಿ, ಇನ್ನೊಮ್ಮೆ ಖಂಡಿತ ಪ್ರಯತ್ನಿಸಿ” ಎಂದರು.

ಇರಲಿ. ಅದು ಬೇರೆ ವಿಷಯ. ಮತ್ತೊಂದು ಆರು ತಿಂಗಳನ್ನು ಅದಕ್ಕಾಗಿ ವ್ಯಯಿಸುವ ಉಮೇದು ಈಗಿನ್ನೂ ಹುಟ್ಟಿಲ್ಲ. ಓದಿದ ವಿಷಯ, ಮಾಡಿದ ಕೆಲಸ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ಮೊದಲಿನಿಂದಲೂ ನಂಬಿದವನು ನಾನು. ಅದು ಅನುಭವದಿಂದಲೂ ಸಿದ್ಧವಾಗಿದೆ ಕೂಡ. ಈ ಪ್ರಕ್ರಿಯೆಯಲ್ಲಂತೂ ನಾನು ಕಲಿತದ್ದು ಬೆಟ್ಟದಷ್ಟು.
ಅಂತೂ, ಇದೊಂದು ಕಥೆಯನ್ನು ಬರೆದರೆ ಮುಂದೆ ಪ್ರಯತ್ನಿಸುವ ಯಾರಿಗಾದರೂ ಅನುಕೂಲವಾದೀತು ಎಂದುಕೊಂಡು ಬರೆದೆ ಅಷ್ಟೆ. ಈ ಇಡೀ ಪ್ರಕ್ರಿಯೆಯಲ್ಲಿ ನನಗೆ ನೆರವಾದ, ಬೆಂಬಲಿಸಿದ ಎಲ್ಲ ಹಿರಿಯರು, ಸ್ನೇಹಿತರು, ಹಿತೈಷಿಗಳಿಗೆ- ಎಲ್ಲರಿಗೂ ಪ್ರಾಮಾಣಿಕ ಕೃತಜ್ಞತೆಗಳನ್ನು ಅರ್ಪಿಸುವೆ. ಇಂತಹ ಹತ್ತಾರು ಒಳ್ಳೊಳ್ಳೆಯ ಅಂತಾರಾಷ್ಟ್ರೀಯ ಫೆಲೋಶಿಪ್ ಗಳಿವೆ. ವಿದ್ಯಾರ್ಥಿಗಳು, ಸಂಶೋಧಕರು, ಇತರ ಆಸಕ್ತರು ಪ್ರಯತ್ನಿಸಿದರೆ ಅವುಗಳ ಅನುಕೂಲ ಪಡೆಯಬಹುದು. ಐಎಎಸ್ ಪರೀಕ್ಷೆ ಪಾಸಾಗದಿದ್ದರೂ ಕೋಚಿಂಗ್ ಸೆಂಟರ್ ಆರಂಭಿಸಬಹುದಾದಂತೆ, ಈಗ ಈ ವಿಷಯದಲ್ಲಿ ನಾನೊಂದು ಸ್ಥಳೀಯ ಕನ್ಸಲ್ಟೆನ್ಸಿ ತೆರೆಯುವಷ್ಟು ಸಂಪನ್ಮೂಲ ಉಂಟು.

ಎಲ್ಲ ಬಗೆಯ Fulbright Fellowshipಗಳ ಮಾಹಿತಿಗೆ: www.usief.org.in ನೋಡಿ.

ಅಂದಹಾಗೆ, ಡಾ. ಪೀಟರ್ ಗ್ಲೇಸರ್ ಎಂಬ ಪುಣ್ಯಾತ್ಮನ ಬಗ್ಗೆ ಇನ್ನೊಮ್ಮೆ ಬರೆಯುವೆ.

- ಸಿಬಂತಿ ಪದ್ಮನಾಭ ಕೆ. ವಿ.
sibanthipadmanabha@gmail.com

ಶನಿವಾರ, ಡಿಸೆಂಬರ್ 18, 2021

ಬಂದರೂ ಕಾಲೇಜಿಗೆ ಬಾರದು ಕಾಗುಣಿತ

17 ಡಿಸೆಂಬರ್ 2021ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ಇದು ‘ಅ’ಕಾರ ‘ಹ’ಕಾರ ವಿವಾದದ ಕುರಿತು ಅಲ್ಲ; ಅಲ್ಪಪ್ರಾಣ, ಮಹಾಪ್ರಾಣಗಳಿಗೆ ಸಂಬಂಧಿಸಿದ ಸಂಗತಿಯೂ ಅಲ್ಲ. ಅದಕ್ಕಿಂತಲೂ ಪ್ರಾಥಮಿಕವಾದ ವಿಷಯವೊಂದಕ್ಕೆ ಸಂಬಂಧಿಸಿದ್ದು. ಬರೆವಣಿಗೆಯಲ್ಲಿ ಕಾಗುಣಿತ ದೋಷ ಇರಬಾರದು ಎಂಬ ಬಗ್ಗೆ ಬಹುಮಂದಿಯ ಆಕ್ಷೇಪ ಇರಲಾರದೇನೋ? 

ಕಾಲೇಜು ಅಥವಾ ವಿಶ್ವವಿದ್ಯಾನಿಲಯ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ತರಗತಿ ಟಿಪ್ಪಣಿಯನ್ನೋ, ಬೇರೆ ಯಾವುದಾದರೂ ಬರೆಹವನ್ನೋ ಗಮನಿಸಿ. ಬಹುಪಾಲು ವಿದ್ಯಾರ್ಥಿಗಳಲ್ಲಿ ಒಂದು ಸಾಲಿಗೆ ನಾಲ್ಕು ಕಾಗುಣಿತ ತಪ್ಪು ಎದ್ದು ಕಾಣುತ್ತದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪಕರ ಪರಿಸ್ಥಿತಿಯನ್ನಂತೂ ಕೇಳುವುದೇ ಬೇಡ. ಅದು ಅವರಿಗೇ ಒಂದು ದೊಡ್ಡ ಪರೀಕ್ಷೆ.

ಪದವಿ ಅಥವಾ ಸ್ನಾತಕೋತ್ತರ ಹಂತಕ್ಕೆ ಬಂದರೂ ಈ ವಿದ್ಯಾರ್ಥಿಗಳ ಭಾಷೆ ಏಕೆ ತಿದ್ದಿಲ್ಲ? ಪ್ರೌಢ ಬರೆಹಗಳನ್ನು ಬರೆಯುವ ವಿಷಯ ಹಾಗಿರಲಿ, ಕಾಗುಣಿತ ದೋಷವಿಲ್ಲದ, ಅರ್ಥಪೂರ್ಣ ವಾಕ್ಯವೊಂದನ್ನು ರಚಿಸುವ ಶಕ್ತಿಯೂ ಈ ಮಕ್ಕಳಲ್ಲಿ ಏಕೆ ಬೆಳೆದಿಲ್ಲ? ಇದು ಯಾವುದೋ ಪ್ರದೇಶಕ್ಕೋ, ಜಾತಿಗೋ, ಪಂಗಡಕ್ಕೋ ಸಂಬಂಧಿಸಿದ ಸಮಸ್ಯೆ ಅಲ್ಲ. ಎಲ್ಲಾ ಕಡೆ, ಎಲ್ಲರಲ್ಲೂ ಇದೆ. 

‘ಹೊಡೆತ’ ಎಂಬುದು ‘ಹೋಡೆತ’ ಆಗುತ್ತದೆ; ‘ಬೇಲಿ’ ಎಂಬುದು ‘ಬೆಲಿ’ ಆಗುತ್ತದೆ; ‘ವಿಚಾರ’ ಎಂಬುದು ‘ವಿಚರಾ’ ಆಗುತ್ತದೆ; ‘ಮುದ್ದೆ’ ಎಂಬುದು ‘ಮುದೇ’ ಆಗುತ್ತದೆ; ‘ಆಗುತ್ತದೆ’ ಎಂಬುದು ‘ಅಗೂತದೆ’ ಆಗುತ್ತದೆ! ಇದೊಂದು ವಾಕ್ಯ ಗಮನಿಸಿ: ‘ನಿರುದ್ಯೋಗಕ್ಕೆ ಪ್ರಮುಖ ಕಾರಣವೆಂದರೆ ಕೌಶಲ್ಯಗಳ ಕೊರತೆಯೇ ನಿರುದ್ಯೋಗಕ್ಕೆ ಪ್ರಮುಖ ಕಾರಣ ಎನ್ನಬಹುದು’. ಸರಳವಾದ ವಾಕ್ಯವೊಂದನ್ನು ಬರೆಯುವಾಗಲೂ ತಾವೇನು ತಪ್ಪು ಮಾಡುತ್ತಿದ್ದೇವೆ ಎಂದು ಈ ವಿದ್ಯಾರ್ಥಿಗಳಿಗೆ ಹೊಳೆಯುವುದಿಲ್ಲ.

ಮಕ್ಕಳಲ್ಲಿ ಕಾಗುಣಿತ ದೋಷ ತಿದ್ದದಿರುವುದು ಹೊಸ ಚರ್ಚೆಯೇನೂ ಅಲ್ಲ. ವಿಶ್ವವಿದ್ಯಾನಿಲಯದವರು ಕಾಲೇಜಿನವರತ್ತ ಬೆರಳು ತೋರಿಸುವುದು, ಕಾಲೇಜು ಅಧ್ಯಾಪಕರು ಪ್ರೌಢಶಾಲಾ ಶಿಕ್ಷಕರತ್ತ ಬೊಟ್ಟು ಮಾಡುವುದು, ಪ್ರೌಢಶಾಲೆಯಲ್ಲಿರುವವರು ಪ್ರಾಥಮಿಕ ಶಾಲೆಯ ಅಧ್ಯಾಪಕನ್ನು ದೂರುವುದು ಹಿಂದಿನಿಂದಲೂ ನಡೆದಿದೆ. ಅವರಿವರನ್ನು ಜವಾಬ್ದಾರರನ್ನಾಗಿಸುವುದು ಹಾಗಿರಲಿ, ಈ ಸಮಸ್ಯೆಯ ಮೂಲ ಯಾವುದು, ಪರಿಹಾರ ಏನು ಎಂಬುದಾದರೂ ಚರ್ಚೆಯಾಗಬೇಕಲ್ಲ?

ಈ ವಿಚಾರದ ಬೆನ್ನು ಹಿಡಿದು ಹೊರಟರೆ ಮೂಲದಲ್ಲಿ ಪ್ರಾಥಮಿಕ ಶಾಲೆಯೇ ಕಾಣುತ್ತದೆ. ಆದರೆ ಅದೊಂದೇ ಕಾರಣವಲ್ಲ ಎಂಬುದೂ ಗೊತ್ತಾಗುತ್ತದೆ. ಪ್ರಾಥಮಿಕ ಶಿಕ್ಷಣದಿಂದಲೇ ಆರಂಭಿಸೋಣ.

ಪ್ರಾಥಮಿಕ ಶಾಲೆಯಲ್ಲಿ ಕಾಗುಣಿತ-ವ್ಯಾಕರಣಗಳಿಗೆ ಹೆಚ್ಚಿನ ಒತ್ತು ನೀಡಬೇಡಿ, ಮಕ್ಕಳಿಗೆ ‘ಸೌಂಡ್’ (ಧ್ವನಿ) ಅನ್ನು ಕಲಿಸಿಕೊಡಿ, ಮುಂದೆ ಭಾಷೆ ತಾನಾಗಿಯೇ ಬೆಳೆಯುತ್ತದೆ ಎಂಬ ಅಭಿಪ್ರಾಯವೊಂದಿದೆ. ಒಂದು ವೇಳೆ ಇದೇ ನಿಜವಾಗಿದ್ದರೆ ಈಗ ಹೇಳಿದ ಸಮಸ್ಯೆ ಕುರಿತು ಮಾತನಾಡುವ ಅಗತ್ಯ ಬರುತ್ತಿರಲಿಲ್ಲ. ಈ ವಿದ್ಯಾರ್ಥಿಗಳಿಗೆ ‘ಸೌಂಡ್’ನ ಅರಿವು ಚೆನ್ನಾಗಿಯೇ ಇದೆ. ‘ಮಾಡುತ್ತೇನೆ’ ಎಂಬ ಪದವನ್ನು ಹಾಗೆಯೇ ಓದುತ್ತಾರೆ, ಬರೆಯುವಾಗ ಮಾತ್ರ ಅದು ‘ಮಾಡುತೆನೆ’ಯೋ ‘ಮಡುತ್ತೆನೆ’ಯೋ ಆಗುತ್ತದೆ.

ಆರಂಭದಿಂದಲೂ ಆಂಗ್ಲಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಈ ಸಮಸ್ಯೆಯೋ ಎಂದು ಗಮನಿಸಿದರೆ, ಹಾಗಿಲ್ಲ. ಇವರು ಪೂರ್ತಿಯಾಗಿ ಕನ್ನಡ ಮಾಧ್ಯಮದಲ್ಲಿ ಓದಿದವರೇ. ಅಂದರೆ ಕಲಿಕೆಯಲ್ಲೇ ಸಮಸ್ಯೆ ಇದೆ ಎಂದಾಯ್ತು. ಪ್ರಾಥಮಿಕ ಹಂತದಲ್ಲಿ ಇನ್ನೇನು ಅಲ್ಲವಾದರೂ ಕಾಗುಣಿತವಾದರೂ ತಿದ್ದದೇ ಹೋದರೆ ಮುಂದೆ ಸುಧಾರಿಸುವುದು ಕಷ್ಟವಿದೆ. 

ಪ್ರಾಥಮಿಕ ಶಾಲೆಯೂ ಸೇರಿದಂತೆ ಶಿಕ್ಷಣದ ವಿವಿಧ ಹಂತಗಳಲ್ಲಿರುವ ಅಧ್ಯಾಪಕರಲ್ಲಿ ಎಷ್ಟು ಪ್ರಮಾಣ ಕಾಗುಣಿತ ತಪ್ಪಿಲ್ಲದೆ ಬರೆಯಬಲ್ಲವರು ಇದ್ದಾರೆ ಎಂಬುದೂ ಒಂದು ಪ್ರಶ್ನೆ. ಹೀಗೆ ಕೇಳಿದರೆ ಅನೇಕ ಅಧ್ಯಾಪಕರಿಗೆ ಮುಜುಗರ ಅನ್ನಿಸೀತು. ಆದರೆ ಈ ವಿಷಯ ನಿಜ. ಆರಂಭದಲ್ಲಿ ಪ್ರಸ್ತಾಪಿಸಿದ ರೀತಿಯ ವಿದ್ಯಾರ್ಥಿಗಳೇ ಅಧ್ಯಾಪಕರಾಗುತ್ತಾ ಹೋದರೆ ಅವರು ಅದನ್ನೇ ತಮ್ಮ ವಿದ್ಯಾರ್ಥಿಗಳಿಗೂ ಕಲಿಸುವುದು ಸಹಜ.

ಎಂಟನೇ ತರಗತಿ ಕಳೆದ ಮೇಲಂತೂ ಈಗಿನ ವಿದ್ಯಾರ್ಥಿಗಳು ಯಂತ್ರಗಳೇ ಆಗಿಬಿಡುತ್ತಾರೆ. ಅವರಿಗೆ ಆಗಲೇ ಪಿಯುಸಿಯಲ್ಲಿ ವಿಜ್ಞಾನ ಓದಿ ಇಂಜಿನಿಯರಿಂಗ್, ಮೆಡಿಕಲ್ ಸೀಟು ಹಿಡಿಯುವ ಗುಂಗು. ದಿನಬೆಳಗಾದರೆ ಟ್ಯೂಶನ್, ಕೋಚಿಂಗ್. ಇನ್ನೂ ಹತ್ತನೇ ತರಗತಿ ಮುಗಿಯುವ ಮೊದಲೇ ನೀಟು, ಜೆಇಇ ತರಬೇತಿ. ಖಾಸಗಿ ಪದವಿಪೂರ್ವ ಕಾಲೇಜುಗಳಲ್ಲಿ ಪರ್ಸೆಂಟೇಜು ಹೆಚ್ಚಿಸುವ ಪ್ರಯೋಗಗಳು. ಇವುಗಳ ನಡುವೆ ಭಾಷೆ ತಬ್ಬಲಿ.

ಪಿಯುಸಿ ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಓದುವವರಿಗೆ ಭಾಷೆ ಯಾಕೆ ಎಂಬಷ್ಟು ಉಡಾಫೆ. ಪ್ರಧಾನ ವಿಷಯಗಳ ಬಗೆಗಷ್ಟೇ ಅವರ ಗಮನ. ಅವುಗಳಿಂದ ಪರ್ಸೆಂಟೇಜಿಗೆ ಏನೂ ಪ್ರಯೋಜನ ಇಲ್ಲ ಎಂಬ ಲೆಕ್ಕಾಚಾರ. ಭಾಷಾ ಶಿಕ್ಷಕರು ಅನೇಕ ಸಲ ಪೆವಿಲಿಯನ್‍ಗೆ ಮಾತ್ರ ಉಳಿಯುವ ಹೆಚ್ಚುವರಿ ಆಟಗಾರರು. ಇನ್ನು ಕಲಾ ವಿಭಾಗವನ್ನು ಕೇಳುವವರೇ ಇಲ್ಲ.

ಕಲೆ-ವಾಣಿಜ್ಯ ವಿಭಾಗದವರು, ತಾಂತ್ರಿಕ ಶಿಕ್ಷಣಕ್ಕೆ ಹೋಗದ ವಿಜ್ಞಾನ ವಿಭಾಗದವರು ಕಾಲೇಜಿಗೆ ಬರುತ್ತಾರೆ. ಅಷ್ಟು ಹೊತ್ತಿಗೆ ಅವರ ಭಾಷೆಯ ತೊಡಕುಗಳು ಅಲುಗಾಡಿಸಲೂ ಆಗದಷ್ಟು ಭದ್ರವಾಗಿ ಬೇರೂರಿರುತ್ತವೆ. ಎದುರಿಗೆ ಒಂದು ಪುಟ ಇಟ್ಟು ಅದನ್ನೇ ನಕಲು ಮಾಡಿ ಎಂದರೂ ಅವರೂ ತಪ್ಪೇ ಬರೆಯುತ್ತಾರೆ. ಅವರ ಕಣ್ಣೆದುರೇ ತಪ್ಪನ್ನು ತಿದ್ದಿದರೂ ಮರುದಿನ ಅದೇ ತಪ್ಪು ಬರೆಯುತ್ತಾರೆ. ಹೇಗೋ ತೇರ್ಗಡೆ ಆಗಿ ಎಂಎಗೆ ಪ್ರವೇಶ ಪಡೆಯುತ್ತಾರೆ. ಅಲ್ಲಿಯೂ ಇದೇ ಪ್ರಹಸನ ಮುಂದುವರಿಯುತ್ತದೆ. ನೀನು ತಪ್ಪು ಬರೆಯುತ್ತಾ ಇದ್ದೀ ಎಂದರೆ ಈ ಹಂತಕ್ಕೆ ಬಂದ ವಿದ್ಯಾರ್ಥಿಗೆ ಅವಮಾನ. ಇಲ್ಲಿ ಕಾಗುಣಿತ ತಿದ್ದಿಕೊಂಡು ಕೂರಲು ಅಧ್ಯಾಪಕರಿಗೆ ಸಮಯ, ವ್ಯವಧಾನ ಎರಡೂ ಇಲ್ಲ.

ಇಲ್ಲೊಂದು ಸಾಮಾಜಿಕ-ಆರ್ಥಿಕ ವಿಚಾರವೂ ಇದೆ. ಅದೇನೆಂದರೆ, ಸರ್ಕಾರಿ ಶಾಲೆಗಳಲ್ಲಿ ಓದುವ ಅನೇಕ ಮಕ್ಕಳು ವಿವಿಧ ಕಾರಣಗಳಿಗಾಗಿ ತರಗತಿಗೆ ಹಾಜರಾಗುವುದೇ ಇಲ್ಲ ಅಥವಾ ಇವರದ್ದು ತೀರಾ ಅನಿಯಮಿತ ಹಾಜರಾತಿ. ಇವರು ಆರಂಭದಿಂದಲೇ ಭಾಷಾತರಬೇತಿಯಿಂದ ವಂಚಿತರು. ಅಂತೂ ಇದೊಂದು ವಿಷವರ್ತುಲ. ಕೇವಲ ಭಾಷಾಶಾಸ್ತ್ರಜ್ಞರೋ, ಶಿಕ್ಷಣ ಶಾಸ್ತ್ರಜ್ಞರೋ ಪರಿಹಾರ ಸೂಚಿಸಬಹುದಾದ ಸಮಸ್ಯೆ ಅಲ್ಲ. ಸುಧಾರಣೆಯ ದಾರಿ ಬಗ್ಗೆ ಪೂರ್ವಗ್ರಹರಹಿತ ಚರ್ಚೆಯಾದರೆ ಒಳ್ಳೆಯದು.

- ಸಿಬಂತಿ ಪದ್ಮನಾಭ ಕೆ. ವಿ.


ಸೋಮವಾರ, ಡಿಸೆಂಬರ್ 13, 2021

ಬದಲಾಗಿರುವ ಮಾಧ್ಯಮರಂಗದಲ್ಲಿ ಉದ್ಯೋಗಾವಕಾಶ ಮತ್ತು ನಿರೀಕ್ಷೆಗಳು

13 ಡಿಸೆಂಬರ್ 2021ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ಮಾಧ್ಯಮರಂಗ ಯುವತಲೆಮಾರಿನ ಕನಸಿನ ಲೋಕ. ಸಾಮಾಜಿಕ ಮನ್ನಣೆ, ಒಳ್ಳೆಯ ಸಂಪಾದನೆ- ಎರಡನ್ನೂ ಒಂದೇ ಹೆಜ್ಜೆಯಲ್ಲಿ ಸಾಧಿಸಿಕೊಳ್ಳುವ ತವಕ ಹಲವರದು. ಈ ಕನಸು ಅತಿರಂಜಿತವೂ ಅಲ್ಲ, ಅಸಾಧ್ಯವೂ ಅಲ್ಲ. ಆದರೆ ಮಾಧ್ಯಮ ಕ್ಷೇತ್ರದಲ್ಲಿ ಬದುಕು ಕಂಡುಕೊಳ್ಳುವ ಹಂಬಲ ಹೊಂದಿರುವವರು ಅಲ್ಲಿನ ವಾಸ್ತವಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅದರ ನಿರೀಕ್ಷೆಗಳಿಗೆ ಸರಿಹೊಂದುವ ಅರ್ಹತೆಗಳನ್ನು ರೂಢಿಸಿಕೊಳ್ಳುವುದು ಮುಖ್ಯ.

ಮಾಧ್ಯಮಲೋಕ ಕಳೆದ ಒಂದು ದಶಕದಲ್ಲಿ ಊಹೆಗೂ ಮೀರಿ ಬದಲಾಗಿದೆ. ಒಂದು ಕಾಲಕ್ಕೆ ಪತ್ರಿಕೆ, ಟಿವಿ, ರೇಡಿಯೋಗಳಿಗೆ ಸೀಮಿತವಾಗಿದ್ದ ಮಾಧ್ಯಮಕ್ಷೇತ್ರ ಈಗ ಹಲವು ಆಯಾಮಗಳನ್ನು ಮೈಗೂಡಿಸಿಕೊಂಡು ಬಹುಕೋಟಿ ಉದ್ಯಮವಾಗಿ ಬೆಳೆದಿದೆ. ಅದನ್ನು ‘ಮಾಧ್ಯಮ ಮತ್ತು ಮನರಂಜನಾ ಉದ್ಯಮ’ ಎಂದು ಕರೆಯುವವರೆಗೆ ಅದರ ಸ್ವರೂಪ ಬದಲಾಗಿದೆ. 

ಭಾರತದಲ್ಲಿ ಇಂದು ಉಳಿದೆಲ್ಲ ಕ್ಷೇತ್ರಗಳಿಗಿಂತಲೂ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರ ಇದುವೇ. 2020ರಲ್ಲಿ ನಮ್ಮ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಗಾತ್ರ ರೂ. 1.38 ಲಕ್ಷ ಕೋಟಿ (ಟ್ರಿಲಿಯನ್) ಆಗಿತ್ತು. ಸದ್ಯದಲ್ಲೇ ಅದು 1.80 ಟ್ರಿಲಿಯನ್‍ಗೆ ತಲುಪುವ ನಿರೀಕ್ಷೆ ಇದೆ. ಕೋವಿಡ್ ಉಳಿದೆಲ್ಲ ಕ್ಷೇತ್ರಗಳಂತೆ ಮಾಧ್ಯಮ ಕ್ಷೇತ್ರಕ್ಕೂ ಮಹಾಹೊಡೆತ ನೀಡಿದೆ ಎಂಬುದು ಮೇಲ್ನೋಟದ ತಿಳುವಳಿಕೆ ಆದರೂ ಒಟ್ಟಾರೆ ರಂಗದ ಮೇಲೆ ಬೇರೆ ಕ್ಷೇತ್ರಗಳಿಗೆ ಆದಷ್ಟು ತೊಂದರೆ ಆಗಿಲ್ಲ; ಅಥವಾ ಮಾಧ್ಯಮ ಮತ್ತು ಮನರಂಜನಾ ಉದ್ಯಮ ಬಹುಬೇಗನೆ ಚೇತರಿಸಿಕೊಂಡಿದೆ. 

ಹಾಗೆ ನೋಡಿದರೆ ಕೋವಿಡ್ ಮಾಧ್ಯಮರಂಗದ ಸ್ವರೂಪದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿದೆ. ಮಾಧ್ಯಮಗಳ ಡಿಜಿಟಲ್ ಆಯಾಮ ವಿಕಾಸವಾಗಿರುವುದರ ಹಿಂದೆ ಕೋವಿಡ್‍ನ ಕೊಡುಗೆಯೂ ಬಹಳ ಇದೆ. ಇನ್ನು ಎರಡು-ಮೂರು ವರ್ಷಗಳಲ್ಲಿ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಶೇ. 40 ಪಾಲನ್ನು ಟಿವಿ, ಶೇ. 13 ಮುದ್ರಣ ಮಾಧ್ಯಮ, ಶೇ. 12 ಜಾಹೀರಾತು, ಶೇ. 9 ಸಿನಿಮಾ ಹಾಗೂ ಶೇ. 8ರಷ್ಟನ್ನು ಒಟಿಟಿ ಮತ್ತು ಗೇಮಿಂಗ್ ಹೊಂದಲಿವೆ ಎಂದು ಅಧ್ಯಯನಗಳು ತಿಳಿಸಿವೆ.

ಬದಲಾಗಿರುವ ಸ್ವರೂಪ

ಕೆಲವು ವರ್ಷಗಳ ಹಿಂದೆ ಒಳ್ಳೆಯ ಬರವಣಿಗೆ, ಒಳ್ಳೆಯ ಮಾತುಗಾರಿಕೆ, ವಿವಿಧ ರಂಗಗಳ ಉತ್ತಮ ತಿಳುವಳಿಕೆ ಇದ್ದರೆ ಮುದ್ರಣ-ವಿದ್ಯುನ್ಮಾನ ಮಾಧ್ಯಮಗಳಿಗೆ ಪ್ರವೇಶ ಸುಲಭವಾಗಿತ್ತು. ಈಗ ಮಾಧ್ಯಮರಂಗವೂ ಬದಲಾಗಿದೆ, ನಿರೀಕ್ಷೆಗಳೂ ಬದಲಾಗಿವೆ. ಇದನ್ನು ಆ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬಯಸುವವರು ಅರ್ಥಮಾಡಿಕೊಳ್ಳಬೇಕು. ಬದಲಾಗಿರುವ ಕಾಲಕ್ಕೆ ತಕ್ಕಂತೆ ತಮ್ಮ ಕೌಶಲಗಳನ್ನು ಬೆಳೆಸಿಕೊಳ್ಳದೆ ಹೋದರೆ ಮಾಧ್ಯಮರಂಗಕ್ಕೆ ಪ್ರವೇಶ ಇಲ್ಲ, ಪ್ರವೇಶಿಸಿದರೂ ಯಶಸ್ಸು ಇಲ್ಲ, ಉಳಿಗಾಲವೂ ಇಲ್ಲ.

ಮಾಧ್ಯಮಗಳನ್ನು ಮುದ್ರಣ ಮತ್ತು ವಿದ್ಯುನ್ಮಾನವೆಂದು ವಿಂಗಡಿಸುವ ಪದ್ಧತಿಯೇ ಹಳತಾಯಿತು. ಅಂತಹ ಪ್ರತ್ಯೇಕತೆ ಈಗ ಉಳಿದುಕೊಂಡಿಲ್ಲ. ಮುದ್ರಣ ಮಾಧ್ಯಮ, ಟಿವಿ ಚಾನೆಲ್‍ಗಳು ಇಂಟರ್ನೆಟ್‍ನಲ್ಲಿವೆ, ಫೇಸ್‍ಬುಕ್‍ನಂತಹ ಸಾಮಾಜಿಕ ತಾಣಗಳಲ್ಲಿವೆ, ಯೂಟ್ಯೂಬ್ ಚಾನೆಲ್‍ಗಳನ್ನು ಹೊಂದಿವೆ. ಪತ್ರಿಕೆಗಳು ಸಾಮಾಜಿಕ ತಾಣಗಳಲ್ಲಿ ಲೈವ್ ಕಾರ್ಯಕ್ರಮಗಳನ್ನು ನೀಡುತ್ತಿವೆ, ಪಾಡ್‍ಕಾಸ್ಟ್, ಕ್ಲಬ್‍ಹೌಸ್ ಚರ್ಚೆಗಳನ್ನು ನಡೆಸುತ್ತಿವೆ, ದೃಶ್ಯ-ಶ್ರವ್ಯ ಸಾಮಗ್ರಿಗಳನ್ನು ಹೆಚ್ಚುಹೆಚ್ಚಾಗಿ ಒದಗಿಸುತ್ತಿವೆ. ಹೆಚ್ಚೆಂದರೆ ಎಲ್ಲವನ್ನೂ ಒಟ್ಟಾಗಿ ಡಿಜಿಟಲ್ ಮಾಧ್ಯಮಗಳು ಎಂದು ಕರೆಯಬಹುದೇನೋ? ಡಿಜಿಟಲೇ ಮಾಧ್ಯಮರಂಗದ ಭವಿಷ್ಯ ಎಂದು ದಶಕದ ಹಿಂದೆಯೇ ಘೋಷಿಸಿಯಾಗಿದೆ; ಕೋವಿಡ್ ಅದನ್ನು ಬೇಗನೇ ನಿಜವಾಗಿಸಿದೆ.

ಅಗತ್ಯ ಕೌಶಲಗಳು

ಮಾಧ್ಯಮರಂಗದಲ್ಲಾಗಿರುವ ಬದಲಾವಣೆ ತಂತ್ರಜ್ಞಾನದ ಕೊಡುಗೆ ಎಂದ ಮೇಲೆ ಅದರ ಜ್ಞಾನ ಇಂದು ನಿರ್ಣಾಯಕ. ಮಾಧ್ಯಮ ಕೌಶಲಗಳ ಕೊತೆಗೆ ತಾಂತ್ರಿಕ ನೈಪುಣ್ಯವುಳ್ಳವರಿಗೆ ಇಂದು ಮೀಡಿಯಾದಲ್ಲಿ ತೆರೆದತೋಳಿನ ಸ್ವಾಗತ. ತಪ್ಪಿಲ್ಲದ ಬರವಣಿಗೆ, ತಡವರಿಸದ ಮಾತು, ಪ್ರಚಲಿತ ವಿದ್ಯಮಾನಗಳ ಉತ್ತಮ ಮಾಹಿತಿ, ಇತಿಹಾಸ, ಸಾಹಿತ್ಯ, ಆರ್ಥಿಕತೆ, ರಾಜಕೀಯ ಮೊದಲಾದ ಕ್ಷೇತ್ರಗಳ ವಿಸ್ತೃತ ತಿಳುವಳಿಕೆ, ಕಂಪ್ಯೂಟರ್ ಜ್ಞಾನ- ಇವೆಲ್ಲವುಗಳ ಹೊತೆಗೆ ಮಾಧ್ಯಮರಂಗಕ್ಕೆ ಸೇರಬಯಸುವವರಿಗೆ ಇಂದು ಡಿಜಿಟಲ್ ಕೌಶಲಗಳು ಬಹಳ ಅಗತ್ಯ. 

ಸೃಜನಶೀಲ ಚಿಂತನೆ, ಆಡಿಯೋ-ವೀಡಿಯೋ ಎಡಿಟಿಂಗ್, ಸಾಮಾಜಿಕ ಮಾಧ್ಯಮಗಳ ಕಾರ್ಯವೈಖರಿಯ ತಿಳುವಳಿಕೆ, ಡಿಜಿಟಲ್ ಮಾರ್ಕೆಟಿಂಗ್, ಸರ್ಚ್ ಇಂಜಿನ್ ಆಪ್ಟಿಮೈಸೇಶನ್ (SEO) ಕೌಶಲಗಳನ್ನೂ ಇಂದು ಕರಗತ ಮಾಡಿಕೊಳ್ಳುವುದು ಅಗತ್ಯ.

ಅನಿಮೇಶನ್, ವಿಶುವಲ್ ಇಫೆಕ್ಟ್, ಗೇಮಿಂಗ್, ಕಾಮಿಕ್ಸ್- ಇವನ್ನು ‘ಛಾಂಪಿಯನ್ ಸೆಕ್ಟರ್ಸ್’ ಎಂದು ಮಾರುಕಟ್ಟೆ ಹಾಗೂ ಸರ್ಕಾರ ಎರಡೂ ಗುರುತಿಸಿವೆ. ಮಾಧ್ಯಮರಂಗ ಈ ಆಯಾಮಗಳನ್ನು ತನ್ನೊಳಗೆ ಆವಾಹಿಸಿಕೊಳ್ಳುತ್ತಿದೆ. ಪತ್ರಿಕೆ-ಟಿವಿಗಳ ಆದಾಯ ಮೂಲದ ಲೆಕ್ಕಾಚಾರ ಬದಲಾಗಿದೆ. ಸರ್ಕ್ಯುಲೇಶನ್, ಟಿ.ಆರ್.ಪಿ. ಜಾಗದಲ್ಲಿ ಕ್ಲಿಕ್ಸ್, ವ್ಯೂಸ್ ಪದಗಳು ಕೂಡ ಸೇರಿಕೊಂಡಿವೆ. ಕೃತಕ ಬುದ್ಧಿಮತ್ತೆ, ಮಶಿನ್ ಲರ್ನಿಂಗ್‍ಗಳು ಮಾಧ್ಯಮಗಳ ಕಾರ್ಯವೈಖರಿಯ ಮೇಲೂ ಪ್ರಭಾವ ಬೀರಿವೆ. ಮಾಧ್ಯಮಕ್ಷೇತ್ರದಲ್ಲಿ ಉದ್ಯೋಗ, ಭವಿಷ್ಯ ಬಯಸುವವರು ಈ ಬದಲಾವಣೆಗಳನ್ನೂ ಆರ್ಥಮಾಡಿಕೊಳ್ಳಬೇಕು. ಮಾಧ್ಯಮ ಶಿಕ್ಷಣ-ತರಬೇತಿ ನೀಡುವ ಕಾಲೇಜು, ವಿಶ್ವವಿದ್ಯಾನಿಲಯಗಳೂ ಇವನ್ನು ಗಮನಿಸದೆ ಹೋದರೆ ಅವರ ಕೋರ್ಸುಗಳೂ ಅಪ್ರಸ್ತುತವಾಗಿಬಿಡುತ್ತವೆ. ಅವುಗಳ ಪಠ್ಯಕ್ರಮ, ತರಬೇತಿಯ ವಿಧಾನ, ಅಧ್ಯಾಪಕರ ತಿಳುವಳಿಕೆ- ಎಲ್ಲವೂ ಕಾಲಕ್ಕೆ ಅನುಗುಣವಾಗಿ ‘ಅಪ್ಡೇಟ್’ ಆಗುವುದು ಅನಿವಾರ್ಯ.

ಇಷ್ಟೆಲ್ಲ ಹೇಳಿದ ಮೇಲೂ ಮರೆಯದಿರಬೇಕಾದ ಒಂದು ಮಾತು: ತಂತ್ರಜ್ಞಾನದಲ್ಲಿ ಎಷ್ಟೇ ಪ್ರಗತಿ ಆದರೂ ಸಾಮಾಜಿಕ ಬದ್ಧತೆಯೇ ಮಾಧ್ಯಮರಂಗದ ಶಾಶ್ವತ ಅಂತರ್ಗತ ಮೌಲ್ಯ. ಅದಿಲ್ಲದೆ ಮಾಧ್ಯಮಗಳಿಗೆ ಅಸ್ತಿತ್ವ ಇಲ್ಲ. ಮಾಧ್ಯಮರಂಗದಲ್ಲಿ ಉದ್ಯೋಗ ಕಂಡುಕೊಳ್ಳಬಯಸುವವರಿಗೂ ಅಂತಿಮವಾಗಿ ಇದೇ ದಾರಿದೀಪ.

ಹೊಸ ಉದ್ಯೋಗಾವಕಾಶಗಳು

ವೆಬ್ ಕಂಟೆಂಟ್ ಮ್ಯಾನೇಜರ್: ವಿವಿಧ ಉದ್ಯಮ, ಸಂಸ್ಥೆಗಳ ವೆಬ್ಸೈಟ್, ಆನ್ಲೈನ್ ಹೂರಣವನ್ನು ನಿರ್ವಹಿಸುವುದು.

ಸೋಶಿಯಲ್ ಮೀಡಿಯಾ ಮ್ಯಾನೇಜರ್: ಉದ್ಯಮಗಳು ಹಾಗೂ ಗಣ್ಯರ ಸಾಮಾಜಿಕ ಜಾಲತಾಣ ಪುಟಗಳ ನಿರ್ವಹಣೆ.

ಮೀಡಿಯಾ ಪ್ಲಾನರ್: ಯಾವ ಕಂಪೆನಿಗಳು ತಮ್ಮ ಜಾಹೀರಾತು, ಪ್ರಚಾರಕ್ಕಾಗಿ ಯಾವ ಮಾಧ್ಯಮಗಳನ್ನು ಹೇಗೆ ಬಳಸಿಕೊಳ್ಳಬೇಕೆಂದು ನಿರ್ಧರಿಸುವುದು.

ಪಿಆರ್‍ಒ (ಸಾರ್ವಜನಿಕ ಸಂಪರ್ಕ ಅಧಿಕಾರಿ): ವಿವಿಧ ಉದ್ಯಮ, ವ್ಯಕ್ತಿ, ಸಂಸ್ಥೆಗಳ ವರ್ಚಸ್ಸು ವೃದ್ಧಿ, ಈವೆಂಟ್ ಮ್ಯಾನೇಜ್ಮೆಂಟ್ ಹಾಗೂ ಮಾಧ್ಯಮ ಸಂಬಂಧದ ಜವಾಬ್ದಾರಿ ನಿರ್ವಹಿಸುವುದು.

ಡಿಜಿಟಲ್ ಮಾರ್ಕೆಟರ್: ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ಸರ್ಚ್ ಇಂಜಿನ್ ಆಪ್ಟಿಮೈಸೇಶನ್, ಮೊಬೈಲ್ ಮಾರ್ಕೆಟಿಂಗ್ ಇತ್ಯಾದಿಗಳನ್ನು ನೋಡಿಕೊಳ್ಳುವುದು.

ಜಾಹೀರಾತು ಕ್ಷೇತ್ರ: ಜಾಹೀರಾತು ಸ್ಕ್ರಿಪ್ಟ್, ವಿನ್ಯಾಸ ರಚನೆ, ಆಡಿಯೋ-ವಿಶುವಲ್ ಎಡಿಟಿಂಗ್, ಇತ್ಯಾದಿ.

ಟೆಕ್ನಿಕಲ್ ರೈಟರ್: ತಾಂತ್ರಿಕ ಕ್ಷೇತ್ರಗಳಿಗೆ ವಿಶಿಷ್ಟವಾದ ಬರವಣಿಗೆ, ಪ್ರಚಾರ ಹಾಗೂ ತರಬೇತಿ ಸಾಮಗ್ರಿಗಳ ತಯಾರಿ, ಭಾಷಾಂತರ ಮುಂತಾದ ಜವಾಬ್ದಾರಿ.

ಅನಿಮೇಟರ್/ಮಲ್ಟಿಮೀಡಿಯಾ ಸ್ಪೆಶಲಿಸ್ಟ್: ಜಾಹೀರಾತು, ಟಿವಿ, ಸಿನಿಮಾ, ಧಾರಾವಾಹಿ, ಡಿಜಿಟಲ್ ಮೀಡಿಯಾಗಳಲ್ಲಿ ಹೇರಳ ಅವಕಾಶ.

- ಸಿಬಂತಿ ಪದ್ಮನಾಭ ಕೆ. ವಿ.


ಭಾನುವಾರ, ಡಿಸೆಂಬರ್ 12, 2021

ಇದು ಮಾಯಾಬಜಾರು

12 ಡಿಸೆಂಬರ್ 2021ರ 'ವಿಜಯ ಕರ್ನಾಟಕ' ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ

ಲ್ಯಾಂಡ್‍ಲೈನ್ ಫೋನಿನ ಕಾಲವನ್ನೊಮ್ಮೆ ಜ್ಞಾಪಿಸಿಕೊಳ್ಳಿ: ಪ್ರತಿಯೊಬ್ಬನಿಗೂ ಏನಿಲ್ಲವೆಂದರೂ ಐವತ್ತು ದೂರವಾಣಿ ಸಂಖ್ಯೆಗಳು ನೆನಪಿರುತ್ತಿದ್ದವು. ಅಕ್ಕ, ತಮ್ಮ, ಅಣ್ಣ, ತಂಗಿ, ದೊಡ್ಡಪ್ಪ, ಚಿಕ್ಕಪ್ಪ, ಅತ್ತೆ, ಮಾವ, ನಾದಿನಿ, ಸೊಸೆ, ಹತ್ತಾರು ಸ್ನೇಹಿತರು- ಎಲ್ಲರ ಸಂಖ್ಯೆಗಳೂ ಕಂಠಪಾಠ. ಸಾಲದು ಎಂದರೆ ಇನ್ನಷ್ಟು ನಂಬರುಗಳನ್ನು ಬರೆದುಕೊಳ್ಳಲು ಒಂದು ಪುಟ್ಟ ಪುಸ್ತಕ. ಆಮೇಲೆ ಕಾಯಿನ್‍ಫೋನು ಬಂದ ಮೇಲಂತೂ ಇನ್ನಷ್ಟು ಸಂಖ್ಯೆಗಳು ನೆನಪಿರಲೇಬೇಕು. ಏಕೆಂದರೆ ಮುಷ್ಟಿಮುಷ್ಟಿ ನಾಣ್ಯಗಳನ್ನು ಹಿಡಿದುಕೊಂಡು ಬೂತಿನೆದುರು ಕ್ಯೂ ನಿಲ್ಲುವಾಗ ಫೋನ್ ಪುಸ್ತಕ ಹಿಡಿದುಕೊಳ್ಳಲು ಕೈಯಲ್ಲಿ ಜಾಗವಾದರೂ ಬೇಕಲ್ಲ! 

ಈ ಮೊಬೈಲೆಂಬ ಮೋಹಮಾಯೆ ಬಂದದ್ದೇ, ಕಾಯಿನ್‍ಗಳು ಉದುರಿಹೋದವು, ನೆನಪುಗಳು ಚದುರಿಹೋದವು. ಅವೆಲ್ಲವೂ ಓಡಿಹೋಗಿ ಸೆಲ್‍ಫೋನೆಂಬ ಚಿಕ್ಕಪೆಟ್ಟಿಗೆಯೊಳಗೆ ಅಡಗಿಕೊಂಡವು. ಆರಂಭದಲ್ಲಿ ಬಂದ ಸಾಮಾನ್ಯ ಫೋನುಗಳಿಗೆ ಸ್ವಲ್ಪ ಇತಿಮಿತಿ ಇತ್ತು. ಫೋನಿನ ಸಾಮರ್ಥ್ಯ ಮುಗಿದ ಮೇಲೆ ಇನ್ನೂ ಸಂಖ್ಯೆಗಳಿದ್ದರೆ ಪ್ರತ್ಯೇಕ ಬರೆದಿಟ್ಟುಕೊಳ್ಳಬೇಕಿತ್ತು. ಆಮೇಲೆ ಹೊಸಹೊಸ ಫೋನುಗಳು ಬಂದಂತೆಲ್ಲ ಅವುಗಳೊಳಗೆ ಜಾಗ ಹೆಚ್ಚಾಯಿತು. ನಮ್ಮ ತಲೆಯೊಳಗಿನ ಜಾಗ ಕಡಿಮೆಯಾಯಿತು.

ಈಗ ಯಾವುದನ್ನೂ ನೆನಪಿಟ್ಟುಕೊಳ್ಳಬೇಕಿಲ್ಲ, ಮೊಬೈಲ್ ಇದೆಯಲ್ಲ! ಹತ್ತಲ್ಲ, ನೂರಲ್ಲ, ಸಾವಿರಾರು ನಂಬರುಗಳಿದ್ದರೂ ಅದು ನೆನಪಿಟ್ಟುಕೊಳ್ಳುತ್ತದೆ. ಮೊಬೈಲಿಗೆ ಇಂಟರ್ನೆಟ್ ಹೊಕ್ಕ ಮೇಲಂತೂ ಕೇಳುವುದೇ ಬೇಡ. ಅದಕ್ಕೂ ನೆನಪು ಬೇಕಿಲ್ಲ. ಎಲ್ಲವೂ ಅಲ್ಲೆಲ್ಲೋ ಬರಿಗಣ್ಣಿಗೆ ಕಾಣದ, ಮೊಬೈಲಿಗೆ ಮಾತ್ರ ಕಾಣುವ ಮೋಡಗಳ ನಡುವೆ ಚದುರಿಕೊಂಡಿರುತ್ತವೆ. ಕುಟುಂಬ ಸದಸ್ಯರ, ಆಪ್ತ ಸ್ನೇಹಿತರ ನಂಬರುಗಳು ಬಿಡಿ, ತನ್ನ ನಂಬರೇ ಮನುಷ್ಯನಿಗೆ ನೆನಪಿದ್ದರೆ ಅದೇ ಹೆಚ್ಚು. ಒಬ್ಬನಿಗೆ ಕನಿಷ್ಟ ಎರಡು ನಂಬರು ಈಗ ಸರ್ವೇಸಾಮಾನ್ಯ. ‘ನಿಮ್ಮ ನಂಬರ್ ಹೇಳಿ’ ಎಂದರೆ ‘ತಡೀರಿ ಒಂದು ನಿಮಿಷ’ ಎಂದು ಮತ್ತದೇ ಮೊಬೈಲ್‍ನ ನೆರವು ಪಡೆಯುವುದು ಮೊಬೈಲಿನಾಣೆಗೂ ನಿಜ.

ನಾವು ಮರೆತಿರುವುದು ನಂಬರುಗಳನ್ನು ಮಾತ್ರವೇ ಎಂದು ಕೇಳಿಕೊಂಡರೆ ಅಷ್ಟೇ ಅಲ್ಲ ಎಂದು ನಮ್ಮಷ್ಟಕ್ಕೇ ಆದರೂ ಗೊಣಗಿಕೊಳ್ಳುತ್ತೇವೆ. ಹೌದು, ಮೊಬೈಲ್ ಮತ್ತು ಅದರೊಳಗೆ ಸೇರಿಕೊಂಡಿರುವ ಡೇಟಾ ಬದುಕನ್ನು ಗುರುತೇ ಸಿಗದಷ್ಟು ಬದಲಾಯಿಸಿಬಿಟ್ಟಿವೆ. ಮೊಬೈಲ್ ಎಂದರೆ ಸೋಶಿಯಲ್ ಮೀಡಿಯಾ ಎಂಬಷ್ಟರಮಟ್ಟಿಗೆ ಮೊಬೈಲ್ ಕೂಡ ತನ್ನ ಸ್ವರೂಪವನ್ನು ಬದಲಿಸಿಕೊಂಡಿದೆ. ಈಗ ಯಾವುದೂ ನಮ್ಮೊಳಗೆ ಇಲ್ಲ, ಎಲ್ಲವನ್ನೂ ಅಲ್ಲೇ ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದೇವೆ. ವರ್ಷಪೂರ್ತಿ ಜಾತ್ರೆ; ಪ್ರದರ್ಶನ ಮತ್ತು ಮಾರಾಟ ನಿರಂತರ. ಜಾತ್ರೆಗೆ ಯಾರು ಬೇಕಾದರೂ ಬರಬಹುದು, ಯಾವಾಗ ಬೇಕಾದರೂ ಹೋಗಬಹುದು. ಕೆಲವರು ನೋಡಿಕೊಂಡು, ಮತ್ತೆ ಕೆಲವರು ಮುಟ್ಟಿನೋಡಿಕೊಂಡು, ಇನ್ನು ಕೆಲವರು ಬರಿದೇ ಚೌಕಾಸಿ ಮಾಡಿಕೊಂಡು, ಉಳಿದ ಹಲವರು ಒಳ್ಳೇ ವ್ಯಾಪಾರ ಕುದುರಿಸಿಕೊಂಡು ಓಡಾಡುವುದು ಇಲ್ಲಿ ಸಾಮಾನ್ಯ. ಇಲ್ಲಿ ಎಲ್ಲರೂ ಎಲ್ಲರನ್ನೂ ಪ್ರಶ್ನೆ ಮಾಡುವವರೇ. ಆದರೆ ಯಾರು ಕೂಡ ಯಾರಿಗೂ ಜವಾಬ್ದಾರರಲ್ಲ ಅಷ್ಟೆ.

ನೆನಪುಗಳನ್ನೆಲ್ಲ ಗುಡಿಸಿ ಒರೆಸಿ ಹೊರಹಾಕುವುದೇ ಮನಸ್ಸನ್ನು ಖಾಲಿ ಇಟ್ಟುಕೊಳ್ಳುವ ವಿಧಾನ ಎಂಬುದನ್ನು ಸೋಶಿಯಲ್ ಮೀಡಿಯಾಗಳು ಕಲಿಸಿವೆ. ಬೆಳಗ್ಗೆ ಎದ್ದಲ್ಲಿಂದ ತಡರಾತ್ರಿ ಮಲಗುವವರೆಗಿನ ಎಲ್ಲ ಕ್ಷಣಗಳೂ ಅಲ್ಲಿ ದಾಖಲಾಗಬೇಕು. ಎದ್ದದ್ದು, ಬಿದ್ದದ್ದು, ಅಡುಗೆ ಮಾಡಿದ್ದು, ಉಂಡದ್ದು, ಓಡಾಡಿದ್ದು, ಖರೀದಿಸಿದ್ದು, ಬರೆದದ್ದು, ಓದಿದ್ದು, ಅತ್ತದ್ದು, ಕುಡಿದದ್ದು, ಕುಣಿದದ್ದು, ಬಸಿರಾದದ್ದು, ಹುಟ್ಟಿದ್ದು, ಸತ್ತಿದ್ದು... ಎಲ್ಲವನ್ನೂ ಹೇಳಿಕೊಳ್ಳಬೇಕು. ಹೆಂಡತಿ ಮನೆಯಲ್ಲೇ ಇದ್ದರೂ ಆಕೆಗೆ ಫೇಸ್ಬುಕ್ಕಲ್ಲೊಂದು ಆನಿವರ್ಸರಿ ವಿಶ್ ಮಾಡಬೇಕು. ಗಂಡ ಮನೆಯಲ್ಲೇ ಇದ್ದರೂ ಅಲ್ಲಿ ಆತನಿಗೊಂದು ಬರ್ತ್‍ಡೇ ವಿಶ್ ಮಾಡಬೇಕು. ಕೊನೆಗೆ ಇಂದು ತಾವು ಹುಟ್ಟಿದ, ಮದುವೆಯಾದ ದಿನ, ಎಲ್ಲರೂ ಯಥಾಸಾಧ್ಯ ಶುಭಾಶಯ ಕೋರಬಹುದು ಎಂದು ದಯನೀಯವಾಗಿ ಕೇಳಿಕೊಳ್ಳುವುದೂ ಉಂಟು. ಸೋಶಿಯಲ್ ಮೀಡಿಯಾ ನಮ್ಮನ್ನು ಅಂತಹದೊಂದು ಪರಿಸ್ಥಿತಿಗೆ ತಂದು ನಿಲ್ಲಿಸಿದೆ.

ಏಕಾಂತದ ಸುಖ

ಬದುಕಿನ ಸುಖದುಃಖದ ಕ್ಷಣಗಳನ್ನು ಯಾರೊಂದಿಗೂ ಹಂಚಬಾರದೆಂಬುದು ಇದರ ಅರ್ಥವಲ್ಲ. ಹೇಳಿಕೊಳ್ಳುವ ಬೇಕಾದಷ್ಟು ವಿಚಾರಗಳು ಇರುತ್ತವೆ. ಸಂತೋಷವನ್ನು ಹಂಚಿಕೊಂಡಾಗ ಹೆಚ್ಚಾಗುತ್ತದಂತೆ, ದುಃಖವನ್ನು ಹಂಚಿದಾಗ ಕಡಿಮೆಯಾಗುತ್ತದಂತೆ. ಆದರೆ ಯಾವುದನ್ನು ಎಲ್ಲಿ ಹೇಗೆ ಯಾವಾಗ ಹಂಚಿಕೊಳ್ಳಬೇಕು ಎಂಬ ಪ್ರಜ್ಞೆ ಮುಖ್ಯ ಅಷ್ಟೇ. ಎಲ್ಲ ನೆನಪುಗಳಿರುವುದೂ ಹಂಚಿಕೊಳ್ಳುವುದಕ್ಕಲ್ಲ, ಎಲ್ಲ ಕ್ಷಣಗಳಿರುವುದೂ ಜಾತ್ರೆಯ ಮಧ್ಯೆ ಕಳೆಯುವುದಕ್ಕಲ್ಲ. ಒಳಗೆ ಕಾಪಿಟ್ಟುಕೊಳ್ಳಬೇಕಾದ ನೆನಪುಗಳೂ, ಏಕಾಂತದಲ್ಲಿ ಅನುಭವಿಸಬೇಕಾದ ಕ್ಷಣಗಳೂ ಇರುತ್ತವೆ.

ಇದನ್ನು ಖಾಸಗಿ-ಸಾರ್ವಜನಿಕ ಎಂದಾದರೂ ಕರೆಯೋಣ, ಅಂತರಂಗ-ಬಹಿರಂಗ ಎಂದಾದರೂ ಕರೆಯೋಣ. ಅಂತೂ ಈ ಎರಡು ಜಗತ್ತುಗಳು ಇವೆಯೆಂಬುದು ನಿಜ. ಸಾಮಾಜಿಕ ಮಾಧ್ಯಮಗಳು ಈ ಎರಡು ಜಗತ್ತುಗಳ ನಡುವಿನ ಗೋಡೆಯನ್ನು ತೆಳ್ಳಗಾಗಿಸುತ್ತಲೇ ಹೋಗಿವೆ. ಎಷ್ಟು ತೆಳ್ಳಗೆ ಎಂದರೆ ಸಂಪೂರ್ಣ ಪಾರದರ್ಶಕ ಅನಿಸುವಷ್ಟು, ಅಥವಾ ಇಲ್ಲವೇ ಇಲ್ಲ ಅನಿಸುವಷ್ಟು. ಈಗ ಖಾಸಗಿಯೆಂಬುದೇ ಇಲ್ಲ. ಎಲ್ಲವೂ ಸಾರ್ವಜನಿಕ. 

ನೆಂಟರಿಷ್ಟರು ಬಂದಾಗ ಎಲ್ಲರೂ ಜತೆಯಾಗಿ ಕುಳಿತು ಮದುವೆ-ಮುಂಜಿ-ಗೃಹಪ್ರವೇಶಗಳ ಆಲ್ಬಂಗಳನ್ನು ಗಂಟೆಗಟ್ಟಲೆ ನೋಡುವ, ಸುಂದರ ಕ್ಷಣಗಳನ್ನು ಮೆಲುಕು ಹಾಕುವ ಕಾಲವೊಂದಿತ್ತು. ಈಗ ನೆಂಟರಿಷ್ಟರು ಕಲೆಯುವುದೇ ಕಮ್ಮಿ, ಕಲೆತರೂ ಇಂತಹ ದೃಶ್ಯಗಳನ್ನು ಕಾಣುವುದು ಅಪರೂಪ. ನೋಡುವುದಕ್ಕೆ ನೆನಪುಗಳ ಆಲ್ಬಂಗಳಾದರೂ ಬೇಕಲ್ಲ? ಎಲ್ಲವೂ ಆಯಾಯಾ ಕ್ಷಣದ ಸೆಲ್ಫಿಗಳಾಗಿ ಅಲ್ಲಲ್ಲೇ ಸೆರೆಯಾಗುತ್ತವೆ, ಅಲ್ಲಲ್ಲೇ ಮರೆಯಾಗುತ್ತವೆ. ಸ್ಟೇಟಸ್‍ಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಳ್ಳುತ್ತವೆ. ಒಂದೆರಡು ದಿನಗಳಲ್ಲಿ ಅಲ್ಲೇ ಕೆಳಗೆ ಸರಿದುಹೋಗುತ್ತವೆ. ಈ ಸೆಲ್ಫಿಗಳಿಗೆ ಆಯುಷ್ಯ ಕಮ್ಮಿ. ಅವು ಆ ಕ್ಷಣದ ತುಡಿತಗಳಷ್ಟೇ. ಅವನ್ನೆಲ್ಲ ಒಂದು ಕಡೆ ಪೋಣಿಸಿಟ್ಟುಕೊಳ್ಳುವ ವ್ಯವಧಾನ, ಸಮಯ, ಸ್ಥಳ ಯಾರಿಗೂ ಇರುವುದಿಲ್ಲ. ನಿಶ್ಚಿತಾರ್ಥದಿಂದ ತೊಡಗಿ ಪ್ರೀವೆಡ್ಡಿಂಗ್, ಪೋಸ್ಟ್‍ವೆಡ್ಡಿಂಗ್... ಎಲ್ಲವೂ ನೂರಾರು ಬಿಂಬಗಳಾಗಿ ಪರಿವರ್ತನೆಯಾಗುತ್ತವೆ.  ಸೋಶಿಯಲ್ ಮೀಡಿಯಾದ ನ್ಯೂಸ್‍ಫೀಡ್‍ಗಳಲ್ಲಿ ಮಿಂಚಿ ಮರೆಯಾಗುತ್ತವೆ. ಅವೆಲ್ಲ ಮಧುರಕ್ಷಣಗಳಾಗಿ ಮನಸ್ಸಿನ ಮೂಲೆಯಲ್ಲಿ ಉಳಿದುಕೊಳ್ಳುವ ಸಾಧ್ಯತೆ ಅಷ್ಟರಲ್ಲೇ ಇದೆ.

ಸೋಶಿಯಲ್ ಮೀಡಿಯಾಗಳೋ ಮನುಷ್ಯನ ಬುದ್ಧಿಯನ್ನು ಕಬಳಿಸಿಕೊಂಡು ತಮ್ಮದೇ ಒಂದು ಕೃತಕ ಬುದ್ಧಿಮತ್ತೆ ಬೆಳೆಸಿಕೊಂಡಿವೆ. ನಮಗೆ ನೆನಪಾಗದಿದ್ದರೂ, ಯೂ ಹ್ಯಾವ್ ಮೆಮೊರೀಸ್ ಟು ಶೋ... ಎಂದು ನೆನಪಿಸುತ್ತವೆ. ಮರುಕ್ಷಣದಲ್ಲಿ ‘ಇಲ್ಲಿ ಏನಾದರೂ ಬರೆಯಿರಿ’ ಎನ್ನುತ್ತವೆ. ನಾವು ಏನಾದರೂ ಬರೆಯುತ್ತೇವೆ. ಆಮೇಲೆ ಮರೆಯುತ್ತೇವೆ. 

ಪ್ರಕಟಣೆಯೆಂಬುದು ಖಾಸಗಿತನದ ಮೇಲೆ ಮಾಡಿಕೊಳ್ಳುವ ಸ್ವ-ಆಕ್ರಮಣ ಎನ್ನುತ್ತಾರೆ ಮಾರ್ಷಲ್ ಮೆಕ್‍ಲುಹಾನ್. ಪ್ರಕಟಿಸಿಕೊಂಡಷ್ಟೂ ನಮ್ಮ ಮೇಲೆಯೇ ನಾವು ಮಾಡಿಕೊಳ್ಳುವ ಆಕ್ರಮಣದ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತದೆ. ಅಲ್ಲಿಗೆ ಖಾಸಗಿ ಎಂಬುದು ಯಾವುದೂ ಉಳಿಯುವುದಿಲ್ಲ. ಕೆಲವನ್ನು ಹೇಳಿಕೊಳ್ಳದಿದ್ದಾಗಲೇ ಬೆಲೆ. ಏಕಾಂತದಲ್ಲಿ ಧ್ಯಾನಿಸುವುದಕ್ಕಾದರೂ ಕೆಲವು ನೆನಪುಗಳು ಬೇಕು. ತೆರೆದಿಟ್ಟ ಮಲ್ಲಿಗೆ, ಮುಚ್ಚಳವಿಲ್ಲದ ಸೆಂಟು ಎಷ್ಟು ಹೊತ್ತು ಸುವಾಸನೆ ಬೀರಬಲ್ಲುದು? ನಾವು ಮಲ್ಲಿಗೆಯೇನು, ಇಡೀ ಉದ್ಯಾನವನ್ನೇ ಸೋಶಿಯಲ್ ಮೀಡಿಯಾದಲ್ಲಿ ಬೆಳೆಯುತ್ತೇವೆ. ಯಾವುದನ್ನು ಮುಚ್ಚಿಡಬೇಕು, ಯಾವುದನ್ನು ಬಿಚ್ಚಿಡಬೇಕು ಎಂಬ ವಿವೇಕವನ್ನೇ ಅದು ನುಂಗಿಹಾಕಿದೆ. ಕಥೆಯಾಗಬಹುದಾದ ಘಟನೆಗಳು, ಕವಿತೆಯಾಗಬಹುದಾದ ನೆನಪುಗಳು ಸಾಮಾಜಿಕ ತಾಣಗಳ ಒಂದೆರಡು ಸಾಲುಗಳಾಗಿ ಮಲಗಿಬಿಡುತ್ತವೆ. ಉದ್ದುದ್ದ ಕತೆ-ಕವಿತೆ-ಬರಹಗಳನ್ನು ಓದುವಷ್ಟು ಸಮಯ, ತಾಳ್ಮೆ ಅಲ್ಲಿನ ಗ್ರಾಹಕರಿಗೂ ಇಲ್ಲ ಬಿಡಿ. ಈಗ ಏನಿದ್ದರೂ ಹೊಚ್ಚ ಹೊಸ ನಿಯಮ: ಕತೆಯಾಗಲೀ ಕವಿತೆಯಾಗಲೀ ಸಾಲು ಒಂದೇ ಇರಲಿ.

ಎಲ್ಲರಿಗೂ ಬೇಕಾದ ಮಾಧ್ಯಮ

ಇಂಟರ್ನೆಟ್ ಇಂದು ಎಲ್ಲರಿಗೂ ಬೇಕಾದ ಮಾಧ್ಯಮ. ಅಶನ-ವಸನ-ವಸತಿಯಷ್ಟೇ ಅನಿವಾರ್ಯ. ಯುವಜನರಿಗಂತೂ ಸೋಶಿಯಲ್ ಮೀಡಿಯಾದ ಬಳಕೆ ಉಸಿರಾಟದಷ್ಟೇ ಸಹಜ. ಜೀವನದ ಪ್ರತಿಕ್ಷಣವನ್ನೂ ಅದು ಆವರಿಸಿಕೊಂಡಿದೆ.  ಇಡೀ ದೇಶದ ಒಟ್ಟಾರೆ ಜನಸಂಖ್ಯೆಯ ಶೇ. 45ರಷ್ಟು ಭಾಗ ಇಂದು ಇಂಟರ್ನೆಟ್ಟನ್ನು ಬಳಸುತ್ತಿದೆ. 52 ಕೋಟಿ ಜನ ಸೋಶಿಯಲ್ ಮೀಡಿಯಾವನ್ನು ಬಳಸುತ್ತಿದ್ದಾರೆ. ಹದಿಹರೆಯದವರ ಪೈಕಿ ಶೇ. 90ಕ್ಕಿಂತಲೂ ಹೆಚ್ಚು ಮಂದಿ ಒಂದಲ್ಲ ಒಂದು ರೀತಿ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಲೇ ಇರುತ್ತಾರೆ.

ಇದರರ್ಥ ಸಾಮಾಜಿಕ ಮಾಧ್ಯಮಗಳನ್ನು ಕೇವಲ ಋಣಾತ್ಮಕವಾಗಿ ನೋಡಬೇಕೆಂದೇನೂ ಅಲ್ಲ. 21ನೇ ಶತಮಾನದಲ್ಲಿ ಅವುಗಳ ಪ್ರಯೋಜನವನ್ನು ಕಡೆಗಣಿಸಲಾಗದು. ಸಾಮಾಜಿಕ ಸಂಪರ್ಕ, ಸ್ನೇಹಿತರ ಒಡನಾಟ, ವಿಚಾರ ವಿನಿಮಯ, ಜ್ಞಾನಸಂಗ್ರಹ, ಅವಕಾಶಗಳ ಅನ್ವೇಷಣೆ, ಮನರಂಜನೆ, ಪ್ರತಿಭೆಗಳಿಗೆ ವೇದಿಕೆ... ಇವುಗಳಿಗೆಲ್ಲ ಸೋಶಿಯಲ್ ಮೀಡಿಯಾ ವರದಾನವೇ. ಕೋವಿಡ್ ಕಾಲದಲ್ಲಂತೂ ಸಮಾಜಕ್ಕೆ ಇಂಟರ್ನೆಟ್ ಹೊಸ ಆಯಾಮವನ್ನೇ ಕಲ್ಪಿಸಿತು. ಜನ ನೂರೆಂಟು ವಿಧದಲ್ಲಿ ಅದರ ಉಪಯೋಗ ಪಡೆದರು, ಹೊಸ ಬದುಕು ಕಟ್ಟಿಕೊಂಡರು. ಶಿಕ್ಷಣ ಕ್ಷೇತ್ರಕ್ಕಂತೂ ಅದು ವರದಾನವಾಯಿತು. ವಿದ್ಯಾಭ್ಯಾಸದ ಕತೆ ಇನ್ನೇನು ಮುಗಿಯಿತು ಎಂದುಕೊಳ್ಳುವಾಗ ಇಂಟರ್ನೆಟ್ ಹೊಸ ದಾರಿಗಳನ್ನು ತೋರಿಸಿತು.

ಆದರೆ ತಂತ್ರಜ್ಞಾನಗಳನ್ನು ಬಳಸುತ್ತಲೇ ಮನುಷ್ಯನೂ ಯಂತ್ರವಾಗುವ ಪರಿ ಮಾತ್ರ ಅಸಹನೀಯ. ಯಾವುದನ್ನು, ಎಲ್ಲಿ, ಯಾವಾಗ, ಎಷ್ಟು, ಹೇಗೆ ಬಳಸಬೇಕೆಂಬ ಪರಿಜ್ಞಾನ ಇಲ್ಲದಾಗ ಮನುಷ್ಯ ಕೇವಲ ಅನಿಸುತ್ತಾನೆ. ಸೋಶಿಯಲ್ ಮೀಡಿಯಾ ತೆರೆದ ಬಯಲು. ಅಲ್ಲಿ ಅಡಗುವುದಕ್ಕಾಗದು. ಅದು ಎಲ್ಲರನ್ನೂ ನಿರಂತರ ಬೆತ್ತಲುಗೊಳಿಸುತ್ತಲೇ ಇರುತ್ತದೆ. ಅಲ್ಲಿ ಎದುರಾಗುವವರು ಎಲ್ಲರೂ ವಿಷಯ ಪರಿಣತರೇ. ಶಿಕ್ಷಣದಿಂದ ತೊಡಗಿ ರಾಜಕೀಯದವರೆಗೆ, ಸಾಹಿತ್ಯದಿಂದ ತೊಡಗಿ ರಕ್ಷಣಾ ಕ್ಷೇತ್ರದವರೆಗೆ ಯಾರೂ ಏನನ್ನೂ ಮಾತಾಡಬಲ್ಲರು. ತಮ್ಮನ್ನು ಹೊರತುಪಡಿಸಿ ಬೇರೆಯವರಿಗೆಲ್ಲ ಸಲಹೆ ನೀಡಬಲ್ಲರು, ಬುದ್ಧಿವಾದ ಹೇಳಬಲ್ಲರು. ಕೀಳರಿಮೆಯನ್ನು ಅಹಂ ಆಗಿ ಮೆರೆಸುವವರು, ಕೀರ್ತಿಶನಿಯನ್ನು ಹೆಗಲೇರಿಸಿಕೊಂಡವರು, ಮುಠ್ಠಾಳತನಕ್ಕೆ ಬುದ್ಧಿವಂತಿಕೆಯ ಅಂಗಿ ತೊಡಿಸಿದವರು, ಪಂಥ-ಸಿದ್ಧಾಂತಗಳೆಂದು ಹಗಲು ರಾತ್ರಿಗಳನ್ನು ಸವೆಸುವವರು... ಅಲ್ಲಿ ವೈವಿಧ್ಯಮಯ ವ್ಯಕ್ತಿತ್ವಗಳು ಸದಾ ಎದುರಾಗುತ್ತಲೇ ಇರುತ್ತವೆ. ಅದು ಪ್ರಬಲರಷ್ಟೇ ಉಳಿದುಕೊಳ್ಳುವ ಮಾರುಕಟ್ಟೆ. ಗಟ್ಟಿ ಗಂಟಲಿನವನಿಗೆ ಮಾತ್ರ ಉಳಿಗಾಲ. ಮಾತನಾಡದವನು ಬದುಕಿಲ್ಲವೆಂದು ಅರ್ಥ. ಅಲ್ಲಿ ಒಂದು ಕವಿತೆ ಬರೆದವನು ಕವಿಯಾಗುತ್ತಾನೆ. ಎರಡು ಕತೆ ಬರೆದವನು ಕತೆಗಾರನಾಗುತ್ತಾನೆ. ಮೂರು ಲೇಖನ ಬರೆದವನು ಸಾಹಿತಿಯಾಗುತ್ತಾನೆ. ಅಷ್ಟರಲ್ಲಿ ನಾಲ್ಕು ಪ್ರಶಸ್ತಿಗಳೂ ಸಂದಿರುತ್ತವೆ. ಅಲ್ಲಿಗೆ ಆತನೆದುರು ಖ್ಯಾತ, ಪ್ರಸಿದ್ಧ, ಇತ್ಯಾದಿ ಐದಾರು ವಿಶೇಷಣಗಳು, ಬಿರುದು ಬಾವಲಿಗಳು ಸೇರಿಕೊಳ್ಳುತ್ತವೆ.

ಸೋಶಿಯಲ್ ಮೀಡಿಯಾವೊಂದು ಮಾಯಾಬಜಾರು. ಚೂರು ತಪ್ಪಿದರೂ ಶ್ರೀಕೃಷ್ಣಗಾರುಡಿಯಂತಹ ಗೊಂಡಾರಣ್ಯದಲ್ಲಿ ಸಿಲುಕಿ ಇನ್ನಿಲ್ಲದ ಪಾಡುಪಡಬೇಕಾಗುತ್ತದೆ. ಐವತ್ತು ದೂರವಾಣಿ ಸಂಖ್ಯೆಗಳೇನು, ನಮ್ಮ ಹೆಸರು-ವಿಳಾಸವೇ ಮರೆತು ಹೋದೀತು. ಅಂತಹದೊಂದು ದುರಂತ ನಡೆಯದೇ ಇರಲಿ.

- ಸಿಬಂತಿ ಪದ್ಮನಾಭ ಕೆ. ವಿ.

ಶನಿವಾರ, ಅಕ್ಟೋಬರ್ 16, 2021

ಶ್ರೇಷ್ಠ ಶಿಕ್ಷಕ ಯಾರು?

'ವಿದ್ಯಾರ್ಥಿಪಥ' ಸೆಪ್ಟೆಂಬರ್ 2021ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ವಿದ್ಯಾರ್ಥಿಗಳಿಗೆ ಅಧ್ಯಾಪಕನಿಗಿಂತ ದೊಡ್ಡ ಪಠ್ಯಪುಸ್ತಕವಿಲ್ಲ. ಅವನ ತಿಳುವಳಿಕೆ, ವರ್ತನೆ, ಮನೋಭಾವ, ಸದ್ಗುಣಗಳೇ ವಿದ್ಯಾರ್ಥಿಗಳಿಗೆ ಪಾಠಗಳು. ಆತನ ಒಂದೊಂದು ನಡೆಯನ್ನೂ ವಿದ್ಯಾರ್ಥಿಗಳು ಪ್ರತೀಕ್ಷಣವೂ ಗಮನಿಸುತ್ತಿರುತ್ತಾರೆ, ಅನುಸರಿಸುತ್ತಿರುತ್ತಾರೆ. ಶಿಕ್ಷಕರು ಕೇವಲ ಪಾಠವನ್ನಷ್ಟೇ ಮಾಡುವುದಿಲ್ಲ, ಏಕಕಾಲದಲ್ಲಿ ನೂರಾರು ಮನಸ್ಸುಗಳನ್ನು ಪ್ರಭಾವಿಸುತ್ತಲೂ ಇರುತ್ತಾರೆ. ಅವರು ಎಚ್ಚರ ತಪ್ಪಿದರೆ ಇಡೀ ತಲೆಮಾರೊಂದನ್ನು ದಾರಿತಪ್ಪಿಸಿದ ಪಾತಕ ಎಸಗಿದಂತೆ.

ಹೊಟ್ಟೆಪಾಡಿಗಾಗಿ ಎಲ್ಲರಿಗೂ ಒಂದೊಂದು ವೃತ್ತಿ ಅಗತ್ಯ; ಆದರೆ ಅಧ್ಯಾಪಕನದ್ದು ಕೇವಲ ಹೊಟ್ಟೆಪಾಡಿನ ವೃತ್ತಿ ಅಲ್ಲ. ನಾಳೆಯ ಸಮಾಜವನ್ನು ರೂಪಿಸುವ ವೃತ್ತಿ. ‘ನಾನು ಶಿಕ್ಷಕನಲ್ಲ, ಎಚ್ಚರಗೊಳಿಸುವವನು’ ಎಂದ ರಾಬರ್ಟ್ ಫ್ರಾಸ್ಟ್. ಅಂತಹದೊಂದು ಪ್ರಜ್ಞೆ ಎಲ್ಲ ಅಧ್ಯಾಪಕರಲ್ಲೂ ಇರಬೇಕು. ನಿಮ್ಮ ವಿದ್ಯಾಭ್ಯಾಸದ ದಿನಗಳನ್ನು ನೆನಪಿಸಿಕೊಳ್ಳಿ ಎಂದು ನಿಮ್ಮನ್ನು ಯಾರಾದರೂ ಕೇಳಿದರೆ ನಿಮಗೆ ಮೊದಲು ನೆನಪಾಗುವುದು ನಿಮ್ಮ ಅಧ್ಯಾಪಕರೇ ಹೊರತು, ಪೀಠೋಪಕರಣಗಳೂ ಅಲ್ಲ, ಪಾಠೋಪಕರಣಗಳೂ ಅಲ್ಲ. ಬದುಕಿನಲ್ಲಿ ಅಧ್ಯಾಪಕನಿಗಿರುವ ಸ್ಥಾನ ಅಷ್ಟು ದೊಡ್ಡದು. ಅವನದ್ದು ವೃತ್ತಿ, ಪ್ರವೃತ್ತಿ ಮತ್ತು ಸಂಸ್ಕೃತಿ. ಆತ ನಿವೃತ್ತನಾಗುವುದೇ ಇಲ್ಲ. ಹಾಗಾದರೆ ಒಬ್ಬ ಶ್ರೇಷ್ಠ ಶಿಕ್ಷಕನ ಲಕ್ಷಣಗಳೇನು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಈ ಲೇಖನದ ಉದ್ದೇಶ.

ಪರಿಣಾಮಕಾರಿ ಸಂವಹನ:

ಅತ್ಯುತ್ತಮ ಅಧ್ಯಾಪಕ ಶ್ರೇಷ್ಠ ಸಂವಹನಕಾರನೂ ಆಗಿರುತ್ತಾನೆ. ತಾನು ತಿಳಿದುಕೊಂಡಿದ್ದರೆ ಸಾಲದು, ಅದನ್ನು ಅಷ್ಟೇ ಸಮರ್ಥವಾಗಿ ಆತ ವಿದ್ಯಾರ್ಥಿಗಳಿಗೆ ತಲುಪಿಸಬೇಕಾಗುತ್ತದೆ. ಭಾಷೆಯೇ ಅವನ ಮೂಲ ಬಂಡವಾಳ. ಭಾಷೆಯ ಮೇಲೆ ಒಳ್ಳೆಯ ಹಿಡಿತವಿರುವ ಅಧ್ಯಾಪಕ ಬಲುಬೇಗನೆ ವಿದ್ಯಾರ್ಥಿಗಳಿಗೆ ಹತ್ತಿರವಾಗುತ್ತಾನೆ. ತನ್ನ ಮನಸ್ಸಿನಲ್ಲಿರುವುದನ್ನು ಆತ ಸುಲಭವಾಗಿ ಬರೆವಣಿಗೆ ಮತ್ತು ಮಾತಿನ ಮೂಲಕ ವಿದ್ಯಾರ್ಥಿಗಳ ಮನಸ್ಸಿಗೆ ದಾಟಿಸಬಲ್ಲ. ಅವನ ತರಗತಿ ವಿದ್ಯಾರ್ಥಿಗಳ ಗಮನ ಸೆಳೆಯುವಂತೆಯೂ ನಿರಾಸಕ್ತಿ ಹುಟ್ಟಿಸದಂತೆಯೂ ಇರುತ್ತದೆ. ಭಾಷೆಯಷ್ಟೇ ಭಾವದ ಅಭಿವ್ಯಕ್ತಿ, ಮಾತಿನ ಏರಿಳಿತ, ಉತ್ತಮ ಕಂಠ, ಪೂರಕ ದೇಹಭಾಷೆ, ದೃಷ್ಟಿಸಂಪರ್ಕ – ಎಲ್ಲವೂ ಮುಖ್ಯವಾಗುತ್ತದೆ. ಅಧ್ಯಾಪಕ ಹೇಳುವುದರಲ್ಲಿ ವಿದ್ಯಾರ್ಥಿಗೆ ವಿಶ್ವಾಸ ಮೂಡುವುದು ಮುಖ್ಯ.

ಉತ್ತಮ ಅಧ್ಯಾಪನವೆಂದರೆ ಕಾಲು ಭಾಗ ಸಿದ್ಧತೆ, ಮುಕ್ಕಾಲು ಪಾಲು ಪ್ರದರ್ಶನ ಎಂಬ ಮಾತಿದೆ. ಇದರರ್ಥ ಕಡಿಮೆ ತಯಾರಿ, ಹೆಚ್ಚು ತೋರಿಕೆ ಎಂದಲ್ಲ; ನಡೆಸಿದ ತಯಾರಿಯನ್ನು ವಿದ್ಯಾರ್ಥಿಗಳಿಗೆ ದಾಟಿಸುವುದಕ್ಕೆ ಯಾವ ಬಗೆಯ ನಿರ್ವಹಣೆ ಬೇಕು ಎಂದು. ಅನೇಕ ಸಲ ಸಾಕಷ್ಟು ಜ್ಞಾನವಂತ ಅಧ್ಯಾಪಕನೂ ವಿದ್ಯಾರ್ಥಿಗಳಿಗೆ ಹತ್ತಿರವಾಗುವಲ್ಲಿ ಸೋಲುತ್ತಾನೆ; ಆತನ ಸಂವಹನದಲ್ಲಿರುವ ತೊಡಕೇ ಇದಕ್ಕೆ ಮುಖ್ಯ ಕಾರಣ. ಏನು ಕೊಡುತ್ತೇವೆ ಎಂಬಷ್ಟೇ ಹೇಗೆ ಕೊಡುತ್ತೇವೆ ಎಂಬುದೂ ಮುಖ್ಯ. 

ಕೇಳ್ಮೆ:

ಉತ್ತಮ ಅಧ್ಯಾಪಕನಿಗೆ ಹೇಳುವಷ್ಟೇ ಆಸಕ್ತಿ ಕೇಳುವುದರಲ್ಲಿಯೂ ಇರಬೇಕು. ಉತ್ತಮ ಸಂವಹನಕಾರ ಉತ್ತಮ ಕೇಳುಗನೂ ಆಗಿರುತ್ತಾನೆ. ಗಂಟೆಗಟ್ಟಲೆ ತಾನೇ ಬಡಬಡಿಸುವವನು, ವಿದ್ಯಾರ್ಥಿಗಳ ಅಭಿಪ್ರಾಯಕ್ಕೆ ಕಿವಿಗೊಡದಿರುವವನು ಅವರಿಗೆ ಪ್ರಿಯನಾಗಲಾರ. ವಿದ್ಯಾರ್ಥಿಗಳ ಅಭಿಪ್ರಾಯಕ್ಕೆ ಕಿವಿಯಾಗುವವನು, ಅವರ ವ್ಯಕ್ತಿತ್ವ ವಿಕಸನಕ್ಕೂ ಕಾರಣನಾಗುತ್ತಾನೆ. ನಿಮಗೇನು ಗೊತ್ತಿದೆ, ನೀವು ಹೇಳುವುದೆಲ್ಲವೂ ನನಗೆ ಗೊತ್ತಿರುವಂಥದ್ದೇ ಎಂಬ ಮನೋಭಾವವಿರುವ ಶಿಕ್ಷಕ ತಾನೂ ಬೆಳೆಯುವುದಿಲ್ಲ, ಇತರರನ್ನೂ ಬೆಳೆಯಗೊಡುವುದಿಲ್ಲ.

ತಾಳ್ಮೆ:

ತಾಳ್ಮೆಯೇ ಶಿಕ್ಷಕವೃತ್ತಿಯ ಮೂಲಮಂತ್ರ. ತಾಳಿದವನು ಅಧ್ಯಾಪಕನಾಗಿ ಬಾಳಿಯಾನು. ದುಡುಕು ಪ್ರವೃತ್ತಿಯವರಿಗೆ ಅಧ್ಯಾಪನ ಸಲ್ಲುವಂಥದ್ದಲ್ಲ. ಅದರಲ್ಲೂ ಪ್ರಾಥಮಿಕ ಶಾಲಾ ಹಂತದಲ್ಲಿರುವವರಂತೂ ಸಹನೆಯಲ್ಲೇ ಅದ್ದಿತೆಗೆದವರಾಗಿರಬೇಕು. ಆ ವಯಸ್ಸಿನ ಮಕ್ಕಳೇ ಹಾಗೆ; ಅವರನ್ನು ತರಗತಿಯಲ್ಲಿ ಕೂರಿಸುವುದೆಂದರೆ ಕಪ್ಪೆಗಳನ್ನು ಒಂದು ಕಡೆ ಹಿಡಿದಿಟ್ಟ ಹಾಗೆಯೇ. ಒಬ್ಬೊಬ್ಬರದು ಒಂದೊಂದು ದೂರು, ಒಂದೊಂದು ವರ್ತನೆ. ಎಲ್ಲವನ್ನೂ ಎಲ್ಲರನ್ನೂ ಕೇಳಿಸಿಕೊಂಡು ಹೇಳಬೇಕಾದ್ದನ್ನು ಹೇಳಿಮುಗಿಸುವುದೊಂದು ಸಾಹಸವೇ. ತಾಳ್ಮೆಯಿಲ್ಲದ ಅಧ್ಯಾಪಕ ಇಂತಹ ಮಕ್ಕಳು ಮುಂದೆಂದೂ ಮಾತಾಡದಂತೆ, ಅಂಜಿಕೆಯ ಚಿಪ್ಪಿನಿಂದ ಹೊರಬರದಂತೆ ಮಾಡಿಯಾನು; ಆ ಮೂಲಕ ಅವರ ಭವಿಷ್ಯವನ್ನೇ ಹಾಳುಮಾಡಿಯಾನು.  

ಶಿಕ್ಷಣದ ಎಲ್ಲ ಹಂತಗಳಲ್ಲಿರುವವರಿಗೂ ಈ ತಾಳ್ಮೆ ಕಡ್ಡಾಯ. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುವ, ಗೊಂದಲಗಳನ್ನು ಪರಿಹರಿಸುವ, ಅವರ ಅಭಿಪ್ರಾಯಗಳನ್ನು ಮನ್ನಿಸುವ, ದಂಡಿಸುವುದಕ್ಕೆ ಮೊದಲು ಯೋಚಿಸುವ ಅಧ್ಯಾಪಕ ವೃತ್ತಿಯಲ್ಲಿ ಮಾದರಿಯಾಗುತ್ತಾನೆ. 

ಹೊಂದಾಣಿಕೆ:

ವಿದ್ಯಾರ್ಥಿಗಳು, ಅವರ ಪೋಷಕರು, ಅಧಿಕಾರಿ ವರ್ಗ, ಆಡಳಿತ ವರ್ಗ, ಸಹೋದ್ಯೋಗಿಗಳು, ಸುತ್ತಲಿನ ಸಮಾಜ- ಎಲ್ಲರೊಂದಿಗೂ ಹೊಂದಿಕೊಂಡು ಹೋಗುವುದು ಅಧ್ಯಾಪಕನಿಗೆ ಅನಿವಾರ್ಯ. ಹೊಂದಾಣಿಕೆ ಎಂದರೆ ಅನ್ಯಾಯವಾದಾಗ ಪ್ರತಿಭಟಿಸದೆ ಇರುವುದು ಎಂದಲ್ಲ. ತಮಗೆ ತೊಂದರೆಯಾದಾಗ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಹೆಜ್ಜೆಹೆಜ್ಜೆಗೂ ಕೆಡುಕು-ತೊಡಕುಗಳನ್ನು ಹುಡುಕುವ ಅಧ್ಯಾಪಕ ಕೊನೆಗೆ ಎಲ್ಲಿಯೂ ಸಲ್ಲದವನಾಗುತ್ತಾನೆ.

ವಿಭಿನ್ನ ಮನಸ್ಥಿತಿಯ ಸಹೋದ್ಯೋಗಿಗಳು ಜತೆಗಿದ್ದಾಗ ಅಧ್ಯಾಪಕ ತನ್ನ ಮನಃಶಾಂತಿ ಉಳಿಸಿಕೊಳ್ಳಬೇಕಾದರೆ ಅನಿವಾರ್ಯವಾಗಿಯಾದರೂ ಕೆಲವು ವೈಯಕ್ತಿಕ ಆದ್ಯತೆಗಳನ್ನು ತತ್ಕಾಲಕ್ಕೆ ಮರೆಯಬೇಕಾಗುತ್ತದೆ. ಎಲ್ಲ ವೃತ್ತಿಗಳೂ ಈ ಬಗೆಯ ಹೊಂದಾಣಿಕೆಯನ್ನು ಬಯಸುವುದುಂಟು. ಈ ಹೊಂದಾಣಿಕೆಯ ಕಾಯಕದಲ್ಲಿ ಕೆಲವು ಸಣ್ಣಪುಟ್ಟ ಅನನುಕೂಲಗಳನ್ನು ಸಹಿಸಿಕೊಳ್ಳದೆ ಬೇರೆ ದಾರಿಯಿಲ್ಲ. 

ಸೃಜನಶೀಲತೆ:

ಸೃಜನಶೀಲ ಅಧ್ಯಾಪಕ ತನ್ನ ವಿದ್ಯಾರ್ಥಿಗಳ ಸುಪ್ತಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಮಾತ್ರವಲ್ಲ, ಸ್ವತಃ ತಾನೇ ಅವರಿಗೆ ಮಾದರಿಯಾಗಬಲ್ಲ. ಜಡಪ್ರವೃತ್ತಿಯ ಅಧ್ಯಾಪಕರು ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನೂ ಕೊಲ್ಲಬಲ್ಲರು.  ಅವರನ್ನು ಶಾಶ್ವತ ಅಂಗವಿಕಲರನ್ನಾಗಿ ಮಾಡಬಲ್ಲರು.

ಹೊಸದಾಗಿ ಯೋಚಿಸುವ, ಹೊಸ ಸಾಹಸಗಳಿಗೆ ಕೈಹಾಕುವ, ಹೊಸ ಸವಾಲುಗಳನ್ನು ಸ್ವೀಕರಿಸುವ ಮನೋಭಾವ ವಿದ್ಯಾರ್ಥಿಗಳಲ್ಲಿ ಅಧ್ಯಾಪಕನ ಮೂಲಕವೇ ಬೆಳೆಯಬೇಕು.

ಆತ್ಮವಿಶ್ವಾಸ:

ಶಿಕ್ಷಣ ಆತ್ಮವಿಶ್ವಾಸವನ್ನು ಹುಟ್ಟಿಸುತ್ತದೆ; ಆತ್ಮವಿಶ್ವಾಸ ಭರವಸೆಯನ್ನು ಮೂಡಿಸುತ್ತದೆ; ಭರವಸೆ ಶಾಂತಿಯನ್ನು ಸೃಜಿಸುತ್ತದೆ ಎಂಬ ಕನ್‍ಫ್ಯೂಶಿಯಸ್‍ನ ಮಾತಿದೆ. ಇಂತಹ ಆತ್ಮವಿಶ್ವಾಸ ಶಿಕ್ಷಣದಿಂದ ಮೂಡುವುದಾದರೆ, ಅದರ ಮೂಲ ಶಿಕ್ಷಕನೇ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಬೇಕಾದರೆ ಅದು ಮೊದಲು ಶಿಕ್ಷಕನಲ್ಲಿ ಕಾಣಿಸಿಕೊಳ್ಳಬೇಕು. ಆತ್ಮವಿಶ್ವಾಸ ಇರುವ ಅಧ್ಯಾಪಕ ಎಂತಹ ಕಠಿಣ ಸನ್ನಿವೇಶದಲ್ಲೂ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಭವಿಷ್ಯದ ಕುರಿತ ಭರವಸೆಯನ್ನು ಮೂಡಿಸಬಲ್ಲ.

ವಿನೋದಪ್ರಜ್ಞೆ:

ವಿನೋದಪ್ರಜ್ಞೆ ಬಹುಮಂದಿಗೆ ಇಷ್ಟವಾಗುವ ಗುಣ. ಮಾತಿನ ಮಧ್ಯೆ ಸಣ್ಣ ವಿನೋದ ಬೆರೆಸುವವರು ಬೇಗನೆ ಹತ್ತಿರವಾಗುತ್ತಾರೆ. ಅಧ್ಯಾಪಕನಲ್ಲಿ ವಿನೋದಪ್ರವೃತ್ತಿ ಇದ್ದರೆ ತರಗತಿ ಆಕರ್ಷಕವಾಗುತ್ತದೆ, ಕುತೂಹಲ ಉಳಿಸಿಕೊಳ್ಳುತ್ತದೆ. ಏಕತಾನತೆ ದೂರವಾಗುತ್ತದೆ. ಅಂತಹ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳೂ ಕಾಯುತ್ತಾರೆ. ವಿದ್ಯಾರ್ಥಿಗಳಿಗೆ ಕುತೂಹಲಹುಟ್ಟಿಸುವಂತಹ ತರಗತಿಗಳನ್ನು ಸಂಯೋಜಿಸುವುದು ಅಧ್ಯಾಪಕನ ಕರ್ತವ್ಯ ಕೂಡಾ.

ನಾಯಕತ್ವ:

ಉತ್ತಮ ಅಧ್ಯಾಪಕ ಉತ್ತಮ ನೇತಾರ ಕೂಡ. ಆತ ಮುಂದೆ ನಿಂತು ದಾರಿ ತೋರಿಸುವವನೂ, ಹಿಂದೆ ನಿಂತು ಬೆಂಬಲಿಸುವವನೂ ಆಗಿರಬೇಕು. ನಾಯಕನೆಂದ ಮೇಲೆ ಯಶಸ್ಸು ಮತ್ತು ಸೋಲುಗಳನ್ನು ಸಮಾನವಾಗಿ ಸ್ವೀಕರಿಸುವವನು ಎಂದು ಬೇರೆ ಹೇಳಬೇಕಾಗಿಲ್ಲ. ಯಶಸ್ಸಿಗೆಲ್ಲ ತಾನೇ ಕಾರಣನೆಂದೂ, ಸೋಲಿಗೆಲ್ಲ ಉಳಿದವರು ಕಾರಣರೆಂದೂ ಹೇಳುವವ ಎಂದೂ ನಾಯಕನ ಯೋಗ್ಯತೆ ಪಡೆಯಲಾರ. ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಅಧ್ಯಾಪಕ ಪಾಲು ಪಡೆಯುವವನಾದರೆ, ಅವರ ವೈಫಲ್ಯಗಳಲ್ಲೂ ಒಂದು ಪಾಲನ್ನು ಆತ ಹಂಚಿಕೊಳ್ಳಬೇಕು. ಹಾಗಾಗುವುದರಲ್ಲಿ ತನ್ನ ಪಾಲು ಏನಿದೆ ಎಂದು ಆತ ಯೋಚಿಸಿ, ಮುಂದೆ ಹಾಗಾಗದಂತೆ ಎಚ್ಚರಿಕೆ ವಹಿಸಬೇಕು.

ವಿದ್ಯಾರ್ಥಿಗಳಿಗೆ ಅಧ್ಯಾಪಕನೇ ಬಹುದೊಡ್ಡ ಮಾದರಿ. ಆತನೇ ಮಹಾನಾಯಕ. ಅವನ ವರ್ತನೆ, ಚಿಂತನೆಗಳನ್ನು ವಿದ್ಯಾರ್ಥಿಗಳು ಕ್ಷಣಕ್ಷಣವೂ ಗಮನಿಸುತ್ತಾರೆ. ಆತ ಮುಂಚೂಣಿಯಲ್ಲಿದ್ದು, ವಿದ್ಯಾರ್ಥಿಗಳು ಅನುಸರಿಸಬಹುದಾದ ಮಾದರಿಗಳನ್ನು ತೋರಿಸಬೇಕು. ಎಲ್ಲರನ್ನೂ ಒಂದೇ ತಂಡವಾಗಿ ಕರೆದುಕೊಂಡು ಹೋಗುವ ಚಾಕಚಕ್ಯತೆ ಇರಬೇಕು. ಬದುಕಿನಲ್ಲಿ ಸವಾಲುಗಳೆದುರಾದಾಗ ಎದೆಗುಂದದೆ ಸಮಾಧಾನ ಮತ್ತು ಜಾಣ್ಮೆಯಿಂದ ಅವುಗಳನ್ನು ಎದುರಿಸುವುದು ಹೇಗೆಂಬುದನ್ನು ಹೇಳಿಕೊಡಬೇಕು. ಪಾಠವಿರುವುದು ಪಠ್ಯಪುಸ್ತಕಗಳಲ್ಲಿ ಮಾತ್ರವಲ್ಲ.

ಬಹುಕಾರ್ಯ ಸಾಮರ್ಥ್ಯ:

ಶಿಕ್ಷಕ ಏಕಕಾಲಕ್ಕೆ ಅನೇಕ ಕೆಲಸಗಳನ್ನು ನಿಭಾಯಿಸುವ ಕ್ಷಮತೆ ಹೊಂದಿರಬೇಕು. ಶಿಕ್ಷಕನ ಕೆಲಸ ಬೋಧಿಸುವುದೇ ಆದರೂ ವಾಸ್ತವದಲ್ಲಿ ವಿವಿಧ ಜವಾಬ್ದಾರಿಗಳನ್ನು ಏಕಕಾಲಕ್ಕೆ ನಿರ್ವಹಿಸಬೇಕಾಗುತ್ತದೆ. ಅತಿಯಾದ ಪಾಠೇತರ ಹೊಣೆಗಾರಿಕೆಗಳನ್ನು ಹೊರಿಸಿದಾಗ ಅಧ್ಯಾಪಕನ ಕ್ರಿಯಾಶೀಲತೆಯೇ ಹೊರಟುಹೋಗುವ ಅಪಾಯವಿದೆಯಾದರೂ, ಆತನೇ ನಿರ್ವಹಿಸಬೇಕಾದ ಕೆಲವು ಕರ್ತವ್ಯಗಳನ್ನು ನಿಭಾಯಿಸುವುದು ಅನಿವಾರ್ಯ. ಇಂಥದ್ದೊಂದು ‘ಮಲ್ಟಿಟಾಸ್ಕಿಂಗ್’ ಕೌಶಲ ಆತನಲ್ಲಿರಬೇಕು.

ಸ್ನೇಹಪರತೆ:

ಅಧ್ಯಾಪಕ ವಿದ್ಯಾರ್ಥಿಗಳ ‘ಕ್ಲೋಸ್ ಫ್ರೆಂಡ್’ ಆಗಬೇಕೆಂದೇನೂ ಇಲ್ಲ; ಆದರೆ ಒಳ್ಳೆಯ ಸ್ನೇಹಿತನೋ, ಹಿರಿಯಣ್ಣನೋ, ಹಿರಿಯಕ್ಕನೋ ಆಗಬೇಕು. ಹೊಸ ಕಾಲದ ಮನಸ್ಸುಗಳು ತುಂಬ ಸೂಕ್ಷ್ಮ. ಅವರು ಅಧ್ಯಾಪಕರಲ್ಲಿ ಒಳ್ಳೆಯ ಮಾರ್ಗದರ್ಶಕರನ್ನು ಕಾಣಲು ಬಯಸುತ್ತಾರೆ. ತರಗತಿಯ ಒಳಗೆ ಸಿಕ್ಕಿದಷ್ಟೂ, ಹೊರಗೂ ಲಭ್ಯರಿರಬೇಕೆಂದು ಅಪೇಕ್ಷಿಸುತ್ತಾರೆ. ವೇಳಾಪಟ್ಟಿ ಪ್ರಕಾರ ಪಾಠ ಮಾಡಿದ್ದೇನೆ, ಅಲ್ಲಿಗೆ ತನ್ನ ಕೆಲಸ ಮುಗಿಯಿತು ಎಂದು ಭಾವಿಸುವ ಶಿಕ್ಷಕ/ ಶಿಕ್ಷಕಿ ದಂತಗೋಪುರದಲ್ಲೇ ಉಳಿದುಬಿಡುತ್ತಾರೆ.  

ಗುರು-ಶಿಷ್ಯರ ನಡುವೆ ಸಣ್ಣದೊಂದು ಅಂತರ ಇರಬೇಕು ನಿಜ. ಆದರೆ ಮೈಲುದ್ದದ ಅಂತರವಿಟ್ಟುಕೊಂಡು ಅಧ್ಯಾಪಕ ಸಾಧಿಸುವುದಾದರೂ ಏನು? ಇದರಿಂದ ಇಬ್ಬರೂ ಕಳೆದುಕೊಳ್ಳುವುದೇ ಹೆಚ್ಚು. ವಿದ್ಯಾರ್ಥಿಗಳು ತಮ್ಮ ಅಗತ್ಯಕ್ಕೆ ಅಧ್ಯಾಪಕನನ್ನು ಸಮೀಪಿಸುವ ಸ್ನೇಹಪರ ವ್ಯಕ್ತಿತ್ವ ಅವನದಾಗಬೇಕು. ಸಾಕಷ್ಟು ವಿದ್ಯಾರ್ಥಿಗಳಿಗೆ ಪಠ್ಯಕ್ಕೆ ಹೊರತಾದ ಅನೇಕ ಸಮಸ್ಯೆಗಳಿರುತ್ತವೆ. ಪೋಷಕರಲ್ಲಿ, ಸ್ನೇಹಿತರಲ್ಲಿ ಹೇಳಿಕೊಳ್ಳಲಾಗದ ಆತಂಕಗಳೂ ಇರುತ್ತವೆ. ವಿಶ್ವಸನೀಯ ಅಧ್ಯಾಪಕರು ಅಂತಹ ವಿದ್ಯಾರ್ಥಿಗೆ ಅಪದ್ಬಾಂಧವರಾಗಬಲ್ಲರು. ಉತ್ತಮ ಅಧ್ಯಾಪಕ ಉತ್ತಮ ಆಪ್ತಸಮಾಲೋಚಕನೂ ಆಗಬಲ್ಲ. ಈ ಅವಕಾಶ ದುರುಪಯೋಗವಾಗದಂತಹ ಸ್ವಸ್ಥಾನಪರಿಜ್ಞಾನವಂತೂ ಆತನಿಗಿರುವುದು ಮುಖ್ಯ.

ಬದ್ಧತೆ: 

ಕರ್ತವ್ಯದಲ್ಲಿ ಬದ್ಧತೆಯಿಲ್ಲದ ಅಧ್ಯಾಪಕ(ಕಿ) ತನ್ನ ವಿದ್ಯಾರ್ಥಿಗಳಿಗೆ ಏನನ್ನೂ ಕಲಿಸಲಾರ(ಳು). ವಿದ್ಯಾರ್ಥಿಗಳು ಹೇಳಿದ್ದನ್ನು ಕೇಳುವುದಿಲ್ಲ, ಮಾಡಿದ್ದನ್ನು ಮಾಡುತ್ತಾರೆ. ಖುದ್ದು ಬದ್ಧತೆಯಿಲ್ಲದ ಅಧ್ಯಾಪಕ ತನ್ನ ವಿದ್ಯಾರ್ಥಿಗಳಲ್ಲಿ ಬದ್ಧತೆ ಬೇಕು ಎಂದು ಪಾಠ ಮಾಡುವುದರಲ್ಲಿ ಯಾವ ಹುರುಳೂ ಇಲ್ಲ. 

ಸ್ವತಃ ಅಧ್ಯಯನಶೀಲನಲ್ಲದ ಅಧ್ಯಾಪಕ ತನ್ನ ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು ಎಂದು ಬೋಧಿಸುವುದರಲ್ಲಿ ಏನರ್ಥವಿದೆ? ಸ್ವತಃ ಸಮಯಪಾಲನೆಯ ಗುಣವಿಲ್ಲದ ಅಧ್ಯಾಪಕ ತನ್ನ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗಬೇಕು ಎಂದು ಬಯಸುವುದರಲ್ಲಿ ಏನರ್ಥವಿದೆ? ಸ್ವಯಂಶಿಸ್ತು ಇಲ್ಲದ ಅಧ್ಯಾಪಕ ತನ್ನ ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಾಗಬೇಕು ಎಂದು ಅಪೇಕ್ಷಿಸುವುದರಲ್ಲಿ ಏನರ್ಥವಿದೆ? ಸ್ವತಃ ನೈತಿಕ ಬದುಕನ್ನು ಹೊಂದಲಾಗದ ಅಧ್ಯಾಪಕ ತನ್ನ ವಿದ್ಯಾರ್ಥಿಗಳಿಗೆ ನೀತಿಬೋಧನೆ ಮಾಡುವುದರಲ್ಲಿ ಏನು ತಿರುಳಿದೆ? ಅಧ್ಯಾಪಕನಾದರೂ ಆ ವ್ಯಕ್ತಿಗೆ ತನ್ನದೇ ಆದ ಜೀವನವೊಂದಿಗೆ ಎಂಬುದೇನೋ ನಿಜ; ಆದರೆ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಪಾಠ ಮಾಡಿದ ಅಧ್ಯಾಪಕ ಶಾಲೆ/ ಕಾಲೇಜಿನ ಎದುರಿನ ಗೂಡಂಗಡಿಯಲ್ಲಿ ಸಿಗರೇಟು ಸೇದುತ್ತಾ ನಿಂತಿರುವುದನ್ನು ಕಂಡರೆ ವಿದ್ಯಾರ್ಥಿಗಳಿಗೆ ಏನನ್ನಿಸಬಹುದು?

ಸ್ವಯಂಮೌಲ್ಯಮಾಪನ:

ಯಾವ ವ್ಯಕ್ತಿಯೂ ಪರಿಪೂರ್ಣನಲ್ಲ, ಅಧ್ಯಾಪಕನೂ. ಅವನಲ್ಲಿ ವಿವಿಧ ಸದ್ಗುಣಗಳಿರಬೇಕು ಎಂದು ಅಪೇಕ್ಷಿಸುವುದೇನೋ ಸರಿ, ಆದರೆ ಎಲ್ಲವೂ ಎಲ್ಲರಲ್ಲೂ ಇರುವುದು ಕಷ್ಟ. ಏಕೆಂದರೆ ಎಲ್ಲರೂ ಮನುಷ್ಯರೇ. ಪ್ರತಿಯೊಬ್ಬರಲ್ಲೂ ಅವರದ್ದೇ ಆದ ಸಾಮಥ್ರ್ಯ ಮತ್ತು ಮಿತಿಗಳಿರುತ್ತವೆ. ಅವನ್ನು ಅರ್ಥಮಾಡಿಕೊಳ್ಳುವವನು ಯಶಸ್ವೀ ಎನಿಸಿಕೊಳ್ಳುತ್ತಾನೆ. ಅಧ್ಯಾಪಕರಲ್ಲಂತೂ ಈ ಸ್ವಯಂಮೌಲ್ಯಮಾಪನ ಅಥವಾ ಆತ್ಮನಿರೀಕ್ಷಣೆಯ ಕೆಲಸ ನಡೆಯಲೇಬೇಕು.

ಪ್ರತೀ ಸಂಸ್ಥೆಯಲ್ಲೂ ಕಡೇ ಪಕ್ಷ ವರ್ಷಕ್ಕೊಮ್ಮೆಯಾದರೂ ಸ್ವಯಂಮೌಲ್ಯಮಾಪನದ ವ್ಯವಸ್ಥೆಯಿರುತ್ತದೆ. ಇವೆಲ್ಲ ಯಾಂತ್ರಿಕ ಪ್ರಕ್ರಿಯೆಗಳು. ವಾಸ್ತವವಾಗಿ ಅವುಗಳಿಂದ ಯಾವ ಸಾಧನೆಯೂ ಆಗುವುದಿಲ್ಲ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆ ಮಾಡುವವರಿಗೆ ಪಿಎಚ್‍ಡಿ ಕಡ್ಡಾಯ ಮಾಡುವುದರಿಂದ, ವರ್ಷಕ್ಕೆ ಇಂತಿಷ್ಟು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿರಬೇಕು, ಪ್ರಬಂಧ ಮಂಡಿಸಿರಬೇಕು ಎಂದೆಲ್ಲ ಗುರಿ ನಿಗದಿಪಡಿಸುವುದರಿಂದ ಆಗುವ ಪ್ರಯೋಜನ ಏನು? ಈಗಾಗಲೇ ಇರುವ ನಾಟಕಗಳಿಗೆ ಇನ್ನಷ್ಟು ಸೇರ್ಪಡೆ ಅಷ್ಟೇ. ಆತ್ಮಾವಲೋಕನದ ಬಯಕೆ ಅಧ್ಯಾಪಕನಲ್ಲೇ ಹುಟ್ಟಿಕೊಳ್ಳಬೇಕು. ಆಗ ಶಿಕ್ಷಣ ಕ್ಷೇತ್ರದಲ್ಲಿ ಇಂದು ಕಾಣುವ ಬಹುಪಾಲು ಅಪಸವ್ಯಗಳೇ ಇರುವುದಿಲ್ಲ.

ನಿರಂತರ ಕಲಿಕೆ:

ಕಲಿಸುವವನಿಗೂ ಕಲಿಕೆ ನಿರಂತರ. ವಾಸ್ತವವಾಗಿ ಯಾರೂ ಯಾರಿಗೂ ಏನನ್ನೂ ಕಲಿಸಲಾರರು. ಎಲ್ಲರದೂ ಕಲಿಯುವ ಪ್ರಕ್ರಿಯೆ ಅಷ್ಟೇ. ಅಧ್ಯಾಪಕನದೂ ಕಲಿಯುವ ಕೆಲಸವೇ. ತನ್ನ ವಿದ್ಯಾರ್ಥಿ, ಸಹೋದ್ಯೋಗಿಗಳಿಂದಲೂ ಆತ ಕಲಿಯುವುದಕ್ಕೆ ಸಿದ್ಧನಿರಬೇಕು. ತಾನೇ ಎಲ್ಲವನ್ನೂ ತಿಳಿದವನು, ವಿದ್ಯಾರ್ಥಿಗಳು ಮೂರ್ಖರು ಎಂದು ಭಾವಿಸುವ ಅಧ್ಯಾಪಕನಿಗಿಂತ ದೊಡ್ಡ ಮೂರ್ಖ ಇನ್ನೊಬ್ಬನಿಲ್ಲ. 

ಹೊಸತಲೆಮಾರಿನ ವಿದ್ಯಾರ್ಥಿಗಳಂತೂ ಬಲು ಚಾಣಾಕ್ಷರಿದ್ದಾರೆ. ಅವರ ಕಲಿಕೆಯ ವೇಗ ತುಂಬ ದೊಡ್ಡದು. ಮುಖ್ಯವಾಗಿ ದಿನನಿತ್ಯದ ತಂತ್ರಜ್ಞಾನ ಬಳಕೆ ಅವರಿಗೆ ಸಲೀಸು. ಅದನ್ನು ಕಲಿಸುವ ಅಗತ್ಯವೇ ಇಲ್ಲ. ಅಧ್ಯಾಪಕ ಕೊಂಚ ಹಿಂದಿನ ತಲೆಮಾರಿನವನಾದರೆ ಅಂತಹ ಕೌಶಲ್ಯಗಳನ್ನು ಹೊಂದುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಈಗಿನ ವಿದ್ಯಾರ್ಥಿಗಳು ಅಧ್ಯಾಪಕರಿಗೇ ಇವನ್ನೆಲ್ಲ ಕಲಿಸಬಲ್ಲರು. ವಿದ್ಯಾರ್ಥಿಗಳಿಂದ ಕಲಿಯುವುದಕ್ಕೆ ಅಧ್ಯಾಪಕನಿಗೆ ಯಾವ ‘ಇಗೋ’ವೂ ಅಡ್ಡಿಬರಬಾರದು. ಒಳ್ಳೆಯದು ಎಲ್ಲಿಂದ, ಹೇಗೆ ಬಂದರೂ ಅದು ಸ್ವೀಕಾರಾರ್ಹವೇ. ‘ವರ್ಣ ಮಾತ್ರಂ ಕಲಿಸಿದಾತಂ ಗುರು’.

ಇದರ ಜೊತೆಗೆ, ಎಲ್ಲ ಜ್ಞಾನಶಿಸ್ತುಗಳು ಸದಾ ಬೆಳೆಯುವ ಮಹಾವೃಕ್ಷಗಳೇ. ಹೊಸ ಜ್ಞಾನದ ಸೇರ್ಪಡೆ ಆಗುತ್ತಲೇ ಇರುತ್ತದೆ. ತಾನು ಕಲಿತದ್ದೇ ಅಂತಿಮ ಎಂದು ಅಧ್ಯಾಪಕನೊಬ್ಬ ಭಾವಿಸಿದರೆ ಆತ ಎಂದೂ ಚಿಗುರದ ಗೊಡ್ಡು ಮರ ಎಂದೇ ಅರ್ಥ. ಅಧ್ಯಾಪಕ ಸದಾ ‘ಅಪ್ಡೇಟ್’ ಆಗುತ್ತಾ ಇರಬೇಕು. ಹೊಸಹೊಸ ಪುಸ್ತಕಗಳನ್ನು ಓದಬೇಕು; ತನ್ನ ಜ್ಞಾನದಿಗಂತವನ್ನು ವಿಸ್ತರಿಸಿಕೊಳ್ಳುತ್ತಿರಬೇಕು; ಹೊಸ ಸಂವಾದಗಳಿಗೆ ತೆರೆದುಕೊಳ್ಳಬೇಕು. ಅಂತಹ ಅಧ್ಯಾಪಕ ಮಾತ್ರ ಹೊಸ ತಲೆಮಾರಿನ ವಿದ್ಯಾರ್ಥಿಗಳ ಅವಶ್ಯಕತೆಗಳನ್ನು ಪೂರೈಸಬಲ್ಲ. 

- ಸಿಬಂತಿ ಪದ್ಮನಾಭ ಕೆ. ವಿ.

ಶನಿವಾರ, ಸೆಪ್ಟೆಂಬರ್ 4, 2021

ವಿದ್ಯಾರ್ಥಿಗಳಿಗೆ ಅಧ್ಯಾಪಕನೇ ಪಠ್ಯಪುಸ್ತಕ

ಆಗಸ್ಟ್ 28, 2021ರ ಉದಯವಾಣಿ 'ಫ್ಯೂಷನ್' ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಶಿಕ್ಷಣವೆಂದರೆ ಪಾತ್ರೆಯನ್ನು ತುಂಬಿಸುವ ಕೆಲಸ ಅಲ್ಲ, ದೀಪವನ್ನು ಹಚ್ಚುವ ಕ್ರಿಯೆ ಎಂಬ ಯೇಟ್ಸ್ ಕವಿಯ ಮಾತಿದೆ. ಪಾತ್ರೆಯನ್ನು ತುಂಬಿಸುವುದಾದರೂ, ದೀಪವನ್ನು ಹಚ್ಚುವುದಾದರೂ ಒಬ್ಬರಿಂದ ಆಗುವ ಕಾರ್ಯ ಅಲ್ಲ ಎಂಬುದು ಮುಖ್ಯ. ಪಾತ್ರೆ ತುಂಬಿಸುವ ಕ್ರಿಯೆಯ
ಲ್ಲಿ ಪಾತ್ರೆ ಬೇಕು, ತುಂಬುವವನು ಬೇಕು, ತುಂಬಿಸಲು ಸೂಕ್ತ ದ್ರವ್ಯ ಬೇಕು; ದೀಪ ಹಚ್ಚುವ ಕೆಲಸಕ್ಕೆ ದೀಪ ಬೇಕು, ತೈಲ-ಬತ್ತಿ ಬೇಕು, ಹಚ್ಚುವವನು ಬೇಕೇ ಬೇಕು. ಅಂತೂ ಎಲ್ಲವೂ ಪರಸ್ಪರ.

ಶಿಕ್ಷಣದ ಒಟ್ಟಾರೆ ಪ್ರಕ್ರಿಯೆಯಲ್ಲಿ ಶಿಕ್ಷಕನ ಪಾತ್ರ ಬಲುದೊಡ್ಡದೇ. ಅವನು ಮನಸ್ಸು ಮಾಡಿದರೆ ಏನೂ ಮಾಡಿಯಾನು. ವಿದ್ಯಾರ್ಥಿಯ ಪ್ರಗತಿ ಪತನಗಳೆರಡೂ ಅವನ ಕೈಯಲ್ಲೇ ಇವೆ. ಆದರೆ ಯಾವ ಸಾವಯವ ಪ್ರಕ್ರಿಯೆಯೂ ಒಂದೇ ಮುಖದ್ದಲ್ಲ. ಒಬ್ಬನೇ ಕುಳಿತು ಮಾಡುವಂಥದ್ದಲ್ಲ. ಶಿಕ್ಷಣವೂ ಹಾಗೆಯೇ. ಅದೂ ಯಶಸ್ವೀ ಎನಿಸಬೇಕಾದರೆ ಗುರು-ಶಿಷ್ಯರಿಬ್ಬರ ಏಕಪ್ರಕಾರದ ಪ್ರತಿಸ್ಪಂದನೆ ಇರಬೇಕು.

ಪಾತ್ರೆ ತುಂಬಿಸುವ ಕೆಲಸ ಎಂದುಕೊಂಡರೂ ಆದೀತು. ಆದರೆ ಪಾತ್ರೆ ಎಷ್ಟು ದೊಡ್ಡದಿದೆ ಎಂಬುದು ಮುಖ್ಯ. ಶಿಷ್ಯ ತಂದ ಪಾತ್ರೆಗೆ ತುಂಬಿಸುವಷ್ಟು ಬಂಡವಾಳ ಶಿಕ್ಷಕನಲ್ಲಿ ಇದೆಯೋ ಎಂಬುದೂ ಮುಖ್ಯ. ಇಲ್ಲವಾದರೆ ವಿದ್ಯಾರ್ಥಿ ದೊಡ್ಡ ಪಾತ್ರೆ ತಂದಂತೆಯೋ, ಅಧ್ಯಾಪಕ ಅದಕ್ಕೆ ಮೊಗೆಮೊಗೆದು ತುಂಬಿಸಿದಂತೆಯೋ ನಟನೆ ಮಾಡಬೇಕಾಗುತ್ತದೆ. ಇದರಿಂದ ಪರಸ್ಪರರಿಗೂ ಸಮಾಜಕ್ಕೂ ಯಾವ ಪ್ರಯೋಜನವೂ ಇಲ್ಲ. ಕೊನೆಗೆ ಎರಡೂ ಖಾಲಿ ಪಾತ್ರೆಗಳು ಸದ್ದು ಮಾಡುವ ತಮಾಷೆ ಮಾತ್ರ ನಡೆಯುತ್ತದೆ.

ಸಮುದ್ರಕ್ಕೆ ಹೋದರೆ ಎಷ್ಟು ನೀರು ತುಂಬಿಸಿಕೊಂಡು ಬರಬಹುದು ಎಂದು ಶಿಷ್ಯನೊಬ್ಬ ಗುರುವಿನಲ್ಲಿ ಕೇಳಿದನಂತೆ. ನೀನು ಎಷ್ಟು ದೊಡ್ಡ ಪಾತ್ರೆ ತೆಗೆದುಕೊಂಡು ಹೋಗುತ್ತೀಯೋ ಅಷ್ಟು ತುಂಬಿಸಿಕೊಂಡು ಬರಬಹುದು ಎಂದು ಗುರು ಉತ್ತರಿಸಿದನಂತೆ. ಶಿಷ್ಯ ದೊಡ್ಡ ಪಾತ್ರೆ ತೆಗೆದುಕೊಂಡು ಹೋಗಬೇಕಿರುವುದು ನಿಜ. ಅನೇಕ ಸಲ ದೊಡ್ಡ ಪಾತ್ರೆ ಒಯ್ಯಬೇಕೆಂಬ ತಿಳುವಳಿಕೆ ಶಿಷ್ಯನಿಗೆ ಮೂಡಿರುವುದಿಲ್ಲ, ಮತ್ತು ಅದು ಅವನ ಅಪರಾಧವೂ ಅಲ್ಲ. ಅಂತಹದೊಂದು ತಿಳುವಳಿಕೆ ಮೂಡಿಸುವ ಜವಾಬ್ದಾರಿ ಗುರುವಿನದ್ದೂ ಆಗಿರುತ್ತದೆ. ಇಲ್ಲವಾದರೆ ಆ ಸ್ಥಾನಕ್ಕೆ ಏನು ಅರ್ಥ?

ಮಕ್ಕಳು ಹೇಳಿದ್ದನ್ನು ಮಾಡುವುದಿಲ್ಲ, ಮಾಡಿದ್ದನ್ನು ಮಾಡುತ್ತಾರೆ. ಇದು ಅವರ ವಯೋಸಹಜ ಸ್ವಭಾವ. ಗುರು ತಾನು ಮಾಡದ್ದನ್ನು ಮಕ್ಕಳಲ್ಲಿ ನಿರೀಕ್ಷೆ ಮಾಡಬಾರದು. ಉದಾಹರಣೆಗೆ, ಖುದ್ದು ಓದುವ ಅಭ್ಯಾಸ ಇಲ್ಲದ ಅಧ್ಯಾಪಕ ತನ್ನ ವಿದ್ಯಾರ್ಥಿಗಳು ಓದಬೇಕೆಂದು ನಿರೀಕ್ಷೆ ಮಾಡುವುದು ತಪ್ಪು. ಸ್ವಯಂಶಿಸ್ತು ಇಲ್ಲದ ಶಿಕ್ಷಕ ತನ್ನ ಮಕ್ಕಳು ಸ್ವಯಂಶಿಸ್ತು ರೂಢಿಸಿಕೊಳ್ಳಬೇಕೆಂದು ಅಪ್ಪಣೆ ಮಾಡುವುದು ನಗೆಪಾಟಲು. ಸಮಯಪಾಲನೆ ಮಾಡಲಾಗದ ಮೇಷ್ಟ್ರು ತನ್ನ ವಿದ್ಯಾರ್ಥಿಗಳು ಸಮಯಪಾಲನೆ ಮಾಡಬೇಕೆಂದು ಅಪೇಕ್ಷಿಸುವುದು ಅಸಂಗತ. ಪಾಠ ಇರುವುದು ವಾಸ್ತವವಾಗಿ ಪಠ್ಯಪುಸ್ತಕದಲ್ಲಿ ಅಲ್ಲ, ಅಧ್ಯಾಪಕನ ವರ್ತನೆಯಲ್ಲಿ. ವಿದ್ಯಾರ್ಥಿಗಳಿಗೆ ಅಧ್ಯಾಪಕನೇ ದೊಡ್ಡ ಪಠ್ಯಪುಸ್ತಕ. ಆತ ತನ್ನ ವರ್ತನೆ, ಕ್ರಿಯೆಗಳಲ್ಲಿ ಶ್ರೇಷ್ಠವಾದದ್ದನ್ನು ತೋರಿಸದೇ ಹೋದರೆ ಪಠ್ಯಪುಸ್ತಕ ಕೇವಲ ಅಕ್ಷರಗಳ ಮೊತ್ತವಷ್ಟೇ ಆದೀತು.

ಸಾಮಾನ್ಯ ಅಧ್ಯಾಪಕ ಪಾಠ ಮಾಡುತ್ತಾನೆ, ಉತ್ತಮ ಅಧ್ಯಾಪಕ ಪ್ರಾಯೋಗಿಕವಾಗಿ ವಿವರಿಸುತ್ತಾನೆ, ಶ್ರೇಷ್ಠ ಅಧ್ಯಾಪಕ ಪ್ರಭಾವಿಸುತ್ತಾನೆ ಎಂಬ ಮಾತು ಇದೇ ಕಾರಣಕ್ಕೆ ಹುಟ್ಟಿಕೊಂಡಿರುವುದು. ಯಾರೇ ಐತಿಹಾಸಿಕ ವ್ಯಕ್ತಿಯ ಬದುಕನ್ನು ನೋಡಿದರೂ ಆತನ ಹಿಂದೊಬ್ಬ ಶ್ರೇಷ್ಠ ಶಿಕ್ಷಕನ ಪಾತ್ರವಿರುವುದು ನಿಸ್ಸಂಶಯ. ಆತನ ಪ್ರಭಾವಲಯಕ್ಕೆ ಸಿಕ್ಕಿದ ಎಂತಹ ಸಾಮಾನ್ಯ ವ್ಯಕ್ತಿಯಾದರೂ ಜೀವನದಲ್ಲಿ ಎತ್ತರಕ್ಕೆ ಏರಬಲ್ಲ, ಸಮಾಜಕ್ಕೆ ಸಂಪನ್ಮೂಲವಾಗಬಲ್ಲ. ಶಿಕ್ಷಣದ ಒಟ್ಟಾರೆ ಉದ್ದೇಶ ಕನ್ನಡಿಗಳನ್ನು ಕಿಟಕಿಗಳನ್ನಾಗಿ ಪರಿವರ್ತಿಸುವುದು ಎಂಬ ಉಕ್ತಿ ಎಷ್ಟೊಂದು ಅರ್ಥಪೂರ್ಣ! ಕಿಟಕಿಗಳನ್ನು ತೆರೆಯುವ ಕೆಲಸ ಅಧ್ಯಾಪಕನದ್ದು. ನೋಡುವ ಜವಾಬ್ದಾರಿ ವಿದ್ಯಾರ್ಥಿಯದ್ದು. ಕಿಟಕಿ ತೆರೆದಿದ್ದರೂ ಹೊರಗೆ ದೃಷ್ಟಿ ಹಾಯಿಸದೆ ಮುಸುಕೆಳೆದು ಮಲಗಿದರೆ ಅಂತಹ ವಿದ್ಯಾರ್ಥಿಗೆ ಕತ್ತಲೂ ಒಂದೇ, ಬೆಳಕೂ ಒಂದೇ.

ಶಿಷ್ಯ ಕಲಿಯಲು ಸೋತನೆಂದರೆ ಶಿಕ್ಷಕ ಕಲಿಸಲು ಸೋತನೆಂದು ಅರ್ಥ ಎಂಬ ನಾಣ್ಣುಡಿಯೊಂದಿದೆ. ಅಂದರೆ ಶಿಷ್ಯನ ಸೋಲಿನ ಹಿಂದೆ ಗುರುವಿನ ಜವಾಬ್ದಾರಿಯೂ ಇದೆ ಎಂದಾಯ್ತು. ಶಿಷ್ಯ ಉನ್ನತಿಗೇರಿದರೆ ಅದರಲ್ಲಿ ಗುರುವಿಗೂ ಒಂದು ಪಾಲಿರುವುದು ನಿಜವಾದರೆ ಆತನ ಸೋತರೂ ಅದರದ್ದೊಂದು ಪಾಲು ಗುರುವಿನದ್ದಾಗುತ್ತದೆ. ತನ್ನ ವಿದ್ಯಾರ್ಥಿಗಳು ದಾರಿತಪ್ಪಿದರೆ, ಯಶಸ್ಸಿನ ಹಾದಿಯಲ್ಲಿ ಎಡವಿದರೆ ತಾನು ಇದನ್ನು ತಪ್ಪಿಸಬಹುದಿತ್ತೇ ಎಂಬ ಆತ್ಮಾವಲೋಕನವನ್ನಾದರೂ ಗುರು ಮಾಡಬೇಕು. ಏಕೆಂದರೆ ಗುರು ಎಂದರೆ ದೊಡ್ಡದು ಎಂಬ ಅರ್ಥವೂ ಇದೆ. ದೊಡ್ಡವರು ದೊಡ್ಡವರಂತೆ ಇದ್ದರೆ ಮಾತ್ರ ಬೆಲೆ.

- ಸಿಬಂತಿ ಪದ್ಮನಾಭ ಕೆ. ವಿ.

ಶನಿವಾರ, ಆಗಸ್ಟ್ 28, 2021

ಸ್ವಾತಂತ್ರ್ಯ ಚಳವಳಿ ಮತ್ತು ತುಮಕೂರು ಜಿಲ್ಲೆಯ ಪತ್ರಿಕೆಗಳು

15 ಆಗಸ್ಟ್ 2021ರ 'ವಿಜಯವಾಣಿ' ಪತ್ರಿಕೆಯ 'ಅಮೃತಭಾರತ' ಪುರವಣಿಯಲ್ಲಿ ಪ್ರಕಟವಾದ ಲೇಖನ

ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಪತ್ರಿಕಾವೃತ್ತಿಗೂ ಅವಿನಾಭಾವ ಸಂಬಂಧ. ನಮ್ಮ ರಾಷ್ಟ್ರೀಯ ಚಳವಳಿಯ ಇತಿಹಾಸವೂ ಪತ್ರಿಕಾ ಇತಿಹಾಸವೂ ಜತೆಜತೆಯಾಗಿಯೇ ಸಾಗುವುದು ಒಂದು ಕುತೂಹಲಕರ ವಿದ್ಯಮಾನ. ಅನೇಕ ಮಂದಿ ಸ್ವಾತಂತ್ರ್ಯ ಹೋರಾಟಗಾರರು ಸ್ವತಃ ಪತ್ರಕರ್ತರೂ ಆಗಿದ್ದರು ಎಂಬುದನ್ನು ಗಮನಿಸಬೇಕು. ದೇಶದಲ್ಲಿ ರಾಷ್ಟ್ರೀಯ ಪ್ರಜ್ಞೆಯ ಬೇರು-ಬಿಳಲುಗಳನ್ನು ಪೋಷಿಸುವ ಗುಪ್ತಗಾಮಿನಿಗಳಾಗಿ ಪತ್ರಿಕೆಗಳು ಹಾಗೂ ಪತ್ರಕರ್ತರು ಕಾರ್ಯನಿರ್ವಹಿಸಿದ್ದು ಒಂದು ಸ್ಮರಣೀಯ ಸಂಗತಿ. ದೇಶದ ರಾಷ್ಟ್ರೀಯ ಚಳವಳಿಯಲ್ಲಿ ತುಮಕೂರು ಜಿಲ್ಲೆಯ ಪತ್ರಿಕೆಗಳ ಹಾಗೂ ಪತ್ರಕರ್ತರ ಪಾತ್ರ ಏನು? ಹೀಗೆ ಕೇಳಿಕೊಂಡಾಗ ಜಿಲ್ಲೆ ಹೆಮ್ಮೆಪಡುವಂತಹ ಅನೇಕ ವಿಷಯಗಳು ನಮ್ಮ ಗಮನಕ್ಕೆ ಬರುತ್ತವೆ.

ತುಮಕೂರು ಜಿಲ್ಲೆಯ ಪತ್ರಿಕೋದ್ಯಮದ ಆರಂಭಿಕ ಹೆಜ್ಜೆಗುರುತುಗಳು 19ನೇ ಶತಮಾನದ ಕೊನೆಯಲ್ಲಿ ಹಾಗೂ 20ನೇ ಶತಮಾನದ ಆರಂಭದಲ್ಲಿ ಕಂಡುಬರುತ್ತವಾದರೂ, ಅವು ಹೆಚ್ಚು ಸ್ಪಷ್ಟವಾಗಿ ಕಾಣಲಾರಂಭಿಸಿದ್ದು ಸ್ವಾತಂತ್ರ್ಯ ಚಳವಳಿ ತೀವ್ರಸ್ವರೂಪವನ್ನು ಪಡೆದುಕೊಂಡ ಕಾಲದಲ್ಲೇ. ‘ಜನತೆಯಲ್ಲಿ ದೇಶಾಭಿಮಾನ, ಸ್ವಾತಂತ್ರ್ಯ ಪ್ರಜ್ಞೆಗಳನ್ನು ಮೂಡಿಸುವ ಸಲುವಾಗಿ ತುಮಕೂರು ಜಿಲ್ಲೆಯಲ್ಲಿ ಪತ್ರಿಕೋದ್ಯಮ ಆರಂಭವಾಯಿತು’ ಎಂದು ಇತಿಹಾಸಕಾರರು ಗುರುತಿಸಿದ್ದಿದೆ. ಈ ಪತ್ರಿಕೆಗಳು ಮುಖ್ಯವಾಹಿನಿಯಲ್ಲಿ ಇದ್ದುಕೊಂಡು ಚಳವಳಿಯನ್ನು ಪ್ರೇರೇಪಿಸಿದವು ಎಂಬುದಕ್ಕಿಂತಲೂ ಭೂಗತ ಪತ್ರಿಕೆಗಳ ರೂಪದಲ್ಲಿ, ಸೈಕ್ಲೋಸ್ಟೈಲ್ ಪತ್ರಿಕೆಗಳ ವೇಷದಲ್ಲಿ, ರಹಸ್ಯ ಕರಪತ್ರಗಳ ಮಾದರಿಯಲ್ಲಿ ಹತ್ತಾರು ಅವತಾರಗಳನ್ನು ತಾಳಿ ಸ್ವಾತಂತ್ರ್ಯ ಸಂಗ್ರಾಮದ ಅಂತಃಪ್ರವಾಹದಂತೆ ಕೆಲಸ ಮಾಡಿದವು ಎಂದರೆ ಹೆಚ್ಚು ಸರಿಯೆನಿಸೀತು.

ವೆಸ್ಲಿಯನ್ ಮಿಶನರಿಗಳಿಂದ ಜಿಲ್ಲೆಯಲ್ಲಿ ಪತ್ರಿಕೆಗಳು ಆರಂಭವಾದರೂ, ಇಲ್ಲಿನದೇ ಮಣ್ಣಿನಲ್ಲಿ ಪತ್ರಿಕೋದ್ಯಮದ ಗಿಡ ನೆಟ್ಟು ಜಿಲ್ಲೆಯ ಪತ್ರಿಕೋದ್ಯಮಕ್ಕೊಂದು ಅಧಿಕೃತತೆಯನ್ನು ತಂದುಕೊಟ್ಟವರು ಸ್ವಾತಂತ್ರ್ಯ ಹೋರಾಟಗಾರ ಕಡಬ ರಂಗಯ್ಯಂಗಾರ್. ‘ವಿಶ್ವಕರ್ನಾಟಕ’ ಪತ್ರಿಕೆ ತಿರುಮಲೆ ತಾತಾಚಾರ್ಯ ಶರ್ಮರ ನೇತೃತ್ವದಲ್ಲಿ ಇಡೀ ಮೈಸೂರು ಸಂಸ್ಥಾನದ ಸ್ವಾತಂತ್ರ್ಯ ಚಳವಳಿಯ ಕ್ರಾಂತಿಧ್ವನಿಯಾಗಿ ಮೂಡಿಬಂತಾದರೂ, ಆ ಪತ್ರಿಕೆಯ ಬೀಜ ಬಿತ್ತಿದವರು ರಂಗಯ್ಯಂಗಾರ್. ಅವರು ಆರಂಭಿಸಿದ ಇತರ ಪತ್ರಿಕೆಗಳಾದ ‘ತುಮಕೂರು ವರ್ತಮಾನ’ವಾಗಲೀ, ‘ಫೋರ್ಟ್‍ನೈಟ್ಲಿ ಕ್ರಾನಿಕಲ್’ ಆಗಲೀ ಬಹುಕಾಲ ನಡೆಯದಿದ್ದರೂ, ತುಮಕೂರು ಪತ್ರಿಕೋದ್ಯಮದ ಆರಂಭಿಕ ದಿನಗಳ ನೆಲೆಯಲ್ಲಿ ಅವು ಬಹು ಮಹತ್ವದ ಪತ್ರಿಕೆಗಳೇ. ಸಹಜವಾಗಿಯೇ ಅವರಿಗೆ ಜಿಲ್ಲೆಯ ಪತ್ರಿಕೋದ್ಯಮದ ಹರಿಕಾರ ಅಥವಾ ಪಿತಾಮಹ ಎಂಬ ಅಭಿದಾನ ಪ್ರಾಪ್ತವಾಗಿದೆ. 

ಮೂಲತಃ ಗುಬ್ಬಿಯವರಾದ ವಕೀಲ ರಂಗಯ್ಯಂಗಾರ್ ಪತ್ರಿಕೋದ್ಯಮ ಪ್ರವೇಶಿಸಿದ್ದು 1917ರಲ್ಲಿ - ‘ತುಮಕೂರು ವರ್ತಮಾನ’ ಎಂಬ ಕನ್ನಡ ವಾರಪತ್ರಿಕೆಯನ್ನು ಆರಂಭಿಸುವ ಮೂಲಕ. ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ರಂಗಯ್ಯಂಗಾರ್‍ಗೆ ಪತ್ರಿಕೋದ್ಯಮ ಒಂದು ಹೋರಾಟದ ಅಸ್ತ್ರವಾಗಿ ಕಾಣಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಪತ್ರಿಕೆಯ ಮೂಲಕ ಜನತೆಯಲ್ಲಿ ಸ್ವಾತಂತ್ರ್ಯಪ್ರಜ್ಞೆ ಮತ್ತು ರಾಷ್ಟ್ರಾಭಿಮಾನದ ಅರಿವು ಮೂಡಿಸುವುದು ಅವರ ಗುರಿಯಾಗಿತ್ತು. ತಮ್ಮ ಸ್ಪಷ್ಟ, ಸಮರ್ಥ ಬರವಣಿಗೆಯಿಂದ ಜನರನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗುವಂತೆ ಅವರು ಪ್ರೇರೇಪಿಸುತ್ತಿದ್ದರು. 1921ರಲ್ಲಿ ಆರಂಭವಾದ ರಂಗಯ್ಯಂಗಾರರ ‘ಮೈಸೂರು ಕ್ರಾನಿಕಲ್’ ಪತ್ರಿಕೆ ಮುಂದೆ ತಿರುಮಲೆ ತಾತಾಚಾರ್ಯ ಶರ್ಮರ ನೇತೃತ್ವದಲ್ಲಿ ‘ವಿಶ್ವಕರ್ನಾಟಕ’ವಾಗಿ ಮರುಹುಟ್ಟು ಪಡೆದ ಮೇಲೆ ಕನ್ನಡ ಪತ್ರಿಕೋದ್ಯಮಕ್ಕೂ ಸ್ವಾತಂತ್ರ್ಯ ಹೋರಾಟಕ್ಕೂ ಒಂದು ಹೊಸ ತಿರುವು ನೀಡಿದ್ದು ನಮ್ಮ ಪತ್ರಿಕಾ ಇತಿಹಾಸದ ಪ್ರಮುಖ ಮೈಲಿಗಲ್ಲು.

ತಿ.ತಾ. ಶರ್ಮರಿಗೆ ತುಮಕೂರಿನ ನಂಟು ಇಷ್ಟೇ ಅಲ್ಲ; ಅವರ ಪತ್ನಿ ತಿರುಮಲೆ ರಾಜಮ್ಮನವರೂ ತುಮಕೂರಿನವರೇ. ಶರ್ಮರಿಗೆ ಹೆಗಲೆಣೆಯಾಗಿ ನಿಂತು ಸಾಹಿತ್ಯ, ಸಂಗೀತ, ದೇಶಸೇವೆಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದಲ್ಲದೆ, ‘ವಿಶ್ವಕರ್ನಾಟಕ’ದ ಕಾರ್ಯಭಾರದಲ್ಲೂ ರಾಜಮ್ಮ ಸಕ್ರಿಯರಾಗಿದ್ದರು. 1924ರಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿಯವರ ಸಮ್ಮುಖ ವೀಣಾವಾದನ ಮಾಡಿದ ಹೆಗ್ಗಳಿಕೆ ರಾಜಮ್ಮನವರದು. 

ಸ್ವಾತಂತ್ರ್ಯಪೂರ್ವದ ತುಮಕೂರು ಪತ್ರಿಕಾಲೋಕದಲ್ಲಿ ಭೂಗತ ಪತ್ರಿಕೆಗಳದ್ದು ಒಂದು ದೊಡ್ಡ ಅಧ್ಯಾಯ. ಜನಜಾಗೃತಿ ಮೂಡಿಸುವಲ್ಲಿ ಮತ್ತು ಜನರನ್ನು ಹೋರಾಟಕ್ಕೆ ಒಗ್ಗೂಡಿಸುವಲ್ಲಿ ಉಳಿದ ಪತ್ರಿಕೆಗಳಿಗಿಂತಲೂ ಅವುಗಳದ್ದೇ ಸಿಂಹಪಾಲು. ಅಧಿಕೃತ ಪತ್ರಿಕೆಗಳು ಪ್ರಭುತ್ವದ ಕಾನೂನಿನ ಮಿತಿಯಲ್ಲಿ, ನೀತಿನಿಯಮಾವಳಿಗಳ ಪರಿಧಿಯ ಒಳಗೆ ಹೋರಾಟಕ್ಕೆ ತಮ್ಮಿಂದಾದ ಸ್ಫೂರ್ತಿ ನೀಡಬಲ್ಲವಾಗಿದ್ದರೆ, ಭೂಗತ ಪತ್ರಿಕೆಗಳು ಪರೋಕ್ಷ ಕಾರ್ಯಾಚರಣೆ ನಡೆಸುತ್ತಲೇ ಉಳಿದ ಪತ್ರಿಕೆಗಳು ಹೇಳಲಾರದ ವಿಚಾರಗಳಷ್ಟನ್ನೂ ಹೋರಾಟಗಾರರಿಗೆ ಮತ್ತು ಜನಸಾಮಾನ್ಯರಿಗೆ ತಲುಪಿಸುತ್ತಿದ್ದವು. ಅವು ಚಳವಳಿಯ ಕಾಲದ ಪ್ರಬಲ ಸಂವಹನ ಮಾಧ್ಯಮಗಳೇ ಆಗಿದ್ದವು. 

ತುಮಕೂರು ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲೂ ಭೂಗತ ಪತ್ರಿಕೆಗಳ ಪಾತ್ರ ಕಡಿಮೆಯೇನಲ್ಲ. ರಾಜ್ಯದ ಬೇರೆ ಕೆಲವು ಭಾಗಗಳಿಗೆ ಹೋಲಿಸಿ ನೋಡಿದರೆ ಸ್ವಾತಂತ್ರ್ಯಪೂರ್ವ ತುಮಕೂರಿನಲ್ಲಿ ಪತ್ರಿಕೆಗಳ ಸಂಖ್ಯೆ ಕಡಿಮೆಯೇ ಇತ್ತು. ಆದರೆ, ಅವುಗಳ ಕೊರತೆಯನ್ನು ಯಶಸ್ವಿಯಾಗಿ ನೀಗಿಸಿದ್ದು ಇಲ್ಲಿನ ಭೂಗತ ಬುಲೆಟಿನ್‍ಗಳೇ. ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿ ಮುಂತಾದ ಎಲ್ಲ ಮಹತ್ವದ ಹೋರಾಟಗಳಿಗೆ ಕಸುವು ತುಂಬಿದ್ದರಲ್ಲಿ ಈ ಬಗೆಯ ಪತ್ರಿಕೆಗಳ ಪಾತ್ರ ಬಲುದೊಡ್ಡದು. 

ಸ್ವಾತಂತ್ರ್ಯ ಹೋರಾಟ ಸಂಬಂಧೀ ಭೂಗತ ಪತ್ರಿಕಾ ಚಟುವಟಿಕೆಗಳಲ್ಲಿ ಆರ್. ಎಸ್. ಆರಾಧ್ಯರದು ಪ್ರಮುಖ ಹೆಸರು. ಜಿಲ್ಲೆಯ ಸ್ವಾತಂತ್ರ್ಯ ಚಳವಳಿಯ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದ ಆರಾಧ್ಯರಿಗೆ ಭೂಗತ ಪತ್ರಿಕೆಗಳು ಜನಜಾಗೃತಿಯ ಪ್ರಮುಖ ಮಾಧ್ಯಮಗಳೂ, ಹೋರಾಟದ ಪ್ರಬಲ ಅಸ್ತ್ರಗಳೂ ಆಗಿದ್ದವು. ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರದವರಾದ ಆರಾಧ್ಯರು ವೃತ್ತಿಯಲ್ಲಿ ಮೂಲತಃ ವ್ಯಾಪಾರೋದ್ಯಮಿಗಳು. ಸ್ವಾತಂತ್ರ್ಯಾನಂತರವೂ ಅವರು ಕೈಗಾರಿಕೋದ್ಯಮಿಯಾಗಿ ಹೆಸರು ಮಾಡಿದವರು. ಆದರೆ ರಾಷ್ಟ್ರೀಯ ಚಳವಳಿಯ ಸೆಳವಿನಿಂದ ಅವರು ತಪ್ಪಿಸಿಕೊಳ್ಳಲಾಗಲಿಲ್ಲ. ಕೊರಟಗೆರೆ ಹಾಗೂ ಬೆಂಗಳೂರುಗಳಲ್ಲಿ ವಿದ್ಯಾಭ್ಯಾಸ ಪಡೆದ ಆರಾಧ್ಯರು ಮನೆಯವರ ಒತ್ತಾಯದ ಮೇರೆಗೆ ಓದನ್ನು ನಿಲ್ಲಿಸಿ ವ್ಯಾಪಾರದಲ್ಲಿ ತೊಡಗಿದ್ದರು. 1937ರಲ್ಲಿ ರಾಣೆಬೆನ್ನೂರಿನಲ್ಲಿ ಆರಂಭವಾದ ಕರ್ನಾಟಕ ರಾಜಕೀಯ ಪರಿಷತ್‍ನ ಒಂದು ಸಭೆಯಲ್ಲಿ ಯುವಕ ಆರಾಧ್ಯರು ‘ಸ್ವಾತಂತ್ರ್ಯ ಚಳವಳಿಯಲ್ಲಿ ಯುವಕರ ಪಾತ್ರ’ ಎಂಬ ವಿಷಯದಲ್ಲಿ ಭಾಷಣ ಮಾಡಿ ಎಲ್ಲರ ಗಮನ ಸೆಳೆದರು. 1938ರ ಶಿವಪುರದ ಧ್ವಜ ಸತ್ಯಾಗ್ರಹದಲ್ಲಿ ಭಾಗವಹಿಸಿದ ಬಳಿಕವಂತೂ ಅವರು ತಮ್ಮನ್ನು ತಾವು ಸಂಪೂರ್ಣವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡರು.

1939ರಲ್ಲಿ ಅರಣ್ಯ ಸತ್ಯಾಗ್ರಹ ಮುಂತಾದ ಕಾನೂನುಭಂಗ ಚಳುವಳಿಗಳು ಆರಂಭವಾದಾಗ ಹೋರಾಟಗಾರರಿಗೆ ಮಾಹಿತಿ, ಸಂದೇಶ ರವಾನಿಸಲು ಆರಾಧ್ಯರಿಗೆ ಗೋಚರಿಸಿದ್ದು ಪತ್ರಿಕಾ ಮಾಧ್ಯಮ. ಬೇರೆಬೇರೆ ಹೆಸರಿನ ಪತ್ರಿಕೆಗಳನ್ನು ರಹಸ್ಯವಾಗಿ ಮುದ್ರಿಸಿ ಜನತೆಯ ನಡುವೆ ಪ್ರಸಾರವಾಗುವಂತೆ ಅವರು ನೋಡಿಕೊಳ್ಳುತ್ತಿದ್ದರು. ಅಂದಿನ ಸನ್ನಿವೇಶದ ಕುರಿತು ಆರಾಧ್ಯರೇ ‘ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು’ ಗ್ರಂಥದಲ್ಲಿ ಹೀಗೆ ಬರೆದಿದ್ದಾರೆ: “ಆಗ ನಾನು ಪತ್ರಿಕೆ ಮತ್ತು ಬುಲೆಟಿನ್‍ಗಳನ್ನು ಮುದ್ರಿಸಿ ದೇಶದೆಲ್ಲೆಡೆ ಪ್ರಚಾರ ಮಾಡಲು ಏರ್ಪಾಡು ಮಾಡುತ್ತಿದ್ದೆನು. ಆ ಬುಲೆಟಿನ್‍ಗಳು ಎಲ್ಲಿ ಮುದ್ರಣವಾಗುತ್ತಿದ್ದವು, ಹೇಗೆ ಹಂಚಲ್ಪಡುತ್ತಿದ್ದವು ಎಂಬುದು ಪೊಲೀಸಿನವರಿಗೆ ಒಂದು ಸಮಸ್ಯೆಯಾಗಿತ್ತು. ಕೆಲದಿನಗಳ ನಂತರ ಯಾವ ಮುದ್ರಣಾಲಯದವರೂ ನನಗೆ ಮುದ್ರಿಸಿಕೊಡಲು ಮುಂದೆ ಬರಲಿಲ್ಲ; ಅಧೈರ್ಯಪಟ್ಟರು. ಇದಕ್ಕೆ ಕಾರಣ ಆ ಪತ್ರಿಕೆಗಳನ್ನು ಮುದ್ರಿಸುವ, ಪ್ರಕಟಿಸುವ ಮತ್ತು ಓದುವವರ ಮೇಲೆ ಕ್ರಮ ಜರುಗಿಸುವುದು, ಮುದ್ರಣಾಲಯಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಮುಂತಾದ ತೀವ್ರ ಕಾರ್ಯಕ್ರಮ ಸರ್ಕಾರ ಇಟ್ಟುಕೊಂಡಿತ್ತು. ಒಂದು ಪತ್ರಿಕೆ ಮುಟ್ಟುಗೋಲು ಹಾಕಿಕೊಂಡರೆ ಇನ್ನೊಂದು ಹೆಸರಿನಲ್ಲಿ ಪತ್ರಿಕೆ ಬರುತ್ತಿತ್ತು. ‘ತ್ರಿಶೂಲ’, ‘ಕ್ರಾಂತಿ’, ‘ಸಮರ’, ‘ಕಹಳೆ’ ಮುಂತಾದ ಹೆಸರಿನ ಪತ್ರಿಕೆಗಳು ಆಗ ಪ್ರಚಾರದಲ್ಲಿದ್ದವು.”

ಪತ್ರಿಕೆಗಳನ್ನು ಮುದ್ರಿಸಲು ಮುದ್ರಣಾಲಯಗಳೇ ಸಿಗಲಿಲ್ಲವೆಂದು ಆರಾಧ್ಯರ ತಂಡ ತಮ್ಮ ವಿಧಾನದಿಂದ ಹಿಂದೆ ಸರಿಯಲಿಲ್ಲ. ಸೈಕ್ಲೋಸ್ಟೈಲ್ ಯಂತ್ರ ತಂದು ಪತ್ರಿಕೆಗಳನ್ನು, ಬುಲೆಟಿನ್‍ಗಳನ್ನು ಪ್ರಕಟಿಸಲಾರಂಭಿಸಿದರು. ಆರಾಧ್ಯರ ಜೊತೆಯಲ್ಲಿದ್ದ ಅನೇಕ ಮಿತ್ರರು ಒಬ್ಬೊಬ್ಬರಾಗಿ ದಸ್ತಗಿರಿಯಾದರು. ಆದರೆ ಇಂತಹ ವಿಷಮ ಪರಿಸ್ಥಿತಿಯಲ್ಲೂ ಅವರಿಗೆ ಒತ್ತಾಸೆಯಾಗಿ ನಿಂತ ಕೆಲವು ಮಹಿಳೆಯರು ಗುಪ್ತವಾಗಿ ಸೈಕ್ಲೋಸ್ಟೈಲ್ ಮಾಡಿ ನೂರಾರು ಪ್ರತಿಗಳನ್ನು ಹಂಚಲು ನೆರವಾದರು. ಇಂತಹ ಕಾರ್ಯವನ್ನು ಬೇರೆಬೇರೆ ಹೆಸರಿನಲ್ಲಿ ಬೆಂಗಳೂರು ಮತ್ತು ತುಮಕೂರುಗಳಲ್ಲಿ ಆರಾಧ್ಯರು ನಡೆಸಿಕೊಂಡು ಹೋಗುತ್ತಿದ್ದರು. ಆದರೆ ಸುಮಾರು ಎರಡು ತಿಂಗಳೊಳಗಾಗಿ ಸ್ವತಃ ಆರಾಧ್ಯರನ್ನೂ ಸೈಕ್ಲೋಸ್ಟೈಲ್ ಮಷಿನ್ನಿನ ಸಮೇತ ದಸ್ತಗಿರಿ ಮಾಡಿ ವೃತ್ತಪತ್ರಿಕಾ ಕಾನೂನು ಪ್ರಕಾರ ಮೊಕದ್ದಮೆ ಹೂಡಿ ಆರು ತಿಂಗಳು ಕಾಲ ಜೈಲಿಗೆ ಕಳುಹಿಸಲಾಯಿತು. ಮುಂದೆ ಭಾರತ ಬಿಟ್ಟು ತೊಲಗಿ ಚಳುವಳಿಯ ವೇಳೆಯಲ್ಲೂ ಅವರು ಬುಲೆಟಿನ್ ಪ್ರಕಟಣೆಗಳನ್ನು ಮುಂದುವರಿಸಿದ್ದರು. ತುಮಕೂರಿನ ಖಾದಿ ಭಂಡಾರದ ನಂಜಪ್ಪ, ಪ್ರಹ್ಲಾದರಾವ್, ಎಂ. ಎಸ್. ಹನುಮಂತರಾವ್, ವಾಸು, ಜಿ. ವಿ. ನಾರಾಯಣ ಮೂರ್ತಿ, ಹನುಮಂತರಾಯ ಮುಂತಾದವರ ಬೆಂಬಲ ಆರಾಧ್ಯರಿಗಿತ್ತು. ಅವರು ಮುಂದೆ 1952ರಲ್ಲಿ ‘ಆರ್ಯವಾಣಿ’ ಎಂಬ ಪತ್ರಿಕೆಯನ್ನೂ ಆರಂಭಿಸಿದರು.

1939ರ ಅರಣ್ಯ ಸತ್ಯಾಗ್ರಹಕ್ಕೂ ಮುನ್ನ ಪಾನ ನಿರೋಧ ಚಳುವಳಿ ಜಿಲ್ಲೆಯಾದ್ಯಂತ ಕಾವೇರುವ ಹೊತ್ತು ಡಿ. ಆರ್. ಮುದ್ದಪ್ಪ ಎಂಬವರು ‘ಗುಡುಗು’ ಎಂಬ ಸೈಕ್ಲೋಸ್ಟೈಲ್ಡ್ ಬುಲೆಟಿನ್ ಪ್ರಕಟಿಸುತ್ತಿದ್ದರು. ಪೊಲೀಸರ ಕಣ್ಣು ತಪ್ಪಿಸಿ ಅದರ ಪ್ರತಿಗಳನ್ನು ಜನರಿಗೆ ತಲುಪಿಸುತ್ತಿದ್ದರು. ಭೂಗತ ಪತ್ರಿಕೆಗಳನ್ನು ಪ್ರಕಟಿಸುವಲ್ಲಿ ಸಕ್ರಿಯರಾಗಿದ್ದ ಇನ್ನೊಬ್ಬ ಹೋರಾಟಗಾರರು ಮಾಯಸಂದ್ರದ ಮಾ. ನಂ. ಶ್ರೀಕಂಠಯ್ಯ. ಎಳೇ ವಯಸ್ಸಿನಿಂದಲೇ ರಾಷ್ಟ್ರೀಯ ವಿಚಾರಗಳೆಡೆಗೆ ಆಕರ್ಷಿತರಾಗಿದ್ದ ಶ್ರೀಕಂಠಯ್ಯ 1928ರಿಂದಲೇ ಸ್ವಾತಂತ್ರ್ಯ ಚಳುವಳಿಯ ಸೆಳವಿಗೆ ಸಿಕ್ಕರು. ಅಸಹಕಾರ ಚಳುವಳಿಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡ ಅವರು ತುರುವೇಕೆರೆ, ದಂಡಿನಶಿವರ, ಶೀಗೇಹಳ್ಳಿ, ದಬ್ಬೆಗಟ್ಟ, ಬಾಣಸಂದ್ರ ಮುಂತಾದೆಡೆಗಳಲ್ಲಿ ಸಭೆ, ಮೆರವಣಿಗೆ ಆಯೋಜಿಸುವಲ್ಲಿ ಮುಂಚೂಣಿ ವಹಿಸಿದರು. ಶಾಲೆಗಳ ಬಹಿಷ್ಕಾರ, ಈಚಲುಮರಗಳ ನಾಶ, ತಂತಿ ಕಡಿತ, ಹೆಂಡದಂಗಡಿ ದಹನದಂತಹ ಕಾರ್ಯಕ್ರಮಗಳನ್ನು ಅವ್ಯಾಹತವಾಗಿ ರೂಪಿಸಿದರು. ಈ ಬಗ್ಗೆ ಕರಪತ್ರಗಳನ್ನು ಅಚ್ಚು ಹಾಕಿಸಿ ಹಳ್ಳಿಹಳ್ಳಿಗಳಲ್ಲಿ ಹಂಚಲು ವ್ಯವಸ್ಥೆ ಮಾಡಿದರು. ಮಾಯಸಂದ್ರದ ಬೆಟ್ಟಗುಡ್ಡಗಳಲ್ಲಿ ಅವಿತಿದ್ದು ಸೈಕ್ಲೋಸ್ಟೈಲ್ ಮೂಲಕ ಸುದ್ದಿಗಳನ್ನು ಮುದ್ರಿಸಿ ನಾಗಮಂಗಲ, ಕುಣಿಗಲ್, ಚನ್ನರಾಯಪಟ್ಟಣ ಮುಂತಾದ ಸ್ಥಳಗಳಿಗೆ ಹಂಚುವ ವ್ಯವಸ್ಥೆ ಮಾಡುತ್ತಿದ್ದರು. ಶ್ರೀಕಂಠಯ್ಯನವರು ಮುಂದೆ ‘ಜನವಾಣಿ’ ಮತ್ತು ‘ವಿಶ್ವಕರ್ನಾಟಕ’ ಪತ್ರಿಕೆಗಳಿಗೆ ಪ್ರತಿನಿಧಿಯಾಗಿಯೂ ಇದ್ದರು.   

ತುಮಕೂರಿನ ಭೂಗತ ಪತ್ರಿಕೆಗಳು ಜಿಲ್ಲೆಯ ಗಡಿಯಾಚೆಗೂ ತಮ್ಮ ಕಾರ್ಯವ್ಯಾಪ್ತಿ, ಪ್ರಭಾವ ವಿಸ್ತರಿಸಿಕೊಂಡಿದ್ದವು. 1932ರ ಕರ ನಿರಾಕರಣಾ ಚಳುವಳಿ ಕಾರವಾರ ಜಿಲ್ಲೆಯಲ್ಲಿ ನಡೆಯುತ್ತಿರುವಾಗ ಇಲ್ಲಿಂದಲೇ ಬುಲೆಟಿನ್‍ಗಳನ್ನು ಸೈಕ್ಲೋಸ್ಟೈಲ್ ಮಾಡಿ ಕಳುಹಿಸಲಾಗುತ್ತಿತ್ತು ಎಂದು ಚಳುವಳಿಗಾರ ಬಿ. ಸಿ. ನಂಜುಂಡಯ್ಯ ಸ್ಮರಿಸಿಕೊಂಡಿದ್ದಾರೆ. ತುಮಕೂರಿನವರೇ ಆದ ನಂಜುಂಡಯ್ಯ 1948-56ರ ಅವಧಿಗೆ ಶಾಸಕರೂ, 1957-66ರ ಅವಧಿಗೆ ಸಂಸದರೂ ಆಗಿದ್ದರು. ತುರುವೇಕೆರೆ ಮಾಯಸಂದ್ರ ಮೂಲದ ಸ್ವಾತಂತ್ರ್ಯ ಹೋರಾಟಗಾರ ಎಂ. ಎನ್. ಸೀತಾರಾಮಯ್ಯನವರು ಆರಂಭಿಸಿದ ‘ಪೌರವಾಣಿ’ ಪತ್ರಿಕೆಯೂ ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರದ ಸ್ಥಾಪನೆ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತು. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತುಮಕೂರಿನ ಎಚ್. ಆರ್. ಗುಂಡೂರಾವ್ ಅವರು ಮುಂದೆ 1954ರಲ್ಲಿ ‘ವಿಜಯವಾಣಿ’ ಪತ್ರಿಕೆಯನ್ನು ಆರಂಭಿಸಿದ್ದು ಕೂಡ ಉಲ್ಲೇಖಾರ್ಹ ವಿಚಾರ.

ಜನತೆಯಲ್ಲಿ ರಾಷ್ಟ್ರೀಯಪ್ರಜ್ಞೆ, ದೇಶಾಭಿಮಾನ ಮೂಡಿಸುವ ಮೂಲಕ ಸ್ವಾತಂತ್ರ್ಯ ಹೋರಾಟವನ್ನು ಪೋಷಿಸಿದ ಕೀರ್ತಿ ಹೊಂದಿರುವ ತುಮಕೂರು ಜಿಲ್ಲೆಯ ಪತ್ರಿಕೋದ್ಯಮ ಇಂದಿಗೂ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಅಭಿನಂದನೀಯ. ತುಮಕೂರು ಜಿಲ್ಲೆಯ ಅನೇಕ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಮಾಧ್ಯಮರಂಗದಲ್ಲಿ ಹೆಸರು ಮಾಡಿರುವುದು ಕೂಡ ಪ್ರಶಂಸನೀಯ.

- ಸಿಬಂತಿ ಪದ್ಮನಾಭ ಕೆ. ವಿ.

ಬುಧವಾರ, ಆಗಸ್ಟ್ 18, 2021

ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಪತ್ರಿಕೆಗಳು

ವಿದ್ಯಾರ್ಥಿ ಪಥಆಗಸ್ಟ್ 2021 ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳು ವಹಿಸಿದ ಪಾತ್ರ ಅವಿಸ್ಮರಣೀಯ. ಒಂದೆಡೆ ರಾಷ್ಟ್ರೀಯ ಆಂದೋಲನದ ಕಿಚ್ಚನ್ನು ದೇಶದ ಮೂಲೆಮೂಲೆಗೆ ಪಸರಿಸುತ್ತಲೇ, ಇನ್ನೊಂದೆಡೆ ಬ್ರಿಟಿಷರ ಎದೆಯಲ್ಲಿ ನಡುಕವನ್ನು ಹುಟ್ಟಿಸಿದ ಹೆಗ್ಗಳಿಕೆ ಪತ್ರಿಕೆಗಳದ್ದು. ಹಾಗೆ ನೋಡಿದರೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವೂ ಪತ್ರಿಕೋದ್ಯಮದ ಇತಿಹಾಸವೂ ಜತೆಜತೆಯಾಗಿ ಸಾಗುತ್ತದೆ. ಸ್ವಾತಂತ್ರ್ಯ ಚಳುವಳಿ ತೀವ್ರ ಸ್ವರೂಪ ಪಡೆದಂತೆಲ್ಲಾ ಪತ್ರಿಕೋದ್ಯಮದ ಬೇರುಗಳು ಕೂಡ ವಿಸ್ತಾರಗೊಳ್ಳುತ್ತಾ ಹೋದವು. ಸ್ವಾತಂತ್ರ್ಯ ಚಳುವಳಿ, ರಾಷ್ಟ್ರೀಯತೆಯ ಭಾವ ಹಾಗೂ ಪತ್ರಿಕಾಲೋಕಗಳು ಒಟ್ಟೊಟ್ಟಿಗೆ ಬೆಳೆದವು. ಅನೇಕ ಮಂದಿ ಸ್ವಾತಂತ್ರ್ಯ ಹೋರಾಟಗಾರರು ಸ್ವತಃ ಪತ್ರಕರ್ತರಾಗಿದ್ದರು; ಪತ್ರಿಕೆಗಳನ್ನು ಸ್ವಾತಂತ್ರ್ಯ ಹೋರಾಟದ ಪ್ರೇರಕ ಸಾಧನಗಳೆಂದು ಬಲವಾಗಿ ನಂಬಿದ್ದರು.


ಇನ್ನೊಂದು ಪ್ರಮುಖ ವಿಚಾರವೆಂದರೆ, ನಮ್ಮ ಪತ್ರಿಕೋದ್ಯಮದ ಇತಿಹಾಸದ ಒಳಗೆಯೇ ಒಂದು ಸ್ವಾತಂತ್ರ್ಯಕ್ಕಾಗಿನ ಹೋರಾಟದ ಗಾಥೆಯಿದೆ. ಅದು ಪತ್ರಿಕಾ ಸ್ವಾತಂತ್ರ್ಯದ ಹೋರಾಟ; ಪತ್ರಿಕೆಗಳು ಹಾಗೂ ಪತ್ರಕರ್ತರು ತಮ್ಮ ಅಸ್ತಿತ್ವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟ. ಪತ್ರಿಕೆಗಳಿಂದ ಯಾವ ಕಾಲಕ್ಕೂ ತಮಗೆ ತೊಂದರೆ ತಪ್ಪಿದ್ದಲ್ಲವೆಂದು ತಿಳಿದ ಬ್ರಿಟಿಷರು ಒಂದರ ಮೇಲೊಂದರತೆ ಪತ್ರಿಕಾ ಶಾಸನಗಳನ್ನು ಜಾರಿಗೊಳಿಸುತ್ತಾ ಹೋದರು. ಪತ್ರಿಕೆಗಳ ಬಾಯಿಮುಚ್ಚಿಸಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದರು. ಅದಕ್ಕೆ ಪ್ರತಿಯಾಗಿ ನಮ್ಮ ಪತ್ರಿಕಾಲೋಕವೂ ಇನ್ನಷ್ಟು ಬಲಿಷ್ಟವಾಗುತ್ತಲೇ ಹೋಯಿತು- ಕೆಳಕ್ಕೆ ಬಡಿದಷ್ಟೂ ಹೆಚ್ಚು ಚೈತನ್ಯದಿಂದ ಚಿಮ್ಮುವ ಚೆಂಡಿನ ಹಾಗೆ. ಭಾರತದ ಪತ್ರಿಕೋದ್ಯಮದ ಇತಿಹಾಸವೆಂದರೆ ಪತ್ರಿಕಾ ಸ್ವಾತಂತ್ರ್ಯಕ್ಕಾಗಿನ ನಡೆದ ಹೋರಾಟದ ಇತಿಹಾಸ ಎಂಬ ಮಾತೂ ಇದೆ.

ಭಾರತದ ಮೊದಲ ಪತ್ರಿಕೆ ‘ಬೆಂಗಾಲ್ ಗಜೆಟ್’ (1780) ಅನ್ನು ಆರಂಭಿಸಿದ ಜೇಮ್ಸ್ ಆಗಸ್ಟಸ್ ಹಿಕ್ಕಿಯೇ ಕಂಪೆನಿ ಸರ್ಕಾರದಿಂದ ಸಾಕಷ್ಟು ದಬ್ಬಾಳಿಕೆಗೆ ಒಳಗಾಗಬೇಕಾಯಿತು. ಆತ ಸ್ವತಃ ಈಸ್ಟ್ ಇಂಡಿಯಾ ಕಂಪೆನಿಯ ನೌಕರನಾಗಿದ್ದವನು. ಎರಡು ವರ್ಷ ಪತ್ರಿಕೆ ನಡೆಸುವುದೇ ಅವನಿಗೆ ಹರಸಾಹಸ ಆಗಿಹೋಯಿತು. ಅಷ್ಟರಮಟ್ಟಿಗೆ ಪ್ರಭುತ್ವ ಆತನ ಬೆನ್ನಿಗೆ ಬಿದ್ದಿತ್ತು. ತನ್ನ ಪ್ರಕಟಣೆಯುದ್ದಕ್ಕೂ ಬೆಂಗಾಲ್ ಗೆಜೆಟ್ ಆಗಿನ ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್ನ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.

ಭಾರತದ ಪತ್ರಿಕಾ ಇತಿಹಾಸದ ಆರಂಭಿಕ ವರ್ಷಗಳಲ್ಲಿ ಹೆಚ್ಚಿನ ಪತ್ರಿಕೆಗಳನ್ನು ಯುರೋಪಿಯನ್ನರೇ ಆರಂಭಿಸಿದ್ದರು. ಕುತೂಹಲಕರ ಅಂಶವೆಂದರೆ ಭಾರತದ ಸ್ವಾತಂತ್ರ್ಯವನ್ನು ಬೆಂಬಲಿಸಿದವರಲ್ಲೂ ಸಾಕಷ್ಟು ಮಂದಿ ಯುರೋಪಿಯನ್ನರಿದ್ದಾರೆ. ಅವರಲ್ಲಿ ಅನೇಕರು ಪತ್ರಕರ್ತರೂ ಆಗಿದ್ದರು. ‘ಕಲ್ಕತ್ತ ಜರ್ನಲ್’ (1818) ಆರಂಭಿಸಿದ ಜೇಮ್ಸ್ ಸಿಲ್ಕ್ ಬಕಿಂಗ್‌ಹ್ಯಾಮ್ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯುರೋಪಿಯನ್ನರಲ್ಲಿ ಮೊದಲಿಗ. ಇನ್ನೊಬ್ಬ ಬ್ರಿಟಿಷ್ ಪತ್ರಕರ್ತ ಬಿ. ಜಿ. ಹಾರ್ನಿಮನ್ ಭಾರತದ ಸ್ವಾತಂತ್ರ್ಯದ ಪ್ರಬಲ ಪ್ರತಿಪಾದಕನಾಗಿದ್ದು ಬ್ರಿಟಿಷರಿಗೆ ನುಂಗಲಾರದ ತುತ್ತಾಗಿದ್ದ. ಅನೇಕ ಭಾರತೀಯ ಪತ್ರಕರ್ತರಿಗೆ ಸ್ಫೂರ್ತಿಯಾಗಿದ್ದ.

‘ಭಾರತೀಯ ಪುನರುತ್ಥಾನದ ಪಿತಾಮಹ’ ಎಂದು ಹೆಸರಾಗಿದ್ದ ಶ್ರೇಷ್ಠ ಸಮಾಜಸುಧಾರಕ ರಾಜಾ ರಾಮಮೋಹನ ರಾಯರಿಗೂ ತಮ್ಮ ಧ್ಯೇಯೋದ್ದೇಶಗಳನ್ನು ಸಾಧಿಸಲು ಪತ್ರಿಕೆಗಳು ಪ್ರಮುಖ ಪರಿಕರಗಳಾಗಿದ್ದವು. ಜನರನ್ನು ವೈಚಾರಿಕವಾಗಿ ತಲುಪಲು ಪತ್ರಿಕೆ ಒಂದು ಸಮರ್ಥ ಮಾಧ್ಯಮ ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಂಡ ಮೊದಲ ಭಾರತೀಯರಾದ ಅವರು ಸಂಬದ್ ಕೌಮುದಿ, ಮೀರತ್-ಉಲ್-ಅಕ್ಬರ್, ಬ್ರಾಹ್ಮಿನಿಕಲ್ ಮ್ಯಾಗಜಿನ್, ಬ್ರಾಹ್ಮಿನ್ ಸೇವಡಿ ಪತ್ರಿಕೆಗಳನ್ನು ನಡೆಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಅವರು ನಡೆಸಿದ ಹೋರಾಟವೂ ದೊಡ್ಡದೇ. 1823ರಲ್ಲಿ ಕಂಪೆನಿ ಸರ್ಕಾರ ಪತ್ರಿಕಾ ನಿಯಂತ್ರಣ ಕಾಯ್ದೆ ಜಾರಿಮಾಡಲು ಹೊರಟಾಗ ಅದನ್ನು ಸಾರ್ವಜನಿಕವಾಗಿ ವಿರೋಧಿಸಿ ಸರ್ಕಾರಕ್ಕೆ ಬಲವಾದ ಸಂದೇಶ ಕಳಿಸಿದವರು ಅವರು. ಸಮಾನ ಮನಸ್ಕರೊಂದಿಗೆ ಅವರು ಸರ್ಕಾರಕ್ಕೆ ಸಲ್ಲಿಸಿದ ಲಿಖಿತ ಮನವಿ ‘ಭಾರತದ ಪತ್ರಿಕಾಲೋಕದ ಏರೋಪಗಿಟಿಕಾ’ ಎಂದೇ ಪ್ರಸಿದ್ಧ. ರಾಮಮೋಹನರಾಯರಿಗೆ ‘ದೇಶಭಾಷಾ ಪತ್ರಿಕೋದ್ಯಮದ ಪಿತಾಮಹ’ ಎಂಬ ಶ್ರೇಷ್ಠ ಮನ್ನಣೆಯೂ ಇದೆ.

1857ರ ಸಂಗ್ರಾಮದ ಬಳಿಕ:

ಭಾರತೀಯ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕುದೆಸೆ ಒದಗಿದ್ದು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಳಿಕ. ಒಂದು ದೃಷ್ಟಿಯಲ್ಲಿ ಈ ಘಟನೆ ಭಾರತೀಯ ವೃತ್ತಪತ್ರಿಕೆಗಳ ಬೆಳವಣಿಗೆಗೆ ತಾತ್ಕಾಲಿಕ ಅಡ್ಡಿಯುಂಟುಮಾಡಿದರೂ, ಅಲ್ಲಿಂದ ನಂತರ ಪತ್ರಿಕೆಗಳು ಭಿನ್ನ ಹಾದಿ ಹಿಡಿದವು. ಶಿಶಿರ್ ಕುಮಾರ್ ಘೋಷರ ‘ಅಮೃತ ಬಜಾರ್ ಪತ್ರಿಕೆ’, ತಿಲಕರ ‘ಕೇಸರಿ’, ಜಿ. ಸುಬ್ರಹ್ಮಣ್ಯ ಅಯ್ಯರ್ ಹಾಗೂ ವೀರರಾಘವಾಚಾರಿಯವರ ‘ದಿ ಹಿಂದೂ’, ಪಂಡಿತ ಮದನ ಮೋಹನ ಮಾಳವೀಯರ ‘ಅಭ್ಯುದಯ’ ಮೊದಲಾದ ಪತ್ರಿಕೆಗಳು ಬ್ರಿಟಿಷ್ ವಿರೋಧಿ ಸತ್ಯವನ್ನು ಹೇಳುವ ಕೆಲಸವನ್ನು ಸ್ವಯಂಪ್ರೇರಣೆಯಿಂದ ಹಾಗೂ ದಿಟ್ಟತನದಿಂದ ಮಾಡುತ್ತಾಹೋದವು.

ಬ್ರಿಟಿಷರ ಕಣ್ಣಲ್ಲಿ ಸಿಪಾಯಿ ದಂಗೆ ಎನಿಸಿಕೊಂಡ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪತ್ರಿಕೆಗಳಿಂದ ದೊರೆತ ವ್ಯಾಪಕ ಬೆಂಬಲ ನೋಡಿ, ಅವುಗಳನ್ನು ಹೇಗಾದರೂ ಮಾಡಿ ಹೊಸಕಿ ಹಾಕುವ ಯೋಚನೆಗಳು ಬ್ರಿಟಿಷರಲ್ಲಿ ಮೂಡತೊಡಗಿದವು.  ಅಲ್ಲಿಂದ ಪತ್ರಿಕಾ ನಿರ್ಬಂಧಗಳ ಸರಣಿ ಆರಂಭವಾಯಿತು. 1857 ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹೊಸದೊಂದು ಅಧ್ಯಾಯವಾಗಿದ್ದರೆ, ಭಾರತೀಯ ಪತ್ರಿಕೆಗಳ ಪಾಲಿಗೆ ಕರಾಳಯುಗದ ಆರಂಭವೂ ಆಯಿತು. 1857ರಲ್ಲೇ ಜಾರಿಗೆ ಬಂದ ಪತ್ರಿಕಾ ಕಾನೂನಿಗೆ ಪತ್ರಿಕೆ ಹಾಗೂ ಪುಸ್ತಕಗಳ ಪ್ರಸಾರವನ್ನು ನಿಯಂತ್ರಿಸುವ ಉದ್ದೇಶವೇ ಇತ್ತು. ಅದರ ಮೊದಲ ಬಲಿಯೇ ದ್ವಾರಕಾನಾಥ ಠಾಕೂರ್ ಮತ್ತು ಇತರ ದೇಶಪ್ರೇಮಿಗಳು ನಡೆಸುತ್ತಿದ್ದ ‘ಬೆಂಗಾಲ್ ಹರಕಾರು’ ಎಂಬ ಪತ್ರಿಕೆ.

ದೇಶಭಾಷಾ ಪತ್ರಿಕೆಗಳಾದ ಬಾಂಬೆ ಸಮಾಚಾರ, ಜಾಮೆ-ಜಮ್‌ಷೀರ್, ರಾಸ್ತ್ಗಾಫ್ತರ್ ಪತ್ರಿಕೆಗಳು ಮೊದಲನೇ ಸ್ವಾತಂತ್ರ್ಯ ಸಂಗ್ರಾಮವನ್ನು ಕೊಂಡಾಡಿದವು. ಅದರ ಮಹತ್ವವನ್ನು ಪ್ರಭಾವಶಾಲಿಯಾಗಿ ಓದುಗರಿಗೆ ತಲುಪಿಸಿದವು. ಇದನ್ನು ಮುಂಬೈಯ ಗುಜರಾತಿ ಪತ್ರಿಕಾ ಲೋಕವೂ ಬೆಂಬಲಿಸಿತು. ಹರೀಶ್‌ಚಂದ್ರ ಮುಖರ್ಜಿಯವರ ‘ಹಿಂದೂ ಪೇಟ್ರಿಯಟ್’ ಎಂಬ ಪತ್ರಿಕೆಯದ್ದು ಇಲ್ಲಿ ಪ್ರಮುಖ ಪಾತ್ರ. 

ಈಶ್ವರಚಂದ್ರ ವಿದ್ಯಾಸಾಗರ ಮತ್ತು ದ್ವಾರಕಾನಾಥ ವಿದ್ಯಾಭೂಷಣರು ನಡೆಸುತ್ತಿದ್ದ ‘ಸೋಮ್ ಪ್ರಕಾಶ್’ ಎಂಬ ಬಂಗಾಳಿ ಪತ್ರಿಕೆ ರಾಜಕೀಯ ಸ್ವಾತಂತ್ರ್ಯ ತತ್ವಗಳನ್ನು ಪ್ರತಿಪಾದಿಸಿತು. ಅದರಲ್ಲಿ ಪ್ರಕಟವಾಗುತ್ತಿದ್ದ ಬಿರುಸಾದ ಸಂಪಾದಕೀಯ, ಲೇಖನಗಳನ್ನು ಎದುರಿಸುವ ಶಕ್ತಿ ಸರ್ಕಾರಕ್ಕೆ ಇದ್ದಂತಿರಲಿಲ್ಲ. ಅದನ್ನೂ ಪತ್ರಿಕಾ ಕಾನೂನು ತಡೆದಾಗ ‘ನವಾಭಿ ಬಾಕರ್’ ಎಂಬ ಹೊಸ ಹೆಸರಿನೊಂದಿಗೆ ಪ್ರಕಟವಾಗತೊಡಗಿತು.

ಲಾರ್ಡ್ ಲಿಟ್ಟನ್ ಪ್ರಕಾರವಂತೂ ಸರ್ಕಾರದ ವಿರುದ್ಧ ಯಾವುದೇ ಸುದ್ದಿ, ಲೇಖನವನ್ನು ಪ್ರಕಟಿಸುವುದು ಕೂಡ ರಾಜದ್ರೋಹಕ್ಕೆ ಸಮನಾಗಿತ್ತು. ಈ ರಾಜದ್ರೋಹವನ್ನು ಹತ್ತಿಕ್ಕಲೆಂದೇ ಆತ 1878ರಲ್ಲಿ ಇನ್ನೊಂದು ಪತ್ರಿಕಾಶಾಸವನ್ನು ಜಾರಿಗೆ ತಂದ. ಇದರಲ್ಲಿ ದೇಶಭಾಷಾ ಪತ್ರಿಕೆಗಳ ಸುದ್ದಿನಿಯಂತ್ರಣಕ್ಕೆ ಅವಕಾಶವಿತ್ತು. ಆಗಷ್ಟೇ ಬೆಳೆಯತ್ತಿದ್ದ ಭಾರತೀಯ ಭಾಷೆಗಳ ಪತ್ರಿಕೋದ್ಯಮಕ್ಕೂ, ಸ್ವಾತಂತ್ರ್ಯ ಹೋರಾಟಕ್ಕೂ ಈ ಶಾಸನ ಕೊಡಲಿಪೆಟ್ಟು ನೀಡಿದ ಹಾಗಾಯಿತು. ಈ ಶಾಸನದ ಏಟಿನಿಂದ ತಪ್ಪಿಸಿಕೊಳ್ಳಲು ‘ಅಮೃತ ಬಜಾರ್ ಪತ್ರಿಕಾ’ ರಾತೋರಾತ್ರಿ ಬಂಗಾಳಿಯಿAದ ಇಂಗ್ಲಿಷ್ ಭಾಷೆಗೆ ಬದಲಾಯಿತು.

ಅಖಿಲ ಭಾರತ ಕಾಂಗ್ರೆಸ್‌ನ ಹುಟ್ಟು ಪತ್ರಿಕೋದ್ಯಮಕ್ಕೆ ಹೊಸ ಹುರುಪು ನೀಡಿತು. ದಿನಪತ್ರಿಕೆಗಳ ಬೆಳವಣಿಗೆ ದೃಷ್ಟಿಯಿಂದ ಪತ್ರಿಕಾರಂಗದಲ್ಲಿ ಸಾಕಷ್ಟು ಉತ್ಸಾಹ ಕಾಣಿಸಿಕೊಂಡಿತು. ಭಾರತೀಯ ನಾಯಕರುಗಳ ಭಾಷಣಗಳನ್ನು, ರಾಜಕೀಯ ವಿದ್ಯಮಾನಗಳನ್ನು ವಿವರವಾಗಿ ಪ್ರಕಟಿಸುವ ಪ್ರವೃತ್ತಿ ಆರಂಭವಾಯಿತು. ‘ದೇಶಭಾಷಾ ಪತ್ರಿಕೆಗಳ ಭಾಷೆಯಲ್ಲಿ ಸಮತೂಕ ತರುವ ಮತ್ತು ಸಾರ್ವಜನಿಕ ಚರ್ಚೆಗಳಲ್ಲಿ ನ್ಯಾಯವಿಮರ್ಶಕ ಭಾವನೆಯನ್ನುಂಟುಮಾಡುವ’ ಉದ್ದೇಶದಿಂದ 1891ರಲ್ಲಿ ಭಾರತದಲ್ಲಿ ಪ್ರಥಮ ಪತ್ರಿಕಾ ಸಂಘಟನೆ ‘ನೇಟಿವ್ ಪ್ರೆಸ್ ಅಸೋಯೇಶನ್’ ಆರಂಭವಾದದ್ದು ಕೂಡ ಈ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯೇ.

ತಿಲಕರ ಮರಾಠ ಹಾಗೂ ಕೇಸರಿ ಪತ್ರಿಕೆಗಳು ಭಾರತೀಯರ ಅಂತರಂಗವನ್ನು ಬಹುವಾಗಿ ತಟ್ಟಿದವು. ತಿಲಕರು ತಮ್ಮ ವಾಕ್ಚಾತುರ್ಯದಿಂದ ಹೋರಾಟಗಾರರನ್ನು ಬಡಿದೆಬ್ಬಿಸಬಲ್ಲ ಸಾಮರ್ಥ್ಯ ಹೊಂದಿದ್ದರೆ ಅವರ ಲೇಖನಗಳು ಕ್ರಾಂತಿಯ ಕಿಡಿಯನ್ನು ಹಚ್ಚುವಷ್ಟು ಪ್ರಖರವಾಗಿದ್ದವು. 1897ರಲ್ಲಿ ಅವರು ಕೇಸರಿಯಲ್ಲಿ ಬರೆದ ಲೇಖನವೊಂದು ರಾಜದ್ರೋಹಕರವಾಗಿದೆಯೆಂದು ಆರೋಪಿಸಿ ಎರಡು ವರ್ಷ ಕಠಿಣ ಶಿಕ್ಷೆ ವಿಧಿಸಲಾಯಿತು; ಇನ್ನೊಂದು ಸಂದರ್ಭವನ್ನು ಬಳಸಿ ಆರು ವರ್ಷ ಗಡೀಪಾರು ಮಾಡಲಾಯಿತು.

20ನೇ ಶತಮಾನದಲ್ಲಿ:

20ನೇ ಶತಮಾನದ ಆರಂಭ ರಾಷ್ಟ್ರೀಯತೆ ಒಂದು ಧರ್ಮವಾಗಿ ಬೆಳೆದ ಕಾಲ. 1905ರ ಬಂಗಾಳದ ವಿಭಜನೆಯನ್ನು ಪತ್ರಿಕೆಗಳು ವಿರೋಧಿಸಿ ಬರೆದವು. ಬ್ರಿಟಿಷ್ ಸರ್ಕಾರದ ಒಡೆದು ಆಳುವ ನೀತಿಯನ್ನು ಟೀಕಿಸಿದವು. ಹಾಗೆಯೇ, ಸ್ವದೇಶಿ ಚಳುವಳಿಯನ್ನು ಬೆಂಬಲಿಸಿದವು. ಆದರೆ ಮಾರ್ಲೆ ಮಿಂಟೋ ಸುಧಾರಣೆಗಳ ವಿಷಯದಲ್ಲಿ ಉದಾರವಾದಿ ಮತ್ತು ಉಗ್ರರಾಷ್ಟ್ರೀಯವಾದಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾದಂತೆ ಪತ್ರಿಕಾಲೋಕದಲ್ಲೂ ಎರಡು ಪಂಗಡಗಳಾದವು. ಇದೊಂದು ರೀತಿಯಲ್ಲಿ ಪತ್ರಿಕೆಗಳ ಸಂಘಟಿತ ಹೋರಾಟಕ್ಕೆ ಆದ ಒಂದು ಸಣ್ಣ ಹಿನ್ನಡೆಯೇ. ಆದರೂ ಎರಡೂ ಗುಂಪಿನ ಪತ್ರಿಕೆಗಳು ತಮ್ಮದೇ ಆದ ರೀತಿಯಲ್ಲಿ ಹೋರಾಟದ ಕಾವು ಉಳಿಸಿಕೊಂಡವು. ಸುಧಾರಣೆಗಳು ಅಪಕ್ಷವಾಗಿಯೆಂದು ಟೀಕಿಸಿದವು. ಸುಧಾರಣೆಗಳನ್ನು ಖಂಡಿಸಿದ ರಾಷ್ಟ್ರೀಯವಾದಿ ನಾಯಕರಿಗೆ ಜೈಲುಶಿಕ್ಷೆಯಾಯಿತು. ಪೂನಾದ ‘ಕೇಸರಿ’ ಹಾಗೂ ನಾಗಪುರದ ‘ದೇಶಸೇವಕ’ ಪತ್ರಿಕೆಗಳು ಉಗ್ರಪಂಥವನ್ನು ಬೆಂಬಲಿಸಿದವು. 1908ರ ಪತ್ರಿಕಾ ಶಾಸನದ ಪರಿಣಾಮವಾಗಿ ಏಳು ಮುದ್ರಣಾಲಯಗಳ ಜಪ್ತಿಯಾಯಿತು, ಐವರು ಸಂಪಾದಕರ ಮೇಲೆ ಮೊಕದ್ದಮೆ ಹೂಡಲಾಯಿತು, ಹಾಗೂ ಅನೇಕರಿಗೆ ಎಚ್ಚರಿಕೆ ನೀಡಲಾಯಿತು.

1910ರ ವೇಳೆಗೆ ಮಾಧವರಾವ್ ಮಧ್ಯೆ ಎಂಬವರು ‘ಹಿತವಾದ’ ಎಂಬ ಮರಾಠಿ ಪತ್ರಿಕೆಯನ್ನು ಆರಂಭಿಸಿದರು. 1913ರಲ್ಲಿ ಸರ್ವೆಂಟ್ಸ್ ಆಫ್ ಇಂಡಿಯಾ ಪತ್ರಿಕೆ ಅದರ ಮಾಲೀಕತ್ವ ವಹಿಸಿಕೊಂಡು ಇಂಗ್ಲಿಷ್ ಪತ್ರಿಕೆಯನ್ನಾಗಿ ಪರಿವರ್ತಿಸಿತು. ಅದೇ ವರ್ಷ ಫಿರೋಜ್ ಷಾ ಮೆಹ್ತಾ ‘ಬಾಂಬೆ ಕ್ರಾನಿಕಲ್’ ಆರಂಭಿಸಿದರು. ಪ್ರಸಿದ್ಧ ಪತ್ರಕರ್ತ ಬಿ. ಜಿ. ಹಾರ್ನಿಮನ್ ಅದರ ಸಂಪಾದಕರಾಗಿದ್ದರು. ಅನೇಕ ಸಂಕಷ್ಟಗಳ ನಡುವೆಯೂ ಸ್ವಾತಂತ್ರ್ಯ ಚಳುವಳಿಗೆ ಬೆಂಬಲ ನೀಡಿದ ಹಾರ್ನಿಮನ್ ಸ್ವತಂತ್ರ, ಮುಕ್ತ ಹಾಗೂ ನಿರ್ಭೀತ ಪತ್ರಿಕೋದ್ಯಮದ ಪ್ರವರ್ತಕರೂ ಆಗಿದ್ದರು.

ಆ ಕಾಲದ ಉರ್ದು ಪತ್ರಿಕೆಗಳು ಬ್ರಿಟಿಷರನ್ನು ಟೀಕಿಸಲು ಹಿಂಜರಿಯುತ್ತಿದ್ದ ಸಂದರ್ಭ ಮೌಲಾನಾ ಅಬುಲ್ ಕಲಾಂ ಆಜಾದ್ ‘ಅಲ್-ಹಿಲಾಲ್’ ಸ್ಥಾಪಿಸಿದರು. ಅಸಹಕಾರ ಚಳುವಳಿ ಉತ್ತುಂಗದಲ್ಲಿದ್ದ ಕಾಲದಲ್ಲಿ ಗಾಂಧೀವಾದಿ ಶಿವಪ್ರಸಾದ್ ಗುಪ್ತಾ ‘ಆಜ್’ ಎಂಬ ಹಿಂದಿ ಪತ್ರಿಕೆಯನ್ನು ಆರಂಭಿಸಿದರು.

1919ರ ಮಾಂಟೆಗೋ ಚೆಲ್ಮ್ಸ್’ಫರ್ಡ್  ಸುಧಾರಣೆಗಳ ಸಂದರ್ಭದಲ್ಲಿ ಮಂದಗಾಮಿಗಳು ತಮ್ಮ ಪಂಥವನ್ನು ಬಲಪಡಿಸಲು ಹೊಸ ಪತ್ರಿಕೆಯೊಂದರ ಅವಶ್ಯಕತೆ ಮನಗಂಡರು. ಪರಿಣಾವಾಗಿ ಪಂಡಿತ ಮದನಮೋಹನ ಮಾಳವೀಯರ ನೇತೃತ್ವದಲ್ಲಿ ‘ಲೀಡರ್’ ಎಂಬ ದಿನಪತ್ರಿಕೆ ಹುಟ್ಟಿಕೊಂಡಿತು. ಫಿರೋಜ್ ಷಾ ಮೆಹ್ತಾ, ಗೋಪಾಲಕೃಷ್ಣ ಗೋಖಲೆ ಮುಂತಾದವರು ಇದಕ್ಕೆ ಬೆಂಬಲ ನೀಡಿದರು. ಮಾಂಟೆಗೋ ಚೆಲ್ಮ್ಸ್’ಫರ್ಡ್  ಸುಧಾರಣೆಗಳ ಕಾರಣದಿಂದ ಭಾರತೀಯರಲ್ಲಿ ತೀವ್ರ ಅಸಮಾಧಾನ ಉಂಟಾದ ಹಿನ್ನೆಲಯಲ್ಲಿ ಅವುಗಳನ್ನು ಮರುಪರಿಶೀಲಿಸುವ ಉದ್ದೇಶದಿಂದ ಸೈಮನ್ ಆಯೋಗ ನೇಮಕವಾಯಿತು. ಆದರೆ ಸ್ವಾತಂತ್ರ್ಯ ಹೋರಾಟಗಾರರು ಇದಕ್ಕೆ ಪಂಥಗಳ ಭೇದವಿಲ್ಲದೆ ಒಕ್ಕೊರಲ ವಿರೋಧ ವ್ಯಕ್ತಪಡಿಸಿದರು ಮತ್ತು ಇದಕ್ಕೆ ಭಾರತದ ಪತ್ರಿಕೆಗಳು ಕೂಡ ದೊಡ್ಡ ಮಟ್ಟದ ಪ್ರಚಾರ ನೀಡಿದವು. ಪತ್ರಿಕೆಗಳು ತಮ್ಮ ಮುಕ್ಕಾಲು ಭಾಗವನ್ನೂ ಸೈಮನ್ ಆಯೋಗದ ವಿರೋಧದ ಸುದ್ದಿಗಳಿಗೆ ಮೀಸಲಿರಿಸಿದವು.

ಹಿಂದ್ ಸ್ವರಾಜ್ಯ, ಯುಗಾಂತರ, ಗುಜರಾತ್, ಶಕ್ತಿ, ಕಾಳ್, ಧರ್ಮ, ಹಿತೈಷಿ, ಖುಲ್ನವಾಸಿ, ಕಲ್ಯಾಣಿ, ಬೀದಾರಿ, ಪ್ರೇಮ, ವರ್ತಮಾನ್, ಆಕಾಶ್, ಕೇಸರಿ, ಕರ್ನಾಟಕ ವೈಭವ, ರಾಷ್ಟçಮತ, ವಿಶ್ವವೃತ್ತ, ನ್ಯೂ ಇಂಡಿಯಾ, ವಂದೇ ಮಾತರಂ, ಸಂಧ್ಯಾ, ಬೆಂಗಾಲಿ, ಹಿತವಾದಿ, ಡೆಕ್ಕಾ ಗಜೆಟ್, ನವಶಕ್ತಿ, ಸಹಾಯಕ್ ಮುಂತಾದ ಪತ್ರಿಕೆಗಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಸರ್ಕಾರದ ಗದಾಪ್ರಹಾರಕ್ಕೆ ತುತ್ತಾದವು. ಜಲಿಯನ್ ವಾಲಾಭಾಗ್ ಹತ್ಯಾಂಕಾಂಡವನ್ನು ಪತ್ರಿಕೆಗಳು ತೀವ್ರವಾಗಿ ವಿರೋಧಿಸಿದವು. ತಮಗೊದಗಬಹುದಾದ ತೊಂದರೆಗಳನ್ನೂ ಲೆಕ್ಕಿಸದೆ ಬ್ರಿಟಿಷರ ಪೈಶಾಚಿಕ ಕೃತ್ಯವನ್ನು ಉಗ್ರ ಪದಗಳಲ್ಲಿ ಜರೆದವು. 

ಮೂಲತಃ ಭಾರತದವರಲ್ಲದೇ ಹೋದರೂ ಸ್ವಾತಂತ್ರ್ಯ ಆಂದೋಲನವನ್ನು ಬೆಂಬಲಿಸಿದವರಲ್ಲಿ ಆ್ಯನಿಬೆಸೆಂಟ್ ಕೂಡ ಒಬ್ಬರು. ಅವರು ಅನೇಕ ರಾಷ್ಟ್ರೀಯವಾದಿ ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದರು. ತಿಲಕರ ಬೆಂಬಲದೊಂದಿಗೆ ಹೋಂ ರೂಲ್ ಚಳುವಳಿ ಆರಂಭಿಸಿದ ಅವರು ಅದಕ್ಕೆ ಪೂರಕವಾಗಿಯೇ ‘ಕಾಮನ್ ವೀಲ್’ ಹಾಗೂ ‘ನ್ಯೂ ಇಂಡಿಯಾ’ ಪತ್ರಿಕೆಗಳನ್ನು ಹೊರತಂದರು. ಸರ್ಕಾರ ಆ್ಯನಿಬೆಸೆಂಟರನ್ನೂ ರಾಜದ್ರೋಹದ ಆರೋಪದಲ್ಲಿ ಜೈಲಿಗೆ ತಳ್ಳಿದಾಗ ಮದ್ರಾಸ್‌ನ ‘ದಿ ಹಿಂದೂ’ ಅವರ ಬೆಂಬಲಕ್ಕೆ ನಿಂತಿತು. ಅವರನ್ನು ‘ಭಾರತೀಯ ಸ್ವಾತಂತ್ರ್ಯದ ನಂದಾದೀಪ’ ಎಂದು ಅರ್ಹವಾಗಿಯೇ ಕರೆಯಲಾಗಿದೆ. 1920ರಲ್ಲಿ ಮದ್ರಾಸ್ ಸಮೀಪದ ಅಡ್ಯಾರಿನಲ್ಲಿ ದೇಶದ ಮೊತ್ತಮೊದಲ ಪತ್ರಿಕಾ ಶಿಕ್ಷಣವನ್ನು ಆರಂಭಿಸಿದ ಹೆಗ್ಗಳಿಕೆಯೂ ಆ್ಯನಿಬೆಸೆಂಟರದ್ದೇ. ‘ನ್ಯೂ ಇಂಡಿಯಾ’ ಕಚೇರಿಯೇ ಕಲಿಕಾರ್ಥಿಗಳ ಪ್ರಯೋಗಾಲಯ ಆಗಿತ್ತು.

ಮೋತಿಲಾಲ ನೆಹರು ಹಾಗೂ ಸಿ. ಆರ್. ದಾಸ್ ಸ್ಥಾಪಿಸಿದ್ದ ಸ್ವರಾಜ್ಯ ಪಕ್ಷ ತನ್ನ ಅಭಿಪ್ರಾಯಗಳ ಪ್ರಸಾರಕ್ಕಾಗಿ ಅದಾಗಲೇ ಆಕಾಲಿ ಸಿಖ್ಖರಿಂದ ಸ್ಥಾಪಿತವಾಗಿದ್ದ ‘ಹಿಂದೂಸ್ಥಾನ್ ಟೈಮ್ಸ್’ ಅನ್ನು ಖರೀದಿಸಿದರು. ಅದಕ್ಕೆ ಮದನ ಮೋಹನ ಮಾಳವೀಯ, ಲಾಲಾ ಲಜಪತರಾಯ್, ರಾಜಾ ನರೇಂದ್ರನಾಥ್, ಎಂ. ಆರ್. ಜಯಕರ್ ಬೆಂಬಲವಿತ್ತು. ಬಂಗಾಳ ಪ್ರಾಂತದಲ್ಲಿ ಸ್ವರಾಜ್ಯ ಪಕ್ಷಕ್ಕೆ ಬೆಂಬಲ ನೀಡಲು ಸಿ. ಆರ್. ದಾಸ್ 1923ರಲ್ಲಿ ‘ಫಾರ್ವರ್ಡ್’ ಎಂಬ ಪತ್ರಿಕೆ ಆರಂಭಿಸಿದರು. ಅವರು ಅರವಿಂದ ಘೋಷರ ‘ವಂದೇ ಮಾತರಂ’ ಪತ್ರಿಕೆಗೆ ಕ್ರಮವಾಗಿ ಲೇಖನ ಬರೆಯುತ್ತಿದ್ದರು.

ಗಾಂಧೀಯುಗದ ಪತ್ರಿಕೋದ್ಯಮ:

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಪ್ರವೇಶ ಹೇಗೆ ಹೊಸ ಅಧ್ಯಾಯವನ್ನು ಆರಂಭಿಸಿತೋ, ಭಾರತೀಯ ಪತ್ರಿಕೋದ್ಯಮದಲ್ಲೂ ಹೊಸ ಹಾದಿಯನ್ನು ತೆರೆಯಿತು. ಗಾಂಧೀಜಿಯವರು ಸ್ವತಃ ಅಭಿಜಾತ ಪತ್ರಕರ್ತರಾಗಿದ್ದುದೇ ಇದಕ್ಕೆ ಪ್ರಮುಖ ಕಾರಣ. ಅವರಿಗೆ ದಕ್ಷಿಣ ಆಫ್ರಿಕಾದಲ್ಲಿ ‘ಇಂಡಿಯನ್ ಒಪಿನಿಯನ್’ ಪತ್ರಿಕೆ ನಡೆಸಿದ, ಅದರ ಮೂಲಕ ಹೋರಾಟಗಳನ್ನು ಸಂಘಟಿಸಿದ ಅನುಭವವಿತ್ತು. ತಮ್ಮ ತತ್ವ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದಕ್ಕೆ ಗಾಂಧೀಜಿಯವರಿಗೆ ಪತ್ರಿಕೆಗಳು ಪ್ರಧಾನ ಸಾಧನಗಳಾಗಿದ್ದವು. ಈ ವಿಚಾರದಲ್ಲಿ ಇಂಗ್ಲಿಷ್ ಪತ್ರಿಕೆಗಳಿಗಿಂತಲೂ ದೇಶಭಾಷಾ ಪತ್ರಿಕೆಗಳು ಹೆಚ್ಚಿನ ಪಾತ್ರ ವಹಿಸಬಲ್ಲವು ಎಂದು ಅವರಿಗೆ ತಿಳಿದಿತ್ತು. ಸತ್ಯ, ಅಹಿಂಸೆ, ಸತ್ಯಾಗ್ರಹ, ಚರಕ, ಖಾದಿ, ಪಾನನಿರೋಧ ಮೊದಲಾದ ಅವರ ವಿಶಿಷ್ಟ ಚಿಂತನೆಗಳನ್ನು ಪಸರಿಸಿ ಹಳ್ಳಿಹಳ್ಳಿಗೂ ಗಾಂಧೀವಾದವನ್ನು ಒಯ್ದ ಕೀರ್ತಿ ಪತ್ರಿಕೆಗಳಿಗೆ ಸಲ್ಲುತ್ತದೆ. ಅವರು ನಡೆಸಿದ ‘ಯಂಗ್ ಇಂಡಿಯಾ’, ‘ನವಜೀವನ’ ಹಾಗೂ ‘ಹರಿಜನ’ ಪತ್ರಿಕೆಗಳು ಕೂಡ ಅವರ ಒಟ್ಟಾರೆ ಹೋರಾಟದ ಮಾದರಿಯನ್ನೇ ಅನುಸರಿಸುತ್ತವೆ.

ಗಾಂಧೀಜಿಯವರ ಲೇಖನಗಳು ದೇಶದಾದ್ಯಂತ ವಿವಿಧ ಪತ್ರಿಕೆಗಳಲ್ಲಿ ಹಾಗೂ ವಿವಿಧ ಭಾಷೆಗಳಲ್ಲಿ ಪ್ರಕಟವಾಗುತ್ತಿದ್ದವು. ಸರಳ ಹಾಗೂ ನೇರ ವಾಕ್ಯಗಳ ಪ್ರಭಾವಶಾಲಿ ಬರವಣಿಗೆ ಅವರಿಗೆ ಕರತಲಾಮಲಕವಾಗಿತ್ತು. ಅಲಂಕಾರಿಕ, ಉತ್ಪೆçÃಕ್ಷೆಯ ಭಾಷೆಯಲ್ಲಿ ಅವರು ಬರೆಯುತ್ತಿರಲಿಲ್ಲ. ವಾಸ್ತವಾಂಶಗಳಿAದ ದೂರಸರಿಯುತ್ತಿರಲಿಲ್ಲ. ವಿವೇಚನಾರಹಿತ ಹೇಳಿಕೆಗಳನ್ನು ನೀಡುತ್ತಿರಲಿಲ್ಲ. ವಿಚಾರಗಳನ್ನು ಹರಡುವಲ್ಲಿ ಸುದ್ದಿಪತ್ರಿಕೆಗಳು ಶಕ್ತಿಯುತ ಮಾಧ್ಯಮವಾಗಬಲ್ಲವು ಎಂಬುದನ್ನು ಅವರು ಅರಿತಿದ್ದರು. 1922ರಲ್ಲಿ ‘ಶೇಕಿಂಗ್ ದಿ ಮೀನ್’ ಎಂಬ ಲೇಖನದಲ್ಲಿ ಸರ್ಕಾರವನ್ನು ಉಗ್ರವಾಗಿ ಟೀಕಿಸಿದ್ದಕ್ಕೆ ರಾಷ್ಟçದ್ರೋಹದ ಆರೋಪದಲ್ಲಿ 6 ವರ್ಷ ಜೈಲುಶಿಕ್ಷೆಯಾಯಿತು.

ಅಸಹಕಾರ ಚಳುವಳಿ, ಕಾನೂನು ಭಂಗ ಚಳುವಳಿ ಹಾಗೂ ಕ್ವಿಟ್ ಇಂಡಿಯಾ ಹೋರಾಟಗಳಲ್ಲೂ ಪತ್ರಿಕೆಗಳು ಭಾಗವಹಿಸಿದ ರೀತಿ ಅನನ್ಯ. ಅಸಹಕಾರ ಚಳುವಳಿ ಆರಂಭವಾದಾಗ ಅದಕ್ಕೆ ಉತ್ತೇಜನ ಕೊಡುವ ಲೇಖನಗಳನ್ನು ಪ್ರಕಟಿಸುವ ಪತ್ರಿಕೆಗಳ ಮೇಲೆ ಕ್ರಮ ಕೈಗೊಳ್ಳುವ ಹೊಸ ಕಲಂ ಅನ್ನು ಆಗಿನ ಪತ್ರಿಕಾ ಶಾಸನಕ್ಕೆ ಸೇರಿಸಲಾಯಿತು. 1937ರಲ್ಲೂ ಇನ್ನೂ ಎರಡು ಹೊಸ ಕಾನೂನುಗಳನ್ನು ಜಾರಿಗೊಳಿಸಲಾಯಿತು. ಗಾಂಧೀಜಿಯವರ ದಂಡಿ ನಡಿಗೆಯನ್ನು ಪತ್ರಿಕೆಗಳು ಚೆನ್ನಾಗಿಯೇ ಬೆಂಬಲಿಸಿದವು. ಉಪ್ಪಿನ ಮೇಲೆ ಬ್ರಿಟಿಷರು ವಿಧಿಸಿದ ತೆರಿಗೆಯನ್ನು ಕಟುಶಬ್ದಗಳಿಂದ ಟೀಕಿಸಿದವು. ಇದೇ ಸಂದರ್ಭದಲ್ಲಿ ಜಾರಿಯಾದ ಭಾರತ ಪತ್ರಿಕೆಗಳ ತುರ್ತು ಶಾಸನಕ್ಕೆ ಅನೇಕ ಪತ್ರಿಕೆಗಳು ತುತ್ತಾದವು. ಠೇವಣಿ, ಮುದ್ರಣಾಲಯಗಳನ್ನು ಕಳೆದುಕೊಂಡವು.

ಪತ್ರಿಕೆಗಳಿಗೆ ಉಂಟಾದ ಚಿಂತಾಜನಕ ಪರಿಸ್ಥಿತಿಯನ್ನು ವಿರೋಧಿಸಲು ‘ದಿ ಹಿಂದೂ’ ಪತ್ರಿಕೆಯ ಸಂಪಾದಕ ಎ. ರಂಗಸ್ವಾಮಿ ಅಯ್ಯಂಗಾರರ ನೇತೃತ್ವದಲ್ಲಿ ಪತ್ರಿಕೋದ್ಯಮಿಗಳು ಹಾಗೂ ಸಂಪಾದಕರ ಮೊದಲ ರಾಷ್ಟçಮಟ್ಟದ ಸಭೆ ನಡೆಯಿತು. ಪತ್ರಿಕಾ ಶಾಸನವನ್ನು ಹಿಂತೆಗೆದುಕೊಳ್ಳಲು ಒತ್ತಡ ಹೇರಲಾಯಿತು. ಆದರೆ ಸರ್ಕಾರ ಅದನ್ನು ಲೆಕ್ಕಿಸಲಿಲ್ಲ. ಬದಲಿಗೆ, ಪತ್ರಿಕೆಗಳ ಮೇಲಿನ ದಬ್ಬಾಳಿಕೆಯೇ ಇನ್ನಷ್ಟು ಹೆಚ್ಚಾಯಿತು.

ಮದ್ರಾಸ್ ಪ್ರಾಂತ್ಯದಲ್ಲಿ ನವಜೀವನ, ಸ್ವರಾಜ್ಯ, ಸ್ವದೇಶಿ ಮಿತ್ರನ್, ದ್ರಾವಿಡಿಯನ್ ಪ್ರೆಸ್, ತಮಿಳುನಾಡು ಪ್ರೆಸ್, ಆಂಧ್ರಪತ್ರಿಕಾ ಪ್ರೆಸ್, ಹಿಂದಿ ಪ್ರಚಾರ ಪ್ರೆಸ್‌ಗಳನ್ನು ಮುಚ್ಚಲಾಯಿತು. ಅಮೃತ ಬಜಾರ್ ಪತ್ರಿಕಾ, ಸಕಾಲ್, ಹಿತವಾದ, ಬಾಂಬೆ ಕ್ರಾನಿಕಲ್, ಅಲ್ ಹಿಲಾಲ್, ಯಂಗ್ ಇಂಡಿಯಾ, ಆಜ್, ಹರಿಜನ್, ನವಜೀವನ್, ಫ್ರೀ ಪ್ರೆಸ್ ಜರ್ನಲ್, ಸಂಯುಕ್ತ ಕರ್ನಾಟಕ, ದಿ ಹಿಂದೂ, ಮಾತೃಭೂಮಿ, ಮಲಯಾಳ ಮನೋರಮ- ಈ ಕಾಲದ ಹೋರಾಟವನ್ನು ಬೆಳೆಸಿದ ಪ್ರಮುಖ ಪತ್ರಿಕೆಗಳು.

ಸ್ವಾತಂತ್ರ್ಯ ಚಳುವಳಿ ಉತ್ತುಂಗದಲ್ಲಿದ್ದಾಗ ದೇಶಾಭಿಮಾನಿ ಪತ್ರಕರ್ತ ಎಸ್. ಸದಾನಂದ ಆರಂಭಿಸಿದ ‘ಫ್ರೀ ಪ್ರೆಸ್ ಜರ್ನಲ್’ ಒಂದು ದೊಡ್ಡ ಕೊಡುಗೆ. ಅವರು ಅದಕ್ಕಿಂತ ಮೊದಲೇ ಸ್ವಾತಂತ್ರ್ಯ ಹೋರಾಟದ ಸುದ್ದಿಗಳನ್ನು ಪತ್ರಿಕೆಗಳಿಗೆ ಹಂಚುವುದಕ್ಕಾಗಿ ‘ಫ್ರೀ ಪ್ರೆಸ್ ಇಂಡಿಯಾ’ ಎಂಬ ಸುದ್ದಿಸಂಸ್ಥೆಯನ್ನು ಆರಂಭಿಸಿದ್ದರು. ಆದರೆ ಅನೇಕ ಪತ್ರಿಕೆಗಳು ಇದಕ್ಕೆ ಚಂದಾದಾರರಾಗಲು ಹೆದರಿದವು. ಕೊನೆಗೆ ಅವರೇ ಸ್ವತಃ ಪತ್ರಿಕೆ ಆರಂಭಿಸಬೇಕಾಯಿತು. ಗಾಂಧೀಜಿಯಂತೆ ಸದಾನಂದ ಕೂಡ ಪತ್ರಿಕವೃತ್ತಿಯನ್ನು ಸಮಾಜಸೇವೆ ಎಂದು ಪರಿಗಣಿಸಿದ್ದರು. ಗಾಂಧೀಜಿಯವರ ‘ಯಂಗ್ ಇಂಡಿಯಾ’ದಲ್ಲೇ ಅವರಿಗೆ ತರಬೇತಿ, ಮಾರ್ಗದರ್ಶನಗಳು ಲಭಿಸಿದ್ದವು.

ಭಾರತೀಯರ ಆತ್ಮಾಭಿಮಾನವನ್ನೂ, ಹೋರಾಟದ ಛಲವನ್ನೂ ಇಮ್ಮಡಿಗೊಳಿಸಿದ ಹೆಗ್ಗಳಿಕೆ ಪತ್ರಿಕೆಗಳದ್ದು. ಭ್ರೂಣಾವಸ್ಥೆಯಲ್ಲಿದ್ದ ರಾಷ್ಟ್ರೀಯತೆ ಪತ್ರಿಕೆಗಳ ನಿರಂತರ ಶ್ರಮದಿಂದ ವ್ಯಾಪಕವಾಗಿ ಹರಡಿತು. ಇದರ ಅರ್ಥ ಭಾರತದಲ್ಲಿದ್ದ ಎಲ್ಲ ಪತ್ರಿಕೆಗಳೂ ಸ್ವಾತಂತ್ರ್ಯ ಹೋರಾಟಕ್ಕೆ ಟೊಂಕ ಕಟ್ಟಿ ನಿಂತವು ಎಂದಲ್ಲ.  ಚಳುವಳಿಯನ್ನು ಬೆಂಬಲಿಸದ ಪತ್ರಿಕೆಗಳೂ ಇದ್ದವು. ಆಂಗ್ಲರ ಒಡೆತನದಲ್ಲಿದ್ದ ಟೈಮ್ಸ್ ಆಫ್ ಇಂಡಿಯಾ, ದಿ ಸ್ಟೇಟ್ಸ್ಮನ್, ಪಯೋನೀರ್ ಮುಂತಾದ ಪತ್ರಿಕೆಗಳು ರಾಷ್ಟ್ರೀಯ ಹೋರಾಟವನ್ನು ಖಂಡಿಸಿದವು. ದೇಶವಿಭಜನೆಯನ್ನು ಬೆಂಬಲಿಸಿದ ಪತ್ರಿಕೆಗಳೂ ಇದ್ದವು. ಉಳಿದ ಚಳವಳಿಗೆ ಸೃಷ್ಟಿಯಾದ ಜನಾಭಿಪ್ರಾಯವನ್ನು ದೇಶ ವಿಭಜನೆಯ ವಿರುದ್ಧವಾಗಿ ಪತ್ರಿಕೆಗಳು ಮೂಡಿಸಲಿಲ್ಲ ಎಂಬ ಅಭಿಪ್ರಾಯವೂ ಪತ್ರಿಕಾ ಇತಿಹಾಸಕಾರರಲ್ಲಿ ಇದೆ. ಆದರೂ ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸ ಹಾಗೂ ಪತ್ರಿಕಾ ಇತಿಹಾಸವನ್ನು ಒಟ್ಟಾಗಿ ನೋಡುವಾಗ ಅವೆರಡೂ ಪರಸ್ಪರ ಪೂರಕವಾಗಿ ಕೆಲಸ ಮಾಡಿದ್ದೇ ಪ್ರಧಾನವಾಗಿ ಕಾಣಿಸುತ್ತದೆ. ಅಂತಹದೊಂದು ಮಹಾನ್ ಪರಂಪರೆ ನಮ್ಮ ಪತ್ರಿಕೆಗಳಿಗೆ ಇದೆ ಎಂಬ ಭಾವನೆಯೇ ಅವುಗಳ ಕುರಿತಾದ ಗೌರವ ಹಾಗೂ ಆಶಾಭಾವನೆಯನ್ನು ಹೆಚ್ಚಿಸುತ್ತದೆ.

ಆಧಾರ:

1. ಭಾರತೀಯ ಪತ್ರಿಕೋದ್ಯಮ: ಡಾ. ನಾಡಿಗ ಕೃಷ್ಣಮೂರ್ತಿ, 1969

2. ಹಿಸ್ಟರಿ ಆಫ್ ಇಂಡಿಯನ್ ಪ್ರೆಸ್: ಬಿ. ಎನ್. ಅಹುಜಾ, 2009

3. ಜರ್ನಲಿಸಂ ಇನ್ ಇಂಡಿಯಾ: ರಂಗಸ್ವಾಮಿ ಪಾರ್ಥಸಾರಥಿ, 1997

4. ಸ್ವಾತಂತ್ರ್ಯ ಚಳುವಳಿ ಮತ್ತು ಕರ್ನಾಟಕ ಪತ್ರಿಕೋದ್ಯಮ: ಡಾ. ಎಲ್. ಪಿ. ರಾಜು, 2008


ಲೇಖನ: ಸಿಬಂತಿ ಪದ್ಮನಾಭ, ತುಮಕೂರು ವಿಶ್ವವಿದ್ಯಾನಿಲಯ