13 ಡಿಸೆಂಬರ್ 2021ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ
ಮಾಧ್ಯಮರಂಗ ಯುವತಲೆಮಾರಿನ ಕನಸಿನ ಲೋಕ. ಸಾಮಾಜಿಕ ಮನ್ನಣೆ, ಒಳ್ಳೆಯ ಸಂಪಾದನೆ- ಎರಡನ್ನೂ ಒಂದೇ ಹೆಜ್ಜೆಯಲ್ಲಿ ಸಾಧಿಸಿಕೊಳ್ಳುವ ತವಕ ಹಲವರದು. ಈ ಕನಸು ಅತಿರಂಜಿತವೂ ಅಲ್ಲ, ಅಸಾಧ್ಯವೂ ಅಲ್ಲ. ಆದರೆ ಮಾಧ್ಯಮ ಕ್ಷೇತ್ರದಲ್ಲಿ ಬದುಕು ಕಂಡುಕೊಳ್ಳುವ ಹಂಬಲ ಹೊಂದಿರುವವರು ಅಲ್ಲಿನ ವಾಸ್ತವಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅದರ ನಿರೀಕ್ಷೆಗಳಿಗೆ ಸರಿಹೊಂದುವ ಅರ್ಹತೆಗಳನ್ನು ರೂಢಿಸಿಕೊಳ್ಳುವುದು ಮುಖ್ಯ.ಮಾಧ್ಯಮಲೋಕ ಕಳೆದ ಒಂದು ದಶಕದಲ್ಲಿ ಊಹೆಗೂ ಮೀರಿ ಬದಲಾಗಿದೆ. ಒಂದು ಕಾಲಕ್ಕೆ ಪತ್ರಿಕೆ, ಟಿವಿ, ರೇಡಿಯೋಗಳಿಗೆ ಸೀಮಿತವಾಗಿದ್ದ ಮಾಧ್ಯಮಕ್ಷೇತ್ರ ಈಗ ಹಲವು ಆಯಾಮಗಳನ್ನು ಮೈಗೂಡಿಸಿಕೊಂಡು ಬಹುಕೋಟಿ ಉದ್ಯಮವಾಗಿ ಬೆಳೆದಿದೆ. ಅದನ್ನು ‘ಮಾಧ್ಯಮ ಮತ್ತು ಮನರಂಜನಾ ಉದ್ಯಮ’ ಎಂದು ಕರೆಯುವವರೆಗೆ ಅದರ ಸ್ವರೂಪ ಬದಲಾಗಿದೆ.
ಭಾರತದಲ್ಲಿ ಇಂದು ಉಳಿದೆಲ್ಲ ಕ್ಷೇತ್ರಗಳಿಗಿಂತಲೂ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರ ಇದುವೇ. 2020ರಲ್ಲಿ ನಮ್ಮ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಗಾತ್ರ ರೂ. 1.38 ಲಕ್ಷ ಕೋಟಿ (ಟ್ರಿಲಿಯನ್) ಆಗಿತ್ತು. ಸದ್ಯದಲ್ಲೇ ಅದು 1.80 ಟ್ರಿಲಿಯನ್‍ಗೆ ತಲುಪುವ ನಿರೀಕ್ಷೆ ಇದೆ. ಕೋವಿಡ್ ಉಳಿದೆಲ್ಲ ಕ್ಷೇತ್ರಗಳಂತೆ ಮಾಧ್ಯಮ ಕ್ಷೇತ್ರಕ್ಕೂ ಮಹಾಹೊಡೆತ ನೀಡಿದೆ ಎಂಬುದು ಮೇಲ್ನೋಟದ ತಿಳುವಳಿಕೆ ಆದರೂ ಒಟ್ಟಾರೆ ರಂಗದ ಮೇಲೆ ಬೇರೆ ಕ್ಷೇತ್ರಗಳಿಗೆ ಆದಷ್ಟು ತೊಂದರೆ ಆಗಿಲ್ಲ; ಅಥವಾ ಮಾಧ್ಯಮ ಮತ್ತು ಮನರಂಜನಾ ಉದ್ಯಮ ಬಹುಬೇಗನೆ ಚೇತರಿಸಿಕೊಂಡಿದೆ.
ಹಾಗೆ ನೋಡಿದರೆ ಕೋವಿಡ್ ಮಾಧ್ಯಮರಂಗದ ಸ್ವರೂಪದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿದೆ. ಮಾಧ್ಯಮಗಳ ಡಿಜಿಟಲ್ ಆಯಾಮ ವಿಕಾಸವಾಗಿರುವುದರ ಹಿಂದೆ ಕೋವಿಡ್‍ನ ಕೊಡುಗೆಯೂ ಬಹಳ ಇದೆ. ಇನ್ನು ಎರಡು-ಮೂರು ವರ್ಷಗಳಲ್ಲಿ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಶೇ. 40 ಪಾಲನ್ನು ಟಿವಿ, ಶೇ. 13 ಮುದ್ರಣ ಮಾಧ್ಯಮ, ಶೇ. 12 ಜಾಹೀರಾತು, ಶೇ. 9 ಸಿನಿಮಾ ಹಾಗೂ ಶೇ. 8ರಷ್ಟನ್ನು ಒಟಿಟಿ ಮತ್ತು ಗೇಮಿಂಗ್ ಹೊಂದಲಿವೆ ಎಂದು ಅಧ್ಯಯನಗಳು ತಿಳಿಸಿವೆ.
ಬದಲಾಗಿರುವ ಸ್ವರೂಪ
ಕೆಲವು ವರ್ಷಗಳ ಹಿಂದೆ ಒಳ್ಳೆಯ ಬರವಣಿಗೆ, ಒಳ್ಳೆಯ ಮಾತುಗಾರಿಕೆ, ವಿವಿಧ ರಂಗಗಳ ಉತ್ತಮ ತಿಳುವಳಿಕೆ ಇದ್ದರೆ ಮುದ್ರಣ-ವಿದ್ಯುನ್ಮಾನ ಮಾಧ್ಯಮಗಳಿಗೆ ಪ್ರವೇಶ ಸುಲಭವಾಗಿತ್ತು. ಈಗ ಮಾಧ್ಯಮರಂಗವೂ ಬದಲಾಗಿದೆ, ನಿರೀಕ್ಷೆಗಳೂ ಬದಲಾಗಿವೆ. ಇದನ್ನು ಆ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬಯಸುವವರು ಅರ್ಥಮಾಡಿಕೊಳ್ಳಬೇಕು. ಬದಲಾಗಿರುವ ಕಾಲಕ್ಕೆ ತಕ್ಕಂತೆ ತಮ್ಮ ಕೌಶಲಗಳನ್ನು ಬೆಳೆಸಿಕೊಳ್ಳದೆ ಹೋದರೆ ಮಾಧ್ಯಮರಂಗಕ್ಕೆ ಪ್ರವೇಶ ಇಲ್ಲ, ಪ್ರವೇಶಿಸಿದರೂ ಯಶಸ್ಸು ಇಲ್ಲ, ಉಳಿಗಾಲವೂ ಇಲ್ಲ.
ಮಾಧ್ಯಮಗಳನ್ನು ಮುದ್ರಣ ಮತ್ತು ವಿದ್ಯುನ್ಮಾನವೆಂದು ವಿಂಗಡಿಸುವ ಪದ್ಧತಿಯೇ ಹಳತಾಯಿತು. ಅಂತಹ ಪ್ರತ್ಯೇಕತೆ ಈಗ ಉಳಿದುಕೊಂಡಿಲ್ಲ. ಮುದ್ರಣ ಮಾಧ್ಯಮ, ಟಿವಿ ಚಾನೆಲ್‍ಗಳು ಇಂಟರ್ನೆಟ್‍ನಲ್ಲಿವೆ, ಫೇಸ್‍ಬುಕ್‍ನಂತಹ ಸಾಮಾಜಿಕ ತಾಣಗಳಲ್ಲಿವೆ, ಯೂಟ್ಯೂಬ್ ಚಾನೆಲ್‍ಗಳನ್ನು ಹೊಂದಿವೆ. ಪತ್ರಿಕೆಗಳು ಸಾಮಾಜಿಕ ತಾಣಗಳಲ್ಲಿ ಲೈವ್ ಕಾರ್ಯಕ್ರಮಗಳನ್ನು ನೀಡುತ್ತಿವೆ, ಪಾಡ್‍ಕಾಸ್ಟ್, ಕ್ಲಬ್‍ಹೌಸ್ ಚರ್ಚೆಗಳನ್ನು ನಡೆಸುತ್ತಿವೆ, ದೃಶ್ಯ-ಶ್ರವ್ಯ ಸಾಮಗ್ರಿಗಳನ್ನು ಹೆಚ್ಚುಹೆಚ್ಚಾಗಿ ಒದಗಿಸುತ್ತಿವೆ. ಹೆಚ್ಚೆಂದರೆ ಎಲ್ಲವನ್ನೂ ಒಟ್ಟಾಗಿ ಡಿಜಿಟಲ್ ಮಾಧ್ಯಮಗಳು ಎಂದು ಕರೆಯಬಹುದೇನೋ? ಡಿಜಿಟಲೇ ಮಾಧ್ಯಮರಂಗದ ಭವಿಷ್ಯ ಎಂದು ದಶಕದ ಹಿಂದೆಯೇ ಘೋಷಿಸಿಯಾಗಿದೆ; ಕೋವಿಡ್ ಅದನ್ನು ಬೇಗನೇ ನಿಜವಾಗಿಸಿದೆ.
ಅಗತ್ಯ ಕೌಶಲಗಳು
ಮಾಧ್ಯಮರಂಗದಲ್ಲಾಗಿರುವ ಬದಲಾವಣೆ ತಂತ್ರಜ್ಞಾನದ ಕೊಡುಗೆ ಎಂದ ಮೇಲೆ ಅದರ ಜ್ಞಾನ ಇಂದು ನಿರ್ಣಾಯಕ. ಮಾಧ್ಯಮ ಕೌಶಲಗಳ ಕೊತೆಗೆ ತಾಂತ್ರಿಕ ನೈಪುಣ್ಯವುಳ್ಳವರಿಗೆ ಇಂದು ಮೀಡಿಯಾದಲ್ಲಿ ತೆರೆದತೋಳಿನ ಸ್ವಾಗತ. ತಪ್ಪಿಲ್ಲದ ಬರವಣಿಗೆ, ತಡವರಿಸದ ಮಾತು, ಪ್ರಚಲಿತ ವಿದ್ಯಮಾನಗಳ ಉತ್ತಮ ಮಾಹಿತಿ, ಇತಿಹಾಸ, ಸಾಹಿತ್ಯ, ಆರ್ಥಿಕತೆ, ರಾಜಕೀಯ ಮೊದಲಾದ ಕ್ಷೇತ್ರಗಳ ವಿಸ್ತೃತ ತಿಳುವಳಿಕೆ, ಕಂಪ್ಯೂಟರ್ ಜ್ಞಾನ- ಇವೆಲ್ಲವುಗಳ ಹೊತೆಗೆ ಮಾಧ್ಯಮರಂಗಕ್ಕೆ ಸೇರಬಯಸುವವರಿಗೆ ಇಂದು ಡಿಜಿಟಲ್ ಕೌಶಲಗಳು ಬಹಳ ಅಗತ್ಯ.
ಸೃಜನಶೀಲ ಚಿಂತನೆ, ಆಡಿಯೋ-ವೀಡಿಯೋ ಎಡಿಟಿಂಗ್, ಸಾಮಾಜಿಕ ಮಾಧ್ಯಮಗಳ ಕಾರ್ಯವೈಖರಿಯ ತಿಳುವಳಿಕೆ, ಡಿಜಿಟಲ್ ಮಾರ್ಕೆಟಿಂಗ್, ಸರ್ಚ್ ಇಂಜಿನ್ ಆಪ್ಟಿಮೈಸೇಶನ್ (SEO) ಕೌಶಲಗಳನ್ನೂ ಇಂದು ಕರಗತ ಮಾಡಿಕೊಳ್ಳುವುದು ಅಗತ್ಯ.
ಅನಿಮೇಶನ್, ವಿಶುವಲ್ ಇಫೆಕ್ಟ್, ಗೇಮಿಂಗ್, ಕಾಮಿಕ್ಸ್- ಇವನ್ನು ‘ಛಾಂಪಿಯನ್ ಸೆಕ್ಟರ್ಸ್’ ಎಂದು ಮಾರುಕಟ್ಟೆ ಹಾಗೂ ಸರ್ಕಾರ ಎರಡೂ ಗುರುತಿಸಿವೆ. ಮಾಧ್ಯಮರಂಗ ಈ ಆಯಾಮಗಳನ್ನು ತನ್ನೊಳಗೆ ಆವಾಹಿಸಿಕೊಳ್ಳುತ್ತಿದೆ. ಪತ್ರಿಕೆ-ಟಿವಿಗಳ ಆದಾಯ ಮೂಲದ ಲೆಕ್ಕಾಚಾರ ಬದಲಾಗಿದೆ. ಸರ್ಕ್ಯುಲೇಶನ್, ಟಿ.ಆರ್.ಪಿ. ಜಾಗದಲ್ಲಿ ಕ್ಲಿಕ್ಸ್, ವ್ಯೂಸ್ ಪದಗಳು ಕೂಡ ಸೇರಿಕೊಂಡಿವೆ. ಕೃತಕ ಬುದ್ಧಿಮತ್ತೆ, ಮಶಿನ್ ಲರ್ನಿಂಗ್‍ಗಳು ಮಾಧ್ಯಮಗಳ ಕಾರ್ಯವೈಖರಿಯ ಮೇಲೂ ಪ್ರಭಾವ ಬೀರಿವೆ. ಮಾಧ್ಯಮಕ್ಷೇತ್ರದಲ್ಲಿ ಉದ್ಯೋಗ, ಭವಿಷ್ಯ ಬಯಸುವವರು ಈ ಬದಲಾವಣೆಗಳನ್ನೂ ಆರ್ಥಮಾಡಿಕೊಳ್ಳಬೇಕು. ಮಾಧ್ಯಮ ಶಿಕ್ಷಣ-ತರಬೇತಿ ನೀಡುವ ಕಾಲೇಜು, ವಿಶ್ವವಿದ್ಯಾನಿಲಯಗಳೂ ಇವನ್ನು ಗಮನಿಸದೆ ಹೋದರೆ ಅವರ ಕೋರ್ಸುಗಳೂ ಅಪ್ರಸ್ತುತವಾಗಿಬಿಡುತ್ತವೆ. ಅವುಗಳ ಪಠ್ಯಕ್ರಮ, ತರಬೇತಿಯ ವಿಧಾನ, ಅಧ್ಯಾಪಕರ ತಿಳುವಳಿಕೆ- ಎಲ್ಲವೂ ಕಾಲಕ್ಕೆ ಅನುಗುಣವಾಗಿ ‘ಅಪ್ಡೇಟ್’ ಆಗುವುದು ಅನಿವಾರ್ಯ.
ಇಷ್ಟೆಲ್ಲ ಹೇಳಿದ ಮೇಲೂ ಮರೆಯದಿರಬೇಕಾದ ಒಂದು ಮಾತು: ತಂತ್ರಜ್ಞಾನದಲ್ಲಿ ಎಷ್ಟೇ ಪ್ರಗತಿ ಆದರೂ ಸಾಮಾಜಿಕ ಬದ್ಧತೆಯೇ ಮಾಧ್ಯಮರಂಗದ ಶಾಶ್ವತ ಅಂತರ್ಗತ ಮೌಲ್ಯ. ಅದಿಲ್ಲದೆ ಮಾಧ್ಯಮಗಳಿಗೆ ಅಸ್ತಿತ್ವ ಇಲ್ಲ. ಮಾಧ್ಯಮರಂಗದಲ್ಲಿ ಉದ್ಯೋಗ ಕಂಡುಕೊಳ್ಳಬಯಸುವವರಿಗೂ ಅಂತಿಮವಾಗಿ ಇದೇ ದಾರಿದೀಪ.
ಹೊಸ ಉದ್ಯೋಗಾವಕಾಶಗಳು
ವೆಬ್ ಕಂಟೆಂಟ್ ಮ್ಯಾನೇಜರ್: ವಿವಿಧ ಉದ್ಯಮ, ಸಂಸ್ಥೆಗಳ ವೆಬ್ಸೈಟ್, ಆನ್ಲೈನ್ ಹೂರಣವನ್ನು ನಿರ್ವಹಿಸುವುದು.
ಸೋಶಿಯಲ್ ಮೀಡಿಯಾ ಮ್ಯಾನೇಜರ್: ಉದ್ಯಮಗಳು ಹಾಗೂ ಗಣ್ಯರ ಸಾಮಾಜಿಕ ಜಾಲತಾಣ ಪುಟಗಳ ನಿರ್ವಹಣೆ.
ಮೀಡಿಯಾ ಪ್ಲಾನರ್: ಯಾವ ಕಂಪೆನಿಗಳು ತಮ್ಮ ಜಾಹೀರಾತು, ಪ್ರಚಾರಕ್ಕಾಗಿ ಯಾವ ಮಾಧ್ಯಮಗಳನ್ನು ಹೇಗೆ ಬಳಸಿಕೊಳ್ಳಬೇಕೆಂದು ನಿರ್ಧರಿಸುವುದು.
ಪಿಆರ್‍ಒ (ಸಾರ್ವಜನಿಕ ಸಂಪರ್ಕ ಅಧಿಕಾರಿ): ವಿವಿಧ ಉದ್ಯಮ, ವ್ಯಕ್ತಿ, ಸಂಸ್ಥೆಗಳ ವರ್ಚಸ್ಸು ವೃದ್ಧಿ, ಈವೆಂಟ್ ಮ್ಯಾನೇಜ್ಮೆಂಟ್ ಹಾಗೂ ಮಾಧ್ಯಮ ಸಂಬಂಧದ ಜವಾಬ್ದಾರಿ ನಿರ್ವಹಿಸುವುದು.
ಡಿಜಿಟಲ್ ಮಾರ್ಕೆಟರ್: ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ಸರ್ಚ್ ಇಂಜಿನ್ ಆಪ್ಟಿಮೈಸೇಶನ್, ಮೊಬೈಲ್ ಮಾರ್ಕೆಟಿಂಗ್ ಇತ್ಯಾದಿಗಳನ್ನು ನೋಡಿಕೊಳ್ಳುವುದು.
ಜಾಹೀರಾತು ಕ್ಷೇತ್ರ: ಜಾಹೀರಾತು ಸ್ಕ್ರಿಪ್ಟ್, ವಿನ್ಯಾಸ ರಚನೆ, ಆಡಿಯೋ-ವಿಶುವಲ್ ಎಡಿಟಿಂಗ್, ಇತ್ಯಾದಿ.
ಟೆಕ್ನಿಕಲ್ ರೈಟರ್: ತಾಂತ್ರಿಕ ಕ್ಷೇತ್ರಗಳಿಗೆ ವಿಶಿಷ್ಟವಾದ ಬರವಣಿಗೆ, ಪ್ರಚಾರ ಹಾಗೂ ತರಬೇತಿ ಸಾಮಗ್ರಿಗಳ ತಯಾರಿ, ಭಾಷಾಂತರ ಮುಂತಾದ ಜವಾಬ್ದಾರಿ.
ಅನಿಮೇಟರ್/ಮಲ್ಟಿಮೀಡಿಯಾ ಸ್ಪೆಶಲಿಸ್ಟ್: ಜಾಹೀರಾತು, ಟಿವಿ, ಸಿನಿಮಾ, ಧಾರಾವಾಹಿ, ಡಿಜಿಟಲ್ ಮೀಡಿಯಾಗಳಲ್ಲಿ ಹೇರಳ ಅವಕಾಶ.
- ಸಿಬಂತಿ ಪದ್ಮನಾಭ ಕೆ. ವಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ