ಭಾನುವಾರ, ಡಿಸೆಂಬರ್ 12, 2021

ಇದು ಮಾಯಾಬಜಾರು

12 ಡಿಸೆಂಬರ್ 2021ರ 'ವಿಜಯ ಕರ್ನಾಟಕ' ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ

ಲ್ಯಾಂಡ್‍ಲೈನ್ ಫೋನಿನ ಕಾಲವನ್ನೊಮ್ಮೆ ಜ್ಞಾಪಿಸಿಕೊಳ್ಳಿ: ಪ್ರತಿಯೊಬ್ಬನಿಗೂ ಏನಿಲ್ಲವೆಂದರೂ ಐವತ್ತು ದೂರವಾಣಿ ಸಂಖ್ಯೆಗಳು ನೆನಪಿರುತ್ತಿದ್ದವು. ಅಕ್ಕ, ತಮ್ಮ, ಅಣ್ಣ, ತಂಗಿ, ದೊಡ್ಡಪ್ಪ, ಚಿಕ್ಕಪ್ಪ, ಅತ್ತೆ, ಮಾವ, ನಾದಿನಿ, ಸೊಸೆ, ಹತ್ತಾರು ಸ್ನೇಹಿತರು- ಎಲ್ಲರ ಸಂಖ್ಯೆಗಳೂ ಕಂಠಪಾಠ. ಸಾಲದು ಎಂದರೆ ಇನ್ನಷ್ಟು ನಂಬರುಗಳನ್ನು ಬರೆದುಕೊಳ್ಳಲು ಒಂದು ಪುಟ್ಟ ಪುಸ್ತಕ. ಆಮೇಲೆ ಕಾಯಿನ್‍ಫೋನು ಬಂದ ಮೇಲಂತೂ ಇನ್ನಷ್ಟು ಸಂಖ್ಯೆಗಳು ನೆನಪಿರಲೇಬೇಕು. ಏಕೆಂದರೆ ಮುಷ್ಟಿಮುಷ್ಟಿ ನಾಣ್ಯಗಳನ್ನು ಹಿಡಿದುಕೊಂಡು ಬೂತಿನೆದುರು ಕ್ಯೂ ನಿಲ್ಲುವಾಗ ಫೋನ್ ಪುಸ್ತಕ ಹಿಡಿದುಕೊಳ್ಳಲು ಕೈಯಲ್ಲಿ ಜಾಗವಾದರೂ ಬೇಕಲ್ಲ! 

ಈ ಮೊಬೈಲೆಂಬ ಮೋಹಮಾಯೆ ಬಂದದ್ದೇ, ಕಾಯಿನ್‍ಗಳು ಉದುರಿಹೋದವು, ನೆನಪುಗಳು ಚದುರಿಹೋದವು. ಅವೆಲ್ಲವೂ ಓಡಿಹೋಗಿ ಸೆಲ್‍ಫೋನೆಂಬ ಚಿಕ್ಕಪೆಟ್ಟಿಗೆಯೊಳಗೆ ಅಡಗಿಕೊಂಡವು. ಆರಂಭದಲ್ಲಿ ಬಂದ ಸಾಮಾನ್ಯ ಫೋನುಗಳಿಗೆ ಸ್ವಲ್ಪ ಇತಿಮಿತಿ ಇತ್ತು. ಫೋನಿನ ಸಾಮರ್ಥ್ಯ ಮುಗಿದ ಮೇಲೆ ಇನ್ನೂ ಸಂಖ್ಯೆಗಳಿದ್ದರೆ ಪ್ರತ್ಯೇಕ ಬರೆದಿಟ್ಟುಕೊಳ್ಳಬೇಕಿತ್ತು. ಆಮೇಲೆ ಹೊಸಹೊಸ ಫೋನುಗಳು ಬಂದಂತೆಲ್ಲ ಅವುಗಳೊಳಗೆ ಜಾಗ ಹೆಚ್ಚಾಯಿತು. ನಮ್ಮ ತಲೆಯೊಳಗಿನ ಜಾಗ ಕಡಿಮೆಯಾಯಿತು.

ಈಗ ಯಾವುದನ್ನೂ ನೆನಪಿಟ್ಟುಕೊಳ್ಳಬೇಕಿಲ್ಲ, ಮೊಬೈಲ್ ಇದೆಯಲ್ಲ! ಹತ್ತಲ್ಲ, ನೂರಲ್ಲ, ಸಾವಿರಾರು ನಂಬರುಗಳಿದ್ದರೂ ಅದು ನೆನಪಿಟ್ಟುಕೊಳ್ಳುತ್ತದೆ. ಮೊಬೈಲಿಗೆ ಇಂಟರ್ನೆಟ್ ಹೊಕ್ಕ ಮೇಲಂತೂ ಕೇಳುವುದೇ ಬೇಡ. ಅದಕ್ಕೂ ನೆನಪು ಬೇಕಿಲ್ಲ. ಎಲ್ಲವೂ ಅಲ್ಲೆಲ್ಲೋ ಬರಿಗಣ್ಣಿಗೆ ಕಾಣದ, ಮೊಬೈಲಿಗೆ ಮಾತ್ರ ಕಾಣುವ ಮೋಡಗಳ ನಡುವೆ ಚದುರಿಕೊಂಡಿರುತ್ತವೆ. ಕುಟುಂಬ ಸದಸ್ಯರ, ಆಪ್ತ ಸ್ನೇಹಿತರ ನಂಬರುಗಳು ಬಿಡಿ, ತನ್ನ ನಂಬರೇ ಮನುಷ್ಯನಿಗೆ ನೆನಪಿದ್ದರೆ ಅದೇ ಹೆಚ್ಚು. ಒಬ್ಬನಿಗೆ ಕನಿಷ್ಟ ಎರಡು ನಂಬರು ಈಗ ಸರ್ವೇಸಾಮಾನ್ಯ. ‘ನಿಮ್ಮ ನಂಬರ್ ಹೇಳಿ’ ಎಂದರೆ ‘ತಡೀರಿ ಒಂದು ನಿಮಿಷ’ ಎಂದು ಮತ್ತದೇ ಮೊಬೈಲ್‍ನ ನೆರವು ಪಡೆಯುವುದು ಮೊಬೈಲಿನಾಣೆಗೂ ನಿಜ.

ನಾವು ಮರೆತಿರುವುದು ನಂಬರುಗಳನ್ನು ಮಾತ್ರವೇ ಎಂದು ಕೇಳಿಕೊಂಡರೆ ಅಷ್ಟೇ ಅಲ್ಲ ಎಂದು ನಮ್ಮಷ್ಟಕ್ಕೇ ಆದರೂ ಗೊಣಗಿಕೊಳ್ಳುತ್ತೇವೆ. ಹೌದು, ಮೊಬೈಲ್ ಮತ್ತು ಅದರೊಳಗೆ ಸೇರಿಕೊಂಡಿರುವ ಡೇಟಾ ಬದುಕನ್ನು ಗುರುತೇ ಸಿಗದಷ್ಟು ಬದಲಾಯಿಸಿಬಿಟ್ಟಿವೆ. ಮೊಬೈಲ್ ಎಂದರೆ ಸೋಶಿಯಲ್ ಮೀಡಿಯಾ ಎಂಬಷ್ಟರಮಟ್ಟಿಗೆ ಮೊಬೈಲ್ ಕೂಡ ತನ್ನ ಸ್ವರೂಪವನ್ನು ಬದಲಿಸಿಕೊಂಡಿದೆ. ಈಗ ಯಾವುದೂ ನಮ್ಮೊಳಗೆ ಇಲ್ಲ, ಎಲ್ಲವನ್ನೂ ಅಲ್ಲೇ ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದೇವೆ. ವರ್ಷಪೂರ್ತಿ ಜಾತ್ರೆ; ಪ್ರದರ್ಶನ ಮತ್ತು ಮಾರಾಟ ನಿರಂತರ. ಜಾತ್ರೆಗೆ ಯಾರು ಬೇಕಾದರೂ ಬರಬಹುದು, ಯಾವಾಗ ಬೇಕಾದರೂ ಹೋಗಬಹುದು. ಕೆಲವರು ನೋಡಿಕೊಂಡು, ಮತ್ತೆ ಕೆಲವರು ಮುಟ್ಟಿನೋಡಿಕೊಂಡು, ಇನ್ನು ಕೆಲವರು ಬರಿದೇ ಚೌಕಾಸಿ ಮಾಡಿಕೊಂಡು, ಉಳಿದ ಹಲವರು ಒಳ್ಳೇ ವ್ಯಾಪಾರ ಕುದುರಿಸಿಕೊಂಡು ಓಡಾಡುವುದು ಇಲ್ಲಿ ಸಾಮಾನ್ಯ. ಇಲ್ಲಿ ಎಲ್ಲರೂ ಎಲ್ಲರನ್ನೂ ಪ್ರಶ್ನೆ ಮಾಡುವವರೇ. ಆದರೆ ಯಾರು ಕೂಡ ಯಾರಿಗೂ ಜವಾಬ್ದಾರರಲ್ಲ ಅಷ್ಟೆ.

ನೆನಪುಗಳನ್ನೆಲ್ಲ ಗುಡಿಸಿ ಒರೆಸಿ ಹೊರಹಾಕುವುದೇ ಮನಸ್ಸನ್ನು ಖಾಲಿ ಇಟ್ಟುಕೊಳ್ಳುವ ವಿಧಾನ ಎಂಬುದನ್ನು ಸೋಶಿಯಲ್ ಮೀಡಿಯಾಗಳು ಕಲಿಸಿವೆ. ಬೆಳಗ್ಗೆ ಎದ್ದಲ್ಲಿಂದ ತಡರಾತ್ರಿ ಮಲಗುವವರೆಗಿನ ಎಲ್ಲ ಕ್ಷಣಗಳೂ ಅಲ್ಲಿ ದಾಖಲಾಗಬೇಕು. ಎದ್ದದ್ದು, ಬಿದ್ದದ್ದು, ಅಡುಗೆ ಮಾಡಿದ್ದು, ಉಂಡದ್ದು, ಓಡಾಡಿದ್ದು, ಖರೀದಿಸಿದ್ದು, ಬರೆದದ್ದು, ಓದಿದ್ದು, ಅತ್ತದ್ದು, ಕುಡಿದದ್ದು, ಕುಣಿದದ್ದು, ಬಸಿರಾದದ್ದು, ಹುಟ್ಟಿದ್ದು, ಸತ್ತಿದ್ದು... ಎಲ್ಲವನ್ನೂ ಹೇಳಿಕೊಳ್ಳಬೇಕು. ಹೆಂಡತಿ ಮನೆಯಲ್ಲೇ ಇದ್ದರೂ ಆಕೆಗೆ ಫೇಸ್ಬುಕ್ಕಲ್ಲೊಂದು ಆನಿವರ್ಸರಿ ವಿಶ್ ಮಾಡಬೇಕು. ಗಂಡ ಮನೆಯಲ್ಲೇ ಇದ್ದರೂ ಅಲ್ಲಿ ಆತನಿಗೊಂದು ಬರ್ತ್‍ಡೇ ವಿಶ್ ಮಾಡಬೇಕು. ಕೊನೆಗೆ ಇಂದು ತಾವು ಹುಟ್ಟಿದ, ಮದುವೆಯಾದ ದಿನ, ಎಲ್ಲರೂ ಯಥಾಸಾಧ್ಯ ಶುಭಾಶಯ ಕೋರಬಹುದು ಎಂದು ದಯನೀಯವಾಗಿ ಕೇಳಿಕೊಳ್ಳುವುದೂ ಉಂಟು. ಸೋಶಿಯಲ್ ಮೀಡಿಯಾ ನಮ್ಮನ್ನು ಅಂತಹದೊಂದು ಪರಿಸ್ಥಿತಿಗೆ ತಂದು ನಿಲ್ಲಿಸಿದೆ.

ಏಕಾಂತದ ಸುಖ

ಬದುಕಿನ ಸುಖದುಃಖದ ಕ್ಷಣಗಳನ್ನು ಯಾರೊಂದಿಗೂ ಹಂಚಬಾರದೆಂಬುದು ಇದರ ಅರ್ಥವಲ್ಲ. ಹೇಳಿಕೊಳ್ಳುವ ಬೇಕಾದಷ್ಟು ವಿಚಾರಗಳು ಇರುತ್ತವೆ. ಸಂತೋಷವನ್ನು ಹಂಚಿಕೊಂಡಾಗ ಹೆಚ್ಚಾಗುತ್ತದಂತೆ, ದುಃಖವನ್ನು ಹಂಚಿದಾಗ ಕಡಿಮೆಯಾಗುತ್ತದಂತೆ. ಆದರೆ ಯಾವುದನ್ನು ಎಲ್ಲಿ ಹೇಗೆ ಯಾವಾಗ ಹಂಚಿಕೊಳ್ಳಬೇಕು ಎಂಬ ಪ್ರಜ್ಞೆ ಮುಖ್ಯ ಅಷ್ಟೇ. ಎಲ್ಲ ನೆನಪುಗಳಿರುವುದೂ ಹಂಚಿಕೊಳ್ಳುವುದಕ್ಕಲ್ಲ, ಎಲ್ಲ ಕ್ಷಣಗಳಿರುವುದೂ ಜಾತ್ರೆಯ ಮಧ್ಯೆ ಕಳೆಯುವುದಕ್ಕಲ್ಲ. ಒಳಗೆ ಕಾಪಿಟ್ಟುಕೊಳ್ಳಬೇಕಾದ ನೆನಪುಗಳೂ, ಏಕಾಂತದಲ್ಲಿ ಅನುಭವಿಸಬೇಕಾದ ಕ್ಷಣಗಳೂ ಇರುತ್ತವೆ.

ಇದನ್ನು ಖಾಸಗಿ-ಸಾರ್ವಜನಿಕ ಎಂದಾದರೂ ಕರೆಯೋಣ, ಅಂತರಂಗ-ಬಹಿರಂಗ ಎಂದಾದರೂ ಕರೆಯೋಣ. ಅಂತೂ ಈ ಎರಡು ಜಗತ್ತುಗಳು ಇವೆಯೆಂಬುದು ನಿಜ. ಸಾಮಾಜಿಕ ಮಾಧ್ಯಮಗಳು ಈ ಎರಡು ಜಗತ್ತುಗಳ ನಡುವಿನ ಗೋಡೆಯನ್ನು ತೆಳ್ಳಗಾಗಿಸುತ್ತಲೇ ಹೋಗಿವೆ. ಎಷ್ಟು ತೆಳ್ಳಗೆ ಎಂದರೆ ಸಂಪೂರ್ಣ ಪಾರದರ್ಶಕ ಅನಿಸುವಷ್ಟು, ಅಥವಾ ಇಲ್ಲವೇ ಇಲ್ಲ ಅನಿಸುವಷ್ಟು. ಈಗ ಖಾಸಗಿಯೆಂಬುದೇ ಇಲ್ಲ. ಎಲ್ಲವೂ ಸಾರ್ವಜನಿಕ. 

ನೆಂಟರಿಷ್ಟರು ಬಂದಾಗ ಎಲ್ಲರೂ ಜತೆಯಾಗಿ ಕುಳಿತು ಮದುವೆ-ಮುಂಜಿ-ಗೃಹಪ್ರವೇಶಗಳ ಆಲ್ಬಂಗಳನ್ನು ಗಂಟೆಗಟ್ಟಲೆ ನೋಡುವ, ಸುಂದರ ಕ್ಷಣಗಳನ್ನು ಮೆಲುಕು ಹಾಕುವ ಕಾಲವೊಂದಿತ್ತು. ಈಗ ನೆಂಟರಿಷ್ಟರು ಕಲೆಯುವುದೇ ಕಮ್ಮಿ, ಕಲೆತರೂ ಇಂತಹ ದೃಶ್ಯಗಳನ್ನು ಕಾಣುವುದು ಅಪರೂಪ. ನೋಡುವುದಕ್ಕೆ ನೆನಪುಗಳ ಆಲ್ಬಂಗಳಾದರೂ ಬೇಕಲ್ಲ? ಎಲ್ಲವೂ ಆಯಾಯಾ ಕ್ಷಣದ ಸೆಲ್ಫಿಗಳಾಗಿ ಅಲ್ಲಲ್ಲೇ ಸೆರೆಯಾಗುತ್ತವೆ, ಅಲ್ಲಲ್ಲೇ ಮರೆಯಾಗುತ್ತವೆ. ಸ್ಟೇಟಸ್‍ಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಳ್ಳುತ್ತವೆ. ಒಂದೆರಡು ದಿನಗಳಲ್ಲಿ ಅಲ್ಲೇ ಕೆಳಗೆ ಸರಿದುಹೋಗುತ್ತವೆ. ಈ ಸೆಲ್ಫಿಗಳಿಗೆ ಆಯುಷ್ಯ ಕಮ್ಮಿ. ಅವು ಆ ಕ್ಷಣದ ತುಡಿತಗಳಷ್ಟೇ. ಅವನ್ನೆಲ್ಲ ಒಂದು ಕಡೆ ಪೋಣಿಸಿಟ್ಟುಕೊಳ್ಳುವ ವ್ಯವಧಾನ, ಸಮಯ, ಸ್ಥಳ ಯಾರಿಗೂ ಇರುವುದಿಲ್ಲ. ನಿಶ್ಚಿತಾರ್ಥದಿಂದ ತೊಡಗಿ ಪ್ರೀವೆಡ್ಡಿಂಗ್, ಪೋಸ್ಟ್‍ವೆಡ್ಡಿಂಗ್... ಎಲ್ಲವೂ ನೂರಾರು ಬಿಂಬಗಳಾಗಿ ಪರಿವರ್ತನೆಯಾಗುತ್ತವೆ.  ಸೋಶಿಯಲ್ ಮೀಡಿಯಾದ ನ್ಯೂಸ್‍ಫೀಡ್‍ಗಳಲ್ಲಿ ಮಿಂಚಿ ಮರೆಯಾಗುತ್ತವೆ. ಅವೆಲ್ಲ ಮಧುರಕ್ಷಣಗಳಾಗಿ ಮನಸ್ಸಿನ ಮೂಲೆಯಲ್ಲಿ ಉಳಿದುಕೊಳ್ಳುವ ಸಾಧ್ಯತೆ ಅಷ್ಟರಲ್ಲೇ ಇದೆ.

ಸೋಶಿಯಲ್ ಮೀಡಿಯಾಗಳೋ ಮನುಷ್ಯನ ಬುದ್ಧಿಯನ್ನು ಕಬಳಿಸಿಕೊಂಡು ತಮ್ಮದೇ ಒಂದು ಕೃತಕ ಬುದ್ಧಿಮತ್ತೆ ಬೆಳೆಸಿಕೊಂಡಿವೆ. ನಮಗೆ ನೆನಪಾಗದಿದ್ದರೂ, ಯೂ ಹ್ಯಾವ್ ಮೆಮೊರೀಸ್ ಟು ಶೋ... ಎಂದು ನೆನಪಿಸುತ್ತವೆ. ಮರುಕ್ಷಣದಲ್ಲಿ ‘ಇಲ್ಲಿ ಏನಾದರೂ ಬರೆಯಿರಿ’ ಎನ್ನುತ್ತವೆ. ನಾವು ಏನಾದರೂ ಬರೆಯುತ್ತೇವೆ. ಆಮೇಲೆ ಮರೆಯುತ್ತೇವೆ. 

ಪ್ರಕಟಣೆಯೆಂಬುದು ಖಾಸಗಿತನದ ಮೇಲೆ ಮಾಡಿಕೊಳ್ಳುವ ಸ್ವ-ಆಕ್ರಮಣ ಎನ್ನುತ್ತಾರೆ ಮಾರ್ಷಲ್ ಮೆಕ್‍ಲುಹಾನ್. ಪ್ರಕಟಿಸಿಕೊಂಡಷ್ಟೂ ನಮ್ಮ ಮೇಲೆಯೇ ನಾವು ಮಾಡಿಕೊಳ್ಳುವ ಆಕ್ರಮಣದ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತದೆ. ಅಲ್ಲಿಗೆ ಖಾಸಗಿ ಎಂಬುದು ಯಾವುದೂ ಉಳಿಯುವುದಿಲ್ಲ. ಕೆಲವನ್ನು ಹೇಳಿಕೊಳ್ಳದಿದ್ದಾಗಲೇ ಬೆಲೆ. ಏಕಾಂತದಲ್ಲಿ ಧ್ಯಾನಿಸುವುದಕ್ಕಾದರೂ ಕೆಲವು ನೆನಪುಗಳು ಬೇಕು. ತೆರೆದಿಟ್ಟ ಮಲ್ಲಿಗೆ, ಮುಚ್ಚಳವಿಲ್ಲದ ಸೆಂಟು ಎಷ್ಟು ಹೊತ್ತು ಸುವಾಸನೆ ಬೀರಬಲ್ಲುದು? ನಾವು ಮಲ್ಲಿಗೆಯೇನು, ಇಡೀ ಉದ್ಯಾನವನ್ನೇ ಸೋಶಿಯಲ್ ಮೀಡಿಯಾದಲ್ಲಿ ಬೆಳೆಯುತ್ತೇವೆ. ಯಾವುದನ್ನು ಮುಚ್ಚಿಡಬೇಕು, ಯಾವುದನ್ನು ಬಿಚ್ಚಿಡಬೇಕು ಎಂಬ ವಿವೇಕವನ್ನೇ ಅದು ನುಂಗಿಹಾಕಿದೆ. ಕಥೆಯಾಗಬಹುದಾದ ಘಟನೆಗಳು, ಕವಿತೆಯಾಗಬಹುದಾದ ನೆನಪುಗಳು ಸಾಮಾಜಿಕ ತಾಣಗಳ ಒಂದೆರಡು ಸಾಲುಗಳಾಗಿ ಮಲಗಿಬಿಡುತ್ತವೆ. ಉದ್ದುದ್ದ ಕತೆ-ಕವಿತೆ-ಬರಹಗಳನ್ನು ಓದುವಷ್ಟು ಸಮಯ, ತಾಳ್ಮೆ ಅಲ್ಲಿನ ಗ್ರಾಹಕರಿಗೂ ಇಲ್ಲ ಬಿಡಿ. ಈಗ ಏನಿದ್ದರೂ ಹೊಚ್ಚ ಹೊಸ ನಿಯಮ: ಕತೆಯಾಗಲೀ ಕವಿತೆಯಾಗಲೀ ಸಾಲು ಒಂದೇ ಇರಲಿ.

ಎಲ್ಲರಿಗೂ ಬೇಕಾದ ಮಾಧ್ಯಮ

ಇಂಟರ್ನೆಟ್ ಇಂದು ಎಲ್ಲರಿಗೂ ಬೇಕಾದ ಮಾಧ್ಯಮ. ಅಶನ-ವಸನ-ವಸತಿಯಷ್ಟೇ ಅನಿವಾರ್ಯ. ಯುವಜನರಿಗಂತೂ ಸೋಶಿಯಲ್ ಮೀಡಿಯಾದ ಬಳಕೆ ಉಸಿರಾಟದಷ್ಟೇ ಸಹಜ. ಜೀವನದ ಪ್ರತಿಕ್ಷಣವನ್ನೂ ಅದು ಆವರಿಸಿಕೊಂಡಿದೆ.  ಇಡೀ ದೇಶದ ಒಟ್ಟಾರೆ ಜನಸಂಖ್ಯೆಯ ಶೇ. 45ರಷ್ಟು ಭಾಗ ಇಂದು ಇಂಟರ್ನೆಟ್ಟನ್ನು ಬಳಸುತ್ತಿದೆ. 52 ಕೋಟಿ ಜನ ಸೋಶಿಯಲ್ ಮೀಡಿಯಾವನ್ನು ಬಳಸುತ್ತಿದ್ದಾರೆ. ಹದಿಹರೆಯದವರ ಪೈಕಿ ಶೇ. 90ಕ್ಕಿಂತಲೂ ಹೆಚ್ಚು ಮಂದಿ ಒಂದಲ್ಲ ಒಂದು ರೀತಿ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಲೇ ಇರುತ್ತಾರೆ.

ಇದರರ್ಥ ಸಾಮಾಜಿಕ ಮಾಧ್ಯಮಗಳನ್ನು ಕೇವಲ ಋಣಾತ್ಮಕವಾಗಿ ನೋಡಬೇಕೆಂದೇನೂ ಅಲ್ಲ. 21ನೇ ಶತಮಾನದಲ್ಲಿ ಅವುಗಳ ಪ್ರಯೋಜನವನ್ನು ಕಡೆಗಣಿಸಲಾಗದು. ಸಾಮಾಜಿಕ ಸಂಪರ್ಕ, ಸ್ನೇಹಿತರ ಒಡನಾಟ, ವಿಚಾರ ವಿನಿಮಯ, ಜ್ಞಾನಸಂಗ್ರಹ, ಅವಕಾಶಗಳ ಅನ್ವೇಷಣೆ, ಮನರಂಜನೆ, ಪ್ರತಿಭೆಗಳಿಗೆ ವೇದಿಕೆ... ಇವುಗಳಿಗೆಲ್ಲ ಸೋಶಿಯಲ್ ಮೀಡಿಯಾ ವರದಾನವೇ. ಕೋವಿಡ್ ಕಾಲದಲ್ಲಂತೂ ಸಮಾಜಕ್ಕೆ ಇಂಟರ್ನೆಟ್ ಹೊಸ ಆಯಾಮವನ್ನೇ ಕಲ್ಪಿಸಿತು. ಜನ ನೂರೆಂಟು ವಿಧದಲ್ಲಿ ಅದರ ಉಪಯೋಗ ಪಡೆದರು, ಹೊಸ ಬದುಕು ಕಟ್ಟಿಕೊಂಡರು. ಶಿಕ್ಷಣ ಕ್ಷೇತ್ರಕ್ಕಂತೂ ಅದು ವರದಾನವಾಯಿತು. ವಿದ್ಯಾಭ್ಯಾಸದ ಕತೆ ಇನ್ನೇನು ಮುಗಿಯಿತು ಎಂದುಕೊಳ್ಳುವಾಗ ಇಂಟರ್ನೆಟ್ ಹೊಸ ದಾರಿಗಳನ್ನು ತೋರಿಸಿತು.

ಆದರೆ ತಂತ್ರಜ್ಞಾನಗಳನ್ನು ಬಳಸುತ್ತಲೇ ಮನುಷ್ಯನೂ ಯಂತ್ರವಾಗುವ ಪರಿ ಮಾತ್ರ ಅಸಹನೀಯ. ಯಾವುದನ್ನು, ಎಲ್ಲಿ, ಯಾವಾಗ, ಎಷ್ಟು, ಹೇಗೆ ಬಳಸಬೇಕೆಂಬ ಪರಿಜ್ಞಾನ ಇಲ್ಲದಾಗ ಮನುಷ್ಯ ಕೇವಲ ಅನಿಸುತ್ತಾನೆ. ಸೋಶಿಯಲ್ ಮೀಡಿಯಾ ತೆರೆದ ಬಯಲು. ಅಲ್ಲಿ ಅಡಗುವುದಕ್ಕಾಗದು. ಅದು ಎಲ್ಲರನ್ನೂ ನಿರಂತರ ಬೆತ್ತಲುಗೊಳಿಸುತ್ತಲೇ ಇರುತ್ತದೆ. ಅಲ್ಲಿ ಎದುರಾಗುವವರು ಎಲ್ಲರೂ ವಿಷಯ ಪರಿಣತರೇ. ಶಿಕ್ಷಣದಿಂದ ತೊಡಗಿ ರಾಜಕೀಯದವರೆಗೆ, ಸಾಹಿತ್ಯದಿಂದ ತೊಡಗಿ ರಕ್ಷಣಾ ಕ್ಷೇತ್ರದವರೆಗೆ ಯಾರೂ ಏನನ್ನೂ ಮಾತಾಡಬಲ್ಲರು. ತಮ್ಮನ್ನು ಹೊರತುಪಡಿಸಿ ಬೇರೆಯವರಿಗೆಲ್ಲ ಸಲಹೆ ನೀಡಬಲ್ಲರು, ಬುದ್ಧಿವಾದ ಹೇಳಬಲ್ಲರು. ಕೀಳರಿಮೆಯನ್ನು ಅಹಂ ಆಗಿ ಮೆರೆಸುವವರು, ಕೀರ್ತಿಶನಿಯನ್ನು ಹೆಗಲೇರಿಸಿಕೊಂಡವರು, ಮುಠ್ಠಾಳತನಕ್ಕೆ ಬುದ್ಧಿವಂತಿಕೆಯ ಅಂಗಿ ತೊಡಿಸಿದವರು, ಪಂಥ-ಸಿದ್ಧಾಂತಗಳೆಂದು ಹಗಲು ರಾತ್ರಿಗಳನ್ನು ಸವೆಸುವವರು... ಅಲ್ಲಿ ವೈವಿಧ್ಯಮಯ ವ್ಯಕ್ತಿತ್ವಗಳು ಸದಾ ಎದುರಾಗುತ್ತಲೇ ಇರುತ್ತವೆ. ಅದು ಪ್ರಬಲರಷ್ಟೇ ಉಳಿದುಕೊಳ್ಳುವ ಮಾರುಕಟ್ಟೆ. ಗಟ್ಟಿ ಗಂಟಲಿನವನಿಗೆ ಮಾತ್ರ ಉಳಿಗಾಲ. ಮಾತನಾಡದವನು ಬದುಕಿಲ್ಲವೆಂದು ಅರ್ಥ. ಅಲ್ಲಿ ಒಂದು ಕವಿತೆ ಬರೆದವನು ಕವಿಯಾಗುತ್ತಾನೆ. ಎರಡು ಕತೆ ಬರೆದವನು ಕತೆಗಾರನಾಗುತ್ತಾನೆ. ಮೂರು ಲೇಖನ ಬರೆದವನು ಸಾಹಿತಿಯಾಗುತ್ತಾನೆ. ಅಷ್ಟರಲ್ಲಿ ನಾಲ್ಕು ಪ್ರಶಸ್ತಿಗಳೂ ಸಂದಿರುತ್ತವೆ. ಅಲ್ಲಿಗೆ ಆತನೆದುರು ಖ್ಯಾತ, ಪ್ರಸಿದ್ಧ, ಇತ್ಯಾದಿ ಐದಾರು ವಿಶೇಷಣಗಳು, ಬಿರುದು ಬಾವಲಿಗಳು ಸೇರಿಕೊಳ್ಳುತ್ತವೆ.

ಸೋಶಿಯಲ್ ಮೀಡಿಯಾವೊಂದು ಮಾಯಾಬಜಾರು. ಚೂರು ತಪ್ಪಿದರೂ ಶ್ರೀಕೃಷ್ಣಗಾರುಡಿಯಂತಹ ಗೊಂಡಾರಣ್ಯದಲ್ಲಿ ಸಿಲುಕಿ ಇನ್ನಿಲ್ಲದ ಪಾಡುಪಡಬೇಕಾಗುತ್ತದೆ. ಐವತ್ತು ದೂರವಾಣಿ ಸಂಖ್ಯೆಗಳೇನು, ನಮ್ಮ ಹೆಸರು-ವಿಳಾಸವೇ ಮರೆತು ಹೋದೀತು. ಅಂತಹದೊಂದು ದುರಂತ ನಡೆಯದೇ ಇರಲಿ.

- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: