'ವಿದ್ಯಾರ್ಥಿಪಥ' ಸೆಪ್ಟೆಂಬರ್ 2021ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ
ವಿದ್ಯಾರ್ಥಿಗಳಿಗೆ ಅಧ್ಯಾಪಕನಿಗಿಂತ ದೊಡ್ಡ ಪಠ್ಯಪುಸ್ತಕವಿಲ್ಲ. ಅವನ ತಿಳುವಳಿಕೆ, ವರ್ತನೆ, ಮನೋಭಾವ, ಸದ್ಗುಣಗಳೇ ವಿದ್ಯಾರ್ಥಿಗಳಿಗೆ ಪಾಠಗಳು. ಆತನ ಒಂದೊಂದು ನಡೆಯನ್ನೂ ವಿದ್ಯಾರ್ಥಿಗಳು ಪ್ರತೀಕ್ಷಣವೂ ಗಮನಿಸುತ್ತಿರುತ್ತಾರೆ, ಅನುಸರಿಸುತ್ತಿರುತ್ತಾರೆ. ಶಿಕ್ಷಕರು ಕೇವಲ ಪಾಠವನ್ನಷ್ಟೇ ಮಾಡುವುದಿಲ್ಲ, ಏಕಕಾಲದಲ್ಲಿ ನೂರಾರು ಮನಸ್ಸುಗಳನ್ನು ಪ್ರಭಾವಿಸುತ್ತಲೂ ಇರುತ್ತಾರೆ. ಅವರು ಎಚ್ಚರ ತಪ್ಪಿದರೆ ಇಡೀ ತಲೆಮಾರೊಂದನ್ನು ದಾರಿತಪ್ಪಿಸಿದ ಪಾತಕ ಎಸಗಿದಂತೆ.ಹೊಟ್ಟೆಪಾಡಿಗಾಗಿ ಎಲ್ಲರಿಗೂ ಒಂದೊಂದು ವೃತ್ತಿ ಅಗತ್ಯ; ಆದರೆ ಅಧ್ಯಾಪಕನದ್ದು ಕೇವಲ ಹೊಟ್ಟೆಪಾಡಿನ ವೃತ್ತಿ ಅಲ್ಲ. ನಾಳೆಯ ಸಮಾಜವನ್ನು ರೂಪಿಸುವ ವೃತ್ತಿ. ‘ನಾನು ಶಿಕ್ಷಕನಲ್ಲ, ಎಚ್ಚರಗೊಳಿಸುವವನು’ ಎಂದ ರಾಬರ್ಟ್ ಫ್ರಾಸ್ಟ್. ಅಂತಹದೊಂದು ಪ್ರಜ್ಞೆ ಎಲ್ಲ ಅಧ್ಯಾಪಕರಲ್ಲೂ ಇರಬೇಕು. ನಿಮ್ಮ ವಿದ್ಯಾಭ್ಯಾಸದ ದಿನಗಳನ್ನು ನೆನಪಿಸಿಕೊಳ್ಳಿ ಎಂದು ನಿಮ್ಮನ್ನು ಯಾರಾದರೂ ಕೇಳಿದರೆ ನಿಮಗೆ ಮೊದಲು ನೆನಪಾಗುವುದು ನಿಮ್ಮ ಅಧ್ಯಾಪಕರೇ ಹೊರತು, ಪೀಠೋಪಕರಣಗಳೂ ಅಲ್ಲ, ಪಾಠೋಪಕರಣಗಳೂ ಅಲ್ಲ. ಬದುಕಿನಲ್ಲಿ ಅಧ್ಯಾಪಕನಿಗಿರುವ ಸ್ಥಾನ ಅಷ್ಟು ದೊಡ್ಡದು. ಅವನದ್ದು ವೃತ್ತಿ, ಪ್ರವೃತ್ತಿ ಮತ್ತು ಸಂಸ್ಕೃತಿ. ಆತ ನಿವೃತ್ತನಾಗುವುದೇ ಇಲ್ಲ. ಹಾಗಾದರೆ ಒಬ್ಬ ಶ್ರೇಷ್ಠ ಶಿಕ್ಷಕನ ಲಕ್ಷಣಗಳೇನು? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಈ ಲೇಖನದ ಉದ್ದೇಶ.
ಪರಿಣಾಮಕಾರಿ ಸಂವಹನ:
ಅತ್ಯುತ್ತಮ ಅಧ್ಯಾಪಕ ಶ್ರೇಷ್ಠ ಸಂವಹನಕಾರನೂ ಆಗಿರುತ್ತಾನೆ. ತಾನು ತಿಳಿದುಕೊಂಡಿದ್ದರೆ ಸಾಲದು, ಅದನ್ನು ಅಷ್ಟೇ ಸಮರ್ಥವಾಗಿ ಆತ ವಿದ್ಯಾರ್ಥಿಗಳಿಗೆ ತಲುಪಿಸಬೇಕಾಗುತ್ತದೆ. ಭಾಷೆಯೇ ಅವನ ಮೂಲ ಬಂಡವಾಳ. ಭಾಷೆಯ ಮೇಲೆ ಒಳ್ಳೆಯ ಹಿಡಿತವಿರುವ ಅಧ್ಯಾಪಕ ಬಲುಬೇಗನೆ ವಿದ್ಯಾರ್ಥಿಗಳಿಗೆ ಹತ್ತಿರವಾಗುತ್ತಾನೆ. ತನ್ನ ಮನಸ್ಸಿನಲ್ಲಿರುವುದನ್ನು ಆತ ಸುಲಭವಾಗಿ ಬರೆವಣಿಗೆ ಮತ್ತು ಮಾತಿನ ಮೂಲಕ ವಿದ್ಯಾರ್ಥಿಗಳ ಮನಸ್ಸಿಗೆ ದಾಟಿಸಬಲ್ಲ. ಅವನ ತರಗತಿ ವಿದ್ಯಾರ್ಥಿಗಳ ಗಮನ ಸೆಳೆಯುವಂತೆಯೂ ನಿರಾಸಕ್ತಿ ಹುಟ್ಟಿಸದಂತೆಯೂ ಇರುತ್ತದೆ. ಭಾಷೆಯಷ್ಟೇ ಭಾವದ ಅಭಿವ್ಯಕ್ತಿ, ಮಾತಿನ ಏರಿಳಿತ, ಉತ್ತಮ ಕಂಠ, ಪೂರಕ ದೇಹಭಾಷೆ, ದೃಷ್ಟಿಸಂಪರ್ಕ – ಎಲ್ಲವೂ ಮುಖ್ಯವಾಗುತ್ತದೆ. ಅಧ್ಯಾಪಕ ಹೇಳುವುದರಲ್ಲಿ ವಿದ್ಯಾರ್ಥಿಗೆ ವಿಶ್ವಾಸ ಮೂಡುವುದು ಮುಖ್ಯ.
ಉತ್ತಮ ಅಧ್ಯಾಪನವೆಂದರೆ ಕಾಲು ಭಾಗ ಸಿದ್ಧತೆ, ಮುಕ್ಕಾಲು ಪಾಲು ಪ್ರದರ್ಶನ ಎಂಬ ಮಾತಿದೆ. ಇದರರ್ಥ ಕಡಿಮೆ ತಯಾರಿ, ಹೆಚ್ಚು ತೋರಿಕೆ ಎಂದಲ್ಲ; ನಡೆಸಿದ ತಯಾರಿಯನ್ನು ವಿದ್ಯಾರ್ಥಿಗಳಿಗೆ ದಾಟಿಸುವುದಕ್ಕೆ ಯಾವ ಬಗೆಯ ನಿರ್ವಹಣೆ ಬೇಕು ಎಂದು. ಅನೇಕ ಸಲ ಸಾಕಷ್ಟು ಜ್ಞಾನವಂತ ಅಧ್ಯಾಪಕನೂ ವಿದ್ಯಾರ್ಥಿಗಳಿಗೆ ಹತ್ತಿರವಾಗುವಲ್ಲಿ ಸೋಲುತ್ತಾನೆ; ಆತನ ಸಂವಹನದಲ್ಲಿರುವ ತೊಡಕೇ ಇದಕ್ಕೆ ಮುಖ್ಯ ಕಾರಣ. ಏನು ಕೊಡುತ್ತೇವೆ ಎಂಬಷ್ಟೇ ಹೇಗೆ ಕೊಡುತ್ತೇವೆ ಎಂಬುದೂ ಮುಖ್ಯ.
ಕೇಳ್ಮೆ:
ಉತ್ತಮ ಅಧ್ಯಾಪಕನಿಗೆ ಹೇಳುವಷ್ಟೇ ಆಸಕ್ತಿ ಕೇಳುವುದರಲ್ಲಿಯೂ ಇರಬೇಕು. ಉತ್ತಮ ಸಂವಹನಕಾರ ಉತ್ತಮ ಕೇಳುಗನೂ ಆಗಿರುತ್ತಾನೆ. ಗಂಟೆಗಟ್ಟಲೆ ತಾನೇ ಬಡಬಡಿಸುವವನು, ವಿದ್ಯಾರ್ಥಿಗಳ ಅಭಿಪ್ರಾಯಕ್ಕೆ ಕಿವಿಗೊಡದಿರುವವನು ಅವರಿಗೆ ಪ್ರಿಯನಾಗಲಾರ. ವಿದ್ಯಾರ್ಥಿಗಳ ಅಭಿಪ್ರಾಯಕ್ಕೆ ಕಿವಿಯಾಗುವವನು, ಅವರ ವ್ಯಕ್ತಿತ್ವ ವಿಕಸನಕ್ಕೂ ಕಾರಣನಾಗುತ್ತಾನೆ. ನಿಮಗೇನು ಗೊತ್ತಿದೆ, ನೀವು ಹೇಳುವುದೆಲ್ಲವೂ ನನಗೆ ಗೊತ್ತಿರುವಂಥದ್ದೇ ಎಂಬ ಮನೋಭಾವವಿರುವ ಶಿಕ್ಷಕ ತಾನೂ ಬೆಳೆಯುವುದಿಲ್ಲ, ಇತರರನ್ನೂ ಬೆಳೆಯಗೊಡುವುದಿಲ್ಲ.
ತಾಳ್ಮೆ:
ತಾಳ್ಮೆಯೇ ಶಿಕ್ಷಕವೃತ್ತಿಯ ಮೂಲಮಂತ್ರ. ತಾಳಿದವನು ಅಧ್ಯಾಪಕನಾಗಿ ಬಾಳಿಯಾನು. ದುಡುಕು ಪ್ರವೃತ್ತಿಯವರಿಗೆ ಅಧ್ಯಾಪನ ಸಲ್ಲುವಂಥದ್ದಲ್ಲ. ಅದರಲ್ಲೂ ಪ್ರಾಥಮಿಕ ಶಾಲಾ ಹಂತದಲ್ಲಿರುವವರಂತೂ ಸಹನೆಯಲ್ಲೇ ಅದ್ದಿತೆಗೆದವರಾಗಿರಬೇಕು. ಆ ವಯಸ್ಸಿನ ಮಕ್ಕಳೇ ಹಾಗೆ; ಅವರನ್ನು ತರಗತಿಯಲ್ಲಿ ಕೂರಿಸುವುದೆಂದರೆ ಕಪ್ಪೆಗಳನ್ನು ಒಂದು ಕಡೆ ಹಿಡಿದಿಟ್ಟ ಹಾಗೆಯೇ. ಒಬ್ಬೊಬ್ಬರದು ಒಂದೊಂದು ದೂರು, ಒಂದೊಂದು ವರ್ತನೆ. ಎಲ್ಲವನ್ನೂ ಎಲ್ಲರನ್ನೂ ಕೇಳಿಸಿಕೊಂಡು ಹೇಳಬೇಕಾದ್ದನ್ನು ಹೇಳಿಮುಗಿಸುವುದೊಂದು ಸಾಹಸವೇ. ತಾಳ್ಮೆಯಿಲ್ಲದ ಅಧ್ಯಾಪಕ ಇಂತಹ ಮಕ್ಕಳು ಮುಂದೆಂದೂ ಮಾತಾಡದಂತೆ, ಅಂಜಿಕೆಯ ಚಿಪ್ಪಿನಿಂದ ಹೊರಬರದಂತೆ ಮಾಡಿಯಾನು; ಆ ಮೂಲಕ ಅವರ ಭವಿಷ್ಯವನ್ನೇ ಹಾಳುಮಾಡಿಯಾನು.
ಶಿಕ್ಷಣದ ಎಲ್ಲ ಹಂತಗಳಲ್ಲಿರುವವರಿಗೂ ಈ ತಾಳ್ಮೆ ಕಡ್ಡಾಯ. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುವ, ಗೊಂದಲಗಳನ್ನು ಪರಿಹರಿಸುವ, ಅವರ ಅಭಿಪ್ರಾಯಗಳನ್ನು ಮನ್ನಿಸುವ, ದಂಡಿಸುವುದಕ್ಕೆ ಮೊದಲು ಯೋಚಿಸುವ ಅಧ್ಯಾಪಕ ವೃತ್ತಿಯಲ್ಲಿ ಮಾದರಿಯಾಗುತ್ತಾನೆ.
ಹೊಂದಾಣಿಕೆ:
ವಿದ್ಯಾರ್ಥಿಗಳು, ಅವರ ಪೋಷಕರು, ಅಧಿಕಾರಿ ವರ್ಗ, ಆಡಳಿತ ವರ್ಗ, ಸಹೋದ್ಯೋಗಿಗಳು, ಸುತ್ತಲಿನ ಸಮಾಜ- ಎಲ್ಲರೊಂದಿಗೂ ಹೊಂದಿಕೊಂಡು ಹೋಗುವುದು ಅಧ್ಯಾಪಕನಿಗೆ ಅನಿವಾರ್ಯ. ಹೊಂದಾಣಿಕೆ ಎಂದರೆ ಅನ್ಯಾಯವಾದಾಗ ಪ್ರತಿಭಟಿಸದೆ ಇರುವುದು ಎಂದಲ್ಲ. ತಮಗೆ ತೊಂದರೆಯಾದಾಗ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಹೆಜ್ಜೆಹೆಜ್ಜೆಗೂ ಕೆಡುಕು-ತೊಡಕುಗಳನ್ನು ಹುಡುಕುವ ಅಧ್ಯಾಪಕ ಕೊನೆಗೆ ಎಲ್ಲಿಯೂ ಸಲ್ಲದವನಾಗುತ್ತಾನೆ.
ವಿಭಿನ್ನ ಮನಸ್ಥಿತಿಯ ಸಹೋದ್ಯೋಗಿಗಳು ಜತೆಗಿದ್ದಾಗ ಅಧ್ಯಾಪಕ ತನ್ನ ಮನಃಶಾಂತಿ ಉಳಿಸಿಕೊಳ್ಳಬೇಕಾದರೆ ಅನಿವಾರ್ಯವಾಗಿಯಾದರೂ ಕೆಲವು ವೈಯಕ್ತಿಕ ಆದ್ಯತೆಗಳನ್ನು ತತ್ಕಾಲಕ್ಕೆ ಮರೆಯಬೇಕಾಗುತ್ತದೆ. ಎಲ್ಲ ವೃತ್ತಿಗಳೂ ಈ ಬಗೆಯ ಹೊಂದಾಣಿಕೆಯನ್ನು ಬಯಸುವುದುಂಟು. ಈ ಹೊಂದಾಣಿಕೆಯ ಕಾಯಕದಲ್ಲಿ ಕೆಲವು ಸಣ್ಣಪುಟ್ಟ ಅನನುಕೂಲಗಳನ್ನು ಸಹಿಸಿಕೊಳ್ಳದೆ ಬೇರೆ ದಾರಿಯಿಲ್ಲ.
ಸೃಜನಶೀಲತೆ:
ಸೃಜನಶೀಲ ಅಧ್ಯಾಪಕ ತನ್ನ ವಿದ್ಯಾರ್ಥಿಗಳ ಸುಪ್ತಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಮಾತ್ರವಲ್ಲ, ಸ್ವತಃ ತಾನೇ ಅವರಿಗೆ ಮಾದರಿಯಾಗಬಲ್ಲ. ಜಡಪ್ರವೃತ್ತಿಯ ಅಧ್ಯಾಪಕರು ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನೂ ಕೊಲ್ಲಬಲ್ಲರು. ಅವರನ್ನು ಶಾಶ್ವತ ಅಂಗವಿಕಲರನ್ನಾಗಿ ಮಾಡಬಲ್ಲರು.
ಹೊಸದಾಗಿ ಯೋಚಿಸುವ, ಹೊಸ ಸಾಹಸಗಳಿಗೆ ಕೈಹಾಕುವ, ಹೊಸ ಸವಾಲುಗಳನ್ನು ಸ್ವೀಕರಿಸುವ ಮನೋಭಾವ ವಿದ್ಯಾರ್ಥಿಗಳಲ್ಲಿ ಅಧ್ಯಾಪಕನ ಮೂಲಕವೇ ಬೆಳೆಯಬೇಕು.
ಆತ್ಮವಿಶ್ವಾಸ:
ಶಿಕ್ಷಣ ಆತ್ಮವಿಶ್ವಾಸವನ್ನು ಹುಟ್ಟಿಸುತ್ತದೆ; ಆತ್ಮವಿಶ್ವಾಸ ಭರವಸೆಯನ್ನು ಮೂಡಿಸುತ್ತದೆ; ಭರವಸೆ ಶಾಂತಿಯನ್ನು ಸೃಜಿಸುತ್ತದೆ ಎಂಬ ಕನ್‍ಫ್ಯೂಶಿಯಸ್‍ನ ಮಾತಿದೆ. ಇಂತಹ ಆತ್ಮವಿಶ್ವಾಸ ಶಿಕ್ಷಣದಿಂದ ಮೂಡುವುದಾದರೆ, ಅದರ ಮೂಲ ಶಿಕ್ಷಕನೇ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಬೇಕಾದರೆ ಅದು ಮೊದಲು ಶಿಕ್ಷಕನಲ್ಲಿ ಕಾಣಿಸಿಕೊಳ್ಳಬೇಕು. ಆತ್ಮವಿಶ್ವಾಸ ಇರುವ ಅಧ್ಯಾಪಕ ಎಂತಹ ಕಠಿಣ ಸನ್ನಿವೇಶದಲ್ಲೂ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಭವಿಷ್ಯದ ಕುರಿತ ಭರವಸೆಯನ್ನು ಮೂಡಿಸಬಲ್ಲ.
ವಿನೋದಪ್ರಜ್ಞೆ:
ವಿನೋದಪ್ರಜ್ಞೆ ಬಹುಮಂದಿಗೆ ಇಷ್ಟವಾಗುವ ಗುಣ. ಮಾತಿನ ಮಧ್ಯೆ ಸಣ್ಣ ವಿನೋದ ಬೆರೆಸುವವರು ಬೇಗನೆ ಹತ್ತಿರವಾಗುತ್ತಾರೆ. ಅಧ್ಯಾಪಕನಲ್ಲಿ ವಿನೋದಪ್ರವೃತ್ತಿ ಇದ್ದರೆ ತರಗತಿ ಆಕರ್ಷಕವಾಗುತ್ತದೆ, ಕುತೂಹಲ ಉಳಿಸಿಕೊಳ್ಳುತ್ತದೆ. ಏಕತಾನತೆ ದೂರವಾಗುತ್ತದೆ. ಅಂತಹ ತರಗತಿಗಳಿಗೆ ಹಾಜರಾಗಲು ವಿದ್ಯಾರ್ಥಿಗಳೂ ಕಾಯುತ್ತಾರೆ. ವಿದ್ಯಾರ್ಥಿಗಳಿಗೆ ಕುತೂಹಲಹುಟ್ಟಿಸುವಂತಹ ತರಗತಿಗಳನ್ನು ಸಂಯೋಜಿಸುವುದು ಅಧ್ಯಾಪಕನ ಕರ್ತವ್ಯ ಕೂಡಾ.
ನಾಯಕತ್ವ:
ಉತ್ತಮ ಅಧ್ಯಾಪಕ ಉತ್ತಮ ನೇತಾರ ಕೂಡ. ಆತ ಮುಂದೆ ನಿಂತು ದಾರಿ ತೋರಿಸುವವನೂ, ಹಿಂದೆ ನಿಂತು ಬೆಂಬಲಿಸುವವನೂ ಆಗಿರಬೇಕು. ನಾಯಕನೆಂದ ಮೇಲೆ ಯಶಸ್ಸು ಮತ್ತು ಸೋಲುಗಳನ್ನು ಸಮಾನವಾಗಿ ಸ್ವೀಕರಿಸುವವನು ಎಂದು ಬೇರೆ ಹೇಳಬೇಕಾಗಿಲ್ಲ. ಯಶಸ್ಸಿಗೆಲ್ಲ ತಾನೇ ಕಾರಣನೆಂದೂ, ಸೋಲಿಗೆಲ್ಲ ಉಳಿದವರು ಕಾರಣರೆಂದೂ ಹೇಳುವವ ಎಂದೂ ನಾಯಕನ ಯೋಗ್ಯತೆ ಪಡೆಯಲಾರ. ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಅಧ್ಯಾಪಕ ಪಾಲು ಪಡೆಯುವವನಾದರೆ, ಅವರ ವೈಫಲ್ಯಗಳಲ್ಲೂ ಒಂದು ಪಾಲನ್ನು ಆತ ಹಂಚಿಕೊಳ್ಳಬೇಕು. ಹಾಗಾಗುವುದರಲ್ಲಿ ತನ್ನ ಪಾಲು ಏನಿದೆ ಎಂದು ಆತ ಯೋಚಿಸಿ, ಮುಂದೆ ಹಾಗಾಗದಂತೆ ಎಚ್ಚರಿಕೆ ವಹಿಸಬೇಕು.
ವಿದ್ಯಾರ್ಥಿಗಳಿಗೆ ಅಧ್ಯಾಪಕನೇ ಬಹುದೊಡ್ಡ ಮಾದರಿ. ಆತನೇ ಮಹಾನಾಯಕ. ಅವನ ವರ್ತನೆ, ಚಿಂತನೆಗಳನ್ನು ವಿದ್ಯಾರ್ಥಿಗಳು ಕ್ಷಣಕ್ಷಣವೂ ಗಮನಿಸುತ್ತಾರೆ. ಆತ ಮುಂಚೂಣಿಯಲ್ಲಿದ್ದು, ವಿದ್ಯಾರ್ಥಿಗಳು ಅನುಸರಿಸಬಹುದಾದ ಮಾದರಿಗಳನ್ನು ತೋರಿಸಬೇಕು. ಎಲ್ಲರನ್ನೂ ಒಂದೇ ತಂಡವಾಗಿ ಕರೆದುಕೊಂಡು ಹೋಗುವ ಚಾಕಚಕ್ಯತೆ ಇರಬೇಕು. ಬದುಕಿನಲ್ಲಿ ಸವಾಲುಗಳೆದುರಾದಾಗ ಎದೆಗುಂದದೆ ಸಮಾಧಾನ ಮತ್ತು ಜಾಣ್ಮೆಯಿಂದ ಅವುಗಳನ್ನು ಎದುರಿಸುವುದು ಹೇಗೆಂಬುದನ್ನು ಹೇಳಿಕೊಡಬೇಕು. ಪಾಠವಿರುವುದು ಪಠ್ಯಪುಸ್ತಕಗಳಲ್ಲಿ ಮಾತ್ರವಲ್ಲ.
ಬಹುಕಾರ್ಯ ಸಾಮರ್ಥ್ಯ:
ಶಿಕ್ಷಕ ಏಕಕಾಲಕ್ಕೆ ಅನೇಕ ಕೆಲಸಗಳನ್ನು ನಿಭಾಯಿಸುವ ಕ್ಷಮತೆ ಹೊಂದಿರಬೇಕು. ಶಿಕ್ಷಕನ ಕೆಲಸ ಬೋಧಿಸುವುದೇ ಆದರೂ ವಾಸ್ತವದಲ್ಲಿ ವಿವಿಧ ಜವಾಬ್ದಾರಿಗಳನ್ನು ಏಕಕಾಲಕ್ಕೆ ನಿರ್ವಹಿಸಬೇಕಾಗುತ್ತದೆ. ಅತಿಯಾದ ಪಾಠೇತರ ಹೊಣೆಗಾರಿಕೆಗಳನ್ನು ಹೊರಿಸಿದಾಗ ಅಧ್ಯಾಪಕನ ಕ್ರಿಯಾಶೀಲತೆಯೇ ಹೊರಟುಹೋಗುವ ಅಪಾಯವಿದೆಯಾದರೂ, ಆತನೇ ನಿರ್ವಹಿಸಬೇಕಾದ ಕೆಲವು ಕರ್ತವ್ಯಗಳನ್ನು ನಿಭಾಯಿಸುವುದು ಅನಿವಾರ್ಯ. ಇಂಥದ್ದೊಂದು ‘ಮಲ್ಟಿಟಾಸ್ಕಿಂಗ್’ ಕೌಶಲ ಆತನಲ್ಲಿರಬೇಕು.
ಸ್ನೇಹಪರತೆ:
ಅಧ್ಯಾಪಕ ವಿದ್ಯಾರ್ಥಿಗಳ ‘ಕ್ಲೋಸ್ ಫ್ರೆಂಡ್’ ಆಗಬೇಕೆಂದೇನೂ ಇಲ್ಲ; ಆದರೆ ಒಳ್ಳೆಯ ಸ್ನೇಹಿತನೋ, ಹಿರಿಯಣ್ಣನೋ, ಹಿರಿಯಕ್ಕನೋ ಆಗಬೇಕು. ಹೊಸ ಕಾಲದ ಮನಸ್ಸುಗಳು ತುಂಬ ಸೂಕ್ಷ್ಮ. ಅವರು ಅಧ್ಯಾಪಕರಲ್ಲಿ ಒಳ್ಳೆಯ ಮಾರ್ಗದರ್ಶಕರನ್ನು ಕಾಣಲು ಬಯಸುತ್ತಾರೆ. ತರಗತಿಯ ಒಳಗೆ ಸಿಕ್ಕಿದಷ್ಟೂ, ಹೊರಗೂ ಲಭ್ಯರಿರಬೇಕೆಂದು ಅಪೇಕ್ಷಿಸುತ್ತಾರೆ. ವೇಳಾಪಟ್ಟಿ ಪ್ರಕಾರ ಪಾಠ ಮಾಡಿದ್ದೇನೆ, ಅಲ್ಲಿಗೆ ತನ್ನ ಕೆಲಸ ಮುಗಿಯಿತು ಎಂದು ಭಾವಿಸುವ ಶಿಕ್ಷಕ/ ಶಿಕ್ಷಕಿ ದಂತಗೋಪುರದಲ್ಲೇ ಉಳಿದುಬಿಡುತ್ತಾರೆ.
ಗುರು-ಶಿಷ್ಯರ ನಡುವೆ ಸಣ್ಣದೊಂದು ಅಂತರ ಇರಬೇಕು ನಿಜ. ಆದರೆ ಮೈಲುದ್ದದ ಅಂತರವಿಟ್ಟುಕೊಂಡು ಅಧ್ಯಾಪಕ ಸಾಧಿಸುವುದಾದರೂ ಏನು? ಇದರಿಂದ ಇಬ್ಬರೂ ಕಳೆದುಕೊಳ್ಳುವುದೇ ಹೆಚ್ಚು. ವಿದ್ಯಾರ್ಥಿಗಳು ತಮ್ಮ ಅಗತ್ಯಕ್ಕೆ ಅಧ್ಯಾಪಕನನ್ನು ಸಮೀಪಿಸುವ ಸ್ನೇಹಪರ ವ್ಯಕ್ತಿತ್ವ ಅವನದಾಗಬೇಕು. ಸಾಕಷ್ಟು ವಿದ್ಯಾರ್ಥಿಗಳಿಗೆ ಪಠ್ಯಕ್ಕೆ ಹೊರತಾದ ಅನೇಕ ಸಮಸ್ಯೆಗಳಿರುತ್ತವೆ. ಪೋಷಕರಲ್ಲಿ, ಸ್ನೇಹಿತರಲ್ಲಿ ಹೇಳಿಕೊಳ್ಳಲಾಗದ ಆತಂಕಗಳೂ ಇರುತ್ತವೆ. ವಿಶ್ವಸನೀಯ ಅಧ್ಯಾಪಕರು ಅಂತಹ ವಿದ್ಯಾರ್ಥಿಗೆ ಅಪದ್ಬಾಂಧವರಾಗಬಲ್ಲರು. ಉತ್ತಮ ಅಧ್ಯಾಪಕ ಉತ್ತಮ ಆಪ್ತಸಮಾಲೋಚಕನೂ ಆಗಬಲ್ಲ. ಈ ಅವಕಾಶ ದುರುಪಯೋಗವಾಗದಂತಹ ಸ್ವಸ್ಥಾನಪರಿಜ್ಞಾನವಂತೂ ಆತನಿಗಿರುವುದು ಮುಖ್ಯ.
ಬದ್ಧತೆ:
ಕರ್ತವ್ಯದಲ್ಲಿ ಬದ್ಧತೆಯಿಲ್ಲದ ಅಧ್ಯಾಪಕ(ಕಿ) ತನ್ನ ವಿದ್ಯಾರ್ಥಿಗಳಿಗೆ ಏನನ್ನೂ ಕಲಿಸಲಾರ(ಳು). ವಿದ್ಯಾರ್ಥಿಗಳು ಹೇಳಿದ್ದನ್ನು ಕೇಳುವುದಿಲ್ಲ, ಮಾಡಿದ್ದನ್ನು ಮಾಡುತ್ತಾರೆ. ಖುದ್ದು ಬದ್ಧತೆಯಿಲ್ಲದ ಅಧ್ಯಾಪಕ ತನ್ನ ವಿದ್ಯಾರ್ಥಿಗಳಲ್ಲಿ ಬದ್ಧತೆ ಬೇಕು ಎಂದು ಪಾಠ ಮಾಡುವುದರಲ್ಲಿ ಯಾವ ಹುರುಳೂ ಇಲ್ಲ.
ಸ್ವತಃ ಅಧ್ಯಯನಶೀಲನಲ್ಲದ ಅಧ್ಯಾಪಕ ತನ್ನ ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು ಎಂದು ಬೋಧಿಸುವುದರಲ್ಲಿ ಏನರ್ಥವಿದೆ? ಸ್ವತಃ ಸಮಯಪಾಲನೆಯ ಗುಣವಿಲ್ಲದ ಅಧ್ಯಾಪಕ ತನ್ನ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗಬೇಕು ಎಂದು ಬಯಸುವುದರಲ್ಲಿ ಏನರ್ಥವಿದೆ? ಸ್ವಯಂಶಿಸ್ತು ಇಲ್ಲದ ಅಧ್ಯಾಪಕ ತನ್ನ ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಾಗಬೇಕು ಎಂದು ಅಪೇಕ್ಷಿಸುವುದರಲ್ಲಿ ಏನರ್ಥವಿದೆ? ಸ್ವತಃ ನೈತಿಕ ಬದುಕನ್ನು ಹೊಂದಲಾಗದ ಅಧ್ಯಾಪಕ ತನ್ನ ವಿದ್ಯಾರ್ಥಿಗಳಿಗೆ ನೀತಿಬೋಧನೆ ಮಾಡುವುದರಲ್ಲಿ ಏನು ತಿರುಳಿದೆ? ಅಧ್ಯಾಪಕನಾದರೂ ಆ ವ್ಯಕ್ತಿಗೆ ತನ್ನದೇ ಆದ ಜೀವನವೊಂದಿಗೆ ಎಂಬುದೇನೋ ನಿಜ; ಆದರೆ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಪಾಠ ಮಾಡಿದ ಅಧ್ಯಾಪಕ ಶಾಲೆ/ ಕಾಲೇಜಿನ ಎದುರಿನ ಗೂಡಂಗಡಿಯಲ್ಲಿ ಸಿಗರೇಟು ಸೇದುತ್ತಾ ನಿಂತಿರುವುದನ್ನು ಕಂಡರೆ ವಿದ್ಯಾರ್ಥಿಗಳಿಗೆ ಏನನ್ನಿಸಬಹುದು?
ಸ್ವಯಂಮೌಲ್ಯಮಾಪನ:
ಯಾವ ವ್ಯಕ್ತಿಯೂ ಪರಿಪೂರ್ಣನಲ್ಲ, ಅಧ್ಯಾಪಕನೂ. ಅವನಲ್ಲಿ ವಿವಿಧ ಸದ್ಗುಣಗಳಿರಬೇಕು ಎಂದು ಅಪೇಕ್ಷಿಸುವುದೇನೋ ಸರಿ, ಆದರೆ ಎಲ್ಲವೂ ಎಲ್ಲರಲ್ಲೂ ಇರುವುದು ಕಷ್ಟ. ಏಕೆಂದರೆ ಎಲ್ಲರೂ ಮನುಷ್ಯರೇ. ಪ್ರತಿಯೊಬ್ಬರಲ್ಲೂ ಅವರದ್ದೇ ಆದ ಸಾಮಥ್ರ್ಯ ಮತ್ತು ಮಿತಿಗಳಿರುತ್ತವೆ. ಅವನ್ನು ಅರ್ಥಮಾಡಿಕೊಳ್ಳುವವನು ಯಶಸ್ವೀ ಎನಿಸಿಕೊಳ್ಳುತ್ತಾನೆ. ಅಧ್ಯಾಪಕರಲ್ಲಂತೂ ಈ ಸ್ವಯಂಮೌಲ್ಯಮಾಪನ ಅಥವಾ ಆತ್ಮನಿರೀಕ್ಷಣೆಯ ಕೆಲಸ ನಡೆಯಲೇಬೇಕು.
ಪ್ರತೀ ಸಂಸ್ಥೆಯಲ್ಲೂ ಕಡೇ ಪಕ್ಷ ವರ್ಷಕ್ಕೊಮ್ಮೆಯಾದರೂ ಸ್ವಯಂಮೌಲ್ಯಮಾಪನದ ವ್ಯವಸ್ಥೆಯಿರುತ್ತದೆ. ಇವೆಲ್ಲ ಯಾಂತ್ರಿಕ ಪ್ರಕ್ರಿಯೆಗಳು. ವಾಸ್ತವವಾಗಿ ಅವುಗಳಿಂದ ಯಾವ ಸಾಧನೆಯೂ ಆಗುವುದಿಲ್ಲ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆ ಮಾಡುವವರಿಗೆ ಪಿಎಚ್‍ಡಿ ಕಡ್ಡಾಯ ಮಾಡುವುದರಿಂದ, ವರ್ಷಕ್ಕೆ ಇಂತಿಷ್ಟು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿರಬೇಕು, ಪ್ರಬಂಧ ಮಂಡಿಸಿರಬೇಕು ಎಂದೆಲ್ಲ ಗುರಿ ನಿಗದಿಪಡಿಸುವುದರಿಂದ ಆಗುವ ಪ್ರಯೋಜನ ಏನು? ಈಗಾಗಲೇ ಇರುವ ನಾಟಕಗಳಿಗೆ ಇನ್ನಷ್ಟು ಸೇರ್ಪಡೆ ಅಷ್ಟೇ. ಆತ್ಮಾವಲೋಕನದ ಬಯಕೆ ಅಧ್ಯಾಪಕನಲ್ಲೇ ಹುಟ್ಟಿಕೊಳ್ಳಬೇಕು. ಆಗ ಶಿಕ್ಷಣ ಕ್ಷೇತ್ರದಲ್ಲಿ ಇಂದು ಕಾಣುವ ಬಹುಪಾಲು ಅಪಸವ್ಯಗಳೇ ಇರುವುದಿಲ್ಲ.
ನಿರಂತರ ಕಲಿಕೆ:
ಕಲಿಸುವವನಿಗೂ ಕಲಿಕೆ ನಿರಂತರ. ವಾಸ್ತವವಾಗಿ ಯಾರೂ ಯಾರಿಗೂ ಏನನ್ನೂ ಕಲಿಸಲಾರರು. ಎಲ್ಲರದೂ ಕಲಿಯುವ ಪ್ರಕ್ರಿಯೆ ಅಷ್ಟೇ. ಅಧ್ಯಾಪಕನದೂ ಕಲಿಯುವ ಕೆಲಸವೇ. ತನ್ನ ವಿದ್ಯಾರ್ಥಿ, ಸಹೋದ್ಯೋಗಿಗಳಿಂದಲೂ ಆತ ಕಲಿಯುವುದಕ್ಕೆ ಸಿದ್ಧನಿರಬೇಕು. ತಾನೇ ಎಲ್ಲವನ್ನೂ ತಿಳಿದವನು, ವಿದ್ಯಾರ್ಥಿಗಳು ಮೂರ್ಖರು ಎಂದು ಭಾವಿಸುವ ಅಧ್ಯಾಪಕನಿಗಿಂತ ದೊಡ್ಡ ಮೂರ್ಖ ಇನ್ನೊಬ್ಬನಿಲ್ಲ.
ಹೊಸತಲೆಮಾರಿನ ವಿದ್ಯಾರ್ಥಿಗಳಂತೂ ಬಲು ಚಾಣಾಕ್ಷರಿದ್ದಾರೆ. ಅವರ ಕಲಿಕೆಯ ವೇಗ ತುಂಬ ದೊಡ್ಡದು. ಮುಖ್ಯವಾಗಿ ದಿನನಿತ್ಯದ ತಂತ್ರಜ್ಞಾನ ಬಳಕೆ ಅವರಿಗೆ ಸಲೀಸು. ಅದನ್ನು ಕಲಿಸುವ ಅಗತ್ಯವೇ ಇಲ್ಲ. ಅಧ್ಯಾಪಕ ಕೊಂಚ ಹಿಂದಿನ ತಲೆಮಾರಿನವನಾದರೆ ಅಂತಹ ಕೌಶಲ್ಯಗಳನ್ನು ಹೊಂದುವುದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಈಗಿನ ವಿದ್ಯಾರ್ಥಿಗಳು ಅಧ್ಯಾಪಕರಿಗೇ ಇವನ್ನೆಲ್ಲ ಕಲಿಸಬಲ್ಲರು. ವಿದ್ಯಾರ್ಥಿಗಳಿಂದ ಕಲಿಯುವುದಕ್ಕೆ ಅಧ್ಯಾಪಕನಿಗೆ ಯಾವ ‘ಇಗೋ’ವೂ ಅಡ್ಡಿಬರಬಾರದು. ಒಳ್ಳೆಯದು ಎಲ್ಲಿಂದ, ಹೇಗೆ ಬಂದರೂ ಅದು ಸ್ವೀಕಾರಾರ್ಹವೇ. ‘ವರ್ಣ ಮಾತ್ರಂ ಕಲಿಸಿದಾತಂ ಗುರು’.
ಇದರ ಜೊತೆಗೆ, ಎಲ್ಲ ಜ್ಞಾನಶಿಸ್ತುಗಳು ಸದಾ ಬೆಳೆಯುವ ಮಹಾವೃಕ್ಷಗಳೇ. ಹೊಸ ಜ್ಞಾನದ ಸೇರ್ಪಡೆ ಆಗುತ್ತಲೇ ಇರುತ್ತದೆ. ತಾನು ಕಲಿತದ್ದೇ ಅಂತಿಮ ಎಂದು ಅಧ್ಯಾಪಕನೊಬ್ಬ ಭಾವಿಸಿದರೆ ಆತ ಎಂದೂ ಚಿಗುರದ ಗೊಡ್ಡು ಮರ ಎಂದೇ ಅರ್ಥ. ಅಧ್ಯಾಪಕ ಸದಾ ‘ಅಪ್ಡೇಟ್’ ಆಗುತ್ತಾ ಇರಬೇಕು. ಹೊಸಹೊಸ ಪುಸ್ತಕಗಳನ್ನು ಓದಬೇಕು; ತನ್ನ ಜ್ಞಾನದಿಗಂತವನ್ನು ವಿಸ್ತರಿಸಿಕೊಳ್ಳುತ್ತಿರಬೇಕು; ಹೊಸ ಸಂವಾದಗಳಿಗೆ ತೆರೆದುಕೊಳ್ಳಬೇಕು. ಅಂತಹ ಅಧ್ಯಾಪಕ ಮಾತ್ರ ಹೊಸ ತಲೆಮಾರಿನ ವಿದ್ಯಾರ್ಥಿಗಳ ಅವಶ್ಯಕತೆಗಳನ್ನು ಪೂರೈಸಬಲ್ಲ.
- ಸಿಬಂತಿ ಪದ್ಮನಾಭ ಕೆ. ವಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ