ಶನಿವಾರ, ಆಗಸ್ಟ್ 28, 2021

ಸ್ವಾತಂತ್ರ್ಯ ಚಳವಳಿ ಮತ್ತು ತುಮಕೂರು ಜಿಲ್ಲೆಯ ಪತ್ರಿಕೆಗಳು

15 ಆಗಸ್ಟ್ 2021ರ 'ವಿಜಯವಾಣಿ' ಪತ್ರಿಕೆಯ 'ಅಮೃತಭಾರತ' ಪುರವಣಿಯಲ್ಲಿ ಪ್ರಕಟವಾದ ಲೇಖನ

ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಪತ್ರಿಕಾವೃತ್ತಿಗೂ ಅವಿನಾಭಾವ ಸಂಬಂಧ. ನಮ್ಮ ರಾಷ್ಟ್ರೀಯ ಚಳವಳಿಯ ಇತಿಹಾಸವೂ ಪತ್ರಿಕಾ ಇತಿಹಾಸವೂ ಜತೆಜತೆಯಾಗಿಯೇ ಸಾಗುವುದು ಒಂದು ಕುತೂಹಲಕರ ವಿದ್ಯಮಾನ. ಅನೇಕ ಮಂದಿ ಸ್ವಾತಂತ್ರ್ಯ ಹೋರಾಟಗಾರರು ಸ್ವತಃ ಪತ್ರಕರ್ತರೂ ಆಗಿದ್ದರು ಎಂಬುದನ್ನು ಗಮನಿಸಬೇಕು. ದೇಶದಲ್ಲಿ ರಾಷ್ಟ್ರೀಯ ಪ್ರಜ್ಞೆಯ ಬೇರು-ಬಿಳಲುಗಳನ್ನು ಪೋಷಿಸುವ ಗುಪ್ತಗಾಮಿನಿಗಳಾಗಿ ಪತ್ರಿಕೆಗಳು ಹಾಗೂ ಪತ್ರಕರ್ತರು ಕಾರ್ಯನಿರ್ವಹಿಸಿದ್ದು ಒಂದು ಸ್ಮರಣೀಯ ಸಂಗತಿ. ದೇಶದ ರಾಷ್ಟ್ರೀಯ ಚಳವಳಿಯಲ್ಲಿ ತುಮಕೂರು ಜಿಲ್ಲೆಯ ಪತ್ರಿಕೆಗಳ ಹಾಗೂ ಪತ್ರಕರ್ತರ ಪಾತ್ರ ಏನು? ಹೀಗೆ ಕೇಳಿಕೊಂಡಾಗ ಜಿಲ್ಲೆ ಹೆಮ್ಮೆಪಡುವಂತಹ ಅನೇಕ ವಿಷಯಗಳು ನಮ್ಮ ಗಮನಕ್ಕೆ ಬರುತ್ತವೆ.

ತುಮಕೂರು ಜಿಲ್ಲೆಯ ಪತ್ರಿಕೋದ್ಯಮದ ಆರಂಭಿಕ ಹೆಜ್ಜೆಗುರುತುಗಳು 19ನೇ ಶತಮಾನದ ಕೊನೆಯಲ್ಲಿ ಹಾಗೂ 20ನೇ ಶತಮಾನದ ಆರಂಭದಲ್ಲಿ ಕಂಡುಬರುತ್ತವಾದರೂ, ಅವು ಹೆಚ್ಚು ಸ್ಪಷ್ಟವಾಗಿ ಕಾಣಲಾರಂಭಿಸಿದ್ದು ಸ್ವಾತಂತ್ರ್ಯ ಚಳವಳಿ ತೀವ್ರಸ್ವರೂಪವನ್ನು ಪಡೆದುಕೊಂಡ ಕಾಲದಲ್ಲೇ. ‘ಜನತೆಯಲ್ಲಿ ದೇಶಾಭಿಮಾನ, ಸ್ವಾತಂತ್ರ್ಯ ಪ್ರಜ್ಞೆಗಳನ್ನು ಮೂಡಿಸುವ ಸಲುವಾಗಿ ತುಮಕೂರು ಜಿಲ್ಲೆಯಲ್ಲಿ ಪತ್ರಿಕೋದ್ಯಮ ಆರಂಭವಾಯಿತು’ ಎಂದು ಇತಿಹಾಸಕಾರರು ಗುರುತಿಸಿದ್ದಿದೆ. ಈ ಪತ್ರಿಕೆಗಳು ಮುಖ್ಯವಾಹಿನಿಯಲ್ಲಿ ಇದ್ದುಕೊಂಡು ಚಳವಳಿಯನ್ನು ಪ್ರೇರೇಪಿಸಿದವು ಎಂಬುದಕ್ಕಿಂತಲೂ ಭೂಗತ ಪತ್ರಿಕೆಗಳ ರೂಪದಲ್ಲಿ, ಸೈಕ್ಲೋಸ್ಟೈಲ್ ಪತ್ರಿಕೆಗಳ ವೇಷದಲ್ಲಿ, ರಹಸ್ಯ ಕರಪತ್ರಗಳ ಮಾದರಿಯಲ್ಲಿ ಹತ್ತಾರು ಅವತಾರಗಳನ್ನು ತಾಳಿ ಸ್ವಾತಂತ್ರ್ಯ ಸಂಗ್ರಾಮದ ಅಂತಃಪ್ರವಾಹದಂತೆ ಕೆಲಸ ಮಾಡಿದವು ಎಂದರೆ ಹೆಚ್ಚು ಸರಿಯೆನಿಸೀತು.

ವೆಸ್ಲಿಯನ್ ಮಿಶನರಿಗಳಿಂದ ಜಿಲ್ಲೆಯಲ್ಲಿ ಪತ್ರಿಕೆಗಳು ಆರಂಭವಾದರೂ, ಇಲ್ಲಿನದೇ ಮಣ್ಣಿನಲ್ಲಿ ಪತ್ರಿಕೋದ್ಯಮದ ಗಿಡ ನೆಟ್ಟು ಜಿಲ್ಲೆಯ ಪತ್ರಿಕೋದ್ಯಮಕ್ಕೊಂದು ಅಧಿಕೃತತೆಯನ್ನು ತಂದುಕೊಟ್ಟವರು ಸ್ವಾತಂತ್ರ್ಯ ಹೋರಾಟಗಾರ ಕಡಬ ರಂಗಯ್ಯಂಗಾರ್. ‘ವಿಶ್ವಕರ್ನಾಟಕ’ ಪತ್ರಿಕೆ ತಿರುಮಲೆ ತಾತಾಚಾರ್ಯ ಶರ್ಮರ ನೇತೃತ್ವದಲ್ಲಿ ಇಡೀ ಮೈಸೂರು ಸಂಸ್ಥಾನದ ಸ್ವಾತಂತ್ರ್ಯ ಚಳವಳಿಯ ಕ್ರಾಂತಿಧ್ವನಿಯಾಗಿ ಮೂಡಿಬಂತಾದರೂ, ಆ ಪತ್ರಿಕೆಯ ಬೀಜ ಬಿತ್ತಿದವರು ರಂಗಯ್ಯಂಗಾರ್. ಅವರು ಆರಂಭಿಸಿದ ಇತರ ಪತ್ರಿಕೆಗಳಾದ ‘ತುಮಕೂರು ವರ್ತಮಾನ’ವಾಗಲೀ, ‘ಫೋರ್ಟ್‍ನೈಟ್ಲಿ ಕ್ರಾನಿಕಲ್’ ಆಗಲೀ ಬಹುಕಾಲ ನಡೆಯದಿದ್ದರೂ, ತುಮಕೂರು ಪತ್ರಿಕೋದ್ಯಮದ ಆರಂಭಿಕ ದಿನಗಳ ನೆಲೆಯಲ್ಲಿ ಅವು ಬಹು ಮಹತ್ವದ ಪತ್ರಿಕೆಗಳೇ. ಸಹಜವಾಗಿಯೇ ಅವರಿಗೆ ಜಿಲ್ಲೆಯ ಪತ್ರಿಕೋದ್ಯಮದ ಹರಿಕಾರ ಅಥವಾ ಪಿತಾಮಹ ಎಂಬ ಅಭಿದಾನ ಪ್ರಾಪ್ತವಾಗಿದೆ. 

ಮೂಲತಃ ಗುಬ್ಬಿಯವರಾದ ವಕೀಲ ರಂಗಯ್ಯಂಗಾರ್ ಪತ್ರಿಕೋದ್ಯಮ ಪ್ರವೇಶಿಸಿದ್ದು 1917ರಲ್ಲಿ - ‘ತುಮಕೂರು ವರ್ತಮಾನ’ ಎಂಬ ಕನ್ನಡ ವಾರಪತ್ರಿಕೆಯನ್ನು ಆರಂಭಿಸುವ ಮೂಲಕ. ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ರಂಗಯ್ಯಂಗಾರ್‍ಗೆ ಪತ್ರಿಕೋದ್ಯಮ ಒಂದು ಹೋರಾಟದ ಅಸ್ತ್ರವಾಗಿ ಕಾಣಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಪತ್ರಿಕೆಯ ಮೂಲಕ ಜನತೆಯಲ್ಲಿ ಸ್ವಾತಂತ್ರ್ಯಪ್ರಜ್ಞೆ ಮತ್ತು ರಾಷ್ಟ್ರಾಭಿಮಾನದ ಅರಿವು ಮೂಡಿಸುವುದು ಅವರ ಗುರಿಯಾಗಿತ್ತು. ತಮ್ಮ ಸ್ಪಷ್ಟ, ಸಮರ್ಥ ಬರವಣಿಗೆಯಿಂದ ಜನರನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗುವಂತೆ ಅವರು ಪ್ರೇರೇಪಿಸುತ್ತಿದ್ದರು. 1921ರಲ್ಲಿ ಆರಂಭವಾದ ರಂಗಯ್ಯಂಗಾರರ ‘ಮೈಸೂರು ಕ್ರಾನಿಕಲ್’ ಪತ್ರಿಕೆ ಮುಂದೆ ತಿರುಮಲೆ ತಾತಾಚಾರ್ಯ ಶರ್ಮರ ನೇತೃತ್ವದಲ್ಲಿ ‘ವಿಶ್ವಕರ್ನಾಟಕ’ವಾಗಿ ಮರುಹುಟ್ಟು ಪಡೆದ ಮೇಲೆ ಕನ್ನಡ ಪತ್ರಿಕೋದ್ಯಮಕ್ಕೂ ಸ್ವಾತಂತ್ರ್ಯ ಹೋರಾಟಕ್ಕೂ ಒಂದು ಹೊಸ ತಿರುವು ನೀಡಿದ್ದು ನಮ್ಮ ಪತ್ರಿಕಾ ಇತಿಹಾಸದ ಪ್ರಮುಖ ಮೈಲಿಗಲ್ಲು.

ತಿ.ತಾ. ಶರ್ಮರಿಗೆ ತುಮಕೂರಿನ ನಂಟು ಇಷ್ಟೇ ಅಲ್ಲ; ಅವರ ಪತ್ನಿ ತಿರುಮಲೆ ರಾಜಮ್ಮನವರೂ ತುಮಕೂರಿನವರೇ. ಶರ್ಮರಿಗೆ ಹೆಗಲೆಣೆಯಾಗಿ ನಿಂತು ಸಾಹಿತ್ಯ, ಸಂಗೀತ, ದೇಶಸೇವೆಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದಲ್ಲದೆ, ‘ವಿಶ್ವಕರ್ನಾಟಕ’ದ ಕಾರ್ಯಭಾರದಲ್ಲೂ ರಾಜಮ್ಮ ಸಕ್ರಿಯರಾಗಿದ್ದರು. 1924ರಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿಯವರ ಸಮ್ಮುಖ ವೀಣಾವಾದನ ಮಾಡಿದ ಹೆಗ್ಗಳಿಕೆ ರಾಜಮ್ಮನವರದು. 

ಸ್ವಾತಂತ್ರ್ಯಪೂರ್ವದ ತುಮಕೂರು ಪತ್ರಿಕಾಲೋಕದಲ್ಲಿ ಭೂಗತ ಪತ್ರಿಕೆಗಳದ್ದು ಒಂದು ದೊಡ್ಡ ಅಧ್ಯಾಯ. ಜನಜಾಗೃತಿ ಮೂಡಿಸುವಲ್ಲಿ ಮತ್ತು ಜನರನ್ನು ಹೋರಾಟಕ್ಕೆ ಒಗ್ಗೂಡಿಸುವಲ್ಲಿ ಉಳಿದ ಪತ್ರಿಕೆಗಳಿಗಿಂತಲೂ ಅವುಗಳದ್ದೇ ಸಿಂಹಪಾಲು. ಅಧಿಕೃತ ಪತ್ರಿಕೆಗಳು ಪ್ರಭುತ್ವದ ಕಾನೂನಿನ ಮಿತಿಯಲ್ಲಿ, ನೀತಿನಿಯಮಾವಳಿಗಳ ಪರಿಧಿಯ ಒಳಗೆ ಹೋರಾಟಕ್ಕೆ ತಮ್ಮಿಂದಾದ ಸ್ಫೂರ್ತಿ ನೀಡಬಲ್ಲವಾಗಿದ್ದರೆ, ಭೂಗತ ಪತ್ರಿಕೆಗಳು ಪರೋಕ್ಷ ಕಾರ್ಯಾಚರಣೆ ನಡೆಸುತ್ತಲೇ ಉಳಿದ ಪತ್ರಿಕೆಗಳು ಹೇಳಲಾರದ ವಿಚಾರಗಳಷ್ಟನ್ನೂ ಹೋರಾಟಗಾರರಿಗೆ ಮತ್ತು ಜನಸಾಮಾನ್ಯರಿಗೆ ತಲುಪಿಸುತ್ತಿದ್ದವು. ಅವು ಚಳವಳಿಯ ಕಾಲದ ಪ್ರಬಲ ಸಂವಹನ ಮಾಧ್ಯಮಗಳೇ ಆಗಿದ್ದವು. 

ತುಮಕೂರು ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲೂ ಭೂಗತ ಪತ್ರಿಕೆಗಳ ಪಾತ್ರ ಕಡಿಮೆಯೇನಲ್ಲ. ರಾಜ್ಯದ ಬೇರೆ ಕೆಲವು ಭಾಗಗಳಿಗೆ ಹೋಲಿಸಿ ನೋಡಿದರೆ ಸ್ವಾತಂತ್ರ್ಯಪೂರ್ವ ತುಮಕೂರಿನಲ್ಲಿ ಪತ್ರಿಕೆಗಳ ಸಂಖ್ಯೆ ಕಡಿಮೆಯೇ ಇತ್ತು. ಆದರೆ, ಅವುಗಳ ಕೊರತೆಯನ್ನು ಯಶಸ್ವಿಯಾಗಿ ನೀಗಿಸಿದ್ದು ಇಲ್ಲಿನ ಭೂಗತ ಬುಲೆಟಿನ್‍ಗಳೇ. ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿ ಮುಂತಾದ ಎಲ್ಲ ಮಹತ್ವದ ಹೋರಾಟಗಳಿಗೆ ಕಸುವು ತುಂಬಿದ್ದರಲ್ಲಿ ಈ ಬಗೆಯ ಪತ್ರಿಕೆಗಳ ಪಾತ್ರ ಬಲುದೊಡ್ಡದು. 

ಸ್ವಾತಂತ್ರ್ಯ ಹೋರಾಟ ಸಂಬಂಧೀ ಭೂಗತ ಪತ್ರಿಕಾ ಚಟುವಟಿಕೆಗಳಲ್ಲಿ ಆರ್. ಎಸ್. ಆರಾಧ್ಯರದು ಪ್ರಮುಖ ಹೆಸರು. ಜಿಲ್ಲೆಯ ಸ್ವಾತಂತ್ರ್ಯ ಚಳವಳಿಯ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದ ಆರಾಧ್ಯರಿಗೆ ಭೂಗತ ಪತ್ರಿಕೆಗಳು ಜನಜಾಗೃತಿಯ ಪ್ರಮುಖ ಮಾಧ್ಯಮಗಳೂ, ಹೋರಾಟದ ಪ್ರಬಲ ಅಸ್ತ್ರಗಳೂ ಆಗಿದ್ದವು. ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರದವರಾದ ಆರಾಧ್ಯರು ವೃತ್ತಿಯಲ್ಲಿ ಮೂಲತಃ ವ್ಯಾಪಾರೋದ್ಯಮಿಗಳು. ಸ್ವಾತಂತ್ರ್ಯಾನಂತರವೂ ಅವರು ಕೈಗಾರಿಕೋದ್ಯಮಿಯಾಗಿ ಹೆಸರು ಮಾಡಿದವರು. ಆದರೆ ರಾಷ್ಟ್ರೀಯ ಚಳವಳಿಯ ಸೆಳವಿನಿಂದ ಅವರು ತಪ್ಪಿಸಿಕೊಳ್ಳಲಾಗಲಿಲ್ಲ. ಕೊರಟಗೆರೆ ಹಾಗೂ ಬೆಂಗಳೂರುಗಳಲ್ಲಿ ವಿದ್ಯಾಭ್ಯಾಸ ಪಡೆದ ಆರಾಧ್ಯರು ಮನೆಯವರ ಒತ್ತಾಯದ ಮೇರೆಗೆ ಓದನ್ನು ನಿಲ್ಲಿಸಿ ವ್ಯಾಪಾರದಲ್ಲಿ ತೊಡಗಿದ್ದರು. 1937ರಲ್ಲಿ ರಾಣೆಬೆನ್ನೂರಿನಲ್ಲಿ ಆರಂಭವಾದ ಕರ್ನಾಟಕ ರಾಜಕೀಯ ಪರಿಷತ್‍ನ ಒಂದು ಸಭೆಯಲ್ಲಿ ಯುವಕ ಆರಾಧ್ಯರು ‘ಸ್ವಾತಂತ್ರ್ಯ ಚಳವಳಿಯಲ್ಲಿ ಯುವಕರ ಪಾತ್ರ’ ಎಂಬ ವಿಷಯದಲ್ಲಿ ಭಾಷಣ ಮಾಡಿ ಎಲ್ಲರ ಗಮನ ಸೆಳೆದರು. 1938ರ ಶಿವಪುರದ ಧ್ವಜ ಸತ್ಯಾಗ್ರಹದಲ್ಲಿ ಭಾಗವಹಿಸಿದ ಬಳಿಕವಂತೂ ಅವರು ತಮ್ಮನ್ನು ತಾವು ಸಂಪೂರ್ಣವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡರು.

1939ರಲ್ಲಿ ಅರಣ್ಯ ಸತ್ಯಾಗ್ರಹ ಮುಂತಾದ ಕಾನೂನುಭಂಗ ಚಳುವಳಿಗಳು ಆರಂಭವಾದಾಗ ಹೋರಾಟಗಾರರಿಗೆ ಮಾಹಿತಿ, ಸಂದೇಶ ರವಾನಿಸಲು ಆರಾಧ್ಯರಿಗೆ ಗೋಚರಿಸಿದ್ದು ಪತ್ರಿಕಾ ಮಾಧ್ಯಮ. ಬೇರೆಬೇರೆ ಹೆಸರಿನ ಪತ್ರಿಕೆಗಳನ್ನು ರಹಸ್ಯವಾಗಿ ಮುದ್ರಿಸಿ ಜನತೆಯ ನಡುವೆ ಪ್ರಸಾರವಾಗುವಂತೆ ಅವರು ನೋಡಿಕೊಳ್ಳುತ್ತಿದ್ದರು. ಅಂದಿನ ಸನ್ನಿವೇಶದ ಕುರಿತು ಆರಾಧ್ಯರೇ ‘ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು’ ಗ್ರಂಥದಲ್ಲಿ ಹೀಗೆ ಬರೆದಿದ್ದಾರೆ: “ಆಗ ನಾನು ಪತ್ರಿಕೆ ಮತ್ತು ಬುಲೆಟಿನ್‍ಗಳನ್ನು ಮುದ್ರಿಸಿ ದೇಶದೆಲ್ಲೆಡೆ ಪ್ರಚಾರ ಮಾಡಲು ಏರ್ಪಾಡು ಮಾಡುತ್ತಿದ್ದೆನು. ಆ ಬುಲೆಟಿನ್‍ಗಳು ಎಲ್ಲಿ ಮುದ್ರಣವಾಗುತ್ತಿದ್ದವು, ಹೇಗೆ ಹಂಚಲ್ಪಡುತ್ತಿದ್ದವು ಎಂಬುದು ಪೊಲೀಸಿನವರಿಗೆ ಒಂದು ಸಮಸ್ಯೆಯಾಗಿತ್ತು. ಕೆಲದಿನಗಳ ನಂತರ ಯಾವ ಮುದ್ರಣಾಲಯದವರೂ ನನಗೆ ಮುದ್ರಿಸಿಕೊಡಲು ಮುಂದೆ ಬರಲಿಲ್ಲ; ಅಧೈರ್ಯಪಟ್ಟರು. ಇದಕ್ಕೆ ಕಾರಣ ಆ ಪತ್ರಿಕೆಗಳನ್ನು ಮುದ್ರಿಸುವ, ಪ್ರಕಟಿಸುವ ಮತ್ತು ಓದುವವರ ಮೇಲೆ ಕ್ರಮ ಜರುಗಿಸುವುದು, ಮುದ್ರಣಾಲಯಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಮುಂತಾದ ತೀವ್ರ ಕಾರ್ಯಕ್ರಮ ಸರ್ಕಾರ ಇಟ್ಟುಕೊಂಡಿತ್ತು. ಒಂದು ಪತ್ರಿಕೆ ಮುಟ್ಟುಗೋಲು ಹಾಕಿಕೊಂಡರೆ ಇನ್ನೊಂದು ಹೆಸರಿನಲ್ಲಿ ಪತ್ರಿಕೆ ಬರುತ್ತಿತ್ತು. ‘ತ್ರಿಶೂಲ’, ‘ಕ್ರಾಂತಿ’, ‘ಸಮರ’, ‘ಕಹಳೆ’ ಮುಂತಾದ ಹೆಸರಿನ ಪತ್ರಿಕೆಗಳು ಆಗ ಪ್ರಚಾರದಲ್ಲಿದ್ದವು.”

ಪತ್ರಿಕೆಗಳನ್ನು ಮುದ್ರಿಸಲು ಮುದ್ರಣಾಲಯಗಳೇ ಸಿಗಲಿಲ್ಲವೆಂದು ಆರಾಧ್ಯರ ತಂಡ ತಮ್ಮ ವಿಧಾನದಿಂದ ಹಿಂದೆ ಸರಿಯಲಿಲ್ಲ. ಸೈಕ್ಲೋಸ್ಟೈಲ್ ಯಂತ್ರ ತಂದು ಪತ್ರಿಕೆಗಳನ್ನು, ಬುಲೆಟಿನ್‍ಗಳನ್ನು ಪ್ರಕಟಿಸಲಾರಂಭಿಸಿದರು. ಆರಾಧ್ಯರ ಜೊತೆಯಲ್ಲಿದ್ದ ಅನೇಕ ಮಿತ್ರರು ಒಬ್ಬೊಬ್ಬರಾಗಿ ದಸ್ತಗಿರಿಯಾದರು. ಆದರೆ ಇಂತಹ ವಿಷಮ ಪರಿಸ್ಥಿತಿಯಲ್ಲೂ ಅವರಿಗೆ ಒತ್ತಾಸೆಯಾಗಿ ನಿಂತ ಕೆಲವು ಮಹಿಳೆಯರು ಗುಪ್ತವಾಗಿ ಸೈಕ್ಲೋಸ್ಟೈಲ್ ಮಾಡಿ ನೂರಾರು ಪ್ರತಿಗಳನ್ನು ಹಂಚಲು ನೆರವಾದರು. ಇಂತಹ ಕಾರ್ಯವನ್ನು ಬೇರೆಬೇರೆ ಹೆಸರಿನಲ್ಲಿ ಬೆಂಗಳೂರು ಮತ್ತು ತುಮಕೂರುಗಳಲ್ಲಿ ಆರಾಧ್ಯರು ನಡೆಸಿಕೊಂಡು ಹೋಗುತ್ತಿದ್ದರು. ಆದರೆ ಸುಮಾರು ಎರಡು ತಿಂಗಳೊಳಗಾಗಿ ಸ್ವತಃ ಆರಾಧ್ಯರನ್ನೂ ಸೈಕ್ಲೋಸ್ಟೈಲ್ ಮಷಿನ್ನಿನ ಸಮೇತ ದಸ್ತಗಿರಿ ಮಾಡಿ ವೃತ್ತಪತ್ರಿಕಾ ಕಾನೂನು ಪ್ರಕಾರ ಮೊಕದ್ದಮೆ ಹೂಡಿ ಆರು ತಿಂಗಳು ಕಾಲ ಜೈಲಿಗೆ ಕಳುಹಿಸಲಾಯಿತು. ಮುಂದೆ ಭಾರತ ಬಿಟ್ಟು ತೊಲಗಿ ಚಳುವಳಿಯ ವೇಳೆಯಲ್ಲೂ ಅವರು ಬುಲೆಟಿನ್ ಪ್ರಕಟಣೆಗಳನ್ನು ಮುಂದುವರಿಸಿದ್ದರು. ತುಮಕೂರಿನ ಖಾದಿ ಭಂಡಾರದ ನಂಜಪ್ಪ, ಪ್ರಹ್ಲಾದರಾವ್, ಎಂ. ಎಸ್. ಹನುಮಂತರಾವ್, ವಾಸು, ಜಿ. ವಿ. ನಾರಾಯಣ ಮೂರ್ತಿ, ಹನುಮಂತರಾಯ ಮುಂತಾದವರ ಬೆಂಬಲ ಆರಾಧ್ಯರಿಗಿತ್ತು. ಅವರು ಮುಂದೆ 1952ರಲ್ಲಿ ‘ಆರ್ಯವಾಣಿ’ ಎಂಬ ಪತ್ರಿಕೆಯನ್ನೂ ಆರಂಭಿಸಿದರು.

1939ರ ಅರಣ್ಯ ಸತ್ಯಾಗ್ರಹಕ್ಕೂ ಮುನ್ನ ಪಾನ ನಿರೋಧ ಚಳುವಳಿ ಜಿಲ್ಲೆಯಾದ್ಯಂತ ಕಾವೇರುವ ಹೊತ್ತು ಡಿ. ಆರ್. ಮುದ್ದಪ್ಪ ಎಂಬವರು ‘ಗುಡುಗು’ ಎಂಬ ಸೈಕ್ಲೋಸ್ಟೈಲ್ಡ್ ಬುಲೆಟಿನ್ ಪ್ರಕಟಿಸುತ್ತಿದ್ದರು. ಪೊಲೀಸರ ಕಣ್ಣು ತಪ್ಪಿಸಿ ಅದರ ಪ್ರತಿಗಳನ್ನು ಜನರಿಗೆ ತಲುಪಿಸುತ್ತಿದ್ದರು. ಭೂಗತ ಪತ್ರಿಕೆಗಳನ್ನು ಪ್ರಕಟಿಸುವಲ್ಲಿ ಸಕ್ರಿಯರಾಗಿದ್ದ ಇನ್ನೊಬ್ಬ ಹೋರಾಟಗಾರರು ಮಾಯಸಂದ್ರದ ಮಾ. ನಂ. ಶ್ರೀಕಂಠಯ್ಯ. ಎಳೇ ವಯಸ್ಸಿನಿಂದಲೇ ರಾಷ್ಟ್ರೀಯ ವಿಚಾರಗಳೆಡೆಗೆ ಆಕರ್ಷಿತರಾಗಿದ್ದ ಶ್ರೀಕಂಠಯ್ಯ 1928ರಿಂದಲೇ ಸ್ವಾತಂತ್ರ್ಯ ಚಳುವಳಿಯ ಸೆಳವಿಗೆ ಸಿಕ್ಕರು. ಅಸಹಕಾರ ಚಳುವಳಿಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡ ಅವರು ತುರುವೇಕೆರೆ, ದಂಡಿನಶಿವರ, ಶೀಗೇಹಳ್ಳಿ, ದಬ್ಬೆಗಟ್ಟ, ಬಾಣಸಂದ್ರ ಮುಂತಾದೆಡೆಗಳಲ್ಲಿ ಸಭೆ, ಮೆರವಣಿಗೆ ಆಯೋಜಿಸುವಲ್ಲಿ ಮುಂಚೂಣಿ ವಹಿಸಿದರು. ಶಾಲೆಗಳ ಬಹಿಷ್ಕಾರ, ಈಚಲುಮರಗಳ ನಾಶ, ತಂತಿ ಕಡಿತ, ಹೆಂಡದಂಗಡಿ ದಹನದಂತಹ ಕಾರ್ಯಕ್ರಮಗಳನ್ನು ಅವ್ಯಾಹತವಾಗಿ ರೂಪಿಸಿದರು. ಈ ಬಗ್ಗೆ ಕರಪತ್ರಗಳನ್ನು ಅಚ್ಚು ಹಾಕಿಸಿ ಹಳ್ಳಿಹಳ್ಳಿಗಳಲ್ಲಿ ಹಂಚಲು ವ್ಯವಸ್ಥೆ ಮಾಡಿದರು. ಮಾಯಸಂದ್ರದ ಬೆಟ್ಟಗುಡ್ಡಗಳಲ್ಲಿ ಅವಿತಿದ್ದು ಸೈಕ್ಲೋಸ್ಟೈಲ್ ಮೂಲಕ ಸುದ್ದಿಗಳನ್ನು ಮುದ್ರಿಸಿ ನಾಗಮಂಗಲ, ಕುಣಿಗಲ್, ಚನ್ನರಾಯಪಟ್ಟಣ ಮುಂತಾದ ಸ್ಥಳಗಳಿಗೆ ಹಂಚುವ ವ್ಯವಸ್ಥೆ ಮಾಡುತ್ತಿದ್ದರು. ಶ್ರೀಕಂಠಯ್ಯನವರು ಮುಂದೆ ‘ಜನವಾಣಿ’ ಮತ್ತು ‘ವಿಶ್ವಕರ್ನಾಟಕ’ ಪತ್ರಿಕೆಗಳಿಗೆ ಪ್ರತಿನಿಧಿಯಾಗಿಯೂ ಇದ್ದರು.   

ತುಮಕೂರಿನ ಭೂಗತ ಪತ್ರಿಕೆಗಳು ಜಿಲ್ಲೆಯ ಗಡಿಯಾಚೆಗೂ ತಮ್ಮ ಕಾರ್ಯವ್ಯಾಪ್ತಿ, ಪ್ರಭಾವ ವಿಸ್ತರಿಸಿಕೊಂಡಿದ್ದವು. 1932ರ ಕರ ನಿರಾಕರಣಾ ಚಳುವಳಿ ಕಾರವಾರ ಜಿಲ್ಲೆಯಲ್ಲಿ ನಡೆಯುತ್ತಿರುವಾಗ ಇಲ್ಲಿಂದಲೇ ಬುಲೆಟಿನ್‍ಗಳನ್ನು ಸೈಕ್ಲೋಸ್ಟೈಲ್ ಮಾಡಿ ಕಳುಹಿಸಲಾಗುತ್ತಿತ್ತು ಎಂದು ಚಳುವಳಿಗಾರ ಬಿ. ಸಿ. ನಂಜುಂಡಯ್ಯ ಸ್ಮರಿಸಿಕೊಂಡಿದ್ದಾರೆ. ತುಮಕೂರಿನವರೇ ಆದ ನಂಜುಂಡಯ್ಯ 1948-56ರ ಅವಧಿಗೆ ಶಾಸಕರೂ, 1957-66ರ ಅವಧಿಗೆ ಸಂಸದರೂ ಆಗಿದ್ದರು. ತುರುವೇಕೆರೆ ಮಾಯಸಂದ್ರ ಮೂಲದ ಸ್ವಾತಂತ್ರ್ಯ ಹೋರಾಟಗಾರ ಎಂ. ಎನ್. ಸೀತಾರಾಮಯ್ಯನವರು ಆರಂಭಿಸಿದ ‘ಪೌರವಾಣಿ’ ಪತ್ರಿಕೆಯೂ ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರದ ಸ್ಥಾಪನೆ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತು. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತುಮಕೂರಿನ ಎಚ್. ಆರ್. ಗುಂಡೂರಾವ್ ಅವರು ಮುಂದೆ 1954ರಲ್ಲಿ ‘ವಿಜಯವಾಣಿ’ ಪತ್ರಿಕೆಯನ್ನು ಆರಂಭಿಸಿದ್ದು ಕೂಡ ಉಲ್ಲೇಖಾರ್ಹ ವಿಚಾರ.

ಜನತೆಯಲ್ಲಿ ರಾಷ್ಟ್ರೀಯಪ್ರಜ್ಞೆ, ದೇಶಾಭಿಮಾನ ಮೂಡಿಸುವ ಮೂಲಕ ಸ್ವಾತಂತ್ರ್ಯ ಹೋರಾಟವನ್ನು ಪೋಷಿಸಿದ ಕೀರ್ತಿ ಹೊಂದಿರುವ ತುಮಕೂರು ಜಿಲ್ಲೆಯ ಪತ್ರಿಕೋದ್ಯಮ ಇಂದಿಗೂ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಅಭಿನಂದನೀಯ. ತುಮಕೂರು ಜಿಲ್ಲೆಯ ಅನೇಕ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಮಾಧ್ಯಮರಂಗದಲ್ಲಿ ಹೆಸರು ಮಾಡಿರುವುದು ಕೂಡ ಪ್ರಶಂಸನೀಯ.

- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: