ತುಮಕೂರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ತುಮಕೂರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಆಗಸ್ಟ್ 28, 2021

ಸ್ವಾತಂತ್ರ್ಯ ಚಳವಳಿ ಮತ್ತು ತುಮಕೂರು ಜಿಲ್ಲೆಯ ಪತ್ರಿಕೆಗಳು

15 ಆಗಸ್ಟ್ 2021ರ 'ವಿಜಯವಾಣಿ' ಪತ್ರಿಕೆಯ 'ಅಮೃತಭಾರತ' ಪುರವಣಿಯಲ್ಲಿ ಪ್ರಕಟವಾದ ಲೇಖನ

ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಪತ್ರಿಕಾವೃತ್ತಿಗೂ ಅವಿನಾಭಾವ ಸಂಬಂಧ. ನಮ್ಮ ರಾಷ್ಟ್ರೀಯ ಚಳವಳಿಯ ಇತಿಹಾಸವೂ ಪತ್ರಿಕಾ ಇತಿಹಾಸವೂ ಜತೆಜತೆಯಾಗಿಯೇ ಸಾಗುವುದು ಒಂದು ಕುತೂಹಲಕರ ವಿದ್ಯಮಾನ. ಅನೇಕ ಮಂದಿ ಸ್ವಾತಂತ್ರ್ಯ ಹೋರಾಟಗಾರರು ಸ್ವತಃ ಪತ್ರಕರ್ತರೂ ಆಗಿದ್ದರು ಎಂಬುದನ್ನು ಗಮನಿಸಬೇಕು. ದೇಶದಲ್ಲಿ ರಾಷ್ಟ್ರೀಯ ಪ್ರಜ್ಞೆಯ ಬೇರು-ಬಿಳಲುಗಳನ್ನು ಪೋಷಿಸುವ ಗುಪ್ತಗಾಮಿನಿಗಳಾಗಿ ಪತ್ರಿಕೆಗಳು ಹಾಗೂ ಪತ್ರಕರ್ತರು ಕಾರ್ಯನಿರ್ವಹಿಸಿದ್ದು ಒಂದು ಸ್ಮರಣೀಯ ಸಂಗತಿ. ದೇಶದ ರಾಷ್ಟ್ರೀಯ ಚಳವಳಿಯಲ್ಲಿ ತುಮಕೂರು ಜಿಲ್ಲೆಯ ಪತ್ರಿಕೆಗಳ ಹಾಗೂ ಪತ್ರಕರ್ತರ ಪಾತ್ರ ಏನು? ಹೀಗೆ ಕೇಳಿಕೊಂಡಾಗ ಜಿಲ್ಲೆ ಹೆಮ್ಮೆಪಡುವಂತಹ ಅನೇಕ ವಿಷಯಗಳು ನಮ್ಮ ಗಮನಕ್ಕೆ ಬರುತ್ತವೆ.

ತುಮಕೂರು ಜಿಲ್ಲೆಯ ಪತ್ರಿಕೋದ್ಯಮದ ಆರಂಭಿಕ ಹೆಜ್ಜೆಗುರುತುಗಳು 19ನೇ ಶತಮಾನದ ಕೊನೆಯಲ್ಲಿ ಹಾಗೂ 20ನೇ ಶತಮಾನದ ಆರಂಭದಲ್ಲಿ ಕಂಡುಬರುತ್ತವಾದರೂ, ಅವು ಹೆಚ್ಚು ಸ್ಪಷ್ಟವಾಗಿ ಕಾಣಲಾರಂಭಿಸಿದ್ದು ಸ್ವಾತಂತ್ರ್ಯ ಚಳವಳಿ ತೀವ್ರಸ್ವರೂಪವನ್ನು ಪಡೆದುಕೊಂಡ ಕಾಲದಲ್ಲೇ. ‘ಜನತೆಯಲ್ಲಿ ದೇಶಾಭಿಮಾನ, ಸ್ವಾತಂತ್ರ್ಯ ಪ್ರಜ್ಞೆಗಳನ್ನು ಮೂಡಿಸುವ ಸಲುವಾಗಿ ತುಮಕೂರು ಜಿಲ್ಲೆಯಲ್ಲಿ ಪತ್ರಿಕೋದ್ಯಮ ಆರಂಭವಾಯಿತು’ ಎಂದು ಇತಿಹಾಸಕಾರರು ಗುರುತಿಸಿದ್ದಿದೆ. ಈ ಪತ್ರಿಕೆಗಳು ಮುಖ್ಯವಾಹಿನಿಯಲ್ಲಿ ಇದ್ದುಕೊಂಡು ಚಳವಳಿಯನ್ನು ಪ್ರೇರೇಪಿಸಿದವು ಎಂಬುದಕ್ಕಿಂತಲೂ ಭೂಗತ ಪತ್ರಿಕೆಗಳ ರೂಪದಲ್ಲಿ, ಸೈಕ್ಲೋಸ್ಟೈಲ್ ಪತ್ರಿಕೆಗಳ ವೇಷದಲ್ಲಿ, ರಹಸ್ಯ ಕರಪತ್ರಗಳ ಮಾದರಿಯಲ್ಲಿ ಹತ್ತಾರು ಅವತಾರಗಳನ್ನು ತಾಳಿ ಸ್ವಾತಂತ್ರ್ಯ ಸಂಗ್ರಾಮದ ಅಂತಃಪ್ರವಾಹದಂತೆ ಕೆಲಸ ಮಾಡಿದವು ಎಂದರೆ ಹೆಚ್ಚು ಸರಿಯೆನಿಸೀತು.

ವೆಸ್ಲಿಯನ್ ಮಿಶನರಿಗಳಿಂದ ಜಿಲ್ಲೆಯಲ್ಲಿ ಪತ್ರಿಕೆಗಳು ಆರಂಭವಾದರೂ, ಇಲ್ಲಿನದೇ ಮಣ್ಣಿನಲ್ಲಿ ಪತ್ರಿಕೋದ್ಯಮದ ಗಿಡ ನೆಟ್ಟು ಜಿಲ್ಲೆಯ ಪತ್ರಿಕೋದ್ಯಮಕ್ಕೊಂದು ಅಧಿಕೃತತೆಯನ್ನು ತಂದುಕೊಟ್ಟವರು ಸ್ವಾತಂತ್ರ್ಯ ಹೋರಾಟಗಾರ ಕಡಬ ರಂಗಯ್ಯಂಗಾರ್. ‘ವಿಶ್ವಕರ್ನಾಟಕ’ ಪತ್ರಿಕೆ ತಿರುಮಲೆ ತಾತಾಚಾರ್ಯ ಶರ್ಮರ ನೇತೃತ್ವದಲ್ಲಿ ಇಡೀ ಮೈಸೂರು ಸಂಸ್ಥಾನದ ಸ್ವಾತಂತ್ರ್ಯ ಚಳವಳಿಯ ಕ್ರಾಂತಿಧ್ವನಿಯಾಗಿ ಮೂಡಿಬಂತಾದರೂ, ಆ ಪತ್ರಿಕೆಯ ಬೀಜ ಬಿತ್ತಿದವರು ರಂಗಯ್ಯಂಗಾರ್. ಅವರು ಆರಂಭಿಸಿದ ಇತರ ಪತ್ರಿಕೆಗಳಾದ ‘ತುಮಕೂರು ವರ್ತಮಾನ’ವಾಗಲೀ, ‘ಫೋರ್ಟ್‍ನೈಟ್ಲಿ ಕ್ರಾನಿಕಲ್’ ಆಗಲೀ ಬಹುಕಾಲ ನಡೆಯದಿದ್ದರೂ, ತುಮಕೂರು ಪತ್ರಿಕೋದ್ಯಮದ ಆರಂಭಿಕ ದಿನಗಳ ನೆಲೆಯಲ್ಲಿ ಅವು ಬಹು ಮಹತ್ವದ ಪತ್ರಿಕೆಗಳೇ. ಸಹಜವಾಗಿಯೇ ಅವರಿಗೆ ಜಿಲ್ಲೆಯ ಪತ್ರಿಕೋದ್ಯಮದ ಹರಿಕಾರ ಅಥವಾ ಪಿತಾಮಹ ಎಂಬ ಅಭಿದಾನ ಪ್ರಾಪ್ತವಾಗಿದೆ. 

ಮೂಲತಃ ಗುಬ್ಬಿಯವರಾದ ವಕೀಲ ರಂಗಯ್ಯಂಗಾರ್ ಪತ್ರಿಕೋದ್ಯಮ ಪ್ರವೇಶಿಸಿದ್ದು 1917ರಲ್ಲಿ - ‘ತುಮಕೂರು ವರ್ತಮಾನ’ ಎಂಬ ಕನ್ನಡ ವಾರಪತ್ರಿಕೆಯನ್ನು ಆರಂಭಿಸುವ ಮೂಲಕ. ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ರಂಗಯ್ಯಂಗಾರ್‍ಗೆ ಪತ್ರಿಕೋದ್ಯಮ ಒಂದು ಹೋರಾಟದ ಅಸ್ತ್ರವಾಗಿ ಕಾಣಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಪತ್ರಿಕೆಯ ಮೂಲಕ ಜನತೆಯಲ್ಲಿ ಸ್ವಾತಂತ್ರ್ಯಪ್ರಜ್ಞೆ ಮತ್ತು ರಾಷ್ಟ್ರಾಭಿಮಾನದ ಅರಿವು ಮೂಡಿಸುವುದು ಅವರ ಗುರಿಯಾಗಿತ್ತು. ತಮ್ಮ ಸ್ಪಷ್ಟ, ಸಮರ್ಥ ಬರವಣಿಗೆಯಿಂದ ಜನರನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗುವಂತೆ ಅವರು ಪ್ರೇರೇಪಿಸುತ್ತಿದ್ದರು. 1921ರಲ್ಲಿ ಆರಂಭವಾದ ರಂಗಯ್ಯಂಗಾರರ ‘ಮೈಸೂರು ಕ್ರಾನಿಕಲ್’ ಪತ್ರಿಕೆ ಮುಂದೆ ತಿರುಮಲೆ ತಾತಾಚಾರ್ಯ ಶರ್ಮರ ನೇತೃತ್ವದಲ್ಲಿ ‘ವಿಶ್ವಕರ್ನಾಟಕ’ವಾಗಿ ಮರುಹುಟ್ಟು ಪಡೆದ ಮೇಲೆ ಕನ್ನಡ ಪತ್ರಿಕೋದ್ಯಮಕ್ಕೂ ಸ್ವಾತಂತ್ರ್ಯ ಹೋರಾಟಕ್ಕೂ ಒಂದು ಹೊಸ ತಿರುವು ನೀಡಿದ್ದು ನಮ್ಮ ಪತ್ರಿಕಾ ಇತಿಹಾಸದ ಪ್ರಮುಖ ಮೈಲಿಗಲ್ಲು.

ತಿ.ತಾ. ಶರ್ಮರಿಗೆ ತುಮಕೂರಿನ ನಂಟು ಇಷ್ಟೇ ಅಲ್ಲ; ಅವರ ಪತ್ನಿ ತಿರುಮಲೆ ರಾಜಮ್ಮನವರೂ ತುಮಕೂರಿನವರೇ. ಶರ್ಮರಿಗೆ ಹೆಗಲೆಣೆಯಾಗಿ ನಿಂತು ಸಾಹಿತ್ಯ, ಸಂಗೀತ, ದೇಶಸೇವೆಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡದ್ದಲ್ಲದೆ, ‘ವಿಶ್ವಕರ್ನಾಟಕ’ದ ಕಾರ್ಯಭಾರದಲ್ಲೂ ರಾಜಮ್ಮ ಸಕ್ರಿಯರಾಗಿದ್ದರು. 1924ರಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿಯವರ ಸಮ್ಮುಖ ವೀಣಾವಾದನ ಮಾಡಿದ ಹೆಗ್ಗಳಿಕೆ ರಾಜಮ್ಮನವರದು. 

ಸ್ವಾತಂತ್ರ್ಯಪೂರ್ವದ ತುಮಕೂರು ಪತ್ರಿಕಾಲೋಕದಲ್ಲಿ ಭೂಗತ ಪತ್ರಿಕೆಗಳದ್ದು ಒಂದು ದೊಡ್ಡ ಅಧ್ಯಾಯ. ಜನಜಾಗೃತಿ ಮೂಡಿಸುವಲ್ಲಿ ಮತ್ತು ಜನರನ್ನು ಹೋರಾಟಕ್ಕೆ ಒಗ್ಗೂಡಿಸುವಲ್ಲಿ ಉಳಿದ ಪತ್ರಿಕೆಗಳಿಗಿಂತಲೂ ಅವುಗಳದ್ದೇ ಸಿಂಹಪಾಲು. ಅಧಿಕೃತ ಪತ್ರಿಕೆಗಳು ಪ್ರಭುತ್ವದ ಕಾನೂನಿನ ಮಿತಿಯಲ್ಲಿ, ನೀತಿನಿಯಮಾವಳಿಗಳ ಪರಿಧಿಯ ಒಳಗೆ ಹೋರಾಟಕ್ಕೆ ತಮ್ಮಿಂದಾದ ಸ್ಫೂರ್ತಿ ನೀಡಬಲ್ಲವಾಗಿದ್ದರೆ, ಭೂಗತ ಪತ್ರಿಕೆಗಳು ಪರೋಕ್ಷ ಕಾರ್ಯಾಚರಣೆ ನಡೆಸುತ್ತಲೇ ಉಳಿದ ಪತ್ರಿಕೆಗಳು ಹೇಳಲಾರದ ವಿಚಾರಗಳಷ್ಟನ್ನೂ ಹೋರಾಟಗಾರರಿಗೆ ಮತ್ತು ಜನಸಾಮಾನ್ಯರಿಗೆ ತಲುಪಿಸುತ್ತಿದ್ದವು. ಅವು ಚಳವಳಿಯ ಕಾಲದ ಪ್ರಬಲ ಸಂವಹನ ಮಾಧ್ಯಮಗಳೇ ಆಗಿದ್ದವು. 

ತುಮಕೂರು ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲೂ ಭೂಗತ ಪತ್ರಿಕೆಗಳ ಪಾತ್ರ ಕಡಿಮೆಯೇನಲ್ಲ. ರಾಜ್ಯದ ಬೇರೆ ಕೆಲವು ಭಾಗಗಳಿಗೆ ಹೋಲಿಸಿ ನೋಡಿದರೆ ಸ್ವಾತಂತ್ರ್ಯಪೂರ್ವ ತುಮಕೂರಿನಲ್ಲಿ ಪತ್ರಿಕೆಗಳ ಸಂಖ್ಯೆ ಕಡಿಮೆಯೇ ಇತ್ತು. ಆದರೆ, ಅವುಗಳ ಕೊರತೆಯನ್ನು ಯಶಸ್ವಿಯಾಗಿ ನೀಗಿಸಿದ್ದು ಇಲ್ಲಿನ ಭೂಗತ ಬುಲೆಟಿನ್‍ಗಳೇ. ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿ ಮುಂತಾದ ಎಲ್ಲ ಮಹತ್ವದ ಹೋರಾಟಗಳಿಗೆ ಕಸುವು ತುಂಬಿದ್ದರಲ್ಲಿ ಈ ಬಗೆಯ ಪತ್ರಿಕೆಗಳ ಪಾತ್ರ ಬಲುದೊಡ್ಡದು. 

ಸ್ವಾತಂತ್ರ್ಯ ಹೋರಾಟ ಸಂಬಂಧೀ ಭೂಗತ ಪತ್ರಿಕಾ ಚಟುವಟಿಕೆಗಳಲ್ಲಿ ಆರ್. ಎಸ್. ಆರಾಧ್ಯರದು ಪ್ರಮುಖ ಹೆಸರು. ಜಿಲ್ಲೆಯ ಸ್ವಾತಂತ್ರ್ಯ ಚಳವಳಿಯ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದ ಆರಾಧ್ಯರಿಗೆ ಭೂಗತ ಪತ್ರಿಕೆಗಳು ಜನಜಾಗೃತಿಯ ಪ್ರಮುಖ ಮಾಧ್ಯಮಗಳೂ, ಹೋರಾಟದ ಪ್ರಬಲ ಅಸ್ತ್ರಗಳೂ ಆಗಿದ್ದವು. ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರದವರಾದ ಆರಾಧ್ಯರು ವೃತ್ತಿಯಲ್ಲಿ ಮೂಲತಃ ವ್ಯಾಪಾರೋದ್ಯಮಿಗಳು. ಸ್ವಾತಂತ್ರ್ಯಾನಂತರವೂ ಅವರು ಕೈಗಾರಿಕೋದ್ಯಮಿಯಾಗಿ ಹೆಸರು ಮಾಡಿದವರು. ಆದರೆ ರಾಷ್ಟ್ರೀಯ ಚಳವಳಿಯ ಸೆಳವಿನಿಂದ ಅವರು ತಪ್ಪಿಸಿಕೊಳ್ಳಲಾಗಲಿಲ್ಲ. ಕೊರಟಗೆರೆ ಹಾಗೂ ಬೆಂಗಳೂರುಗಳಲ್ಲಿ ವಿದ್ಯಾಭ್ಯಾಸ ಪಡೆದ ಆರಾಧ್ಯರು ಮನೆಯವರ ಒತ್ತಾಯದ ಮೇರೆಗೆ ಓದನ್ನು ನಿಲ್ಲಿಸಿ ವ್ಯಾಪಾರದಲ್ಲಿ ತೊಡಗಿದ್ದರು. 1937ರಲ್ಲಿ ರಾಣೆಬೆನ್ನೂರಿನಲ್ಲಿ ಆರಂಭವಾದ ಕರ್ನಾಟಕ ರಾಜಕೀಯ ಪರಿಷತ್‍ನ ಒಂದು ಸಭೆಯಲ್ಲಿ ಯುವಕ ಆರಾಧ್ಯರು ‘ಸ್ವಾತಂತ್ರ್ಯ ಚಳವಳಿಯಲ್ಲಿ ಯುವಕರ ಪಾತ್ರ’ ಎಂಬ ವಿಷಯದಲ್ಲಿ ಭಾಷಣ ಮಾಡಿ ಎಲ್ಲರ ಗಮನ ಸೆಳೆದರು. 1938ರ ಶಿವಪುರದ ಧ್ವಜ ಸತ್ಯಾಗ್ರಹದಲ್ಲಿ ಭಾಗವಹಿಸಿದ ಬಳಿಕವಂತೂ ಅವರು ತಮ್ಮನ್ನು ತಾವು ಸಂಪೂರ್ಣವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡರು.

1939ರಲ್ಲಿ ಅರಣ್ಯ ಸತ್ಯಾಗ್ರಹ ಮುಂತಾದ ಕಾನೂನುಭಂಗ ಚಳುವಳಿಗಳು ಆರಂಭವಾದಾಗ ಹೋರಾಟಗಾರರಿಗೆ ಮಾಹಿತಿ, ಸಂದೇಶ ರವಾನಿಸಲು ಆರಾಧ್ಯರಿಗೆ ಗೋಚರಿಸಿದ್ದು ಪತ್ರಿಕಾ ಮಾಧ್ಯಮ. ಬೇರೆಬೇರೆ ಹೆಸರಿನ ಪತ್ರಿಕೆಗಳನ್ನು ರಹಸ್ಯವಾಗಿ ಮುದ್ರಿಸಿ ಜನತೆಯ ನಡುವೆ ಪ್ರಸಾರವಾಗುವಂತೆ ಅವರು ನೋಡಿಕೊಳ್ಳುತ್ತಿದ್ದರು. ಅಂದಿನ ಸನ್ನಿವೇಶದ ಕುರಿತು ಆರಾಧ್ಯರೇ ‘ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು’ ಗ್ರಂಥದಲ್ಲಿ ಹೀಗೆ ಬರೆದಿದ್ದಾರೆ: “ಆಗ ನಾನು ಪತ್ರಿಕೆ ಮತ್ತು ಬುಲೆಟಿನ್‍ಗಳನ್ನು ಮುದ್ರಿಸಿ ದೇಶದೆಲ್ಲೆಡೆ ಪ್ರಚಾರ ಮಾಡಲು ಏರ್ಪಾಡು ಮಾಡುತ್ತಿದ್ದೆನು. ಆ ಬುಲೆಟಿನ್‍ಗಳು ಎಲ್ಲಿ ಮುದ್ರಣವಾಗುತ್ತಿದ್ದವು, ಹೇಗೆ ಹಂಚಲ್ಪಡುತ್ತಿದ್ದವು ಎಂಬುದು ಪೊಲೀಸಿನವರಿಗೆ ಒಂದು ಸಮಸ್ಯೆಯಾಗಿತ್ತು. ಕೆಲದಿನಗಳ ನಂತರ ಯಾವ ಮುದ್ರಣಾಲಯದವರೂ ನನಗೆ ಮುದ್ರಿಸಿಕೊಡಲು ಮುಂದೆ ಬರಲಿಲ್ಲ; ಅಧೈರ್ಯಪಟ್ಟರು. ಇದಕ್ಕೆ ಕಾರಣ ಆ ಪತ್ರಿಕೆಗಳನ್ನು ಮುದ್ರಿಸುವ, ಪ್ರಕಟಿಸುವ ಮತ್ತು ಓದುವವರ ಮೇಲೆ ಕ್ರಮ ಜರುಗಿಸುವುದು, ಮುದ್ರಣಾಲಯಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಮುಂತಾದ ತೀವ್ರ ಕಾರ್ಯಕ್ರಮ ಸರ್ಕಾರ ಇಟ್ಟುಕೊಂಡಿತ್ತು. ಒಂದು ಪತ್ರಿಕೆ ಮುಟ್ಟುಗೋಲು ಹಾಕಿಕೊಂಡರೆ ಇನ್ನೊಂದು ಹೆಸರಿನಲ್ಲಿ ಪತ್ರಿಕೆ ಬರುತ್ತಿತ್ತು. ‘ತ್ರಿಶೂಲ’, ‘ಕ್ರಾಂತಿ’, ‘ಸಮರ’, ‘ಕಹಳೆ’ ಮುಂತಾದ ಹೆಸರಿನ ಪತ್ರಿಕೆಗಳು ಆಗ ಪ್ರಚಾರದಲ್ಲಿದ್ದವು.”

ಪತ್ರಿಕೆಗಳನ್ನು ಮುದ್ರಿಸಲು ಮುದ್ರಣಾಲಯಗಳೇ ಸಿಗಲಿಲ್ಲವೆಂದು ಆರಾಧ್ಯರ ತಂಡ ತಮ್ಮ ವಿಧಾನದಿಂದ ಹಿಂದೆ ಸರಿಯಲಿಲ್ಲ. ಸೈಕ್ಲೋಸ್ಟೈಲ್ ಯಂತ್ರ ತಂದು ಪತ್ರಿಕೆಗಳನ್ನು, ಬುಲೆಟಿನ್‍ಗಳನ್ನು ಪ್ರಕಟಿಸಲಾರಂಭಿಸಿದರು. ಆರಾಧ್ಯರ ಜೊತೆಯಲ್ಲಿದ್ದ ಅನೇಕ ಮಿತ್ರರು ಒಬ್ಬೊಬ್ಬರಾಗಿ ದಸ್ತಗಿರಿಯಾದರು. ಆದರೆ ಇಂತಹ ವಿಷಮ ಪರಿಸ್ಥಿತಿಯಲ್ಲೂ ಅವರಿಗೆ ಒತ್ತಾಸೆಯಾಗಿ ನಿಂತ ಕೆಲವು ಮಹಿಳೆಯರು ಗುಪ್ತವಾಗಿ ಸೈಕ್ಲೋಸ್ಟೈಲ್ ಮಾಡಿ ನೂರಾರು ಪ್ರತಿಗಳನ್ನು ಹಂಚಲು ನೆರವಾದರು. ಇಂತಹ ಕಾರ್ಯವನ್ನು ಬೇರೆಬೇರೆ ಹೆಸರಿನಲ್ಲಿ ಬೆಂಗಳೂರು ಮತ್ತು ತುಮಕೂರುಗಳಲ್ಲಿ ಆರಾಧ್ಯರು ನಡೆಸಿಕೊಂಡು ಹೋಗುತ್ತಿದ್ದರು. ಆದರೆ ಸುಮಾರು ಎರಡು ತಿಂಗಳೊಳಗಾಗಿ ಸ್ವತಃ ಆರಾಧ್ಯರನ್ನೂ ಸೈಕ್ಲೋಸ್ಟೈಲ್ ಮಷಿನ್ನಿನ ಸಮೇತ ದಸ್ತಗಿರಿ ಮಾಡಿ ವೃತ್ತಪತ್ರಿಕಾ ಕಾನೂನು ಪ್ರಕಾರ ಮೊಕದ್ದಮೆ ಹೂಡಿ ಆರು ತಿಂಗಳು ಕಾಲ ಜೈಲಿಗೆ ಕಳುಹಿಸಲಾಯಿತು. ಮುಂದೆ ಭಾರತ ಬಿಟ್ಟು ತೊಲಗಿ ಚಳುವಳಿಯ ವೇಳೆಯಲ್ಲೂ ಅವರು ಬುಲೆಟಿನ್ ಪ್ರಕಟಣೆಗಳನ್ನು ಮುಂದುವರಿಸಿದ್ದರು. ತುಮಕೂರಿನ ಖಾದಿ ಭಂಡಾರದ ನಂಜಪ್ಪ, ಪ್ರಹ್ಲಾದರಾವ್, ಎಂ. ಎಸ್. ಹನುಮಂತರಾವ್, ವಾಸು, ಜಿ. ವಿ. ನಾರಾಯಣ ಮೂರ್ತಿ, ಹನುಮಂತರಾಯ ಮುಂತಾದವರ ಬೆಂಬಲ ಆರಾಧ್ಯರಿಗಿತ್ತು. ಅವರು ಮುಂದೆ 1952ರಲ್ಲಿ ‘ಆರ್ಯವಾಣಿ’ ಎಂಬ ಪತ್ರಿಕೆಯನ್ನೂ ಆರಂಭಿಸಿದರು.

1939ರ ಅರಣ್ಯ ಸತ್ಯಾಗ್ರಹಕ್ಕೂ ಮುನ್ನ ಪಾನ ನಿರೋಧ ಚಳುವಳಿ ಜಿಲ್ಲೆಯಾದ್ಯಂತ ಕಾವೇರುವ ಹೊತ್ತು ಡಿ. ಆರ್. ಮುದ್ದಪ್ಪ ಎಂಬವರು ‘ಗುಡುಗು’ ಎಂಬ ಸೈಕ್ಲೋಸ್ಟೈಲ್ಡ್ ಬುಲೆಟಿನ್ ಪ್ರಕಟಿಸುತ್ತಿದ್ದರು. ಪೊಲೀಸರ ಕಣ್ಣು ತಪ್ಪಿಸಿ ಅದರ ಪ್ರತಿಗಳನ್ನು ಜನರಿಗೆ ತಲುಪಿಸುತ್ತಿದ್ದರು. ಭೂಗತ ಪತ್ರಿಕೆಗಳನ್ನು ಪ್ರಕಟಿಸುವಲ್ಲಿ ಸಕ್ರಿಯರಾಗಿದ್ದ ಇನ್ನೊಬ್ಬ ಹೋರಾಟಗಾರರು ಮಾಯಸಂದ್ರದ ಮಾ. ನಂ. ಶ್ರೀಕಂಠಯ್ಯ. ಎಳೇ ವಯಸ್ಸಿನಿಂದಲೇ ರಾಷ್ಟ್ರೀಯ ವಿಚಾರಗಳೆಡೆಗೆ ಆಕರ್ಷಿತರಾಗಿದ್ದ ಶ್ರೀಕಂಠಯ್ಯ 1928ರಿಂದಲೇ ಸ್ವಾತಂತ್ರ್ಯ ಚಳುವಳಿಯ ಸೆಳವಿಗೆ ಸಿಕ್ಕರು. ಅಸಹಕಾರ ಚಳುವಳಿಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡ ಅವರು ತುರುವೇಕೆರೆ, ದಂಡಿನಶಿವರ, ಶೀಗೇಹಳ್ಳಿ, ದಬ್ಬೆಗಟ್ಟ, ಬಾಣಸಂದ್ರ ಮುಂತಾದೆಡೆಗಳಲ್ಲಿ ಸಭೆ, ಮೆರವಣಿಗೆ ಆಯೋಜಿಸುವಲ್ಲಿ ಮುಂಚೂಣಿ ವಹಿಸಿದರು. ಶಾಲೆಗಳ ಬಹಿಷ್ಕಾರ, ಈಚಲುಮರಗಳ ನಾಶ, ತಂತಿ ಕಡಿತ, ಹೆಂಡದಂಗಡಿ ದಹನದಂತಹ ಕಾರ್ಯಕ್ರಮಗಳನ್ನು ಅವ್ಯಾಹತವಾಗಿ ರೂಪಿಸಿದರು. ಈ ಬಗ್ಗೆ ಕರಪತ್ರಗಳನ್ನು ಅಚ್ಚು ಹಾಕಿಸಿ ಹಳ್ಳಿಹಳ್ಳಿಗಳಲ್ಲಿ ಹಂಚಲು ವ್ಯವಸ್ಥೆ ಮಾಡಿದರು. ಮಾಯಸಂದ್ರದ ಬೆಟ್ಟಗುಡ್ಡಗಳಲ್ಲಿ ಅವಿತಿದ್ದು ಸೈಕ್ಲೋಸ್ಟೈಲ್ ಮೂಲಕ ಸುದ್ದಿಗಳನ್ನು ಮುದ್ರಿಸಿ ನಾಗಮಂಗಲ, ಕುಣಿಗಲ್, ಚನ್ನರಾಯಪಟ್ಟಣ ಮುಂತಾದ ಸ್ಥಳಗಳಿಗೆ ಹಂಚುವ ವ್ಯವಸ್ಥೆ ಮಾಡುತ್ತಿದ್ದರು. ಶ್ರೀಕಂಠಯ್ಯನವರು ಮುಂದೆ ‘ಜನವಾಣಿ’ ಮತ್ತು ‘ವಿಶ್ವಕರ್ನಾಟಕ’ ಪತ್ರಿಕೆಗಳಿಗೆ ಪ್ರತಿನಿಧಿಯಾಗಿಯೂ ಇದ್ದರು.   

ತುಮಕೂರಿನ ಭೂಗತ ಪತ್ರಿಕೆಗಳು ಜಿಲ್ಲೆಯ ಗಡಿಯಾಚೆಗೂ ತಮ್ಮ ಕಾರ್ಯವ್ಯಾಪ್ತಿ, ಪ್ರಭಾವ ವಿಸ್ತರಿಸಿಕೊಂಡಿದ್ದವು. 1932ರ ಕರ ನಿರಾಕರಣಾ ಚಳುವಳಿ ಕಾರವಾರ ಜಿಲ್ಲೆಯಲ್ಲಿ ನಡೆಯುತ್ತಿರುವಾಗ ಇಲ್ಲಿಂದಲೇ ಬುಲೆಟಿನ್‍ಗಳನ್ನು ಸೈಕ್ಲೋಸ್ಟೈಲ್ ಮಾಡಿ ಕಳುಹಿಸಲಾಗುತ್ತಿತ್ತು ಎಂದು ಚಳುವಳಿಗಾರ ಬಿ. ಸಿ. ನಂಜುಂಡಯ್ಯ ಸ್ಮರಿಸಿಕೊಂಡಿದ್ದಾರೆ. ತುಮಕೂರಿನವರೇ ಆದ ನಂಜುಂಡಯ್ಯ 1948-56ರ ಅವಧಿಗೆ ಶಾಸಕರೂ, 1957-66ರ ಅವಧಿಗೆ ಸಂಸದರೂ ಆಗಿದ್ದರು. ತುರುವೇಕೆರೆ ಮಾಯಸಂದ್ರ ಮೂಲದ ಸ್ವಾತಂತ್ರ್ಯ ಹೋರಾಟಗಾರ ಎಂ. ಎನ್. ಸೀತಾರಾಮಯ್ಯನವರು ಆರಂಭಿಸಿದ ‘ಪೌರವಾಣಿ’ ಪತ್ರಿಕೆಯೂ ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರದ ಸ್ಥಾಪನೆ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತು. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತುಮಕೂರಿನ ಎಚ್. ಆರ್. ಗುಂಡೂರಾವ್ ಅವರು ಮುಂದೆ 1954ರಲ್ಲಿ ‘ವಿಜಯವಾಣಿ’ ಪತ್ರಿಕೆಯನ್ನು ಆರಂಭಿಸಿದ್ದು ಕೂಡ ಉಲ್ಲೇಖಾರ್ಹ ವಿಚಾರ.

ಜನತೆಯಲ್ಲಿ ರಾಷ್ಟ್ರೀಯಪ್ರಜ್ಞೆ, ದೇಶಾಭಿಮಾನ ಮೂಡಿಸುವ ಮೂಲಕ ಸ್ವಾತಂತ್ರ್ಯ ಹೋರಾಟವನ್ನು ಪೋಷಿಸಿದ ಕೀರ್ತಿ ಹೊಂದಿರುವ ತುಮಕೂರು ಜಿಲ್ಲೆಯ ಪತ್ರಿಕೋದ್ಯಮ ಇಂದಿಗೂ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಅಭಿನಂದನೀಯ. ತುಮಕೂರು ಜಿಲ್ಲೆಯ ಅನೇಕ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಮಾಧ್ಯಮರಂಗದಲ್ಲಿ ಹೆಸರು ಮಾಡಿರುವುದು ಕೂಡ ಪ್ರಶಂಸನೀಯ.

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಏಪ್ರಿಲ್ 2, 2019

ಮಾಧ್ಯಮ ಶಿಕ್ಷಣ: ನಿನ್ನೆ-ಇಂದು-ನಾಳೆ

17 ಮಾರ್ಚ್ 2019ರ 'ಪ್ರಜಾಪ್ರಗತಿ' ಶಿಕ್ಷಣ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನ

ಮಾಧ್ಯಮಗಳು ಉಸಿರು, ಅನ್ನ, ನೀರಿನಷ್ಟೇ ಸಹಜವಾಗಿ ಮತ್ತು ಅನಿವಾರ್ಯವಾಗಿ ಮನುಷ್ಯನ ಜೀವನದಲ್ಲಿ ಬೆರೆತು ಹೋಗಿವೆ. ಮಾಧ್ಯಮಗಳಿಲ್ಲದ ಜಗತ್ತನ್ನು ಊಹಿಸುವುದೇ ಕಷ್ಟವೇನೋ ಎಂಬಷ್ಟರ ಮಟ್ಟಿಗೆ ಅವು ಆಧುನಿಕ ಸಮಾಜದ ಅವಿಭಾಜ್ಯ ಅಂಗಗಳಾಗಿವೆ. ಮಾಧ್ಯಮಗಳ ಕಾರ್ಯವೈಖರಿ ಬಗ್ಗೆ ಬರುತ್ತಿರುವ ಟೀಕೆಟಿಪ್ಪಣಿಗಳು ಏನೇ ಇರಲಿ, ಪ್ರಜಾಪ್ರಭುತ್ವದಲ್ಲಿ ಅವುಗಳ ಪಾತ್ರವನ್ನು ನಿರ್ಲಕ್ಷಿಸುವಂತಿಲ್ಲ.
ಪ್ರಜಾಪ್ರಗತಿ, 17 ಮಾರ್ಚ್ 2019

ಭಾರತದಲ್ಲಂತೂ ಮಾಧ್ಯಮರಂಗದ ಬೆಳೆದಿರುವ ಪರಿ ಯಾರಿಗಾದರೂ ಸೋಜಿಗ ಹುಟ್ಟಿಸುವಂಥದ್ದು.  ಭಾರತದ ಪತ್ರಿಕಾ ನೋಂದಣಿ ಸಂಸ್ಥೆಯ ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದಲ್ಲಿ ಒಟ್ಟು 1,18,239 ವೃತ್ತಪತ್ರಿಕೆಗಳು ಹಾಗೂ ನಿಯತಕಾಲಿಕಗಳಿವೆ. ಈ ಎಲ್ಲ ಪತ್ರಿಕೆಗಳ ಒಟ್ಟಾರೆ ಪ್ರಸರಣೆಯು 43 ಕೋಟಿಗಿಂತಲೂ ಹೆಚ್ಚಿದೆ. ಪ್ರತಿದಿನ ಸುಮಾರು 104 ಕೋಟಿ ಮಂದಿ ಪತ್ರಿಕೆಗಳನ್ನು ಓದುತ್ತಿದ್ದಾರೆ.

ಭಾರತದ ಆಕಾಶವಾಣಿ ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಸಾರ ಜಾಲವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದಲ್ಲಿ ಶೇ. 92ರಷ್ಟು ಭೌಗೋಳಿಕ ಪ್ರದೇಶ ಹಾಗೂ ಶೇ. 99.19ರಷ್ಟು ಜನಸಂಖ್ಯೆಯು ರೇಡಿಯೋ ಪ್ರಸಾರದ ವ್ಯಾಪ್ತಿಗೆ ಒಳಪಟ್ಟಿದೆ. ನಮ್ಮ ದೂರದರ್ಶನವೂ ಪ್ರಪಂಚದ ಅತ್ಯಂತ ದೊಡ್ಡ ಟಿವಿ ಪ್ರಸಾರ ಜಾಲವೆಂಬ ಹಿರಿಮೆಯನ್ನು ಹೊಂದಿದ್ದು, ಶೇ. 92 ಜನಸಂಖ್ಯೆಯನ್ನೂ, ಶೇ. 81 ಭೌಗೋಳಿಕ ಪ್ರದೇಶವನ್ನೂ ತಲುಪಬಲ್ಲುದಾಗಿದೆ. ಒಟ್ಟಾರೆಯಾಗಿ ದೇಶದಲ್ಲಿ 832 ಟಿವಿ ಚಾನೆಲ್‍ಗಳಿವೆ.

ಇಂಟರ್ನೆಟ್ ಕ್ರಾಂತಿಯು ಭಾರತದ ಸಂವಹನ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಎಬ್ಬಿಸಿದೆ. ಇಂಟರ್ನೆಟ್ ಬಳಕೆಯಲ್ಲಿ ಭಾರತ ವಿಶ್ವದ ಎರಡನೇ ಅತಿದೊಡ್ಡ ದೇಶವಾಗಿ ಹೊರಹೊಮ್ಮಿದೆ. ಇಂದು ಭಾರತದಲ್ಲಿ 56 ಕೋಟಿ ಜನರು ಇಂಟರ್ನೆಟ್ ಬಳಸುತ್ತಿದ್ದು, 2022ರ ವೇಳೆಗೆ ಇದು 83 ಕೋಟಿಯ ಗಡಿಯನ್ನು ದಾಟಲಿದೆ ಎಂದು ಅಂದಾಜಿಸಲಾಗಿದೆ.

ಒಟ್ಟಿನಲ್ಲಿ, ಭಾರತದ ಮಾಧ್ಯಮ ರಂಗವು ಒಂದು ಬಹುಕೋಟಿ ವ್ಯವಹಾರದ ಕೈಗಾರಿಕೆಯಾಗಿ ಬೆಳೆದು ನಿಂತಿದೆ. 50 ವರ್ಷಗಳ ಹಿಂದಿನ ಪರಿಸ್ಥಿತಿ ಈಗಿಲ್ಲ. ಈಗ ಮಾಧ್ಯಮ ಕ್ಷೇತ್ರವು ಕೆಲವು ನೂರು ಪತ್ರಿಕೆಗಳಿಗೆ ಸೀಮಿತವಾದ ಪತ್ರಿಕಾವೃತ್ತಿ ಆಗಿ ಉಳಿದಿಲ್ಲ. ಎಫ್‍ಐಸಿಸಿಐ-ಕೆಪಿಎಂಜಿ ವರದಿಯ ಪ್ರಕಾರ- ಟಿವಿ, ಸಿನಿಮಾ, ಮುದ್ರಣ ಮಾಧ್ಯಮ, ರೇಡಿಯೋ, ಅಂತರ್ಜಾಲ, ಜಾಹೀರಾತು ಮುಂತಾದ ಮಾಧ್ಯಮಗಳನ್ನು ಒಳಗೊಂಡಂತೆ ಭಾತರದ ಒಟ್ಟಾರೆ ಮಾಧ್ಯಮ ರಂಗದ ಗಾತ್ರ 1,436 ಬಿಲಿಯನ್ ರೂ.ಗಳು!

ಇಷ್ಟು ವಿಸ್ತಾರವಾಗಿರುವ ಮಾಧ್ಯಮರಂಗಕ್ಕೆ ಪ್ರತಿಭಾವಂತ, ಕ್ರಿಯಾಶೀಲ ಮಾನವ ಸಂಪನ್ಮೂಲದ ಅಗತ್ಯತೆ ತುಂಬ ಇದೆ. ಮಾಧ್ಯಮರಂಗದ ಕುರಿತು ಕುತೂಹಲ ಆಸಕ್ತಿಗಳುಳ್ಳ ಯಾರೇ ಆದರೂ ಅದರಲ್ಲಿ ತಾವೂ ಕೆಲಸ ಮಾಡಬೇಕೆಂದು ಬಯಸುವುದು ತಪ್ಪಲ್ಲ. ಆದರೆ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಬೇಕಾದವರು ಯಾರು ಎಂಬ ಪ್ರಶ್ನೆ ಮುಖ್ಯವಾದದ್ದು. ‘ಎ ಜರ್ನಲಿಸ್ಟ್ ಈಸ್ ಬಾರ್ನ್, ಬಟ್ ನಾಟ್ ಮೇಡ್’ ಎಂಬ ಮಾತಿದೆ. ಪತ್ರಿಕಾವೃತ್ತಿ ಒಂದು ಹುಟ್ಟುಗುಣ, ಅದು ರಕ್ತದಲ್ಲಿಯೇ ಬರಬೇಕು, ಶಿಕ್ಷಣ ನೀಡಿ ಅದನ್ನು ರೂಪಿಸಲಾಗದು ಎಂಬುದು ಈ ಮಾತಿನ ಅರ್ಥ.

ಇದಕ್ಕೆ ಪರ ಮತ್ತು ವಿರೋಧವಾದ ಅಭಿಪ್ರಾಯಗಳೂ ಸಾಕಷ್ಟು ಬಂದಿವೆ. ‘ಪತ್ರಿಕೋದ್ಯಮ ಕಾಲೇಜು, ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಕಲಿಸುವ ಒಂದು ವಿಷಯವೇ?’ ಎಂದು ಪ್ರಶ್ನಿಸುವವರೆಗೆ ಅದರ ಕುರಿತು ಒಂದು ಬಗೆಯ ಉಡಾಫೆಯ ಮನೋಭಾವ ಕಳೆದ ಕೆಲವು ದಶಕಗಳ ಹಿಂದಿನವರೆಗೆ ಇತ್ತು. ಆರಂಭದಲ್ಲಂತೂ ಪತ್ರಿಕೋದ್ಯಮ ಶಿಕ್ಷಣದ ಬಗ್ಗೆ ತಿರಸ್ಕಾರದ ಮನೋಭಾವವವೇ ಇತ್ತು. ಎಲ್ಲ ಚರ್ಚೆಗಳ ನಡುವೆಯೂ ಸರಿಸುಮಾರು ನೂರು ವರ್ಷಗಳಿಂದ ಭಾರತದಲ್ಲಿ ಮಾಧ್ಯಮ ಶಿಕ್ಷಣವು ನಿರಂತರವಾಗಿ ಸಾಗಿ ಬಂದಿದೆ. ವರ್ಷದಿಂದ ವರ್ಷಕ್ಕೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ.

ಆದರೆ ಒಂದು ಮಾತು ನಿಜ: ಪತ್ರಿಕೋದ್ಯಮ ಅಥವಾ ಸಂವಹನದ ಕ್ಷೇತ್ರದ ಯಾವುದೇ ಕೆಲಸವೂ ಸರಳವಾದದ್ದಲ್ಲ, ಅದಕ್ಕೆ ವಿಶೇಷ ಕೌಶಲ ಬೇಕು; ಮತ್ತು ಆ ಕಾರಣಕ್ಕೆ ಮಾಧ್ಯಮ ಕ್ಷೇತ್ರದ ಉದ್ಯೋಗಕ್ಕೆ ವಿಶೇಷ ತರಬೇತಿಯ ಅವಶ್ಯಕತೆಯಿದೆ. ವರದಿಗಾರಿಕೆಯಾಗಲೀ, ಸಂಪಾದನೆಯಾಗಲೀ, ಪುಟ ವಿನ್ಯಾಸವಾಗಲೀ, ಟಿವಿ ಕಾರ್ಯಕ್ರಮ ನಿರ್ಮಾಣ ತಂತ್ರವಾಗಲೀ ತರಬೇತಿಯನ್ನು ಬಯಸುವ ಕೌಶಲಗಳು. ಇಂತಹದೊಂದು ತರಬೇತಿಯನ್ನು ನೀಡುವುದು ಮಾಧ್ಯಮ ಶಿಕ್ಷಣದಿಂದ ಸಾಧ್ಯ.

ಮಾಧ್ಯಮ ಶಿಕ್ಷಣ: ನಿನ್ನೆ
ಭಾರತದಲ್ಲಿ ಪತ್ರಿಕೋದ್ಯಮ ಶಿಕ್ಷಣವನ್ನು ಆರಂಭಿಸಿದ ಕೀರ್ತಿ ಡಾ. ಆ್ಯನಿ ಬೆಸೆಂಟರಿಗೆ ಸಲ್ಲುತ್ತದೆ. 1929ರಲ್ಲಿ ಅವರು ತಮಿಳುನಾಡಿನ ಅಡಿಯಾರಿನ ನ್ಯಾಶನಲ್ ಕಾಲೇಜಿನಲ್ಲಿ ಪತ್ರಿಕೋದ್ಯಮ ತರಬೇತಿ ಕಾರ್ಯಕ್ರಮವನ್ನು ಪ್ರಥಮವಾಗಿ ಆರಂಭಿಸಿದರು. ಪ್ರಾಯೋಗಿಕ ತರಬೇತಿಗಾಗಿ ವಿದ್ಯಾರ್ಥಿಗಳನ್ನು ಅವರು ತಮ್ಮ ‘ನ್ಯೂ ಇಂಡಿಯಾ’ ಕಛೇರಿಗೆ ಕಳುಹಿಸುತ್ತಿದ್ದರು. 1936ರಲ್ಲಿ ಡಾ. ಜೆ. ಬಿ. ಕುಮಾರಪ್ಪ ಮುಂಬೈನಲ್ಲಿ ‘ಅಮೇರಿಕನ್ ಕಾಲೇಜ್ ಆಫ್ ಜರ್ನಲಿಸಂ’ ಎಂಬ ಹೆಸರಿನ ಸಂಸ್ಥೆಯನ್ನು (ಈಗಿನ ಬಿ. ಜಿ. ಹಾರ್ನಿಮನ್ ಕಾಲೇಜ್ ಆಫ್ ಜರ್ನಲಿಸಂ) ಆರಂಭಿಸಿದರು. 1938ರಲ್ಲಿ ಆಲಿಘರ್ ವಿ.ವಿ.ಯಲ್ಲಿ ಪತ್ರಕರ್ತರಿಗೆ ತರಬೇತಿ ನೀಡುವ ಪ್ರಯತ್ನವೊಂದನ್ನು ಆರಂಭಿಸಲಾಯಿತು. ಆದರೆ ಎರಡೇ ವರ್ಷಗಳಲ್ಲಿ ಅದು ನಿಂತುಹೋಯಿತು.

ಪತ್ರಿಕೋದ್ಯಮದಲ್ಲಿ ಔಪಚಾರಿಕ ಶಿಕ್ಷಣವು ಆರಂಭವಾದದ್ದು ಪಂಜಾಬ್ ವಿ.ವಿ.ಯಲ್ಲಿ. ಆಗ ಲಾಹೋರ್‍ನಲ್ಲಿದ್ದ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ 1941ರಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಡಿಪ್ಲೊಮಾ ಕೋರ್ಸ್ ಆರಂಭವಾಯಿತು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ವಿವಿಯು ದೆಹಲಿಗೆ ಸ್ಥಳಾಂತರವಾಯಿತು. 1947ರಲ್ಲಿ ಮದ್ರಾಸ್ ವಿವಿಯಲ್ಲೂ, 1950ರಲ್ಲಿ ಕಲ್ಕತ್ತಾ ವಿವಿಯಲ್ಲೂ, 1954ರಲ್ಲಿ ಉಸ್ಮಾನಿಯಾ ವಿವಿಯಲ್ಲೂ ಪತ್ರಿಕೋದ್ಯಮ ವಿಭಾಗಗಳು ಆರಂಭವಾದವು. 60ರ ದಶಕದ ಮಧ್ಯಭಾಗದಲ್ಲಿ ‘ದಿ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯು ಔಪಚಾರಿಕ ಪತ್ರಿಕೋದ್ಯಮ ತರಬೇತಿ ಕೋರ್ಸನ್ನು ಆರಂಭಿಸಿತು.

1956ರಲ್ಲಿ ಕಲ್ಕತ್ತಾದಲ್ಲಿ ‘ಇಂಡಿಯನ್ ಅಸೋಸಿಯೇಶನ್ ಆಫ್ ಎಜುಕೇಶನ್ ಇನ್ ಜರ್ನಲಿಸಂ’ನ್ನು ಸ್ಥಾಪಿಸಲಾಯಿತು. ಹಾಗೆಯೇ ಕೆಲವು ಪ್ರಮುಖ ಪತ್ರಿಕೆಗಳು, ಯುಎನ್‍ಡಿಪಿ ಹಾಗೂ ಪ್ರೆಸ್ ಫೌಂಡೇಶನ್ ಆಫ್ ಇಂಡಿಯಾದ ಸಹಕಾರದೊಂದಿಗೆ 1963ರಲ್ಲಿ ದೆಹಲಿಯಲ್ಲಿ ಪ್ರೆಸ್ ಇನ್ಸ್‍ಟಿಟ್ಯೂಟ್ ಆಫ್ ಇಂಡಿಯಾವನ್ನು ಸ್ಥಾಪಿಸಲಾಯಿತು (ಮುಂದೆ ಇದನ್ನು ಚೆನ್ನೈಗೆ ಸ್ಥಳಾಂತರಿಸಲಾಯಿತು). ಇದೇ ಅವಧಿಯಲ್ಲಿ ನಾಗ್ಪುರ, ಹೈದರಾಬಾದ್, ಮದ್ರಾಸ್ ಹಾಗೂ ಮೈಸೂರು ವಿಶ್ವವಿದ್ಯಾನಿಲಯಗಳಲ್ಲೂ ಪತ್ರಿಕೋದ್ಯಮ ವಿಭಾಗಗಳು ಆರಂಭವಾದವು.

1965ರಲ್ಲಿ ಕೇಂದ್ರ ಸರ್ಕಾರವು ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಶನ್ (ಐಐಎಂಸಿ)ನ್ನು ಸ್ಥಾಪಿಸಿದ್ದು ಇನ್ನೊಂದು ಪ್ರಮುಖ ಮೈಲಿಗಲ್ಲು. 1980ರ ದಶಕದಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ)ವು ದೆಹಲಿ ವಿವಿ, ಜಾಮಿಯಾ ಮಿಲಿಯಾ ಇಸ್ಲಾಮಿಯ ವಿವಿ, ಫಿಲ್ಮ್ ಇನ್ಸ್‍ಟಿಟ್ಯೂಟ್ ಆಫ್ ಇಂಡಿಯಾ, ಪುಣೆ ವಿವಿ ಹಾಗೂ ಬನಾರಸ್ ಹಿಂದೂ ವಿವಿ ಮೊದಲಾದ ಕೇಂದ್ರೀಯ ವಿವಿಗಳ, ಹಾಗೂ ಅನೇಕ ರಾಜ್ಯ ಸರ್ಕಾರಿ ವಿವಿಗಳ ಪತ್ರಿಕೋದ್ಯಮ ವಿಭಾಗಗಳಿಗೆ ವಿಶೇಷ ಅನುದಾನ ಪೋಷಿಸಿತು.

ಕರ್ನಾಟಕದಲ್ಲಿ ಪತ್ರಿಕೋದ್ಯಮ ಶಿಕ್ಷಣವನ್ನು ಆರಂಭಿಸಿದ ಹೆಗ್ಗಳಿಕೆ ಮೈಸೂರು ವಿಶ್ವವಿದ್ಯಾನಿಲಯದ್ದು. 1951ರಲ್ಲಿ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪತ್ರಿಕೋದ್ಯಮವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಬಿ.ಎ. ಹಂತದಲ್ಲಿ ಪರಿಚಯಿಸಲಾಯಿತು. ಅಮೇರಿಕದ ಮಿಸ್ಸೋರಿ ವಿ.ವಿ.ಯಲ್ಲಿ ಪತ್ರಿಕೋದ್ಯಮ ಪದವಿ ಪಡೆದ ಡಾ. ನಾಡಿಗ ಕೃಷ್ಣಮೂರ್ತಿಯವರ ನೇತೃತ್ವದಲ್ಲಿ ಅದು ವಿಶೇಷ ಉತ್ಕರ್ಷವನ್ನು ಕಂಡಿತು. ಮುಂದೆ ಮೈಸೂರು ವಿ.ವಿ.ಯಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗ ಆರಂಭವಾಯಿತು.

1990ರಲ್ಲಿ ಭೋಪಾಲ್‍ನಲ್ಲಿ ಸ್ಥಾಪನೆಯಾದ ಮಖನ್‍ಲಾಲ್ ಚತುರ್ವೇದಿ ರಾಷ್ಟ್ರೀಯ ಪತ್ರಿಕೋದ್ಯಮ ವಿಶ್ವವಿದ್ಯಾನಿಲಯವು ಮಾಧ್ಯಮ ಶಿಕ್ಷಣಕ್ಕಾಗಿಯೇ ಆರಂಭವಾದ ದೇಶದ ಮೊದಲ ವಿಶ್ವವಿದ್ಯಾನಿಲಯ. ಹಿಂದಿಯೂ ಒಳಗೊಂಡಂತೆ ದೇಶೀಯ ಭಾಷೆಗಳಲ್ಲಿ ಪತ್ರಿಕೋದ್ಯಮ ಹಾಗೂ ಶಿಕ್ಷಣವನ್ನು ಪೋಷಿಸುವ ಉದ್ದೇಶ ಅದರದ್ದು. 2004ರಲ್ಲಿ ಛತ್ತೀಸ್‍ಗಡದಲ್ಲಿ ಆರಂಭವಾದ ‘ಕುಶಭಾವು ಠಾಕ್ರೆ ಪತ್ರಕರಿತ ಏವಂ ಜನಸಂಚಾರ್ ವಿ.ವಿ.’ಯೂ ಪತ್ರಿಕೋದ್ಯಮ ಶಿಕ್ಷಣಕ್ಕೇ ಮೀಸಲಾದ ಇನ್ನೊಂದು ವಿಶ್ವವಿದ್ಯಾನಿಲಯ.

ಮಾಧ್ಯಮ ಶಿಕ್ಷಣ: ಇಂದು
ಇಂದು ಪತ್ರಿಕೋದ್ಯಮ ಹಾಗೂ ಇತರ ಆನ್ವಯಿಕ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ನೀಡುವ 300ಕ್ಕೂ ಹೆಚ್ಚು ಸಂಸ್ಥೆಗಳು ದೇಶದಲ್ಲಿವೆ. 1980ರ ದಶಕದಲ್ಲಿ ಇದ್ದುದು ಕೇವಲ 25 ಸಂಸ್ಥೆಗಳು ಮಾತ್ರ ಎಂದರೆ ಮಾಧ್ಯಮ ಶಿಕ್ಷಣ ಕ್ಷೇತ್ರ ಬೆಳೆದ ವೇಗ ಅರ್ಥವಾಗುತ್ತದೆ. 25 ಕೇಂದ್ರೀಯ ವಿವಿಗಳು, 80 ರಾಜ್ಯ ವಿವಿಗಳು, 30 ಖಾಸಗಿ ವಿವಿಗಳು, 50 ದೂರಶಿಕ್ಷಣ ಸಂಸ್ಥೆಗಳು, 50 ಖಾಸಗಿ ಸಂಸ್ಥೆಗಳು, 10 ಡೀಮ್ಡ್ ವಿವಿಗಳು, 11 ಮಾಧ್ಯಮ ಮಾಲೀಕತ್ವದ ಸಂಸ್ಥೆಗಳು ಪತ್ರಿಕೋದ್ಯಮ ಶಿಕ್ಷಣ ನೀಡುತ್ತಿವೆ. ಇವಲ್ಲದೆ ನೂರಾರು ಕಾಲೇಜುಗಳು ಪದವಿ ಹಂತದಲ್ಲಿ ಪತ್ರಿಕೋದ್ಯಮ ಶಿಕ್ಷಣ ಅಳವಡಿಸಿಕೊಂಡಿವೆ.

ಮಾಧ್ಯಮ ಕ್ಷೇತ್ರದ ಆಳ-ಅಗಲಗಳಿಗೆ ಅನುಗುಣವಾಗಿ ಉದ್ಯೋಗ ಕ್ಷೇತ್ರವೂ ಬೆಳೆದು ನಿಂತಿದೆ. ಭಾರತದಲ್ಲಿ ಪ್ರತಿ ವರ್ಷ ಏನಿಲ್ಲವೆಂದರೂ 5000 ಪತ್ರಿಕೋದ್ಯಮ ಪದವೀಧರರು ಹೊರಬರುತ್ತಾರೆಂದು ಅಂದಾಜಿಸಲಾಗಿದೆ. ಇಷ್ಟೊಂದು ಮಂದಿಗೆ ನಮ್ಮಲ್ಲಿ ಉದ್ಯೋಗಾವಕಾಶ ಇದೆಯೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಆದರೆ ನಾವು ಯೋಚಿಸಬೇಕಿರುವ ಪ್ರಮುಖ ವಿಷಯವೆಂದರೆ, ವೃತ್ತಪತ್ರಿಕೆ ಅಥವಾ ಟಿವಿ ಅಷ್ಟೇ ಇಂದು ಉದ್ಯೋಗ ಸೃಷ್ಟಿಯ ಕ್ಷೇತ್ರಗಳಾಗಿಲ್ಲ. ಮಾಧ್ಯಮ ಶಿಕ್ಷಣವನ್ನು ಸಮರ್ಪಕವಾಗಿ ಪಡೆದವರಿಗೆ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ.

ಮೀಡಿಯಾ ಅಂಡ್ ಎಂಟರ್‍ಟೈನ್ಮೆಂಟ್ ಸ್ಕಿಲ್ಸ್ ಕೌನ್ಸಿಲ್ ನಡೆಸಿರುವ ಅಧ್ಯಯನದಂತೆ, ಭಾರತದ ಮಾಧ್ಯಮ ಹಾಗೂ ಮನರಂಜನಾ ಕ್ಷೇತ್ರದ ಪ್ರಸಕ್ತ ಉದ್ಯೋಗ ಗಾತ್ರ ಸುಮಾರು 4 ಲಕ್ಷ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಮಾಧ್ಯಮರಂಗದಲ್ಲಿ 7-8 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ.

ಮಾಧ್ಯಮ ಕ್ಷೇತ್ರದಲ್ಲಿ ಇಷ್ಟೊಂದು ಉದ್ಯೋಗಾವಕಾಶಗಳು ಸೃಷ್ಟಿಯಾಗಿರುವುದೇನೋ ನಿಜ; ಆದರೆ ಅದಕ್ಕೆ ಅನುಗುಣವಾದ ಸುಧಾರಿತ ಶಿಕ್ಷಣ ಹಾಗೂ ತರಬೇತಿ ನಮ್ಮಲ್ಲಿ ಲಭ್ಯವಿದೆಯೇ ಎಂಬ ಪ್ರಶ್ನೆಗೆ ‘ಹೌದು’ ಎಂಬ ಆತ್ಮವಿಶ್ವಾಸದ ಉತ್ತರ ದೊರೆಯುವುದಿಲ್ಲ. ಎಷ್ಟೊಂದು ಕಡೆ ಪತ್ರಿಕೋದ್ಯಮ ಶಿಕ್ಷಣ ಇದೆ, ಆದರೆ ನಮಗೆ ಬೇಕಾಗಿರುವ ಬೆರಳೆಣಿಕೆಯ ಸಮರ್ಥ ಅಭ್ಯರ್ಥಿಗಳೂ ಸಿಗುತ್ತಿಲ್ಲವಲ್ಲ ಎಂಬುದು ಪತ್ರಿಕೆಗಳಿಂದ ತೊಡಗಿ ಚಾನೆಲ್‍ಗಳವರೆಗೆ ಇಡೀ ಮಾಧ್ಯಮರಂಗದ ಸಾಮಾನ್ಯ ಆತಂಕ.

ಯಾಕೆ ಹೀಗೆ? ಇದು ಮಾಧ್ಯಮ ಮತ್ತು ಶಿಕ್ಷಣ ಕ್ಷೇತ್ರಗಳೆರಡೂ ಕೇಳಿಕೊಳ್ಳಬೇಕಾದ ಮಹತ್ವದ ಪ್ರಶ್ನೆ. ಅತ್ಯಾಧುನಿಕವಾಗಿ ಬೆಳೆದು ನಿಂತಿರುವ ಬೃಹತ್ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರ ಹಾಗೂ ನಮ್ಮ ಮಾಧ್ಯಮ ಶಿಕ್ಷಣದ ನಡುವೆ ಬಹುದೊಡ್ಡ ಅಂತರ ಇದೆ. ಈ ಅಂತರಕ್ಕೆ ಇರುವ ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು:
1) ಸಿದ್ಧಾಂತ ಮತ್ತು ಪ್ರಯೋಗಗಳ ನಡುವಿನ ಭಾರೀ ಅಂತರ. ಪತ್ರಿಕೋದ್ಯಮ ಶಿಕ್ಷಣ ಮೂಲತಃ ಪ್ರಾಯೋಗಿಕವಾದುದು. ಆದರೆ ಇದನ್ನು ಒಪ್ಪಿಕೊಳ್ಳುವುದರಲ್ಲೇ ಮಾಧ್ಯಮ ಕ್ಷೇತ್ರ ಹಾಗೂ ಶಿಕ್ಷಣ ರಂಗದ ನಡುವೆ ಅಪಾರ ಭಿನ್ನಾಭಿಪ್ರಾಯಗಳಿವೆ. ಸ್ನಾತಕೋತ್ತರ ಹಂತದಲ್ಲಂತೂ ಪತ್ರಿಕೋದ್ಯಮ ವಿಭಾಗಗಳಿರುವುದು ಆ ವಿಷಯವನ್ನು ಅಕಡೆಮಿಕ್ ಆಗಿ ಬೆಳೆಸುವುದಕ್ಕೆ ಹಾಗೂ ಸಂವಹನ ಸಂಶೋಧನೆಯನ್ನು ಅಭಿವೃದ್ಧಿಪಡಿಸುವುದಕ್ಕೆ ಎಂಬ ಅಭಿಪ್ರಾಯಕ್ಕೆ ಅನೇಕ ಪ್ರಾಧ್ಯಾಪಕರು ಬದ್ಧರಾಗಿದ್ದಾರೆ. ಹಾಗಾದರೆ ಮಾಧ್ಯಮ ಕ್ಷೇತ್ರದಲ್ಲಿ ಯಾರು ಕೆಲಸ ಮಾಡಬೇಕು ಅಥವಾ ಆ ಕ್ಷೇತ್ರಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ರೂಪುಗೊಳಿಸುವ ಜವಾಬ್ದಾರಿ ಯಾರದ್ದು ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರವಿಲ್ಲ.

2) ಅನುಭವೀ ಹಾಗೂ ಪೂರ್ಣಕಾಲಿಕ ಅಧ್ಯಾಪಕರ ಕೊರತೆ. ಅನೇಕ ವಿಶ್ವವಿದ್ಯಾನಿಲಯಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಹಾಗೂ ಪದವಿ ಕಾಲೇಜುಗಳಲ್ಲಿ ಅನುಭವೀ ಮತ್ತು ಪೂರ್ಣಕಾಲಿಕ ಪತ್ರಿಕೋದ್ಯಮ ಅಧ್ಯಾಪಕರ ಕೊರತೆ ಇದೆ. ಬಹುತೇಕರಲ್ಲಿ ಪ್ರಾಯೋಗಿಕ ಜ್ಞಾನ ಇಲ್ಲ. ಅವರೇನಿದ್ದರೂ ಸಿದ್ಧಾಂತಗಳನ್ನು ಓದಿಕೊಂಡವರು. ಪತ್ರಿಕೆ, ಟಿವಿ, ಜಾಹೀರಾತು, ಸಾರ್ವಜನಿಕ ಸಂಪರ್ಕ ಮತ್ತಿತರ ಕ್ಷೇತ್ರಗಳಲ್ಲಿ ಕಾಲಕಾಲಕ್ಕೆ ಆಗುತ್ತಿರುವ ಬದಲಾವಣೆಗಳ ನೇರ ಪರಿಚಯ ಅವರಿಗಿಲ್ಲ. ಅಂತಹ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವವೂ ಅವರಿಗಿಲ್ಲ. ಆ ಕ್ಷೇತ್ರಕ್ಕೆ ಬೇಕಾದ ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದಕ್ಕೂ ಅವರು ನಿರಾಸಕ್ತರು ಅಥವಾ ಅಸಮರ್ಥರು.

3) ಇಂಗ್ಲಿಷ್ ಪತ್ರಿಕೋದ್ಯಮ ತರಬೇತಿಯ ಏಕಸ್ವಾಮ್ಯ. ಇಡೀ ದೇಶವನ್ನು ಗಮನದಲ್ಲಿರಿಸಿಕೊಂಡರೆ, ಬಹುತೇಕ ಶಿಕ್ಷಣ ಸಂಸ್ಥೆಗಳು ಇಂಗ್ಲಿಷ್ ಪತ್ರಿಕೋದ್ಯಮದ ಅಗತ್ಯಕ್ಕನುಗುಣವಾಗಿ ಕಾರ್ಯ ನಿರ್ವಹಿಸುತ್ತಿರುವಂತೆ ಕಾಣುತ್ತದೆ. ಪ್ರಾದೇಶಿಕ ಭಾಷೆಗಳ ಪತ್ರಿಕೋದ್ಯಮಕ್ಕೆ ಅಗತ್ಯವಿರುವ ಪತ್ರಕರ್ತರನ್ನು ರೂಪುಗೊಳಿಸುವ ಒಳ್ಳೆಯ ಸಂಸ್ಥೆಗಳ ಕೊರತೆ ಎದ್ದು ಕಾಣುತ್ತದೆ.

4) ಭಾರತೀಯ ಮಾಧ್ಯಮ ಶಿಕ್ಷಣ ಇನ್ನೂ ಪಾಶ್ಚಾತ್ಯ ಮಾದರಿಯ ಗುಂಗಿನಿಂದ ಹೊರಬರದೇ ಇರುವುದು. ನಮ್ಮ ಪಠ್ಯಕ್ರಮಗಳ ಮೇಲೆ ವಿದೇಶೀ ಛಾಯೆ ದಟ್ಟವಾಗಿದೆ. ವಿಪರ್ಯಾಸವೆಂದರೆ, ನಮ್ಮ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾದ ಸೂಕ್ತ ಪರಾಮರ್ಶನ ಗ್ರಂಥಗಳನ್ನು ನಮ್ಮ ದೇಶದಿಂದಲೇ ನೀಡುವುದಕ್ಕೆ ನಾವಿನ್ನೂ ಸಿದ್ಧವಾಗಿಲ್ಲ. ಯಾವುದೇ ವಿಶ್ವವಿದ್ಯಾನಿಲಯದ ಪಠ್ಯಕ್ರಮವನ್ನು ಗಮನಿಸಿದರೂ ಕೊನೆಯಲ್ಲಿ ನೀಡಿರುವ ಪರಾಮರ್ಶನ ಗ್ರಂಥಗಳಲ್ಲಿ ಶೇ. 90 ಕೂಡ ವಿದೇಶೀ ಲೇಖಕರದ್ದಾಗಿರುತ್ತವೆ.

5) ಮೂಲಸೌಕರ್ಯಗಳ ಕೊರತೆ. ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ವರ್ತಮಾನದ ಮಾಧ್ಯಮ ಜಗತ್ತಿಗೆ ಉದ್ಯೋಗಿಗಳನ್ನು ತರಬೇತುಗೊಳಿಸುವಲ್ಲಿ ಸೂಕ್ತ ಮೂಲಸೌಕರ್ಯಗಳ ಕೊರತೆಯಿದೆ. ಅವುಗಳಲ್ಲಿ ಉತ್ತಮ ಗುಣಮಟ್ಟದ ಸ್ಟುಡಿಯೋ ಆಗಲೀ, ಕ್ಯಾಮರಾಗಳಾಗಲೀ, ಕಂಪ್ಯೂಟರ್‍ಗಳಾಗಲೀ, ತಂತ್ರಾಂಶಗಳಾಗಲೀ ಇಲ್ಲ. ಒಂದು ವೇಳೆ ಇದ್ದರೂ ಅವುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳನ್ನು ಶ್ರೇಷ್ಠ ಮಟ್ಟದಲ್ಲಿ ತರಬೇತುಗೊಳಿಸುವಂತಹ ತಾಂತ್ರಿಕ ಪರಿಣತಿ ಸ್ವತಃ ಬೋಧಕರಿಗೇ ಇಲ್ಲ. ಪದವಿ ಹಂತದಲ್ಲಂತೂ ಅನೇಕ ಕಡೆ ಪತ್ರಿಕೋದ್ಯಮ ವಿಭಾಗಗಳ ಕಥೆ ಶೋಚನೀಯವಾಗಿದೆ.  ತರಗತಿ ಕೊಠಡಿ, ಬೆಂಚು-ಡೆಸ್ಕು, ಉಪನ್ಯಾಸಕರು ಇವಿಷ್ಟರಿಂದಲೇ ಪತ್ರಿಕೋದ್ಯಮ ತರಬೇತಿ ನೀಡಬಹುದು ಎಂದು ಸರ್ಕಾರ ಮತ್ತು ಕಾಲೇಜುಗಳು ಭಾವಿಸಿಕೊಂಡಂತಿದೆ. ಅಂತಹ ಕಡೆ ಪತ್ರಿಕೋದ್ಯಮಾಸಕ್ತ ವಿದ್ಯಾರ್ಥಿಗಳು ಎಂತಹ ಶಿಕ್ಷಣ ಪಡೆಯಲು ಸಾಧ್ಯ?

6) ಅನೇಕ ವಿಶ್ವವಿದ್ಯಾನಿಲಯಗಳು ಹಳೇ ಪಠ್ಯಕ್ರಮಕ್ಕೆ ಜೋತುಬಿದ್ದಿರುವುದು. ಆನ್‍ಲೈನ್ ಪತ್ರಿಕೋದ್ಯಮ, ಅನಿಮೇಶನ್, ತಾಂತ್ರಿಕ ಬರೆವಣಿಗೆ, ಜಾಲತಾಣ ಅಭಿವೃದ್ಧಿ, ಗ್ರಾಫಿಕ್ ಡಿಸೈನ್ ಮೊದಲಾದ ಹೊಸಹೊಸ ಕ್ಷೇತ್ರಗಳಲ್ಲಿ ಅಪಾರ ಬೆಳವಣಿಗೆ ಆಗುತ್ತಿದ್ದರೂ ಅನೇಕ ವಿಶ್ವವಿದ್ಯಾನಿಲಯಗಳು ಇನ್ನೂ 10-15 ವರ್ಷಗಳಷ್ಟು ಹಳೆಯ ಪಠ್ಯಕ್ರಮವನ್ನು ಬೋಧಿಸುತ್ತಿರುವುದು ವಿಪರ್ಯಾಸ. ಇದು ಅವಧಿ ಮೀರಿದ ಉತ್ಪನ್ನಗಳನ್ನು ಮಾರುಕಟ್ಟೆಗೆ ಕಳಿಸಿಕೊಡುವುದಕ್ಕಿಂತ ಭಿನ್ನವಾಗಿಯೇನೂ ಇಲ್ಲ.

7) ಪತ್ರಿಕೋದ್ಯಮ ವಿಭಾಗಗಳು ಹಾಗೂ ಮಾಧ್ಯಮ ಸಂಸ್ಥೆಗಳ ನಡುವೆ ಇರುವ ದೊಡ್ಡ ಕಂದರ. ಅನೇಕ ಪತ್ರಿಕೋದ್ಯಮ ಪ್ರಾಧ್ಯಾಪಕರುಗಳಲ್ಲಿ ಪತ್ರಿಕಾ ಸಂಸ್ಥೆಗಳಲ್ಲಿರುವ ಉದ್ಯೋಗಿಗಳಿಗಿಂತ ತಾವೇ ಹೆಚ್ಚು ಜ್ಞಾನಿಗಳು ಎಂಬ ಮನೋಭಾವವೂ, ಅನೇಕ ಕಾರ್ಯನಿರತ ಪತ್ರಕರ್ತರುಗಳಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರುಗಳಿಗೇನು ತಿಳಿದಿದೆ ಎಂಬ ಉಡಾಫೆ ಭಾವನೆಯೂ ಬೇರೂರಿದೆ. ಹೀಗೆ ಶಿಕ್ಷಣ ಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳ ನಡುವೆ ಸೃಷ್ಟಿಯಾಗಿರುವ ಅಂತರಕ್ಕೆ ಬಲಿಯಾಗಿರುವುದು ಮಾತ್ರ ಮಾಧ್ಯಮ ಶಿಕ್ಷಣ ಎಂಬುದು ಖೇದಕರ.

8) ನಗರ ಕೇಂದ್ರಿತ ತುಟ್ಟಿ ಖಾಸಗಿ ಸಂಸ್ಥೆಗಳು. ಮಾಧ್ಯಮ ಶಿಕ್ಷಣ ಕ್ಷೇತ್ರದ ಅತ್ಯುತ್ತಮ ಸಂಸ್ಥೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ನಮಗೆ ಸಿಗುವುದು ಖಾಸಗಿ ಸಂಸ್ಥೆಗಳು. ಆದರೆ ಇವೆಲ್ಲ ನಗರ ಕೇಂದ್ರಿತವಾದವು, ಜತೆಗೆ ಸಾಮಾನ್ಯ ವಿದ್ಯಾರ್ಥಿಗಳಿಗೆ ಗಗನ ಕುಸಮಗಳು. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿಯಿರುವ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಯೊಬ್ಬ ದೆಹಲಿ, ಚೆನ್ನೈ, ಅಹಮದಾಬಾದ್, ಮುಂಬೈ, ಪೂನಾದಂತಹ ಮಹಾನಗರಗಳಿಗೆ ತೆರಳಿ ಅಲ್ಲಿನ ಸಂಸ್ಥೆಗಳಿಗೆ ಲಕ್ಷಾಂತರ ರೂ. ಶುಲ್ಕ ತೆತ್ತು ಒಳ್ಳೆಯ ತರಬೇತಿ ಪಡೆಯುವುದು ಕನಸಿನ ಮಾತೇ ಸರಿ.

9) ವಿದ್ಯಾರ್ಥಿಗಳ ಕ್ಷಿಪ್ರ ಪ್ರಸಿದ್ಧಿಯ ಭ್ರಮೆ. ಹೊಸ ತಲೆಮಾರಿನ ವಿದ್ಯಾರ್ಥಿಗಳು ಮಾಧ್ಯಮಗಳ ಗ್ಲಾಮರ್‍ನಿಂದ ಆಕರ್ಷಿತರಾಗಿದ್ದಾರೆಯೇ ಹೊರತು ಅಂತಹದೊಂದು ಕ್ಷೇತ್ರ ಪ್ರವೇಶಿಸುವುದಕ್ಕೆ ತಮ್ಮ ಕಡೆಯಿಂದ ಇರಬೇಕಾದ ವೈಯುಕ್ತಿಕ ಪರಿಶ್ರಮ ಏನು ಎಂಬ ಕನಿಷ್ಟ ವಿವೇಚನೆಯನ್ನೂ ಹೊಂದಿಲ್ಲ. ಪತ್ರಿಕೋದ್ಯಮದಲ್ಲಿ ಪದವಿ ಮಾಡಿದ ತಕ್ಷಣ ಪತ್ರಿಕೆ, ಚಾನೆಲ್‍ಗಳಲ್ಲಿ ಒಳ್ಳೊಳ್ಳೆಯ ಉದ್ಯೋಗ ಪಡೆದು ವಿಶ್ವವೇ ತಮ್ಮತ್ತ ನೋಡುವಂತೆ ಮಾಡಬಹುದು ಎಂಬ ಕಲ್ಪನಾ ಲೋಕದಲ್ಲೇ ಹೆಚ್ಚಿನವರೂ ಇದ್ದಾರೆ. ಮಾಧ್ಯಮ ಕ್ಷೇತ್ರ ಬಯಸುವ ಅಪಾರ ಜ್ಞಾನ, ಅದಕ್ಕೆ ಬೇಕಾದ ವಿಸ್ತಾರ ಓದು, ಸಮರ್ಥ ಭಾಷೆ, ಮಾತು ಹಾಗೂ ಬರವಣಿಗೆಯ ಕೌಶಲ ಇತ್ಯಾದಿಗಳನ್ನು ರೂಢಿಸಿಕೊಳ್ಳುವಲ್ಲಿ ತಮ್ಮ ಜವಾಬ್ದಾರಿಯೇನು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುತ್ತಿಲ್ಲ. ಶಿಕ್ಷಣ ಎಂಬುದು ಕಾಲೇಜು ಮತ್ತು ಅಧ್ಯಾಪಕರ ಜವಾಬ್ದಾರಿಯಷ್ಟೇ ಅಲ್ಲವಷ್ಟೆ?

ಭವಿಷ್ಯದ ಹಾದಿ:
ಮಾಧ್ಯಮ ಶಿಕ್ಷಣ ಫಲಪ್ರದವಾಗಬೇಕಾದರೆ ಇಂತಹ ಸವಾಲುಗಳನ್ನು ಮೀರಿ ನಿಲ್ಲುವುದು ತುಂಬ ಅವಶ್ಯಕ. ಮೊದಲನೆಯದಾಗಿ, ಸಿದ್ಧಾಂತ ಮತ್ತು ಪ್ರಯೋಗದ ನಡುವಿನ ಅಂತರವನ್ನು ನಿವಾರಣೆಯಾಗಬೇಕು. ಪತ್ರಿಕೋದ್ಯಮ ಓದಿದ ವಿದ್ಯಾರ್ಥಿಗಳು ನಾಳೆ ಪತ್ರಿಕೆಗಳಿಗೋ ಚಾನೆಲ್‍ಗಳಿಗೋ ಸೇರಿಕೊಂಡಾಗ ತಾವು ಓದಿದ್ದಕ್ಕೂ ಇಲ್ಲಿನ ಅವಶ್ಯಕತೆಗಳಿಗೂ ಏನೇನೂ ಸಂಬಂಧವಿಲ್ಲ ಎಂದು ಅನಿಸಬಾರದು. ಪತ್ರಿಕೋದ್ಯಮದ ಇತಿಹಾಸ, ಸಂವಹನ ಸಿದ್ಧಾಂತಗಳನ್ನೆಲ್ಲ ಬೋಧಿಸುವ ಜತೆಜತೆಗೆ ಪ್ರಾಯೋಗಿಕ ಕೌಶಲಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಡೆಗೂ ಅಧ್ಯಾಪಕರು ಸಮಾನ ಪ್ರಾಶಸ್ತ್ಯ ನೀಡಬೇಕು.

ಇದು ನಡೆಯಬೇಕಾದರೆ, ಎರಡು ಪ್ರಮುಖ ಅವಶ್ಯಕತೆಗಳಿವೆ. ಒಂದು, ಪ್ರಾಯೋಗಿಕ ಕಲಿಕೆಗೆ ಅನಿವಾರ್ಯವಾದ ಮೂಲಭೂತ ಸೌಕರ್ಯಗಳನ್ನು ಕಾಲೇಜು ಹಾಗೂ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಸಮರ್ಪಕವಾಗಿ ಒದಗಿಸುವುದು. ಎರಡು, ಈ ಸೌಕರ್ಯಗಳನ್ನು ಬಳಸುವ ಪ್ರಾಯೋಗಿಕ ಜ್ಞಾನವುಳ್ಳ ಅಧ್ಯಾಪಕರನ್ನು ನೇಮಿಸುವುದು. ಬೇರೆ ವಿಷಯಗಳನ್ನು ಬೋಧಿಸಿದಂತೆ ಪತ್ರಿಕೋದ್ಯಮವನ್ನು ಬೋಧಿಸಬಹುದು ಎಂಬ ಅಜ್ಞಾನದಿಂದ ಪ್ರಾಂಶುಪಾಲರುಗಳು, ಶಿಕ್ಷಣ ಇಲಾಖೆ ಹಾಗೂ ವಿಶ್ವವಿದ್ಯಾನಿಲಯಗಳು ಹೊರಬರಬೇಕು. ಪತ್ರಿಕೋದ್ಯಮವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಆರಂಭಿಸುವ ಮುನ್ನ ಅದಕ್ಕೆ ಬೇಕಾದ ಕನಿಷ್ಟ ಮೂಲಸೌಕರ್ಯ ಇದೆಯೇ, ಸಾಕಷ್ಟು ಬೋಧಕ ಸಿಬ್ಬಂದಿ ಇದ್ದಾರೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು.

ಪತ್ರಿಕೋದ್ಯಮ ಉಪನ್ಯಾಸಕರ ನೇಮಕಾತಿಗೆ ಯುಜಿಸಿ ಪ್ರತ್ಯೇಕ ಮಾನದಂಡಗಳನ್ನು ನಿಗದಿಪಡಿಸಬೇಕು. ಯುಜಿಸಿ-ಎನ್‍ಇಟಿ ಅರ್ಹತೆ/ ಪಿಎಚ್.ಡಿ ಜತೆಗೆ ಕನಿಷ್ಟ ನಾಲ್ಕೈದು ವರ್ಷವಾದರೂ ಮುದ್ರಣ ಇಲ್ಲವೇ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವವುಳ್ಳವರನ್ನು ಮಾತ್ರ ನೇಮಕ ಮಾಡಿಕೊಳ್ಳುವ ನಿಯಮಾವಳಿಗಳು ಜಾರಿಗೆ ಬರಬೇಕು. ಸಂಶೋಧನ ಲೇಖನಗಳ ಪ್ರಕಟಣೆ, ಪ್ರಬಂಧಗಳ ಮಂಡನೆಯಂತಹ ಕೆಲಸವನ್ನು ನಿರೀಕ್ಷಿಸುವುದರೊಂದಿಗೆ, ಇಂತಿಷ್ಟು ವರ್ಷಗಳಿಗೊಮ್ಮೆ ಅಧ್ಯಾಪಕರು ಒಂದೆರಡು ತಿಂಗಳಾದರೂ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿ ತಮ್ಮ ಪ್ರಾಯೋಗಿಕ ತಿಳುವಳಿಕೆಯನ್ನು ಅಪ್ಡೇಟ್ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಬೇಕು.

ಮಾಧ್ಯಮ ಶಿಕ್ಷಣದ ಪಠ್ಯಕ್ರಮ ಕಾಲದ ಅವಶ್ಯಕತೆಗಳಿಗೆ ತಕ್ಕಂತೆ ಬದಲಾಗಬೇಕು, ಹೊಸತನವನ್ನು ರೂಢಿಸಿಕೊಳ್ಳಬೇಕು. ಮಾಧ್ಯಮ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ನಡುವಿನ ಅಂತರ ಕಡಿಮೆಯಾಗಬೇಕು. ಪತ್ರಕರ್ತರು ಹಾಗೂ ಅಧ್ಯಾಪಕರು ತಮ್ಮತಮ್ಮ ಅಹಂಗಳನ್ನು ಒಂದಿಷ್ಟು ಬದಿಗಿಟ್ಟು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರಸ್ಪರ ಸಹಕಾರ ಹೆಚ್ಚಿಸಿಕೊಳ್ಳಬೇಕು. ಪ್ರಾಯೋಗಿಕ ಕಲಿಕೆ ಹಾಗೂ ಅನುಭವಿ ಪತ್ರಕರ್ತರ ಕಾರ್ಯಾಗಾರಗಳನ್ನು ಏರ್ಪಡಿಸುವುದಕ್ಕೆ ಪತ್ರಿಕೋದ್ಯಮ ವಿಭಾಗಗಳಿಗೆ ಹೆಚ್ಚಿನ ಅನುದಾನ ಲಭ್ಯವಾಗಬೇಕು. ಕನ್ನಡದಂತಹ ಪ್ರಾದೇಶಿಕ ಭಾಷೆಗಳಲ್ಲಿ ಮಾಧ್ಯಮ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉತ್ತಮ ಪುಸ್ತಕಗಳ ರಚನೆಯಾಗಬೇಕು. ಹಿರಿಯ ಪತ್ರಕರ್ತರು ಹಾಗೂ ಪ್ರಾಧ್ಯಾಪಕರು ತಮ್ಮ ಅನುಭವಗಳ ಆಧಾರದಲ್ಲಿ ಅಧ್ಯಯನಪೂರ್ಣ ಪುಸ್ತಕಗಳನ್ನು ಪ್ರಕಟಿಸಲು ಮನಸ್ಸು ಮಾಡಬೇಕು.

ಗ್ರಾಮೀಣ ವಿದ್ಯಾರ್ಥಿಗಳ ಕೈಗೆಟುಕುವ ಶುಲ್ಕದಲ್ಲಿ ಪತ್ರಿಕೋದ್ಯಮ ಶಿಕ್ಷಣ ಲಭ್ಯವಾಗಬೇಕು. ಬೆಂಗಳೂರು-ಮುಂಬೈ-ದೆಹಲಿಯಂತಹ ಮಹಾನಗರಗಳಲ್ಲಿರುವ ಖಾಸಗಿ ಸಂಸ್ಥೆಗಳ ಶುಲ್ಕವನ್ನು ಭರಿಸಿ ಮಾಧ್ಯಮ ತರಬೇತಿ ಪಡೆಯುವ ಆರ್ಥಿಕ ಪರಿಸ್ಥಿತಿ ಬಡ ವಿದ್ಯಾರ್ಥಿಗಳಿಗೆ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲೇ ಸುಸಜ್ಜಿತ ಪ್ರಯೋಗಾಲಯಗಳಿರುವ ಉನ್ನತ ಮಟ್ಟದ ಮಾಧ್ಯಮ ತರಬೇತಿ ಸಂಸ್ಥೆಗಳು ವಿದ್ಯಾರ್ಥಿಗಳ ಕೈಗೆಟಕುವ ಶುಲ್ಕದಲ್ಲಿ ದೊರೆಯುವಂತಾಗಬೇಕು. ಇದಕ್ಕೆ ಸರ್ಕಾರ ಹಾಗೂ ಮಾಧ್ಯಮ ಸಂಸ್ಥೆಗಳ ಬೆಂಬಲ ಅನಿವಾರ್ಯ. ದೊಡ್ಡ ಮಾಧ್ಯಮ ಸಂಸ್ಥೆಗಳು ತಮ್ಮ ಲಾಭಾಂಶದ ಒಂದು ಪಾಲನ್ನು ಮಾಧ್ಯಮ ಶಿಕ್ಷಣ-ತರಬೇತಿಗೆ ಮೀಸಲಿಡಬೇಕು. ಆಗ ಕೌಶಲಪೂರ್ಣ ಮಾನವ ಸಂಪನ್ಮೂಲವನ್ನು ನಿರೀಕ್ಷಿಸುವುದಕ್ಕೆ ಅವುಗಳಿಗೂ ಒಂದು ನೈತಿಕ ಸಮರ್ಥನೆಯಿರುತ್ತದೆ.