ಸಂಗತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಂಗತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಡಿಸೆಂಬರ್ 18, 2021

ಬಂದರೂ ಕಾಲೇಜಿಗೆ ಬಾರದು ಕಾಗುಣಿತ

17 ಡಿಸೆಂಬರ್ 2021ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ಇದು ‘ಅ’ಕಾರ ‘ಹ’ಕಾರ ವಿವಾದದ ಕುರಿತು ಅಲ್ಲ; ಅಲ್ಪಪ್ರಾಣ, ಮಹಾಪ್ರಾಣಗಳಿಗೆ ಸಂಬಂಧಿಸಿದ ಸಂಗತಿಯೂ ಅಲ್ಲ. ಅದಕ್ಕಿಂತಲೂ ಪ್ರಾಥಮಿಕವಾದ ವಿಷಯವೊಂದಕ್ಕೆ ಸಂಬಂಧಿಸಿದ್ದು. ಬರೆವಣಿಗೆಯಲ್ಲಿ ಕಾಗುಣಿತ ದೋಷ ಇರಬಾರದು ಎಂಬ ಬಗ್ಗೆ ಬಹುಮಂದಿಯ ಆಕ್ಷೇಪ ಇರಲಾರದೇನೋ? 

ಕಾಲೇಜು ಅಥವಾ ವಿಶ್ವವಿದ್ಯಾನಿಲಯ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ತರಗತಿ ಟಿಪ್ಪಣಿಯನ್ನೋ, ಬೇರೆ ಯಾವುದಾದರೂ ಬರೆಹವನ್ನೋ ಗಮನಿಸಿ. ಬಹುಪಾಲು ವಿದ್ಯಾರ್ಥಿಗಳಲ್ಲಿ ಒಂದು ಸಾಲಿಗೆ ನಾಲ್ಕು ಕಾಗುಣಿತ ತಪ್ಪು ಎದ್ದು ಕಾಣುತ್ತದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪಕರ ಪರಿಸ್ಥಿತಿಯನ್ನಂತೂ ಕೇಳುವುದೇ ಬೇಡ. ಅದು ಅವರಿಗೇ ಒಂದು ದೊಡ್ಡ ಪರೀಕ್ಷೆ.

ಪದವಿ ಅಥವಾ ಸ್ನಾತಕೋತ್ತರ ಹಂತಕ್ಕೆ ಬಂದರೂ ಈ ವಿದ್ಯಾರ್ಥಿಗಳ ಭಾಷೆ ಏಕೆ ತಿದ್ದಿಲ್ಲ? ಪ್ರೌಢ ಬರೆಹಗಳನ್ನು ಬರೆಯುವ ವಿಷಯ ಹಾಗಿರಲಿ, ಕಾಗುಣಿತ ದೋಷವಿಲ್ಲದ, ಅರ್ಥಪೂರ್ಣ ವಾಕ್ಯವೊಂದನ್ನು ರಚಿಸುವ ಶಕ್ತಿಯೂ ಈ ಮಕ್ಕಳಲ್ಲಿ ಏಕೆ ಬೆಳೆದಿಲ್ಲ? ಇದು ಯಾವುದೋ ಪ್ರದೇಶಕ್ಕೋ, ಜಾತಿಗೋ, ಪಂಗಡಕ್ಕೋ ಸಂಬಂಧಿಸಿದ ಸಮಸ್ಯೆ ಅಲ್ಲ. ಎಲ್ಲಾ ಕಡೆ, ಎಲ್ಲರಲ್ಲೂ ಇದೆ. 

‘ಹೊಡೆತ’ ಎಂಬುದು ‘ಹೋಡೆತ’ ಆಗುತ್ತದೆ; ‘ಬೇಲಿ’ ಎಂಬುದು ‘ಬೆಲಿ’ ಆಗುತ್ತದೆ; ‘ವಿಚಾರ’ ಎಂಬುದು ‘ವಿಚರಾ’ ಆಗುತ್ತದೆ; ‘ಮುದ್ದೆ’ ಎಂಬುದು ‘ಮುದೇ’ ಆಗುತ್ತದೆ; ‘ಆಗುತ್ತದೆ’ ಎಂಬುದು ‘ಅಗೂತದೆ’ ಆಗುತ್ತದೆ! ಇದೊಂದು ವಾಕ್ಯ ಗಮನಿಸಿ: ‘ನಿರುದ್ಯೋಗಕ್ಕೆ ಪ್ರಮುಖ ಕಾರಣವೆಂದರೆ ಕೌಶಲ್ಯಗಳ ಕೊರತೆಯೇ ನಿರುದ್ಯೋಗಕ್ಕೆ ಪ್ರಮುಖ ಕಾರಣ ಎನ್ನಬಹುದು’. ಸರಳವಾದ ವಾಕ್ಯವೊಂದನ್ನು ಬರೆಯುವಾಗಲೂ ತಾವೇನು ತಪ್ಪು ಮಾಡುತ್ತಿದ್ದೇವೆ ಎಂದು ಈ ವಿದ್ಯಾರ್ಥಿಗಳಿಗೆ ಹೊಳೆಯುವುದಿಲ್ಲ.

ಮಕ್ಕಳಲ್ಲಿ ಕಾಗುಣಿತ ದೋಷ ತಿದ್ದದಿರುವುದು ಹೊಸ ಚರ್ಚೆಯೇನೂ ಅಲ್ಲ. ವಿಶ್ವವಿದ್ಯಾನಿಲಯದವರು ಕಾಲೇಜಿನವರತ್ತ ಬೆರಳು ತೋರಿಸುವುದು, ಕಾಲೇಜು ಅಧ್ಯಾಪಕರು ಪ್ರೌಢಶಾಲಾ ಶಿಕ್ಷಕರತ್ತ ಬೊಟ್ಟು ಮಾಡುವುದು, ಪ್ರೌಢಶಾಲೆಯಲ್ಲಿರುವವರು ಪ್ರಾಥಮಿಕ ಶಾಲೆಯ ಅಧ್ಯಾಪಕನ್ನು ದೂರುವುದು ಹಿಂದಿನಿಂದಲೂ ನಡೆದಿದೆ. ಅವರಿವರನ್ನು ಜವಾಬ್ದಾರರನ್ನಾಗಿಸುವುದು ಹಾಗಿರಲಿ, ಈ ಸಮಸ್ಯೆಯ ಮೂಲ ಯಾವುದು, ಪರಿಹಾರ ಏನು ಎಂಬುದಾದರೂ ಚರ್ಚೆಯಾಗಬೇಕಲ್ಲ?

ಈ ವಿಚಾರದ ಬೆನ್ನು ಹಿಡಿದು ಹೊರಟರೆ ಮೂಲದಲ್ಲಿ ಪ್ರಾಥಮಿಕ ಶಾಲೆಯೇ ಕಾಣುತ್ತದೆ. ಆದರೆ ಅದೊಂದೇ ಕಾರಣವಲ್ಲ ಎಂಬುದೂ ಗೊತ್ತಾಗುತ್ತದೆ. ಪ್ರಾಥಮಿಕ ಶಿಕ್ಷಣದಿಂದಲೇ ಆರಂಭಿಸೋಣ.

ಪ್ರಾಥಮಿಕ ಶಾಲೆಯಲ್ಲಿ ಕಾಗುಣಿತ-ವ್ಯಾಕರಣಗಳಿಗೆ ಹೆಚ್ಚಿನ ಒತ್ತು ನೀಡಬೇಡಿ, ಮಕ್ಕಳಿಗೆ ‘ಸೌಂಡ್’ (ಧ್ವನಿ) ಅನ್ನು ಕಲಿಸಿಕೊಡಿ, ಮುಂದೆ ಭಾಷೆ ತಾನಾಗಿಯೇ ಬೆಳೆಯುತ್ತದೆ ಎಂಬ ಅಭಿಪ್ರಾಯವೊಂದಿದೆ. ಒಂದು ವೇಳೆ ಇದೇ ನಿಜವಾಗಿದ್ದರೆ ಈಗ ಹೇಳಿದ ಸಮಸ್ಯೆ ಕುರಿತು ಮಾತನಾಡುವ ಅಗತ್ಯ ಬರುತ್ತಿರಲಿಲ್ಲ. ಈ ವಿದ್ಯಾರ್ಥಿಗಳಿಗೆ ‘ಸೌಂಡ್’ನ ಅರಿವು ಚೆನ್ನಾಗಿಯೇ ಇದೆ. ‘ಮಾಡುತ್ತೇನೆ’ ಎಂಬ ಪದವನ್ನು ಹಾಗೆಯೇ ಓದುತ್ತಾರೆ, ಬರೆಯುವಾಗ ಮಾತ್ರ ಅದು ‘ಮಾಡುತೆನೆ’ಯೋ ‘ಮಡುತ್ತೆನೆ’ಯೋ ಆಗುತ್ತದೆ.

ಆರಂಭದಿಂದಲೂ ಆಂಗ್ಲಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಈ ಸಮಸ್ಯೆಯೋ ಎಂದು ಗಮನಿಸಿದರೆ, ಹಾಗಿಲ್ಲ. ಇವರು ಪೂರ್ತಿಯಾಗಿ ಕನ್ನಡ ಮಾಧ್ಯಮದಲ್ಲಿ ಓದಿದವರೇ. ಅಂದರೆ ಕಲಿಕೆಯಲ್ಲೇ ಸಮಸ್ಯೆ ಇದೆ ಎಂದಾಯ್ತು. ಪ್ರಾಥಮಿಕ ಹಂತದಲ್ಲಿ ಇನ್ನೇನು ಅಲ್ಲವಾದರೂ ಕಾಗುಣಿತವಾದರೂ ತಿದ್ದದೇ ಹೋದರೆ ಮುಂದೆ ಸುಧಾರಿಸುವುದು ಕಷ್ಟವಿದೆ. 

ಪ್ರಾಥಮಿಕ ಶಾಲೆಯೂ ಸೇರಿದಂತೆ ಶಿಕ್ಷಣದ ವಿವಿಧ ಹಂತಗಳಲ್ಲಿರುವ ಅಧ್ಯಾಪಕರಲ್ಲಿ ಎಷ್ಟು ಪ್ರಮಾಣ ಕಾಗುಣಿತ ತಪ್ಪಿಲ್ಲದೆ ಬರೆಯಬಲ್ಲವರು ಇದ್ದಾರೆ ಎಂಬುದೂ ಒಂದು ಪ್ರಶ್ನೆ. ಹೀಗೆ ಕೇಳಿದರೆ ಅನೇಕ ಅಧ್ಯಾಪಕರಿಗೆ ಮುಜುಗರ ಅನ್ನಿಸೀತು. ಆದರೆ ಈ ವಿಷಯ ನಿಜ. ಆರಂಭದಲ್ಲಿ ಪ್ರಸ್ತಾಪಿಸಿದ ರೀತಿಯ ವಿದ್ಯಾರ್ಥಿಗಳೇ ಅಧ್ಯಾಪಕರಾಗುತ್ತಾ ಹೋದರೆ ಅವರು ಅದನ್ನೇ ತಮ್ಮ ವಿದ್ಯಾರ್ಥಿಗಳಿಗೂ ಕಲಿಸುವುದು ಸಹಜ.

ಎಂಟನೇ ತರಗತಿ ಕಳೆದ ಮೇಲಂತೂ ಈಗಿನ ವಿದ್ಯಾರ್ಥಿಗಳು ಯಂತ್ರಗಳೇ ಆಗಿಬಿಡುತ್ತಾರೆ. ಅವರಿಗೆ ಆಗಲೇ ಪಿಯುಸಿಯಲ್ಲಿ ವಿಜ್ಞಾನ ಓದಿ ಇಂಜಿನಿಯರಿಂಗ್, ಮೆಡಿಕಲ್ ಸೀಟು ಹಿಡಿಯುವ ಗುಂಗು. ದಿನಬೆಳಗಾದರೆ ಟ್ಯೂಶನ್, ಕೋಚಿಂಗ್. ಇನ್ನೂ ಹತ್ತನೇ ತರಗತಿ ಮುಗಿಯುವ ಮೊದಲೇ ನೀಟು, ಜೆಇಇ ತರಬೇತಿ. ಖಾಸಗಿ ಪದವಿಪೂರ್ವ ಕಾಲೇಜುಗಳಲ್ಲಿ ಪರ್ಸೆಂಟೇಜು ಹೆಚ್ಚಿಸುವ ಪ್ರಯೋಗಗಳು. ಇವುಗಳ ನಡುವೆ ಭಾಷೆ ತಬ್ಬಲಿ.

ಪಿಯುಸಿ ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಓದುವವರಿಗೆ ಭಾಷೆ ಯಾಕೆ ಎಂಬಷ್ಟು ಉಡಾಫೆ. ಪ್ರಧಾನ ವಿಷಯಗಳ ಬಗೆಗಷ್ಟೇ ಅವರ ಗಮನ. ಅವುಗಳಿಂದ ಪರ್ಸೆಂಟೇಜಿಗೆ ಏನೂ ಪ್ರಯೋಜನ ಇಲ್ಲ ಎಂಬ ಲೆಕ್ಕಾಚಾರ. ಭಾಷಾ ಶಿಕ್ಷಕರು ಅನೇಕ ಸಲ ಪೆವಿಲಿಯನ್‍ಗೆ ಮಾತ್ರ ಉಳಿಯುವ ಹೆಚ್ಚುವರಿ ಆಟಗಾರರು. ಇನ್ನು ಕಲಾ ವಿಭಾಗವನ್ನು ಕೇಳುವವರೇ ಇಲ್ಲ.

ಕಲೆ-ವಾಣಿಜ್ಯ ವಿಭಾಗದವರು, ತಾಂತ್ರಿಕ ಶಿಕ್ಷಣಕ್ಕೆ ಹೋಗದ ವಿಜ್ಞಾನ ವಿಭಾಗದವರು ಕಾಲೇಜಿಗೆ ಬರುತ್ತಾರೆ. ಅಷ್ಟು ಹೊತ್ತಿಗೆ ಅವರ ಭಾಷೆಯ ತೊಡಕುಗಳು ಅಲುಗಾಡಿಸಲೂ ಆಗದಷ್ಟು ಭದ್ರವಾಗಿ ಬೇರೂರಿರುತ್ತವೆ. ಎದುರಿಗೆ ಒಂದು ಪುಟ ಇಟ್ಟು ಅದನ್ನೇ ನಕಲು ಮಾಡಿ ಎಂದರೂ ಅವರೂ ತಪ್ಪೇ ಬರೆಯುತ್ತಾರೆ. ಅವರ ಕಣ್ಣೆದುರೇ ತಪ್ಪನ್ನು ತಿದ್ದಿದರೂ ಮರುದಿನ ಅದೇ ತಪ್ಪು ಬರೆಯುತ್ತಾರೆ. ಹೇಗೋ ತೇರ್ಗಡೆ ಆಗಿ ಎಂಎಗೆ ಪ್ರವೇಶ ಪಡೆಯುತ್ತಾರೆ. ಅಲ್ಲಿಯೂ ಇದೇ ಪ್ರಹಸನ ಮುಂದುವರಿಯುತ್ತದೆ. ನೀನು ತಪ್ಪು ಬರೆಯುತ್ತಾ ಇದ್ದೀ ಎಂದರೆ ಈ ಹಂತಕ್ಕೆ ಬಂದ ವಿದ್ಯಾರ್ಥಿಗೆ ಅವಮಾನ. ಇಲ್ಲಿ ಕಾಗುಣಿತ ತಿದ್ದಿಕೊಂಡು ಕೂರಲು ಅಧ್ಯಾಪಕರಿಗೆ ಸಮಯ, ವ್ಯವಧಾನ ಎರಡೂ ಇಲ್ಲ.

ಇಲ್ಲೊಂದು ಸಾಮಾಜಿಕ-ಆರ್ಥಿಕ ವಿಚಾರವೂ ಇದೆ. ಅದೇನೆಂದರೆ, ಸರ್ಕಾರಿ ಶಾಲೆಗಳಲ್ಲಿ ಓದುವ ಅನೇಕ ಮಕ್ಕಳು ವಿವಿಧ ಕಾರಣಗಳಿಗಾಗಿ ತರಗತಿಗೆ ಹಾಜರಾಗುವುದೇ ಇಲ್ಲ ಅಥವಾ ಇವರದ್ದು ತೀರಾ ಅನಿಯಮಿತ ಹಾಜರಾತಿ. ಇವರು ಆರಂಭದಿಂದಲೇ ಭಾಷಾತರಬೇತಿಯಿಂದ ವಂಚಿತರು. ಅಂತೂ ಇದೊಂದು ವಿಷವರ್ತುಲ. ಕೇವಲ ಭಾಷಾಶಾಸ್ತ್ರಜ್ಞರೋ, ಶಿಕ್ಷಣ ಶಾಸ್ತ್ರಜ್ಞರೋ ಪರಿಹಾರ ಸೂಚಿಸಬಹುದಾದ ಸಮಸ್ಯೆ ಅಲ್ಲ. ಸುಧಾರಣೆಯ ದಾರಿ ಬಗ್ಗೆ ಪೂರ್ವಗ್ರಹರಹಿತ ಚರ್ಚೆಯಾದರೆ ಒಳ್ಳೆಯದು.

- ಸಿಬಂತಿ ಪದ್ಮನಾಭ ಕೆ. ವಿ.


ಗುರುವಾರ, ಡಿಸೆಂಬರ್ 31, 2020

ಮಾಧ್ಯಮ ಶಿಕ್ಷಣಕ್ಕೆ ನೂರು: ಸವಾಲು ನೂರಾರು

31 ಡಿಸೆಂಬರ್ 2020ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ಭಾರತದ ಮಾಧ್ಯಮ ಶಿಕ್ಷಣಕ್ಕೆ ನೂರು ವರ್ಷ ತುಂಬಿತು. ಶತಮಾನವೆಂಬುದು ಚರಿತ್ರೆಯಲ್ಲಿ ಬಹುದೊಡ್ಡ ಅವಧಿ. ಒಂದು ಲಕ್ಷಕ್ಕೂ ಹೆಚ್ಚು ಪತ್ರಿಕೆಗಳು, 900ರಷ್ಟು ಟಿವಿ ಚಾನೆಲ್‌ಗಳು, 800ರಷ್ಟು ರೇಡಿಯೋ ಕೇಂದ್ರಗಳು, ಅಸಂಖ್ಯ ಆನ್ಲೈನ್ ಸುದ್ದಿತಾಣಗಳಿರುವ ಈ ದೇಶದಲ್ಲಿ ನೂರು ವರ್ಷ ಪೂರೈಸಿರುವ ಮಾಧ್ಯಮ ಶಿಕ್ಷಣ ಏನು ಮಾಡಿದೆ, ಏನು ಮಾಡಬೇಕು ಎಂಬ ಪ್ರಶ್ನೆ ಮಹತ್ವದ್ದು.

ಭಾರತದಲ್ಲಿ ಪತ್ರಿಕೋದ್ಯಮ ಶಿಕ್ಷಣವನ್ನು ಆರಂಭಿಸಿದ ಹೆಗ್ಗಳಿಕೆ ಸಮಾಜ ಸುಧಾರಕಿ ಆನಿಬೆಸೆಂಟ್‌ಗೆ ಸಲ್ಲುತ್ತದೆ. ಅವರು 1920ರಲ್ಲಿ ತಮ್ಮ ಥಿಯೋಸಾಫಿಕಲ್ ಸೊಸೈಟಿಯ ಅಡಿಯಲ್ಲಿ ಮದ್ರಾಸ್‌ನ ಅಡ್ಯಾರ್‌ನಲ್ಲಿರುವ ನ್ಯಾಷನಲ್ ಯೂನಿವರ್ಸಿಟಿಯ ಮೂಲಕ ಮೊದಲ ಬಾರಿಗೆ ಪತ್ರಿಕೋದ್ಯಮ ಶಿಕ್ಷಣವನ್ನು ಆರಂಭಿಸಿದರು. ಅವರೇ ನಡೆಸುತ್ತಿದ್ದ 'ನ್ಯೂ ಇಂಡಿಯಾ' ಪತ್ರಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಪಡೆಯುವ ವ್ಯವಸ್ಥೆಯೂ ಇತ್ತು.

ಮುಂದೆ ಆಲಿಘಡ ಮುಸ್ಲಿಂ ವಿಶ್ವವಿದ್ಯಾನಿಲಯ (1938), ಲಾಹೋರಿನ ಪಂಜಾಬ್ ವಿಶ್ವವಿದ್ಯಾನಿಲಯ (1941), ಮದ್ರಾಸ್ (1947) ಮತ್ತು ಕಲ್ಕತ್ತಾ (1948) ವಿಶ್ವವಿದ್ಯಾನಿಲಯಗಳಲ್ಲಿ ಪತ್ರಿಕೋದ್ಯಮದ ಕೋರ್ಸುಗಳು ಬಂದವು. 1951ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಪರಿಚಯಿಸುವುದರೊಂದಿಗೆ ಕರ್ನಾಟಕಕ್ಕೆ ಮಾಧ್ಯಮ ಶಿಕ್ಷಣ ಪ್ರವೇಶಿಸಿತು.

ಆನಿಬೆಸೆಂಟ್ ಪತ್ರಿಕೋದ್ಯಮ ಶಿಕ್ಷಣವನ್ನು ಆರಂಭಿಸಿದಾಗ ಅವರ ಗಮನ ಇದ್ದುದು ಪತ್ರಿಕೆಗಳಿಗಾಗಿ ಬರೆಯುವುದರ ಮತ್ತು ಸಂಪಾದಿಸುವುದರ ಬಗ್ಗೆ. ಆಗ ಇದ್ದ ಪತ್ರಿಕೆಗಳ ಸಂಖ್ಯೆಯೂ ಬೆರಳೆಣಿಕೆಯಷ್ಟು. ಭಾರತಕ್ಕೆ ರೇಡಿಯೋ ಬಂದದ್ದೇ 1921ರಲ್ಲಿ. ಸಿನಿಮಾ ಇನ್ನೂ ಮೂಕಿಯುಗದಲ್ಲೇ ಇತ್ತು. ಟಿವಿ, ಕಂಪ್ಯೂಟರ್, ಇಂಟರ್ನೆಟ್‌ಗಳೆಲ್ಲ ನಮ್ಮ ಕಲ್ಪನೆಗೂ ಮೀರಿದವಾಗಿದ್ದವು. ಹೀಗಾಗಿ 'ಜರ್ನಲಿಸಂ' ಎಂದಾಗ ಮುದ್ರಣ ಮಾಧ್ಯಮದ ಆಚೆಗೆ ಯೋಚಿಸುವಂತಹ ಅಗತ್ಯವೇನೂ ಇರಲಿಲ್ಲ.

ಒಂದು ಶತಮಾನದ ಅಂತರದಲ್ಲಿ ಮಾಧ್ಯಮ ಜಗತ್ತು ಊಹೆಗೂ ಮೀರಿ ಬದಲಾಗಿದೆ- ಪತ್ರಿಕೋದ್ಯಮ ಎಂಬ ಪದವೇ ಅಸಹಜ ಎನಿಸುವಷ್ಟು. ಮುದ್ರಣ, ವಿದ್ಯುನ್ಮಾನ ಇತ್ಯಾದಿ ವರ್ಗೀಕರಣದ ಕಾಲವೇ ಹೊರಟುಹೋಗಿದೆ. ಎಲ್ಲವೂ ಡಿಜಿಟಲ್ ಎಂಬ ನಾಲ್ಕಕ್ಷರದೊಳಗೆ ನುಸುಳಿಕೊಂಡಿವೆ. ಡಿಜಿಟಲೇ ನಮ್ಮ ಭವಿಷ್ಯ ಎಂದು ನಿರ್ಧರಿಸಿಯಾಗಿದೆ. ಕೋವಿಡ್ ಅಂತೂ ಮಾಧ್ಯಮರಂಗದ ಒಟ್ಟಾರೆ ದೃಷ್ಟಿಕೋನವನ್ನೇ ಬದಲಾಯಿಸಿದೆ. ಜಾಹೀರಾತು, ಕಾರ್ಪೋರೇಟ್ ಕಮ್ಯೂನಿಕೇಶನ್, ಮನರಂಜನಾ ಉದ್ಯಮ, ಈವೆಂಟ್ ಮ್ಯಾನೇಜ್ಮೆಂಟ್, ವಿಎಫ್‌ಎಕ್ಸ್, ಅನಿಮೇಶನ್, ಡಿಜಿಟಲ್ ಕಂಟೆಂಟ್, ವೀಡಿಯೋ ಗೇಮ್, ಸಾಮಾಜಿಕ ಮಾಧ್ಯಮಗಳ ನಿರ್ವಹಣೆ, ಭಾಷಾಂತರ ಮುಂತಾದ ಹತ್ತಾರು ಅವಕಾಶಗಳು ಮಾಧ್ಯಮರಂಗವೆಂಬ ತೆರೆದಬಯಲಲ್ಲಿ ಬಿಡಾರ ಹೂಡಿವೆ. 

ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಮಾಧ್ಯಮ ಶಿಕ್ಷಣದ ಪರಿಕಲ್ಪನೆ ಬದಲಾಗಿದೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ದೇಶದಾದ್ಯಂತ ಇರುವ ವಿವಿಧ ಬಗೆಯ ಸುಮಾರು 1000ದಷ್ಟು ಮಾಧ್ಯಮ ಶಿಕ್ಷಣ ಸಂಸ್ಥೆಗಳಿಂದ ಅಂದಾಜು 20,000ದಷ್ಟು ಯುವಕರು ಪ್ರತಿವರ್ಷ ಹೊರಬರುತ್ತಿದ್ದಾರೆ. ಹೊಸ ಮಾಧ್ಯಮ ಜಗತ್ತು ಬಯಸುವ ಜ್ಞಾನ-ಕೌಶಲಗಳು ಇವರಲ್ಲಿವೆಯೇ, ಅದಕ್ಕೆ ಬೇಕಾದಂತೆ ಹೊಸಬರನ್ನು ತರಬೇತುಗೊಳಿಸುವುದಕ್ಕೆ ನಮ್ಮ ಮಾಧ್ಯಮ ಶಿಕ್ಷಣ ವ್ಯವಸ್ಥೆ ಸನ್ನದ್ಧವಾಗಿದೆಯೇ ಎಂದು ಕೇಳಿಕೊಳ್ಳಬೇಕಾಗಿದೆ.

ಮಾಧ್ಯಮರಂಗ ಅನಿಮೇಶನ್ ಯುಗದಲ್ಲಿದ್ದರೂ ಶಿಕ್ಷಣಸಂಸ್ಥೆಗಳು ಇನ್ನೂ ಅಚ್ಚುಮೊಳೆಗಳ ಬಗೆಗೇ ಪಾಠಮಾಡುತ್ತಿವೆ, ಪತ್ರಿಕೋದ್ಯಮ ತರಗತಿಗಳಲ್ಲಿ ಬೋಧಿಸಿದ್ದಕ್ಕೂ ವಾಸ್ತವಕ್ಕೂ ಸಂಬಂಧ ಇಲ್ಲ ಎಂಬುದು ಇತ್ತೀಚಿನವರೆಗೂ ಇದ್ದ ಆರೋಪವಾಗಿತ್ತು. ವರ್ತಮಾನದ ಮಾಧ್ಯಮರಂಗ ಬಯಸುವ ಕೌಶಲಗಳು ವಿದ್ಯಾರ್ಥಿಗಳಲ್ಲಿ ಬೆಳೆಯುತ್ತಿಲ್ಲ ಎಂಬುದು ಇದರ ಸಾರ. ಮಾಧ್ಯಮ ಶಿಕ್ಷಣ ಸಂಸ್ಥೆಗಳು ಈ ಆರೋಪದಿಂದ ಹೊರಬರಲು ತಕ್ಕಮಟ್ಟಿಗೆ ಪ್ರಯತ್ನಿಸಿವೆ. ವಿಶ್ವವಿದ್ಯಾನಿಲಯಗಳ ಮಾಧ್ಯಮ ಪಠ್ಯಕ್ರಮ ಕಳೆದ ಕೆಲವು ವರ್ಷಗಳಲ್ಲಿ ಸಾಕಷ್ಟು ಪರಿಷ್ಕರಣೆಗೆ ಒಳಗಾಗಿದೆ. ಸಿದ್ಧಾಂತ-ಪ್ರಯೋಗ ಎರಡಕ್ಕೂ ಸಮಾನ ಆದ್ಯತೆಯನ್ನು ನೀಡುವ, ಮಾಧ್ಯಮರಂಗದಲ್ಲಿನ ಹೊಸತುಗಳನ್ನು ಆಗಿಂದಾಗ್ಗೆ ಪಠ್ಯಕ್ರಮದೊಳಗೆ ಸೇರಿಸುವ ಪ್ರಯತ್ನಗಳು ನಡೆದಿವೆ.

ಆದರೆ ಪಠ್ಯಕ್ರಮದಷ್ಟೇ ಅದರ ಅನುಷ್ಠಾನವೂ ಮುಖ್ಯ. ಇದಕ್ಕೆ ಬೇಕಾದ ತಜ್ಞ ಅಧ್ಯಾಪಕರು, ಸಂಪನ್ಮೂಲ ಮತ್ತು ಮೂಲಭೂತ ಸೌಕರ್ಯ ಇದೆಯೇ ಎಂದರೆ ನಿರುತ್ತರ. ಮಾಧ್ಯಮ ಕೋರ್ಸುಗಳನ್ನು ತೆರೆಯುವಲ್ಲಿ ಇರುವ ಉತ್ಸಾಹ ಅವುಗಳನ್ನು ಪೋಷಿಸುವಲ್ಲಿ ಇಲ್ಲ. ಟಿವಿ, ಜಾಹೀರಾತು, ಪತ್ರಿಕೆ, ಅನಿಮೇಶನ್, ಸಿನಿಮಾ, ಗ್ರಾಫಿಕ್ಸ್, ಡಿಜಿಟಲ್ ಎಂದರೆ ಸಾಲದು; ಅವುಗಳ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ದಾಟಿಸುವುದಕ್ಕೆ ಪರಿಣತಿ ಬೇಕು, ಸೌಕರ್ಯಗಳು ಇರಬೇಕು. ಈ ವಿಷಯದಲ್ಲಿ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ನಡುವೆ ಅಜಗಜಾಂತರ ಇದೆ. 

ಸರ್ಕಾರಿ ಕಾಲೇಜುಗಳಲ್ಲಿರುವ ಪತ್ರಿಕೋದ್ಯಮ ವಿಭಾಗಗಳ ಸ್ಥಿತಿಯಂತೂ ಶೋಚನೀಯ. ಒಂದೆರಡು ಕಂಪ್ಯೂಟರುಗಳಾದರೂ ಇಲ್ಲದ ಪತ್ರಿಕೋದ್ಯಮ ವಿಭಾಗಗಳು ಇನ್ನೂ ಇವೆ ಎಂದರೆ ನಂಬಲೇಬೇಕು. ಸಾಹಿತ್ಯ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ ಬೋಧಿಸಿದಂತೆ ಪತ್ರಿಕೋದ್ಯಮವನ್ನೂ ಬೋಧಿಸಬೇಕು ಎಂದರೆ ಅದೆಷ್ಟು ಪರಿಣಾಮಕಾರಿಯಾದೀತು? ಅನೇಕ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರೇ ಇಲ್ಲ. ವಿಶ್ವವಿದ್ಯಾನಿಲಯಗಳಲ್ಲೂ ಅನೇಕ ಹುದ್ದೆಗಳು ಖಾಲಿ ಬಿದ್ದಿವೆ. ಖಾಸಗಿ ಸಂಸ್ಥೆಗಳೇನೋ ಒಂದಷ್ಟು ಸೌಕರ್ಯಗಳನ್ನು ಹೊಂದಿವೆ ಎಂದರೆ ಅಂತಹ ನಗರ ಕೇಂದ್ರಿತ ಕಾಲೇಜುಗಳು, ಅವು ವಿಧಿಸುವ ಶುಲ್ಕದ ಕಾರಣದಿಂದ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಗಗನಕುಸುಮ. 

ವಿಶ್ವವಿದ್ಯಾನಿಲಯಗಳ ಮಾಧ್ಯಮ ಅಧ್ಯಯನ ವಿಭಾಗಗಳು ವಿದ್ಯಾರ್ಥಿಗಳನ್ನು ಅಕಡೆಮಿಕ್ ಆಗಿ ಬೆಳೆಸಬೇಕೇ ಕೌಶಲಗಳಿಗೆ ಗಮನಕೊಡಬೇಕೇ ಎಂಬ ವಿಷಯದಲ್ಲಿ ಇನ್ನೂ ಅಭಿಪ್ರಾಯ ಭೇದಗಳಿವೆ. ಆದರೆ ವೃತ್ತಿಪರರು ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಪರಸ್ಪರ ಕೊಡುಕೊಳ್ಳುವಿಕೆ ಬೇಕು, ಉತ್ತಮ ಸಂಬಂಧ ಬೆಳೆಯಬೇಕು, ಅಧ್ಯಾಪಕರೂ ಕಾಲದಿಂದ ಕಾಲಕ್ಕೆ ಅಪ್ಡೇಟ್ ಆಗಬೇಕು ಎಂಬಲ್ಲಿ ಗೊಂದಲ ಇಲ್ಲ. ಇಚ್ಛಾಶಕ್ತಿ ಎಲ್ಲದಕ್ಕಿಂತ ದೊಡ್ಡದು.

- ಸಿಬಂತಿ ಪದ್ಮನಾಭ ಕೆ. ವಿ.

ಬುಧವಾರ, ಅಕ್ಟೋಬರ್ 7, 2020

ಬಂಧನದ ಬೆಸುಗೆಗೊಂದು ಒಸಗೆ

07 ಅಕ್ಟೋಬರ್ 2020ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ಅಲ್ಲೇ ಓದಲು ಇಲ್ಲಿ ಕ್ಲಿಕ್ಕಿಸಿ.

ಇಂತಹ ಮದುವೆ ನೋಡದೆ ವರ್ಷಗಳೆಷ್ಟಾದವು ಅಂತನ್ನಿಸಿತ್ತು. ಅಬ್ಬಬ್ಬಾ ಎಂದರೆ ಐವತ್ತರ ಆಸುಪಾಸಿನಲ್ಲಿದ್ದರು ಜನ. ಆದರೂ ಮದುವೆ ಮನೆಯ ಗದ್ದಲ ಒಂದು ಫರ್ಲಾಂಗಿನಾಚೆಗೂ ಕೇಳಿಸುತ್ತಿತ್ತು. ಹಾಗೆಂದು ಧ್ವನಿವರ್ಧಕ, ಬ್ಯಾಂಡು ವಾಲಗ ಇರಲಿಲ್ಲ. ಮನೆಯ ಸುತ್ತ ಅಲಂಕಾರಿಕ ವಿದ್ಯುದ್ದೀಪಗಳು ಝಗಮಗಿಸುತ್ತಿರಲಿಲ್ಲ. ಬಿಸಿಲು ಮಳೆಗಳಿಂದ ತೊಂದರೆಯಾಗದಂತೆ ಮನೆಯೆದುರು ಸಣ್ಣದೊಂದು ಶಾಮಿಯಾನ ಇತ್ತು.  ಪ್ರವೇಶದ್ವಾರದಲ್ಲಿ ಎರಡು ಬಾಳೆ ಕಂದು, ಮಾವಿನೆಲೆಯ ಪುಟ್ಟ ತೋರಣ.

ಚಪ್ಪರದ ತುಂಬ ನಗು, ಮಾತು, ಗೌಜು ಗದ್ದಲ. ಕುಟುಂಬದ ಸದಸ್ಯರು, ತೀರಾ ಹತ್ತಿರದ ಬಂಧುಬಳಗದ ಹೊರತಾಗಿ ಬೇರೆ ಯಾರೂ ಇರಲಿಲ್ಲ. ಹಳಬರು ಹಳೆ ಕಥೆಗಳನ್ನು ಬಿಚ್ಚುತ್ತಿದ್ದರೆ, ಹೊಸಬರು ಹೊಸ ಕನಸು ಕಟ್ಟಿಕೊಂಡು ಓಡಾಡುತ್ತಿದ್ದರು. ದಿನವಿಡೀ ಮಾತು, ತಮಾಷೆ, ಕೀಟಲೆ; ಮಧ್ಯಾಹ್ನಕ್ಕೆ ಬಂಧುಬಳಗವೇ ಬಡಿಸಿದ ಹಿತಮಿತ ಊಟ. ಮದುವೆ ಗಂಡು-ಹೆಣ್ಣು ಬಿಡುವಾಗಿ, ನಿರಾಳವಾಗಿ, ಬಂದವರ ಕ್ಷೇಮ ಸಮಾಚಾರ ವಿಚಾರಿಸಿಕೊಂಡು ಓಡಾಡುತ್ತಿದ್ದರು. ಹಳ್ಳಿ ಮನೆಯಾದ್ದರಿಂದ ಮಧ್ಯಾಹ್ನ ದಾಟುವ ಹೊತ್ತಿಗೆ ಪಕ್ಕದ ಹೊಲಗಳಿಂದ ಜೋಡಿ ನವಿಲುಗಳೆರಡು ಬಂದು ಅಂಗಳದಾಚೆ ನರ್ತನಕ್ಕೇ ನಿಂತು ಬಿಟ್ಟವು- ಹೇಳಿ ಕರೆಸಿದ ಹಾಗೆ.

ಕೊರೋನ ನಿಜವಾಗಿಯೂ ಎಂತಹ ಮದುವೆ ಉಡುಗೊರೆ ನೀಡಿಹೋಯಿತಲ್ಲ ಎಂದನ್ನಿಸಿಬಿಟ್ಟಿತು. ಮನೆಯಲ್ಲಿ ಮದುವೆ ನಿಶ್ಚಯವಾಯಿತೆಂದರೆ ಅದರೊಂದಿಗೆ ಚಿಂತೆಯೇ ಉಡುಗೊರೆಯಾಗಿ ಬರುವ ಕಾಲವಿದು. ಉಳಿದ ಖರ್ಚುಗಳೆಲ್ಲ ಒತ್ತಟ್ಟಿಗಿರಲಿ, ಮದುವೆ ಸುತ್ತಮುತ್ತಲಿನ ಒಂದೆರಡು ದಿನದ ಖರ್ಚುಗಳೇ ಎರಡೂ ಕುಟುಂಬದವರನ್ನು, ಅದರಲ್ಲೂ ಹೆಣ್ಣುಹೆತ್ತವರನ್ನು ಹೈರಾಣಾಗಿಸುವುದಿದೆ. ಜೀವಮಾನವಿಡೀ ಕೂಡಿಟ್ಟ ಉಳಿತಾಯ, ಹೊಲ, ಸೈಟ್ ಮಾರಿಸುವ ಮದುವೆಯೆಂಬುದು ಅನೇಕ ಮಧ್ಯಮವರ್ಗದವರಿಗೊಂದು ದುಃಸ್ವಪ್ನ.

ಊರಲ್ಲೇ ಹೆಚ್ಚು ಬಾಡಿಗೆ ವಿಧಿಸುವ ದೊಡ್ಡ ಚೌಲ್ಟ್ರಿಯನ್ನು ಗೊತ್ತುಮಾಡಬೇಕು; ವಿವಾಹದ ಆಮಂತ್ರಣಪತ್ರಿಕೆಯಲ್ಲೇ ಎರಡೂ ಕಡೆಯವರ ಸ್ಥಾನಮಾನಗಳು ಪ್ರತಿಫಲಿಸಬೇಕು; ಊಟದ ಮೆನು ಕನಿಷ್ಟ ಹತ್ತು ಮೀಟರ್ ಇರಬೇಕು; ಅದಕ್ಕೆ ಒಪ್ಪುವ ಕ್ಯಾಟರಿಂಗ್ ವ್ಯವಸ್ಥೆ ಆಗಬೇಕು; ಏನಿಲ್ಲವೆಂದರೂ ಒಂದು ಸಾವಿರ ಮಂದಿಯನ್ನು ಕರೆಯಬೇಕು; ಮದುವೆಯ ದಿನವಲ್ಲದೆ ಪ್ರಿ-ವೆಡ್ಡಿಂಗ್, ಪೋಸ್ಟ್-ವೆಡ್ಡಿಂಗ್ ಫೋಟೋಶೂಟುಗಳಾಗಬೇಕು; ಛತ್ರವನ್ನು ಲಕ್ಷಗಟ್ಟಲೆ ರೂಪಾಯಿ ವ್ಯಯಿಸಿ ಲೋಡುಗಟ್ಟಲೆ ಹೂವು, ವಿದ್ಯುದ್ದೀಪಗಳಿಂದ ಸಿಂಗರಿಸಬೇಕು. ಉಂಡದ್ದಕ್ಕಿಂತಲೂ ಹೆಚ್ಚು ಎಸೆಯುವಷ್ಟು ಭಕ್ಷ್ಯ-ಭೋಜ್ಯಗಳು ರಾರಾಜಿಸಬೇಕು. ಒಟ್ಟಿನಲ್ಲಿ ಮದುವೆ ಅದ್ದೂರಿಯಾಗಿಯಾಗಬೇಕು. 

ಬಹುತೇಕ ಮದುವೆಗಳು ನಡೆಯುವುದು ಹೀಗೆ. ಅಲ್ಲಿ ವೈಭವ, ಆಡಂಬರಗಳಿಗೆ ಆದ್ಯತೆಯೇ ಹೊರತು ಪರಸ್ಪರ ಸಂಬಂಧಗಳು ಹುಡುಕಿದರೂ ಸಿಗಲಾರವು. ಮೇಲೆ ಹೇಳಿದಷ್ಟು ವ್ಯವಸ್ಥೆಗಳಾಗಬೇಕು ಎಂದ ಮೇಲೆ ಸಂಬಂಧ, ಪ್ರೀತಿ, ವಿಶ್ವಾಸ ಎಂದೆಲ್ಲ ಮಾತನಾಡಿ ಪ್ರಯೋಜನವೂ ಇಲ್ಲ. ಎಲ್ಲರೂ ಒಂದೊಂದು ಅಡಾವುಡಿಯಲ್ಲಿ ಕಳೆದುಹೋಗಿರುತ್ತಾರೆ. ವ್ಯವಸ್ಥೆಗಳ ನಿರ್ವಹಣೆಯಲ್ಲಿ ನಿತ್ರಾಣರಾಗಿರುವ ಮನೆಮಂದಿಗೆ ಬಂದವರೆಷ್ಟು, ಹೋದವರೆಷ್ಟು, ಉಂಡವರೆಷ್ಟು, ತಿಂದವರೆಷ್ಟು ಎಂದೆಲ್ಲ ವಿಚಾರಿಸಿಕೊಳ್ಳುವ ವ್ಯವಧಾನವಾಗಲೀ, ಚೈತನ್ಯವಾಗಲೀ ಉಳಿದಿರುವುದಿಲ್ಲ. ಖುದ್ದು ಮದುಮಗ-ಮದುಮಗಳೇ ಸಾಲುಗಟ್ಟಿದ ಅತಿಥಿಗಳೆದುರು ನಗುಮುಖ ಪ್ರದರ್ಶಿಸಿ, ಕಣ್ಣುಕೋರೈಸುವ ಕ್ಯಾಮರಾ ಬೆಳಕಿಗೆ ಮುಖವೊಡ್ಡಿ, ವಾಸ್ತವವಾಗಿ ಏನೇನು ನಡೆಯಿತು ಎಂದು ನೆನಪಿಟ್ಟುಕೊಳ್ಳುವ ಪರಿಸ್ಥಿತಿಯೂ ಇರುವುದಿಲ್ಲ. 

ಸಾಂಪ್ರದಾಯಿಕ ಮದುವೆಗಳಲ್ಲಿ 'ಉಡುಗೊರೆ ಭಾರವೇ’ ಎಂದು ಪುರೋಹಿತರ ಮೂಲಕ ಮನೆಯ ಯಜಮಾನ ವಿಚಾರಿಸಿಕೊಳ್ಳುವ ಪದ್ಧತಿ ಇತ್ತು. ಈಗ ವೇದಿಕೆಯ ನಾಲ್ಕು ಮೂಲೆಗಳಲ್ಲಿ ಮಾರ್ಷಲ್‌ಗಳನ್ನು ನಿಲ್ಲಿಸಿ ಅತಿಉತ್ಸಾಹದ ಅತಿಥಿಗಳನ್ನು ಎತ್ತಿಎಸೆಯುವ ಸಂಪ್ರದಾಯವಿದೆ. ಊಟದ ಹಾಲ್ ಪ್ರವೇಶಿಸಿ ಬಡಿಸಿದ್ದನ್ನು ದಕ್ಕಿಸಿಕೊಂಡು ಹೋಗುವುದೇ ದೊಡ್ಡದೊಂದು ಸವಾಲು. ಎಲ್ಲರೂ ಊಟದ ಸಮಯಕ್ಕೆ ಆಗಮಿಸವವರಾದ್ದರಿಂದ ಅಲ್ಲಿ ಅತಿಹೆಚ್ಚು ನೂಕುನುಗ್ಗಲು. ಊಟಕ್ಕೆ ಕುಳಿತವರು ಎದ್ದತಕ್ಷಣ ಸೀಟು ಹಿಡಿಯಬೇಕಾದ್ದರಿಂದ ಅವರ ಊಟ ಆರಂಭವಾಗುವಾಗಲೇ ಬೆನ್ನಹಿಂದೆ ಸರತಿಸಾಲು. ಇವರ ಊಟ ಯಾವಾಗ ಮುಗಿಯುತ್ತದೋ ಎಂಬ ಅಸಹನೆಯ ಮುಖಹೊತ್ತ ಮಂದಿ ಬೆನ್ನಹಿಂದೆ ನಿಂತಿರುವುದರಿಂದ ಊಟಕ್ಕೆ ಕುಳಿತವನಿಗೂ 'ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂಥ’ ಅನುಭವ.

ಕೊರೋನಾದಿಂದ ಜಗತ್ತೇ ಥರಗುಟ್ಟಿದ್ದೇನೋ ನಿಜ. ಅದು ಹೊತ್ತು ತಂದ ಎಲ್ಲ ಕಂಟಕಗಳ ನಡುವೆಯೂ, ಅತಿ ಆಡಂಬರದ ಮದುವೆಗಳು ತತ್ಕಾಲಕ್ಕಾದರೂ ನಿಯಂತ್ರಣಕ್ಕೆ ಬಂದವು ಎಂಬುದೊಂದು ಸಮಾಧಾನದ ಸಂಗತಿ. ಕೊರೋನದಿಂದ ಅನೇಕ ಮದುವೆಗಳು ಮುಂದೂಡಲ್ಪಟ್ಟವು. ಮಾಡಿದ ತಯಾರಿಗಳು ನಷ್ಟವಾದವು. ಇನ್ನೇನು ಮುಂದಿನ ವಾರ ಮದುವೆ ಎಂದು ಕಾಯುತ್ತಿದ್ದವರು ನಿರಾಸೆಗೊಳಗಾದರು. ಎಲ್ಲವೂ ನಿಜ. ಆದರೆ ಸೀಮಿತ ಸಂಖ್ಯೆಯ ನೆಂಟರನ್ನು ಸೇರಿಸಿಕೊಂಡು ಮದುವೆ ನಡೆಸಬಹುದು ಎಂಬ ಸೂಚನೆ ಬರುತ್ತಿದ್ದಂತೆಯೇ ಜನರ ಒಟ್ಟಾರೆ ದೃಷ್ಟಿಯೇ ಬದಲಾಗಿಹೋಯಿತು. ವೈಭವದ ಚೌಲ್ಟ್ರಿಗಳನ್ನೆಲ್ಲ ಬಿಟ್ಟು ಜನ ಮನೆಗೆ ಮರಳಿದರು. ಇರುವ ವ್ಯವಸ್ಥೆಯಲ್ಲೇ ಸರಳ ಮದುವೆಗಳು ಆರಂಭವಾದವು. ತೀರಾ ಹತ್ತಿರದ ಬಂಧುವರ್ಗ, ಸ್ನೇಹಿತರು ಮಾತ್ರ ಒಟ್ಟಾದರು. ಪರಸ್ಪರ ಕಲೆತರು, ಮನಸಾರೆ ಮಾತಾಡಿದರು, ಅಚ್ಚಳಿಯದ ಚಿತ್ರವೊಂದಕ್ಕೆ ಚೌಕಟ್ಟು ತೊಡಿಸಿ ಹೃದಯದಲ್ಲಿ ಭದ್ರವಾಗಿಸಿಕೊಂಡರು.

ಈ ಬೆಳವಣಿಗೆಯಿಂದ ಆಗಿರುವ ತೊಂದರೆಗಳೇನೂ ಕಮ್ಮಿಯಿಲ್ಲ. ಇರುವ ಒಬ್ಬನೇ/ಒಬ್ಬಳೇ ಮಗನ/ಮಗಳ ಮದುವೆಯನ್ನು ವರ್ಣರಂಜಿತವಾಗಿ ನಡೆಸಬೇಕು, ನೂರಾರು ಬಂಧುಬಳಗ ಸ್ನೇಹಿತರನ್ನು ಕರೆದು ಅದ್ದೂರಿಯಾಗಿ ಊಟಹಾಕಿಸಬೇಕು ಎಂದು ಕಾಯುತ್ತಿದ್ದವರಿಗೆ ನಿರಾಸೆ ಆಗಿದೆ. ಒಂದು ದೊಡ್ಡಮಟ್ಟದ ಮದುವೆ ನಡೆದರೆ ಅದರಿಂದ ತಮ್ಮ ದಿನದ ಕೂಲಿ ದುಡಿಯುವ ಹತ್ತಾರು ಮಂದಿಯ ಆದಾಯಕ್ಕೆ ಪೆಟ್ಟುಬಿದ್ದಿದೆ. ಮದುವೆ ಹಾಲ್‌ನ ಮಂದಿ, ಅಡುಗೆಯವರು, ಶಾಮಿಯಾನದವರು, ಹೂವಿನ ವ್ಯಾಪಾರಿಗಳು, ಛಾಯಾಗ್ರಾಹಕರು, ವಾಹನಗಳ ಮಾಲೀಕರು-ಚಾಲಕರು, ಸಹಾಯಕರು- ಎಲ್ಲರ ವ್ಯವಹಾರ ಕುಂಠಿತವಾಗಿದೆ. ಅವರಿಗಾದ ನಷ್ಟ ತುಂಬ ದೊಡ್ಡಮಟ್ಟದ್ದು.

ಆದರೆ ಒಟ್ಟಾರೆ ಬೆಳವಣಿಗೆ ಸರಳ ವಿವಾಹಗಳನ್ನು ಇಷ್ಟಪಡುವವರಿಗೆ ವರದಾನವಾಗಿ ಪರಿಣಮಿಸಿದೆ. ಮದುವೆ ಮನೆಗಳಲ್ಲಿ ಮತ್ತೆ ಮನುಷ್ಯ ಸಂಬಂಧಗಳು ಚಿಗುರಿಕೊಂಡಿವೆ. ಮದುವೆಯೇನೋ ಸ್ವರ್ಗದಲ್ಲಿ ನಡೆಯುತ್ತದೆ. ಮದುವೆ ಮಾಡಿಸಿದವನ ಬದುಕು ನರಕವಾಗಬಾರದಲ್ಲ? ಹಾಗಾಗದಂತಹ ಭಾರೀ ಒಸಗೆಯೊಂದನ್ನು ಕೊರೋನಾ ತಂದಿತೇ? ಇದು ಹೀಗೆಯೇ ಉಳಿದೀತೇ?

- ಸಿಬಂತಿ ಪದ್ಮನಾಭ ಕೆ. ವಿ.

ಸೋಮವಾರ, ಆಗಸ್ಟ್ 5, 2019

'ತುಂಬಲಾರದ ನಷ್ಟ' ಯಾರಿಗೆ?


ಹಿಂದಿನ ಸರ್ಕಾರ ಅನೇಕ ಜಯಂತಿಗಳ ರಜೆಗಳನ್ನು ರದ್ದುಪಡಿಸಿ ಅವುಗಳನ್ನು ಪರಿಮಿತ ರಜೆಗಳನ್ನಾಗಿ ಪರಿವರ್ತಿಸಿ ಆದೇಶ ಹೊರಡಿಸಿತ್ತು. ಅದು ನಿಸ್ಸಂಶಯವಾಗಿ ಒಂದು ಸ್ವಾಗತಾರ್ಹ ಕ್ರಮ. ಇದರ ಜಾಡಿನಲ್ಲಿ ಹೊಸ ಸರ್ಕಾರ ಈಗ ಇನ್ನೊಂದು ನಿರ್ಧಾರವನ್ನೂ ತೆಗೆದುಕೊಂಡರೆ ನಿಜಕ್ಕೂ ಅದೊಂದು ಐತಿಹಾಸಿಕ ಮತ್ತು ಪ್ರಶಂಸಾರ್ಹ ಕಾರ್ಯವಾದೀತು. ಅದೇನೆಂದರೆ, ಗಣ್ಯ ವ್ಯಕ್ತಿಗಳ ನಿಧನದ ಸಂದರ್ಭದಲ್ಲಿ ರಜೆ ಘೋಷಿಸುವ ಪದ್ಧತಿಯನ್ನು ಕೈಬಿಡುವುದು. ಇದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಗಬೇಕಿರುವ ಅತ್ಯಂತ ಪ್ರಮುಖ ಕೆಲಸ.

ಗಣ್ಯ ವ್ಯಕ್ತಿಗಳು ನಿಧನರಾದಾಗ ರಜೆ ಘೋಷಿಸುವುದು ನಮ್ಮಲ್ಲೊಂದು ದೊಡ್ಡ ಸಂಪ್ರದಾಯವಾಗಿ ಬೆಳೆದುಬಿಟ್ಟಿದೆ. ರಜೆ ಘೋಷಿಸದೆ ಹೋದರೆ ’ನಮ್ಮ ನಾಯಕರಿಗೆ’ ಅಗೌರವ ತೋರಿದರು ಎಂಬ ಗಲಾಟೆಯೇ ಆರಂಭವಾಗುತ್ತದೆ. ನಿಧನರಾದವರು ರಾಜಕೀಯ ವ್ಯಕ್ತಿಯಾಗಿದ್ದು, ಅವರ ಪ್ರತಿಸ್ಪರ್ಧಿ ಪಕ್ಷದವರು ಅಧಿಕಾರದಲ್ಲಿದ್ದರಂತೂ ಈ ಗಲಾಟೆಗೆ ತಕ್ಷಣ ರಾಜಕೀಯ ಬಣ್ಣ ಬಂದುಬಿಡುತ್ತದೆ. ಅದರೊಂದಿಗೆ ’ಜಾತಿ’ಯ ಆಯಾಮ ಸಿಕ್ಕಿದರಂತೂ ಮುಂದಿನ ತಮಾಷೆಯ ಬಗ್ಗೆ ಹೇಳುವುದೇ ಬೇಡ. 

ಶೋಕಾಚರಣೆ ಮಾಡುವುದು, ಮೃತರಿಗೆ ಗೌರವ ಸಲ್ಲಿಸುವುದು, ಅವರ ಸಾಧನೆ-ಕೊಡುಗೆಗಳ ಬಗ್ಗೆ ಸಮಾಜದ ಗಮನ ಸೆಳೆಯುವುದು, ಸಾರ್ವಜನಿಕರಿಗೆ ಹಾಗೂ ಸಾರ್ವಜನಿಕ ಆಸ್ತಿಗೆ ಆಗಬಹುದಾದ ಸಂಭಾವ್ಯ ಹಾನಿಯನ್ನು ತಪ್ಪಿಸುವುದು - ಇವೆಲ್ಲ ಗಣ್ಯ ವ್ಯಕ್ತಿಗಳ ನಿಧನದ ಹಿನ್ನೆಲೆಯಲ್ಲಿ ರಜೆ ಘೋಷಿಸುವುದಕ್ಕೆ ಕೊಡಬಹುದಾದ ಸಮರ್ಥನೆಗಳು. ಸಾರ್ವಜನಿಕರಿಗೆ ಆಗಬಹುದಾದ ಸಂಭಾವ್ಯ ತೊಂದರೆಗಳನ್ನು ತಪ್ಪಿಸುವ ಒಂದು ಸಂಗತಿಯ ಹೊರತಾಗಿ ಬೇರೆ ಯಾವುದಾದರೂ ಉದ್ದೇಶ ಈವರೆಗೆ ವಾಸ್ತವವಾಗಿ ಈಡೇರಿದ್ದಿದೆಯೇ?

ಶೋಕಾಚರಣೆ ಮಾಡುವುದು ಅಥವಾ ಮೃತರಿಗೆ ಗೌರವ ಸೂಚಿಸುವುದು ಎಂದರೇನು? ಆ ವ್ಯಕ್ತಿ ಸಮಾಜದ ಯಾವುದಾದರೂ ಕ್ಷೇತ್ರಕ್ಕೆ ಸಲ್ಲಿಸಿರಬಹುದಾದ ಕೊಡುಗೆಗಳನ್ನು ಸ್ಮರಣೆ ಮಾಡಿಕೊಳ್ಳುವುದು, ಅವುಗಳ ಬಗ್ಗೆ ತಮ್ಮೊಳಗೆ ಸಂವಾದ ನಡೆಸಿ ಅಭಿಮಾನಪಟ್ಟುಕೊಳ್ಳುವುದು, ಗಣ್ಯ ವ್ಯಕ್ತಿಯ ಸಾಧನೆಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವುದು ಮತ್ತು ಆ ಮೂಲಕ ಅವರೂ ಪ್ರೇರಣೆ ಪಡೆಯುವಂತೆ ಮಾಡುವುದು... ಇತ್ಯಾದಿ ವಿವರಣೆಗಳನ್ನು ಕೊಡಬಹುದು. ರಜೆ ಘೋಷಿಸುವುದರಿಂದ ವಾಸ್ತವವಾಗಿ ಈ ಗುರಿ ಈಡೇರುತ್ತದೆಯೇ? ಅಥವಾ ರಜೆ ಕೊಡುವುದರಿಂದ ಮಾತ್ರವೇ ಈ ಗುರಿ ಈಡೇರುತ್ತದೆಯೇ? ರಜೆ ನೀಡದೆಯೂ ಈ ಉದ್ದೇಶಗಳನ್ನು ಸಾಧಿಸುವುದು ಸಾಧ್ಯವಿಲ್ಲವೇ?

ಸಹೋದ್ಯೋಗಿಯೊಬ್ಬರು ತಮ್ಮ ಚಾಲನಾ ಪರವಾನಗಿ ನವೀಕರಣಕ್ಕಾಗಿ ಇತ್ತೀಚೆಗೆ ಮೈಸೂರಿಗೆ ಹೋಗಿದ್ದರಂತೆ. ಗಂಟೆಗಟ್ಟಲೆ ಸರತಿಯಲ್ಲಿ ಕಾದು ಇನ್ನೇನು ಅವರ ಕೆಲಸ ಆಗಬೇಕು ಅನ್ನುವಷ್ಟರಲ್ಲಿ ಗಣ್ಯ ವ್ಯಕ್ತಿಯೊಬ್ಬರ ನಿಧನದ ಪ್ರಯುಕ್ತ ರಜೆಯ ಘೋಷಣೆ ಹೊರಬಿತ್ತು. ಎಷ್ಟಾದರೂ ಸರ್ಕಾರಿ ನೌಕರರು, ರಜೆ ಘೋಷಣೆಯಾಗುತ್ತಿದ್ದಂತೆ ಫೈಲುಗಳನ್ನೆಲ್ಲ ಮಡಚಿಟ್ಟು ಹೊರಟೇಬಿಟ್ಟರಂತೆ. ನಿಮಿಷಾರ್ಧದಲ್ಲಿ ಕಚೇರಿಯೆಲ್ಲ ಖಾಲಿಯಾದ್ದರಿಂದ ನಾಲ್ಕು ಗಂಟೆ ಪ್ರಯಾಣ ಮಾಡಿ ಮೈಸೂರಿಗೆ ಹೋಗಿದ್ದ ಸಹೋದ್ಯೋಗಿ ಪೆಚ್ಚುಮೋರೆ ಹಾಕಿಕೊಂಡು ಪುನಃ ಬಸ್ ಹತ್ತಿದರಂತೆ.

ಇದೊಂದು ಸಣ್ಣ ನಿದರ್ಶನ ಅಷ್ಟೇ. ಇಂತಹ ಎಷ್ಟು ಸಾವಿರ ಕೆಲಸಗಳು ಒಂದು ರಜೆಯಿಂದ ಬಾಕಿಯಾಗಬಹುದು? ಎಷ್ಟು ಲಕ್ಷ ಗಂಟೆ ಮಾನವ ಶ್ರಮ ವ್ಯರ್ಥವಾಗಬಹುದು? ಎಷ್ಟು ಕೋಟಿ ರೂಪಾಯಿ ಹಣಕಾಸು ನಷ್ಟ ಆಗಬಹುದು? ಸ್ವಾತಂತ್ರ್ಯಾನಂತರ ಗಣ್ಯವ್ಯಕ್ತಿಗಳ ನಿಧನದ ಶೋಕಾಚರಣೆಗಾಗಿ ಎಷ್ಟು ರಜೆಗಳನ್ನು ಘೋಷಣೆ ಮಾಡಿರಬಹುದು? ಅವುಗಳಿಂದ ಆಗಿರಬಹುದಾದ ಒಟ್ಟು ನಷ್ಟ ಎಷ್ಟಿರಬಹುದು? ಅಧ್ಯಯನಕ್ಕೊಳಪಡಿಸಿದರೆ ಅದೊಂದು ಮಹಾಗ್ರಂಥವೇ ಆದೀತು. ಗಣ್ಯರ ನಿಧನದಿಂದ ಸಮಾಜಕ್ಕೆ ’ತುಂಬಲಾರದ ನಷ್ಟ’ವೆಂದು ಹೇಳುವುದು ಮಾಮೂಲಿ ಆಗಿ ಬಿಟ್ಟಿದೆ; ವಾಸ್ತವವಾಗಿ ತುಂಬಲಾರದ ನಷ್ಟ ಆಗುವುದು ಅವರ ನಿಧನದ ಹೆಸರಿನಲ್ಲಿ ರಜೆ ಘೋಷಿಸುವುದರಿಂದ.

ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡು, ಪಿಂಚಣಿ, ಪೋಸ್ಟಾಪೀಸು, ಬ್ಯಾಂಕ್ ಕೆಲಸ ಎಂದು ದೂರದೂರದ ಹಳ್ಳಿಗಳಿಂದ ತಾಲೂಕು ಕೇಂದ್ರ, ಜಿಲ್ಲಾ ಕೇಂದ್ರಗಳಿಗೆ ಹತ್ತಾರು ಮೈಲಿ ದೂರದಿಂದ ಪ್ರತಿದಿನ ಪ್ರಯಾಣ ಮಾಡುವ ರೈತರು, ಕೂಲಿಕಾರ್ಮಿಕರು, ಬಡ ಮಹಿಳೆಯರು, ವಯೋವೃದ್ಧರು ಸಾವಿರಾರು. ಇದ್ದಕ್ಕಿದ್ದ ಹಾಗೆ ಒಂದು ರಜೆ ಘೋಷಣೆ ಮಾಡುವುದರಿಂದ ಇಂತಹ ಜನಸಾಮಾನ್ಯರಿಗೆ ಆಗುವ ತೊಂದರೆ ಏನೆಂದು ಸರ್ಕಾರ ಎಂದಾದರೂ ಆಲೋಚಿಸಿದ್ದಿದೆಯೇ? ತಮ್ಮ ಹೊಲದ ಕೆಲಸಕ್ಕೋ, ದಿನನಿತ್ಯದ ಕೂಳಿನ ಮೂಲವಾದ ಕೂಲಿ ಕೆಲಸಕ್ಕೋ ಮೀಸಲಿರುವ ಒಂದು ದಿನವನ್ನು ಹೇಗೋ ಹೊಂದಿಸಿಕೊಂಡು ಕಚೇರಿಗಳಿಗೆ ಎಡತಾಕುವ ಈ ಜನರಿಗೆ ರಜೆ ಘೋಷಣೆಯಿಂದ ಆಗುವ ನಷ್ಟ ಎಷ್ಟೆಂದು ಯಾರಾದರೂ ಅರ್ಥ ಮಾಡಿಕೊಂಡಿದ್ದಾರೆಯೇ? ಒಂದಿಡೀ ದಿನ ವ್ಯರ್ಥವಾಯಿತಲ್ಲ ಎಂದು ನೊಂದುಕೊಳ್ಳುವ ಇವರು ನಿಧನರಾದ ಗಣ್ಯ ವ್ಯಕ್ತಿಯ ಗೌರವಾರ್ಥ ಶೋಕಾಚರಿಸಿ ಅವರ ಸಾಧನೆಗಳನ್ನು ಕೊಂಡಾಡುವ ಸಾಧ್ಯತೆ ಎಷ್ಟು?

ಇನ್ನು ಶಾಲಾ-ಕಾಲೇಜುಗಳ ಸಮಾಚಾರ ಕೇಳುವುದೇ ಬೇಡ. ಅವರಿಗೆ ರಜೆಯೆಂದರೆ ಸಂಭ್ರಮಾಚರಣೆ ಅಷ್ಟೆ. ಅದು ವಿದ್ಯಾರ್ಥಿಗಳ ಸಹಜ ಗುಣ. ವರ್ಷದಲ್ಲಿ ಎರಡು-ಮೂರು ತಿಂಗಳು ರಜೆಯಿದ್ದು, ಹಬ್ಬಹರಿದಿನಗಳೆಂದು ಮತ್ತಷ್ಟು ರಜೆಗಳಿದ್ದರೂ, ಇನ್ನೂ ಒಂದಷ್ಟು ರಜೆ ಸಿಕ್ಕಿದರೆ ಅವರೇನು ಬೇಡ ಅನ್ನುವುದಿಲ್ಲ. ಗಣ್ಯರ ನಿಧನಕ್ಕೆ ರಜೆ ಘೋಷಿಸಿದರೆ ಅವರಿಗಿಂತ ಹೆಚ್ಚು ಸಂಭ್ರಮಿಸುವವರು ಬೇರೆ ಇರಲಿಕ್ಕಿಲ್ಲ. ಇದು ಕೊಂಚ ಬೀಸು ಹೇಳಿಕೆ ಅನ್ನಿಸಿದರೂ ಇದು ನಿಜ ಮತ್ತು ಅತ್ಯಂತ ಗಂಭೀರವಾದ ವಿಚಾರ.

ನಿಧನ ಹೊಂದಿದ ಗಣ್ಯರ ಸಾಧನೆ-ಕೊಡುಗೆಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದು ಶಾಲಾ-ಕಾಲೇಜುಗಳ, ಅಧ್ಯಾಪಕರ ಕರ್ತವ್ಯ ಎಂಬುದು ನಿಜ. ಆದರೆ ರಜೆ ಘೋಷಿಸುವುದರಿಂದ ಅದನ್ನು ಮಾಡಿದಂತಾಗುತ್ತದೆಯೇ? ಅನೇಕ ವಿದ್ಯಾರ್ಥಿಗಳು ಸ್ವಯಂ ರಜೆ ಘೋಷಿಸಿಕೊಂಡು ಅಂದು ಕಾಲೇಜುಗಳಿಗೆ ಕಾಲಿಡುವುದೇ ಇಲ್ಲ; ಬಹುತೇಕರು ರಜೆ ಘೋಷಣೆಯಾದ್ದೇ ಕ್ಯಾಂಪಸ್ ಖಾಲಿ ಮಾಡುತ್ತಾರೆ. ಅವರಲ್ಲಿ ಬಹುತೇಕರು ದಿನದ ಉಳಿದ ಸಮಯವನ್ನು ಹೇಗೆ ಕಳೆಯುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಇನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಮಸ್ಯೆ ಬೇರೆ. ಅವರಿಗೆ ರಜೆ ಕೊಟ್ಟರೂ ಸಮಸ್ಯೆ, ಕೊಡದಿದ್ದರೂ ಸಮಸ್ಯೆ. ಆಗಷ್ಟೇ ಶಾಲೆಗೆ ಬಂದ ಪುಟಾಣಿಗಳನ್ನು ಮತ್ತೆ ಅವರವರ ಮನೆಗಳಿಗೆ ತಲುಪಿಸುವುದು ತುಂಬ ತ್ರಾಸದ ಕೆಲಸ. ರಜೆ ಕೊಡದೇ ಇದ್ದರೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ. ಅತ್ತ ಶಾಲೆಗಳಿಗೆ ಸಂಕಟ, ಇತ್ತ ಹೆತ್ತವರಿಗೆ ಆತಂಕ.

ಒಟ್ಟಾರೆ ಈ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಲೇಬೇಕು. ಇದಕ್ಕೆ ಎಲ್ಲರೂ ಪಕ್ಷಾತೀತವಾಗಿ ಒಂದು ಒಮ್ಮತದ ತೀರ್ಮಾನಕ್ಕೆ ಬರಲೇಬೇಕು. ಆ ದಿನ ಎಲ್ಲರೂ ಒಂದು ಗಂಟೆ ಹೆಚ್ಚು ಕೆಲಸ ಮಾಡಲಿ. ಕಚೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ನಿಧನ ಹೊಂದಿದ ಗಣ್ಯರ ಬಗ್ಗೆ ಒಳ್ಳೆಯ ಉಪನ್ಯಾಸ-ಸಂವಾದ ಕಾರ್ಯಕ್ರಮ ಏರ್ಪಡಿಸಲಿ. ಮೃತರಿಗೆ ಇದಕ್ಕಿಂತ ದೊಡ್ಡ ಗೌರವ ಉಂಟೇ?

-ಸಿಬಂತಿ ಪದ್ಮನಾಭ ಕೆ. ವಿ.