ಶುಕ್ರವಾರ, ಏಪ್ರಿಲ್ 14, 2023

ಮನದೊಳಗಣ ಕಿಚ್ಚು ಮನವ ಸುಡುವುದು

15-21 ಏಪ್ರಿಲ್ 2023ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ.

ಕಿಚ್ಚನಾರಿಸಬಹುದು ಹೊಟ್ಟೆಯ | ಕಿಚ್ಚಿಗೌಷಧವುಂಟೆ ಲೋಕದಿ | ಮಚ್ಚರವು ಜೀವಂತ ಸುಡುವುದು ನಿಚ್ಚವೆಮ್ಮ || ಎಂದು ಬರೆಯುತ್ತಾರೆ ಯುವ ಯಕ್ಷಗಾನ ಕವಿ ಶಿವಕುಮಾರ ಅಳಗೋಡು. ಅಸೂಯೆ ಎಷ್ಟು ಘೋರವಾದದ್ದು ಎಂಬುದನ್ನು ಎಷ್ಟೊಂದು ಸರಳವಾಗಿ ಚಿತ್ರಿಸಿದ್ದಾರೆ! ಭೌತಿಕವಾಗಿ ಕಾಣುವ ಬೆಂಕಿಯನ್ನು ಹೇಗಾದರೂ ನಂದಿಸಬಹುದು, ಆದರೆ ಒಳಗಿನ ಕಿಚ್ಚಿಗೆ ಪರಿಹಾರವಿಲ್ಲ; ಅದು ವ್ಯಕ್ತಿಯನ್ನು ದಿನವೂ ಸುಡುತ್ತಿರುತ್ತದೆ ಎಂಬ ಮಾತು ನೂರು ಪ್ರತಿಶತ ಸತ್ಯ.

ಅಸೂಯೆ ಎಂಬ ಬೆಂಕಿ ವ್ಯಕ್ತಿಗಳನ್ನಷ್ಟೇ ಅಲ್ಲ, ರಾಜ್ಯ-ಕೋಶಗಳನ್ನೇ ಸುಟ್ಟುಹಾಕಿದೆ,  ಸಾಮ್ರಾಜ್ಯಗಳನ್ನೇ ಬೂದಿಮಾಡಿದೆ, ವಂಶಗಳೇ ಅಳಿದುಹೋಗುವಂತೆ ಮಾಡಿದೆ. ಅದು ಅಂತಿಂಥ ಕಿಚ್ಚಲ್ಲ. ಬದುಕನ್ನೇ ನಿರ್ನಾಮ ಮಾಡುವ ಕಿಚ್ಚು. ಕಾಳ್ಗಿಚ್ಚನ್ನಾದರೂ ಕಟ್ಟಿಹಾಕಬಹುದು, ಈರ್ಷ್ಯೆಯನ್ನಲ್ಲ. ಬರಿಗಣ್ಣಿಗೆ ತಕ್ಷಣ ಕಾಣದೆ ಇರುವ ಈ ಜ್ವಾಲೆ ಕೆನ್ನಾಲಿಗೆಯಾದ ಮೇಲೆ ತಡೆಯುವುದು ಕಷ್ಟ.

ಕೈಕೇಯಿಯ ಅಸೂಯೆಯಿಂದ ರಾಮಾಯಣವಾಯಿತು; ಗಾಂಧಾರಿಯ ಅಸೂಯೆಯಿಂದ ಮಹಾಭಾರತವೇ ಸೃಷ್ಟಿಯಾಯಿತು. ರಾಮ ಕಾಡಿಗೆ ಹೋದದ್ದರಿಂದಲಾದರೂ ಭೂಭಾರ ಹರಣ ಆಯಿತು. ಆದರೆ ಗಾಂಧಾರಿ ಹೊಟ್ಟೆ ಹಿಸುಕಿಕೊಂಡದ್ದರಿಂದ ನೂರೊಂದು ಕೌರವರು ಹುಟ್ಟಿಕೊಂಡುಬಿಟ್ಟರು. ಇಡೀ ಮಹಾಭಾರತವೇ ದಾಯಾದಿ ಕಲಹದ ವೇದಿಕೆಯಾಯಿತು. ಗಾಂಧಾರಿ ಯಾವ ಅಸಹನೆಯಿಂದ ತನ್ನ ಗರ್ಭವನ್ನು ಹಿಸುಕಿಕೊಂಡಳೋ ಅದೇ ಅಸಹನೆ ಸಮಸ್ತ ಕೌರವರ ಸ್ಥಾಯೀಗುಣವೇ ಆಗಿ ಕೊನೆಗೆ ಕುರುಕ್ಷೇತ್ರವೇ ನಿರ್ಮಾಣವಾಯಿತು.

ಧೃತರಾಷ್ಟ್ರನಂತೂ ಹುಟ್ಟುಕುರುಡ. ಆತನಿಗಿಲ್ಲದ ದೃಷ್ಟಿ ತನಗೂ ಬೇಡ ಎಂದು ಗಾಂಧಾರಿ ತಾನೂ ದೃಷ್ಟಿಯನ್ನು ಬಂಧಿಸಿಕೊಂಡಳು. ವಿಚಿತ್ರವೆಂದರೆ ಕೌರವರೆಲ್ಲರೂ ಈರ್ಷ್ಯೆಯೆಂಬ ಬಟ್ಟೆಯಿಂದ ತಮ್ಮ ಅಂತರಂಗದ ಕಣ್ಣುಗಳನ್ನೇ ಕಟ್ಟಿಕೊಂಡರು. ಅಸೂಯೆ ಒಳಗಣ್ಣನ್ನೇ ಕುರುಡಾಗಿಸುತ್ತದೆ. ಅದು ಮನುಷ್ಯನನ್ನು ಯೋಚಿಸದಂತೆ ಮಾಡುತ್ತದೆ, ಆತ್ಮಾವಲೋಕನದ ಶಕ್ತಿಯನ್ನು ಕುಂದಿಸುತ್ತದೆ. ಹೇಗಾದರೂ ಮಾಡಿ ತನ್ನ ಪ್ರತಿಸ್ಪರ್ಧಿಯನ್ನು ಮಣಿಸಬೇಕು ಎಂಬ ಉದ್ದೇಶ ಪ್ರಬಲವಾಗುತ್ತದೆಯೇ ಹೊರತು ತಾನೇಕೆ ಹೀಗಾಗಿದ್ದೇನೆ ಎಂದು ಚಿಂತಿಸುವುದೇ ಇಲ್ಲ. ತನ್ನ ಒಂದು ಕಣ್ಣು ಹೋದರೂ ಅಡ್ಡಿಯಿಲ್ಲ, ಎದುರಾಳಿಯ ಎರಡೂ ಕಣ್ಣು ಹೋಗಲಿ ಎಂಬ ಭಾವನೆಯೇ ಇಲ್ಲಿ ಪ್ರಬಲ.

ಉದ್ಯೋಗ, ವ್ಯವಹಾರ, ಸಂಪತ್ತು, ಸಂಬಂಧ- ಎಲ್ಲ ಕಡೆಗಳಲ್ಲೂ ಮತ್ಸರ ಅನಾಹುತಗಳನ್ನು ಸೃಷ್ಟಿಸಬಲ್ಲದು. ಇನ್ನೊಬ್ಬ ತನಗಿಂತ ಮುಂದಿರಬಾರದು ಎಂಬ ಮನಸ್ಥಿತಿಯೇ ಈ ಮತ್ಸರಕ್ಕೆ ಕಾರಣ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಈ ಮನಸ್ಥಿತಿಯ ಮೂಲಕಾರಣ ಸ್ಪರ್ಧೆ ಎಂಬುದಕ್ಕಿಂತಲೂ ವ್ಯಕ್ತಿಯ ಕೀಳರಿಮೆ ಎಂಬುದೇ ನಿಜ. ‘ಅಸೂಯೆ ಎಂಬುದು ಒಬ್ಬ ವ್ಯಕ್ತಿಯ ಕೀಳರಿಮೆಯ ಅಂತಃಪ್ರಜ್ಞೆ. ಅದೊಂದು ಮಾನಸಿಕ ಕ್ಯಾನ್ಸರ್’ ಎನ್ನುತ್ತಾನೆ ಫೋರ್ಬ್ಸ್. ಗುಣ, ರೂಪ, ಹಣ, ಜ್ಞಾನ, ಅಂತಸ್ತು, ಜನಪ್ರಿಯತೆ- ಯಾವ ವಿಷಯದಲ್ಲಾದರೂ ಈ ಕೀಳರಿಮೆ ಹುಟ್ಟಿಕೊಳ್ಳಬಹುದು. ಇಂತಹ ವಿಷಯಗಳಲ್ಲಿ ಇನ್ನೊಬ್ಬನ ಮಟ್ಟಕ್ಕೆ ಏರುವುದು ತನಗೆ ಸಾಧ್ಯವಿಲ್ಲ ಎಂದು ವ್ಯಕ್ತಿಗೆ ಅನ್ನಿಸಿದಾಗ ಅದು ಕೀಳರಿಮೆಯಾಗಿ ಬೆಳೆಯುವುದುಂಟು. ಅಸೂಯೆ ಕೀಳರಿಮೆಯ ಇನ್ನೊಂದು ಮುಖ.

ಕೀಳರಿಮೆಗೆ ಕಾರಣ ವಾಸ್ತವವನ್ನು ಒಪ್ಪಿಕೊಳ್ಳಲಾಗದ ಮನಸ್ಥಿತಿ. ಒಬ್ಬೊಬ್ಬ ವ್ಯಕ್ತಿಯೂ ಅವನದೇ ನೆಲೆಯಲ್ಲಿ ವಿಶಿಷ್ಟ ಮತ್ತು ಅನನ್ಯ. ಒಬ್ಬ ವ್ಯಕ್ತಿ ಯಾವುದೋ ಒಂದು ವಿಷಯದಲ್ಲಿ ಗಟ್ಟಿಗನಾಗಿದ್ದಾನೆಂದರೆ ಇನ್ನೊಬ್ಬ ವ್ಯಕ್ತಿ ಎಲ್ಲ ವಿಷಯಗಳಲ್ಲೂ ದುರ್ಬಲ ಎಂದರ್ಥವಲ್ಲ. ಅವನಿಗೆ ಅವನದ್ದೇ ಆದ ವೈಶಿಷ್ಟ್ಯಗಳಿರಬಹುದು, ಮತ್ತು ಅವುಗಳ ಮೂಲಕ ಯಶಸ್ಸು ಸಾಧಿಸಬಹುದು. ಒಂದು ವಿಷಯದಲ್ಲಿ ಗಟ್ಟಿಗ ಎನಿಸಿಕೊಂಡವನು ಉಳಿದ ಹತ್ತಾರು ವಿಷಯಗಳಲ್ಲಿ ದುರ್ಬಲನಾಗಿರಬಹುದು. ನಿಜವಾಗಿ ನೋಡಿದರೆ ಪರಿಪೂರ್ಣತೆಯೆಂಬುದು ಒಂದು ಭ್ರಮೆ. ಒಬ್ಬ ವ್ಯಕ್ತಿ ಪರಿಪೂರ್ಣನಾಗಿರುವುದು ಸಾಧ್ಯವೇ ಇಲ್ಲ. ಇದಿಷ್ಟು ಸ್ಪಷ್ಟ ಇರುವವನಿಗೆ ಇನ್ನೊಬ್ಬನ ಕುರಿತು ಮತ್ಸರ ಹುಟ್ಟಿಕೊಳ್ಳುವುದು ಸಾಧ್ಯವೇ ಇಲ್ಲ. ‘ಹೋಲಿಸಿಕೊಳ್ಳದೆ ಬದುಕುವುದೆಂದರೆ ದೊಡ್ಡ ಹೊರೆಯೊಂದನ್ನು ಇಳಿಸಿಕೊಂಡಂತೆ’ ಎನ್ನುತ್ತಾರೆ ಜಿಡ್ಡು ಕೃಷ್ಣಮೂರ್ತಿ. 

ತಾನು ಯಾರೊಂದಿಗೂ ಸ್ಪರ್ಧಿಸಬೇಕಿಲ್ಲ, ತನಗೆ ತಾನೇ ಸ್ಪರ್ಧಿ; ಪ್ರತಿದಿನವೂ ತನ್ನನ್ನು ತಾನು ಮೀರುವ ದಾರಿಯಲ್ಲಿ ಸಾಗಬೇಕು ಎಂಬ ಮನಸ್ಥಿತಿ ಬೆಳೆಸಿಕೊಂಡರೆ ಪ್ರತಿಸ್ಪರ್ಧಿಗಳಿಂದ ತನಗೆ ತೊಂದರೆಯಿದೆ ಎಂದು ಯಾವ ವ್ಯಕ್ತಿಗೂ ಅನ್ನಿಸಲಾರದು. ಉದ್ಯೋಗ ಸ್ಥಳದಲ್ಲೇ ಆಗಿರಲಿ, ತಾನು ಗರಿಷ್ಠ ಪ್ರಯತ್ನದೊಂದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಅದಕ್ಕೆ ಸೂಕ್ತ ಪ್ರತಿಫಲ ಇಂದಲ್ಲ ನಾಳೆಯಾದರೂ ಸಿಕ್ಕಿಯೇ ಸಿಗುತ್ತದೆ ಎಂದು ಭಾವಿಸಿದವನಿಗೆ ಅಸೂಯೆಯ ಕಿಚ್ಚು ಕಾಡಲಾರದು. 

ಇದು ನಮ್ಮನ್ನು ಅಸೂಯೆ ಕಾಡದಂತೆ ನೋಡಿಕೊಳ್ಳುವ ಬಗೆಯಾಯಿತು. ನಮ್ಮನ್ನು ನೋಡಿ ಇನ್ನೊಬ್ಬ ಅಸೂಯೆಪಟ್ಟುಕೊಳ್ಳುತ್ತಿದ್ದಾನೆ, ಹೋದ ದಾರಿಗೆಲ್ಲ ಅಡ್ಡಬರುತ್ತಿದ್ದಾನೆ ಎಂದು ಅನಿಸುತ್ತಿದೆಯೇ? ಅಂಥವರ ಬಗ್ಗೆ ಎಳ್ಳಷ್ಟೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಮತ್ಸರವೆಂಬುದು ವ್ಯಕ್ತಿಯ ಒಳಗಿನ ಕಿಚ್ಚು ಎಂದು ಆಗಲೇ ಹೇಳಿಯಾಯಿತು. ಕಿಚ್ಚು ಒಳಗೆ ಇದೆ ಎಂದ ಮೇಲೆ ಅದು ಲೋಕವನ್ನು ಸುಡುವುದಕ್ಕಿಂತ ಮುಂಚೆ ವ್ಯಕ್ತಿಯನ್ನೇ ಸುಡುತ್ತದೆ. ವಾಸ್ತವವಾಗಿ ಅಂಥವರು ಪ್ರತಿದಿನವೂ ತಮ್ಮೊಳಗೇ ಸುಟ್ಟುಹೋಗುತ್ತಿರುತ್ತಾರೆ; ಯಾವುದೋ ಒಂದು ದಿನ ನೋಡನೋಡುತ್ತಿದ್ದಂತೆಯೇ ಕರಕಲಾಗುತ್ತಾರೆ. ‘ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು’ ಎಂದು ಬಸವಣ್ಣನೇ ಹೇಳಿಲ್ಲವೇ? ಇನ್ನೊಬ್ಬನನ್ನು ನೋಡಿ ಅಸೂಯೆಪಡುವವರಿಗೆ ಮಾನಸಿಕ ನೆಮ್ಮದಿಯೇ ಇರುವುದಿಲ್ಲ. ಅವರು ಸದಾ ಅತೃಪ್ತಿ, ಅಶಾಂತಿಗಳಿಂದ ಒಳಗೊಳಗೇ ಬೇಯುತ್ತಿರುತ್ತಾರೆ. ಕುದಿಯುವವರು ಆವಿಯಾಗುತ್ತಾರೆ, ಉರಿಯುವವರು ಬೂದಿಯಾಗುತ್ತಾರೆ ಎಂಬ ಮಾತೇ ಇದೆಯಲ್ಲ! 

ಇನ್ನೊಂದು ವಿಚಾರ ಏನೆಂದರೆ, ಯಾರೋ ನಮ್ಮನ್ನು ನೋಡಿ ಮತ್ಸರಪಡುತ್ತಿದ್ದಾರೆ ಎಂದರೆ ನಾವು ಸಾಧನೆಯ ದಾರಿಯಲ್ಲಿದ್ದೇವೆ ಎಂದು ಅರ್ಥ. ಸೋತವರನ್ನು ನೋಡಿ ಯಾರೂ ಅಸೂಯೆಪಡುವುದಿಲ್ಲವಲ್ಲ! “ನಿಮ್ಮನ್ನು ನೋಡಿ ಅಸೂಯೆಪಡುವವರನ್ನು ದ್ವೇಷಿಸಬೇಡಿ. ಅವರು ವಾಸ್ತವವಾಗಿ ತಮಗಿಂತ ನೀವೇ ಉತ್ತಮ ಎಂದು ಭಾವಿಸಿಕೊಂಡಿರುತ್ತಾರೆ. ಅಂಥವರಿಗೆ ಮನಸ್ಸಿನಲ್ಲೇ ಕೃತಜ್ಞತೆ ಹೇಳಿ ಮುಂದಕ್ಕೆ ಹೋಗುತ್ತಾ ಇರಿ” ಎಂದು ದಾರ್ಶನಿಕರು ಇದೇ ಕಾರಣಕ್ಕೆ ಹೇಳಿರುವುದು.

ಯಾವ ಸುಯೋಧನನ ಮತ್ಸರದಿಂದ ಕುರುಕ್ಷೇತ್ರ ಸೃಷ್ಟಿಯಾಯಿತೋ, ಅದೇ ಸುಯೋಧನ ಒಂದು ಹಂತದಲ್ಲಿ ತನ್ನ ಪ್ರತಿಸ್ಪರ್ಧಿಯ ಶೌರ್ಯವನ್ನು ಮೆಚ್ಚಿದ್ದುಂಟಂತೆ. ಯುದ್ಧದಲ್ಲಿ ಭೀಮನ ಪರಾಕ್ರಮವನ್ನು ನೋಡಿದ ಕೌರವ ‘ಸದ್ಗುಣಕೆ ಮತ್ಸರವೆ’ ಎಂದುಕೊಳ್ಳುತ್ತಾನೆ (ಕುಮಾರವ್ಯಾಸಭಾರತ). ಇನ್ನೊಬ್ಬನ ಸದ್ಗುಣವನ್ನು, ಒಳ್ಳೆಯತನವನ್ನು, ನ್ಯಾಯಮಾರ್ಗದಲ್ಲಿ ಗಳಿಸುವ ಯಶಸ್ಸನ್ನು ನೋಡಿ ಖಂಡಿತ ಮತ್ಸರಪಟ್ಟುಕೊಳ್ಳಬಾರದು. ಇನ್ನೊಬ್ಬನನ್ನು ಪ್ರಾಮಾಣಿಕವಾಗಿ ಅಭಿನಂದಿಸುವುದರಲ್ಲಿ ಇರುವ ಆತ್ಮಸಂತೋಷ ಬೇರೆಡೆ ಸಿಗಲಾರದು. ‘ಸರ್ವಂ ಪರಿಕ್ರೋಶಮ್ ಜಹಿ’ (ಎಲ್ಲ ಬಗೆಯ ಮತ್ಸರವನ್ನು ತ್ಯಜಿಸು) ಎನ್ನುತ್ತದೆ ಋಗ್ವೇದ. ವೇದದ ಬೆಳಕು ನಮ್ಮನ್ನು ಮುನ್ನಡೆಸಲಿ.

- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: