ಇಂಥದ್ದೊಂದು ಪುಸ್ತಕ ಬರೆಯಬೇಕೆನ್ನುವುದು ನನ್ನ ಬಹುದಿನಗಳ ಆಸೆಯಾಗಿತ್ತು.
ಅಪ್ಪ ಮೊಬೈಲ್ ಕೊಡಿಸಲಿಲ್ಲ, ಅಮ್ಮ ಗೇಮ್ ಆಡಲು ಬಿಡಲಿಲ್ಲ, ಮೇಷ್ಟ್ರು ಬೈದರು, ಪ್ರೀತಿಸಿದವರು ಕೈಕೊಟ್ಟರು ಎಂಬ ಕಾರಣಗಳಿಗೆ ಜೀವ ಕಳೆದುಕೊಳ್ಳುವ ಎಳೆಯ ವಯಸ್ಸಿನ ಹುಡುಗರು; ಸಾಮಾನ್ಯ ಜ್ಞಾನವೇ ಇಲ್ಲದ ತೊಂಬತ್ತೊಂಬತ್ತು ಪರ್ಸೆಂಟೇಜಿನ ಬುದ್ಧಿವಂತರು; ಕಿರಿಯರೊಂದಿಗೆ, ಓರಗೆಯವರೊಂದಿಗೆ, ಹಿರಿಯರೊಂದಿಗೆ ಹೇಗೆ ವ್ಯವಹರಿಸಬೇಕೆಂದೇ ಗೊತ್ತಿಲ್ಲದ rank ಹೋಲ್ಡರುಗಳು; ಇಂಜಿನಿಯರಿಂಗ್, ಮೆಡಿಕಲ್ ಬಿಟ್ಟರೆ ಬದುಕುವುದಕ್ಕೆ ಬೇರೆ ದಾರಿಗಳೇ ಇಲ್ಲ ಎಂಬ ಮನಸ್ಥಿತಿಗೆ ಬಂದಿರುವ ಸಮಾಜ; ಸಣ್ಣಪುಟ್ಟ ಸೋಲುಗಳನ್ನೂ ನಿಭಾಯಿಸಲಾಗದ ದುರ್ಬಲ ತರುಣರು...
ಇಂತಹ ಸುದ್ದಿಗಳು ಪ್ರತಿದಿನ ನಮ್ಮ ಕಣ್ಣು-ಕಿವಿಗಳಿಗೆ ಬೀಳುತ್ತಿರುತ್ತವೆ. ಆಗೆಲ್ಲ ಮನಸ್ಸು ವಿಹ್ವಲವಾಗುತ್ತದೆ. ಇದಕ್ಕೆಲ್ಲ ಏನು ಕಾರಣ? ಯಾರು ಕಾರಣ? ನಮ್ಮ ಶಿಕ್ಷಣ ವ್ಯವಸ್ಥೆಯ ವೈಫಲ್ಯವೇ? ಶಿಕ್ಷಕರ, ಹೆತ್ತವರ ಸೋಲೇ? ಆಧುನಿಕತೆಯ ಪರಿಣಾಮವೇ? ಕುಟುಂಬ ವ್ಯವಸ್ಥೆ ಕುಸಿದಿರುವ ಸೂಚನೆಯೇ? ಯಾವುದೂ ಆಗಿರಬಹುದು; ಎಲ್ಲವೂ ಆಗಿರಬಹುದು.
ಆದರೆ ಇದರ ಬಲಿಪಶುಗಳು ಮಾತ್ರ ಮುಂದೆ ಬಾಳಿ ಬದುಕಬೇಕಾದ ನಮ್ಮ ಮಕ್ಕಳು.
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡದೊಂದು ಕೊರತೆಯಿದೆ. ಅದನ್ನು ಹೇಗಾದರೂ ಮಾಡಿ ನಮ್ಮಿಂದಾದ ಮಟ್ಟಿಗೆ ಸರಿಪಡಿಸಬೇಕು. ಮಕ್ಕಳ ಹೃದಯ-ಮನಸ್ಸು-ವ್ಯಕ್ತಿತ್ವ ಸಮರ್ಪಕವಾಗಿ ಬೆಳೆದುಬರಬೇಕು. ಅವರು ಒಳಗಿಂದಲೇ ಗಟ್ಟಿಯಾಗಬೇಕು.
ಹೀಗೆಂದು ಯೋಚಿಸುತ್ತಲೇ ಹುಟ್ಟಿಕೊಂಡ ಬರಹಗಳಿವು. ʼವಿಜಯ ಕರ್ನಾಟಕʼದ ವಿದ್ಯಾರ್ಥಿ ಆವೃತ್ತಿ (ವಿಕ ಮಿನಿ)ಯಲ್ಲಿ ಇದೇ ʼಸಕ್ಸೆಸ್ ಮಂತ್ರʼ ಎಂಬ ಶೀರ್ಷಿಕೆಯಲ್ಲಿ ಐವತ್ತು ಕಂತುಗಳಲ್ಲಿ ಪ್ರಕಟವಾದವು. ಕೆಲವನ್ನು ಫೇಸ್ಬುಕ್ ಇತ್ಯಾದಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡದ್ದೂ ಇದೆ. (ಬೇರೆ ಕೆಲವು ಲೇಖನಗಳೂ ಇವೆ).
ಆದರೆ ಇವು ಒಟ್ಟಾಗಿ ಒಂದೇ ಕಡೆ ನಮ್ಮ ವಿದ್ಯಾರ್ಥಿಗಳಿಗೆ, ಅವರ ಹೆತ್ತವರಿಗೆ, ಶಿಕ್ಷಕರಿಗೆ ದೊರೆಯಬೇಕು ಎಂಬುದು ನನ್ನ ಬಯಕೆ. ಪ್ರಕಟಿಸುತ್ತೀರಾ ಎಂದು ಅಯೋಧ್ಯಾ ಪ್ರಕಾಶನವನ್ನು ಕೇಳಿಕೊಂಡೆ. ಅವರು ಮರುಮಾತಿಲ್ಲದೆ ಆಯಿತು ಎಂದರು. ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ಈಗ ʼಸಕ್ಸೆಸ್ ಮಂತ್ರʼ ಪುಸ್ತಕರೂಪದಲ್ಲಿ ನಿಮ್ಮ ಮುಂದಿದೆ. ಪ್ರಾಥಮಿಕ ಶಾಲೆಯಿಂದ ತೊಡಗಿ ಪದವಿ ಹಂತದ ವಿದ್ಯಾರ್ಥಿಗಳವರೆಗೆ ವಿವಿಧ ಸ್ತರಗಳ ವಿದ್ಯಾರ್ಥಿಗಳು ಓದಬೇಕಾದ ಪುಸ್ತಕವಿದು.
ಪುಟ: 180
ಬೆಲೆ: ರೂ. 200
ನಿಮ್ಮ ಪ್ರತಿಯನ್ನು
ಇಲ್ಲಿಂದ ನೇರವಾಗಿ ಪಡೆದುಕೊಳ್ಳಬಹುದು.
ಅಥವಾ-
ನನಗೆ ಒಂದು ವಾಟ್ಸಾಪ್ ಮೆಸೇಜ್ ಮಾಡಬಹುದು: 9449525854
- ಸಿಬಂತಿ ಪದ್ಮನಾಭ
_page-0001.jpg)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ