ಶುಕ್ರವಾರ, ಮೇ 9, 2014

'ಹೊಣೆ'ಬರಹ: ಬೇರು ಮರೆಯದಿರೋಣ, ಬಿಳಲು ಕಡಿಯದಿರೋಣ...

('ಕನ್ನಡ ಪ್ರಭ'ದ 'ಬೈಟೂಕಾಫಿ' ಪುರವಣಿಯಲ್ಲಿ ಮೇ 7, 2014ರಂದು ಪ್ರಕಟವಾದ ಲೇಖನ)
ಇಲ್ಲಿಯೂ ಓದಬಹುದು...

ಹುಟ್ಟಿ ಕಣ್ತೆರೆದಂದಿನಿಂದಲೇ ಈ ಮಕ್ಕಳು ಕಾರಿನಲ್ಲಿ ಓಡಾಡುತ್ತಿದ್ದಾರೆ. ಸ್ವಿಚ್ ಆನ್ ಮಾಡಿದರೆ ಮನೆತುಂಬಾ ಬೆಳಕು, ತಂಪುತಂಪು ಗಾಳಿ, ಸ್ನಾನಕ್ಕೆ ಬಿಸಿನೀರು. ಮೆತ್ತಗಿನ ಹಾಸಿಗೆ, ತರಹೇವಾರಿ ಡ್ರೆಸ್ಸು, ಒಳ್ಳೆಯ ಚಪ್ಪಲಿ, ಕೈತುಂಬಾ ಚಾಕಲೇಟು. ಅಷ್ಟಗಲದ ಟಿವಿಯಲ್ಲಿ ಸದಾ ಕಾರ್ಟೂನು ಕುಣಿಯುತ್ತಿದೆ, ಅಟಕ್ಕೆ ಕಂಪ್ಯೂಟರೇ ಇದೆ. ಸ್ಕೂಲ್ ವ್ಯಾನು ಮನೆಯೆದುರಿಗೇ ಬಂದು ಹಾರ್ನ್ ಮಾಡುತ್ತದೆ. ಇವನ್ನೆಲ್ಲ ನೋಡುತ್ತಲೇ ಕೆಲವೊಮ್ಮೆ ನನಗೆ ದಿಗಿಲೆನಿಸುವುದಿದೆ.

ಅರೆ! ಮಕ್ಕಳು ಖುಷಿಯಾಗಿದ್ದಾರೆ, ಯಾವ ಕಷ್ಟಗಳೂ ಇಲ್ಲದೆ ನೆಮ್ಮದಿಯಿಂದ ಬಾಲ್ಯ ಕಳೆಯುತ್ತಿದ್ದಾರೆ ಎಂಬುದು ಸಂತೋಷದ ಸಂಗತಿಯಲ್ಲವೇ? ಅದರಲ್ಲಿ ಆತಂಕಪಡುವಂಥದ್ದೇನಿದೆ ಎಂದು ನಿಮಗೆ ಸೋಜಿಗವೆನಿಸಬಹುದು. ಅದು ನಿಜವೇ. ಮಕ್ಕಳೇ ಮನೆಯ ಬೆಳಕು. ಅವು ಚಿಲಿಪಿಲಿ ಅನ್ನುತ್ತಾ ಮನೆತುಂಬಾ ಓಡಾಡಿಕೊಂಡಿದ್ದರೆ, ಅದೇ ಮನೆಯ ಸಂಪತ್ತು, ಸಮಾಧಾನ. ಆದರೆ ನನ್ನ ಆತಂಕ ಅವರ ಸಂತೋಷದ ಕುರಿತಾದದ್ದಲ್ಲ. ಈ ಸಂತೋಷದ ನಿಜವಾದ ಬೆಲೆ ಏನು ಎಂಬುದನ್ನು ಅವರಿಗೆ ಅರ್ಥ ಮಾಡಿಸುವ ಬಗೆಗಿನದ್ದು.

ಫಳಫಳ ಹೊಳೆಯುವ ಟೈಲ್ಸ್ ನೆಲದ ಮೇಲೆ ಓಡಾಡಿಕೊಂಡಿರುವ ಈ ಮಕ್ಕಳಿಗೆ ಮುಳಿಹುಲ್ಲು ಮಾಡಿನ, ಸೆಗಣಿ ಸಾರಿಸಿದ ನೆಲದ, ಹೊಗೆಯಿಂದ ಕಪ್ಪಾದ ಗೋಡೆಗಳ ಪುಟ್ಟ ಜೋಪಡಿಯನ್ನು ಅರ್ಥ ಮಾಡಿಸುವುದು ಹೇಗೆ? ಕಿತ್ತುಹೋದ ಮಾಡಿನ ಸಂದಿಗಳಿಂದ ಧೋ ಎಂದು ಸುರಿವ ಮಳೆನೀರಿಗೆ ಮಧ್ಯರಾತ್ರಿ ಎಚ್ಚೆತ್ತು ಇನ್ನೆಲ್ಲೂ ಮಲಗಲು ಜಾಗವಿಲ್ಲದೆ ಅಮ್ಮನ ಸೆರಗಿನ ಹಿಂದೆ ಮುದುಡಿಕೊಂಡು ಬೆಳಗಿನವರೆಗೂ ಜಾಗರಣೆ ಮಾಡಿದ್ದನ್ನು ಅರ್ಥ ಮಾಡಿಸುವುದು ಹೇಗೆ?

ಬೇಕೆಂದಾಗೆಲ್ಲ ಹಾರ್ಲಿಕ್ಸ್, ಬೂಸ್ಟು, ಒಳ್ಳೊಳ್ಳೆ ಹಣ್ಣುಹಂಪಲು, ಸವಿಯಾದ ತಿಂಡಿಗಳೆಲ್ಲ ಲಭ್ಯವಿರುವ ಈ ಮಕ್ಕಳಿಗೆ ಬೇಯಿಸಿದ ಗೋಧಿಯೆಂಬ ಫೈವ್‌ಸ್ಟಾರ್ ತಿಂಡಿ, ಪಾತ್ರೆ ತಳದಲ್ಲಿರುವ ಮುನ್ನಾದಿನದ ಸಪ್ಪೆ ಗಂಜಿ, ಕಣ್ಣುಮೂಗಲ್ಲೆಲ್ಲ ಸೊರಸೊರ ಸುರಿಸುವ ಹುಣಸೆ ಹಣ್ಣು-ಉಪ್ಪು-ಮೆಣಸಿನಕಾ ಗೊಜ್ಜನ್ನು ಅರ್ಥ ಮಾಡಿಸುವುದು ಹೇಗೆ?

ಮನೆಬಾಗಿಲಿನಿಂದ ಸ್ಕೂಲಿಗೂ ಸ್ಕೂಲಿನಿಂದ ಮನೆಬಾಗಿಲಿಗೂ ವ್ಯಾನಿನಲ್ಲೇ ಓಡಾಡುವ ಈ ಮಕ್ಕಳಿಗೆ ಪ್ರತಿದಿನ ಬರಿಗಾಲಿನಲ್ಲಿ ನಾಲ್ಕೈದು ಮೈಲಿ ಕಾಡುಹಾದಿ ಕ್ರಮಿಸಿ ಊರಿನ ಏಕೈಕ ಸರ್ಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆಗೆ ಹೋಗುವುದನ್ನು ಅರ್ಥ ಮಾಡಿಸುವುದು ಹೇಗೆ? ಒಪ್ಪೊತ್ತಿನೂಟ ಉಂಡು ವಾರಪೂರ್ತಿ ಸರ್ಕಾರ ದಯಪಾಲಿಸಿದ ಏಕೈಕ ಉಡುಪನ್ನೇ ಏರಿಸಿಕೊಂಡು ಬಂದು ಅಕ್ಕಪಕ್ಕದಲ್ಲಿ ಕೂರುತ್ತಿದ್ದ ಕೃಶದೇಹಿ ಸಹಪಾಠಿಗಳ ಬದುಕನ್ನು ಅರ್ಥ ಮಾಡಿಸುವುದು ಹೇಗೆ? ನೆಲದ ಮೇಲೆ ಕುಕ್ಕರುಗಾಲಿನಲ್ಲಿ ಬಾಗಿ ಕುಳಿತು ಸೀಮೆಎಣ್ಣೆ ಬುಡ್ಡಿಯ ಮಿಣಿಮಿಣಿ ಬೆಳಕಿನಲ್ಲಿ ಸರಿರಾತ್ರಿ ದಾಟುವವರೆಗೂ ಓದಿಬರೆಯುತ್ತಿದ್ದುದನ್ನು ಅರ್ಥ ಮಾಡಿಸುವುದು ಹೇಗೆ?

ಬೇಕು ಅನಿಸಿದ್ದನ್ನೆಲ್ಲ ಕೊಡಿಸು ಎಂದು ನಡುಪೇಟೆಯಲ್ಲಿ ಮುಷ್ಕರ ಹೂಡುವ ಈ ಮಕ್ಕಳಿಗೆ ತಿಂಗಳಿಗೊಮ್ಮೆಯಾದರೂ ಐದು ಪೈಸೆಯ ಆರೆಂಜ್ ಮಿಠಾಯಿಗೆ ಕಷ್ಟವಿದ್ದ, ಒಂದು ’ಚಂದಮಾಮ’ಕ್ಕಾಗಿ ತಿಂಗಳುಗಟ್ಟಲೆ ಗೋಗರೆಯಬೇಕಿದ್ದ, ಐದು ರೂಪಾಯಿಯ ಇಂಗ್ಲಿಷ್-ಕನ್ನಡ ಪಾಕೆಟ್ ಡಿಕ್ಷನರಿಗಾಗಿ ಇಡೀ ವರ್ಷ ಅಪ್ಪನಿಗೆ ದುಂಬಾಲುಬಿದ್ದ ದಿನಗಳನ್ನು ಅರ್ಥ ಮಾಡಿಸುವುದು ಹೇಗೆ? ಮನೆ ಬಾಗಿಲು ದಾಟಿದರೆ ಕಾರು ಏರುವ ಈ ಮಕ್ಕಳಿಗೆ ಹತ್ತು ಸೀಟಿನ ಗುಜರಿ ಜೀಪಿನಲ್ಲಿ ನಲ್ವತ್ತು ಜನ ನೇತಾಡಿಕೊಂಡು ಮಾಡುತ್ತಿದ್ದ ಪಯಣಗಳನ್ನು, ಎಲ್ಲ ಊರುಗಳಿಂದಲೂ ತಿರಸ್ಕೃತವಾಗಿ ಬಂದು ಕೊನೆಗೆ ನಮ್ಮೂರಿನ ರಸ್ತೆಗಳನ್ನು ಆಶ್ರಯಿಸಿಕೊಳ್ಳುತ್ತಿದ್ದ ಗ್ರಾಮಾಂತರ ಸಾರಿಗೆಯ ಬಸ್ಸುಗಳನ್ನು ಅರ್ಥ ಮಾಡಿಸುವುದು ಹೇಗೆ?

ನೀವೀಗ ಕೇಳಬಹುದು - ನಾವು ಅನುಭವಿಸಿದ ಕಷ್ಟಕೋಟಲೆಗಳನ್ನೆಲ್ಲ ನಮ್ಮ ಮಕ್ಕಳೂ ಅನುಭವಿಸಬೇಕೇ? ಅಯ್ಯೋ ಹಾಗಾಗುವುದು ಖಂಡಿತಾ ಬೇಡ. ಅವರು ಸುಖವಾಗಿರಲಿ, ಸಂತೋಷವಾಗಿರಲಿ. ಆಗಲೇ ಹೇಳಿದೆ, ಅವರ ನಗು ಮನೆಯ ಬೆಳಕು. ಅದುವೇ ನಮ್ಮ ಬದುಕು. ಅಂತಹ ದಿನಗಳನ್ನೆಲ್ಲ ಮತ್ತೆ ಈ ಮಕ್ಕಳು ಎಂದೂ ಅನುಭವಿಸದಿರಲಿ. ನನ್ನ ಆತಂಕವಿರುವುದು ಅವರು ಸಂತೋಷವಾಗಿರುವುದರ ಬಗ್ಗೆ ಅಲ್ಲ; ಅವರು ಬದುಕಿರುವ ಈ ನಿರಾತಂಕದ ಪ್ರಪಂಚ ಬದುಕಿನ ನಿಜವಾದ ಸ್ವಾರಸ್ಯದಿಂದ ಅವರನ್ನು ದೂರವಿಟ್ಟಿರುವ ಬಗ್ಗೆ.

ನನ್ನ ಸಹೋದ್ಯೋಗಿಯೊಬ್ಬರು ಯವಾಗಲೂ ಹೇಳುತ್ತಿರುತ್ತಾರೆ: ನಮ್ಮ ನಮ್ಮ ಬೇರುಗಳನ್ನು ಎಂದಿಗೂ ಮರೆಯಬಾರದು ಸರ್ ಅಂತ. ಹೌದು, ನಾವು ಇಂದು ಏನಾಗಿದ್ದೇವೆ ಅನ್ನುವುದಕ್ಕಿಂತಲೂ ನಿನ್ನೆ ಏನಾಗಿದ್ದೆವು ಎಂಬ ಅರಿವು ಜೀವಂತವಾಗಿರುವುದು ಮುಖ್ಯ. ಇಲ್ಲದೇ ಹೋದರೆ ಬದುಕಿನ ಸತ್ವವನ್ನು, ತಳಹದಿಯನ್ನು ಕಳೆದುಕೊಂಡುಬಿಡುತ್ತೇವೆ. ಅದೃಷ್ಟವಶಾತ್ ಆ ಅರಿವು ನಮ್ಮೊಳಗೆ ಭದ್ರವಾಗಿದೆ; ನಮ್ಮ ಮುಂದಿನ ತಲೆಮಾರಿನಲ್ಲೂ ಅದು ಇಷ್ಟೇ ಭದ್ರವಾಗಿ ನೆಲೆಯೂರೀತೇ? ಅದು ಅವರ ಬದುಕನ್ನು ಅರ್ಥಪೂರ್ಣಗೊಳಿಸೀತೇ? ಇದು ನನ್ನ ಆತಂಕ.

ಎಲ್ಲ ಸೌಕರ್ಯಗಳ ನಡುವೆ ಬದುಕುತ್ತಿರುವ ನಮ್ಮ ಮಕ್ಕಳು ಜೋಪಡಿಯೊಳಗಿನ ಬದುಕನ್ನು, ಕಾಲ್ನಡಿಗೆಯ ಆಯಾಸವನ್ನು, ಬಡತನದ ಅವಮಾನಗಳನ್ನು, ದಿನನಿತ್ಯದ ಸಂಕಷ್ಟಗಳನ್ನು ಅರಗಿಸಿಕೊಳ್ಳುವುದು ಬಲು ದುಸ್ತರ. ಇದನ್ನೆಲ್ಲ ಅರ್ಥ ಮಾಡಿಕೊಳ್ಳದ ಬದುಕು ಎಷ್ಟಾದರೂ ಟೊಳ್ಳೇ ಅಲ್ಲವೇ? ಅದಕ್ಕೆ ಜೀವನದ ಅನಿರೀಕ್ಷಿತ ಸ್ಥಿತ್ಯಂತರಗಳನ್ನು ಎದುರಿಸುವ ಗಟ್ಟಿತನ ಬರಲು ಸಾಧ್ಯವೇ? ಜೀವನ ನೂರಕ್ಕೆ ನೂರು ಸುಖದ ಸುಪ್ಪತ್ತಿಗೆಯಾಗಿರುವುದು ಸಾಧ್ಯವೇ ಇಲ್ಲ. ಎಲ್ಲರೂ ಒಂದಲ್ಲ ಒಂದು ಹಂತದಲ್ಲಿ ಕಷ್ಟಗಳಿಗೆ, ದುಃಖ ಅವಮಾನ, ಅಸಹಾಯಕತೆಗಳಿಗೆ ಎದೆಯೊಡ್ಡಲೇ ಬೇಕು. ಈ ಮಕ್ಕಳು ಮುಂದೆ ಅಂತಹ ಯಾವುದಾದರೊಂದು ಸನ್ನಿವೇಶಕ್ಕೆ ಮುಖಾಮುಖಿಯಾಗುವ ಸಂದರ್ಭ ಬಂದರೆ ಅದನ್ನು ನಿಭಾಯಿಸುವ ಸ್ಥಿತಪ್ರಜ್ಞತೆ, ಮಾನಸಿಕ ದೃಢತೆ ಅವರಲ್ಲಿದ್ದೀತೇ? ಒಂದು ವೇಳೆ ಇಲ್ಲದೇ ಹೋದರೆ ಅದಕ್ಕೆ ಅವರು ಹೇಗೆ ಪ್ರತಿಕ್ರಿಯಿಸಿಯಾರು? 'ಕ್ರಿಟಿಕಲ್’ ಎನಿಸುವ ಬದುಕಿನ ಕ್ಷಣಗಳಲ್ಲಿ ಅವರು ಕೈಚೆಲ್ಲಿಕುಳಿತರೆ, ಸುಲಭವಾಗಿ ನಿಭಾಯಿಸಬಲ್ಲ ಸನ್ನಿವೇಶಗಳಲ್ಲೂ ಅವರು ಸೋತುಬಿಟ್ಟರೆ ಅದಕ್ಕೆ ನಾವೇ ಜವಾಬ್ದಾರರಾಗುವುದಿಲ್ಲವೇ?

ನಮ್ಮ ಬೇರುಗಳನ್ನು ಮರೆಯದಿರುವ ಎಚ್ಚರಿಕೆಯ ಜೊತೆಗೆ ನಮ್ಮ ಜೊತೆಗಿನ ಬಿಳಲುಗಳನ್ನೂ ಗಟ್ಟಿಯಾಗಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಅಲ್ಲವೇ?

3 ಕಾಮೆಂಟ್‌ಗಳು:

rukminimalanisarga.blogspot.com ಹೇಳಿದರು...

ನಿಮ್ಮ ಈ ಪ್ರಶ್ನೆಗಳಿಗೆನಮ್ಮ ಎಕೈಕ ಉತ್ತರ ಹೌದು. ಅದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವ ಕೆಲಸ ತಪ್ಪದೇ ಮಕ್ಕಳ ಪೋಷಕರೇ ಮಾಡಬೇಕು!
ಮಾಲಾ

Unknown ಹೇಳಿದರು...

ಸಿಬಂತಿಯಣ್ನ, ಒಂದೊಳ್ಳೆ ಬರಹ ಒಳ್ಳೆಯ ಕಳಕಳಿ ವ್ಯಕ್ತವಾಗಿದೆ.
ಈಶ್ವರಚಂದ್ರ

Unknown ಹೇಳಿದರು...

ಸಿಬಂತಿಯಣ್ಣ,
ಒಂದೊಳ್ಳೆ ಬರಹ, ಒಳ್ಳೆಯ ಕಾಳಜಿ ವ್ಯಕ್ತವಾಗಿದೆ.
ಈಶ್ವರಚಂದ್ರ