ಗುರುವಾರ, ಮೇ 8, 2014

ಅಭಿವೃದ್ಧಿ ಬಂಡಿಯ ಕಟ್ಟಕಡೆಯ ಪ್ರಯಾಣಿಕರು

('ಪ್ರಜಾವಾಣಿ'ಯ 'ಸಂಗತ' ಅಂಕಣದಲ್ಲಿ ಮಾರ್ಚ್ 28, 2014ರಂದು ಪ್ರಕಟವಾದ ಲೇಖನ)

ವಿದ್ಯಾರ್ಥಿಯೊಬ್ಬನ ಅರ್ಧಪುಟದ ಬರೆಹದಿಂದ ಒಂದು ಗಂಟೆಯ ಚರ್ಚೆ ತೆರೆದುಕೊಳ್ಳುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನಿಮ್ಮನಿಮ್ಮ ಹಳ್ಳಿಗಳ ಯಾವುದಾದರೊಂದು ಪ್ರಮುಖ ಸಮಸ್ಯೆಯ ಬಗ್ಗೆ ಅರ್ಧರ್ಧ ಪುಟ ಬರೆದುಕೊಂಡು ಬನ್ನಿ ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದೆ. ಅವರ ಬರವಣಿಗೆಯನ್ನು ತಿದ್ದುವುದಷ್ಟೇ ನನ್ನ ಸದ್ಯದ ಉದ್ದೇಶವಾಗಿತ್ತು. ಕುಡಿಯುವ ನೀರಿನ ಸಮಸ್ಯೆಯಿಂದ ತೊಡಗಿ ಚಿರತೆ ಹಾವಳಿಯವರೆಗೆ ಹತ್ತಾರು ಸಮಸ್ಯೆಗಳು ನನ್ನ ಮೇಜಿನ ಮೇಲೇರಿ ಕುಳಿತಿದ್ದವು. ಒಂದೊಂದನ್ನೇ ಓದಿ ತಿದ್ದುಪಡಿ ಸೂಚಿಸುತ್ತಾ ಅವಶ್ಯವಿದ್ದ ಕಡೆ ಮರುಬರವಣಿಗೆ ಮಾಡಿ 'ಹೀಗೆ ಬರೆದರೆ ಒಳ್ಳೆಯದು’ ಎಂದು ಓದಿಹೇಳುತ್ತಿದ್ದೆ.

ಅಚಾನಕ್ಕಾಗಿ ಒಂದು ಬರೆಹ ನನ್ನ ಗಮನ ಸೆಳೆಯಿತು. ದೂರದ ಜಿಲ್ಲೆಯಿಂದ ಬಂದು ಹಾಸ್ಟೆಲಿನಲ್ಲಿದ್ದ ಒಬ್ಬ ಹುಡುಗ ಪಕ್ಕದ ಹಳ್ಳಿಗೆ ಹೋಗಿ ಒಂದು ದಿನ ಸುತ್ತಾಡಿ ಅರ್ಧಪುಟ ಬರೆದುಕೊಂಡುಬಂದಿದ್ದ. ಬೇರೆಯ ಬರೆಹಗಳಿಗಿಂತ ಅದು ವಿಭಿನ್ನವಾಗಿತ್ತು. 'ಅದರಲ್ಲಿ ಬರೆದಿರೋದನ್ನು ನೀನೇ ಎಲ್ಲರಿಗೂ ಎರಡು ನಿಮಿಷದಲ್ಲಿ ಹೇಳಿಬಿಡಪ್ಪ’ ಎಂದೆ. ಅವನು ಚೆನ್ನಾಗಿಯೇ ಹೇಳಿದ. ಮೇಲ್ನೋಟಕ್ಕೆ ಅದು ಅಂತಹ ಸಂಕೀರ್ಣವಾದ ಸಮಸ್ಯೆ ಅಲ್ಲ. ಬಹುತೇಕ ಹಳ್ಳಿಗಳಲ್ಲಿ ಕಾಣಸಿಗಬಹುದಾದ ಶೌಚಾಲಯದ ಸಮಸ್ಯೆ. ಆದರೆ ಅದು ಅಷ್ಟಕ್ಕೇ ಸೀಮಿತವಲ್ಲ ಎನಿಸಿತು.

ಆ ಹಳ್ಳಿಯ ಬಹುತೇಕ ಮನೆಗಳಲ್ಲಿ ಟಿವಿ ಇದೆ. ಅನೇಕರಲ್ಲಿ ಸ್ವಂತ ವಾಹನವೂ ಇದೆ. ಆದರೆ ಹೆಚ್ಚಿನ ಮನೆಗಳಲ್ಲಿ ಶೌಚಾಲಯವೇ ಇಲ್ಲ. 'ಯಾಕೆ, ಆ ಹಳ್ಳಿ ಜನರು ತುಂಬ ಬಡವರೇ?’ ನಾನು ಕೇಳಿದೆ. 'ಇಲ್ಲ ಅಷ್ಟೊಂದು ಬಡವರೇನಲ್ಲ. ಅವರಿಗೆಲ್ಲ ಸಾಕಷ್ಟು ಜಮೀನು ಇದೆ’ ಎಂದ ಆ ವಿದ್ಯಾರ್ಥಿ. 'ಸರ್ಕಾರದ ಶೌಚಾಲಯ ಯೋಜನೆ ಇನ್ನೂ ಆ ಹಳ್ಳಿ ತಲುಪಿಲ್ಲವೇ?’ ಉಳಿದ ಹುಡುಗರೇ ಅವನನ್ನು ಕೇಳಿದರು. 'ಯೋಜನೆ ಆರಂಭವಾಗಿ ಇಷ್ಟು ವರ್ಷವಾಗಿ ಇದೊಂದು ಹಳ್ಳಿ ಬಾಕಿಯಾಗಿರಲು ಸಾಧ್ಯವಿಲ್ಲ ಅಲ್ಲವೇ?’ ನಾನೂ ದನಿಸೇರಿಸಿದೆ. 'ಯೋಜನೆ ತಲುಪದಿರುವುದು ಸಮಸ್ಯೆ ಅಲ್ಲ. ಊರಿನವರೇ ಶೌಚಾಲಯ ಕಟ್ಟಿಕೊಳ್ಳುತ್ತಿಲ್ಲ’ ಆತ ಹೇಳಿದ. 'ಅರೆ, ಚೆನ್ನಾಗಿದೆಯಲ್ಲ! ಜನರು ಬಡವರಲ್ಲ. ಯೋಜನೆಯ ಬಗ್ಗೆ ತಿಳಿದಿದೆ. ಇನ್ನೇನು ಸಮಸ್ಯೆ? ನೀನು ಅವರನ್ನೇ ಕೇಳಬೇಕಿತ್ತು’ ನಾನು ಮತ್ತೆ ಹೇಳಿದೆ. 'ಅದನ್ನೆಲ್ಲ ಹೇಗೆ ಕೇಳುವುದು ಸರ್?’ ಅವನು ಒಂದಿಷ್ಟು ಮುಜುಗರದಿಂದ ಕೇಳಿದ. ತರಗತಿಯಲ್ಲಿ ನಗು.

'ನನಗೆ ಗೊತ್ತು ಸಾರ್. ನಾನು ಹೇಳುತ್ತೇನೆ. ನಾನು ಆ ಹಳ್ಳಿಯ ಪಕ್ಕದಿಂದಲೇ ಬರುತ್ತೇನೆ’ ಎಂದು ಅಷ್ಟರಲ್ಲಿ ಎದ್ದುನಿಂತ ಇನ್ನೊಬ್ಬ ವಿದ್ಯಾರ್ಥಿ. ಎಲ್ಲರ ಕುತೂಹಲ ಅವನ ಕಡೆಗೆ. 'ಆ ಹಳ್ಳಿಯ ಬಹುತೇಕರು ಒಳ್ಳೇ ಅನುಕೂಲವಂತರೇ. ಎಲ್ಲರಿಗೂ ಏನಿಲ್ಲವೆಂದರೂ ಐದಾರು ಎಕರೆ ಜಮೀನಿದೆ. ಆದರೆ ಟಾಯ್ಲೆಟ್ ಕಟ್ಟಿಕೊಳ್ಳುವುದಕ್ಕೆ ಅವರೇ ತಯಾರಿಲ್ಲ’ ಎಂದು ನಿಲ್ಲಿಸಿದ. 'ತಯಾರಿಲ್ಲ ಎಂದರೆ? ಮನಸ್ಸಿಲ್ಲವೇ?’ ಮತ್ತೆ ಪ್ರಶ್ನೆ. 'ಅವರಿಗೆ ಇಷ್ಟ ಇಲ್ಲ ಸಾರ್. ನಮಗೆ ಇಷ್ಟು ದೊಡ್ಡ ಜಮೀನಿರುವಾಗ ಟಾಯ್ಲೆಟ್ ಏಕೆ ಎಂಬ ಪ್ರಶ್ನೆ ಅವರದ್ದು. ಅವರು ಅಗತ್ಯವಿದ್ದಾಗೆಲ್ಲ ಜಮೀನಿನ ಯಾವುದಾದರೊಂದು ಮೂಲೆಗೆ ಓಡುತ್ತಾರೆ...’ ಅವನು ವಿವರಿಸಿದ. ತರಗತಿಯಲ್ಲಿ ಮತ್ತೆ ಘೊಳ್ಳನೆ ನಗು.

ಇದು ನಗುವ ವಿಷಯ ಅಲ್ಲ ಕಣ್ರೋ ಎಂದು ನಾನು ಗಂಭೀರನಾದೆ. ಆಮೇಲೆ ತರಗತಿ ಮುಗಿಯುವವರೆಗೂ ಅದೇ ಚರ್ಚೆ ಮುಂದುವರಿಯಿತು. ಅಭಿವೃದ್ಧಿಗೆ ಸಂಬಂಧಪಟ್ಟಂತೆ ಎಂತಹ ದೊಡ್ಡದೊಂದು ಸಮಸ್ಯೆ ಇನ್ನೂ ನಮ್ಮೆದುರು ಹಾಗೆಯೇ ಉಳಿದುಕೊಂಡಿದೆ ಎನಿಸಿತು. ನಮ್ಮಲ್ಲಿ ಯೋಜನೆಗಳಿಗೆ ಕೊರತೆಯಿಲ್ಲ. ವರ್ಷದಿಂದ ವರ್ಷಕ್ಕೆ ಅವುಗಳ ಸಂಖ್ಯೆ ಏರುತ್ತಲೇ ಇದೆ. ಗಾತ್ರ ಹಿಗ್ಗುತ್ತಲೇ ಇದೆ. ಹಣಕ್ಕೆ ಕೊರತೆಯಿಲ್ಲ. ಬಾಯಿ ತೆರೆದರೆ ಕೋಟಿಗಳಲ್ಲೇ ಮಾತಾಡುತ್ತವೆ ನಮ್ಮ ಸರ್ಕಾರಗಳು. ಅಂಕಿಅಂಶಗಳ ಆಧಾರದಲ್ಲಿ ಪ್ರಗತಿ ಪರಿಶೀಲನೆ ನಡೆಯುತ್ತದೆ. ಆ ಜಿಲ್ಲೆಗೆ, ಈ ಹಳ್ಳಿಗೆ ಇಷ್ಟು ಯೋಜನೆ, ಇಷ್ಟಿಷ್ಟು ಹಣ ಮಂಜೂರಾಗಿದೆ ಎಂಬ ಲೆಕ್ಕಾಚಾರವೂ ಸಿಗುತ್ತದೆ. ಈ ಯೋಜನೆಗಳು ಜನರಿಗೆ ತಲುಪುವಲ್ಲಿ ಆಗುತ್ತಿರುವ ಲೋಪ, ಅಧಿಕಾರಿಗಳ ಭ್ರಷ್ಟಾಚಾರ, ಮಧ್ಯವರ್ತಿಗಳ ಕಾಟ ಎಲ್ಲದರ ಬಗೆಗೂ ಚರ್ಚೆಗಳು ನಡೆಯುತ್ತವೆ. ಅವು ವಾಸ್ತವವೇ ಹೌದು. ಆದರೆ ಅಭಿವೃದ್ಧಿಗೆ ಜನರನ್ನು ಸಿದ್ಧಗೊಳಿಸುವ ಅಂಶವೊಂದು ಅನೇಕಬಾರಿ ತೆರೆಮರೆಗೆ ಸರಿದಿರುವುದನ್ನೂ ಗಮನಿಸಬೇಕು.

ದೊಡ್ಡದೊಡ್ಡ ಯೋಜನೆಗಳನ್ನು ಮಂಜೂರು ಮಾಡಿದರೆ ಸಾಲದು, ಎಲ್ಲಕ್ಕಿಂತ ಮೊದಲು ಅವುಗಳನ್ನು ಸ್ವೀಕರಿಸುವ ಮನೋಭೂಮಿಕೆಯನ್ನು ಫಲಾನುಭವಿಗಳಲ್ಲಿ ಸಿದ್ಧಪಡಿಸುವುದು ಮುಖ್ಯ ಎಂದು ಅಭಿವೃದ್ಧಿ ಚಿಂತಕರು ಆಗಾಗ್ಗೆ ಹೇಳುತ್ತಲೇ ಬಂದಿದ್ದಾರೆ. ಅಭಿವೃದ್ಧಿ ಅಧ್ಯಯನದಲ್ಲಿ 'ಆವಿಷ್ಕಾರದ ಪ್ರಸರಣೆ’ (Diffusion of Innovations) ಪರಿಕಲ್ಪನೆಯನ್ನು ಬಳಕೆಗೆ ತಂದ ಪ್ರಸಿದ್ಧ ಸಂವಹನ ತಜ್ಞ ಎವರೆಟ್ ರೋಜರ‍್ಸ್ ಪ್ರಕಾರ, ಯಾವುದೇ ಹೊಸ ಕಲ್ಪನೆ ಮತ್ತು ತಂತ್ರಜ್ಞಾನವನ್ನು ಜನರು ಅಳವಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಜಾಗೃತಿ, ಆಸಕ್ತಿ, ಮೌಲ್ಯಮಾಪನ, ಪ್ರಯೋಗ ಮತ್ತು ಅಳವಡಿಕೆ ಎಂಬ ಐದು ಹಂತಗಳಿವೆ. ಯಾವುದೇ ಯೋಜನೆಯನ್ನೂ ಜನರು ಏಕಾಏಕಿ ಒಪ್ಪಿಕೊಳ್ಳುವುದಿಲ್ಲ. ಅದರ ಕುರಿತು ಅವರು ಒಂದಿಷ್ಟು ತಿಳುವಳಿಕೆ ಹೊಂದಿದ ಮೇಲೆ ಆ ಬಗ್ಗೆ ಆಸಕ್ತಿ ತಳೆದು ಅದರ ಸಾಧಕ ಬಾಧಕಗಳ ಪರಿಶೀಲನೆ ಮಾಡಿ ತೃಪ್ತರಾದ ಬಳಿಕವಷ್ಟೇ ಅದನ್ನು ಸ್ವೀಕರಿಸುತ್ತಾರೆ.

ಹೊಸ ಯೋಜನೆಯೊಂದನ್ನು ಸ್ವೀಕರಿಸುವಲ್ಲಿ ಎಲ್ಲರದ್ದೂ ಒಂದೇ ವೇಗ ಅಲ್ಲ. ಜನರನ್ನು ಆವಿಷ್ಕಾರಪ್ರಿಯರು, ಬೇಗನೆ ಅಳವಡಿಸಿಕೊಳ್ಳುವವರು, ತಡವಾಗಿ ಅಳವಡಿಸಿಕೊಳ್ಳುವವರು, ಮತ್ತು ಮಂದಗಾಮಿಗಳು ಎಂದು ವಿಂಗಡಿಸುತ್ತಾರೆ ರೋಜರ್. ಆವಿಷ್ಕಾರಪ್ರಿಯರು ಯಾವುದೇ ಹೊಸ ಯೋಜನೆಯನ್ನು ತಕ್ಷಣ ಅಳವಡಿಸಿಕೊಳ್ಳುವವರಾದರೆ ಉಳಿದವರು ಒಂದಿಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಅವರ ಬಗ್ಗೆ ಆತಂಕವಿಲ್ಲ. ಅವರು ಇಂದಲ್ಲ ನಾಳೆಯಾದರೂ ಬದಲಾಗುತ್ತಾರೆ. ಸಮಸ್ಯೆಯಿರುವುದು ಮಂದಗಾಮಿಗಳೆಂದು ಕರೆಸಿಕೊಳ್ಳುವವರಲ್ಲಿ. ಅವರು ಹೊಸತನಕ್ಕೆ ತೆರೆದುಕೊಳ್ಳುವಲ್ಲಿ ಕಟ್ಟಕಡೆಯವರು. ಅವರ ಮನಸ್ಸನ್ನು ಹದಗೊಳಿಸುವುದು ಅಭಿವೃದ್ಧಿ ಪ್ರಕ್ರಿಯೆಯ ಅತಿಮಹತ್ವದ ಹೆಜ್ಜೆ.

ಯಾವುದೋ ಒಂದು ಕಾರಣಕ್ಕೆ ಅಭಿವೃದ್ಧಿಯ ಬಂಡಿಯೇರುವುದಕ್ಕೆ ಅವರು ಸಿದ್ಧರಿರುವುದಿಲ್ಲ. ಹಾಗೆಂದು ಅವರನ್ನು ಅಲ್ಲೇ ಬಿಟ್ಟು ಮುಂದಕ್ಕೆ ಸಾಗುವುದರಲ್ಲಿ ಅರ್ಥವಿಲ್ಲ. ಎಲ್ಲರನ್ನೂ ಒಳಗೊಳ್ಳದ ಅಭಿವೃದ್ಧಿ ಅಭಿವೃದ್ಧಿಯೇ ಅಲ್ಲ. ಇದು ಒಂದು ದೇಶದ ಅಥವಾ ಒಂದು ಕಾಲದ ಸಮಸ್ಯೆ ಅಲ್ಲ.  ಎಲ್ಲಾ ಕಾಲದಲ್ಲೂ ಇರುವ ಎಲ್ಲ ಅಭಿವೃದ್ಧಿಶೀಲ ದೇಶಗಳ ಸಂಕೀರ್ಣ ಪರಿಸ್ಥಿತಿ ಇದು. ಒಂದು ಊರಿಗೆ ರಸ್ತೆ, ಶಾಲೆ ಇತ್ಯಾದಿ ಮೂಲಭೂತ ಸೌಕರ್ಯ ಬೇಕು ಮತ್ತು ಅದಕ್ಕೆ ಆ ಊರಿನ ಎಲ್ಲರ ಸಹಕಾರ ಬೇಕು ಎಂದಾಗಲೆಲ್ಲ ರೋಜರ್ ಹೇಳಿದ ವಿವಿಧ ಮನೋಸ್ಥಿತಿಯ ಮಂದಿ ಎದುರಾಗುತ್ತಾರೆ. ಆದರೆ ಒಂದು ಹಂತದಲ್ಲಿ ಅವರೆಲ್ಲ ಬದಲಾಗಲೇಬೇಕಾಗುತ್ತದೆ.

ಈ ದೇಶದ ಅಭಿವೃದ್ಧಿಗೆ ಬಣ್ಣಬಣ್ಣದ ದೊಡ್ಡ ಯೋಜನೆಗಳು, ಕೋಟಿಗಟ್ಟಲೆ ಅನುದಾನ ಸಾಲದು. ಅವುಗಳನ್ನು ಸ್ವೀಕರಿಸುವ ಮನೋಭೂಮಿಕೆ ಎಲ್ಲ ಜನರಲ್ಲೂ ಮೊದಲು ತಯಾರಾಗಬೇಕು. ನಮ್ಮ ನೀತಿನಿರೂಪಕರು ಹಾಗೂ ಯೋಜನೆಗಳ ನಿರ್ಮಾತೃಗಳು ಅಭಿವೃದ್ಧಿ ಯೋಜನೆಗಳಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಜನರ ಮನಸ್ಸನ್ನು ಹದಗೊಳಿಸುವ ಕಾರ್ಯಕ್ಕೂ ನೀಡುವುದೇ ಇಂದಿನ ಅನಿವಾರ್ಯತೆ.


ಕಾಮೆಂಟ್‌ಗಳಿಲ್ಲ: