ಗುರುವಾರ, ಮೇ 8, 2014

ಮತ-'ಮನಿ’ಗಳ ನಡುವೆ ಕೇಳುವುದೇ ಪ್ರಜೆಯ ದನಿ?

(ಮಾರ್ಚ್ 3, 2014ರಂದು 'ವಿಜಯ ಕರ್ನಾಟಕ'ದ ತುಮಕೂರು ಆವೃತ್ತಿಯಲ್ಲಿ ಪ್ರಕಟವಾದ ಲೇಖನ)

ದೇಶ ಮತ್ತೆ ರಾಜಕೀಯದ ಗುಂಗಿಗೆ ಬಿದ್ದಿದೆ. ಮಹಾಸಮರವೇ ಮನೆಯಂಗಳಕ್ಕೆ ಬಂತೇ ಎಂಬಹಾಗೆ ರಾಜಕೀಯ ಪಕ್ಷಗಳೆಲ್ಲ ಎಚ್ಚೆತ್ತು ಕುಳಿತಿವೆ. ನೋಡಿದಲ್ಲೆಲ್ಲ ರ‍್ಯಾಲಿ, ಸಮಾವೇಶ, ಮೆರವಣಿಗೆ, ಆರೋಪ-ಪ್ರತ್ಯಾರೋಪಗಳ ಭರಾಟೆ. ಮಾಧ್ಯಮಗಳ ಚರ್ಚೆಗಳಿಂದ ತೊಡಗಿ ಜಾಹೀರಾತುಗಳವರೆಗೆ ಎಲ್ಲವೂ ಚುನಾವಣೆಯ ಭಾಷೆಯಲ್ಲೇ ಮಾತನಾಡುತ್ತಿವೆ. ಹೌದು, ಮತದಾರ ಮಹಾಪ್ರಭು ಮತ್ತೊಂದು ಸವಾಲಿನೆದುರು ಚಕಿತನಾಗಿ ನಿಂತಿದ್ದಾನೆ. ಇಷ್ಟೊಂದು ಯುದ್ಧಸನ್ನಾಹವನ್ನು ಅವನು ಹಿಂದೆಂದೂ ಕಂಡಿರಲಿಲ್ಲ. ಈ ರಾಜಕೀಯ ಧ್ರುವೀಕರಣ, ಜಾತಿ ಲೆಕ್ಕಾಚಾರ, ದಿನಕ್ಕೊಂದು ಸಮೀಕ್ಷೆ, ಹಣದ ಝಣಝಣಗಳ ನಡುವೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಮೂಲವಾರಸುದಾರನ ದನಿ ನಿಜವಾಗಿಯೂ ಕೇಳಿಸೀತೇ ಎಂಬ ಆತಂಕದಲ್ಲಿ ಅವನು ಮುಳುಗಿದ್ದಾನೆ.

ಆದರೆ ಪ್ರಶ್ನೆಯಿರುವುದು, ಇಂತಹ ಆತಂಕಕ್ಕೆ ಒಳಗಾಗಿರುವ ಒಟ್ಟು ಪ್ರಜ್ಞಾವಂತರ ಸಂಖ್ಯೆ ವಾಸ್ತವವಾಗಿ ಎಷ್ಟು? ಅದನ್ನು ತಕ್ಷಣಕ್ಕೆ ಊಹಿಸಿಕೊಳ್ಳುವುದು ಕಷ್ಟ. ಆದಾಗ್ಯೂ ನಿಸ್ಸಂಶಯವಾಗಿ ಅಂತಹವರ ಸಂಖ್ಯೆ ತೀರಾ ಕಡಿಮೆಯೆಂದು ಹೇಳುವುದಕ್ಕಂತೂ ಯಾವ ಸಮೀಕ್ಷೆಯೂ ಬೇಡ. ಈಚಿನ ವರ್ಷಗಳಲ್ಲಿ ನಡೆಯುತ್ತಿರುವ ಚುನಾವಣೆಗಳ ಆಟಾಟೋಪಗಳನ್ನು ನೋಡಿದರಂತೂ ಪ್ರಜಾಪ್ರಭುತ್ವ, ಶ್ರೀಸಾಮಾನ್ಯನ ಅಧಿಕಾರ, ರಾಜಕೀಯ ಪೌಢಿಮೆ ಇತ್ಯಾದಿಗಳೆಲ್ಲ ಬರೀ ಭಾಷಣದ ಸರಕುಗಳು ಮಾತ್ರ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ.

ಯಾವುದೇ ಚುನಾವಣೆ ಬಂದರೆ ಸಾಕು, ರಾಜಕೀಯ ಪಕ್ಷಗಳ ಮೊದಲ ಗುರಿ ಜನಸಾಮಾನ್ಯರನ್ನು ತಮ್ಮೆಡೆಗೆ ಸೆಳೆದುಕೊಳ್ಳುವುದು. ನಗರ ಪ್ರದೇಶಗಳಲ್ಲಿ ಕೈತುಂಬ ಸಂಬಳ ತೆಗೆದುಕೊಳ್ಳುತ್ತಾ ರಾಜಕೀಯ ವಿಚಾರ ವಿಮರ್ಶೆ ಮಾಡುವ ಬಹುತೇಕ ಜನರು ಮತದಾನದ ದಿನ ಮಾತ್ರ ಸಿನಿಮಾ ಥಿಯೇಟರ್‌ನಲ್ಲಿರುತ್ತಾರೆ ಎಂಬುದು ಎಲ್ಲ ರಾಜಕಾರಣಿಗಳಿಗೂ ಗೊತ್ತು. ಅವರ ಏಕೈಕ ಬೇಟೆ ಗ್ರಾಮಾಂತರ ಪ್ರದೇಶಗಳಲ್ಲಿ ಕೂಲಿನಾಲಿ ಮಾಡಿಯೋ, ಬೇಸಾಯ ಮಾಡಿಯೋ ಬದುಕುವ ಜನಸಾಮಾನ್ಯರ ಓಟಿನ ಮೂಟೆ. ಇದಕ್ಕಾಗಿ ಅವರು ಕಂಡುಕೊಂಡಿರುವ ಬಹುಸುಲಭದ ವಿಧಾನ ಇಂತಹ ಜನಸಾಮಾನ್ಯರನ್ನೇ ಭ್ರಷ್ಟತೆಯ ಕೂಪಕ್ಕೆ ತಳ್ಳುವುದು. ಕೋತಿ ತಾನೂ ಕೆಟ್ಟಿತಲ್ಲದೆ ವನವನ್ನೆಲ್ಲ ಕೆಡಿಸಿತು ಎನ್ನುತ್ತಾರಲ್ಲ, ಹಾಗೆಯೇ ಇದು.

ಚುನಾವಣಾ ರ‍್ಯಾಲಿಗಳಿಗೆ ಬಂದ 'ಬೃಹತ್ ಜನಸ್ತೋಮ’ ಅಲ್ಲಿಂದ ವಾಪಸ್ ಹೊರಡಬೇಕಾದರೆ ತನ್ನಪಾಲಿನ ಬಾಡಿಗೆ ಬಂದಿಲ್ಲವೆಂದು ತಗಾದೆ ತೆಗೆಯುತ್ತದೆ. ಚುನಾವಣೆಯ ದಿನ ಸಮೀಪಿಸುತ್ತಿದ್ದಂತೆ ಗಲ್ಲಿಗಲ್ಲಿಗಳ ಕತ್ತಲಲ್ಲಿ ಕಂತೆಕಂತೆ ಹಣ ಹರಿದಾಡುತ್ತದೆ. ವಾಚು, ಪಂಚೆ, ಸೀರೆ, ಪಾತ್ರೆ ಇತ್ಯಾದಿ ಆಮಿಷಗಳ ವಿಷ ವ್ಯಾಪಿಸುತ್ತದೆ. ಮತದಾರ ಮಹಾಪ್ರಭುವನ್ನು ಮದ್ಯದಲ್ಲಿ ಅದ್ದಿತೆಗೆಯಲು ಎಲ್ಲ ವ್ಯವಸ್ಥೆಯೂ ಎಗ್ಗಿಲ್ಲದೆ ಸಾಗುತ್ತದೆ. ಮತಗಟ್ಟೆಯ ಎದುರೇ ಕಾನೂನು ಕಟ್ಟಳೆಗಳ ಕಣ್ಣಿಗೆ ಬಟ್ಟೆಕಟ್ಟಿ ಚೌಕಾಸಿ ವ್ಯಾಪಾರ ನಡೆಯುತ್ತದೆ; ಮತ್ತು ಇವೆಲ್ಲ ಪತ್ರಿಕೆಗಳಲ್ಲಿ ಟಿವಿಗಳಲ್ಲಿ ಧಾರಾಳವಾಗಿ ವರದಿಯಾಗುತ್ತವೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಈ ಕೃತ್ಯಗಳು ಚುನಾವಣಾ ಅಧಿಕಾರಿಗಳ, ಪೊಲೀಸರ ಹದ್ದಿನಕಣ್ಣಿಗೆ ಮಾತ್ರ ಬೀಳುವುದೇ ಇಲ್ಲ.

ಜನಸಾಮಾನ್ಯರನ್ನು ಭ್ರಷ್ಟರನ್ನಾಗಿಸುವಲ್ಲಿ ರಾಜಕೀಯ ಪಕ್ಷಗಳು ನಾಮುಂದು ತಾಮುಂದು ಎಂಬ ತುರುಸಿಗೆ ಬಿದ್ದಿವೆ. ಹಣದ ಪ್ರಭಾವದ ಎದುರು ಎಲ್ಲ ಬಗೆಯ ಪ್ರಜ್ಞಾವಂತಿಕೆಗಳೂ ಜೀವಕಳೆದುಕೊಳ್ಳುತ್ತವೆ. ಚುನಾವಣೆಯ ದಿನ ಹತ್ತಿರವಾಗುತ್ತಿದ್ದಂತೆ ಸಾಮಾನ್ಯ ಮತದಾರ ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡಬಹುದು ಎಂದು ಯೋಚಿಸುವುದಕ್ಕಿಂತಲೂ ಯಾವ ರಾಜಕೀಯ ಪಕ್ಷದವರಿಂದ ಎಷ್ಟು ಹಣ ಪೀಕಬಹುದೆಂಬ ಲೆಕ್ಕಾಚಾರದಲ್ಲಿ ತೊಡಗುವ ಪರಿಸ್ಥಿತಿ ಬಂದಿದೆ. ಆ ಪಾರ್ಟಿಯವರು ಮನೆಯ ಒಬ್ಬೊಬ್ಬರಿಗೆ ಇಷ್ಟಿಷ್ಟು ಹಣ ಕೊಡುತ್ತಿದ್ದಾರೆ, ನೀವು ಎಷ್ಟು ಕೊಡುತ್ತೀರಿ ಎಂದು ಚುನಾವಣಾ ಪ್ರಚಾರಕ್ಕೆ ಬಂದವರೊಡನೆಯೇ ಚೌಕಾಸಿ ನಡೆಯುತ್ತದೆ. ಮನೆಮನೆಗಳಲ್ಲಿ ಪ್ರತಿದಿನ ಸಂಜೆ ಇಂದಿನ ಒಟ್ಟು ಸಂಗ್ರಹವೆಷ್ಟು ಎಂಬ ಲೆಕ್ಕಚಾರ. ಅಲ್ಲಿ ಅಷ್ಟು ಕೋಟಿ ನಗದು ವಶಪಡಿಸಿಕೊಳ್ಳಲಾಯಿತಂತೆ, ಇಲ್ಲಿ ಇಷ್ಟು ಕೋಟಿ ಜಪ್ತಿ ಮಾಡಲಾಯಿತಂತೆ ಸುದ್ದಿಗಳು ಬರುತ್ತಲೇ ಇರುತ್ತವೆ; ಹಳ್ಳಿಗಳಲ್ಲಿ ಗಲ್ಲಿಗಳಲ್ಲಿ ಗರಿಗರಿ ನೋಟುಗಳು ಓಡಾಡುತ್ತಲೇ ಇರುತ್ತವೆ. ಎಲ್ಲಿಗೆ ಬಂತು ಪ್ರಜಾಪ್ರಭುತ್ವದ ದುರವಸ್ಥೆ?

ಇಲ್ಲಿ ಟೀಕಿಸಬೇಕಿರುವುದು ಯಾರನ್ನು? ಜನಸಾಮಾನ್ಯರ ಮತಗಳನ್ನು ಹಣ ಇತ್ಯಾದಿ ಆಮಿಷಗಳಿಂದ ಕೊಂಡುಕೊಳ್ಳಬಹುದೆಂದು ತೀರ್ಮಾನಿಸಿರುವ ರಾಜಕಾರಣಿಗಳನ್ನೇ? ಚುನಾವಣಾ ಸಮಯದಲ್ಲಾದರೂ ಒಂದಿಷ್ಟು ದುಡಿದುಕೊಳ್ಳೋಣ ಎಂಬ ಮನೋಭಾವಕ್ಕೆ ಬಂದಿರುವ ಜನಸಾಮಾನ್ಯರನ್ನೇ? ಇವುಗಳಿಗೆಲ್ಲ ಕಡಿವಾಣ ಹಾಕಲು ವಿಫಲವಾಗಿರುವ ನಮ್ಮ ಕಾನೂನು ಪರಿಪಾಲಕರನ್ನೇ? ಅಥವಾ ಇವೆಲ್ಲವಕ್ಕೂ ಮೂಲಕಾರಣದಂತಿರುವ ನಮ್ಮ ಕುಲಗೆಟ್ಟ ವ್ಯವಸ್ಥೆಯನ್ನೇ?

ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುವ ಕಾಲ ಬಂದಿದೆ. ದೇಶ ಮತ್ತೊಂದು ಮಹಾಪರ್ವದ ಎದುರು ನಿಂತಿದೆ. ದೇಶವೇನು, ಇಡೀ ಜಗತ್ತೇ ಭಾರತದತ್ತ ಕುತೂಹಲದ ಕಣ್ಣುಗಳಿಂದ ನೋಡುತ್ತಿದೆ. ಇಲ್ಲಿನ ಸಣ್ಣಪುಟ್ಟ ಘಟನೆಗಳೂ ಅಂತಾರಾಷ್ಟ್ರೀಯ ಸುದ್ದಿಯಾಗುತ್ತಿವೆ. ವಿಶ್ವದ ಅನೇಕ ಶ್ರೀಮಂತ ಮತ್ತು ಅಭಿವೃದ್ಧಿಶೀಲ ದೇಶಗಳಿಗೆ ಭಾರತ ಯಾವತ್ತೂ ಆಸಕ್ತಿಯ ಕೇಂದ್ರ. ಈ ಬಾರಿಯ ಲೋಕಸಭಾ ಚುನಾವಣೆಗಂತೂ ಹಿಂದೆಂದೂ ಇಲ್ಲದ ಮಹತ್ವ ಬಂದುಬಿಟ್ಟಿದೆ. ಚುನಾವಣಾ ಅಧಿಸೂಚನೆ ಹೊರಬೀಳುವ ಮುನ್ನವೇ ಎಲ್ಲ ರಾಜಕೀಯ ಪಕ್ಷಗಳೂ ಮಾಡು ಇಲ್ಲವೇ ಮಡಿ ಎಂಬಂತಹ ಯುದ್ಧಸನ್ನಾಹದಲ್ಲಿ ತೊಡಗಿಯಾಗಿದೆ. ಕೆಲವರಂತೂ ತಾವು ಚುನಾವಣೆ ಗೆದ್ದೇಬಿಟ್ಟಿದ್ದೇವೆ ಎಂಬ ಭ್ರಮೆಗೆ ಬಿದ್ದಿದ್ದರೆ, ಒಂದಷ್ಟು ಮಂದಿ ತಾವು ಹೊಸ ಸರ್ಕಾರವನ್ನೇ ರಚಿಸಿಬಿಟ್ಟಿದ್ದೇವೆ ಎಂಬ ಕನಸಿನಲ್ಲಿ ತೇಲಾಡುತ್ತಿದ್ದಾರೆ. ಮತದಾರ ಯಾವ ಕನಸು ಕಾಣುತ್ತಿದ್ದಾನೆ?

ಇದು ಕನಸು ಕಾಣುವ ಕಾಲ ಅಲ್ಲ, ಕನಸಿನಿಂದ ಎಚ್ಚೆತ್ತುಕೊಳ್ಳಬೇಕಾದ ಕಾಲ. ಪ್ರಜಾಪ್ರಭುತ್ವದ ನಿಜವಾದ ಅರ್ಥ ಹೊರಹೊಮ್ಮಬೇಕಾದ ಕಾಲ. ಪ್ರಜೆಯ ಪರಮಾಧಿಕಾರ ಏನೆಂಬುದನ್ನು ಶ್ರುತಪಡಿಸಿಕೊಳ್ಳುವುದಕ್ಕೆ ಇದು ಸಕಾಲ. ಆದರೆ ಈ ಅಂತಃಪ್ರಜ್ಞೆಯನ್ನು ಜಾಗೃತಗೊಳಿಸಬೇಕಾದವರು ಯಾರು? ರಾಜಕೀಯ ಪಕ್ಷಗಳು ಅಥವಾ ನೇತಾರರು ಎಂದು ಉತ್ತರಿಸುವುದು ಅಸಂಬದ್ಧ. ಎಲ್ಲೋ ಒಂದಿಬ್ಬರು ಪ್ರಾಮಾಣಿಕರು ಮರುಭೂಮಿಯ ಓಯಸಿಸ್‌ಗಳಂತೆ ಕಂಡರೂ ಅವರನ್ನು ಅಪ್ರಸ್ತುತರನ್ನಾಗಿಸುವ ಹುನ್ನಾರಗಳೇ ನಮ್ಮಲ್ಲಿ ಹೆಚ್ಚು. ಹಾಗಾದರೆ ಸಂಘಸಂಸ್ಥೆಗಳೇ? ಪ್ರತೀ ಸಂಘಸಂಸ್ಥೆಗೂ ತನ್ನದೇ ಆದ ರಾಜಕೀಯ ಹಿತಾಸಕ್ತಿ. ಅವುಗಳಿಂದ ವಸ್ತುನಿಷ್ಠ ಪ್ರಯತ್ನ ನಿರೀಕ್ಷಿಸುವುದು ಕಷ್ಟ. ನಾವು ಯಾರ ಪರವೂ ಅಲ್ಲ, ಎಲ್ಲ ರಾಜಕೀಯ ಪಿಡುಗುಗಳ ವಿರುದ್ಧವೂ ಜಾಗೃತಿ ಮೂಡಿಸುವವರಿದ್ದೇವೆ ಎಂದು ಹೇಳಿಕೊಳ್ಳುವ ಅನೇಕ ವೇದಿಕೆ, ಸಂಘಟನೆಗಳ ಮೇಲ್ಪದರ ಕೊಂಚ ಕೆರೆದು ನೋಡಿದರೆ ಒಳಗೆ ಮತ್ತದೇ ಕೊಳಕು ರಾಜಕೀಯದ ಹಗಲುವೇಷ. ಹಾಗಾದರೆ ಬುದ್ಧಿಜೀವಿಗಳೇ? ಬುದ್ಧಿಜೀವಿಗಳೆನಿಸಿಕೊಂಡ ಬಹುತೇಕರು ಗೆದ್ದೆತ್ತಿನ ಬಾಲ ಹಿಡಿಯುವವರೆಂದು ಲೋಕಕ್ಕೇ ಗೊತ್ತು. ಅವರು ಕಡೇಪಕ್ಷ ಮತದಾನ ಕೇಂದ್ರಕ್ಕಾದರೂ ಹೋಗುತ್ತಾರೆಯೇ ಎಂಬ ಬಗ್ಗೆ ಅನುಮಾನವಿದೆ.

ಎಲ್ಲಕ್ಕಿಂತ ದೊಡ್ಡದು ಶ್ರೀಸಾಮಾನ್ಯನ ಮನಃಸಾಕ್ಷಿ. ಜಾತಿ ಮತ್ತು ಹಣದ ಲೆಕ್ಕಾಚಾರಗಳಿಂದ ಕೊಳೆತು ನಾರುತ್ತಿರುವ ಈ ದೇಶದ ರಾಜಕೀಯದಲ್ಲಿ ಏನಾದರೂ ಬದಲಾವಣೆ ತರುವುದು ಸಾಧ್ಯವಿದ್ದರೆ ಅದು ಪ್ರಜಾಪ್ರಭುವಿನ ಅಂತಃಸಾಕ್ಷಿಯಿಂದ ಮಾತ್ರ ಸಾಧ್ಯ. ಆತ ಮನಸ್ಸು ಮಾಡಿದರೆ ನಿಜಕ್ಕೂ ಇಲ್ಲೊಂದು ಹೊಸ ಮಹಾಪರ್ವ ಘಟಿಸೀತು. ಎಷ್ಟಾದರೂ ಬಾಗಿಲು ಅರ್ಧ ಮುಚ್ಚಿದೆ ಎಂದುಕೊಳ್ಳುವುದಕ್ಕಿಂತ ಅದು ಅರ್ಧ ತೆರೆದುಕೊಂಡಿದೆ ಎಂದು ಭಾವಿಸುವುದೇ ಒಳ್ಳೆಯದಲ್ಲವೇ?

ಕಾಮೆಂಟ್‌ಗಳಿಲ್ಲ: