ಶುಕ್ರವಾರ, ಮೇ 9, 2014

ತನ್ನಂತೆಯೇ ಪರರ ಬಗೆದೊಡೆ...?

('ವಿಜಯ ಕರ್ನಾಟಕ'ದ ತುಮಕೂರು ಆವೃತ್ತಿಯಲ್ಲಿ ಏಪ್ರಿಲ್ 3, 2014ರಂದು ಪ್ರಕಟವಾದ ಲೇಖನ)

ನಗರಜೀವನದ ಮೋಹಕ ಜಾಲದಲ್ಲಿ ಸಿಲುಕಿಕೊಳ್ಳುತ್ತಾ ನಮ್ಮ ಸಂವೇದನಾಶೀಲತೆ ಎಷ್ಟೊಂದು ಬರಡಾಗಿಹೋಗುತ್ತಿದೆ ಎಂದು ಯೋಚಿಸಿದರೆ ಆಶ್ಚರ್ಯವೂ ಆತಂಕವೂ ಆಗುತ್ತದೆ. ದಿನನಿತ್ಯ ನಮ್ಮ ಕಣ್ಣೆದುರೇ ನಡೆಯುವ ಹತ್ತಾರು ವರ್ತನೆ, ಘಟನೆಗಳನ್ನು ಸುಮ್ಮನೇ ಅವಲೋಕಿಸಿ ನೋಡಿ; ತಮ್ಮೊಂದಿಗೆ ಬದುಕುತ್ತಿರುವ ಇತರ ಮಂದಿಯ ಬಗ್ಗೆ ಅನೇಕರು ಎಷ್ಟೊಂದು ಅಗೌರವ ಮತ್ತು ನಿರ್ಲಕ್ಷ್ಯ ಹೊಂದಿದ್ದಾರೆ ಎಂಬುದು ಅರ್ಥವಾಗುತ್ತದೆ.

ಆತ ತನ್ನ ಮನೆಯೆದುರು 'ನೋ ಪಾರ್ಕಿಂಗ್’ ಎಂದು ದೊಡ್ಡ ಬೋರ್ಡು ನೇತುಹಾಕಿದ್ದಾನೆ. ಎಲ್ಲೋ ಹೋಗಿ ವಾಪಸ್ ಬಂದವನು ತನ್ನ ಬೈಕನ್ನು ಪಕ್ಕದ ಮನೆಯದ್ದೋ ಎದುರಿನ ಮನೆಯದ್ದೋ ಗೇಟಿನೆದುರು ನಿಲ್ಲಿಸಿ ತನ್ನ ಮನೆಯೊಳಗೆ ನಡೆದುಬಿಡುತ್ತಾನೆ. ಆ ಮನೆಯವನು ಗೇಟು ತೆರೆದಾಗೆಲ್ಲ ಅಡ್ಡಲಾಗಿ ನಿಂತು ತೊಂದರೆ ಉಂಟುಮಾಡುತ್ತಿರುತ್ತದೆ ಇವನ ವಾಹನ. ಇನ್ನು ಪರಿಚಯದವರ, ಸ್ನೇಹಿತರ, ಬಂಧುಗಳ ಮನೆಗೆಂದು ಬರುವವರ ಕಥೆ ಕೇಳುವುದೇ ಬೇಡ. ಅವರಿಗೆ ತಾವು ಭೇಟಿನೀಡುವ ಮನೆಯ ಹೊರತಾಗಿ ಆ ವಠಾರದಲ್ಲಿ ಬೇರೆ ಮನುಷ್ಯ ಜೀವಿಗಳೂ ವಾಸಿಸುತ್ತಿವೆ ಎಂಬ ಗೊಡವೆಯೇ ಇರುವುದಿಲ್ಲ.

ಬಡಾವಣೆಯ ಜನರೆಲ್ಲ ರಾತ್ರಿ ತಮ್ಮ ಮನೆಗಳ ಬಾಗಿಲು ಭದ್ರಪಡಿಸಿಕೊಂಡು ಒಳಸೇರಿಕೊಂಡರು ಎಂದು ಖಚಿತವಾಗುತ್ತಿದ್ದಂತೆ, ಇನ್ನೊಬ್ಬ ತನ್ನ ಮುದ್ದಿನ ನಾಯಿಯೊಂದಿಗೆ ಹೊರಬೀಳುತ್ತಾನೆ. ಅದು ಆ ನಾಯಿಯ ಬಹಿರ್ದೆಸೆಯ ಅವಧಿಯಂತೆ! ನಾಯಿಯನ್ನು ಕರೆದುಕೊಂಡು ಆತ ಪಕ್ಕದ ಬೀದಿಯಲ್ಲಿ ಒಂದು ಸುತ್ತು ವಾಕಿಂಗ್ ಮುಗಿಸುತ್ತಿದ್ದಂತೆ ನಾಯಿ ಅಲ್ಲಲ್ಲಿ ತನ್ನ ದೇಹ ಹಗುರ ಮಾಡಿಕೊಂಡು ತನ್ನ ಬಗೆಗಿನ ಒಡೆಯನ ಕಾಳಜಿಗೆ ಮುಗುಳ್ನಗುತ್ತಾ ಅವನನ್ನು ಹಿಂಬಾಲಿಸುತ್ತಿರುತ್ತದೆ. ಆದರೆ ತನ್ನ ಮನೆಯೆದುರು ಇನ್ಯಾರೂ ನಾಯಿಯೊಂದಿಗೆ ನಿಂತಿಲ್ಲ ಎಂಬುದನ್ನು ಆಗಿಂದಾಗ್ಗೆ ಖಚಿತಪಡಿಸಿಕೊಳ್ಳುತ್ತಾನೆ ಈ ಭೂಪ.

ಟ್ಯಾಂಕ್‌ನಲ್ಲಿ ನೀರು ಖಾಲಿಯಾಗಿದೆಯೆಂದು ಆ ಮನೆಯವರು ಅದೆಷ್ಟು ಹೊತ್ತಿಗೆ ಪಂಪ್ ಚಲಾಯಿಸಿದ್ದಾರೋ ಗೊತ್ತಿಲ್ಲ, ಟ್ಯಾಂಕ್ ತುಂಬಿಹೋಗಿ ಟೆರೇಸ್‌ನಿಂದ ನೀರು ಧಾರಾಕಾರವಾಗಿ ಸುರಿದು ಹೋಗುತ್ತಿದೆ. ಪಕ್ಕದ ಮನೆಯವನೋ ಎದುರು ಮನೆಯವನೋ ಎಚ್ಚೆತ್ತುಕೊಂಡು ತಮ್ಮ ಸಹವಾಸಿಯ ದಿನನಿತ್ಯದ ಪರಿಪಾಠದ ಬಗ್ಗೆ ಮರುಕಪಟ್ಟುಕೊಂಡು ಹೋಗಿ ಬಾಗಿಲು ತಟ್ಟುತ್ತಾನೆ: 'ಪಂಪ್ ಆಫ್ ಮಾಡ್ರೀ... ಆವಾಗಿನಿಂದ ನೀರು ಹೋಗುತ್ತಲೇ ಇದೆ’. ಮನೆಯೊಳಗಿಂದ ಒಂದು ವ್ಯಕ್ತಿ ನಿಧಾನವಾಗಿ ಹೊರಬಂದು ಏನೂ ಆಗಿಲ್ಲವೇನೋ ಎಂಬಂತೆ ಪಂಪ್ ನಿಲ್ಲಿಸಿ ಮರಳುತ್ತದೆ. ಜೊತೆಗೆ ಬಾಗಿಲು ಬಡಿದವನ ಕಡೆಗೊಂದು ಅಸಹನೆಯ ನೋಟ ಬೇರೆ. ಹೀಗೆ ಬಾಗಿಲು ಬಡಿದದ್ದರಿಂದ ಅವರ ಸ್ನಾನ, ಪೂಜೆ, ಧ್ಯಾನ ಊಟ-ತಿಂಡಿ, ಟಿವಿ ವೀಕ್ಷಣೆಗಳಿಗೆ ಅಡ್ಡಿಯಾಯಿತೆಂದು ಅವನಿಗೆ ಸಿಟ್ಟು.

ಬೆಳಗ್ಗೆ ಅಥವಾ ಸಂಜೆ ಹೊತ್ತು ನಗರದ ರಸ್ತೆಯಲ್ಲಿ ವಾಹನಗಳ ದಟ್ಟಣೆ. ಎರಡು, ಮೂರು, ನಾಲ್ಕು ಚಕ್ರದ ವಾಹನಗಳು ಒತ್ತೊತ್ತಾಗಿ ಚಲಿಸುತ್ತಿರುತ್ತವೆ. ಮಾರುಕಟ್ಟೆಗೆ ಬಂದ ಗೃಹಿಣಿ ಆತಂಕದಿಂದ ತನ್ನ ದ್ವಿಚಕ್ರವಾಹನ ಚಲಾಯಿಸುತ್ತಾ ಬೇಗ ಮನೆಸೇರುವ ತವಕದಲ್ಲಿದ್ದಾಳೆ. ಇದ್ದಕ್ಕಿದ್ದಂತೆ ಒಂದು ಬೈಕೋ ರಿಕ್ಷಾವೋ ಎಡಗಡೆಯಿಂದ ಭರ್ರೆಂದು ಓವರ್‌ಟೇಕ್ ಮಾಡಿ ಮುಂದಕ್ಕೋಡಿರುತ್ತದೆ. ಈಕೆ ಕಕ್ಕಾಬಿಕ್ಕಿಯಾಗಿ ಹೇಗೋ ಸುಧಾರಿಸಿಕೊಂಡು ಮುಂದಕ್ಕೆ ಸಾಗುತ್ತಿರಬೇಕಾದರೆ ಎದುರಿನ ಆಟೋದವನು ಯಾವುದೇ ಮುನ್ಸೂಚನೆಯಿಲ್ಲದೆ ಸರ್ರೆಂದು ಎಡಕ್ಕೋ ಬಲಕ್ಕೋ ತಿರುಗಿರುತ್ತಾನೆ. ಅದೇ ಸಮಯಕ್ಕೇ ನಮ್ಮ ಹೈಟೆಕ್ ಕಾಲೇಜುಗಳ ಶ್ರೀಮಂತ ಹುಡುಗ-ಹುಡುಗಿಯರು ಅದ್ಯಾವುದೋ ಯುದ್ಧವನ್ನು ಗೆದ್ದ ಉತ್ಸಾಹದಲ್ಲಿ ಕನಿಷ್ಠ ನೂರು ಕಿ.ಮೀ. ವೇಗದಲ್ಲಿ ಭಯಂಕರ ಸದ್ದಿನೊಂದಿಗೆ ಬೈಕುಗಳನ್ನು ಓಡಿಸುತ್ತಾ ಕ್ಷಣಾರ್ಧದಲ್ಲಿ ಮಿಂಚಿ ಮರೆಯಾಗುತ್ತಾರೆ. ಸದ್ಯ ಜೀವವಾದರೂ ಉಳಿಯಿತಲ್ಲ ಎಂಬ ಸಮಾಧಾನದೊಂದಿಗೆ ಬಡಪಾಯಿ ಗೃಹಿಣಿ ಮನೆಸೇರುತ್ತಾಳೆ.

ಹೊಸ ಮನೆಯೊಂದರ ನಿರ್ಮಾಣ ಶುರುವಾಗಿದೆ ಎಂದರೆ ಆ ಬೀದಿಯವರಿಗೆ ಮುಂದಿನ ಒಂದು ವರ್ಷ ಸಂಕಷ್ಟ ಕಾದಿದೆ ಎಂದೇ ಅರ್ಥ. ನಿರ್ಮಾಣ ಕಾರ್ಯ ನಡೆಯುವ ಅಷ್ಟೂ ಸಮಯ ಅಲ್ಲಿ ವಾಹನ ಹಾಗೂ ಜನಸಂಚಾರದ ದುರವಸ್ಥೆ ಹೇಳತೀರದು. ಸಿಮೆಂಟು, ಮಣ್ಣು, ಕಲ್ಲು, ಕಬ್ಬಿಣ ಇತ್ಯಾದಿ ನಿರ್ಮಾಣ ಸಾಮಗ್ರಿಗಳು ಹೇಗೆಂದಹಾಗೆ ರಸ್ತೆಯ ಉದ್ದಗಲದಲ್ಲಿ ಅಲಂಕೃತವಾಗಿರುತ್ತವೆ. ಅವುಗಳಿಂದ ಅಕ್ಕಪಕ್ಕದ ಮನೆಮಂದಿಗಾಗಲೀ ದಾರಿಯಲ್ಲಿ ನಡೆದಾಡುವವರಿಗಾಗಲೀ ಆಗುವ ತೊಂದರೆ ಬಗ್ಗೆ ಅದರ ಉಸ್ತುವಾರಿಗಳಿಗೆ ಗೊಡವೆಯೇ ಇರುವುದಿಲ್ಲ.

ಇನ್ನು ಕೆಲವರ ಮನೆಯಲ್ಲಿ ಏನಾದರೂ ಸಮಾರಂಭಗಳಿದ್ದರಂತೂ ಎರಡು ಮೂರು ದಿನ ಆ ಬೀದಿಯಲ್ಲಿ ಸಾರ್ವಜನಿಕ ಸಂಚಾರ ಬಂದ್. ತಮ್ಮ ಮನೆಯೆದುರು ಉಚಿತವಾಗಿ ಬಿದ್ದುಕೊಂಡಿರುವ ರಸ್ತೆಯನ್ನೂ ಬಿಡದೆ ಅವರ ಶಾಮಿಯಾನ ಹೆಮ್ಮೆಯಿಂದ ಎದ್ದುನಿಂತಿರುತ್ತದೆ. ಯಾವನಾದರೊಬ್ಬ ಈ ವಿಷಯ ಗೊತ್ತಿಲ್ಲದೆ ಅದೇ ದಾರಿಯಾಗಿ ವಾಹನ ಸಮೇತ ಬಂದನೋ, ಅವನ ಗ್ರಹಚಾರ ಕೆಟ್ಟಿದೆ ಎಂದೇ ಅರ್ಥ. ಭೂಮಿ ಮೇಲೆ ಇದೊಂದೇ ರೋಡ್ ಇರೋದಾ? ಪಕ್ಕದ ರೋಡಲ್ಲಿ ಹೋಗ್ರೀ ಎಂಬ ದಬಾವಣೆ ಸಿಗದಿದ್ದರೆ ಅದೇ ಅವನ ಪುಣ್ಯ.

ಬಡಾವಣೆ ನಡುವೆ ಖಾಲಿ ಸೈಟುಗಳಿದ್ದರಂತೂ ಕೇಳುವುದೇ ಬೇಡ, ಅವೆಲ್ಲ ಆ ಪ್ರದೇಶದವರ ಅಘೋಷಿತ ಡಂಪಿಂಗ್ ಯಾರ್ಡ್‌ಗಳು. ಸುತ್ತಮುತ್ತಲಿನ ಬೀದಿಯವರೆಲ್ಲ ಇಷ್ಟಬಂದಂತೆ ತಮ್ಮ ಮನೆಯ ಅಷ್ಟೂ ಕಸವನ್ನು ಅಲ್ಲಿಗೆಸೆದು ಏನೂ ಆಗಲಿಲ್ಲವೆಂಬಂತೆ ಮುಂದೆ ಸಾಗುತ್ತಿರುತ್ತಾರೆ. ಆ ಸೈಟು ಹಂದಿಹಿಂಡುಗಳ, ಬೀದಿನಾಯಿಗಳ ಆಟದ ಮೈದಾನವಾಗಿ ಅಕ್ಕಪಕ್ಕದ ಮನೆಮಂದಿಗೆ ಸದಾ ನರಕದರ್ಶನ ಮಾಡುತ್ತಿರುತ್ತದೆ. ತಮ್ಮ ಮನೆಯಲ್ಲಿ ಮಾಡಿದ ಅಡುಗೆಯೇನಾದರೂ ಉಳಿದ್ದರೆ ಅದನ್ನು ಬೀಡಾಡಿ ಹಸುಗಳೋ ನಾಯಿಗಳೋ ತಿಂದು ಹೊಟ್ಟೆಹೊರೆದುಕೊಳ್ಳಲಿ ಎಂದು ಭಾವಿಸುವ ಉದಾರಿಗಳೇನೋ ಇರುತ್ತಾರೆ. ಆದರೆ ಅವುಗಳನ್ನು ಅವರೆಂದೂ ತಮ್ಮ ಮನೆಯೆದುರು ಸುರಿಯುವುದಿಲ್ಲ. ಪಕ್ಕದ ಅಥವಾ ಎದುರು ಮನೆಯ ಬದಿಗೆ ಸುರಿದು ಪುಣ್ಯಸಂಪಾದನೆ ಮಾಡುತ್ತಾರೆ. ಅವರ ವಿಶಾಲಹೃದಯದಲ್ಲಿ ಪಕ್ಕದ ಮನೆಯವರಿಗೆ ಸ್ಥಾನ ಇಲ್ಲ!

ಹೌದು, ಈ ಬಗೆಯ ನೂರೆಂಟು ನೋಟಗಳು ನಮ್ಮ ದಿನನಿತ್ಯದ ಬದುಕಿನ ಭಾಗಗಳೇ ಆಗಿಬಿಟ್ಟಿವೆ. ಇಂತಹ ದೃಶ್ಯಗಳೆಲ್ಲ ಪ್ರಜ್ಞಾಪೂರ್ವಕವಾಗಿ ಘಟಿಸುತ್ತವೆಯೋ ಅಥವಾ ಜನ ತಮಗರಿವಿಲ್ಲದಂತೆ ಅಚಾತುರ್ಯಗಳನ್ನು ಎಸಗಿರುತ್ತಾರೋ ಎಂದು ಅಚ್ಚರಿಯಾಗುತ್ತದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ನಡೆಯುವುದು ಅಚಾತುರ್ಯ ಅಲ್ಲ, ಪ್ರಜ್ಞಾಪೂರ್ವಕ ಅನಾಗರಿಕ ಕೃತ್ಯಗಳೇ.

ನಗರ ಜೀವನದ ಧಾವಂತದಲ್ಲಿ ನಾವೆಷ್ಟು ಸ್ವಾರ್ಥಿಗಳಾತ್ತಿದ್ದೇವೆ! ನಾನು, ನನ್ನದು, ನನ್ನ ಮನೆ, ಸಂಸಾರ ಇತ್ಯಾದಿ ಭಾವನೆಗಳ ನಡುವೆ ನಾವೊಂದು ಸಹಬಾಳ್ವೆಯ ಸಮಾಜದಲ್ಲಿ ಬದುಕುತ್ತಿದ್ದೇವೆಂದು ಮರೆತೇಬಿಡುತ್ತಿದ್ದೇವೆ. ನಾವು ನಿಲ್ಲಿಸುವ ವಾಹನ, ಸುಮ್ಮನೇ ತೆರೆದಿಟ್ಟು ಹೋಗುವ ಗೇಟು, ಎಸೆಯುವ ಕಸ, ಗಡಿಬಿಡಿಯಲ್ಲಿ ಓಡಿಸುವ ವಾಹನ, ನಮ್ಮ ನಾಯಿಯ ಶೌಚ, ಬೇಕಾಬಿಟ್ಟಿ ಹರಿದುಹೋಗುವ ಅಮೂಲ್ಯ ನೀರು, ರಸ್ತೆಯಲ್ಲಿ ಹಾಕುವ ಟೆಂಟು, ಜಗಳಗಂಟತನಗಳು ನಮ್ಮೊಂದಿಗಿನ ಸಾವಿರಾರು ಮಂದಿಯ ಬದುಕನ್ನು ಪ್ರತಿದಿನವೂ ಅಸಹನೀಯಗೊಳಿಸೀತು ಎಂಬ ಕಲ್ಪನೆಯೇ ಇರುವುದಿಲ್ಲ. ಬದುಕಿನಲ್ಲಿ ಅಂತಿಮವಾಗಿ ಬೆಲೆ ಪಡೆದುಕೊಳ್ಳುವುದು ನಮ್ಮ ಸಂವೇದನಾಶೀಲತೆಯೇ ಹೊರತು ವಿದ್ಯಾರ್ಹತೆ, ಪಾಂಡಿತ್ಯ, ಉದ್ಯೋಗ, ಸ್ಥಾನಮಾನ ಅಥವಾ ಸಂಪತ್ತು ಖಂಡಿತ ಅಲ್ಲ.

ಕಾಮೆಂಟ್‌ಗಳಿಲ್ಲ: