ಬುಧವಾರ, ಮೇ 7, 2014

ಯಶಸ್ಸು, ಆದರ್ಶ ಮತ್ತು ಪರೀಕ್ಷೆಯಲ್ಲಿ ಅಂಕಗಳಿಸುವ ಉತ್ತರ

('ಉದಯವಾಣಿ' ದೈನಿಕದ ಸಂಪಾದಕೀಯ ಪುಟದಲ್ಲಿ ಫೆಬ್ರುವರಿ 27, 2014ರಂದು ಪ್ರಕಟವಾದ ಲೇಖನ)

ಅನೇಕ ಸಲ ಹೀಗಾಗುವುದುಂಟು. ಪ್ರಶ್ನೆಯೊಂದಕ್ಕೆ ಉತ್ತರ ಹುಡುಕುತ್ತಾ ಹೊರಟರೆ ಸಿಗುವುದು ಉತ್ತರವಲ್ಲ, ಇನ್ನೂ ಒಂದಷ್ಟು ಪ್ರಶ್ನೆಗಳು. ಆ ಪ್ರಶ್ನೆಗಳ ಬೆನ್ನು ಹತ್ತಿದರೆ ಒಂದೊಂದರ ತುದಿಗೂ ಇನ್ನೂ ಅದೆಷ್ಟೋ ಪ್ರಶ್ನೆಗಳ ಮೂಟೆ. ಹಾಗಾದರೆ ಉತ್ತರ ಎಲ್ಲಿರುತ್ತದೆ? ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇರುವುದಿಲ್ಲವೇ?

ಸದ್ಯಕ್ಕೆ ನಮ್ಮ ಮುಂದಿರುವುದು ಅಂತಹ ಗಹನವಾದ ಪ್ರಶ್ನೆಯೇನಲ್ಲ. ತುಂಬ ಸರಳವಾದ, ಆದರೆ ಜನ ಆಗಾಗ್ಗೆ ತಮ್ಮೊಳಗೂ ಬೇರೆಯವರಿಗೂ ಕೇಳುವ ಪ್ರಶ್ನೆ. ಅಂದಹಾಗೆ ಈ ಪ್ರಶ್ನೆಯನ್ನು ಇತ್ತೀಚೆಗೆ ಒಂದು ಪರೀಕ್ಷೆಯಲ್ಲೂ ಕೇಳಿಬಿಟ್ಟರು. ಸಾಮಾನ್ಯ ಪರೀಕ್ಷೆ ಅಲ್ಲ. ವಿಶ್ವವಿದ್ಯಾನಿಲಯ/ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆ. ನಾಳೆ ಪ್ರಶ್ನೆಗಳನ್ನು ಕೇಳಬೇಕಿರುವ ಮೇಸ್ಟ್ರುಗಳಾಗಹೊರಟವರಿಗೂ ಒಂದು ಪ್ರಶ್ನೆ!

ಆ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೆಯನ್ನೇ ಯಥಾವತ್ತು ತೆಗೆದುಕೊಳ್ಳೋಣ. ಅದು ಬಹುಆಯ್ಕೆಯ ವಸ್ತುನಿಷ್ಠ ಮಾದರಿಯ ಪ್ರಶ್ನೆ. ’ಅತ್ಯಂತ ಸೂಕ್ತವಾದ ಆಯ್ಕೆಯಿಂದ ಕೆಳಗಿನ ವಾಕ್ಯವನ್ನು ಪೂರ್ಣಗೊಳಿಸಿ: ಬದುಕಿನಲ್ಲಿ ಯಶಸ್ಸನ್ನು ಗಳಿಸಲು ಒಬ್ಬನು............ (ಎ) ತುಂಬ ಹಣ ಹೊಂದಿರಬೇಕು (ಬಿ) ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರಬೇಕು (ಸಿ) ಹಗಲು ರಾತ್ರಿ ಕಷ್ಟಪಟ್ಟು ದುಡಿಯಬೇಕು  (ಡಿ) ಪ್ರಾಮಾಣಿಕ ಮತ್ತು ನಿಜವಾದ ವ್ಯಕ್ತಿಯಾಗಿರಬೇಕು’.

ಪ್ರಶ್ನೆ ನನ್ನಲ್ಲೂ ಕುತೂಹಲ ಮೂಡಿಸಿತು. ಪ್ರತಿದಿನ ನೂರು ಮಕ್ಕಳಿಗೆ ಪಾಠ ಹೇಳುವ ಅಧ್ಯಾಪಕನಾಗಿ ನಾನು ಮೊದಲಿನ ಎರಡು ಆಯ್ಕೆಗಳನ್ನು ಗುರುತಿಸುವ ಸಾಧ್ಯತೆ ಕಡಿಮೆ. ಹೆಚ್ಚೆಂದರೆ ಕೊನೆಯ ಎರಡು ಉತ್ತರಗಳ ಪೈಕಿ ಯಾವುದು ಹೆಚ್ಚು ಸೂಕ್ತ ಎಂದು ಚಿಂತಿಸಬಲ್ಲೆ. ಆದರೆ ಮರುಕ್ಷಣದಲ್ಲೇ ನಾನು ಯೋಚನೆಗೆ ಬಿದ್ದೆ. ಯಾವುದು ನಿಜವಾದ ಉತ್ತರ? ನಮಗೆ ಆದರ್ಶ ಮುಖ್ಯವೋ? ವಾಸ್ತವ ಮುಖ್ಯವೋ? ವಾಸ್ತವಕ್ಕೆ ಹತ್ತಿರವಲ್ಲದ ಆದರ್ಶಕ್ಕೆ ಬೆಲೆಯಿದೆಯೇ? ಆದರ್ಶದ ಪಾಯವಿಲ್ಲದ ವಾಸ್ತವಕ್ಕೆ ಭವಿಷ್ಯವಿದೆಯೇ?

ಒಂದು ಫೇಸ್ ಬುಕ್ ಸಮೀಕ್ಷೆ

ಈ ಪ್ರಶ್ನೆಯನ್ನು ಒಂದಷ್ಟು ಸ್ನೇಹಿತರಿಗೆ ಕೇಳಬೇಕೆನ್ನಿಸಿತು. ಒಂದು ವಿಷಯವನ್ನು ದೊಡ್ಡ ಸ್ನೇಹಿತಸಮೂಹದೊಂದಿಗೆ ಏಕಕಾಲಕ್ಕೆ ಹಂಚಿಕೊಳ್ಳಬೇಕಾದರೆ ಅದು ಈಗ ಫೇಸ್‌ಬುಕ್‌ನಲ್ಲಿ ಅಲ್ಲದೆ ಇನ್ನೆಲ್ಲಿ ಸಾಧ್ಯ? ನಾನು ಪ್ರಶ್ನೆ ಹಾಗೂ ಆಯ್ಕೆಗಳನ್ನು ಯಥಾವತ್ತಾಗಿ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದೆ. ನಿರೀಕ್ಷೆಯಂತೆಯೇ ಒಬ್ಬೊಬ್ಬರು ಒಂದು ಉತ್ತರ ನೀಡಿದರು. ಆದರೆ ಅವರು ಬರೀ ಉತ್ತರಗಳನ್ನಷ್ಟೇ ನೀಡಿರಲಿಲ್ಲ. ಅವರ ಉತ್ತರಗಳಲ್ಲಿ ಇನ್ನಷ್ಟು ಪ್ರಶ್ನೆಗಳು ಅಡಗಿಕೂತಿದ್ದವು.

ಕೆಲವರು ’ಎ’ ಮತ್ತು ’ಬಿ’ಯ ಮಿಶ್ರಣ ಎಂದರೆ ಇನ್ನು ಕೆಲವರು ’ಸಿ’ ಮತ್ತು ’ಡಿ’ಯ ಮಿಶ್ರಣ ಎಂದರು. ಅಂದರೆ ’ಬದುಕಿನಲ್ಲಿ ಯಶಸ್ಸನ್ನು ಗಳಿಸಲು ಒಬ್ಬನು ತುಂಬ ಹಣ ಹೊಂದಿರಬೇಕು ಮತ್ತು ಪ್ರಭಾವಿ ವ್ಯಕ್ತಿಗಳ ಸಂಪರ್ಕ ಹೊಂದಿರಬೇಕು’ ಎಂಬುದು ಕೆಲವರ ಉತ್ತರವಾದರೆ, ಇನ್ನು ಕೆಲವರ ಉತ್ತರ ’ಬದುಕಿನಲ್ಲಿ ಯಶಸ್ಸನ್ನು ಗಳಿಸಲು ಹಗಲು ರಾತ್ರಿ ಕಷ್ಟಪಟ್ಟು ದುಡಿಯಬೇಕು ಮತ್ತು ಪ್ರಾಮಾಣಿಕ ವ್ಯಕ್ತಿಯಾಗಿರಬೇಕು’ ಎಂಬುದಾಗಿತ್ತು.

’ಮೊದಲು ಯಶಸ್ಸು ಎಂದರೇನು ಎಂದು ವಿವರಿಸಿದರೆ ಉತ್ತರಿಸಲು ಪ್ರಯತ್ನಿಸಬಹುದು’ ಎಂದರು ಒಬ್ಬರು. ’ತುಂಬ ಪ್ರಸಿದ್ಧ ಪ್ರೊಫೆಸರ್ ಒಬ್ಬರು ಈ ಪ್ರಶ್ನೆಯನ್ನು ರೂಪಿಸಿರುವುದಂತೂ ನಿಸ್ಸಂಶಯ’ ಎಂದು ಮುಗುಳ್ನಕ್ಕರು ಇನ್ನೊಬ್ಬರು. ’ಅಲ್ಲಿ ನಾಲ್ಕೇ ಆಯ್ಕೆಗಳಿದ್ದುದು ನಿಜವೇ?’ ಎಂದು ಪ್ರಶ್ನಿಸಿದರು ಮತ್ತೊಬ್ಬರು. ’ಹಗಲು ರಾತ್ರಿ ಪ್ರಾಮಾಣಿಕವಾಗಿ ದುಡಿದ ಹಣದಿಂದ ಪ್ರಭಾವಿಯಾದ ’ಆಧಾರ್’ ಕಾರ್ಡ್ ಹೊಂದಿರಬೇಕು’ ಎಂದು ಮಾರ್ಮಿಕ ಉತ್ತರ ನೀಡಿದರು ನಾನು ತುಂಬ ಮೆಚ್ಚುವ ಹಿರಿಯ ಸಾಹಿತಿಗಳೊಬ್ಬರು.

ರಾಷ್ಟ್ರರಾಜಕಾರಣದಲ್ಲಿ ಸುದ್ದಿಯಲ್ಲಿರುವ ಯುವನಾಯಕನೊಬ್ಬನ ಉತ್ತರವಾದರೆ ಹೀಗಿರಬಹುದೆಂದು ಒಬ್ಬರು ತಮಾಷೆ ಮಾಡಿದರು: ’ಮೊದಲು ನಾವು ಯಶಸ್ಸು ಏನೆಂದು ತಿಳಿದುಕೊಳ್ಳಬೇಕು. ವ್ಯವಸ್ಥೆಯಲ್ಲಿ ಎಲ್ಲರೂ ಒಳಗೊಂಡು, ಆ ವ್ಯವಸ್ಥೆಯನ್ನು ಬದಲಿಸಿ, ಮಹಿಳಾ ಸಬಲೀಕರಣವಾದರೆ, ಅದನ್ನು ಆರ್‌ಟಿಐ ಮೂಲಕ ತಿಳಿದುಕೊಳ್ಳುವಂತಾದರೆ... ಆದನ್ನು ಯಶಸ್ಸು ಎನ್ನಬಹುದು’.

’ಪರೀಕ್ಷೆಯಲ್ಲಿ ಅಂಕ ಗಳಿಸಿಕೊಡುವ ಉತ್ತರ ’ಸಿ’ ಮತ್ತು ’ಡಿ’ ಎಂದರು ಒಬ್ಬರು ಹಳೇ ಸಹೋದ್ಯೋಗಿ. ಅದನ್ನೇ ಇನ್ನಷ್ಟು ಸ್ಪಷ್ಟವಾಗಿ, ’ಹಿಂದಿನ ಕಾಲಕ್ಕಾದರೆ ’ಸಿ’ ಮತ್ತು ’ಡಿ’, ಇಂದಿಗಾದರೆ ಮೊದಲನೆಯದೆರಡೂ ಸರಿಯೇ’ ಎಂದರು ಇನ್ನೊಬ್ಬ ಸ್ನೇಹಿತೆ. ’ಈ ಪ್ರಶ್ನೆಯೇ ಅಸಮರ್ಪಕವಾಗಿದೆ’ ಎಂದ ನನ್ನೊಬ್ಬ ಸಹಪಾಠಿ. ನಿಮ್ಮ ನಾಲ್ಕು ಉತ್ತರಗಳಲ್ಲಿ ’ತಾಳ್ಮೆ’ಯೇ ಕಾಣೆಯಾಗಿದೆ. ಬದುಕಿನಲ್ಲಿ ಯಶಸ್ಸನ್ನು ಪಡೆಯಲಿಕ್ಕೆ ಮುಖ್ಯವಾಗಿ ಬೇಕಿರುವುದು ತಾಳ್ಮೆ. ಈ ಪದವನ್ನು ನಾಲ್ಕನೇ ಉತ್ತರಕ್ಕೆ ಸೇರಿಸಿದರೆ, ಅದು ಸರಿಯೆಂದು ಕಾಣಿಸುತ್ತದೆ ಎಂದ ಮತ್ತೊಬ್ಬ ಗೆಳೆಯ.

ಯಾವುದು ವಾಸ್ತವ, ಯಾವುದು ಆದರ್ಶ?

ನಾನು ಮತ್ತೆ ಯೋಚನೆಗೆ ಬಿದ್ದೆ. ಪ್ರಶ್ನೆಗೆ ಪ್ರತಿಕ್ರಿಯಿಸಿದವರಲ್ಲಿ ಎಂಜಿನಿಯರುಗಳಿದ್ದರು, ಸಾಹಿತಿಗಳಿದ್ದರು, ಪತ್ರಕರ್ತರಿದ್ದರು, ಅಧ್ಯಾಪಕರುಗಳಿದ್ದರು, ವಿದ್ಯಾರ್ಥಿಗಳಿದ್ದರು, ಕಂಪೆನಿ ಉದ್ಯೋಗಿಗಳಿದ್ದರು. ಸಹಜವಾಗಿಯೇ ಒಬ್ಬೊಬ್ಬರಿಗೆ ಒಂದೊಂದು ಅಭಿಪ್ರಾಯವಿರುತ್ತದೆ. ಅಲ್ಲದೆ ಅವರೆಲ್ಲ ವಾಸ್ತವವನ್ನು ಅರ್ಥ ಮಾಡಿಕೊಳ್ಳಬಲ್ಲಷ್ಟು ವಿವೇಚನಾಶೀಲರೇ. ನನ್ನ ಮನಸ್ಸಿನಲ್ಲಿದ್ದ ಪ್ರಶ್ನೆಯಿಷ್ಟೇ: ಯಾವ ಉತ್ತರ ಹೆಚ್ಚು ಸರಿ? ಯಾವುದು ವಾಸ್ತವ, ಯಾವುದು ಆದರ್ಶ?

ಪರೀಕ್ಷೆಯಲ್ಲಿ ಅಂಕ ಗಳಿಸಿಕೊಡುವ ಉತ್ತರ ’ಸಿ’ ಮತ್ತು ’ಡಿ’ ಎಂಬ ನನ್ನ ಸ್ನೇಹಿತರೊಬ್ಬರ ಪ್ರತಿಕ್ರಿಯೆಯಲ್ಲಿ, ಪರೀಕ್ಷೆಯಲ್ಲಿ ಅಂಕ ಗಳಿಸಿಕೊಡುವ ಉತ್ತರವೇ ಬೇರೆ, ಜೀವನದ ಪರೀಕ್ಷೆಯಲ್ಲಿ ಅಂಕ ಗಳಿಸಿಕೊಡುವ ಉತ್ತರವೇ ಬೇರೆ ಎಂಬ ಸೂಚನೆಯಿದೆ. ಅದು ಬಹುಜನರ ಅಭಿಪ್ರಾಯ ಕೂಡ. ಆದರ್ಶಕ್ಕೂ ನಿಜಜೀವನಕ್ಕೂ ವ್ಯತ್ಯಾಸವಿದೆ ಎಂಬ ಮಾತನ್ನು ನಾವು ಯಾವಾಗಲೂ ಕೇಳುತ್ತೇವೆ. ಹಾಗಾದರೆ ಆದರ್ಶಗಳೆಲ್ಲ ನಿರರ್ಥಕವೇ? ನಿಜಜೀವನದಲ್ಲಿ ಪ್ರಯೋಜನಕ್ಕೆ ಬರದ ಆದರ್ಶಗಳನ್ನು ಇಟ್ಟಕೊಂಡು ಏನು ಮಾಡುವುದು?

ಆದರ್ಶವೆಂದರೆ ಮೇಸ್ಟ್ರುಗಳು ತರಗತಿಗಳಲ್ಲಿ ಚೆಲ್ಲಬೇಕಾಗಿರುವ ಕಸದ ಬುಟ್ಟಿಯೇ? ವಿದ್ಯಾರ್ಥಿಗಳು ಅಂಕಗಳಿಸುವುದಕ್ಕಾಗಿಯಷ್ಟೇ ಪರೀಕ್ಷೆಯಲ್ಲಿ ಬರೆಯಬೇಕಾದ ಅವಾಸ್ತವ ಉತ್ತರವೇ? ಅಧ್ಯಾಪಕ ತನ್ನ ವಿದ್ಯಾರ್ಥಿಗಳಿಗೆ ಆದರ್ಶವನ್ನು ಬೋಧಿಸಬೇಕೇ? ಅಥವಾ ಈ ಆದರ್ಶಗಳಿಂದ ವಾಸ್ತವ ಜಗತ್ತಿನಲ್ಲಿ ಏನನ್ನೂ ಸಾಧಿಸಲಾಗದು ಎಂದು ಮನವರಿಕೆ ಮಾಡಿಕೊಡಬೇಕೆ? ಮೇಸ್ಟ್ರು ಹೇಳಿದ ಆದರ್ಶಗಳನ್ನೇ ಯಥಾವತ್ತಾಗಿ ಅಳವಡಿಸಿಕೊಂಡು ಮುಂದುವರಿದ ವಿದ್ಯಾರ್ಥಿ ಕೊನೆಗೊಂದು ದಿನ ವಾಸ್ತವದ ಕಟುಸತ್ಯಗಳ ಎದುರು ಒಂದು ನಿಷ್ಪ್ರಯೋಜಕ ವಸ್ತುವಾಗಿ ಉಳಿಯಲಾರನೇ? ಆಗ ಅವನು ಯಾರನ್ನು ದೂರಬೇಕು? ಒಂದು ವೇಳೆ ಆದರ್ಶಗಳೆಲ್ಲ ಪುಸ್ತಕಗಳಿಗೆ ಲಾಯಕ್ಕು ಎಂದಾದರೆ ಶ್ರೇಷ್ಠ ಆದರ್ಶಗಳನ್ನು ಬಾಳಿಬದುಕಿದ ಎಷ್ಟೋ ಮಂದಿಯನ್ನು ನಮ್ಮ ಇತಿಹಾಸ ಮಹಾತ್ಮರು ಎಂದೇಕೆ ಗುರುತಿಸುತ್ತದೆ? ’ಹಿಂದಿನ ಕಾಲಕ್ಕಾದರೆ ’ಸಿ’ ಮತ್ತು ’ಡಿ’, ಇಂದಿಗಾದರೆ ಮೊದಲನೆಯದೆರಡೂ ಸರಿಯೇ’ ಎಂಬ ಪ್ರತಿಕ್ರಿಯೆ ಇದಕ್ಕೆ ಉತ್ತರವೇ?

ಕಾಲಕ್ಕೆ ತಕ್ಕಂತೆ ಕೋಲ

ಕಾಲ ಬದಲಾಗಿದೆ ಎಂಬುದು ನಿಜ. ನೈತಿಕತೆ ಹುಚ್ಚರ ಕೊನೆಯ ಆಶ್ರಯತಾಣ ಎಂಬವರ ಕಾಲ ಇದು. ಪ್ರಾಮಾಣಿಕವಾಗಿ ಕಷ್ಟಪಟ್ಟು ದುಡಿದವನು ಕೊನೆಯವರೆಗೂ ಅಜ್ಞಾತನಾಗಿಯೇ ಉಳಿಯಬೇಕಾದ, ಮಾನವೀಯ ಸಂಬಂಧಗಳಿಗೆ ಬರಗಾಲವಿರುವ ಜಗತ್ತು ಇದು. ಆದರೆ ಈ ಕಾಲ ಎಲ್ಲಿಯವರೆಗೆ? ಬದಲಾವಣೆ ಜಗದ ನಿಯಮ ಎಂದಾದರೆ ಅದಕ್ಕೆ ಅಂತ್ಯವಿಲ್ಲ. ಬದಲಾವಣೆಯೇ ಪ್ರಪಂಚದಲ್ಲಿ ಹೆಚ್ಚು ಶಾಶ್ವತವಂತೆ. ಆದರ್ಶಗಳ ಯುಗ ಹೋಗಿ ವಾಸ್ತವದ ಯುಗ ಬಂದಿದೆ ಎಂದಾದರೆ ಈ ಕಟುವಾಸ್ತವಗಳ ಯುಗಹೋಗಿ ಆದರ್ಶಗಳಿಗೂ ಬೆಲೆಕೊಡುವ ಯುಗ ಮತ್ತೆ ಬರಲಾರದೇ? ಇತಿಹಾಸ ಮರುಕಳಿಸುತ್ತದೆಯೇ? ಆದರ್ಶಗಳಿಲ್ಲದೆ ಬದುಕಲಾರೆವು ಎಂಬ ಕಾಲ ಮತ್ತೆ ಬರುತ್ತದೆಯೇ? ಅಥವಾ ಅದೊಂದು ಭ್ರಮೆಯೇ? ಸದ್ಯಕ್ಕೆ ಕಾಲಕ್ಕೆ ತಕ್ಕಂತೆ ಕೋಲ ಎಂಬಂತೆ ನಾವಿರುವುದು ಜಾಣತನವೇ? ಈ ’ಕಾಲ’ವನ್ನು ರೂಪಿಸಿದವರು ಯಾರು? ನಾವೇ ಅಲ್ಲವೇ? ಹಾಗಾದರೆ ಅದನ್ನು ಬದಲಾಯಿಸಲು ಸಾಧ್ಯವಿಲ್ಲವೇ?

ಕೊನೆಗೂ ಆ ಪ್ರಶ್ನೆ ಹಾಗೆಯೇ ಉಳಿದುಕೊಂಡು ನಮ್ಮನ್ನು ಕಾಡುತ್ತದೆ. ಜೀವನದಲ್ಲಿ ಯಶಸ್ಸು ಗಳಿಸಲು ಏನು ಮಾಡಬೇಕು? ಬಹುಶಃ ಸ್ನೇಹಿತರೊಬ್ಬರು ಹೇಳಿರುವಂತೆ ಮೊದಲು ಯಶಸ್ಸು ಎಂದರೆ ಏನೆಂಬುದನ್ನು ವ್ಯಾಖ್ಯಾನಿಸಿಕೊಳ್ಳಬೇಕು, ಅಲ್ಲವೇ?

ಕಾಮೆಂಟ್‌ಗಳಿಲ್ಲ: