ಗುರುವಾರ, ಮೇ 8, 2014

ಐಡಿಯಾ ಇದ್ರೆ ಮೀಡಿಯಾ!

('ವಿಜಯವಾಣಿ'ಯ 'ಮಸ್ತ್' ಪುರವಣಿಯಲ್ಲಿ ಮಾರ್ಚ್ 12, 2014ರಂದು ಪ್ರಕಟವಾದ ಲೇಖನ)

ಮೀಡಿಯಾ ಇಂದು ಹೊಸತಲೆಮಾರಿನ ಹೃದಯ ಮಿಡಿತ. ಸಾವಿರಾರು ಹುಡುಗ ಹುಡುಗಿಯರ ಕನಸಿನ ಲೋಕ. ಹಲವರಿಗೆ ಅದೊಂದು ಆಕರ್ಷಣೆಯಾದರೆ ಕೆಲವರಿಗೆ ಅದು ಬದುಕಿನ ಮಹತ್ವಾಕಾಂಕ್ಷೆ. ಇನ್ನೂ ಕೆಲವರಿಗೆ ಅದೊಂದು ದೊಡ್ಡ ಕ್ರೇಜ್. ಪತ್ರಕರ್ತರಾಗುವ ಮೂಲಕ ಸಮಾಜಕ್ಕೆ ತಮ್ಮಿಂದೇನಾದರೂ ಕೊಡಬಹುದೆಂಬ ಹುಮ್ಮಸ್ಸು ಎಷ್ಟು ಮಂದಿಯಲ್ಲಿದೆಯೋ ಗೊತ್ತಿಲ್ಲ; ಆದರೆ ಮಾಧ್ಯಮಜಗತ್ತಿಗೊಮ್ಮೆ ಪ್ರವೇಶ ಪಡೆದುಬಿಟ್ಟರೆ ಸಾಕು, ಅಲ್ಲಿಗೆ ಜೀವನ ಸಾರ್ಥಕ ಎಂದು ಕನಸು ಕಾಣುವ ಯುವಕರ ಸಂಖ್ಯೆಯಂತೂ ದೊಡ್ಡದಾಗಿಯೇ ಇದೆ.

ಜೀವನದ ಒಂದೊಂದು ಕ್ಷಣವನ್ನೂ ಮಾಧ್ಯಮಗಳೇ ಆವರಿಸಿಕೊಂಡಿರುವ ಈ ಹೊತ್ತು ಅವುಗಳ ಬಗ್ಗೆ ಅಂತಹದೊಂದು ಸೆಳೆತ ಹುಟ್ಟಿಕೊಳ್ಳುವುದರಲ್ಲಿ ಅತಿಶಯವೇನೂ ಇಲ್ಲ. ಅದರಲ್ಲೂ ಭವಿಷ್ಯದ ಬಗ್ಗೆ ಸ್ವತಂತ್ರವಾಗಿ ಮತ್ತು ವಿಭಿನ್ನವಾಗಿ ಯೋಚಿಸಬಲ್ಲ ಇಂದಿನ ಯುವಕ ಯುವತಿಯರು ಮಾಧ್ಯಮಗಳ ಬಗ್ಗೆ ಅಪಾರ ಆಕರ್ಷಣೆ ಬೆಳೆಸಿಕೊಳ್ಳುವುದು ಸಹಜವಾಗಿಯೇ ಇದೆ.

ಮೀಡಿಯಾ ಕ್ರೇಜ್‌ನ ಹಿಂದೆ...

ಆದರೆ ಮೀಡಿಯಾ ಎಂದರೆ ಟಿವಿ ವಾಹಿನಿಗಳು, ಅದರಲ್ಲೂ ಇಪ್ಪತ್ನಾಲ್ಕು ಗಂಟೆ ಸುದ್ದಿಬಿತ್ತರಿಸುವ ನ್ಯೂಸ್ ಚಾನೆಲ್‌ಗಳು, ಎಂಬುದೇ ಮಾಧ್ಯಮ ಲೋಕದ ಕನಸಿಗೆ ಬಿದ್ದಿರುವ ಬಹುತೇಕ ಹೊಸಹುಡುಗರ ಕಲ್ಪನೆ. ಮೀಡಿಯಾಕ್ಕೆ ಪ್ರವೇಶ ಪಡೆಯುವುದೆಂದರೆ ಸುದ್ದಿವಾಹಿನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಎಂದೇ ಮಾಧ್ಯಮ ಕೋರ್ಸುಗಳನ್ನು ಆರಿಸಿಕೊಳ್ಳುತ್ತಿರುವ ಹೆಚ್ಚಿನ ವಿದ್ಯಾರ್ಥಿಗಳ ನಂಬಿಕೆ. ಟಿವಿ ಸ್ಕ್ರೀನಿನ ಒಳಗೆ ನಿಂತು ಪಟಪಟನೆ ಸುದ್ದಿ ಹೇಳುವ ಯುವ ಆಂಕರ್‌ಗಳು, ಚಾನೆಲ್‌ನ  ಲೋಗೋ ಹಿಡಿದುಕೊಂಡು ಘಟನೆಯ ಸ್ಥಳದಿಂದಲೇ ಬ್ರೇಕಿಂಗ್ ನ್ಯೂಸ್ ಕೊಡುವ ವರದಿಗಾರರು, ತಮ್ಮೆದುರು ಕೂತ ರಾಜಕಾರಣಿಯ ಬೆವರಿಳಿಯುವಂತೆ ಒಂದಾದಮೇಲೊಂದು ಪ್ರಶ್ನೆ ಎಸೆದು ನೇರಾನೇರ ಸಂದರ್ಶನ ಮಾಡುವ ಮಾತಿನ ಮಲ್ಲರು... ಇವರನ್ನೆಲ್ಲ ನೋಡುತ್ತ ತಾವೂ ಒಂದು ದಿನ ಅಂತಹದೇ ಕೆಲಸ ಮಾಡಿ ಶೈನ್ ಆಗಬೇಕು ಎಂಬ ಕನಸು ಈ ಹುಡುಗರದ್ದು. ಸಿನಿಮಾಗಳ ಗ್ಲಾಮರ್ ಸುದ್ದಿವಾಹಿನಿಗಳಲ್ಲಿ ಇದೆಯೆಂದು ಅನಿಸಿರುವುದೇ ಇವರ ಕ್ರೇಜ್ ಹಿಂದಿನ ರಹಸ್ಯ.

ಪತ್ರಿಕೋದ್ಯಮ ಕೋರ್ಸಿಗೆ ಹೊಸದಾಗಿ ಸೇರಿಕೊಂಡಿರುವ ಯಾರನ್ನಾದರೂ, ಅದರಲ್ಲೂ ಪಟ್ಟಣಗಳ ಹುಡುಗ ಹುಡುಗಿಯರನ್ನು 'ಏನಾಗಬೇಕು ಅಂದುಕೊಂಡಿದ್ದೀರಿ?’ ಎಂದು ಕೇಳಿನೋಡಿ. ಅವರಿಂದ ತಕ್ಷಣ ಬರುವ ಉತ್ತರ 'ಟಿವಿ ಆಂಕರ್ ಆಗೋದು’. ಪತ್ರಿಕೆಗಳಿಂದ ತೊಡಗಿ ಅನಿಮೇಶನ್ ಕ್ಷೇತ್ರದವರೆಗೆ ಮಾಧ್ಯಮಲೋಕ ವಿಸ್ತಾರವಾಗಿ ಹರಡಿಕೊಂಡಿರುವುದು ಮತ್ತು ಅದರಲ್ಲಿ ಬಗೆಬಗೆಯ ಉದ್ಯೋಗಾವಕಾಶಗಳಿರುವುದರ ಬಗ್ಗೆ ಅವರು ಯೋಚಿಸುವುದಿಲ್ಲ. ಪತ್ರಿಕೋದ್ಯಮ ಕೋರ್ಸು ಮುಗಿದ ಕೂಡಲೇ ಜರ್ನಲಿಸ್ಟ್ ಆಗಿಬಿಡುವ ಕನಸೇ ಹೆಚ್ಚಿನವರದ್ದು. ಮಾಧ್ಯಮಲೋಕದ ಸ್ಪರ್ಧೆಯೇನು, ಅದು ಬಯಸುವ ಜ್ಞಾನ-ಕೌಶಲಗಳೇನು, ಅವುಗಳನ್ನು ಮೈಗೂಡಿಸಿಕೊಳ್ಳಬೇಕಾದರೆ ಪುಸ್ತಕದ ಬದನೆಕಾಯಿಯ ಹೊರತಾಗಿ ತಾವು ಮಾಡಬೇಕಿರುವುದೇನು ಎಂದೆಲ್ಲ ತಿಳಿದುಕೊಳ್ಳುವ ಗೋಜಿಗೇ ಹೋಗುವುದಿಲ್ಲ.

ವಾಸ್ತವಕ್ಕೆ ಬನ್ನಿ...

ಆದರೆ ಇಂದು ಅದರ ಅನಿವಾರ್ಯತೆ ಇದೆ. ಮಾಧ್ಯಮ ಜಗತ್ತು ವಿಶಾಲವಾಗಿ ಬೆಳೆದುಕೊಂಡಿರುವುದೇನೋ ನಿಜ. ಆದರೆ ಅದಕ್ಕೆ ಪ್ರವೇಶ ಪಡೆಯುವುದು ಮತ್ತು ಅಲ್ಲಿ ಒಳ್ಳೆಯ ಹೆಸರು ಗಳಿಸಿಕೊಳ್ಳುವುದು ಕನಸು ಕಂಡಷ್ಟು ಸುಲಭ ಅಲ್ಲ. ಎಲ್ಲಕ್ಕಿಂತ ಮೊದಲು ಮೀಡಿಯಾ ಎಂದ ಕೂಡಲೇ ಟಿವಿ ಎನ್ನುವ ಭ್ರಮೆಯಿಂದ ಯುವ ಉತ್ಸಾಹಿಗಳು ಈಚೆ ಬರಬೇಕು. ಟಿವಿ ಈ ಕಾಲದ ಅತ್ಯಂತ ಪ್ರಭಾವಿ ಮಾಧ್ಯಮಗಳಲ್ಲೊಂದು ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ ಮಾಧ್ಯಮಗಳಲ್ಲಿ ಕೆಲಸ ಮಾಡಬೇಕೆಂಬ ಆಸಕ್ತಿಯಿರುವವರು ಟಿವಿಯಾಚೆಗೂ ಒಂದು ಜಗತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಚಾನೆಲ್‌ಗಳ ಬಗ್ಗೆ ವಿಶೇಷ ಆಸಕ್ತಿ ಇರುವವರೂ ಕೂಡ ಚಾನೆಲ್ ಎಂದ ಕೂಡಲೇ ನ್ಯೂಸ್ ಆಂಕರ್ ಆಗಿಬಿಡುವುದು ಎಂಬ ಕಲ್ಪನೆಯಿಂದ ಹೊರಬರಬೇಕು. ಆಂಕರ್ ಆಡುವ ನಾಲ್ಕು ಮಾತಿನ ಹಿಂದೆ ಹತ್ತಾರು ಜನರ ಒದ್ದಾಟ, ಧಾವಂತ, ಶ್ರಮ ಇರುತ್ತದೆ.

ಜರ್ನಲಿಸಂ ಇಂದು ಡಿವಿಜಿ, ತಿ.ತಾ. ಶರ್ಮರ ಕಾಲದ ಪತ್ರಿಕಾವೃತ್ತಿಯಾಗಿ ಉಳಿದಿಲ್ಲ, ಉದ್ಯಮವಾಗಿ ಬದಲಾಗಿದೆ. ಅದರ ವ್ಯಾಪ್ತಿ-ವಿಸ್ತಾರ ಕೂಡ ನೂರು ಪಟ್ಟು ಹಿಗ್ಗಿದೆ. ಅಲ್ಲಿರುವ ಅವಕಾಶಗಳು ಹೇರಳ. ಭಾರತದಲ್ಲಿಂದು ೮೨,೦೦೦ಕ್ಕಿಂತಲೂ ಹೆಚ್ಚು ಪತ್ರಿಕೆಗಳಿವೆ. ೭೫೦ರಷ್ಟು ಖಾಸಗಿ ಚಾನೆಲ್‌ಗಳೂ ೩೦ಕ್ಕೂ ಅಧಿಕ ದೂರದರ್ಶನದ ವಾಹಿನಿಗಳೂ ಇವೆ. ೪೦೦ಕ್ಕೂ ಹೆಚ್ಚು ಆಕಾಶವಾಣಿ ಕೇಂದ್ರಗಳು, ೩೦೦ರಷ್ಟು ಖಾಸಗಿ ಎಫ್‌ಎಂ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸಾವಿರಾರು ಆನ್‌ಲೈನ್ ತಾಣಗಳಿವೆ. ೫೦೦ ಮಿಲಿಯನ್ ಡಾಲರ್ ಮೌಲ್ಯದ ಅನಿಮೇಶನ್ ಮಾರುಕಟ್ಟೆಯಿದೆ. ವರ್ಷಕ್ಕೆ ೩೬,೦೦೦ ಕೋಟಿ ರೂಪಾಯಿ ಆದಾಯ ಹುಟ್ಟುಹಾಕುವ ಜಾಹೀರಾತು ಕ್ಷೇತ್ರವಿದೆ. ವರ್ಷಂಪ್ರತಿ ಏನಿಲ್ಲವೆಂದರೂ ೧೫೦೦ ಸಿನಿಮಾಗಳು ತಯಾರಾಗುತ್ತಿವೆ. ಊಹಿಸಿಕೊಂಡರೆ ಅಬ್ಬಾ ಎನಿಸುತ್ತದೆ; ನಮ್ಮ ಮಾಧ್ಯಮ ವಿದ್ಯಾರ್ಥಿಗಳ ಎದುರು ಎಷ್ಟು ದೊಡ್ಡ ಉದ್ಯೋಗ ಜಗತ್ತು ಇದೆ ಎಂದು ಸೋಜಿಗವಾಗುತ್ತದೆ.

ಜತೆಗೆ ಈ ಉತ್ಸಾಹಿಗಳು ಇಂತಹ ಸ್ಪರ್ಧಾತ್ಮಕ ರಂಗದಲ್ಲಿ ಬದುಕುಳಿಯಬೇಕಾದರೆ ಎಷ್ಟೊಂದು ಸನ್ನದ್ಧರಾಗಬೇಕಿದೆ ಎಂದು ಆತಂಕವೂ ಆಗುತ್ತದೆ. ಉದ್ಯೋಗಾವಕಾಶಗಳೇನೋ ಧಾರಾಳ ಇವೆ. ಆದರೆ ಅವುಗಳ ನಿರೀಕ್ಷೆಗಳನ್ನೆಲ್ಲ ಪೂರೈಸಿ ಸಮರ್ಥವಾಗಿ ನಿಭಾಯಿಸಬಲ್ಲ ಪ್ರಾಯೋಗಿಕ ತಿಳುವಳಿಕೆ ನಮ್ಮ ತರುಣಪಡೆಗೆ ಇದೆಯೇ?

ಬರೀ ಕರ್ನಾಟಕದಲ್ಲೇ ಇಂದು ಸುಮಾರು ನೂರೈವತ್ತರಷ್ಟು ಸಂಸ್ಥೆಗಳು ಪತ್ರಿಕೋದ್ಯಮವನ್ನು ಒಂದು ಪ್ರಧಾನ ವಿಷಯವನ್ನಾಗಿ ಪದವಿ ಮತ್ತು ಸ್ನಾತಕೋತ್ತರ ಹಂತದಲ್ಲಿ ಬೋಧಿಸುತ್ತಿವೆ. ಒಂದು ಕಾಲೇಜು/ವಿಭಾಗದಿಂದ ವರ್ಷವೊಂದಕ್ಕೆ ಸರಾಸರಿ ೨೦ ವಿದ್ಯಾರ್ಥಿಗಳು ಹೊರಬಂದರೂ ಮೂರು ಸಾವಿರ ಮಂದಿ ಮಾಧ್ಯಮ ಶಿಕ್ಷಣ ಪಡೆದವರು ತಯಾರಾದಂತಾಯಿತು. ಪದವಿ ಹಂತದಲ್ಲಿ ಪತ್ರಿಕೋದ್ಯಮ ಓದಿದವರೆಲ್ಲ ಅದರಲ್ಲೇ ಮುಂದುವರಿಯಬೇಕೆಂದೇನೂ ಇಲ್ಲ. ಅವರಲ್ಲಿ ಬರೀ ೫೦೦ ಮಂದಿ ಮಾಧ್ಯಮ ಕ್ಷೇತ್ರಕ್ಕೆ ಬಂದರೂ, ಅವರೆಲ್ಲರಿಗೂ ಕೊಡುವುದಕ್ಕೆ ನಮ್ಮಲ್ಲಿ ಉದ್ಯೋಗ ಇದೆಯೇ? ಅಥವಾ ಇನ್ನೊಂದು ರೀತಿಯಲ್ಲಿ ಕೇಳುವುದಾದರೆ, ನಮ್ಮ ಮಾಧ್ಯಮ ಕ್ಷೇತ್ರದ ತೆಕ್ಕೆಗೆ ಸೇರುವುದಕ್ಕೆ ಇಷ್ಟು ಮಂದಿಯಲ್ಲಿ ನಿಜವಾಗಿಯೂ ಅರ್ಹತೆಯಿರುವವರ ಸಂಖ್ಯೆ ಎಷ್ಟು?

ಪತ್ರಿಕೋದ್ಯಮವನ್ನು ಬೋಧಿಸುವ ಕಾಲೇಜುಗಳ ಮೂಲಭೂತ ಸೌಕರ್ಯಗಳ ಬಗ್ಗೆ, ಅಲ್ಲಿ ಪತ್ರಿಕೋದ್ಯಮವನ್ನು ಬೋಧಿಸುವ ವಿಧಾನದ ಬಗ್ಗೆ, ಅಲ್ಲಿನ ಬೋಧಕರ ಪ್ರಾಯೋಗಿಕ ಜ್ಞಾನ ಮತ್ತು ಕೌಶಲಗಳ ಬಗೆಗೆಲ್ಲ ಸಾಕಷ್ಟು ಚರ್ಚೆಗಳಿವೆ. ಅದು ಪ್ರತ್ಯೇಕ ವಿಚಾರ. ಮಾಧ್ಯಮಲೋಕವನ್ನು ಸೇರುವುದಕ್ಕೆ ಕನಸುಗಣ್ಣುಗಳಿಂದ ಕಾಯುತ್ತಿರುವ ಯುವತಲೆಮಾರಿನ ವೈಯುಕ್ತಿಕ ಸವಾಲುಗಳೂ ಗಂಭೀರ ವಿಷಯವೇ.

ಗ್ಲಾಮರ್ ಅಲ್ಲ, ಕೌಶಲ

ಸ್ನೇಹಿತರೇ, ಮಾಧ್ಯಮಕ್ಷೇತ್ರ ಬಯಸುತ್ತಿರುವುದು ಗ್ಲಾಮರನ್ನು ಅಲ್ಲ. ಅಲ್ಲಿಗೆ ಬೇಕಾಗಿರುವುದು ನಿಮ್ಮ ಪರಿಶ್ರಮ, ಮತ್ತು ಅದರ ಮೂಲಕ ನೀವು ಮೈಗೂಡಿಸಿಕೊಳ್ಳಬೇಕಾದ ಕೌಶಲ ಮತ್ತು ಜ್ಞಾನ. ಮುಖ್ಯವಾಗಿ ಮಾಧ್ಯಮಕ್ಷೇತ್ರ ಪತ್ರಿಕೋದ್ಯಮವನ್ನು ಕಾಲೇಜು-ವಿಶ್ವವಿದ್ಯಾನಿಲಯಗಳಲ್ಲಿ ಓದಿದವರಿಗಷ್ಟೇ ಮೀಸಲಾಗಿಲ್ಲ. ಅದೊಂದು ಮುಕ್ತ ಕ್ಷೇತ್ರ. ತಾವು ಬಯಸುವ ಅರ್ಹತೆ, ಆಸಕ್ತಿಯಿರುವ ಯಾರನ್ನೇ ಆದರೂ ಮಾಧ್ಯಮಗಳು ಸಂತೋಷದಿಂದ ಬರಮಾಡಿಕೊಳ್ಳುತ್ತವೆ. ಅವರಿಗೆ ಬೇಕಾಗಿರುವುದು ನಿಮ್ಮ ಡಿಗ್ರಿ-ಅಂಕಪಟ್ಟಿ ಅಲ್ಲ, ಬದಲಿಗೆ ನಿಮ್ಮ ಆಸಕ್ತಿ, ಶ್ರಮ, ಜ್ಞಾನ ಮತ್ತು ತಿಳುವಳಿಕೆ.

ಮೀಡಿಯಾದ ಬಗ್ಗೆ ನೀವು ಎಂತಹ ಕ್ರೇಜ್ ಇದ್ದವರಾದರೂ, ಪದವಿ ಮುಗಿಯುವ ಹೊತ್ತಿಗೆ ಕಡೇಪಕ್ಷ ಒಳ್ಳೆಯ ಬರವಣಿಗೆ ಮತ್ತು ಮಾತಿನ ಕೌಶಲ ರೂಢಿಸಿಕೊಳ್ಳದೆ ಹೋದರೆ ಯಾವ ಮಾಧ್ಯಮದಲ್ಲಾದರೂ ಜಾಗಕಂಡುಕೊಳ್ಳುವುದು ಕಷ್ಟ. ಸಮಕಾಲೀನ ವಿದ್ಯಮಾನಗಳ ಬಗ್ಗೆ ಸ್ಪಷ್ಟವಾದ ತಿಳುವಳಿಕೆ, ಸಾಹಿತ್ಯ-ಸಂಸ್ಕೃತಿ-ರಾಜಕೀಯ-ಇತಿಹಾಸ-ವಾಣಿಜ್ಯ ವಿಷಯಗಳ ಸಾಮಾನ್ಯಜ್ಞಾನ ಬೇಕೇಬೇಕು. ಅಯ್ಯೋ ಇವನ್ನೆಲ್ಲ ಮೇಸ್ಟ್ರುಗಳು ಕಲಿಸುತ್ತಿಲ್ಲ ಎಂದು ಕೊರಗುತ್ತಲೋ ದೂರುತ್ತಲೋ ಕೂರಬೇಡಿ. ಇವಕ್ಕೆಲ್ಲ ನಿಮಗೆ ನೀವೇ ಗುರುಗಳು. ಮತ್ತೆಮತ್ತೆ ಬರೆಯುವುದರಿಂದಷ್ಟೇ ಉತ್ತಮ ಬರವಣಿಗೆ ಕೌಶಲ ಸಾಧಿಸಲು ಸಾಧ್ಯ. ನಿಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಿಸುವ ಅವಕಾಶ ಸಿಕ್ಕಾಗಲೆಲ್ಲ ಮಾತನಾಡಿದರಷ್ಟೇ ಮಾತಿನ ಕೌಶಲ ಬೆಳೆಯಲು ಸಾಧ್ಯ. ಬರೆಯಲು, ಮಾತನಾಡಲು ನಿಮ್ಮೆದುರು ಇಂದು ಇರುವ ಅವಕಾಶಗಳಿಗೆ ಲೆಕ್ಕವಿಲ್ಲ. ಪದವಿ ಮುಗಿಯುವ ಹೊತ್ತಿಗೆ ಕನ್ನಡದಲ್ಲೋ ಇಂಗ್ಲಿಷಿನಲ್ಲೋ ಒಂದು ಪುಟ ತಪ್ಪಿಲ್ಲದೆ ಬರೆಯುವ, ಐದು ನಿಮಿಷ ತಡಬಡಾಯಿಸದೆ ಮಾತನಾಡುವ ಸಾಮರ್ಥ್ಯ ನಿಮ್ಮಲ್ಲಿ ಬೆಳೆಯದೇ ಹೋದರೆ ಆ ಪದವಿಗೆ ಯಾವ ಬೆಲೆ?

ಇವಕ್ಕೆ ಪೂರಕವಾಗಿ ತಿಂಗಳಿಗೊಂದಾದರೂ ಒಳ್ಳೆಯ ಪುಸ್ತಕ ಓದುವ, ಪ್ರತಿದಿನ ಒಂದು ಗಂಟೆಯಷ್ಟಾದರೂ ಪತ್ರಿಕೆ, ನಿಯತಕಾಲಿಕಗಳನ್ನು ತಿರುವಿ ಹಾಕುವ, ಟಿವಿ ವಾರ್ತೆಗಳನ್ನು ಗಮನಿಸುವ ಹವ್ಯಾಸ ರೂಢಿಸಿಕೊಳ್ಳಿ.  ನೀವು ನಿಜವಾಗಿಯೂ ಸೃಜನಶೀಲರೇ ಆಗಿದ್ದರೆ ಪತ್ರಿಕೆ, ಟಿವಿ, ರೇಡಿಯೋ ಅಲ್ಲದೆ ಜಾಹೀರಾತು, ಸಾರ್ವಜನಿಕ ಸಂಪರ್ಕ, ಅನಿಮೇಶನ್, ಗ್ರಾಫಿಕ್ಸ್, ಛಾಯಾಗ್ರಹಣ ಕ್ಷೇತ್ರಗಳೂ ನಿಮಗಾಗಿ ಕಾದಿವೆ. ಆದರೆ ನೆನಪಿಡಿ, ಇವು ಯಾವುವೂ ತಾವಾಗಿಯೇ ಬಂದು ನಿಮ್ಮ ಮನೆಮುಂದೆ ನಿಲ್ಲುವುದಿಲ್ಲ.

(ಮಾಧ್ಯಮ ಪ್ರವೇಶಕ್ಕೆ 15 ಸೂತ್ರಗಳು, ಮಾಧ್ಯಮ ಉದ್ಯೋಗಾವಕಾಶಗಳ ವಿವರಗಳಿಗೆ ಇಲ್ಲಿಗೆ ಹೋಗಿ)

ಕಾಮೆಂಟ್‌ಗಳಿಲ್ಲ: