ಗುರುವಾರ, ಮೇ 8, 2014

ವಿದ್ಯಾರ್ಥಿಗಳೇ, ಪತ್ರಕರ್ತರಾಗಬೇಕೆಂದು ಬಯಸಿದ್ದೀರಾ?

(ತುಮಕೂರಿನಿಂದ ಪ್ರಕಟವಾಗುವ 'ಪ್ರಜಾಪ್ರಗತಿ' ದೈನಿಕದಲ್ಲಿ ಮಾರ್ಚ್ 17, 2014ರಂದು ಪ್ರಕಟವಾದ ಲೇಖನ)

ಟಿವಿ ಸ್ಕ್ರೀನಿನ ಹಿಂದೆ ನಿಂತು ಅರಳು ಹುರಿದಂತೆ ಪಟಪಟನೆ ಸುದ್ದಿ ಹೇಳುವ ಆಂಕರ್‌ನ್ನು ನೋಡಿದಾಗೆಲ್ಲ ನಾನೂ ಒಂದು ದಿನ ಅಂತಹದೇ ಆಂಕರ್ ಆಗಬೇಕೆಂದು ಕನಸು ಕಂಡಿದ್ದೀರಾ? ಖಾಸಗಿ ಎಫ್‌ಎಂ ರೇಡಿಯೋದ ಬೆಡಗಿ ಯಾವುದೋ ವಿಷಯದ ಎಳೆ ಹಿಡಿದು ಲೀಲಾಜಾಲವಾಗಿ ಸರಸರನೆ ಹರಟುತ್ತಿರಬೇಕಾದರೆ ನಾನೂ ಒಂದು ದಿನ ಹೀಗೆಯೇ ರೇಡಿಯೋ ಜಾಕಿ ಆಗುವೆನೆಂದು ಊಹಿಸಿ ಪುಳಕಗೊಂಡಿದ್ದೀರಾ? ದೊಡ್ಡ ಹಗರಣವೊಂದರ ಮೇಲೆ ಬೆಳಕುಚೆಲ್ಲಿ ತಪ್ಪಿತಸ್ಥರಿಗೆ ಚಾಟಿಯೇಟು ನೀಡುವ ವಿಸ್ತೃತ ವರದಿಯೊಂದನ್ನು ಪತ್ರಿಕೆಯಲ್ಲಿ ಓದುತ್ತಾ ನಾನೂ ಒಂದು ದಿನ ಇಂತಹ ವರದಿಗಳನ್ನು ಮಾಡುವ ನಿಷ್ಠುರ ಪತ್ರಕರ್ತನಾಗಬೇಕೆಂದು ಬಯಸಿದ್ದೀರಾ?

ಇಂದಿನ ಯುವಕರು ಈ ಬಗೆಯ ಕನಸುಗಳನ್ನು ಕಾಣುವುದು ಸಾಮಾನ್ಯ. ಅದರಲ್ಲೂ ಹದಿಹರೆಯದವರಿಗಂತೂ ಮೀಡಿಯಾ ಒಂದು ದೊಡ್ಡ ಕ್ರೇಜ್. ನಮ್ಮ ಸುತ್ತಮುತ್ತಲಿನ ಮಾಧ್ಯಮಗಳ ಮಾಯಾಲೋಕವೇ ಅಂತಹದು. ಊಹನೆಗೂ ನಿಲುಕದಷ್ಟು ವಿಸ್ತಾರವಾಗಿ ಅದು ಬೆಳೆದುಬಿಟ್ಟಿದೆ. ಮಾಧ್ಯಮಗಳಿಲ್ಲದ ಸಮಾಜವನ್ನು ಕಲ್ಪಿಸಿಕೊಳ್ಳುವುದೇ ಕಷ್ಟ. ಅಷ್ಟೇ ಏಕೆ, ಟಿವಿ ಪತ್ರಿಕೆಗಳಿಲ್ಲದ ಒಂದು ದಿನದ ಬಗೆಗಾದರೂ ನಾವಿಂದು ಊಹಿಸಲಾರೆವು. ನಮ್ಮ ದಿನನಿತ್ಯದ ಬದುಕಿನಲ್ಲಿ ಊಟ, ನಿದ್ದೆ, ನೀರಿನಷ್ಟೇ ಅನಿವಾರ್ಯವಾಗಿಬಿಟ್ಟಿವೆ ಅವು.

ಮಾಧ್ಯಮರಂಗದಲ್ಲಿ ಇಂದು ಹೇರಳ ಉದ್ಯೋಗಾವಕಾಶವಿದೆ. ಜರ್ನಲಿಸಂ ಎಂದರೆ ಇಂದು ಕೇವಲ ವೃತ್ತಪತ್ರಿಕೆ, ಟಿವಿ ಚಾನೆಲ್ ಮಾತ್ರ ಅಲ್ಲ; ರೇಡಿಯೋ, ಜಾಹೀರಾತು, ಸುದ್ದಿಸಂಸ್ಥೆ, ಸಾರ್ವಜನಿಕ ಸಂಪರ್ಕ, ಆನ್‌ಲೈನ್ ಮೀಡಿಯಾ, ಗ್ರಾಫಿಕ್ಸ್, ಅನಿಮೇಶನ್, ಸಿನಿಮಾ, ಕಿರುತೆರೆ ಕ್ಷೇತ್ರಗಳಿಗೆ ಅದು ಹರಡಿಕೊಂಡಿದೆ. ಅಲ್ಲೆಲ್ಲ ವಿಫುಲ ಉದ್ಯೋಗಾವಕಾಶವಿದೆ. ನಮ್ಮ ಮಾಧ್ಯಮ ಕ್ಷೇತ್ರಕ್ಕೆ ಇಂದು ಪ್ರತಿಭಾವಂತ ಮಾನವ ಸಂಪನ್ಮೂಲದ ಅವಶ್ಯಕತೆ ತುಂಬಾ ಇದೆ.

ಪತ್ರಿಕೋದ್ಯಮ ಕೋರ್ಸ್

ಮಾಧ್ಯಮರಂಗವನ್ನು ಸೇರುವ ಕನಸುಳ್ಳವರಿಗಾಗಿಯೇ ಇಂದು ಪತ್ರಿಕೋದ್ಯಮವನ್ನು ಕಾಲೇಜು-ವಿಶ್ವವಿದ್ಯಾನಿಲಯ ಹಂತಗಳಲ್ಲಿ ಬೋಧಿಸಲಾಗುತ್ತಿದೆ. ಪತ್ರಿಕೋದ್ಯಮ ಶಿಕ್ಷಣ ಈಚಿನ ವರ್ಷಗಳಲ್ಲಿ ತುಂಬ ಜನಪ್ರಿಯವಾಗುತ್ತಿದೆ. ಪತ್ರಿಕೋದ್ಯಮ ಪದವಿ ಪಡೆದವರಿಗೆ ಮಾಧ್ಯಮಗಳಲ್ಲಿ ವಿಶೇಷ ಆದ್ಯತೆಯಿರುವುದೇ ಇದಕ್ಕೆ ಕಾರಣ. ನಗರ ಪ್ರದೇಶಗಳಲ್ಲಂತೂ ಖಾಸಗಿ ಸಂಸ್ಥೆಗಳು ಸ್ಪರ್ಧೆಗೆ ಬಿದ್ದು ಪತ್ರಿಕೋದ್ಯಮ ಕೋರ್ಸುಗಳನ್ನು ಆರಂಭಿಸುತ್ತಿವೆ. ಕಲಾ ಪದವಿಗಳಿಗೆ ಅಷ್ಟಾಗಿ ಮಹತ್ವ ನೀಡದೆ ಬಿ.ಕಾಂ. ಬಿ.ಎಸ್ಸಿ. ಪದವಿಗಳನ್ನು ಮುಂದುವರಿಸುತ್ತಿರುವ ಕಾಲೇಜುಗಳೂ ಪತ್ರಿಕೋದ್ಯಮವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಇರಿಸಿ ಬಿ.ಎ. ಪದವಿ ನೀಡುತ್ತಿರುವುದು ಬೆಂಗಳೂರಿನಂತಹ ಮಹಾನಗರಗಳಲ್ಲಿ ಹೊಸ ಬೆಳವಣಿಗೆಯೆನಿಸಿದೆ.
ಪತ್ರಿಕೋದ್ಯಮ ಶಿಕ್ಷಣ ನಗರಕೇಂದ್ರಿತವಾಗಿರುವುದೇನೋ ನಿಜ. ಆದರೆ ಈಚಿನ ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಕಾಲೇಜುಗಳಲ್ಲೂ ಪತ್ರಿಕೋದ್ಯಮ ಪದವಿ ಲಭ್ಯವಾಗುತ್ತಿದೆ. ಕನ್ನಡ, ಇಂಗ್ಲಿಷ್, ಇತಿಹಾಸ, ರಾಜ್ಯಶಾಸ್ತ್ರ, ಮನಃಶಾಸ್ತ್ರ, ಅರ್ಥಶಾಸ್ತ್ರಗಳಂತಹ ಜನಪ್ರಿಯ ವಿಷಯಗಳ ಜತೆ ಇಂದು ಪತ್ರಿಕೋದ್ಯಮವನ್ನೂ ಓದಬಹುದಾಗಿದೆ.

ಯಾರಿಗೆ ಕೋರ್ಸ್?

ಇಂದು ಪತ್ರಿಕೋದ್ಯಮವನ್ನು ಪದವಿ ಹಾಗೂ ಸ್ನಾತಕೋತ್ತರ ಹಂತದಲ್ಲಿ ಕಲಿಯಬಹುದು. ನೀವು ಪಿಯುಸಿ ವಿದ್ಯಾರ್ಥಿಗಳಾಗಿದ್ದರೆ ಪತ್ರಿಕೋದ್ಯಮ ಕೋರ್ಸಿನ ಬಗ್ಗೆ ಯೋಚಿಸುವುದಕ್ಕೆ ಇದು ಸಕಾಲ. ಪಿಯುಸಿಯಲ್ಲಿ ಕಲಾ ವಿಭಾಗದಲ್ಲೇ ಓದಿರಬೇಕೆಂದೇನೂ ಇಲ್ಲ. ವಾಣಿಜ್ಯ, ವಿಜ್ಞಾನ ಏನೇ ಓದಿದ್ದರೂ ನೀವು ಮಾಧ್ಯಮ ಕ್ಷೇತ್ರದ ಬಗ್ಗೆ ಆಸಕ್ತಿ ಉಳ್ಳವರಾದರೆ ಖಂಡಿತವಾಗಿಯೂ ಪದವಿ ಹಂತದಲ್ಲಿ ಬಿ.ಎ. ಆಯ್ದುಕೊಂಡು ಪತ್ರಿಕೋದ್ಯಮವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಓದಬಹುದು.

ನಿಮ್ಮ ಸುತ್ತಮುತ್ತಲಿನ ಕಾಲೇಜುಗಳಲ್ಲಿ ಪತ್ರಿಕೋದ್ಯಮವನ್ನು ಬೋಧಿಸಲಾಗುತ್ತಿದೆಯೇ ವಿಚಾರಿಸಿನೋಡಿ. ಇಲ್ಲವಾದರೆ ನಿಮಗೆ ಅನುಕೂಲವೆನಿಸುವ ಊರುಗಳಲ್ಲಿ ಆ ಸೌಲಭ್ಯವಿದೆಯೇ ತಿಳಿದುಕೊಳ್ಳಿ. ಪತ್ರಿಕೋದ್ಯಮ ಓದಲೆಂದೇ ನೂರಾರು ಮೈಲಿ ದೂರದ ಕಾಲೇಜುಗಳನ್ನು ಹುಡುಕಿ ಹೋಗಿ ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡು ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ವಿದ್ಯಾರ್ಥಿಗಳು ಸಾಕಷ್ಟು ಸಿಗುತ್ತಾರೆ.

ಸ್ನಾತಕೋತ್ತರ ಹಂತದಲ್ಲೂ ಸಮೂಹ ಸಂವಹನ, ಪತ್ರಿಕೋದ್ಯಮ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಇಂದು ಶಿಕ್ಷಣ ಅವಕಾಶಗಳಿವೆ. ಕರ್ನಾಟಕದ ಬಹುತೇಕ ವಿಶ್ವವಿದ್ಯಾನಿಲಯಗಳಲ್ಲಿ, ಅನೇಕ ಖಾಸಗಿ ಸಂಸ್ಥೆಗಳಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಶಿಕ್ಷಣ ಲಭ್ಯವಿದೆ. ಪತ್ರಿಕೋದ್ಯಮದಲ್ಲಿ ಎಂ.ಎ. ಪದವಿ ಓದಬೇಕೆಂದಿದ್ದರೆ ನೀವು ಸ್ನಾತಕ ಪದವಿಯಲ್ಲೂ ಅದನ್ನೇ ಓದಿರಬೇಕೆಂದೇನೂ ಇಲ್ಲ. ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿಎಸ್‌ಡಬ್ಲ್ಯೂ ಯಾವುದೇ ಪದವಿ ಓದಿದ್ದರೂ ನೀವು ಪತ್ರಿಕೋದ್ಯಮ ಎಂ.ಎ. ಓದಬಹುದು. ನಿಮ್ಮ ಮೆರಿಟ್, ವರ್ಗ ಮತ್ತು ಆಯಾ ಸಂಸ್ಥೆಗಳು ನಡೆಸುವ ಪ್ರವೇಶ ಪರೀಕ್ಷೆಗಳ ಆಧಾರದಲ್ಲಿ ಸೀಟ್ ಸಿಗುತ್ತದೆ. ಸಾಮಾನ್ಯವಾಗಿ ಪದವಿ ಪರೀಕ್ಷೆಗಳ ಫಲಿತಾಂಶ ಹೊರಬೀಳುವ ಸಮಯದಲ್ಲೇ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ವಿಶ್ವವಿದ್ಯಾನಿಲಯಗಳು ಅರ್ಜಿ ಆಹ್ವಾನಿಸುತ್ತವೆ. ಪತ್ರಿಕೆಗಳನ್ನು ಹಾಗೂ ಆಯಾ ಸಂಸ್ಥೆಗಳ ವೆಬ್‌ಸೈಟುಗಳನ್ನು ಆಗಿಂದಾಗ್ಗೆ ಗಮನಿಸುತ್ತಿರಬೇಕು.

ತುಮಕೂರಿನಲ್ಲಿ ಪತ್ರಿಕೋದ್ಯಮ ಕೋರ್ಸ್

ಪತ್ರಿಕೋದ್ಯಮ ಓದಬಯಸುವವರಿಗೆ ತುಮಕೂರು ಜಿಲ್ಲೆಯಲ್ಲಂತೂ ಧಾರಾಳ ಅವಕಾಶವಿದೆ. ಈಗಾಗಲೇ ಆರು ಕಾಲೇಜುಗಳಲ್ಲಿ ಪದವಿ ಹಂತದಲ್ಲೂ ಒಂದು ಸಂಸ್ಥೆಯಲ್ಲಿ ಸ್ನಾತಕೋತ್ತರ ಹಂತದಲ್ಲೂ ಪತ್ರಿಕೋದ್ಯಮ ಶಿಕ್ಷಣ ಲಭ್ಯವಿದೆ. ನಿಮ್ಮ ಅನುಕೂಲಕ್ಕಾಗಿ ಅವುಗಳ ವಿವರ ನೀಡಲಾಗಿದೆ:

ವಿಶ್ವವಿದ್ಯಾನಿಲಯ ಕಲಾ ಕಾಲೇಜು, ತುಮಕೂರು
ಶ್ರೀ ಸಿದ್ಧಗಂಗಾ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ತುಮಕೂರು
ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು, ತುಮಕೂರು
ಕೌಟಿಲ್ಯ ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್, ತುಮಕೂರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಬ್ಬಿ 
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತಿಪಟೂರು
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು (ಸ್ನಾತಕೋತ್ತರ ಪದವಿ)

ಪತ್ರಿಕೆ-ಟಿವಿ ನೋಡಿ ಅವುಗಳಲ್ಲಿ ಕೆಲಸಮಾಡಬೇಕೆಂದು ಬಯಸುವ ನೂರಾರು ವಿದ್ಯಾರ್ಥಿಗಳೇನೋ ಇದ್ದಾರೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿರುವ ಅನೇಕ ಹುಡುಗ ಹುಡುಗಿಯರಿಗೆ, ಮತ್ತವರ ಹೆತ್ತವರಿಗೆ ಹೀಗೊಂದು ಕೋರ್ಸು ಇದೆಯೆಂದು ಇನ್ನೂ ಗೊತ್ತೇ ಇಲ್ಲ. ಅನೇಕ ವಿದ್ಯಾರ್ಥಿಗಳು ತಮ್ಮ ಸ್ನೇಹಿತರು, ಅಕ್ಕ-ಅಣ್ಣ ಓದಿದ ಸಾಂಪ್ರದಾಯಿಕ ಕೋರ್ಸುಗಳೇ ಬೇಕೆಂದು ಅರ್ಜಿ ಹಾಕಿ ಸೀಟು ಸಿಗದೆ ಕೊನೆಗೆ ಯಾರೋ ಹೇಳಿದರೆಂದು ಪತ್ರಿಕೋದ್ಯಮ ಆಯ್ದುಕೊಳ್ಳುವ ಪರಿಸ್ಥಿತಿ ಇದೆ. ಕೆಲವರಿಗೆ ಈ ಅವಕಾಶವೂ ಕೈತಪ್ಪಿ ಹೋಗಿರುತ್ತದೆ.

ಬೇರೆ ವಿಷಯಗಳ ಜೊತೆ ಪತ್ರಿಕೋದ್ಯಮವೂ ಇದ್ದರೆ ಮುಂದೊಂದು ದಿನ ಉಜ್ವಲ ಭವಿಷ್ಯ ತಮ್ಮದಾಗಬಹುದೆಂದು ವಿದ್ಯಾರ್ಥಿಗಳು ಅರಿತುಕೊಂಡರೆ ನಮ್ಮ ಮಾಧ್ಯಮ ಕ್ಷೇತ್ರಕ್ಕೆ ನಿಜವಾದ ಪ್ರತಿಭೆಗಳ ಪರಿಚಯವಾಗುವುದಂತೂ ಖಂಡಿತ. ಪತ್ರಕರ್ತರಾಗುವ ಬಯಕೆ ಇಲ್ಲದಿದ್ದರೂ ತಮ್ಮ ವ್ಯಕ್ತಿತ್ವದ ಸಮಗ್ರ ವಿಕಸನವಾಗಬೇಕೆಂದು ಬಯಸುವ ಯಾರೇ ಆದರೂ ಈ ಕೋರ್ಸನ್ನು ಆಯ್ದುಕೊಳ್ಳಬಹುದು.

ಅಂದಹಾಗೆ...

ಇವೆಲ್ಲದರ ಜೊತೆಗೆ ಒಂದು ಪ್ರಮುಖ ಅಂಶವನ್ನು ಇಲ್ಲಿ ಹೇಳಲೇಬೇಕು. ಕೇವಲ ಪತ್ರಿಕೋದ್ಯಮ ಓದಿ ಡಿಗ್ರಿ ಪಡೆದುಕೊಂಡ ಕೂಡಲೇ ಒಳ್ಳೆಯ ಪತ್ರಕರ್ತರಾಗಲು ಸಾಧ್ಯವಿಲ್ಲ. ನಿಮ್ಮ ಡಿಗ್ರಿ, ಅಂಕಪಟ್ಟಿ ನೋಡಿದ ಕೂಡಲೇ ಮಾಧ್ಯಮದವರು ಕೆಲಸ ಕೊಡುವುದೂ ಇಲ್ಲ. ಅವರಿಗೆ ಬೇಕಾಗಿರುವುದು ಡಿಗ್ರಿ ಅಲ್ಲ; ನಿಮ್ಮ ಕೌಶಲ, ಆಸಕ್ತಿ ಹಾಗೂ ತಿಳುವಳಿಕೆ. ನೀವು ಸ್ನಾತಕ, ಸ್ನಾತಕೋತ್ತರ ಪದವಿ ಜತೆಗೆ ಹತ್ತು ಚಿನ್ನದ ಪದಕ ಹೊತ್ತುಕೊಂಡಿದ್ದರೂ ಒಳ್ಳೆಯ ಭಾಷೆ, ಬರವಣಿಗೆ ಹಾಗೂ ಸಂವಹನ ಕೌಶಲ ರೂಢಿಸಿಕೊಳ್ಳದೇ ಹೋದರೆ ಮಾಧ್ಯಮಗಳಲ್ಲಿ ಕೆಲಸ ಮಾಡುವುದಕ್ಕೆ ಅನರ್ಹರೆಂದೇ ಅರ್ಥ. ಈ ನಿಟ್ಟಿನಲ್ಲಿ ಒಳ್ಳೆಯ ಕೌಶಲ ರೂಢಿಸಿಕೊಳ್ಳುವ ಆಸಕ್ತಿ, ಪತ್ರಿಕೋದ್ಯಮವನ್ನು ಪ್ರೀತಿಸುವ ಮನಸ್ಸು ನಿಮ್ಮದಾಗಿದ್ದರೆ ಖಂಡಿತ ಪದವಿಯಲ್ಲಿ ಅದನ್ನೊಂದು ಐಚ್ಛಿಕ ವಿಷಯವನ್ನಾಗಿ ಆರಿಸಿಕೊಳ್ಳಿ. ಮಾಧ್ಯಮಕ್ಷೇತ್ರಕ್ಕೆ ಪೂರಕವಾದ ಅರ್ಹತೆ, ಗುಣಗಳನ್ನು ನಿಮ್ಮಲ್ಲಿ ರೂಢಿಸಿಕೊಳ್ಳಲು ಸದಾ ಪ್ರಯತ್ನಶೀಲರಾಗಿ. ಆಲ್ ದ ಬೆಸ್ಟ್!

ಕಾಮೆಂಟ್‌ಗಳಿಲ್ಲ: