(ಕನ್ನಡಪ್ರಭ 'ಬೈಟೂಕಾಫಿ'ಯಲ್ಲಿ ಫೆಬ್ರುವರಿ 26, 2014ರಂದು ಪ್ರಕಟವಾದ ಲೇಖನ)
'ತುಂಬಾನೇ ಕಾಟ ಇವನದ್ದು. ನನಗಂತೂ ಬೇಜಾರು ಬಂದುಹೋಯಿತು,’ ಎಂದಳು ಸ್ನೇಹಿತೆ. ಇದನ್ನವಳು ಹೇಳಿದ್ದು ಮೊದಲನೇ ಸಲ ಅಲ್ಲ. 'ಇಷ್ಟ ಆಗಲ್ಲ ಅಂದ್ರೆ ಕಾಂಟ್ಯಾಕ್ಟ್ ಬಿಟ್ಟುಬಿಡಬಹುದಲ್ಲ? ವ್ಯಕ್ತಿ ಸರಿ ಇಲ್ಲ ಅಂತ ಅನಿಸಿದ ಮೇಲೂ ಫ್ರೆಂಡ್‌ಶಿಪ್ ಇಟ್ಕೊಳೋದ್ರಲ್ಲಿ ಏನರ್ಥ ಇದೆ?’ ಈ ಬಾರಿ ನಾನು ಕೇಳಿದೆ. 'ನಂಗೆ ಇದೆಲ್ಲ ಇಷ್ಟ ಆಗಲ್ಲ, ತೊಂದ್ರೆ ಕೊಡ್ಬೇಡ ಅಂತ ಸ್ಪಷ್ಟವಾಗೇ ಹೇಳಿದ್ದೀನಿ. ನಾನು ಅವನ ಅವಾಯ್ಡ್ ಮಾಡ್ತಿದೀನಿ ಅನ್ನೋದು ಅವಂಗೆ ಸ್ಪಷ್ಟವಾಗಿ ಗೊತ್ತು. ಆದ್ರೂ ಅದೇ ಹಳೇ ಚಾಳಿ ಮುಂದುವರಿಸಿದ್ದಾನೆ’ ಎಂದಳು ಅವಳು. 'ಆದ್ರೆ, ನಿನ್ನ ವ್ಯಕ್ತಿತ್ವ ವರ್ತನೆ ನಂಗೆ ಹಿಡಿಸಿಲ್ಲ; ಸುಮ್ನೇ ಕಾಟ ಕೊಡ್ಬೇಡ ಅಂತ ನೇರವಾಗಿ ಹೇಳಿಬಿಡೋದಕ್ಕೆ ನಂಗೆ ಹಿಂಸೆ ಅನ್ಸತ್ತೆ’ ಎಂದು ಸೇರಿಸಿದಳು.ಒಂದೇ ಕ್ಯಾಂಪಸ್‌ನಲ್ಲಿ ಓದಿದವರು. ಅನೇಕ ವರ್ಷಗಳ ಪರಿಚಯ. ಗೆಳೆತನ, ಸಂಪರ್ಕ ಸಹಜವೇ. ಆದರೆ ಅವನ ಸ್ನೇಹ ಬರೀ ಅಷ್ಟೇ ಅಲ್ಲ, ಅದರ ಹಿಂದೆ ಇನ್ನೂ ಏನೇನೋ ನಿರೀಕ್ಷೆಗಳಿವೆ. ಇದರಿಂದ ಅವಳು ಬೇಸತ್ತಿದ್ದಾಳೆ. ಹಾಗಂತ 'ನೀನಿರೋ ರೀತಿ ನಂಗೆ ಇಷ್ಟ ಇಲ್ಲ’ ಎಂದುಬಿಟ್ಟರೆ ಆತ ನೊಂದುಕೊಳ್ಳಬಹುದು, ಇನ್ನೊಬ್ಬನ ಮನಸ್ಸು ನೋಯಿಸೋ ಹಕ್ಕು ತನಗಿದೆಯೇ ಎಂಬುದು ಅವಳ ಮನದ ಶಂಕೆ.
'ಅರೆ, ತನಗೆ ಒಬ್ಬ ವ್ಯಕ್ತಿಯಿಂದ ತೊಂದ್ರೆಯಾಗ್ತಿದೆ ಅಂತ ಅನಿಸಿದ್ಮೇಲೂ ಅದನ್ನು ಸಹಿಸಿಕೊಳ್ಳೋದ್ರಲ್ಲಿ ಏನರ್ಥ ಇದೆ? ಇದ್ರಲ್ಲಿ ಹಿಂಸೆ ಅನ್ಸೋದೇನು ಬಂತು? ನೀನು ಬೇರೆ ವಿವಾಹಿತೆ. ಇದು ಜೀವನದ ಪ್ರಶ್ನೆ ಅಲ್ವಾ? ನಿನ್ನ ಮನಸ್ಸಿನ ನೆಮ್ಮದಿಗಿಂತ ಅವನ ಬೇಸರ ದೊಡ್ಡದಾ?’ ನಾನು ಕೇಳಿದೆ.
ಜೀವನದಲ್ಲಿ ರಾಜಿಗಳು ಅನಿವಾರ್ಯ. ಆದರೆ ಎಷ್ಟು ಮತ್ತು ಎಲ್ಲಿಯವರೆಗೆ? ನಮ್ಮ ಬದುಕೇ 'ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ’ ಧಾರಾವಾಹಿ. ಇಲ್ಲಿ ಹೊಂದಾಣಿಕೆ ಇಲ್ಲದೆ ಹೋದರೆ ಪ್ರತಿಕ್ಷಣ, ಪ್ರತಿದಿನವೂ ಅಸಹನೀಯತೆಯ ಮಡು. ಗಂಡ, ಹೆಂಡತಿ, ಅಪ್ಪ, ಅಮ್ಮ, ಮಗ, ಮಗಳು, ಸೊಸೆ ಎಂಬಿತ್ಯಾದಿ ಕೌಟುಂಬಿಕ ಸಂಬಂಧಗಳಿಂದ ತೊಡಗಿ ಪ್ರತಿದಿನ ಅನಿವಾರ್ಯವಾಗಿ ಎದುರಾಗುವ ಫ್ರೆಂಡು, ಸಹೋದ್ಯೋಗಿ, ಮೇಲಧಿಕಾರಿ, ನೆರೆಹೊರೆಯಾತ, ಸಹಪ್ರಯಾಣಿಕ ಇವರೆಲ್ಲರೊಂದಿಗೆ ಒಂದಿಷ್ಟು ಅಡ್ಜಸ್ಟ್‌ಮೆಂಟು ಇಲ್ಲದೆ ಜೀವನ ಕಡುಕಷ್ಟ. ಎಲ್ಲರೂ ತನ್ನ ಇಷ್ಟಾನಿಷ್ಟಗಳಿಗೆ ಅನುಕೂಲವಾಗಿರಬೇಕು ಎಂದು ನಿರೀಕ್ಷಿಸುವ ಬದಲು ತಾನೇ ಒಂದಿಷ್ಟು ಹೊಂದಾಣಿಕೆ ರೂಢಿಸಿಕೊಂಡರೆ ದಿನನಿತ್ಯದ ಬದುಕು ಸಲೀಸು. ಮನಸ್ಸಿಗೂ ನೆಮ್ಮದಿ.
ಆದರೆ ಈ ಅಡ್ಜಸ್ಟ್‌ಮೆಂಟ್ ಎಲ್ಲಿಯವರೆಗೆ? ಸಾಮಾಜಿಕ ಬದುಕು ಒಂದಷ್ಟು ಮುಲಾಜುಗಳನ್ನು ಬಯಸುತ್ತದೆ. ದಾಕ್ಷಿಣ್ಯ ಪ್ರವೃತ್ತಿಯ ಮನುಷ್ಯ ಅನೇಕ ಮಂದಿಗೆ ಇಷ್ಟವಾಗುತ್ತಾನೆ. ಏಕೆಂದರೆ ಆತ ಯಾರು ಏನೇ ಕೇಳಿದರೂ, ಹೇಳಿದರೂ, ಮಾಡಿದರೂ 'ನೋ’ ಅನ್ನಲಾರ. ಆಗಲ್ಲ ಎಂದರೆ ಉಳಿದವರು ಎಲ್ಲಿ ಬೇಸರ ಮಾಡಿಕೊಳ್ಳುತ್ತಾರೋ ಎಂಬ ಆತಂಕ ಇವನಿಗೆ. ಅಷ್ಟಲ್ಲದೆ ತಾನು ಎಲ್ಲರಿಂದಲೂ ಒಳ್ಳೆಯವನು(ಳು) ಅನ್ನಿಸಿಕೊಳ್ಳಬೇಕು ಎಂಬ ಅಂತರ್ಯದ ಒಂದು ಕಂಡೂಕಾಣದ ಮಮಕಾರ. ತನ್ನಿಂದ ಬೇರೆಯವರಿಗೆ ತೊಂದರೆ, ಬೇಜಾರು ಆಗಬಾರದು ಎಂಬ ಭಾವ ಮೂಲದಲ್ಲಿ ತುಂಬಾ ಒಳ್ಳೆಯದೇ. ಆದರೆ ಎಲ್ಲರಿಗೂ ಎಲ್ಲಾ ಸಂದರ್ಭದಲ್ಲೂ ಎಲ್ಲಾ ವಿಷಯಗಳಲ್ಲೂ ಒಳ್ಳೆಯವರಾಗಿ ಇರುವುದಕ್ಕೆ ಆಗುತ್ತದೆಯೇ? ಆ ಗುಣ ವ್ಯಕ್ತಿಯ ವೈಯುಕ್ತಿಕ ಬದುಕನ್ನೇ ನುಂಗಿಹಾಕುವ ಹಂತಕ್ಕೆ ಬಂದರೆ ಆ ಒಳ್ಳೆಯತನಕ್ಕೆ ಏನರ್ಥ? ಮನುಷ್ಯ 'ನೋ’ ಎನ್ನಲೂ ಕಲಿಯಬೇಕು.
ಖಂಡಿತವಾದಿ ಲೋಕವಿರೋಧಿ ಅನ್ನುತ್ತಾರೆ. ಆದರೆ ಈ ಖಂಡಿತವಾದಿಗಳು ಅನೇಕ ಸಂದರ್ಭದಲ್ಲಿ ಇಷ್ಟವಾಗುತ್ತಾರೆ. ಅವರು ಅಡ್ಡಗೋಡೆಯ ಮೇಲೆ ದೀಪ ಇಡಲಾರರು. ಏಕ್ ಮಾರ್ ದೋ ತುಕ್ಡಾ, ಅಷ್ಟೇ. ಈ ಬಗೆಯ ನೇರಾನೇರ ಖಡಕ್ ಪ್ರವೃತ್ತಿಯಿಂದ ಕೆಲವರಿಗೆ ನೋವಾಗಬಹುದು. ಆದರೆ ಕಡ್ಡಿಮುರಿದಂತೆ ಮಾತಾಡುವ ಈ ಮಂದಿ ನಿರಪಾಯಕಾರಿ ಜೀವಿಗಳು. ಅವರ ನಡೆಯನ್ನು ಯಾರಾದರೂ ಊಹಿಸಬಹುದು. ತಮಗನಿಸಿದ್ದನ್ನು ತಕ್ಷಣ ಹೇಳಿಬಿಡುತ್ತಾರೆ. ಮುಖ್ಯವಾಗಿ ಮುಲಾಜುಗಳಲ್ಲಿ ಸಿಲುಕಿಕೊಂಡು ಆಮೇಲೆ ಒದ್ದಾಡುವುದಿಲ್ಲ.
ಈ ಖಂಡಿತವಾದಿಗಳ ಪೈಕಿ ಇನ್ನೊಂದು ವರ್ಗವಿದೆ. ಅವರು ಎಲ್ಲದಕ್ಕೂ 'ನೋ’ ಎನ್ನುವವರು. ತಗಾದೆ, ಕೊಂಕು ಅವರ ಇಷ್ಟದ ಹವ್ಯಾಸ. ಯಾರು ಏನೇ ಹೇಳಿದರೂ ಅವರ ಬಳಿ ಅದನ್ನು ವಿರೋಧಿಸುವ ಒಂದು ವಾದ ಇರುತ್ತದೆ. ತಾವು ಉಳಿದವರಿಗಿಂತ ಡಿಫರೆಂಟ್ ಅನ್ನಿಸಿಕೊಳ್ಳಬೇಕು, ಮುಖ್ಯವಾಗಿ ತಾವು ಎಲ್ಲರಿಂದಲೂ ಗುರುತಿಸಿಕೊಳ್ಳಬೇಕು ಎಂಬ 'ಐಡೆಂಟಿಟಿ ಕ್ರೈಸಿಸ್’ ಇವರದ್ದು. ಇವರು ಆರಂಭದಲ್ಲಿ ಖಂಡಿತವಾದಿಗಳಂತೆ ಕಂಡರೂ ಬಲುಬೇಗ ತಮ್ಮ ಬಣ್ಣ ಬಯಲುಮಾಡಿಕೊಳ್ಳುತ್ತಾರೆ ಮತ್ತು ನಗೆಪಾಟಲಿಗೀಡಾಗುತ್ತಾರೆ.
ದಾಕ್ಷಿಣ್ಯ ಪ್ರವೃತ್ತಿ ಒಳ್ಳೆಯದೋ ನಿರ್ದಾಕ್ಷಿಣ್ಯತೆ ಒಳ್ಳೆಯದೋ ಎಂಬುದನ್ನು ನಿರ್ಧಾರ ಮಾಡುವುದಂತೂ ಇಲ್ಲಿನ ಉದ್ದೇಶ ಅಲ್ಲ. ಎಲ್ಲ ಗುಣಗಳಿಗೂ ಅವುಗಳದ್ದೇ ಆದ ಅನುಕೂಲ, ಅನಾನುಕೂಲಗಳು ಇದ್ದೇ ಇವೆ. ಆದರೆ ಅತಿಯಾದರೆ ಎರಡೂ ಒಳ್ಳೆಯದಲ್ಲ ಎಂಬುದಂತೂ ನಿಜ. 'ಮನುಷ್ಯ ಒಬ್ಬಂಟಿಯಾಗಿ ಬದುಕಲಾರ. ಒಂಟಿಯಾಗಿರಬೇಕಾದರೆ ಒಂದೋ ಆತ ದೆವ್ವವಾಗಿರಬೇಕು ಇಲ್ಲವೇ ದೇವರಾಗಿರಬೇಕು’ ಎಂಬ ಮಾತಿದೆ. ಖಂಡಿತವಾದ ಒಬ್ಬ ಮನುಷ್ಯನನ್ನು ಒಂಟಿಯಾಗಿಸಿದರೆ ಅಂತಹ ಖಂಡಿತವಾದದ ಸಾರ್ಥಕತೆ ಏನು? ಎಲ್ಲವನ್ನೂ ಎಲ್ಲರನ್ನೂ ವಿರೋಧಿಸುತ್ತಾ ಕೊನೆಗೆ ತಾನೊಬ್ಬನೇ ಉಳಿದಾಗ ಕಾಡುವ ಅನಾಥಪ್ರಜ್ಞೆಗೆ ಅವನೇ ಹೊಣೆ ಅಲ್ಲವೇ? ಅದೇ ಹೊತ್ತಿಗೆ, ಯಾವುದಕ್ಕೂ 'ನೋ’ ಎನ್ನಲಾಗದ ಅತಿಯಾದ ದಾಕ್ಷಿಣ್ಯ ಗುಣ ವ್ಯಕ್ತಿಯ ಬದುಕಿನ ನೆಮ್ಮದಿಯನ್ನೇ ಕಸಿದುಕೊಳ್ಳತೊಡಗಿದರೆ ಅಂತಹ ಮುಲಾಜಿಗೆ ಅರ್ಥ ಇದೆಯೇ? ಒಳ್ಳೆಯತನಕ್ಕೆ ಪ್ರತಿಯಾಗಿ ಒಳ್ಳೆಯತನ ತೋರುವುದು ಸರಿ; ವಿಕೃತಿಗಳನ್ನೂ ಒಪ್ಪಿಕೊಳ್ಳುವುದು ಒಳ್ಳೆಯತನ ಹೇಗಾಗುತ್ತದೆ?
'ಸತ್ಯವನ್ನು ಹೇಳು, ಪ್ರಿಯವಾದುದನ್ನು ಹೇಳು, ಅಪ್ರಿಯವಾದ ಸತ್ಯವನ್ನು ಹೇಳಬೇಡ’ ಎಂಬ ಹಳೇತಲೆಮಾರಿನ ಬುದ್ಧಿಮಾತು, ’ಪ್ರಿಯವಾದ ಸುಳ್ಳನ್ನೂ ಹೇಳಬೇಡ’ ಎಂದೂ ಹೇಳುತ್ತದೆ. ಸತ್ಯ ಅಪ್ರಿಯವಾಗಿದ್ದರೂ ಕೆಲವೊಮ್ಮೆ ಹೇಳಲೇಬೇಕಾಗುತ್ತದೆ, ಆದರೆ ಇನ್ನೊಬ್ಬರಿಗೆ ಇಷ್ಟವಾಗುತ್ತದೆಂದು ಆಡುವ ಮನಸಿಗೊಪ್ಪದ ಮಾತು ಮುಂದೊಂದು ದಿನ ನಮ್ಮ ಮನಸ್ಸಿಗೇ ಮುಳ್ಳಾಗದೇ? ನಮ್ಮ ನೆಮ್ಮದಿಗಿಂತ ಉಳಿದವರ ಬೇಸರ ದೊಡ್ಡದಾ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ