ಮಂಗಳವಾರ, ಸೆಪ್ಟೆಂಬರ್ 24, 2019

ಉದ್ಯೋಗವಿದ್ದರೂ ನಿರುದ್ಯೋಗ!

25 ಸೆಪ್ಟೆಂಬರ್ 2019ರ ವಿಜಯವಾಣಿ (ಮಸ್ತ್ ಪುರವಣಿ)ಯಲ್ಲಿ ಪ್ರಕಟವಾದ ಲೇಖನ

ಎಲ್ಲೆಲ್ಲೂ ನೀರೋ ನೀರು, ಕುಡಿಯುವುದಕ್ಕೊಂದೂ ಹನಿಯಿಲ್ಲ! ಇದು ಕವಿ ಕೋಲರಿಜ್‍ನ ಪ್ರಸಿದ್ಧ ಹಾಡೊಂದರ ಸಾಲು. ಒಂದೂಕಾಲು ಶತಮಾನದ ಬಳಿಕ ಈ ಸಾಲು ಉದ್ಯೋಗದ ಅವಶ್ಯಕತೆಯಿರುವವರ ಹಾಗೂ ಉದ್ಯೋಗ ನೀಡುವವರ ಅಸಹಾಯಕ ಧ್ವನಿಯಾಗಿ ಕೇಳಿಸುತ್ತಿರುವುದು ಮಾತ್ರ ಕಾಕತಾಳೀಯ ಮತ್ತು ವಿಚಿತ್ರ.

ಪಿಎಚ್‍ಡಿ ಮಾಡಿದವರು ಹಾಸ್ಟೆಲ್ ಅಡುಗೆಯವರ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದಾರೆ. ಬಿಇ, ಎಂಎ ಪದವೀಧರರು ಗುಮಾಸ್ತರ ಕೆಲಕ್ಕೆ ದೌಡಾಯಿಸುತ್ತಿದ್ದಾರೆ. ನಮ್ಮ ಅರ್ಹತೆಗೆ ತಕ್ಕುದಾದ ಉದ್ಯೋಗ ದೊರೆಯುತ್ತಿಲ್ಲ ಎಂಬುದು ಅವರ ಅಳಲು. ಇನ್ನೊಂದೆಡೆ, ನಮ್ಮಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ, ಅರ್ಹ ಅಭ್ಯರ್ಥಿಗಳೇ ಸಿಗುತ್ತಿಲ್ಲ ಎಂಬುದು ಹತ್ತುಹಲವು ಕಂಪೆನಿಗಳ ದೂರು. ಎಂಬಲ್ಲಿಗೆ ‘ನಿಮ್ಮ ಅಂಕಪಟ್ಟಿ, ಪ್ರಮಾಣಪತ್ರ ಯಾರಿಗೂ ಬೇಡ. ಉದ್ಯೋಗ ನೀಡುವವರಿಗೆ ಬೇಕಾಗಿರುವುದು ನೀವು, ಅಂದರೆ ನಿಮ್ಮೊಳಗಿನ ಕೌಶಲ’ ಎಂಬ ಹಳೆಯ ಮೇಷ್ಟ್ರುಗಳ ಮಾತು ನಿಜವಾಯಿತು.

‘ನಮ್ಮಲ್ಲಿ ನಿರುದ್ಯೋಗ ಸಮಸ್ಯೆ ಎಂಬುದೇ ಇಲ್ಲ. ಬೇಕಾದಷ್ಟು ಉದ್ಯೋಗಗಳು ಖಾಲಿ ಇವೆ. ಆದರೆ ಅರ್ಹ ಯುವಕರೇ ಇಲ್ಲ’ ಎಂಬ ಕೇಂದ್ರ ಕಾರ್ಮಿಕ ಸಚಿವರ ಇತ್ತೀಚಿನ ಹೇಳಿಕೆಯಿಂದ ವಿವಾದ ಉಂಟಾಯಿತು. ಅವರು ಹಾಗೆ ಹೇಳುವಾಗ ‘ಉತ್ತರ ಭಾರತದಲ್ಲಿ’ ಎಂಬ ಮಾತು ಸೇರಿಸಿದ್ದೇ ವಿವಾದಕ್ಕೆ ಕಾರಣ. ರಾಜಕೀಯದಲ್ಲಿ ವಿವಾದಗಳು ಸಾಮಾನ್ಯವೇ, ಆದರೆ ವಾಸ್ತವವನ್ನು ಒಪ್ಪಿಕೊಳ್ಳದಿರುವುದು ಹೇಗೆ? ಈವರೆಗಿನ ಹತ್ತಾರು ಅಧ್ಯಯನ ವರದಿಗಳು ಕೌಶಲದ ಕೊರತೆಯೇ ಭಾರತೀಯರ ನಿರುದ್ಯೋಗ ಸಮಸ್ಯೆಗೆ ಪ್ರಮುಖ ಕಾರಣ ಎಂಬುದನ್ನು ಮತ್ತೆಮತ್ತೆ ಹೇಳಿವೆ.

ಕೋರ್ಸುಗಳ ದುಸ್ಥಿತಿ
ಕಳೆದ ಸುಮಾರು ಹತ್ತು ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಬಿಎ, ಬಿಎಸ್ಸಿಯಂತಹ ಸಾಂಪ್ರದಾಯಿಕ ಕೋರ್ಸುಗಳು ಬಿಕೋ ಎನ್ನುತ್ತಿವೆ. ಉಪನ್ಯಾಸಕರು ತಮ್ಮ ಹುದ್ದೆ ಉಳಿಸಿಕೊಳ್ಳಲು ಬೀದಿ ಬಯಲು ಸುತ್ತಿ ಕನಿಷ್ಟ ದಾಖಲಾತಿ ಮಟ್ಟವನ್ನಾದರೂ ತಲುಪುವ ಸರ್ಕಸ್ ಮಾಡುತ್ತಿದ್ದಾರೆ. ನಗರ ಪ್ರದೇಶಗಳ ಬಹುತೇಕ ಕಾಲೇಜುಗಳು ಪಿಯುಸಿ, ಪದವಿ ಹಂತಗಳಲ್ಲಿ ಕಲಾ ವಿಭಾಗವನ್ನು ಮುಚ್ಚಿಯೇಬಿಟ್ಟಿವೆ.

ಕಾಲಾಂತರದಿಂದ ಇದ್ದ ಕೋರ್ಸುಗಳೆಲ್ಲ ಆಕರ್ಷಣೆಯನ್ನು ಕಳೆದುಕೊಂಡಿವೆಯೇ? ಅವುಗಳಲ್ಲಿ ನಮ್ಮ ಯುವಕರಿಗೆ ಕೂಳಿನ ದಾರಿ ಕಾಣುತ್ತಿಲ್ಲವೇ? ಎರಡೂ ಪ್ರಶ್ನೆಗಳಿಗೆ ಉತ್ತರ ‘ಹೌದು’ ಎಂದೇ ಆಗಿದೆ. ಹಾಗಾದರೆ ಮುಂದೇನು? ಇಲ್ಲಿಗೆ ಬರಬೇಕಿದ್ದ ಯುವಕರು ಬೇರೆಲ್ಲಿ ಹೋಗುತ್ತಿದ್ದಾರೆ? ಈ ಕೋರ್ಸು-ಕಾಲೇಜುಗಳನ್ನೆಲ್ಲ ಇಡಿಯಿಡಿಯಾಗಿ ಮುಚ್ಚಿಬಿಡುವುದೇ? ಹಾಗೆ ಮಾಡಿದರೆ ನಮ್ಮ ಸಮಾಜದ ಅವಿಭಾಜ್ಯ ಅಂಗಗಳಾಗಿರುವ ಮೂಲ ವಿಜ್ಞಾನ, ಮಾನವಿಕ ಶಾಸ್ತ್ರಗಳ ಭವಿಷ್ಯವೇನು?

ಕೋರ್ಸುಗಳೂ ಮುಚ್ಚಿಹೋಗಬಾರದು, ಉದ್ಯೋಗ ಮಾರುಕಟ್ಟೆಯ ಅವಶ್ಯಕತೆಗಳನ್ನೂ ಕಡೆಗಣಿಸಲಾಗದು ಎಂದರೆ ಬದಲಾಗಿರುವ ಕಾಲಕ್ಕೆ ತಕ್ಕಂತೆ ಅವುಗಳ ಸ್ವರೂಪದಲ್ಲಿ ಮಾರ್ಪಾಡು ತರುವುದು ಇಂದಿನ ಅನಿವಾರ್ಯತೆ. ಕಾಲ ಬದಲಾಯಿತೆಂದು ಸಾಬೂನು, ಚಪ್ಪಲಿ, ಉಡುಪುಗಳಂತಹ ವಸ್ತುಗಳ ಉತ್ಪಾದನೆ ನಿಂತು ಹೋಗಿಲ್ಲ; ಅವುಗಳ ಬಣ್ಣ, ವಿನ್ಯಾಸ ಬದಲಾಗಿದೆ ಅಷ್ಟೇ. ಇನ್ನು ಮನುಷ್ಯರ ಅಂತರ್ಗತ ಭಾಗವಾಗಿರುವ ಶಿಕ್ಷಣವು ಸಮಾಜದ ಅವಶ್ಯಕತೆಗಳಿಗೆ ತಕ್ಕಂತೆ ಬದಲಾಗದಿದ್ದರೆ ಹೇಗೆ?

ಉದ್ಯೋಗಗಳಿವೆ, ಅವುಗಳಿಗೆ ಬೇಕಾದ ಅಭ್ಯರ್ಥಿಗಳು ದೊರೆಯುತ್ತಿಲ್ಲ. ಲಕ್ಷಾಂತರ ಅಭ್ಯರ್ಥಿಗಳು ಕಾಯುತ್ತಿದ್ದಾರೆ, ಅವರಿಗೆ ಉದ್ಯೋಗ ದೊರೆಯುತ್ತಿಲ್ಲ. ವಾಸ್ತವವಾಗಿ ಈ ಎರಡು ಪರಿಸ್ಥಿತಿಗಳ ಅರ್ಥ ಒಂದೇ. ಬೇಡಿಕೆ ಮತ್ತು ಸರಬರಾಜು-  ಉದ್ಯೋಗ ಜಗತ್ತಿನಲ್ಲಿ ಇವೆರಡರ ನಡುವೆ ದೊಡ್ಡ ಕಂದರ ಇದೆ. ಇದನ್ನು ಬೆಸೆಯದೇ ಹೋದರೆ ಮುಂದೆ ಉಳಿಗಾಲವಿಲ್ಲ.

ಉದ್ಯೋಗ ಮತ್ತು ಕೌಶಲ
ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಪ್ರಕಾರ, ನಮ್ಮ ದೇಶದ ಒಟ್ಟಾರೆ ದುಡಿಯುವ ವರ್ಗದ ಪೈಕಿ ಶೇ. 4.69ರಷ್ಟು ಮಾತ್ರ ಕೌಶಲಯುಕ್ತ ಮಂದಿಯಿದ್ದಾರೆ. ಉಳಿದವರೆಲ್ಲರೂ ಕೌಶಲ್ಯರಹಿತರು. ಅಮೇರಿಕದಲ್ಲಿ ಶೇ. 52, ಇಂಗ್ಲೆಂಡಿನಲ್ಲಿ ಶೇ. 68, ಜರ್ಮನಿಯಲ್ಲಿ ಶೇ. 75, ಜಪಾನ್‍ನಲ್ಲಿ ಶೇ. 80 ಹಾಗೂ ದಕ್ಷಿಣ ಕೊರಿಯಾದಲ್ಲಿ ಶೇ. 96 ಕೌಶಲ್ಯಯುಕ್ತ ಉದ್ಯೋಗಿಗಳಿದ್ದಾರೆ. ಒಂದು ದೇಶದ ಅಭಿವೃದ್ಧಿಗೂ ಅಲ್ಲಿನ ಕೌಶಲ್ಯಯುಕ್ತ ದುಡಿಯುವ ವರ್ಗಕ್ಕೂ ಸಂಬಂಧ ಇದೆ ಎಂದು ಬೇರೆ ಹೇಳಬೇಕೆ?

ಯಾವ ಕೆಲಸವನ್ನೂ ಇಂದು ಯಾಂತ್ರಿಕವಾಗಿ ಮಾಡಿ ಮುಗಿಸುವಂತಿಲ್ಲ. ಪ್ರತೀ ಕಾರ್ಯವೂ ಮೌಲ್ಯವರ್ಧನೆಯನ್ನು ಬಯಸುತ್ತದೆ. ಒಂದು ವಸ್ತುವನ್ನು ಇಲ್ಲಿಂದ ಅಲ್ಲಿಗೆ ಎತ್ತಿ ಇಡುವಲ್ಲೂ ಒಪ್ಪ ಓರಣ, ನಾಜೂಕುತನ ಇರಬೇಕು. ಯುವಕರು ಸ್ಮಾರ್ಟ್ ಮತ್ತು ಸ್ಕಿಲ್ಡ್ ಆಗಿರಬೇಕು, ಅವರಲ್ಲಿ ಸೃಜನಶೀಲತೆ, ನಿರ್ಧಾರ ಕೈಗೊಳ್ಳುವಿಕೆಯ ಸೂಕ್ಷ್ಮತೆ, ಗ್ರಾಹಕ ಸಂಬಂಧ, ಸ್ಪಷ್ಟ ಯೋಚನೆ, ಉತ್ತಮ ಸಂವಹನ, ಸಮಯ ನಿರ್ವಹಣೆ, ನಾಯಕತ್ವ- ಇತ್ಯಾದಿ ಗುಣಗಳಿರಬೇಕು ಎಂದು ಉದ್ಯೋಗ ಜಗತ್ತು ಬಯಸುವುದರಲ್ಲಿ ಏನಾದರೂ ತಪ್ಪಿದೆಯೇ? ನಮ್ಮ ಶೈಕ್ಷಣಿಕ ಜಗತ್ತಿನ ನೀತಿ ನಿರೂಪಕರು, ಶಿಕ್ಷಣ ಸಂಸ್ಥೆಗಳು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದನ್ನು ಅರ್ಥಮಾಡಿಕೊಳ್ಳಬೇಕು ಅಷ್ಟೇ.

ಎಚ್ಚೆತ್ತುಕೊಳ್ಳುವ ಕಾಲ
ಶಿಕ್ಷಣದ ಯಾಂತ್ರಿಕತೆಯಿಂದ ಹೊರಬರದೆ ನಿರುದ್ಯೋಗ ಸಮಸ್ಯೆಗೆ ಪರಿಹಾರವಿಲ್ಲ ಎಂಬುದು ಆಡಳಿತಗಾರರಿಗೆ ತಡವಾಗಿಯಾದರೂ ಮನವರಿಕೆ ಆಗಿದೆ. ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿಯನ್ನು ಜತೆಜತೆಯಾಗಿ ಕೊಂಡೊಯ್ಯಬೇಕು ಎಂಬ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಪ್ರಯತ್ನಗಳು ನಡೆದಿವೆ. ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಗಾಗಿ ಕೇಂದ್ರ ಸರ್ಕಾರ 2014ರಲ್ಲಿ ಪ್ರತ್ಯೇಕ ಸಚಿವಾಲಯವನ್ನೇ ಸ್ಥಾಪಿಸಿದೆ. ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಸಂಸ್ಥೆ (ಎನ್‍ಎಸ್‍ಡಿಎ), ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ (ಎನ್‍ಎಸ್‍ಡಿಸಿ), ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಧಿ (ಎನ್‍ಎಸ್‍ಡಿಎಫ್)ಗಳಲ್ಲದೆ ದೇಶದಾದ್ಯಂತೆ 28 ಸೆಕ್ಟರ್ ಸ್ಕಿಲ್ ಕೌನ್ಸಿಲ್‍ಗಳು ಹೊಸ ರೂಪ ಪಡೆದು ಕಾರ್ಯಕ್ಷೇತ್ರಕ್ಕೆ ಧುಮುಕಿವೆ. ರಾಷ್ಟ್ರೀಯ ಕೌಶಲ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎನ್‍ಎಸ್‍ಡಿಸಿ ಹಾಗೂ ಎನ್‍ಎಸ್‍ಡಿಎಫ್‍ಗಳನ್ನು ಪುನಾರಚಿಸುವ ನಿರ್ಧಾರವನ್ನೂ ಕೇಂದ್ರ ಸರ್ಕಾರ ಕೈಗೊಂಡಿದೆ.

2015ರಿಂದಲೇ ‘ಸ್ಕಿಲ್ ಇಂಡಿಯಾ’ ಅಭಿಯಾನ ಆರಂಭವಾಗಿದೆ. ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ, ದೀನ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ, ರಾಜೀವ ಗಾಂಧಿ ಚೈತನ್ಯ ಯೋಜನೆ - ಹೀಗೆ ಹತ್ತಾರು ಯೋಜನೆಗಳು ಚಾಲ್ತಿಯಲ್ಲಿವೆ. ಕರ್ನಾಟಕ ವೃತ್ತಿ ಶಿಕ್ಷಣ ನಿಗಮ ಈಗ ‘ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ’ಯಾಗಿ ಬದಲಾಗಿದೆ. ಸಾಂಪ್ರದಾಯಿಕ ಕೋರ್ಸುಗಳ ಜತೆಗೆ ಕೌಶಲಗಳಿಗೆ ಪ್ರಾಮುಖ್ಯತೆ ನೀಡುವ ಆ್ಯಡ್-ಆನ್ ಕೋರ್ಸುಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಎಂದು ಯುಜಿಸಿ ಕಾಲೇಜುಗಳಿಗೆ ದುಂಬಾಲು ಬಿದ್ದಿದೆ. ಬಿಎ/ಬಿಎಸ್ಸಿಯ ಜತೆಗೆ ಉದ್ಯೋಗ ಜಗತ್ತಿನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಬಿ.ವೋಕ್. ಕೋರ್ಸುಗಳನ್ನು ಪರಿಚಯಿಸಿದೆ.

ಸಮಸ್ಯೆಯಿರುವುದು ಯೋಜನೆಗಳ ಸಂಖ್ಯೆಯಲ್ಲಿ ಅಲ್ಲ; ಅವುಗಳ ಅನುಷ್ಠಾನದಲ್ಲಿ. ಇಷ್ಟೆಲ್ಲ ಯೋಜನೆಗಳು ಎಷ್ಟು ಮಂದಿಯನ್ನು ಪರಿಣಾಮಕಾರಿಯಾಗಿ ತಲುಪುತ್ತಿವೆ, ಎಷ್ಟು ಮಂದಿ ಇವುಗಳ ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಯೋಜನೆಗಳ ಹೆಸರು ಬದಲಾಯಿಸಿದರೆ, ಜಾರಿಗೊಳಿಸಿದರೆ ಸಾಲದು, ಅವುಗಳ ಮಾಹಿತಿ ಒಬ್ಬೊಬ್ಬ ಯುವಕನಿಗೂ ಸಿಗಬೇಕು. ಮಧ್ಯವರ್ತಿಗಳಿಗೆ ಅವಕಾಶ ಇಲ್ಲದಂತೆ ಫಲಾನುಭವಿಗಳೇ ಅವುಗಳ ಪ್ರಯೋಜನ ಪಡೆಯಬೇಕು. ಇಂತಹ ಕೋರ್ಸುಗಳನ್ನು ಮಾಡಿದರೆ ತಮಗೆ ಉದ್ಯೋಗ ಸಿಗುತ್ತದೆ ಎಂಬ ಭರವಸೆ ಅವರಲ್ಲಿ ಬೆಳೆಯಬೇಕು. ಸರ್ಟಿಫಿಕೇಟ್ ದೊರೆತರೆ ಕೆಲಸ ಸಿಗುತ್ತದೆ ಎಂಬ ಯೋಚನೆ ಬಿಟ್ಟು ಜ್ಞಾನ ಮತ್ತು ಕೌಶಲ್ಯ ಬೆಳೆಸಿಕೊಳ್ಳಲು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಶ್ರಮಿಸಬೇಕು. ಇಲ್ಲವಾದರೆ ದುಡ್ಡು ಕೊಟ್ಟು ಪ್ರಮಾಣಪತ್ರ ಪಡೆಯುವ ಹಳೆಯ ದಂಧೆ ಮುಂದುವರಿಯುತ್ತದೆಯೇ ಹೊರತು ನಿರುದ್ಯೋಗ ಸಮಸ್ಯೆ ಪರಿಹಾರವಾಗದು.

*****************
ಕೌಶಲ್ಯ ಕೇಂದ್ರಗಳೆಲ್ಲಿವೆ?
ಕೌಶಲ್ಯ ತರಬೇತಿ ನೀಡುವವರಿಗೂ ಪಡೆಯುವವರಿಗೂ ಈಗ ಹೇರಳ ಅವಕಾಶ ಇದೆ. ಕೇಂದ್ರ ಹಾಗೂ ರಾಜ್ಯದ ಬಹುತೇಕ ಕೌಶಲಾಭಿವೃದ್ಧಿ ಯೋಜನೆಗಳು ಜಿಲ್ಲಾ ಮಟ್ಟದಲ್ಲೇ ಲಭ್ಯ ಇವೆ. ತರಬೇತಿ ಕೇಂದ್ರಗಳನ್ನು ನಡೆಸುವುದಕ್ಕೆ ಖಾಸಗಿಯವರಿಗೆ ಮಾನ್ಯತೆ ಹಾಗೂ ಅನುದಾನವನ್ನು ಸರ್ಕಾರವೇ ನೀಡುತ್ತಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯು ಪ್ರತೀ ಜಿಲ್ಲಾ ಕೇಂದ್ರದಲ್ಲೂ ಕಚೇರಿಯನ್ನು ಸ್ಥಾಪಿಸಿದೆ. https://www.kaushalkar.com/article/district-skill-mission/ ಜಾಲತಾಣ ಲಿಂಕಿನಲ್ಲಿ ಜಿಲ್ಲಾವಾರು ಕಚೇರಿಗಳ ಸಂಪರ್ಕ ವಿವರ ಇದೆ. ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ಇರುವ ಯೋಜನೆಗಳೇನು, ಆಯಾ ಜಿಲ್ಲೆಗಳಲ್ಲಿ ಎಲ್ಲೆಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳಿವೆ ಇತ್ಯಾದಿ ಮಾಹಿತಿಗಳನ್ನು ಈ ಕೇಂದ್ರಗಳಿಂದ ಪಡೆಯಬಹುದು.

ಬಿ.ವೋಕ್. ಕೋರ್ಸುಗಳು ಎಲ್ಲಿವೆ?
ಕೌಶಲ್ಯಾಧಾರಿತ ಪದವಿಗಳನ್ನು ನೀಡುವ ಉದ್ದೇಶದಿಂದ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ವು ದೇಶದಾದ್ಯಂತ 150ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಬಿ.ವೋಕ್. ಕೋರ್ಸುಗಳನ್ನು ಮಂಜೂರು ಮಾಡಿದೆ. ಐಟಿ, ಪ್ರವಾಸೋದ್ಯಮ, ರೀಟೇಲ್ ಮ್ಯಾನೇಜ್ಮೆಂಟ್, ಫ್ಯಾಷನ್ ಡಿಸೈನಿಂಗ್, ಸಿನಿಮಾ ನಿರ್ಮಾಣ, ಆಹಾರ ಸಂಸ್ಕರಣೆ, ಸಾಫ್ಟ್‍ವೇರ್ ಅಭಿವೃದ್ಧಿ, ಫಾರ್ಮಸ್ಯುಟಿಕಲ್ಸ್, ನಿರ್ಮಾಣ ತಂತ್ರಜ್ಞಾನ, ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ಆನ್ವಯಿಕ ಕಲೆ, ಅಟೋಮೊಬೈಲ್ಸ್, ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್, ಅನಿಮೇಶನ್ & ಗ್ರಾಫಿಕ್ಸ್, ಇಂಟೀರಿಯರ್ ಡಿಸೈನ್ ಇತ್ಯಾದಿ ಹತ್ತು ಹಲವು ಕೋರ್ಸುಗಳಿದ್ದು, ಉದ್ಯೋಗ ದೊರಕಿಸಿಕೊಡುವುದೇ ಇವುಗಳ ಪ್ರಮುಖ ಉದ್ದೇಶವಾಗಿದೆ. ಕರ್ನಾಟಕದಲ್ಲಿ ಇಂತಹ ಪದವಿಗಳನ್ನು ನೀಡುವ ಪ್ರಮುಖ ಸಂಸ್ಥೆಗಳು ಇವು:
ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜು, ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜು, ಮೌಂಟ್ ಕಾರ್ಮೆಲ್ ಕಾಲೇಜು, ಸೈಂಟ್ ಜೋಸೆಫ್ಸ್ ಕಾಲೇಜು, ಎನ್‍ಎಂಕೆಆರ್‍ವಿ ಮಹಿಳಾ ಕಾಲೇಜು, ಬಿಎಂಎಸ್ ಮಹಿಳಾ ಕಾಲೇಜು, ತುಮಕೂರು ವಿಶ್ವವಿದ್ಯಾನಿಲಯ, ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿವಿ, ಮೈಸೂರಿನ ಜೆಎಸ್‍ಎಸ್ ಕಾಲೇಜು, ಸೈಂಟ್ ಫಿಲೋಮಿನಾ ಕಾಲೇಜು, ಉಜಿರೆಯ ಎಸ್‍ಡಿಎಂ ಕಾಲೇಜು, ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜು, ಬೀದರಿನ ಕರ್ನಾಟಕ ಆಟ್ರ್ಸ್, ಸೈನ್ಸ್ & ಕಾಮರ್ಸ್ ಕಾಲೇಜು, ಮುಂತಾದವು.

ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಸೆಪ್ಟೆಂಬರ್ 13, 2019

ವಾಸ್ತವ ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸುವ ಬಗೆ

14-20 ಸೆಪ್ಟೆಂಬರ್ 2019ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

‘ಅಯ್ಯೋ ನೀವೇ ನನ್ನ ತಂದೆತಾಯಿಯರೆಂದು ಈವರೆಗೆ ನನಗೇಕೆ ಗೊತ್ತಾಗಲಿಲ್ಲ?’ ಹಾಗೆಂದು ಕೃಷ್ಣ-ಭಾಮೆಯರ ಘಾತಕ್ಕೆ ನೆಲಕ್ಕೊರಗಿ ಹಲುಬುತ್ತಾನೆ ನರಕಾಸುರ. ‘ನಿಮ್ಮ ಮಗನಾಗಿಯೂ ನಾನೇಕೆ ಹೀಗಾದೆ? ಬದುಕನ್ನೆಲ್ಲಾ ನಾನೇಕೆ ದುಷ್ಕೃತ್ಯದಲ್ಲೇ ಕಳೆದುಬಿಟ್ಟೆ?’ ಅವನು ಪಶ್ಚಾತ್ತಾಪದಲ್ಲಿ ಬೇಯುತ್ತಾನೆ. ವಿಷ್ಣು ವರಾಹಾವತಾರಿಯಾಗಿ ಬಂದು ಹಿರಣ್ಯಾಕ್ಷನನ್ನು ವಧಿಸಿದ ಬಳಿಕ ಭೂದೇವಿಯನ್ನು ಕೂಡಿದ್ದರಿಂದ ಹುಟ್ಟಿದವನು ಈ ನರಕಾಸುರ. ತಂದೆತಾಯಿಯರು ಜತೆಯಾಗಿ ಎದುರಿಸಿದಾಗ ಮಾತ್ರವೇ ತನಗೆ ಮರಣ ಎಂಬ ಬ್ರಹ್ಮನ ವರಬಲ ಅವನಿಗಿತ್ತು. ಸತ್ಯಭಾಮೆಯು ಭೂದೇವಿಯ ಅಂಶದಿಂದ ಕೂಡಿದವಳಾದ್ದರಿಂದ ಆಕೆಯೂ ಕೃಷ್ಣನೂ ಜತೆಯಾಗಿ ಹೋರಾಡಿ ದುಷ್ಟತನದಿಂದ ಮೆರೆಯುತ್ತಿದ್ದ ನರಕನನ್ನು ವಧಿಸಬೇಕಾಯಿತು.

ಬೋಧಿವೃಕ್ಷ | 14-20 ಸೆಪ್ಟೆಂಬರ್ 2019
‘ನೀನು ನಡೆದ ಹಾದಿ ನಿನಗೆ ಮುಳುವಾಯಿತು’ ಹಾಗೆನ್ನುತ್ತಲೇ ನರಕಾಸುರನ ಒಳಗೆ ಬೆಳಕನ್ನು ಹಚ್ಚುತ್ತಾನೆ ಕೃಷ್ಣ. ‘ಬೀಜವನ್ನು ಎಲ್ಲಿ ಬಿತ್ತಲಾಗುತ್ತದೆ ಎಂಬುದಷ್ಟೇ ಮುಖ್ಯವಲ್ಲ. ಅದು ಹೇಗೆ ಬೆಳೆಯುತ್ತದೆ ಎಂಬುದೂ ಮುಖ್ಯ’ ಎಂಬುದು ಆತನ ಮಾತಿನ ಸಾರ. ಬೆಳೆ ಕಳೆಯಾಗಬಲ್ಲುದು, ಕಳೆ ಬೆಳೆಯಾಗಬಲ್ಲುದು. ಅದು ನಿರ್ಧಾರವಾಗುವುದು ಹುಟ್ಟಿದ ಮೊಳಕೆ ಯಾವ ಬಗೆಯ ಪೋಷಣೆ ಪಡೆಯುತ್ತದೆ ಎಂಬುದರ ಆಧಾರದಲ್ಲಿ. ನರಕಾಸುರ ಹುಟ್ಟಿದ್ದು ದೈವೀಶಕ್ತಿಯಿಂದಲೇ ಆದರೂ ಬೆಳೆದದ್ದು ರಕ್ಕಸ ಪರಿವಾರದಲ್ಲಿ.

ಇಲ್ಲಿ ಬೀಜ ಅಥವಾ ಮೊಳಕೆಗಿಂತಲೂ ಬಿತ್ತುವವನ ಅಥವಾ ಬೆಳೆಯುವವನ ಜವಾಬ್ದಾರಿಯೂ ದೊಡ್ಡದೆಂಬ ಧ್ವನಿಯೂ ಇದೆ. ‘ಹೆತ್ತವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೆ ಹೋದರೆ ಮಕ್ಕಳ ಪತನವನ್ನೂ ನೋಡಬೇಕಾಗುತ್ತದೆ’ ಎಂಬ ಆತ್ಮಾವಲೋಕನದ ವಿಷಾದವೂ ಇದೆ.

ಬರೀ ತೊಂಬತ್ತು ಅಂಕ ತೆಗೆದುಕೊಂಡಿದ್ದೀಯಾ, ಇನ್ನೂ ಹೆಚ್ಚು ಯಾಕೆ ತೆಗೆದುಕೊಂಡಿಲ್ಲ ಎಂದು ಅಪ್ಪ-ಅಮ್ಮ ಮಗನಲ್ಲಿ ಎರಡು ದಿನ ಮಾತು ಬಿಟ್ಟರಂತೆ; ಮೂರನೆಯ ದಿನ ಮಗ ನೇಣುಹಾಕಿಕೊಂಡು ಪ್ರಾಣಬಿಟ್ಟನಂತೆ. ಹೊಸ ಮೊಬೈಲ್ ಕೊಡಿಸುವುದಿಲ್ಲ ಎಂದು ಅಮ್ಮ ಖಡಕ್ಕಾಗಿ ಹೇಳಿದಳಂತೆ; ಮರುದಿನ ಹನ್ನೆರಡು ವರ್ಷದ ಮಗಳು ಮನೆಬಿಟ್ಟು ಓಡಿಹೋದಳಂತೆ. ಚಟಹಿಡಿಯುವ ಗೇಮ್ ಆಡಬೇಡವೆಂದು ಅಪ್ಪ ಕಟ್ಟುನಿಟ್ಟು ಮಾಡಿದನಂತೆ; ಮಗ ಮಧ್ಯರಾತ್ರಿ ಎದ್ದು ಅಪ್ಪನನ್ನು ಉಸಿರುಗಟ್ಟಿಸಿ ಸಾಯಿಸಿಯೇಬಿಟ್ಟನಂತೆ. ಶಿಸ್ತು ಸಂಯಮದಿಂದ ಇರಿ ಎಂದು ವಿದ್ಯಾರ್ಥಿಗಳಿಗೆ ಅಧ್ಯಾಪಕನೊಬ್ಬ ಕೊಂಚ ಗಟ್ಟಿ ದನಿಯಲ್ಲೇ ಬುದ್ಧಿವಾದ ಹೇಳಿದನಂತೆ; ಶಿಷ್ಯೋತ್ತಮನೊಬ್ಬ ತರಗತಿಯಲ್ಲೇ ಗುರುವಿಗೆ ಕಪಾಳಮೋಕ್ಷ ಮಾಡಿದನಂತೆ.

ಯಾಕೆ ಹೀಗಾಗುತ್ತಿದೆ? ಮಕ್ಕಳು ಯಾಕೆ ದೊಡ್ಡವರ ಮಾತನ್ನು ಕೇಳುತ್ತಿಲ್ಲ? ಇನ್ನೂ ಹದಿಹರೆಯದ ಹೊಸಿಲಲ್ಲಿರುವ ಮಕ್ಕಳು ‘ಇದು ನನ್ನ ಪರ್ಸನಲ್ ವಿಷ್ಯ. ನೀನು ಮೂಗು ತೂರಿಸಬೇಡ’ ಎಂದು ತಂದೆತಾಯಿಯರಿಗೆ ಕಟ್ಟಪ್ಪಣೆ ಮಾಡುವ ಮಟ್ಟಕ್ಕೆ ಹೋಗಿದ್ದಾರೆ? ಅವರೇಕೆ ಸಣ್ಣಪುಟ್ಟ ಸೋಲುಗಳನ್ನೂ ಎದುರಿಸುವ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ? ಅವರೇಕೆ ದಿನೇದಿನೇ ದುರ್ಬಲರಾಗಿ ಕಳೆಗುಂದುತ್ತಿದ್ದಾರೆ? ‘ಇಂದಿನ ಮಕ್ಕಳು ನಮ್ಮ ಕಾಲದವರಂತಲ್ಲ. ಮಹಾಬುದ್ಧಿವಂತರು. ತುಂಬಾ ಫಾಸ್ಟು’ ಹೀಗೆಂದು ಹಿರಿಯರು ಮಾತಾಡಿಕೊಳ್ಳುವುದಿದೆ. ಈ ಮಹಾಬುದ್ಧಿವಂತಿಕೆ ಎಂದರೇನು? ಬುದ್ಧಿವಂತಿಕೆಯ ಮಾನದಂಡ ಯಾವುದು? ಈ ಫಾಸ್ಟ್ ಮಕ್ಕಳು ವಾಸ್ತವದಲ್ಲಿ ಯಾಕಿಷ್ಟು ಸ್ಲೋ ಆಗಿದ್ದಾರೆ?

‘ಹುಟ್ಟುವ ಪ್ರತಿಯೊಂದು ಮಗುವೂ ಮನುಷ್ಯನ ಮೇಲೆ ತಾನಿನ್ನೂ ಮುನಿದಿಲ್ಲ ಎಂಬ ದೇವರ ಸಂದೇಶವನ್ನು ಭೂಮಿಗೆ ತರುತ್ತದೆ’ ಎನ್ನುತ್ತಾರೆ ಕವಿಗುರು ರವೀಂದ್ರನಾಥ ಠಾಕೂರ್. ಜಗತ್ತನ್ನು ಮುನ್ನಡೆಸುವ ಶಕ್ತಿಯ ಪ್ರತಿನಿಧಿಗಳಾಗಿ ಮಕ್ಕಳು ಹುಟ್ಟುತ್ತಾರೆ ಎಂದೂ ಆ ಮಾತನ್ನು ಅರ್ಥ ಮಾಡಿಕೊಳ್ಳಬಹುದಲ್ಲ? ಅಂದರೆ ಪ್ರತೀ ಮಗುವೂ ಮೂಲತಃ ದೈವಾಂಶಸಂಭೂತವೇ. ಮಕ್ಕಳನ್ನು ದೇವರೆಂದು ಕರೆಯುವುದೂ ಇದೇ ಕಾರಣಕ್ಕೆ ಅಲ್ಲವೇ? ‘ಚೈಲ್ಡ್ ಈಸ್ ದಿ ಫಾದರ್ ಆಫ್ ದಿ ಮ್ಯಾನ್’ ಎಂಬ ವರ್ಡ್ಸ್'ವರ್ತನ ಸಾಲಿನಲ್ಲೂ ಇದೇ ಧ್ವನಿ ಇದೆ. ಅಂತಹ ಮಗು ಬೆಳೆಬೆಳೆಯುತ್ತಾ ನಾವೀಗ ಆತಂಕಪಡುತ್ತಿರುವ ಪರಿಸ್ಥಿತಿಗೆ ಬಂದು ನಿಲ್ಲುತ್ತದೆ ಎಂದರೆ ಅದಕ್ಕೆ ಹೊಣೆಗಾರರು ಯಾರು?

ಹೌದು, ಮಾಡಬೇಕಾದ್ದನ್ನು ಮಾಡಬೇಕಾದ ಕಾಲದಲ್ಲಿ ಮಾಡದೆ ಹೋದರೆ ಆಗಬಾರದ್ದು ಆಗುತ್ತದೆ. ಬೇವು ಬಿತ್ತಿ ಮಾವಿನ ಫಲ ನಿರೀಕ್ಷಿಸಿದರೆ ಆಗುತ್ತದೆಯೇ? ಸಂಸ್ಕಾರವೆಂಬುದು ಮನೆಯಲ್ಲಿ ಬೆಳೆಯದೆ ಹೋದರೆ ಮನೆಯೆ ಮೊದಲ ಪಾಠಶಾಲೆ ಎಂಬ ಮಾತಿಗೆ ಯಾವ ಮಹತ್ವವೂ ಉಳಿಯುವುದಿಲ್ಲ. ಹಿರಿಯರೊಂದಿಗೆ, ಕಿರಿಯರೊಂದಿಗೆ, ಓರಗೆಯವರೊಂದಿಗೆ, ಕಲಿಸುವ ಗುರುಗಳೊಂದಿಗೆ, ಬೆಳೆಸುವ ಬಂಧುಗಳೊಂದಿಗೆ ಹೇಗೆ ವರ್ತಿಸಬೇಕು ಎಂಬ ತಿಳುವಳಿಕೆಯನ್ನು ಮಕ್ಕಳಿಗೆ ಎಳವೆಯಲ್ಲೇ ಕಲಿಸಲು ನಾವು ವಿಫಲರಾದೆವೆಂದರೆ ಆಮೇಲೆ ಅವರು ನಮ್ಮ ನಿರೀಕ್ಷೆಯಂತೆ ನಡೆದುಕೊಳ್ಳುತ್ತಿಲ್ಲ ಎಂದು ಅಲವತ್ತುಕೊಳ್ಳುವುದಕ್ಕೆ ನಮಗೆ ಯಾವ ನೈತಿಕತೆಯೂ ಉಳಿಯುವುದಿಲ್ಲ.

ಮಕ್ಕಳು ನಾವು ಹೇಳಿದ್ದನ್ನು ಕೇಳಲಾರರೇನೋ? ಆದರೆ ಮಾಡಿದ್ದನ್ನು ಮಾಡುತ್ತಾರೆ. ಯಾಕೆಂದರೆ ಮಕ್ಕಳದ್ದು ಕೇಳಿ ಕಲಿಯುವ ವಯಸ್ಸಲ್ಲ, ನೋಡಿ ಮಾಡುವ ವಯಸ್ಸು. ದೊಡ್ಡವರ ಒಣ ರಾಜಕೀಯ, ವಿನಾ ಪ್ರತಿಷ್ಠೆ, ಕ್ಲುಲ್ಲಕ ವೈಮನಸ್ಸು, ಅನಗತ್ಯ ದುರಹಂಕಾರ- ಎಲ್ಲವನ್ನೂ ಎಳೆಯ ಮಕ್ಕಳು ತಮಗೂ ಗೊತ್ತಿಲ್ಲದೆ ಅನುಸರಿಸುತ್ತಿರುತ್ತಾರೆ. ಅವರಿಗೆ ಅಪ್ಪ-ಅಮ್ಮಂದಿರಿಗಿಂತ, ಅವರಿಗಿಂತಲೂ ಹೆಚ್ಚು ಸಮಯ ಜತೆಯಲ್ಲಿ ಕಳೆಯುವ ಅಧ್ಯಾಪಕರುಗಳಿಗಿಂತ ದೊಡ್ಡ ಮಾದರಿಗಳಿಲ್ಲ. ಅವರು ತಮ್ಮ ನಡೆನುಡಿಗಳಲ್ಲಿ ತೋರಲಾಗದ್ದನ್ನು ಮಕ್ಕಳ ವರ್ತನೆಗಳಲ್ಲಿ ನಿರೀಕ್ಷಿಸುವುದರಲ್ಲಿ ಯಾವ ಅರ್ಥವೂ ಇಲ್ಲ.

ನಾವೆಲ್ಲ ಮಕ್ಕಳ ಐಕ್ಯೂ ಹಿಂದೆ ಬಿದ್ದುಬಿಟ್ಟಿದ್ದೇವೆ. ಅದನ್ನೇ ಬುದ್ಧಿವಂತಿಕೆಯೆಂದೂ, ಅದೇ ಬದುಕಿನ ಯಶಸ್ಸಿನ ಮಾನದಂಡವೆಂದೂ ತಪ್ಪು ತಿಳಿದುಕೊಂಡಿದ್ದೇವೆ. ಐಕ್ಯೂವಿನಷ್ಟೇ ಸಮಾನವಾದ ಇಕ್ಯೂ (ಇಮೋಶನಲ್ ಕೋಶೆಂಟ್)ವನ್ನು ಅವರಲ್ಲಿ ಬೆಳೆಸುವುದರಲ್ಲಿ ವಿಫಲರಾಗಿದ್ದೇವೆ. ಅವರಲ್ಲಿ ಪ್ರೀತಿ, ಗೌರವ, ಸಹನೆ, ಕರುಣೆ, ಅನುಕಂಪ, ಸಹಾನುಭೂತಿ ಇನ್ನಿತ್ಯಾದಿ ಭಾವ ವೈವಿಧ್ಯತೆಗಳ ಮರುಪೂರಣದ ಅಗತ್ಯ ತುಂಬ ಇದೆ. ದಿನದ ಇಪ್ಪತ್ನಾಲ್ಕು ಗಂಟೆಗಳನ್ನೂ ಮೊಬೈಲ್ ಉಪಾಸನೆ, ಸೀರಿಯಲ್ ಮಹಾಪೂಜೆಗಳಲ್ಲಿ ತಲ್ಲೀನರಾಗಿರುವ ಮನೆಮಂದಿಗೆ ಅದಕ್ಕಿಂತ ಭಿನ್ನವಾದ ಪ್ರಸಾದ ದೊರೆಯುವುದಾದರೂ ಹೇಗೆ?

ಸ್ಪಿರಿಚುವಲ್ ಕೋಶೆಂಟ್ ಇಂದು ಎಲ್ಲಕ್ಕಿಂತಲೂ ದೊಡ್ಡ ಅನಿವಾರ್ಯತೆ. ಮಕ್ಕಳಿಗೆ ಪುರಾಣದ, ಪಂಚತಂತ್ರದ ಕಥೆಗಳನ್ನು ಹೇಳಿ. ರಾಮಾಯಣ ಮಹಾಭಾರತ ಭಾಗವತಗಳನ್ನು ಸರಳವಾಗಿ ಪರಿಚಯಿಸಿ. ಸಂಗೀತ, ಕಲೆಗಳಲ್ಲಿ ಆಸಕ್ತಿ ಕುದುರುವಂತೆ ಮಾಡಿ. ಅವರೇನು ಮಹಾದೈವಭಕ್ತರಾಗಿ ಬೆಳೆಯಬೇಕಾಗಿಲ್ಲ, ಕನಿಷ್ಟ ಒಳ್ಳೆಯದು ಮಾಡಿದರೆ ಒಳ್ಳೆಯದಾಗುತ್ತದೆ, ಕೆಟ್ಟದು ಮಾಡಿದರೆ ಕೆಟ್ಟದಾಗುತ್ತದೆ, ಕೆಟ್ಟದ್ದನ್ನು ಶಿಕ್ಷಿಸುವ ಶಕ್ತಿಯೊಂದು ನಮ್ಮ ಬೆನ್ನಹಿಂದೆ ಸದಾ ಇದೆ ಎಂಬ ಭಾವನೆಯನ್ನಾದರೂ ಬೆಳೆಸಿ.  ಗೆಲ್ಲುವುದರೊಂದಿಗೆ ಸೋಲುವುದನ್ನೂ ಕಲಿಸಿ. ಸಣ್ಣಪುಟ್ಟ ಸೋಲುಗಳನ್ನು ದೊಡ್ಡದು ಮಾಡಲು ಹೋಗಬೇಡಿ. ಅವೆಲ್ಲ ಸಾಮಾನ್ಯ ಎಂಬ ಭಾವನೆಯನ್ನು ಬೆಳೆಸಿ. ಆಗ ಬದುಕಿನ ದೊಡ್ಡ ಸವಾಲುಗಳನ್ನು ಎದುರಿಸಲು ಮಗುವಿನ ಮನಸ್ಸು ಸಹಜವಾಗಿಯೇ ಸಿದ್ಧವಾಗುತ್ತದೆ.

-ಸಿಬಂತಿ ಪದ್ಮನಾಭ ಕೆ. ವಿ. 

ಶುಕ್ರವಾರ, ಸೆಪ್ಟೆಂಬರ್ 6, 2019

ಗುರಿಯಿಲ್ಲದ ಬದುಕು ಹಾಯಿ ಇಲ್ಲದ ದೋಣಿ

ಆಗಸ್ಟ್ 31- ಸೆಪ್ಟೆಂಬರ್ 6, 2019ರ ಬೋಧಿವೃಕ್ಷದಲ್ಲಿ ಪ್ರಕಟವಾದ ಲೇಖನ.

ಓರಗೆಯ ಮಕ್ಕಳು ಚಿನ್ನಿದಾಂಡು ಆಡುತ್ತಿದ್ದರೆ ಇವನೊಬ್ಬ ಅಂಕೆಸಂಖ್ಯೆಗಳೊಂದಿಗೆ ಆಟವಾಡುತ್ತಿದ್ದ. ದಿನಕ್ಕೆ ಒಂದು ಹೊತ್ತು ಹೊಟ್ಟೆ ತುಂಬ ಉಣ್ಣಲಾಗದ ಕಡುಬಡತನವಿದ್ದರೂ ತಲೆಯೊಳಗೆ ಬಂಗಾರದ ಗಣಿಯಿತ್ತು. ಕೂತಲ್ಲಿ ನಿಂತಲ್ಲಿ ನಡೆದಲ್ಲಿ ಗಣಿತಶಾಸ್ತ್ರೀಯ ಸೂತ್ರಗಳು ಕಣ್ಣ ಮುಂದೆ ತಕತಕನೆ ಕುಣಿಯುತ್ತಿದ್ದವು. ಇನ್ನೂ ಹನ್ನೊಂದರ ಹುಡುಗ ಯಾರೋ ಹರಿದೆಸೆದ ಬಿಳಿ ಹಾಳೆಗಳ ಮೇಲೆ ಮನಸ್ಸಿಗೆ ಬಂದ ಬೀಜಗಣಿತದ ಸಮೀಕರಣಗಳನ್ನು ಗೀಚುತ್ತಿದ್ದರೆ ಕಾಲೇಜು ಪ್ರೊಫೆಸರುಗಳಿಗೂ ಅರಗಿಸಿಕೊಳ್ಳಲಾಗದ ವಿಸ್ಮಯ.

ಆತ ಜಗತ್ತು ಕಂಡ ಶ್ರೇಷ್ಠ ಗಣಿತಶಾಸ್ತ್ರಜ್ಞರಲ್ಲಿ ಒಬ್ಬರಾದ ಶ್ರೀನಿವಾಸ ರಾಮಾನುಜನ್. ಅವರು ಬರೆದಿಟ್ಟಿದ್ದ ಗಣಿತದ ಸಮೀಕರಣಗಳನ್ನು ಕಂಡು ವಿಶ್ವವಿಖ್ಯಾತ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೇ ಬೆಚ್ಚಿಬಿದ್ದಿದ್ದರು. ‘ಸರಿಯಾದ ಕಾಲೇಜು ಶಿಕ್ಷಣವೇ ಆಗಿಲ್ಲ ನಿನಗೆ. 'ಯೂನಿವರ್ಸಿಟಿ ಡಿಗ್ರಿಯೂ ಇಲ್ಲ. ಅತ್ಯಂತ ಕಠಿಣ ಸಮೀಕರಣಗಳನ್ನೆಲ್ಲ ಬಿಡಿಸಿದ್ದೀಯ. ಅದು ಹೇಗೆ? ಉತ್ತರ ಎಲ್ಲಿಂದ ಬಂತು?’ ಪ್ರೊ. ಹಾರ್ಡಿ ಕೇಳುತ್ತಿದ್ದರೆ ರಾಮಾನುಜನ್ ಉತ್ತರ: ‘ಗೊತ್ತಿಲ್ಲ ಸರ್. ನನ್ನ ಮನಸ್ಸಿಗೆ ಹೊಳೆಯಿತು. ಬರೆದಿದ್ದೇನೆ ಅಷ್ಟೇ.’

ಇವನ್ನೆಲ್ಲ ನಿಜಕ್ಕೂ ಈ ಹುಡುಗನೇ ಬರೆದನಾ ಎಂದು ಅವರೆಲ್ಲ ತಲೆಕೆಡಿಸಿಕೊಳ್ಳುವಷ್ಟರಮಟ್ಟಿನ ಅಪೂರ್ವ ಸಂಶೋಧನೆಗಳನ್ನು ರಾಮಾನುಜನ್ ಮಾಡಿದ್ದರು. ಕೊನೆಗೊಂದು ದಿನ ಲಂಡನ್‍ನ ವಿಶ್ವವಿಖ್ಯಾತ ರಾಯಲ್ ಸೊಸೈಟಿ ತನ್ನೆಲ್ಲ ನಿಯಮಗಳನ್ನು ಸಡಿಲಿಸಿ 30ರ ತರುಣ ರಾಮಾನುಜರನ್ನು ತನ್ನ ಫೆಲೋ ಎಂದು ಘೋಷಿಸಿತು. ಅವರು ಬರೆದಿಟ್ಟದ್ದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಇನ್ನೂ ನಮ್ಮ ಗಣಿತಲೋಕಕ್ಕೆ ಸಾಧ್ಯವಾಗಿಲ್ಲ. ಹಿ ವಾಸ್ ಎ ಜೀನಿಯಸ್!

ದೊಡ್ಡದೊಂದು ಗುರಿ, ಯಾರಿಂದಲೂ ತಡೆಯಲಾಗದ ಮಹತ್ವಾಕಾಂಕ್ಷೆ- ಇವೆರಡೂ ಇದ್ದರೆ ಮನುಷ್ಯ ಏನನ್ನೂ ಸಾಧಿಸಬಲ್ಲ ಎಂಬುದಕ್ಕೆ ಶ್ರೀನಿವಾಸ ರಾಮಾನುಜನರೇ ಸಾಕ್ಷಿ. ಗಣಿತ ಬಿಟ್ಟು ಅವರಿಗೆ ಇನ್ನೇನೂ ಅರ್ಥವಾಗುತ್ತಿರಲಿಲ್ಲ. ಪ್ರತಿಕ್ಷಣ, ಪ್ರತಿನಿಮಿಷವೂ ಅವರ ಮನಸ್ಸು ಗಣಿತಕ್ಕಾಗಿ ಹಪಹಪಿಸುತ್ತಿತ್ತು. ಊಟ, ನೀರು, ನಿದ್ದೆಯಿಲ್ಲದಿದ್ದರೂ ನಡೆಯುತ್ತಿತ್ತು; ಗಣಿತವಿಲ್ಲದೆ ಅವರಿಗೆ ಬದುಕು ಅಸಾಧ್ಯವಾಗಿತ್ತು. ಕೇವಲ 32 ವರ್ಷ ಬದುಕಿದ್ದ ರಾಮಾನುಜನ್ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲು ಕಾರಣ ಅವರೊಳಗಿದ್ದ ಗುರಿಸಾಧನೆಯ ಕಿಚ್ಚು.

‘ದೊಡ್ಡ ಗುರಿಗಳಿಂದ ದೊಡ್ಡ ವ್ಯಕ್ತಿಗಳು ಹುಟ್ಟಿಕೊಳ್ಳುತ್ತಾರೆ. ತಾವು ಕಾಣದ ಗುರಿಯನ್ನು ಜನ ಹೇಗೆ ತಾನೇ ಬೇಧಿಸಿಯಾರು?’ ಎಂದು ಕೇಳುತ್ತಾರೆ ರಾಯ್ ಬೆನೆಟ್. ಅದನ್ನೇ ಸಾವಿರಾರು ವರ್ಷಗಳ ಹಿಂದೆ ದ್ರೋಣಾಚಾರ್ಯರು ತಮ್ಮ ಶಿಷ್ಯರಲ್ಲಿ ಕೇಳಿದ್ದರು. ಮರದ ಮೇಲೆ ಕುಳಿತಿರುವ ಹಕ್ಕಿಯ ಕಣ್ಣಿಗೆ ಗುರಿಯಿಡಲು ಸೂಚಿಸಿದ ಮೇಲೆ ‘ಹೇಳಿ ನಿಮಗೇನು ಕಾಣುತ್ತಿದೆ’ ಎಂದು ಅವರು ಎಲ್ಲರನ್ನೂ ಕೇಳಿದರಂತೆ. ಸುತ್ತಲಿನ ತೋಟ, ಅಲ್ಲಿನ ಮರಗಿಡಗಳು, ಹೂವು, ಹಣ್ಣು, ರೆಂಬೆಕೊಂಬೆ... ಒಬ್ಬೊಬ್ಬರಿಗೆ ಒಂದೊಂದು ಕಂಡರೆ ಅರ್ಜುನ ಮಾತ್ರ ‘ಹಕ್ಕಿಯ ಕಣ್ಣು ಕಾಣಿಸುತ್ತಿದೆ ಗುರುಗಳೆ’ ಎಂದಿದ್ದನಂತೆ. ಅದಕ್ಕೇ ಅವನು ಮುಂದೆ ತ್ರಿಲೋಕಗಳಲ್ಲೂ ಸಾಟಿಯಿಲ್ಲದ ಬಿಲ್ಗಾರ ಎನಿಸಿಕೊಂಡ. ತಾವು ಸಾಧಿಸಬೇಕಿರುವುದು ಏನೆಂದು ಅರ್ಥ ಮಾಡಿಕೊಳ್ಳಲಾಗದವರು ವಾಸ್ತವವಾಗಿ ಸಾಧನೆಯೊಂದನ್ನು ಮಾಡುವುದಾದರೂ ಹೇಗೆ?

ಗುರಿಯಿಲ್ಲದ ಬದುಕು ಸೂತ್ರವಿಲ್ಲದ ಗಾಳಿಪಟದ ಹಾಗೆ, ಹಾಯಿ ಇಲ್ಲದ ದೋಣಿಯ ಹಾಗೆ. ಬಸ್ಸು ಹತ್ತಿ ಕುಳಿತವನಿಗೂ ಎಲ್ಲಿಗೆ ಟಿಕೇಟು ತೆಗೆದುಕೊಳ್ಳಬೇಕು ಎಂದು ತಿಳಿದಿರುತ್ತದೆ. ಇನ್ನು ಬದುಕಿನ ಬಂಡಿ ಏರಿದವನಿಗೆ ಎಲ್ಲಿ ಇಳಿಯಬೇಕು ಎಂಬ ಅರಿವಿಲ್ಲದಿದ್ದರೆ ಹೇಗೆ? ಗುರಿಯ ಅರಿವು ಸಾಧನೆಗೆ ಬಲವನ್ನೂ, ಹುರುಪನ್ನೂ, ಏಕಾಗ್ರತೆಯನ್ನೂ, ಶ್ರದ್ಧೆಯನ್ನೂ ಕೊಡುತ್ತದೆ. ಗುರಿಯಿಲ್ಲದ ಉತ್ಸಾಹ ಕಾಳ್ಗಿಚ್ಚಿಗೆ ಸಮ. ಕಾಡು ಉರಿದು ಬೂದಿಯಾಗುತ್ತದೆಯೇ ಹೊರತು ಒಳ್ಳೆಯದೇನೂ ಆಗುವುದಿಲ್ಲ. ಅರ್ಧ ಆಯಸ್ಸು ಕಳೆದ ಮೇಲೂ ಅನೇಕ ಮಂದಿಗೆ ಜೀವನದಲ್ಲಿ ತಾವೇನು ಮಾಡಬೇಕು ಎಂಬ ಸ್ಪಷ್ಟತೆ ಇರುವುದಿಲ್ಲ. ಹುಟ್ಟಿದ ಮೇಲೆ ಎಲ್ಲರೂ ಸಾಯಲೇಬೇಕು, ಅವರೂ ಒಂದು ದಿನ ಸಾಯುತ್ತಾರೆ. ಒಂದು ಜೀವನದ ಘನತೆ ಅಷ್ಟೇ ಏನು? ಇನ್ನು ಕೆಲವರಿಗೆ ಸಮಸ್ಯೆಗಳೇ ಮುಗಿಯುವುದಿಲ್ಲ. ಜಗತ್ತಿನ ಎಲ್ಲ ಸಮಸ್ಯೆಗಳೂ ತಮಗೊಬ್ಬರಿಗೇ ಬಂದಿದೆ ಎಂದು ಹಲುಬುತ್ತಿರುತ್ತಾರೆ. ಏನಾದರೂ ಸಾಧಿಸಬೇಕು ಎಂಬ ಆಸೆಯೇನೋ ಇದೆ, ಆದರೆ ಈ ಸಮಸ್ಯೆಗಳು ತನ್ನನ್ನು ಬಿಡುವುದಿಲ್ಲ ಎಂಬ ನೆಪ ಹೇಳುತ್ತಾರೆ. ಅವರು ಸಮಸ್ಯೆಗಳ ನಡುವೆಯೇ ಜೀವನ ನೂಕುತ್ತಾ ಅತೃಪ್ತ ಆತ್ಮಗಳಾಗಿಯೇ ಉಳಿಯುತ್ತಾರೆಯೇ ವಿನಾ ಎಂದೂ ಸಂತೃಪ್ತಿ ಕಾಣುವುದೇ ಇಲ್ಲ.

ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು|
ಗುರುತಿಸೊಳಿತಿರುವುದನು ಕೇಡುಗಳ ನಡುವೆ||
ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು|
ಹರುಷಕದೆ ದಾರಿಯೆಲೊ- ಮಂಕುತಿಮ್ಮ||
ಸರ್ಕಾರಿ ಬಸ್ಸಲ್ಲಿ ಕುಳಿತ ಬಹುಮಂದಿಯೂ ಚಾಲಕನ ಹಿಂದಿರುವ ಎರಡು ಗೆರೆಗಳ ಭಾಗ್ಯದ ವಿಚಾರವನ್ನು ಓದಿ ತಲೆಕೆರೆದುಕೊಂಡು ಸುಮ್ಮನಾಗುತ್ತಾರೆಯೇ ಹೊರತು ತಮ್ಮ ಹರುಷದ ದಾರಿಯ ಬಗ್ಗೆ ಯೋಚಿಸುವುದೇ ಇಲ್ಲ. ಗುರಿ-ದಾರಿಗಳ ಸ್ಪಷ್ಟ ಅರಿವು ಇಲ್ಲದಿರುವವರು ಜೀವನದಲ್ಲಿ ಯಾವ ನಿಲ್ದಾಣವನ್ನೂ ತಲುಪುವುದಿಲ್ಲ. ‘ತನ್ನ ಕಣ್ಣುಗಳನ್ನು ಗುರಿಯಿಂದ ಕದಲಿಸುವವನು ಮಾತ್ರ ದಾರಿಯಲ್ಲಿ ಅಡೆತಡೆಗಳನ್ನು ಕಾಣುತ್ತಾನೆ’ ಎಂಬ ಜೋಸೆಫ್ ಕಾಸ್ಮಾನ್ ಮಾತು ಇಲ್ಲಿ ನೆನಪಾಗಬೇಕು. ವ್ಯಕ್ತಿಯೊಬ್ಬನಿಗೆ ತನ್ನ ಹಾದಿಯಲ್ಲಿ ಬರೀ ಅಡ್ಡಿ ಆತಂಕಗಳೇ ಕಾಣುತ್ತವೆಂದರೆ ಆತನ ದೃಷ್ಟಿ ಭದ್ರವಾಗಿ ಗುರಿಯ ಮೇಲೆ ನೆಟ್ಟಿಲ್ಲ ಎಂದೇ ಅರ್ಥ.

ಬದುಕಿನಲ್ಲಿ ಸೋತರೆ ತಪ್ಪಲ್ಲ, ಆದರೆ ಸಣ್ಣ ಗುರಿಯನ್ನು ಇಟ್ಟುಕೊಳ್ಳುವುದು ಅಪರಾಧ ಎಂಬ ದಾರ್ಶನಿಕರ ಮಾತು ನಮಗೆ ದೊಡ್ಡ ಪಾಠ. ನಮ್ಮ ಪ್ರಯತ್ನಗಳು ಸುಖಾಸುಮ್ಮನೆ ವ್ಯರ್ಥವಾಗುವುದೇ ಇಲ್ಲ. ಒಂದು ಕಡೆ ಸೋತಂತೆ ಕಂಡರೂ ಅದಕ್ಕಾಗಿ ಹಾಕಿದ ಶ್ರಮ ಇನ್ನೆಲ್ಲೋ ಒಂದು ಕಡೆ ಫಲ ನೀಡಿಯೇ ನೀಡುತ್ತದೆ. ಹತ್ತು ಕಡೆ ಹಳ್ಳ ತೋಡುವುದಕ್ಕಿಂತ ಒಂದೇ ಕಡೆ ಹತ್ತುಕಡೆಯ ಶ್ರಮವನ್ನು ಹಾಕಿದರೆ ನೀರಾದರೂ ದೊರೆತೀತು. ಗುರಿಸಾಧನೆಯ ದಾರಿಯಲ್ಲಿ ಸಣ್ಣಪುಟ್ಟ ಆಕರ್ಷಣೆಗಳು ಎದುರಾಗುವುದು ಸಹಜ. ಅವುಗಳಿಂದ ವಿಚಲಿತರಾಗದ ಗಟ್ಟಿ ಮನಸ್ಸು ಬೇಕು. ಹೆದ್ದಾರಿಯ ತುದಿಯಲ್ಲಿ ಫಲಿತಾಂಶ ಖಚಿತ ಇದೆಯೆಂದು ತಿಳಿದಿರುವಾಗ ಅಡ್ಡದಾರಿಗಳ ಗೊಡವೆಯೇಕೆ?

- ಸಿಬಂತಿ ಪದ್ಮನಾಭ ಕೆ. ವಿ.

ಬುಧವಾರ, ಆಗಸ್ಟ್ 28, 2019

ಯಾಣದ ಸೊಬಗಿನ ಹಿಂದಿನ ಕೈಗಳ ಕಾಣಾ!

27 ಆಗಸ್ಟ್ 2019ರ ಪ್ರಜಾವಾಣಿ - ಕರ್ನಾಟಕ ದರ್ಶನ ಪುರವಣಿಯಲ್ಲಿ ಪ್ರಕಟವಾದ ಲೇಖನ
ಮೂಲ ಲೇಖನಕ್ಕೆ ಇಲ್ಲಿ ಕ್ಲಿಕ್ಕಿಸಿ.

ಶೈಲಾ ಪಟಗಾರ ಮತ್ತು ವಿನೋದ ಮರಾಟಿ. ಈ ಹೆಸರುಗಳನ್ನು ನೀವು ಕೇಳದೇ ಇರಬಹುದು. ಆದರೆ ಕಳೆದ ಒಂದೆರಡು ವರ್ಷಗಳಲ್ಲಿ ಯಾಣಕ್ಕೇನಾದರೂ ಪ್ರವಾಸ ಕೈಗೊಂಡಿದ್ದರೆ ಖಾಕಿ ಸಮವಸ್ತ್ರದಲ್ಲಿರುವ ಈ ಇಬ್ಬರು ಮಹಿಳೆಯರನ್ನು ಮಾತ್ರ ನೋಡದೆ ಇದ್ದಿರಲಾರಿರಿ.

ಯಾಣದ ಪ್ರವೇಶದ್ವಾರದಿಂದ ತೊಡಗಿ ವಿಶ್ವಪ್ರಸಿದ್ಧ ಅವಳಿ ಶಿಲೆಗಳವರೆಗಿನ ಒಂದು ಮೈಲಿ ದೂರದ ಕಾಲುಹಾದಿಗುಂಟ ಬೆಳಗ್ಗಿನಿಂದ ಸಂಜೆಯವರೆಗೂ ಅತ್ತಿಂದಿತ್ತ ಇತ್ತಿಂದತ್ತ ಹೆಜ್ಜೆಹಾಕುವ ಈ ಹೆಣ್ಮಕ್ಕಳ ಬದ್ಧತೆ ನಿಮ್ಮಲ್ಲಿ ಸೋಜಿಗ ಹಾಗೂ ಹೆಮ್ಮೆಯನ್ನು ತುಂಬದೆ ಇರಲಾರದು.

ಕೈಯ್ಯಲ್ಲೊಂದು ಕಬ್ಬಿಣದ ಕೊಕ್ಕೆ ಹಿಡಿದು ಹೊರಟರೆಂದರೆ ಕುಡಿದು ಎಸೆದ ನೀರಿನ ಬಾಟಲ್, ತಿಂದು ಮುದುರಿದ ಕುರುಕಲಿನ ಕವರು – ಇಂಥವುಗಳನ್ನು ಬಿಟ್ಟರೆ ಅವರಿಗೆ ಬೇರೇನೂ ಕಾಣುವುದೇ ಇಲ್ಲ. ಕಂಡಲ್ಲೆಲ್ಲ ಅವುಗಳನ್ನು ಕೊಕ್ಕೆಯ ಸಹಾಯದಿಂದ ಹೆಕ್ಕಿ ಅಲ್ಲಲ್ಲೇ ಇರುವ ಕಸದ ಬುಟ್ಟಿಗಳಿಗೆ ತುಂಬಿಸುತ್ತಾ ಹೋಗುವುದೇ ಅವರ ಏಕೈಕ ಕಾಯಕ.

ಕೆಲಸ ಸರಳವಾಗಿ ಕಾಣಬಹುದು. ಆದರೆ ನಮ್ಮ ಸುತ್ತಲಿನ ನೂರಾರು ಪ್ರವಾಸೀ ತಾಣಗಳ ಪೈಕಿ ಇಂದು ಪ್ಲಾಸ್ಟಿಕ್ ಹಾವಳಿ ತೀರಾ ಕಡಿಮೆಯಿರುವುದು ಕತಗಾಲ ಅರಣ್ಯ ವಲಯಕ್ಕೆ ಸೇರುವ ಯಾಣದಲ್ಲಿ ಎಂದರೆ ಅದಕ್ಕೆ ಈ ಇಬ್ಬರು ಹೆಣ್ಮಕ್ಕಳ ಶ್ರದ್ಧೆ ಮತ್ತು ಬದ್ಧತೆಯೇ ಕಾರಣ. ಶೈಲಾ ಮತ್ತು ವಿನೋದ ಇಬ್ಬರೂ ಯಾಣದ ಸ್ಥಳೀಯರೇ. ಗ್ರಾಮ ಅರಣ್ಯ ಸಮಿತಿಯಿಂದ ಇವರು ನೇಮಕಗೊಂಡಿರುವುದೇ ಯಾಣವನ್ನು ಪ್ಲಾಸ್ಟಿಕ್‍ಮುಕ್ತವನ್ನಾಗಿ ಇರಿಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿರುವ ಯಾಣಕ್ಕೆ ಪ್ರತಿವರ್ಷ ಏನಿಲ್ಲವೆಂದರೂ ಒಂದು ಲಕ್ಷ ಪ್ರವಾಸಿಗರು ಭೇಟಿನೀಡುತ್ತಾರೆ.  ಯಾಣದ ನಿತ್ಯಹರಿದ್ವರ್ಣ ಕಾಡು, ಕಲ್ಮಶರಹಿತ ಗಾಳಿ, ಅಲ್ಲಲ್ಲಿ ಜಿನುಗುವ ನೀರಿನ ಒರತೆ, ಕಪ್ಪುಮಣ್ಣಿನ ಮೇಲೆ ಒಪ್ಪವಾಗಿ ಹರಡಿಕೊಂಡಿರುವ ಮೆತ್ತಗಿನ ಹುಲ್ಲು, ಎಂತಹ ಒತ್ತಡದ ಮನಸ್ಸುಗಳನ್ನೂ ಕ್ಷಣಕಾಲ ನಿರಾಳವಾಗಿಸಬಲ್ಲ ತಂಪುತಂಪು ವಾತಾವರಣ, ಎಲ್ಲವಕ್ಕೂ ಕಿರೀಟವಿಟ್ಟಂತೆ ಆಕಾಶದತ್ತ ಚಾಚಿಕೊಂಡು ನೋಡುಗರನ್ನು ನಿಬ್ಬೆರಗಾಗಿಸುವಂತೆ ನಿಂತಿರುವ ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರಗಳೆಂಬ ಕಡುಕಪ್ಪು ಅವಳಿ ಶಿಲೆಗಳು- ಇವುಗಳತ್ತ ಪ್ರತಿದಿನ ನಾಡಿನ ವಿವಿಧ ದಿಕ್ಕುಗಳಿಂದ ನೂರಾರು ಮಂದಿ ಆಕರ್ಷಿತರಾಗಿ ಓಡಿಬರುತ್ತಾರೆ ಎಂದರೆ ಅಚ್ಚರಿಯೇನೂ ಇಲ್ಲ. ಅಚ್ಚರಿಯಾಗುವುದು ಇಂತಹ ರಮಣೀಯ ಪರಿಸರಕ್ಕೆ ಕೈಗೆ ಸಿಕ್ಕಿದ ತ್ಯಾಜ್ಯಗಳನ್ನೆಲ್ಲ ಎಸೆದು ಹೋಗುವ ಮನಸ್ಸಾದರೂ ಜನರಿಗೆ ಹೇಗೆ ಬರುತ್ತದೆ ಎಂಬ ಪ್ರಶ್ನೆಗೆ. ಇದನ್ನು ಅಚ್ಚರಿ ಎಂಬುದಕ್ಕಿಂತಲೂ ಬೇಸರ ಎಂಬುದೇ ಹೆಚ್ಚು ಸರಿ.

“ದಿನಕ್ಕೆ ಏನಿಲ್ಲವೆಂದರೂ ಐದು ಕೆ.ಜಿ. ಪ್ಲಾಸ್ಟಿಕ್ ಸಂಗ್ರಹವಾಗುತ್ತದೆ. ವಾರಾಂತ್ಯಗಳಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಾಗಿರುವುದರಿಂದ ಈ ಪ್ರಮಾಣ ಇಮ್ಮಡಿಯಾಗುವುದೂ ಇದೆ,” ಎನ್ನುತ್ತಾರೆ ಶೈಲಾ ಪಟಗಾರ. “ಪ್ಲಾಸ್ಟಿಕ್ ಎಸೀಬೇಡಿ ಅಂತ ಕಂಡವರನ್ನೆಲ್ಲ ಬೇಡಿಕೊಳ್ಳುತ್ತೇವೆ. ಆದರೆ ಕಿವಿಗೆ ಹಾಕಿಕೊಳ್ಳುವವರು ಕಡಿಮೆ. ಬಿದ್ದ ಪ್ಲಾಸ್ಟಿಕ್ ಹೆಕ್ಕಿ ಮುಂದಕ್ಕೆ ಹೋಗುತ್ತಿದ್ದ ಹಾಗೆ ಅಲ್ಲೇ ಮತ್ತೆ ಕಸ ಎಸೆಯುವವರಿಗೇನೂ ಕಮ್ಮಿಯಿಲ್ಲ. ಅಲ್ಲೊಂದು ಪ್ಲಾಸ್ಟಿಕ್ ಉಳಿದುಕೊಂಡಿದೆ ನೋಡಿ, ಹೆಕ್ಕಿಕೊಳ್ಳಿ ಎಂದು ನಮಗೇ ತಿಳಿಹೇಳುವವರೂ ಇದ್ದಾರೆ” ಎಂದು ನೆನಪಿಸಿಕೊಳ್ಳುತ್ತಾರೆ ವಿನೋದ.

ಯಾಣದ ಶಿಲೆಗಳತ್ತ ಸಾಗುವ ಹಾದಿಯುದ್ದಕ್ಕೂ ಸ್ವಚ್ಛತೆಯನ್ನು ಕಾಪಾಡುವಂತೆ ಪ್ರವಾಸಿಗರನ್ನು ಕೋರುವ ಹತ್ತಾರು ಫಲಕಗಳನ್ನು ಅರಣ್ಯ ಇಲಾಖೆ ಸ್ಥಾಪಿಸಿದೆ. ಹೆಜ್ಜೆಗೊಂದರಂತೆ ಕಸದ ಬುಟ್ಟಿಗಳನ್ನು ಇರಿಸಿದೆ. ಆದರೆ ಅವುಗಳತ್ತ ಗಮನ ಕೊಡುವವರು ಮಾತ್ರ ವಿರಳ.

2017ರ ಆರಂಭದಲ್ಲಿ ನೇಮಕಗೊಂಡ ಶೈಲಾ-ವಿನೋದ ಇಬ್ಬರೂ ದಿನಕ್ಕೆ ಹತ್ತು-ಹದಿನೈದು ಕಿ.ಮೀ. ಓಡಾಡುತ್ತಲೇ ಈವರೆಗೆ ಮೂರು ಟನ್ ಆದರೂ ಪ್ಲಾಸ್ಟಿಕ್‍ನ್ನು ಸಂಗ್ರಹಿಸಿರಬಹುದು. ನೆಲದೊಳಕ್ಕೆ ಸೇರಿಹೋಗಬಹುದಾಗಿದ್ದ ಎಷ್ಟು ದೊಡ್ಡ ಪ್ರಮಾಣದ ಪ್ಲಾಸ್ಟಿಕ್ ಅನ್ನು ಈ ಹೆಮ್ಮಕ್ಕಳು ತಡೆಹಿಡಿದಿದ್ದಾರೆ ಎಂಬುದೇ ದೊಡ್ಡದೊಂದು ಹೆಮ್ಮೆಯ ಸಂಗತಿ. ಪ್ರತೀ ವಾರಾಂತ್ಯದಲ್ಲಿ ಅವರು ಸಂಗ್ರಹಿಸಿದ ಕಸವನ್ನು ಕುಮಟಾ ನಗರಸಭೆಯ ವಾಹನಗಳು ಕೊಂಡೊಯ್ದು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುತ್ತವೆ.

“ಈ ಮಹಿಳೆಯರು ಮಾಡುವ ಕೆಲಸಕ್ಕೆ ಗ್ರಾಮ ಅರಣ್ಯ ಸಮಿತಿಯಿಂದ ಪುಟ್ಟ ಸಂಭಾವನೆ ಇದೆ. ಆದರೆ ಅವರು ಮಾಡುವ ಕೆಲಸ, ಶ್ರದ್ಧೆ, ಬದ್ಧತೆ ಮತ್ತು ನಿರಂತರತೆಯ ಎದುರು ಆ ಸಂಭಾವನೆ ಏನೇನೂ ಅಲ್ಲ. ಅವರು ಮಹಿಳೆಯರಾಗಿರುವುದರಿಂದಲೇ ಈ ಬದ್ಧತೆ ಸಾಧ್ಯವಾಗಿರಬೇಕು” ಎನ್ನುತ್ತಾರೆ ಸ್ಥಳೀಯ ನಿವಾಸಿಯೊಬ್ಬರು. “ಆದರೆ ಸ್ವತಃ ಪ್ಲಾಸ್ಟಿಕ್ ಹೆಕ್ಕುವುದಕ್ಕಿಂತಲೂ ಪ್ರವಾಸಿಗರು ಅವನ್ನು ಎಸೆದುಹೋಗದಂತೆ ಅವರಿಗೆ ತಿಳಿಹೇಳುವ ಕೆಲಸವನ್ನೂ ಇವರು ಮಾಡಬೇಕು. ನಮ್ಮ ಒಂದೊಂದು ಪ್ರವಾಸಿ ತಾಣಗಳಲ್ಲೂ ಇಂತಹ ಯೋಜನೆ ಜಾರಿಗೆ ಬಂದರೆ ಅದರ ಒಟ್ಟಾರೆ ಪರಿಣಾಮ ನಿಜಕ್ಕೂ ತುಂಬ ವಿಭಿನ್ನವಾಗಿರಬಹುದು” ಎನ್ನುತ್ತಾರೆ ಅವರು.

“ವಾಸ್ತವವಾಗಿ ನಾವು ಪ್ರಕೃತಿಗಾಗಿ ಹೊಸದೇನನ್ನೂ ಮಾಡಬೇಕಿಲ್ಲ. ಅದು ಸಹಜವಾಗಿ ತನ್ನಪಾಡಿಗೆ ತಾನು ಇರಲು ಅವಕಾಶ ಮಾಡಿಕೊಟ್ಟರೆ ಸಾಕು. ಆದರೆ ಪ್ರವಾಸಿಗರಿಗೆ ಈ ವಿಷಯ ಅರ್ಥವೇ ಆಗುವುದಿಲ್ಲ. ಈ ಇಬ್ಬರು ಮಹಿಳೆಯರ ನಿಸ್ವಾರ್ಥ ಸೇವೆ ಖಂಡಿತ ಪ್ರಶಂಸಾರ್ಹ” ಎನ್ನುತ್ತಾರೆ ಯಾದಗಿರಿ ಜಿಲ್ಲೆಯ ಮಂಜಲಾಪುರದಿಂದ ಬಂದ ಪ್ರವಾಸಿ ಪರಶುರಾಮ ಐಕೂರು.

ಯಾಣದಂತಹ ರಮಣೀಯ ತಾಣಗಳು ಅಂದಗೆಡಿಸಿಕೊಳ್ಳುತ್ತಿರುವುದು ವಿದ್ಯಾವಂತ ಮಂದಿಯಿಂದಲೇ ಎಂಬುದು ಗುಬ್ಬಿ ತಾಲೂಕಿನ ಕಡಬದ ಪ್ರವಾಸಿ ಪಿ. ಕವಿತ ಅವರ ಅಭಿಮತ. “ನಿರ್ದಿಷ್ಟವಾಗಿ ವಾರಾಂತ್ಯಗಳಲ್ಲಿ ಇಂತಹ ಪ್ರದೇಶಗಳಿಗೆ ಭೇಟಿ ನೀಡುವುದು ವಿದ್ಯಾವಂತ ಉದ್ಯೋಗಸ್ಥ ಮಂದಿಯೇ. ಅವರು ತಮ್ಮ ಕನಿಷ್ಟ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳದಿರುವುದು ಮಾತ್ರ ವಿಚಿತ್ರ. ಬರೀ ಕಾನೂನು-ನಿಯಮಗಳಿಂದ ಏನು ತಾನೇ ಸಾಧಿಸಲು ಸಾಧ್ಯ? ಬದಲಾಗಬೇಕಿರುವುದು ಜನರ ಮನಸ್ಥಿತಿ,” ಎನ್ನುತ್ತಾರೆ ಅವರು.

ಪ್ಲಾಸ್ಟಿಕ್ ತ್ಯಾಜ್ಯ ವಿಷಯವಾಗಿ ರಾಜ್ಯ ಮತ್ತು ದೇಶದಲ್ಲಿರುವ ನೂರಾರು ಪ್ರಸಿದ್ಧ ಪ್ರವಾಸಿ ಹಾಗೂ ಚಾರಣ ತಾಣಗಳು ಎಚ್ಚೆತ್ತುಕೊಳ್ಳುವುದು ಇಂದಿನ ಅನಿವಾರ್ಯತೆ. ಹೊಸದೇನನ್ನು ಮಾಡಲಾಗದಿದ್ದರೂ ಅರಣ್ಯ ಇಲಾಖೆ ಪೋಷಿಸಿರುವ ಯಾಣದ ಸಿದ್ಧ ಮಾದರಿಯೊಂದನ್ನು ಅಳವಡಿಸಿಕೊಳ್ಳುವುದು ಅಂತಹ ಕಷ್ಟವೇನೂ ಆಗಲಾರದು.
- ಸಿಬಂತಿ ಪದ್ಮನಾಭ ಕೆ. ವಿ.

ಸೋಮವಾರ, ಆಗಸ್ಟ್ 26, 2019

ಅಮೇರಿಕದಲ್ಲಿ ನಾಣ್ಯ ಬಿದ್ದರೆ ಭಾರತದಲ್ಲೂ ಸದ್ದು!

26 ಆಗಸ್ಟ್ 2019ರ ವಿಜಯವಾಣಿ (ವಿತ್ತವಾಣಿ ಪುರವಣಿ)ಯಲ್ಲಿ ಪ್ರಕಟವಾದ ಲೇಖನ

ಭಾರತ ಮತ್ತೊಂದು ಆರ್ಥಿಕ ಹಿಂಜರಿತದ ಹೊಸ್ತಿಲಲ್ಲಿ ನಿಂತಿದೆಯೇ ಎಂಬ ಬಗ್ಗೆ ಬಿಸಿಬಿಸಿ ಚರ್ಚೆಗಳು ಆರಂಭವಾಗಿವೆ. ದೊಡ್ಡದೊಡ್ಡ ಕಂಪೆನಿಗಳು ಉತ್ಪಾದನೆಯನ್ನು ಕಡಿತಗೊಳಿಸಿರುವ, ನಷ್ಟವನ್ನು ಅನುಭವಿಸುತ್ತಿರುವ, ಉದ್ಯೋಗಿಗಳನ್ನು ಮನೆಗೆ ಕಳಿಸುತ್ತಿರುವ ಕುರಿತ ವಿವಿಧ ವರದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. 2008ರಲ್ಲಿ ತಲೆದೋರಿದ ಆರ್ಥಿಕ ಕುಸಿತದೊಂದಿಗೆ ನಾವು ಮತ್ತೊಮ್ಮೆ ಸೆಣಸಬೇಕಾಗಿದೆಯೇ ಎಂಬ ಆತಂಕ ಅನೇಕ ಮಂದಿಯಲ್ಲಿ ಮನೆ ಮಾಡಿದೆ.

“70 ವರ್ಷಗಳಲ್ಲೇ ದೇಶ ಅತ್ಯಂತ ವಿಚಿತ್ರವಾದ ಸಂದಿಗ್ಧದ ಪರಿಸ್ಥಿತಿಯೊಂದನ್ನು ಎದುರಿಸುತ್ತಿದೆ. ಖಾಸಗಿ ರಂಗದವರು ಯಾರು ಯಾರನ್ನೂ ನಂಬದ ಪರಿಸ್ಥಿತಿಯಲ್ಲಿ ಇದ್ದಾರೆ. ಕೇಂದ್ರ ಸರ್ಕಾರ ಈಗ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕಾಗಿದೆ. ಖಾಸಗಿಯವರ ಮನಸ್ಸಿನಲ್ಲಿ ಕಾಡುತ್ತಿರುವ ಸಂಶಯಗಳನ್ನು ನಿವಾರಿಸಿ, ಅವರು ಮತ್ತೆ ಧೈರ್ಯವಾಗಿ ಹೂಡಿಕೆಯಲ್ಲಿ ತೊಡಗುವಂತೆ ಮಾಡುವುದು ಸರ್ಕಾರದ ಕರ್ತವ್ಯ” ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿರುವ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದೊಂದು ಜಾಗತಿಕ ವಿದ್ಯಮಾನ, ಯಾರೂ ಧೈರ್ಯ ಕಳೆದುಕೊಳ್ಳಬೇಕಿಲ್ಲ ಎಂದು ಸಮಾಧಾನದ ಮಾತುಗಳನ್ನಾಡಿದ್ದಾರೆ.

ಆರ್ಥಿಕ ಹಿಂಜರಿತದ ಆತಂಕ ಇಡೀ ವಿಶ್ವವನ್ನೇ ಕಾಡುತ್ತಿರುವುದು ಸುಳ್ಳಲ್ಲ. ಚೀನಾ, ಲ್ಯಾಟಿನ್ ಅಮೇರಿಕ, ಯುರೋಪಿಯನ್ ದೇಶಗಳಲ್ಲಿ ಜನರ ಕೊಳ್ಳುವ ಶಕ್ತಿಯು ಕುಸಿಯುತ್ತಿರುವುದು, ಉದ್ಯಮ ದಿಗ್ಗಜಗಳು ಉತ್ಪಾದನೆ, ಮಾರಾಟ ನಿಲ್ಲಿಸುತ್ತಿರುವುದು ಗುಟ್ಟಿನ ಸಂಗತಿಯೇನೂ ಅಲ್ಲ. ಚೀನಾ-ಅಮೇರಿಕದ ದರಸಮರದ ಬಿಸಿ ಪ್ರಪಂಚದ ಉಳಿದ ದೇಶಗಳಿಗೂ ತಟ್ಟಿರುವುದನ್ನು ವಿತ್ತ ಕ್ಷೇತ್ರ ಗಂಭೀರವಾಗಿ ಪರಿಗಣಿಸಿದೆ. 

ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ 2008ರಲ್ಲಿ ತಲೆದೋರಿದ ಪರಿಸ್ಥಿತಿ ಮತ್ತೆ ಉದ್ಭವಿಸಿರುವುದು ಜೂನ್ ತಿಂಗಳ ನಿರಾಶಾದಾಯಕ ಅಂಕಿಅಂಶಗಳಿಂದ ದೃಢಪಡುತ್ತದೆ. ಆರ್ಥಿಕ ಬಿಕ್ಕಟ್ಟು ಜಾಗತಿಕ ವಿದ್ಯಮಾನ ಆಗಿರುವುದರಿಂದಲೇ ಭಾರತವೂ ಅದರ ಬಗ್ಗೆ ತೀವ್ರವಾಗಿ ತಲೆಕೆಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಿರುವುದು. ಏಕೆಂದರೆ ಈ ಜಗತ್ತಿನಲ್ಲಿ ಎಲ್ಲವೂ ಒಂದಕ್ಕೊಂದು ಸಂಬಂಧವುಳ್ಳವೇ. ಅಮೇರಿಕದಲ್ಲಿ ಬಿದ್ದ ನಾಣ್ಯ ಬೆಂಗಳೂರಿನಲ್ಲಿಯೂ ಸದ್ದು ಮಾಡಬಹುದು.

ಶೇ. 7ರ ಮಟ್ಟದಲ್ಲಿ ಸಾಗುತ್ತಿದ್ದ ಭಾರತದ ತ್ರೈಮಾಸಿಕ ಜಿಡಿಪಿ ಶೇ. 5.8ಕ್ಕೆ ಇಳಿದಿರುವುದು ಆತಂಕದ ಪ್ರಮುಖ ಕಾರಣಗಳಲ್ಲೊಂದು. ಡಾಲರ್ ಎದುರು ರೂಪಾಯಿಯ ಮೌಲ್ಯ 69.06ಕ್ಕೆ ಇಳಿದಿದೆ. ದೇಶದ ಒಟ್ಟಾರೆ ವಿತ್ತೀಯ ಕೊರತೆ ರೂ. 4.32 ಲಕ್ಷ ಕೋಟಿಗಳಿಗೆ ಏರಿದೆ. ಕೇಂದ್ರ ಬಜೆಟ್ ಮಂಡನೆಯ ಬಳಿಕ ಒಂದೇ ತಿಂಗಳಿನಲ್ಲಿ ವಿದೇಶಿ ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ಸುಮಾರು ರೂ. 21,000 ಕೋಟಿಯಷ್ಟು ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದಾರೆ.

ಮೂಲಸೌಕರ್ಯದ ಪ್ರಮುಖ ರಂಗಗಳೆನಿಸಿರುವ ಕಲ್ಲಿದ್ದಲು, ರಸಗೊಬ್ಬರ, ನೈಸರ್ಗಿಕ ಅನಿಲ, ಕಚ್ಚಾತೈಲ, ಉಕ್ಕು, ಸಿಮೆಂಟ್, ವಿದ್ಯುತ್, ಸಂಸ್ಕರಣೆ ಮುಂತಾದವುಗಳ ಪ್ರಗತಿ ಕಳೆದ 50 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂಬ ವರದಿಗಳು ಪ್ರಕಟವಾಗಿರುವುದು ಜನಸಾಮಾನ್ಯರ ಆತಂಕಕ್ಕೂ ಕಾರಣವಾಗಿದೆ. ಮುಂಬೈ ಷೇರು ಮಾರುಕಟ್ಟೆ ಕಳೆದ ಐದು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಅಂಕಿಅಂಶಗಳಲ್ಲಿ ನಿಚ್ಚಳವಾಗುತ್ತದೆ.

ಅಟೋಮೊಬೈಲ್ ರಂಗ ಅತ್ಯಂತ ಹೆಚ್ಚು ಹೊಡೆತಕ್ಕೆ ಒಳಗಾಗಿರುವ ಕ್ಷೇತ್ರಗಳಲ್ಲಿ ಒಂದೆಂದು ವಿಶ್ಲೇಷಿಸಲಾಗುತ್ತಿದೆ. 2018ರ ಏಪ್ರಿಲ್-ಜೂನ್ ತ್ರೈಮಾಸಿಕಕ್ಕೆ ಹೋಲಿಸಿದರೆ 2019ರ ಈ ಅವಧಿಯ ಕಾರು ಮಾರಾಟ ಶೇ. 23.3ರಷ್ಟು ಕುಸಿದಿರುವುದು ಸ್ಪಷ್ಟವಾಗಿದೆ. ಅಟೋಮೊಬೈಲ್ ರಂಗ ಹೊಡೆತ ತಿಂದರೆ ಅದರ ಪರಿಣಾಮ ಇನ್ನೂ ಅನೇಕ ರಂಗಗಳ ಮೇಲೆ ಆಗುತ್ತದೆ. ಸ್ಟೀಲಿನಿಂದ ತೊಡಗಿ ಟಯರಿನವರೆಗೆ ವಿವಿಧ ಉದ್ದಿಮೆಗಳು ಋಣಾತ್ಮಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇದರ ಪರಿಣಾಮವಾಗಿ ವಾಹನ ಸಾಲದ ಪ್ರಮಾಣವೂ ಶೇ. 5.1ರಷ್ಟು ಕುಸಿದಿದೆ. ಮಾರುತಿ ಸುಜುಕಿ ಕಂಪೆನಿಯು ಕಳೆದ ಐದು ತಿಂಗಳಿನಿಂದ ತನ್ನ ಉತ್ಪಾದನೆ ಪ್ರಮಾಣವನ್ನು ಸತತವಾಗಿ ಕಡಿಮೆ ಮಾಡುತ್ತಾ ಬಂದಿದೆ.

2008ರಲ್ಲಿ ದ್ವಿಚಕ್ರವಾಹನ ಮಾರಾಟ ಪ್ರಮಾಣವು ಶೇ. 14.8ರಷ್ಟು ಕುಸಿತ ಕಂಡಿತ್ತು. ಕಳೆದ ವರ್ಷದ ಅಂಕಿಅಂಶಗಳಿಗೆ ಹೋಲಿಸಿದರೆ ಇದೇ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆಯು ಶೇ. 11.7ರಷ್ಟು ಕುಸಿತ ಕಂಡಿದೆ. 2008ರ ಬಳಿಕ ಇದೇ ಅತಿದೊಡ್ಡ ಕುಸಿತವಾಗಿದ್ದು, ನಾವು ಅಂದಿನ ಪರಿಸ್ಥಿತಿಯಿಂದ ಹೆಚ್ಚೇನೂ ದೂರದಲ್ಲಿ ಇಲ್ಲ ಎಂಬ ಅಂಶವನ್ನು ಅರ್ಥಮಾಡಿಕೊಳ್ಳಬೇಕು. 

ದೇಶದ ಬಹಭಾಗ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಗೆ ಸಿಲುಕಿದ್ದು ಈಗಷ್ಟೇ ಚೇತರಿಕೆ ಕಾಣುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿರಂಗವೂ ಅಂತಹ ಆಶಾದಾಯಕ ಸ್ಥಿತಿಯಲ್ಲಿ ಇಲ್ಲವೆಂಬುದು ಸಹಜ ವಿವೇಚನೆಯ ಸಂಗತಿ. ಕಳೆದ ತ್ರೈಮಾಸಿಕದಲ್ಲಿ ಟ್ರಾಕ್ಟರುಗಳ ಮಾರಾಟ ಪ್ರಮಾಣ ಶೇ. 14.1ರಷ್ಟು ಕುಸಿದಿದ್ದು, ಇದು ಕಳೆದ ನಾಲ್ಕು ವರ್ಷಗಳಲ್ಲೇ ಅತ್ಯಂತ ಹೆಚ್ಚಿನದ್ದು ಎಂಬ ಅಂಶ ನಮ್ಮನ್ನು ಯೋಚನೆಗೀಡುಮಾಡುತ್ತದೆ.

ಇದ್ದಕ್ಕಿದ್ದಂತೆ ಮಾರುಕಟ್ಟೆಯಲ್ಲಿ ಪ್ಯಾಕೇಜ್ಡ್ ವಸ್ತುಗಳ ಬೇಡಿಕೆಯ ಪ್ರಮಾಣ ತಗ್ಗಿದೆ. ವೇಗವಾಗಿ ಮಾರಾಟವಾಗುವ ಗ್ರಾಹಕ ಸರಕು (ಎಫ್‍ಎಂಸಿಜಿ) ಕಂಪೆನಿಗಳ ಉತ್ಪನ್ನಗಳು ಕಳೆದೊಂದು ವರ್ಷದಿಂದ ನಿರಂತರವಾಗಿ ಕುಸಿತ ಕಾಣುತ್ತಿರುವುದನ್ನು ಮಾರುಕಟ್ಟೆ ಅಂಕಿಅಂಶಗಳು ವಿವರಿಸುತ್ತವೆ. ಹಿಂದೂಸ್ತಾನ್ ಯುನಿಲಿವರ್ ಕಂಪೆನಿಯ ಏಪ್ರಿಲ್-ಜೂನ್ ತ್ರೈಮಾಸಿಕದ ಪ್ರಗತಿ ಪ್ರಮಾಣ ಶೇ. 5ರಷ್ಟು ಇದೆ; ಇದು 2018ರ ಇದೇ ಅವಧಿಯಲ್ಲಿ ಶೇ. 12ರಷ್ಟು ಇತ್ತು ಎಂಬುದನ್ನು ಗಮನಿಸಬೇಕು. ಡಾಬರ್ ಇಂಡಿಯಾ ಕಂಪೆನಿಯ ಪ್ರಗತಿ ಕಳೆದ ವರ್ಷ ಶೇ. 21 ಇದ್ದರೆ ಈ ವರ್ಷ ಶೇ. 6ಕ್ಕೆ ಇಳಿದಿದೆ. ಹಾಗೆಯೇ, ಬ್ರಿಟಾನಿಯಾ ಪ್ರಗತಿ ಪ್ರಮಾಣ ಶೇ. 13ರಿಂದ ಶೇ. 6ಕ್ಕೆ ಕುಸಿದಿದೆ.

ತೈಲ, ಚಿನ್ನ, ಬೆಳ್ಳಿ ಹೊರತಾದ ಉತ್ಪನ್ನಗಳ ಆಮದು ಕಳೆದ ಮೂರು ವರ್ಷಗಳಲ್ಲೇ ಅತಿಹೆಚ್ಚು ಕುಸಿತವನ್ನು ಕಂಡಿದೆ. ಕಳೆದ ವರ್ಷ ಶೇ. 6.3 ಇದ್ದದ್ದು ಈ ವರ್ಷ ಶೇ. 5.3ಕ್ಕೆ ಕುಸಿದಿದೆ. ಏರ್‍ಟೆಲ್‍ನಂತಹ ಉದ್ಯಮ ದಿಗ್ಗಜ ಕಳೆದ ತ್ರೈಮಾಸಿಕ ಒಂದರಲ್ಲೇ ರೂ. 2866 ಕೋಟಿ ನಷ್ಟ ಅನುಭವಿಸಿದೆ.

ಆರ್ಥಿಕ ಪರಿಸ್ಥಿತಿ ವಿಷಮಗೊಳ್ಳುತ್ತಿರುವ ಭೀತಿ ರಿಯಲ್ ಎಸ್ಟೇಟನ್ನೂ ಬಿಟ್ಟಿಲ್ಲ. 2019 ಮಾರ್ಚ್ ತಿಂಗಳ ಅಂಕಿಅಂಶದಂತೆ, ದೇಶದ ಟಾಪ್-30 ನಗರಗಳಲ್ಲಿ ಸುಮಾರು 1.28 ಮಿಲಿಯನ್‍ನಷ್ಟು ಮನೆಗಳು ನಿರ್ಮಾಣಗೊಂಡು ಇನ್ನೂ ಮಾರಾಟವಾಗದೇ ಉಳಿದುಕೊಂಡಿವೆ. ವಾಹನದಂತೆ ರಿಯಲ್ ಎಸ್ಟೇಟ್ ಉದ್ಯಮವೂ ಇನ್ನೂ ಅನೇಕ ಉದ್ಯಮಗಳೊಂದಿಗೆ ಹತ್ತಿರದ ಸಂಬಂಧವನ್ನು ಹೊಂದಿರುವ ಕ್ಷೇತ್ರ. ರಿಯಲ್ ಎಸ್ಟೇಟ್ ಕುಸಿದರೆ ಅದರ ಸಹವರ್ತಿಗಳಾದ ಸ್ಟೀಲ್, ಸಿಮೆಂಟ್, ಪೀಠೋಪಕರಣ, ಪೈಂಟ್ ಮೊದಲಾದ ರಂಗಗಳೂ ಋಣಾತ್ಮಕ ಪರಿಣಾಮ ಎದುರಿಸುತ್ತವೆ ಎಂದು ಪ್ರತ್ಯೇಕ ಹೇಳಬೇಕಿಲ್ಲ.

ಯಾವುದೇ ಮಹತ್ತರ ಬದಲಾವಣೆಯೊಂದಕ್ಕೂ ಮುನ್ನ ಸಣ್ಣದೊಂದು ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂಬ ಆರ್ಥಿಕ ರಂಗದ ನಾಣ್ಣುಡಿಯಷ್ಟೇ ಸದ್ಯಕ್ಕೆ ಕೊಂಚ ಭರವಸೆಯನ್ನು ತುಂಬುವ ಮಾತು. ಉತ್ತಮ ಭವಿಷ್ಯಕ್ಕಾಗಿ ಜನತೆ ಸಣ್ಣಮಟ್ಟಿನ ಅನನುಕೂಲತೆಯನ್ನು ಸಹಿಸಿಕೊಳ್ಳಲು ಸಿದ್ಧವಾಗಬೇಕು ಎಂದು ಹಣಕಾಸು ಸಚಿವರು ಬಜೆಟ್ ಮಂಡನೆಯ ವೇಳೆ ಹೇಳಿದ್ದನ್ನು ಈ ಹಿನ್ನೆಲೆಯಲ್ಲಿ ನಾವು ಗ್ರಹಿಸಿಕೊಂಡರೆ ಭವಿಷ್ಯ ತೀರಾ ಕರಾಳವಾಗಿರಲಾರದು ಎಂಬ ಸಮಾಧಾನ ಜೊತೆಯಾಗುತ್ತದೆ.

ಕೆಲವು ಹೆಜ್ಜೆಗಳು ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣಬಹುದು, ಆದರೆ ಅವುಗಳಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಪ್ರಾಯೋಗಿಕ ಉಪಕ್ರಮಗಳಿಂದ ಮಾತ್ರ ಜನಸಾಮಾನ್ಯರ ಪರಿಸ್ಥಿತಿಯು ಸುಧಾರಿಸುತ್ತದೆ ಮತ್ತು ಸುಸ್ಥಿರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂಬ ಆರ್ಥಿಕ ಪರಿಣತರ ಮಾತು ಸದ್ಯದ ಮಾರ್ಗದರ್ಶಕ ಸೂತ್ರವಾಗಬೇಕು. ಈ ನಿಟ್ಟಿನಲ್ಲಿ, ಕುಸಿದುಹೋಗುತ್ತಿರುವ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮೇಲೆತ್ತುವುದು, ಖಾಸಗಿ ಹೂಡಿಕೆದಾರರಲ್ಲಿ ವಿಶ್ವಾಸ ತುಂಬುವುದು, ಹೂಡಿಕೆ ಪ್ರಮಾಣ ಹೆಚ್ಚಾಗುವಂತೆ ನೋಡಿಕೊಳ್ಳುವುದು, ಮತ್ತು ಆ ಮೂಲಕ ಹೊಸ ಉದ್ಯೋಗ ಸೃಷ್ಟಿ ಆಗುವಂತೆ ನೋಡಿಕೊಳ್ಳುವುದು ಸರ್ಕಾರದ ಕಡೆಯಿಂದ ತುರ್ತಾಗಿ ಆಗಬೇಕಿರುವ ಕೆಲಸ.
- ಸಿಬಂತಿ ಪದ್ಮನಾಭ ಕೆ. ವಿ.

ಭಾನುವಾರ, ಆಗಸ್ಟ್ 25, 2019

ಸ್ವಾತಂತ್ರ್ಯ ಹರಣ, ಡೇಟಾ ಕಾರಣ!

25 ಆಗಸ್ಟ್ 2019ರ ಪ್ರಜಾವಾಣಿ ಭಾನುವಾರದ ಪುರವಣಿಯಲ್ಲಿ ಪ್ರಕಟವಾದ ಲೇಖನ
ಮೂಲ ಲೇಖನವನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

ಗೋ ಡಿಜಿಟಲ್! ಹಾಗೆಂದು ಬಲು ಸುಲಭವಾಗಿ ಹೇಳಿಬಿಡುತ್ತೇವೆ. ಜಗತ್ತಿನ ಸಮಸ್ತ ಸಮಸ್ಯೆಗಳಿಗೂ ಡಿಜಿಟಲೀಕರಣವೇ ಏಕೈಕ ಪರಿಹಾರ ಎಂಬರ್ಥದಲ್ಲಿ ಮಾತಾಡುತ್ತೇವೆ. ಕಚೇರಿ ಕೆಲಸಗಳಿಂದ ತೊಡಗಿ ಹಣಕಾಸು ವ್ಯವಹಾರದವರೆಗೆ ದಿನದ ಪ್ರತಿಯೊಂದು ಕೆಲಸವೂ ಆನ್‍ಲೈನ್ ಆಗಿಬಿಟ್ಟಿದೆ. ದಿನಸಿಯಿಂದ ತೊಡಗಿ ಔಷಧಿಯವರೆಗೆ, ಬ್ಯಾಗಿನಿಂದ ತೊಡಗಿ ಪುಸ್ತಕಗಳವರೆಗೆ ಎಲ್ಲವೂ ಆ್ಯಪ್‍ಗಳೆಂಬ ಉಗ್ರಾಣಗಳಲ್ಲಿ ಭದ್ರವಾಗಿವೆ. ಎಲ್ಲ ಸರಿ, ನಮ್ಮ ಬದುಕು ಭದ್ರವಾಗಿದೆಯೇ?
ಆನ್‍ಲೈನ್ ವ್ಯವಹಾರಗಳಿಂದ ಮನುಷ್ಯನ ಬದುಕು ಸರಳವಾಯಿತೆಂದೂ, ಸಾಮಾಜಿಕ ಮಾಧ್ಯಮಗಳಿಂದ ಪ್ರಜಾಪ್ರಭುತ್ವಕ್ಕೊಂದು ಪರ್ಯಾಯ ಸೃಷ್ಟಿಯಾಯಿತೆಂದೂ ಹೆಮ್ಮೆಪಟ್ಟವರು ಬಹಳ. ಆದರೆ ಈ ಹೆಮ್ಮೆ ಹೆಚ್ಚುಕಾಲ ಉಳಿಯುವ ಲಕ್ಷಣ ಕಾಣಿಸುತ್ತಿಲ್ಲ. ಏಕೆಂದರೆ ‘ಬದುಕು ಭದ್ರವಾಗಿದೆಯೇ?’ ಎಂಬ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಂಡವರು ನಿರಾತಂಕವಾಗಿ ಉಳಿಯವುದು ಕಷ್ಟ.

ಪ್ರಜಾವಾಣಿ, 25 ಆಗಸ್ಟ್ 2019 | ಸಿಬಂತಿ ಪದ್ಮನಾಭ
ಎಲ್ಲವೂ ಬೆರಳ ತುದಿಯಲ್ಲೇ ಲಭ್ಯವಿರುವ ವರ್ಚುವಲ್ ಜಗತ್ತಿನಲ್ಲಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಎಂಬಿತ್ಯಾದಿ ಪದಗಳಿಗೆ ವಾಸ್ತವವಾಗಿ ತಮ್ಮದೇ ಅಸ್ತಿತ್ವ ಇದೆಯೇ ಎಂದು ಯೋಚಿಸುವ ಕಾಲ ಬಂದಿದೆ. ರಾಜಕೀಯ ಪರಿಭಾಷೆಯಲ್ಲಿ ನಾವು ಸ್ವತಂತ್ರರೂ ಹೌದು, ಪ್ರಜಾಪ್ರಭುತ್ವದ ಫಲಾನುಭವಿಗಳೂ ಹೌದು. ಆದರೆ ನಿಜಕ್ಕೂ ವಸ್ತುಸ್ಥಿತಿ ಹಾಗಿದೆಯೇ ಎಂದು ಕೇಳಿದರೆ ಈ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವಗಳೆಲ್ಲ ನಮ್ಮ ದೇಶದೊಳಗೆಯೇ ಇವೆಯೇ ಎಂದು ಖಚಿತಪಡಿಸಿಕೊಳ್ಳಬೇಕಾಗುತ್ತದೆ.
ಹೌದು, ವಾಸ್ತವ ಬೇರೆಯೇ ಇದೆ. ನಮ್ಮ ಒಬ್ಬೊಬ್ಬರ ಸ್ವಾತಂತ್ರ್ಯವೂ ಅಮೇರಿಕಾದಲ್ಲಿಯೋ ಚೀನಾದಲ್ಲಿಯೋ ಮೋಡಗಳ ನಡುವೆ ಓಡಾಡುತ್ತಿದೆ. ನಾವೆಲ್ಲ ದೇಶದೇಶಗಳ ನಡುವಿನ ಗೋಡೆಗಳನ್ನೆಲ್ಲ ನೆಲಸಮ ಮಾಡಿ ವಿಶ್ವವನ್ನು ಅಂಗೈಯಗಲಕ್ಕೆ ಇಳಿಸಿರುವ ಸೈಬರ್ ಸ್ಪೇಸ್ ನ ಅಡಿಯಾಳುಗಳಾಗಿ ದಶಕಗಳೇ ಕಳೆದುಹೋಗಿವೆ. ಹಾಗೆಂದು ಅರ್ಥವಾಗಿರುವುದು ಕೊಂಚ ತಡವಾಗಿದೆ ಅಷ್ಟೇ.

ಇಂಟರ್ನೆಟ್‍ನ ಬಳಕೆ ಹೆಚ್ಚಾದಂತೆ ವಾಸ್ತವವಾಗಿ ನಮ್ಮ ಸ್ವಾತಂತ್ರ್ಯದ ಪ್ರಮಾಣ ಇಳಿಕೆಯಾಗುತ್ತಾ ಹೋಗಿದೆ. ದಿನವಿಡೀ ವಾಟ್ಸಾಪ್, ಫೇಸ್‍ಬುಕ್ ಬಳಸುತ್ತೇವೆ. ಸಾಧ್ಯವಾದಷ್ಟೂ ನಮ್ಮ ಪ್ರೊಫೈಲ್ ಅಪ್ಡೇಟ್ ಆಗಿರಬೇಕೆಂದು ಬಯಸುತ್ತೇವೆ. ದಿನಕ್ಕೆ ಐದು ಬಾರಿ ಸ್ಟೇಟಸ್ ಸರಿಪಡಿಸಿಕೊಳ್ಳುತ್ತೇವೆ. ಮನೆಯಲ್ಲೇ ಇರುವ ಹೆಂಡತಿಗೆ, ಕಣ್ಣೆದುರೇ ಇರುವ ಮಕ್ಕಳಿಗೆ ಫೇಸ್ಬುಕ್ಕಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರುತ್ತೇವೆ. ಎದ್ದದ್ದು, ಬಿದ್ದದ್ದು, ನಡೆದದ್ದು, ನಿದ್ದೆ ಮಾಡಿದ್ದು, ತಿಂದದ್ದು, ಕುಡಿದದ್ದು, ಪ್ರವಾಸ ಹೋಗಿದ್ದು, ಪಾರ್ಕಿನಲ್ಲಿ ಕೂತದ್ದು, ಶಾಪಿಂಗ್ ಮಾಡಿದ್ದು, ಕಾಯಿಲೆ ಬಿದ್ದದ್ದು, ಹಬ್ಬ ಆಚರಿಸಿದ್ದು... ಒಂದೊಂದು ಸುದ್ದಿಯನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವವರೆಗೆ ನಮಗೆ ಸಮಾಧಾನವೇ ಇಲ್ಲ. ಎಳ್ಳಷ್ಟು ಮಾಹಿತಿ ಬೇಕಾದರೂ ಗೂಗಲ್‍ನ ಮೊರೆ ಹೋಗುತ್ತೇವೆ. ಹೊಸದೊಂದು ಆ್ಯಪ್ ಬಂದಾಗ ಲಾಟರಿ ಹೊಡೆಸಿಕೊಂಡವರಂತೆ ಹಿಗ್ಗುತ್ತೇವೆ. ಅದು ಕೇಳಿದ ಮಾಹಿತಿಯನ್ನೆಲ್ಲ ಹಿಂದೆಮುಂದೆ ನೋಡದೆ ತುಂಬುತ್ತಾ ಹೋಗುತ್ತೇವೆ. ಹಿಂದಿನ ಜನ್ಮದಲ್ಲಿ ಹೇಗಿದ್ದೆವು ಎಂದು ತಿಳಿಯುವ ಕುತೂಹಲಿಗಳಾಗುತ್ತೇವೆ. ನಮ್ಮ ವೃದ್ಧಾಪ್ಯ ಹೇಗಿರುತ್ತದೆ ಎಂದು ಈಗಲೇ ತಿಳಿದುಕೊಳ್ಳಲು ಹಾತೊರೆಯುತ್ತೇವೆ. ಇಷ್ಟಾಗುವ ಹೊತ್ತಿಗೆ ನಮ್ಮ ಅಷ್ಟೂ ಜಾತಕವನ್ನು ಇಡಿಯಿಡಿಯಾಗಿ ಅಮೇರಿಕಕ್ಕೋ ಜಪಾನಿಗೋ ಚೀನಾಕ್ಕೋ ಬೇಷರತ್ತಾಗಿ ಒಪ್ಪಿಸಿದ್ದೇವೆ ಎಂಬುದು ಅರ್ಥವೇ ಆಗುವುದಿಲ್ಲ.

ಮೈಕ್ರೋಸಾಫ್ಟ್, ಗೂಗಲ್, ಐಬಿಎಂ, ಫೇಸ್‍ಬುಕ್, ಟ್ವಿಟರ್, ಸ್ನಾಪ್‍ಚಾಟ್, ಅಲಿಬಾಬಾ ಮುಂತಾದ ಆನ್‍ಲೈನ್ ದಿಗ್ಗಜಗಳು ದಿನ, ಗಂಟೆ, ನಿಮಿಷ, ಕ್ಷಣಗಳ ಲೆಕ್ಕದಲ್ಲಿ ನಮ್ಮ ವೈಯುಕ್ತಿಕ ಮಾಹಿತಿಗಳನ್ನು ಕಲೆಹಾಕುತ್ತಿವೆ. ನಾವು ಬಳಕೆ ಮಾಡುವ ಒಂದೊಂದು ಆ್ಯಪ್‍ಗಳೂ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಮಾಹಿತಿಯನ್ನು ಸಂಗ್ರಹಿಸುತ್ತಾ ಇರುತ್ತವೆ. ನಾವು ಏನನ್ನು ತಿನ್ನುತ್ತೇವೆ, ಏನನ್ನು ಕುಡಿಯುತ್ತೇವೆ, ಏನನ್ನು ಓದುತ್ತೇವೆ, ಏನನ್ನು ಮಾಡುತ್ತೇವೆ, ಏನನ್ನು ಕೊಳ್ಳುತ್ತೇವೆ- ಒಟ್ಟಿನಲ್ಲಿ ನಮ್ಮ ಇಷ್ಟಾನಿಷ್ಟಗಳೇನು, ವರ್ತನೆಗಳೇನು ಎಂಬುದನ್ನು ನಮ್ಮ ಮನೆಮಂದಿಗಿಂತಲೂ ಚೆನ್ನಾಗಿ ಗಮನಿಸುವವರು ಈ ಸೈಬರ್‍ಸ್ಪೇಸೆಂಬ ಮಾಯಾಲೋಕದಲ್ಲಿ ಕುಳಿತಿರುವ ಇಂಟರ್ನೆಟ್ಟಿನ ಇಂದ್ರಜಾಲಿಗರು. ಅಮೆಜಾನ್, ಗೂಗಲ್, ಉಬೆರ್, ಆಪಲ್‍ನಂತಹ ಇ-ಕಾಮರ್ಸ್ ದೈತ್ಯರು ವ್ಯವಹಾರ ನಡೆಸುತ್ತಿರುವುದೇ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಎಂಬ ಮ್ಯಾಜಿಕ್‍ನ ಆಧಾರದಲ್ಲಿ.

ವಸಾಹತುಶಾಹಿಯ ಕಾಲ ತೀರಾ ಹಳೆಯದಾಯಿತು; ನಾವೀಗ ಡೇಟಾ ಕಾಲನಿಗಳೆಂಬ ನವ್ಯೋತ್ತರ ವಸಾಹತುಶಾಹಿಯ ಕಾಲದಲ್ಲಿ ಬಂದು ನಿಂತಿದ್ದೇವೆ. ಪೋರ್ಚುಗೀಸರು, ಫ್ರೆಂಚರು, ಡಚ್ಚರು, ಬ್ರಿಟಿಷರು- ಹೀಗೆ ಒಬ್ಬೊಬ್ಬರಾಗಿ ಭಾರತಕ್ಕೆ ಬಂದದ್ದು ಆರಂಭದಲ್ಲಿ ವ್ಯಾಪಾರಕ್ಕಾಗಿಯೇ. ನಿಧಾನವಾಗಿ ಅಧಿಕಾರ ಚಲಾಯಿಸಲು ಆರಂಭಿಸಿ ಆಮೇಲೆ ನಮ್ಮನ್ನೇ ಆಳಿದರು. ಈ ಸೈಬರ್ ಯುಗದ ಚಕ್ರವರ್ತಿಗಳು ದೇಶದಿಂದ ದೇಶಕ್ಕೆ ದಂಡಯಾತ್ರೆ ನಡೆಸುತ್ತಿರುವುದು ವ್ಯಾಪಾರದ ಸೋಗಿನಲ್ಲಿಯೇ. ಅದಕ್ಕಾಗಿಯೇ ಈ ಡೇಟಾ ವ್ಯಾಪಾರ ಮುಂದೆ ಯಾವ ಹಂತಕ್ಕೆ ಹೋಗಿ ನಿಂತೀತು ಎಂಬ ಊಹೆ ಆತಂಕಕ್ಕೆ ಕಾರಣವಾಗುವುದು. ನಾವು ನಮ್ಮ ಭೌತಿಕ ಅಸ್ಮಿತೆ, ನಮ್ಮ ರಾಜ್ಯ-ದೇಶಗಳ ಗಡಿಗಳ ಬಗ್ಗೆ ತಲೆಕೆಡಿಸಿಕೊಂಡಿದ್ದೇವೆಯೇ ಹೊರತು ನಮ್ಮ ಪ್ರತಿಕ್ಷಣದ ಅಸ್ಮಿತೆ, ಮಾಹಿತಿ, ಖಾಸಗಿತನಗಳೆಲ್ಲ ಏನಾಗುತ್ತಿವೆ ಎಂದು ಯೋಚಿಸಿಯೇ ಇಲ್ಲ.

“ಕಳೆದ ಶತಮಾನದಲ್ಲಿ ತೈಲ ಏನಾಗಿತ್ತೋ, ಈ ಶತಮಾನದಲ್ಲಿ ಅದು ದತ್ತಾಂಶ (ಡೇಟಾ) ಆಗಿದೆ- ಅಂದರೆ ಅಭಿವೃದ್ಧಿ ಮತ್ತು ಬದಲಾವಣೆಯ ಚಾಲಕಶಕ್ತಿ. ದತ್ತಾಂಶದ ಪ್ರವಹಿಸುವಿಕೆಯ ಹೊಸ ಮೂಲಸೌಕರ್ಯ, ಹೊಸ ವ್ಯವಹಾರ, ಹೊಸ ಏಕಸ್ವಾಮ್ಯತೆ, ಹೊಸ ರಾಜಕೀಯ ಮತ್ತು- ಅತ್ಯಂತ ಪ್ರಮುಖವಾಗಿ- ಹೊಸ ಅರ್ಥಶಾಸ್ತ್ರವನ್ನು ಸೃಷ್ಟಿಸಿದೆ” ಹೀಗೆಂದು ಕಳೆದ ವರ್ಷ ಲಂಡನ್‍ನ ‘ದಿ ಇಕನಾಮಿಸ್ಟ್’ ಪತ್ರಿಕೆ ಬರೆದಾಗ ಭಾರತದಂತಹ ದೇಶಗಳು ಮೊದಲ ಬಾರಿಗೆ ಸಣ್ಣಗೆ ಬೆಚ್ಚಿ ಎದ್ದು ಕುಳಿತವು.

ಆಧಾರ್ ಯೋಜನೆಯ ಹಿಂದಿದ್ದ ನಂದನ್ ನೀಲೇಕಣಿಯವರೇ ವಿಸ್ತಾರಗೊಳ್ಳುತ್ತಿರುವ ಡೇಟಾ ಕಾಲನಿಗಳ ಬಗ್ಗೆ ಮಾತಾಡಿದವರಲ್ಲಿ ಮೊದಲಿಗರು. ನಾವು ವಿದೇಶಗಳಿಂದ ಕಪ್ಪುಹಣ ವಾಪಸ್ ತರಬೇಕಿರುವುದೇನೋ ಒಳ್ಳೆಯದೇ, ಆದರೆ ಅದಕ್ಕಿಂತಲೂ ಮೊದಲು ವಾಪಸ್ ತರಬೇಕಿರುವುದು ವಿದೇಶೀ ವಸಾಹತುಗಳಲ್ಲಿ ಸಂಗ್ರಹವಾಗಿರುವ ನಮ್ಮ ದತ್ತಾಂಶಗಳೆಂದು ಎಚ್ಚರಿಸಿದ್ದು ಅವರೇ. ಆಮೇಲೆ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಕೂಡ ಈ ಬಗ್ಗೆ ಮಾತಾಡಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. “ದತ್ತಾಂಶವೀಗ ಹೊಸ ತೈಲ. ಅದು ಭಾರತದ ಹೊಸ ಸಂಪತ್ತು. ಭಾರತದ ದತ್ತಾಂಶವು ಭಾರತೀಯರಿಂದಲೇ ನಿಯಂತ್ರಿಸಲ್ಪಡಬೇಕೇ ಹೊರತು ವಿದೇಶೀ ಕಾರ್ಪೋರೇಟ್ ಸಂಸ್ಥೆಗಳಿಂದಲ್ಲ. ಪ್ರಧಾನಿಗಳೇ ಈ ನಿಟ್ಟಿನಲ್ಲಿ ನಾವು ಎಚ್ಚೆತ್ತುಕೊಳ್ಳದೇ ಉಳಿಗಾಲವಿಲ್ಲ” ಎಂದು ಅವರು ಈ ವರ್ಷದ ಆರಂಭದಲ್ಲಿ ನಡೆದ ವೈಬ್ರಂಟ್ ಗುಜರಾತ್ ಶೃಂಗಸಭೆಯಲ್ಲಿ ಎಚ್ಚರಿಸಿದ್ದು ನಮ್ಮ ನೀತಿನಿರೂಪಕರಲ್ಲೂ ಹೊಸ ಸಂಚಲನೆ ಮೂಡಿಸಿತು.

“ದತ್ತಾಂಶ ಸ್ವಾತಂತ್ರ್ಯವು 1947ರ ಸ್ವಾತಂತ್ರ್ಯದಷ್ಟೇ ಅತ್ಯಮೂಲ್ಯವಾದ್ದು... ಗಾಂಧೀಜಿಯವರು ರಾಜಕೀಯ ವಸಾಹತೀಕರಣದ ವಿರುದ್ಧದ ಚಳುವಳಿಯನ್ನು ರೂಪಿಸಿದರು.  ನಾವಿಂದು ದತ್ತಾಂಶ ವಸಾಹತೀಕರಣದ ವಿರುದ್ಧ ಹೊಸದೊಂದು ಚಳುವಳಿಯನ್ನು ಹೂಡಬೇಕಾಗಿದೆ” ಎಂಬ ಅವರ ಕರೆಗಂಟೆ ಅತ್ಯಂತ ಗಂಭೀರವಾದದ್ದು ಎಂಬುದನ್ನು ತಡವಾಗಿಯಾದರೂ ಒಪ್ಪಿಕೊಳ್ಳಲೇಬೇಕಿದೆ.

ಅಮೇರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‍ಎಸ್‍ಎ) ತನ್ನ ದೇಶದ ಹಾಗೂ ಉಳಿದ ದೇಶಗಳ ಪ್ರಜೆಗಳ ಚಲನವಲನದ ಮೇಲೆ ಕಣ್ಗಾವಲು ಇಟ್ಟಿತ್ತೆಂಬ ಸ್ಫೋಟಕ ಸುದ್ದಿಯನ್ನು ಅಮೇರಿಕದ ವಾಷಿಂಗ್ಟನ್ ಪೋಸ್ಟ್ ಹಾಗೂ ಇಂಗ್ಲೆಂಡಿನ ದಿ ಗಾರ್ಡಿಯನ್ ಪತ್ರಿಕೆಗಳು ಪ್ರಕಟಿಸಿದ ಬಳಿಕ ಇಡೀ ಜಗತ್ತೇ ಅಂತಾರಾಷ್ಟ್ರೀಯ ದತ್ತಾಂಶ ಕಳವು ಹಾಗೂ ಅದರ ವಾಣಿಜ್ಯಿಕ ಬಳಕೆಯ ಕುರಿತು ಆತಂಕದಿಂದ ಯೋಚಿಸುವಂತೆ ಆಗಿದೆ. ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಉದ್ಯಮದ ಹೆಸರಿನಲ್ಲಿ ಪಾಶ್ಚಿಮಾತ್ಯ ದೇಶಗಳ ಏಜೆಂಟ್‍ಗಳಾಗಿ ವಿವಿಧ ದೇಶಗಳಲ್ಲಿ ತೆರೆಮರೆಯ ಕೆಲಸ ಮಾಡುತ್ತಿವೆ ಎಂಬ ಸಂಗತಿ ಈಗ ಗುಟ್ಟಾಗಿ ಉಳಿದಿಲ್ಲ.

ಸ್ವತಃ ಭಾರತಕ್ಕೇ ಈ ವಿಷಯ ಅರ್ಥವಾಗಿದ್ದರೂ ತಕ್ಷಣಕ್ಕೆ ಏನನ್ನಾದರೂ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ. ಏಕೆಂದರೆ ಈಗ ಅಮೇರಿಕದಂತಹ ದೇಶಗಳಲ್ಲಿ ಸಂಗ್ರಹಗೊಳ್ಳುತ್ತಿರುವ ನಮ್ಮ ದೇಶದ ದತ್ತಾಂಶಗಳನ್ನು ನಮ್ಮಲ್ಲೇ ಸಂಗ್ರಹಿಸಲು ಸಾಧ್ಯವಾಗುವ ಪರ್ಯಾಯ ಮೂಲಸೌಕರ್ಯ ಇನ್ನೂ ನಮ್ಮಲ್ಲಿ ಬೆಳೆದಿಲ್ಲ. ಭಾರತವು ದೊಡ್ಡ ಸಾಫ್ಟ್‍ವೇರ್ ಕಂಪೆನಿಗಳನ್ನು ಹೊಂದಿದ್ದರೂ ಅವು ಕೆಲಸ ಮಾಡುತ್ತಿರುವುದು ಪಾಶ್ಚಿಮಾತ್ಯ ದೇಶಗಳ ಉದ್ದಿಮೆಗಳಿಗಾಗಿ. ಹೀಗಾಗಿ ಮಿಲಿಟರಿಯೂ ಸೇರಿದಂತೆ ಭಾರತದ ಡಿಜಿಟಲ್ ಮೂಲಸೌಕರ್ಯ ಅಸ್ವಿತ್ವದಲ್ಲಿರುವುದು ವಿದೇಶಗಳಲ್ಲಿ ನೆಲೆಕಂಡಿರುವ ಬೃಹತ್ ಸರ್ವರ್‍ಗಳಲ್ಲಿ. ಇದು ನಮ್ಮದೇ ಚಿನ್ನಾಭರಣಗಳನ್ನು ನೆರೆಮನೆಯವರ ಲಾಕರ್‍ಗಳಲ್ಲಿ ಇರಿಸಿ ಅವು ಭದ್ರವಾಗಿವೆ ಎಂದು ಭ್ರಮೆಗೊಳಗಾಗುವುದಕ್ಕಿಂತ ಭಿನ್ನವಾಗಿಯೇನೂ ಇಲ್ಲ.

ಈ ವಿಷಯದಲ್ಲಿ ಭಾರತ ತಡವಾಗಿಯಾದರೂ ಎಚ್ಚೆತ್ತುಕೊಂಡಿದ್ದರೂ ಅನುಷ್ಠಾನದ ವಿಷಯದಲ್ಲಿ ಮತ್ತೆ ನಿಧಾನವಾಗಿಯೇ ಹೆಜ್ಜೆಯಿಡುತ್ತಿದೆ. ಜಸ್ಟೀಸ್ ಬಿ. ಎನ್ ಶ್ರೀಕೃಷ್ಣ ಸಮಿತಿಯು ದತ್ತಾಂಶ ಸಂರಕ್ಷಣೆ ಮಸೂದೆಯನ್ನು 2018ರ ಜುಲೈ ತಿಂಗಳಲ್ಲೇ ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಸಲ್ಲಿಸಿದ್ದರೂ ಅದಕ್ಕಿನ್ನೂ ಶಾಸನವಾಗುವ ಭಾಗ್ಯ ದೊರಕಿಲ್ಲ. ಶ್ರೀಕೃಷ್ಣ ಸಮಿತಿಯು ಜನತೆಯ ಸ್ಥಳೀಯ ಮಾಹಿತಿಯನ್ನು ದೇಶದೊಳಗೇ ಸಂಗ್ರಹಿಸುವುದನ್ನು ಕಡ್ಡಾಯ ಮಾಡಿ ಶಿಫಾರಸು ಮಾಡಿರುವುದು ಗಮನಾರ್ಹ. ಸರ್ವರ್‍ಗಳು ಭಾರತದ ಹೊರಗಿದ್ದರೂ ಮೂಲ ಮಾಹಿತಿಯನ್ನು ಭಾರತದ ಭೌಗೋಳಿಕ ಗಡಿಯ ಒಳಗಿನ ಸರ್ವರ್‍ಗಳಲ್ಲೇ ಸಂಗ್ರಹಿಸಿ ಅವುಗಳ ಪ್ರತಿಯನ್ನಷ್ಟೇ ವಿದೇಶಗಳಲ್ಲಿ ಉಳಿಸಬಹುದು ಎಂದು ಸಮಿತಿ ಹೇಳಿದೆ. ಕೇಂದ್ರ ವಾಣಿಜ್ಯ ಮತ್ತು ಉದ್ಯಮದ ಸಚಿವಾಲಯದ ಕೈಗಾರಿಕಾ ನೀತಿ ಉತ್ತೇಜನ ಇಲಾಖೆಯು ಇ-ಕಾಮರ್ಸ್ ಜಾಲತಾಣಗಳು ಹಾಗೂ ಆನ್‍ಲೈನ್ ಮಾರುಕಟ್ಟೆಗಳು ಗ್ರಾಹಕರ ದತ್ತಾಂಶಗಳನ್ನು ಸಂಗ್ರಹಿಸುವ ಕುರಿತಾದ ಹೊಸ ನೀತಿಗಳನ್ನು ಕಳೆದ ವರ್ಷಾಂತ್ಯಕ್ಕೆ ಘೋಷಿಸಿದೆ.

ಈ ನಿಟ್ಟಿನಲ್ಲಿ ವಿಯೆಟ್ನಾಂ ನಮಗಿಂತಲೂ ಹೆಚ್ಚು ಎಚ್ಚೆತ್ತುಕೊಂಡಿದೆ ಎಂಬುದನ್ನು ಗಮನಿಸಬೇಕು. ಜಗತ್ತಿನಾದ್ಯಂತ ತಲಾ 200 ಕೋಟಿಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ ಮತ್ತು ಗೂಗಲ್ – ಜಗತ್ತಿನ ಎರಡು ಅತಿದೊಡ್ಡ ವೈಯುಕ್ತಿಕ ಮಾಹಿತಿ ಸಂಗ್ರಾಹಕ ಕಂಪೆನಿಗಳು- ವಿಯೆಟ್ನಾಂ ನಾಗರಿಕರ ವೈಯುಕ್ತಿಕ ಮಾಹಿತಿಗಳೇನಿದ್ದರೂ ವಿಯೆಟ್ನಾಂ ಗಡಿಯೊಳಗೆಯೇ ದಾಸ್ತಾನು ಮಾಡತಕ್ಕದ್ದು ಎಂಬ ಕಟ್ಟುನಿಟ್ಟಿನ ಕಾನೂನನ್ನು ವಿಯೆಟ್ನಾ ಸರ್ಕಾರ ಈಗಾಗಲೇ ಅನುಷ್ಠಾನಗೊಳಿಸಿದೆ. ನಾವು ಈ ದಿಕ್ಕಿನಲ್ಲಿ ಕ್ಷಿಪ್ರ ಹೆಜ್ಜೆಯನ್ನಿರಿಸದೇ ಹೋದರೆ ನಮ್ಮ ಸ್ವಾತಂತ್ರ್ಯ, ಪ್ರಜಾಪ್ರಭುತ್ವಗಳೆರಡೂ ಹಿಂದೆಂದಿಗಿಂತಲೂ ಹೆಚ್ಚು ಅಪಾಯಕ್ಕೆ ಒಳಗಾಗುವ ಎಲ್ಲ ಸಾಧ್ಯತೆಗಳೂ ಇವೆ ಎಂಬುದನ್ನು ದೇಶದ ಚುಕ್ಕಾಣಿ ಹಿಡಿದವರು ಅರ್ಥಮಾಡಿಕೊಳ್ಳಬೇಕಿದೆ. ಏಕೆಂದರೆ ಭೌತಿಕ ದಾಸ್ಯಕ್ಕಿಂತ ಮಾನಸಿಕ ದಾಸ್ಯ ಹೆಚ್ಚು ಘೋರವಾದದ್ದು.
- ಸಿಬಂತಿ ಪದ್ಮನಾಭ ಕೆ. ವಿ.

ಗುರುವಾರ, ಆಗಸ್ಟ್ 15, 2019

ಸಿಗ್ನಲಿನಲ್ಲಿ ಸ್ವಾತಂತ್ರ್ಯದ ಬಾವುಟ ಹಾರಿಸುವ ಮಕ್ಕಳು ನಾಪತ್ತೆಯಾಗಿದ್ದಾರೆ!

15 ಆಗಸ್ಟ್ 2019ರ 'ಕನ್ನಡಪ್ರಭ'ದಲ್ಲಿ ಪ್ರಕಟವಾದ ಬರೆಹ

ತರಹೇವಾರಿ ಧ್ವಜಗಳನ್ನು ಹಿಡಿದ ಐದರ ಬಾಲೆ ಸಿಗ್ನಲ್‌ನಲ್ಲಿ ಎದುರಾಗುತ್ತಾಳೆ. ’ಬೆಳಗ್ಗಿನಿಂದ ಏನೂ ತಿಂದಿಲ್ಲ ಅಣ್ಣಾ, ನೀನೊಂದು ಫ್ಲಾಗ್ ತಗೊಂಡ್ರೆ ನಂಗೆ ಒಂದು ರುಪಾಯಿ ಸಿಗುತ್ತೆ’ ಅಂತ ಗೋಗರೆಯುತ್ತಾಳೆ. ಸ್ವಾತಂತ್ರ್ಯದ ಹೆಗ್ಗುರುತಿನಂತಿರುವ ಹತ್ತೆಂಟು ಧ್ವಜಗಳನ್ನು ಅವಚಿ ಹಿಡಿದಿರುವ ಅವಳಿನ್ನೂ ಒಂದು ಹೊತ್ತಿನ ಕೂಳಿಗಾಗಿ ಸಿಗ್ನಲ್‌ಗಳಲ್ಲೇ ಬೆಳಗು ರಾತ್ರಿ ಮಾಡುತ್ತಿದ್ದಾಳೆ.

ಸ್ವಾತಂತ್ರ್ಯಾನಂತರದ ಏಳು ದಶಕಗಳಲ್ಲಿ ಅಭಿವೃದ್ಧಿಯ ಬಗ್ಗೆ ನಾವು ಮಾತಾಡಿದಷ್ಟು ಪ್ರಪಂಚದಲ್ಲಿ ಬೇರೆ ಯಾರೂ ಮಾತನಾಡಿರಲಿಕ್ಕಿಲ್ಲವೇನೋ? ಕೇಳಿದರೆ ನಮ್ಮಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಲಕ್ಷಾಂತರ ಪುಟಗಳ ದಾಖಲೆಗಳಿವೆ. ಥಾನುಗಟ್ಟಲೆ ಅಂಕಿಅಂಶಗಳಿವೆ. ದುರದೃಷ್ಟವಶಾತ್ ಇಷ್ಟೊಂದು ಅಂಕಿಅಂಶಗಳ ನಡುವೆ ಸಿಗ್ನಲಿನಲ್ಲಿ ಸ್ವಾತಂತ್ರ್ಯದ ಬಾವುಟ ಹಾರಿಸುವ ಮಕ್ಕಳು ನಾಪತ್ತೆಯಾಗಿದ್ದಾರೆ.

ಗಣಿಗಳಲ್ಲಿ ಚಿನ್ನವೆತ್ತುವವರ ನಡುವೆ ಬಡ ಕೂಲಿಕಾರರಿಗೆ ಬದುಕು ಸಿಕ್ಕಿಲ್ಲ. ಹೋಟೆಲು-ಫ್ಯಾಕ್ಟರಿಗಳಲ್ಲಿ ಹಣ ಎಣಿಸುವವರ ನಡುವೆ ಬಾಲ ಕಾರ್ಮಿಕರಿಗೆ ಬೆಳಕು ಕಂಡಿಲ್ಲ. ಸಾವಿರಾರು ಲೋಕಾಯುಕ್ತ ದಾಳಿಗಳು ನಡೆದ ಮೇಲೂ ರೇಶನ್ ಕಾರ್ಡು, ಇನ್‌ಕಂ ಸರ್ಟಿಫಿಕೇಟಿಗೆ ನೂರಾರು ರುಪಾಯಿ ಲಂಚ ಕೊಡುವುದರಿಂದ ಮುಕ್ತಿ ದೊರಕಿಲ್ಲ. ಎಲ್ಲರೂ ಪ್ರಜಾಪ್ರಭುತ್ವದ ಬಗ್ಗೆ ಭಾಷಣ ಮಾಡುವವರೇ ಆದರೂ ಸ್ವಾರ್ಥ ರಾಜಕಾರಣಿಗಳ ಅಧಿಕಾರರ ಲಾಲಸೆಯಿಂದ ಜನ ಬಿಡುಗಡೆ ಕಂಡಿಲ್ಲ.

ದೇಶಕ್ಕೆ, ಅದರೊಳಗಿರುವ ಜನರಿಗೆ ಏನಾದರೂ ಒಳ್ಳೆಯದಾಗಬೇಕೆಂದು ಮನಸಾ ಬಯಸುವ ರಾಜಕಾರಣಿಗಳು ಈ ಸ್ವತಂತ್ರ ದೇಶದ ವ್ಯಾಪ್ತಿಯೊಳಗಿಲ್ಲ. ನೂರಕ್ಕೆ ತೊಂಬತ್ತೊಂಬತ್ತು ಮಂದಿಯಲ್ಲೂ ತುಂಬಿ ತುಳುಕುತ್ತಿರುವುದು ಹಣ ಮತ್ತು ಅಧಿಕಾರದ ದಾಹ. ಇದು ವರ್ಷ ಕಳೆದಂತೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುವ ಯಾವ ಲಕ್ಷಣವೂ ಇಲ್ಲ.

ನನಗಿಷ್ಟವಾದ ಯೋಚನೆ ಇದು, ನನಗಿಷ್ಟವಾದ ದಾರಿ ಇದು ಎಂದು ಮುನ್ನಡೆಯುವ ಸ್ವಾತಂತ್ರ್ಯವಂತೂ ಯಾರಿಗೂ ಇಲ್ಲ. ಇದೇ ಸರಿಯಾದ ಚಿಂತನೆ, ಇದೇ ಸರಿಯಾದ ಹಾದಿ, ಇದನ್ನೇ ಅನುಸರಿಸತಕ್ಕದ್ದು ಎಂಬ ಕಟ್ಟುಕಟ್ಟಳೆಗಳ ನಡುವೆ ವಾಸ್ತವದ ಸ್ವಾತಂತ್ರ್ಯ ಕಳೆದೇ ಹೋಗಿದೆ. ಎಡ-ಬಲಗಳೆಂಬ ಅತಿರೇಕಗಳ ನಡುವೆ ಸಮಾಜ ಚಿಂದಿಯಾಗಿದೆ. ನಮ್ಮ ಸಿದ್ಧಾಂತ ಇದು, ಇದೇ ಸರಿ, ಇದನ್ನೇ ಎಲ್ಲರೂ ಒಪ್ಪತಕ್ಕದ್ದು ಎಂಬ ಬಲವಂತದ ಭಾರದಲ್ಲಿ ನಿಜವಾಗಿ ದೊರೆಯಬೇಕಿದ್ದ ಬೌದ್ಧಿಕ ಸ್ವಾತಂತ್ರ್ಯವೇ ಕಾಲುಮುರಿದುಕೊಂಡು ಬಿದ್ದಿದೆ.

-ಸಿಬಂತಿ ಪದ್ಮನಾಭ ಕೆ. ವಿ.