ವಿತ್ತವಾಣಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿತ್ತವಾಣಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಆಗಸ್ಟ್ 26, 2019

ಅಮೇರಿಕದಲ್ಲಿ ನಾಣ್ಯ ಬಿದ್ದರೆ ಭಾರತದಲ್ಲೂ ಸದ್ದು!

26 ಆಗಸ್ಟ್ 2019ರ ವಿಜಯವಾಣಿ (ವಿತ್ತವಾಣಿ ಪುರವಣಿ)ಯಲ್ಲಿ ಪ್ರಕಟವಾದ ಲೇಖನ

ಭಾರತ ಮತ್ತೊಂದು ಆರ್ಥಿಕ ಹಿಂಜರಿತದ ಹೊಸ್ತಿಲಲ್ಲಿ ನಿಂತಿದೆಯೇ ಎಂಬ ಬಗ್ಗೆ ಬಿಸಿಬಿಸಿ ಚರ್ಚೆಗಳು ಆರಂಭವಾಗಿವೆ. ದೊಡ್ಡದೊಡ್ಡ ಕಂಪೆನಿಗಳು ಉತ್ಪಾದನೆಯನ್ನು ಕಡಿತಗೊಳಿಸಿರುವ, ನಷ್ಟವನ್ನು ಅನುಭವಿಸುತ್ತಿರುವ, ಉದ್ಯೋಗಿಗಳನ್ನು ಮನೆಗೆ ಕಳಿಸುತ್ತಿರುವ ಕುರಿತ ವಿವಿಧ ವರದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. 2008ರಲ್ಲಿ ತಲೆದೋರಿದ ಆರ್ಥಿಕ ಕುಸಿತದೊಂದಿಗೆ ನಾವು ಮತ್ತೊಮ್ಮೆ ಸೆಣಸಬೇಕಾಗಿದೆಯೇ ಎಂಬ ಆತಂಕ ಅನೇಕ ಮಂದಿಯಲ್ಲಿ ಮನೆ ಮಾಡಿದೆ.

“70 ವರ್ಷಗಳಲ್ಲೇ ದೇಶ ಅತ್ಯಂತ ವಿಚಿತ್ರವಾದ ಸಂದಿಗ್ಧದ ಪರಿಸ್ಥಿತಿಯೊಂದನ್ನು ಎದುರಿಸುತ್ತಿದೆ. ಖಾಸಗಿ ರಂಗದವರು ಯಾರು ಯಾರನ್ನೂ ನಂಬದ ಪರಿಸ್ಥಿತಿಯಲ್ಲಿ ಇದ್ದಾರೆ. ಕೇಂದ್ರ ಸರ್ಕಾರ ಈಗ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕಾಗಿದೆ. ಖಾಸಗಿಯವರ ಮನಸ್ಸಿನಲ್ಲಿ ಕಾಡುತ್ತಿರುವ ಸಂಶಯಗಳನ್ನು ನಿವಾರಿಸಿ, ಅವರು ಮತ್ತೆ ಧೈರ್ಯವಾಗಿ ಹೂಡಿಕೆಯಲ್ಲಿ ತೊಡಗುವಂತೆ ಮಾಡುವುದು ಸರ್ಕಾರದ ಕರ್ತವ್ಯ” ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿರುವ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದೊಂದು ಜಾಗತಿಕ ವಿದ್ಯಮಾನ, ಯಾರೂ ಧೈರ್ಯ ಕಳೆದುಕೊಳ್ಳಬೇಕಿಲ್ಲ ಎಂದು ಸಮಾಧಾನದ ಮಾತುಗಳನ್ನಾಡಿದ್ದಾರೆ.

ಆರ್ಥಿಕ ಹಿಂಜರಿತದ ಆತಂಕ ಇಡೀ ವಿಶ್ವವನ್ನೇ ಕಾಡುತ್ತಿರುವುದು ಸುಳ್ಳಲ್ಲ. ಚೀನಾ, ಲ್ಯಾಟಿನ್ ಅಮೇರಿಕ, ಯುರೋಪಿಯನ್ ದೇಶಗಳಲ್ಲಿ ಜನರ ಕೊಳ್ಳುವ ಶಕ್ತಿಯು ಕುಸಿಯುತ್ತಿರುವುದು, ಉದ್ಯಮ ದಿಗ್ಗಜಗಳು ಉತ್ಪಾದನೆ, ಮಾರಾಟ ನಿಲ್ಲಿಸುತ್ತಿರುವುದು ಗುಟ್ಟಿನ ಸಂಗತಿಯೇನೂ ಅಲ್ಲ. ಚೀನಾ-ಅಮೇರಿಕದ ದರಸಮರದ ಬಿಸಿ ಪ್ರಪಂಚದ ಉಳಿದ ದೇಶಗಳಿಗೂ ತಟ್ಟಿರುವುದನ್ನು ವಿತ್ತ ಕ್ಷೇತ್ರ ಗಂಭೀರವಾಗಿ ಪರಿಗಣಿಸಿದೆ. 

ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ 2008ರಲ್ಲಿ ತಲೆದೋರಿದ ಪರಿಸ್ಥಿತಿ ಮತ್ತೆ ಉದ್ಭವಿಸಿರುವುದು ಜೂನ್ ತಿಂಗಳ ನಿರಾಶಾದಾಯಕ ಅಂಕಿಅಂಶಗಳಿಂದ ದೃಢಪಡುತ್ತದೆ. ಆರ್ಥಿಕ ಬಿಕ್ಕಟ್ಟು ಜಾಗತಿಕ ವಿದ್ಯಮಾನ ಆಗಿರುವುದರಿಂದಲೇ ಭಾರತವೂ ಅದರ ಬಗ್ಗೆ ತೀವ್ರವಾಗಿ ತಲೆಕೆಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಿರುವುದು. ಏಕೆಂದರೆ ಈ ಜಗತ್ತಿನಲ್ಲಿ ಎಲ್ಲವೂ ಒಂದಕ್ಕೊಂದು ಸಂಬಂಧವುಳ್ಳವೇ. ಅಮೇರಿಕದಲ್ಲಿ ಬಿದ್ದ ನಾಣ್ಯ ಬೆಂಗಳೂರಿನಲ್ಲಿಯೂ ಸದ್ದು ಮಾಡಬಹುದು.

ಶೇ. 7ರ ಮಟ್ಟದಲ್ಲಿ ಸಾಗುತ್ತಿದ್ದ ಭಾರತದ ತ್ರೈಮಾಸಿಕ ಜಿಡಿಪಿ ಶೇ. 5.8ಕ್ಕೆ ಇಳಿದಿರುವುದು ಆತಂಕದ ಪ್ರಮುಖ ಕಾರಣಗಳಲ್ಲೊಂದು. ಡಾಲರ್ ಎದುರು ರೂಪಾಯಿಯ ಮೌಲ್ಯ 69.06ಕ್ಕೆ ಇಳಿದಿದೆ. ದೇಶದ ಒಟ್ಟಾರೆ ವಿತ್ತೀಯ ಕೊರತೆ ರೂ. 4.32 ಲಕ್ಷ ಕೋಟಿಗಳಿಗೆ ಏರಿದೆ. ಕೇಂದ್ರ ಬಜೆಟ್ ಮಂಡನೆಯ ಬಳಿಕ ಒಂದೇ ತಿಂಗಳಿನಲ್ಲಿ ವಿದೇಶಿ ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ಸುಮಾರು ರೂ. 21,000 ಕೋಟಿಯಷ್ಟು ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದಾರೆ.

ಮೂಲಸೌಕರ್ಯದ ಪ್ರಮುಖ ರಂಗಗಳೆನಿಸಿರುವ ಕಲ್ಲಿದ್ದಲು, ರಸಗೊಬ್ಬರ, ನೈಸರ್ಗಿಕ ಅನಿಲ, ಕಚ್ಚಾತೈಲ, ಉಕ್ಕು, ಸಿಮೆಂಟ್, ವಿದ್ಯುತ್, ಸಂಸ್ಕರಣೆ ಮುಂತಾದವುಗಳ ಪ್ರಗತಿ ಕಳೆದ 50 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂಬ ವರದಿಗಳು ಪ್ರಕಟವಾಗಿರುವುದು ಜನಸಾಮಾನ್ಯರ ಆತಂಕಕ್ಕೂ ಕಾರಣವಾಗಿದೆ. ಮುಂಬೈ ಷೇರು ಮಾರುಕಟ್ಟೆ ಕಳೆದ ಐದು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಅಂಕಿಅಂಶಗಳಲ್ಲಿ ನಿಚ್ಚಳವಾಗುತ್ತದೆ.

ಅಟೋಮೊಬೈಲ್ ರಂಗ ಅತ್ಯಂತ ಹೆಚ್ಚು ಹೊಡೆತಕ್ಕೆ ಒಳಗಾಗಿರುವ ಕ್ಷೇತ್ರಗಳಲ್ಲಿ ಒಂದೆಂದು ವಿಶ್ಲೇಷಿಸಲಾಗುತ್ತಿದೆ. 2018ರ ಏಪ್ರಿಲ್-ಜೂನ್ ತ್ರೈಮಾಸಿಕಕ್ಕೆ ಹೋಲಿಸಿದರೆ 2019ರ ಈ ಅವಧಿಯ ಕಾರು ಮಾರಾಟ ಶೇ. 23.3ರಷ್ಟು ಕುಸಿದಿರುವುದು ಸ್ಪಷ್ಟವಾಗಿದೆ. ಅಟೋಮೊಬೈಲ್ ರಂಗ ಹೊಡೆತ ತಿಂದರೆ ಅದರ ಪರಿಣಾಮ ಇನ್ನೂ ಅನೇಕ ರಂಗಗಳ ಮೇಲೆ ಆಗುತ್ತದೆ. ಸ್ಟೀಲಿನಿಂದ ತೊಡಗಿ ಟಯರಿನವರೆಗೆ ವಿವಿಧ ಉದ್ದಿಮೆಗಳು ಋಣಾತ್ಮಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇದರ ಪರಿಣಾಮವಾಗಿ ವಾಹನ ಸಾಲದ ಪ್ರಮಾಣವೂ ಶೇ. 5.1ರಷ್ಟು ಕುಸಿದಿದೆ. ಮಾರುತಿ ಸುಜುಕಿ ಕಂಪೆನಿಯು ಕಳೆದ ಐದು ತಿಂಗಳಿನಿಂದ ತನ್ನ ಉತ್ಪಾದನೆ ಪ್ರಮಾಣವನ್ನು ಸತತವಾಗಿ ಕಡಿಮೆ ಮಾಡುತ್ತಾ ಬಂದಿದೆ.

2008ರಲ್ಲಿ ದ್ವಿಚಕ್ರವಾಹನ ಮಾರಾಟ ಪ್ರಮಾಣವು ಶೇ. 14.8ರಷ್ಟು ಕುಸಿತ ಕಂಡಿತ್ತು. ಕಳೆದ ವರ್ಷದ ಅಂಕಿಅಂಶಗಳಿಗೆ ಹೋಲಿಸಿದರೆ ಇದೇ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆಯು ಶೇ. 11.7ರಷ್ಟು ಕುಸಿತ ಕಂಡಿದೆ. 2008ರ ಬಳಿಕ ಇದೇ ಅತಿದೊಡ್ಡ ಕುಸಿತವಾಗಿದ್ದು, ನಾವು ಅಂದಿನ ಪರಿಸ್ಥಿತಿಯಿಂದ ಹೆಚ್ಚೇನೂ ದೂರದಲ್ಲಿ ಇಲ್ಲ ಎಂಬ ಅಂಶವನ್ನು ಅರ್ಥಮಾಡಿಕೊಳ್ಳಬೇಕು. 

ದೇಶದ ಬಹಭಾಗ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಗೆ ಸಿಲುಕಿದ್ದು ಈಗಷ್ಟೇ ಚೇತರಿಕೆ ಕಾಣುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿರಂಗವೂ ಅಂತಹ ಆಶಾದಾಯಕ ಸ್ಥಿತಿಯಲ್ಲಿ ಇಲ್ಲವೆಂಬುದು ಸಹಜ ವಿವೇಚನೆಯ ಸಂಗತಿ. ಕಳೆದ ತ್ರೈಮಾಸಿಕದಲ್ಲಿ ಟ್ರಾಕ್ಟರುಗಳ ಮಾರಾಟ ಪ್ರಮಾಣ ಶೇ. 14.1ರಷ್ಟು ಕುಸಿದಿದ್ದು, ಇದು ಕಳೆದ ನಾಲ್ಕು ವರ್ಷಗಳಲ್ಲೇ ಅತ್ಯಂತ ಹೆಚ್ಚಿನದ್ದು ಎಂಬ ಅಂಶ ನಮ್ಮನ್ನು ಯೋಚನೆಗೀಡುಮಾಡುತ್ತದೆ.

ಇದ್ದಕ್ಕಿದ್ದಂತೆ ಮಾರುಕಟ್ಟೆಯಲ್ಲಿ ಪ್ಯಾಕೇಜ್ಡ್ ವಸ್ತುಗಳ ಬೇಡಿಕೆಯ ಪ್ರಮಾಣ ತಗ್ಗಿದೆ. ವೇಗವಾಗಿ ಮಾರಾಟವಾಗುವ ಗ್ರಾಹಕ ಸರಕು (ಎಫ್‍ಎಂಸಿಜಿ) ಕಂಪೆನಿಗಳ ಉತ್ಪನ್ನಗಳು ಕಳೆದೊಂದು ವರ್ಷದಿಂದ ನಿರಂತರವಾಗಿ ಕುಸಿತ ಕಾಣುತ್ತಿರುವುದನ್ನು ಮಾರುಕಟ್ಟೆ ಅಂಕಿಅಂಶಗಳು ವಿವರಿಸುತ್ತವೆ. ಹಿಂದೂಸ್ತಾನ್ ಯುನಿಲಿವರ್ ಕಂಪೆನಿಯ ಏಪ್ರಿಲ್-ಜೂನ್ ತ್ರೈಮಾಸಿಕದ ಪ್ರಗತಿ ಪ್ರಮಾಣ ಶೇ. 5ರಷ್ಟು ಇದೆ; ಇದು 2018ರ ಇದೇ ಅವಧಿಯಲ್ಲಿ ಶೇ. 12ರಷ್ಟು ಇತ್ತು ಎಂಬುದನ್ನು ಗಮನಿಸಬೇಕು. ಡಾಬರ್ ಇಂಡಿಯಾ ಕಂಪೆನಿಯ ಪ್ರಗತಿ ಕಳೆದ ವರ್ಷ ಶೇ. 21 ಇದ್ದರೆ ಈ ವರ್ಷ ಶೇ. 6ಕ್ಕೆ ಇಳಿದಿದೆ. ಹಾಗೆಯೇ, ಬ್ರಿಟಾನಿಯಾ ಪ್ರಗತಿ ಪ್ರಮಾಣ ಶೇ. 13ರಿಂದ ಶೇ. 6ಕ್ಕೆ ಕುಸಿದಿದೆ.

ತೈಲ, ಚಿನ್ನ, ಬೆಳ್ಳಿ ಹೊರತಾದ ಉತ್ಪನ್ನಗಳ ಆಮದು ಕಳೆದ ಮೂರು ವರ್ಷಗಳಲ್ಲೇ ಅತಿಹೆಚ್ಚು ಕುಸಿತವನ್ನು ಕಂಡಿದೆ. ಕಳೆದ ವರ್ಷ ಶೇ. 6.3 ಇದ್ದದ್ದು ಈ ವರ್ಷ ಶೇ. 5.3ಕ್ಕೆ ಕುಸಿದಿದೆ. ಏರ್‍ಟೆಲ್‍ನಂತಹ ಉದ್ಯಮ ದಿಗ್ಗಜ ಕಳೆದ ತ್ರೈಮಾಸಿಕ ಒಂದರಲ್ಲೇ ರೂ. 2866 ಕೋಟಿ ನಷ್ಟ ಅನುಭವಿಸಿದೆ.

ಆರ್ಥಿಕ ಪರಿಸ್ಥಿತಿ ವಿಷಮಗೊಳ್ಳುತ್ತಿರುವ ಭೀತಿ ರಿಯಲ್ ಎಸ್ಟೇಟನ್ನೂ ಬಿಟ್ಟಿಲ್ಲ. 2019 ಮಾರ್ಚ್ ತಿಂಗಳ ಅಂಕಿಅಂಶದಂತೆ, ದೇಶದ ಟಾಪ್-30 ನಗರಗಳಲ್ಲಿ ಸುಮಾರು 1.28 ಮಿಲಿಯನ್‍ನಷ್ಟು ಮನೆಗಳು ನಿರ್ಮಾಣಗೊಂಡು ಇನ್ನೂ ಮಾರಾಟವಾಗದೇ ಉಳಿದುಕೊಂಡಿವೆ. ವಾಹನದಂತೆ ರಿಯಲ್ ಎಸ್ಟೇಟ್ ಉದ್ಯಮವೂ ಇನ್ನೂ ಅನೇಕ ಉದ್ಯಮಗಳೊಂದಿಗೆ ಹತ್ತಿರದ ಸಂಬಂಧವನ್ನು ಹೊಂದಿರುವ ಕ್ಷೇತ್ರ. ರಿಯಲ್ ಎಸ್ಟೇಟ್ ಕುಸಿದರೆ ಅದರ ಸಹವರ್ತಿಗಳಾದ ಸ್ಟೀಲ್, ಸಿಮೆಂಟ್, ಪೀಠೋಪಕರಣ, ಪೈಂಟ್ ಮೊದಲಾದ ರಂಗಗಳೂ ಋಣಾತ್ಮಕ ಪರಿಣಾಮ ಎದುರಿಸುತ್ತವೆ ಎಂದು ಪ್ರತ್ಯೇಕ ಹೇಳಬೇಕಿಲ್ಲ.

ಯಾವುದೇ ಮಹತ್ತರ ಬದಲಾವಣೆಯೊಂದಕ್ಕೂ ಮುನ್ನ ಸಣ್ಣದೊಂದು ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂಬ ಆರ್ಥಿಕ ರಂಗದ ನಾಣ್ಣುಡಿಯಷ್ಟೇ ಸದ್ಯಕ್ಕೆ ಕೊಂಚ ಭರವಸೆಯನ್ನು ತುಂಬುವ ಮಾತು. ಉತ್ತಮ ಭವಿಷ್ಯಕ್ಕಾಗಿ ಜನತೆ ಸಣ್ಣಮಟ್ಟಿನ ಅನನುಕೂಲತೆಯನ್ನು ಸಹಿಸಿಕೊಳ್ಳಲು ಸಿದ್ಧವಾಗಬೇಕು ಎಂದು ಹಣಕಾಸು ಸಚಿವರು ಬಜೆಟ್ ಮಂಡನೆಯ ವೇಳೆ ಹೇಳಿದ್ದನ್ನು ಈ ಹಿನ್ನೆಲೆಯಲ್ಲಿ ನಾವು ಗ್ರಹಿಸಿಕೊಂಡರೆ ಭವಿಷ್ಯ ತೀರಾ ಕರಾಳವಾಗಿರಲಾರದು ಎಂಬ ಸಮಾಧಾನ ಜೊತೆಯಾಗುತ್ತದೆ.

ಕೆಲವು ಹೆಜ್ಜೆಗಳು ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣಬಹುದು, ಆದರೆ ಅವುಗಳಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಪ್ರಾಯೋಗಿಕ ಉಪಕ್ರಮಗಳಿಂದ ಮಾತ್ರ ಜನಸಾಮಾನ್ಯರ ಪರಿಸ್ಥಿತಿಯು ಸುಧಾರಿಸುತ್ತದೆ ಮತ್ತು ಸುಸ್ಥಿರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂಬ ಆರ್ಥಿಕ ಪರಿಣತರ ಮಾತು ಸದ್ಯದ ಮಾರ್ಗದರ್ಶಕ ಸೂತ್ರವಾಗಬೇಕು. ಈ ನಿಟ್ಟಿನಲ್ಲಿ, ಕುಸಿದುಹೋಗುತ್ತಿರುವ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮೇಲೆತ್ತುವುದು, ಖಾಸಗಿ ಹೂಡಿಕೆದಾರರಲ್ಲಿ ವಿಶ್ವಾಸ ತುಂಬುವುದು, ಹೂಡಿಕೆ ಪ್ರಮಾಣ ಹೆಚ್ಚಾಗುವಂತೆ ನೋಡಿಕೊಳ್ಳುವುದು, ಮತ್ತು ಆ ಮೂಲಕ ಹೊಸ ಉದ್ಯೋಗ ಸೃಷ್ಟಿ ಆಗುವಂತೆ ನೋಡಿಕೊಳ್ಳುವುದು ಸರ್ಕಾರದ ಕಡೆಯಿಂದ ತುರ್ತಾಗಿ ಆಗಬೇಕಿರುವ ಕೆಲಸ.
- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಮೇ 14, 2019

ಮಾಫಿ ಅಂದ್ರೆ ತ್ರಾಸು, ಮರುಪಾವತಿ ಲೇಸು!

ಮೇ 13, 2019ರ ವಿಜಯವಾಣಿ (ವಿತ್ತವಾಣಿ)ಯಲ್ಲಿ ಪ್ರಕಟವಾದ ಲೇಖನ

ವಿಜಯವಾಣಿ | ವಿತ್ತವಾಣಿ | 13-05-2019
ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಿರುವಾಗಲೇ, ಹತ್ತಿರ ಹತ್ತಿರ ತೊಂಬತ್ತರ ಇಳಿವಯಸ್ಸಿನಲ್ಲಿರುವ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ನಿಂಗಮ್ಮ ಕರಿಯಪ್ಪ ಮೂರುಣ್ಣಿ ಎಂಬ ಅಜ್ಜಮ್ಮ ಬೇರೊಂದು ವಿಷಯಕ್ಕೆ ಸುದ್ದಿಯಾದರು. ಅದೇನೆಂದರೆ, ಸಾಲ ಮರುಪಾವತಿಯ ಬಗ್ಗೆ ಅವರಿಗಿರುವ ಬದ್ಧತೆ. ಸಾಲ ಮನ್ನಾ ಆಗಲಿ, ಆಗದಿರಲಿ, ಅಜ್ಜಿಯಂತೂ ಪ್ರತೀ ವರ್ಷ ತಮ್ಮ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಪಡೆದ ಸಾಲವನ್ನು ಅವಧಿಗೆ ಮುನ್ನವೇ ತೀರಿಸಿಯೇ ಸಿದ್ಧ. 

‘ಸುಮ್ನಿರು ಅಜ್ಜೀ, ಸಾಲ ಯಾಕೆ ಕಟ್ತೀ? ಹೆಂಗೂ ಎಲ್ಲ ಮನ್ನಾ ಆಗುತ್ತೆ’ ಎಂದು ಪರಿಚಯದವರು ಕೀಟಲೆ ಮಾಡಿದರೆ ಅಜ್ಜಿಯ ಉತ್ತರ ಇದು: ‘ನಾವು ಸಂಕಷ್ಟದಲ್ಲಿರೋವಾಗ ಸೊಸೈಟಿಯೋರು ಹಿಂದೆ ಮುಂದೆ ನೋಡದೆ ಸಾಲ ಕೊಟ್ಟಿದ್ದಾರೆ ಅಂದ್ರೆ ಅದನ್ನ ಸಮಯದಲ್ಲಿ ಮರುಪಾವತಿಸೋದು ನನ್ನ ಧರ್ಮ. ಸಾಲ ನೀಡೋ ಸೊಸೈಟಿಯೊಂದಿಗೆ ನಂಬಿಕೆ ಉಳಿಸ್ಕೋಬೇಕು. ಸರ್ಕಾರದ ಋಣ ಇಟ್ಕೋಬಾರದು. ಸಾಲ ಕಟ್ರಿ ಅಂತ ಯಾರೂ ನನ್ನ ಮನೆಗೆ ಮರೋದು ನಂಗೆ ಇಷ್ಟವಿಲ್ಲ.’

ಬ್ಯಾಂಕುಗಳಿಗೆ ನೂರಾರು ಕೋಟಿ ಪಂಗನಾಮ ಹಾಕಿ ದೇಶ ವಿದೇಶಗಳಲ್ಲಿ ಅಡ್ಡಾಡಿಕೊಂಡಿರುವ ದುಡ್ಡಿನದೊರೆಗಳು ನಿಂಗಮ್ಮನಂತಹ ಪರಮಪ್ರಾಮಾಣಿಕ ರೈತರ ಎದುರು ತೀರಾ ಕುಬ್ಜರಾಗಿ ಕಾಣುತ್ತಾರೆ. ವಿಜಯ್ ಮಲ್ಯ, ನೀರವ್ ಮೋದಿಯಂಥವರದು ಕೇವಲ ಆರ್ಥಿಕ ವಿಚಾರ ಅಲ್ಲ. ಅದಕ್ಕಿಂತಲೂ ಸಂಕೀರ್ಣವಾದ ರಾಜಕೀಯ ಸಂಗತಿ ಎಂಬುದು ದೇಶದ ಪ್ರತಿಯೊಬ್ಬ ಪ್ರಜೆಗೂ ಗೊತ್ತು.

ಇರಲಿ, ಇಲ್ಲಿ ಚರ್ಚಿಸ ಹೊರಟಿರುವುದು ಪ್ರಸ್ತುತ ಕೃಷಿ ಕ್ಷೇತ್ರದಲ್ಲಿ ಏರುತ್ತಿರುವ ಸಾಲ ಮರುಪಾವತಿ ಸಮಸ್ಯೆಯ ಬಗ್ಗೆ. ಒಂದೆಡೆ ರೈತರು ಸಾಲದ ಹೊರೆ, ಸರ್ಕಾರದ ಕೃಷಿ ನೀತಿ, ಭ್ರಷ್ಟಾಚಾರ, ಮಾನ್ಸೂನ್ ವೈಫಲ್ಯ, ಕೌಟುಂಬಿಕ ಕಾರಣಗಳಿಂದ ಕಂಗಾಲಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದರೆ, ಇನ್ನೊಂದೆಡೆ ದೇಶದ ಕೃಷಿ ಕ್ಷೇತ್ರದ ಸಾಲದ ಮೊತ್ತ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದೆ. ಪ್ರಸ್ತುತ ದೇಶದ ಕೃಷಿ ಸಾಲದ ಮೊತ್ತ ರೂ. 12.6 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.

ಸಾಲಮನ್ನಾ ಎಂಬ ವರದಾನ:
ವೈಫಲ್ಯಗಳಿಂದ ಕಂಗೆಟ್ಟ ರೈತರಿಗೆ ಸಾಲಮನ್ನಾಕ್ಕಿಂತ ದೊಡ್ಡ ನಿರಾಳತೆ ಇನ್ನೊಂದಿಲ್ಲ. ಮುಂದೇನು ಎಂದು ದಾರಿತೋಚದೆ ಕುಳಿತ ರೈತರಿಗೆ ಸಾಲಮನ್ನಾ ಎಂಬುದು ಜೀವದಾನವೇ ಸರಿ. ದುರಂತವೆಂದರೆ ಸಾಲಮನ್ನಾ ರೈತರಿಗೆ ಸಹಾಯ ಮಾಡುವುದಕ್ಕಿಂತಲೂ ರಾಜಕಾರಣಿಗಳ ಓಲೈಕೆ ತಂತ್ರದ ಒಂದು ಭಾಗವಾಗಿ ಬಳಸಲ್ಪಡುತ್ತಿರುವುದು. ಚುನಾವಣೆ ಸಮೀಪಿಸುತ್ತಿದ್ದಂತೆ ಜನರನ್ನು ಸೆಳೆಯಲು ರಾಜಕೀಯ ಪಕ್ಷಗಳಿಗೆ ಇರುವ ಸುಲಭದ ತಂತ್ರವೆಂದರೆ ತಾವು ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿಬಿಡುವುದು. 

ಕಳೆದೊಂದು ವರ್ಷದಲ್ಲಿ ದೇಶದ 8 ರಾಜ್ಯಗಳು ಸುಮಾರು ರೂ. 1.9 ಟ್ರಿಲಿಯನ್‍ನಷ್ಟು ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿವೆ. ಉತ್ತರ ಪ್ರದೇಶದಿಂದ ಆರಂಭವಾದ ಈ ಅಭಿಯಾನ ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಛತ್ತೀಸ್‍ಗಡ, ರಾಜಸ್ತಾನ ಹಾಗೂ ಮಧ್ಯಪ್ರದೇಶಗಳಲ್ಲೆಲ್ಲ ಸುದ್ದಿ ಮಾಡಿದೆ. ಇತ್ತ ರಾಹುಲ್ ಗಾಂಧಿಯವರು ಕಾಂಗ್ರೆಸ್ ಮಿತ್ರಕೂಟ ಅಧಿಕಾರಕ್ಕೆ ಬಂದರೆ ದೇಶದ ಅಷ್ಟೂ ರೈತರ ಸಾಲ ಮನ್ನಾ ಮಾಡುವುದಾಗಿ ಭಾಷೆ ಕೊಟ್ಟಿದ್ದಾರೆ. ಇಡೀ ದೇಶದ ರೈತರ ಸಾಲ ಮನ್ನಾ ಮಾಡಲು ಎಷ್ಟು ಹಣ ಬೇಕು, ಅದರಿಂದಾಗಬಹುದಾದ ಪರಿಣಾಮಗಳೇನು ಎಂದವರು ಕನಿಷ್ಟ ಪಕ್ಷ ಕಲ್ಪಿಸಿಕೊಂಡಿದ್ದಾರೋ ಇಲ್ಲವೋ?

‘ಸಾಲಮನ್ನಾ ಒಂದು ಬ್ಯಾಂಡೇಜ್ ಪರಿಹಾರ ಅಷ್ಟೇ. ತಕ್ಷಣದ ಪರಿಹಾರ ಒದಗಿಸಲು ಕೆಲವೊಮ್ಮೆ ಇದು ಅಗತ್ಯವೂ ಹೌದು. ಆದರೆ ಹೆಚ್ಚುತ್ತಿರುವ ಖರ್ಚು ಮತ್ತು ಕುಸಿಯುತ್ತಿರುವ ಲಾಭ ಮುಂತಾದ ಮೂಲಭೂತ ಸಮಸ್ಯೆಗಳಿಗೆ ಇದು ಪರಿಹಾರ ನೀಡುವುದಿಲ್ಲ. ಇದು ರಾಜಕಾರಣಿಗಳ ಮಟ್ಟಿಗೆ ಮಾತ್ರ ಒಂದು ಸುಲಭದ ಪರಿಹಾರ’ ಎನ್ನುತ್ತಾರೆ ಮುಂಬೈ ಸಮಾಜ ವಿಜ್ಞಾನಗಳ ಟಾಟಾ ಸಂಸ್ಥೆಯ ಪ್ರಾಧ್ಯಾಪಕರೊಬ್ಬರು.

ನೈತಿಕ ಅಶಿಸ್ತು:
ರೈತರಿಗೆ ತಕ್ಷಣದ ಒತ್ತಡದಿಂದ ಸಾಲಮನ್ನಾ ಒಂದಿಷ್ಟು ಬಿಡುಗಡೆ ನೀಡಬಹುದೇನೋ? ಆದರೆ ಅದೊಂದು ದೂರದೃಷ್ಟಿಯ ಉಪಕ್ರಮ ಅಲ್ಲವೆಂಬುದನ್ನು ಇದುವರೆಗಿನ ಬೆಳವಣಿಗೆಗಳು ದೃಢಪಡಿಸಿವೆ. ವಾಸ್ತವವಾಗಿ ರೈತರಿಗೆ ಅಗತ್ಯವಿರುವುದು ಸಾಲಮನ್ನಾ ಅಲ್ಲ, ಸಾಲದ ವಿಷವರ್ತುಲದಿಂದ ಶಾಶ್ವತ ಬಿಡುಗಡೆ ಎಂಬುದನ್ನು ಸ್ವಾಮಿನಾಥನ್ ಆಯೋಗದ ವರದಿ ಸರಿಯಾಗಿಯೇ ಬೊಟ್ಟು ಮಾಡಿದೆ. ರೈತರ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ, ಬೆಂಬಲ ಬೆಲೆ ಒದಗಿಸುವುದರಿಂದ ರೈತರ ಸಮಸ್ಯೆಗಳಿಗೆ ದೀರ್ಘಕಾಲೀನ ಪರಿಹಾರ ಲಭಿಸೀತೇ ಹೊರತು ಸಾಲಮನ್ನಾ ಎಂಬ ತಕ್ಷಣದ ಆಕರ್ಷಣೆಯಿಂದ ಅಲ್ಲ.

ಇನ್ನೊಂದು ವಿಷಯವೆಂದರೆ ಸಾಲಮನ್ನಾದ ಹೆಚ್ಚಿನ ಲಾಭ ಪಡೆಯುತ್ತಿರುವುದು ದೊಡ್ಡ ಹಿಡುವಳಿಯ ಕುಳಗಳೇ ಹೊರತು ಸಣ್ಣಪುಟ್ಟ ಕೃಷಿ ಮಾಡಿಕೊಂಡು ಬದುಕುತ್ತಿರುವ ಬಡ ಕುಟುಂಬಗಳಲ್ಲ. ರೈತರಿಗೆ ದೊರೆಯುವ ಬಡ್ಡಿರಹಿತ ಸಾಲಸೌಲಭ್ಯದ ದೊಡ್ಡ ಫಲಾನುಭವಿಗಳೂ ಇವರೇ. ತಮಗೆ ಅಗತ್ಯವಿಲ್ಲದಿದ್ದರೂ ಸಹಕಾರ ಸಂಘಗಳಿಂದ ಶೂನ್ಯಬಡ್ಡಿದರದ ಗರಿಷ್ಠ ಸಾಲಗಳನ್ನು ಪಡೆದು ಅದೇ ಮೊತ್ತವನ್ನು ಮತ್ತೆ ಉಳಿತಾಯ ಖಾತೆಗೆ ಜಮಾ ಮಾಡಿ ಬಡ್ಡಿ ಪಡೆಯುವುದು ಅಥವಾ ಬೇರೆ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದು ಹಳ್ಳಿಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಸಹಜವಾಗಿಯೇ ಸಾಲಮನ್ನಾ ಆದಾಗ ಹೆಚ್ಚಿನ ಲಾಭ ಪಡೆಯುವುದೂ ಇದೇ ಕುಳಗಳು.

ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ರಘುರಾಂ ರಾಜನ್, ಊರ್ಜಿತ್ ಪಟೇಲ್ ಮುಂತಾದವರು ಸಾಲಮನ್ನಾ ಘೋಷಣೆಗಳಿಗೆ ಆಗಿಂದಾಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದರು. ‘ಸಕಾರಗಳು ಜನಪ್ರಿಯತೆ ಗಳಿಸುವ ಉದ್ದೇಶದಿಂದ ಘೋಷಿಸುವ ರೈತರ ಸಾಲಮನ್ನಾ ನಿರ್ಧಾರವು ಒಂದು ನೈತಿಕ ಅಶಿಸ್ತು. ಇದು ಹಣದುಬ್ಬರಕ್ಕೆ ಕಾರಣವಾಗುತ್ತದೆಯಲ್ಲದೆ, ಪ್ರಾಮಾಣಿಕ ಸಾಲ ಸಂಸ್ಕೃತಿ ದುರ್ಬಲವಾಗುತ್ತದೆ. ಮರುಪಾವತಿಯ ಶಿಸ್ತಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ’ ಎಂದು 2017ರಲ್ಲೇ ಊರ್ಜಿತ್ ಪಟೇಲ್ ಎಚ್ಚರಿಸಿದ್ದರು.

ಪ್ರಾಮಾಣಿಕರ ನಿರ್ಲಕ್ಷ್ಯ:
‘ಸಾಲ ಮನ್ನಾದಿಂದ ಪ್ರಾಮಾಣಿಕವಾಗಿ ಸಾಲ ಹಿಂದಿರುಗಿಸುವವರನ್ನು ನಿರ್ಲಕ್ಷಿಸಿದಂತಾಗುತ್ತದೆ. ಇದು ಸಾಲ ಮರುಪಾವತಿ ಶಿಸ್ತಿಗೆ ಧಕ್ಕೆ ತರುತ್ತದೆ. ಇನ್ನು ಮುಂದೆ ಸಾಲ ಪಡೆಯುವವರು ಸಾಲ ತೀರಿಸಲು ಹಿಂದೇಟು ಹಾಕಲಾರಂಭಿಸುತ್ತಾರೆ. ತೆರಿಗೆದಾರರ ಹಣ ಸಾಲ ಪಡೆದವರಿಗೆ ಹೋದಂತಾಗುತ್ತದೆ’ ಎಂಬ ಇತ್ತೀಚೆಗೆ ಪ್ರಕಟವಾದ ಆರ್‍ಬಿಐ ದ್ವೈಮಾಸಿಕ ವಿತ್ತನೀತಿಯ ಹೇಳಿಕೆಯನ್ನು ಗಮನಿಸಬೇಕು.

ಕಾಲಕಾಲಕ್ಕೆ ಸಾಲ ಮರುಪಾವತಿಸುವವರಿಗೆ ಸರ್ಕಾರ ನೀಡುವ ಉತ್ತೇಜನ ಏನು? ಅವರು ಸಕಾಲಕ್ಕೆ ಸಾಲ ಮರುಪಾವತಿಸುತ್ತಲೇ ಇರುತ್ತಾರೆ. ಇನ್ನೊಂದೆಡೆ ವರ್ಷಾನುಗಟ್ಟಲೆ ಸಾಲ ತೀರಿಸದೆ ಉಳಿಯುವವರು ಮನ್ನಾದ ಲಾಭ ಪಡೆಯುತ್ತಾರೆ. ಇದು ಪ್ರಾಮಾಣಿಕರಿಗೆ ಮಾಡುವ ಅನ್ಯಾಯ ಅಲ್ಲವೇ ಎಂಬುದು ಕೂಡ ಗಂಭೀರ ಪ್ರಶ್ನೆಯೇ. ಇದಕ್ಕಿಂತ ಅಸಲು ಮರುಪಾವತಿಸಿದರೆ ಬಡ್ಡಿ ಮನ್ನಾ ಎಂಬ ಉಪಕ್ರಮಗಳು ನಿಜಕ್ಕೂ ಉತ್ತಮ ಹೆಜ್ಜೆ ಎನಿಸಬಲ್ಲವು. ಆಗ ಅಸಲನ್ನಾದರೂ ಪಾವತಿಸುವವರ ಪ್ರಮಾಣವಾದರೂ ಕೊಂಚ ಹೆಚ್ಚಾದೀತು. ಉತ್ತಮ ಬೆಳೆ ಹಾಗೂ ಧಾರಣೆ ದೊರಕಿದರೆ ಸಾಲ ಮರುಪಾವತಿ ಮಾಡದೆ ಇರುವಷ್ಟು ನಮ್ಮ ದೇಶದ ಯಾವ ರೈತನೂ ಅಪ್ರಾಮಾಣಿಕನಲ್ಲ. ಸಾಲಮನ್ನಾವನ್ನು ಮತಬೇಟೆಯ ತಂತ್ರವನ್ನಾಗಿ ಬಳಸುವ ಬದಲು ರಾಜಕೀಯ ಪಕ್ಷಗಳು ರೈತರ ಸಮಸ್ಯೆಗಳ ಪರಿಹಾರದ ಬಗ್ಗೆ ನೈಜ ಮನಸ್ಸಿನಿಂದ ಕೆಲಸ ಮಾಡಿದರೆ ಸಾಲಮರುಪಾವತಿ ಸಂಸ್ಕøತಿ ಮತ್ತೆ ನಿಸ್ಸಂಶಯವಾಗಿ ಬಲಗೊಳ್ಳುವುದು ಕಷ್ಟವೇನಲ್ಲ.

ಏರುತ್ತಿರುವ ಅನುತ್ಪಾದಕ ಆಸ್ತಿ
ಪಂಜಾಬ್ ಸರ್ಕಾರವು ಸಣ್ಣ ಮತ್ತು ಅತಿಸಣ್ಣ ರೈತರ ರೂ. 2 ಲಕ್ಷದವರೆಗಿನ ಸಾಲಗಳನ್ನು ಘೋಷಿಸಿದ ಮೇಲೆ ಕಟ್ಟಲು ಅನುಕೂಲವಿದ್ದವರೂ ಕಟ್ಟುವುದನ್ನು ನಿರ್ಲಕ್ಷಿಸಿದರು. ಇದು ಬಹುತೇಕ ಸಂದರ್ಭಗಳಲ್ಲಿ/ ರಾಜ್ಯಗಳಲ್ಲಿ ನಡೆಯುವ ವಿದ್ಯಮಾನ. ಸಾಲ ಮರುಪಾವತಿ ಮಾಡುವುದು ಹಾಗಿರಲಿ ಖಾತೆಗಳಲ್ಲಿ ಹಣವಿದ್ದರೆ ಬ್ಯಾಂಕ್ ಸಾಲದ ಕಂತನ್ನು ತೆಗೆದುಕೊಂಡೀತು ಎಂಬ ಆತಂಕದಿಂದ ಕೆಲವು ರೈತರು ಬ್ಯಾಂಕುಗಳಲ್ಲಿ ಹಣ ಡೆಪಾಸಿಟ್ ಮಾಡುವುದನ್ನೇ ನಿಲ್ಲಿಸಿಬಿಟ್ಟರಂತೆ. ಇದರಿಂದಾಗಿ ಬ್ಯಾಂಕುಗಳಲ್ಲಿನ ಅನುತ್ಪಾದಕ ಆಸ್ತಿ (ಎನ್‍ಪಿಎ) ಬೆಳೆಯುತ್ತಲೇ ಇದೆ. 

ಕುಸಿಯುತ್ತಿರುವ ಸಾಲಸೌಲಭ್ಯ
ವಾಸ್ತವವಾಗಿ ಸಣ್ಣ ರೈತರಿಗೆ ದೊರೆಯುವ ಸಾಲಸೌಲಭ್ಯ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. ಒಟ್ಟಾರೆ ಕೃಷಿ ಸಾಲದಲ್ಲಿ ರೂ. 2 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಸಾಲ ಪಡೆದವರ ಪ್ರಮಾಣ 2016ರಲ್ಲಿ ಶೇ. 45 ಇತ್ತು, ಇದು 2017ರಲ್ಲಿ ಶೇ. 40ಕ್ಕೆ ಇಳಿಯಿತು. ಹಾಗೆ ನೋಡಿದರೆ ದೊಡ್ಡ ಸಾಲಗಳನ್ನು ಪಡೆಯುವವರ ಪ್ರಮಾಣ ಹೆಚ್ಚಿದೆ. ಉದಾಹರಣೆಗೆ, ಎರಡು ಲಕ್ಷಕ್ಕಿಂತ ಹೆಚ್ಚು ಮತ್ತು ಒಂದು ಕೋಟಿಗಿಂತ ಕಡಿಮೆ ಸಾಲ ಪಡೆಯುವವರು ನಮ್ಮಲ್ಲಿ ಶೇ. 47 ಇದ್ದಾರೆ. ಒಂದು ಕೋಟಿಗಿಂತಲೂ ಕೃಷಿ ಸಾಲ ಪಡೆಯುವವರು ಶೇ. 13 ಇದ್ದಾರೆ. ದುರದೃಷ್ಟವೆಂದರೆ ದಾಸ್ತಾನು ಮಳಿಗೆಗಳು, ಕೋಲ್ಡ್ ಸ್ಟೋರೇಜ್, ರಸಗೊಬ್ಬರಗಳ ತಯಾರಕರು, ಅಹಾರ ಉತ್ಪನ್ನಗಳ ತಯಾರಕರೇ ಮೊದಲಾದ ದೊಡ್ಡ ಕುಳಗಳೇ ಇಂತಹ ಕೃಷಿ ಸಾಲದ ಪ್ರಯೋಜನೆ ಪಡೆಯುತ್ತಾರೆ.

ಗರಿಷ್ಠ ವಿತ್ತೀಯ ಕೊರತೆ
ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಸರ್ಕಾರದ ವಿತ್ತೀಯ ಕೊರತೆ ಗರಿಷ್ಠ ಹಂತವನ್ನು ತಲುಪಿದೆ. ಇದು ಹಣದುಬ್ಬರಕ್ಕೆ ಎಡೆ ಮಾಡಿಕೊಟ್ಟಿದೆ. ಸಾಲಮನ್ನಾ ನಿರ್ಧಾರಗಳು ಈ ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸಿವೆ. ಹಾಗೆಯೇ, ಸಾಲಮನ್ನಾ ನಿರ್ಧಾರವು ಭವಿಷ್ಯದಲ್ಲಿ ಸಾಲಗಾರರು ಸುಸ್ತಿದಾರರಾಗಲು ಉತ್ತೇಜನ ನೀಡುತ್ತದೆ. ಮುಂದೆ ಸಾಲ ಮರುಪಾವತಿಸುವ ಸಂದರ್ಭವೇ ಬರಲಿಕ್ಕಿಲ್ಲ ಎಂದು ಭಾವಿಸುವ ಸಾಲಗಾರರು ಹೆಚ್ಚೆಚ್ಚು ಪ್ರಮಾಣದಲ್ಲಿ ಸಾಲ ಪಡೆದು ಮರುಪಾವತಿಯನ್ನು ನಿರ್ಲಕ್ಷಿಸತೊಡಗುತ್ತಾರೆ ಎನ್ನುತ್ತಾರೆ ಆರ್ಥಿಕ ತಜ್ಞರು. 

ರೈತರ ಆತ್ಮಹತ್ಯೆ
ರೈತರ ಆತ್ಮಹತ್ಯೆ ಭಾರತದ ಕೃಷಿ ಕ್ಷೇತ್ರದ ಬಲುದೊಡ್ಡ ಸವಾಲು. ಉದಾರೀಕರಣದ ನೀತಿಯೊಂದಿಗೆ ದೇಶವನ್ನು ಪ್ರವೇಶಿಸಿದ ಈ ಭೂತ ಇನ್ನೂ ತನ್ನ ಆಟಾಟೋಪವನ್ನು ನಿಲ್ಲಿಸಿಲ್ಲ. ರಾಷ್ಟ್ರೀಯ ಅಪರಾಧ ದಾಖಲು ಬ್ಯೂರೋದ ಪ್ರಕಾರ, 1995ರಿಂದೀಚೆಗೆ ದೇಶದಲ್ಲಿ 2.96 ಲಕ್ಷದಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಸುಮಾರು 60,000ದಷ್ಟು ರೈತರು ಮಹಾರಾಷ್ಟ್ರದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಒಡಿಶಾ, ತೆಲಂಗಾಣ, ಆಂಧ್ರ, ಮಧ್ಯಪ್ರದೇಶ, ಗುಜರಾತ್ ಹಾಗೂ ಛತ್ತೀಸ್‍ಗಡ ನಂತರದ ಸಾಲಿನಲ್ಲಿವೆ. ಕೋಟಿಗಟ್ಟಲೆ ರೂಪಾಯಿಯಷ್ಟು ಸಾಲಮನ್ನಾ ಘೋಷಣೆ ಮಾಡಿದ್ದರಿಂದಲೂ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಕಡಿಮೆಯಾಗಿಲ್ಲ ಎಂದರೆ ಸಾಲಮನ್ನಾ ಒಂದು ಪರಿಣಾಮಕಾರಿ ಉಪಕ್ರಮ ಅಲ್ಲ ಎಂಬುದು ದೃಢವಾಗುತ್ತದೆ.

ಬುಧವಾರ, ಏಪ್ರಿಲ್ 10, 2019

ಕ್ರೆಡಿಟ್ ಕಾರ್ಡ್: ಜಾಣ ಬಳಕೆಗೆ ಹತ್ತಾರು ಹಾದಿ

ವಿಜಯವಾಣಿ (ವಿತ್ತವಾಣಿ) 18 ಫೆಬ್ರವರಿ 2019ರಂದು ಪ್ರಕಟವಾದ ಲೇಖನ
ವಿಜಯವಾಣಿ | ವಿತ್ತವಾಣಿ | 18 ಫೆಬ್ರವರಿ 2019

ಜೇಬಲ್ಲಿ ಒಂದು ನಾಣ್ಯವನ್ನೂ ಇಟ್ಟುಕೊಳ್ಳದೆ ಸಾವಿರಾರು ರೂಪಾಯಿ ವ್ಯವಹಾರ ಮಾಡುವ ಸ್ಮಾರ್ಟ್ ಜಗತ್ತಿನಲ್ಲಿ ನಾವಿದ್ದೇವೆ. ಹೋಟೆಲ್, ಆಸ್ಪತ್ರೆ, ಮಾಲ್, ಚಿತ್ರಮಂದಿರ, ಪೆಟ್ರೋಲ್ ಬಂಕ್, ಮೆಡಿಕಲ್, ಮಾರ್ಕೆಟ್ - ಎಲ್ಲೇ ಹೋಗಲಿ, ಒಳಗೆ ಕಾಲಿಡುವ ಮುನ್ನ 'ಕಾರ್ಡ್ ಬಳಸಬಹುದೇ?’ ಎಂದು ಕೇಳುವುದು ಸಾಮಾನ್ಯವಾಗಿದೆ. ಕೈಯಲ್ಲಿ ನಗದು ಹಿಡಿದುಕೊಂಡು ಊರೆಲ್ಲ ಓಡಾಡಬೇಕಿಲ್ಲ, ಪದೇ ಪದೇ ಚೇಂಜ್ ಇದೆಯಾ ಅಂತ ಕೇಳಿಸಿಕೊಳ್ಳಬೇಕಿಲ್ಲ. ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಎಂಬ ನಾಲ್ಕು ಪದಗಳು ಬದಲಾದ ಬದುಕಿನ ಪಾಸ್ವರ್ಡ್‌ಗಳಾಗಿವೆ.

2012ರಲ್ಲಿ ಭಾರತದಲ್ಲಿ 17.65 ಮಿಲಿಯನ್‌ನಷ್ಟು ಕ್ರೆಡಿಟ್ ಕಾರ್ಡ್ ಬಳಕೆದಾರರಿದ್ದರು. 2014ರಲ್ಲಿ ಇದು 19.9 ಮಿಲಿಯನ್‌ಗೆ ಏರಿತು. ಕಳೆದ ವರ್ಷ ಇದು ಗರಿಷ್ಠ ಏರಿಕೆಯನ್ನು ಕಂಡಿತು. ಭಾರತೀಯ ರಿಸರ್ವ್ ಬ್ಯಾಂಕ್ ವರದಿಯ ಪ್ರಕಾರ 2017ರ ಮಾರ್ಚ್ ಅಂತ್ಯಕ್ಕೆ ದೇಶದಲ್ಲಿ ಒಟ್ಟು 29.8 ಮಿಲಿಯನ್‌ನಷ್ಟು ಕ್ರೆಡಿಟ್ ಕಾರ್ಡ್ ಗ್ರಾಹಕರಿದ್ದಾರೆ. ಐದೇ ವರ್ಷಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ನಡೆದ ಹಣಕಾಸು ವ್ಯವಹಾರದ ಏರಿಕೆ ಶೇ. 275ರಷ್ಟು ಎಂದರೆ ನಂಬಲೇಬೇಕಾಗಿದೆ.
ನೋಟಿನ ಅಮಾನ್ಯೀಕರಣದಿಂದ ದಿನನಿತ್ಯದ ವ್ಯವಹಾರಗಳಿಗೆ ತಟ್ಟಿದ ಬಿಸಿ, ಎಲ್ಲೆಡೆ ದೊರೆಯುತ್ತಿರುವ ಅಗ್ಗದ ಡೇಟಾ, ಹೆಚ್ಚುತ್ತಿರುವ ಆಂಡ್ರಾಯ್ಡ್ ಮೊಬೈಲ್ ಫೋನುಗಳ ಬಳಕೆ ಹಾಗೂ ಜನಪ್ರಿಯವಾಗುತ್ತಿರುವ ಆನ್‌ಲೈನ್ ವ್ಯಾಪಾರದಿಂದಾಗಿ ಕ್ರೆಡಿಟ್ ಕಾರ್ಡುಗಳ ಬಳಕೆ ಗಣನೀಯವಾಗಿ ಏರಿಕೆಯಾಗಿದೆ. ೨೦೨೦ರ ವೇಳೆಗೆ ಒಟ್ಟಾರೆ ಕ್ರೆಡಿಟ್ ಕಾರ್ಡ್ ಬಳಕೆ ೧೦ ಪಟ್ಟು ಹಿಗ್ಗಲಿದೆ ಎಂಬುದು ಬ್ಯಾಂಕಿಂಗ್ ತಜ್ಞರ ವಿಶ್ಲೇಶಣೆ.

ಕ್ರೆಡಿಟ್ ಕಾರ್ಡೆಂಬ ಪ್ಲಾಸ್ಟಿಕ್ ಮನಿಯಿಂದಾಗಿ ವ್ಯವಹಾರವೇನೋ ಸ್ಮಾರ್ಟ್ ಆಯಿತು. ಅದನ್ನು ಎಲ್ಲೆಂದಲ್ಲಿ ಗೀರಿ ಗೆಲುವಿನ ನಗೆ ಬೀರುವ ನಾವು ನಿಜವಾಗಿಯೂ ಸ್ಮಾರ್ಟ್ ಆಗಿದ್ದೇವೆಯೇ ಎಂದು ಪ್ರಶ್ನಿಸಿಕೊಳ್ಳುವ ಕಾಲ ಬಂದಿದೆ. ಬಾಂಬ್ ಹಾಕಿ, ರಕ್ತಪಾತ ಮಾಡಿ ದೇಶಗಳನ್ನು ಸೋಲಿಸುವ ಕಾಲ ಹಳತಾಗುತ್ತಿದೆ; ಇನ್ನೇನಿದ್ದರೂ ಕಂಪ್ಯೂಟರ್ ಜಾಲವನ್ನೇ ನಿಸ್ತೇಜಗೊಳಿಸಿ ಇಡೀ ದೇಶದ ಆರ್ಥಿಕತೆ ಮತ್ತು ಆಡಳಿತವನ್ನು ರಾತ್ರಿ ಬೆಳಗಾಗುವುದರೊಳಗೆ ಬುಡಮೇಲು ಮಾಡುವ ಸೈಬರ್ ಯುದ್ಧದ ಕಾಲ. ಹೀಗಾಗಿ ನಮ್ಮ ಸ್ಮಾರ್ಟ್ ವ್ಯವಹಾರಗಳ ಬಗ್ಗೆ ಕ್ಷಣಕ್ಷಣವೂ ಎಚ್ಚರಿಕೆಯಿಂದ ಇರುವುದು ಅನಿವಾರ್ಯವಾಗಿದೆ. ಕ್ರೆಡಿಟ್ ಕಾರ್ಡುಗಳನ್ನು ಸಾಧ್ಯವಾದಷ್ಟು ನಿರಪಾಯಕಾರಿಯಾಗಿ ಬಳಸುವುದು ಹೇಗೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ.

ಪೂರ್ವಾಪರ ತಿಳಿದುಕೊಳ್ಳಿ: ಕ್ರೆಡಿಟ್ ಕಾರ್ಡ್ ಜನಪ್ರಿಯಗೊಳ್ಳುತ್ತಿರುವುದರಿಂದ ಹಲವಾರು ಬ್ಯಾಂಕುಗಳು ವಿವಿಧ ಬಗೆಯ ಕ್ರೆಡಿಟ್ ಕಾರ್ಡ್‌ಗಳನ್ನು ಪರಿಚಯಿಸುತ್ತಿವೆ. ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ನಂತರವೇ ಮುಂದುವರಿಯಿರಿ. ತಕ್ಷಣಕ್ಕೆ ಗೋಚರಿಸುವ ಲಾಭಗಳಿಗೆ ಮಾರುಹೋಗದೆ ಆಯಾ ಬ್ಯಾಂಕಿನ ನಿಯಮಾವಳಿಗಳನ್ನು ತಿಳಿದುಕೊಳ್ಳಿ. ನಿಮ್ಮ ಕ್ರೆಡಿಟ್ ಲಿಮಿಟ್ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಿ.

ಮರುಪಾವತಿಗೆ ರಿಯಾಯಿತಿ ಅವಧಿ: ನೀವು ಪಡೆದುಕೊಳ್ಳಲು ಬಯಸಿರುವ ಕ್ರೆಡಿಟ್ ಕಾರ್ಡಿಗೆ ಸಂಬಂಧಿಸಿದಂತೆ ಖರ್ಚು ಮಾಡಿದ ಹಣದ ಮರುಪಾವತಿಗೆ ಇರುವ ರಿಯಾಯಿತಿ ಅವಧಿ (ಗ್ರೇಸ್ ಪಿರಿಯಡ್) ಎಷ್ಟು ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದರಿಂದ ಅನಗತ್ಯ ದಂಡ ಪಾವತಿಸುವುದನ್ನು ತಪ್ಪಿಸಿಕೊಳ್ಳಬಹುದು.

ಷರತ್ತುಗಳನ್ನು ಗಮನಿಸಿ: ಇದು 'ಷರತ್ತುಗಳು ಅನ್ವಯಿಸುವ’ ಕಾಲ. ಮೇಲ್ನೋಟಕ್ಕೆ ಕಂಡದ್ದೆಲ್ಲ ನಿಜ ಇರುವುದಿಲ್ಲ. ಯಾವುದೇ ಕೊಡುಗೆಯ ಹಿಂದೆಯೂ 'ಕಂಡೀಶನ್ಸ್ ಅಪ್ಲೈ’ ಇದ್ದೇ ಇರುತ್ತದೆ. ಅದೇನೆಂದು ತಿಳಿದುಕೊಳ್ಳಿ. ಎಲ್ಲವೂ ಸರಳ-ಸುಲಭವಾಗಿ ಕಂಡರೂ ನಿಮ್ಮ ವ್ಯವಹಾರದ ಹಿಂದೆ ಕೆಲವು ’ಹಿಡನ್ ಚಾರ್ಜಸ್’ ಇರಬಹುದು. ಅವುಗಳ ವಿವರ ಕೇಳಿಕೊಳ್ಳಿ.

ಆಫರ್‌ಗಳಿಗೆ ಮಾರುಹೋಗಬೇಡಿ: ಗ್ರಾಹಕರನ್ನು ಆಕರ್ಷಿಸುವುದಕ್ಕೋಸ್ಕರ ಬ್ಯಾಂಕುಗಳು ವಿವಿಧ ರೀತಿಯ ಕೊಡುಗೆಗಳನ್ನು ಘೋಷಿಸುತ್ತವೆ. ಆಫರ್‌ಗಳಿಗಿಂತಲೂ ಒಟ್ಟಾರೆ ವ್ಯವಹಾರದಲ್ಲಿ ನಿಮಗಾಗುವ ಅನುಕೂಲಗಳ ಬಗ್ಗೆ ಹೆಚ್ಚು ಗಮನಹರಿಸುವುದು ಮುಖ್ಯ.

ಸಕಾಲದಲ್ಲಿ ಪಾವತಿ ಮಾಡಿ: ಕ್ರೆಡಿಟ್ ಕಾರ್ಡ್ ಬಳಸಿ ವಸ್ತುಗಳನ್ನು ಕೊಂಡ ಬಳಿಕ ನಿಗದಿತ ಅವಧಿಯೊಳಗೆ ಖರ್ಚನ್ನು ಮರುಪಾವತಿ ಮಾಡಿ. ತಡಮಾಡಿದಷ್ಟು ಹೆಚ್ಚುವರಿ ಬಡ್ಡಿ ಮತ್ತಿತರ ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಬಿಲ್ ಬಂದಾಗ ಶಾಕ್ ಆಗುವ ಸರದಿ ನಿಮ್ಮದಾಗಬಹುದು.

ದುಂದುವೆಚ್ಚ ಒಳ್ಳೆಯದಲ್ಲ: ಕ್ರೆಡಿಟ್ ಕಾರ್ಡ್ ನಮಗರಿವಿಲ್ಲದಂತೆಯೇ ಕೊಳ್ಳುಬಾಕ ಪ್ರವೃತ್ತಿ ಬೆಳೆಸಿಬಿಡುತ್ತದೆ. ನಗದು ವ್ಯವಹಾರ ಮಾಡುವಾಗ ಕೈಯಲ್ಲಿ ಇರುವಷ್ಟೇ ಖರ್ಚು ಮಾಡುತ್ತೇವೆ. ಕಾರ್ಡ್ ಇರುವಾಗ 'ಲಿಮಿಟ್ ಇನ್ನೂ ಇದೆ. ಈಗ ಆಫರ್ ಇರುವಾಗಲೇ ಇದೊಂದು ಖರೀದಿ ಮಾಡಿಬಿಡೋಣ ಅಥವಾ ಹೆಚ್ಚು ರಿವಾರ್ಡ್ ಪಾಯಿಂಟ್ಸ್ ಬರುತ್ತದೆ’ ಎಂದು ಮನಸ್ಸು ಹೇಳುತ್ತಿರುತ್ತದೆ. ಸಾಮರ್ಥ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದರಿಂದ ಮುದೊಂದು ದಿನ ಅಪಾಯದಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಕ್ರೆಡಿಟ್ ಲಿಮಿಟ್‌ನ ಸರಾಸರಿ ಶೇ. 40ರಷ್ಟು ವ್ಯವಹಾರ ಮಾಡುವುದು ಜಾಣತನ.

ಸಾಧ್ಯವಾದಷ್ಟು ನಗದು ವಿದ್‌ಡ್ರಾ ಮಾಡಬೇಡಿ: ಕ್ರೆಡಿಟ್ ಕಾರ್ಡ್ ಬಳಸಿ ನಗದು ಹಣವನ್ನೂ ವಿದ್‌ಡ್ರಾ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಆದರೆ ಸಾಧ್ಯವಾದಷ್ಟು ಕ್ಯಾಶ್ ಪಡೆದು ಬಳಸುವುದನ್ನು ತಪ್ಪಿಸಿ. ವಸ್ತುಗಳ ಖರೀದಿಗೆ ಮಾಡಿದ ಖರ್ಚಿಗಿಂತ ನಗದು ಪಡೆದುದಕ್ಕೆ ಹೆಚ್ಚಿನ ಬಡ್ಡಿ ಇರುತ್ತದೆ. ನಗದು ಬಳಕೆಗೆ ಬಡ್ಡಿರಹಿತ ಅವಧಿ ಇಲ್ಲ. ನಗದು ವಿದ್‌ಡ್ರಾ ಮಾಡಿದ ದಿನದಿಂದಲೇ ಶೇ. 24-40ರಷ್ಟು ಬಡ್ಡಿ ಅನ್ವಯವಾಗುತ್ತದೆ. ನಮ್ಮದಲ್ಲದ ಹಣವನ್ನು ಬಳಸುವಾಗ ಜಿಪುಣರಾಗಿರುವುದೇ ವಾಸಿ. ಕ್ರೆಡಿಟ್ ಕಾರ್ಡ್ ಸಾಲಕ್ಕೆ ಪರ್ಯಾಯವಲ್ಲ ಎಂಬುದನ್ನು ನೆನಪಿಡಿ.

ರಿವಾರ್ಡ್ ಪಾಯಿಂಟ್ಸ್ ಸದ್ಬಳಕೆ ಮಾಡಿ: ಕ್ರೆಡಿಟ್ ಕಾರ್ಡ್ ಬಳಸುವಾಗ ಪ್ರತೀ ವ್ಯವಹಾರಕ್ಕೆ ಇಂತಿಷ್ಟು ರಿವಾರ್ಡ್ ಪಾಯಿಂಟ್ಸ್ ಸಂಗ್ರಹವಾಗುತ್ತಿರುತ್ತದೆ. ಅದನ್ನು ಗಮನಿಸಿ ಆಗಿಂದಾಗ್ಗೆ ಸದ್ಬಳಕೆ ಮಾಡಿ. ಅದರ ಅವಧಿ ಮುಗಿದರೆ ವಿನಾಕಾರಣ ನಮಗಿರುವ ರಿವಾರ್ಡ್ ಪಾಯಿಂಟುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಕ್ಯಾಶ್‌ಬ್ಯಾಕ್ ಆಫರ್‌ಗಳಿದ್ದಾಗ ಸದುಪಯೋಗಪಡಿಸಿಕೊಳ್ಳಿ.

ಸ್ಟೇಟ್‌ಮೆಂಟ್ ಗಮನಿಸುತ್ತಿರಿ: ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್ ಅನ್ನು ಆಗಾಗ್ಗೆ ಗಮನಿಸುತ್ತಿರಿ. ಎಷ್ಟು ಖರ್ಚಾಗಿದೆ, ನಿಮಗೆ ನೀಡಲಾಗಿರುವ ಲಿಮಿಟ್‌ನಲ್ಲಿ ಇನ್ನೆಷ್ಟು ಉಳಿದಿದೆ, ಮಿತಿ ಮೀರಿ ಖರ್ಚು ಮಾಡಿದ್ದೀರಾ, ನಿಮಗೆ ಗೊತ್ತಿಲ್ಲದಂತೆ ಯಾವುದಾದರೂ ಖರ್ಚು ನಡೆದಿದೆಯೇ ಎಂಬುದನ್ನು ತಿಳಿದುಕೊಳ್ಳಲು ಇದು ಅಗತ್ಯ.

ಜವಾಬ್ದಾರಿಯಿಂದ ವರ್ತಿಸಿ: ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಜವಾಬ್ದಾರಿ ಮತ್ತು ಶಿಸ್ತು ಇರಲಿ. ಕ್ರೆಡಿಟ್ ಕಾರ್ಡ್ ಎಂದರೆ ಸಾಲದ ಅಸುರಕ್ಷಿತ ರೂಪ ಎಂದೇ ಅರ್ಥ. ಕಾಲ ಆಧುನಿಕವಾಗುತ್ತಿದ್ದಂತೆ ಕಳ್ಳರೂ ಹೆಚ್ಚುಹೆಚ್ಚು ಬುದ್ಧಿವಂತರಾಗುತ್ತಿದ್ದಾರೆ. ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ನಿಮ್ಮ ಪಾಸ್‌ವರ್ಡ್‌ಗಳನ್ನು ಕದಿಯುವ, ನಿಮಗೆ ಗೊತ್ತಿಲ್ಲದಂತೆ ನಿಮ್ಮ ಕಾರ್ಡುಗಳ ಅನುಕೂಲ ಪಡೆಯುವ ಖದೀಮರ ಬಗ್ಗೆ ಸದಾ ಎಚ್ಚರವಹಿಸಿ.


ಬುಧವಾರ, ಆಗಸ್ಟ್ 22, 2018

ಹೊಸ ಇ-ಕಾಮರ್ಸ್ ನೀತಿ: ಲಾಭದ ಚೆಂಡು ಯಾರ ಅಂಗಳಕ್ಕೆ?

'ವಿಜಯವಾಣಿ' - ವಿತ್ತವಾಣಿ ಪುರವಣಿಯಲ್ಲಿ 20-08-2018ರಂದು ಪ್ರಕಟವಾದ ಲೇಖನ

ನಾಲ್ಕು ವರ್ಷಗಳ ಹಿಂದಿನ ಮಾತು. ಅದು 2014ರ ಅಕ್ಟೋಬರ್ 6. ದೇಶದುದ್ದಗಲದಲ್ಲಿ ನಡೆಯುತ್ತಿದ್ದ ತರಹೇವಾರಿ ಹಬ್ಬಗಳಿಗೆ ಆನ್‌ಲೈನ್ ದಿಗ್ಗಜ ಫ್ಲಿಪ್‌ಕಾರ್ಟ್ ಹೊಸ ರಂಗು ತುಂಬಿತ್ತು. ಆ ದಿನವನ್ನು 'ಬಿಗ್ ಬಿಲಿಯನ್ ಡೇ’ ಎಂದು ಘೋಷಿಸಿದ ಕಂಪೆನಿ ಸಾವಿರಾರು ಉತ್ಪನ್ನಗಳನ್ನು ಭಾರೀ ರಿಯಾಯಿತಿಯಲ್ಲಿ ಬಿಕರಿ ಮಾಡಿತು. ಇಷ್ಟೊಂದು ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡುವುದು ಸಾಧ್ಯವೇ ಎಂದು ಮುನ್ನಾದಿನದವರೆಗೆ ಅನುಮಾನಪಡುತ್ತಿದ್ದ ಗ್ರಾಹಕರು ಮರುದಿನ ಅದೇ ವಿಸ್ಮಯವನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಕೇವಲ ಹತ್ತೇ ಗಂಟೆಗಳಲ್ಲಿ 15 ಲಕ್ಷ ಗ್ರಾಹಕರು 600 ಕೋಟಿ ರೂಪಾಯಿ ಮೌಲ್ಯದ ವ್ಯಾಪಾರ ನಡೆಸಿಬಿಟ್ಟರು!

'ಬಿಗ್ ಬಿಲಿಯನ್ ಡೇ’ ಭಾರತದ ದೊಡ್ಡದೊಡ್ಡ ಸಗಟು ಹಾಗೂ ರೀಟೇಲ್ ವ್ಯಾಪಾರಿಗಳಿಗೆ 'ಬಿಗ್ ಬ್ಲೋ ಡೇ’ ಕೂಡ ಆಗಿತ್ತು. ಆನ್‌ಲೈನ್ ವ್ಯಾಪಾರದ ಹೆಸರಿನಲ್ಲಿ ಇಷ್ಟೊಂದು ರಿಯಾಯಿತಿ ಕೊಟ್ಟುಬಿಟ್ಟರೆ ಮಾರುಕಟ್ಟೆ ವ್ಯಾಪಾರದ ಪಾಡೇನು ಎಂಬ ಪ್ರತಿಭಟನೆಗಳು ದಾಖಲಾದವು. ಚಿಲ್ಲರೆ ಮಾರಾಟಗಾರರಿಗಂತೂ ಅದು ದೊಡ್ಡ ಹೊಡೆತವೇ ಆಗಿತ್ತು. ಎಂಬಲ್ಲಿಗೆ ಇ-ಕಾಮರ್ಸ್‌ನ ಸಾಧಕ-ಬಾಧಕಗಳ ಬಗ್ಗೆ ಹೊಸ ಚರ್ಚೆಗಳು ಆರಂಭವಾದವು. ಆನ್‌ಲೈನ್ ವ್ಯಾಪಾರದ ರಿಯಾಯಿತಿ ಆಕರ್ಷಣೆಗೆ ಗ್ರಾಹಕರು ಮುಗಿಬೀಳುವುದು ಆಮೇಲೆಯೂ ಮುಂದುವರಿಯಿತು.

2015ರಲ್ಲಿ ರೀಟೇಲರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಹಾಗೂ ಆಲ್ ಇಂಡಿಯಾ ಫೂಟ್‌ವೇರ್ ಮ್ಯಾನುಫ್ಯಾಕ್ಚರರ್ಸ್ & ರೀಟೇಲರ್ಸ್ ಅಸೋಸಿಯೇಶನ್ ಈ ಸಂಬಂಧ ದೆಹಲಿ ಹೈಕೋರ್ಟ್‌ನ ಮೊರೆಹೊಕ್ಕರು. ಇ-ಕಾಮರ್ಸ್ ಕಂಪೆನಿಗಳಿಂದ ಇತರ ಚಿಲ್ಲರೆ ವ್ಯಾಪಾರಿಗಳಿಗೆ ಅನ್ಯಾಯವಾಗುತ್ತಿದೆಯೆಂದು ದೂರುಕೊಟ್ಟರು. ಇ-ಕಾಮರ್ಸ್ ಕಂಪೆನಿಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶವಿರುವುದರಿಂದ ಅವರು ಭಾರೀ ರಿಯಾಯಿತಿಗಳನ್ನು ನೀಡುವುದು ಸಾಧ್ಯವಾಗುತ್ತಿದೆ; ಸಾಮಾನ್ಯ ಚಿಲ್ಲರೆ ವ್ಯಾಪಾರಿಗಳು ಈ ಅಲೆಯೆದುರು ಈಜಿ ಬದುಕಲು ಸಾಧ್ಯವೇ ಎಂದು ಪ್ರಶ್ನಿಸಿದರು.

2016ರಲ್ಲಿ ಆನ್‌ಲೈನ್ ಚಿಲ್ಲರೆ ವ್ಯಾಪಾರದ 'ಮಾರ್ಕೆಟ್‌ಪ್ಲೇಸ್ ಮಾಡೆಲ್’ ಅಡಿಯಲ್ಲಿ ಶೇ. 100 ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಯಿತು. ಇದರ ಪ್ರಕಾರ ಇ-ಕಾಮರ್ಸ್ ಸಂಸ್ಥೆಗಳು ಬೇರೆ ಕಂಪೆನಿಗಳ ಉತ್ಪನ್ನಗಳ ಪಟ್ಟಿಯನ್ನು ಪ್ರಕಟಿಸಿ ವ್ಯಾಪಾರ ವಹಿವಾಟು ಉತ್ತೇಜಿಸುವ ವೇದಿಕೆಗಳಾಗಬಹುದೇ ವಿನಾ ನೇರವಾಗಿ ಬೇರೆ ಕಂಪೆನಿಗಳ ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ನೇರವಾಗಿ ಮಾರಾಟ ಮಾಡುವ ಇ-ಕಾಮರ್ಸ್ ಕಂಪೆನಿಗಳಿಗೆ ಎಫ್‌ಡಿಐ ಪಡೆದುಕೊಳ್ಳಲು ಅವಕಾಶ ಇಲ್ಲ. ಈ ಕಂಪೆನಿಗಳೂ ಒಂದೇ ಕಂಪೆನಿಯ ಶೇ. 25ಕ್ಕಿಂತ ಹೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಇಲ್ಲ. ಆದರೆ ಈ ಎಲ್ಲ ನಿರ್ಬಂಧಗಳನ್ನು ಆನ್‌ಲೈನ್ ವ್ಯಾಪಾರಸ್ಥರು ಗಾಳಿಗೆ ತೂರಿ ತಮ್ಮ ಅನ್ಯಾಯವನ್ನು  ಮುಂದುವರಿಸಿದ್ದಾರೆ ಎಂಬುದು ಸದ್ಯದ ಆರೋಪ. ಕೇಂದ್ರ ಸರ್ಕಾರ ಈಗ ಜಾರಿಗೆ ತರಲು ಉದ್ದೇಶಿಸಿರುವ ಹೊಸ 'ರಾಷ್ಟ್ರೀಯ ಇ-ಕಾಮರ್ಸ್ ನೀತಿ’ ಈ ಚರ್ಚೆ, ವಾದ-ವಿವಾದಗಳ ಒಂದು ನಿರ್ಣಾಯಕ ಹಂತ.

ಏನಿದು ಹೊಸ ನೀತಿ?
ಇ-ಕಾಮರ್ಸ್ ವಲಯದಲ್ಲಿ ಉಂಟಾಗಿರುವ ತಲ್ಲಣಗಳನ್ನು ತಹಬದಿಗೆ ತಂದು ಅದರಲ್ಲಿ ಸುಧಾರಣೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಮೊದಲ ಬಾರಿಗೆ ಜಾರಿಗೆ ತರಲು ಉದ್ದೇಶಿಸಿರುವುದೇ ಹೊಸ ರಾಷ್ಟ್ರೀಯ ಇ-ಕಾಮರ್ಸ್ ನೀತಿ. ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ನೇತೃತ್ವದ 70 ಸದಸ್ಯರ 'ಥಿಂಕ್ ಟ್ಯಾಂಕ್’ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ರೀಟಾ ತಿಯೋತಿಯಾ ನೇತೃತ್ವದಲ್ಲಿ ಒಂದು ಕಾರ್ಯಪಡೆಯನ್ನು ರಚಿಸಿತು. ಈ ಥಿಂಕ್ ಟ್ಯಾಂಕ್ ವಾಣಿಜ್ಯ, ಮಾಹಿತಿ ತಂತ್ರಜ್ಞಾನ, ಸಂವಹನ, ಗ್ರಾಹಕ ವ್ಯವಹಾರ ಸಚಿವಾಲಯಗಳ ಕಾರ್ಯದರ್ಶಿಗಳು ಹಾಗೂ ಉದ್ದಿಮೆ ವಲಯದ ಪ್ರತಿನಿಧಿಗಳನ್ನು ಒಳಗೊಂಡಿತ್ತು.

ರಾಷ್ಟ್ರೀಯ ಇ-ಕಾಮರ್ಸ್ ನೀತಿಗೊಂದು ಚೌಕಟ್ಟು ರೂಪಿಸಿ ಸೂಕ್ತ ಶಿಫಾರಸುಗಳನ್ನು ಮಾಡುವಂತೆ ಕಾರ್ಯಪಡೆಗೆ ಸೂಚಿಸಲಾಗಿತ್ತು. ಸಾಕಷ್ಟು ಚಿಂತನೆ-ಚರ್ಚೆ-ಸಂವಾದಗಳ ಬಳಿಕ ಮೊನ್ನೆ ಜುಲೈ ಅಂತ್ಯಕ್ಕೆ ಕಾರ್ಯಪಡೆಯು ಇ-ಕಾಮರ್ಸ್ ನೀತಿಯ ಕರಡು ಪ್ರತಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಗ್ರಾಹಕರು, ಉದ್ದಿಮೆದಾರರು ಹಾಗೂ ಮಾರಾಟಗಾರರೂ ಸೇರಿದಂತೆ ಎಲ್ಲ ಸಾರ್ವಜನಿಕರಿಂದ ಸಲಹೆ ಸೂಚನೆ ಅಹವಾಲುಗಳನ್ನು ಸರ್ಕಾರ ಆಹ್ವಾನಿಸಿದೆ. ಅವುಗಳ ಆಧಾರದಲ್ಲಿ ಅಂತಿಮ ನೀತಿ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ.

ಸಾಧಕ-ಬಾಧಕಗಳ ಚರ್ಚೆ
ನೀತಿ ಜಾರಿಗೆ ಬಂದರೆ ಏನಾಗಬಹುದು ಎಂಬ ಊಹೆಗಳ ಆಧಾರದಲ್ಲಿ ಮತ್ತೆ ಸಾಕಷ್ಟು ಚರ್ಚೆಗಳು ಗರಿಗೆದರಿವೆ. ಕಂಪೆನಿಗಳು ಹಾಗೂ ಮಾರುಕಟ್ಟೆ ತಜ್ಞರ ಕಡೆಯಿಂದ ಕರಡು ನೀತಿ ಬಗ್ಗೆ ಮಿಶ್ರಪತ್ರಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಫ್ಲಿಪ್‌ಕಾರ್ಟ್, ಅಮೆಜಾನ್, ಸ್ನಾಪ್‌ಡೀಲ್, ವಾಲ್‌ಮಾರ್ಟ್, ಸಾಫ್ಟ್‌ಬ್ಯಾಂಕ್‌ನಂತಹ ಇ-ಕಾಮರ್ಸ್ ಕಂಪೆನಿಗಳ ಭರ್ಜರಿ ವ್ಯವಹಾರಕ್ಕೆ ಹೊಸ ನೀತಿಯಿಂದ ಅಂಕುಶ ಬೀಳಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಇದರಿಂದ ಗ್ರಾಹಕರು ಕಡಿಮೆ ಬೆಲೆಗೆ ವಸ್ತುಗಳು ಕೊಳ್ಳುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ ಎಂಬ ಆತಂಕ ಕೆಲವರದ್ದು.

ಇನ್ನೊಂದೆಡೆ, ಹೊಸ ನೀತಿಯು ಸ್ವದೇಶಿ ಕಂಪೆನಿಗಳಿಗೆ ಜೀವದಾನ ಮಾಡಲಿದೆ ಎಂಬ ವಿಶ್ಲೇಷಣೆಯನ್ನೂ ಮಾಡಲಾಗುತ್ತಿದೆ. ಮಾರುಕಟ್ಟೆ ದರಗಳ ಮೇಲೆ ಪ್ರಭಾವ ಬೀರುವಂತೆ ಹೆಚ್ಚಿನ ಪ್ರಮಾಣದಲ್ಲಿ (ಶೇ. 25ರ ನಿರ್ಬಂಧವನ್ನು ಮೀರಿ) ಉತ್ಪನ್ನಗಳನ್ನು ಖರೀದಿಸಿ ದಾಸ್ತಾನು ಮಾಡುವಂತಿಲ್ಲ ಎಂದು ಕರಡು ನೀತಿ ಹೇಳುತ್ತದೆಯಾದರೂ, ಸಂಪೂರ್ಣವಾಗಿ ದೇಶೀಯವಾಗಿಯೇ ತಯಾರಾದ ಉತ್ಪನ್ನಗಳ ಮಾರಾಟಕ್ಕೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಇದು ಎಫ್‌ಡಿಐ ಯುಗದಲ್ಲಿ ಸ್ವದೇಶಿ ಕಂಪೆನಿಗಳಿಗೆ ಹೊಸ ಶಕ್ತಿಯನ್ನು ನೀಡಬಲ್ಲ ಕ್ರಮ ಎಂಬುದು ನೀತಿನಿರೂಪಕರ ಸಮರ್ಥನೆ.

ಜಾಗತೀಕರಣದ ಯುಗದಲ್ಲೂ ಭಾರತದ ಮಧ್ಯಮ, ಸಣ್ಣ ಹಾಗೂ ಅತಿಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ನೀತಿ ಒಂದು ಮೈಲಿಗಲ್ಲಾಗಲಿದೆ ಎಂಬುದು ತಜ್ಞರ ಅಭಿಮತ. ಶೇ. 49ಕ್ಕಿಂತ ಕಡಿಮೆ ವಿದೇಶಿ ಬಂಡವಾಳ ಇರುವ ಇ-ಕಾಮರ್ಸ್ ಕಂಪೆನಿಗಳಲ್ಲಿ ಭಾರತೀಯರಿಗೆ ಹೆಚ್ಚಿನ ಅಧಿಕಾರ ನೀಡುವ ಪ್ರಸ್ತಾಪವೂ ಕರಡು ನೀತಿಯಲ್ಲಿ ಇದೆ.
ಇ-ಕಾಮರ್ಸ್ ವಲಯದ ಅಹವಾಲುಗಳು ಹಾಗೂ ಎಫ್‌ಡಿಐ ಕುರಿತ ವಿವಾದಗಳ ಇತ್ಯರ್ಥಕ್ಕೆ ಜಾರಿ ನಿರ್ದೇಶನಾಲಯದಲ್ಲಿ ಪ್ರತ್ಯೇಕ ವಿಭಾಗವೊಂದನ್ನು ತೆರೆಯುವಂತೆಯೂ ಕಾರ್ಯಪಡೆ ಶಿಫಾರಸು ಮಾಡಿದೆ. ಎಲ್ಲ ಬಗೆಯ ಡಿಜಿಟಲ್ ವಹಿವಾಟುಗಳನ್ನು ನಿಯಂತ್ರಿಸಲು ಒಂದು ಪ್ರತ್ಯೇಕ ಪ್ರಾಧಿಕಾರವನ್ನು ರಚಿಸುವಂತೆ ಶಿಫಾರಸು ಮಾಡಿರುವುದು ಹೊಸ ಕರಡು ನೀತಿಯ ಅತ್ಯಂತ ಪ್ರಮುಖ ಅಂಶ.

ಹೊಸ ಕರಡು ನೀತಿಯಿಂದ ಅಂತಹ ಮಹತ್ವದ ಸುಧಾರಣೆಗಳನ್ನೇನೂ ಮಾಡಲಾಗದು; ಆನ್‌ಲೈನ್ ಮಾರಾಟ ದೇಶದ ಒಟ್ಟಾರೆ ಮಾರಾಟದ ಶೇ. 2ರಷ್ಟು ಮಾತ್ರ ಇದೆ. ಹೀಗಿರುವಾಗ ಆನ್‌ಲೈನ್ ಮಾರುಕಟ್ಟೆಯನ್ನು ನಿಯಂತ್ರಿಸುವ ಮೂಲಕ ಏನು ಸಾಧನೆ ಮಾಡಿದಂತಾಗುತ್ತದೆ ಎಂದು ಪ್ರಶ್ನಿಸುವವರೂ ಇದ್ದಾರೆ.

ಅನೇಕ ಸಮಸ್ಯೆಗಳಿಗೆ ಏಕಕಾಲಕ್ಕೆ ಪರಿಹಾರ ಹುಡುಕುವ ಹಾದಿಯಲ್ಲಿರುವ ಹೊಸ ಕರಡು ನೀತಿ ಪ್ರಾಯೋಗಿಕ ಮತ್ತು ಕಾರ್ಯಸಾಧುವಲ್ಲ. ನೀತಿಯಲ್ಲಿ ಶಿಫಾರಸುಮಾಡಲಾಗಿರುವ ಕಠಿಣಕ್ರಮಗಳು ಕುಖ್ಯಾತ 'ಲೈಸೆನ್ಸ್ ರಾಜ್’ನ ದಿನಗಳಿಗೆ ಇ-ಕಾಮರ್ಸನ್ನು ಒಯ್ಯಲಿವೆ. ಗ್ರಾಹಕ ದತ್ತಾಂಶದ ಕಡ್ಡಾಯ ಸ್ಥಳೀಯಗೊಳಿಸುವಿಕೆ ಹಾಗೂ ರಿಯಾಯಿತಿಯ ಮೇಲಿನ ನಿರ್ಬಂಧಗಳಿಂದ ದೊಡ್ಡ ಕಾರ್ಖಾನೆಗಳಿಗೆ ಭಾರೀ ಹೊಡೆತ ಬೀಳುವುದು ಖಚಿತ. ಇದು ದೇಶದ ಆರ್ಥಿಕತೆಯ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂಬುದು ಇನ್ನೊಂದು ಕಡೆಯ ವಾದ. ಅಲ್ಲದೆ, ಪ್ರಸ್ತುತ ನೀತಿ ವಿಶ್ವ ವ್ಯಾಪಾರ ಸಂಘಟನೆ (WTO)ಯ ಜೊತೆಗೆ ಹೊಸದೊಂದು ಸಂಘರ್ಷಕ್ಕೆ ಎಡೆಮಾಡಿಕೊಡಲಿದೆ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.

ನಿಯಂತ್ರಣ ಪ್ರಾಧಿಕಾರ ಏಕೆ?
ತಾವು ಆನ್‌ಲೈನ್‌ನಲ್ಲಿ ಖರೀದಿಸಿದ ವಸ್ತುಗಳ ಬಗ್ಗೆ ಗ್ರಾಹಕರು ಅತೃಪ್ತಿ ವ್ಯಕ್ತಪಡಿಸಿದ ಹಲವಾರು ಘಟನೆಗಳು ಇತ್ತೀಚಿನ ವರ್ಷಗಳಲ್ಲಿ ದೇಶದೆಲ್ಲೆಡೆ ದಾಖಲಾಗಿವೆ. ಮೊಬೈಲ್ ಫೋನ್‌ಗಳನ್ನು ಆರ್ಡರ್ ಮಾಡಿದವರು ಕಲ್ಲುಗಳನ್ನೋ ಇಟ್ಟಿಗೆಗಳನ್ನೋ ಪಡೆದ ಉದಾಹರಣೆಗಳು ಸಾಕಷ್ಟಿವೆ. ಮಾರುಕಟ್ಟೆ ಮಾದರಿಯಲ್ಲಿ ಸಪ್ಲೈಚೈನ್ ಮೇಲೆ ಪೂರ್ತಿ ಹಿಡಿತ ಇಲ್ಲವಾಗಿರುವುದರ ಅನನುಕೂಲ ಇದು. ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚು ದರವನ್ನು ತೋರಿಸುವುದು, ಸರಬರಾಜಿನಲ್ಲಿ ಆಗುವ ತೊಂದರೆಗಳ ಬಗೆಗೂ ಗ್ರಾಹಕರು ದೂರು ಸಲ್ಲಿಸಿದ ಘಟನೆಗಳು ನಡೆದಿವೆ.

ಈ ಬಗೆಯ ದೂರುಗಳನ್ನು ಸಲ್ಲಿಸಲು ಗ್ರಾಹಕ ವ್ಯವಹಾರಗಳ ಸಚಿವಾಲಯದ ರಾಷ್ಟ್ರೀಯ ಗ್ರಾಹಕ ಹೆಲ್ಪ್‌ಲೈನ್ ಒಂದೇ ಸದ್ಯಕ್ಕೆ ತೊಂದರೆಗೊಳಗಾದ ಗ್ರಾಹಕರಿಗೆ ಇರುವ ವೇದಿಕೆ. ಇಕಾಮರ್ಸ್‌ಗೆ ಸಂಬಂಧಿಸಿದಂತೆ ಕಳೆದ ವರ್ಷ ಏಪ್ರಿಲ್-ನವೆಂಬರ್ ಮಧ್ಯೆ 54,114 ದೂರುಗಳು ಹೆಲ್ಪ್‌ಲೈನ್‌ನಲ್ಲಿ ದಾಖಲಾಗಿವೆ ಎಂಬುದು ಗಮನಾರ್ಹ ಅಂಶ. ಹೊಸ ಕರಡು ನೀತಿಯಲ್ಲಿ ಇದಕ್ಕಾಗಿ ಪ್ರತ್ಯೇಕ ನಿಯಂತ್ರಣ ಪ್ರಾಧಿಕಾರ ರಚನೆಯ ಪ್ರಸ್ತಾಪ ಇರುವುದು ಒಂದು ಗಮನಾರ್ಹ ಅಂಶ.

ಸಚಿನ್ ಬನ್ಸಾಲ್ ಹಾಗೂ ಬಿನ್ನಿ ಬನ್ಸಾಲ್ ಎಂಬ ಹೊಸ ಹುರುಪಿನ ಐಐಟಿ ಪದವೀಧರ ಯುವಕರು 2007ರಲ್ಲಿ ಫ್ಲಿಪ್‌ಕಾರ್ಟ್ ಆರಂಭಿಸಿ ಕೆಲವೇ ವರ್ಷಗಳಲ್ಲಿ ವಿಶ್ವದ ಪ್ರಭಾವಿ ಯುವಕರ ಸಾಲಿಗೆ ಸೇರಿದಾಗ ನಿಸ್ಸಂಶಯವಾಗಿ ಅದೊಂದು ಯಶೋಗಾಥೆಯಾಗಿತ್ತು. ಆದರೆ ಕಳೆದ ಒಂದು ದಶಕದಲ್ಲಿ ಭಾರತದ ಇ-ಕಾಮರ್ಸ್ ಕ್ಷೇತ್ರ ಅಭೂತಪೂರ್ವ ಬೆಳವಣಿಗೆ ಹಾಗೂ ಬದಲಾವಣೆಯನ್ನು ಕಂಡಿದೆ. ಫ್ಲಿಪ್‌ಕಾರ್ಟ್ ಅಮೇರಿಕದ ಅಮೆಜಾನ್‌ಗೆ ಸರಿಸಮನಾಗಿ ನಿಂತಿದೆ. ಇತ್ತ ಭಾರತದ್ದೇ ಸ್ನಾಪ್‌ಡೀಲ್‌ನ ತೀವ್ರ ಸ್ಪರ್ಧೆಯೂ ಇದೆ. ಎಲ್ಲದರ ನಡುವೆ ಅಮೇರಿಕದ ವಾಲ್‌ಮಾರ್ಟ್ 16 ಬಿಲಿಯನ್ ಡಾಲರ್‌ಗಳಿಗೆ ಫ್ಲಿಪ್‌ಕಾರ್ಟಿನ ಶೇ. 77 ಪಾಲನ್ನು ಖರೀದಿಸುವುದಾಗಿ ಘೋಷಿಸಿದೆ.

ಇ-ಕಾಮರ್ಸ್ ಕಂಪೆನಿಗಳು ಮಹಾನಗರಗಳನ್ನು ಆವರಿಸಿಕೊಂಡ ಬಳಿಕ ಎರಡನೇ ಹಾಗೂ ಮೂರನೇ ಹಂತದ ನಗರಗಳತ್ತ ದೃಷ್ಟಿ ನೆಟ್ಟಿವೆ. ಬಹುಪಾಲು ಯುವಕರನ್ನೇ ಹೊಂದಿರುವ ಭಾರತದಲ್ಲಿ ಇಂಟರ್ನೆಟ್ ಬಳಸುವವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಕಡಿಮೆ ದರಕ್ಕೆ ಮೊಬೈಲ್ ಸೆಟ್‌ಗಳು ಹಾಗೂ ಡೇಟಾ ದೊರೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಆನ್‌ಲೈನ್ ವ್ಯವಹಾರ ನೂರಾರು ಪಟ್ಟು ಹೆಚ್ಚಾಗಲಿದೆ. ಪ್ರಸ್ತುತ ೨೫೦೦ ಕೋಟಿ ಬೆಲೆಬಾಳುವ ಭಾರತದ ಇ-ಕಾಮರ್ಸ್ ಮಾರುಕಟ್ಟೆ ಮುಂದಿನ 10 ವರ್ಷಗಳಲ್ಲಿ 20,000 ಕೋಟಿಗೆ ಹಿಗ್ಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಇ-ಕಾಮರ್ಸ್ ನೀತಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಅಂತಿಮವಾಗಿ ಲಾಭದ ಚೆಂಡು ಬೀಳುವುದು ಗ್ರಾಹಕರ ಅಂಗಳಕ್ಕೋ, ಕಂಪೆನಿಗಳ ಮೈದಾನಕ್ಕೋ, ಕಾಲವೇ ಉತ್ತರಿಸಬೇಕು.