ಮಂಗಳವಾರ, ಸೆಪ್ಟೆಂಬರ್ 24, 2019

ಉದ್ಯೋಗವಿದ್ದರೂ ನಿರುದ್ಯೋಗ!

25 ಸೆಪ್ಟೆಂಬರ್ 2019ರ ವಿಜಯವಾಣಿ (ಮಸ್ತ್ ಪುರವಣಿ)ಯಲ್ಲಿ ಪ್ರಕಟವಾದ ಲೇಖನ

ಎಲ್ಲೆಲ್ಲೂ ನೀರೋ ನೀರು, ಕುಡಿಯುವುದಕ್ಕೊಂದೂ ಹನಿಯಿಲ್ಲ! ಇದು ಕವಿ ಕೋಲರಿಜ್‍ನ ಪ್ರಸಿದ್ಧ ಹಾಡೊಂದರ ಸಾಲು. ಒಂದೂಕಾಲು ಶತಮಾನದ ಬಳಿಕ ಈ ಸಾಲು ಉದ್ಯೋಗದ ಅವಶ್ಯಕತೆಯಿರುವವರ ಹಾಗೂ ಉದ್ಯೋಗ ನೀಡುವವರ ಅಸಹಾಯಕ ಧ್ವನಿಯಾಗಿ ಕೇಳಿಸುತ್ತಿರುವುದು ಮಾತ್ರ ಕಾಕತಾಳೀಯ ಮತ್ತು ವಿಚಿತ್ರ.

ಪಿಎಚ್‍ಡಿ ಮಾಡಿದವರು ಹಾಸ್ಟೆಲ್ ಅಡುಗೆಯವರ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದಾರೆ. ಬಿಇ, ಎಂಎ ಪದವೀಧರರು ಗುಮಾಸ್ತರ ಕೆಲಕ್ಕೆ ದೌಡಾಯಿಸುತ್ತಿದ್ದಾರೆ. ನಮ್ಮ ಅರ್ಹತೆಗೆ ತಕ್ಕುದಾದ ಉದ್ಯೋಗ ದೊರೆಯುತ್ತಿಲ್ಲ ಎಂಬುದು ಅವರ ಅಳಲು. ಇನ್ನೊಂದೆಡೆ, ನಮ್ಮಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ, ಅರ್ಹ ಅಭ್ಯರ್ಥಿಗಳೇ ಸಿಗುತ್ತಿಲ್ಲ ಎಂಬುದು ಹತ್ತುಹಲವು ಕಂಪೆನಿಗಳ ದೂರು. ಎಂಬಲ್ಲಿಗೆ ‘ನಿಮ್ಮ ಅಂಕಪಟ್ಟಿ, ಪ್ರಮಾಣಪತ್ರ ಯಾರಿಗೂ ಬೇಡ. ಉದ್ಯೋಗ ನೀಡುವವರಿಗೆ ಬೇಕಾಗಿರುವುದು ನೀವು, ಅಂದರೆ ನಿಮ್ಮೊಳಗಿನ ಕೌಶಲ’ ಎಂಬ ಹಳೆಯ ಮೇಷ್ಟ್ರುಗಳ ಮಾತು ನಿಜವಾಯಿತು.

‘ನಮ್ಮಲ್ಲಿ ನಿರುದ್ಯೋಗ ಸಮಸ್ಯೆ ಎಂಬುದೇ ಇಲ್ಲ. ಬೇಕಾದಷ್ಟು ಉದ್ಯೋಗಗಳು ಖಾಲಿ ಇವೆ. ಆದರೆ ಅರ್ಹ ಯುವಕರೇ ಇಲ್ಲ’ ಎಂಬ ಕೇಂದ್ರ ಕಾರ್ಮಿಕ ಸಚಿವರ ಇತ್ತೀಚಿನ ಹೇಳಿಕೆಯಿಂದ ವಿವಾದ ಉಂಟಾಯಿತು. ಅವರು ಹಾಗೆ ಹೇಳುವಾಗ ‘ಉತ್ತರ ಭಾರತದಲ್ಲಿ’ ಎಂಬ ಮಾತು ಸೇರಿಸಿದ್ದೇ ವಿವಾದಕ್ಕೆ ಕಾರಣ. ರಾಜಕೀಯದಲ್ಲಿ ವಿವಾದಗಳು ಸಾಮಾನ್ಯವೇ, ಆದರೆ ವಾಸ್ತವವನ್ನು ಒಪ್ಪಿಕೊಳ್ಳದಿರುವುದು ಹೇಗೆ? ಈವರೆಗಿನ ಹತ್ತಾರು ಅಧ್ಯಯನ ವರದಿಗಳು ಕೌಶಲದ ಕೊರತೆಯೇ ಭಾರತೀಯರ ನಿರುದ್ಯೋಗ ಸಮಸ್ಯೆಗೆ ಪ್ರಮುಖ ಕಾರಣ ಎಂಬುದನ್ನು ಮತ್ತೆಮತ್ತೆ ಹೇಳಿವೆ.

ಕೋರ್ಸುಗಳ ದುಸ್ಥಿತಿ
ಕಳೆದ ಸುಮಾರು ಹತ್ತು ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಬಿಎ, ಬಿಎಸ್ಸಿಯಂತಹ ಸಾಂಪ್ರದಾಯಿಕ ಕೋರ್ಸುಗಳು ಬಿಕೋ ಎನ್ನುತ್ತಿವೆ. ಉಪನ್ಯಾಸಕರು ತಮ್ಮ ಹುದ್ದೆ ಉಳಿಸಿಕೊಳ್ಳಲು ಬೀದಿ ಬಯಲು ಸುತ್ತಿ ಕನಿಷ್ಟ ದಾಖಲಾತಿ ಮಟ್ಟವನ್ನಾದರೂ ತಲುಪುವ ಸರ್ಕಸ್ ಮಾಡುತ್ತಿದ್ದಾರೆ. ನಗರ ಪ್ರದೇಶಗಳ ಬಹುತೇಕ ಕಾಲೇಜುಗಳು ಪಿಯುಸಿ, ಪದವಿ ಹಂತಗಳಲ್ಲಿ ಕಲಾ ವಿಭಾಗವನ್ನು ಮುಚ್ಚಿಯೇಬಿಟ್ಟಿವೆ.

ಕಾಲಾಂತರದಿಂದ ಇದ್ದ ಕೋರ್ಸುಗಳೆಲ್ಲ ಆಕರ್ಷಣೆಯನ್ನು ಕಳೆದುಕೊಂಡಿವೆಯೇ? ಅವುಗಳಲ್ಲಿ ನಮ್ಮ ಯುವಕರಿಗೆ ಕೂಳಿನ ದಾರಿ ಕಾಣುತ್ತಿಲ್ಲವೇ? ಎರಡೂ ಪ್ರಶ್ನೆಗಳಿಗೆ ಉತ್ತರ ‘ಹೌದು’ ಎಂದೇ ಆಗಿದೆ. ಹಾಗಾದರೆ ಮುಂದೇನು? ಇಲ್ಲಿಗೆ ಬರಬೇಕಿದ್ದ ಯುವಕರು ಬೇರೆಲ್ಲಿ ಹೋಗುತ್ತಿದ್ದಾರೆ? ಈ ಕೋರ್ಸು-ಕಾಲೇಜುಗಳನ್ನೆಲ್ಲ ಇಡಿಯಿಡಿಯಾಗಿ ಮುಚ್ಚಿಬಿಡುವುದೇ? ಹಾಗೆ ಮಾಡಿದರೆ ನಮ್ಮ ಸಮಾಜದ ಅವಿಭಾಜ್ಯ ಅಂಗಗಳಾಗಿರುವ ಮೂಲ ವಿಜ್ಞಾನ, ಮಾನವಿಕ ಶಾಸ್ತ್ರಗಳ ಭವಿಷ್ಯವೇನು?

ಕೋರ್ಸುಗಳೂ ಮುಚ್ಚಿಹೋಗಬಾರದು, ಉದ್ಯೋಗ ಮಾರುಕಟ್ಟೆಯ ಅವಶ್ಯಕತೆಗಳನ್ನೂ ಕಡೆಗಣಿಸಲಾಗದು ಎಂದರೆ ಬದಲಾಗಿರುವ ಕಾಲಕ್ಕೆ ತಕ್ಕಂತೆ ಅವುಗಳ ಸ್ವರೂಪದಲ್ಲಿ ಮಾರ್ಪಾಡು ತರುವುದು ಇಂದಿನ ಅನಿವಾರ್ಯತೆ. ಕಾಲ ಬದಲಾಯಿತೆಂದು ಸಾಬೂನು, ಚಪ್ಪಲಿ, ಉಡುಪುಗಳಂತಹ ವಸ್ತುಗಳ ಉತ್ಪಾದನೆ ನಿಂತು ಹೋಗಿಲ್ಲ; ಅವುಗಳ ಬಣ್ಣ, ವಿನ್ಯಾಸ ಬದಲಾಗಿದೆ ಅಷ್ಟೇ. ಇನ್ನು ಮನುಷ್ಯರ ಅಂತರ್ಗತ ಭಾಗವಾಗಿರುವ ಶಿಕ್ಷಣವು ಸಮಾಜದ ಅವಶ್ಯಕತೆಗಳಿಗೆ ತಕ್ಕಂತೆ ಬದಲಾಗದಿದ್ದರೆ ಹೇಗೆ?

ಉದ್ಯೋಗಗಳಿವೆ, ಅವುಗಳಿಗೆ ಬೇಕಾದ ಅಭ್ಯರ್ಥಿಗಳು ದೊರೆಯುತ್ತಿಲ್ಲ. ಲಕ್ಷಾಂತರ ಅಭ್ಯರ್ಥಿಗಳು ಕಾಯುತ್ತಿದ್ದಾರೆ, ಅವರಿಗೆ ಉದ್ಯೋಗ ದೊರೆಯುತ್ತಿಲ್ಲ. ವಾಸ್ತವವಾಗಿ ಈ ಎರಡು ಪರಿಸ್ಥಿತಿಗಳ ಅರ್ಥ ಒಂದೇ. ಬೇಡಿಕೆ ಮತ್ತು ಸರಬರಾಜು-  ಉದ್ಯೋಗ ಜಗತ್ತಿನಲ್ಲಿ ಇವೆರಡರ ನಡುವೆ ದೊಡ್ಡ ಕಂದರ ಇದೆ. ಇದನ್ನು ಬೆಸೆಯದೇ ಹೋದರೆ ಮುಂದೆ ಉಳಿಗಾಲವಿಲ್ಲ.

ಉದ್ಯೋಗ ಮತ್ತು ಕೌಶಲ
ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಪ್ರಕಾರ, ನಮ್ಮ ದೇಶದ ಒಟ್ಟಾರೆ ದುಡಿಯುವ ವರ್ಗದ ಪೈಕಿ ಶೇ. 4.69ರಷ್ಟು ಮಾತ್ರ ಕೌಶಲಯುಕ್ತ ಮಂದಿಯಿದ್ದಾರೆ. ಉಳಿದವರೆಲ್ಲರೂ ಕೌಶಲ್ಯರಹಿತರು. ಅಮೇರಿಕದಲ್ಲಿ ಶೇ. 52, ಇಂಗ್ಲೆಂಡಿನಲ್ಲಿ ಶೇ. 68, ಜರ್ಮನಿಯಲ್ಲಿ ಶೇ. 75, ಜಪಾನ್‍ನಲ್ಲಿ ಶೇ. 80 ಹಾಗೂ ದಕ್ಷಿಣ ಕೊರಿಯಾದಲ್ಲಿ ಶೇ. 96 ಕೌಶಲ್ಯಯುಕ್ತ ಉದ್ಯೋಗಿಗಳಿದ್ದಾರೆ. ಒಂದು ದೇಶದ ಅಭಿವೃದ್ಧಿಗೂ ಅಲ್ಲಿನ ಕೌಶಲ್ಯಯುಕ್ತ ದುಡಿಯುವ ವರ್ಗಕ್ಕೂ ಸಂಬಂಧ ಇದೆ ಎಂದು ಬೇರೆ ಹೇಳಬೇಕೆ?

ಯಾವ ಕೆಲಸವನ್ನೂ ಇಂದು ಯಾಂತ್ರಿಕವಾಗಿ ಮಾಡಿ ಮುಗಿಸುವಂತಿಲ್ಲ. ಪ್ರತೀ ಕಾರ್ಯವೂ ಮೌಲ್ಯವರ್ಧನೆಯನ್ನು ಬಯಸುತ್ತದೆ. ಒಂದು ವಸ್ತುವನ್ನು ಇಲ್ಲಿಂದ ಅಲ್ಲಿಗೆ ಎತ್ತಿ ಇಡುವಲ್ಲೂ ಒಪ್ಪ ಓರಣ, ನಾಜೂಕುತನ ಇರಬೇಕು. ಯುವಕರು ಸ್ಮಾರ್ಟ್ ಮತ್ತು ಸ್ಕಿಲ್ಡ್ ಆಗಿರಬೇಕು, ಅವರಲ್ಲಿ ಸೃಜನಶೀಲತೆ, ನಿರ್ಧಾರ ಕೈಗೊಳ್ಳುವಿಕೆಯ ಸೂಕ್ಷ್ಮತೆ, ಗ್ರಾಹಕ ಸಂಬಂಧ, ಸ್ಪಷ್ಟ ಯೋಚನೆ, ಉತ್ತಮ ಸಂವಹನ, ಸಮಯ ನಿರ್ವಹಣೆ, ನಾಯಕತ್ವ- ಇತ್ಯಾದಿ ಗುಣಗಳಿರಬೇಕು ಎಂದು ಉದ್ಯೋಗ ಜಗತ್ತು ಬಯಸುವುದರಲ್ಲಿ ಏನಾದರೂ ತಪ್ಪಿದೆಯೇ? ನಮ್ಮ ಶೈಕ್ಷಣಿಕ ಜಗತ್ತಿನ ನೀತಿ ನಿರೂಪಕರು, ಶಿಕ್ಷಣ ಸಂಸ್ಥೆಗಳು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದನ್ನು ಅರ್ಥಮಾಡಿಕೊಳ್ಳಬೇಕು ಅಷ್ಟೇ.

ಎಚ್ಚೆತ್ತುಕೊಳ್ಳುವ ಕಾಲ
ಶಿಕ್ಷಣದ ಯಾಂತ್ರಿಕತೆಯಿಂದ ಹೊರಬರದೆ ನಿರುದ್ಯೋಗ ಸಮಸ್ಯೆಗೆ ಪರಿಹಾರವಿಲ್ಲ ಎಂಬುದು ಆಡಳಿತಗಾರರಿಗೆ ತಡವಾಗಿಯಾದರೂ ಮನವರಿಕೆ ಆಗಿದೆ. ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿಯನ್ನು ಜತೆಜತೆಯಾಗಿ ಕೊಂಡೊಯ್ಯಬೇಕು ಎಂಬ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಪ್ರಯತ್ನಗಳು ನಡೆದಿವೆ. ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಗಾಗಿ ಕೇಂದ್ರ ಸರ್ಕಾರ 2014ರಲ್ಲಿ ಪ್ರತ್ಯೇಕ ಸಚಿವಾಲಯವನ್ನೇ ಸ್ಥಾಪಿಸಿದೆ. ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಸಂಸ್ಥೆ (ಎನ್‍ಎಸ್‍ಡಿಎ), ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ (ಎನ್‍ಎಸ್‍ಡಿಸಿ), ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಧಿ (ಎನ್‍ಎಸ್‍ಡಿಎಫ್)ಗಳಲ್ಲದೆ ದೇಶದಾದ್ಯಂತೆ 28 ಸೆಕ್ಟರ್ ಸ್ಕಿಲ್ ಕೌನ್ಸಿಲ್‍ಗಳು ಹೊಸ ರೂಪ ಪಡೆದು ಕಾರ್ಯಕ್ಷೇತ್ರಕ್ಕೆ ಧುಮುಕಿವೆ. ರಾಷ್ಟ್ರೀಯ ಕೌಶಲ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎನ್‍ಎಸ್‍ಡಿಸಿ ಹಾಗೂ ಎನ್‍ಎಸ್‍ಡಿಎಫ್‍ಗಳನ್ನು ಪುನಾರಚಿಸುವ ನಿರ್ಧಾರವನ್ನೂ ಕೇಂದ್ರ ಸರ್ಕಾರ ಕೈಗೊಂಡಿದೆ.

2015ರಿಂದಲೇ ‘ಸ್ಕಿಲ್ ಇಂಡಿಯಾ’ ಅಭಿಯಾನ ಆರಂಭವಾಗಿದೆ. ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ, ದೀನ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ, ರಾಜೀವ ಗಾಂಧಿ ಚೈತನ್ಯ ಯೋಜನೆ - ಹೀಗೆ ಹತ್ತಾರು ಯೋಜನೆಗಳು ಚಾಲ್ತಿಯಲ್ಲಿವೆ. ಕರ್ನಾಟಕ ವೃತ್ತಿ ಶಿಕ್ಷಣ ನಿಗಮ ಈಗ ‘ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ’ಯಾಗಿ ಬದಲಾಗಿದೆ. ಸಾಂಪ್ರದಾಯಿಕ ಕೋರ್ಸುಗಳ ಜತೆಗೆ ಕೌಶಲಗಳಿಗೆ ಪ್ರಾಮುಖ್ಯತೆ ನೀಡುವ ಆ್ಯಡ್-ಆನ್ ಕೋರ್ಸುಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಎಂದು ಯುಜಿಸಿ ಕಾಲೇಜುಗಳಿಗೆ ದುಂಬಾಲು ಬಿದ್ದಿದೆ. ಬಿಎ/ಬಿಎಸ್ಸಿಯ ಜತೆಗೆ ಉದ್ಯೋಗ ಜಗತ್ತಿನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಬಿ.ವೋಕ್. ಕೋರ್ಸುಗಳನ್ನು ಪರಿಚಯಿಸಿದೆ.

ಸಮಸ್ಯೆಯಿರುವುದು ಯೋಜನೆಗಳ ಸಂಖ್ಯೆಯಲ್ಲಿ ಅಲ್ಲ; ಅವುಗಳ ಅನುಷ್ಠಾನದಲ್ಲಿ. ಇಷ್ಟೆಲ್ಲ ಯೋಜನೆಗಳು ಎಷ್ಟು ಮಂದಿಯನ್ನು ಪರಿಣಾಮಕಾರಿಯಾಗಿ ತಲುಪುತ್ತಿವೆ, ಎಷ್ಟು ಮಂದಿ ಇವುಗಳ ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಯೋಜನೆಗಳ ಹೆಸರು ಬದಲಾಯಿಸಿದರೆ, ಜಾರಿಗೊಳಿಸಿದರೆ ಸಾಲದು, ಅವುಗಳ ಮಾಹಿತಿ ಒಬ್ಬೊಬ್ಬ ಯುವಕನಿಗೂ ಸಿಗಬೇಕು. ಮಧ್ಯವರ್ತಿಗಳಿಗೆ ಅವಕಾಶ ಇಲ್ಲದಂತೆ ಫಲಾನುಭವಿಗಳೇ ಅವುಗಳ ಪ್ರಯೋಜನ ಪಡೆಯಬೇಕು. ಇಂತಹ ಕೋರ್ಸುಗಳನ್ನು ಮಾಡಿದರೆ ತಮಗೆ ಉದ್ಯೋಗ ಸಿಗುತ್ತದೆ ಎಂಬ ಭರವಸೆ ಅವರಲ್ಲಿ ಬೆಳೆಯಬೇಕು. ಸರ್ಟಿಫಿಕೇಟ್ ದೊರೆತರೆ ಕೆಲಸ ಸಿಗುತ್ತದೆ ಎಂಬ ಯೋಚನೆ ಬಿಟ್ಟು ಜ್ಞಾನ ಮತ್ತು ಕೌಶಲ್ಯ ಬೆಳೆಸಿಕೊಳ್ಳಲು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಶ್ರಮಿಸಬೇಕು. ಇಲ್ಲವಾದರೆ ದುಡ್ಡು ಕೊಟ್ಟು ಪ್ರಮಾಣಪತ್ರ ಪಡೆಯುವ ಹಳೆಯ ದಂಧೆ ಮುಂದುವರಿಯುತ್ತದೆಯೇ ಹೊರತು ನಿರುದ್ಯೋಗ ಸಮಸ್ಯೆ ಪರಿಹಾರವಾಗದು.

*****************
ಕೌಶಲ್ಯ ಕೇಂದ್ರಗಳೆಲ್ಲಿವೆ?
ಕೌಶಲ್ಯ ತರಬೇತಿ ನೀಡುವವರಿಗೂ ಪಡೆಯುವವರಿಗೂ ಈಗ ಹೇರಳ ಅವಕಾಶ ಇದೆ. ಕೇಂದ್ರ ಹಾಗೂ ರಾಜ್ಯದ ಬಹುತೇಕ ಕೌಶಲಾಭಿವೃದ್ಧಿ ಯೋಜನೆಗಳು ಜಿಲ್ಲಾ ಮಟ್ಟದಲ್ಲೇ ಲಭ್ಯ ಇವೆ. ತರಬೇತಿ ಕೇಂದ್ರಗಳನ್ನು ನಡೆಸುವುದಕ್ಕೆ ಖಾಸಗಿಯವರಿಗೆ ಮಾನ್ಯತೆ ಹಾಗೂ ಅನುದಾನವನ್ನು ಸರ್ಕಾರವೇ ನೀಡುತ್ತಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯು ಪ್ರತೀ ಜಿಲ್ಲಾ ಕೇಂದ್ರದಲ್ಲೂ ಕಚೇರಿಯನ್ನು ಸ್ಥಾಪಿಸಿದೆ. https://www.kaushalkar.com/article/district-skill-mission/ ಜಾಲತಾಣ ಲಿಂಕಿನಲ್ಲಿ ಜಿಲ್ಲಾವಾರು ಕಚೇರಿಗಳ ಸಂಪರ್ಕ ವಿವರ ಇದೆ. ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ಇರುವ ಯೋಜನೆಗಳೇನು, ಆಯಾ ಜಿಲ್ಲೆಗಳಲ್ಲಿ ಎಲ್ಲೆಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳಿವೆ ಇತ್ಯಾದಿ ಮಾಹಿತಿಗಳನ್ನು ಈ ಕೇಂದ್ರಗಳಿಂದ ಪಡೆಯಬಹುದು.

ಬಿ.ವೋಕ್. ಕೋರ್ಸುಗಳು ಎಲ್ಲಿವೆ?
ಕೌಶಲ್ಯಾಧಾರಿತ ಪದವಿಗಳನ್ನು ನೀಡುವ ಉದ್ದೇಶದಿಂದ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ವು ದೇಶದಾದ್ಯಂತ 150ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಬಿ.ವೋಕ್. ಕೋರ್ಸುಗಳನ್ನು ಮಂಜೂರು ಮಾಡಿದೆ. ಐಟಿ, ಪ್ರವಾಸೋದ್ಯಮ, ರೀಟೇಲ್ ಮ್ಯಾನೇಜ್ಮೆಂಟ್, ಫ್ಯಾಷನ್ ಡಿಸೈನಿಂಗ್, ಸಿನಿಮಾ ನಿರ್ಮಾಣ, ಆಹಾರ ಸಂಸ್ಕರಣೆ, ಸಾಫ್ಟ್‍ವೇರ್ ಅಭಿವೃದ್ಧಿ, ಫಾರ್ಮಸ್ಯುಟಿಕಲ್ಸ್, ನಿರ್ಮಾಣ ತಂತ್ರಜ್ಞಾನ, ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ಆನ್ವಯಿಕ ಕಲೆ, ಅಟೋಮೊಬೈಲ್ಸ್, ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್, ಅನಿಮೇಶನ್ & ಗ್ರಾಫಿಕ್ಸ್, ಇಂಟೀರಿಯರ್ ಡಿಸೈನ್ ಇತ್ಯಾದಿ ಹತ್ತು ಹಲವು ಕೋರ್ಸುಗಳಿದ್ದು, ಉದ್ಯೋಗ ದೊರಕಿಸಿಕೊಡುವುದೇ ಇವುಗಳ ಪ್ರಮುಖ ಉದ್ದೇಶವಾಗಿದೆ. ಕರ್ನಾಟಕದಲ್ಲಿ ಇಂತಹ ಪದವಿಗಳನ್ನು ನೀಡುವ ಪ್ರಮುಖ ಸಂಸ್ಥೆಗಳು ಇವು:
ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜು, ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜು, ಮೌಂಟ್ ಕಾರ್ಮೆಲ್ ಕಾಲೇಜು, ಸೈಂಟ್ ಜೋಸೆಫ್ಸ್ ಕಾಲೇಜು, ಎನ್‍ಎಂಕೆಆರ್‍ವಿ ಮಹಿಳಾ ಕಾಲೇಜು, ಬಿಎಂಎಸ್ ಮಹಿಳಾ ಕಾಲೇಜು, ತುಮಕೂರು ವಿಶ್ವವಿದ್ಯಾನಿಲಯ, ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿವಿ, ಮೈಸೂರಿನ ಜೆಎಸ್‍ಎಸ್ ಕಾಲೇಜು, ಸೈಂಟ್ ಫಿಲೋಮಿನಾ ಕಾಲೇಜು, ಉಜಿರೆಯ ಎಸ್‍ಡಿಎಂ ಕಾಲೇಜು, ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜು, ಬೀದರಿನ ಕರ್ನಾಟಕ ಆಟ್ರ್ಸ್, ಸೈನ್ಸ್ & ಕಾಮರ್ಸ್ ಕಾಲೇಜು, ಮುಂತಾದವು.

ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: