ಮಸ್ತ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮಸ್ತ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಸೆಪ್ಟೆಂಬರ್ 24, 2019

ಉದ್ಯೋಗವಿದ್ದರೂ ನಿರುದ್ಯೋಗ!

25 ಸೆಪ್ಟೆಂಬರ್ 2019ರ ವಿಜಯವಾಣಿ (ಮಸ್ತ್ ಪುರವಣಿ)ಯಲ್ಲಿ ಪ್ರಕಟವಾದ ಲೇಖನ

ಎಲ್ಲೆಲ್ಲೂ ನೀರೋ ನೀರು, ಕುಡಿಯುವುದಕ್ಕೊಂದೂ ಹನಿಯಿಲ್ಲ! ಇದು ಕವಿ ಕೋಲರಿಜ್‍ನ ಪ್ರಸಿದ್ಧ ಹಾಡೊಂದರ ಸಾಲು. ಒಂದೂಕಾಲು ಶತಮಾನದ ಬಳಿಕ ಈ ಸಾಲು ಉದ್ಯೋಗದ ಅವಶ್ಯಕತೆಯಿರುವವರ ಹಾಗೂ ಉದ್ಯೋಗ ನೀಡುವವರ ಅಸಹಾಯಕ ಧ್ವನಿಯಾಗಿ ಕೇಳಿಸುತ್ತಿರುವುದು ಮಾತ್ರ ಕಾಕತಾಳೀಯ ಮತ್ತು ವಿಚಿತ್ರ.

ಪಿಎಚ್‍ಡಿ ಮಾಡಿದವರು ಹಾಸ್ಟೆಲ್ ಅಡುಗೆಯವರ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದಾರೆ. ಬಿಇ, ಎಂಎ ಪದವೀಧರರು ಗುಮಾಸ್ತರ ಕೆಲಕ್ಕೆ ದೌಡಾಯಿಸುತ್ತಿದ್ದಾರೆ. ನಮ್ಮ ಅರ್ಹತೆಗೆ ತಕ್ಕುದಾದ ಉದ್ಯೋಗ ದೊರೆಯುತ್ತಿಲ್ಲ ಎಂಬುದು ಅವರ ಅಳಲು. ಇನ್ನೊಂದೆಡೆ, ನಮ್ಮಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ, ಅರ್ಹ ಅಭ್ಯರ್ಥಿಗಳೇ ಸಿಗುತ್ತಿಲ್ಲ ಎಂಬುದು ಹತ್ತುಹಲವು ಕಂಪೆನಿಗಳ ದೂರು. ಎಂಬಲ್ಲಿಗೆ ‘ನಿಮ್ಮ ಅಂಕಪಟ್ಟಿ, ಪ್ರಮಾಣಪತ್ರ ಯಾರಿಗೂ ಬೇಡ. ಉದ್ಯೋಗ ನೀಡುವವರಿಗೆ ಬೇಕಾಗಿರುವುದು ನೀವು, ಅಂದರೆ ನಿಮ್ಮೊಳಗಿನ ಕೌಶಲ’ ಎಂಬ ಹಳೆಯ ಮೇಷ್ಟ್ರುಗಳ ಮಾತು ನಿಜವಾಯಿತು.

‘ನಮ್ಮಲ್ಲಿ ನಿರುದ್ಯೋಗ ಸಮಸ್ಯೆ ಎಂಬುದೇ ಇಲ್ಲ. ಬೇಕಾದಷ್ಟು ಉದ್ಯೋಗಗಳು ಖಾಲಿ ಇವೆ. ಆದರೆ ಅರ್ಹ ಯುವಕರೇ ಇಲ್ಲ’ ಎಂಬ ಕೇಂದ್ರ ಕಾರ್ಮಿಕ ಸಚಿವರ ಇತ್ತೀಚಿನ ಹೇಳಿಕೆಯಿಂದ ವಿವಾದ ಉಂಟಾಯಿತು. ಅವರು ಹಾಗೆ ಹೇಳುವಾಗ ‘ಉತ್ತರ ಭಾರತದಲ್ಲಿ’ ಎಂಬ ಮಾತು ಸೇರಿಸಿದ್ದೇ ವಿವಾದಕ್ಕೆ ಕಾರಣ. ರಾಜಕೀಯದಲ್ಲಿ ವಿವಾದಗಳು ಸಾಮಾನ್ಯವೇ, ಆದರೆ ವಾಸ್ತವವನ್ನು ಒಪ್ಪಿಕೊಳ್ಳದಿರುವುದು ಹೇಗೆ? ಈವರೆಗಿನ ಹತ್ತಾರು ಅಧ್ಯಯನ ವರದಿಗಳು ಕೌಶಲದ ಕೊರತೆಯೇ ಭಾರತೀಯರ ನಿರುದ್ಯೋಗ ಸಮಸ್ಯೆಗೆ ಪ್ರಮುಖ ಕಾರಣ ಎಂಬುದನ್ನು ಮತ್ತೆಮತ್ತೆ ಹೇಳಿವೆ.

ಕೋರ್ಸುಗಳ ದುಸ್ಥಿತಿ
ಕಳೆದ ಸುಮಾರು ಹತ್ತು ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಬಿಎ, ಬಿಎಸ್ಸಿಯಂತಹ ಸಾಂಪ್ರದಾಯಿಕ ಕೋರ್ಸುಗಳು ಬಿಕೋ ಎನ್ನುತ್ತಿವೆ. ಉಪನ್ಯಾಸಕರು ತಮ್ಮ ಹುದ್ದೆ ಉಳಿಸಿಕೊಳ್ಳಲು ಬೀದಿ ಬಯಲು ಸುತ್ತಿ ಕನಿಷ್ಟ ದಾಖಲಾತಿ ಮಟ್ಟವನ್ನಾದರೂ ತಲುಪುವ ಸರ್ಕಸ್ ಮಾಡುತ್ತಿದ್ದಾರೆ. ನಗರ ಪ್ರದೇಶಗಳ ಬಹುತೇಕ ಕಾಲೇಜುಗಳು ಪಿಯುಸಿ, ಪದವಿ ಹಂತಗಳಲ್ಲಿ ಕಲಾ ವಿಭಾಗವನ್ನು ಮುಚ್ಚಿಯೇಬಿಟ್ಟಿವೆ.

ಕಾಲಾಂತರದಿಂದ ಇದ್ದ ಕೋರ್ಸುಗಳೆಲ್ಲ ಆಕರ್ಷಣೆಯನ್ನು ಕಳೆದುಕೊಂಡಿವೆಯೇ? ಅವುಗಳಲ್ಲಿ ನಮ್ಮ ಯುವಕರಿಗೆ ಕೂಳಿನ ದಾರಿ ಕಾಣುತ್ತಿಲ್ಲವೇ? ಎರಡೂ ಪ್ರಶ್ನೆಗಳಿಗೆ ಉತ್ತರ ‘ಹೌದು’ ಎಂದೇ ಆಗಿದೆ. ಹಾಗಾದರೆ ಮುಂದೇನು? ಇಲ್ಲಿಗೆ ಬರಬೇಕಿದ್ದ ಯುವಕರು ಬೇರೆಲ್ಲಿ ಹೋಗುತ್ತಿದ್ದಾರೆ? ಈ ಕೋರ್ಸು-ಕಾಲೇಜುಗಳನ್ನೆಲ್ಲ ಇಡಿಯಿಡಿಯಾಗಿ ಮುಚ್ಚಿಬಿಡುವುದೇ? ಹಾಗೆ ಮಾಡಿದರೆ ನಮ್ಮ ಸಮಾಜದ ಅವಿಭಾಜ್ಯ ಅಂಗಗಳಾಗಿರುವ ಮೂಲ ವಿಜ್ಞಾನ, ಮಾನವಿಕ ಶಾಸ್ತ್ರಗಳ ಭವಿಷ್ಯವೇನು?

ಕೋರ್ಸುಗಳೂ ಮುಚ್ಚಿಹೋಗಬಾರದು, ಉದ್ಯೋಗ ಮಾರುಕಟ್ಟೆಯ ಅವಶ್ಯಕತೆಗಳನ್ನೂ ಕಡೆಗಣಿಸಲಾಗದು ಎಂದರೆ ಬದಲಾಗಿರುವ ಕಾಲಕ್ಕೆ ತಕ್ಕಂತೆ ಅವುಗಳ ಸ್ವರೂಪದಲ್ಲಿ ಮಾರ್ಪಾಡು ತರುವುದು ಇಂದಿನ ಅನಿವಾರ್ಯತೆ. ಕಾಲ ಬದಲಾಯಿತೆಂದು ಸಾಬೂನು, ಚಪ್ಪಲಿ, ಉಡುಪುಗಳಂತಹ ವಸ್ತುಗಳ ಉತ್ಪಾದನೆ ನಿಂತು ಹೋಗಿಲ್ಲ; ಅವುಗಳ ಬಣ್ಣ, ವಿನ್ಯಾಸ ಬದಲಾಗಿದೆ ಅಷ್ಟೇ. ಇನ್ನು ಮನುಷ್ಯರ ಅಂತರ್ಗತ ಭಾಗವಾಗಿರುವ ಶಿಕ್ಷಣವು ಸಮಾಜದ ಅವಶ್ಯಕತೆಗಳಿಗೆ ತಕ್ಕಂತೆ ಬದಲಾಗದಿದ್ದರೆ ಹೇಗೆ?

ಉದ್ಯೋಗಗಳಿವೆ, ಅವುಗಳಿಗೆ ಬೇಕಾದ ಅಭ್ಯರ್ಥಿಗಳು ದೊರೆಯುತ್ತಿಲ್ಲ. ಲಕ್ಷಾಂತರ ಅಭ್ಯರ್ಥಿಗಳು ಕಾಯುತ್ತಿದ್ದಾರೆ, ಅವರಿಗೆ ಉದ್ಯೋಗ ದೊರೆಯುತ್ತಿಲ್ಲ. ವಾಸ್ತವವಾಗಿ ಈ ಎರಡು ಪರಿಸ್ಥಿತಿಗಳ ಅರ್ಥ ಒಂದೇ. ಬೇಡಿಕೆ ಮತ್ತು ಸರಬರಾಜು-  ಉದ್ಯೋಗ ಜಗತ್ತಿನಲ್ಲಿ ಇವೆರಡರ ನಡುವೆ ದೊಡ್ಡ ಕಂದರ ಇದೆ. ಇದನ್ನು ಬೆಸೆಯದೇ ಹೋದರೆ ಮುಂದೆ ಉಳಿಗಾಲವಿಲ್ಲ.

ಉದ್ಯೋಗ ಮತ್ತು ಕೌಶಲ
ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಪ್ರಕಾರ, ನಮ್ಮ ದೇಶದ ಒಟ್ಟಾರೆ ದುಡಿಯುವ ವರ್ಗದ ಪೈಕಿ ಶೇ. 4.69ರಷ್ಟು ಮಾತ್ರ ಕೌಶಲಯುಕ್ತ ಮಂದಿಯಿದ್ದಾರೆ. ಉಳಿದವರೆಲ್ಲರೂ ಕೌಶಲ್ಯರಹಿತರು. ಅಮೇರಿಕದಲ್ಲಿ ಶೇ. 52, ಇಂಗ್ಲೆಂಡಿನಲ್ಲಿ ಶೇ. 68, ಜರ್ಮನಿಯಲ್ಲಿ ಶೇ. 75, ಜಪಾನ್‍ನಲ್ಲಿ ಶೇ. 80 ಹಾಗೂ ದಕ್ಷಿಣ ಕೊರಿಯಾದಲ್ಲಿ ಶೇ. 96 ಕೌಶಲ್ಯಯುಕ್ತ ಉದ್ಯೋಗಿಗಳಿದ್ದಾರೆ. ಒಂದು ದೇಶದ ಅಭಿವೃದ್ಧಿಗೂ ಅಲ್ಲಿನ ಕೌಶಲ್ಯಯುಕ್ತ ದುಡಿಯುವ ವರ್ಗಕ್ಕೂ ಸಂಬಂಧ ಇದೆ ಎಂದು ಬೇರೆ ಹೇಳಬೇಕೆ?

ಯಾವ ಕೆಲಸವನ್ನೂ ಇಂದು ಯಾಂತ್ರಿಕವಾಗಿ ಮಾಡಿ ಮುಗಿಸುವಂತಿಲ್ಲ. ಪ್ರತೀ ಕಾರ್ಯವೂ ಮೌಲ್ಯವರ್ಧನೆಯನ್ನು ಬಯಸುತ್ತದೆ. ಒಂದು ವಸ್ತುವನ್ನು ಇಲ್ಲಿಂದ ಅಲ್ಲಿಗೆ ಎತ್ತಿ ಇಡುವಲ್ಲೂ ಒಪ್ಪ ಓರಣ, ನಾಜೂಕುತನ ಇರಬೇಕು. ಯುವಕರು ಸ್ಮಾರ್ಟ್ ಮತ್ತು ಸ್ಕಿಲ್ಡ್ ಆಗಿರಬೇಕು, ಅವರಲ್ಲಿ ಸೃಜನಶೀಲತೆ, ನಿರ್ಧಾರ ಕೈಗೊಳ್ಳುವಿಕೆಯ ಸೂಕ್ಷ್ಮತೆ, ಗ್ರಾಹಕ ಸಂಬಂಧ, ಸ್ಪಷ್ಟ ಯೋಚನೆ, ಉತ್ತಮ ಸಂವಹನ, ಸಮಯ ನಿರ್ವಹಣೆ, ನಾಯಕತ್ವ- ಇತ್ಯಾದಿ ಗುಣಗಳಿರಬೇಕು ಎಂದು ಉದ್ಯೋಗ ಜಗತ್ತು ಬಯಸುವುದರಲ್ಲಿ ಏನಾದರೂ ತಪ್ಪಿದೆಯೇ? ನಮ್ಮ ಶೈಕ್ಷಣಿಕ ಜಗತ್ತಿನ ನೀತಿ ನಿರೂಪಕರು, ಶಿಕ್ಷಣ ಸಂಸ್ಥೆಗಳು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದನ್ನು ಅರ್ಥಮಾಡಿಕೊಳ್ಳಬೇಕು ಅಷ್ಟೇ.

ಎಚ್ಚೆತ್ತುಕೊಳ್ಳುವ ಕಾಲ
ಶಿಕ್ಷಣದ ಯಾಂತ್ರಿಕತೆಯಿಂದ ಹೊರಬರದೆ ನಿರುದ್ಯೋಗ ಸಮಸ್ಯೆಗೆ ಪರಿಹಾರವಿಲ್ಲ ಎಂಬುದು ಆಡಳಿತಗಾರರಿಗೆ ತಡವಾಗಿಯಾದರೂ ಮನವರಿಕೆ ಆಗಿದೆ. ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿಯನ್ನು ಜತೆಜತೆಯಾಗಿ ಕೊಂಡೊಯ್ಯಬೇಕು ಎಂಬ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಪ್ರಯತ್ನಗಳು ನಡೆದಿವೆ. ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಗಾಗಿ ಕೇಂದ್ರ ಸರ್ಕಾರ 2014ರಲ್ಲಿ ಪ್ರತ್ಯೇಕ ಸಚಿವಾಲಯವನ್ನೇ ಸ್ಥಾಪಿಸಿದೆ. ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಸಂಸ್ಥೆ (ಎನ್‍ಎಸ್‍ಡಿಎ), ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ (ಎನ್‍ಎಸ್‍ಡಿಸಿ), ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಧಿ (ಎನ್‍ಎಸ್‍ಡಿಎಫ್)ಗಳಲ್ಲದೆ ದೇಶದಾದ್ಯಂತೆ 28 ಸೆಕ್ಟರ್ ಸ್ಕಿಲ್ ಕೌನ್ಸಿಲ್‍ಗಳು ಹೊಸ ರೂಪ ಪಡೆದು ಕಾರ್ಯಕ್ಷೇತ್ರಕ್ಕೆ ಧುಮುಕಿವೆ. ರಾಷ್ಟ್ರೀಯ ಕೌಶಲ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎನ್‍ಎಸ್‍ಡಿಸಿ ಹಾಗೂ ಎನ್‍ಎಸ್‍ಡಿಎಫ್‍ಗಳನ್ನು ಪುನಾರಚಿಸುವ ನಿರ್ಧಾರವನ್ನೂ ಕೇಂದ್ರ ಸರ್ಕಾರ ಕೈಗೊಂಡಿದೆ.

2015ರಿಂದಲೇ ‘ಸ್ಕಿಲ್ ಇಂಡಿಯಾ’ ಅಭಿಯಾನ ಆರಂಭವಾಗಿದೆ. ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ, ದೀನ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ, ರಾಜೀವ ಗಾಂಧಿ ಚೈತನ್ಯ ಯೋಜನೆ - ಹೀಗೆ ಹತ್ತಾರು ಯೋಜನೆಗಳು ಚಾಲ್ತಿಯಲ್ಲಿವೆ. ಕರ್ನಾಟಕ ವೃತ್ತಿ ಶಿಕ್ಷಣ ನಿಗಮ ಈಗ ‘ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ’ಯಾಗಿ ಬದಲಾಗಿದೆ. ಸಾಂಪ್ರದಾಯಿಕ ಕೋರ್ಸುಗಳ ಜತೆಗೆ ಕೌಶಲಗಳಿಗೆ ಪ್ರಾಮುಖ್ಯತೆ ನೀಡುವ ಆ್ಯಡ್-ಆನ್ ಕೋರ್ಸುಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಎಂದು ಯುಜಿಸಿ ಕಾಲೇಜುಗಳಿಗೆ ದುಂಬಾಲು ಬಿದ್ದಿದೆ. ಬಿಎ/ಬಿಎಸ್ಸಿಯ ಜತೆಗೆ ಉದ್ಯೋಗ ಜಗತ್ತಿನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಬಿ.ವೋಕ್. ಕೋರ್ಸುಗಳನ್ನು ಪರಿಚಯಿಸಿದೆ.

ಸಮಸ್ಯೆಯಿರುವುದು ಯೋಜನೆಗಳ ಸಂಖ್ಯೆಯಲ್ಲಿ ಅಲ್ಲ; ಅವುಗಳ ಅನುಷ್ಠಾನದಲ್ಲಿ. ಇಷ್ಟೆಲ್ಲ ಯೋಜನೆಗಳು ಎಷ್ಟು ಮಂದಿಯನ್ನು ಪರಿಣಾಮಕಾರಿಯಾಗಿ ತಲುಪುತ್ತಿವೆ, ಎಷ್ಟು ಮಂದಿ ಇವುಗಳ ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಯೋಜನೆಗಳ ಹೆಸರು ಬದಲಾಯಿಸಿದರೆ, ಜಾರಿಗೊಳಿಸಿದರೆ ಸಾಲದು, ಅವುಗಳ ಮಾಹಿತಿ ಒಬ್ಬೊಬ್ಬ ಯುವಕನಿಗೂ ಸಿಗಬೇಕು. ಮಧ್ಯವರ್ತಿಗಳಿಗೆ ಅವಕಾಶ ಇಲ್ಲದಂತೆ ಫಲಾನುಭವಿಗಳೇ ಅವುಗಳ ಪ್ರಯೋಜನ ಪಡೆಯಬೇಕು. ಇಂತಹ ಕೋರ್ಸುಗಳನ್ನು ಮಾಡಿದರೆ ತಮಗೆ ಉದ್ಯೋಗ ಸಿಗುತ್ತದೆ ಎಂಬ ಭರವಸೆ ಅವರಲ್ಲಿ ಬೆಳೆಯಬೇಕು. ಸರ್ಟಿಫಿಕೇಟ್ ದೊರೆತರೆ ಕೆಲಸ ಸಿಗುತ್ತದೆ ಎಂಬ ಯೋಚನೆ ಬಿಟ್ಟು ಜ್ಞಾನ ಮತ್ತು ಕೌಶಲ್ಯ ಬೆಳೆಸಿಕೊಳ್ಳಲು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಶ್ರಮಿಸಬೇಕು. ಇಲ್ಲವಾದರೆ ದುಡ್ಡು ಕೊಟ್ಟು ಪ್ರಮಾಣಪತ್ರ ಪಡೆಯುವ ಹಳೆಯ ದಂಧೆ ಮುಂದುವರಿಯುತ್ತದೆಯೇ ಹೊರತು ನಿರುದ್ಯೋಗ ಸಮಸ್ಯೆ ಪರಿಹಾರವಾಗದು.

*****************
ಕೌಶಲ್ಯ ಕೇಂದ್ರಗಳೆಲ್ಲಿವೆ?
ಕೌಶಲ್ಯ ತರಬೇತಿ ನೀಡುವವರಿಗೂ ಪಡೆಯುವವರಿಗೂ ಈಗ ಹೇರಳ ಅವಕಾಶ ಇದೆ. ಕೇಂದ್ರ ಹಾಗೂ ರಾಜ್ಯದ ಬಹುತೇಕ ಕೌಶಲಾಭಿವೃದ್ಧಿ ಯೋಜನೆಗಳು ಜಿಲ್ಲಾ ಮಟ್ಟದಲ್ಲೇ ಲಭ್ಯ ಇವೆ. ತರಬೇತಿ ಕೇಂದ್ರಗಳನ್ನು ನಡೆಸುವುದಕ್ಕೆ ಖಾಸಗಿಯವರಿಗೆ ಮಾನ್ಯತೆ ಹಾಗೂ ಅನುದಾನವನ್ನು ಸರ್ಕಾರವೇ ನೀಡುತ್ತಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯು ಪ್ರತೀ ಜಿಲ್ಲಾ ಕೇಂದ್ರದಲ್ಲೂ ಕಚೇರಿಯನ್ನು ಸ್ಥಾಪಿಸಿದೆ. https://www.kaushalkar.com/article/district-skill-mission/ ಜಾಲತಾಣ ಲಿಂಕಿನಲ್ಲಿ ಜಿಲ್ಲಾವಾರು ಕಚೇರಿಗಳ ಸಂಪರ್ಕ ವಿವರ ಇದೆ. ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ಇರುವ ಯೋಜನೆಗಳೇನು, ಆಯಾ ಜಿಲ್ಲೆಗಳಲ್ಲಿ ಎಲ್ಲೆಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳಿವೆ ಇತ್ಯಾದಿ ಮಾಹಿತಿಗಳನ್ನು ಈ ಕೇಂದ್ರಗಳಿಂದ ಪಡೆಯಬಹುದು.

ಬಿ.ವೋಕ್. ಕೋರ್ಸುಗಳು ಎಲ್ಲಿವೆ?
ಕೌಶಲ್ಯಾಧಾರಿತ ಪದವಿಗಳನ್ನು ನೀಡುವ ಉದ್ದೇಶದಿಂದ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ವು ದೇಶದಾದ್ಯಂತ 150ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಬಿ.ವೋಕ್. ಕೋರ್ಸುಗಳನ್ನು ಮಂಜೂರು ಮಾಡಿದೆ. ಐಟಿ, ಪ್ರವಾಸೋದ್ಯಮ, ರೀಟೇಲ್ ಮ್ಯಾನೇಜ್ಮೆಂಟ್, ಫ್ಯಾಷನ್ ಡಿಸೈನಿಂಗ್, ಸಿನಿಮಾ ನಿರ್ಮಾಣ, ಆಹಾರ ಸಂಸ್ಕರಣೆ, ಸಾಫ್ಟ್‍ವೇರ್ ಅಭಿವೃದ್ಧಿ, ಫಾರ್ಮಸ್ಯುಟಿಕಲ್ಸ್, ನಿರ್ಮಾಣ ತಂತ್ರಜ್ಞಾನ, ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ಆನ್ವಯಿಕ ಕಲೆ, ಅಟೋಮೊಬೈಲ್ಸ್, ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್, ಅನಿಮೇಶನ್ & ಗ್ರಾಫಿಕ್ಸ್, ಇಂಟೀರಿಯರ್ ಡಿಸೈನ್ ಇತ್ಯಾದಿ ಹತ್ತು ಹಲವು ಕೋರ್ಸುಗಳಿದ್ದು, ಉದ್ಯೋಗ ದೊರಕಿಸಿಕೊಡುವುದೇ ಇವುಗಳ ಪ್ರಮುಖ ಉದ್ದೇಶವಾಗಿದೆ. ಕರ್ನಾಟಕದಲ್ಲಿ ಇಂತಹ ಪದವಿಗಳನ್ನು ನೀಡುವ ಪ್ರಮುಖ ಸಂಸ್ಥೆಗಳು ಇವು:
ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜು, ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜು, ಮೌಂಟ್ ಕಾರ್ಮೆಲ್ ಕಾಲೇಜು, ಸೈಂಟ್ ಜೋಸೆಫ್ಸ್ ಕಾಲೇಜು, ಎನ್‍ಎಂಕೆಆರ್‍ವಿ ಮಹಿಳಾ ಕಾಲೇಜು, ಬಿಎಂಎಸ್ ಮಹಿಳಾ ಕಾಲೇಜು, ತುಮಕೂರು ವಿಶ್ವವಿದ್ಯಾನಿಲಯ, ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿವಿ, ಮೈಸೂರಿನ ಜೆಎಸ್‍ಎಸ್ ಕಾಲೇಜು, ಸೈಂಟ್ ಫಿಲೋಮಿನಾ ಕಾಲೇಜು, ಉಜಿರೆಯ ಎಸ್‍ಡಿಎಂ ಕಾಲೇಜು, ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜು, ಬೀದರಿನ ಕರ್ನಾಟಕ ಆಟ್ರ್ಸ್, ಸೈನ್ಸ್ & ಕಾಮರ್ಸ್ ಕಾಲೇಜು, ಮುಂತಾದವು.

ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಮಾರ್ಚ್ 22, 2019

ಯಂಗ್ ವೋಟರ್ಸ್ ಗೆ ಡಿಮಾಂಡು!

ಮಾರ್ಚ್ 20, 2019ರ ವಿಜಯವಾಣಿ 'ಮಸ್ತ್' ಪುರವಣಿಯಲ್ಲಿ ಪ್ರಕಟವಾದ ಲೇಖನ

ಭಾರತದ ಚುನಾವಣಾ ಫಲಿತಾಂಶಗಳಿಗೆ ಸಂಬಂಧಿಸಿದಂತೆ ಭವಿಷ್ಯ ನುಡಿಯಬಹುದಾದ ಏಕೈಕ ಅಂಶವೆಂದರೆ ಅದು ಎಲ್ಲ ಭವಿಷ್ಯಗಳಿಗೂ ಮೀರಿದ್ದು ಎಂಬುದು. ಇದು ಇಲ್ಲಿಯವರೆಗೂ ಪ್ರಚಲಿತದಲ್ಲಿದ್ದ ಮಾತು. ನಮ್ಮ ಚುನಾವಣೆಗಳು ಜಾತಿ, ಮತ, ಹಣ, ಧರ್ಮ, ಪಕ್ಷ ವಿಧೇಯತೆ, ವೈಯುಕ್ತಿಕ ವರ್ಚಸ್ಸು, ಭಾವುಕತೆ ಎಂಬಿತ್ಯಾದಿ ಹತ್ತುಹಲವು ಅಂಶಗಳ ಮೇಲೆ ನಿಂತಿರುವುದೇ ಇದಕ್ಕೆ ಕಾರಣ. ಈ ಅಂಶಗಳ್ಯಾವುವೂ ಬದಲಾಗಿಲ್ಲ, ಆದರೆ ಬದಲಾವಣೆ ತರುವ ಹೊಸದೊಂದು ಅಂಶ ಕಳೆದೊಂದು ದಶಕದಿಂದ ಈ ಪಟ್ಟಿಗೆ ಸೇರ್ಪಡೆಗೊಂಡಿದೆ - ಯುವಮತದಾರರು!

ವಿಜಯವಾಣಿ, 20-03-2019
ಹೌದು, ಯುವಕರೇ ಈ ದೇಶದ ಭವಿಷ್ಯ ಎಂಬುದನ್ನು ನಮ್ಮ ಯುವಕರು ಇತ್ತೀಚಿನ ಚುನಾವಣೆಗಳಲ್ಲಿ ಸಾಬೀತುಮಾಡುತ್ತಿದ್ದಾರೆ. ಜಾತಿಬಲ, ಹಣಬಲ, ತೋಳ್ಬಲ ಮುಂತಾದವುಗಳಿಗಿಂತಲೂ ಯುವಕರ ಮನೋಬಲವೇ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ ಎಂಬುದು ನಮ್ಮ ಪ್ರಜಾಪ್ರಭುತ್ವದ ಹೊಸ ಆಶಾವಾದದ ಬೆಳಕಿಂಡಿ.

ಈ ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಮೂರನೇ ಒಂದು ಪಾಲನ್ನು 15-34 ವರ್ಷಗಳ ನಡುವಿನ ಯುವಕರೇ ಹೊಂದಿದ್ದಾರೆ. 2020ರ ವೇಳೆಗೆ ಭಾರತವು ವಿಶ್ವದ ಅತಿದೊಡ್ಡ 'ತರುಣ ದೇಶ’ವಾಗಲಿದೆ ಎಂಬುದನ್ನು ಸಮೀಕ್ಷೆಗಳು ದೃಢಪಡಿಸಿವೆ. ಸದ್ಯಕ್ಕಂತೂ 1997ರಿಂದ 2001ರ ನಡುವೆ ಹುಟ್ಟಿದ ಯುವಕರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಯಾಕೆಂದರೆ ಮುಂದಿನ ತಿಂಗಳು ನಡೆಯುವ ಮಹಾಚುನಾವಣೆಯಲ್ಲಿ ಇವರೆಲ್ಲ ಮೊದಲ ಬಾರಿ ತಮ್ಮ ಮತ ಚಲಾಯಿಸಲಿದ್ದಾರೆ.

2014ರ ಚುನಾವಣೆಗೆ ಮುನ್ನ ಸುಮಾರು 2.4 ಕೋಟಿ ಹೊಸ ಯುವಕರು ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದರು. ಈಗ ಈ ಸಂಖ್ಯೆ ಇನ್ನೂ ಬೆಳೆದಿದೆ. ಈ ಬಾರಿ ಸುಮಾರು 4.5 ಕೋಟಿ ಹೊಸಬರು ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಇವರು ಅಂತಿಂಥ ಯುವಕರಲ್ಲ. ಇವರಲ್ಲಿ ಬಹುತೇಕರು ನ್ಯೂ ಮಿಲೇನಿಯಂ ತಲೆಗಳು. ಇವರು ಅವಿದ್ಯಾವಂತರಲ್ಲ, ಅವಿವೇಕಿಗಳೂ ಅಲ್ಲ.

ಇವರ ಕೈಗಳಲ್ಲೆಲ್ಲ ಆಂಡ್ರಾಯ್ಡ್ ಮೊಬೈಲ್‌ಗಳಿವೆ. 24 ಗಂಟೆ ಇಂಟರ್ನೆಟ್ ಸಂಪರ್ಕವಿದೆ. ಫೇಸ್‌ಬುಕ್, ವಾಟ್ಸಾಪ್, ಟ್ವಿಟರ್ ಇತ್ಯಾದಿಗಳೆಲ್ಲ ಇವರ ಅಂಗೈಗಳಲ್ಲೇ ಮನೆಮಾಡಿವೆ. ಇವರಿಗೆ ಮಾಹಿತಿಯ ಕೊರತೆಯಿಲ್ಲ. ತಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದರ ಮಾಹಿತಿ ಇವರಿಗೆ ಕ್ಷಣಕ್ಷಣಕ್ಕೂ ಲಭ್ಯವಾಗುತ್ತಿದೆ. ರಾಜಕೀಯ ಸಂಜೆ ಹೊತ್ತಿನ ಅರಳಿಕಟ್ಟೆಗಳ ಹರಟೆಯಾಗಿ ಉಳಿದಿಲ್ಲ. ಉಭಯಕುಶಲೋಪರಿಯಷ್ಟೇ ಸಹಜವಾಗಿ ದಿನನಿತ್ಯದ ಮಾತುಕತೆಗಳ ಅವಿಭಾಜ್ಯ ಅಂಗವಾಗಿದೆ. ರಾಜಕಾರಣಿಗಳ ಸುಳ್ಳುಪೊಳ್ಳು ನಮ್ಮ ಯುವಕರ ಬಳಿ ನಡೆಯದು. ಅವರು ಹೇಳಿದ್ದರ ತಿರುಳನ್ನು ಅರೆಕ್ಷಣದಲ್ಲಿ ಜಾಲಾಡಿ ಸಾಮಾಜಿಕ ಜಾಲತಾಣಗಳೆಂಬ ಬಟಾಬಯಲಿನಲ್ಲಿ ಬೆತ್ತಲು ಮಾಡುವ ಕಲೆ ನಮ್ಮ ಹೊಸ ತಲೆಮಾರಿನ ಕುಶಾಗ್ರಮತಿಗಳಿಗೆ ಕರತಲಾಮಲಕವಾಗಿದೆ.

ಮತದಾನದ ವಿಷಯದಲ್ಲಿ ಕುಟುಂಬ ಮತ್ತು ಸ್ನೇಹಿತರು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬುದನ್ನು ಇಲ್ಲಿನವರೆಗಿನ ಎಲ್ಲ ಅಧ್ಯಯನಗಳೂ ಹೇಳಿವೆ. ಕುಟುಂಬದ ಹಿರಿಯರು ಯಾವ ಪಕ್ಷ ಅಥವಾ ಅಭ್ಯರ್ಥಿ ಬಗ್ಗೆ ಒಲವು ಹೊಂದಿದ್ದಾರೋ ಅದು ಅಲ್ಲಿನ ಕಿರಿಯರ ಮೇಲೆ ಅನಾಯಾಸವಾಗಿ ಪ್ರಭಾವ ಬೀರುತ್ತದೆ ಎಂದೇ ತಿಳಿಯಲಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ರಾಜಕೀಯ ವಿಚಾರದಲ್ಲಂತೂ ಅಪ್ಪ ಹಾಕಿದ ಆಲದ ಮರಕ್ಕೆ ಜೋತುಬೀಳುವ ಯುವಕರು ಇಲ್ಲವೇ ಇಲ್ಲ. ಅವರೆಲ್ಲ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಶಕ್ತರೂ ಬುದ್ಧಿವಂತರೂ ಆಗಿದ್ದಾರೆ.

ಜಾತಿ, ಮತ, ಪಂಥ, ಪಂಗಡ, ಹಣ ಇತ್ಯಾದಿಗಳ ಪ್ರಭಾವವನ್ನು ಭಾರತದಂತಹ ದೇಶದಲ್ಲಿ ತಡೆಯುವುದು ಕಷ್ಟ. ಆದರೆ ಅವುಗಳನ್ನು ಮೀರಿ ನಿಲ್ಲುವ ಯುವವರ್ಗವೊಂದು ನಮ್ಮಲ್ಲಿ ಸೃಷ್ಟಿಯಾಗುತ್ತಿದೆ ಎಂಬುದು ಮಹತ್ವದ ಅಂಶ. ಈ ಯುವಕರೇ ಸದ್ಯಕ್ಕೆ ನಮ್ಮ ಮುಂದಿರುವ ಭರವಸೆಯ ಶಕ್ತಿಗಳು. ಕೆಲವರು ಅಭ್ಯರ್ಥಿ ಮುಖ್ಯ ಎಂಬ ಭಾವನೆ ಹೊಂದಿದ್ದರೆ ಪಕ್ಷ ಮುಖ್ಯ ಎಂದು ಹೇಳುವವರೂ ಇದ್ದಾರೆ. ಆದರೆ ತಾವು ಹೇಳುತ್ತಿರುವುದಕ್ಕೆ ಅವರು ಸೂಕ್ತ ಕಾರಣವನ್ನೂ ಕೊಡಬಲ್ಲರು. ಅಂತಿಮವಾಗಿ ಇವರೆಲ್ಲರೂ ದೇಶದ ಒಳಿತಿನ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಎಂಬುದೇ ಗಮನಿಸಬೇಕಾದ ಅಂಶ.

ತಮಗೊದಗಿರುವ ಡಿಮ್ಯಾಂಡಪ್ಪೋ ಡಿಮ್ಯಾಂಡು ಸ್ಥಾನಮಾನವನ್ನು ದಿಟ್ಟತನದಿಂದ ಬಳಸಿಕೊಳ್ಳುವ ನಿರ್ಣಾಯಕ ಪರಿಸ್ಥಿತಿ ಯುವಕರದ್ದು. ಚುನಾವಣೆಯ ದಿನ ಸಿನಿಮಾ ಹಾಲುಗಳಲ್ಲಿ, ಝಗಮಗಿಸುವ ಮಾಲುಗಳಲ್ಲಿ ಕಾಲ ಕಳೆಯುವ ಬೇವಾಬ್ದಾರಿತನವನ್ನು, ಯಾರು ಅಧಿಕಾರಕ್ಕೆ ಬಂದರೂ ಅಷ್ಟೇ ಎಂಬ ಸಿನಿಕತೆಯನ್ನು ಅವರು ತೋರದಿರಲಿ. ಏಕೆಂದರೆ ಮುಂದೆ ಸರ್ಕಾರ ಯಾರು ರಚಿಸುತ್ತಾರೋ ಗೊತ್ತಿಲ್ಲ, ಆದರೆ ಅವರ ಹಣೆಬರಹವನ್ನು ಬರೆಯಬೇಕಾದವರು ನಮ್ಮ ಯುವಕರು ಎಂಬುದಂತೂ ಶತಃಸಿದ್ಧ.
*****************************************

ಅವರೇನು ಹೇಳುತ್ತಾರೆ?
ದೊಡ್ಡ ರಾಜಕೀಯ ಪಕ್ಷದಲ್ಲಿರುವ ಭ್ರಷ್ಟ ರಾಜಕಾರಣಿಗಿಂತ ತನ್ನದೇ ರಾಜಕೀಯ ವರ್ಚಸ್ಸು ಹೊಂದಿರುವ ಪ್ರಾಮಾಣಿಕ ಸ್ವತಂತ್ರ ಅಭ್ಯರ್ಥಿಯನ್ನು ನಾನು ಬೆಂಬಲಿಸುತ್ತೇನೆ. ಸರಿಯಾದ ವ್ಯಕ್ತಿಯನ್ನು ಗುರುತಿಸಿ ಗೆಲ್ಲಿಸುವುದರಿಂದ ರಾಜಕಾರಣ ಶುದ್ಧವಾಗುತ್ತದೆ.
- ಚೇತನ್, ಗುಜ್ಜೇನಗಳ್ಳಿ, ಕುಣಿಗಲ್

ಜನರ ನಾಡಿಮಿಡಿತವನ್ನು ಬಲ್ಲವರು, ನೈಜ ಅಭಿವೃದ್ಧಿಗೆ ಕಾರಣವಾಗಬಲ್ಲವರು ನಮಗೆ ಬೇಕು. ನಮ್ಮ ಕ್ಷೇತ್ರಕ್ಕೆ ಆ ವ್ಯಕ್ತಿ ಯೋಗ್ಯನೇ ಎಂಬುದೂ ಮುಖ್ಯ. ನಾವು ಆಮಿಷಗಳಿಗೆ ಬಲಿಯಾಗುವುದಿಲ್ಲ. ಉತ್ತಮ ಸಮಾಜದ ಕಲ್ಪನೆ ಹೊಂದಿರುವ ಕವಿ-ಸಾಹಿತಿಗಳು ಜನಪ್ರತಿನಿಧಿಗಳಾಗಿ ಆಯ್ಕೆಯಾದರೆ ಒಳ್ಳೆಯದೆಂದು ನನಗನಿಸುತ್ತದೆ.
- ಅನಿಲ್ ಕುಮಾರ್, ದೇವಲಕೆರೆ, ಪಾವಗಡ

ಆ ಪಕ್ಷ ಈ ಪಕ್ಷ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಡಿದಾಡುವುದರಿಂದ ಏನೂ ಪ್ರಯೋಜನ ಇಲ್ಲ. ಪಕ್ಷಗಳ ಆರಾಧಕರಾಗಲು ನಾವು ಸಿದ್ಧರಿಲ್ಲ. ಉತ್ತಮ ಅಭ್ಯರ್ಥಿಯೇ ನಮ್ಮ ಆಯ್ಕೆ.
- ಯೋಗೇಶ್ ಮಲ್ಲೂರು

ಅಭ್ಯರ್ಥಿ ಕೇವಲ ವ್ಯಕ್ತಿಯಲ್ಲ, ಅವನೊಂದು ಶಕ್ತಿ ಎಂದು ಮನಗಂಡು ಮತ ಚಲಾಯಿಸಬೇಕಿದೆ. ನಾವು ಆಯ್ಕೆ ಮಾಡುವ ಒಬ್ಬೊಬ್ಬ ವ್ಯಕ್ತಿಯ ಮೇಲೆ ದೇಶದ ಭವಿಷ್ಯ ನಿಂತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
- ತೃಷಭ ಎನ್., ಮಾರಗೊಂಡನಹಳ್ಳಿ, ನೆಲಮಂಗಲ

ಒಂದು ಹಂತದಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯವಾಗುತ್ತದೆ. ದೇಶದ ರಕ್ಷಣೆ ಹಾಗೂ ಒಳಿತಿಗೆ ಯಾವ ಪಕ್ಷ ಸಹಕಾರ ನೀಡುತ್ತದೋ ಅದು ನಮ್ಮ ಆಯ್ಕೆಯಾಗಬೇಕು. ಒಬ್ಬ ಅಭ್ಯರ್ಥಿ ಏನು ಮಾಡುತ್ತಾನೆ ಎಂಬುದಕ್ಕಿಂತಲೂ ನಾಳೆ ಅಧಿಕಾರಕ್ಕೆ ಬರುವವರು ಯಾರು ಎಂಬ ಅಂಶ ಮುಖ್ಯವಾಗುತ್ತದೆ.
- ಧನಂಜಯ ಆರ್., ತುಮಕೂರು

ಬುದ್ಧಿವಂತ, ಆದರೆ ಸುಸಂಸ್ಕೃತ, ಸೌಜನ್ಯಶೀಲ, ಮಾನವೀಯ ಗುಣಗಳುಳ್ಳ ಅಭ್ಯರ್ಥಿಯ ಆಯ್ಕೆಯನ್ನು ನಾನು ಬಯಸುತ್ತೇನೆ. ಈ ದೇಶದ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿ ನಮಗೆ ಅಗತ್ಯವಿದೆ.
- ಖಾದರ್ ಸಾಬ್, ಗಂಗಾವತಿ

ಯುವಕರು ತಮ್ಮತನ ಮರೆಯಬಾರದು. ಸಮಾಜದ ಅಭಿವೃದ್ಧಿಗೆ ಪೂರಕವಾದ ವಸ್ತುನಿಷ್ಠ ಚಿಂತನೆಯುಳ್ಳ ಅಭ್ಯರ್ಥಿಗಳು ಆಯ್ಕೆಯಾಗಬೇಕು. ಪಕ್ಷ ರಾಜಕಾರಣಕ್ಕಿಂತ ದೇಶದ ಭವಿಷ್ಯವೇ ಮುಖ್ಯ.
- ಸುರೇಶ್, ಕಂಬಾಳು, ನೆಲಮಂಗಲ

ನಾವು ಆಯ್ಕೆ ಮಾಡುವ ವ್ಯಕ್ತಿ ಜಾತಿ, ಮತ, ಧರ್ಮ ಇತ್ಯಾದಿ ಕಟ್ಟುಪಾಡುಗಳಿಂದ ಮುಕ್ತನಾಗಿರಬೇಕು. ಸಮರ್ಥ ನಾಯಕನೊಬ್ಬ ದೇಶದ ಚುಕ್ಕಾಣಿ ಹಿಡಿಯಬೇಕು. ಅದಕ್ಕೆ ಪೂರಕವಾದ ಆಯ್ಕೆಗಳು ನಮ್ಮಿಂದಾಗಬೇಕು.
- ಚಂದ್ರಶೇಖರ, ಓಬಳಿಹಳ್ಳಿ, ಮಧುಗಿರಿ

ತಂದೆ-ತಾಯಿ ಕಾಲದ ಪಕ್ಷನಿಷ್ಠೆ, ಹಣದಾಸೆ, ಅಜ್ಞಾನ ನಮ್ಮನ್ನು ಮತದಾನಕ್ಕೆ ಪ್ರೇರೇಪಿಸಬಾರದು. ಜನರ ಒಳಿತು ಮತದಾನದ ಮೊದಲ ಆದ್ಯತೆ. ಆದ್ದರಿಂದ ಅಭ್ಯರ್ಥಿಯೇ ಮುಖ್ಯ.
- ಗೋವರ್ಧನ ಎಸ್. ಎನ್., ಸಿರಾ

ದೇಶವನ್ನು ಮುನ್ನಡೆಸುವ ನಾಯಕನನ್ನು ಆಯ್ಕೆ ಮಾಡುವ ಅಧಿಕಾರ ನಮ್ಮ ಕೈಗೆ ಬಂದಿದೆ. ಇದು ವ್ಯರ್ಥವಾಗಕೂಡದು. ಆಮಿಷಗಳಿಗೆ ಒಳಗಾಗದೆ ನಾಡು ನುಡಿಗಾಗಿ ಪ್ರಾಮಾಣಿಕ ಸೇವೆ ಸಲ್ಲಿಸುವವರನ್ನು ಆಯ್ಕೆ ಮಾಡೋಣ. ಅಭಿವೃದ್ಧಿ ನಮ್ಮಿಂದ ಆರಂಭವಾಗಲಿ.
- ಶ್ರೀಕಾಂತ್, ರಂಭಾಪುರ, ಬಿಜಾಪುರ

ನನಗೆ ಅಭ್ಯರ್ಥಿ ಮುಖ್ಯ. ಆತನ ವ್ಯಕ್ತಿತ್ವ, ಯೋಚನೆ, ಅಭಿವೃದ್ಧಿಪರತೆ, ಮಾನವೀಯತೆ ಎಲ್ಲವೂ ಪ್ರಮುಖವಾಗುತ್ತದೆ. ಆದರೆ ಪಕ್ಷಸಿದ್ಧಾಂತಕ್ಕೆ ಜೋತು ಬಿದ್ದವರೇ ಈಗಿನ ಕಾಲದಲ್ಲಿ ಹೆಚ್ಚು. ಯುವಕರು ಯೋಚಿಸಿ ಮತ ಹಾಕಬೇಕು.
- ಬೀರಲಿಂಗಯ್ಯ

ನನಗೆ ಪಕ್ಷ ಮತ್ತು ಪಕ್ಷದ ಪ್ರಣಾಳಿಕೆಗಿಂತ ಅಭ್ಯರ್ಥಿ ಮುಖ್ಯ. ಆತನ ಜಾತಿ, ಮತ, ಪಂಗಡ, ಧರ್ಮವನ್ನು ನೋಡುವುದಿಲ್ಲ. ಅವರ ವ್ಯಕ್ತಿತ್ವದ ಪೂರ್ವಾಪರ ನೋಡಿ ಮತ ಹಾಕುತ್ತೇನೆ. ಹೊಸ ಅಭ್ಯರ್ಥಿಗೆ ಯುವ ಮತದಾರರು ಒಂದು ಅವಕಾಶ ನೀಡಬೇಕು.
- ಗಿರೀಶ ಎಸ್. ಕಲ್ಗುಡಿ, ಗುಬ್ಬಿ