ಪ್ರಜಾವಾಣಿಯಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಪದವಿ ತರಗತಿಗಳ ಪ್ರವೇಶ ಪ್ರಕ್ರಿಯೆ ನಡೆಯುತ್ತಿತ್ತು. ಅಭ್ಯರ್ಥಿಯೊಬ್ಬ ತನ್ನ ತಂದೆಯೊಂದಿಗೆ ಬಂದಿದ್ದ. ಆತ ಒದಗಿಸಿದ್ದ ಆದಾಯ ಪ್ರಮಾಣಪತ್ರದಲ್ಲಿ ವಾರ್ಷಿಕ ಆದಾಯ ಹನ್ನೊಂದು ಸಾವಿರ ರೂಪಾಯಿ ಎಂದಿತ್ತು. ಸರ್ಕಾರಿ ನಿಯಮಗಳ ಪ್ರಕಾರ ಆತನಿಗೆ ಶುಲ್ಕದಲ್ಲಿ ವಿಶೇಷ ವಿನಾಯಿತಿ ಇತ್ತು. ಶುಲ್ಕವನ್ನು ಒಮ್ಮೆಲೇ ಕಟ್ಟಬಹುದು, ಕಷ್ಟವಾದರೆ ಎರಡು ಕಂತಿನಲ್ಲಿಯೂ ಕಟ್ಟಬಹುದು ಎಂಬ ಅವಕಾಶವನ್ನೂ ತಿಳಿಸಿದೆ.
ನಾವು ಒಮ್ಮೆಲೇ ಪೂರ್ತಿ ಶುಲ್ಕ ಪಾವತಿಸುತ್ತೇವೆ ಎಂದ ತಂದೆ-ಮಗ ಪ್ರವೇಶ ಪ್ರಕ್ರಿಯೆಯನ್ನು ಪೂರೈಸಿ ಹೊರಡುವ ವೇಳೆಗೆ ಮತ್ತೆ ನನ್ನ ಬಳಿ ಬಂದರು. ಜೇಬಿನಿಂದ ಇನ್ನೂರು ರೂಪಾಯಿಯ ನೋಟೊಂದನ್ನು ತೆಗೆದ ಮಧ್ಯವಯಸ್ಕ ತಂದೆ 'ಊಟ-ಗೀಟ ಮಾಡ್ತಿರೇನೋ ಸಾರ್’ ಎಂದು ಸಣ್ಣಧ್ವನಿಯಲ್ಲಿ ಹೇಳಿದರು. ಅಂಥದ್ದೊಂದನ್ನು ನಿರೀಕ್ಷಿಸಿರದ ನಾನು ಬೇಸ್ತುಬಿದ್ದು 'ಅಯ್ಯೋ ಇಂಥದ್ದೆಲ್ಲ ಇಲ್ಲ. ನಾವೆಲ್ಲ ಮೇಸ್ಟ್ರುಗಳು. ಚೆನ್ನಾಗಿ ಸಂಬಳ ಬರುತ್ತೆ. ನೀವು ಹೀಗೆಲ್ಲ ಕೊಡೋದು ತಪ್ಪಾಗುತ್ತೆ. ಇಟ್ಕೊಳ್ಳಿ’ ಎಂದು ನಯವಾಗಿಯೇ ಹೇಳಿದೆ.
ಅವರು ಎರಡೆರಡು ಸಲ ಒತ್ತಾಯಿಸಿ ಆಮೇಲೆ ನೋಟನ್ನು ಪುನಃ ಜೇಬಿನಲ್ಲಿರಿಸಿಕೊಂಡರು. ನಾನು ನೋಡುತ್ತಿದ್ದ ಹಾಗೆ ತಾವು ಬಂದಿದ್ದ ಕಾರು ಏರಿ ಹೊರಟುಹೋದರು. ವಿದ್ಯಾರ್ಥಿಯೇ ಕಾರು ಚಲಾಯಿಸುತ್ತಿದ್ದ. ಏನಿಲ್ಲವೆಂದರೂ ಆ ಕಾರು ಎಂಟು ಲಕ್ಷ ಬೆಲೆಬಾಳುವಂಥದ್ದು. ಈಗ ಇನ್ನಷ್ಟು ಬೇಸ್ತುಬೀಳುವ ಸರದಿ ನನ್ನದಾಗಿತ್ತು. ಒಂದು ಸಾವಿರಚಿಲ್ಲರೆ ಶುಲ್ಕವನ್ನು ಎರಡು ಕಂತಲ್ಲಿ ಕಟ್ಟಬಹುದೆಂದು ಇವರಿಗೆ ಹೇಳಿದೆನಾ ಎಂದು ಯೋಚನೆಗೆ ಬಿದ್ದೆ.
ಈ ಘಟನೆ ಎರಡು ಪ್ರಮುಖ ವಿಚಾರಗಳಿಗೆ ಸಾಕ್ಷಿ ಒದಗಿಸಿತು: ಒಂದು, ಸರ್ಕಾರದ ಸವಲತ್ತುಗಳೆಲ್ಲ ಅರ್ಹರಿಗೆ ವಿನಿಯೋಗವಾಗುತ್ತಿಲ್ಲ. ಇನ್ನೊಂದು, ಸರ್ಕಾರಿ ಪದ್ಧತಿಯಲ್ಲಿ ಕೆಲಸವಾಗಬೇಕೆಂದರೆ ಏನಾದರೂ 'ಮಾಮೂಲು’ ಕೊಡಲೇಬೇಕು ಎಂಬ ಮನಸ್ಥಿತಿಯಿಂದ ನಮ್ಮ ಜನರು ಹೊರಬಂದಿಲ್ಲ.
ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ವಿದ್ಯಾಭ್ಯಾಸ ಮುಂದುವರಿಸಲು ನೆರವಾಗಲೆಂದೇ ಸರ್ಕಾರ ಶುಲ್ಕ ವಿನಾಯಿತಿಯಂತಹ ಕ್ರಮಗಳನ್ನು ಕೈಗೊಂಡಿದೆ. ವಿದ್ಯಾರ್ಥಿವೇತನ, ಹಾಸ್ಟೆಲ್ ಸೌಲಭ್ಯ, ಉಚಿತ ಬಸ್ ಪಾಸ್ ಇತ್ಯಾದಿ ಹಲವು ವ್ಯವಸ್ಥೆಗಳಿವೆ. ಇವೆಲ್ಲವೂ ನಿಜವಾಗಿಯೂ ಅರ್ಹರನ್ನು ತಲುಪುತ್ತಿವೆಯೇ ಎಂದರೆ ಮೇಲಿನ ಘಟನೆಯತ್ತ ನೋಡಬೇಕಾಗುತ್ತದೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಕಾರಲ್ಲಿ ಓಡಾಡುವ ಮಂದಿ ಒದಗಿಸುವ ಆದಾಯ ಪ್ರಮಾಣಪತ್ರ ವಾರ್ಷಿಕ ಹನ್ನೊಂದು ಸಾವಿರ ರೂಪಾಯಿಯದ್ದು.
ಈ ಹನ್ನೊಂದು ಸಾವಿರ ಆದಾಯ ಮಿತಿಯ ಕಾಲ ಹೋಗಿ ದಶಕಗಳೇ ಸಂದವು. ಸೌಲಭ್ಯಗಳನ್ನು ಪಡೆಯುವ ಆದಾಯಮಿತಿಯನ್ನು ಸರ್ಕಾರ ಹೆಚ್ಚಿಸಿದೆ. ಆದರೆ ಇಂದಿಗೂ ಶುಲ್ಕ ವಿನಾಯಿತಿ ಬಯಸುವ ಬಹುಪಾಲು ವಿದ್ಯಾರ್ಥಿಗಳು ಸಲ್ಲಿಸುವ ಆದಾಯ ಪ್ರಮಾಣಪತ್ರದಲ್ಲಿ ವಾರ್ಷಿಕ ರೂ. ಹನ್ನೊಂದು ಸಾವಿರ ಎಂದೇ ತಹಶೀಲ್ದಾರರಿಂದ ಬರೆಸಿಕೊಂಡು ಬರುತ್ತಾರೆ. ಜನ ಮತ್ತು ವ್ಯವಸ್ಥೆ ಹಿಂದಿನ ಮನಸ್ಥಿತಿಯಿಂದ ಈಚೆ ಬಂದಿಲ್ಲ. ಹನ್ನೊಂದು ಸಾವಿರ ವಾರ್ಷಿಕ ಆದಾಯದಲ್ಲಿ ಯಾವುದಾದರೊಂದು ಕುಟುಂಬ ಜೀವನ ನಡೆಸುವುದು ವಾಸ್ತವದಲ್ಲಿ ಸಾಧ್ಯವೇ? ಜನರು ಇಷ್ಟೇ ಇರಲಿ ಎಂದು ಒತ್ತಾಯಪೂರ್ವಕ ನಮೂದಿಸಿಕೊಂಡು ಬರುತ್ತಾರೋ, ಅಧಿಕಾರಿಗಳ ಮನಸ್ಥಿತಿ ಬದಲಾಗುವುದಿಲ್ಲವೋ ಅರ್ಥವಾಗದು.
ಇದಕ್ಕೂ ಎರಡು ಮೂರು ದಿನಗಳ ಹಿಂದೆ ನನ್ನ ಹಳೆ ವಿದ್ಯಾರ್ಥಿನಿಯೊಬ್ಬಳು ಫೋನ್ ಮಾಡಿ, ಹಿಂದುಳಿದ ವರ್ಗಕ್ಕೆ ಸೇರಿದ ತನ್ನ ನೆರೆಯ ಹುಡುಗಿಯೊಬ್ಬಳು ಪದವಿ ಓದಲು ಬಯಸಿದ್ದಾಳೆಂದೂ, ಆದರೆ ಆಕೆಗೆ ಶುಲ್ಕ ಪಾವತಿಸುವ ಶಕ್ತಿ ಇಲ್ಲವಾದ್ದರಿಂದ ಮನೆಯಲ್ಲಿ ಓದು ಬೇಡ ಎಂದು ನಿರ್ಧರಿಸಿದ್ದಾರೆಂದೂ ಹೇಳಿ, ಆ ಹುಡುಗಿಗೆ ಯಾವ ರೀತಿ ನಾವು ಸಹಾಯ ಮಾಡಬಹುದೆಂದು ವಿಚಾರ ಮಾಡಿದಳು. ಓದುವ ಆಸೆಯಿರುವ ಹುಡುಗಿ ಮನೆಯಲ್ಲಿ ಕೂರುವಂತೆ ಆಗುವುದು ಬೇಡ, ಏನಾದರೂ ಮಾಡೋಣ ಎಂದು ಕೆಲವು ಸಾಧ್ಯತೆಗಳ ಬಗ್ಗೆ ಸಲಹೆ ನೀಡಿದೆ.
ಈ ಹುಡುಗಿಗೂ ಶುಲ್ಕ ವಿನಾಯಿತಿಯ ಅವಕಾಶ ಇತ್ತು. ಆದರೆ ವಿನಾಯಿತಿಗೊಳಪಡುವ ಭಾಗ ಮುಂದೆ ವಿದ್ಯಾರ್ಥಿವೇತನ ರೂಪದಲ್ಲಿ ಸರ್ಕಾರದಿಂದ ಬರುವುದಿತ್ತು. ಒಂದು ಸಲಕ್ಕಾದರೂ ಪೂರ್ತಿ ಶುಲ್ಕವನ್ನು ಪಾವತಿಸುವುದು ಅನಿವಾರ್ಯ. ಎರಡು ಕಂತಿನಲ್ಲಿ ಪಾವತಿಸುವ ಅವಕಾಶ ನೀಡಿದರೂ ಮೊದಲನೇ ಕಂತಿನಲ್ಲಿ ಐದು ಸಾವಿರ ರೂ. ಪಾವತಿಸಲೇಬೇಕು. ವಿದ್ಯಾರ್ಥಿವೇತನ ಬರುವುದು ವರ್ಷದ ಕೊನೆಗಾದರೂ ಆಯಿತು.
ಸರ್ಕಾರದ ಸವಲತ್ತುಗಳ ಅವಶ್ಯಕತೆ ಇರುವವರು ನಮ್ಮ ನಡುವೆ ಬೇಕಾದಷ್ಟು ಮಂದಿ ಇದ್ದಾರೆ. ಇವೇ ಸವಲತ್ತುಗಳು ಅನೇಕ ಸಲ ಅನರ್ಹರನ್ನು ಕೂಡ ಧಾರಾಳವಾಗಿ ತಲುಪುತ್ತವೆ. ಬೇರೆಬೇರೆ ಹಂತಗಳಲ್ಲಿ ಇದನ್ನು ತಡೆಯುವ ವ್ಯವಸ್ಥೆಗಳನ್ನು ಸರ್ಕಾರ ಮಾಡಿದರೂ ಅವುಗಳಿಂದ ತಪ್ಪಿಸಿಕೊಳ್ಳುವ ಚಾಣಾಕ್ಷ ಜನರೂ, ಅವರಿಗೆ ನೆರವಾಗುವ ಅಧಿಕಾರಿಗಳೂ ಇದ್ದೇ ಇರುತ್ತಾರೆ. ಅನೇಕ ಮಂದಿಗೆ ತಾವು ಸರ್ಕಾರದ ಸವಲತ್ತನ್ನು ಹೇಗಾದರೂ ದಕ್ಕಿಸಿಕೊಂಡೆವು ಎನ್ನುವುದೇ ಹೆಮ್ಮೆಯ ವಿಷಯ. ವಿವಿಧ ಕಾರಣಗಳಿಗಾಗಿ ಇವೇ ಸೌಲಭ್ಯಗಳಿಂದ ವಂಚಿತರಾಗಿರುವ ಅರ್ಹ ಜನರೂ ಸಮಾಜದಲ್ಲಿ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ.
ಸರ್ಕಾರಿ ವ್ಯವಸ್ಥೆಯಲ್ಲಿ ಯಾವ ಕೆಲಸ ಆಗಬೇಕೆಂದರೂ ದುಡ್ಡು ಕೊಡಬೇಕು ಎಂಬ ಮನಸ್ಥಿತಿಯಿಂದಲೂ ನಾವು ಹೊರಬರುವುದಕ್ಕೆ ಇನ್ನೂ ಸಾಧ್ಯವಾಗಿಲ್ಲ ಎಂಬುದು ಇನ್ನೊಂದು ವಿಷಯ. ಇದು ಮನಸ್ಥಿತಿಯ ವಿಷಯ ಎಂಬುದಕ್ಕಿಂತಲೂ ವಾಸ್ತವ ಎನ್ನಬೇಕೇನೋ? ಜನರು ಹೀಗೆ ಭಾವಿಸಲು ಬೇರೆಬೇರೆ ಸಂದರ್ಭಗಳಲ್ಲಿ ಅವರು ಎದುರಿಸುವ ಪರಿಸ್ಥಿತಿಯೇ ಕಾರಣವಿರಬೇಕು. ನೋಟು ತೋರಿಸದೆ ಕೆಲಸ ಆಗುವುದಿಲ್ಲ ಎಂಬುದಕ್ಕೆ ದಿನನಿತ್ಯ ನೂರೆಂಟು ಉದಾಹರಣೆಗಳನ್ನು ನೋಡುತ್ತೇವೆ. ಕೋಟ್ಯಂತರ ರೂಪಾಯಿ ಲಂಚರುಷುವತ್ತುಗಳ ಕಥೆಯನ್ನು ಪ್ರತಿದಿನ ಕೇಳುತ್ತೇವೆ. ಕಾಲೇಜು ಪ್ರವೇಶಕ್ಕೆ ಬಂದರೂ ಅಲ್ಲಿನವರು ಏನಾದರೂ ನಿರೀಕ್ಷಿಸುತ್ತಾರೇನೋ ಎಂದು ಯೋಚಿಸುವ ಮನಸ್ಥಿತಿ ಸರ್ಕಾರಿ ಕಚೇರಿಗಳಿಗೆ ಓಡಾಡುವ ಜನರಿಗೆ ತೀರಾ ಸಹಜವಾಗಿ ಬಂದುಬಿಟ್ಟಿದೆ. ಇದನ್ನು ನಮ್ಮ ಸಮಾಜದ ದುರಂತ ಎನ್ನದೆ ಬೇರೆ ವಿಧಿಯಿಲ್ಲ.
- ಸಿಬಂತಿ ಪದ್ಮನಾಭ ಕೆ. ವಿ.
1 ಕಾಮೆಂಟ್:
ಅತ್ಯಂತ ಸಹಜವಾದ ವಿಚಾರ ಮಂಡಿಸಿದ್ದೀರಿ. ಇದು ಶಿಕ್ಷಣ ಸಚಿವರನ್ನು ಮಾತ್ರ ತಲುಪುವುದಲ್ಲ. ಸರ್ಕಾರದ ಎಲ್ಲಾ ವಿಭಾಗಕ್ಕೂ ತಲುಪಬೇಕು
ಕಾಮೆಂಟ್ ಪೋಸ್ಟ್ ಮಾಡಿ