8 ಆಗಸ್ಟ್ 2020ರ 'ವಿಜಯವಾಣಿ' ಶಿಕ್ಷಣಪಥ ಪುರವಣಿಯಲ್ಲಿ ಪ್ರಕಟವಾದ ಲೇಖನ
ಹೊಸ ಅವಕಾಶಗಳು ತೆರೆದುಕೊಳ್ಳುವುದು ಸಜೀವ ಜಗತ್ತಿನ ಸಾಮಾನ್ಯ ಲಕ್ಷಣ. ಒಂದು ಕ್ಷೇತ್ರದಲ್ಲಿ ಅವಕಾಶಗಳು ಕಡಿಮೆಯಾಯಿತು ಅನ್ನಿಸುವಾಗೆಲ್ಲ ಒಂದೋ ಇನ್ನೊಂದು ಕ್ಷೇತ್ರ ಹುಟ್ಟಿಕೊಂಡಿರುತ್ತದೆ ಅಥವಾ ಅದೇ ಕ್ಷೇತ್ರ ಬೇರೊಂದು ರೂಪದಲ್ಲಿ ಪ್ರತ್ಯಕ್ಷವಾಗಿರುತ್ತದೆ. ವಾಸ್ತವವಾಗಿ ಅವಕಾಶಗಳ ಕೊರತೆ ಕಾಡುವುದು ಈ ಹೊಸತನಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದವರಿಗೆ ಮಾತ್ರ.
ವಿಜಯವಾಣಿ | ಸಿಬಂತಿ ಪದ್ಮನಾಭ |
ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೃಜನಶೀಲರು ಜಡವಾಗಿ ಕುಳಿತಿರುವುದಕ್ಕೆ ಅವಕಾಶವೇ ಇಲ್ಲ. ಅವರು ಸುಮ್ಮನೆ ಕೂತರೂ ಪ್ರಪಂಚ ಎಳೆದುಕೊಂಡು ಹೋಗುತ್ತದೆ. ಹಾಗೆಂದು ಕೇವಲ ಔಪಚಾರಿಕ ಡಿಗ್ರಿಗಳಿಗೆ ಜೋತುಬಿದ್ದವರು ಈ ಕಾಲದಲ್ಲಿ ಬದುಕುವುದು ಕಷ್ಟ. ಇದು ಸವಾಲುಗಳ ಯುಗ. ಪ್ರತಿಭೆ ನವೋನ್ಮೇಷಶಾಲಿಯಾದುದು. ಸದಾ ಹೊಸತನಕ್ಕೆ ತುಡಿಯುವವರಿಗೆ, ಉತ್ತಮ ಸಂವಹನ ಕೌಶಲ, ವರ್ತಮಾನದ ತಿಳುವಳಿಕೆ ಇದ್ದವರಿಗೆ ನೂರೆಂಟು ದಾರಿಗಳು ಎಂದೆಂದೂ ಇವೆ.
ಜಾಹೀರಾತು ನಿರ್ಮಾಣ, ಕಂಟೆಂಟ್ ರೈಟಿಂಗ್, ಅನಿಮೇಶನ್ & ವಿಎಫ್‍ಎಕ್ಸ್ ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗೂ ಬಹುಬೇಡಿಕೆಯ ಕ್ಷೇತ್ರಗಳು. ಸವಾಲುಗಳನ್ನು ಇಷ್ಟಪಡುವ ಯುವಕರಿಗೆ ಸಾಕಷ್ಟು ಆದಾಯ ಮತ್ತು ತೃಪ್ತಿಯನ್ನು ಕೊಡಬಲ್ಲ ರಂಗಗಳು. ಇವುಗಳಲ್ಲಿರುವ ಉದ್ಯೋಗಾವಕಾಶಗಳೇನು, ಸೇರಲು ಅರ್ಹತೆಯೇನು, ಅದನ್ನು ಹೇಗೆ ಪಡೆದುಕೊಳ್ಳಬಹುದೆಂಬ ವಿವರಗಳು ಇಲ್ಲಿವೆ.
ಜಾಹೀರಾತು ಕ್ಷೇತ್ರ
ಆಧುನಿಕ ಕಾಲದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಜಾಹೀರಾತು ಕೂಡ ಒಂದು. ದಿನದಿಂದ ದಿನಕ್ಕೆ ಹಿಗ್ಗುತ್ತಿರುವ ಕಾರ್ಪೋರೇಟ್ ಜಗತ್ತು, ವೈವಿಧ್ಯಮಯ ಉತ್ಪನ್ನಗಳ ನಡುವಿನ ತುರುಸಿನ ಸ್ಪರ್ಧೆ, ಗ್ರಾಹಕರನ್ನು ತಮ್ಮತ್ತ ಸೆಳೆಯುವ ಕಂಪೆನಿಗಳ ಅನಿವಾರ್ಯತೆ ಇತ್ಯಾದಿಗಳಿಂದ ಜಾಹೀರಾತು ಕ್ಷೇತ್ರ ಕಳೆದೊಂದು ದಶಕದಲ್ಲಿ ಗಣನೀಯವಾಗಿ ಬೆಳೆದಿದೆ.
2020ರ ಅಂತ್ಯಕ್ಕೆ ಭಾರತದ ಜಾಹೀರಾತು ಉದ್ಯಮ ರೂ. 75,952 ಕೋಟಿ ವಹಿವಾಟು ಮಾಡಬಹುದೆಂದು ಸಮೀಕ್ಷೆಗಳು ಹೇಳಿವೆ. ಇದು 2025ರ ವೇಳೆಗೆ ರೂ. 1,33,921 ಕೋಟಿ ತಲುಪಬಹುದೆಂದು ಅಂದಾಜು ಮಾಡಲಾಗಿದೆ. ಇತ್ತೀಚಿನ ವರ್ಷಗಳವರೆಗೂ ಪತ್ರಿಕೆ, ಟಿವಿ, ರೇಡಿಯೋಗಳೇ ಜಾಹೀರಾತಿನ ಪ್ರಮುಖ ಮಾಧ್ಯಮಗಳಾಗಿದ್ದರೆ ಈಗ ಡಿಜಿಟಲ್ ಯುಗ ತೆರೆದುಕೊಂಡಿದೆ. ಉಳಿದವುಗಳನ್ನೆಲ್ಲ ಹಿಂದಿಕ್ಕಿ ಡಿಜಿಟಲ್ ಜಾಹೀರಾತು ದಾಪುಗಾಲು ಹಾಕಿದೆ. ಪ್ರಸ್ತುತ ಡಿಜಿಟಲ್ ಜಾಹೀರಾತು ಉದ್ಯಮದ ಪಾಲು ಅಂದಾಜು ರೂ. 17,300 ಕೋಟಿ ಇದೆ. ಇದು 2025ರ ವೇಳೆಗೆ ರೂ. 58,550 ಕೋಟಿ ಆಗಬಹುದೆಂದು ಮಾರುಕಟ್ಟೆ ತಜ್ಞರು ಊಹಿಸಿದ್ದಾರೆ. ಇದು ನಮ್ಮ ಯುವಕರ ಮುಂದಿರುವ ವಿಶಾಲ ಪ್ರಪಂಚ.
ಅವಕಾಶಗಳೇನು?
ಜಾಹೀರಾತು ನಿರ್ಮಾಣದ ಬಹುಪಾಲು ಕೆಲಸಗಳು ನಡೆಯುವುದು ಜಾಹೀರಾತು ಏಜೆನ್ಸಿಗಳಲ್ಲಿ. ಈ ಕ್ಷೇತ್ರಕ್ಕೆ ಎರಡು ಆಯಾಮಗಳಿವೆ: ಒಂದು ಸೃಜನಶೀಲವಾದದ್ದು. ಇನ್ನೊಂದು ವ್ಯವಹಾರಕ್ಕೆ ಸಂಬಂಧಿಸಿದ್ದು. ಜಾಹೀರಾತಿನ ಪಠ್ಯದ ರಚನೆ, ಆಕರ್ಷಕ ತಲೆಬರಹ, ಸ್ಲೋಗನ್‍ಗಳ ಸೃಷ್ಟಿ, ಇವಕ್ಕೆ ಆಕರ್ಷಕ ಚಿತ್ರ, ಬಣ್ಣ, ವಿನ್ಯಾಸ ಹೊಂದಿಸಿ ಕೊಡುವುದು ಸೃಜನಶೀಲ ವಿಭಾಗದ ಕೆಲಸ. ಜಾಹೀರಾತು ಅಗತ್ಯವುಳ್ಳ ಕಂಪೆನಿಗಳನ್ನು ತಮ್ಮತ್ತ ಸೆಳೆಯುವುದು, ಅವರಿಗೆ ಜಾಹೀರಾತಿನ ಸಾಧ್ಯತೆಗಳನ್ನು ಮನವರಿಕೆ ಮಾಡಿಕೊಡುವುದು, ಮಾಧ್ಯಮಗಳ ಆಯ್ಕೆಯಲ್ಲಿ ಸಹಾಯ ಮಾಡುವುದು, ಮಾಧ್ಯಮಗಳೊಂದಿಗೆ ವ್ಯವಹರಿಸುವುದು ಎರಡನೆಯ ವಿಭಾಗದ ಕೆಲಸ.
ಇವೆರಡು ವಿಭಾಗದಲ್ಲೂ ಉತ್ಸಾಹಿ ತರುಣರಿಗೆ ಹೇರಳ ಉದ್ಯೋಗಾವಕಾಶಗಳಿವೆ. ಕ್ರಿಯೇಟಿವ್ ಆಗಿ ಯೋಚನೆ ಮಾಡುವವರಿಗೆ ಮೊದಲನೆಯ ವಿಭಾಗವೂ ವ್ಯವಹಾರ ಕುಶಲಿಗರಿಗೆ ಎರಡನೆಯ ವಿಭಾಗವೂ ಸೂಕ್ತವಾದೀತು. ಸೃಜನಶೀಲ ವಿಭಾಗದಲ್ಲಿ ಕಾಪಿ ರೈಟರ್, ಛಾಯಾಗ್ರಾಹಕ, ವೀಡಿಯೋಗ್ರಾಫರ್, ವಿಶುವಲ್ ಎಡಿಟರ್, ಆರ್ಟ್ ಡೈರೆಕ್ಟರ್, ಗ್ರಾಫಿಕ್ ಡಿಸೈನರ್, ಕ್ರಿಯೇಟಿವ್ ಡೈರೆಕ್ಟರ್ ಮುಂತಾದ ಹುದ್ದೆಗಳಿವೆ. ವ್ಯವಹಾರ ವಿಭಾಗದಲ್ಲಿ ಜಾಹೀರಾತು ಮ್ಯಾನೇಜರ್, ಸೇಲ್ಸ್ ಎಕ್ಸೆಕ್ಯುಟಿವ್, ಮಾರ್ಕೆಟಿಂಗ್ ಸ್ಪೆಷಲಿಸ್ಟ್, ರಿಸರ್ಚ್ ಅನಾಲಿಸ್ಟ್, ಅಕೌಂಟ್ಸ್ ಮ್ಯಾನೇಜರ್ ಮುಂತಾದ ಹುದ್ದೆಗಳಿವೆ.
ಅರ್ಹತೆಯೇನು?
ಶೈಕ್ಷಣಿಕವಾಗಿ ಯಾವುದಾದರೊಂದು ಪದವಿ ಅಥವಾ ಸ್ನಾತಕೋತ್ತರ ಪದವಿ ಈ ಕ್ಷೇತ್ರಕ್ಕೆ ಪ್ರವೇಶಿಸಲು ಬೇಕಾದ ಕನಿಷ್ಠ ಅರ್ಹತೆ. ಪತ್ರಿಕೋದ್ಯಮ, ಮಾಧ್ಯಮ ಅಧ್ಯಯನ, ಸಾಹಿತ್ಯದಲ್ಲಿ ಪದವಿ ಪಡೆದರೆ ಸೃಜನಶೀಲ ವಿಭಾಗಕ್ಕೆ ಪ್ರವೇಶ ಪಡೆಯಲು ಅನುಕೂಲ. ವ್ಯವಹಾರ ವಿಭಾಗದಲ್ಲಿ ಕೆಲಸ ಮಾಡಲು ವಾಣಿಜ್ಯ ವಿಭಾಗದ ಪದವಿ ಅಥವಾ ಎಂಬಿಎಯಂತಹ ಪದವಿಗಳು ಉತ್ತಮ. ಆದರೆ ಇವೆಲ್ಲ ಕೇವಲ ಅಂಕಪಟ್ಟಿ ಆಧಾರದಲ್ಲಿ ಸಿಗುವ ಕೆಲಸಗಳಲ್ಲ. ಕೌಶಲವೇ ಇಲ್ಲಿ ಪ್ರಧಾನ. ಪರಿಣಾಮಕಾರಿ ಸಂವಹನ ಕಲೆ, ಅತ್ಯುತ್ತಮ ಭಾಷಾ ಕೌಶಲ, ಸಮರ್ಥ ಮಂಡನಾ ಶೈಲಿ, ತಂಡವನ್ನು ಮುನ್ನಡೆಸುವ ನಾಯಕತ್ವ, ಗ್ರಾಹಕರನ್ನು ಮನವೊಲಿಸುವ ತಂತ್ರ, ಒತ್ತಡಗಳ ನಡುವೆ ಕೆಲಸ ಮಾಡುವ ಸಾಮಥ್ರ್ಯ, ಎಲ್ಲಕ್ಕಿಂತ ಮುಖ್ಯವಾದ ಆತ್ಮವಿಶ್ವಾಸ ಜಾಹೀರಾತು ಕ್ಷೇತ್ರ ಬಯಸುವ ಪ್ರಮುಖ ಗುಣಗಳು.
ಯಾವುದಾದರೊಂದು ಪದವಿ ಓದುತ್ತಲೇ ಇಂತಹ ಕೌಶಲಗಳನ್ನು ತಮ್ಮಲ್ಲಿ ರೂಢಿಸಿಕೊಳ್ಳುವುದಕ್ಕೆ ಯುವಕರು ಪ್ರಯತ್ನಪಡಬೇಕು. ಎಲ್ಲವೂ ತರಗತಿಕೊಠಡಿಯಲ್ಲಿ ಕರಗತವಾಗುವ ಅಂಶಗಳಲ್ಲ. ಅಹಮದಾಬಾದಿನ ಮುದ್ರಾ ಇನ್ಸ್‍ಟಿಟ್ಯೂಟ್ ಆಫ್ ಕಮ್ಯೂನಿಕೇಶನ್, ದೆಹಲಿಯ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಶನ್, ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಅಡ್ವರ್ಟೈಸಿಂಗ್, ಮುಂಬೈಯ ಕ್ಸೇವಿಯರ್ ಇನ್ಸ್‍ಟಿಟ್ಯೂಟ್ ಆಫ್ ಕಮ್ಯೂನಿಕೇಶನ್, ಪುಣೆಯ ಸಿಂಬಿಯಾಸಿಸ್ ಇನ್ಸ್‍ಟಿಟ್ಯೂಟ್ ಆಫ್ ಮೀಡಿಯಾ & ಕಮ್ಯೂನಿಕೇಶನ್ ಮೊದಲಾದ ಕಡೆ ಈ ಕ್ಷೇತ್ರಕ್ಕೆ ಸಂಬಂಧಿಸಿದ ವಿಶೇಷ ತರಬೇತಿ ಲಭ್ಯವಿದೆ. ಬೆಂಗಳೂರಿನಲ್ಲೂ ಸಾಕಷ್ಟು ತರಬೇತಿ ಸಂಸ್ಥೆಗಳಿವೆ.
ಕಂಟೆಂಟ್ ರೈಟಿಂಗ್
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕೆಲವು ವರ್ಷಗಳ ಹಿಂದೆ ‘ಕಂಟೆಂಟ್ ಈಸ್ ದಿ ಕಿಂಗ್’ ಎಂದು ಘೋಷಿಸಿದಾಗ ಜಗತ್ತಿನಾದ್ಯಂತ ಒಂದು ಹೊಸ ಸಂಚಲನ ಸೃಷ್ಟಿಯಾಗಿತ್ತು. ಸ್ಪರ್ಧೆಯ ಲೋಕದಲ್ಲಿ ತಮ್ಮ ಆನ್‍ಲೈನ್ ಇರುವಿಕೆಯನ್ನು ತೋರಿಸಿಕೊಳ್ಳುವುದು ಪ್ರತೀ ಕಂಪೆನಿಗೂ ಅನಿವಾರ್ಯ. ತಮ್ಮದೇ ಸ್ವಂತ ವೆಬ್‍ಸೈಟ್ ಹೊಂದುವುದು, ಫೇಸ್ಬುಕ್, ಟ್ವಿಟರ್, ಇನ್‍ಸ್ಟಾಗ್ರಾಂಗಳಂತಹ ಸಾಮಾಜಿಕ ತಾಣಗಳಲ್ಲಿ ತಮ್ಮ ಖಾತೆಯನ್ನು ಚಾಲ್ತಿಯಲ್ಲಿಡುವುದು ಉಳಿದ ವ್ಯವಹಾರಗಳಷ್ಟೇ ಮುಖ್ಯ. ಹೀಗಾಗಿ ಡಿಜಿಟಲ್ ಕಂಟೆಂಟಿಗೆ ಈಗ ರಾಜಮನ್ನಣೆ.
ಅವಕಾಶಗಳೇನು?
ಹೀಗಾಗಿ ಕಂಟೆಂಟ್ ರೈಟಿಂಗ್ ಎಂಬ ಹೊಸ ವೃತ್ತಿ ಹೆಚ್ಚು ಜನಪ್ರಿಯತೆ ಪಡೆದಿದೆ. ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ಕಂಪೆನಿಗಳು, ಸಂಘಸಂಸ್ಥೆಗಳು- ಒಟ್ಟಿನಲ್ಲಿ ಕಾರ್ಪೋರೇಟ್ ವಲಯ ಡಿಜಿಟಲ್ ಲೋಕದಲ್ಲಿ ಕಾಣಿಸಿಕೊಳ್ಳಲು ಕಂಟೆಂಟ್ ಬರೆಹಗಾರರು ಬೇಕೇಬೇಕು. ತಮ್ಮಲ್ಲೇ ಅಂತಹ ಬರಹಗಾರರನ್ನು ನೇಮಿಸಿಕೊಳ್ಳುವುದು ಕಡಿಮೆ. ಕಾರ್ಪೋರೇಟ್ ಸಂಸ್ಥೆಗಳು ಇಂತಹ ಬಹುತೇಕ ಕೆಲಸಗಳನ್ನು ಹೊರಗುತ್ತಿಗೆ (ಔಟ್‍ಸೋರ್ಸಿಗ್) ಮೂಲಕವೇ ಪೂರೈಸಿಕೊಳ್ಳುತ್ತವೆ.
ಕಂಟೆಂಟ್ ರೈಟಿಂಗ್ ಮಾಡಿಕೊಡುವುದಕ್ಕಾಗಿಯೇ ಹತ್ತಾರು ಕಂಪೆನಿಗಳು ಹುಟ್ಟಿಕೊಂಡಿವೆ. ಹೊಸ ವೆಬ್‍ಸೈಟ್‍ಗಳ ರಚನೆಯಾಗುವಾಗ ಅದಕ್ಕೆ ಬೇಕಾದ ಮಾಹಿತಿ ಸಿದ್ಧಪಡಿಸಿಕೊಡುವುದು, ಆಗಿಂದಾಗ್ಗೆ ಅವುಗಳನ್ನು ಅಪ್‍ಡೇಟ್ ಮಾಡುವುದು ಇವರ ಕೆಲಸಗಳಲ್ಲಿ ಒಂದು. ಅಷ್ಟೇ ಅಲ್ಲದೆ ಮಾರ್ಕೆಟಿಂಗ್ ಕಂಟೆಂಟ್, ಸಾರ್ವಜನಿಕ ಸಂಪರ್ಕದ ಸಾಮಗ್ರಿಗಳು (ಸುದ್ದಿಪತ್ರ, ಪ್ರಚಾರ ಸಾಮಗ್ರಿ, ಪತ್ರಿಕಾ ಹೇಳಿಕೆ ಇತ್ಯಾದಿ), ಆರೋಗ್ಯ, ಜೀವನಶೈಲಿ, ಹಣಕಾಸು ಮುಂತಾದ ಕ್ಷೇತ್ರಗಳಿಗೆ ಸಂಬಂಧಪಟ್ಟ ತಾಂತ್ರಿಕ ಬರವಣಿಗೆಯನ್ನೂ ಮಾಡಿಕೊಡುತ್ತವೆ. ಇಂತಹ ಸಂಸ್ಥೆಗಳಲ್ಲಿ ವೆಬ್‍ಸೈಟ್ ಕಂಟೆಂಟ್ ಬರೆಹಗಾರರು, ಸರ್ಚ್ ಇಂಜಿನಿ ಆಪ್ಟಿಮೈಸೇಶನ್ (ಎಸ್‍ಇಒ) ರೈಟರ್ಸ್, ಜಾಹೀರಾತು ಪ್ರತಿ ಬರೆಹಗಾರರು, ಸೃಜನಶೀಲ ಮತ್ತು ತಾಂತ್ರಿಕ ಬರೆಹಗಾರರು, ಶೈಕ್ಷಣಿಕ ಬರೆಹಗಾರರು, ಛಾಯಾ ಬರೆಹಗಾರರು (ಘೋಸ್ಟ್ ರೈಟರ್ಸ್), ಚಿತ್ರಕಥೆ ಬರೆಹಗಾರರು ಮುಂತಾದ ಹತ್ತಾರು ಹುದ್ದೆಗಳಿವೆ. ಸ್ವತಂತ್ರವಾಗಿದ್ದು ಹವ್ಯಾಸಿ ಬರೆಹಗಾರರಾಗಿಯೂ ಈ ಕ್ಷೇತ್ರದಲ್ಲಿ ಉತ್ತಮ ಆದಾಯ ಗಳಿಸಬಹುದು.
ಅರ್ಹತೆಯೇನು?
ಈ ಕ್ಷೇತ್ರ ಪ್ರವೇಶಿಸಲು ಇಂತಹದೇ ವಿದ್ಯಾರ್ಹತೆ ಬೇಕೆಂಬ ನಿಯಮವೇನಿಲ್ಲ. ಯಾವುದಾದರೊಂದು ಪದವಿ ಹೊಂದಿದ್ದರೆ ಸಾಕು. ಪದವಿಗಿಂತಲೂ ಕೌಶಲ ಬಯಸುವ ಇನ್ನೊಂದು ಕ್ಷೇತ್ರ ಇದು. ತಪ್ಪಿಲ್ಲದೆ, ಇನ್ನೊಬ್ಬರಿಗೆ ಸುಲಭವಾಗಿ ಅರ್ಥವಾಗುವಂತೆ ಯಾವುದೇ ವಿಷಯವನ್ನು ಬರೆಯುವುದೇ ಇದು ಬಯಸುವ ಪ್ರಮುಖ ಕೌಶಲ. ಇದಕ್ಕೆ ಪೂರಕವಾಗಿ ಸಂಶೋಧನ ಮನೋಭಾವ, ಸ್ಪಷ್ಟ-ಸರಳ ಅಭಿವ್ಯಕ್ತಿ ಬೇಕೇಬೇಕು. ಸಾಹಿತ್ಯ ಅಥವಾ ಪತ್ರಿಕೋದ್ಯಮ ವಿಷಯಗಳಲ್ಲಿ ಪದವಿ ಪಡೆದವರಿಗೆ ಇಲ್ಲಿ ಆದ್ಯತೆಯಿದೆ.
ಐಐಎಂ ಸ್ಕಿಲ್ಸ್, ಯುಡೆಮಿ, ಹೆನ್ರಿ ಹಾರ್ವಿನ್ ಮೊದಲಾದ ಖಾಸಗಿ ಸಂಸ್ಥೆಗಳು ಕಂಟೆಂಟ್ ರೈಟಿಂಗ್‍ನಲ್ಲಿ ವಿಶೇಷ ಆನ್ಲೈನ್ ಕೋರ್ಸುಗಳನ್ನು ನೀಡುತ್ತಿವೆ. ಆಸಕ್ತರು ಇವುಗಳ ಕಡೆಗೂ ಗಮನ ಹರಿಸಬಹುದು. ಕಂಟೆಂಟ್ ರೈಟಿಂಗ್‍ನ ವಿಧಾನ, ಸ್ವರೂಪ, ತಾಂತ್ರಿಕತೆಗಳನ್ನು ಅರ್ಥಮಾಡಿಕೊಳ್ಳಲು ಇವು ಸಹಕಾರಿಯಾಗಬಹುದು.
ಆ್ಯನಿಮೇಷನ್ & ವಿಶುವಲ್ ಇಫೆಕ್ಟ್ಸ್
ಆ್ಯನಿಮೇಷನ್ & ವಿಎಫ್‍ಎಕ್ಸ್ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬಹುಬಿಲಿಯನ್ ಉದ್ಯಮ. ಭಾರತದ ಇಂದಿನ ಅನಿಮೇಶನ್-ವಿಎಫ್‍ಎಕ್ಸ್ ರಂಗದ ಒಟ್ಟಾರೆ ವ್ಯವಹಾರ ರೂ. 9191 ಕೋಟಿ. ಇದು ಮುಂದಿನ ಐದು ವರ್ಷಗಳಲ್ಲಿ ರೂ. 19,428 ಕೋಟಿಗೆ ತಲುಪಬಹುದೆಂದು ಅಂದಾಜಿಸಲಾಗಿದೆ. ನಮ್ಮ ದೇಶದಲ್ಲಿ 300ಕ್ಕಿಂತಲೂ ಹೆಚ್ಚು ಅನಿಮೇಶನ್ ಸ್ಟಡಿಯೋಗಳಿವೆ. ಸಾಕಷ್ಟು ದೇಶಗಳು ಅನಿಮೇಶನ್ & ವಿಎಫ್‍ಎಕ್ಸ್ ಸೇವೆಗಳಿಗೆ ಭಾರತವನ್ನೇ ಅವಲಂಬಿಸಿವೆ.
ಅವಕಾಶಗಳೇನು?
ಅನಿಮೇಶನ್ & ವಿಎಫ್‍ಎಕ್ಸ್ ಉದ್ಯಮದ ಬಹುಪಾಲು ಜಾಗವನ್ನು ವೀಡಿಯೋ ಗೇಮಿಂಗ್, ಕಿರುತೆರೆ ಹಾಗೂ ಸಿನಿಮಾಗಳು ಆಕ್ರಮಿಸಿಕೊಂಡಿವೆ. ಮಕ್ಕಳಿಗೆ ಸಂಬಂಧಿಸಿದ ಮನೋರಂಜನಾ ಕ್ಷೇತ್ರದಲ್ಲಿ ಅನಿಮೇಶನಿಗೆ ಭಾರೀ ಬೇಡಿಕೆ. ಬಾಹುಬಲಿ, ಕುಂಗ್‍ಫೂ ಪಾಂಡ, ಐಸ್‍ಏಜ್, ಚೋಟಾ ಭೀಮ್, ಟಾಮ್ & ಜೆರಿ ನೋಡಿ ಆನಂದಿಸುವವರಿಗೆ ವಯಸ್ಸಿನ ಭೇದವೂ ಇಲ್ಲ.
2ಡಿ/3ಡಿ ಅನಿಮೇಟರ್, ಗ್ರಾಫಿಕ್ ಡಿಸೈನರ್, ಇಮೇಜ್ ಎಡಿಟರ್, ಮಾಡೆಲರ್, ಕ್ಯಾರೆಕ್ಟರ್ ಅನಿಮೇಟರ್, ಲೇಔಟ್ ಅನಾಲಿಸ್ಟ್, ವೆಬ್ ಡಿಸೈನರ್, ವಿಶುವಲೈಸರ್, ಕಂಟೆಂಟ್ ಡೆವಲಪರ್ ಹೀಗೆ ಈ ಕ್ಷೇತ್ರದಲ್ಲಿ ನೂರೆಂಟು ಉದ್ಯೋಗಗಳಿವೆ.
ಅರ್ಹತೆಯೇನು?
ಅನಿಮೇಶನ್ ಮತ್ತು ಗ್ರಾಫಿಕ್ಸ್ ವಿಶೇಷ ತರಬೇತಿಯನ್ನು ಬಯಸುವ ಕ್ಷೇತ್ರ. ಸೃಜನಶೀಲ ಮನಸ್ಸು, ಸೂಕ್ಷ್ಮ ಗ್ರಹಿಕೆ, ಕಲ್ಪನಾಶಕ್ತಿಗಳೆಲ್ಲ ಇದು ಬಯಸುವ ಗುಣಗಳಾಗಿದ್ದರೂ, ಇವುಗಳಿಗೆ ಪೂರಕವಾಗಿ ಉತ್ತಮ ತರಬೇತಿ ಪಡೆಯುವುದೂ ಮುಖ್ಯ. ಅನಿಮೇಶನ್‍ನಲ್ಲಿ ಈಗ ವಿಶೇಷ ಕೋರ್ಸುಗಳು ಇವೆ. ಕೊಂಚ ಹೆಚ್ಚಿನ ಶ್ರಮ ಮತ್ತು ಆರ್ಥಿಕ ಶಕ್ತಿಯನ್ನು ಬಯಸುವ ಕೋರ್ಸುಗಳು ಇವು.
ಅಹಮದಾಬಾದಿನ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಡಿಸೈನ್, ಕೋಲ್ಕತದ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಫಿಲ್ಮ್ & ಫೈನ್ ಆಟ್ರ್ಸ್, ಮಾಯಾ ಇನ್ಸ್‍ಟಿಟ್ಯೂಟ್ ಆಫ್ ಅಡ್ವಾನ್ಸ್‍ಡ್ ಸಿನಿಮಾಟಿಕ್ (ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿದೆ), ಅರೆನಾ ಅನಿಮೇಶನ್, ಮುಂಬೈಯ ಎಫ್‍ಎಕ್ಸ್ ಸ್ಕೂಲ್, ತಿರುವನಂತಪುರದ ಟೂನ್ಸ್ ಅಕಾಡೆಮಿ, ಬೆಂಗಳೂರಿನ ಪಿಕಾಸೋ ಅನಿಮೇಶನ್ ಕಾಲೇಜ್, ಜೀ ಇನ್ಸ್‍ಟಿಟ್ಯೂಟ್ ಕ್ರಿಯೇಟಿವ್ ಆಟ್ರ್ಸ್ ಕೆಲವು ಪ್ರಮುಖ ತರಬೇತಿ ಸಂಸ್ಥೆಗಳು.
ಆರ್ಥಿಕ ಕುಸಿತ ಹಾಗೂ ಕೊರೋನಾದ ಸಂಕಷ್ಟದಿಂದಾಗಿ ಉದ್ಯೋಗ ಜಗತ್ತು ಕೊಂಚ ದುರ್ಬಲವಾಗಿದೆ. ಆದರೆ ಇಲ್ಲಿ ಹೇಳಿರುವ ಉದ್ಯೋಗ ಕ್ಷೇತ್ರಗಳಿಗೆ ಆಧುನಿಕ ಕಾಲದಲ್ಲಿ ಬೇಡಿಕೆ ಕುಸಿಯುವ ಸಾಧ್ಯತೆ ತುಂಬ ಕಡಿಮೆ. ಉದ್ಯಮ ಜಗತ್ತು ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಂತೆಯೇ ಇವೆಲ್ಲ ಮತ್ತೆ ಪುಟಿದೇಳುತ್ತವೆ. ತಾಳ್ಮೆ, ಆಸಕ್ತಿ ಮತ್ತು ಆತ್ಮವಿಶ್ವಾಸವುಳ್ಳವರಿಗೆ ಬದುಕುವುದಕ್ಕೆ ಸಾವಿರ ದಾರಿಗಳು.
- ಸಿಬಂತಿ ಪದ್ಮನಾಭ ಕೆ. ವಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ