15 ಡಿಸೆಂಬರ್ 2020ರ 'ಉದಯವಾಣಿ' ಪತ್ರಿಕೆಯಲ್ಲಿ ಪ್ರಕಟವಾದ ಬರಹ
ವಿದ್ಯಾರ್ಥಿಗಳಿಗೆ ಗೊಂಡಾರಣ್ಯದಿಂದ ಹೊರಹೋಗಲು ದಾರಿ ಸಿಕ್ಕ ಅನುಭವ. ಅಧ್ಯಾಪಕರಿಗೆ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕ ಅನುಭವ. ಇಷ್ಟೆಲ್ಲದಕ್ಕೆ ಕಾರಣವಾದ ಕೊರೋನ ಮಾಯಾವಿಗೆ ಯಾವ ಅನುಭವ ಆಗುತ್ತಿದೆಯೋ ಗೊತ್ತಿಲ್ಲ.ತಿಂಗಳಾನುಗಟ್ಟಲೆ ಮನೆಗಳಲ್ಲೇ ಇದ್ದು ಚಡಪಡಿಸುತ್ತಿದ್ದ ವಿದ್ಯಾರ್ಥಿಗಳು ಈಗ ಮೆಲ್ಲಮೆಲ್ಲನೆ ಹೊರಗಡಿಯಿಡುವ ಕಾಲ. ಮೊಬೈಲ್, ಲ್ಯಾಪ್‍ಟಾಪ್ ನೋಡಿಕೊಂಡು ಪಾಠ ಹೇಳುತ್ತಿದ್ದ ಮೇಷ್ಟ್ರುಗಳು ಮತ್ತೆ ವಿದ್ಯಾರ್ಥಿಗಳನ್ನೇ ಕಂಡು ಬದುಕಿದೆಯಾ ಬಡಜೀವವೇ ಎಂದು ನಿರಾಳವಾಗುವ ಕಾಲ.
ಹಾಗೆಂದು ಎರಡೂ ಕಡೆಯವರ ಸಂಕಷ್ಟಗಳು ಮುಗಿದವೆಂದಲ್ಲ. ಈ ತರಗತಿ ಭಾಗ್ಯ ಯೋಜನೆಯ ಫಲಾನುಭವಿಗಳು ಕೊನೇ ವರ್ಷದಲ್ಲಿ ಓದುತ್ತಿರುವ ಡಿಗ್ರಿ ಮತ್ತು ಯುನಿವರ್ಸಿಟಿ ವಿದ್ಯಾರ್ಥಿಗಳು ಮತ್ತವರಿಗೆ ಪಾಠ ಮಾಡುತ್ತಿರುವ ಅಧ್ಯಾಪಕರು ಮಾತ್ರ. ಅದರಲ್ಲೂ ವಿದ್ಯಾರ್ಥಿಗಳಿಗೆ ಇದು ಕಡ್ಡಾಯವೇನಲ್ಲ. ತರಗತಿಗೆ ಬರುವುದು ಬಿಡುವುದು ಅವರ ನಿರ್ಧಾರ. ಕಾಲೇಜಿಗೆ ಬರಲೇಬೇಕೆಂದು ಮೇಷ್ಟ್ರುಗಳು ಒತ್ತಾಯಿಸುವ ಹಾಗೆ ಇಲ್ಲ. ಬಂದವರಿಗೆ ಪಾಠ ಮಾಡಬೇಕು. ಬಾರದವರಿಗೂ ಪಾಠಗಳು ಮುಂದುವರಿಯಬೇಕು.
ವಿದ್ಯಾರ್ಥಿಗಳಿಗೇನೋ ಕಾಲೇಜಿಗೆ ಹೋಗುವುದಕ್ಕೆ ಅನುಮತಿ ಸಿಕ್ಕಿದೆ. ಆದರೆ ಅವರೆದುರು ಆಯ್ಕೆಗಳಿವೆ. ಸಿಗ್ನಲ್ ತೆರೆದ ತಕ್ಷಣ ಮುನ್ನುಗ್ಗುವ ವಾಹನಗಳ ಉತ್ಸಾಹ ಅವರಲ್ಲಿ ಕಾಣುತ್ತಿಲ್ಲ. ಅವರಿಗೇನೋ ಮತ್ತೆ ಕ್ಲಾಸ್ ಅಟೆಂಡ್ ಆಗಬೇಕು, ಮೊದಲಿನಂತೆ ತಮ್ಮ ಗೆಳೆಯರ ಜತೆ ಬೆರೆಯಬೇಕೆಂಬ ಆಸೆ. ಆದರೆ ಅನೇಕರಿಗೆ ಮನೆಯಿಂದಲೇ ಅನುಮತಿ ಇಲ್ಲ. ‘ಅಪ್ಪ-ಅಮ್ಮ ಬೇಡ ಅಂತಿದ್ದಾರೆ ಸಾರ್’ ಎಂಬುದು ಹಲವು ಹುಡುಗರ ಅಳಲು. ಹೇಗೂ ಮನೆಯಿಂದಲೇ ಪಾಠ ಕೇಳಬಹುದು ಎಂಬ ಆಯ್ಕೆ ಇರುವುದರಿಂದ ಈ ಜಂಜಾಟದ ಓಡಾಟ ಯಾಕೆ ಎಂದು ಯೋಚಿಸುವವರೂ ಹಲವರು.
ತರಗತಿಗೆ ಹಾಜರಾಗುವುದಕ್ಕೆ ಅವರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿರಬೇಕು ಎಂಬ ಸೂಚನೆ ಇರುವುದೂ ಈ ನಿರುತ್ಸಾಹಕ್ಕೆ ಇನ್ನೊಂದು ಕಾರಣ. ಅಯ್ಯೋ ಅಲ್ಲಿ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕು ಎಂಬ ಬೇಸರ ಕೆಲವರಿಗಾದರೆ, ತಮ್ಮ ಮಕ್ಕಳು ಟೆಸ್ಟ್ ಮಾಡಿಸಿಕೊಳ್ಳುವುದೇ ಬೇಡ ಎಂಬ ಆತಂಕ ಕೆಲವು ಅಪ್ಪ-ಅಮ್ಮಂದಿರದ್ದು. ದೂರದೂರುಗಳಿಂದ ಬರುವವರಿಗೆ ಹಾಸ್ಟೆಲ್ ಕೂಡ ತೆರೆದಿರಬೇಕು. ‘ಹಾಸ್ಟೆಲ್ ತೆರೆದಿದ್ದಾರೆ, ಮೆಸ್ ಇನ್ನೂ ಓಪನ್ ಆಗಿಲ್ಲ. ಊಟಕ್ಕೇನು ಮಾಡೋಣ ಸಾರ್’ ಮತ್ತೆ ಹುಡುಗರ ದೂರು. ಇಂತಿಷ್ಟು ಮಕ್ಕಳಿರುತ್ತಾರೆ ಎಂದು ಖಚಿತವಾಗದೆ ಅಡುಗೆ ಆರಂಭಿಸುವುದಕ್ಕೆ ಹಾಸ್ಟೆಲಿನವರಿಗೂ ಸಮಸ್ಯೆ.
ಅಂತೂ ಎಲ್ಲದರ ನಡುವೆ ಅನುಕೂಲ ಮಾಡಿಕೊಂಡು ತರಗತಿಗೆ ಬಂದು ಕುಳಿತಿರುವ ಹುಡುಗರಿಗೆ ಪ್ರತ್ಯಕ್ಷ ಪಾಠ ಮಾಡುವ ಸವಾಲು ಮೇಷ್ಟ್ರುಗಳದ್ದು. ವಿದ್ಯಾರ್ಥಿಗಳು ಒಂದು ಸುದೀರ್ಘ ರಜೆ ಮುಗಿಸಿ ಬಂದವರು. ಇಲ್ಲಿಯವರೆಗೆ ಆನ್ಲೈನ್ ಪಾಠ ನಡೆದಿರುತ್ತದೆ ಎಂದಿದ್ದರೂ, ಅವರಲ್ಲೆಷ್ಟು ಮಂದಿ ಅದನ್ನು ಕೇಳಿಸಿಕೊಂಡಿದ್ದಾರೆ, ಕೇಳಿಸಿಕೊಂಡವರಿಗೆಷ್ಟು ಅರ್ಥವಾಗಿದೆ ಎಂಬುದು ಮೇಷ್ಟ್ರುಗಳ ಗೊಂದಲ. ಮತ್ತೆ ಲಾಗಾಯ್ತಿನಿಂದ ಪಾಠ ಆರಂಭಿಸುವಂತಿಲ್ಲ. ಆದಲೇ ಅರ್ಧ ಸೆಮಿಸ್ಟರು ಮುಗಿದಿದೆ. ಅಲ್ಲಿಂದಲೇ ಪಾಠ ಮುಂದುವರಿಯಬೇಕು.
‘ಕಳೆದ ಕ್ಲಾಸಿನಲ್ಲಿ ಹೇಳಿದಂತೆ...’ ಅಂತ ಶುರುಮಾಡೋ ಮೇಷ್ಟ್ರು ‘ಕಳೆದ ಆನ್ಲೈನ್ ಕ್ಲಾಸಿನಲ್ಲಿ ಹೇಳಿದಂತೆ...’ ಅಂತ ವರಸೆಯನ್ನು ಬದಲಾಯಿಸಿಕೊಳ್ಳಬೇಕು. ಈಗ ಮುಖಮುಖ ನೋಡಿಕೊಳ್ಳುವ ಸರದಿ ಹುಡುಗರದ್ದು. ಯಾವ ಕಡೆ ಕತ್ತು ತಿರುಗಿಸಿದರೂ ಕಳೆದ ಆನ್ಲೈನ್ ಕ್ಲಾಸಲ್ಲಿ ಮೇಷ್ಟ್ರು ಏನು ಹೇಳಿದ್ದಾರೆ ಅನ್ನೋದು ನೆನಪಾಗಲೊಲ್ಲದು. ಅಂತೂ ಅವರಿಗೊಂದೆರಡು ದಿನ ಸುದೀರ್ಘ ಪೀಠಿಕೆ ಹಾಕಿ ಮತ್ತೆ ಸಿಲೆಬಸ್ಸಿಗೆ ಬರಬೇಕು.
ಇಷ್ಟಾದಮೇಲೂ ತರಗತಿಯಲ್ಲಿರುವುದು ಶೇ. 20-30ರಷ್ಟು ವಿದ್ಯಾರ್ಥಿಗಳು. ಉಳಿದವರನ್ನು ಬಿಟ್ಟುಬಿಡುವ ಹಾಗಿಲ್ಲ. ಅವರಿಗೂ ಪಾಠ ತಲುಪಿಸಬೇಕು. ಒಂದೋ ತರಗತಿಯಲ್ಲಿ ಮಾಡಿದ್ದನ್ನು ಮತ್ತೊಮ್ಮೆ ಆನ್ಲೈನ್ ಮಾಡಬೇಕು. ಅಥವಾ ತರಗತಿಯಲ್ಲಿ ಮಾಡುತ್ತಿರುವುದೇ ನೇರ ಪ್ರಸಾರ ಆಗಬೇಕು. ಅಂದರೆ ಪಾಠ ಮಾಡುತ್ತಿರುವ ಅಧ್ಯಾಪಕ ಎದುರಿಗೆ ಮೊಬೈಲ್ ಅಥವಾ ಲ್ಯಾಪ್‍ಟಾಪ್ ಇಟ್ಟುಕೊಳ್ಳಬೇಕು. ಆನ್ಲೈನಿಗೆ ಬಂದಿರುವ ವಿದ್ಯಾರ್ಥಿಗಳು ಪಾಠ ಕೇಳಿಸಿಕೊಳ್ಳಬೇಕೆಂದರೆ ಅಧ್ಯಾಪಕ ನಿಂತಲ್ಲೇ ನಿಂತಿರಬೇಕು. ನಿಂತಲ್ಲೇ ನಿಂತರೆ ಅನೇಕ ಅಧ್ಯಾಪಕರಿಗೆ ಮಾತೇ ಹೊರಡದು. ಅವರಿಗೆ ಬೋರ್ಡು ಬಳಕೆ ಮಾಡಿ ಅಭ್ಯಾಸ. ಪ್ರತ್ಯಕ್ಷ ತರಗತಿಗೆ ಹಾಜರಾಗಿರುವವರಿಗೂ ನಿಶ್ಚಲ ಮೇಷ್ಟ್ರ ಪಾಠ ಕೇಳುವುದಕ್ಕೆ ಪರಮ ಸಂಕಷ್ಟ. ಅಧ್ಯಾಪಕ ಬೋರ್ಡನ್ನೂ ಬಳಕೆ ಮಾಡುವುದು ಆನ್ಲೈನ್ ವಿದ್ಯಾರ್ಥಿಗಳಿಗೆ ಕಾಣಿಸುವಂತೆ ಮಾಡಬಹುದು. ಅದಕ್ಕೆ ಬೇರೆ ವ್ಯವಸ್ಥೆ ಬೇಕು. ಅಷ್ಟೊಂದು ವ್ಯವಸ್ಥೆ ನಮ್ಮ ಕಾಲೇಜುಗಳಲ್ಲಿದೆಯಾ?
ಕಡೇ ಪಕ್ಷ ತರಗತಿಯಲ್ಲಿ ಪಾಠ ಮಾಡಿದ್ದರ ಆಡಿಯೋವನ್ನಾದರೂ ರೆಕಾರ್ಡ್ ಮಾಡಿ ಮನೆಯಲ್ಲಿ ಕುಳಿತಿರುವ ಭಾಗಶಃ ವಿದ್ಯಾರ್ಥಿಗಳಿಗೆ ವಾಟ್ಸಾಪ್ ಮೂಲಕ ತಲುಪಿಸಬಹುದು. ಕಾಲರ್ ಮೈಕ್ ಅನ್ನು ಮೊಬೈಲಿಗೆ ತಗುಲಿಸಿ ಈ ಕೆಲಸ ಮಾಡಬಹುದು. ನಡುವೆ ಫೋನ್ ಬಾರದಂತೆ ಅಧ್ಯಾಪಕ ಮುನ್ನೆಚ್ಚರಿಕೆ ವಹಿಸಬೇಕು. ಫೋನ್ ಬಂದರೆ ಅಲ್ಲಿಯವರೆಗಿನ ರೆಕಾರ್ಡಿಂಗ್ ಢಮಾರ್. ಈ ಎಲ್ಲ ಸರ್ಕಸ್ ಮಾಡುವ ತಾಂತ್ರಿಕತೆಗಳ ಪರಿಚಯ ಎಲ್ಲ ಅಧ್ಯಾಪಕರಿಗೂ ಇದೆಯೇ? ಅದು ಬೇರೆ ಮಾತು.
ಅಂತೂ ದಿನೇದಿನೇ ವಿದ್ಯಾರ್ಥಿಗಳ ಮತ್ತವರ ಪೋಷಕರ ಆತಂಕ ನಿಧಾನವಾಗಿ ಕರಗುತ್ತಿರುವುದು ಸದ್ಯದ ಆಶಾವಾದ. ತಮ್ಮ ಕ್ಲಾಸ್ಮೇಟುಗಳು ಧೈರ್ಯ ಮಾಡಿರುವುದು ನೋಡಿ ಉಳಿದಿರುವವರಿಗೂ ಉತ್ಸಾಹ ಮೂಡುತ್ತಿದೆ. ತರಗತಿಗಳಲ್ಲಿ ಅಟೆಂಡೆನ್ಸ್ ದಿನೇದಿನೇ ಏರುತ್ತಿದೆ. ಎಲ್ಲರೂ ಬಂದು ಹಾಜರ್ ಸಾರ್ ಎನ್ನುವವರೆಗೆ ಮೇಷ್ಟ್ರ ಪರದಾಟ ಮಾತ್ರ ತಪ್ಪಿದ್ದಲ್ಲ.
- ಸಿಬಂತಿ ಪದ್ಮನಾಭ ಕೆ. ವಿ.
1 ಕಾಮೆಂಟ್:
ಹೌದು, ಸಧ್ಯಕ್ಕೆ ಈ ಪರದಾಟ ತಪ್ಪುವ ಲಕ್ಷಣವಿಲ್ಲ.ಪ್ರಸ್ತುತ ಸನ್ನಿವೇಶಕ್ಕೆ ಕನ್ನಡಿ ಹಿಡಿದಂತಿದೆ ಈ ಲೇಖನ...
ಕಾಮೆಂಟ್ ಪೋಸ್ಟ್ ಮಾಡಿ