ಸೆಪ್ಟೆಂಬರ್ 2020ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾದ ಲೇಖನ
ಒಬ್ಬ ಕೆಟ್ಟ ಶಿಕ್ಷಕ ಸದಾ ಜಗಳವಾಡುವುದರಲ್ಲಿ, ನೆಪಗಳನ್ನು ಹುಡುಕುವುದರಲ್ಲಿ ಕಾಲ ಕಳೆಯುತ್ತಾನೆ. ಸಾಮಾನ್ಯ ಶಿಕ್ಷಕ ವಿಷಯವನ್ನು ವಿವರಿಸಿ ಕಲಿಸುತ್ತಾನೆ. ಉತ್ತಮ ಶಿಕ್ಷಕ ಮಕ್ಕಳನ್ನು ಉದ್ದೀಪನಗೊಳಿಸಿ ಅವರೇ ಸ್ವತಃ ಕಲಿತುಕೊಳ್ಳುವಂತೆ ಮಾಡುತ್ತಾನೆ – ಎಂಬ ಒಂದು ಮಾತಿದೆ. ಸಾಮಾನ್ಯ ಶಿಕ್ಷಕರಿಗೂ ಶ್ರೇಷ್ಠ ಶಿಕ್ಷಕರಿಗೂ ಇರುವ ವ್ಯತ್ಯಾಸ ಇಷ್ಟೇ. ಪಾಠ ಮಾಡುವವರೆಲ್ಲರೂ ಗುರುಗಳಾಗಲಾರರು. ಅದು ಕೇವಲ ಉದ್ಯೋಗ ಸೂಚಕ ಪದವಲ್ಲ. ಅದೊಂದು ಸ್ವಯಂಸಿದ್ಧಿ. ‘ವರ್ಣಮಾತ್ರಂ ಕಲಿಸಿದಾತಂ ಗುರು’ – ಒಂದಕ್ಷರವನ್ನು ಕಲಿಸಿದಾತನೂ ಗುರುವೇ. ಆದರೆ ಆ ಕಲಿಕೆ ಬದುಕನ್ನು ಪ್ರಭಾವಿಸಿರಬೇಕು ಅಷ್ಟೇ. ವ್ಯಕ್ತಿಯನ್ನು ಉದ್ದೀಪಿಸುವುದು ಎಂದರೆ ಅದೇ ತಾನೇ?
“ಆರೋಗ್ಯವಂತರಾದ ಮತ್ತು ತಿಳುವಳಿಕೆಯುಳ್ಳ ಒಂದು ಡಜನ್ ಶಿಶುಗಳನ್ನೂ, ಅವನ್ನು ಬೆಳೆಸುವುದಕ್ಕೆ ಬೇಕಾದ ನನ್ನದೇ ಕಲ್ಪನೆಯ ವಿಶೇಷ ಪ್ರಪಂಚವನ್ನೂ ಒದಗಿಸಿರಿ. ಆದ ನಾನು ಯಾವುದೇ ಪೂರ್ವ ನಿರ್ಧಾರವಿಲ್ಲದೆಯೇ, ಅವರಲ್ಲೊಬ್ಬನನ್ನು ಆಯ್ದು- ಅವನ ಪ್ರತಿಭೆ, ಒಲವು, ಪ್ರವೃತ್ತಿ, ಸಾಮಥ್ರ್ಯ, ವೃತ್ತಿ ಹಾಗೂ ವಂಶದ ಪರಂಪರೆಯು ಯಾವುದೇ ಇರಲಿ- ಆತನನ್ನು ತಜ್ಞ ವೈದ್ಯನೋ, ನ್ಯಾಯವಾದಿಯೋ, ಕಲಾವಿದನೋ, ವ್ಯಾಪಾರಿಯೋ, ನಾಯಕನೋ, ಅಷ್ಟೇ ಏಕೆ ಭಿಕ್ಷುಕನೋ ಅಥವಾ ಕಳ್ಳನೋ ಆಗುವಂತೆ ತರಬೇತಿ ನೀಡುವುದಾಗಿ ಭರವಸೆ ಕೊಡುತ್ತೇನೆ” – ಎಂದು ಜೆ. ಬಿ. ವಾಟ್ಸನ್ ಎಂಬ ವರ್ತನಾವಾದಿ ಹೇಳಿದ್ದುಂಟು.
ಒಬ್ಬ ವ್ಯಕ್ತಿಯ ಬದುಕಿನಲ್ಲಿ ಶಿಕ್ಷಕನ ಪಾತ್ರವೇನು ಎಂಬುದನ್ನು ಬಹುಶಃ ಇದಕ್ಕಿಂತ ಸಮರ್ಥವಾಗಿ ಬಣ್ಣಿಸುವುದು ಕಷ್ಟವೇನೋ? ಶಿಕ್ಷಕ ಮನಸ್ಸು ಮಾಡಿದರೆ ಎಂತಹ ಅದ್ಭುತವನ್ನೂ ಸಾಧಿಸಬಲ್ಲ. ಆತ ಮೈಮರೆತರೆ ಎಂತಹ ಶಾಶ್ವತ ದುರಂತಗಳಿಗೂ ಕಾರಣವಾಗಬಲ್ಲ. ಅದನ್ನು ಚಿಂತಕನೊಬ್ಬ ತುಂಬ ಚೆನ್ನಾಗಿ ವಿವರಿಸುತ್ತಾನೆ: “ವೈದ್ಯರ ತಪ್ಪುಗಳು ಹೂಳಲ್ಪಡುತ್ತವೆ; ವಕೀಲರ ತಪ್ಪುಗಳು ನೇಣುಹಾಕಲ್ಪಡುತ್ತವೆ. ಆದರೆ ಶಿಕ್ಷಕರ ತಪ್ಪುಗಳು ಶತಮಾನದುದ್ದಕ್ಕೂ ಅನಾಥ ಪ್ರೇತಗಳಾಗಿ ವಿಹರಿಸುತ್ತವೆ.”
ಒಬ್ಬ ವ್ಯಕ್ತಿ ವಿದ್ಯಾಭ್ಯಾಸವನ್ನು ಪೂರೈಸಿ ಉದ್ಯೋಗ ಹಿಡಿಯುವವರೆಗಿನ ಅವಧಿಯಲ್ಲಿ ಬಹುಪಾಲು ಸಮಯವನ್ನು ತಂದೆ-ತಾಯಿಗಿಂತಲೂ ಹೆಚ್ಚು ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಜತೆಯಲ್ಲೇ ಕಳೆದಿರುತ್ತಾನೆ. ಮನೆಯೆ ಮೊದಲ ಪಾಠಶಾಲೆ, ಜನನಿಯೇ ಮೊದಲ ಗುರುವಾದರೂ ವ್ಯಕ್ತಿಯ ಒಟ್ಟಾರೆ ವರ್ತನೆಯ ಮೇಲೆ ಅಪಾರ ಪ್ರಭಾವವನ್ನು ಬೀರುವವರು ಶಿಕ್ಷಕರೇ. ಪ್ರಾಥಮಿಕ ಶಾಲಾ ಹಂತದಲ್ಲಂತೂ ಶಿಕ್ಷಕರು ಹೇಳಿದ್ದೆಲ್ಲವನ್ನೂ ಒಂದಿಷ್ಟೂ ಅನುಮಾನಿಸದೆ ಸ್ವೀಕರಿಸುವ ಮುಗ್ಧ ಮನಸ್ಸು ಮಕ್ಕಳದು. ಶಿಕ್ಷಕರು ತಪ್ಪನ್ನೇ ಹೇಳಿಕೊಟ್ಟರೂ ಅದೇ ಸರಿ ನಂಬುವ ವಯಸ್ಸು ಅದು. ಅಮಾಯಕ ಮಕ್ಕಳು ತಮ್ಮ ಗುರುಗಳ ಮೇಲೆ ಇಡುವ ವಿಶ್ವಾಸ ಆ ಮಟ್ಟದ್ದು. ಅವರದ್ದು ಹೂವು-ಬಳ್ಳಿಯ ಸಂಬಂಧ. ನೀವು ಎಷ್ಟಾದರೂ ಪದವಿಗಳನ್ನು ಪಡೆದಿರಿ, ಕ್ಷಣಕಾಲ ಕಣ್ಮುಚ್ಚಿ ಕುಳಿತು ನಿಮ್ಮ ಜೀವನದಲ್ಲಿ ನಿಜವಾಗಿಯೂ ಅತಿದೊಡ್ಡ ಪ್ರಭಾವ ಬೀರಿದವರು ಯಾರೆಂದು ಯೋಚಿಸಿದರೆ ಮನಸ್ಸು ಅನಾಯಾಸವಾಗಿ ಪ್ರಾಥಮಿಕ ಶಾಲಾ ದಿನಗಳ ಕಡೆಗೇ ಹೊರಳುತ್ತದೆ.
ಗುರು ಗೋವಿಂದ ದೋವೂ ಖಡೇ ಕಾಕೇ ಲಾಗೂ ಪಾಯ್|
ಬಲಿಹಾರಿ ಗುರು ಆಪ್‍ನೀ ಗೋವಿಂದ ದಿಯೋ ಬತಾಯ್||
ಎಂಬುದು ಸಂತ ಕಬೀರರ ಪ್ರಸಿದ್ಧ ದ್ವಿಪದಿ. ಗುರು ಹಾಗೂ ದೇವರು ಜತೆಗೇ ನಿಂತಿದ್ದರೆ ನೀನು ಮೊದಲು ಯಾರಿಗೆ ನಮಸ್ಕರಿಸುತ್ತೀ ಎಂದು ಕಬೀರರನ್ನು ಯಾರೋ ಕೇಳಿದರಂತೆ. ನಾನು ಮೊದಲು ಗುರುಗಳಿಗೇ ನಮಸ್ಕರಿಸುತ್ತೇನೆ, ಏಕೆಂದರೆ ದೇವರನ್ನು ತೋರಿಸಿಕೊಟ್ಟವರು ಗುರುಗಳು ಎಂದರಂತೆ ಕಬೀರರು.
ಗುರುವಿಗೆ ಸಮಾಜದಲ್ಲಿ ಇರುವ ಸ್ಥಾನವೇನೋ ದೊಡ್ಡದೇ. ಆದರೆ ಆ ಸ್ಥಾನವನ್ನು ಉಳಿಸಿಕೊಳ್ಳುವುದೂ ಅವನÀ ಜವಾಬ್ದಾರಿ. ಅಧ್ಯಾಪಕರ ಬಗ್ಗೆ ತೀರಾ ಕನಿಷ್ಟವೆನಿಸುವ ಮಾತುಗಳೂ ಸಮಾಜದಲ್ಲಿ ಆಗಾಗ ಕೇಳಿ ಬರುವುದಿದೆ. ಅದಕ್ಕೆ ಗುರು ಎಂಬ ಸ್ಥಾನ ಶಿಕ್ಷಕ ಎಂಬ ವೃತ್ತಿಯಾಗಿ ಬದಲಾಗಿರುವುದೇ ಪ್ರಮುಖ ಕಾರಣ. ಜೀವನೋಪಾಯಕ್ಕೆ ಯಾವುದಾದರೂ ವೃತ್ತಿ ಅಗತ್ಯ. ಅಧ್ಯಾಪನವನ್ನು ಆರಿಸಿಕೊಂಡವರಿಗೂ ಸಂಬಳ ಬೇಕು. ಆದರೆ ಸಂಬಳವನ್ನು ಪಡೆಯುವುದಷ್ಟೇ ಶಿಕ್ಷಕನ ಪ್ರಮುಖ ಗುರಿ ಆದಾಗ ಅವನ ವೃತ್ತಿಯ ನಿಜವಾದ ಉದ್ದೇಶ ಹಿನ್ನೆಲೆಗೆ ಸರಿಯುತ್ತದೆ.
‘ಬಹುತೇಕ ಶಿಕ್ಷಕರು ಐಶ್ವರ್ಯವನ್ನು ಬೆನ್ನು ಹತ್ತಿಕೊಂಡು ಹೋಗುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ತಮ್ಮ ಶಿಷ್ಯರ ಭವಿಷ್ಯದ ಕಲ್ಪನೆ ಬಿಸಿಲುಕುದುರೆಯಾಗುತ್ತದೆ’ ಎಂದಿದ್ದಾರೆ ಡಾ. ಡಿ. ಎಂ. ನಂಜುಂಡಪ್ಪನವರು. ಗುರುವು ಶಿಷ್ಯನ ಚಿತ್ತಾಪಹಾರಕನಾಗಿರಬೇಕೆಂದು ನಿರೀಕ್ಷಿಸುವ ಹೊತ್ತಲ್ಲಿ ಆತ ವಿತ್ತಾಪಹಾರಕನಾಗಿ ಬದಲಾದರೆ ಅವನ ಬಗ್ಗೆ ಸಮಾಜದಲ್ಲಿ ಯಾವ ಗೌರವ ತಾನೇ ಉಳಿಯಬಲ್ಲುದು?
ಡಾ. ಡಿ. ಎಂ. ನಂಜುಂಡಪ್ಪನವರು ಇನ್ನೊಂದು ಕಡೆ ಬರೆಯುತ್ತಾರೆ: ‘ಶಿಕ್ಷಕ ತಾನು ಮೊದಲು ನೀತಿವಂತನಾಗಿರಬೇಕು. ಶಿಕ್ಷಕನೇ ಅನೀತಿ ಮಾರ್ಗದಲ್ಲಿ ನಡೆಯುತ್ತಿದ್ದರೆ ವಿದ್ಯಾರ್ಥಿಗಳಿಗೆ ತಿಳಿಹೇಳುವ ನೈತಿಕ ಆಧಾರವೇ ಆತನಲ್ಲಿ ಲಯವಾಗಿ ಹೋಗುತ್ತದೆ. ಶಿಕ್ಷಕರು ಆದರ್ಶರಾಗಿ ಜೀವನ ನಡೆಸದಿದ್ದರೆ ವಿದ್ಯಾರ್ಥಿಗಳು ಅಂತಹ ಶಿಕ್ಷಕರಿಗೆ ಯಾವ ರೀತಿಯ ಗೌರವಗಳನ್ನೂ ನೀಡಲಾರರು. ಅಲ್ಲದೆ ವಿದ್ಯಾರ್ಥಿಗಳು ಸಹ ಆದರ್ಶರಹಿತರಾಗುತ್ತಾರೆ’.
ಶಿಕ್ಷಕನಿಂದ ಲೈಂಗಿಕ ಕಿರುಕುಳ, ಶಿಕ್ಷಕನಿಂದಲೇ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಇತ್ಯಾದಿ ಸುದ್ದಿಗಳನ್ನು ದಿನನಿತ್ಯ ಎಂಬಂತೆ ಕೇಳುತ್ತೇವೆ. ಯಾಕೆ ಹೀಗಾಗುತ್ತಿದೆ? ಅತ್ಯುನ್ನತ ನೈತಿಕ ಮೌಲ್ಯಗಳನ್ನು ತಾನು ಹೊಂದುತ್ತಲೇ ತನ್ನನ್ನು ನಂಬಿರುವ ವಿದ್ಯಾರ್ಥಿಗಳಿಗೂ ಅವನ್ನು ದಾಟಿಸುವ ಮಹತ್ತರ ಹೊಣೆಗಾರಿಕೆ ಗುರುವಿನದ್ದು. ಅವನೇ ಅನೈತಿಕ ಕೆಲಸಗಳಿಗೆ ಜಾರಿದರೆ ವಿದ್ಯಾರ್ಥಿಗಳು ಯಾವ ಮಾದರಿಯನ್ನು ಅನುಸರಿಸಬೇಕು? ಬೇಲಿಯೇ ಎದ್ದು ಹೊಲವನ್ನು ಮೇಯುವುದಕ್ಕೆ ಇದರಿಂದ ದೊಡ್ಡ ನಿದರ್ಶನ ಇದೆಯೇ? ವಿದ್ಯಾರ್ಥಿಗಳಿಗೆ ಅಧ್ಯಾಪಕನೇ ನಿಜವಾದ ಪಠ್ಯಪುಸ್ತಕ. ಕೈಯಲ್ಲಿರುವ ಪುಸ್ತಕಗಳಿಗಿಂತಲೂ ಎದುರಿಗಿರುವ ಗುರುವನ್ನೇ ಅವರು ಹೆಚ್ಚು ಓದುತ್ತಾರೆ ಮತ್ತು ಅನುಕರಿಸುತ್ತಾರೆ. ಪುಸ್ತಕ ತಪ್ಪಿದರೆ ಮಸ್ತಕದ ಗತಿಯೇನು?
ಶಿಕ್ಷಕರ ವಲಯದ ಬಗ್ಗೆ ಸಮಾಜ ಗೌರವ ಕಳೆದುಕೊಳ್ಳುವುದರ ಹಿಂದೆ ಇರುವ ಇನ್ನೊಂದು ಪ್ರಮುಖ ಕಾರಣವನ್ನೂ ನಂಜುಂಡಪ್ಪನವರು ಗುರುತಿಸಿದ್ದುಂಟು: ‘ಇಂದು ಪ್ರತಿಭಾಹೀನರು, ವೃತ್ತಿನಿಷ್ಠೆ ಇಲ್ಲದವರು ಅಧ್ಯಾಪಕ ವೃತ್ತಿಗೆ ಪ್ರವೇಶಿಸುವುದು ಹೆಚ್ಚಾಗುತಿದೆ. ಜಾತಿ, ಕೋಮು, ಶಿಫಾರಸು, ರಾಜಕೀಯವೇ ಅರ್ಹತೆಯಾಗಿದೆ’. ಶಿಕ್ಷಕವೃತ್ತಿಯನ್ನು ಆಯ್ಕೆ ಮಾಡಿಹೋಗುವವರ ವರ್ಗ ಒಂದು ಕಡೆಯಾದರೆ, ಬೇರೆ ಯಾವ ಉದ್ಯೋಗ ದೊರೆಯದ ಮೇಲೆ ‘ಎಲ್ಲಾದರೂ ಪಾಠ ಮಾಡಿಕೊಂಡಿರೋಣ’ ಎಂದು ಶಿಕ್ಷಕ ವೃತ್ತಿಗೆ ಬರುವವರ ವರ್ಗ ಇನ್ನೊಂದು ಕಡೆ ಇದೆ. ಇದು ಶಿಕ್ಷಕ ವೃತ್ತಿಗೆ ಮಾಡುವ ಅವಮಾನ ಮಾತ್ರವಲ್ಲ, ಒಂದು ತಲೆಮಾರಿಗೆ ಮಾಡುವ ಅನ್ಯಾಯ ಕೂಡ. ಜೀವನೋಪಾಯಕ್ಕಾಗಿಯಷ್ಟೇ ದುಡಿಯುವ ಇಂತಹ ಶಿಕ್ಷಕರು ಸಮಾಜಕ್ಕೆ ತಾವೆಂತಹ ಕೇಡನ್ನು ಬಗೆಯುತ್ತಿದ್ದೇವೆ ಎಂದು ಅರ್ಥವೇ ಮಾಡಿಕೊಳ್ಳುವುದಿಲ್ಲ.
ಇದರ ಜೊತೆಗೆ, ಶಿಕ್ಷಕರು ತಾವು ಮಾಡಬೇಕಾದ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವ ಸನ್ನಿವೇಶ ಇದೆಯೇ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಾಗುತ್ತದೆ. ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎಂದೇನೋ ದಾಸರು ಹೇಳಿದ್ದಾರೆ. ದುರದೃಷ್ಟವಶಾತ್ ಅನೇಕ ಸಂದರ್ಭಗಳಲ್ಲಿ ಶಿಕ್ಷಕರನ್ನೇ ಸರ್ಕಾರಗಳು ಗುಲಾಮರು ಎಂದುಕೊಂಡಿವೆಯೇನೋ ಎಂದು ಭಾಸವಾಗುತ್ತದೆ. ಅದರಲ್ಲೂ ಪ್ರಾಥಮಿಕ ಶಾಲಾ ಹಂತದ ಶಿಕ್ಷಕರ ಕೈಯ್ಯಲ್ಲಂತೂ ಮಾಡಿಸದ ಕೆಲಸವೇ ಇಲ್ಲ. ವಿವಿಧ ಬಗೆಯ ಗಣತಿಗಳಿಂದ ತೊಡಗಿ ಚುನಾವಣಾ ಕರ್ತವ್ಯದವರೆಗೆ ಅವರಿಗೆ ವರ್ಷದಲ್ಲಿ ನೂರೆಂಟು ಜವಾಬ್ದಾರಿಗಳಿರುತ್ತವೆ. ಎಲ್ಲ ಕೆಲಸಗಳನ್ನು ಮಾಡಿ ಸಮಯ ಉಳಿದರೆ ಪಾಠ ಮಾಡುವುದು ಎಂಬ ಪರಿಸ್ಥಿತಿ ಇದೆ. ಇಷ್ಟೊಂದು ಒತ್ತಡಗಳ ನಡುವೆ ಅವರಿಂದ ಯಾವ ಬಗೆಯ ಶ್ರದ್ಧೆ ಮತ್ತು ಬದ್ಧತೆಗಳನ್ನು ನಿರೀಕ್ಷಿಸುವುದು ಸಾಧ್ಯ?
ನಮ್ಮ ಅನೇಕ ಖಾಸಗಿ ಶಾಲಾ ಕಾಲೇಜುಗಳಲ್ಲಂತೂ ಅಧ್ಯಾಪಕರು ಆಡಳಿತ ಮಂಡಳಿ ಹೇಳುವ ಕೆಲಸಗಳನ್ನು ಪೂರೈಸುವ ಕಾರ್ಮಿಕರಷ್ಟೇ. ಮ್ಯಾನೇಜ್ಮೆಂಟಿನ ಇಷ್ಟಾನಿಷ್ಟಗಳ ಪ್ರಕಾರ ನಡೆದುಕೊಳ್ಳಬೇಕಾದ ಅನಿವಾರ್ಯತೆಯಿರುವ ಈ ಅಧ್ಯಾಪಕರಿಗೆ ತಮ್ಮದೇ ಆದ ಉತ್ತಮ ದೃಷ್ಟಿಕೋನವಿದ್ದರೂ ಅದನ್ನು ಅನುಷ್ಠಾನಗೊಳಿಸುವ ಸ್ವಾತಂತ್ರ್ಯವಿಲ್ಲ. ಸಂಬಳ ಕೊಡುತ್ತೇವೆ ಎಂಬ ಏಕೈಕ ಕಾರಣಕ್ಕೆ ಶಿಕ್ಷಕರೆಂಬ ತಮ್ಮ ಉದ್ಯೋಗಿಗಳು ಜೀತದಾಳುಗಳಂತೆ ದುಡಿಯಬೇಕು ಎಂಬ ಧೋರಣೆ ಬಹುತೇಕ ಮ್ಯಾನೇಜ್ಮೆಂಟುಗಳಿಗಿದೆ. ವಿದ್ಯಾರ್ಥಿಗಳಿಂದ ಲಕ್ಷಗಟ್ಟಲೆ ಶುಲ್ಕ ಕಟ್ಟಿಸಿಕೊಂಡಿರುವ ಈ ಸಂಸ್ಥೆಗಳಿಗೆ ತಮ್ಮ ಅಧ್ಯಾಪಕರ ಹಿತಕ್ಕಿಂತಲೂ ವಿದ್ಯಾರ್ಥಿಗಳೆದುರು ತಗ್ಗಿಬಗ್ಗಿ ನಡೆಯುವುದೇ ಮುಖ್ಯವಾಗುತ್ತದೆ. ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳಿಂದ ಉತ್ತಮ ನಡವಳಿಕೆ, ಹಾಜರಾತಿ ನಿರೀಕ್ಷಿಸುವ ಹಾಗಿಲ್ಲ; ಮನೆಗೆಲಸ ಕೊಡುವಂತಿಲ್ಲ; ನೋಟ್ಸ್ ಬರೆಯಿರಿ ಎಂದು ಹೇಳುವಂತಿಲ್ಲ. ಅವರು ಕೇಳಿದಾಗೆಲ್ಲ ಸಿದ್ಧಪಡಿಸಿದ ನೋಟ್ಸ್ ಒದಗಿಸುತ್ತಿದ್ದರಾಯಿತು. ಇಂತಹ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಾದರೂ ತಮ್ಮ ಅಧ್ಯಾಪಕರ ಬಗ್ಗೆ ಇನ್ನೆಂತಹ ಆದರವನ್ನು ಉಳಿಸಿಕೊಂಡಾರು?
ಅಂತರ ರಾಷ್ಟ್ರೀಯ ಸಂಸ್ಥೆಯೊಂದು ಎರಡು ವರ್ಷಗಳ ಹಿಂದೆ 35 ದೇಶಗಳಲ್ಲಿ ಸಮೀಕ್ಷೆ ನಡೆಸಿ ತಯಾರಿಸಿದ ‘ಜಾಗತಿಕ ಶಿಕ್ಷಕರ ಸ್ಥಾನಮಾನ ಸೂಚ್ಯಂಕ’ದ ಪ್ರಕಾರ, ಭಾರತಕ್ಕೆ 8ನೇ ರ್ಯಾಂಕ್. ಆಯಾ ದೇಶಗಳು ಶಿಕ್ಷಕರನ್ನು ನಡೆಸಿಕೊಳ್ಳುವ ರೀತಿ, ಅವರಿಗೆ ನೀಡುವ ಗೌರವ ಮತ್ತು ವೇತನ, ನಾಗರಿಕರು ಹಾಗೂ ಪೋಷಕರು ಶಿಕ್ಷಕರ ಬಗ್ಗೆ ಹೊಂದಿರುವ ಭಾವನೆ ಇತ್ಯಾದಿ ಮಾನದಂಡಗಳ ಆಧಾರದಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಚೀನಾ, ಮಲೇಷ್ಯಾ, ತೈವಾನ್, ರಷ್ಯಾ ಹಾಗೂ ಇಂಡೋನೇಷ್ಯಾ ಮೊದಲ ಐದು ಸ್ಥಾನದಲ್ಲಿದ್ದವು. ಅರ್ಜೆಂಟೈನಾ, ಘಾನಾ, ಇಟೆಲಿ, ಇಸ್ರೇಲ್ ಹಾಗೂ ಬ್ರೆಜಿಲ್ ಕೊನೆಯ ಐದು ಸ್ಥಾನದಲ್ಲಿದ್ದವು. ಎಲ್ಲರೂ ಹುಬ್ಬೇರಿಸಿಕೊಂಡು ನೋಡುವ ಅಮೇರಿಕಕ್ಕೆ 16ನೇ ರ್ಯಾಂಕ್. ಈ ವಿಚಾರದಲ್ಲಿ ಭಾರತದ ರ್ಯಾಂಕ್ ಅಮೇರಿಕ್ಕಿಂತ ಸಾಕಷ್ಟು ಮೇಲ್ಮಟ್ಟದಲ್ಲಿದೆ ಎಂಬುದನ್ನೂ ಗಮನಿಸಬೇಕು.
ಏನೇ ಇರಲಿ, ಒಬ್ಬ ವ್ಯಕ್ತಿಯ ಜೀವನದಲ್ಲಿ ಗುರುವಿನ ಸ್ಥಾನ ಹಾಗೂ ಅನಿವಾರ್ಯತೆಯನ್ನು ಅಲ್ಲಗಳೆಯಲಾಗದು. ಏಕಲವ್ಯನ ಹಿಂದೆ ಒಬ್ಬ ದ್ರೋಣಾಚಾರ್ಯರಿದ್ದರು. ಶಿವಾಜಿಯ ಹಿಂದೆ ಒಬ್ಬ ಸಮರ್ಥ ರಾಮದಾಸರಿದ್ದರು. ಹಕ್ಕಬುಕ್ಕರ ಹಿಂದೆ ವಿದ್ಯಾರಣ್ಯರಿದ್ದರು. ವಿವೇಕಾನಂದರ ಹಿಂದೊಬ್ಬ ರಾಮಕೃಷ್ಣ ಪರಮಹಂಸರಿದ್ದರು. ಯಾವ ಮಹಾತ್ಮರ ಜೀವನ ಚರಿತ್ರೆಯನ್ನು ತೆರೆದರೂ ಗುರುಗಳು ಅವರ ಮೇಲೆ ಬೀರಿದ ಅದ್ಭುತ ಪ್ರಭಾವ ಕಣ್ಣಿಗೆ ಕಟ್ಟುತ್ತದೆ. ಭಾರತದ ಗುರುಪರಂಪರೆಯೇ ಅಂತಹದು. ಗುರು ಇಲ್ಲದ ಬದುಕು ಕತ್ತಲ ಹಾದಿಯ ಪಯಣವಷ್ಟೇ. ‘ವಿದ್ಯಾರ್ಥಿ ಕಲಿಯಲು ವಿಫಲನಾದರೆ, ಅಧ್ಯಾಪಕ ಕಲಿಸಲು ವಿಫಲನಾಗಿದ್ದಾನೆಂದು ಅರ್ಥ’ ಎಂಬ ಮಾತೂ ಮತ್ತೆ ಗುರುವಿನ ಜವಾಬ್ದಾರಿಯನ್ನೇ ಬೊಟ್ಟುಮಾಡುತ್ತದೆ.
ಗುರುವನ್ನು ಗೌರವಿಸಿ, ಅವರ ಸದಾಶಯದ ಶ್ರೀರಕ್ಷೆ ನಿಮ್ಮ ಮೇಲಿದ್ದರೆ ಜೀವನದಲ್ಲಿ ಎಷ್ಟು ಎತ್ತರಕ್ಕಾದರೂ ಏರಬಲ್ಲಿರಿ. ಹೀಗೆಂದು ಹೇಳುವುದರ ಜೊತೆಗೆ ಅಂತಹ ಎತ್ತರದ ವ್ಯಕ್ತಿತ್ವವನ್ನು ಗುರುವೂ ಉಳಿಸಿಕೊಳ್ಳಬೇಕು ಎಂಬುದನ್ನೂ ಹೇಳಬೇಕು. ‘ಒಬ್ಬ ವ್ಯಕ್ತಿ ಮೊದಲು ತನ್ನ ದಾರಿ ಯಾವುದು ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಆಮೇಲಷ್ಟೇ ಇನ್ನೊಬ್ಬರಿಗೆ ಬೋಧಿಸಬೇಕು’ ಎಂಬುದು ಗೌತಮ ಬುದ್ಧನ ಮಾತು. ಅಧ್ಯಾಪಕನಾದವನಿಗೆ ಇಂಥದ್ದೊಂದು ಎಚ್ಚರ ಇರಬೇಕು. ತನ್ನ ನಡತೆ ಹಾಗೂ ವ್ಯಕ್ತಿತ್ವದಿಂದ ಶಿಷ್ಯರಿಗೆ ಮಾದರಿಯಾಗಬೇಕು. ಸಮಾಜದ ಎದುರು ಸಣ್ಣವನಾಗಬಾರದು. ಎಲ್ಲ ಸಣ್ಣತನಗಳನ್ನು ಮೀರಲು ಅವನಿಗೆ ಸಾಧ್ಯವಾದಾಗಲಷ್ಟೇ ನಿಜವಾದ ಗುರುತ್ವ ಲಭಿಸುತ್ತದೆ. ಗುರು ಲಘುವಾಗಬಾರದು.
- ಸಿಬಂತಿ ಪದ್ಮನಾಭ ಕೆ. ವಿ.
1 ಕಾಮೆಂಟ್:
ಸರ್ ನಮಸ್ತೆ,
ನನ್ನ ಮನದಲ್ಲಿ ಯಾವತ್ತಿಂದಲೂ ಇಂತಹದೊಂದು ಚಿಂತನೆ ಮೂಡಿತ್ತು...ವೃತ್ತಿ ನಿಷ್ಠೆ ಇಲ್ಲದಿರುವ ಅನೇಕ ಶಿಕ್ಷಕರನ್ನು ನೋಡುವಾಗ ಹೇಳಲಾಗದ ಯಾತನೆಯೊಂದಿಗೆ ಮೌನಕ್ಕೆ ಶರಣಾಗುವುದಿದೆ...ಗುರು ಲಘುವಾಗುವ ಎಲ್ಲಕ್ಕಿಂತಲೂ ಮೊದಲ ಕಾರಣ,ಖಂಡಿತವಾಗಿಯೂ ಎಲ್ಲಾದರೂ ಒಂದು ಕಡೆ ಇದ್ದು ಸಂಬಳಕ್ಕಾಗಿ ಕಾಯುವವರು..ಇಂತಹವರ ನಡುವೆ,ಪ್ರಾಮಾಣಿಕ ಬಳಗವೊಂದರ ಸದ್ದಿಲ್ಲದ ಶ್ರಮ ನಗಣ್ಯವಾಗುತ್ತದೆ...ಎಲ್ಲಾ ಶಿಕ್ಷಕರು ಓದಬೇಕಾದ ಲೇಖನ... ವಂದನೆಗಳು ಸರ್.
ಕಾಮೆಂಟ್ ಪೋಸ್ಟ್ ಮಾಡಿ