ಭಾನುವಾರ, ಫೆಬ್ರವರಿ 3, 2019

ಬೋಧನಾ ಮಟ್ಟ- ಸುಧಾರಣೆ ಹೇಗೆ?

23 ಜನವರಿ 2019ರಂದು ಪ್ರಜಾವಾಣಿ ಶಿಕ್ಷಣ ಪುರವಣಿಯಲ್ಲಿ ಪ್ರಕಟವಾಗಿರುವ ಲೇಖನ

ಪ್ರಜಾವಾಣಿ - ಶಿಕ್ಷಣ - 23-01-2019
ದೇಶದ ವಿಶ್ವವಿದ್ಯಾನಿಲಯಗಳ ಸಂಖ್ಯೆ ಸಾವಿರದ ಗಡಿಯನ್ನು ತಲುಪುತ್ತಿದೆ. ಉನ್ನತ ಶಿಕ್ಷಣದ ಅಖಿಲ ಭಾರತ ಸಮೀಕ್ಷೆ 2017-18ರ ಪ್ರಕಾರ, ಭಾರತದಲ್ಲಿ 903 ವಿಶ್ವವಿದ್ಯಾನಿಲಯಗಳೂ, 39,000 ಕಾಲೇಜುಗಳೂ, 10,000ದಷ್ಟು ಸ್ವತಂತ್ರ ಶಿಕ್ಷಣ ಸಂಸ್ಥೆಗಳೂ ಇವೆ. ಇವುಗಳ ಪೈಕಿ 394 ರಾಜ್ಯ ವಿವಿಗಳು, 125 ಡೀಮ್ಡ್ ವಿವಿಗಳು ಹಾಗೂ 325 ಖಾಸಗಿ ವಿವಿಗಳಿವೆ. ವಿಚಿತ್ರವೆಂದರೆ ಇಷ್ಟು ದೊಡ್ಡ ಉನ್ನತ ಶಿಕ್ಷಣ ಜಾಲದಲ್ಲಿ ಜಗತ್ತಿನ ಟಾಪ್-100 ರ‍್ಯಾಂಕಿಂಗ್ ಒಳಗಿನ ಒಂದು ವಿವಿಯೂ ಇಲ್ಲ.

ನಮ್ಮ ಉನ್ನತ ಶಿಕ್ಷಣ ವಲಯದಲ್ಲಿ ಸುಮಾರು 13 ಲಕ್ಷ ಬೋಧಕರಿದ್ದಾರೆ. 36.6 ಮಿಲಿಯನ್ ಯುವಕರು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಉನ್ನತ ಶಿಕ್ಷಣ ಕ್ಷೇತ್ರದ ಒಟ್ಟಾರೆ ದಾಖಲಾತಿ ಪ್ರಮಾಣ (ಜಿಇಆರ್) ಶೇ. 25.8ಕ್ಕೆ ತಲುಪಿದೆ. ನಮ್ಮ ಒಟ್ಟು ವಿವಿಗಳ ಪೈಕಿ 357 ವಿವಿಗಳು ಹಾಗೂ ಶೇ. 60ರಷ್ಟು ಕಾಲೇಜುಗಳು ಗ್ರಾಮೀಣ ಪ್ರದೇಶದಲ್ಲಿವೆ. ದೇಶದಲ್ಲಿನ ಶೇ. 73ರಷ್ಟು ಕಾಲೇಜುಗಳು ಹಾಗೂ ಶೇ. 68ರಷ್ಟು ವಿವಿಗಳಲ್ಲಿ ಬೋಧನಾ-ಕಲಿಕಾ ಪ್ರಕ್ರಿಯೆ ಮಧ್ಯಮ ಅಥವಾ ಕಳಪೆ ಮಟ್ಟದಲ್ಲಿದೆಯೆಂದು ಯುಜಿಸಿಯೇ ತನ್ನ ಅಧ್ಯಯನವೊಂದರಲ್ಲಿ ಇತ್ತೀಚೆಗೆ ಹೇಳಿದೆ. ಇನ್ನೊಂದೆಡೆ ಖಾಸಗಿ ಹಾಗೂ ಡೀಮ್ಡ್ ವಿಶ್ವವಿದ್ಯಾನಿಲಯಗಳು ಭಾರೀ ಸಂಖ್ಯೆಯಲ್ಲಿ ಹುಟ್ಟಿಕೊಳ್ಳುತ್ತಿವೆ. ಮೂಲಭೂತ ಸೌಕರ್ಯ ಹಾಗೂ ಮಾನವ ಸಂಪನ್ಮೂಲದ ವಿಷಯದಲ್ಲಿ ಸರ್ಕಾರಿ ಹಾಗೂ ಖಾಸಗಿ ವಿವಿಗಳ ನಡುವೆ ದೊಡ್ಡ ಕಂದಕ ಏರ್ಪಡುತ್ತಿದೆ.

ವಿಶ್ವವಿದ್ಯಾನಿಲಯಗಳ ಶ್ರೇಷ್ಠತೆಯನ್ನು ಅನೇಕ ಮಾನದಂಡಗಳ ಆಧಾರದಲ್ಲಿ ಅಳೆಯಲಾಗುತ್ತದಾದರೂ ಅಧ್ಯಾಪಕರ ಒಟ್ಟಾರೆ ಗುಣಮಟ್ಟವೂ ಒಂದು ಪ್ರಮುಖ ಅಂಶವೆಂಬುದನ್ನು ಅಲ್ಲಗಳೆಯುವಂತಿಲ್ಲ. ಬದಲಾಗಿರುವ ಕಾಲ, ಬದಲಾಗಿರುವ ಶಿಕ್ಷಣದ ವ್ಯಾಪ್ತಿ ವಿಸ್ತಾರ, ಸಮಾಜದ ನಿರೀಕ್ಷೆಗಳು -ಇವುಗಳಿಗೆ ತಕ್ಕ ಹಾಗೆ ನಮ್ಮ ಅಧ್ಯಾಪಕರೂ ಬದಲಾಗುತ್ತಿದ್ದಾರೆಯೇ? ಶಿಕ್ಷಣ ಕ್ಷೇತ್ರದ, ಸಮಾಜದ ಹಾಗೂ ವಿದ್ಯಾರ್ಥಿಗಳ ನಿರೀಕ್ಷೆಗೆ ತಕ್ಕಂತೆ ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳುತ್ತಿದ್ದಾರೆಯೇ? ತಮ್ಮ ಮನಸ್ಥಿತಿಯನ್ನು ಸುಧಾರಿಸಿಕೊಂಡಿದ್ದಾರೆಯೇ? ಇವು ಸದ್ಯ ನಮ್ಮ ಮುಂದಿರುವ ಮಹತ್ವದ ಪ್ರಶ್ನೆಗಳು.

1986ರ ರಾಷ್ಟ್ರೀಯ ಶಿಕ್ಷಣ ನೀತಿ ಅಧ್ಯಾಪಕರ ನಿರಂತರ ಜ್ಞಾನಾಭಿವೃದ್ಧಿ, ಸಾಮರ್ಥ್ಯ ನಿರ್ಮಾಣ, ಹೊಸ ಸವಾಲುಗಳನ್ನು ಎದುರಿಸಲು ಪ್ರೇರಣೆ ನೀಡುವ ಕಡೆಗೆ ಹೆಚ್ಚಿನ ಆದ್ಯತೆ ನೀಡಿತು. ಅಧ್ಯಾಪಕರ ವೃತ್ತಿಪರ ಮತ್ತು ಔದ್ಯೋಗಿಕ ಅಭಿವೃದ್ಧಿಗಾಗಿ ಪರಿಣಾಮಕಾರಿ ವ್ಯವಸ್ಥೆಯೊಂದನ್ನು ರೂಪಿಸುವ ಅಗತ್ಯವನ್ನು ಎತ್ತಿಹಿಡಿಯಿತು. ಹೊಸ ಜ್ಞಾನದ ಬೆಳವಣಿಗೆ, ಅಂತಾರಾಷ್ಟ್ರೀಯ ಸ್ಪರ್ಧೆ ಹಾಗೂ ವಿದ್ಯಾರ್ಥಿಗಳ ಬದಲಾಗುತ್ತಿರುವ ಅವಶ್ಯಕತೆಗಳಿಂದ ಉದ್ಭವಿಸುವ ಸವಾಲುಗಳನ್ನು ಎದುರಿಸಲು ಅನುಕೂಲವಾಗುವಂತೆ ಅಧ್ಯಾಪಕರಿಗೆ ನಿರಂತರ ತರಬೇತಿ ಹಾಗೂ ಮಾರ್ಗದರ್ಶನ ನೀಡುವ ಅನಿವಾರ್ಯತೆಯನ್ನು ಒತ್ತಿಹೇಳಿತು.

ರಾಷ್ಟ್ರೀಯ ಶಿಕ್ಷಣ ನೀತಿಯ ಮಾರ್ಗಸೂಚಿಯನ್ವಯ ಪ್ರಾಥಮಿಕ ಶಾಲಾ ಹಂತದಿಂದ ತೊಡಗಿ ವಿಶ್ವವಿದ್ಯಾನಿಲಯಗಳವರೆಗಿನ ಅಧ್ಯಾಪಕರನ್ನು ಕಾಲದಿಂದ ಕಾಲಕ್ಕೆ ಸಮಕಾಲೀನಗೊಳಿಸುವ ಪ್ರಯತ್ನಗಳೇನೋ ನಡೆಯುತ್ತ ಬಂದಿವೆ. ಶಿಕ್ಷಣವನ್ನು ಪರಿಣಾಮಕಾರಿಗೊಳಿಸುವ ಉದ್ದೇಶದಿಂದ ಆರಂಭವಾದ ಈ ಪ್ರಯತ್ನಗಳು ಸ್ವತಃ ಎಷ್ಟು ಪರಿಣಾಮಕಾರಿಯಾಗಿವೆ ಅಥವಾ ಸಾರ್ಥಕವಾಗಿವೆ ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದುಕೊಂಡಿದೆ.

ಪ್ರಾಥಮಿಕ ಶಾಲಾ ಹಂತದ ಶಿಕ್ಷಕರ ತರಬೇತಿಗಾಗಿಯೇ ಜಿಲ್ಲಾ ಮಟ್ಟದಲ್ಲಿ ಡಯೆಟ್‌ಗಳಿವೆ; ವಿವಿಧ ವಿಭಾಗೀಯ ಮಟ್ಟದಲ್ಲಿ ಸಂಪನ್ಮೂಲ ಕೇಂದ್ರಗಳಿವೆ. ಇವುಗಳ ವತಿಯಿಂದ ಆಗಿಂದಾಗ್ಗೆ ತರಬೇತಿ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತೀ ಶಿಕ್ಷಕನೂ ವರ್ಷಕ್ಕೆ ಕನಿಷ್ಟ ೨೦ ದಿನ ತನಗೆ ಅಗತ್ಯವೆನಿಸುವ ವಿಷಯದಲ್ಲಿ ತರಬೇತಿ ಪಡೆದುಕೊಳ್ಳಬೇಕು ಎಂಬ ನಿಯಮವಿದೆ.
ಪಠ್ಯಕ್ರಮ ಅಥವಾ ಪಠ್ಯಪುಸ್ತಕಗಳು ಬದಲಾದಾಗ ಅಥವಾ ಪರಿಷ್ಕರಣೆಗೊಂಡಾಗ ಪ್ರತ್ಯೇಕ ತರಬೇತಿಗಳು ಏರ್ಪಡುತ್ತವೆ.

ಪ್ರೌಢಶಾಲೆ ಹಾಗೂ ಪದವಿಪೂರ್ವ ಹಂತದಲ್ಲಿಯೂ ಇದೇ ಬಗೆಯ ತರಬೇತಿ ವ್ಯವಸ್ಥೆಯಿದೆ. ಹೊಸ ಅಧ್ಯಾಪಕರ ನೇಮಕಾತಿ ನಡೆದಾಗ, ಹೊಸ ಪಠ್ಯಕ್ರಮ ಬಂದಾಗ, ವಿಜ್ಞಾನ ವಿಷಯಗಳಲ್ಲಿ ಹೊಸ ಪ್ರಾಯೋಗಿಕ ಅಭ್ಯಾಸಗಳನ್ನು ಸೇರಿಸಿದಾಗ, ಪರೀಕ್ಷಾ ವಿಧಾನ ಬದಲಾದಾಗ ಅಥವಾ ಪಾಠಪ್ರವಚನದಲ್ಲಿ ಹೊಸ ತಂತ್ರಜ್ಞಾನದ ಬಳಕೆಯನ್ನು ಜಾರಿಗೆ ತಂದಾಗ ಶಿಕ್ಷಣ ಇಲಾಖೆ ವತಿಯಿಂದ ತರಬೇತಿ ಕಾರ್ಯಾಗಾರಗಳು ನಡೆಯುತ್ತವೆ. ಈ ಹಂತದವರೆಗಿನ ಶಿಕ್ಷಕರಿಗೆ ಪದವಿ ಅಥವಾ ಸ್ನಾತಕೋತ್ತರ ಪದವಿ ಜತೆಗೆ ಡಿ.ಎಡ್ ಅಥವಾ ಬಿ.ಎಡ್‌ನಂತಹ ಪ್ರತ್ಯೇಕ ಪದವಿಗಳೂ ಕಡ್ಡಾಯ. ಹೀಗಾಗಿ ಶಿಕ್ಷಕ ವೃತ್ತಿಗೆ ಬರುವ ಮುನ್ನವೇ ಅವರು ನಿರ್ದಿಷ್ಟ ಮಟ್ಟದ ತರಬೇತಿಯನ್ನು ಪಡೆದೇ ಇರುತ್ತಾರೆ.

ಅಧ್ಯಾಪನದ ಯಾವ ತರಬೇತಿಯೂ ಇಲ್ಲದೆ ನೇರವಾಗಿ ತಮ್ಮ ತಮ್ಮ ಪದವಿಗಳ ಜತೆಗಷ್ಟೇ ವಿದ್ಯಾರ್ಥಿಗಳಿಗೆ ಎದುರಾಗುವವರು ಪದವಿ ಹಾಗೂ ಸ್ನಾತಕೋತ್ತರ ಪದವಿ ಹಂತದ ಅಧ್ಯಾಪಕರು. ಅಲ್ಲಿಯವರೆಗಿನ ಶಿಕ್ಷಣಕ್ಕೂ, ಅಲ್ಲಿಯ ನಂತರದ ಶಿಕ್ಷಣಕ್ಕೂ ಸಾಕಷ್ಟು ವ್ಯತ್ಯಾಸವಿದೆ; ಪದವಿ ಹಾಗೂ ವಿಶ್ವವಿದ್ಯಾಲಯ ಹಂತದಲ್ಲಿನ ಅವಶ್ಯಕತೆ ಹಾಗೂ ನಿರೀಕ್ಷೆಗಳು ಬೇರೆಬೇರೆ ಎಂಬುದು ಇಲ್ಲಿನ ಸಮಜಾಯುಷಿ. ಆದಾಗ್ಯೂ ಈ ಹಂತದಲ್ಲಿ ಕೂಡ ಅಧ್ಯಾಪಕರಿಗೆ ತರಬೇತಿ ಹಾಗೂ ಮಾರ್ಗದರ್ಶನದ ವ್ಯವಸ್ಥೆಯಿದೆ.

ಹೊಸದಾಗಿ ನೇಮಕಗೊಳ್ಳುವ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳ ಸಹಾಯಕ ಪ್ರಾಧ್ಯಾಪಕರು ತಮ್ಮ ನೇಮಕಾತಿಯಾಗಿ ಎರಡು ವರ್ಷದೊಳಗೆ ನಾಲ್ಕು ವಾರಗಳ ಪರಿಚಯಾತ್ಮಕ ಕಾರ್ಯಕ್ರಮ (ಒರಿಯೆಂಟೇಶನ್ ಪ್ರೋಗ್ರಾಂ), ನಂತರ ನಿರ್ದಿಷ್ಟ ಅವಧಿಗೊಮ್ಮೆ ಮೂರು ವಾರಗಳ ಪುನಶ್ಚೇತನ ಕಾರ್ಯಕ್ರಮ (ರಿಫ್ರೆಶರ್ ಕೋರ್ಸ್)ಗಳಲ್ಲಿ ಭಾಗವಹಿಸಬೇಕಾಗುತ್ತದೆ. ಈ ರೀತಿಯ ತರಬೇತಿಗಳನ್ನು ನಡೆಸುವುದಕ್ಕಾಗಿಯೇ ದೇಶದಾದ್ಯಂತ 66 ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳು (ಎಚ್‌ಆರ್‌ಡಿಸಿ) ಇವೆ. ಇವುಗಳ ಕಾರ್ಯನಿರ್ವಹಣೆಗಾಗಿಯೇ ಪ್ರತೀವರ್ಷ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ. ಸರ್ಕಾರ ಮಾಡುತ್ತಿರುವ ವೆಚ್ಚಕ್ಕೆ ನ್ಯಾಯ ಸಿಗುತ್ತಿದೆಯೇ, ಉನ್ನತ ಶಿಕ್ಷಣದ ಗುರಿಗಳನ್ನು ಈಡೇರಿಸುವ ನಿಟ್ಟಿನಲ್ಲಿ ಈ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ, ಇವುಗಳ ಪ್ರಯೋಜನಗಳನ್ನು ನಮ್ಮ ಅಧ್ಯಾಪಕರು ಮನಃಪೂರ್ವಕವಾಗಿ ಪಡೆದುಕೊಳ್ಳುತ್ತಿದ್ದಾರೆಯೇ ಎಂಬುದೆಲ್ಲ ಆತ್ಮಾವಲೋಕನದ ಪ್ರಶ್ನೆಗಳು.

ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಗಳನ್ನು ಅನುಷ್ಠಾನಗೊಳಿಸುವ ಯೋಜನೆಯ ಭಾಗವಾಗಿಯೇ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು 1986ರಿಂದ ತೊಡಗಿ 2009ರವರೆಗೆ ದೇಶದ 66 ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಸಿಬ್ಬಂದಿ ಕಾಲೇಜು (ಅಕಾಡೆಮಿಕ್ ಸ್ಟಾಫ್ ಕಾಲೇಜ್) ಗಳನ್ನು ಆರಂಭಿಸಿತು. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ)ದ ಮೂಲಕ ಸಾಕಷ್ಟು ಅನುದಾನವನ್ನೂ ನೀಡಲಾಯಿತು. ಈ ಕಾಲೇಜುಗಳು ನಡೆಸಿಕೊಂಡು ಬಂದ ತರಬೇತಿ ಕಾರ್ಯಕ್ರಮಗಳಿಂದ ಏನೂ ಪ್ರಯೋಜನವಾಗಲಿಲ್ಲ ಎನ್ನುವ ಹಾಗಿಲ್ಲವಾದರೂ ಅನೇಕ ಕಾಲೇಜುಗಳು ಮೂಲಸೌಕರ್ಯ ಹಾಗೂ ಕಾರ್ಯವಿಧಾನದ ದೃಷ್ಟಿಯಿಂದ ನಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಮಟ್ಟದಿಂದ ಮೇಲೇಳಲೇ ಇಲ್ಲ. ಆದರೂ,  ಹೊಸ ಕಾಲದ ಅವಶ್ಯಕತೆಗಳಿಗೆ ಅನುಗುಣವಾಗಿ ಅವುಗಳ ಒಟ್ಟಾರೆ ವ್ಯವಸ್ಥೆಯನ್ನು ಪುನರ್ರೂಪಿಸುವ ಉದ್ದೇಶದಿಂದ 2015ರಲ್ಲಿ ಅಕಾಡೆಮಿಕ್ ಸ್ಟಾಫ್ ಕಾಲೇಜುಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ (ಎಚ್‌ಆರ್‌ಡಿಸಿ)ಗಳೆಂದು ಮರುನಾಮಕರಣ ಮಾಡಲಾಯಿತು. ದುರದೃಷ್ಟವಶಾತ್ ಅನೇಕ ಕಡೆಗಳಲ್ಲಿ ಇದೊಂದು ಹೆಸರು ಬದಲಾವಣೆಯ ಪ್ರಕ್ರಿಯೆಯಾಯಿತೇ ಹೊರತು ವಾಸ್ತವವಾಗಿ ಬೇರೆ ಯಾವ ಬದಲಾವಣೆಗೂ ಕಾರಣವಾಗಲಿಲ್ಲ.

ಮರುನಾಮಕರಣದ ಹಿಂದೆ ಇದ್ದ ಮೂಲ ಸೌಕರ್ಯಗಳ ಅಭಿವೃದ್ಧಿ, ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ)ದ ಹೆಚ್ಚಿನ ಬಳಕೆ, ಪರಿಣತಿ ಹೊಂದಿದ ಮಾನವ ಸಂಪನ್ಮೂಲದ ನೇಮಕಾತಿ ಇತ್ಯಾದಿ ಉದ್ದೇಶಗಳು ಇಲ್ಲಿಯವರೆಗೂ ಸಮರ್ಪಕವಾಗಿ ಈಡೇರಿಲ್ಲ. ಅನೇಕ ಎಚ್‌ಆರ್‌ಡಿಸಿಗಳಲ್ಲಿ ಇನ್ನೂ ಮೂಲಸೌಕರ್ಯಗಳ ಕೊರತೆ ಬಾಧಿಸುತ್ತಿದೆ. ಸಾಕಷ್ಟು ಸಂಖ್ಯೆಯ ತರಗತಿ ಕೊಠಡಿಗಳು, ತಮ್ಮದೇ ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಕೇಂದ್ರ, ಅದಕ್ಕೆ ಬೇಕಾದ ಇಂಟರ್ನೆಟ್ ಸೌಲಭ್ಯ, ಎಲ್‌ಸಿಡಿ ಪ್ರೊಜೆಕ್ಟರ್‌ನಂತಹ ಉಪಕರಣಗಳು, ಅನಿರ್ಬಂಧಿತ ವಿದ್ಯುತ್ ಪೂರೈಕೆ ಸೌಲಭ್ಯಗಳಿಲ್ಲ. ತರಬೇತಿ ಕಾರ್ಯಕ್ರಮಗಳ ಆಯೋಜಕರು ಹಾಗೂ ಭಾಗವಹಿಸುವ ಅಧ್ಯಾಪಕರು- ಎರಡೂ ಕಡೆಯಲ್ಲಿ ತರಬೇತಿಯನ್ನು 'ಹೇಗಾದರೂ ಮುಗಿಸಿಬಿಡುವ’ ಉದಾಸೀನದ ಮನಸ್ಥಿತಿ ಇದ್ದರಂತೂ ಕೇಳುವುದೇ ಬೇಡ.

ಅಧ್ಯಾಪಕರ ಭಡ್ತಿಗೆ ಈ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅನಿವಾರ್ಯ. ಪ್ರಮಾಣಪತ್ರಕ್ಕಾಗಿ ತರಬೇತಿಗಳಲ್ಲಿ ಭಾಗವಹಿಸುವ ಅಧ್ಯಾಪಕರ ಸಂಖ್ಯೆ ಬೆಳೆದಷ್ಟೂ ಕಾರ್ಯಕ್ರಮಗಳ ಮೂಲ ಉದ್ದೇಶ ಗೌಣವಾಗುತ್ತಾ ಹೋಗುತ್ತದೆ. ಆಯೋಜಕರು ಕಡೇ ಪಕ್ಷ  ಸಮರ್ಥ ಸಂಪನ್ಮೂಲ ವ್ಯಕ್ತಿಗಳನ್ನಾದರೂ ಆಮಂತ್ರಿಸಿ ಗೋಷ್ಠಿಗಳನ್ನು ಆಯೋಜಿಸಬಹುದು. ಅವರಿಂದ ಒಂದಷ್ಟು ಹೊಸತನ್ನು ತಿಳಿದುಕೊಳ್ಳುವ, ಅವುಗಳನ್ನು ಅಳವಡಿಸಿಕೊಳ್ಳುವ ಹಾಗೂ ತಮ್ಮ ವಿದ್ಯಾರ್ಥಿಗಳಿಗೆ ವರ್ಗಾಯಿಸುವ ಪ್ರಾಮಾಣಿಕ ಮನಸ್ಥಿತಿ ಅಧ್ಯಾಪಕರಲ್ಲಿ ಇಲ್ಲದೇ ಹೋದರೆ ಎಂತಹ ವ್ಯವಸ್ಥೆಯಿಂದಲೂ ಬದಲಾವಣೆ ತರುವುದು ಕಷ್ಟ.

ಯಾವಾಗ ಶೈಕ್ಷಣಿಕ ಕಾರ್ಯನಿರ್ವಹಣಾ ಸೂಚ್ಯಂಕ (ಎಪಿಐ)ದ ಆಧಾರದಲ್ಲಿ ಅಧ್ಯಾಪಕರ ನೇಮಕಾತಿ ಹಾಗೂ ಭಡ್ತಿಗಳನ್ನು ನಿರ್ಧರಿಸುವ ಪದ್ಧತಿ ಆರಂಭವಾಯಿತೋ ಆಗಲೇ ಭರಪೂರ ವಿಚಾರಗೋಷ್ಠಿ ಸಮ್ಮೇಳನಗಳಲ್ಲಿ ಭಾಗವಹಿಸುವ, ಪ್ರಬಂಧ ಮಂಡಿಸುವ, ಒಂದೇ ವಾರದಲ್ಲಿ ಪುಟಗಟ್ಟಲೆ ಸಂಶೋಧನ ಪ್ರಬಂಧಗಳನ್ನು ಬರೆದು ಪ್ರಕಟಿಸುವ - ಅಂತೂ ಏನಕೇನ ಪ್ರಕಾರೇಣ ಕೆಜಿಗಟ್ಟಲೆ ಪ್ರಮಾಣಪತ್ರ ಪೇರಿಸುವ ನಾಟಕ ಆರಂಭವಾಯಿತು. ಪುನಶ್ಚೇತನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೂ ಅನೇಕ ಮಂದಿ ಅಧ್ಯಾಪಕರಿಗೆ ಇಂತಹದೇ ಒಂದು ಅನಿವಾರ್ಯತೆಯಲ್ಲದೆ ಬೇರೇನೂ ಆಗಿಲ್ಲ.

ಇವೆಲ್ಲವುಗಳ ಹೊರತಾಗಿಯೂ ಅಧ್ಯಾಪಕರು ತಮ್ಮನ್ನು ತಾವು ಆಧುನೀಕರಿಸಿಕೊಳ್ಳುವುದಕ್ಕೆ ಅವಕಾಶಗಳು ವಿಫುಲವಾಗಿವೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ತಮ್ಮ ಜ್ಞಾನ ಹಾಗೂ ಕೌಶಲಗಳನ್ನು ಉನ್ನತೀಕರಿಸಿಕೊಳ್ಳುವುದಕ್ಕೆ ಡಿಜಿಟಲ್ ಯುಗದಲ್ಲಿ ಅಸಂಖ್ಯ ಮಾರ್ಗಗಳಿವೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು 'ಸ್ವಯಂ’ ಎಂಬ ಡಿಜಿಟಲ್ ವೇದಿಕೆಯನ್ನು ಹುಟ್ಟುಹಾಕಿ ದೊಡ್ಡ ಸಂಖ್ಯೆಯ ಮಾಸಿವ್ ಓಪನ್ ಆನ್‌ಲೈನ್ ಕೋರ್ಸ್ (ಮೂಕ್)ಗಳನ್ನು ಪರಿಚಯಿಸುತ್ತಿದೆ. ೯ನೇ ತರಗತಿಯಿಂದ ತೊಡಗಿ ಸ್ನಾತಕೋತ್ತರ ಪದವಿಯವರೆಗೆ 2000 ಆನ್‌ಲೈನ್ ಕೋರ್ಸುಗಳನ್ನೂ, 80,000 ಗಂಟೆಗಳ ಕಲಿಕಾ ಸಾಮಗ್ರಿಯನ್ನು ಉಚಿತವಾಗಿ ಒದಗಿಸುತ್ತಿದೆ. ಇವುಗಳಲ್ಲಿ ಅಧ್ಯಾಪಕರು ತಮ್ಮ ವೈಯುಕ್ತಿಕ ಉನ್ನತೀಕರಣಕ್ಕೆ ಬಳಸಿಕೊಳ್ಳಬಹುದಾದ ಅನೇಕ ಪುನಶ್ಚೇತನ ಕೋರ್ಸುಗಳೂ ಇವೆ.

ಡಿಜಿಟಲ್ ಕಾಲದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಬದಲಾಗಿರುವ ಕಾಲಮಾನ ಹಾಗೂ ವಿದ್ಯಾರ್ಥಿ ನಿರೀಕ್ಷೆಗಳನ್ನು ಅಧ್ಯಾಪಕರು ಸಮರ್ಥವಾಗಿ ಪೂರೈಸಬಲ್ಲರೇ ಎಂಬುದು ಶಿಕ್ಷಣ ಕ್ಷೇತ್ರದ ಭವಿಷ್ಯದ ಪ್ರಶ್ನೆಯೂ ಹೌದು. ’ನೀವು ಜಗತ್ತಿನಲ್ಲಿ ಬೇಕಾದಂತೆ ಕನಸು ಕಾಣಬಹುದು, ಸೃಷ್ಟಿಸಬಹುದು, ರೂಪಿಸಬಹುದು, ಹಾಗೂ ಅತಿ ಅದ್ಭುತ ತಾಣಗಳನ್ನು ಹುಟ್ಟುಹಾಕಬಹುದು. ಆದರೆ ಕನಸುಗಳನ್ನು ನನಸಾಗಿಸಬಲ್ಲ ಸಮರ್ಥರು ಈ ಕೆಲಸಕ್ಕೆ ಬೇಕು’ ಎಂಬ ವಾಲ್ಟ್ ಡಿಸ್ನಿಯ ಮಾತು ಈ ಪ್ರಶ್ನೆಗೆ ಪರೋಕ್ಷ ಉತ್ತರ ಎಂಬುದನ್ನು ಶಿಕ್ಷಕರು ಮನಗಾಣಬೇಕು.

ಶನಿವಾರ, ಜನವರಿ 12, 2019

ಮಕ್ಕಳು ದುಡಿಯುವುದು ತಪ್ಪಲ್ಲ!

25 ನವೆಂಬರ್ 2018 'ವಿಜಯವಾಣಿ' ಭಾನುವಾರದ ಪುರವಣಿಯಲ್ಲಿ (ವಿಜಯ ವಿಹಾರ) ಪ್ರಕಟವಾದ ಲೇಖನ

ಟ್ರಾಫಿಕ್ ಸಿಗ್ನಲ್‌ನಲ್ಲಿ ಕೆಂಪು ದೀಪ ಉರಿದರೆ ವಾಹನ ಸವಾರರ ಮುಖದಲ್ಲಿ ಸಣ್ಣ ಉದ್ವಿಗ್ನತೆ; ತರಹೇವಾರಿ ಪೆನ್ನುಗಳನ್ನು ಹಿಡಿದಿರುವ ಹುಡುಗರ ಮುಖದಲ್ಲಿ ಮಹಾ ಮಂದಹಾಸ. ಸಿಕ್ಕ ಒಂದೂವರೆ ನಿಮಿಷದ ಅವಧಿಯಲ್ಲಿ ವಾಹನಗಳೆಡೆಯಲ್ಲೆಲ್ಲ ನುಸುಳಿ ಅವರಿವರ ಮನವೊಲಿಸಿ ಹತ್ತು ಪೆನ್ನುಗಳನ್ನು ಮಾರಾಟಮಾಡಿದಲ್ಲಿಗೆ ಅವರ ಅಂದಿನ ಅನ್ನಕ್ಕೆ ಗ್ರೀನ್ ಸಿಗ್ನಲ್ ದೊರೆತಂತೆಯೇ. ಮುಂದಿನ ಸಿಗ್ನಲ್ ಬೀಳುವವರೆಗೆ ಮಾತ್ರ ಅವರಿಗೆ ವಿಶ್ರಾಂತಿ. ಮತ್ತೆ ಧಾವಂತ. ಮತ್ತೊಂದಿಷ್ಟು ನಿರಾಳತೆ.

ಅವಯವಗಳೆಲ್ಲ ಸರಿಯಿದ್ದೂ ಅಮ್ಮಾ ತಾಯೇ ಎಂದು ರೈಲು-ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರೆದುರು ಕೈಚಾಚುವ ಮೈಗಳ್ಳರ ನಡುವೆ 'ಅಣ್ಣಾ ನೀವೊಂದು ಪೆನ್ನು ಕೊಂಡರೆ ನಮಗೆ ಒಂದು ರೂಪಾಯಿ ಸಿಗುತ್ತೆ’ ಎಂಬೊಂದು ಮಾತು ನಿಮ್ಮನ್ನು ಕರಗಿಸದೆ ಇರದು. ನಿಮ್ಮ ಬಳಿ ಧಾರಾಳ ಪೆನ್ನುಗಳಿದ್ದರೂ ಆ ಮಗುವಿಗಾಗಿ ಇನ್ನೊಂದು, ಭಿಕ್ಷೆ ಬೇಡದೆ ಉಣ್ಣಬೇಕೆಂಬ ಆ ಮಗುವಿನ ಕಣ್ಣಲ್ಲಿರುವ ಛಲಕ್ಕಾಗಿ ಮತ್ತೊಂದು ಪೆನ್ನನ್ನು ನೀವು ಕೊಂಡ ಉದಾಹರಣೆ ಇಲ್ಲದಿರಲಿಕ್ಕಿಲ್ಲ.

ದುಡಿಯುವ ಮಗುವನ್ನು ಬೆಂಬಲಿಸಿದ ಸಂತೋಷ ಒಂದೆಡೆ, ಬೆಂಬಲಿಸಿದ್ದು ತಪ್ಪಲ್ಲವೇ ಎಂಬ ಗೊಂದಲವೂ ಇನ್ನೊಂದೆಡೆ. ಬಾಲಕಾರ್ಮಿಕ ಪದ್ಧತಿ ಅಪರಾಧ ಎನ್ನುತ್ತದೆ ಕಾನೂನು, ಓದಿ-ಆಡಬೇಕಾದ ಮಕ್ಕಳು ದುಡಿಯುವುದನ್ನು ಪ್ರೋತ್ಸಾಹಿಸಿದ್ದು ಎಷ್ಟು ಸರಿ ಎಂದು ಚುಚ್ಚುತ್ತದೆ ಮನಸ್ಸು. ಆದರೆ ಅದೇ ಹೊತ್ತಿಗೆ ಇನ್ನೂ ಒಂದಿಷ್ಟು ಪ್ರಶ್ನೆಗಳು ಕಾಡುತ್ತವೆ. ದಿನದ ಕೊನೆಗೆ ಆ ಮಗು ತನ್ನ ಕೈಯ್ಯಲ್ಲುಳಿದ ಐವತ್ತು ರೂಪಾಯಿಯನ್ನು ಜೋಪಡಿಯಡಿ ಕಾಯುವ ಅಮ್ಮನ ಕೈಗಿತ್ತಾಗ ಅವಳ ಕಣ್ಣಂಚಿನಲ್ಲಿ ಜಾರುವ ಹನಿಯ ಬೆಲೆಯೇನು? ಬೆಳ್ಳಂಬೆಳಗ್ಗೆ ಊರೆಲ್ಲ ಸುತ್ತಿ ಹಾಲು, ಪೇಪರು ಹಾಕುವ ಹುಡುಗ ಅದರಿಂದ ಬಂದ ಹಣದಿಂದಲೇ ಶಾಲಾ ಶುಲ್ಕವನ್ನು ಭರಿಸಿ ಓದಿ ಗಳಿಸಿದ ಭವಿಷ್ಯದ ಮೌಲ್ಯ ಎಷ್ಟು?

ಹಾಗಂತ ಬಾಲಕಾರ್ಮಿಕ ಪದ್ಧತಿ ಎಂಬುದು ಇಷ್ಟು ಸುಲಭವಾಗಿ ಬಿಡಿಸಬಹುದಾದ ಸರಳ ಗಣಿತಸೂತ್ರವೇನೂ ಅಲ್ಲ. ಹತ್ತು ಹಲವು ಆಯಾಮಗಳಿರುವ ಸಂಕೀರ್ಣ ಸಮಸ್ಯೆಯದು. ಅಪಾಯಕಾರಿ ಗಣಿಗಳು, ಕೀಟನಾಶಕ, ರಸಗೊಬ್ಬರ, ಯಂತ್ರೋಪಕರಣ, ಸ್ಫೋಟಕಗಳ ತಯಾರಿಕಾ ಕಾರ್ಖಾನೆಗಳು ಇವುಗಳ ನಡುವೆ ಹಗಲು ಇರುಳೆಂಬ ಪರಿವೆಯಿಲ್ಲದೆ ದುಡಿಮೆಯ ಅನಿವಾರ್ಯತೆಗೆ ಕಟ್ಟುಬಿದ್ದು ಸದಾ ಮಾನಸಿಕ ದೈಹಿಕ ಚಿತ್ರಹಿಂಸೆ ಅನುಭವಿಸುವ ಎಳೆಯ ಜೀವಗಳನ್ನು ನೆನೆದಾಗ ಕರುಳು ಕಣ್ಣೀರಿಡುತ್ತದೆ. ಮಕ್ಕಳ ಕಳ್ಳಸಾಗಾಣಿಕೆಯಂತೂ ಬಾಲಕಾರ್ಮಿಕ ಪದ್ಧತಿಯ ಅತಿಘೋರ ಕರಾಳ ಮುಖ.

ಇಂದು ವಿಶ್ವದಾದ್ಯಂತ ಏನಿಲ್ಲವೆಂದರೂ 16.8 ಕೋಟಿ ಬಾಲಕಾರ್ಮಿಕರಿದ್ದಾರೆ. ಇದು ಜಗತ್ತಿನ ಒಟ್ಟಾರೆ ಮಕ್ಕಳ ಶೇ. 11 ಭಾಗ. ಇವರಲ್ಲೂ ಅರ್ಧದಷ್ಟು ಮಂದಿ ಅತ್ಯಂತ ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲಿರುವ ಬಾಲಕಾರ್ಮಿಕರ ಸಂಖ್ಯೆ 3.3 ಕೋಟಿ. ಬಿಹಾರ, ಉತ್ತರ ಪ್ರದೇಶ, ರಾಜಸ್ತಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳು ಅತ್ಯಂತ ಹೆಚ್ಚು ಬಾಲಕಾರ್ಮಿಕರನ್ನು ಹುಟ್ಟುಹಾಕಿರುವ ರಾಜ್ಯಗಳು.

ಎಲ್ಲವೂ ನಿಜವಾದರೂ ಒಂದು ಪ್ರಶ್ನೆ ನಮ್ಮನ್ನು ವಿಚಲಿತರನ್ನಾಗಿ ಮಾಡುತ್ತದೆ: ಈ ಮಕ್ಕಳೆಲ್ಲ ದುಡಿಯದೆ ಇರುತ್ತಿದ್ದರೆ ಬೇರೇನಾಗಿರುತ್ತಿದ್ದರು? ಬೆಳಗ್ಗಿನ ಹೊತ್ತು ಮನೆಮನೆಗೆ ಪೇಪರ್ ಹಾಕುವ ಹುಡುಗ ಆ ಕೆಲಸ ಮಾಡದಿರುತ್ತಿದ್ದರೆ ಇನ್ನೇನಾಗಿರುತ್ತಿದ್ದ? ಸಂಜೆ ಹೊತ್ತು ಹೋಟೆಲಲ್ಲಿ ಸಪ್ಲೈಯರ್ ಕೆಲಸ ಮಾಡುವ ಹುಡುಗ ಆ ಕೆಲಸ ಮಾಡದಿರುತ್ತಿದ್ದರೆ ಇನ್ನೇನಾಗಿರುತ್ತಿದ್ದ? ಚುಮುಚುಮು ಚಳಿಯಲ್ಲಿ ಹೂವಿನ ಬುಟ್ಟಿ ಹೊತ್ತು ಓಡಾಡಿ ಒಂದಿಷ್ಟು ಸಂಪಾದಿಸುವ ಅಣ್ಣ ತಂಗಿ ಆ ಕೆಲಸ ಮಾಡದಿರುತ್ತಿದ್ದರೆ ಇನ್ನೇನಾಗಿರುತ್ತಿದ್ದರು?

ಬಾಲ್ಯವಂತೂ ಬಡತನದಲ್ಲೇ ಕರಗಿಹೋಗುತ್ತಿದೆ. ತಮ್ಮಿಂದ ಸಾಧ್ಯವಿರುವ ಒಂದಷ್ಟು ಕೆಲಸಗಳನ್ನಾದರೂ ಮಾಡಿ ಅಪ್ಪ-ಅಮ್ಮನಿಗೆ ಕೈಲಾದ ಸಹಾಯ ಮಾಡಬಾರದೇ ಎಂದು ಯೋಚಿಸುವ ಮಕ್ಕಳು ಸಾಕಷ್ಟು ಮಂದಿ. ನಮ್ಮದು ಮೂಲತಃ ಮಡಿವಾಳರ ಕುಟುಂಬ. ಅವರಿವರ ಬಟ್ಟೆಬರೆ ತೊಳೆಯುತ್ತಾ ಸದಾ ಹರಕಲು ಉಡುಪು ತೊಟ್ಟು ಓಡಾಡುವುದೇ ನಮ್ಮ ಕಾಯಕವಾಗಿತ್ತು. ಆದರೆ ಜೀವನಪೂರ್ತಿ ಇದೇ ರೀತಿ ಆಗಬಾರದು ಎಂಬ ಛಲ ಒಂದೊಮ್ಮೆ ನನ್ನ ಮನಸ್ಸಿನಲ್ಲಿ ಮೂಡಿತು. ಚಿಕ್ಕವನಿರುವಾಗಲೇ ಕಡಲೆಗಿಡ, ಮಾವಿನಕಾಯಿ ಕೀಳುವ ಕೆಲಸಕ್ಕೆ ಹೋಗಿ ಒಂದಿಷ್ಟು ಸಂಪಾದಿಸುವುದು ಆರಂಭಿಸಿದೆ. ಮುಂದೆ ಅದೇ ನನ್ನ ಕೈ ಹಿಡಿಯಿತು. ಕೆಲಸ ಮಾಡುತ್ತಲೇ ಪದವಿಯವರೆಗೂ ಓದಿದೆ ಎಂದು ನೆನಪಿಸಿಕೊಳ್ಳುತ್ತಾರೆ ಪಾವಗಡದ ನವೀನ್.

ಕೆಲಸ ಮಾಡದೆ ಹೋದರೆ ನಾನು ಓದುವುದೇ ಸಾಧ್ಯವಿರಲಿಲ್ಲ ಎಂಬ ಹತ್ತಾರು ಹುಡುಗ ಹುಡುಗಿಯರನ್ನು ನಾನು ಖುದ್ದು ನೋಡಿದ್ದೇನೆ, ಅವರಿಗೆ ಪಾಠ ಮಾಡಿದ್ದೇನೆ. ನನ್ನ ಇಂದಿನ ಪರಿಸ್ಥಿತಿಗೆ ದುಡಿಮೆಯೇ ಕಾರಣ. ನನ್ನಲ್ಲಿ ಆತ್ಮವಿಶ್ವಾಸ ತುಂಬಿದ ಬಡತನದ ದಿನಗಳಿಗೂ, ಅಂತಹ ಪರೀಕ್ಷೆ ಒಡ್ಡಿದ ದೇವರಿಗೂ ಧನ್ಯವಾದಗಳು ಎನ್ನುತ್ತಾರೆ ಪ್ರಸ್ತುತ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿರುವ ಬಳ್ಳಾರಿಯ ಈರನಗೌಡ.

ಸಣ್ಣ ವಯಸ್ಸಿನ ಮಕ್ಕಳು ದುಡಿದು ಹಿರಿಯರನ್ನು ಪೊರೆಯಬೇಕು ಎಂಬ ಮಾತಿನಲ್ಲಿ ತಥ್ಯವಿಲ್ಲ ನಿಜ. ಆದರೆ ತಮ್ಮ ಖರ್ಚುಗಳನ್ನಾದರೂ ತಾವು ಭರಿಸಿಕೊಳ್ಳಬೇಕು, ಅಪ್ಪ-ಅಮ್ಮನಿಗೆ ತೀರಾ ಹೊರೆಯಾಗಬಾರದು ಎಂದು ಯೋಚಿಸುವ ಮಕ್ಕಳೂ ಬಹಳ. ಇಂಗ್ಲೆಂಡಿನ ರಾಯಲ್ ಇಕನಾಮಿಕ್ ಸೊಸೈಟಿಯ ಸಮೀಕ್ಷೆಯೊಂದರ ಪ್ರಕಾರ ಬಾಲಕಾರ್ಮಿಕತನವನ್ನು ಸಂಪೂರ್ಣ ನಿಷೇಧಿಸುವುದರಿಂದ ಆಗುವ ಲಾಭಕ್ಕಿಂತಲೂ ನಷ್ಟವೇ ಹೆಚ್ಚು. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯೂ ಬಾಲಕಾರ್ಮಿಕತನದ ಸಂಪೂರ್ಣ ನಿಷೇಧದ ಪರವಾಗಿ ಇಲ್ಲ. 'ನಾವು ಈ ವಿಷಯದಲ್ಲಿ ಕೊಂಚ ಸಡಿಲಿಕೆ ತೋರುವುದು ಅಗತ್ಯ. ಅಭಿವೃದ್ಧಿಶೀಲ ದೇಶಗಳಲ್ಲಿನ ಬಡತನದ ಬಗ್ಗೆ ನಾವು ಪೂರ್ತಿ ಕುರುಡಾಗಿಲ್ಲ. ಆದರೆ ಏನೂ ಮಾಡದಿರುವುದಕ್ಕಿಂತ ಅಪಾಯಕಾರಿ ಕೆಲಸಗಳಲ್ಲಿ ಮಕ್ಕಳು ದುಡಿಯುವುದಂತೆ ಮಾಡುವುದು ಖಂಡಿತ ಒಳ್ಳೆಯದು’ ಎನ್ನುತ್ತದೆ ಐಎಲ್‌ಒ.

ಮಕ್ಕಳು ದುಡಿಯುವುದು ಅವಮಾನಕರ ಎಂದು ಭಾವಿಸುವ ಹೆತ್ತವರು ಭಾರತದಲ್ಲಿದ್ದಾರೆ. ದುಡಿಯುವ ಮಕ್ಕಳಿಗೆ ಪೋಷಕರ ಬೆಂಬಲ ಇಲ್ಲ ಎಂದು ತಿಳಿಯುವವರೂ ಇದ್ದಾರೆ. ಆದರೆ ಕೆನಡಾದಲ್ಲಿ ಪರಿಸ್ಥಿತಿ ಹಾಗಿಲ್ಲ. ಅಲ್ಲಿ ವರ್ಷಕ್ಕೆ ಎರಡು ಬಾರಿಯಾದರೂ ಮಕ್ಕಳು ತಮ್ಮ ಹೆತ್ತವರೊಂದಿಗೆ ಕೆಲಸಕ್ಕೆ ಹೋಗಬೇಕು ಮತ್ತು ಆ ಮೂಲಕ ಅವರ ಕೆಲಸದ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಹೈಸ್ಕೂಲು ಓದುವ ಮಕ್ಕಳಿಗೆ ಅರೆಕಾಲಿಕ ಉದ್ಯೋಗ ನೀಡುವ ಕಾರ್ಪೋರೇಟ್ ಕಂಪೆನಿಗಳಿವೆ. ಸಾಕಷ್ಟು ಅನುಕೂಲವಂತರ ಮಕ್ಕಳೇ ದಿನಸಿ ಅಂಗಡಿ, ಫಾರ್ಮಸಿ, ಬಟ್ಟೆ ಅಂಗಡಿಗಳಲ್ಲಿ ದುಡಿಯುವುದನ್ನು ನಾನು ಕಂಡಿದ್ದೇನೆ. ಇಲ್ಲಿ ಹಣ ಗಳಿಕೆಗಿಂತಲೂ ಮಕ್ಕಳ ದುಡಿಮೆಯ ಹಿಂದೆ ಸ್ವಾವಲಂಬನೆ, ಸ್ವಾತಂತ್ರ್ಯ, ಹಣದ ನಿರ್ವಹಣೆಯ ಕಲಿಕೆ, ಆತ್ಮವಿಶ್ವಾಸ ಗಳಿಕೆಯ ಉದ್ದೇಶ ಇದೆ ಎಂದು ವಿವರಿಸುತ್ತಾರೆ ಕೆನಡಾದಲ್ಲಿ ನೆಲೆಸಿರುವ ಕನ್ನಡತಿ, ಎಂಎಸ್‌ಡಬ್ಲ್ಯೂ ಪದವೀಧರೆ ಶ್ವೇತಾ ಪ್ರಸಾದ್.

ಕೆನಡಾದಂತಹ ಮುಂದುವರಿದ ದೇಶದ ಪರಿಸ್ಥಿತಿಗೂ ಭಾರತದಂತಹ ಅಭಿವೃದ್ಧಿಶೀಲ ದೇಶದ ಪರಿಸ್ಥಿತಿಗೂ ಅಜಗಜಾಂತರವಿದೆ. ಆದರೆ ಉತ್ತಮ ಅಂಶಗಳನ್ನು ಗೌರವಿಸುವುದರಲ್ಲಿ ತಪ್ಪೇನೂ ಇಲ್ಲ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅನುಭವಕ್ಕಾಗಿ ದುಡಿಮೆ ಎಂಬ ಪರಿಕಲ್ಪನೆ ಇದೆ. ಅಲ್ಲಿ ನಿರ್ದಿಷ್ಟ ಹೊತ್ತಿನಲ್ಲಿ ನಿರ್ದಿಷ್ಟ ಕೆಲಸಗಳನ್ನಷ್ಟೇ ಮಕ್ಕಳು ಮಾಡುತ್ತಾರೆ. ಇದು ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಎಂದು ಭಾವಿಸಲಾಗುತ್ತದೆ. ಆದರೆ ಅಭಿವೃದ್ಧಿಶೀಲ ದೇಶಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿದೆ ಎನ್ನುತ್ತಾರೆ ತುಮಕೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕ ಡಾ. ಕೆ. ಜಿ. ಪರಶುರಾಮ.

ತೃತೀಯ ಜಗತ್ತಿನ ದೇಶಗಳಲ್ಲಿ ವ್ಯಾಪಕ ಬಾಲ-ಬಡತನ ಇದೆ. ಇದು ಮಕ್ಕಳ ಕಳ್ಳಸಾಗಾಣಿಕೆಗೂ, ಅವರ ಲೈಂಗಿಕ ಶೋಷಣೆಗೂ ಕಾರಣವಾಗುತ್ತಿದೆ. ಕಾನೂನು ಒಪ್ಪಿರುವ ಕೆಲಸಗಳನ್ನು ಮಾಡುವುದಕ್ಕೆ ಮಕ್ಕಳಿಗೆ ಅನುಮತಿ ನೀಡುವುದರಿಂದ ಈ ವಿಷಮ ಪರಿಸ್ಥಿತಿ ಕೊಂಚ ತಿಳಿಯಾಗಬಹುದು ಎಂಬುದು ಅವರ ಅಭಿಮತ.

ಬಾಲಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ಎಲ್ಲ ರೀತಿಯ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಿಬಿಟ್ಟರೆ ಅದು ಅನೇಕ ಮಕ್ಕಳಿಗೆ ಪ್ರತಿಕೂಲವಾದೀತು ಎಂಬ ಮಾತಿನಲ್ಲಿ ಸತ್ಯವಿದೆ. ಆದರೆ ಒಟ್ಟು ವಿಷಯ ಮೇಲ್ನೋಟಕ್ಕೆ ತೋರುವಷ್ಟು ಸರಳವಂತೂ ಆಗಿಲ್ಲ.

ಚೈಲ್ಡ್ ಲೇಬರ್ ಎಂಬ ಪದವೇ ಶೋಷಣೆಯ ಪ್ರತೀಕ. ಮಕ್ಕಳು ಮನೆಯಲ್ಲಿ ಬಟ್ಟೆ-ಪಾತ್ರೆ ತೊಳೆಯುವುದು, ಹಾಸಿಗೆ ಮಡಚುವುದು, ಮನೆಯನ್ನು ಓರಣವಾಗಿ ಇಟ್ಟುಕೊಳ್ಳುವುದು, ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದು, ಅಪ್ಪ-ಅಮ್ಮನಿಗೆ ಸಹಾಯ ಮಾಡುವುದರಲ್ಲಿ ಏನೇನೂ ತಪ್ಪಿಲ್ಲ. ಆದರೆ ಬಾಲಕಾರ್ಮಿಕತನ ಸಂವಿಧಾನದ ಮೂಲ ಆಶಯಗಳಿಗೇ ವಿರುದ್ಧವಾಗಿದೆ. ಲೇಬರ್ ಎಂಬುದರ ಹಿಂದೆ ಶ್ರಮವನ್ನು ಮಾರಿಕೊಳ್ಳುವುದು ಎಂಬ ಧ್ವನಿಯಿದೆ. ಮಕ್ಕಳು ತಮ್ಮ ಶ್ರಮವನ್ನು ಮಾರುವ, ಆಡಿ ಓದಬೇಕಾದ ಮಕ್ಕಳು ದುಡಿಯುವ, ಅವರು ದುಡಿಯುವುದರಿಂದ ಖರ್ಚು ಕಡಿಮೆ ಎಂಬ ಕಲ್ಪನೆಯೇ ಅನಾಗರಿಕವಾದದ್ದು. ಬಡಮಕ್ಕಳು ದುಡಿಯಬೇಕು ಎಂಬ ಧೋರಣೆ ತಪ್ಪಲ್ಲವೇ? ಎನ್ನುತ್ತಾರೆ ಬೆಂಗಳೂರಿನ ಚೈಲ್ಡ್ ರೈಟ್ಸ್ ಟ್ರಸ್ಟಿನ ಎನ್. ವಿ. ವಾಸುದೇವ ಶರ್ಮಾ.

ಮಂಗಳವಾರ, ಡಿಸೆಂಬರ್ 25, 2018

ಡೆಸ್ಕ್ ಚಿತ್ರಕಥಾ

ಡಿಸೆಂಬರ್ 25, 2018ರ ಉದಯವಾಣಿ 'ಜೋಶ್' ಪುರವಣಿಯಲ್ಲಿ ಪ್ರಕಟವಾದ ಲೇಖನ

ತನ್ನ ವಿದ್ಯಾರ್ಥಿಗಳನ್ನು ಕುರಿತು ಕಾಲೇಜು ಮೇಷ್ಟ್ರೊಬ್ಬ ಶತದಡ್ಡರು ನಾಲಾಯಕ್ಕುಗಳು ಎಂದು ಎಂದಾದರೂ ರೇಗಿದ್ದಾನೆ ಎಂದರೆ ಆತ ಆವರೆಗೆ ಇಡೀ ತರಗತಿಗೆ ಒಮ್ಮೆಯೂ ಪ್ರದಕ್ಷಿಣೆ ಬಂದಿಲ್ಲವೆಂದೇ ಅರ್ಥ. ಬಂದಿದ್ದರೆ ಆತನ ತರಗತಿಯಲ್ಲಿರುವ ಸಿನಿಮಾ ಹೀರೋಗಳು, ಅಮರ ಪ್ರೇಮಿಗಳು, ಮಹಾಕವಿಗಳು, ತತ್ತ್ವಜ್ಞಾನಿಗಳ ಬಗ್ಗೆ ಅವನಿಗೆ ಜ್ಞಾನೋದಯವಾಗದೇ ಇರುತ್ತಿರಲಿಲ್ಲ.

'ರಾತ್ರಿಯಿಡೀ ಓದಿಯೂ ಏನೂ ಬರಿಯಕ್ಕೆ ಹೊಳೀತಿಲ್ರೀ. ದಯಮಾಡಿ ಪಾಸು ಮಾಡಿ ಸರಾ...’ ಎಂದು ಉತ್ತರ ಪತ್ರಿಕೆಯ ಕೊನೆಯಲ್ಲಿ ಸಾಷ್ಟಾಂಗ ಸಮಸ್ಕಾರ ಸಮೇತ ವಿನಂತಿ ಮಾಡಿಕೊಳ್ಳುವ ಉತ್ತರ ಭೂಪರೂ ಕ್ಲಾಸಿನಲ್ಲಿ ಕುಳಿತರೆಂದರೆ ಅವರ ಸುಪ್ತ ಪ್ರತಿಭೆ ತಾನಾಗೇ ಚಿಗುರಲು ಆರಂಭಿಸುತ್ತದೆ. ಅದರಿಂದ ಒಡಮೂಡುವ ಪ್ರಕಾರವೇ ಸಾರಸ್ವತ ಲೋಕದಲ್ಲಿ ತೀರಾ ವಿಶಿಷ್ಟವೆನಿಸುವ ಡೆಸ್ಕ್ ಸಾಹಿತ್ಯ. ತೀರಾ ಬೋರು ಹುಟ್ಟಿಸುವ ಮೇಷ್ಟ್ರುಗಳೇ ಇಂತಹ ಪ್ರತಿಭೆಗಳ ನಿಜವಾದ ಪ್ರೇರಣೆಯಾಗಿರುವುದರಿಂದ ಅವರನ್ನು ಸಾಹಿತ್ಯ ಪೋಷಕರು ಎಂದು ಎಲ್ಲ ರೀತಿಯಿಂದಲೂ ಒಪ್ಪಿಕೊಳ್ಳಬಹುದು.

ಡೆಸ್ಕ್ ಸಾಹಿತ್ಯಕ್ಕೆ ಹಲವು ಆಯಾಮಗಳಿದ್ದರೂ ಅದರಲ್ಲಿ ಪ್ರೇಮಸಾಹಿತ್ಯಕ್ಕೇ ಸಿಂಹಪಾಲು. ಅಲ್ಲದೆ, ಇಂತಹ ಸಾಹಿತಿಗಳ ಪೈಕಿ ಹುಡುಗರದ್ದೇ ಬಹುಸಂಖ್ಯೆ ಎಂಬ ವೈಜ್ಞಾನಿಕ ಸತ್ಯವನ್ನು ಯಾವ ಸಂಶೋಧನೆಯೂ ಇಲ್ಲದೆ ದೃಢೀಕರಿಸಬಹುದು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಎಲ್ಲದರಲ್ಲೂ ಹುಡುಗಿಯರದ್ದೇ ಮೇಲುಗೈ ಎಂದು ಪದೇಪದೇ ಮುಖಪುಟದಲ್ಲಿ ಬರೆಯುವ ಪತ್ರಿಕೆಗಳು ಡೆಸ್ಕ್ ಸಾಹಿತ್ಯ ನಿರ್ಮಾಣದಲ್ಲಿ ಹುಡುಗರದ್ದೇ ಮೇಲುಗೈ ಎಂಬುದನ್ನು ಬೇಷರತ್ತಾಗಿ ಪ್ರಕಟಿಸಬೇಕಾಗುತ್ತದೆ.
ಮೇಘಸಂದೇಶದ ಬಳಿಕ ಪ್ರೇಮಪತ್ರಗಳ ಕಾಲ ಸರಿದುಹೋಗಿ ವಾಟ್ಸಾಪು ಅವತರಿಸಿದರೂ ಡೆಸ್ಕಿನ ಮೇಲೆ ಪ್ರೇಮನಿವೇದನೆ ಮಾಡುವ ಸಂಪ್ರದಾಯಕ್ಕೆ ಎಳ್ಳಿನಿತೂ ಧಕ್ಕೆಯಾಗಿಲ್ಲ. ಯಾವುದಾದರೂ ಡೆಸ್ಕಿನ ಮೇಲೆ ಪ್ರೇಮ ಪ್ರತೀಕವಾದ ಹೃದಯದ ಒಂದಾದರೂ ರೇಖಾಚಿತ್ರ ಇಲ್ಲದೇ ಹೋದರೆ ಅಂತಹ ಕಾಲೇಜನ್ನು ಕಾಲೇಜೆಂದು ಕರೆಯುವುದು ಹುಡುಗರಿಗೆ ಮಾಡುವ ಅವಮಾನವೆಂದೇ ಭಾವಿಸಬಹುದು.

ಡೆಸ್ಕಿನ ಮೇಲೆ ಈಗಾಗಲೇ ಇರುವ ಹೃದಯದ ಚಿತ್ರವನ್ನು ಇನ್ನಷ್ಟು ಬಲಪಡಿಸುವ ಹೊಣೆ ಮುಂದಿನ ವರ್ಷಗಳಲ್ಲಿ ಬರುವ ಕಿರಿಯ ತಲೆಮಾರಿನದ್ದು. ಈ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆಯಿಂದ ಜೂನಿಯರ‍್ಸ್ ಮುಂದುವರಿಸುತ್ತಾರೆಂದು ಕನಿಷ್ಟ ಐದು ವರ್ಷ ಹಳೆಯದಾದ ಯಾವ ಡೆಸ್ಕುಗಳನ್ನು ನೋಡಿದರೂ ಹೇಳಬಹುದು. ಡೆಸ್ಕು ಹಳೆಯದಾದಷ್ಟು ಸಾಹಿತ್ಯ ಹೆಚ್ಚು ಗಟ್ಟಿ.

'ಬುಲ್‌ಬುಲ್ ಮಾತಾಡಕಿಲ್ವ?’ ಎಂಬ ತನ್ನ ಬಹುಕಾಲದ ಬೇಡಿಕೆಯನ್ನು ಹುಡುಗಿ ಕೂರುವ ಡೆಸ್ಕಿನ ಮೇಲೆ ಸೂಚ್ಯವಾಗಿ ಬಹಿರಂಗಪಡಿಸಿ ನಾಪತ್ತೆಯಾಗುವ ಬಯಲುಸೀಮೆಯ ಹುಡುಗ, 'ಎನ್’ ಐ ಮಿಸ್ ಯೂ ಎಂದೋ, ಐ ಲವ್ ಯೂ 'ಕೆ’ ಎಂದೋ ಡೆಸ್ಕಿನ ಮೇಲೆ ಗೀಚಿ ಬರೆದದ್ದು ಹುಡುಗನೋ ಹುಡುಗಿಯೋ ಎಂಬ ರಹಸ್ಯವನ್ನು ಕಾಪಾಡಿಕೊಳ್ಳುವ ಅನಾಮಿಕ ಪ್ರೇಮಿ, ಈ ಕಣ್ಣಿರೋದು ನಿನ್ನನ್ನೇ ನೋಡಲು ಚಿನ್ನೂ ಎಂದೋ, ನೀನಿಲ್ಲನ ನಾನು ನೀರಿಲ್ಲದ ಮೀನು ಎಂದೋ ಒಂದೇ ಸಾಲಿನ ಕವಿತೆಯನ್ನು ಬರೆದು ಅಡಗಿ ಕೂರುವ ಭಾವಜೀವಿ- ಎಲ್ಲರೂ ಈ ಸಾಹಿತ್ಯ ವಲಯದ ಆಧಾರ ಸ್ತಂಭಗಳು.

ಆಕ್ಷನ್ ಪ್ರಿನ್ಸ್‌ಗೂ ಡಿಂಪಲ್ ಕ್ವೀನ್‌ಗೂ ಸಿಂಪಲ್ಲಾಗ್ ಲವ್ ಆಯ್ತು ಎಂದು ತನ್ನ ಪ್ರೇಮಕಥನವನ್ನೇ ಸಿನಿಮಾ ಶೈಲಿಯಲ್ಲಿ ಪ್ರಸ್ತುತ ಪಡಿಸುವ ಸುಪ್ತಪ್ರತಿಭೆ, ಆರ್ ಲವ್ಸ್ ಇ: ಗ್ರೇಟ್ ಲವರ್ಸ್ ಫಾರೆವರ್ ಎಂದು ತಾನು ನಿರ್ಮಿಸಲಿರುವ ಹೊಸ ಸಿನಿಮಾದ ಟೈಟಲನ್ನು ಪ್ರಕಟಿಸುವ ಭಾವೀ ನಿರ್ದೇಶಕ, ಕನ್ನಡ ಮೇಷ್ಟ್ರ ಪಾಠ ಕೇಳುತ್ತಲೇ ಪಕ್ಕದ ಬೆಂಚಿನ ಕನಸಿನ ಕನ್ಯೆಯನ್ನು ನೋಡಿ 'ಓ ನನ್ನ ಚೇತನ’ ಎಂದು ಬರೆದು ಅದರ ಸುತ್ತಲೊಂದು ಹೃದಯದ ನಕಾಶೆಯನ್ನು ಕೊರೆವ ಕಳ್ಳಕವಿ- ಇವರೂ ಈ ಸಾಹಿತ್ಯಸಮಾಜದ ಸಕ್ರಿಯ ನಾಗರಿಕರು.

ಯಾವ ಸಿನಿಮಾ ಹೀರೋಗಳು ಹೆಚ್ಚು ಜನಪ್ರಿಯರು, ಪಡ್ಡೆಗಳ ಹೃದಯ ಗೆದ್ದಿರುವ ಚಿತ್ರಗಳು ಯಾವವೆಂದು ತಿಳಿಯಲೂ ಪ್ರತ್ಯೇಕ ಸಮೀಕ್ಷೆಗಳು ಬೇಕಿಲ್ಲ. ಡೆಸ್ಕುಗಳ ಮೇಲೆ ಐದು ನಿಮಿಷ ಕಣ್ಣಾಡಿಸಿಕೊಂಡು ಬಂದರೆ ಧಾರಾಳವಾಯ್ತು. ಎಲ್ಲ ಬಗೆಯ ರಿಯಲ್ ಸ್ಟಾರುಗಳು, ಗೋಲ್ಡನ್ ಸ್ಟಾರ್‌ಗಳು, ರೆಬೆಲ್ ಸಾರ್‌ಗಳು, ಪವರ್ ಸ್ಟಾರ್‌ಗಳು ಸಾಲುಸಾಲಾಗಿ ಪವಡಿಸಿರುತ್ತಾರೆ. ಅದ್ದೂರಿ, ಭರ್ಜರಿ, ಬಹದ್ದೂರ್, ಗಜಕೇಸರಿ, ಜಗ್ಗುದಾದ, ಕಿರಾತಕ, ರಾಮಾಚಾರಿ... ಎಂಬಿತ್ಯಾದಿ ಸಿನಿಮಾಗಳು ಥಿಯೇಟರುಗಳಲ್ಲಿ ಎಷ್ಟು ವಾರ ಓಡುತ್ತವೋ ಗೊತ್ತಿಲ್ಲ, ನಮ್ಮ ಹುಡುಗರ ಕೃಪೆಯಿಂದ ಡೆಸ್ಕುಗಳ ಮೇಲೆ ಒಂದು ಶತಮಾನವಾದರೂ ಬಾಳಿ ಬದುಕುವುದು ಶತಃಸಿದ್ಧ.

ಭರ್ತಿ ಎರಡು ತಿಂಗಳ ಬಳಿಕ ಕ್ಲಾಸಿಗೆ ಹಾಜರಾಗಿ 'ಪ್ರಶೂ ಈಸ್ ಬ್ಯಾಕ್’ ಎಂದು ಡೆಸ್ಕ್ ಮೇಲೆ ಹಾಜರಿ ಹಾಕಿ ಹೋಗಿ ಮತ್ತೆ ಎರಡು ತಿಂಗಳ ನಾಪತ್ತೆಯಾಗುವ ಉಡಾಳ, ಕರುನಾಡ ಸಿಂಗಂ ರವಿ ಚನ್ನಣ್ಣನವರ್ ಎಂದು ದೊಡ್ಡದಾಗಿ ಬರೆದು ಕುಸುರಿ ಕೆಲಸದಿಂದ ಸಿಂಗರಿಸುವ ಅಪ್ರತಿಮ ಅಭಿಮಾನಿ, 'ಎವರಿಬಡಿ ಈಸ್ ಈಕ್ವಲ್ ಬಿಫೋರ್ ಲಾ’ ಎಂಬ ಮೇಷ್ಟ್ರ ಹೇಳಿಕೆಯನ್ನು ಕರಾರುವಾಕ್ಕಾಗಿ ಬರೆದು ಅದರ ಮುಂದೆ 'ಸೋ, ಮುಂದಿನ ಬೆಂಚೂ ಹಿಂದಿನ ಬೆಂಚಿನ ನಡುವೆ ವ್ಯತ್ಯಾಸ ಇಲ್ಲ ತಿಳ್ಕಳಿ’ ಎಂದು ಷರಾ ನಮೂದಿಸುವ ಕೊನೇ ಬೆಂಚಿನ ಹುಡುಗ- ಇವರೆಲ್ಲ ತರಗತಿ ಬಹುಮುಖ ಪ್ರತಿಭೆಗಳಿಂದ ಕೂಡಿದೆಯೆಂಬುದಕ್ಕೆ ಪ್ರಮುಖ ಸಾಕ್ಷಿಗಳು.

ಇಷ್ಟೆಲ್ಲದರ ನಡುವೆ ಭಾರತೀಯ ಸಂವಿಧಾನದ ಪ್ರಮುಖ ಲಕ್ಷಣಗಳು, ಪ್ರಧಾನಮಂತ್ರಿಯ ಅಧಿಕಾರ ಮತ್ತು ಕರ್ತವ್ಯಗಳು, ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣಗಳು, ಸಣ್ಣ ಕೈಗಾರಿಕೆಗಳ ಸಮಸ್ಯೆಗಳು, ಕುಮಾರವ್ಯಾಸನ ಕಾವ್ಯಸೌಂದರ್ಯ ಮತ್ತಿತರ ಘನಗಂಭೀರ ಟಿಪ್ಪಣಿಗಳೂ ಡೆಸ್ಕುಗಳ ಮೇಲೆ ಕಾಣಸಿಗುವುದುಂಟು. ಇವೆಲ್ಲ ತರಗತಿಲ್ಲಾಗಲೀ ಮನೆಯಲ್ಲಾಗಲೀ ಎಂದೂ ಒಂದು ಪುಟ ನೋಟ್ಸ್ ಬರೆಯದ ಮಹಾನ್ ಸೋಮಾರಿಗಳ ಶ್ರದ್ಧೆಯ ಫಲ ಎಂದು ಮೇಲ್ನೋಟಕ್ಕೇ ಹೇಳಬಹುದು. ಪರೀಕ್ಷೆಯಲ್ಲಿ ಪಾಸಾಗುವುದೇ ಈ ಸಾಹಿತ್ಯ ಪ್ರಕಾರದ ಏಕೈಕ ಉದ್ದೇಶ.

ಈ ಬಹುಮುಖ ಪ್ರತಿಭೆಗಳ ನಡುವಿನ ತತ್ತ್ವಜ್ಞಾನಿಗಳ ಬಗ್ಗೆ ಹೇಳದೆ ಹೋದರೆ ಲೇಖನವೇ ಅಪೂರ್ಣವಲ್ಲವೇ? 'ಒಳ್ಳೆಯವರು ನೆನಪು ನೀಡುತ್ತಾರೆ. ಕೆಟ್ಟವರು ಅನುಭವ ನೀಡುತ್ತಾರೆ. ದುಷ್ಟರು ಪಾಠ ಕಲಿಸುತ್ತಾರೆ. ಅತ್ಯುತ್ತಮರು ಸವಿ ನೆನಪು ನೀಡುತ್ತಾರೆ. ಆದ್ದರಿಂದ ಯಾರನ್ನೂ ದೂಷಿಸುವುದು ಸರಿಯಲ್ಲ. ಎಲ್ಲರಿಂದಲೂ ಒಂದು ರೀತಿಯ ಅನುಕೂಲವಿರುತ್ತದೆ...’ - ಎಂಬೊಂದು ಮಾತು ಬರೆದ ಪುಣ್ಯಾತ್ಮ ಕೊನೆಗೆ ತನ್ನ ಹೆಸರು ಬರೆಯಲು ಮನಸ್ಸಾಗದೆ 'ಗೌತಮ ಬುದ್ಧ’ ಎಂದು ಬರೆದಿದ್ದ. ಅವನಿಗೆ ಡೆಸ್ಕಿನ ಮೇಲೆ ಜ್ಞಾನೋದಯವಾದದ್ದಿರಬೇಕು.

ಶನಿವಾರ, ಡಿಸೆಂಬರ್ 22, 2018

ಮುಚ್ಚಿದ ವ್ಯವಸ್ಥೆಯ 'ತೆರೆದ ಪುಸ್ತಕ'

28 ನವೆಂಬರ್ 2018ರ 'ಪ್ರಜಾವಾಣಿ' ಶಿಕ್ಷಣ ಪುರವಣಿಯಲ್ಲಿ ಪ್ರಕಟವಾದ ಲೇಖನ

ಪ್ರಜಾವಾಣಿ, 28 ನವೆಂಬರ್ 2018
ತೆರೆದ ಪುಸ್ತಕ ಪರೀಕ್ಷೆಗಳ ಬಗ್ಗೆ ಶಿಕ್ಷಣ ಸಚಿವರ ಪ್ರಸ್ತಾಪದಿಂದ ಹುಟ್ಟಿಕೊಂಡ ಚರ್ಚೆಗಳು ಅಲ್ಲಲ್ಲೇ ಮೌನವಾಗತ್ತಿದ್ದ ಹಾಗೆಯೇ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಮುಂದಿನ ವರ್ಷದಿಂದ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳಲ್ಲೂ ತೆರೆದ ಪುಸ್ತಕ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತರುವುದಾಗಿ ಪ್ರಕಟಿಸಿದೆ. ಯಾವುದೇ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಯೊಂದು ಪ್ರಸ್ತಾಪವಾದಾಗ ಅದರ ಬಗ್ಗೆ ಪರ ವಿರೋಧ ಚರ್ಚೆಗಳು ಬರುವುದು ಸಾಮಾನ್ಯ. ಆದರೆ ಅವುಗಳ ಸಾರ್ಥಕತೆಯಿರುವುದು ಅವೇನಾದರೂ ತಾರ್ಕಿಕ ಅಂತ್ಯ ಕಾಣುತ್ತವೆಯೇ ಎಂಬುದರಲ್ಲಿ.

ತೆರೆದ ಪುಸ್ತಕ ಪರೀಕ್ಷೆಯ ಅಗತ್ಯವನ್ನು ಪ್ರತಿಪಾದಿಸುವವರು ಗುರುತಿಸುವ ಪ್ರಧಾನ ಅಂಶಗಳು ಎರಡು: ಮೊದಲನೆಯದು, ಅದು ಮಕ್ಕಳಲ್ಲಿನ ಪರೀಕ್ಷಾ ಭಯವನ್ನು ಹೋಗಲಾಡಿಸುತ್ತದೆ; ಎರಡನೆಯದು, ಅದು ಮಕ್ಕಳಲ್ಲಿ ವಿಶ್ಲೇಷಣಾ ಕೌಶಲವನ್ನು ಬೆಳೆಸುತ್ತದೆ. ಮತ್ತು ಇವೆರಡೂ ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ. ಈ ಅಭಿಪ್ರಾಯದಲ್ಲಿ ಹುರುಳೇನೋ ಇದೆ. ಆದರೆ ಇದರಿಂದಲೇ ನಮ್ಮ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದೋಷಗಳು ಪರಿಹಾರವಾಗುತ್ತವೆಯೇ ಎಂಬುದು ನಮ್ಮ ಮುಂದಿನ ಪ್ರಶ್ನೆ. ವಿಷಯದ ಎರಡೂ ಮಗ್ಗುಲನ್ನು ಪರಿಶೀಲಿಸೋಣ.

ನಮ್ಮಲ್ಲಿ ಚಾಲ್ತಿಯಲ್ಲಿರುವ ಪರೀಕ್ಷಾ ಪದ್ಧತಿ ವಿದ್ಯಾರ್ಥಿ ಗಳಿಸಿದ ಜ್ಞಾನ ಮತ್ತು ಕೌಶಲಗಳ ಮೌಲ್ಯಮಾಪನಕ್ಕಿಂತಲೂ ಆತನ ಜ್ಞಾಪಕ ಶಕ್ತಿಯ ಪರೀಕ್ಷೆ ಆಗಿರುವುದೇ ಹೆಚ್ಚು. ಇಡೀ ಸೆಮಿಸ್ಟರ್ ಓದಿದ್ದರ ಸಾರಸರ್ವಸ್ವವನ್ನು ಕಂಠಪಾಠ ಮಾಡಿ ನೆನಪುಳಿದದ್ದನ್ನು ಮೂರು ಗಂಟೆಗಳಲ್ಲಿ ಕಕ್ಕುವ ಈ ಪದ್ಧತಿ ಯಾವ ರೀತಿಯಲ್ಲೂ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ಬೆಳೆಸೀತು ಎಂದು ನಿರೀಕ್ಷಿಸುವುದು ಕಷ್ಟ. ಬದುಕನ್ನು ಎದುರಿಸುವ ವಿಚಾರ ಹಾಗಿರಲಿ, ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿಯೊಬ್ಬ ತನ್ನ ದಿನನಿತ್ಯದ ಜವಾಬ್ದಾರಿಗಳನ್ನಾದರೂ ಸಮರ್ಥನಾಗಿ ನಿರ್ವಹಿಸಬಲ್ಲನೇ? ಅದಕ್ಕೆ ಬೇಕಾದ ಸಾಮಾನ್ಯ ವಿವೇಕ, ವ್ಯವಹಾರ ಕುಶಲತೆಯನ್ನು ಅವನ ಶಿಕ್ಷಣ ಪದ್ಧತಿ ಬೆಳೆಸಿದೆಯೇ? ಇಲ್ಲವಾದರೆ ಶಿಕ್ಷಣ ಅವನಿಗೇನು ಕೊಟ್ಟಿದೆ? ನೂರಕ್ಕೆ ನೂರು ಅಂಕ ಕೊಟ್ಟ ಪರೀಕ್ಷೆ ಅವನ ಯಾವ ಜ್ಞಾನವನ್ನು ಅಳೆದಿದೆ?

ತೆರೆದ ಪುಸ್ತಕದ ಪರೀಕ್ಷೆ ಇಂತಹ ಸಮಸ್ಯೆಗೇನಾದರೂ ಪರಿಹಾರ ತೋರಿಸೀತೇ ಎಂದು ಅನಿಸುವುದು ಇಂತಹ ಪ್ರಶ್ನೆಗಳ ನಡುವೆ. ಪಠ್ಯಪುಸ್ತಕದಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳ ತಲೆಗೆ ವರ್ಗಾಯಿಸುವುದೇ ಬೋಧನೆ ಎಂಬುದು ರೂಢಿಗತ ಚಿಂತನೆಯಾದರೆ ವಿದ್ಯಾರ್ಥಿಗಳು ಕಲಿಯುವುದನ್ನು ಕಲಿಸುವುದೇ ಬೊಧನೆ ಎಂಬುದು ಹೊಸ ಬಗೆಯ ಚಿಂತನೆ. ಜಗತ್ತು ಆಧುನಿಕವಾಗುತ್ತಿದ್ದಂತೆಯೇ, ದಿನನಿತ್ಯದ ಬದುಕು ಹಾಗೂ ವೃತ್ತಿಜೀವನದಲ್ಲಿ ಹೊಸ ಸವಾಲುಗಳು ಎದುರಾಗುತ್ತಿದ್ದಂತೆಯೇ ಅದಕ್ಕೆ ಸೂಕ್ತವಾದ ಮಾನಸಿಕತೆಯನ್ನು ಸಿದ್ಧಗೊಳಿಸುವುದು ಶಿಕ್ಷಕರ ಹಾಗೂ ಶಿಕ್ಷಣದ ಜವಾಬ್ದಾರಿ.

ಶಿಕ್ಷಣ ತಜ್ಞ ಬೆಂಜಮಿನ್ ಬ್ಲೂಮ್ ಬೋಧನೆಯ ಆರು ಉದ್ದೇಶಗಳನ್ನು ಗುರುತಿಸುತ್ತಾನೆ: ಜ್ಞಾನ, ಗ್ರಹಿಕೆ, ಆನ್ವಯಿಕತೆ, ವಿಶ್ಲೇಷಣೆ, ಸಂಶ್ಲೇಷಣೆ ಹಾಗೂ ಮೌಲ್ಯಮಾಪನ. ಮೊದಲನೇ ಹಂತ ವಿಷಯಗಳನ್ನು ತಿಳಿದುಕೊಳ್ಳುವುದು ಮತ್ತು ಅಗತ್ಯವಿರುವಲ್ಲಿ ನೆನಪಿಸಿಕೊಳ್ಳುವುದಾದರೆ, ಎರಡನೆಯ ಹಂತ ಪಡೆದ ಮಾಹಿತಿಗಳನ್ನು ಅರ್ಥೈಸಿಕೊಳ್ಳುವುದಾಗಿದೆ. ಮೂರನೇ ಹಂತ ನಿರ್ದಿಷ್ಟ ಸಮಸ್ಯೆಗೆ ಜ್ಞಾನವನ್ನು ಅನ್ವಯಿಸಿಕೊಳ್ಳುವುದಕ್ಕೆ ಸಂಬಂಧಿಸಿದ್ದಾದರೆ, ನಾಲ್ಕನೇ ಹಂತ ವಿವಿಧ ಪರಿಕಲ್ಪನೆಗಳನ್ನು ಪರಿಶೀಲಿಸಿ ಅವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದಾಗಿದೆ. ಐದನೇ ಹಂತದಲ್ಲಿ ಪರಿಕಲ್ಪನೆ ಅಥವಾ ವಿಚಾರಗಳ ಕುರಿತು ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾದರೆ ಕೊನೆಯ ಹಂತದಲ್ಲಿ ವಿದ್ಯಾರ್ಥಿಯೇ ಹೊಸ ಚಿಂತನೆಗಳನ್ನು ಸೃಜಿಸಲು ಸಮರ್ಥನಾಗಬೇಕಾಗುತ್ತದೆ. ಸಾಂಪ್ರದಾಯಿಕ ಶಿಕ್ಷಣ ಪದ್ಧತಿ ಮೊದಲನೇ ಹಂತಲ್ಲಿ ಆರಂಭವಾಗಿ ಅದರಲ್ಲೇ ಅಂತ್ಯ ಕಾಣುತ್ತಿರುವುದೇ ವಿದ್ಯಾರ್ಥಿಗಳು ನಂಬಿಕೊಂಡಿರುವ ಪುಸ್ತಕದ ಬದನೆಕಾಯಿಯ ಹಿಂದಿರುವ ರಹಸ್ಯ. ತೆರೆದ ಪುಸ್ತಕ ಪರೀಕ್ಷಾ ಪದ್ಧತಿಯಲ್ಲಿ ಇದಕ್ಕೇನಾದರೂ ಪರಿಹಾರ ದೊರೆತೀತೇ ಎಂಬುದು ಸದ್ಯದ ಪ್ರಶ್ನೆ.

ತೆರೆದ ಪುಸ್ತಕ ಪರೀಕ್ಷೆಯೆಂದರೆ ಪರೀಕ್ಷಾ ಕೊಠಡಿಯೊಳಗೆ ಸಿದ್ಧ ಉತ್ತರಗಳ ಗೈಡುಗಳನ್ನು ಒಯ್ದು ಉತ್ತರಗಳನ್ನು ನಕಲು ಮಾಡುವ ವಿಧಾನವೇನೂ ಅಲ್ಲ. ಪಠ್ಯಪುಸ್ತಕ, ಪರಾಮರ್ಶನ ಗ್ರಂಥ ಮತ್ತಿತರ ಪೂರ್ವನಿರ್ಧರಿತ ಸಾಮಗ್ರಿಗಳನ್ನು ಮಾತ್ರ ಒಳಗೆ ಒಯ್ಯಲು ಅವಕಾಶ ನೀಡಲಾಗುತ್ತದೆ. ಪ್ರಶ್ನೆಪತ್ರಿಕೆಗಳೂ ರೂಢಿಯಲ್ಲಿರುವಂತೆ 'ಎಂದರೇನು’, 'ವ್ಯಾಖ್ಯಾನಿಸಿ’, 'ಪಟ್ಟಿಮಾಡಿ’, 'ವಿವರಿಸಿ’ ಎಂಬಿತ್ಯಾದಿ ಪ್ರಶ್ನೆಗಳಿಗೆ ಸೀಮಿತವಾಗಿರುವುದಿಲ್ಲ. ಅಲ್ಲಿ ವಿಮರ್ಶೆ-ವಿಶ್ಲೇಷಣೆಗಳಿಗೆ ಆದ್ಯತೆ. ಆಗ ಮೌಲ್ಯಮಾಪನದ ವಿಧಾನವೂ ಬದಲಾಗುತ್ತದೆ. ಪದವಿ, ಸ್ನಾತಕೋತ್ತರ ಪದವಿ, ಕಾನೂನು, ವೈದ್ಯಕೀಯ, ಇಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸ್‌ಗಳಲ್ಲಿ ಈ ಪದ್ಧತಿ ಸಾಧ್ಯವಾದೀತೇನೋ? ಆದರೆ ಪ್ರಾಥಮಿಕ ಅಥವಾ ಮಾಧ್ಯಮಿಕ ಶಾಲಾ ಹಂತದಲ್ಲಿ ಇದನ್ನು ಅನುಷ್ಠಾನಕ್ಕೆ ತರುವ ಮುನ್ನ ಸಾಕಷ್ಟು ಯೋಚಿಸಬೇಕಾಗುತ್ತದೆ.

ತೆರೆದ ಪುಸ್ತಕ ಪರೀಕ್ಷೆಗಳ ಪದ್ಧತಿ ಅಮೇರಿಕ, ಆಸ್ಟ್ರೇಲಿಯ, ಫಿನ್‌ಲ್ಯಾಂಡ್, ಕೆನಡಾ, ಜರ್ಮನಿ, ಸ್ವಿಡ್ಜರ್‌ಲ್ಯಾಂಡಿನಂತಹ ದೇಶಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಅಲ್ಲಿ ತೆರೆದ ಪುಸ್ತಕವೇನು, ಪ್ರಶ್ನೆಪತ್ರಿಕೆಯನ್ನು ಮನೆಗೇ ಒಯ್ದು ಪರೀಕ್ಷೆ ಬರೆಯುವ ಪದ್ಧತಿಯೂ ಯಶಸ್ವಿಯಾಗಿದೆ. ಎಂಬ ಕಾರಣಕ್ಕೆ ನಮ್ಮಲ್ಲೂ ಅದು ಯಶಸ್ವಿಯಾದೀತೇ? ಇದು ಕೇವಲ ಪರೀಕ್ಷೆಯ ಪ್ರಶ್ನೆ ಮಾತ್ರವಾಗಿದ್ದರೆ ಉತ್ತರಿಸುವುದು ಸುಲಭವಿತ್ತು. ಆದರೆ ನಮ್ಮ ಸಮಸ್ಯೆ ಪರೀಕ್ಷೆಗೆ ಮಾತ್ರ ಸಂಬಂಧಿಸಿದ್ದಲ್ಲ. ನಮ್ಮ ಶಿಕ್ಷಣ ವ್ಯವಸ್ಥೆ ಆಮೂಲಾಗ್ರ ಪರಿವರ್ತನೆಯನ್ನು ಬಯಸುತ್ತಿದೆ.

ಇಂದಿಗೂ ಬಹುತೇಕ ಶಾಲೆಗಳು ಮೂಲಭೂತ ಸೌಕರ್ಯಗಳ ಕೊರತೆ, ಪೀಠೋಪಕರಣ, ಬೋಧನೋಪಕರಣಗಳ ಕೊರತೆಯಿಂದ ಬಳಲುತ್ತಿವೆ. ಶಿಕ್ಷಕರನ್ನು ಪಾಠಮಾಡುವುದೊಂದನ್ನುಳಿದು ಇನ್ನೆಲ್ಲ ಕೆಲಸಗಳಿಗೂ ಬಳಸಿಕೊಳ್ಳಲಾಗುತ್ತಿದೆ. ಯತಾರ್ಥವಾಗಿ ಅವರಿಗೆ ಮಕ್ಕಳೊಂದಿಗೆ ಬೆರೆಯುವುದಕ್ಕೆ, ಅವರು ಇಷ್ಟಪಡುವಂತೆ ಪಾಠಮಾಡುವುದಕ್ಕೆ ಸಮಯವೇ ಇಲ್ಲ. ಅದರ ಮೇಲೆ ಹೇಗಾದರೂ ಮಾಡಿ ನೂರಕ್ಕೆ ನೂರು ಫಲಿತಾಂಶ ಪಡೆಯುವ ಒತ್ತಡ. ಇದರ ನಡುವೆ ತೆರೆದ ಪುಸ್ತಕದ ಪರೀಕ್ಷೆಗೆ ಮಕ್ಕಳನ್ನು ಸಿದ್ಧಪಡಿಸುವ ಹೊಸ ಬಗೆಯ ಬೋಧನಾ ವಿಧಾನಕ್ಕೆ ಅವರು ಒಗ್ಗಿಕೊಳ್ಳುವುದೆಂತು? ಅದಕ್ಕೆ ತಕ್ಕುದಾದ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವುದಕ್ಕೆ ಎಷ್ಟು ಮಂದಿ ಶಿಕ್ಷಕರು ಸ್ವತಃ ಸಮರ್ಥರಿದ್ದಾರೆ?

ಇನ್ನೊಂದೆಡೆ, ಇಡೀ ಸಮಾಜ ಅಂಕ ಗಳಿಕೆಯ ಓಟದಲ್ಲಿ ನಿರತವಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಪಡೆವ ಅಂಕಗಳೇ ಮಕ್ಕಳ ಒಟ್ಟಾರೆ ಭವಿಷ್ಯದ ಅಡಿಗಲ್ಲುಗಳೆಂಬಂತೆ ಬಿಂಬಿಸಲಾಗುತ್ತಿದೆ. ನಿದ್ದೆ ಮಾಡುವ ನಾಲ್ಕೈದು ಗಂಟೆಗಳ ಹೊರತಾಗಿ ಉಳಿದೆಲ್ಲ ಸಮಯದಲ್ಲೂ ಬೆಳಗು, ಸಂಜೆ, ಮಳೆ, ಚಳಿಗಳೆಂಬ ವ್ಯತ್ಯಾಸ ಗೊತ್ತಾಗದಂತೆ ವಿದ್ಯಾರ್ಥಿಗಳನ್ನು ಟ್ಯೂಶನ್ ಗಿರಣಿಗಳಲ್ಲಿ ರುಬ್ಬಲಾಗುತ್ತಿದೆ. ನೂರಕ್ಕೆ ನೂರು ಅಂಕ ಗಳಿಸುವ ಹೊರತಾಗಿ ಅವರ ವಿದ್ಯಾರ್ಥಿ ಜೀವನಕ್ಕೆ ಇನ್ನೇನೂ ಗುರಿಗಳೇ ಇಲ್ಲ. ಇಂಥ ಮಕ್ಕಳಿಗೆ ಪುಸ್ತಕ ತೆರೆದರೂ ಅಷ್ಟೆ, ಮುಚ್ಚಿದರೂ ಅಷ್ಟೆ. ಪರೀಕ್ಷಾ ಭಯದಿಂದ ಎಷ್ಟು ವಿದ್ಯಾರ್ಥಿಗಳು ಈವರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಗೊತ್ತಿಲ್ಲ, ಆದರೆ ಫಲಿತಾಂಶದ ಮತ್ತು ಅದರಿಂದ ಬರುವ ಪ್ರಕ್ರಿಯೆಯ ಭಯದಿಂದಾಗಿ ಈವರೆಗೆ ಪ್ರಾಣಕಳಕೊಂಡಿರುವ ಅಮಾಯಕ ಜೀವಗಳು ಸಾವಿರಾರು.

ಈ ಮೂಲಭೂತ ವ್ಯವಸ್ಥೆಯನ್ನು ಸರಿಪಡಿಸದೆ ಏಕಾಏಕಿ ತೆರೆದ ಪುಸ್ತಕ ಪರೀಕ್ಷೆಗಳನ್ನು ಜಾರಿಗೆ ತಂದು ಎಲ್ಲವನ್ನೂ ಬದಲಾಯಿಸಿಬಿಡುತ್ತೇವೆ ಎಂಬ ಯೋಚನೆ ಮೂರ್ಖತನದ್ದು. ಒಳಗೆ ಮುಳ್ಳನ್ನು ಉಳಿಸಿಕೊಂಡು ಹೊರಗಿನಿಂತ ಎಷ್ಟು ಮುಲಾಮು ಹಚ್ಚಿದರೇನು ಪ್ರಯೋಜನ?


ಬುಧವಾರ, ಡಿಸೆಂಬರ್ 19, 2018

ಒಂದೇ ಜಗತ್ತು: ಹಲವು ದೀಪಾವಳಿ

'ಹೊಸದಿಗಂತ' ದೀಪಾವಳಿ ವಿಶೇಷಾಂಕ 2018ರಲ್ಲಿ ಪ್ರಕಟವಾದ ಲೇಖನ

ಹೊಸದಿಗಂತ ದೀಪಾವಳಿ ವಿಶೇಷಾಂಕ 2018
ದೀಪಾವಳಿಯಷ್ಟು ವರ್ಣಮಯ ಹಬ್ಬ ಭಾರತದಲ್ಲಿ ಮತ್ತೊಂದು ಹೇಗೆ ಇಲ್ಲವೋ, ಅದರಷ್ಟು ವಿಸ್ತಾರವಾದ ಮಾನ್ಯತೆ ಪಡೆದ ಹಬ್ಬವೂ ಜಗತ್ತಿನಲ್ಲಿ ಇನ್ನೊಂದಿಲ್ಲ ಎನಿಸುತ್ತದೆ. ಅಷ್ಟರಮಟ್ಟಿಗೆ ದೀಪಾವಳಿ ಸರ್ವಮಾನ್ಯ, ವಿಶ್ವಮಾನ್ಯ. ಫಿಜಿ, ನೇಪಾಳ, ಮಾರಿಷಸ್, ಮಯನ್ಮಾರ್, ಸಿಂಗಾಪುರ, ಶ್ರೀಲಂಕಾ, ಟ್ರಿನಿಡಾಡ್, ಇಂಗ್ಲೆಂಡ್, ಇಂಡೋನೇಷ್ಯಾ, ಜಪಾನ್, ಥಾಯ್‌ಲ್ಯಾಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯ, ಅಮೇರಿಕಗಳಲ್ಲೆಲ್ಲ ದೀಪಾವಳಿ ವಿಶಿಷ್ಟವಾಗಿ ಆಚರಿಸಲ್ಪಡುತ್ತದೆ. ಈ ದೇಶಗಳ ಪೈಕಿ ಬಹುತೇಕ ಕಡೆ ದೀಪಾವಳಿ ಆಚರಣೆಗೆ ಸಾರ್ವಜನಿಕ ರಜೆಯನ್ನೂ ಘೋಷಿಸಲಾಗುತ್ತದೆ ಎಂಬುದು ಗಮನಾರ್ಹ.

ದೀಪಗಳನ್ನು ಬೆಳಗಿ ಕತ್ತಲೆಯ ಎದುರು ಬೆಳಕಿನ ವಿಜಯವನ್ನು ಸಾರುವ ದೀಪಾವಳಿ ಈ ವೈಶಿಷ್ಟ್ಯಪೂರ್ಣ ಸಂದೇಶದಿಂದಲೇ ಜಗತ್ತಿನ ಗಮನ ಸೆಳೆದಿದೆ. ಇನ್ನೊಂದೆಡೆ ಜಗತ್ತಿನ ವಿವಿಧ ಭಾಗಗಳಲ್ಲಿ ಮತ್ತು ಕ್ಷೇತ್ರಗಳಲ್ಲಿ ಭಾರತೀಯರು ತಮ್ಮ ಪ್ರಭಾವಳಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಸಂಕೇತವೂ ಇದೆಂದು ಭಾವಿಸಬಹುದು. ಜಗತ್ತಿನ ಯಾವ ಭಾಗಕ್ಕೆ ದೀಪಾವಳಿ ಹೋದರೂ ಅದರ ಮೂಲ ಸ್ವರೂಪ ಮತ್ತು ಅದು ನೀಡುವ ಸಂದೇಶ ಬದಲಾಗಲು ಸಾಧ್ಯವಿಲ್ಲ ಅಲ್ಲವೇ?

2009ರಲ್ಲಿ ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮ ಖುದ್ದು ಶ್ವೇತಭವನದಲ್ಲಿ ಹಣತೆ ಬೆಳಗುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು ಮತ್ತು ಆ ಮೂಲಕ ವಿಶ್ವದ ಗಮನ ಸೆಳೆದರು. ಪ್ರಪಂಚದ ಬೇರೆ ಬೇರೆ ದೇಶಗಳು ದೀಪಾವಳಿಯನ್ನು ಆಚರಿಸುವ ಬಗೆಯೇನು ಎಂಬುದನ್ನು ಮುಂದೆ ನೋಡೋಣ:

ನೇಪಾಳ
2008ರವರೆಗೂ ಪ್ರಪಂಚದ ಏಕೈಕ ಹಿಂದೂ ರಾಷ್ಟ್ರವೆಂಬ ಅಧಿಕೃತ ಮನ್ನಣೆಗೆ ಪಾತ್ರವಾಗಿದ್ದ ನೇಪಾಳದಲ್ಲಿ ದೀಪಾವಳಿ ಬಹುಸಂಭ್ರಮದ ಹಬ್ಬ. ಹಿಮಾಲಯದ ತಪ್ಪಲಿನಲ್ಲಿ ತಂಪಾಗಿರುವ ನೇಪಾಳಿಯನ್ನರು ಪಶುಪತಿನಾಥನ ಆರಾಧಕರು. ಅವರ ದೀಪಾವಳಿ ಆಚರಣೆ ಕುತೂಹಲಕರವೂ ವಿಶಿಷ್ಟವೂ ಆಗಿದೆ.  ನೇಪಾಳದಲ್ಲಿ ತಿಹಾರ್ ಎಂದು ಕರೆಯಲ್ಪಡುವ ದೀಪಾವಳಿಯು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಮೈತ್ರಿಯ ಸುಂದರ ಸಂಕೇತದಂತಿದೆ.  ದೀಪಾವಳಿಯ ಮೊದಲನೆಯ ದಿನ 'ಕಾಗ್ ತಿಹಾರ್’. ಸಾಮಾನ್ಯ ದಿನಗಳಲ್ಲಿ ಜನರಿಂದ ಅಶುಭವೆಂದು ಕರೆಸಿಕೊಳ್ಳುವ ಕಾಗೆಗಳಿಗೆ ಅಂದು ಅಗ್ರಪೂಜೆ. ಕೆಟ್ಟ ಸುದ್ದಿಗಳನ್ನು ತರಬೇಡಿರಪ್ಪಾ ಎಂದು ಕೈಮುಗಿದು ಕಾಗೆಗಳಿಗೆ ಸಿಹಿತಿಂಡಿ ಬಡಿಸುವುದು ಅಂದಿನ ರೂಢಿ. ಎರಡನೆಯ ದಿನ 'ಕುಕುರ್ ತಿಹಾರ್’. ಅಂದು ನಾಯಿಗಳಿಗೆ ಸಿಹಿಯೂಟ. ಮೂರನೆಯ ದಿನ 'ಗಾಯ್ ತಿಹಾರ್’. ಗೋಪೂಜೆ ಮತ್ತು ಲಕ್ಷ್ಮೀಪೂಜೆ ಅಂದಿನ ವಿಶೇಷ. ನಾಲ್ಕನೆಯ ದಿನ ಗೋರು ತಿಹಾರ್ ಅಥವಾ ಎತ್ತುಗಳಿಗೆ ಪೂಜೆ. ಕೆಲವು ಪಂಗಡಗಳು ಇದನ್ನು ಗೋವರ್ಧನ ಪೂಜೆ ಎಂದು ಅಚರಿಸುವುದೂ ಇದೆ. ಐದನೆಯ ದಿನ 'ಭಾಯಿ ಟಿಕಾ’ ಅಂದರೆ ಸೋದರ-ಸೋದರಿಯರು ಒಂದೆಡೆ ಸೇರಿ ಸಂಭ್ರಮಿಸುವ ದಿನ. ಹೆಣ್ಣುಮಕ್ಕಳು ತಮ್ಮ ಅಣ್ಣತಮ್ಮಂದಿರ ಮನೆಗಳಿಗೆ ತೆರಳಿ ಹಣೆಗೆ ತಿಲಕ ಹಚ್ಚಿ ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದು ಅಂದಿನ ವಿಶೇಷ. ಹಬ್ಬದ ದಿನಗಳಲ್ಲಿ ಸ್ನೇಹಿತರು ಅಲ್ಲಲ್ಲಿ ಸೇರಿ ಜೂಜಾಡುವುದೂ ಇದೆ. ದೀಪಾವಳಿ ಸಮಯದಲ್ಲಿ ಜೂಜಾಡುವುದು ನೇಪಾಳದಲ್ಲಿ ಕಾನೂನುಬಾಹಿರ ಅಲ್ಲ.

ಮಾರಿಷಸ್
ಪ್ರಕೃತಿಯ ಸೌಂದರ್ಯದ ಮಡಿಲಂತಿರುವ ಮಾರಿಷಸ್ ಒಂದು ಬಹುಧರ್ಮೀಯ, ಬಹುಸಂಸ್ಕೃತಿಯ, ಬಹುಭಾಷಿಕ ನಾಡು. ಆಫ್ರಿಕಾದ ಆಗ್ನೇಯ ಕಡಲ ತೀರದಿಂದ 2000 ಕಿ.ಮೀ. ದೂರದಲ್ಲಿರುವ ಮಾರಿಷಸ್ ಜೀವವೈವಿಧ್ಯಕ್ಕೆ ಹೆಸರಾದ ದೇಶವೂ ಹೌದು. ಆಫ್ರಿಕಾದಲ್ಲೇ ಅತಿಹೆಚ್ಚು ಹಿಂದೂ ಜನಸಂಖ್ಯೆಯನ್ನು ಹೊಂದಿರುವ ಈ ದ್ವೀಪರಾಷ್ಟ್ರದಲ್ಲಿ ಧಾರ್ಮಿಕ ಶ್ರದ್ಧಾಳುಗಳು ಹೆಚ್ಚು. ಅದಕ್ಕೇ ಮಾರಿಷಸ್‌ನಲ್ಲಿ ದೀಪಾವಳಿ ವಿಶೇಷ ಹಬ್ಬ. ಗಣಪತಿ ಹಾಗೂ ಲಕ್ಷ್ಮಿಗೆ ವಿಶಿಷ್ಟ ಪೂಜೆ ಸಲ್ಲಿಸುವ ಅಲ್ಲಿನ ಮಂದಿ ಮನೆ, ದೇಗುಲಗಳನ್ನು ವಿಶಿಷ್ಟವಾಗಿ ಅಲಂಕರಿಸುವುದರಲ್ಲೂ ಎತ್ತಿದ ಕೈ.

ದೀಪಾವಳಿಯ ಸಂದರ್ಭ ಹೊಸ ಉಡುಗೆ-ತೊಡುಗೆ, ಒಡವೆಗಳನ್ನು ಖರೀದಿಸುವುದೂ ಇಲ್ಲಿನ ವಾಡಿಕೆ. ಮನೆಗೆ ಸಂಪತ್ತನ್ನು ಬರಮಾಡಿಕೊಳ್ಳುವ ಈ ಸಾಂಕೇತಿಕ ದಿನಕ್ಕೆ ಮಾರಿಷಸ್‌ನಲ್ಲಿ 'ಧಂತೇರ’ ಎಂದು ಹೆಸರು. ದೀಪಾವಳಿಯ ಕೊನೆಯ ದಿನದಂದು ಸೋದರ ಸೋದರಿಯರು ಒಂದೆಡೆ ಸೇರಿ ಸಂಭ್ರಮಿಸುವ ಹಾಗೂ ಸ್ನೇಹಿತರು ಜೂಜಾಡುವ ಸಂಪ್ರದಾಯ ಇಲ್ಲಿಯೂ ಇದೆ. ಆದರೆ ಈ ಜೂಜಾಟದ ಹಿಂದೆ ಶಿವ-ಪಾರ್ವತಿಯರ ಪಗಡೆಯಾಟದ ಕಥೆಯಿದೆ. ದೀಪಾವಳಿಯಂದು ಪಗಡೆ ಆಡುವವರನ್ನು ಅದೃಷ್ಟ ಹುಡುಕಿಕೊಂಡು ಬರಲಿ ಎಂದು ಪಾರ್ವತಿ ಹರಸುತ್ತಾಳೆಂಬುದು ಜನಪದರ ನಂಬಿಕೆ.

ಫಿಜಿ
ದಕ್ಷಿಣ ಪೆಸಿಫಿಕ್‌ನಲ್ಲಿರುವ ಫಿಜಿ ಮುನ್ನೂರಕ್ಕಿಂತಲೂ ಹೆಚ್ಚು ಪುಟ್ಟ ದ್ವೀಪಗಳ ಒಂದು ಸಮೂಹ. ಮನೋಹರ ಕಡಲ ಕಿನಾರೆಗಳು ಹಾಗೂ ಹವಳದ ದಂಡೆಗಳಿಂದ ಕೂಡಿರುವ ಫಿಜಿ ಶ್ರೀಮಂತ ದೇಶವೂ ಹೌದು. ಇಲ್ಲಿನ ಜನಸಂಖ್ಯೆಯ ಶೇ. 28 ಹಿಂದೂಗಳು ಎಂಬುದು ಗಮನಾರ್ಹ ಮತ್ತು ಅದಕ್ಕಾಗಿಯೇ ಇಲ್ಲಿ ದೀಪಾವಳಿ ಒಂದು ವಿಶೇಷ ಆಚರಣೆ. ಇಷ್ಟೊಂದು ಸಂಖ್ಯೆಯ ಭಾರತೀಯರು ಫಿಜಿಯಲ್ಲಿ ಇರುವುದಕ್ಕೆ ಕಾರಣ 19ನೇ ಶತಮಾನದಲ್ಲಿ ಬ್ರಿಟಿಷರು ತೋಟದ ಕೆಲಸಕ್ಕಾಗಿ ಭಾರತೀಯರದನ್ನು ಸಾವಿರಾರು ಸಂಖ್ಯೆಯಲ್ಲಿ ಅಲ್ಲಿಗೆ ಕೊಂಡೊಯ್ದದ್ದು. ದೀಪಗಳ ಅಲಂಕಾರ, ಭೂರಿ ಭೋಜನ, ಪಟಾಕಿಗಳ ಗಮ್ಮತ್ತು ಅಲ್ಲದೆ ಶಾಲೆಗಳಲ್ಲೂ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದು ಫಿಜಿಯ ವೈಶಿಷ್ಟ್ಯತೆ.

ಮಲೇಷ್ಯಾ
ಸುಮಾರು ೪೦ ಲಕ್ಷ ಅನಿವಾಸಿ ಭಾರತೀಯರು ನೆಲೆಸಿರುವ ಮಲೇಷ್ಯಾ ಅತ್ಯುತ್ತಮ ಪ್ರವಾಸೀ ತಾಣವೂ ಹೌದು. ಇಲ್ಲಿ ದೀಪಾವಳಿ ಕುಟುಂಬ ಮರುಮಿಲನಗಳಿಗೆ ಹೆಸರುವಾಸಿ. ವರ್ಷಕ್ಕೊಮ್ಮೆಯಾದರೂ ದೇಶದ ಬೇರೆಬೇರೆ ಕಡೆಯ ಬಂಧುಬಳಗ, ಸ್ನೇಹಿತರು ಒಂದೆಡೆ ಸೇರಿ ದೀಪ ಹಚ್ಚಿ ಪಟಾಕಿ ಸಿಡಿಸಿ ಸಿಹಿಯುಂಡು ಖುಷಿಪಡುವುದಕ್ಕೆ ದೀಪಾವಳಿ ಒಂದು ಒಳ್ಳೆಯ ಕಾರಣ. ಮಲೇಷ್ಯಾದ 'ಲಿಟಲ್ ಇಂಡಿಯಾ’ವಂತೂ ದೀಪಾವಳಿ ವೇಳೆಗೆ ಸಾಕ್ಷಾತ್ ಭಾರತವಾಗಿಯೇ ಮಾರ್ಪಟ್ಟು ಆಕರ್ಷಣೆಯ ಕೇಂದ್ರ ಬಿಂದುವಾಗುತ್ತದೆ.

ಶ್ರೀಲಂಕಾ
ಐತಿಹಾಸಿಕವಾಗಿಯೂ ಸಾಂಸ್ಕೃತಿಕವಾಗಿಯೂ ಶ್ರೀಲಂಕಾ ಭಾರತ ಉಪಖಂಡದ ಒಂದು ಭಾಗವೇ. ಅಲ್ಲಿ ಬೌದ್ಧರನ್ನು ಬಿಟ್ಟರೆ ಹಿಂದೂಗಳೇ ಬಹುಸಂಖ್ಯಾತರು (ಜನಸಂಖ್ಯೆಯ ಶೇ. 13 ಭಾಗ). ಶ್ರೀರಾಮ ರಾವಣನನ್ನು ವಧಿಸಿ ಸೀತಾಲಕ್ಷ್ಮಣ ಸಮೇತನಾಗಿ ಅಯೋಧ್ಯೆಗೆ ಹಿಂತಿರುಗಿದ ದಿನವೇ ದೀಪಾವಳಿ ಆಗಿರುವುದರಿಂದ ಲಂಕೆಗೆ ದೀಪಾವಳಿ ಹಿನ್ನೆಲೆಯಲ್ಲಿ ವಿಶೇಷ ಮಹತ್ವ ಇದೆ. ತಮಿಳರು ಹೆಚ್ಚಾಗಿ ನೆಲೆಸಿರುವ ಶ್ರೀಲಂಕಾದಲ್ಲಿ ಬಹುತೇಕ ಭಾರತದಲ್ಲಿ ನಡೆಯುವಂತೆಯೇ ದೀಪಾವಳಿ ಆಚರಣೆ ನಡೆಯುತ್ತದೆ.

ಅಮೇರಿಕ
ಐದೂವರೆ ಲಕ್ಷ ಹಿಂದೂಗಳು ಸೇರಿದಂತೆ 44 ಲಕ್ಷ ಅನಿವಾಸಿ ಭಾರತೀಯರಿರುವ ಅಮೇರಿಕದಲ್ಲಿ ದೀಪಾವಳಿ ಒಂದು ಅಧಿಕೃತ ಹಬ್ಬವೆನಿಸಿದ್ದು ಹೊಸ ಸಹಸ್ರಮಾನದಲ್ಲಿ. 2003ರಲ್ಲಿ ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಶ್ವೇತಭವನದಲ್ಲಿ ದೀಪಾವಳಿ ಆಚರಣೆಗೆ ಅವಕಾಶ ಮಾಡಿಕೊಟ್ಟರು. ಅಲ್ಲಿಂದ ಶ್ವೇತಭವನದಲ್ಲಿ ಅದೊಂದು ವಾರ್ಷಿಕ ಸಂಪ್ರದಾಯವೇ ಆಯಿತು. 2007ರಲ್ಲಿ ಅಮೇರಿಕದ ಸಂಸತ್ತು ದೀಪಾವಳಿಯ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಸರ್ವಾನುಮತದಿಂದ ಅಂಗೀಕರಿಸಿತು. 2009ರಲ್ಲಿ ಖುದ್ದು ಬರಾಕ್ ಒಬಾಮ ಅವರೇ ವೇದಘೋಷಗಳ ನಡುವೆ ಸಪತ್ನೀಕರಾಗಿ ಶ್ವೇತಭವನದಲ್ಲಿ ದೀಪಾವಳಿಯ ಹಣತೆ ಬೆಳಗಿ ದೀಪಾವಳಿ ಆಚರಿಸಿದ ಮೊದಲ ಅಮೇರಿಕದ ಅಧ್ಯಕ್ಷರೆನಿಸಿದರು. 2016ರಲ್ಲಿ ಅಮೇರಿಕದ ಅಂಚೆ ಇಲಾಖೆಯು ಹಣತೆಯ ಚಿತ್ರವುಳ್ಳ ಅಂಚೆಚೀಟಿ ಬಿಡುಗಡೆ ಮಾಡಿ ಅಲ್ಲಿನ ಭಾರತೀಯರ ಸಂಭ್ರಮಕ್ಕೆ ಇನ್ನಷ್ಟು ಗರಿ ಮೂಡಿಸಿತು.

ಅಮೇರಿಕದ ಡ್ಯೂಕ್, ಪ್ರಿನ್ಸ್‌ಟನ್, ಹೋವಾರ್ಡ್, ರಗ್ಟರ್ಸ್, ಕಾರ್ನೆಗಿ ವಿಶ್ವವಿದ್ಯಾನಿಲಯಗಳಲ್ಲೂ ಭಾರತೀಯ ವಿದ್ಯಾರ್ಥಿಗಳು ವಿಶೇಷವಾಗಿ ದೀಪಾವಳಿ ಆಚರಿಸುತ್ತಾರೆ. ಅಮೇರಿಕದಲ್ಲಿರುವ ಸಿಖ್ಖರಿಗೂ ದೀಪಾವಳಿ ವಿಶೇಷ ಹಬ್ಬ. ಆದರೆ ಅವರ ದೀಪಾವಳಿಯ ಹಿನ್ನೆಲೆ ಬೇರೆ. ಜಹಾಂಗೀರನ ಸೆರೆಯಿಂದ ಹೊರಬಂದ ಗುರು ಹರಗೋವಿಂದರ ಸ್ಮರಣೆಗೆ ಅಮೃತಸರದ ಸ್ವರ್ಣಮಂದಿರ ಹೇಗೆ ಲಕಲಕನೆ ಹೊಳೆಯುತ್ತದೋ ಹಾಗೆಯೇ ಅಮೇರಿಕದಲ್ಲಿರುವ ಗುರುದ್ವಾರಗಳೂ ದೀಪಾವಳಿಯಂದು ಝಗಮಗಿಸುತ್ತವೆ.

ಮಯನ್ಮಾರ್
ಶೇ. 88ರಷ್ಟು ಬೌದ್ಧಧರ್ಮೀಯರೇ ಇದ್ದರೂ ಮಯನ್ಮಾರ್ ಒಂದು ವೈವಿಧ್ಯಮಯ ತಾಣ. ಒಂದು ಕಾಲಕ್ಕೆ ಹಿಂದೂಗಳೇ ಬಹುಸಂಖ್ಯಾತರಾಗಿದ್ದ ದೇಶವೂ ಹೌದು. ಆಗ್ನೇಯ ಏಷ್ಯಾದಲ್ಲೇ ಅತಿ ಹಿಂದುಳಿದ ದೇಶಗಳಲ್ಲೊಂದು ಎಂದು ಕರೆಯಲ್ಪಟ್ಟರೂ ಮಯನ್ಮಾರ್ ಅಥವಾ ಬರ್ಮಾಕ್ಕೆ ದೀಪಾವಳಿ ಆಚರಣೆಯಲ್ಲಿ ಬಡತನವಿಲ್ಲ. ಅಲ್ಲಿ ನೆಲೆಸಿರುವ ಭಾರತೀಯರಿಗೆ ದೀಪಾವಳಿ ಅಭ್ಯುದಯದ ಸಂಕೇತ.

ಇಂಡೋನೇಷ್ಯಾ
ಜಗತ್ತಿನ ಅತಿದೊಡ್ಡ ದ್ವೀಪರಾಷ್ಟ್ರ ಇಂಡೋನೇಷ್ಯಾದಲ್ಲಿ ಮುಸ್ಲಿಮರು ಬಹುಸಂಖ್ಯಾರು (ಶೇ. 87). ಅಲ್ಲಿನ ಬಾಲಿ ದ್ವೀಪದಲ್ಲಿ ದೀಪಾವಳಿ ಆಚರಣೆ ಹೆಚ್ಚು ಅದ್ದೂರಿಯಾಗಿ ನಡೆಯುತ್ತದೆ. ಅಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವುದೂ ಇದಕ್ಕೊಂದು ಕಾರಣ.

ಟ್ರಿನಿಡಾಡ್ & ಟೊಬಾಗೊ
ಕೆರಿಬಿಯನ್ ಪ್ರದೇಶದಲ್ಲಿ ಬರುವ ಟ್ರಿನಿಡಾಡ್ & ಟೊಬಾಗೊ ವೆಸ್ಟ್ ಇಂಡೀಸ್‌ನ ಪ್ರಸಿದ್ಧ ಅವಳಿ ದ್ವೀಪಗಳು. ನೈಸರ್ಗಿಕ ಸಂಪನ್ಮೂಲಗಳಿಂದ ಶ್ರೀಮಂತವಾಗಿರುವ ಇವು ದೀಪಾವಳಿ ಆಚರಣೆಗೂ ಹೆಸರುವಾಸಿ. ಜನಸಂಖ್ಯೆಯ ಶೇ. 18ರಷ್ಟು ಹಿಂದೂಗಳು ಇಲ್ಲಿ ನೆಲೆಸಿರುವುದರಿಂದ ದೀಪವಳಿಗೆ ಸಹಜವಾಗಿಯೇ ಹೆಚ್ಚಿನ ಮಾನ್ಯತೆ ದೊರಕಿದೆ.

ಸಿಂಗಾಪುರ
ಜಗತ್ತಿನ ಶ್ರೀಮಂತ ಹಾಗೂ ತುಟ್ಟಿ ದೇಶಗಳಲ್ಲೊಂದಾಗಿರುವ ಸಿಂಗಾಪುರದ ಭಾರತೀಯರಲ್ಲಿ ತಮಿಳರು ಹೆಚ್ಚು. ಇಲ್ಲಿ ಸುಮಾರು 8.5 ಲಕ್ಷ ಅನಿವಾಸಿ ಭಾರತೀಯರು ಮತ್ತು ಭಾರತ ಮೂಲದ ಜನರಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಚಿನ್ನಾಭರಣಗಳ ಖರೀದಿ ಭರಾಟೆ ಇಲ್ಲಿನ ವಿಶೇಷತೆ.

ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾದ ನತಾಲ್ ಮತ್ತು ಟ್ರಾನ್ಸ್‌ವಾಲ್‌ನಲ್ಲಿ ಹಿಂದೂಗಳು ಅಧಿಕ. ಉತ್ತರ ಪ್ರದೇಶ, ಗುಜರಾತ್ ಹಾಗೂ ತಮಿಳುನಾಡಿನಿಂದ ವಲಸೆ ಹೋದ ಕುಟುಂಬಗಳು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಮಹಾತ್ಮ ಗಾಂಧಿಯವರ ಚಳವಳಿಗಳ ಕಾರಣದಿಂದ ಆಫ್ರಿಕಾದಲ್ಲಿ ಭಾರತೀಯರಿಂಗೆ ಒಂದಿಷ್ಟು ಹೆಚ್ಚಿನದೇ ಅಸ್ಮಿತೆ ಇದೆ. ಅಲ್ಲಿ ಸುಮಾರು 13 ಲಕ್ಷ ಭಾರತೀಯರು ನೆಲೆಸಿದ್ದಾರೆ. ಭಾರತೀಯರು ಇರುವ ಪ್ರದೇಶಗಳಲ್ಲೆಲ್ಲ ದೀಪಾವಳಿ ವೈಭವದಿಂದ ನಡೆಯುತ್ತದೆ. ಕೀನ್ಯಾ, ತಾಂಜಾನಿಯ ಹಾಗೂ ಉಗಾಂಡದಂತಹ ಆಫ್ರಿಕಾದ ಇತರ ದೇಶಗಳಲ್ಲೂ ದೀಪಾವಳಿ ಆಚರಣೆ ಇದೆ.

ಆಸ್ಟ್ರೇಲಿಯ
ಸುಮಾರು 4.68 ಲಕ್ಷ ಭಾರತೀಯರು ಹಾಗೂ ಭಾರತೀಯ ಸಂಜಾತರು ಇರುವ ಆಸ್ಟ್ರೇಲಿಯ ದೀಪಾವಳಿಯನ್ನು ಸಂಭ್ರಮದಿಂದ ಸ್ವಾಗತಿಸುತ್ತದೆ. ಮೆಲ್ಬರ್ನ್, ಸಿಡ್ನಿ, ಕ್ಯಾನ್ಬೆರ, ಅಡಿಲೇಡ್, ಪರ್ತ್ ಹಾಗೂ ಬ್ರಿಸ್ಬೇನ್ ಮಹಾನಗರಗಳಲ್ಲಿ ದೀಪಾವಳಿಯ ಉತ್ಸಾಹ ಹೆಚ್ಚು. 19ನೇ ಶತಮಾನದಲ್ಲಿ ಬ್ರಿಟಿಷರು ತಮ್ಮ ವಸಾಹತುಗಳ ಹತ್ತಿ ಮತ್ತು ಕಬ್ಬಿನ ತೋಟಗಳಿಗೆ ಕಾರ್ಮಿಕರನ್ನಾಗಿ ಭಾರತೀಯರನ್ನು ಅಲ್ಲಿಗೆ ಒಯ್ದ ಪರಿಣಾಮವಾಗಿ ಆಸ್ಟ್ರೇಲಿಯದೊಂದಿಗೆ ನಮ್ಮವರ ಬಾಂಧವ್ಯ ಇನ್ನೂ ಉಳಿದುಕೊಂಡಿದೆ. ಭಾರತೀಯರಲ್ಲದೆ ಶ್ರೀಲಂಕಾ, ಫಿಜಿ, ಮಲೇಷ್ಯಾ, ಸಿಂಗಾಪುರ, ನೇಪಾಳ ಹಾಗೂ ಬಾಂಗ್ಲಾದಿಂದ ಬಂದಿರುವ ಹಿಂದೂಗಳು ಇಲ್ಲಿ ದೀಪಾವಳಿ ಆಚರಣೆಗೆ ಜತೆಯಾಗುತ್ತಾರೆ. ಸಿಡ್ನಿಯಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂ ದೇವಾಲಯಗಳಿವೆ.

ಥಾಯ್ಲಂಡ್
ಶೇ. ೯೫ರಷ್ಟು ಬೌದ್ಧಧರ್ಮೀಯರು ಇರುವ ಥಾಯ್ಲಂಡ್ನಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಆದರೆ ದೀಪಾವಳಿ ಅಲ್ಲಿ ಸಹಜ ಸುಂದರ ಸಂಭ್ರಮದಿಂದಲೇ ಆಚರಿಸಲ್ಪಡುತ್ತದೆ. ಅಲ್ಲಿ ದೀಪಾವಳಿಗೆ 'ಲಾಮ್ ಕ್ರಿಯೋನ್’ ಎಂದು ಹೆಸರು. ದೀಪಾವಳಿ ಆಚರಣೆಗೆ ಇಲ್ಲಿ ಸಿಖ್ ಧರ್ಮೀಯರೂ ಜತೆಯಾಗುತ್ತಾರೆ. ಬಾಳೆ ಎಲೆಯಿಂದ ಮಾಡಿದ ದೀಪಗಳನ್ನು ಹಚ್ಚಿ ನದಿಗಳಲ್ಲಿ ತೇಲಿ ಬಿಡುವುದು ದೀಪಾವಳಿ ದಿನಗಳಲ್ಲಿ ಥಾಲಂಡ್‌ನಲ್ಲಿ ಕಂಡು ಬರುವ ಮನೋಹರ ದೃಶ್ಯ.

ಜಪಾನ್
ಪಾರಂಪರಿಕ ತಾಣಗಳು, ಆತ್ಮರಕ್ಷಣಾ ಕಲೆಗಳು, ಸಂಶೋಧನೆ ಹಾಗೂ ಸ್ವಾದಿಷ್ಟ ಆಹಾರಗಳಿಗೆ ಹೆಸರಾದ ಪೂರ್ವ ಏಷ್ಯಾದ ದ್ವೀಪರಾಷ್ಟ್ರ ಜಪಾನ್ ದೀಪಾವಳಿಯನ್ನೂ ಪ್ರೀತಿಯಿಂದ ಆಚರಿಸುತ್ತದೆ. ಮೊನ್ನೆ ಅಕ್ಟೋಬರ್ ಕೊನೆಯ ವಾರದಲ್ಲಿ ಜಪಾನಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಟೋಕಿಯೋದಲ್ಲಿ ಭಾರತೀಯರೊಂದಿಗೆ ಮಾತನಾಡುತ್ತಾ ದೀಪಾವಳಿ ಹಣತೆಗಳಂತೆ ನೀವು ಭಾರತದ ಬೆಳಕನ್ನು ಜಪಾನ್ ಹಾಗೂ ಜಗತ್ತಿನೆಲ್ಲೆಡೆ ಹರಡುತ್ತಿದ್ದೀರಿ. ನಿಮಗೆ ನನ್ನ ಶುಭಾಶಯ ಮತ್ತು ಮೆಚ್ಚುಗೆಗಳು ಎಂದು ಹೇಳಿರುವುದು ಸ್ಮರಣೀಯ.

ಬುಧವಾರ, ನವೆಂಬರ್ 28, 2018

ಕೃತಿಚೌರ್ಯಕ್ಕೆ ಆತ್ಮಸಾಕ್ಷಿಯ ಕಾನೂನು?

ಪ್ರಜಾವಾಣಿ ಭಾನುವಾರದ ಪುರವಣಿ | 25-11-2018
25 ನವೆಂಬರ್ 2018ರ 'ಪ್ರಜಾವಾಣಿ' ಭಾನುವಾರದ ಪುರವಣಿಯಲ್ಲಿ ಪ್ರಕಟವಾದ ಲೇಖನ

ಸುಮಾರು 15 ವರ್ಷಗಳ ಹಿಂದಿನ ಘಟನೆ. ನಾನು ಆಗಿನ್ನೂ ಎರಡನೇ ವರ್ಷದ ಪದವಿ ಓದುತ್ತಿದ್ದೆ. ಸರ್ಕಾರದ ಇಲಾಖೆಯೊಂದರಿಂದ ಪ್ರಕಟವಾಗುವ ಮಾಸ ಪತ್ರಿಕೆಯೊಂದನ್ನು ಕಾಲೇಜು ಗ್ರಂಥಾಲಯದಲ್ಲಿ ತಿರುವಿ ಹಾಕುತ್ತಿದ್ದೆ. ಮೊದಲ ಪುಟದಲ್ಲೇ ಪ್ರಕಟವಾಗಿದ್ದ ಸಂಪಾದಕೀಯ ಓದುತ್ತಿದ್ದಂತೆಯೇ ಇದನ್ನೆಲ್ಲೋ ಹಿಂದೆ ಓದಿದ್ದೆನಲ್ಲ ಎನಿಸಿತು. ಮುಂದಿನ ಒಂದೆರಡು ಸಾಲು ಓದುತ್ತಿದ್ದಂತೆಯೇ ಇದು ಎಲ್ಲೋ ಓದಿದ್ದಲ್ಲ, ನಾನೇ ಬರೆದದ್ದು ಎಂಬುದು ಸ್ಪಷ್ಟವಾಯಿತು. ಅದರ ಹಿಂದಿನ ವರ್ಷವಷ್ಟೇ ಪತ್ರಿಕೆಯೊಂದರಲ್ಲಿ ನಾನು ಬರೆದಿದ್ದ ಲೇಖನ ಈ ಪತ್ರಿಕೆಯಲ್ಲಿ ಸಂಪಾದಕೀಯವಾಗಿತ್ತು. ಕೊನೆಯಲ್ಲಿ ಐಎಎಸ್ ಅಧಿಕಾರಿಯೊಬ್ಬರ ಸಹಿಯೂ ಇತ್ತು. ಅವರು ಆ ಇಲಾಖೆಯ ಮುಖ್ಯಸ್ಥರಾದ್ದರಿಂದ ಅವರೇ ಆ ಪತ್ರಿಕೆಯ ಸಂಪಾದಕರು. ಚಕಿತನಾದ ನಾನು ಆ ಪುಟದ ಜೆರಾಕ್ಸ್ ಪ್ರತಿಯೊಂದನ್ನು ತೆಗೆದು ನಮ್ಮ ಅಧ್ಯಾಪಕರಿಗೆ ನೀಡಿ ವಿಷಯ ತಿಳಿಸಿದೆ. ಅವರು ಆಗ ಅವರು ಏನು ಹೇಳಿದರೋ ಅಮೇಲೇನು ಮಾಡಿದರೂ ಈಗ ನೆನಪಿಲ್ಲ. ಎಂತೆಂತಹ ಕಳ್ಳರಿದ್ದಾರೆ ಎಂದು ಮೊದಲ ಬಾರಿಗೆ ಖುದ್ದು ಅನುಭವಕ್ಕೆ ಬಂದ ಘಟನೆ ಅದು.

ಇತ್ತೀಚೆಗೂ ಇಂತಹ ಒಂದೆರಡು ಘಟನೆಗಳು ಗಮನಕ್ಕೆ ಬಂದವು. 2016 ಜೂನ್ 2ರ 'ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ನನ್ನ 'ಹಾಜರಾತಿ ಕೊರತೆಯ ಅಡಕತ್ತರಿ’ ಎಂಬ ಲೇಖನ ಕಳೆದ ವರ್ಷ ಎರಡು ಪತ್ರಿಕೆಗಳಲ್ಲಿ ಒಂದು ವಾರದ ಅಂತರದಲ್ಲಿ ಅದೇ ಶೀರ್ಷಿಕೆಯೊಂದಿಗೆ ಪ್ರಕಟವಾಯಿತು. ಒಂದೂ ಅಕ್ಷರ ಹೆಚ್ಚುಕಮ್ಮಿ ಇರಲಿಲ್ಲ. ಲೇಖಕ ಮಾತ್ರ ಬೇರೆ. ಈ ಪುಣ್ಯಾತ್ಮ ವಿಶ್ವವಿದ್ಯಾನಿಲಯವೊಂದರಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಓದುತ್ತಿದ್ದ ವ್ಯಕ್ತಿಯೆಂದು ಆಮೇಲೆ ತಿಳಿಯಿತು. ಪತ್ರಿಕೆಗಳಿಗೆ ಮಾಹಿತಿ ನೀಡಿದೆ. ಬರೆದವನಿಗೂ ಒಂದು ಮೇಲ್ ಮಾಡಿ 'ನೋಡಪ್ಪಾ, ಕೃತಿಸ್ವಾಮ್ಯ ಕಾಯ್ದೆಯ ಪ್ರಕಾರ ಇದೊಂದು ಗಂಭೀರ ಅಪರಾಧ. ನಾನು ನಿನ್ನ ಮೇಲೆ ಕೇಸ್ ಹಾಕಬಹುದು. ಆದರೆ ನೀನು ವಿದ್ಯಾರ್ಥಿ, ನಾನು ಅಧ್ಯಾಪಕ. ಹಾಗೆ ಮಾಡಲು ಹೋಗುವುದಿಲ್ಲ. ಇದು ಒಳ್ಳೆಯ ಕೆಲಸ ಅಲ್ಲ ಎಂಬುದನ್ನಾದರೂ ಅರ್ಥ ಮಾಡಿಕೋ. ಸ್ವಂತಿಕೆ ಬೆಳೆಸಿಕೋ. ಹೆಸರು ಮಾಡುವುದಕ್ಕೆ ತುಂಬ ದಾರಿಗಳಿವೆ’ ಎಂದೆ. ಅವನೋ ಆ ಘಟನೆ ಉದ್ದೇಶಪೂರ್ವಕ ಅಲ್ಲವೆಂದೂ ಆಕಸ್ಮಿಕವಾಗಿ ನಡೆದದ್ದೆಂದೂ ಸಮಜಾಯುಷಿ ನೀಡಿ, ಕ್ಷಮೆ ಕೋರಿದ. ಅವು ನಂಬುವಂತೆ ಇರಲಿಲ್ಲವಾದರೂ ಅದನ್ನು ಮುಂದಕ್ಕೆ ಒಯ್ಯುವ ಉದ್ದೇಶ ನನಗೆ ಇರಲಿಲ್ಲ.

ಕೆಲದಿನಗಳ ಹಿಂದೆ ಇಂಟರ್ನೆಟ್ ಜಾಲಾಡುತ್ತಿದ್ದಾಗ ಮತ್ತೆ ನಾನೇ ಬರೆದ ಸಾಲುಗಳು ಕಣ್ಣಿಗೆ ಬಿದ್ದವು. ಕನ್ನಡ ಪತ್ರಿಕೆಯೊಂದರ ಆನ್‌ಲೈನ್ ಆವೃತ್ತಿಯ ಲೇಖನದ ಲಿಂಕ್ ಅದು. ಪ್ರಕಟವಾಗಿ ಎರಡು ಮೂರು ತಿಂಗಳಾಗಿತ್ತು. ಆನ್‌ಲೈನ್ ಇದ್ದುದರಿಂದ ಈಗ ಗಮನಕ್ಕೆ ಬಂತು. ಪೂರ್ತಿ ಓದಿದರೆ ಹೆಚ್ಚುಕಡಿಮೆ ಮುಕ್ಕಾಲು ಪಾಲು ಲೇಖನ ನಾನು 2005ರಲ್ಲಿ ಪತ್ರಿಕೆಯೊಂದಕ್ಕಾಗಿ ಬರೆದ ಅಂಕಣವೊಂದರ ಯಥಾನಕಲು ಆಗಿತ್ತು. ಕೊನೆಯ ಎರಡು ಮೂರು ಪ್ಯಾರಾಗಳು ಮಾತ್ರ ಬೇರೆ ಇದ್ದವು. ನಡುನಡುವೆ ಒಂದೆರಡು ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳಲಾಗಿತ್ತು. ನಾನು ಫೇಸ್‌ಬುಕ್ಕಿನಲ್ಲಿ ಎರಡು ಮಾತು ಬರೆದು ಸುಮ್ಮನಾದೆ.

ಅಂತರ್ಜಾಲವೆಂಬ ಬಟಾಬಯಲಲ್ಲಿ ಕದಿಯುವುದೂ ಸುಲಭ, ಸಿಕ್ಕಿಹಾಕಿಕೊಳ್ಳುವುದೂ ಸುಲಭ. ಆದರೆ ಕಾನೂನು ಕ್ರಮ ಕೈಗೊಳ್ಳುವುದೊಂದೇ ಇದಕ್ಕೆ ಪರಿಹಾರವಲ್ಲ. ಕೋರ್ಟ್ ಮೆಟ್ಟಿಲೇರಿದ ಕೂಡಲೇ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬುದರಲ್ಲೂ ಅರ್ಥವಿಲ್ಲ. ಕೃತಿಚೌರ್ಯವೆಂಬುದು ಇಂದು ನಿನ್ನೆಯ ವಿಷಯವೂ ಅಲ್ಲ. ಕ್ರಿ.ಶ. 1 ಮತ್ತು 2ನೇ ಶತಮಾನದ ನಡುವೆ ಬದುಕಿದ್ದ ಮಾರ್ಷಲ್ ಕವಿ ತನ್ನ ಸಾಲುಗಳನ್ನು ಇನ್ನೊಬ್ಬ ಕವಿ ಅಪಹರಿಸಿದ್ದಾನೆಂದು ದೂರಿದ ನಿದರ್ಶನವಿದೆ. ಆಮೇಲಿನ ನೂರಾರು ವರ್ಷಗಳಲ್ಲಿ ಕಲೆ-ಸಾಹಿತ್ಯದ ಇತಿಹಾಸದಲ್ಲಿ ಕೇಳಿಬಂದ ಕೃತಿಚೌರ್ಯದ ವಾಗ್ವಾದಗಳಿಗಂತೂ ಲೆಕ್ಕವೇ ಇಲ್ಲ. ಸೃಜನಶೀಲಯ ರಚನೆಗಳಲ್ಲಿ ಯಾವುದು ಮೂಲ, ಯಾವುದು ಖೋಟಾ ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುವುದು ಕಷ್ಟ. ಅದರಲ್ಲೂ ಮುಕ್ತ ಬಳಕೆಯ ಹಕ್ಕುಗಳ ಚಳುವಳಿ (Free Book Culture) ವಿಸ್ತಾರಗೊಳ್ಳುತ್ತಿರುವ ಈ ಕಾಲದಲ್ಲಿ 'ಬೌದ್ಧಿಕ ಆಸ್ತಿ’, 'ಹಕ್ಕುಸ್ವಾಮ್ಯ’ ಮುಂತಾದ ಪದಗಳೂ ಗೊಂದಲಮಯ ಅನ್ನಿಸುವುದುಂಟು. ಹಾಗಂತ ಇನ್ನೊಬ್ಬ ದುಡಿದು ಬೆಳೆದ ಫಸಲನ್ನು ತಮ್ಮದೇ ಎಂದು ಉಂಡು ಬದುಕುವ ಮಂದಿಯನ್ನು ಸಮಾಜ ಎಚ್ಚರದಿಂದ ಗಮನಿಸುವ ಅಗತ್ಯವಂತೂ ಇದ್ದೇ ಇದೆ.

ಸಾಹಿತ್ಯಿಕ, ಶೈಕ್ಷಣಿಕ ಹಾಗೂ ಸಂಶೋಧನ ವಲಯದಲ್ಲಿ ಕೃತಿಚೌರ್ಯವೆಂಬ ಅಪ್ರಾಮಾಣಿಕತೆ ಆಳವಾಗಿ ಬೇರುಬಿಟ್ಟಿದೆ. ಅದರಲ್ಲೂ ಭಾರತದ ಸಂಶೋಧನ ಕ್ಷೇತ್ರ ಪ್ರಪಂಚದಲ್ಲೇ ಕೃತಿಚೌರ್ಯಕ್ಕೆ ಕುಪ್ರಸಿದ್ಧವಾಗಿದೆ. ಜನಸಾಮಾನ್ಯರು ಕದ್ದರೆ ಕೃತಿಚೌರ್ಯ, ಪ್ರಾಧ್ಯಾಪಕರು ಕದ್ದರೆ ಸಂಶೋಧನೆ ಎಂಬಷ್ಟರ ಮಟ್ಟಿಗೆ ನಮ್ಮ ಅಕಡೆಮಿಕ್ ಕ್ಷೇತ್ರ ನಗೆಪಾಟಲಿಗೀಡಾಗಿದೆ. ಇನ್ನೊಬ್ಬರ ಸಂಶೋಧನ ಪ್ರಬಂಧವನ್ನೇ ಇಡಿಯಿಡಿಯಾಗಿ ಕದ್ದು ಪಿಎಚ್‌ಡಿ ಗಿಟ್ಟಿಸಿಕೊಂಡ ಮಹಾನುಭಾವರಿದ್ದಾರೆ. ಬೇರೊಬ್ಬರ ಸಂಶೋಧನ ಫಲಿತಾಂಶಗಳನ್ನು ತಮ್ಮದೇ ಎಂದು ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಿಕೊಂಡು ರಾತೋರಾತ್ರಿ ಪ್ರಸಿದ್ಧರಾಗಿ ಅದನ್ನು ಸಮರ್ಥಿಸಿಕೊಂಡ ನಿರ್ಲಜ್ಜರಿದ್ದಾರೆ. ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಚಾರ ಸಂಕಿರಣ, ಸಮ್ಮೇಳನಗಳಲ್ಲಿ ಮಂಡನೆಯಾಗುವ ಪ್ರಬಂಧಗಳಲ್ಲಿ ಸ್ವಂತದ್ದಲ್ಲದ ಹೂರಣವೆಷ್ಟೋ ಲೆಕ್ಕಕ್ಕಿಲ್ಲ. ಈಗಂತೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವರ್ಷಕ್ಕೆ ಲಕ್ಷಗಟ್ಟಲೆ ಸಂಬಳ ಪೀಕುವ ಕೆಲವು ಅಧ್ಯಾಪಕರನ್ನು ವಿಷಯ ಪರಿಣಿತರು ಎನ್ನುವುದಕ್ಕಿಂತಲೂ 'ವಿಕಿಪೀಡಿಯ ತಜ್ಞ’ರೆಂದು ಕರೆಯುವುದೇ ಹೆಚ್ಚು ಸೂಕ್ತ.

ನೈನಿತಾಲ್‌ನ ಕುಮಾಲ್ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಪ್ರೊ. ಬಿ. ಎಸ್. ರಜಪೂತ್ ಕೃತಿಚೌರ್ಯದ ಆರೋಪದಿಂದಾಗಿ 2002ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಆರಂಭದಲ್ಲಿ ಅವರು ಆರೋಪಗಳನ್ನು ನಿರಾಕರಿಸಿದರೂ ನೋಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿಯೂ ಸೇರಿದಂತೆ ಜಗತ್ತಿನ ಹಲವು ಪ್ರಸಿದ್ಧ ಸಂಶೋಧಕರು ಇದನ್ನು ದೃಢಪಡಿಸಿ ಅಂದಿನ ರಾಷ್ಟ್ರಪತಿ ಎ. ಪಿ. ಜೆ. ಅಬ್ದುಲ್ ಕಲಾಂ ಅವರಿಗೆ ಪತ್ರ ಬರೆದ ಮೇಲೆ ಅವರು ಕೃತಿಚೌರ್ಯವನ್ನು ಒಪ್ಪಿಕೊಂಡು ರಾಜೀನಾಮೆ ನೀಡಿದರು.

2016ರಲ್ಲಿ ಪಾಂಡಿಚೇರಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಚಂದ್ರಾ ಕೃಷ್ಣಮೂರ್ತಿಯವರೂ ಇಂತಹದೇ ಆರೋಪ ಎದುರಾದ್ದರಿಂದ ತಮ್ಮ ಹುದ್ದೆ ತ್ಯಜಿಸಬೇಕಾಯಿತು. ಅವರೂ ತಮ್ಮನ್ನು ಸಮರ್ಥಿಸಿಕೊಳ್ಳಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದೊಂದಿಗೆ ದೀರ್ಘ ಹೋರಾಟ ನಡೆಸಿದ್ದರು. ಕೊನೆಗೂ ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರೇ ಅವರ ವಜಾಕ್ಕೆ ಆದೇಶಿದ ಬಳಿಕ ತಾವೇ ರಾಜೀನಾಮೆ ನೀಡಿದರು.

ಸಂಶೋಧಕರನ್ನೇಕೆ, ನ್ಯಾಯಾಧೀಶರನ್ನೂ ಕೃತಿಚೌರ್ಯದ ಆರೋಪ ಹೊರತು ಮಾಡಿಲ್ಲ ಎಂಬುದನ್ನು ಗಮನಿಸಬೇಕು. 2015ರಲ್ಲಿ ದೆಹಲಿ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವೊಂದು ನೀಡಿದ ತೀರ್ಪಿನಲ್ಲೇ ಮೂಲವನ್ನು ಉಲ್ಲೇಖಿಸದೆ ಶ್ವೇತ್ರಶ್ರೀ ಮಜುಂದಾರ್ ಮತ್ತು ಈಶಾನ್ ಘೋಷ್ ಎಂಬವರ ಪ್ರಬಂಧದ 33 ಪ್ಯಾರಾಗಳನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಲಾಯಿತು. ಕೊನೆಗೆ ಆ ತೀರ್ಪು ನೀಡಿದ ನ್ಯಾಯಾಧೀಶರು ಆಗಿರುವ ಪ್ರಮಾದವನ್ನು ಒಪ್ಪಿಕೊಂಡು 'ಇದು ಇಂಟರ್ನಿಯೊಬ್ಬರು ಮಾಡಿದ ತಪ್ಪಿನಿಂದಾದ ಎಡವಟ್ಟು’ ಎಂದು ವಿಷಾದ ವ್ಯಕ್ತಪಡಿಸಿದಲ್ಲಿಗೆ ಪ್ರಕರಣ ಸುಖಾಂತ್ಯ ಕಂಡಿತು.

ಅಕಡೆಮಿಕ್ ವಲಯದಲ್ಲದೆ ಕಲೆ, ಸಿನಿಮಾ, ಸಾಹಿತ್ಯ ಕ್ಷೇತ್ರದಲ್ಲೂ ಕೃತಿಚೌರ್ಯದ ಕುರಿತ ಗುರುತರ ಆರೋಪಗಳು ಕೇಳಿಬರುತ್ತಲೇ ಇವೆ. 2011ರ ಸ್ವರ್ಣಕಮಲ ಪ್ರಶಸ್ತಿ ಪುರಸ್ಕೃತ 'ಬ್ಯಾರಿ’ ಸಿನಿಮಾ ತಮ್ಮ 'ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಯ ನಕಲು ಎಂದು ಸಾರಾ ಅಬೂಬಕ್ಕರ್ ಆರೋಪಿಸಿದರು. ಚೇತನ್ ಭಗತ್ ಅವರು ತಮ್ಮ 'ಒನ್ ಇಂಡಿಯನ್ ಗರ್ಲ್’ ಕೃತಿಯಲ್ಲಿ ತಮ್ಮ 'ಲೈಫ್, ಓಡ್ಸ್ & ಎಂಡ್ಸ್’ ಪುಸ್ತಕದ ಪಾತ್ರ, ಸ್ಥಳ ಹಾಗೂ ಭಾವನಾತ್ಮಕ ಹರಿವನ್ನು ಕದ್ದಿದ್ದಾರೆ ಎಂದು ಕಳೆದ ವರ್ಷ ಅನ್ವಿತಾ ಬಾಜಪಯೀ ಆರೋಪಿಸಿದರು. ಸ್ವತಃ ಚೇತನ್ ಭಗತ್ ಅವರು ರಾಜ್‌ಕುಮಾರ್ ಹಿರಾನಿ ಅವರ 'ತ್ರೀ ಈಡಿಯಟ್ಸ್’ ಸಿನಿಮಾ ತಮ್ಮ 'ಫೈವ್ ಪಾಯಿಂಟ್ಸ್ ಸಮ್‌ವನ್’ ಕೃತಿಯ ರೂಪಾಂತರದಂತಿದೆ ಎಂದು 2009ರಲ್ಲಿ ಆರೋಪಿಸಿದ್ದರು.

ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ 'ದಿ ಹಿಂದೂ’ ಪತ್ರಿಕೆಯಲ್ಲಿ ೨೦೧೫ರಲ್ಲಿ ಪ್ರಕಟಿಸಿದ 'ಫ್ರಂ ವೆಲ್‌ಫೇರ್ ಟು ಪ್ಯಾಟರ್ನಲಿಸಂ’ ಲೇಖನವು ಅದೇ ಪತ್ರಿಕೆಯಲ್ಲಿ ಪ್ರಕಟವಾದ ಜಿ. ಸಂಪತ್ ಅವರ 'ಮಿ. ಮೋದೀಸ್ ವಾರ್ ಆನ್ ವೆಲ್‌ಫೇರ್’ ಲೇಖನದಿಂದ ಅನೇಕ ಪ್ಯಾರಾಗಳನ್ನು ಒಳಗೊಂಡಿದೆ ಎಂದು ಆರೋಪಿಸಲಾಯಿತು. ಇದನ್ನು ಸ್ವತಃ ಮೊಯ್ಲಿಯವರೇ ಆಮೇಲೆ ಒಪ್ಪಿಕೊಂಡು ಕಣ್ತಪ್ಪಿನಿಂದಾದ ದೋಷ ವಿಷಾದಿಸಿದರು. ಅಮೀರ್ ಖಾನ್ ಅವರ 'ಪಿಕೆ’, ರಜನೀಕಾಂತ್ ನಟನೆಯ 'ಲಿಂಗಾ’, 'ಕಾಳಕರಿಕಾಳನ್’, ಉಪೇಂದ್ರ ನಟನೆಯ 'ಕಠಾರಿವೀರ ಸುರಸುಂದರಾಂಗಿ’ ಚಿತ್ರಗಳ ವಿರುದ್ಧವೂ ಕೃತಿಚೌರ್ಯದ ಆರೋಪಗಳು ಕೇಳಿಬಂದಿವೆ.

ಕೃತಿಸ್ವಾಮ್ಯ ಕಾಯ್ದೆ 1957ರ ಹೊರತಾಗಿ ಕೃತಿಚೌರ್ಯವನ್ನು ತಡೆಗಟ್ಟುವ ಯಾವುದೇ ನಿರ್ದಿಷ್ಟ ಕಾನೂನುಗಳು ಭಾರತದಲ್ಲಿಲ್ಲ. ವಾಸ್ತವವಾಗಿ ಕೃತಿಸ್ವಾಮ್ಯ ಹಾಗೂ ಕೃತಿಚೌರ್ಯದ ತಡೆಗಟ್ಟುವಿಕೆ ವಿಭಿನ್ನ ವಿಷಯಗಳು. ಕೃತಿಸ್ವಾಮ್ಯ ಕಾಯ್ದೆಯು ಕೃತಿಸ್ವಾಮ್ಯದ ಉಲ್ಲಂಘನೆ ಎಂದರೇನು ಎಂಬುದನ್ನು ವ್ಯಾಖ್ಯಾನಿಸುತ್ತದೆಯೇ ಹೊರತು ಕೃತಿಚೌರ್ಯವನ್ನು ವ್ಯಾಖ್ಯಾನಿಸುವುದಿಲ್ಲ. ಕಾಯ್ದೆಯ ಸೆಕ್ಷನಗ 63ರ ಪ್ರಕಾರ ಕಾಯ್ದೆಯನ್ನು ಉಲ್ಲಂಘಿಸಿದವರಿಗೆ 6 ತಿಂಗಳಿನಿಂದ 3 ವರ್ಷದವರೆಗೆ ಜೈಲುಶಿಕ್ಷೆ ಹಾಗೂ ರೂ. 50,000 ದಿಂದ ರೂ. 2 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ.

ಅಕಡೆಮಿಕ್ ಕ್ಷೇತ್ರದ ಕೃತಿಚೌರ್ಯವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು ಎಂಬ ಕೂಗು ಇತ್ತೀಚೆಗೆ ಜೋರಾಗಿ ಕೇಳುಬರುತ್ತಿದೆ. ಸಂಶೋಧನಾ ವಲಯದ ಕೃತಿಚೌರ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಯುಜಿಸಿ ಇತ್ತೀಚೆಗೆ ಒಂದಷ್ಟು ನಿಯಮಗಳನ್ನು ರೂಪಿಸಿದೆ. ಯಾವುದೇ ಪಿಎಚ್‌ಡಿ ಪ್ರಬಂಧ ಸ್ವೀಕರಿಸುವ ಮೊದಲು ಕೃತಿಚೌರ್ಯ ಪರಿಶೀಲನೆ ಕಡ್ಡಾಯಗೊಳಿಸಿದೆ. ಪರಿಶೀಲನೆ ವೇಳೆಗೆ ಶೇ. 10-40ರಷ್ಟು ಕೃತಿಚೌರ್ಯ ಕಂಡುಬಂದರೆ ಸಂಶೋಧನಾರ್ಥಿಯು 6 ತಿಂಗಳೊಳಗೆ ಪ್ರಬಂಧವನ್ನು ಮರುಸಲ್ಲಿಸಬೇಕಾಗುತ್ತದೆ. ಶೇ. 40-60ರಷ್ಟು ಕೃತಿಚೌರ್ಯವಿದ್ದರೆ ಅಭ್ಯರ್ಥಿಯು ಒಂದು ವರ್ಷ ಡಿಬಾರ್ ಆಗಬೇಕಾಗುತ್ತದೆ. ಅದಕ್ಕಿಂತಲೂ ಹೆಚ್ಚಿದ್ದರೆ ನೋಂದಣಿಯನ್ನೇ ರದ್ದು ಮಾಡಬಹುದು. ಕೃತಿಚೌರ್ಯ ಸಾಬೀತಾದರೆ ಮಾರ್ಗದರ್ಶಕ ಪ್ರಾಧ್ಯಾಪಕರ ವೇತನ ಭಡ್ತಿಗೆ ಕತ್ತರಿ ಬೀಳಲಿದೆ. ಶೇ. 60ಕ್ಕಿಂತಲೂ ಹೆಚ್ಚು ಕೃತಿಚೌರ್ಯ ಕಂಡುಬಂದರೆ ವರನ್ನು ಅಮಾನತುಗೊಳಿಸುವ ಇಲ್ಲವೇ ಕೆಲಸದಿಂದ ವಜಾ ಮಾಡುವ ಅವಕಾಶವೂ ಹೊಸ ನಿಯಮದಲ್ಲಿದೆ.

ಕಾನೂನು ನಿಯಮಗಳಿಂದಲೇ ಎಲ್ಲ ಸಮಸ್ಯೆಗಳು ಪರಿಹಾರವಾಗುವುದಿದ್ದರೆ ಜಗತ್ತು ಯಾವತ್ತೋ ಕಲ್ಯಾಣರಾಜ್ಯವಾಗುತ್ತಿತ್ತು. ಆತ್ಮಸಾಕ್ಷಿಗಿಂತ ಮಿಗಿಲಾದ ಕಾನೂನು ಇದೆಯೇ?

ಮಂಗಳವಾರ, ನವೆಂಬರ್ 20, 2018

ಆಹಾ ಪುರುಷಾಕಾರಂ!

ನವೆಂಬರ್ 18, 2018ರಂದು ವಿಜಯ ಕರ್ನಾಟಕ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿರುವ ಲೇಖನ

ಯಾರು ನಿಮ್ಮ ಹೀರೋ? ಹಾಗೆಂದು ಆಗಷ್ಟೇ ಪದವಿ ತರಗತಿಗಳಿಗೆ ಹೊಸದಾಗಿ ಪ್ರವೇಶ ಪಡೆದು ಬೆರಗುಗಣ್ಣುಗಳೊಂದಿಗೆ ಕುಳಿತಿದ್ದ ಹುಡುಗ ಹುಡುಗಿಯರನ್ನು ಕೇಳಿದೆ. ಒಂದಷ್ಟು ಸಿನಿಮಾ ನಾಯಕರು, ಸ್ವಾತಂತ್ರ್ಯ ಹೋರಾಟಗಾರರು, ರಾಜಕೀಯ ನೇತಾರರರ ಹೆಸರುಗಳು ಒಂದಾದಮೇಲೊಂದು ಬಂದವು. ಅವೆಲ್ಲ ನಿರೀಕ್ಷಿತವೇ ಆಗಿದ್ದರೂ ಆ ಹೊಸ ಮಕ್ಕಳು ತಿರುಗಿ ಇನ್ನೊಂದು ಪ್ರಶ್ನೆ ಕೇಳಬಹುದೆಂದು ಅಂದುಕೊಂಡಿರಲಿಲ್ಲ. ‘ನಿಮ್ಮ ಹೀರೋ ಯಾರು ಸರ್?’ ನಾನು ಚಕಿತನಾಗಿ ಎರಡು ಕ್ಷಣ ತಡೆದು ‘ನನ್ನ ಅಪ್ಪ’ ಅಂದೆ. ಹ್ಞಾ? ಎಂದು ಚುರುಕಾದ ಅವರ ಮುಖದಲ್ಲೀಗ ಮಂದಹಾಸ ಬೆರೆತ ಸಣ್ಣ ಕುತೂಹಲವೂ ಇತ್ತು.

ಅವರಿಗೆ ಎರಡು ಮಾತಿನ ವಿವರಣೆ ಕೊಡುವುದು ನನಗೆ ಅನಿವಾರ್ಯವಾಗಿತ್ತು: ನನ್ನ ಅಪ್ಪ ಹುಟ್ಟಿ ಎರಡೂವರೆ ವರ್ಷಕ್ಕೆ ಅವರಮ್ಮ ತೀರಿಕೊಂಡರಂತೆ. ಎರಡು ಹೊತ್ತಿನ ಕೂಳು ಸಂಪಾದಿಸುವುದೇ ಬದುಕಿನ ಏಕೈಕ ಉದ್ದೇಶವಾಗಿದ್ದ ಮೇಲೆ ಓದು ಬರಹ ದೂರವೇ ಉಳಿಯಿತು. ಎಲ್ಲೋ ಎರಡನೇ ಕ್ಲಾಸು ಮುಗಿಸಿದ್ದರೆಂದು ಕಾಣುತ್ತದೆ. ಆಮೇಲಿನದ್ದೆಲ್ಲ ಅವರಿವರ ಮನೆ ಚಾಕರಿಯ ಗತವೈಭವ.

ಓಡಾಟ, ಹೋರಾಟ. ಮರಳಿನಿಂದ ಎಣ್ಣೆ ಹಿಂಡುವ ಛಲ. ಬರಡು ನೆಲದಲ್ಲಿ ಬೆಳೆ ತೆಗೆವ ಬಲ. ನಮಗೆ ನೆನಪಿರುವುದು ನಸುಕಿನ ಮೂರು ಗಂಟೆಗೆ ಎದ್ದು ತಲೆ ಮೇಲೆ ಬಾಳೆಗೊನೆ ಹೊತ್ತು ಹದಿನೈದು ಕಿಲೋಮೀಟರ್ ಕಾಡು ಹಾದಿ ಬಳಸಿ ಸಂತೆಗೆ ಹೋಗಿ ಮಾರಾಟ ಮಾಡಿ ಮಟಮಟ ಮಧ್ಯಾಹ್ನ ಅಕ್ಕಿ ದಿನಸಿ ಹೊರೆ ಹೊತ್ತು ಬಸವಳಿದು ಬಂದು ಮುಳಿಹುಲ್ಲಿನ ಮನೆಯ ಸೆಗಣಿ ಸಾರಿಸಿದ ಜಗುಲಿಯ ಅಂಚಿನಲ್ಲಿ ಕುಳಿತು ಮಜ್ಜಿಗೆ ನೀರು ಕುಡಿಯುತ್ತಿರುವ ಅಪ್ಪನ ಕಪ್ಪುಬಿಳುಪು ಚಿತ್ರ.

ಆ ಚಿತ್ರ ಕಣ್ಣೆದುರು ಬಂದಾಗಲೆಲ್ಲ ‘ನನಗೆ ಕೇಳಿಸದೇ ಅಪ್ಪಯ್ಯ/ ಆ ಬಿರುಕು ಬಿಟ್ಟಿರುವ ಬರಡು ಕೊಳಗಳ ಹಿಂದೆ/ ಮಡುಗಟ್ಟಿ ನಿಂತಿರುವ ಕೊಳಗಗಟ್ಟಲೆ ಉಪ್ಪುನೀರು?/ ಒಂದೊಮ್ಮೆ ಜೀವಜಲದಲ್ಲಿ ಮಿಂದೆದ್ದ ಮೀನುಗಳ ಕಳೇಬರ?/ ಕರಟಿ ಗಬ್ಬದ್ದಿರುವ ನೈದಿಲೆ, ತಾವರೆಗಳ ರಾಶಿರಾಶಿ?’ ಎಂಬಿತ್ಯಾದಿ ಕವಿತೆ ಸಾಲುಗಳನ್ನೆಲ್ಲ ಗೀಚಿ ಪುಸ್ತಕಗಳ ನಡುವೆ ಜೋಡಿಸಿದ್ದೂ ಉಂಟು. ಅಪ್ಪನ ಬಳಿ ನೂರೆಂಟು ಪುರಾಣ ಕತೆಗಳಿದ್ದವು, ಬರೆಯದ ಆತ್ಮಕಥೆಯ ಸಾವಿರದೆಂಟು ಪುಟಗಳಿದ್ದವು. ಎಷ್ಟು ಓದಿದೆವೋ ಎಷ್ಟು ಓದದೆ ಉಳಿದೆವೋ ಗೊತ್ತಿಲ್ಲ, ಆದರೆ ಮೂವತ್ತು ಚಿಲ್ಲರೆ ವರ್ಷಗಳಲ್ಲಿ ಅಪ್ಪನಂತಹ ಇನ್ನೊಬ್ಬ ಮಹಾತ್ಮ ಕಣ್ಣಿಗೆ ಬಿದ್ದಿಲ್ಲ. ಅದಕ್ಕೆ ಅವರೇ ನನ್ನ ಹೀರೋ.

ಎಂಬ ಇತಿವೃತ್ತವನ್ನು ಮೂರು ವಾಕ್ಯದಲ್ಲಿ ಹೇಳಿಮುಗಿಸಿದೆ. ಬಹುಶಃ ಅವರೆಲ್ಲರಿಗೂ ಅವರವರ ಬಾಲ್ಯದ ನೆನಪು ಬಂದಿರಬೇಕು. ಅವರಲ್ಲಿ ಬಹುತೇಕರು ತೀರಾ ಬಡತನದಿಂದ ಬಂದ ಕಷ್ಟಜೀವಿಗಳೇ. ಅದರಲ್ಲೂ ಹೆಚ್ಚಿನವರು ಅವರ ಕುಟುಂಬದಿಂದಲೇ ಮೊದಲ ಬಾರಿ ಶಾಲೆಯ ಮೆಟ್ಟಿಲು ಹತ್ತಿದವರು. ‘ಹೇಳಿ, ಅಪ್ಪ ಯಾವ ಹೀರೋಗೆ ಕಡಿಮೆ?’ ಎಂದು ಕೇಳಿದೆ. ಅಷ್ಟು ಹೊತ್ತಿಗೆಲ್ಲ ಅವರೂ ತಮ್ಮ ಮನಸ್ಸಿನೊಳಗೆ ಇದ್ದ ಹೀರೋನ ಪ್ರತಿಮೆಯನ್ನು ಬದಲಾಯಿಸಿಕೊಂಡಿದ್ದರು. ಜಗತ್ತಿನ ಶೇಕಡಾ ತೊಂಬತ್ತೊಂಬತ್ತು ಮಂದಿಯ ಮೊದಲ ಹೀರೋ-ಹೀರೋಯಿನ್ನುಗಳು ಅವರ ಮನೆಯಲ್ಲೇ ಇದ್ದಾರೆ.

ಹಾಗೆಂದುಕೊಂಡಿರುವುದು ವಾಸ್ತವವೇ ಅಥವಾ ಬರೀ ಗತಕಾಲದ ಭ್ರಮೆಯೇ ಎಂಬ ಪ್ರಶ್ನೆ ಕಾಡಿದ್ದು ಈ ಬಾರಿಯ ‘ಅಂತಾರಾಷ್ಟ್ರೀಯ ಪುರುಷರ ದಿನಾಚರಣೆ’ಯ ಘೋಷವಾಕ್ಯವನ್ನು ನೋಡಿದಾಗ. ಧನಾತ್ಮಕ ಪುರುಷ ಮಾದರಿ (Positive Male Role Models) ಎಂಬುದೇ ಆ ಸ್ಲೋಗನ್. ವಾಟ್ಸಾಪು ಫೇಸ್ಬುಕ್ಕಿನ ಭಾಷೆಯಲ್ಲಿ ವ್ಯವಹರಿಸುವ ನಮ್ಮ ಹೊಸ ಜಮಾನಾದ ಹುಡುಗರಿಗೆ ಧನಾತ್ಮಕ ಪುರುಷ ಮಾದರಿಯೊಂದರ ಅಗತ್ಯ ಇದೆಯೇ? ಇದ್ದರೆ ಅವರ ಕಣ್ಣೆದುರು ಬರುವ ಮಾದರಿ ಯಾವುದು? ಅವರು ಬೆಳೆದು ವಿಶಾಲ ಸಮಾಜವೊಂದರ ಭಾಗವಾದಾಗ ಅವರ ಸಮಾಜೋ-ಸಾಂಸ್ಕೃತಿಕ ಬದುಕಿನ ಹಿಂದೆ ಈ ಮಾಡೆಲ್ಲಿನ ಪಾತ್ರ ಏನು?

ಪುರುಷನೆಂಬ ಆಕೃತಿ ಮನುಷ್ಯನ ಇತಿಹಾಸದಷ್ಟೇ ಹಳೆಯದು. ಅದ್ಯಾಕೆ ಇಷ್ಟು ಸಾವಿರ ವರ್ಷಗಳಲ್ಲಿ ಇಲ್ಲದ ಪುರುಷರ ದಿನಾಚರಣೆ ಈಗ ಆರಂಭವಾಗಿದೆ? ಪುರುಷನ ಧನಾತ್ಮಕ ಮಾದರಿಯ ಬಗ್ಗೆ ಚಿಂತಿಸುವ, ಚರ್ಚಿಸುವ ಅವಶ್ಯಕತೆಯೊಂದು ಜಗತ್ತಿನೆದುರು ಈಗ ಯಾಕೆ ತೆರೆದುಕೊಂಡಿದೆ? ಧನಾತ್ಮಕ ಮಾದರಿಯ ಬಗ್ಗೆ ಒತ್ತಿ ಹೇಳುತ್ತಿದ್ದೇವೆ ಎಂದರೆ ಋಣಾತ್ಮಕ ಮಾದರಿಯ ಪ್ರಭಾವ ಜಾಸ್ತಿ ಇದೆ ಎಂದು ಅರ್ಥ ಅಲ್ಲವೇ?

...ಗುಣಕೆ ಮಚ್ಚರವೇಕೆ? 
ಶ್ರೀರಾಮನಾಹ್ಲಾದ ರೂಪಿ. ಔದಾರ್ಯ ನಿಧಿ.
ನಿರಸೂಯೆಯಿಂ ಸರ್ವರನುರಾಗ ಭಜನಂ.
ಕಲಿ. ಮತ್ಸರವಿದೂರನತ್ಯಂತ ಶಾಂತಿಖನಿ.
ಪ್ರಿಯಭಾಷಿ. ಹಿತಸಖಂ. ಮಿತಮಾರ್ಗಿ. ಧೀರವಶಿ.
ನಗುಮೊಗದ ಸಂಯಮಿ. ಕೃತಜ್ಞತಾ ಮೂರ್ತಿ. ಮೇಣ್
ಜ್ಞಾನಿ. ಸಜ್ಜನಪ್ರೇಮಿ. ಸೂಕ್ಷ್ಮಮತಿ. ಪಂಡಿತಂ.
ಶೃತಿವಿದಂ; ಸುವಿಚಾರಿ; ನಿತ್ಯಪ್ರಜಾಪ್ರೇಮಿ!
ಸುಸ್ಥಿರಂ; ಸಂಬುದ್ಧ ಪ್ರಜ್ಞಾ ಮಹೇಶ್ವರಂ! 
ಇದು ಕುವೆಂಪು ಅವರ ದಶರಥ ಕಡೆದ ರಾಮನ ಚಿತ್ರ. ಲೋಕದಲ್ಲಿ ಕೋಟ್ಯಂತರ ಪುರುಷರಿದ್ದರೂ ರಾಮನೊಬ್ಬನೇ ಪುರುಷೋತ್ತಮನೆಂದು ಕರೆಯಲ್ಪಟ್ಟ. ಪುರುಷೋತ್ತಮನ ಹೊಸದೊಂದು ಮಾದರಿಗೆ ಆಧುನಿಕ ಜಗತ್ತು ತಹತಹಿಸುತ್ತಿದೆಯೇ?

ಒಂಬತ್ತು ತಿಂಗಳ ಹೆಣ್ಣು ಶಿಶುವಿನ ಮೇಲೆ ಅದನ್ನು ನೋಡಿಕೊಳ್ಳುವ ಸಹಾಯಕನೊಬ್ಬ ಮೊನ್ನೆ ಅತ್ಯಾಚಾರ ಮಾಡಿದನಂತೆ. ಅದಕ್ಕೂ ಮೂರು ದಿನದ ಹಿಂದೆ ಉತ್ತರ ಪ್ರದೇಶದ ಆಸ್ಪತ್ರೆಯೊಂದರ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾತು ಬಾರದ ಹದಿಹರೆಯದ ಹುಡುಗಿಯ ಮೇಲೆ ವಾರ್ಡ್‍ಬಾಯ್‍ಗಳೇ ಸಾಮೂಹಿಕ ಅತ್ಯಾಚಾರ ಎಸಗಿದರಂತೆ. ಇಂತಹ ಸುದ್ದಿಗಳು ಬೇಡವೆಂದರೂ ಪ್ರತೀದಿನ ಎಂಬ ಹಾಗೆ ಕಣ್ಣಿಗೆ ರಾಚುತ್ತವೆ. ಇನ್ನೂ ಜಗತ್ತಿನ ಬೆಳಕಿಗೆ ಕಣ್ಣು ತೆರೆಯುತ್ತಿರುವ ಹಸುಳೆಯ ಮೇಲೆ ಅತ್ಯಾಚಾರ ಎಸಗಬೇಕೆಂದು ಅನಿಸುವ ಆ ಪುರುಷನ ಒಳಗಿನ ಮನಸ್ಸು ಎಂತಹದು? ಚಿಕಿತ್ಸೆಗಾಗಿ ಬಂದು ಅಸಹಾಯಕಳಾಗಿ ಬಿದ್ದಿರುವ ಹುಡುಗಿಯ ಮೇಲೆ ಅತ್ಯಾಚಾರ ಎಸಗುವ ಆಸ್ಪತ್ರೆ ಹುಡುಗರ ಎದೆ ಇನ್ನೆಂತಹ ಬಂಡೆಗಲ್ಲು ಇದ್ದೀತು? ಇವರೆಲ್ಲ ಯಾವ ಸೀಮೆಯ ಪುರುಷರು?

ನಾವೆಲ್ಲೋ ದಯನೀಯವಾಗಿ ಸೋತುಬಿಟ್ಟಿದ್ದೇವೆ. ಈ ಸೋಲಿಗೆ ಯಾರು ಕಾರಣರು? ಅಪ್ಪನೇ, ಅಮ್ಮನೇ, ಅಧ್ಯಾಪಕನೇ, ಸ್ನೇಹಿತನೇ, ಸುತ್ತಲಿನ ಸಮಾಜವೇ? ಎದುರಿಗಿರುವ ಹೆಣ್ಣನ್ನು ಕಾಮದ ಕಣ್ಣಿನಿಂದಷ್ಟೇ ನೋಡುವ ಮನಸ್ಸು ಈ ಯುವಕರಲ್ಲಿ ಬೆಳೆದದ್ದಾದರೂ ಹೇಗೆ? ಹೆಣ್ಣೊಬ್ಬಳನ್ನು ಕಂಡಾಗ ತನ್ನ ಮನೆಯಲ್ಲೇ ಇರುವ ಅಕ್ಕನೋ ತಂಗಿಯೋ ಅಮ್ಮನೋ ಚಿಕ್ಕಮ್ಮನೋ ಯಾರೂ ನೆನಪಾಗುವುದಿಲ್ಲವೇ?

ನಮ್ಮ ಸೋಲಿನ ಮೂಲ ನಮ್ಮ ಮನೆಗಳಲ್ಲೇ ಇದೆ. ಪಕ್ಕದಲ್ಲಿರುವ ಹೆಣ್ಣುಮಗುವನ್ನು ಸಹೋದರಿಯಂತೆಯೋ ಒಳ್ಳೆಯ ಸ್ನೇಹಿತೆಯಂತೆಯೋ ಹೆತ್ತಮ್ಮನಂತೆಯೋ ನೋಡುವುದು ನಮ್ಮ ಪುರುಷರಿಗೆ ಸಾಧ್ಯವಾಗುತ್ತಿಲ್ಲವೆಂದರೆ ಅದಕ್ಕೆ ಸಂಸ್ಕಾರಹೀನತೆಯಲ್ಲದೆ ಬೇರೆ ಕಾರಣಗಳಿಲ್ಲ. ಮನೆಯಲ್ಲಿ ಕಲಿಯದ ಸಂಸ್ಕಾರ ಹೊರಗೆಲ್ಲಿ ದಕ್ಕೀತು? ಹೆಣ್ಣನ್ನು ಪ್ರಕೃತಿಯೆಂದು, ದೇವರೆಂದು ಕಂಡ ಪರಂಪರೆಯ ಪ್ರವಾಹ ನಮ್ಮ ಮನಸ್ಸುಗಳ ಕೊಳೆಯನ್ನು ತೊಳೆಯುತ್ತಿಲ್ಲ. ಸಂಸ್ಕಾರದ ವಿಶಾಲ ವಟವೃಕ್ಷ ಹೊಸ ಮನಸ್ಸುಗಳಲ್ಲಿ ಬೇರು ಬಿಡುತ್ತಿಲ್ಲ. ನಾವು ಯಾವುದೋ ಸುಂದರ ಜಲಪಾತದಲ್ಲಿ ಮೀಯುತ್ತಿರುವ ಭ್ರಮೆಯಲ್ಲಿ ನಮ್ಮದಲ್ಲದ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದೇವೆ? ಯಾವುದೀ ಪ್ರವಾಹವು?

ಮನೆ, ಮನೆಯೊಳಗಿನ ಮಂದಿ ಮನಸ್ಸು ಮಾಡಿದರೆ ಏನೂ ಆಗಬಹುದು. ಆದರೆ ಅದಕ್ಕೆ ಯಾರಿಗೂ ವ್ಯವಧಾನವಾಗಲೀ ಸಮಯವಾಗಲೀ ಇಲ್ಲ. ಅಮೇರಿಕದಲ್ಲಿ ಪ್ರತೀ ತಂದೆ ತನ್ನ ಮಗುವಿನ ಜೊತೆಗೆ ದಿನವೊಂದಕ್ಕೆ 10 ನಿಮಿಷ ಕಳೆಯುತ್ತಿದ್ದಾನಂತೆ. ನಾವೂ ಹೆಚ್ಚೂ ಕಡಿಮೆ ಅದೇ ಹಾದಿಯಲ್ಲಿದ್ದೇವೆ. ಜಗತ್ತು ಹುಡುಕುತ್ತಿರುವ ಪಾಸಿಟಿವ್ ರೋಲ್ ಮಾಡೆಲ್ ಯಾವ ಸಿದ್ಧ ಮಾರುಕಟ್ಟೆಯಲ್ಲೂ ಲಭ್ಯವಿಲ್ಲ. ಒಬ್ಬ ಅಪ್ಪ, ಒಬ್ಬ ಅಧ್ಯಾಪಕ ಮನಸ್ಸು ಮಾಡಿದರೆ ಕಲ್ಮಷವಿಲ್ಲದ ಮನಸ್ಸಿನ ಮಕ್ಕಳನ್ನು ಸಮಾಜಕ್ಕೆ ಕೊಡಲು ಅಡ್ಡಿ ಬರುವವರು ಯಾರಿದ್ದಾರೆ? ಒಮ್ಮೆ ಅಂತಹದೊಂದು ಮಾದರಿ ಮನೆಯಿಂದ, ಶಾಲೆಯಿಂದ ಆಚೆ ಬಂದರೆ ಅದನ್ನು ಕೆಡಿಸುವ ತಾಕತ್ತು ಬೇರೆ ಯಾರಿಗಿದೆ? ಮನೆ-ಶಾಲೆಯಲ್ಲಿ ಸರಿಯಾದ ಮಾದರಿ ದೊರೆಯದೇ ಹೋದರೆ ಮಕ್ಕಳು ನಿಸ್ಸಂಶಯವಾಗಿ ಟಿವಿ, ಧಾರಾವಾಹಿ, ಸಿನಿಮಾ, ಮೊಬೈಲ್‍ನಲ್ಲಿ ಅಡ್ಡಾಡುವ ಮಾದರಿಗಳನ್ನೇ ಅನುಸರಿಸಬೇಕು. ಅದು ಅವರ ತಪ್ಪಲ್ಲ.

ಎಲ್ಲ ಪುರುಷನೊಳಗೂ ಒಬ್ಬಳು ಸ್ತ್ರೀ ಇದ್ದಾಳೆ, ಇರಬೇಕು. ಅಂತಹದೊಂದು ಪರಂಪರೆಯ ಛಾಯೆ ನಮ್ಮಲ್ಲಿದೆ. ನಾವು ವಿಸ್ಮøತಿಗೆ ಜಾರಿದ್ದೇವೆ ಅಷ್ಟೇ. ಶಿವೆಯನ್ನು ತನ್ನ ಹೃದಯೇಶ್ವರಿಯೆಂದ ಶಿವ ತನ್ನ ದೇಹದ ಅರ್ಧಭಾಗವನ್ನೇ ಆಕೆಗೆ ನೀಡಿ ಅರ್ಧನಾರೀಶ್ವರನಾದ. ಪ್ರಕೃತಿ-ಪುರುಷ, ದ್ಯಾವಾ-ಪೃಥೀವೀಗಳೆಂಬ ಪರಿಕಲ್ಪನೆ ಈ ನೆಲದಷ್ಟೇ ಹಳೆಯದು. ಅದನ್ನು ಹೊಸದಾಗಿ ಎಲ್ಲಿಂದಲೂ ಕಡ ತರಬೇಕಾಗಿಲ್ಲ. ಹಾಗೆ ನೋಡಿದರೆ ಮಹಿಳೆಗಿಂತ ಪುರುಷನೇ ದುರ್ಬಲ. ಜಗತ್ತಿನಲ್ಲಿ ಅತಿಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರು ಪುರುಷರೇ ಹೊರತು ಮಹಿಳೆಯರಲ್ಲ! ‘ಒರಟುತನವೆಂಬುದು ದುರ್ಬಲ ವ್ಯಕ್ತಿಯ ಬಲಾಢ್ಯತೆಯ ಸೋಗು’ ಎಂದ ಎಮರ್ಸನ್. ದುರ್ಬಲ ಪುರುಷನೇ ಅಹಮಿಕೆಯ ಒರಟುತನವನ್ನು ಬೆಳೆಸಿಕೊಂಡು ಬಲಾಢ್ಯನೆಂಬ ಸೋಗು ಹೊದ್ದುಕೊಂಡ. ಮಾನಸಿಕವಾಗಿ ಅವನಷ್ಟು ಪುಕ್ಕಲನೂ ದುರ್ಬಲನೂ ಇನ್ಯಾರೂ ಇಲ್ಲ. ಅದನ್ನು ಮರೆಮಾಚಲು ಹೆಣ್ಣನ್ನು ಅಬಲೆಯೆಂದು ಕರೆದ ಅಷ್ಟೇ.

ನೀರು-ನೆಲ ಸೇರದೆ ಯಾವ ತೆನೆಯೂ ಬಲಿಯದು. ಸ್ತ್ರೀ-ಪುರುಷರನ್ನು ಪ್ರತ್ಯೇಕವಾಗಿ ಇಟ್ಟು ಯಾವ ಮಾದರಿಯನ್ನೂ ಬೆಳೆಸಲಾಗದು. ಗಂಡು ತನ್ನೊಳಗಿನ ಹೆಣ್ಣನ್ನು ಒಪ್ಪಿಕೊಂಡು ವಾಸ್ತವವನ್ನು ಅರ್ಥ ಮಾಡಿಕೊಂಡರೆ ನಿಜವಾದ ಪುರುಷ ಮಾದರಿಯೊಂದು ತಲೆಯೆತ್ತೀತು. ಅಲ್ಲಿ ಹೆಣ್ಣಿನ ಬಗ್ಗೆ ಗೌರವ ತಾನಾಗಿಯೇ ಅರಳುತ್ತದೆ. ಆಗಷ್ಟೇ ಹೆಣ್ಣೂ ಯಾವುದೇ ಬಿಗುಮಾನವಿಲ್ಲದೇ ತೆರೆದ ಮನಸ್ಸಿನಿಂದ ಹೇಳಬಲ್ಲಳು: ಆಹಾ ಪುರುಷಾಕಾರಂ!