23 ಜನವರಿ 2019ರಂದು ಪ್ರಜಾವಾಣಿ ಶಿಕ್ಷಣ ಪುರವಣಿಯಲ್ಲಿ ಪ್ರಕಟವಾಗಿರುವ ಲೇಖನ
ದೇಶದ ವಿಶ್ವವಿದ್ಯಾನಿಲಯಗಳ ಸಂಖ್ಯೆ ಸಾವಿರದ ಗಡಿಯನ್ನು ತಲುಪುತ್ತಿದೆ. ಉನ್ನತ ಶಿಕ್ಷಣದ ಅಖಿಲ ಭಾರತ ಸಮೀಕ್ಷೆ 2017-18ರ ಪ್ರಕಾರ, ಭಾರತದಲ್ಲಿ 903 ವಿಶ್ವವಿದ್ಯಾನಿಲಯಗಳೂ, 39,000 ಕಾಲೇಜುಗಳೂ, 10,000ದಷ್ಟು ಸ್ವತಂತ್ರ ಶಿಕ್ಷಣ ಸಂಸ್ಥೆಗಳೂ ಇವೆ. ಇವುಗಳ ಪೈಕಿ 394 ರಾಜ್ಯ ವಿವಿಗಳು, 125 ಡೀಮ್ಡ್ ವಿವಿಗಳು ಹಾಗೂ 325 ಖಾಸಗಿ ವಿವಿಗಳಿವೆ. ವಿಚಿತ್ರವೆಂದರೆ ಇಷ್ಟು ದೊಡ್ಡ ಉನ್ನತ ಶಿಕ್ಷಣ ಜಾಲದಲ್ಲಿ ಜಗತ್ತಿನ ಟಾಪ್-100 ರ‍್ಯಾಂಕಿಂಗ್ ಒಳಗಿನ ಒಂದು ವಿವಿಯೂ ಇಲ್ಲ.
ನಮ್ಮ ಉನ್ನತ ಶಿಕ್ಷಣ ವಲಯದಲ್ಲಿ ಸುಮಾರು 13 ಲಕ್ಷ ಬೋಧಕರಿದ್ದಾರೆ. 36.6 ಮಿಲಿಯನ್ ಯುವಕರು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಉನ್ನತ ಶಿಕ್ಷಣ ಕ್ಷೇತ್ರದ ಒಟ್ಟಾರೆ ದಾಖಲಾತಿ ಪ್ರಮಾಣ (ಜಿಇಆರ್) ಶೇ. 25.8ಕ್ಕೆ ತಲುಪಿದೆ. ನಮ್ಮ ಒಟ್ಟು ವಿವಿಗಳ ಪೈಕಿ 357 ವಿವಿಗಳು ಹಾಗೂ ಶೇ. 60ರಷ್ಟು ಕಾಲೇಜುಗಳು ಗ್ರಾಮೀಣ ಪ್ರದೇಶದಲ್ಲಿವೆ. ದೇಶದಲ್ಲಿನ ಶೇ. 73ರಷ್ಟು ಕಾಲೇಜುಗಳು ಹಾಗೂ ಶೇ. 68ರಷ್ಟು ವಿವಿಗಳಲ್ಲಿ ಬೋಧನಾ-ಕಲಿಕಾ ಪ್ರಕ್ರಿಯೆ ಮಧ್ಯಮ ಅಥವಾ ಕಳಪೆ ಮಟ್ಟದಲ್ಲಿದೆಯೆಂದು ಯುಜಿಸಿಯೇ ತನ್ನ ಅಧ್ಯಯನವೊಂದರಲ್ಲಿ ಇತ್ತೀಚೆಗೆ ಹೇಳಿದೆ. ಇನ್ನೊಂದೆಡೆ ಖಾಸಗಿ ಹಾಗೂ ಡೀಮ್ಡ್ ವಿಶ್ವವಿದ್ಯಾನಿಲಯಗಳು ಭಾರೀ ಸಂಖ್ಯೆಯಲ್ಲಿ ಹುಟ್ಟಿಕೊಳ್ಳುತ್ತಿವೆ. ಮೂಲಭೂತ ಸೌಕರ್ಯ ಹಾಗೂ ಮಾನವ ಸಂಪನ್ಮೂಲದ ವಿಷಯದಲ್ಲಿ ಸರ್ಕಾರಿ ಹಾಗೂ ಖಾಸಗಿ ವಿವಿಗಳ ನಡುವೆ ದೊಡ್ಡ ಕಂದಕ ಏರ್ಪಡುತ್ತಿದೆ.
ವಿಶ್ವವಿದ್ಯಾನಿಲಯಗಳ ಶ್ರೇಷ್ಠತೆಯನ್ನು ಅನೇಕ ಮಾನದಂಡಗಳ ಆಧಾರದಲ್ಲಿ ಅಳೆಯಲಾಗುತ್ತದಾದರೂ ಅಧ್ಯಾಪಕರ ಒಟ್ಟಾರೆ ಗುಣಮಟ್ಟವೂ ಒಂದು ಪ್ರಮುಖ ಅಂಶವೆಂಬುದನ್ನು ಅಲ್ಲಗಳೆಯುವಂತಿಲ್ಲ. ಬದಲಾಗಿರುವ ಕಾಲ, ಬದಲಾಗಿರುವ ಶಿಕ್ಷಣದ ವ್ಯಾಪ್ತಿ ವಿಸ್ತಾರ, ಸಮಾಜದ ನಿರೀಕ್ಷೆಗಳು -ಇವುಗಳಿಗೆ ತಕ್ಕ ಹಾಗೆ ನಮ್ಮ ಅಧ್ಯಾಪಕರೂ ಬದಲಾಗುತ್ತಿದ್ದಾರೆಯೇ? ಶಿಕ್ಷಣ ಕ್ಷೇತ್ರದ, ಸಮಾಜದ ಹಾಗೂ ವಿದ್ಯಾರ್ಥಿಗಳ ನಿರೀಕ್ಷೆಗೆ ತಕ್ಕಂತೆ ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳುತ್ತಿದ್ದಾರೆಯೇ? ತಮ್ಮ ಮನಸ್ಥಿತಿಯನ್ನು ಸುಧಾರಿಸಿಕೊಂಡಿದ್ದಾರೆಯೇ? ಇವು ಸದ್ಯ ನಮ್ಮ ಮುಂದಿರುವ ಮಹತ್ವದ ಪ್ರಶ್ನೆಗಳು.
1986ರ ರಾಷ್ಟ್ರೀಯ ಶಿಕ್ಷಣ ನೀತಿ ಅಧ್ಯಾಪಕರ ನಿರಂತರ ಜ್ಞಾನಾಭಿವೃದ್ಧಿ, ಸಾಮರ್ಥ್ಯ ನಿರ್ಮಾಣ, ಹೊಸ ಸವಾಲುಗಳನ್ನು ಎದುರಿಸಲು ಪ್ರೇರಣೆ ನೀಡುವ ಕಡೆಗೆ ಹೆಚ್ಚಿನ ಆದ್ಯತೆ ನೀಡಿತು. ಅಧ್ಯಾಪಕರ ವೃತ್ತಿಪರ ಮತ್ತು ಔದ್ಯೋಗಿಕ ಅಭಿವೃದ್ಧಿಗಾಗಿ ಪರಿಣಾಮಕಾರಿ ವ್ಯವಸ್ಥೆಯೊಂದನ್ನು ರೂಪಿಸುವ ಅಗತ್ಯವನ್ನು ಎತ್ತಿಹಿಡಿಯಿತು. ಹೊಸ ಜ್ಞಾನದ ಬೆಳವಣಿಗೆ, ಅಂತಾರಾಷ್ಟ್ರೀಯ ಸ್ಪರ್ಧೆ ಹಾಗೂ ವಿದ್ಯಾರ್ಥಿಗಳ ಬದಲಾಗುತ್ತಿರುವ ಅವಶ್ಯಕತೆಗಳಿಂದ ಉದ್ಭವಿಸುವ ಸವಾಲುಗಳನ್ನು ಎದುರಿಸಲು ಅನುಕೂಲವಾಗುವಂತೆ ಅಧ್ಯಾಪಕರಿಗೆ ನಿರಂತರ ತರಬೇತಿ ಹಾಗೂ ಮಾರ್ಗದರ್ಶನ ನೀಡುವ ಅನಿವಾರ್ಯತೆಯನ್ನು ಒತ್ತಿಹೇಳಿತು.
ರಾಷ್ಟ್ರೀಯ ಶಿಕ್ಷಣ ನೀತಿಯ ಮಾರ್ಗಸೂಚಿಯನ್ವಯ ಪ್ರಾಥಮಿಕ ಶಾಲಾ ಹಂತದಿಂದ ತೊಡಗಿ ವಿಶ್ವವಿದ್ಯಾನಿಲಯಗಳವರೆಗಿನ ಅಧ್ಯಾಪಕರನ್ನು ಕಾಲದಿಂದ ಕಾಲಕ್ಕೆ ಸಮಕಾಲೀನಗೊಳಿಸುವ ಪ್ರಯತ್ನಗಳೇನೋ ನಡೆಯುತ್ತ ಬಂದಿವೆ. ಶಿಕ್ಷಣವನ್ನು ಪರಿಣಾಮಕಾರಿಗೊಳಿಸುವ ಉದ್ದೇಶದಿಂದ ಆರಂಭವಾದ ಈ ಪ್ರಯತ್ನಗಳು ಸ್ವತಃ ಎಷ್ಟು ಪರಿಣಾಮಕಾರಿಯಾಗಿವೆ ಅಥವಾ ಸಾರ್ಥಕವಾಗಿವೆ ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದುಕೊಂಡಿದೆ.
ಪ್ರಾಥಮಿಕ ಶಾಲಾ ಹಂತದ ಶಿಕ್ಷಕರ ತರಬೇತಿಗಾಗಿಯೇ ಜಿಲ್ಲಾ ಮಟ್ಟದಲ್ಲಿ ಡಯೆಟ್‌ಗಳಿವೆ; ವಿವಿಧ ವಿಭಾಗೀಯ ಮಟ್ಟದಲ್ಲಿ ಸಂಪನ್ಮೂಲ ಕೇಂದ್ರಗಳಿವೆ. ಇವುಗಳ ವತಿಯಿಂದ ಆಗಿಂದಾಗ್ಗೆ ತರಬೇತಿ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತೀ ಶಿಕ್ಷಕನೂ ವರ್ಷಕ್ಕೆ ಕನಿಷ್ಟ ೨೦ ದಿನ ತನಗೆ ಅಗತ್ಯವೆನಿಸುವ ವಿಷಯದಲ್ಲಿ ತರಬೇತಿ ಪಡೆದುಕೊಳ್ಳಬೇಕು ಎಂಬ ನಿಯಮವಿದೆ.
ಪಠ್ಯಕ್ರಮ ಅಥವಾ ಪಠ್ಯಪುಸ್ತಕಗಳು ಬದಲಾದಾಗ ಅಥವಾ ಪರಿಷ್ಕರಣೆಗೊಂಡಾಗ ಪ್ರತ್ಯೇಕ ತರಬೇತಿಗಳು ಏರ್ಪಡುತ್ತವೆ.
ಪ್ರೌಢಶಾಲೆ ಹಾಗೂ ಪದವಿಪೂರ್ವ ಹಂತದಲ್ಲಿಯೂ ಇದೇ ಬಗೆಯ ತರಬೇತಿ ವ್ಯವಸ್ಥೆಯಿದೆ. ಹೊಸ ಅಧ್ಯಾಪಕರ ನೇಮಕಾತಿ ನಡೆದಾಗ, ಹೊಸ ಪಠ್ಯಕ್ರಮ ಬಂದಾಗ, ವಿಜ್ಞಾನ ವಿಷಯಗಳಲ್ಲಿ ಹೊಸ ಪ್ರಾಯೋಗಿಕ ಅಭ್ಯಾಸಗಳನ್ನು ಸೇರಿಸಿದಾಗ, ಪರೀಕ್ಷಾ ವಿಧಾನ ಬದಲಾದಾಗ ಅಥವಾ ಪಾಠಪ್ರವಚನದಲ್ಲಿ ಹೊಸ ತಂತ್ರಜ್ಞಾನದ ಬಳಕೆಯನ್ನು ಜಾರಿಗೆ ತಂದಾಗ ಶಿಕ್ಷಣ ಇಲಾಖೆ ವತಿಯಿಂದ ತರಬೇತಿ ಕಾರ್ಯಾಗಾರಗಳು ನಡೆಯುತ್ತವೆ. ಈ ಹಂತದವರೆಗಿನ ಶಿಕ್ಷಕರಿಗೆ ಪದವಿ ಅಥವಾ ಸ್ನಾತಕೋತ್ತರ ಪದವಿ ಜತೆಗೆ ಡಿ.ಎಡ್ ಅಥವಾ ಬಿ.ಎಡ್‌ನಂತಹ ಪ್ರತ್ಯೇಕ ಪದವಿಗಳೂ ಕಡ್ಡಾಯ. ಹೀಗಾಗಿ ಶಿಕ್ಷಕ ವೃತ್ತಿಗೆ ಬರುವ ಮುನ್ನವೇ ಅವರು ನಿರ್ದಿಷ್ಟ ಮಟ್ಟದ ತರಬೇತಿಯನ್ನು ಪಡೆದೇ ಇರುತ್ತಾರೆ.
ಅಧ್ಯಾಪನದ ಯಾವ ತರಬೇತಿಯೂ ಇಲ್ಲದೆ ನೇರವಾಗಿ ತಮ್ಮ ತಮ್ಮ ಪದವಿಗಳ ಜತೆಗಷ್ಟೇ ವಿದ್ಯಾರ್ಥಿಗಳಿಗೆ ಎದುರಾಗುವವರು ಪದವಿ ಹಾಗೂ ಸ್ನಾತಕೋತ್ತರ ಪದವಿ ಹಂತದ ಅಧ್ಯಾಪಕರು. ಅಲ್ಲಿಯವರೆಗಿನ ಶಿಕ್ಷಣಕ್ಕೂ, ಅಲ್ಲಿಯ ನಂತರದ ಶಿಕ್ಷಣಕ್ಕೂ ಸಾಕಷ್ಟು ವ್ಯತ್ಯಾಸವಿದೆ; ಪದವಿ ಹಾಗೂ ವಿಶ್ವವಿದ್ಯಾಲಯ ಹಂತದಲ್ಲಿನ ಅವಶ್ಯಕತೆ ಹಾಗೂ ನಿರೀಕ್ಷೆಗಳು ಬೇರೆಬೇರೆ ಎಂಬುದು ಇಲ್ಲಿನ ಸಮಜಾಯುಷಿ. ಆದಾಗ್ಯೂ ಈ ಹಂತದಲ್ಲಿ ಕೂಡ ಅಧ್ಯಾಪಕರಿಗೆ ತರಬೇತಿ ಹಾಗೂ ಮಾರ್ಗದರ್ಶನದ ವ್ಯವಸ್ಥೆಯಿದೆ.
ಹೊಸದಾಗಿ ನೇಮಕಗೊಳ್ಳುವ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳ ಸಹಾಯಕ ಪ್ರಾಧ್ಯಾಪಕರು ತಮ್ಮ ನೇಮಕಾತಿಯಾಗಿ ಎರಡು ವರ್ಷದೊಳಗೆ ನಾಲ್ಕು ವಾರಗಳ ಪರಿಚಯಾತ್ಮಕ ಕಾರ್ಯಕ್ರಮ (ಒರಿಯೆಂಟೇಶನ್ ಪ್ರೋಗ್ರಾಂ), ನಂತರ ನಿರ್ದಿಷ್ಟ ಅವಧಿಗೊಮ್ಮೆ ಮೂರು ವಾರಗಳ ಪುನಶ್ಚೇತನ ಕಾರ್ಯಕ್ರಮ (ರಿಫ್ರೆಶರ್ ಕೋರ್ಸ್)ಗಳಲ್ಲಿ ಭಾಗವಹಿಸಬೇಕಾಗುತ್ತದೆ. ಈ ರೀತಿಯ ತರಬೇತಿಗಳನ್ನು ನಡೆಸುವುದಕ್ಕಾಗಿಯೇ ದೇಶದಾದ್ಯಂತ 66 ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳು (ಎಚ್‌ಆರ್‌ಡಿಸಿ) ಇವೆ. ಇವುಗಳ ಕಾರ್ಯನಿರ್ವಹಣೆಗಾಗಿಯೇ ಪ್ರತೀವರ್ಷ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ. ಸರ್ಕಾರ ಮಾಡುತ್ತಿರುವ ವೆಚ್ಚಕ್ಕೆ ನ್ಯಾಯ ಸಿಗುತ್ತಿದೆಯೇ, ಉನ್ನತ ಶಿಕ್ಷಣದ ಗುರಿಗಳನ್ನು ಈಡೇರಿಸುವ ನಿಟ್ಟಿನಲ್ಲಿ ಈ ಸಂಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ, ಇವುಗಳ ಪ್ರಯೋಜನಗಳನ್ನು ನಮ್ಮ ಅಧ್ಯಾಪಕರು ಮನಃಪೂರ್ವಕವಾಗಿ ಪಡೆದುಕೊಳ್ಳುತ್ತಿದ್ದಾರೆಯೇ ಎಂಬುದೆಲ್ಲ ಆತ್ಮಾವಲೋಕನದ ಪ್ರಶ್ನೆಗಳು.
ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಗಳನ್ನು ಅನುಷ್ಠಾನಗೊಳಿಸುವ ಯೋಜನೆಯ ಭಾಗವಾಗಿಯೇ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು 1986ರಿಂದ ತೊಡಗಿ 2009ರವರೆಗೆ ದೇಶದ 66 ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಸಿಬ್ಬಂದಿ ಕಾಲೇಜು (ಅಕಾಡೆಮಿಕ್ ಸ್ಟಾಫ್ ಕಾಲೇಜ್) ಗಳನ್ನು ಆರಂಭಿಸಿತು. ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ)ದ ಮೂಲಕ ಸಾಕಷ್ಟು ಅನುದಾನವನ್ನೂ ನೀಡಲಾಯಿತು. ಈ ಕಾಲೇಜುಗಳು ನಡೆಸಿಕೊಂಡು ಬಂದ ತರಬೇತಿ ಕಾರ್ಯಕ್ರಮಗಳಿಂದ ಏನೂ ಪ್ರಯೋಜನವಾಗಲಿಲ್ಲ ಎನ್ನುವ ಹಾಗಿಲ್ಲವಾದರೂ ಅನೇಕ ಕಾಲೇಜುಗಳು ಮೂಲಸೌಕರ್ಯ ಹಾಗೂ ಕಾರ್ಯವಿಧಾನದ ದೃಷ್ಟಿಯಿಂದ ನಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಮಟ್ಟದಿಂದ ಮೇಲೇಳಲೇ ಇಲ್ಲ. ಆದರೂ, ಹೊಸ ಕಾಲದ ಅವಶ್ಯಕತೆಗಳಿಗೆ ಅನುಗುಣವಾಗಿ ಅವುಗಳ ಒಟ್ಟಾರೆ ವ್ಯವಸ್ಥೆಯನ್ನು ಪುನರ್ರೂಪಿಸುವ ಉದ್ದೇಶದಿಂದ 2015ರಲ್ಲಿ ಅಕಾಡೆಮಿಕ್ ಸ್ಟಾಫ್ ಕಾಲೇಜುಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ (ಎಚ್‌ಆರ್‌ಡಿಸಿ)ಗಳೆಂದು ಮರುನಾಮಕರಣ ಮಾಡಲಾಯಿತು. ದುರದೃಷ್ಟವಶಾತ್ ಅನೇಕ ಕಡೆಗಳಲ್ಲಿ ಇದೊಂದು ಹೆಸರು ಬದಲಾವಣೆಯ ಪ್ರಕ್ರಿಯೆಯಾಯಿತೇ ಹೊರತು ವಾಸ್ತವವಾಗಿ ಬೇರೆ ಯಾವ ಬದಲಾವಣೆಗೂ ಕಾರಣವಾಗಲಿಲ್ಲ.
ಮರುನಾಮಕರಣದ ಹಿಂದೆ ಇದ್ದ ಮೂಲ ಸೌಕರ್ಯಗಳ ಅಭಿವೃದ್ಧಿ, ಮಾಹಿತಿ ಸಂವಹನ ತಂತ್ರಜ್ಞಾನ (ಐಸಿಟಿ)ದ ಹೆಚ್ಚಿನ ಬಳಕೆ, ಪರಿಣತಿ ಹೊಂದಿದ ಮಾನವ ಸಂಪನ್ಮೂಲದ ನೇಮಕಾತಿ ಇತ್ಯಾದಿ ಉದ್ದೇಶಗಳು ಇಲ್ಲಿಯವರೆಗೂ ಸಮರ್ಪಕವಾಗಿ ಈಡೇರಿಲ್ಲ. ಅನೇಕ ಎಚ್‌ಆರ್‌ಡಿಸಿಗಳಲ್ಲಿ ಇನ್ನೂ ಮೂಲಸೌಕರ್ಯಗಳ ಕೊರತೆ ಬಾಧಿಸುತ್ತಿದೆ. ಸಾಕಷ್ಟು ಸಂಖ್ಯೆಯ ತರಗತಿ ಕೊಠಡಿಗಳು, ತಮ್ಮದೇ ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಕೇಂದ್ರ, ಅದಕ್ಕೆ ಬೇಕಾದ ಇಂಟರ್ನೆಟ್ ಸೌಲಭ್ಯ, ಎಲ್‌ಸಿಡಿ ಪ್ರೊಜೆಕ್ಟರ್‌ನಂತಹ ಉಪಕರಣಗಳು, ಅನಿರ್ಬಂಧಿತ ವಿದ್ಯುತ್ ಪೂರೈಕೆ ಸೌಲಭ್ಯಗಳಿಲ್ಲ. ತರಬೇತಿ ಕಾರ್ಯಕ್ರಮಗಳ ಆಯೋಜಕರು ಹಾಗೂ ಭಾಗವಹಿಸುವ ಅಧ್ಯಾಪಕರು- ಎರಡೂ ಕಡೆಯಲ್ಲಿ ತರಬೇತಿಯನ್ನು 'ಹೇಗಾದರೂ ಮುಗಿಸಿಬಿಡುವ’ ಉದಾಸೀನದ ಮನಸ್ಥಿತಿ ಇದ್ದರಂತೂ ಕೇಳುವುದೇ ಬೇಡ.
ಅಧ್ಯಾಪಕರ ಭಡ್ತಿಗೆ ಈ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅನಿವಾರ್ಯ. ಪ್ರಮಾಣಪತ್ರಕ್ಕಾಗಿ ತರಬೇತಿಗಳಲ್ಲಿ ಭಾಗವಹಿಸುವ ಅಧ್ಯಾಪಕರ ಸಂಖ್ಯೆ ಬೆಳೆದಷ್ಟೂ ಕಾರ್ಯಕ್ರಮಗಳ ಮೂಲ ಉದ್ದೇಶ ಗೌಣವಾಗುತ್ತಾ ಹೋಗುತ್ತದೆ. ಆಯೋಜಕರು ಕಡೇ ಪಕ್ಷ ಸಮರ್ಥ ಸಂಪನ್ಮೂಲ ವ್ಯಕ್ತಿಗಳನ್ನಾದರೂ ಆಮಂತ್ರಿಸಿ ಗೋಷ್ಠಿಗಳನ್ನು ಆಯೋಜಿಸಬಹುದು. ಅವರಿಂದ ಒಂದಷ್ಟು ಹೊಸತನ್ನು ತಿಳಿದುಕೊಳ್ಳುವ, ಅವುಗಳನ್ನು ಅಳವಡಿಸಿಕೊಳ್ಳುವ ಹಾಗೂ ತಮ್ಮ ವಿದ್ಯಾರ್ಥಿಗಳಿಗೆ ವರ್ಗಾಯಿಸುವ ಪ್ರಾಮಾಣಿಕ ಮನಸ್ಥಿತಿ ಅಧ್ಯಾಪಕರಲ್ಲಿ ಇಲ್ಲದೇ ಹೋದರೆ ಎಂತಹ ವ್ಯವಸ್ಥೆಯಿಂದಲೂ ಬದಲಾವಣೆ ತರುವುದು ಕಷ್ಟ.
ಯಾವಾಗ ಶೈಕ್ಷಣಿಕ ಕಾರ್ಯನಿರ್ವಹಣಾ ಸೂಚ್ಯಂಕ (ಎಪಿಐ)ದ ಆಧಾರದಲ್ಲಿ ಅಧ್ಯಾಪಕರ ನೇಮಕಾತಿ ಹಾಗೂ ಭಡ್ತಿಗಳನ್ನು ನಿರ್ಧರಿಸುವ ಪದ್ಧತಿ ಆರಂಭವಾಯಿತೋ ಆಗಲೇ ಭರಪೂರ ವಿಚಾರಗೋಷ್ಠಿ ಸಮ್ಮೇಳನಗಳಲ್ಲಿ ಭಾಗವಹಿಸುವ, ಪ್ರಬಂಧ ಮಂಡಿಸುವ, ಒಂದೇ ವಾರದಲ್ಲಿ ಪುಟಗಟ್ಟಲೆ ಸಂಶೋಧನ ಪ್ರಬಂಧಗಳನ್ನು ಬರೆದು ಪ್ರಕಟಿಸುವ - ಅಂತೂ ಏನಕೇನ ಪ್ರಕಾರೇಣ ಕೆಜಿಗಟ್ಟಲೆ ಪ್ರಮಾಣಪತ್ರ ಪೇರಿಸುವ ನಾಟಕ ಆರಂಭವಾಯಿತು. ಪುನಶ್ಚೇತನ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೂ ಅನೇಕ ಮಂದಿ ಅಧ್ಯಾಪಕರಿಗೆ ಇಂತಹದೇ ಒಂದು ಅನಿವಾರ್ಯತೆಯಲ್ಲದೆ ಬೇರೇನೂ ಆಗಿಲ್ಲ.
ಇವೆಲ್ಲವುಗಳ ಹೊರತಾಗಿಯೂ ಅಧ್ಯಾಪಕರು ತಮ್ಮನ್ನು ತಾವು ಆಧುನೀಕರಿಸಿಕೊಳ್ಳುವುದಕ್ಕೆ ಅವಕಾಶಗಳು ವಿಫುಲವಾಗಿವೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ತಮ್ಮ ಜ್ಞಾನ ಹಾಗೂ ಕೌಶಲಗಳನ್ನು ಉನ್ನತೀಕರಿಸಿಕೊಳ್ಳುವುದಕ್ಕೆ ಡಿಜಿಟಲ್ ಯುಗದಲ್ಲಿ ಅಸಂಖ್ಯ ಮಾರ್ಗಗಳಿವೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು 'ಸ್ವಯಂ’ ಎಂಬ ಡಿಜಿಟಲ್ ವೇದಿಕೆಯನ್ನು ಹುಟ್ಟುಹಾಕಿ ದೊಡ್ಡ ಸಂಖ್ಯೆಯ ಮಾಸಿವ್ ಓಪನ್ ಆನ್‌ಲೈನ್ ಕೋರ್ಸ್ (ಮೂಕ್)ಗಳನ್ನು ಪರಿಚಯಿಸುತ್ತಿದೆ. ೯ನೇ ತರಗತಿಯಿಂದ ತೊಡಗಿ ಸ್ನಾತಕೋತ್ತರ ಪದವಿಯವರೆಗೆ 2000 ಆನ್‌ಲೈನ್ ಕೋರ್ಸುಗಳನ್ನೂ, 80,000 ಗಂಟೆಗಳ ಕಲಿಕಾ ಸಾಮಗ್ರಿಯನ್ನು ಉಚಿತವಾಗಿ ಒದಗಿಸುತ್ತಿದೆ. ಇವುಗಳಲ್ಲಿ ಅಧ್ಯಾಪಕರು ತಮ್ಮ ವೈಯುಕ್ತಿಕ ಉನ್ನತೀಕರಣಕ್ಕೆ ಬಳಸಿಕೊಳ್ಳಬಹುದಾದ ಅನೇಕ ಪುನಶ್ಚೇತನ ಕೋರ್ಸುಗಳೂ ಇವೆ.
ಡಿಜಿಟಲ್ ಕಾಲದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಬದಲಾಗಿರುವ ಕಾಲಮಾನ ಹಾಗೂ ವಿದ್ಯಾರ್ಥಿ ನಿರೀಕ್ಷೆಗಳನ್ನು ಅಧ್ಯಾಪಕರು ಸಮರ್ಥವಾಗಿ ಪೂರೈಸಬಲ್ಲರೇ ಎಂಬುದು ಶಿಕ್ಷಣ ಕ್ಷೇತ್ರದ ಭವಿಷ್ಯದ ಪ್ರಶ್ನೆಯೂ ಹೌದು. ’ನೀವು ಜಗತ್ತಿನಲ್ಲಿ ಬೇಕಾದಂತೆ ಕನಸು ಕಾಣಬಹುದು, ಸೃಷ್ಟಿಸಬಹುದು, ರೂಪಿಸಬಹುದು, ಹಾಗೂ ಅತಿ ಅದ್ಭುತ ತಾಣಗಳನ್ನು ಹುಟ್ಟುಹಾಕಬಹುದು. ಆದರೆ ಕನಸುಗಳನ್ನು ನನಸಾಗಿಸಬಲ್ಲ ಸಮರ್ಥರು ಈ ಕೆಲಸಕ್ಕೆ ಬೇಕು’ ಎಂಬ ವಾಲ್ಟ್ ಡಿಸ್ನಿಯ ಮಾತು ಈ ಪ್ರಶ್ನೆಗೆ ಪರೋಕ್ಷ ಉತ್ತರ ಎಂಬುದನ್ನು ಶಿಕ್ಷಕರು ಮನಗಾಣಬೇಕು.
ಪ್ರಜಾವಾಣಿ - ಶಿಕ್ಷಣ - 23-01-2019 |

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ