ಶನಿವಾರ, ಜನವರಿ 12, 2019

ಮಕ್ಕಳು ದುಡಿಯುವುದು ತಪ್ಪಲ್ಲ!

25 ನವೆಂಬರ್ 2018 'ವಿಜಯವಾಣಿ' ಭಾನುವಾರದ ಪುರವಣಿಯಲ್ಲಿ (ವಿಜಯ ವಿಹಾರ) ಪ್ರಕಟವಾದ ಲೇಖನ

ಟ್ರಾಫಿಕ್ ಸಿಗ್ನಲ್‌ನಲ್ಲಿ ಕೆಂಪು ದೀಪ ಉರಿದರೆ ವಾಹನ ಸವಾರರ ಮುಖದಲ್ಲಿ ಸಣ್ಣ ಉದ್ವಿಗ್ನತೆ; ತರಹೇವಾರಿ ಪೆನ್ನುಗಳನ್ನು ಹಿಡಿದಿರುವ ಹುಡುಗರ ಮುಖದಲ್ಲಿ ಮಹಾ ಮಂದಹಾಸ. ಸಿಕ್ಕ ಒಂದೂವರೆ ನಿಮಿಷದ ಅವಧಿಯಲ್ಲಿ ವಾಹನಗಳೆಡೆಯಲ್ಲೆಲ್ಲ ನುಸುಳಿ ಅವರಿವರ ಮನವೊಲಿಸಿ ಹತ್ತು ಪೆನ್ನುಗಳನ್ನು ಮಾರಾಟಮಾಡಿದಲ್ಲಿಗೆ ಅವರ ಅಂದಿನ ಅನ್ನಕ್ಕೆ ಗ್ರೀನ್ ಸಿಗ್ನಲ್ ದೊರೆತಂತೆಯೇ. ಮುಂದಿನ ಸಿಗ್ನಲ್ ಬೀಳುವವರೆಗೆ ಮಾತ್ರ ಅವರಿಗೆ ವಿಶ್ರಾಂತಿ. ಮತ್ತೆ ಧಾವಂತ. ಮತ್ತೊಂದಿಷ್ಟು ನಿರಾಳತೆ.

ಅವಯವಗಳೆಲ್ಲ ಸರಿಯಿದ್ದೂ ಅಮ್ಮಾ ತಾಯೇ ಎಂದು ರೈಲು-ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರೆದುರು ಕೈಚಾಚುವ ಮೈಗಳ್ಳರ ನಡುವೆ 'ಅಣ್ಣಾ ನೀವೊಂದು ಪೆನ್ನು ಕೊಂಡರೆ ನಮಗೆ ಒಂದು ರೂಪಾಯಿ ಸಿಗುತ್ತೆ’ ಎಂಬೊಂದು ಮಾತು ನಿಮ್ಮನ್ನು ಕರಗಿಸದೆ ಇರದು. ನಿಮ್ಮ ಬಳಿ ಧಾರಾಳ ಪೆನ್ನುಗಳಿದ್ದರೂ ಆ ಮಗುವಿಗಾಗಿ ಇನ್ನೊಂದು, ಭಿಕ್ಷೆ ಬೇಡದೆ ಉಣ್ಣಬೇಕೆಂಬ ಆ ಮಗುವಿನ ಕಣ್ಣಲ್ಲಿರುವ ಛಲಕ್ಕಾಗಿ ಮತ್ತೊಂದು ಪೆನ್ನನ್ನು ನೀವು ಕೊಂಡ ಉದಾಹರಣೆ ಇಲ್ಲದಿರಲಿಕ್ಕಿಲ್ಲ.

ದುಡಿಯುವ ಮಗುವನ್ನು ಬೆಂಬಲಿಸಿದ ಸಂತೋಷ ಒಂದೆಡೆ, ಬೆಂಬಲಿಸಿದ್ದು ತಪ್ಪಲ್ಲವೇ ಎಂಬ ಗೊಂದಲವೂ ಇನ್ನೊಂದೆಡೆ. ಬಾಲಕಾರ್ಮಿಕ ಪದ್ಧತಿ ಅಪರಾಧ ಎನ್ನುತ್ತದೆ ಕಾನೂನು, ಓದಿ-ಆಡಬೇಕಾದ ಮಕ್ಕಳು ದುಡಿಯುವುದನ್ನು ಪ್ರೋತ್ಸಾಹಿಸಿದ್ದು ಎಷ್ಟು ಸರಿ ಎಂದು ಚುಚ್ಚುತ್ತದೆ ಮನಸ್ಸು. ಆದರೆ ಅದೇ ಹೊತ್ತಿಗೆ ಇನ್ನೂ ಒಂದಿಷ್ಟು ಪ್ರಶ್ನೆಗಳು ಕಾಡುತ್ತವೆ. ದಿನದ ಕೊನೆಗೆ ಆ ಮಗು ತನ್ನ ಕೈಯ್ಯಲ್ಲುಳಿದ ಐವತ್ತು ರೂಪಾಯಿಯನ್ನು ಜೋಪಡಿಯಡಿ ಕಾಯುವ ಅಮ್ಮನ ಕೈಗಿತ್ತಾಗ ಅವಳ ಕಣ್ಣಂಚಿನಲ್ಲಿ ಜಾರುವ ಹನಿಯ ಬೆಲೆಯೇನು? ಬೆಳ್ಳಂಬೆಳಗ್ಗೆ ಊರೆಲ್ಲ ಸುತ್ತಿ ಹಾಲು, ಪೇಪರು ಹಾಕುವ ಹುಡುಗ ಅದರಿಂದ ಬಂದ ಹಣದಿಂದಲೇ ಶಾಲಾ ಶುಲ್ಕವನ್ನು ಭರಿಸಿ ಓದಿ ಗಳಿಸಿದ ಭವಿಷ್ಯದ ಮೌಲ್ಯ ಎಷ್ಟು?

ಹಾಗಂತ ಬಾಲಕಾರ್ಮಿಕ ಪದ್ಧತಿ ಎಂಬುದು ಇಷ್ಟು ಸುಲಭವಾಗಿ ಬಿಡಿಸಬಹುದಾದ ಸರಳ ಗಣಿತಸೂತ್ರವೇನೂ ಅಲ್ಲ. ಹತ್ತು ಹಲವು ಆಯಾಮಗಳಿರುವ ಸಂಕೀರ್ಣ ಸಮಸ್ಯೆಯದು. ಅಪಾಯಕಾರಿ ಗಣಿಗಳು, ಕೀಟನಾಶಕ, ರಸಗೊಬ್ಬರ, ಯಂತ್ರೋಪಕರಣ, ಸ್ಫೋಟಕಗಳ ತಯಾರಿಕಾ ಕಾರ್ಖಾನೆಗಳು ಇವುಗಳ ನಡುವೆ ಹಗಲು ಇರುಳೆಂಬ ಪರಿವೆಯಿಲ್ಲದೆ ದುಡಿಮೆಯ ಅನಿವಾರ್ಯತೆಗೆ ಕಟ್ಟುಬಿದ್ದು ಸದಾ ಮಾನಸಿಕ ದೈಹಿಕ ಚಿತ್ರಹಿಂಸೆ ಅನುಭವಿಸುವ ಎಳೆಯ ಜೀವಗಳನ್ನು ನೆನೆದಾಗ ಕರುಳು ಕಣ್ಣೀರಿಡುತ್ತದೆ. ಮಕ್ಕಳ ಕಳ್ಳಸಾಗಾಣಿಕೆಯಂತೂ ಬಾಲಕಾರ್ಮಿಕ ಪದ್ಧತಿಯ ಅತಿಘೋರ ಕರಾಳ ಮುಖ.

ಇಂದು ವಿಶ್ವದಾದ್ಯಂತ ಏನಿಲ್ಲವೆಂದರೂ 16.8 ಕೋಟಿ ಬಾಲಕಾರ್ಮಿಕರಿದ್ದಾರೆ. ಇದು ಜಗತ್ತಿನ ಒಟ್ಟಾರೆ ಮಕ್ಕಳ ಶೇ. 11 ಭಾಗ. ಇವರಲ್ಲೂ ಅರ್ಧದಷ್ಟು ಮಂದಿ ಅತ್ಯಂತ ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲಿರುವ ಬಾಲಕಾರ್ಮಿಕರ ಸಂಖ್ಯೆ 3.3 ಕೋಟಿ. ಬಿಹಾರ, ಉತ್ತರ ಪ್ರದೇಶ, ರಾಜಸ್ತಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳು ಅತ್ಯಂತ ಹೆಚ್ಚು ಬಾಲಕಾರ್ಮಿಕರನ್ನು ಹುಟ್ಟುಹಾಕಿರುವ ರಾಜ್ಯಗಳು.

ಎಲ್ಲವೂ ನಿಜವಾದರೂ ಒಂದು ಪ್ರಶ್ನೆ ನಮ್ಮನ್ನು ವಿಚಲಿತರನ್ನಾಗಿ ಮಾಡುತ್ತದೆ: ಈ ಮಕ್ಕಳೆಲ್ಲ ದುಡಿಯದೆ ಇರುತ್ತಿದ್ದರೆ ಬೇರೇನಾಗಿರುತ್ತಿದ್ದರು? ಬೆಳಗ್ಗಿನ ಹೊತ್ತು ಮನೆಮನೆಗೆ ಪೇಪರ್ ಹಾಕುವ ಹುಡುಗ ಆ ಕೆಲಸ ಮಾಡದಿರುತ್ತಿದ್ದರೆ ಇನ್ನೇನಾಗಿರುತ್ತಿದ್ದ? ಸಂಜೆ ಹೊತ್ತು ಹೋಟೆಲಲ್ಲಿ ಸಪ್ಲೈಯರ್ ಕೆಲಸ ಮಾಡುವ ಹುಡುಗ ಆ ಕೆಲಸ ಮಾಡದಿರುತ್ತಿದ್ದರೆ ಇನ್ನೇನಾಗಿರುತ್ತಿದ್ದ? ಚುಮುಚುಮು ಚಳಿಯಲ್ಲಿ ಹೂವಿನ ಬುಟ್ಟಿ ಹೊತ್ತು ಓಡಾಡಿ ಒಂದಿಷ್ಟು ಸಂಪಾದಿಸುವ ಅಣ್ಣ ತಂಗಿ ಆ ಕೆಲಸ ಮಾಡದಿರುತ್ತಿದ್ದರೆ ಇನ್ನೇನಾಗಿರುತ್ತಿದ್ದರು?

ಬಾಲ್ಯವಂತೂ ಬಡತನದಲ್ಲೇ ಕರಗಿಹೋಗುತ್ತಿದೆ. ತಮ್ಮಿಂದ ಸಾಧ್ಯವಿರುವ ಒಂದಷ್ಟು ಕೆಲಸಗಳನ್ನಾದರೂ ಮಾಡಿ ಅಪ್ಪ-ಅಮ್ಮನಿಗೆ ಕೈಲಾದ ಸಹಾಯ ಮಾಡಬಾರದೇ ಎಂದು ಯೋಚಿಸುವ ಮಕ್ಕಳು ಸಾಕಷ್ಟು ಮಂದಿ. ನಮ್ಮದು ಮೂಲತಃ ಮಡಿವಾಳರ ಕುಟುಂಬ. ಅವರಿವರ ಬಟ್ಟೆಬರೆ ತೊಳೆಯುತ್ತಾ ಸದಾ ಹರಕಲು ಉಡುಪು ತೊಟ್ಟು ಓಡಾಡುವುದೇ ನಮ್ಮ ಕಾಯಕವಾಗಿತ್ತು. ಆದರೆ ಜೀವನಪೂರ್ತಿ ಇದೇ ರೀತಿ ಆಗಬಾರದು ಎಂಬ ಛಲ ಒಂದೊಮ್ಮೆ ನನ್ನ ಮನಸ್ಸಿನಲ್ಲಿ ಮೂಡಿತು. ಚಿಕ್ಕವನಿರುವಾಗಲೇ ಕಡಲೆಗಿಡ, ಮಾವಿನಕಾಯಿ ಕೀಳುವ ಕೆಲಸಕ್ಕೆ ಹೋಗಿ ಒಂದಿಷ್ಟು ಸಂಪಾದಿಸುವುದು ಆರಂಭಿಸಿದೆ. ಮುಂದೆ ಅದೇ ನನ್ನ ಕೈ ಹಿಡಿಯಿತು. ಕೆಲಸ ಮಾಡುತ್ತಲೇ ಪದವಿಯವರೆಗೂ ಓದಿದೆ ಎಂದು ನೆನಪಿಸಿಕೊಳ್ಳುತ್ತಾರೆ ಪಾವಗಡದ ನವೀನ್.

ಕೆಲಸ ಮಾಡದೆ ಹೋದರೆ ನಾನು ಓದುವುದೇ ಸಾಧ್ಯವಿರಲಿಲ್ಲ ಎಂಬ ಹತ್ತಾರು ಹುಡುಗ ಹುಡುಗಿಯರನ್ನು ನಾನು ಖುದ್ದು ನೋಡಿದ್ದೇನೆ, ಅವರಿಗೆ ಪಾಠ ಮಾಡಿದ್ದೇನೆ. ನನ್ನ ಇಂದಿನ ಪರಿಸ್ಥಿತಿಗೆ ದುಡಿಮೆಯೇ ಕಾರಣ. ನನ್ನಲ್ಲಿ ಆತ್ಮವಿಶ್ವಾಸ ತುಂಬಿದ ಬಡತನದ ದಿನಗಳಿಗೂ, ಅಂತಹ ಪರೀಕ್ಷೆ ಒಡ್ಡಿದ ದೇವರಿಗೂ ಧನ್ಯವಾದಗಳು ಎನ್ನುತ್ತಾರೆ ಪ್ರಸ್ತುತ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿರುವ ಬಳ್ಳಾರಿಯ ಈರನಗೌಡ.

ಸಣ್ಣ ವಯಸ್ಸಿನ ಮಕ್ಕಳು ದುಡಿದು ಹಿರಿಯರನ್ನು ಪೊರೆಯಬೇಕು ಎಂಬ ಮಾತಿನಲ್ಲಿ ತಥ್ಯವಿಲ್ಲ ನಿಜ. ಆದರೆ ತಮ್ಮ ಖರ್ಚುಗಳನ್ನಾದರೂ ತಾವು ಭರಿಸಿಕೊಳ್ಳಬೇಕು, ಅಪ್ಪ-ಅಮ್ಮನಿಗೆ ತೀರಾ ಹೊರೆಯಾಗಬಾರದು ಎಂದು ಯೋಚಿಸುವ ಮಕ್ಕಳೂ ಬಹಳ. ಇಂಗ್ಲೆಂಡಿನ ರಾಯಲ್ ಇಕನಾಮಿಕ್ ಸೊಸೈಟಿಯ ಸಮೀಕ್ಷೆಯೊಂದರ ಪ್ರಕಾರ ಬಾಲಕಾರ್ಮಿಕತನವನ್ನು ಸಂಪೂರ್ಣ ನಿಷೇಧಿಸುವುದರಿಂದ ಆಗುವ ಲಾಭಕ್ಕಿಂತಲೂ ನಷ್ಟವೇ ಹೆಚ್ಚು. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯೂ ಬಾಲಕಾರ್ಮಿಕತನದ ಸಂಪೂರ್ಣ ನಿಷೇಧದ ಪರವಾಗಿ ಇಲ್ಲ. 'ನಾವು ಈ ವಿಷಯದಲ್ಲಿ ಕೊಂಚ ಸಡಿಲಿಕೆ ತೋರುವುದು ಅಗತ್ಯ. ಅಭಿವೃದ್ಧಿಶೀಲ ದೇಶಗಳಲ್ಲಿನ ಬಡತನದ ಬಗ್ಗೆ ನಾವು ಪೂರ್ತಿ ಕುರುಡಾಗಿಲ್ಲ. ಆದರೆ ಏನೂ ಮಾಡದಿರುವುದಕ್ಕಿಂತ ಅಪಾಯಕಾರಿ ಕೆಲಸಗಳಲ್ಲಿ ಮಕ್ಕಳು ದುಡಿಯುವುದಂತೆ ಮಾಡುವುದು ಖಂಡಿತ ಒಳ್ಳೆಯದು’ ಎನ್ನುತ್ತದೆ ಐಎಲ್‌ಒ.

ಮಕ್ಕಳು ದುಡಿಯುವುದು ಅವಮಾನಕರ ಎಂದು ಭಾವಿಸುವ ಹೆತ್ತವರು ಭಾರತದಲ್ಲಿದ್ದಾರೆ. ದುಡಿಯುವ ಮಕ್ಕಳಿಗೆ ಪೋಷಕರ ಬೆಂಬಲ ಇಲ್ಲ ಎಂದು ತಿಳಿಯುವವರೂ ಇದ್ದಾರೆ. ಆದರೆ ಕೆನಡಾದಲ್ಲಿ ಪರಿಸ್ಥಿತಿ ಹಾಗಿಲ್ಲ. ಅಲ್ಲಿ ವರ್ಷಕ್ಕೆ ಎರಡು ಬಾರಿಯಾದರೂ ಮಕ್ಕಳು ತಮ್ಮ ಹೆತ್ತವರೊಂದಿಗೆ ಕೆಲಸಕ್ಕೆ ಹೋಗಬೇಕು ಮತ್ತು ಆ ಮೂಲಕ ಅವರ ಕೆಲಸದ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಹೈಸ್ಕೂಲು ಓದುವ ಮಕ್ಕಳಿಗೆ ಅರೆಕಾಲಿಕ ಉದ್ಯೋಗ ನೀಡುವ ಕಾರ್ಪೋರೇಟ್ ಕಂಪೆನಿಗಳಿವೆ. ಸಾಕಷ್ಟು ಅನುಕೂಲವಂತರ ಮಕ್ಕಳೇ ದಿನಸಿ ಅಂಗಡಿ, ಫಾರ್ಮಸಿ, ಬಟ್ಟೆ ಅಂಗಡಿಗಳಲ್ಲಿ ದುಡಿಯುವುದನ್ನು ನಾನು ಕಂಡಿದ್ದೇನೆ. ಇಲ್ಲಿ ಹಣ ಗಳಿಕೆಗಿಂತಲೂ ಮಕ್ಕಳ ದುಡಿಮೆಯ ಹಿಂದೆ ಸ್ವಾವಲಂಬನೆ, ಸ್ವಾತಂತ್ರ್ಯ, ಹಣದ ನಿರ್ವಹಣೆಯ ಕಲಿಕೆ, ಆತ್ಮವಿಶ್ವಾಸ ಗಳಿಕೆಯ ಉದ್ದೇಶ ಇದೆ ಎಂದು ವಿವರಿಸುತ್ತಾರೆ ಕೆನಡಾದಲ್ಲಿ ನೆಲೆಸಿರುವ ಕನ್ನಡತಿ, ಎಂಎಸ್‌ಡಬ್ಲ್ಯೂ ಪದವೀಧರೆ ಶ್ವೇತಾ ಪ್ರಸಾದ್.

ಕೆನಡಾದಂತಹ ಮುಂದುವರಿದ ದೇಶದ ಪರಿಸ್ಥಿತಿಗೂ ಭಾರತದಂತಹ ಅಭಿವೃದ್ಧಿಶೀಲ ದೇಶದ ಪರಿಸ್ಥಿತಿಗೂ ಅಜಗಜಾಂತರವಿದೆ. ಆದರೆ ಉತ್ತಮ ಅಂಶಗಳನ್ನು ಗೌರವಿಸುವುದರಲ್ಲಿ ತಪ್ಪೇನೂ ಇಲ್ಲ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅನುಭವಕ್ಕಾಗಿ ದುಡಿಮೆ ಎಂಬ ಪರಿಕಲ್ಪನೆ ಇದೆ. ಅಲ್ಲಿ ನಿರ್ದಿಷ್ಟ ಹೊತ್ತಿನಲ್ಲಿ ನಿರ್ದಿಷ್ಟ ಕೆಲಸಗಳನ್ನಷ್ಟೇ ಮಕ್ಕಳು ಮಾಡುತ್ತಾರೆ. ಇದು ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಎಂದು ಭಾವಿಸಲಾಗುತ್ತದೆ. ಆದರೆ ಅಭಿವೃದ್ಧಿಶೀಲ ದೇಶಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿದೆ ಎನ್ನುತ್ತಾರೆ ತುಮಕೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕ ಡಾ. ಕೆ. ಜಿ. ಪರಶುರಾಮ.

ತೃತೀಯ ಜಗತ್ತಿನ ದೇಶಗಳಲ್ಲಿ ವ್ಯಾಪಕ ಬಾಲ-ಬಡತನ ಇದೆ. ಇದು ಮಕ್ಕಳ ಕಳ್ಳಸಾಗಾಣಿಕೆಗೂ, ಅವರ ಲೈಂಗಿಕ ಶೋಷಣೆಗೂ ಕಾರಣವಾಗುತ್ತಿದೆ. ಕಾನೂನು ಒಪ್ಪಿರುವ ಕೆಲಸಗಳನ್ನು ಮಾಡುವುದಕ್ಕೆ ಮಕ್ಕಳಿಗೆ ಅನುಮತಿ ನೀಡುವುದರಿಂದ ಈ ವಿಷಮ ಪರಿಸ್ಥಿತಿ ಕೊಂಚ ತಿಳಿಯಾಗಬಹುದು ಎಂಬುದು ಅವರ ಅಭಿಮತ.

ಬಾಲಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆಯಡಿ ಎಲ್ಲ ರೀತಿಯ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ನಿಷೇಧಿಸಿಬಿಟ್ಟರೆ ಅದು ಅನೇಕ ಮಕ್ಕಳಿಗೆ ಪ್ರತಿಕೂಲವಾದೀತು ಎಂಬ ಮಾತಿನಲ್ಲಿ ಸತ್ಯವಿದೆ. ಆದರೆ ಒಟ್ಟು ವಿಷಯ ಮೇಲ್ನೋಟಕ್ಕೆ ತೋರುವಷ್ಟು ಸರಳವಂತೂ ಆಗಿಲ್ಲ.

ಚೈಲ್ಡ್ ಲೇಬರ್ ಎಂಬ ಪದವೇ ಶೋಷಣೆಯ ಪ್ರತೀಕ. ಮಕ್ಕಳು ಮನೆಯಲ್ಲಿ ಬಟ್ಟೆ-ಪಾತ್ರೆ ತೊಳೆಯುವುದು, ಹಾಸಿಗೆ ಮಡಚುವುದು, ಮನೆಯನ್ನು ಓರಣವಾಗಿ ಇಟ್ಟುಕೊಳ್ಳುವುದು, ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದು, ಅಪ್ಪ-ಅಮ್ಮನಿಗೆ ಸಹಾಯ ಮಾಡುವುದರಲ್ಲಿ ಏನೇನೂ ತಪ್ಪಿಲ್ಲ. ಆದರೆ ಬಾಲಕಾರ್ಮಿಕತನ ಸಂವಿಧಾನದ ಮೂಲ ಆಶಯಗಳಿಗೇ ವಿರುದ್ಧವಾಗಿದೆ. ಲೇಬರ್ ಎಂಬುದರ ಹಿಂದೆ ಶ್ರಮವನ್ನು ಮಾರಿಕೊಳ್ಳುವುದು ಎಂಬ ಧ್ವನಿಯಿದೆ. ಮಕ್ಕಳು ತಮ್ಮ ಶ್ರಮವನ್ನು ಮಾರುವ, ಆಡಿ ಓದಬೇಕಾದ ಮಕ್ಕಳು ದುಡಿಯುವ, ಅವರು ದುಡಿಯುವುದರಿಂದ ಖರ್ಚು ಕಡಿಮೆ ಎಂಬ ಕಲ್ಪನೆಯೇ ಅನಾಗರಿಕವಾದದ್ದು. ಬಡಮಕ್ಕಳು ದುಡಿಯಬೇಕು ಎಂಬ ಧೋರಣೆ ತಪ್ಪಲ್ಲವೇ? ಎನ್ನುತ್ತಾರೆ ಬೆಂಗಳೂರಿನ ಚೈಲ್ಡ್ ರೈಟ್ಸ್ ಟ್ರಸ್ಟಿನ ಎನ್. ವಿ. ವಾಸುದೇವ ಶರ್ಮಾ.

ಕಾಮೆಂಟ್‌ಗಳಿಲ್ಲ: