ಶನಿವಾರ, ಡಿಸೆಂಬರ್ 22, 2018

ಮುಚ್ಚಿದ ವ್ಯವಸ್ಥೆಯ 'ತೆರೆದ ಪುಸ್ತಕ'

28 ನವೆಂಬರ್ 2018ರ 'ಪ್ರಜಾವಾಣಿ' ಶಿಕ್ಷಣ ಪುರವಣಿಯಲ್ಲಿ ಪ್ರಕಟವಾದ ಲೇಖನ

ಪ್ರಜಾವಾಣಿ, 28 ನವೆಂಬರ್ 2018
ತೆರೆದ ಪುಸ್ತಕ ಪರೀಕ್ಷೆಗಳ ಬಗ್ಗೆ ಶಿಕ್ಷಣ ಸಚಿವರ ಪ್ರಸ್ತಾಪದಿಂದ ಹುಟ್ಟಿಕೊಂಡ ಚರ್ಚೆಗಳು ಅಲ್ಲಲ್ಲೇ ಮೌನವಾಗತ್ತಿದ್ದ ಹಾಗೆಯೇ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಮುಂದಿನ ವರ್ಷದಿಂದ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳಲ್ಲೂ ತೆರೆದ ಪುಸ್ತಕ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತರುವುದಾಗಿ ಪ್ರಕಟಿಸಿದೆ. ಯಾವುದೇ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಯೊಂದು ಪ್ರಸ್ತಾಪವಾದಾಗ ಅದರ ಬಗ್ಗೆ ಪರ ವಿರೋಧ ಚರ್ಚೆಗಳು ಬರುವುದು ಸಾಮಾನ್ಯ. ಆದರೆ ಅವುಗಳ ಸಾರ್ಥಕತೆಯಿರುವುದು ಅವೇನಾದರೂ ತಾರ್ಕಿಕ ಅಂತ್ಯ ಕಾಣುತ್ತವೆಯೇ ಎಂಬುದರಲ್ಲಿ.

ತೆರೆದ ಪುಸ್ತಕ ಪರೀಕ್ಷೆಯ ಅಗತ್ಯವನ್ನು ಪ್ರತಿಪಾದಿಸುವವರು ಗುರುತಿಸುವ ಪ್ರಧಾನ ಅಂಶಗಳು ಎರಡು: ಮೊದಲನೆಯದು, ಅದು ಮಕ್ಕಳಲ್ಲಿನ ಪರೀಕ್ಷಾ ಭಯವನ್ನು ಹೋಗಲಾಡಿಸುತ್ತದೆ; ಎರಡನೆಯದು, ಅದು ಮಕ್ಕಳಲ್ಲಿ ವಿಶ್ಲೇಷಣಾ ಕೌಶಲವನ್ನು ಬೆಳೆಸುತ್ತದೆ. ಮತ್ತು ಇವೆರಡೂ ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ. ಈ ಅಭಿಪ್ರಾಯದಲ್ಲಿ ಹುರುಳೇನೋ ಇದೆ. ಆದರೆ ಇದರಿಂದಲೇ ನಮ್ಮ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದೋಷಗಳು ಪರಿಹಾರವಾಗುತ್ತವೆಯೇ ಎಂಬುದು ನಮ್ಮ ಮುಂದಿನ ಪ್ರಶ್ನೆ. ವಿಷಯದ ಎರಡೂ ಮಗ್ಗುಲನ್ನು ಪರಿಶೀಲಿಸೋಣ.

ನಮ್ಮಲ್ಲಿ ಚಾಲ್ತಿಯಲ್ಲಿರುವ ಪರೀಕ್ಷಾ ಪದ್ಧತಿ ವಿದ್ಯಾರ್ಥಿ ಗಳಿಸಿದ ಜ್ಞಾನ ಮತ್ತು ಕೌಶಲಗಳ ಮೌಲ್ಯಮಾಪನಕ್ಕಿಂತಲೂ ಆತನ ಜ್ಞಾಪಕ ಶಕ್ತಿಯ ಪರೀಕ್ಷೆ ಆಗಿರುವುದೇ ಹೆಚ್ಚು. ಇಡೀ ಸೆಮಿಸ್ಟರ್ ಓದಿದ್ದರ ಸಾರಸರ್ವಸ್ವವನ್ನು ಕಂಠಪಾಠ ಮಾಡಿ ನೆನಪುಳಿದದ್ದನ್ನು ಮೂರು ಗಂಟೆಗಳಲ್ಲಿ ಕಕ್ಕುವ ಈ ಪದ್ಧತಿ ಯಾವ ರೀತಿಯಲ್ಲೂ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ಬೆಳೆಸೀತು ಎಂದು ನಿರೀಕ್ಷಿಸುವುದು ಕಷ್ಟ. ಬದುಕನ್ನು ಎದುರಿಸುವ ವಿಚಾರ ಹಾಗಿರಲಿ, ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿಯೊಬ್ಬ ತನ್ನ ದಿನನಿತ್ಯದ ಜವಾಬ್ದಾರಿಗಳನ್ನಾದರೂ ಸಮರ್ಥನಾಗಿ ನಿರ್ವಹಿಸಬಲ್ಲನೇ? ಅದಕ್ಕೆ ಬೇಕಾದ ಸಾಮಾನ್ಯ ವಿವೇಕ, ವ್ಯವಹಾರ ಕುಶಲತೆಯನ್ನು ಅವನ ಶಿಕ್ಷಣ ಪದ್ಧತಿ ಬೆಳೆಸಿದೆಯೇ? ಇಲ್ಲವಾದರೆ ಶಿಕ್ಷಣ ಅವನಿಗೇನು ಕೊಟ್ಟಿದೆ? ನೂರಕ್ಕೆ ನೂರು ಅಂಕ ಕೊಟ್ಟ ಪರೀಕ್ಷೆ ಅವನ ಯಾವ ಜ್ಞಾನವನ್ನು ಅಳೆದಿದೆ?

ತೆರೆದ ಪುಸ್ತಕದ ಪರೀಕ್ಷೆ ಇಂತಹ ಸಮಸ್ಯೆಗೇನಾದರೂ ಪರಿಹಾರ ತೋರಿಸೀತೇ ಎಂದು ಅನಿಸುವುದು ಇಂತಹ ಪ್ರಶ್ನೆಗಳ ನಡುವೆ. ಪಠ್ಯಪುಸ್ತಕದಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳ ತಲೆಗೆ ವರ್ಗಾಯಿಸುವುದೇ ಬೋಧನೆ ಎಂಬುದು ರೂಢಿಗತ ಚಿಂತನೆಯಾದರೆ ವಿದ್ಯಾರ್ಥಿಗಳು ಕಲಿಯುವುದನ್ನು ಕಲಿಸುವುದೇ ಬೊಧನೆ ಎಂಬುದು ಹೊಸ ಬಗೆಯ ಚಿಂತನೆ. ಜಗತ್ತು ಆಧುನಿಕವಾಗುತ್ತಿದ್ದಂತೆಯೇ, ದಿನನಿತ್ಯದ ಬದುಕು ಹಾಗೂ ವೃತ್ತಿಜೀವನದಲ್ಲಿ ಹೊಸ ಸವಾಲುಗಳು ಎದುರಾಗುತ್ತಿದ್ದಂತೆಯೇ ಅದಕ್ಕೆ ಸೂಕ್ತವಾದ ಮಾನಸಿಕತೆಯನ್ನು ಸಿದ್ಧಗೊಳಿಸುವುದು ಶಿಕ್ಷಕರ ಹಾಗೂ ಶಿಕ್ಷಣದ ಜವಾಬ್ದಾರಿ.

ಶಿಕ್ಷಣ ತಜ್ಞ ಬೆಂಜಮಿನ್ ಬ್ಲೂಮ್ ಬೋಧನೆಯ ಆರು ಉದ್ದೇಶಗಳನ್ನು ಗುರುತಿಸುತ್ತಾನೆ: ಜ್ಞಾನ, ಗ್ರಹಿಕೆ, ಆನ್ವಯಿಕತೆ, ವಿಶ್ಲೇಷಣೆ, ಸಂಶ್ಲೇಷಣೆ ಹಾಗೂ ಮೌಲ್ಯಮಾಪನ. ಮೊದಲನೇ ಹಂತ ವಿಷಯಗಳನ್ನು ತಿಳಿದುಕೊಳ್ಳುವುದು ಮತ್ತು ಅಗತ್ಯವಿರುವಲ್ಲಿ ನೆನಪಿಸಿಕೊಳ್ಳುವುದಾದರೆ, ಎರಡನೆಯ ಹಂತ ಪಡೆದ ಮಾಹಿತಿಗಳನ್ನು ಅರ್ಥೈಸಿಕೊಳ್ಳುವುದಾಗಿದೆ. ಮೂರನೇ ಹಂತ ನಿರ್ದಿಷ್ಟ ಸಮಸ್ಯೆಗೆ ಜ್ಞಾನವನ್ನು ಅನ್ವಯಿಸಿಕೊಳ್ಳುವುದಕ್ಕೆ ಸಂಬಂಧಿಸಿದ್ದಾದರೆ, ನಾಲ್ಕನೇ ಹಂತ ವಿವಿಧ ಪರಿಕಲ್ಪನೆಗಳನ್ನು ಪರಿಶೀಲಿಸಿ ಅವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದಾಗಿದೆ. ಐದನೇ ಹಂತದಲ್ಲಿ ಪರಿಕಲ್ಪನೆ ಅಥವಾ ವಿಚಾರಗಳ ಕುರಿತು ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾದರೆ ಕೊನೆಯ ಹಂತದಲ್ಲಿ ವಿದ್ಯಾರ್ಥಿಯೇ ಹೊಸ ಚಿಂತನೆಗಳನ್ನು ಸೃಜಿಸಲು ಸಮರ್ಥನಾಗಬೇಕಾಗುತ್ತದೆ. ಸಾಂಪ್ರದಾಯಿಕ ಶಿಕ್ಷಣ ಪದ್ಧತಿ ಮೊದಲನೇ ಹಂತಲ್ಲಿ ಆರಂಭವಾಗಿ ಅದರಲ್ಲೇ ಅಂತ್ಯ ಕಾಣುತ್ತಿರುವುದೇ ವಿದ್ಯಾರ್ಥಿಗಳು ನಂಬಿಕೊಂಡಿರುವ ಪುಸ್ತಕದ ಬದನೆಕಾಯಿಯ ಹಿಂದಿರುವ ರಹಸ್ಯ. ತೆರೆದ ಪುಸ್ತಕ ಪರೀಕ್ಷಾ ಪದ್ಧತಿಯಲ್ಲಿ ಇದಕ್ಕೇನಾದರೂ ಪರಿಹಾರ ದೊರೆತೀತೇ ಎಂಬುದು ಸದ್ಯದ ಪ್ರಶ್ನೆ.

ತೆರೆದ ಪುಸ್ತಕ ಪರೀಕ್ಷೆಯೆಂದರೆ ಪರೀಕ್ಷಾ ಕೊಠಡಿಯೊಳಗೆ ಸಿದ್ಧ ಉತ್ತರಗಳ ಗೈಡುಗಳನ್ನು ಒಯ್ದು ಉತ್ತರಗಳನ್ನು ನಕಲು ಮಾಡುವ ವಿಧಾನವೇನೂ ಅಲ್ಲ. ಪಠ್ಯಪುಸ್ತಕ, ಪರಾಮರ್ಶನ ಗ್ರಂಥ ಮತ್ತಿತರ ಪೂರ್ವನಿರ್ಧರಿತ ಸಾಮಗ್ರಿಗಳನ್ನು ಮಾತ್ರ ಒಳಗೆ ಒಯ್ಯಲು ಅವಕಾಶ ನೀಡಲಾಗುತ್ತದೆ. ಪ್ರಶ್ನೆಪತ್ರಿಕೆಗಳೂ ರೂಢಿಯಲ್ಲಿರುವಂತೆ 'ಎಂದರೇನು’, 'ವ್ಯಾಖ್ಯಾನಿಸಿ’, 'ಪಟ್ಟಿಮಾಡಿ’, 'ವಿವರಿಸಿ’ ಎಂಬಿತ್ಯಾದಿ ಪ್ರಶ್ನೆಗಳಿಗೆ ಸೀಮಿತವಾಗಿರುವುದಿಲ್ಲ. ಅಲ್ಲಿ ವಿಮರ್ಶೆ-ವಿಶ್ಲೇಷಣೆಗಳಿಗೆ ಆದ್ಯತೆ. ಆಗ ಮೌಲ್ಯಮಾಪನದ ವಿಧಾನವೂ ಬದಲಾಗುತ್ತದೆ. ಪದವಿ, ಸ್ನಾತಕೋತ್ತರ ಪದವಿ, ಕಾನೂನು, ವೈದ್ಯಕೀಯ, ಇಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸ್‌ಗಳಲ್ಲಿ ಈ ಪದ್ಧತಿ ಸಾಧ್ಯವಾದೀತೇನೋ? ಆದರೆ ಪ್ರಾಥಮಿಕ ಅಥವಾ ಮಾಧ್ಯಮಿಕ ಶಾಲಾ ಹಂತದಲ್ಲಿ ಇದನ್ನು ಅನುಷ್ಠಾನಕ್ಕೆ ತರುವ ಮುನ್ನ ಸಾಕಷ್ಟು ಯೋಚಿಸಬೇಕಾಗುತ್ತದೆ.

ತೆರೆದ ಪುಸ್ತಕ ಪರೀಕ್ಷೆಗಳ ಪದ್ಧತಿ ಅಮೇರಿಕ, ಆಸ್ಟ್ರೇಲಿಯ, ಫಿನ್‌ಲ್ಯಾಂಡ್, ಕೆನಡಾ, ಜರ್ಮನಿ, ಸ್ವಿಡ್ಜರ್‌ಲ್ಯಾಂಡಿನಂತಹ ದೇಶಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಅಲ್ಲಿ ತೆರೆದ ಪುಸ್ತಕವೇನು, ಪ್ರಶ್ನೆಪತ್ರಿಕೆಯನ್ನು ಮನೆಗೇ ಒಯ್ದು ಪರೀಕ್ಷೆ ಬರೆಯುವ ಪದ್ಧತಿಯೂ ಯಶಸ್ವಿಯಾಗಿದೆ. ಎಂಬ ಕಾರಣಕ್ಕೆ ನಮ್ಮಲ್ಲೂ ಅದು ಯಶಸ್ವಿಯಾದೀತೇ? ಇದು ಕೇವಲ ಪರೀಕ್ಷೆಯ ಪ್ರಶ್ನೆ ಮಾತ್ರವಾಗಿದ್ದರೆ ಉತ್ತರಿಸುವುದು ಸುಲಭವಿತ್ತು. ಆದರೆ ನಮ್ಮ ಸಮಸ್ಯೆ ಪರೀಕ್ಷೆಗೆ ಮಾತ್ರ ಸಂಬಂಧಿಸಿದ್ದಲ್ಲ. ನಮ್ಮ ಶಿಕ್ಷಣ ವ್ಯವಸ್ಥೆ ಆಮೂಲಾಗ್ರ ಪರಿವರ್ತನೆಯನ್ನು ಬಯಸುತ್ತಿದೆ.

ಇಂದಿಗೂ ಬಹುತೇಕ ಶಾಲೆಗಳು ಮೂಲಭೂತ ಸೌಕರ್ಯಗಳ ಕೊರತೆ, ಪೀಠೋಪಕರಣ, ಬೋಧನೋಪಕರಣಗಳ ಕೊರತೆಯಿಂದ ಬಳಲುತ್ತಿವೆ. ಶಿಕ್ಷಕರನ್ನು ಪಾಠಮಾಡುವುದೊಂದನ್ನುಳಿದು ಇನ್ನೆಲ್ಲ ಕೆಲಸಗಳಿಗೂ ಬಳಸಿಕೊಳ್ಳಲಾಗುತ್ತಿದೆ. ಯತಾರ್ಥವಾಗಿ ಅವರಿಗೆ ಮಕ್ಕಳೊಂದಿಗೆ ಬೆರೆಯುವುದಕ್ಕೆ, ಅವರು ಇಷ್ಟಪಡುವಂತೆ ಪಾಠಮಾಡುವುದಕ್ಕೆ ಸಮಯವೇ ಇಲ್ಲ. ಅದರ ಮೇಲೆ ಹೇಗಾದರೂ ಮಾಡಿ ನೂರಕ್ಕೆ ನೂರು ಫಲಿತಾಂಶ ಪಡೆಯುವ ಒತ್ತಡ. ಇದರ ನಡುವೆ ತೆರೆದ ಪುಸ್ತಕದ ಪರೀಕ್ಷೆಗೆ ಮಕ್ಕಳನ್ನು ಸಿದ್ಧಪಡಿಸುವ ಹೊಸ ಬಗೆಯ ಬೋಧನಾ ವಿಧಾನಕ್ಕೆ ಅವರು ಒಗ್ಗಿಕೊಳ್ಳುವುದೆಂತು? ಅದಕ್ಕೆ ತಕ್ಕುದಾದ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವುದಕ್ಕೆ ಎಷ್ಟು ಮಂದಿ ಶಿಕ್ಷಕರು ಸ್ವತಃ ಸಮರ್ಥರಿದ್ದಾರೆ?

ಇನ್ನೊಂದೆಡೆ, ಇಡೀ ಸಮಾಜ ಅಂಕ ಗಳಿಕೆಯ ಓಟದಲ್ಲಿ ನಿರತವಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಪಡೆವ ಅಂಕಗಳೇ ಮಕ್ಕಳ ಒಟ್ಟಾರೆ ಭವಿಷ್ಯದ ಅಡಿಗಲ್ಲುಗಳೆಂಬಂತೆ ಬಿಂಬಿಸಲಾಗುತ್ತಿದೆ. ನಿದ್ದೆ ಮಾಡುವ ನಾಲ್ಕೈದು ಗಂಟೆಗಳ ಹೊರತಾಗಿ ಉಳಿದೆಲ್ಲ ಸಮಯದಲ್ಲೂ ಬೆಳಗು, ಸಂಜೆ, ಮಳೆ, ಚಳಿಗಳೆಂಬ ವ್ಯತ್ಯಾಸ ಗೊತ್ತಾಗದಂತೆ ವಿದ್ಯಾರ್ಥಿಗಳನ್ನು ಟ್ಯೂಶನ್ ಗಿರಣಿಗಳಲ್ಲಿ ರುಬ್ಬಲಾಗುತ್ತಿದೆ. ನೂರಕ್ಕೆ ನೂರು ಅಂಕ ಗಳಿಸುವ ಹೊರತಾಗಿ ಅವರ ವಿದ್ಯಾರ್ಥಿ ಜೀವನಕ್ಕೆ ಇನ್ನೇನೂ ಗುರಿಗಳೇ ಇಲ್ಲ. ಇಂಥ ಮಕ್ಕಳಿಗೆ ಪುಸ್ತಕ ತೆರೆದರೂ ಅಷ್ಟೆ, ಮುಚ್ಚಿದರೂ ಅಷ್ಟೆ. ಪರೀಕ್ಷಾ ಭಯದಿಂದ ಎಷ್ಟು ವಿದ್ಯಾರ್ಥಿಗಳು ಈವರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಗೊತ್ತಿಲ್ಲ, ಆದರೆ ಫಲಿತಾಂಶದ ಮತ್ತು ಅದರಿಂದ ಬರುವ ಪ್ರಕ್ರಿಯೆಯ ಭಯದಿಂದಾಗಿ ಈವರೆಗೆ ಪ್ರಾಣಕಳಕೊಂಡಿರುವ ಅಮಾಯಕ ಜೀವಗಳು ಸಾವಿರಾರು.

ಈ ಮೂಲಭೂತ ವ್ಯವಸ್ಥೆಯನ್ನು ಸರಿಪಡಿಸದೆ ಏಕಾಏಕಿ ತೆರೆದ ಪುಸ್ತಕ ಪರೀಕ್ಷೆಗಳನ್ನು ಜಾರಿಗೆ ತಂದು ಎಲ್ಲವನ್ನೂ ಬದಲಾಯಿಸಿಬಿಡುತ್ತೇವೆ ಎಂಬ ಯೋಚನೆ ಮೂರ್ಖತನದ್ದು. ಒಳಗೆ ಮುಳ್ಳನ್ನು ಉಳಿಸಿಕೊಂಡು ಹೊರಗಿನಿಂತ ಎಷ್ಟು ಮುಲಾಮು ಹಚ್ಚಿದರೇನು ಪ್ರಯೋಜನ?


ಕಾಮೆಂಟ್‌ಗಳಿಲ್ಲ: