ಬುಧವಾರ, ಡಿಸೆಂಬರ್ 19, 2018

ಒಂದೇ ಜಗತ್ತು: ಹಲವು ದೀಪಾವಳಿ

'ಹೊಸದಿಗಂತ' ದೀಪಾವಳಿ ವಿಶೇಷಾಂಕ 2018ರಲ್ಲಿ ಪ್ರಕಟವಾದ ಲೇಖನ

ಹೊಸದಿಗಂತ ದೀಪಾವಳಿ ವಿಶೇಷಾಂಕ 2018
ದೀಪಾವಳಿಯಷ್ಟು ವರ್ಣಮಯ ಹಬ್ಬ ಭಾರತದಲ್ಲಿ ಮತ್ತೊಂದು ಹೇಗೆ ಇಲ್ಲವೋ, ಅದರಷ್ಟು ವಿಸ್ತಾರವಾದ ಮಾನ್ಯತೆ ಪಡೆದ ಹಬ್ಬವೂ ಜಗತ್ತಿನಲ್ಲಿ ಇನ್ನೊಂದಿಲ್ಲ ಎನಿಸುತ್ತದೆ. ಅಷ್ಟರಮಟ್ಟಿಗೆ ದೀಪಾವಳಿ ಸರ್ವಮಾನ್ಯ, ವಿಶ್ವಮಾನ್ಯ. ಫಿಜಿ, ನೇಪಾಳ, ಮಾರಿಷಸ್, ಮಯನ್ಮಾರ್, ಸಿಂಗಾಪುರ, ಶ್ರೀಲಂಕಾ, ಟ್ರಿನಿಡಾಡ್, ಇಂಗ್ಲೆಂಡ್, ಇಂಡೋನೇಷ್ಯಾ, ಜಪಾನ್, ಥಾಯ್‌ಲ್ಯಾಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯ, ಅಮೇರಿಕಗಳಲ್ಲೆಲ್ಲ ದೀಪಾವಳಿ ವಿಶಿಷ್ಟವಾಗಿ ಆಚರಿಸಲ್ಪಡುತ್ತದೆ. ಈ ದೇಶಗಳ ಪೈಕಿ ಬಹುತೇಕ ಕಡೆ ದೀಪಾವಳಿ ಆಚರಣೆಗೆ ಸಾರ್ವಜನಿಕ ರಜೆಯನ್ನೂ ಘೋಷಿಸಲಾಗುತ್ತದೆ ಎಂಬುದು ಗಮನಾರ್ಹ.

ದೀಪಗಳನ್ನು ಬೆಳಗಿ ಕತ್ತಲೆಯ ಎದುರು ಬೆಳಕಿನ ವಿಜಯವನ್ನು ಸಾರುವ ದೀಪಾವಳಿ ಈ ವೈಶಿಷ್ಟ್ಯಪೂರ್ಣ ಸಂದೇಶದಿಂದಲೇ ಜಗತ್ತಿನ ಗಮನ ಸೆಳೆದಿದೆ. ಇನ್ನೊಂದೆಡೆ ಜಗತ್ತಿನ ವಿವಿಧ ಭಾಗಗಳಲ್ಲಿ ಮತ್ತು ಕ್ಷೇತ್ರಗಳಲ್ಲಿ ಭಾರತೀಯರು ತಮ್ಮ ಪ್ರಭಾವಳಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಸಂಕೇತವೂ ಇದೆಂದು ಭಾವಿಸಬಹುದು. ಜಗತ್ತಿನ ಯಾವ ಭಾಗಕ್ಕೆ ದೀಪಾವಳಿ ಹೋದರೂ ಅದರ ಮೂಲ ಸ್ವರೂಪ ಮತ್ತು ಅದು ನೀಡುವ ಸಂದೇಶ ಬದಲಾಗಲು ಸಾಧ್ಯವಿಲ್ಲ ಅಲ್ಲವೇ?

2009ರಲ್ಲಿ ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮ ಖುದ್ದು ಶ್ವೇತಭವನದಲ್ಲಿ ಹಣತೆ ಬೆಳಗುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು ಮತ್ತು ಆ ಮೂಲಕ ವಿಶ್ವದ ಗಮನ ಸೆಳೆದರು. ಪ್ರಪಂಚದ ಬೇರೆ ಬೇರೆ ದೇಶಗಳು ದೀಪಾವಳಿಯನ್ನು ಆಚರಿಸುವ ಬಗೆಯೇನು ಎಂಬುದನ್ನು ಮುಂದೆ ನೋಡೋಣ:

ನೇಪಾಳ
2008ರವರೆಗೂ ಪ್ರಪಂಚದ ಏಕೈಕ ಹಿಂದೂ ರಾಷ್ಟ್ರವೆಂಬ ಅಧಿಕೃತ ಮನ್ನಣೆಗೆ ಪಾತ್ರವಾಗಿದ್ದ ನೇಪಾಳದಲ್ಲಿ ದೀಪಾವಳಿ ಬಹುಸಂಭ್ರಮದ ಹಬ್ಬ. ಹಿಮಾಲಯದ ತಪ್ಪಲಿನಲ್ಲಿ ತಂಪಾಗಿರುವ ನೇಪಾಳಿಯನ್ನರು ಪಶುಪತಿನಾಥನ ಆರಾಧಕರು. ಅವರ ದೀಪಾವಳಿ ಆಚರಣೆ ಕುತೂಹಲಕರವೂ ವಿಶಿಷ್ಟವೂ ಆಗಿದೆ.  ನೇಪಾಳದಲ್ಲಿ ತಿಹಾರ್ ಎಂದು ಕರೆಯಲ್ಪಡುವ ದೀಪಾವಳಿಯು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಮೈತ್ರಿಯ ಸುಂದರ ಸಂಕೇತದಂತಿದೆ.  ದೀಪಾವಳಿಯ ಮೊದಲನೆಯ ದಿನ 'ಕಾಗ್ ತಿಹಾರ್’. ಸಾಮಾನ್ಯ ದಿನಗಳಲ್ಲಿ ಜನರಿಂದ ಅಶುಭವೆಂದು ಕರೆಸಿಕೊಳ್ಳುವ ಕಾಗೆಗಳಿಗೆ ಅಂದು ಅಗ್ರಪೂಜೆ. ಕೆಟ್ಟ ಸುದ್ದಿಗಳನ್ನು ತರಬೇಡಿರಪ್ಪಾ ಎಂದು ಕೈಮುಗಿದು ಕಾಗೆಗಳಿಗೆ ಸಿಹಿತಿಂಡಿ ಬಡಿಸುವುದು ಅಂದಿನ ರೂಢಿ. ಎರಡನೆಯ ದಿನ 'ಕುಕುರ್ ತಿಹಾರ್’. ಅಂದು ನಾಯಿಗಳಿಗೆ ಸಿಹಿಯೂಟ. ಮೂರನೆಯ ದಿನ 'ಗಾಯ್ ತಿಹಾರ್’. ಗೋಪೂಜೆ ಮತ್ತು ಲಕ್ಷ್ಮೀಪೂಜೆ ಅಂದಿನ ವಿಶೇಷ. ನಾಲ್ಕನೆಯ ದಿನ ಗೋರು ತಿಹಾರ್ ಅಥವಾ ಎತ್ತುಗಳಿಗೆ ಪೂಜೆ. ಕೆಲವು ಪಂಗಡಗಳು ಇದನ್ನು ಗೋವರ್ಧನ ಪೂಜೆ ಎಂದು ಅಚರಿಸುವುದೂ ಇದೆ. ಐದನೆಯ ದಿನ 'ಭಾಯಿ ಟಿಕಾ’ ಅಂದರೆ ಸೋದರ-ಸೋದರಿಯರು ಒಂದೆಡೆ ಸೇರಿ ಸಂಭ್ರಮಿಸುವ ದಿನ. ಹೆಣ್ಣುಮಕ್ಕಳು ತಮ್ಮ ಅಣ್ಣತಮ್ಮಂದಿರ ಮನೆಗಳಿಗೆ ತೆರಳಿ ಹಣೆಗೆ ತಿಲಕ ಹಚ್ಚಿ ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದು ಅಂದಿನ ವಿಶೇಷ. ಹಬ್ಬದ ದಿನಗಳಲ್ಲಿ ಸ್ನೇಹಿತರು ಅಲ್ಲಲ್ಲಿ ಸೇರಿ ಜೂಜಾಡುವುದೂ ಇದೆ. ದೀಪಾವಳಿ ಸಮಯದಲ್ಲಿ ಜೂಜಾಡುವುದು ನೇಪಾಳದಲ್ಲಿ ಕಾನೂನುಬಾಹಿರ ಅಲ್ಲ.

ಮಾರಿಷಸ್
ಪ್ರಕೃತಿಯ ಸೌಂದರ್ಯದ ಮಡಿಲಂತಿರುವ ಮಾರಿಷಸ್ ಒಂದು ಬಹುಧರ್ಮೀಯ, ಬಹುಸಂಸ್ಕೃತಿಯ, ಬಹುಭಾಷಿಕ ನಾಡು. ಆಫ್ರಿಕಾದ ಆಗ್ನೇಯ ಕಡಲ ತೀರದಿಂದ 2000 ಕಿ.ಮೀ. ದೂರದಲ್ಲಿರುವ ಮಾರಿಷಸ್ ಜೀವವೈವಿಧ್ಯಕ್ಕೆ ಹೆಸರಾದ ದೇಶವೂ ಹೌದು. ಆಫ್ರಿಕಾದಲ್ಲೇ ಅತಿಹೆಚ್ಚು ಹಿಂದೂ ಜನಸಂಖ್ಯೆಯನ್ನು ಹೊಂದಿರುವ ಈ ದ್ವೀಪರಾಷ್ಟ್ರದಲ್ಲಿ ಧಾರ್ಮಿಕ ಶ್ರದ್ಧಾಳುಗಳು ಹೆಚ್ಚು. ಅದಕ್ಕೇ ಮಾರಿಷಸ್‌ನಲ್ಲಿ ದೀಪಾವಳಿ ವಿಶೇಷ ಹಬ್ಬ. ಗಣಪತಿ ಹಾಗೂ ಲಕ್ಷ್ಮಿಗೆ ವಿಶಿಷ್ಟ ಪೂಜೆ ಸಲ್ಲಿಸುವ ಅಲ್ಲಿನ ಮಂದಿ ಮನೆ, ದೇಗುಲಗಳನ್ನು ವಿಶಿಷ್ಟವಾಗಿ ಅಲಂಕರಿಸುವುದರಲ್ಲೂ ಎತ್ತಿದ ಕೈ.

ದೀಪಾವಳಿಯ ಸಂದರ್ಭ ಹೊಸ ಉಡುಗೆ-ತೊಡುಗೆ, ಒಡವೆಗಳನ್ನು ಖರೀದಿಸುವುದೂ ಇಲ್ಲಿನ ವಾಡಿಕೆ. ಮನೆಗೆ ಸಂಪತ್ತನ್ನು ಬರಮಾಡಿಕೊಳ್ಳುವ ಈ ಸಾಂಕೇತಿಕ ದಿನಕ್ಕೆ ಮಾರಿಷಸ್‌ನಲ್ಲಿ 'ಧಂತೇರ’ ಎಂದು ಹೆಸರು. ದೀಪಾವಳಿಯ ಕೊನೆಯ ದಿನದಂದು ಸೋದರ ಸೋದರಿಯರು ಒಂದೆಡೆ ಸೇರಿ ಸಂಭ್ರಮಿಸುವ ಹಾಗೂ ಸ್ನೇಹಿತರು ಜೂಜಾಡುವ ಸಂಪ್ರದಾಯ ಇಲ್ಲಿಯೂ ಇದೆ. ಆದರೆ ಈ ಜೂಜಾಟದ ಹಿಂದೆ ಶಿವ-ಪಾರ್ವತಿಯರ ಪಗಡೆಯಾಟದ ಕಥೆಯಿದೆ. ದೀಪಾವಳಿಯಂದು ಪಗಡೆ ಆಡುವವರನ್ನು ಅದೃಷ್ಟ ಹುಡುಕಿಕೊಂಡು ಬರಲಿ ಎಂದು ಪಾರ್ವತಿ ಹರಸುತ್ತಾಳೆಂಬುದು ಜನಪದರ ನಂಬಿಕೆ.

ಫಿಜಿ
ದಕ್ಷಿಣ ಪೆಸಿಫಿಕ್‌ನಲ್ಲಿರುವ ಫಿಜಿ ಮುನ್ನೂರಕ್ಕಿಂತಲೂ ಹೆಚ್ಚು ಪುಟ್ಟ ದ್ವೀಪಗಳ ಒಂದು ಸಮೂಹ. ಮನೋಹರ ಕಡಲ ಕಿನಾರೆಗಳು ಹಾಗೂ ಹವಳದ ದಂಡೆಗಳಿಂದ ಕೂಡಿರುವ ಫಿಜಿ ಶ್ರೀಮಂತ ದೇಶವೂ ಹೌದು. ಇಲ್ಲಿನ ಜನಸಂಖ್ಯೆಯ ಶೇ. 28 ಹಿಂದೂಗಳು ಎಂಬುದು ಗಮನಾರ್ಹ ಮತ್ತು ಅದಕ್ಕಾಗಿಯೇ ಇಲ್ಲಿ ದೀಪಾವಳಿ ಒಂದು ವಿಶೇಷ ಆಚರಣೆ. ಇಷ್ಟೊಂದು ಸಂಖ್ಯೆಯ ಭಾರತೀಯರು ಫಿಜಿಯಲ್ಲಿ ಇರುವುದಕ್ಕೆ ಕಾರಣ 19ನೇ ಶತಮಾನದಲ್ಲಿ ಬ್ರಿಟಿಷರು ತೋಟದ ಕೆಲಸಕ್ಕಾಗಿ ಭಾರತೀಯರದನ್ನು ಸಾವಿರಾರು ಸಂಖ್ಯೆಯಲ್ಲಿ ಅಲ್ಲಿಗೆ ಕೊಂಡೊಯ್ದದ್ದು. ದೀಪಗಳ ಅಲಂಕಾರ, ಭೂರಿ ಭೋಜನ, ಪಟಾಕಿಗಳ ಗಮ್ಮತ್ತು ಅಲ್ಲದೆ ಶಾಲೆಗಳಲ್ಲೂ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದು ಫಿಜಿಯ ವೈಶಿಷ್ಟ್ಯತೆ.

ಮಲೇಷ್ಯಾ
ಸುಮಾರು ೪೦ ಲಕ್ಷ ಅನಿವಾಸಿ ಭಾರತೀಯರು ನೆಲೆಸಿರುವ ಮಲೇಷ್ಯಾ ಅತ್ಯುತ್ತಮ ಪ್ರವಾಸೀ ತಾಣವೂ ಹೌದು. ಇಲ್ಲಿ ದೀಪಾವಳಿ ಕುಟುಂಬ ಮರುಮಿಲನಗಳಿಗೆ ಹೆಸರುವಾಸಿ. ವರ್ಷಕ್ಕೊಮ್ಮೆಯಾದರೂ ದೇಶದ ಬೇರೆಬೇರೆ ಕಡೆಯ ಬಂಧುಬಳಗ, ಸ್ನೇಹಿತರು ಒಂದೆಡೆ ಸೇರಿ ದೀಪ ಹಚ್ಚಿ ಪಟಾಕಿ ಸಿಡಿಸಿ ಸಿಹಿಯುಂಡು ಖುಷಿಪಡುವುದಕ್ಕೆ ದೀಪಾವಳಿ ಒಂದು ಒಳ್ಳೆಯ ಕಾರಣ. ಮಲೇಷ್ಯಾದ 'ಲಿಟಲ್ ಇಂಡಿಯಾ’ವಂತೂ ದೀಪಾವಳಿ ವೇಳೆಗೆ ಸಾಕ್ಷಾತ್ ಭಾರತವಾಗಿಯೇ ಮಾರ್ಪಟ್ಟು ಆಕರ್ಷಣೆಯ ಕೇಂದ್ರ ಬಿಂದುವಾಗುತ್ತದೆ.

ಶ್ರೀಲಂಕಾ
ಐತಿಹಾಸಿಕವಾಗಿಯೂ ಸಾಂಸ್ಕೃತಿಕವಾಗಿಯೂ ಶ್ರೀಲಂಕಾ ಭಾರತ ಉಪಖಂಡದ ಒಂದು ಭಾಗವೇ. ಅಲ್ಲಿ ಬೌದ್ಧರನ್ನು ಬಿಟ್ಟರೆ ಹಿಂದೂಗಳೇ ಬಹುಸಂಖ್ಯಾತರು (ಜನಸಂಖ್ಯೆಯ ಶೇ. 13 ಭಾಗ). ಶ್ರೀರಾಮ ರಾವಣನನ್ನು ವಧಿಸಿ ಸೀತಾಲಕ್ಷ್ಮಣ ಸಮೇತನಾಗಿ ಅಯೋಧ್ಯೆಗೆ ಹಿಂತಿರುಗಿದ ದಿನವೇ ದೀಪಾವಳಿ ಆಗಿರುವುದರಿಂದ ಲಂಕೆಗೆ ದೀಪಾವಳಿ ಹಿನ್ನೆಲೆಯಲ್ಲಿ ವಿಶೇಷ ಮಹತ್ವ ಇದೆ. ತಮಿಳರು ಹೆಚ್ಚಾಗಿ ನೆಲೆಸಿರುವ ಶ್ರೀಲಂಕಾದಲ್ಲಿ ಬಹುತೇಕ ಭಾರತದಲ್ಲಿ ನಡೆಯುವಂತೆಯೇ ದೀಪಾವಳಿ ಆಚರಣೆ ನಡೆಯುತ್ತದೆ.

ಅಮೇರಿಕ
ಐದೂವರೆ ಲಕ್ಷ ಹಿಂದೂಗಳು ಸೇರಿದಂತೆ 44 ಲಕ್ಷ ಅನಿವಾಸಿ ಭಾರತೀಯರಿರುವ ಅಮೇರಿಕದಲ್ಲಿ ದೀಪಾವಳಿ ಒಂದು ಅಧಿಕೃತ ಹಬ್ಬವೆನಿಸಿದ್ದು ಹೊಸ ಸಹಸ್ರಮಾನದಲ್ಲಿ. 2003ರಲ್ಲಿ ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಶ್ವೇತಭವನದಲ್ಲಿ ದೀಪಾವಳಿ ಆಚರಣೆಗೆ ಅವಕಾಶ ಮಾಡಿಕೊಟ್ಟರು. ಅಲ್ಲಿಂದ ಶ್ವೇತಭವನದಲ್ಲಿ ಅದೊಂದು ವಾರ್ಷಿಕ ಸಂಪ್ರದಾಯವೇ ಆಯಿತು. 2007ರಲ್ಲಿ ಅಮೇರಿಕದ ಸಂಸತ್ತು ದೀಪಾವಳಿಯ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಸರ್ವಾನುಮತದಿಂದ ಅಂಗೀಕರಿಸಿತು. 2009ರಲ್ಲಿ ಖುದ್ದು ಬರಾಕ್ ಒಬಾಮ ಅವರೇ ವೇದಘೋಷಗಳ ನಡುವೆ ಸಪತ್ನೀಕರಾಗಿ ಶ್ವೇತಭವನದಲ್ಲಿ ದೀಪಾವಳಿಯ ಹಣತೆ ಬೆಳಗಿ ದೀಪಾವಳಿ ಆಚರಿಸಿದ ಮೊದಲ ಅಮೇರಿಕದ ಅಧ್ಯಕ್ಷರೆನಿಸಿದರು. 2016ರಲ್ಲಿ ಅಮೇರಿಕದ ಅಂಚೆ ಇಲಾಖೆಯು ಹಣತೆಯ ಚಿತ್ರವುಳ್ಳ ಅಂಚೆಚೀಟಿ ಬಿಡುಗಡೆ ಮಾಡಿ ಅಲ್ಲಿನ ಭಾರತೀಯರ ಸಂಭ್ರಮಕ್ಕೆ ಇನ್ನಷ್ಟು ಗರಿ ಮೂಡಿಸಿತು.

ಅಮೇರಿಕದ ಡ್ಯೂಕ್, ಪ್ರಿನ್ಸ್‌ಟನ್, ಹೋವಾರ್ಡ್, ರಗ್ಟರ್ಸ್, ಕಾರ್ನೆಗಿ ವಿಶ್ವವಿದ್ಯಾನಿಲಯಗಳಲ್ಲೂ ಭಾರತೀಯ ವಿದ್ಯಾರ್ಥಿಗಳು ವಿಶೇಷವಾಗಿ ದೀಪಾವಳಿ ಆಚರಿಸುತ್ತಾರೆ. ಅಮೇರಿಕದಲ್ಲಿರುವ ಸಿಖ್ಖರಿಗೂ ದೀಪಾವಳಿ ವಿಶೇಷ ಹಬ್ಬ. ಆದರೆ ಅವರ ದೀಪಾವಳಿಯ ಹಿನ್ನೆಲೆ ಬೇರೆ. ಜಹಾಂಗೀರನ ಸೆರೆಯಿಂದ ಹೊರಬಂದ ಗುರು ಹರಗೋವಿಂದರ ಸ್ಮರಣೆಗೆ ಅಮೃತಸರದ ಸ್ವರ್ಣಮಂದಿರ ಹೇಗೆ ಲಕಲಕನೆ ಹೊಳೆಯುತ್ತದೋ ಹಾಗೆಯೇ ಅಮೇರಿಕದಲ್ಲಿರುವ ಗುರುದ್ವಾರಗಳೂ ದೀಪಾವಳಿಯಂದು ಝಗಮಗಿಸುತ್ತವೆ.

ಮಯನ್ಮಾರ್
ಶೇ. 88ರಷ್ಟು ಬೌದ್ಧಧರ್ಮೀಯರೇ ಇದ್ದರೂ ಮಯನ್ಮಾರ್ ಒಂದು ವೈವಿಧ್ಯಮಯ ತಾಣ. ಒಂದು ಕಾಲಕ್ಕೆ ಹಿಂದೂಗಳೇ ಬಹುಸಂಖ್ಯಾತರಾಗಿದ್ದ ದೇಶವೂ ಹೌದು. ಆಗ್ನೇಯ ಏಷ್ಯಾದಲ್ಲೇ ಅತಿ ಹಿಂದುಳಿದ ದೇಶಗಳಲ್ಲೊಂದು ಎಂದು ಕರೆಯಲ್ಪಟ್ಟರೂ ಮಯನ್ಮಾರ್ ಅಥವಾ ಬರ್ಮಾಕ್ಕೆ ದೀಪಾವಳಿ ಆಚರಣೆಯಲ್ಲಿ ಬಡತನವಿಲ್ಲ. ಅಲ್ಲಿ ನೆಲೆಸಿರುವ ಭಾರತೀಯರಿಗೆ ದೀಪಾವಳಿ ಅಭ್ಯುದಯದ ಸಂಕೇತ.

ಇಂಡೋನೇಷ್ಯಾ
ಜಗತ್ತಿನ ಅತಿದೊಡ್ಡ ದ್ವೀಪರಾಷ್ಟ್ರ ಇಂಡೋನೇಷ್ಯಾದಲ್ಲಿ ಮುಸ್ಲಿಮರು ಬಹುಸಂಖ್ಯಾರು (ಶೇ. 87). ಅಲ್ಲಿನ ಬಾಲಿ ದ್ವೀಪದಲ್ಲಿ ದೀಪಾವಳಿ ಆಚರಣೆ ಹೆಚ್ಚು ಅದ್ದೂರಿಯಾಗಿ ನಡೆಯುತ್ತದೆ. ಅಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವುದೂ ಇದಕ್ಕೊಂದು ಕಾರಣ.

ಟ್ರಿನಿಡಾಡ್ & ಟೊಬಾಗೊ
ಕೆರಿಬಿಯನ್ ಪ್ರದೇಶದಲ್ಲಿ ಬರುವ ಟ್ರಿನಿಡಾಡ್ & ಟೊಬಾಗೊ ವೆಸ್ಟ್ ಇಂಡೀಸ್‌ನ ಪ್ರಸಿದ್ಧ ಅವಳಿ ದ್ವೀಪಗಳು. ನೈಸರ್ಗಿಕ ಸಂಪನ್ಮೂಲಗಳಿಂದ ಶ್ರೀಮಂತವಾಗಿರುವ ಇವು ದೀಪಾವಳಿ ಆಚರಣೆಗೂ ಹೆಸರುವಾಸಿ. ಜನಸಂಖ್ಯೆಯ ಶೇ. 18ರಷ್ಟು ಹಿಂದೂಗಳು ಇಲ್ಲಿ ನೆಲೆಸಿರುವುದರಿಂದ ದೀಪವಳಿಗೆ ಸಹಜವಾಗಿಯೇ ಹೆಚ್ಚಿನ ಮಾನ್ಯತೆ ದೊರಕಿದೆ.

ಸಿಂಗಾಪುರ
ಜಗತ್ತಿನ ಶ್ರೀಮಂತ ಹಾಗೂ ತುಟ್ಟಿ ದೇಶಗಳಲ್ಲೊಂದಾಗಿರುವ ಸಿಂಗಾಪುರದ ಭಾರತೀಯರಲ್ಲಿ ತಮಿಳರು ಹೆಚ್ಚು. ಇಲ್ಲಿ ಸುಮಾರು 8.5 ಲಕ್ಷ ಅನಿವಾಸಿ ಭಾರತೀಯರು ಮತ್ತು ಭಾರತ ಮೂಲದ ಜನರಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಚಿನ್ನಾಭರಣಗಳ ಖರೀದಿ ಭರಾಟೆ ಇಲ್ಲಿನ ವಿಶೇಷತೆ.

ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾದ ನತಾಲ್ ಮತ್ತು ಟ್ರಾನ್ಸ್‌ವಾಲ್‌ನಲ್ಲಿ ಹಿಂದೂಗಳು ಅಧಿಕ. ಉತ್ತರ ಪ್ರದೇಶ, ಗುಜರಾತ್ ಹಾಗೂ ತಮಿಳುನಾಡಿನಿಂದ ವಲಸೆ ಹೋದ ಕುಟುಂಬಗಳು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಮಹಾತ್ಮ ಗಾಂಧಿಯವರ ಚಳವಳಿಗಳ ಕಾರಣದಿಂದ ಆಫ್ರಿಕಾದಲ್ಲಿ ಭಾರತೀಯರಿಂಗೆ ಒಂದಿಷ್ಟು ಹೆಚ್ಚಿನದೇ ಅಸ್ಮಿತೆ ಇದೆ. ಅಲ್ಲಿ ಸುಮಾರು 13 ಲಕ್ಷ ಭಾರತೀಯರು ನೆಲೆಸಿದ್ದಾರೆ. ಭಾರತೀಯರು ಇರುವ ಪ್ರದೇಶಗಳಲ್ಲೆಲ್ಲ ದೀಪಾವಳಿ ವೈಭವದಿಂದ ನಡೆಯುತ್ತದೆ. ಕೀನ್ಯಾ, ತಾಂಜಾನಿಯ ಹಾಗೂ ಉಗಾಂಡದಂತಹ ಆಫ್ರಿಕಾದ ಇತರ ದೇಶಗಳಲ್ಲೂ ದೀಪಾವಳಿ ಆಚರಣೆ ಇದೆ.

ಆಸ್ಟ್ರೇಲಿಯ
ಸುಮಾರು 4.68 ಲಕ್ಷ ಭಾರತೀಯರು ಹಾಗೂ ಭಾರತೀಯ ಸಂಜಾತರು ಇರುವ ಆಸ್ಟ್ರೇಲಿಯ ದೀಪಾವಳಿಯನ್ನು ಸಂಭ್ರಮದಿಂದ ಸ್ವಾಗತಿಸುತ್ತದೆ. ಮೆಲ್ಬರ್ನ್, ಸಿಡ್ನಿ, ಕ್ಯಾನ್ಬೆರ, ಅಡಿಲೇಡ್, ಪರ್ತ್ ಹಾಗೂ ಬ್ರಿಸ್ಬೇನ್ ಮಹಾನಗರಗಳಲ್ಲಿ ದೀಪಾವಳಿಯ ಉತ್ಸಾಹ ಹೆಚ್ಚು. 19ನೇ ಶತಮಾನದಲ್ಲಿ ಬ್ರಿಟಿಷರು ತಮ್ಮ ವಸಾಹತುಗಳ ಹತ್ತಿ ಮತ್ತು ಕಬ್ಬಿನ ತೋಟಗಳಿಗೆ ಕಾರ್ಮಿಕರನ್ನಾಗಿ ಭಾರತೀಯರನ್ನು ಅಲ್ಲಿಗೆ ಒಯ್ದ ಪರಿಣಾಮವಾಗಿ ಆಸ್ಟ್ರೇಲಿಯದೊಂದಿಗೆ ನಮ್ಮವರ ಬಾಂಧವ್ಯ ಇನ್ನೂ ಉಳಿದುಕೊಂಡಿದೆ. ಭಾರತೀಯರಲ್ಲದೆ ಶ್ರೀಲಂಕಾ, ಫಿಜಿ, ಮಲೇಷ್ಯಾ, ಸಿಂಗಾಪುರ, ನೇಪಾಳ ಹಾಗೂ ಬಾಂಗ್ಲಾದಿಂದ ಬಂದಿರುವ ಹಿಂದೂಗಳು ಇಲ್ಲಿ ದೀಪಾವಳಿ ಆಚರಣೆಗೆ ಜತೆಯಾಗುತ್ತಾರೆ. ಸಿಡ್ನಿಯಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂ ದೇವಾಲಯಗಳಿವೆ.

ಥಾಯ್ಲಂಡ್
ಶೇ. ೯೫ರಷ್ಟು ಬೌದ್ಧಧರ್ಮೀಯರು ಇರುವ ಥಾಯ್ಲಂಡ್ನಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಆದರೆ ದೀಪಾವಳಿ ಅಲ್ಲಿ ಸಹಜ ಸುಂದರ ಸಂಭ್ರಮದಿಂದಲೇ ಆಚರಿಸಲ್ಪಡುತ್ತದೆ. ಅಲ್ಲಿ ದೀಪಾವಳಿಗೆ 'ಲಾಮ್ ಕ್ರಿಯೋನ್’ ಎಂದು ಹೆಸರು. ದೀಪಾವಳಿ ಆಚರಣೆಗೆ ಇಲ್ಲಿ ಸಿಖ್ ಧರ್ಮೀಯರೂ ಜತೆಯಾಗುತ್ತಾರೆ. ಬಾಳೆ ಎಲೆಯಿಂದ ಮಾಡಿದ ದೀಪಗಳನ್ನು ಹಚ್ಚಿ ನದಿಗಳಲ್ಲಿ ತೇಲಿ ಬಿಡುವುದು ದೀಪಾವಳಿ ದಿನಗಳಲ್ಲಿ ಥಾಲಂಡ್‌ನಲ್ಲಿ ಕಂಡು ಬರುವ ಮನೋಹರ ದೃಶ್ಯ.

ಜಪಾನ್
ಪಾರಂಪರಿಕ ತಾಣಗಳು, ಆತ್ಮರಕ್ಷಣಾ ಕಲೆಗಳು, ಸಂಶೋಧನೆ ಹಾಗೂ ಸ್ವಾದಿಷ್ಟ ಆಹಾರಗಳಿಗೆ ಹೆಸರಾದ ಪೂರ್ವ ಏಷ್ಯಾದ ದ್ವೀಪರಾಷ್ಟ್ರ ಜಪಾನ್ ದೀಪಾವಳಿಯನ್ನೂ ಪ್ರೀತಿಯಿಂದ ಆಚರಿಸುತ್ತದೆ. ಮೊನ್ನೆ ಅಕ್ಟೋಬರ್ ಕೊನೆಯ ವಾರದಲ್ಲಿ ಜಪಾನಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಟೋಕಿಯೋದಲ್ಲಿ ಭಾರತೀಯರೊಂದಿಗೆ ಮಾತನಾಡುತ್ತಾ ದೀಪಾವಳಿ ಹಣತೆಗಳಂತೆ ನೀವು ಭಾರತದ ಬೆಳಕನ್ನು ಜಪಾನ್ ಹಾಗೂ ಜಗತ್ತಿನೆಲ್ಲೆಡೆ ಹರಡುತ್ತಿದ್ದೀರಿ. ನಿಮಗೆ ನನ್ನ ಶುಭಾಶಯ ಮತ್ತು ಮೆಚ್ಚುಗೆಗಳು ಎಂದು ಹೇಳಿರುವುದು ಸ್ಮರಣೀಯ.

ಕಾಮೆಂಟ್‌ಗಳಿಲ್ಲ: