ಮಂಗಳವಾರ, ಅಕ್ಟೋಬರ್ 2, 2018

ಹೀರೋಗಳಿದ್ದಾರೆ ನಮ್ಮ ನಡುವೆ

ಅಕ್ಟೋಬರ್ 3, 2018ರ ವಿಜಯವಾಣಿ 'ಮಸ್ತ್' ಪುರವಣಿಯಲ್ಲಿ ಪ್ರಕಟವಾಗಿರುವ ಲೇಖನ

“ಪರೀಕ್ಷೆ ಇದ್ರೂ ಬೇಕರಿಯಲ್ಲಿ ರಜೆ ಕೊಡ್ತಿರಲಿಲ್ಲ. ಮಧ್ಯರಾತ್ರಿವರೆಗೆ ಕೆಲಸ ಮಾಡಿ ಆಮೇಲೆ ಮನೆಗೆ ಹೋಗಿ ಓದ್ಕೊಂಡು ಬೆಳಗ್ಗೆ ಪರೀಕ್ಷೆ ಬರೀತಾ ಇದ್ದೆ. ಒಂದಷ್ಟು ಸಮಯ ಗಾರೆ ಕೆಲಸಕ್ಕೆ ಹೋಗ್ತಿದ್ದೆ. ಈಗಲೂ ಪಟ್ಟಣದಲ್ಲಿ ಯಾರೋ ಒಬ್ಬ ಹುಡುಗ ಗಾರೆ ಕೆಲಸ ಮಾಡೋದು ಕಂಡ್ರೆ ಕರುಳು ಚುರ್ ಅನ್ನುತ್ತೆ. ಭಾರವಾರ ಸಿಮೆಂಟ್ ಮೂಟೆ, ಇಟ್ಟಿಗೆ ಹೊತ್ತ ದಿನಗಳು ನೆನಪಾಗಿ ಕಣ್ಣು ಮಂಜಾಗುತ್ತೆ...” ಎಂದು ತಮ್ಮ ವಿದ್ಯಾರ್ಥಿ ಜೀವನದ ದಿನಗಳನ್ನು ಮೆಲುಕು ಹಾಕುತ್ತಾರೆ ಮಧುಗಿರಿಯ ಧನಂಜಯ.


“ಏನಿಲ್ಲಾಂದ್ರೂ ಇನ್ನೂರೈವತ್ತು ಅಡುಗೆ ಕೆಲಸಕ್ಕೆ ಹೋಗಿದ್ದೀನಿ. ಈಗ ಚೆನ್ನಾಗಿ ಸಂಬಳ ಬರೋ ಉದ್ಯೋಗ ಇದೆ. ಆದ್ರೆ ಆ ದಿನಗಳನ್ನು ಮಾತ್ರ ಮರೆಯಕ್ಕಾಗಲ್ಲ. ಅದ್ಕೇ ಇವಾಗ್ಲೂ ಕೆಲವೊಮ್ಮೆ ಅಡುಗೆ ಕೆಲಸಕ್ಕೆ ಹೋಗ್ತೀನಿ. ಅದರಲ್ಲೇನೋ ಸಂತೃಪ್ತಿ ಇದೆ. ಕಷ್ಟದ ದಿನಗಳದ್ದು ಕಹಿ ಅನುಭವ ಅಂತ ನಂಗೆಂದೂ ಅನಿಸಿಯೇ ಇಲ್ಲ...” ಹೀಗೆ ಮುಂದುವರಿಯುತ್ತದೆ ಅವರ ಮಾತು.

ಧನಂಜಯನ ತರಹದ ನೂರಾರು ವಿದ್ಯಾರ್ಥಿಗಳು ದಿನನಿತ್ಯ ಕಾಣಸಿಗುತ್ತಿರುತ್ತಾರೆ. ಅಡುಗೆ, ಫ್ಯಾಕ್ಟರಿ, ಗಾರೆ, ಸೆಕ್ಯೂರಿಟಿ, ಸೇಲ್ಸ್, ಕೂಲಿ, ಸಪ್ಲೈಯರ್ ಎಂಬಿತ್ಯಾದಿ ಹತ್ತಾರು ಪಾತ್ರಗಳಲ್ಲಿ ಅವರ ಓದಿನ ಬದುಕು.  ವಿದ್ಯಾರ್ಥಿ ಜೀವನದಲ್ಲಿ ಪಾಠವಾದ ಬಳಿಕ ಪರೀಕ್ಷೆ. ನಿಜ ಜೀವನದಲ್ಲಿ ಪರೀಕ್ಷೆಯಾದ ಬಳಿಕ ಪಾಠ. ಆದರೆ ಇವರು ಪಾಠ-ಪರೀಕ್ಷೆಗಳೆರಡನ್ನೂ ಒಟ್ಟೊಟ್ಟಿಗೇ ನಿಭಾಯಿಸಿಕೊಂಡು ಹೋಗುವ ರಿಯಲ್ ಹೀರೋಗಳು. ಕೆಲವರಿಗೆ ಹಲ್ಲಿದ್ದಾಗ ಕಡಲೆಯಿಲ್ಲ, ಕಡಲೆಯಿದ್ದಾಗ ಹಲ್ಲಿಲ್ಲ. ಇನ್ನು ಕೆಲವರಿಗೆ ಹಲ್ಲು-ಕಡಲೆ ಎರಡೂ ಇರುವುದಿಲ್ಲ. ಅವುಗಳನ್ನು ತಾವೇ ದಕ್ಕಿಸಿಕೊಳ್ಳುವ ಪಾಠವನ್ನಂತೂ ಬದುಕಿನ ಪುಟಗಳಿಂದಲೇ ಹೆಕ್ಕಿಕೊಳ್ಳುತ್ತಾರೆ.

ವಿದೇಶಗಳಲ್ಲಿ ಓದುತ್ತಲೇ ದುಡಿಯುವುದು ವಿಶೇಷ ಸಂಗತಿಯೇನಲ್ಲ. ಉನ್ನತ ಶಿಕ್ಷಣ ಅಥವಾ ವೃತ್ತಿಪರ ಕೋರ್ಸುಗಳನ್ನು ಮಾಡುವವರು ಯಾವುದಾದರೊಂದು ಅರೆಕಾಲಿಕ ಉದ್ಯೋಗ ಹಿಡಿದೇ ಇರುತ್ತಾರೆ. ತಮ್ಮ ವ್ಯಾಸಂಗದ ವೆಚ್ಚವನ್ನು ತಾವೇ ಭರಿಸಿಕೊಳ್ಳುವುದು ಅಲ್ಲಿ ಸರ್ವೇಸಾಮಾನ್ಯ. ಆದರೆ ನಮ್ಮಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಅದೊಂದು ಅನಿವಾರ್ಯತೆ. ಮನೆಯಲ್ಲಿ ಬೆನ್ನುಬಿಡದ ದಾರಿದ್ರ್ಯ, ಕೂಲಿನಾಲಿ ಮಾಡಿ ಬದುಕುವ ಅಪ್ಪ-ಅಮ್ಮ. ಇದರ ನಡುವೆ ಕಾಲೇಜಿಗೆ ಹೋಗಬೇಕು ಎಂಬ ಆಸೆಯೇ ತುಂಬ ತುಟ್ಟಿ. ಬದುಕಿನಲ್ಲಿ ಹೇಗಾದರೂ ಸರಿ ಮೇಲೆ ಬರಬೇಕೆನ್ನುವ ಅವರ ಛಲಕ್ಕೆ ಉಳಿಯುವ ದಾರಿ ದುಡಿಮೆಯೊಂದೇ.

“ಅಪ್ಪ-ಅಮ್ಮ ಉದ್ಯೋಗ ಅರಸಿ ತಿಂಗಳುಗಟ್ಟಲೆ ಬೇರೆ ಜಿಲ್ಲೆಗಳಿಗೆ ಹೋಗಿರುತ್ತಿದ್ದರು. ನಾನು ದುಡಿಯುತ್ತಾ ಓದುವುದು ಅನಿವಾರ್ಯವಾಗಿತ್ತು. ಇಬ್ಬರು ತಮ್ಮಂದಿರಿಗೆ ಅಡುಗೆ ಮಾಡಿ ಶಾಲೆಗೆ ಕಳುಹಿಸಿ ನಾನು ಕಾಲೇಜಿಗೆ ಹೋಗಬೇಕಿತ್ತು. ಎಲ್ಲವನ್ನೂ ನಿಭಾಯಿಸುವುದು ಕಷ್ಟವೆನಿಸಿದರೂ ನನ್ನ ದುಡಿಮೆಯಿಂದ ಅಪ್ಪ-ಅಮ್ಮನ ಮೇಲಿನ ಹೊರೆ ಒಂದಷ್ಟು ಕಡಿಮೆಯಾಗುತ್ತದಲ್ಲ ಎಂಬ ಸಮಾಧಾನವಿತ್ತು” ಎಂದು ನೆನಪಿಸಿಕೊಳ್ಳುತ್ತಾರೆ ಹಿರಿಯೂರಿನ ಅರವಿಂದ.

“ಕಡಲೆಗಿಡ, ಮಾವಿನಕಾಯಿ ಕೀಳುವುದು, ಮದುವೆ ಅಡುಗೆ, ಕೇಬಲ್ ಸಂಪರ್ಕ, ಬಟ್ಟೆ ತೊಳೆದು ಇಸ್ತ್ರಿ ಮಾಡಿಕೊಡುವುದು... ಇತ್ಯಾದಿ ಹತ್ತಾರು ಕೆಲಸ ಮಾಡಿಕೊಂಡು ಓದಿದೆ. ಬೀಳುವ ಹಂತದಲ್ಲಿದ್ದ ಮನೆಯಲ್ಲಿ ಹೊತ್ತಿನ ಊಟಕ್ಕೂ ಸಮಸ್ಯೆ ಇತ್ತು. ಮಳೆ ಬಂದರೆ ಮನೆಯೆಲ್ಲಾ ಕೆರೆ. ಅದನ್ನು ಎತ್ತಿಹೊರಹಾಕುವುದರಲ್ಲೇ ರಾತ್ರಿ ಕಳೆಯುತ್ತಿತ್ತು. ನಮ್ಮಂಥವರಿಗೆ ಯಾಕೆ ಓದು ಎನ್ನುತ್ತಿದ್ದರು ಮನೆಯಲ್ಲಿ. ದುಡಿಯದೆ ಇರುತ್ತಿದ್ದರೆ ಓದು ನನಗೆ ಬರೀ ಕನಸಾಗಿರುತ್ತಿತ್ತು” ಎನ್ನುತ್ತಾರೆ ಪಾವಗಡದ ನವೀನ್ ಕುಮಾರ್.

ಮಕ್ಕಳು ದುಡಿದು ಓದುವ ಬಗ್ಗೆ ಪಾಲಕರಲ್ಲಿ ಮಿಶ್ರ ಭಾವವಿದೆ. ಮಕ್ಕಳು ದುಡಿಯುವುದು ಕುಟುಂಬಕ್ಕೆ ಅವಮಾನ ಎಂದು ಭಾವಿಸುವ ಮಂದಿ ಕೆಲವರಾದರೆ, ಮಕ್ಕಳು ಜವಾಬ್ದಾರಿ ಕಲಿಯುತ್ತಿದ್ದಾರೆ ಎಂದು ಸಮಾಧಾನಪಡುವವರು ಇನ್ನು ಕೆಲವರು. “ಕೆಲಸಕ್ಕೆ ಹೋಗ್ಬೇಡ ಅಂತ ಮೊದಮೊದಲು ಬೈದ್ರು, ಹಿಡ್ಕಂಡು ಹೊಡೆದ್ರು. ಯಾಕಂದ್ರೆ ಮನೆಯಲ್ಲಿ ತುಂಬ ಕಷ್ಟ ಇದ್ರೂ ನನಗೆ ಯಾವುದೂ ತಿಳಿಯದ ಹಾಗೆ ನೋಡ್ಕೊಂಡಿದ್ರು” ಎನ್ನುತ್ತಾರೆ ಧನಂಜಯ. “ನಾನು ಕೆಲಸ ಮಾಡುತ್ತಾ ಓದುತ್ತಿದ್ದುದು ಮನೆಯಲ್ಲಿ ಹೇಳಿರಲಿಲ್ಲ. ಆದರೆ ದುಡಿಮೆ ನನಗೆ ಅನಿವಾರ್ಯವಾಗಿತ್ತು” ಎನ್ನುತ್ತಾರೆ ಬಳ್ಳಾರಿಯ ಈರನಗೌಡ. 

“ನಾನು ಕೆಲಸ ಮಾಡುತ್ತಿದ್ದುದು ಮನೆಯವರಿಗೆ ತಿಳಿದಿತ್ತು. ಅವರೇನೂ ಆಕ್ಷೇಪ ಹೇಳಲಿಲ್ಲ. ಕೆಲಸ ಮಾಡಿಕೊಂಡು ಓದುವುದು ಒಳ್ಳೆಯದೇ, ಆದರೆ ಓದನ್ನು ನಿರ್ಲಕ್ಷ್ಯ ಮಾಡಬೇಡ ಅಂತ ಅಪ್ಪ ಪದೇಪದೇ ಹೇಳುತ್ತಿದ್ದರು” ಎಂದು ನೆನಪಿಸಿಕೊಳ್ಳುತ್ತಾರೆ ಗುಬ್ಬಿ ತಾಲೂಕಿನ ಗಿರೀಶ.

ಅವಶ್ಯಕತೆಯುಳ್ಳ ಮಕ್ಕಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸರ್ಕಾರವೇ ‘ಕಲಿಕೆಯೊಂದಿಗೆ ಗಳಿಕೆ’ ಎಂಬ ಯೋಜನೆ ಆರಂಭಿಸಿದ್ದಿದೆ. ಅನೇಕ ಕಡೆಗಳಲ್ಲಿ ಇದು ಯಶಸ್ವಿಯೂ ಆಗಿದೆ. “ನಾನು ಎಂ.ಎ. ಓದುತ್ತಿದ್ದಾಗ ಪಾರ್ಟ್‍ಟೈಂ ಕೆಲಸ ಮಾಡುವ ಅವಕಾಶ ನಮ್ಮ ವಿ.ವಿ.ಯಲ್ಲಿ ಇತ್ತು. ಲೈಬ್ರರಿ, ಪರೀಕ್ಷಾ ವಿಭಾಗಗಳಲ್ಲೆಲ್ಲ ನಾನು ಕೆಲಸ ಮಾಡಿದ್ದೇನೆ. ತರಗತಿಗಳಿಲ್ಲದ ಹೊತ್ತಲ್ಲಿ ದಿನಕ್ಕೆ ಒಂದೆರಡು ಗಂಟೆಯಷ್ಟು ಕೆಲಸ ಮಾಡಬೇಕಿತ್ತು. ಓದಿಗಾಗಿ ಕುಟುಂಬವನ್ನು ಅವಲಂಬಿಸುವುದು ನನಗೆ ಇಷ್ಟವಿರಲಿಲ್ಲ” ಎನ್ನುತ್ತಾರೆ ಚಿಕ್ಕನಾಯಕನಹಳ್ಳಿಯ ಮಮತಾ. ದುಡಿಯುತ್ತಲೇ ಓದಿದ್ದರಿಂದ ಶೈಕ್ಷಣಿಕವಾಗಿ ಅಂತಹ ನಷ್ಟವೇನೂ ಆಗಲಿಲ್ಲ ಎಂಬುದು ಅವರ ಅಂಬೋಣ.

ಆದರೆ ದುಡಿಯುವ ಅನಿವಾರ್ಯತೆ ಇಲ್ಲದಿದ್ದರೆ ತಾವೂ ಹೆಚ್ಚಿನದನ್ನು ಸಾಧಿಸುತ್ತಿದ್ದೆವು ಎಂಬ ಕೊರಗು ಹಲವು ಮಂದಿಯದ್ದು. “ನನ್ನ ಕೆಲಸ ಮಧ್ಯಾಹ್ನ 3ರಿಂದ ಆರಂಭವಾಗುತ್ತಿತ್ತು. ಹೀಗಾಗಿ ಕೆಲವು ದಿನ ತರಗತಿಗಳನ್ನು ತಪ್ಪಿಸಿಕೊಳ್ಳಬೇಕಾಗುತ್ತಿತ್ತು. ಹೀಗಾಗಿ ಹಾಜರಾತಿ ಕಡಿಮೆ ಆಗಿ ಇಂಟರ್ನಲ್ಸ್‍ಗೆ ಕತ್ತರಿ ಬಿತ್ತು. ಮೊದಲನೇ ವರ್ಷ ಮೊಳೆತ ಚಿನ್ನದ ಪದಕದ ಆಸೆ ಎರಡನೇ ವರ್ಷ ಕಮರಿಹೋಯಿತು. ಸ್ವಲ್ಪದರಲ್ಲೇ ಬಂಗಾರ ಕಳೆದುಕೊಂಡೆ” ಎಂದು ವಿಷಾದಪಡುತ್ತಾರೆ ಗಿರೀಶ.

“ದುಡ್ಡಿಗಾಗಿ ಆಗಾಗ ಆರ್ಕೆಸ್ಟ್ರಾಗಳಿಗೆ ಹೋಗಿ ಹಾಡುತ್ತಿದ್ದೆ. ರಾತ್ರಿ ನಿದ್ದೆಗೆಟ್ಟು ಹಗಲು ಕ್ಲಾಸಿಗೆ ಹೋಗಬೇಕಾದ ಪರಿಸ್ಥಿತಿ ಇದ್ದರೂ ಅದರಲ್ಲೇನೋ ಖುಷಿ ಇತ್ತು. ಕಾಲೇಜಿನ ಫೀಸು, ಪುಸ್ತಕ, ಉಳಿದ ಖರ್ಚುಗಳಾದ ಮೇಲೆ ಮನೆಗೂ ಒಂದಷ್ಟು ಹಣ ಕಳಿಸುತ್ತಿದ್ದೆ. ಎಲ್ಲರಂತೆ ಓದುತ್ತಿದ್ದರೆ ಇನ್ನೂ ಚೆನ್ನಾಗಿ ಅಂಕಗಳು ಬರುತ್ತಿದ್ದವು. ಆದರೆ ಕಾಲೇಜಿನ ಎನ್ನೆಸ್ಸೆಸ್‍ನಲ್ಲಿ ನಾನು ವರ್ಷದ ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿ ಪಡೆದೆ” ಎಂದು ಹೆಮ್ಮೆಪಡುತ್ತಾರೆ ಗಂಗಾವತಿಯ ಖಾದರ್ ಸಾಬ್.

ಇಂತಹ ಯಾರನ್ನೇ ಕೇಳಿನೋಡಿ, ಅವರಿಗೆ ತಾವು ಪಟ್ಟ ಕಷ್ಟ ಹಾಗೂ ಕಠಿಣ ದುಡಿಮೆ ಬಗ್ಗೆ ಬೇಸರವಾಗಲೀ ಅನಾದರವಾಗಲೀ ಇಲ್ಲ. ಉಳಿದ ವಿದ್ಯಾರ್ಥಿಗಳಿಗಿಂತ ಒಂದು ಹಿಡಿ ಹೆಚ್ಚೇ ಆತ್ಮವಿಶ್ವಾಸ, ತಾವು ಪಡೆದ ಅನುಭವದ ಬಗ್ಗೆ ಹೆಮ್ಮೆ ಸಾಮಾನ್ಯ. “ನನ್ನ ಇಂದಿನ ಪರಿಸ್ಥಿತಿಗೆ ದುಡಿಮೆಯೇ ಕಾರಣ. ಅಂತಹದೊಂದು ಪರಿಸ್ಥಿತಿ ಸೃಷ್ಟಿಸಿಕೊಟ್ಟ ಬಡತನ ಮತ್ತು ದೇವರಿಗೆ ನನ್ನ ಧನ್ಯವಾದಗಳು” ಎಂದು ಗದ್ಗದಿತರಾಗುತ್ತಾರೆ ಈರನಗೌಡ.

“ಅಂದಿನ ಪರಿಸ್ಥಿತಿ ನೆನೆಸಿಕೊಂಡರೆ ಮೈಝುಂ ಅನ್ನುತ್ತೆ. ಮುಂಜಾನೆ 3 ಗಂಟೆಗೆ ಎದ್ದು ರೈಲಿನಲ್ಲಿ ನಿಂತುಕೊಂಡೇ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದೆ. ಚೌಲ್ಟ್ರಿ ಸೇರಿದ ತಕ್ಷಣ ಅಡುಗೆ ಕೆಲಸ. ಎಲ್ಲರದ್ದೂ ಊಟವಾದ ಮೇಲೆ ನಮ್ಮ ಊಟ. ರಾತ್ರಿಯ ಕೆಲಸಗಳೆಲ್ಲ ಮುಗಿದಾಗ ಒಂದು ಗಂಟೆ ಆಗುತ್ತಿದ್ದುದು ಸಾಮಾನ್ಯ. ಎರಡು ದಿನ ಈ ರೀತಿ ಕೆಲಸ ಮಾಡಿದರೆ ರೂ. 1000 ಸಿಗುತ್ತಿತ್ತು. ಆಗÀ ಎಲ್ಲ ಆಯಾಸ ಮಾಯವಾಗುತ್ತಿತ್ತು. ಮುಂಜಾನೆ ಮತ್ತೆ ಕಾಲೇಜು. ಆ ಅನುಭವಕ್ಕೆ ಸಾಟಿಯಿಲ್ಲ” ಎಂದು ಜ್ಞಾಪಿಸಿಕೊಳ್ಳುತ್ತಾರೆ ಜಮಖಂಡಿಯ ವೀರನಾಗರಾಜ್.

“ಕೆಲಸ ಮಾಡುತ್ತಾ ಓದಿದ ದಿನಗಳನ್ನು ನೆನಪಿಸಿಕೊಂಡರೆ ರೋಮಾಂಚನವಾಗುತ್ತೆ. ಕೆಲವೊಮ್ಮೆ ಕಣ್ಣೀರೂ ಬರುತ್ತೆ. ಅಂದು ಕಷ್ಟಪಡದಿರುತ್ತಿದ್ದರೆ ನಾನಿಂದು ಉನ್ನತ ಶಿಕ್ಷಣ ಪಡೆಯಲು ಆಗುತ್ತಿರಲಿಲ್ಲ. ಕಷ್ಟಗಳೇ ನಮ್ಮ ಮಾರ್ಗದರ್ಶಕರು. ಸ್ವತಂತ್ರ ದುಡಿಮೆ, ಓದಿನ ಬಗ್ಗೆ ಹೆಮ್ಮೆ ಅನಿಸುತ್ತೆ” ಎನ್ನುತ್ತಾರೆ ಅರವಿಂದ್.

“ಯಾರದೋ ಹಳೆ ಉಡುಪು ಪಡೆದುಕೊಂಡು ಬಳಸುತ್ತಿದ್ದೆ. ಓದಿನಲ್ಲಿ ಏಕಾಗ್ರತೆ ಸಾಧ್ಯವಾಗ್ತಿರಲಿಲ್ಲ. ದಿನನಿತ್ಯ ಅವಮಾನ ಸಾಮಾನ್ಯವಾಗಿತ್ತು. ಆದರೆ ಅದೇ ಇಂದು ನನ್ನನ್ನು ಮಾನಸಿಕವಾಗಿ ಗಟ್ಟಿಯಾಗಿಸಿದೆ. ಕಾಲೇಜು ಕಲಿಸದ ಪಾಠಗಳನ್ನು ನನಗೆ ಬದುಕು ಕಲಿಸಿತು” ಎಂದು ಮುಗುಳ್ನಗುತ್ತಾರೆ ನವೀನ್.

ಈಗಿನ್ನೂ ಏರುಜವ್ವನದ ರಮ್ಯಕಾಲದಲ್ಲಿರುವ ಈ ಹುಡುಗರ ಪ್ರಬುದ್ಧ ಮಾತುಗಳನ್ನು ಕೇಳಿದರೆ ಯಾರಿಗಾದರೂ ಮೆಚ್ಚುಗೆಯೆನಿಸದೆ ಇರದು. ಯಾವುದೇ ಜವಾಬ್ದಾರಿಯಿಲ್ಲದೆ ಹರೆಯದ ಹುಡುಗ ಹುಡುಗಿಯರನ್ನು ಬಳಸಿಕೊಂಡು ಬೀದಿ ಅಲೆಯುತ್ತಾ ಟಾಕೀಸುಗಳೆದುರಿನ ಕಟೌಟುಗಳನ್ನೇ ಹೀರೋಗಳೆಂದು ಭ್ರಮಿಸುವ ಹೊಣೆಗೇಡಿ ಮಂದಿಯ ನಡುವೆ ಅನುಭವ-ಆತ್ಮವಿಶ್ವಾಸದ ಮಾತನ್ನಾಡುವ ಈ ಗಟ್ಟಿಗರೇ ಅಲ್ಲವೇ ನಿಜವಾದ ಹೀರೋಗಳು?