'ವಿಜಯವಾಣಿ' - ವಿತ್ತವಾಣಿ ಪುರವಣಿಯಲ್ಲಿ 20-08-2018ರಂದು ಪ್ರಕಟವಾದ ಲೇಖನ
ನಾಲ್ಕು ವರ್ಷಗಳ ಹಿಂದಿನ ಮಾತು. ಅದು 2014ರ ಅಕ್ಟೋಬರ್ 6. ದೇಶದುದ್ದಗಲದಲ್ಲಿ ನಡೆಯುತ್ತಿದ್ದ ತರಹೇವಾರಿ ಹಬ್ಬಗಳಿಗೆ ಆನ್‌ಲೈನ್ ದಿಗ್ಗಜ ಫ್ಲಿಪ್‌ಕಾರ್ಟ್ ಹೊಸ ರಂಗು ತುಂಬಿತ್ತು. ಆ ದಿನವನ್ನು 'ಬಿಗ್ ಬಿಲಿಯನ್ ಡೇ’ ಎಂದು ಘೋಷಿಸಿದ ಕಂಪೆನಿ ಸಾವಿರಾರು ಉತ್ಪನ್ನಗಳನ್ನು ಭಾರೀ ರಿಯಾಯಿತಿಯಲ್ಲಿ ಬಿಕರಿ ಮಾಡಿತು. ಇಷ್ಟೊಂದು ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡುವುದು ಸಾಧ್ಯವೇ ಎಂದು ಮುನ್ನಾದಿನದವರೆಗೆ ಅನುಮಾನಪಡುತ್ತಿದ್ದ ಗ್ರಾಹಕರು ಮರುದಿನ ಅದೇ ವಿಸ್ಮಯವನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಕೇವಲ ಹತ್ತೇ ಗಂಟೆಗಳಲ್ಲಿ 15 ಲಕ್ಷ ಗ್ರಾಹಕರು 600 ಕೋಟಿ ರೂಪಾಯಿ ಮೌಲ್ಯದ ವ್ಯಾಪಾರ ನಡೆಸಿಬಿಟ್ಟರು!
'ಬಿಗ್ ಬಿಲಿಯನ್ ಡೇ’ ಭಾರತದ ದೊಡ್ಡದೊಡ್ಡ ಸಗಟು ಹಾಗೂ ರೀಟೇಲ್ ವ್ಯಾಪಾರಿಗಳಿಗೆ 'ಬಿಗ್ ಬ್ಲೋ ಡೇ’ ಕೂಡ ಆಗಿತ್ತು. ಆನ್‌ಲೈನ್ ವ್ಯಾಪಾರದ ಹೆಸರಿನಲ್ಲಿ ಇಷ್ಟೊಂದು ರಿಯಾಯಿತಿ ಕೊಟ್ಟುಬಿಟ್ಟರೆ ಮಾರುಕಟ್ಟೆ ವ್ಯಾಪಾರದ ಪಾಡೇನು ಎಂಬ ಪ್ರತಿಭಟನೆಗಳು ದಾಖಲಾದವು. ಚಿಲ್ಲರೆ ಮಾರಾಟಗಾರರಿಗಂತೂ ಅದು ದೊಡ್ಡ ಹೊಡೆತವೇ ಆಗಿತ್ತು. ಎಂಬಲ್ಲಿಗೆ ಇ-ಕಾಮರ್ಸ್‌ನ ಸಾಧಕ-ಬಾಧಕಗಳ ಬಗ್ಗೆ ಹೊಸ ಚರ್ಚೆಗಳು ಆರಂಭವಾದವು. ಆನ್‌ಲೈನ್ ವ್ಯಾಪಾರದ ರಿಯಾಯಿತಿ ಆಕರ್ಷಣೆಗೆ ಗ್ರಾಹಕರು ಮುಗಿಬೀಳುವುದು ಆಮೇಲೆಯೂ ಮುಂದುವರಿಯಿತು.
2015ರಲ್ಲಿ ರೀಟೇಲರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ಹಾಗೂ ಆಲ್ ಇಂಡಿಯಾ ಫೂಟ್‌ವೇರ್ ಮ್ಯಾನುಫ್ಯಾಕ್ಚರರ್ಸ್ & ರೀಟೇಲರ್ಸ್ ಅಸೋಸಿಯೇಶನ್ ಈ ಸಂಬಂಧ ದೆಹಲಿ ಹೈಕೋರ್ಟ್‌ನ ಮೊರೆಹೊಕ್ಕರು. ಇ-ಕಾಮರ್ಸ್ ಕಂಪೆನಿಗಳಿಂದ ಇತರ ಚಿಲ್ಲರೆ ವ್ಯಾಪಾರಿಗಳಿಗೆ ಅನ್ಯಾಯವಾಗುತ್ತಿದೆಯೆಂದು ದೂರುಕೊಟ್ಟರು. ಇ-ಕಾಮರ್ಸ್ ಕಂಪೆನಿಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶವಿರುವುದರಿಂದ ಅವರು ಭಾರೀ ರಿಯಾಯಿತಿಗಳನ್ನು ನೀಡುವುದು ಸಾಧ್ಯವಾಗುತ್ತಿದೆ; ಸಾಮಾನ್ಯ ಚಿಲ್ಲರೆ ವ್ಯಾಪಾರಿಗಳು ಈ ಅಲೆಯೆದುರು ಈಜಿ ಬದುಕಲು ಸಾಧ್ಯವೇ ಎಂದು ಪ್ರಶ್ನಿಸಿದರು.
2016ರಲ್ಲಿ ಆನ್‌ಲೈನ್ ಚಿಲ್ಲರೆ ವ್ಯಾಪಾರದ 'ಮಾರ್ಕೆಟ್‌ಪ್ಲೇಸ್ ಮಾಡೆಲ್’ ಅಡಿಯಲ್ಲಿ ಶೇ. 100 ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಯಿತು. ಇದರ ಪ್ರಕಾರ ಇ-ಕಾಮರ್ಸ್ ಸಂಸ್ಥೆಗಳು ಬೇರೆ ಕಂಪೆನಿಗಳ ಉತ್ಪನ್ನಗಳ ಪಟ್ಟಿಯನ್ನು ಪ್ರಕಟಿಸಿ ವ್ಯಾಪಾರ ವಹಿವಾಟು ಉತ್ತೇಜಿಸುವ ವೇದಿಕೆಗಳಾಗಬಹುದೇ ವಿನಾ ನೇರವಾಗಿ ಬೇರೆ ಕಂಪೆನಿಗಳ ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ನೇರವಾಗಿ ಮಾರಾಟ ಮಾಡುವ ಇ-ಕಾಮರ್ಸ್ ಕಂಪೆನಿಗಳಿಗೆ ಎಫ್‌ಡಿಐ ಪಡೆದುಕೊಳ್ಳಲು ಅವಕಾಶ ಇಲ್ಲ. ಈ ಕಂಪೆನಿಗಳೂ ಒಂದೇ ಕಂಪೆನಿಯ ಶೇ. 25ಕ್ಕಿಂತ ಹೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಇಲ್ಲ. ಆದರೆ ಈ ಎಲ್ಲ ನಿರ್ಬಂಧಗಳನ್ನು ಆನ್‌ಲೈನ್ ವ್ಯಾಪಾರಸ್ಥರು ಗಾಳಿಗೆ ತೂರಿ ತಮ್ಮ ಅನ್ಯಾಯವನ್ನು ಮುಂದುವರಿಸಿದ್ದಾರೆ ಎಂಬುದು ಸದ್ಯದ ಆರೋಪ. ಕೇಂದ್ರ ಸರ್ಕಾರ ಈಗ ಜಾರಿಗೆ ತರಲು ಉದ್ದೇಶಿಸಿರುವ ಹೊಸ 'ರಾಷ್ಟ್ರೀಯ ಇ-ಕಾಮರ್ಸ್ ನೀತಿ’ ಈ ಚರ್ಚೆ, ವಾದ-ವಿವಾದಗಳ ಒಂದು ನಿರ್ಣಾಯಕ ಹಂತ.
ಏನಿದು ಹೊಸ ನೀತಿ?
ಇ-ಕಾಮರ್ಸ್ ವಲಯದಲ್ಲಿ ಉಂಟಾಗಿರುವ ತಲ್ಲಣಗಳನ್ನು ತಹಬದಿಗೆ ತಂದು ಅದರಲ್ಲಿ ಸುಧಾರಣೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ ಮೊದಲ ಬಾರಿಗೆ ಜಾರಿಗೆ ತರಲು ಉದ್ದೇಶಿಸಿರುವುದೇ ಹೊಸ ರಾಷ್ಟ್ರೀಯ ಇ-ಕಾಮರ್ಸ್ ನೀತಿ. ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ನೇತೃತ್ವದ 70 ಸದಸ್ಯರ 'ಥಿಂಕ್ ಟ್ಯಾಂಕ್’ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ರೀಟಾ ತಿಯೋತಿಯಾ ನೇತೃತ್ವದಲ್ಲಿ ಒಂದು ಕಾರ್ಯಪಡೆಯನ್ನು ರಚಿಸಿತು. ಈ ಥಿಂಕ್ ಟ್ಯಾಂಕ್ ವಾಣಿಜ್ಯ, ಮಾಹಿತಿ ತಂತ್ರಜ್ಞಾನ, ಸಂವಹನ, ಗ್ರಾಹಕ ವ್ಯವಹಾರ ಸಚಿವಾಲಯಗಳ ಕಾರ್ಯದರ್ಶಿಗಳು ಹಾಗೂ ಉದ್ದಿಮೆ ವಲಯದ ಪ್ರತಿನಿಧಿಗಳನ್ನು ಒಳಗೊಂಡಿತ್ತು.
ರಾಷ್ಟ್ರೀಯ ಇ-ಕಾಮರ್ಸ್ ನೀತಿಗೊಂದು ಚೌಕಟ್ಟು ರೂಪಿಸಿ ಸೂಕ್ತ ಶಿಫಾರಸುಗಳನ್ನು ಮಾಡುವಂತೆ ಕಾರ್ಯಪಡೆಗೆ ಸೂಚಿಸಲಾಗಿತ್ತು. ಸಾಕಷ್ಟು ಚಿಂತನೆ-ಚರ್ಚೆ-ಸಂವಾದಗಳ ಬಳಿಕ ಮೊನ್ನೆ ಜುಲೈ ಅಂತ್ಯಕ್ಕೆ ಕಾರ್ಯಪಡೆಯು ಇ-ಕಾಮರ್ಸ್ ನೀತಿಯ ಕರಡು ಪ್ರತಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಗ್ರಾಹಕರು, ಉದ್ದಿಮೆದಾರರು ಹಾಗೂ ಮಾರಾಟಗಾರರೂ ಸೇರಿದಂತೆ ಎಲ್ಲ ಸಾರ್ವಜನಿಕರಿಂದ ಸಲಹೆ ಸೂಚನೆ ಅಹವಾಲುಗಳನ್ನು ಸರ್ಕಾರ ಆಹ್ವಾನಿಸಿದೆ. ಅವುಗಳ ಆಧಾರದಲ್ಲಿ ಅಂತಿಮ ನೀತಿ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ.
ಸಾಧಕ-ಬಾಧಕಗಳ ಚರ್ಚೆ
ನೀತಿ ಜಾರಿಗೆ ಬಂದರೆ ಏನಾಗಬಹುದು ಎಂಬ ಊಹೆಗಳ ಆಧಾರದಲ್ಲಿ ಮತ್ತೆ ಸಾಕಷ್ಟು ಚರ್ಚೆಗಳು ಗರಿಗೆದರಿವೆ. ಕಂಪೆನಿಗಳು ಹಾಗೂ ಮಾರುಕಟ್ಟೆ ತಜ್ಞರ ಕಡೆಯಿಂದ ಕರಡು ನೀತಿ ಬಗ್ಗೆ ಮಿಶ್ರಪತ್ರಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಫ್ಲಿಪ್‌ಕಾರ್ಟ್, ಅಮೆಜಾನ್, ಸ್ನಾಪ್‌ಡೀಲ್, ವಾಲ್‌ಮಾರ್ಟ್, ಸಾಫ್ಟ್‌ಬ್ಯಾಂಕ್‌ನಂತಹ ಇ-ಕಾಮರ್ಸ್ ಕಂಪೆನಿಗಳ ಭರ್ಜರಿ ವ್ಯವಹಾರಕ್ಕೆ ಹೊಸ ನೀತಿಯಿಂದ ಅಂಕುಶ ಬೀಳಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಇದರಿಂದ ಗ್ರಾಹಕರು ಕಡಿಮೆ ಬೆಲೆಗೆ ವಸ್ತುಗಳು ಕೊಳ್ಳುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ ಎಂಬ ಆತಂಕ ಕೆಲವರದ್ದು.
ಇನ್ನೊಂದೆಡೆ, ಹೊಸ ನೀತಿಯು ಸ್ವದೇಶಿ ಕಂಪೆನಿಗಳಿಗೆ ಜೀವದಾನ ಮಾಡಲಿದೆ ಎಂಬ ವಿಶ್ಲೇಷಣೆಯನ್ನೂ ಮಾಡಲಾಗುತ್ತಿದೆ. ಮಾರುಕಟ್ಟೆ ದರಗಳ ಮೇಲೆ ಪ್ರಭಾವ ಬೀರುವಂತೆ ಹೆಚ್ಚಿನ ಪ್ರಮಾಣದಲ್ಲಿ (ಶೇ. 25ರ ನಿರ್ಬಂಧವನ್ನು ಮೀರಿ) ಉತ್ಪನ್ನಗಳನ್ನು ಖರೀದಿಸಿ ದಾಸ್ತಾನು ಮಾಡುವಂತಿಲ್ಲ ಎಂದು ಕರಡು ನೀತಿ ಹೇಳುತ್ತದೆಯಾದರೂ, ಸಂಪೂರ್ಣವಾಗಿ ದೇಶೀಯವಾಗಿಯೇ ತಯಾರಾದ ಉತ್ಪನ್ನಗಳ ಮಾರಾಟಕ್ಕೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಇದು ಎಫ್‌ಡಿಐ ಯುಗದಲ್ಲಿ ಸ್ವದೇಶಿ ಕಂಪೆನಿಗಳಿಗೆ ಹೊಸ ಶಕ್ತಿಯನ್ನು ನೀಡಬಲ್ಲ ಕ್ರಮ ಎಂಬುದು ನೀತಿನಿರೂಪಕರ ಸಮರ್ಥನೆ.
ಜಾಗತೀಕರಣದ ಯುಗದಲ್ಲೂ ಭಾರತದ ಮಧ್ಯಮ, ಸಣ್ಣ ಹಾಗೂ ಅತಿಸಣ್ಣ ಉದ್ಯಮಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ನೀತಿ ಒಂದು ಮೈಲಿಗಲ್ಲಾಗಲಿದೆ ಎಂಬುದು ತಜ್ಞರ ಅಭಿಮತ. ಶೇ. 49ಕ್ಕಿಂತ ಕಡಿಮೆ ವಿದೇಶಿ ಬಂಡವಾಳ ಇರುವ ಇ-ಕಾಮರ್ಸ್ ಕಂಪೆನಿಗಳಲ್ಲಿ ಭಾರತೀಯರಿಗೆ ಹೆಚ್ಚಿನ ಅಧಿಕಾರ ನೀಡುವ ಪ್ರಸ್ತಾಪವೂ ಕರಡು ನೀತಿಯಲ್ಲಿ ಇದೆ.
ಇ-ಕಾಮರ್ಸ್ ವಲಯದ ಅಹವಾಲುಗಳು ಹಾಗೂ ಎಫ್‌ಡಿಐ ಕುರಿತ ವಿವಾದಗಳ ಇತ್ಯರ್ಥಕ್ಕೆ ಜಾರಿ ನಿರ್ದೇಶನಾಲಯದಲ್ಲಿ ಪ್ರತ್ಯೇಕ ವಿಭಾಗವೊಂದನ್ನು ತೆರೆಯುವಂತೆಯೂ ಕಾರ್ಯಪಡೆ ಶಿಫಾರಸು ಮಾಡಿದೆ. ಎಲ್ಲ ಬಗೆಯ ಡಿಜಿಟಲ್ ವಹಿವಾಟುಗಳನ್ನು ನಿಯಂತ್ರಿಸಲು ಒಂದು ಪ್ರತ್ಯೇಕ ಪ್ರಾಧಿಕಾರವನ್ನು ರಚಿಸುವಂತೆ ಶಿಫಾರಸು ಮಾಡಿರುವುದು ಹೊಸ ಕರಡು ನೀತಿಯ ಅತ್ಯಂತ ಪ್ರಮುಖ ಅಂಶ.
ಹೊಸ ಕರಡು ನೀತಿಯಿಂದ ಅಂತಹ ಮಹತ್ವದ ಸುಧಾರಣೆಗಳನ್ನೇನೂ ಮಾಡಲಾಗದು; ಆನ್‌ಲೈನ್ ಮಾರಾಟ ದೇಶದ ಒಟ್ಟಾರೆ ಮಾರಾಟದ ಶೇ. 2ರಷ್ಟು ಮಾತ್ರ ಇದೆ. ಹೀಗಿರುವಾಗ ಆನ್‌ಲೈನ್ ಮಾರುಕಟ್ಟೆಯನ್ನು ನಿಯಂತ್ರಿಸುವ ಮೂಲಕ ಏನು ಸಾಧನೆ ಮಾಡಿದಂತಾಗುತ್ತದೆ ಎಂದು ಪ್ರಶ್ನಿಸುವವರೂ ಇದ್ದಾರೆ.
ಅನೇಕ ಸಮಸ್ಯೆಗಳಿಗೆ ಏಕಕಾಲಕ್ಕೆ ಪರಿಹಾರ ಹುಡುಕುವ ಹಾದಿಯಲ್ಲಿರುವ ಹೊಸ ಕರಡು ನೀತಿ ಪ್ರಾಯೋಗಿಕ ಮತ್ತು ಕಾರ್ಯಸಾಧುವಲ್ಲ. ನೀತಿಯಲ್ಲಿ ಶಿಫಾರಸುಮಾಡಲಾಗಿರುವ ಕಠಿಣಕ್ರಮಗಳು ಕುಖ್ಯಾತ 'ಲೈಸೆನ್ಸ್ ರಾಜ್’ನ ದಿನಗಳಿಗೆ ಇ-ಕಾಮರ್ಸನ್ನು ಒಯ್ಯಲಿವೆ. ಗ್ರಾಹಕ ದತ್ತಾಂಶದ ಕಡ್ಡಾಯ ಸ್ಥಳೀಯಗೊಳಿಸುವಿಕೆ ಹಾಗೂ ರಿಯಾಯಿತಿಯ ಮೇಲಿನ ನಿರ್ಬಂಧಗಳಿಂದ ದೊಡ್ಡ ಕಾರ್ಖಾನೆಗಳಿಗೆ ಭಾರೀ ಹೊಡೆತ ಬೀಳುವುದು ಖಚಿತ. ಇದು ದೇಶದ ಆರ್ಥಿಕತೆಯ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂಬುದು ಇನ್ನೊಂದು ಕಡೆಯ ವಾದ. ಅಲ್ಲದೆ, ಪ್ರಸ್ತುತ ನೀತಿ ವಿಶ್ವ ವ್ಯಾಪಾರ ಸಂಘಟನೆ (WTO)ಯ ಜೊತೆಗೆ ಹೊಸದೊಂದು ಸಂಘರ್ಷಕ್ಕೆ ಎಡೆಮಾಡಿಕೊಡಲಿದೆ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.
ನಿಯಂತ್ರಣ ಪ್ರಾಧಿಕಾರ ಏಕೆ?
ತಾವು ಆನ್‌ಲೈನ್‌ನಲ್ಲಿ ಖರೀದಿಸಿದ ವಸ್ತುಗಳ ಬಗ್ಗೆ ಗ್ರಾಹಕರು ಅತೃಪ್ತಿ ವ್ಯಕ್ತಪಡಿಸಿದ ಹಲವಾರು ಘಟನೆಗಳು ಇತ್ತೀಚಿನ ವರ್ಷಗಳಲ್ಲಿ ದೇಶದೆಲ್ಲೆಡೆ ದಾಖಲಾಗಿವೆ. ಮೊಬೈಲ್ ಫೋನ್‌ಗಳನ್ನು ಆರ್ಡರ್ ಮಾಡಿದವರು ಕಲ್ಲುಗಳನ್ನೋ ಇಟ್ಟಿಗೆಗಳನ್ನೋ ಪಡೆದ ಉದಾಹರಣೆಗಳು ಸಾಕಷ್ಟಿವೆ. ಮಾರುಕಟ್ಟೆ ಮಾದರಿಯಲ್ಲಿ ಸಪ್ಲೈಚೈನ್ ಮೇಲೆ ಪೂರ್ತಿ ಹಿಡಿತ ಇಲ್ಲವಾಗಿರುವುದರ ಅನನುಕೂಲ ಇದು. ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚು ದರವನ್ನು ತೋರಿಸುವುದು, ಸರಬರಾಜಿನಲ್ಲಿ ಆಗುವ ತೊಂದರೆಗಳ ಬಗೆಗೂ ಗ್ರಾಹಕರು ದೂರು ಸಲ್ಲಿಸಿದ ಘಟನೆಗಳು ನಡೆದಿವೆ.
ಈ ಬಗೆಯ ದೂರುಗಳನ್ನು ಸಲ್ಲಿಸಲು ಗ್ರಾಹಕ ವ್ಯವಹಾರಗಳ ಸಚಿವಾಲಯದ ರಾಷ್ಟ್ರೀಯ ಗ್ರಾಹಕ ಹೆಲ್ಪ್‌ಲೈನ್ ಒಂದೇ ಸದ್ಯಕ್ಕೆ ತೊಂದರೆಗೊಳಗಾದ ಗ್ರಾಹಕರಿಗೆ ಇರುವ ವೇದಿಕೆ. ಇಕಾಮರ್ಸ್‌ಗೆ ಸಂಬಂಧಿಸಿದಂತೆ ಕಳೆದ ವರ್ಷ ಏಪ್ರಿಲ್-ನವೆಂಬರ್ ಮಧ್ಯೆ 54,114 ದೂರುಗಳು ಹೆಲ್ಪ್‌ಲೈನ್‌ನಲ್ಲಿ ದಾಖಲಾಗಿವೆ ಎಂಬುದು ಗಮನಾರ್ಹ ಅಂಶ. ಹೊಸ ಕರಡು ನೀತಿಯಲ್ಲಿ ಇದಕ್ಕಾಗಿ ಪ್ರತ್ಯೇಕ ನಿಯಂತ್ರಣ ಪ್ರಾಧಿಕಾರ ರಚನೆಯ ಪ್ರಸ್ತಾಪ ಇರುವುದು ಒಂದು ಗಮನಾರ್ಹ ಅಂಶ.
ಸಚಿನ್ ಬನ್ಸಾಲ್ ಹಾಗೂ ಬಿನ್ನಿ ಬನ್ಸಾಲ್ ಎಂಬ ಹೊಸ ಹುರುಪಿನ ಐಐಟಿ ಪದವೀಧರ ಯುವಕರು 2007ರಲ್ಲಿ ಫ್ಲಿಪ್‌ಕಾರ್ಟ್ ಆರಂಭಿಸಿ ಕೆಲವೇ ವರ್ಷಗಳಲ್ಲಿ ವಿಶ್ವದ ಪ್ರಭಾವಿ ಯುವಕರ ಸಾಲಿಗೆ ಸೇರಿದಾಗ ನಿಸ್ಸಂಶಯವಾಗಿ ಅದೊಂದು ಯಶೋಗಾಥೆಯಾಗಿತ್ತು. ಆದರೆ ಕಳೆದ ಒಂದು ದಶಕದಲ್ಲಿ ಭಾರತದ ಇ-ಕಾಮರ್ಸ್ ಕ್ಷೇತ್ರ ಅಭೂತಪೂರ್ವ ಬೆಳವಣಿಗೆ ಹಾಗೂ ಬದಲಾವಣೆಯನ್ನು ಕಂಡಿದೆ. ಫ್ಲಿಪ್‌ಕಾರ್ಟ್ ಅಮೇರಿಕದ ಅಮೆಜಾನ್‌ಗೆ ಸರಿಸಮನಾಗಿ ನಿಂತಿದೆ. ಇತ್ತ ಭಾರತದ್ದೇ ಸ್ನಾಪ್‌ಡೀಲ್‌ನ ತೀವ್ರ ಸ್ಪರ್ಧೆಯೂ ಇದೆ. ಎಲ್ಲದರ ನಡುವೆ ಅಮೇರಿಕದ ವಾಲ್‌ಮಾರ್ಟ್ 16 ಬಿಲಿಯನ್ ಡಾಲರ್‌ಗಳಿಗೆ ಫ್ಲಿಪ್‌ಕಾರ್ಟಿನ ಶೇ. 77 ಪಾಲನ್ನು ಖರೀದಿಸುವುದಾಗಿ ಘೋಷಿಸಿದೆ.
ಇ-ಕಾಮರ್ಸ್ ಕಂಪೆನಿಗಳು ಮಹಾನಗರಗಳನ್ನು ಆವರಿಸಿಕೊಂಡ ಬಳಿಕ ಎರಡನೇ ಹಾಗೂ ಮೂರನೇ ಹಂತದ ನಗರಗಳತ್ತ ದೃಷ್ಟಿ ನೆಟ್ಟಿವೆ. ಬಹುಪಾಲು ಯುವಕರನ್ನೇ ಹೊಂದಿರುವ ಭಾರತದಲ್ಲಿ ಇಂಟರ್ನೆಟ್ ಬಳಸುವವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಕಡಿಮೆ ದರಕ್ಕೆ ಮೊಬೈಲ್ ಸೆಟ್‌ಗಳು ಹಾಗೂ ಡೇಟಾ ದೊರೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಆನ್‌ಲೈನ್ ವ್ಯವಹಾರ ನೂರಾರು ಪಟ್ಟು ಹೆಚ್ಚಾಗಲಿದೆ. ಪ್ರಸ್ತುತ ೨೫೦೦ ಕೋಟಿ ಬೆಲೆಬಾಳುವ ಭಾರತದ ಇ-ಕಾಮರ್ಸ್ ಮಾರುಕಟ್ಟೆ ಮುಂದಿನ 10 ವರ್ಷಗಳಲ್ಲಿ 20,000 ಕೋಟಿಗೆ ಹಿಗ್ಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಇ-ಕಾಮರ್ಸ್ ನೀತಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಅಂತಿಮವಾಗಿ ಲಾಭದ ಚೆಂಡು ಬೀಳುವುದು ಗ್ರಾಹಕರ ಅಂಗಳಕ್ಕೋ, ಕಂಪೆನಿಗಳ ಮೈದಾನಕ್ಕೋ, ಕಾಲವೇ ಉತ್ತರಿಸಬೇಕು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ