Foreword by Sri Beluru Sudarshana, Open Knowledge Campaigner and presently, Advisor to the Chief Minister of Karnataka on E-Governance
The woods are lovely, dark & deep, But I have promises to keep, Miles to go before I sleep... ROBERT FROST
Foreword by Sri Beluru Sudarshana, Open Knowledge Campaigner and presently, Advisor to the Chief Minister of Karnataka on E-Governance
06-13 ಆಗಸ್ಟ್ 2022ರ ಬೋಧಿವೃಕ್ಷದಲ್ಲಿ ಪ್ರಕಟವಾದ ಲೇಖನ
ಒಬ್ಬಂಟಿಯಾಗಿ ನಡೆಯುವ ಹಗಲಿಗಿಂತ, ಸ್ನೇಹಿತನೊಬ್ಬ
ಜೊತೆಗಿರುವ ಕತ್ತಲೇ ಆದೀತು ನನಗೆ ಎಂದಳಂತೆ ಹೆಲನ್ ಕೆಲ್ಲರ್. ಸ್ನೇಹ ಎಂಬ ರಮ್ಯ ಭಾವಕ್ಕೆ ಕತ್ತಲನ್ನೂ ತೊಲಗಿಸುವ ಶಕ್ತಿಯಿದೆ ಎಂದು ಆಕೆಗೆ ಅನಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಹುಟ್ಟಿ ಇನ್ನೂ ಎರಡು ವರ್ಷ ಉರುಳುವ ಮುನ್ನವೇ ದೃಷ್ಟಿಯನ್ನೂ ಶ್ರವಣ ಶಕ್ತಿಯನ್ನೂ ಕಳೆದುಕೊಂಡ ನತದೃಷ್ಟೆ ಆಕೆ. ಅವಳ ಬದುಕೆಲ್ಲ ಕತ್ತಲೇ ಆಗಿಹೋಯಿತು. ದುರಂತವೆಂದರೆ ಈ ಕತ್ತಲಿನ ಮಧ್ಯೆ ಶಬ್ದವನ್ನಾದರೂ ಕೇಳುವ ಅವಕಾಶ ಆಕೆಗೆ ಇರಲಿಲ್ಲ. ಆದರೆ ಈ ಕೊರತೆಯನ್ನು ಅವಳ ಬದುಕಿನಿಂದ ದೂರವಾಗಿಸಿದ್ದು ಗೆಳೆತನವೆಂಬ ಉತ್ಕಟ ಭಾವ. ಹೌದು, ಆ್ಯನ್ ಸುಲಿವಾನ್ ಆಕೆಯ ಬದುಕಿಗೆ ಅಂತಹದೊAದು ಅಂತರಂಗದ ಬೆಳಕು ಕೊಟ್ಟಳು.ಹೆಲನ್ ಏಳು ವರ್ಷದವಳಿದ್ದಾಗ ಆಕೆಗೆ ಶಿಕ್ಷಕಿಯಾಗಿ ಬಂದವಳು ಆ್ಯನ್. ವಿಶೇಷವೆಂದರೆ ಹೆಲನ್‌ಗಿಂತ ಹದಿನೇಳು ವರ್ಷಗಳಷ್ಟು ಹಿರಿಯಳಾಗಿದ್ದ ಆ್ಯನ್ ಕೇವಲ ಶಿಕ್ಷಕಿಯಾಗಿರಲಿಲ್ಲ, ಅವಳ ಬದುಕಿನ ಸುದೀರ್ಘ ಅವಧಿಗೆ ಗೆಳತಿಯಾಗಿ ಪರಿಣಮಿಸಿದಳು. ಸುಮಾರು ಐದು ದಶಕಗಳ ಕಾಲ ಅವರಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರದ ಪ್ರಾಣಸ್ನೇಹಿತೆಯರಂತೆ ಬದುಕಿದರು. ಆ್ಯನ್ ತನ್ನ ಗೆಳತಿಯ ಕಣ್ಣಾದಳು, ಕಿವಿಯಾದಳು, ಜ್ಞಾನವಾದಳು, ಭಾವನೆಯಾದಳು, ಬಣ್ಣವಾದಳು, ಬೆಳಕಾದಳು, ಪ್ರಪಂಚವೇ ಆದಳು. ಹೆಲನ್ ಓದುವಂತೆ, ಬರೆಯುವಂತೆ, ಮಾತಾಡುವಂತೆ ಮಾಡಿದಳು.
ಆ್ಯನ್ ಮೂಲಕ ಜಗತ್ತನ್ನು ಕಂಡ ಹೆಲನ್ ಹತ್ತಾರು ಪುಸ್ತಕ ಬರೆದಳು. ಮೂವತ್ತೈದು ದೇಶಗಳನ್ನು ಸುತ್ತಾಡಿದಳು. ನೂರಾರು ಭಾಷಣಗಳನ್ನು ಮಾಡಿದಳು. ದಿವ್ಯಾಂಗರ ಹಕ್ಕುಗಳಿಗಾಗಿ ಬದುಕೆಲ್ಲ ಹೋರಾಡಿದಳು. ಸ್ನೇಹವೆಂಬುದು ಕೇವಲ ಮನಸ್ಸಿನೊಳಗಿನ ಭಾವನೆಯಲ್ಲ, ಅಂತರAಗದ ಕಸುವು; ಸುತ್ತಲೂ ಕತ್ತಲು ಆವರಿಸಿದಾಗ ಅದರ ಮಧ್ಯೆ ಬೆಳಗುವ ಹಣತೆ. ದಾರಿ ತೋರಿಸುವ ಕೈದೀವಿಗೆ. ನಿರಾಶೆಯನ್ನು ಹೊಡೆದೋಡಿಸಿ ಆತ್ಮವಿಶ್ವಾಸವನ್ನು ತುಂಬುವ ಮಹಾಮಂತ್ರ. ಅದಕ್ಕೆ ಹೆಲನ್ ಕೆಲ್ಲರ್‌ರಂತಹ ಸಾಧಕರನ್ನು ಲೋಕಕ್ಕೆ ಕೊಡುವ ಸಾಮರ್ಥ್ಯವಿದೆ.
ಸೋಶಿಯಲ್ ಮೀಡಿಯಾದ ಕಾಲದಲ್ಲಿ ಸ್ನೇಹಿತರಿಗೇನೂ ಕೊರತೆಯಿಲ್ಲ. ಅವನಿಗೆ ಫೇಸ್ಬುಕ್ಕಲ್ಲಿ ಐದು ಸಾವಿರ ಸ್ನೇಹಿತರು. ಆಕೆಗೆ ಟ್ವಿಟರಿನಲ್ಲಿ, ಇನ್‌ಸ್ಟಾಗ್ರಾಮಿನಲ್ಲಿ ಲಕ್ಕಕ್ಕೂ ಹೆಚ್ಚು ಅನುಯಾಯಿಗಳು. ಅವನೊಂದು ಪೋಸ್ಟ್ ಹಾಕಿದರೆ ಅದಕ್ಕೆ ಸ್ನೇಹಿತರು ಹಾಕುವ ಲೈಕುಗಳು ಅರ್ಧವೇ ಗಂಟೆಯಲ್ಲಿ ಒಂದು ಸಾವಿರ ದಾಟುತ್ತದೆ. ಆಕೆಯದೊಂದು ವೀಡಿಯೋ ಬಂದರೆ ಏನಿಲ್ಲವೆಂದರೂ ಐವತ್ತು ಸಾವಿರ ಫ್ರೆಂಡ್ಸು ಮೆಚ್ಚಿಕೊಳ್ಳುತ್ತಾರೆ. ಅಬ್ಬಾ! ಸ್ನೇಹಿತರು ಎಂದರೆ ಹೀಗಿರಬೇಕು! ಎಂದುಕೊಳ್ಳುವ ಹೊತ್ತಿಗೆ ಅದ್ಯಾವುದೋ ದೊಡ್ಡ ಸಮಸ್ಯೆ ಅನಾಮತ್ತಾಗಿ ಕಚ್ಚಿಕೊಳ್ಳುತ್ತದೆ. ಇದ್ದಾರಲ್ಲ ಹಚ್ಚಿಕೊಂಡಿರುವ ಸಾವಿರಾರು ಸ್ನೇಹಿತರು ಎಂದುಕೊಂಡರೆ ಅವರೆಲ್ಲ ತಂಬಾಕನ್ನು ಮೂಸಿದ ಇಂಬಳಗಳಂತೆ ಆಗಲೇ ನಾಪತ್ತೆಯಾಗಿರುತ್ತಾರೆ. ಆಗಲೇ ಇವರ ದೇಹದ ರಕ್ತ ಪೂರ್ತಿ ಬಸಿದುಹೋಗಿರದಿದ್ದರೆ ಅದೇ ಅದೃಷ್ಟ.
ಇಂತಹ ಸ್ನೇಹಿತರು ಇದ್ದರೆಷ್ಟು ಇಲ್ಲದಿದ್ದರೆಷ್ಟು? ಇದ್ದರೆ ಇರಬೇಕು – ಸುಧಾಮನಿಗೊಬ್ಬ ಕೃಷ್ಣನಿದ್ದ ಹಾಗೆ, ಸುಯೋಧನನಿಗೊಬ್ಬ ಕರ್ಣನಿದ್ದ ಹಾಗೆ, ಹೆಲನ್‌ಗೊಬ್ಬಳು ಆ್ಯನ್ ಇದ್ದ ಹಾಗೆ. ಸ್ನೇಹಿತರೆಂದರೆ ಕಷ್ಟ ಬಂದಾಗ ಬಿಟ್ಟೋಡುವವರಲ್ಲ, ಜತೆಗಿದ್ದು ಧೈರ್ಯ ತುಂಬುವವರು. ಅವರೇನೂ ಪ್ರಾಣಕ್ಕೆ ಪ್ರಾಣ ಕೊಡಬೇಕಾಗಿಲ್ಲ, ಒಂದಿಷ್ಟು ನಂಬಿಕೆ ಉಳಿಸಿಕೊಂಡರೆ ಸಾಕು. ವಿಶ್ವಾಸ ಪ್ರಾಣಕ್ಕೆ ಸಮ, ಅಥವಾ ಅದಕ್ಕಿಂತಲೂ ದೊಡ್ಡದು. ವಿಶ್ವಾಸ ಕಳೆದುಕೊಳ್ಳುವುದೆಂದರೆ ಬದುಕಿಯೂ ಸತ್ತಹಾಗೆ.
‘ಬದುಕಿನ ತುಂಬ ಹಲವಾರು ಮಂದಿ ಓಡಾಡುತ್ತಾರೆ, ನಿಜವಾದ ಸ್ನೇಹಿತರು ಮಾತ್ರ ತಮ್ಮ ಹೆಜ್ಜೆಯ ಗುರುತುಗಳನ್ನು ಉಳಿಸಿಹೋಗುತ್ತಾರೆ’ ಎಂಬ ಮಾತಿದೆ. ಈ ಹೆಜ್ಜೆ ಗುರುತುಗಳಿಗೆ ವಿಶ್ವಾಸ, ಒಲುಮೆ, ಸಹಾನುಭೂತಿ, ನಿರ್ಮಾತ್ಸರ್ಯ, ಪ್ರಾಮಾಣಿಕತೆ ಇತ್ಯಾದಿ ಹೆಸರುಗಳೂ ಇವೆ. ಅವು ಸ್ನೇಹದ ಆಧಾರ ಸ್ತಂಭಗಳು ಕೂಡ. ಸ್ನೇಹವೆಂಬುದು ಕ್ಷಣಕಾಲ ಫಳ್ಳೆಂದು ಬೆಳಗಿ ಮರೆಯಾಗುವ ಮಿಂಚಲ್ಲ. ಸದಾ ಹೊಮ್ಮುವ ಚಂದಿರನ ಬೆಳದಿಂಗಳು. ಅದರಿಂದ ಮೈಮನಸ್ಸಿಗೆ ತಂಪಿನ, ಸೊಂಪಿನ ಅನುಭವ. ಈ ಸುದೀರ್ಘ ಸಹಪಯಣದಲ್ಲಿ ವಿಶ್ವಾಸವೇ ವಿಶ್ವ. ಒಮ್ಮೆ ಅಪನಂಬಿಕೆಯ ಸಣ್ಣ ಬಿರುಕು ಕಾಣಿಸಿಕೊಂಡರೂ ಬುನಾದಿ ಶಾಶ್ವತವಾಗಿ ಕುಸಿಯಬಲ್ಲುದು.
ಪರಸ್ಪರ ಪ್ರೀತಿ-ಕಾಳಜಿಗಳು ಕೂಡ ಈ ಬುನಾದಿಯ ಇಟ್ಟಿಗೆಗಳು. ಈ ಒಲುಮೆ ಸದಾ ಹರಿಯುವ ಝರಿಯ ಹಾಗೆ. ಅಲ್ಲಿ ಕಲ್ಮಶಗಳು ಉಳಿಯುವುದಿಲ್ಲ. ಸ್ನೇಹವಿದ್ದಲ್ಲಿ ಸಣ್ಣ ಸಿಟ್ಟು-ಸೆಡವುಗಳು ಇರಬಾರದೆಂದಿಲ್ಲ. ಆದರೆ ಅವೆಲ್ಲ ಬಹುಕಾಲ ಉಳಿಯುವುದಿಲ್ಲ. ಝರಿಯಲ್ಲಿ ಕೊಚ್ಚಿಹೋಗುವ ಕೊಳೆಯಂತೆ, ಕಸಕಡ್ಡಿಗಳಂತೆ ಅವೆಲ್ಲ ಕೆಲವೇ ಸಮಯದಲ್ಲಿ ಮರೆಯಾಗಿ ಶುಭ್ರತೆ, ತಾಜಾತನ ಆವರಿಸಿಕೊಳ್ಳುತ್ತದೆ. ಈ ಹರಿಯುವ ನೀರಿನ ಇನ್ನೊಂದು ಗುಣವೆಂದರೆ ಅದು ಮುಂದೆಮುಂದಕ್ಕೆ ಸಾಗುತ್ತಲೇ ತನ್ನ ಎರಡೂ ದಡಗಳಿಗೆ ಜೀವಸೇಚನ ಮಾಡುತ್ತದೆ. ಫಲವಂತಿಕೆಯನ್ನು ಸುತ್ತಲಿನವರಿಗೆಲ್ಲ ಉಡುಗೊರೆಯಾಗಿ ನೀಡುತ್ತದೆ. ಅಲ್ಲಿ ಒಬ್ಬರು ಮೇಲು ಇನ್ನೊಬ್ಬರು ಕೀಳು ಎಂಬುದೂ ಇಲ್ಲ. ಎಲ್ಲರಿಗೂ ಸಮಾನವಾಗಿ ಈ ಫಲದ ಹಂಚಿಕೆಯಾಗುತ್ತದೆ. ಅಂದರೆ ಒಳ್ಳೆಯ ಸ್ನೇಹಿತರ ಸಂಪರ್ಕಕ್ಕೆ ಬಂದವರು ಅದರ ಫಲಗಳನ್ನು ತಾವೂ ಉಣ್ಣುತ್ತಾರೆ. ಅದರಿಂದ ಬೇರೊಬ್ಬರಿಗೆ ತೊಡಕೆಂಬುದಿಲ್ಲ.
ಸ್ನೇಹಿತರ ಕಷ್ಟ, ಸವಾಲುಗಳನ್ನು ಕಂಡು ಮರುಗುವುದು, ಅದನ್ನು ತಮ್ಮ ಕಷ್ಟವೆಂದೇ ಬಗೆದು ಅವರ ಸಹಾಯಕ್ಕೆ ಧಾವಿಸುವುದು ಗೆಳೆತನದ ಇನ್ನೊಂದು ಗುಣ. ಅದಕ್ಕೆ ಸಹಾನುಭೂತಿಯೆಂದು ಹೆಸರು. ಕಷ್ಟಕ್ಕೊದಗುವವನೇ ನಿಜವಾದ ಸ್ನೇಹಿತ ಎಂಬ ಮಾತಿದೆಯಲ್ಲ. ಬಂಧುಬಳಗ ನೂರಾರು ಮಂದಿ ಇದ್ದರೂ ಆಪತ್ತಿಗೆ ಓಡಿ ಬರುವವರು ಸ್ನೇಹಿತರೇ. ಗೆಳೆಯ ಕಣ್ರೆಪ್ಪೆ ಇದ್ದ ಹಾಗೆ. ಎಷ್ಟೇ ಅಚಾನಕ್ಕಾಗಿ ಕಸಕಡ್ಡಿಯೋ ಧೂಳೋ ಎದುರಿನಿಂದ ಬಂದರೂ ರೆಪ್ಪೆ ಫಕ್ಕನೆ ತಾನೇತಾನಾಗಿ ಮುಚ್ಚಿಕೊಂಡು ಕಣ್ಮಣಿಗಳನ್ನು ಕಾಪಾಡುತ್ತದೆ. ಅದಕ್ಕೆ ಸ್ನೇಹಶೀಲತೆಯೆಂದು ಹೆಸರು.
ಸ್ನೇಹದೊಳಗೆ ಮತ್ಸರಕ್ಕೆ ಜಾಗವಿಲ್ಲ. ಇದ್ದರೆ ಅದು ಸ್ನೇಹವಲ್ಲ, ವ್ಯವಹಾರ. ಪರಸ್ಪರರ ಏಳಿಗೆಯನ್ನು ಕಂಡು ಕರುಬುವವರು ಗೆಳೆಯರಲ್ಲ. ತೋರಿಕೆಗೆ ಗೆಳೆಯರಂತೆ ನಟಿಸುತ್ತಾ ಅಂತರಂಗದಲ್ಲಿ ಮತ್ಸರಪಟ್ಟರೆ ಅಂತಹವರಿಗೆ ಶತ್ರುಗಳೆಂದು ಹೆಸರು. ಇವರಿಗಿಂತ ಘೋಷಿತ ಶತ್ರುಗಳಾದರೂ ಆಗಬಹುದು. ಅವರು ಶತ್ರುಗಳೆಂದು ಮೊದಲೇ ಗೊತ್ತಿರುತ್ತದಲ್ಲ? ನಿಜವಾದ ಸ್ನೇಹಿತ ತನ್ನ ಗೆಳೆಯನ ಸಾಧನೆಗಳಲ್ಲಿ ತನ್ನ ಸಾಧನೆಯನ್ನೂ ಸೌಖ್ಯವನ್ನೂ ಕಾಣುತ್ತಾನೆ. ಅವುಗಳಿಗಾಗಿ ಹೆಮ್ಮೆಪಡುತ್ತಾನೆ. ಪರಸ್ಪರರ ಸಾಧನೆಗಳಲ್ಲಿ ಆನಂದವನ್ನೂ ಪ್ರೇರಣೆಯನ್ನೂ ಪಡೆದು ಪ್ರಗತಿಯ ಹಾದಿಯಲ್ಲಿ ಜತೆಯಾಗಿ ಮುನ್ನಡೆಯುವವರೇ ನಿಜವಾದ ಸ್ನೇಹಿತರು.
ಸ್ನೇಹವನ್ನು ಕೊನೆಯವರೆಗೂ ಕಾಪಿಟ್ಟುಕೊಳ್ಳುವುದು ಪ್ರಾಮಾಣಿಕತೆಯೆಂಬ ಉಕ್ಕಿನ ಹೊದಿಕೆ. ಸ್ನೇಹವೊಂದು ತೆರೆದ ಪುಸ್ತಕ. ಅದನ್ನು ಇಬ್ಬರಿಗೂ ಯಾವಾಗ ಬೇಕಾದರೂ ಓದಿಗೆ ಲಭ್ಯವಿದ್ದಾಗ ಮುಚ್ಚಿಡುವುದು, ಬಚ್ಚಿಡುವುದು ಏನೂ ಇರುವುದಿಲ್ಲ. ಮನುಷ್ಯರೆಂದ ಮೇಲೆ ಭಿನ್ನಾಭಿಪ್ರಾಯಗಳು ಇರಬಾರದು ಎಂದೇನೂ ಇಲ್ಲ. ಅವೆಲ್ಲ ಬದುಕಿನ ಸಹಜ ಲಕ್ಷಣಗಳು. ಆದರೆ ಅಂಥವು ಕಾಣಿಸಿಕೊಂಡಾಗ ಅವುಗಳನ್ನು ಅಲ್ಲಲ್ಲೇ ಹಂಚಿಕೊಂಡರೆ, ಸಲಹೆಗಳನ್ನು ಸ್ವೀಕರಿಸುವ ಪ್ರಾಮಾಣಿಕತೆ ಇಬ್ಬರಲ್ಲೂ ಇದ್ದರೆ ಸ್ನೇಹ ಅನಂತವಾಗಿರುತ್ತದೆ.
ಹೇಳಿಕೇಳಿ ಗೆಳೆತನವೆಂಬುದು ಒಂದು ಅವಕಾಶವಲ್ಲ, ಜವಾಬ್ದಾರಿ. ಅದು ಇಬ್ಬರಿಗೂ ಸಂಬಂಧಿಸಿದ ಪದ. ಎರಡೂ ಕೈ ಸೇರಿದರೆ ಚಪ್ಪಾಳೆ. ಕಣ್ಣೆರಡು, ಕಿವಿಯೆರಡು, ಕೈಯೆರಡು, ಕಾಲೆರಡು. ಸ್ನೇಹಕ್ಕೂ ಇಬ್ಬರು ಬೇಕಲ್ಲ! ಇಬ್ಬರೂ ಜತೆಯಾಗಿ ಆ ಜವಾಬ್ದಾರಿ ನಿರ್ವಹಿಸಿದರೆ ಲೋಕಕ್ಕೊಂದು ಒಳ್ಳೆಯ ಮಾದರಿ ದೊರೆಯುತ್ತದೆ. ಇನ್ನೊಂದು ದಡ ಸೇರಿದ ಮೇಲೂ ಅಂಬಿಗನ ನೆನಪು ಬೇಕು. ಇಲ್ಲದಿದ್ದರೆ ಹಿಂತಿರುಗುವಾಗ ಸಮಸ್ಯೆಯಾಗುತ್ತದೆ.
- ಸಿಬಂತಿ ಪದ್ಮನಾಭ ಕೆ. ವಿ.
4 ಜೂನ್ 2022ರ 'ವಿಜಯವಾಣಿ' ಪತ್ರಿಕೆಯ 'ಶಿಕ್ಷಣಪಥ' ಪುರವಣಿಯಲ್ಲಿ ಪ್ರಕಟವಾದ ಲೇಖನ
ಕೇವಲ ಡಿಗ್ರಿ ಆಧಾರದಲ್ಲಿ ಉದ್ಯೋಗ ಸಂಪಾದಿಸುವ ದಿನಗಳು ಇತಿಹಾಸಕ್ಕೆ ಸಂದುಹೋಗಿವೆ. ಇದು ಸ್ಪರ್ಧಾತ್ಮಕ ಯುಗ. ಉದ್ಯೋಗ ಸಂಪಾದನೆಯಿಂದ ತೊಡಗಿ ಅದರಲ್ಲಿ ಯಶಸ್ಸು ಸಾಧಿಸುವವರೆಗೆ ಪ್ರತಿ ಹಂತದಲ್ಲೂ ಇನ್ನೊಬ್ಬರಿಂದ ಕಠಿಣ ಸ್ಪರ್ಧೆ ಎದುರಿಸಬೇಕಾಗುತ್ತದೆ. ಡಿಗ್ರಿಯೊಂದಿದ್ದರೆ ಯಾವುದಾದರೊಂದು ಉದ್ಯೋಗ ಸಿಗುತ್ತದೆ ಎಂಬ ಮನೋಭಾವ ಇರುವವರಿಗೆ ಇನ್ನು ಬದುಕು ಬಲು ಕಷ್ಟ.
ಅಂಕಪಟ್ಟಿಯಲ್ಲಿ ನಮೂದಾಗಿರುವ ಪರ್ಸೆಂಟೇಜನ್ನು ನಂಬಿ ಈಗ ಯಾರೂ ಉದ್ಯೋಗ ಕೊಡುವುದಿಲ್ಲ. ಎಷ್ಟೇ ಸಣ್ಣ ಉದ್ಯೋಗವಾದರೂ ತಾನು ಕೊಡುವ ಸಂಬಳಕ್ಕೆ ಪ್ರತಿಯಾಗಿ ಉದ್ಯೋಗಿ ತನ್ನ ಸಂಸ್ಥೆಗೆ ಏನು ಕೊಡಬಲ್ಲ ಎಂದು ಉದ್ಯೋಗಪತಿ ಯೋಚಿಸುತ್ತಾನೆ. ಆದ್ದರಿಂದ ಅಂಕಪಟ್ಟಿ, ಪ್ರಮಾಣಪತ್ರಗಳ ಜೊತೆಗೆ ಉದ್ಯೋಗ ರಂಗವು ಅಪೇಕ್ಷಿಸುವ ಒಂದಷ್ಟು ಕೌಶಲಗಳನ್ನು ಪ್ರತಿಯೊಬ್ಬನೂ ರೂಢಿಸಿಕೊಳ್ಳುವುದು ಅಗತ್ಯ. ಕ್ಷೇತ್ರ, ಉದ್ಯೋಗ ಯಾವುದೇ ಇರಲಿ, ಈ ಕೌಶಲಗಳು ಎಲ್ಲ ಉದ್ಯೋಗಾಕಾಂಕ್ಷಿಗಳಲ್ಲೂ ಇರಲೇಬೇಕು.ಸಮಸ್ಯೆ ಬಗೆಹರಿಸುವಿಕೆ
ಉದ್ಯೋಗ ಸ್ಥಳದಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ಯಾವಾಗ ಯಾವ ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಲು ಬರುವುದಿಲ್ಲ. ಕೆಲವು ನಿರೀಕ್ಷಿತ, ಕೆಲವು ಅನಿರೀಕ್ಷಿತ. ಎರಡನ್ನೂ ಸಮಾನ ಧೈರ್ಯದಿಂದ ಎದುರಿಸುವ ಕೌಶಲ ವ್ಯಕ್ತಿಗೆ ಇರಬೇಕು. ನಿರೀಕ್ಷಿತ ಸಮಸ್ಯೆಗಳನ್ನು ಎದುರಿಸಲು ಸಿದ್ಧ ತಂತ್ರಗಾರಿಕೆ ಬೇಕು. ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸಲು ಆತ್ಮವಿಶ್ವಾಸ, ತಾಳ್ಮೆ, ವ್ಯವಸ್ಥಿತ ನಿರ್ವಹಣೆ ಬೇಕು.
ಸಮಸ್ಯೆ ಎದುರಾದ ಕೂಡಲೇ ಧೈರ್ಯ ಕಳೆದುಕೊಳ್ಳುವುದಲ್ಲ, ಕುಗ್ಗಿ ಬದಿಗೆ ಸರಿಯುವುದಲ್ಲ. ಸಮಸ್ಯೆ ಯಾಕೆ ಬಂತು, ಅದಕ್ಕಿರುವ ವಿವಿಧ ಪರಿಹಾರಗಳೇನು, ತಕ್ಷಣಕ್ಕೆ ಏನು ಮಾಡಬಹುದು- ಇವನ್ನೆಲ್ಲ ಕೂಲಂಕಷವಾಗಿ ಯೋಚಿಸಿ ಮುಂದಿನ ಹೆಜ್ಜೆ ಇಡುವುದು ಅಪೇಕ್ಷಣೀಯ. ದುಡುಕು, ಆತಂಕಗಳಿAದ ಸಮಸ್ಯೆ ಪರಿಹಾರವಾಗುವ ಬದಲು ಇನ್ನಷ್ಟು ಬಿಗಡಾಯಿಸುತ್ತದೆ.
ಸಂವಹನ ಕಲೆ
ಸಂವಹನದಲ್ಲಿ ವ್ಯಕ್ತಿಯ ಯಶಸ್ಸು ಅಡಗಿದೆ. ಮನಸ್ಸಿನಲ್ಲಿ ಏನಿದೆ ಎಂಬುದಕ್ಕಿಂತಲೂ ಅದನ್ನು ಇನ್ನೊಬ್ಬರೆದುರು ಹೇಗೆ ಮಂಡಿಸಬೇಕು ಎಂದು ತಿಳಿದಿರುವುದು ಮುಖ್ಯ. ಇನ್ನೊಬ್ಬನೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಸಾಧ್ಯವಾಗದ ವ್ಯಕ್ತಿ ಎಷ್ಟೇ ಉನ್ನತ ವಿದ್ಯಾರ್ಹತೆ ಹೊಂದಿದ್ದರೂ ಪ್ರಯೋಜನವಿಲ್ಲ.
ಉತ್ತಮ ಉದ್ಯೋಗ ಪಡೆಯಲು ಮತ್ತು ಅದರಲ್ಲಿ ಯಶಸ್ಸು ಸಾಧಿಸಲು ಲಿಖಿತ ಮತ್ತು ಮೌಖಿಕ ಸಂವಹನ ಕಲೆ ಬಹಳ ಮುಖ್ಯ. ತನ್ನ ಬಯೋಡಾಟಾ ಬರೆಯುವುದರಿಂದ ತೊಡಗಿ ವಿವಿಧ ಸಂದರ್ಭಗಳಲ್ಲಿ ಪತ್ರ, ಇಮೇಲ್ ಮತ್ತಿತರ ವ್ಯವಹಾರ ನಡೆಸುವುದಕ್ಕೆ ಬರೆವಣಿಗೆ ಕೌಶಲ ಬಹಳ ಮುಖ್ಯ. ಒಂದು ಕೆಟ್ಟ ಇಮೇಲ್ ಇಡೀ ಯೋಜನೆಯನ್ನೇ ಹಾಳುಗೆಡಹಬಹುದು. ಒಂದು ಉತ್ತಮ ಪತ್ರ ಅಥವಾ ಪ್ರಸ್ತಾವನೆ ಕೋಟ್ಯಂತರ ರುಪಾಯಿಯ ಪ್ರಾಜೆಕ್ಟ್ ಒಂದನ್ನು ಪಡೆದುಕೊಳ್ಳಲು ನೆರವಾಗಬಹುದು. ಮೌಖಿಕ ಸಂವಹನವAತೂ ಆಧುನಿಕ ಕಾಲದ ಅತ್ಯಗತ್ಯ ಕೌಶಲ. ಉದ್ಯೋಗ ನೀಡಲು ಸಂದರ್ಶನ ನಡೆಸುವ ವ್ಯಕ್ತಿ ನಿಮ್ಮ ಮೌಖಿಕ ಸಂವಹನ, ದೇಹಭಾಷೆಯನ್ನು ನೋಡಿಯೇ ನಿಮಗೆ ಆ ಉದ್ಯೋಗ ನೀಡಬೇಕೇ ಬೇಡವೇ ಎಂಬುದನ್ನು ಬಹುಪಾಲು ನಿರ್ಧರಿಸುವ ಸಾಧ್ಯತೆ ಇದೆ.
ಹೊಂದಾಣಿಕೆ
ಹೊಸತನ ಉದ್ಯೋಗರಂಗದ ಖಾಯಂ ಲಕ್ಷಣ. ಯಾವುದೇ ಉದ್ಯೋಗದಲ್ಲಿ ಹೊಸಹೊಸ ಸವಾಲುಗಳು ಎದುರಾಗುತ್ತಲೇ ಇರುತ್ತವೆ. ಹೊಸ ತಂತ್ರಜ್ಞಾನ, ಹೊಸ ಬಗೆಯ ಸ್ಪರ್ಧೆಗಳು, ಹೊಸ ವ್ಯವಹಾರದ ಮಾದರಿಗಳು ಪ್ರತಿದಿನ ಗೋಚರವಾಗುತ್ತವೆ. ಈ ಬದಲಾವಣೆಗಳಿಗೆ ಆಗಿಂದಾಗ್ಗೆ ಹೊಂದಿಕೊಳ್ಳುವುದು ಉದ್ಯೋಗಿಯ ಆದ್ಯತೆಯಾಗಬೇಕು. ಸದಾ ಹೊಸತನ್ನು ಕಲಿಯುವ ಅಭ್ಯಾಸ ರೂಢಿಯಾಗಬೇಕು. ಹೊಸ ವಿಷಯ ಹಾಗೂ ಹೊಸ ವ್ಯಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗದ ಉದ್ಯೋಗಿ ಯಶಸ್ಸು ಕಾಣುವುದು ಕಷ್ಟ.
ತಂಡ ಮನೋಭಾವ
ತಂಡದೊಂದಿಗೆ ಕೆಲಸ ಮಾಡುವ ಗುಣ ಅತ್ಯಂತ ದೊಡ್ಡ ಉದ್ಯೋಗ ಕೌಶಲವೆಂದು ಪರಿಗಣಿಸಲ್ಪಟ್ಟಿದೆ. ಒಂದು ಸಂಸ್ಥೆಯಲ್ಲಿ ಮಾಡುವ ಬಹುತೇಕ ಕೆಲಸಗಳು ತಂಡ ಪ್ರಯತ್ನಗಳೇ. ಒಬ್ಬ ವ್ಯಕ್ತಿ ಏಕಾಂಗಿಯಾಗಿ ಪೂರೈಸಬಹುದಾದ ಕೆಲಸಗಳು ಕಡಿಮೆ. ಇಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವುದೇ ಪ್ರಮುಖ ಕೌಶಲ.
ಒಬ್ಬ ಉದ್ಯೋಗಾಕಾಂಕ್ಷಿ ವಿವಿಧ ಹಿನ್ನೆಲೆಯ, ವಯಸ್ಸಿನ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯ ಮಂದಿಯೊAದಿಗೆ ತಂಡ ಮನೋಭಾವದಿಂದ ಕೆಲಸ ಮಾಡಲು ಸಿದ್ಧವಿರಬೇಕು. ತಂಡದ ಮುಖ್ಯಸ್ಥನಾಗಬಯಸುವವನಿಗಂತೂ ಇನ್ನೊಬ್ಬರ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಗಮನಿಸಿ, ಅವರಿಗೆ ತಕ್ಕುದಾದ ಜವಾಬ್ದಾರಿಗಳನ್ನು ವಹಿಸುವ ಸಾಮರ್ಥ್ಯವಿರಬೇಕು.
ಸಮಯ ನಿರ್ವಹಣೆ
ಸಮಯ ನಿರ್ವಹಣೆಯು ಸಂಪನ್ಮೂಲ ನಿರ್ವಹಣೆಯ ಒಂದು ಭಾಗ. ಅತ್ಯಂತ ಕಡಿಮೆ ಸಮಯದಲ್ಲಿ ಗರಿಷ್ಠ ಪ್ರಯೋಜನವನ್ನು ಪಡೆಯುವುದು ಯಾವನೇ ಉದ್ಯೋಗಿಯ ಪ್ರಮುಖ ಗುರಿಯಾಗಬೇಕು. ಇದಕ್ಕೆ ಸೂಕ್ತ ಯೋಜನೆ ಅಗತ್ಯ. ಸರಿಯಾದ ಪ್ಲಾನಿಂಗ್ ಇದ್ದಾಗ ಮಾತ್ರ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು.
ಸಮಯವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವುದು ಒಂದು ಶ್ರೇಷ್ಠ ಕೌಶಲ. ಒಂದೊಂದು ನಿಮಿಷವೂ ಮುಖ್ಯ ಎಂಬ ಭಾವನೆ ಹೊಂದಿರುವವನಿಗೆ ಮಾತ್ರ ಸಮಯದ ಮೌಲ್ಯ ಅರ್ಥವಾಗಲು ಸಾಧ್ಯ. ನಿಗದಿತ ವೇಳೆಗೆ ಒಂದು ಕೆಲಸಕ್ಕೆ ಹಾಜರಾಗುವುದು, ನಿರ್ದಿಷ್ಟ ಕಾಲಮಿತಿಯಲ್ಲಿ ಜವಾಬ್ದಾರಿಯನ್ನು ಪೂರೈಸುವುದು- ಇವೆಲ್ಲ ಒಬ್ಬ ವ್ಯಕ್ತಿಯ ಉದ್ಯೋಗಾರ್ಹತೆಯನ್ನು ನಿರ್ಧರಿಸುತ್ತವೆ.
ಸಂಘಟನೆ
ವ್ಯಕ್ತಿಗಳು ಹಾಗೂ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಹಾಗೂ ಬುದ್ಧಿವಂತಿಕೆಯಿಂದ ಬಳಸುವುದು ಸಂಘಟನೆಯ ಗುಟ್ಟು. ಎಲ್ಲ ಕೆಲಸಗಳನ್ನೂ ಒಬ್ಬನೇ ನಿರ್ವಹಿಸಲಾಗದು. ಯಾರಿಗೆ ಯಾವಾಗ ಯಾವ ಕೆಲಸವನ್ನು ವಹಿಸಬೇಕೆಂಬುದು ಒಬ್ಬ ಉತ್ತಮ ಸಂಘಟಕನಿಗೆ ತಿಳಿದಿರುತ್ತದೆ. ಇದರಿಂದ ಒಂದು ತಂಡದಲ್ಲಿ ಪರಸ್ಪರ ವಿಶ್ವಾಸವೂ ಬೆಳೆಯುತ್ತದೆ. ಜವಾಬ್ದಾರಿಗಳ ಸಮಾನ ಹಂಚಿಕೆಯಾಗುತ್ತದೆ.
ಸ್ವಪ್ರೇರಣೆಯನ್ನು ಹೆಚ್ಚಿಸಿಕೊಳ್ಳವುದು, ತನ್ನ ಹಾಗೂ ಸಹೋದ್ಯೋಗಿಗಳ ಸಾಮರ್ಥ್ಯದ ಗರಿಷ್ಠ ಬಳಕೆ ಮಾಡುವುದು, ಜವಾಬ್ದಾರಿಗಳನ್ನು ಜಾಗರೂಕತೆಯಿಂದ ನಿರ್ವಹಿಸುವುದು, ತಕ್ಷಣದ ಆದ್ಯತೆ ಯಾವುದು ಎಂದು ಅರ್ಥಮಾಡಿಕೊಳ್ಳವುದು- ಇವೆಲ್ಲ ಒಬ್ಬ ಉದ್ಯೋಗಸ್ಥ ಅಥವಾ ಉದ್ಯೋಗಾಕಾಂಕ್ಷಿಯ ಪ್ರಧಾನ ಗುಣಗಳಾಗಿರಬೇಕು.
ತಂತ್ರಜ್ಞಾನದ ಬಳಕೆ
ಇದು ತಂತ್ರಜ್ಞಾನದ ಯುಗ. ಪ್ರತಿದಿನ ಹೊಸ ತಂತ್ರಜ್ಞಾನ ನಮ್ಮೆದುರು ಕಾಣಿಸಿಕೊಳ್ಳುತ್ತಿದೆ. ಕಡೇ ಪಕ್ಷ ಕಂಪ್ಯೂಟರನ್ನಾದರೂ ತನ್ನ ಕೆಲಸಗಳಿಗೆ ಸರಿಯಾಗಿ ಬಳಸಿಕೊಳ್ಳಲಾಗದ ವ್ಯಕ್ತಿ ಇಂದು ಅನಕ್ಷರಸ್ಥನೇ ಸರಿ. ಇತ್ತೀಚಿನ ವರ್ಷಗಳಲ್ಲಂತೂ ಕಂಪ್ಯೂಟರ್‌ನಲ್ಲಿ ಮಾಡಬಹುದಾದ ಅನೇಕ ಕೆಲಸಗಳನ್ನು ಮೊಬೈಲ್ ಫೋನಿನಲ್ಲೇ ಮಾಡುವುದು ಸಾಧ್ಯ.
ಆದ್ದರಿಂದ ತಂತ್ರಜ್ಞಾನದ ವಿಷಯದಲ್ಲಿ ವ್ಯಕ್ತಿ ಆಗಿಂದಾಗ್ಗೆ ಅಪ್ಡೇಟ್ ಆಗುವುದು ಅನಿವಾರ್ಯ. ಕಂಪ್ಯೂಟರ್, ಮೊಬೈಲ್‌ಗಳನ್ನು ಸ್ಮಾರ್ಟ್ ಆಗಿ ಬಳಸಿಕೊಳ್ಳಬಲ್ಲ ವ್ಯಕ್ತಿ ಇಂದು ಯಾವುದೇ ಉದ್ಯೋಗಕ್ಕೆ ಹೆಚ್ಚು ಯೋಗ್ಯ ಎನಿಸಿಕೊಳ್ಳುತ್ತಾನೆ.
ಮಾಹಿತಿಯ ಬಳಕೆ
21ನೇ ಶತಮಾನದಲ್ಲಿ ಮಾಹಿತಿಯೇ ಕರೆನ್ಸಿ. ಯಾವುದೇ ಮಾಧ್ಯಮವನ್ನು ಬಳಸಿ ಸರಿಯಾದ ಮಾಹಿತಿಯನ್ನು ಸಂಗ್ರಹಿಸುವುದು, ಸಂಗ್ರಹಿಸಿದ ಮಾಹಿತಿಯನ್ನು ಒಪ್ಪ ಓರಣವಾಗಿ ವ್ಯವಸ್ಥೆಗೊಳಿಸುವುದು, ಅದನ್ನು ಸರಿಯಾದ ರೀತಿಯಲ್ಲಿ ವಿಶ್ಲೇಷಿಸಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉದ್ಯೋಗಿಗಳ ಪ್ರಮುಖ ಕೌಶಲ. ವಿಷಯಗಳು ಗೊತ್ತಿದ್ದರೆ ಸಾಲದು, ಅವುಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದು, ಇನ್ನೊಬ್ಬರಿಗೆ ಸಂವಹನ ಮಾಡುವುದು ಮುಖ್ಯ.
ಉತ್ತಮ ವ್ಯಕ್ತಿತ್ವ
ಉತ್ತಮ ವ್ಯಕ್ತಿತ್ವ ಎಲ್ಲ ಅರ್ಹತೆಗಳನ್ನು ಬೆಳಗುವ ಶೋಕೇಸು. ಎಂತಹದೇ ವಿದ್ಯಾರ್ಹತೆ ಇದ್ದರೂ ಅದು ನಮ್ಮ ವ್ಯಕ್ತಿತ್ವದಲ್ಲಿ ಪ್ರತಿಫಲಿತವಾಗದೇ ಹೋದರೆ ಅದಕ್ಕೆ ಈ ಕಾಲದಲ್ಲಿ ಮೌಲ್ಯವಿಲ್ಲ. ವೃತ್ತಿಪರತೆ, ಉತ್ಸಾಹ, ಆತ್ಮವಿಶ್ವಾಸ, ಸೃಜನಶೀಲತೆ, ಪಾರದರ್ಶಕತೆ – ಇವೆಲ್ಲ ವ್ಯಕ್ತಿತ್ವದ ವಿವಿಧ ಆಯಾಮಗಳೆಂದು ಗುರುತಿಸಲ್ಪಟ್ಟಿವೆ. ಇವುಗಳನ್ನು ರೂಢಿಸಿಕೊಂಡು ಬೆಳೆಸಿಕೊಳ್ಳುವುದು ಉತ್ತಮ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಬಹಳ ಅಗತ್ಯ.
ನಾಯಕತ್ವ
ಎಲ್ಲರನ್ನೂ ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯ ಯಶಸ್ಸಿನ ಪ್ರಾಥಮಿಕ ಅರ್ಹತೆ. ನಾಯಕನಾದವನು ಉಳಿದವರಿಗೆ ಮಾದರಿಯಾಗಬೇಕು. ಆತ ತನ್ನ ವರ್ಚಸ್ಸು ಹಾಗೂ ಸಾಮರ್ಥ್ಯದಿಂದ ಉಳಿದವರಿಗೆ ಪ್ರೇರಕನಾಗಿರಬೇಕು.
ಸಹಾನುಭೂತಿಯನ್ನು ಬೆಳೆಸಿಕೊಳ್ಳುವುದು, ಇನ್ನೊಬ್ಬರ ಸಾಮರ್ಥ್ಯವನ್ನು ಗುರುತಿಸುವುದು, ವ್ಯವಸ್ಥಿತ ಚಿಂತನೆ ಹಾಗೂ ಯೋಜನೆ, ತನ್ನೊಂದಿಗೆ ಇರುವವರ ಸಾಧನೆಗಳನ್ನು ಗುರುತಿಸಿ ಸೂಕ್ತ ಮನ್ನಣೆಯನ್ನು ನೀಡುವುದು, ವೈಫಲ್ಯದ ಜವಾಬ್ದಾರಿ ಹೊತ್ತುಕೊಳ್ಳುವುದು ಇತ್ಯಾದಿಗಳು ಉತ್ತಮ ನಾಯಕನ ಲಕ್ಷಣಗಳು.
ಒಳ್ಳೆಯ ಉದ್ಯೋಗ ಪಡೆಯುವ ಕನಸು ಕಂಡರೆ ಸಾಲದು. ಅದಕ್ಕೆ ತಕ್ಕುದಾದ ತಯಾರಿ ನಮ್ಮಲ್ಲಿರಬೇಕು. ಉದ್ಯೋಗಕ್ಕೆ ತಯಾರಿ ನಡೆಸುವುದೆಂದರೆ ಇಂತಹ ಕೌಶಲಗಳನ್ನು ಹೊಂದುವುದಕ್ಕೆ ನಿರಂತರ ಪ್ರಯತ್ನಶೀಲರಾಗವುದು. ಇದು ಒಂದು ವಾರದಲ್ಲಿ ಅಥವಾ ತಿಂಗಳಿನಲ್ಲಿ ಕರಗತವಾಗುವ ವಿಷಯಗಳಲ್ಲ. ನಿರಂತರ ಪ್ರಯತ್ನ ಹಾಗೂ ಅಭ್ಯಾಸ ಬೇಕು. ವಿದ್ಯಾಭ್ಯಾಸದ ಜತೆಜತೆಗೆ ಈ ಕೌಶಲಗಳನ್ನು ರೂಢಿಸಿಕೊಳ್ಳಲು ಪ್ರಯತ್ನವು ಜಾಗೃತವಾಗಿದ್ದರೆ ವ್ಯಾಸಂಗ ಮುಗಿಯುವ ವೇಳೆಗೆ ಉದ್ಯೋಗಕ್ಕೂ ನಾವು ಸಿದ್ಧರಾಗಿರುತ್ತೇವೆ. ಇಲ್ಲಿ ಹೇಳಿರುವ ಕೌಶಲಗಳನ್ನು ರೂಢಿಸಿಕೊಳ್ಳುವುದರಿಂದ ಉತ್ತಮ ಉದ್ಯೋಗ ಪಡೆಯುವುದು ಮಾತ್ರವಲ್ಲ, ಪಡೆದ ಉದ್ಯೋಗದಲ್ಲಿ ಯಶಸ್ಸನ್ನು ಸಾಧಿಸಿ ಇನ್ನೂ ಉತ್ತಮ ಸ್ಥಾನಕ್ಕೆ ಏರುವುದೂ ಸಾಧ್ಯ.
- ಸಿಬಂತಿ ಪದ್ಮನಾಭ ಕೆ. ವಿ.
'ಬೋಧಿವೃಕ್ಷ' 18-25 ಜೂನ್ 2022ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ
Postmen in the Mountains ಎಂಬೊಂದು ಚೈನೀಸ್ ಚಲನಚಿತ್ರವಿದೆ. ಕಾಲ್ನಡಿಗೆಯಲ್ಲೇ ಕಡಿದಾದ ಬೆಟ್ಟಗುಡ್ಡಗಳನ್ನು ಏರಿಳಿಯುತ್ತಾ ಪತ್ರಗಳ ಬಟವಾಡೆ ಮಾಡಿಕೊಂಡು ತನ್ನ ಸುದೀರ್ಘ ವೃತ್ತಿಜೀವನವನ್ನು ಕಳೆದ ಅಂಚೆಯಣ್ಣನ ಕಥೆಯದು. ಸಿನಿಮಾ ಆರಂಭವಾಗುವುದು ಅಂಚೆಯಣ್ಣನ ವೃತ್ತಿಬದುಕಿನ ಕೊನೆಯ ದಿನದಿಂದ. ವಯೋಸಹಜ ಅನಾರೋಗ್ಯದಿಂದಾಗಿ ಅಂಚೆಯಣ್ಣ ತನ್ನ ಉದ್ಯೋಗಕ್ಕೆ ವಿದಾಯ ಹೇಳಬೇಕಾದ ಸಂದರ್ಭ ಬಂದಾಗ ಆ ಉದ್ಯೋಗ ಅವನ ಮಗನಿಗೆ ಸಿಗುತ್ತದೆ. ಮಾಡಬೇಕಾದ ಕೆಲಸದಿಂದ ತೊಡಗಿ ನಡೆಯಬೇಕಾದ ದಾರಿಯವರೆಗೆ ಅವನಿಗೆ ಎಲ್ಲವೂ ಹೊಸದು. ಅದನ್ನು ಪರಿಚಯ ಮಾಡಿಕೊಡುವುದಕ್ಕಾಗಿ ಅಪ್ಪ ಮಗನೊಂದಿಗೆ ಹೊರಟುಬಿಡುತ್ತಾನೆ. ಬಹುಕಾಲದಿಂದ ಅಂಚೆಯಣ್ಣನ ಒಡನಾಡಿಯಾಗಿದ್ದ ನಾಯಿಯೂ ಜತೆಯಾಗುತ್ತದೆ.
ಇಡೀ ಚಲನಚಿತ್ರದಲ್ಲಿ ಇರುವುದು ಅಪ್ಪ-ಮಗನ ಈ ಸಹಪಯಣದ ಕಥನ. ಅಂತಿಂಥ ಪಯಣವಲ್ಲ ಅದು. ಭರ್ತಿ ಇನ್ನೂರ ಅರವತ್ತು ಮೈಲಿಗಳ ನಡಿಗೆ. ಅಷ್ಟನ್ನು ಪೂರೈಸುವುದಕ್ಕೆ ಮೂರು ಹಗಲೂ ಮೂರು ಇರುಳೂ ಬೇಕು. ಗುಡ್ಡಗಾಡು ಪ್ರದೇಶಗಳಲ್ಲಿ ಚದುರಿಕೊಂಡಿರುವ ಸಣ್ಣಪುಟ್ಟ ಹಳ್ಳಿಗಳು, ಎಲ್ಲೋ ಅಡಗಿರುವ ಮನೆಗಳನ್ನು ಹುಡುಕಿ ಹೋಗಿ ಅಂಚೆ ಬಟವಾಡೆ ಮಾಡಿ ಮುಂದುವರಿಯಬೇಕು. ವಿಚಿತ್ರವೆಂದರೆ, ತರುಣ ಮಗ ತನ್ನ ದಿನನಿತ್ಯದ ಕೆಲಸಗಳನ್ನು, ಓಡಾಡಬೇಕಾದ ದಾರಿಯನ್ನು ಗಮನಿಸುವ ಬದಲು ತನ್ನ ತಂದೆಯನ್ನು ಗಮನಿಸಲು ಆರಂಭಿಸುತ್ತಾನೆ. ತಂದೆ ಮಗನನ್ನು ಗಮನಿಸಲು ಆರಂಭಿಸುತ್ತಾನೆ.ಅವರಿಬ್ಬರೂ ಅಷ್ಟೊಂದು ಹತ್ತಿರದಿಂದ ನೋಡಿಕೊಂಡದ್ದು, ಮಾತನಾಡಿದ್ದು, ಒಬ್ಬರನ್ನೊಬ್ಬರು ಗಮನಿಸಿದ್ದು ಎರಡೂವರೆ ದಶಕದಲ್ಲಿ ಅದೇ ಮೊದಲು. ಅಂಚೆಚೀಲ ಬೆನ್ನಿಗೇರಿಸಿಕೊಂಡು ಒಮ್ಮೆ ಹೊರಟರೆ ಅಪ್ಪ ಹಿಂತಿರುಗುವುದು ಒಂದಷ್ಟು ದಿನಗಳಾದಮೇಲೆಯೇ. ಮನೆಯಲ್ಲಿ ಅಮ್ಮ-ಮಗ ಮಾತ್ರ. ಒಂದು ನಡಿಗೆ ಮುಗಿಸಿ ಮನೆಗೆ ಹಿಂತಿರುಗಿದ ಅಪ್ಪ ಮತ್ತೆ ಬೆಳಗಾಗುವ ಹೊತ್ತಿಗೆ ಎದ್ದು ಮುಂದಿನ ಪಯಣ ಆರಂಭಿಸಿರುತ್ತಾನೆ. ಮಗನ ಮನಸ್ಸಿನಲ್ಲಿರುವುದು ಅಪ್ಪನೆಂಬ ಆಕೃತಿ ಮಾತ್ರ. ಇಷ್ಟು ವರ್ಷಗಳಾದ ಮೇಲೆಯೂ ಅದರೊಂದಿಗೆ ಒಂದು ಭಾವಬಂಧ ಬಲಿತೇ ಇಲ್ಲ. ಅದಕ್ಕೆ ಸಣ್ಣ ಅವಕಾಶವೂ ಇರಲಿಲ್ಲ.
ಅಂಥದ್ದೊಂದು ಅವಕಾಶವಾಗಿ ಒಲಿದು ಬಂದದ್ದು ಈ ಸಹಪಯಣದಿಂದ. ಪಯಣದಲ್ಲಿ ಎದುರಾಗುವ ಪ್ರತಿಕ್ಷಣವೂ ತರುಣ ಮಗನಿಗೆ ಹೊಚ್ಚಹೊಸದು. ಅವನಿಗೆ ಪ್ರತಿಯೊಂದರಲ್ಲೂ ವೈಶಿಷ್ಟ್ಯ, ಸ್ವಾರಸ್ಯ, ಕೌತುಕ. ಮುಕ್ಕಾಲು ಪಯಣ ಮುಗಿಯುವ ಹೊತ್ತಿಗೆ ನದಿಯೊಂದು ಎದುರಾಗುತ್ತದೆ. ಸೇತುವೆಯಿಲ್ಲದ ಅದನ್ನು ಹಾಗೆಯೇ ಕಾಲ್ನಡಿಗೆಯಲ್ಲಿ ದಾಟುವುದು ಕ್ರಮ. ಮಗ ನಾಯಿಯೊಂದಿಗೆ ಮೊದಲು ನದಿ ದಾಟಿ ಬೆನ್ನಮೇಲಿನ ಚೀಲವನ್ನು ಇನ್ನೊಂದು ದಡದಲ್ಲಿ ಇಟ್ಟು ಬರುತ್ತಾನೆ. ತಂದೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಇನ್ನೊಮ್ಮೆ ದಾಟುತ್ತಾನೆ. ಅಪ್ಪ-ಮಗ ಇಬ್ಬರಿಗೂ ಅದೊಂದು ವರ್ಣನಾತೀತ ಅನುಭೂತಿ.
“ಯಾವಾಗ ಮಗ ಅಪ್ಪನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಾನೋ ಆಗ ಮಗ ಬೆಳೆದು ದೊಡ್ಡವನಾದನೆಂದು ಅರ್ಥ ಅಂತ ನಮ್ಮೂರಿನ ಹಿರಿಯರು ಹೇಳ್ತಾ ಇದ್ರು. ನಾನು ಎಳೆಯವನಿದ್ದಾಗ ಅಪ್ಪ ನನಗೊಬ್ಬ ಭಾರೀ ಆಕೃತಿ ಆಗಿದ್ದ. ಇವನನ್ನು ನಾನು ಎಂದಾದರೂ ಹೊತ್ತುಕೊಂಡು ಹೋಗುವುದು ಸಾಧ್ಯವಿದೆಯೇ ಅಂತ ಕಳವಳಪಡುತ್ತಿದ್ದೆ...” ನದಿ ದಾಟುತ್ತಲೇ ಮಗ ಜ್ಞಾಪಿಸಿಕೊಳ್ಳುತ್ತಾನೆ.
ಅಪ್ಪನೊಳಗೂ ಇನ್ಯಾವುದೋ ಒಂದು ಭಾವಸ್ಫುರಣ ಉಂಟಾಗಿ ಮನಸ್ಸು ಒದ್ದೆಯಾಗಿರುತ್ತದೆ. ಬಹುಶಃ ಅವನ ಮನಸ್ಸಿನಲ್ಲೂ ಇರುವುದು ಮಗನ ಎದೆಯೊಳಗೆ ಹರಿದಾಡುತ್ತಿರುವ ಬೇಗುದಿಯೇ. ಅವನ ಕಣ್ಣುಗಳಲ್ಲಿರುವುದು ತಂದೆಯಾಗಿ ತಾನು ಮಾಡಬೇಕಾದ್ದನ್ನು ಮಾಡಿದ್ದೇನೆಯೇ ಎಂಬ ಪ್ರಾಮಾಣಿಕ ಪ್ರಶ್ನೆ. ನದಿಯನ್ನು ದಾಟುತ್ತಲೇ ಅಪ್ಪ-ಮಗ ಪರಸ್ಪರ ಮಾತುಗಳೇ ಇಲ್ಲದೆ ತಮ್ಮತಮ್ಮ ನೆಲೆಗಳನ್ನು, ಪಾತ್ರಗಳನ್ನು ಅರ್ಥೈಸಿಕೊಳ್ಳುವ ರೀತಿ ಮಾತ್ರ ಅದ್ಭುತ. ನದಿಯನ್ನು ದಾಟಿ ಮಗನ ಹೆಗಲಿನಿಂದ ಇಳಿದ ತಂದೆಗೆ ಆತನ ಮುಖ ನೋಡುವ ಧೈರ್ಯ ಇಲ್ಲ. ಮಗನಿಗೂ ಅಪ್ಪನ ಕಣ್ಣುಗಳನ್ನು ನೋಡುವ ಧೈರ್ಯ ಇಲ್ಲ. “ಈ ಪೋಸ್ಟ್ ಬ್ಯಾಗಿಗಿಂತಲೂ ನೀನೇ ಬಹಳ ಹಗುರ ಇದ್ದೀಯಾ” ಎಂದು ತಂದೆಯ ಮಾತುತಪ್ಪಿಸಲು ಪ್ರಯತ್ನಿಸುತ್ತಾನೆ.
ಅಪ್ಪನೆಂದರೆ ಹಾಗೆಯೇ. ಅದೊಂದು ವಿಚಿತ್ರ ವ್ಯಕ್ತಿತ್ವ. ಅಂಚೆಯಣ್ಣನ ಎಳೆಯ ಮಗನಿಗೆ ಕಂಡ ಹಾಗೆ ಅದೊಂದು ಭಯಂಕರ ಆಕೃತಿ. ಹೆಚ್ಚೆಂದರೆ ಅದು ಜಗತ್ತಿನ ಎಲ್ಲ ಕೆಲಸಗಳನ್ನೂ ಮಾಡಬಲ್ಲ, ಬೇಕಾದ್ದನ್ನು ತಂದುಕೊಡಬಲ್ಲ ಸೂಪರ್‍ಮ್ಯಾನ್ ಆಗಬಹುದು. ಇನ್ನು ಕೆಲವರಿಗೆ ಅದೊಂದು ಒರಟು ಮನುಷ್ಯ. ಅಮ್ಮನೊಂದಿಗೆ ಇರಬಹುದಾದ ಸಲುಗೆಯನ್ನು ಈ ವ್ಯಕ್ತಿಯೊಂದಿಗೆ ಇಟ್ಟುಕೊಳ್ಳುವುದು ಕಷ್ಟ. ಅಮ್ಮನಲ್ಲಾದರೆ ಏನು ಬೇಕಾದರೂ ಹೇಳಿಕೊಳ್ಳಬಹುದು. ಅಪ್ಪನೊಂದಿಗೆ ಮಾತಾಡುವುದಕ್ಕೆ ಅಮ್ಮನ ವಕಾಲತ್ತು ಬೇಕು. ಅನೇಕ ಸಲ ಅಮ್ಮನಿಗೂ ಬಚಾವಾಗುವುದಕ್ಕೆ ಈ ಅಪ್ಪನೆಂಬ ಗುರಾಣಿಯೇ ಬೇಕು. ‘ಇರು, ಅಪ್ಪ ಬರಲಿ, ಎಲ್ಲ ಹೇಳುತ್ತೇನೆ’ – ಆಕೆ ಹಾಗೆಂದು ಮಕ್ಕಳ ಬಹುಪಾಲು ಉಪಟಳಗಳನ್ನು ನಿಯಂತ್ರಿಸಿಯಾಳು.
ಆದರೆ ಅಪ್ಪನೆಂದರೆ ಅಷ್ಟೇ ಅಲ್ಲವೆಂದು ಮನದಟ್ಟು ಆಗುವ ಹೊತ್ತಿಗೆ ಬದುಕಿನ ಅರ್ಧ ಭಾಗವೇ ಸವೆದುಹೋಗಿರುತ್ತದೋ ಏನೋ! ಅಮ್ಮನೆಂದರೆ ಸುಲಭವಾಗಿ ಅರ್ಥವಾಗುವ ಸುಂದರ ಭಾವಗೀತೆ; ಅಪ್ಪನಾದರೋ ತಕ್ಷಣಕ್ಕೆ ಅರ್ಥವಾಗದ ಸುದೀರ್ಘ ಕಥನಕವನ. ಅಮ್ಮನೆಂದರೆ ಎರಡೂ ದಡಗಳಿಗೆ ತಂಪನ್ನುಣಿಸುತ್ತಾ ಮೆಲ್ಲಮೆಲ್ಲನೆ ಹರಿಯುವ ತಣ್ಣನೆಯ ತೊರೆ; ಅಪ್ಪನಾದರೋ ಆಳ-ಅಗಲ ತಕ್ಷಣಕ್ಕೆ ಅರಿವಿಗೆ ಬಾರದೆ ತನ್ನಷ್ಟಕ್ಕೇ ಹರಿಯುತ್ತಿರುವ ಘನಗಂಭೀರ ವಿಸ್ತಾರ ನದಿ. ಆತನ ಮುಖವನ್ನಷ್ಟೇ ನೋಡಿ ಏನನ್ನಾದರೂ ಅರ್ಥ ಮಾಡಿಕೊಳ್ಳುವುದು ಕಷ್ಟ. ಏಕೆಂದರೆ ಮುಖದಲ್ಲೇ ಆತ ಎಲ್ಲವನ್ನೂ ವ್ಯಕ್ತಪಡಿಸಲಾರ.
‘ನಿನ್ನನ್ನು ಪ್ರೀತಿಸುತ್ತೇನೆ ಎಂದು ತಂದೆ ಹೇಳುವುದಿಲ್ಲ, ಆದರೆ ಅದನ್ನು ಮಾಡುತ್ತಲೇ ಇರುತ್ತಾನೆ’ ಎಂಬ ಮಾತಿದೆ. ಹೌದು, ಆತ ಮಾತಿನಲ್ಲೇ ಎಲ್ಲವನ್ನೂ ಹೇಳಲಾರ. ಹತ್ತಿರದಿಂದ ನೋಡುವವರಿಗೆ ಕಂಡೀತು ಅಷ್ಟೆ. ತನ್ನೊಳಗೆ ತಾನೇ ಕರಗಿ ನೀರಾಗಿ ಮತ್ತೆ ಗಟ್ಟಿಯಾಗುವ ಮೇಣದಂತೆ ಅವನು- ಸಂತೋಷವಾದರೂ, ದುಃಖವಾದರೂ ಹೊರಮುಖದಲ್ಲಿ ಪ್ರಕಟವಾಗುವುದು ತುಸು ಅಪರೂಪವೇ. ಪ್ರಕಟವಾದ ಕ್ಷಣಕ್ಕೆ ಆತ ಅಪ್ಪನಾಗಿ ಉಳಿಯದೆ ಅಮ್ಮನಾಗುತ್ತಾನೆ: ಎಂಬಲ್ಲಿಗೆ ವಾಸ್ತವವಾಗಿ ಅಪ್ಪ-ಅಮ್ಮ ಇಬ್ಬರೂ ಒಂದೇ ಎಂದಾಯಿತು. ಗಂಡಿನೊಳಗೊಂದು ಹೆಣ್ಣು, ಹೆಣ್ಣಿನೊಳಗೊಬ್ಬ ಗಂಡು ಇರುವುದರಿಂದ ಅಲ್ಲವೇ ಪ್ರಕೃತಿ-ಪುರುಷರ ಪರಿಕಲ್ಪನೆ, ಆಕಾಶ-ಭೂಮಿಯ ತತ್ವಗಳು ಸಾಧ್ಯವಾಗಿರುವುದು?
‘ಆತ್ಮಾ ವೈ ಪುತ್ರ ನಾಮಾಸಿ’- ಅಪ್ಪನೇ ಮಗನಾಗಿ ಹುಟ್ಟುತ್ತಾನೆ: ಇದು ಪೂರ್ವಿಕರ ನಂಬಿಕೆ. ತಂದೆಯಾಗುವುದು ಕಷ್ಟವಲ್ಲವಂತೆ, ತಂದೆಯಾಗಿರುವುದು ಕಷ್ಟ. ಎಳೆಯ ಮಗುವಿನಿಂದ ತೊಡಗಿ ವಯೋವೃದ್ಧರವರೆಗೆ ಎಲ್ಲ ಹೆಣ್ಣುಮಕ್ಕಳನ್ನೂ ‘ಅಮ್ಮಾ’ ಎಂದು ಸಂಬೋಧಿಸಬಹುದು. ಆದರೆ ‘ಅಪ್ಪ’ ಎಂದು ಕರೆಯುವುದು ಒಬ್ಬನನ್ನೇ. ಅದಕ್ಕೆ ಆ ಸ್ಥಾನ ಅಷ್ಟು ವಿಶಿಷ್ಟವಾದದ್ದು. ಆ ಸ್ಥಾನಕ್ಕೆ ತಲುಪುವುದು ಬದುಕಿನ ಸಹಜ ಪ್ರಕ್ರಿಯೆ, ಆದರೆ ತಂದೆಯಾಗಿ ಮಾಡಬೇಕಾದ್ದನ್ನು ಆತ್ಮತೃಪ್ತಿ ದಕ್ಕುವಂತೆ ಮಾಡುವುದು ಕೊಂಚ ನಿಧಾನಪ್ರಕ್ರಿಯೆ. ತಂದೆಯಾಗಿ ಯಾವ ಕರ್ತವ್ಯ ನಿರ್ವಹಿಸಬೇಕೋ ಅದನ್ನು ಸರಿಯಾಗಿ ನಿರ್ವಹಿಸದವನು ಮುಂದೆ ತನ್ನ ಮಕ್ಕಳಿಂದಲೂ ಅಂತಹದನ್ನು ನಿರೀಕ್ಷಿಸಲಾಗದು.
ಮಕ್ಕಳು ಹದಿಹರೆಯ ದಾಟಿ ಪ್ರಾಯಪ್ರಬುದ್ಧರಾದ ಮೇಲೆ ಅಪ್ಪ ಅವರನ್ನು ಸ್ನೇಹಿತರಂತೆ ನೋಡಿಕೊಳ್ಳಬೇಕೆಂಬುದೊಂದು ಲೋಕರೂಢಿ. ಅಪ್ಪ ಗೆಳೆಯನೂ ಆಗಿರುವುದರಿಂದಲೇ ಅವನೊಳಗೊಬ್ಬ ಮಾರ್ಗದರ್ಶಕನೂ ಸಲಹೆಗಾರನೂ ಇರುತ್ತಾನೆ. ಅಪ್ಪ ಪ್ರತಿಯೊಬ್ಬನ ಬೆನ್ನಹಿಂದೆ ಇರುವ ಒಬ್ಬ ಫ್ರೆಂಡ್, ಗೈಡ್ ಅಂಡ್ ಫಿಲಾಸಫರ್. ಹಾಗೆಂದು ಆತ ವಾಚಾಳಿಗಳಂತೆ ಎಲ್ಲವನ್ನೂ ಮಾತಿನಲ್ಲೇ ಹೇಳಿರುತ್ತಾನೆ ಎಂದೇನೂ ಇಲ್ಲ. ಅವನ ಮೌನವನ್ನೂ, ಮೌನದೊಳಗಿರುವ ಸೂಚನೆಗಳನ್ನೂ ಅರ್ಥಮಾಡಿಕೊಳ್ಳಬಲ್ಲವರೇ ಜೀವನದಲ್ಲಿ ಯಶಸ್ಸನ್ನು ಕಂಡಾರು. ಅಪ್ಪ ಎಂದರೆ ಅಂತರಂಗದಲ್ಲಿ ಸದಾ ಬೆಳಗುತ್ತಿರುವ ಹೊಂಬೆಳಕು. ಆ ಬೆಳಕು ಒಳಗಿನಿಂದಲೇ ಪ್ರಭೆಯನ್ನು ಹೊಮ್ಮಿಸುವ ಮಿಂಚುಹುಳ ಆಗಿರುವುದರಿಂದಲೇ ನಮ್ಮ ವ್ಯಕ್ತಿತ್ವವನ್ನೂ ಬೆಳಗುತ್ತದೆ, ಭವಿಷ್ಯದ ದಾರಿಯನ್ನೂ ತೋರಿಸುತ್ತದೆ. ಆ ಬೆಳಕು ಮುಗಿಯುವುದೇ ಇಲ್ಲ.
- ಸಿಬಂತಿ ಪದ್ಮನಾಭ ಕೆ. ವಿ.
20 ಮೇ 2022ರ 'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಲೇಖನ
ನೆಟ್ (NET) ಪರೀಕ್ಷೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಪ್ರತೀ ವರ್ಷ ಏರುತ್ತಲೇ ಇದೆ. ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ಸಾಫ್ಟ್ ವೇರ್ ಇಂಜಿನಿಯರುಗಳಂತೆ ಸಂಬಳ ಪಡೆಯುತ್ತಿರುವುದು, ಮತ್ತು ಇಂತಹ ಹುದ್ದೆಗೆ ಆಯ್ಕೆಯಾಗಲು ನೆಟ್ ಪರೀಕ್ಷೆ ಪ್ರಾಥಮಿಕ ಅರ್ಹತೆಯಾಗಿರುವುದೇ ಇದಕ್ಕೆ ಪ್ರಮುಖ ಕಾರಣ. ಇದು ರಾಷ್ಟ್ರೀಯ ಅರ್ಹತಾ ಪರೀಕ್ಷೆ. ಯುಜಿಸಿ ಪರೀಕ್ಷೆ, ನೆಟ್ ಪರೀಕ್ಷೆ ಎಂದೆಲ್ಲ ಪ್ರಸಿದ್ಧಿ. 2018ರವರೆಗೆ ಈ ಪರೀಕ್ಷೆಯನ್ನು ಯುಜಿಸಿ- ಅಂದರೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ನೇರವಾಗಿ ನಡೆಸುತ್ತಿತ್ತು. ಈಗ ಯುಜಿಸಿಯ ಪರವಾಗಿ ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ (NTA) ನಡೆಸುತ್ತಿದೆ. ವಿಜ್ಞಾನ ವಿಷಯಗಳ ಎನ್‍ಇಟಿ ಪರೀಕ್ಷೆಯನ್ನು ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ (CSIR) ನಡೆಸುತ್ತದೆ.ಯುಜಿಸಿ-ಎನ್‍ಇಟಿ ಹಿಂದಿನಿಂದಲೂ ಒಂದು ಪ್ರತಿಷ್ಠಿತ ಪರೀಕ್ಷೆ. ಅದನ್ನು ತೇರ್ಗಡೆಯಾದವರೆಲ್ಲರಿಗೂ ಸರ್ಕಾರಿ ನೇಮಕಾತಿ ಖಾತ್ರಿಯಲ್ಲವಾದರೂ, ತೇರ್ಗಡೆಯಾಗುವುದೇ ಒಂದು ಹೆಮ್ಮೆಯ ಸಂಗತಿ. ಒಮ್ಮೆ ತೇರ್ಗಡೆಯಾದರೆ ಅದು ಜೀವಮಾನದ ಅರ್ಹತೆ - ಅದಕ್ಕೆ expiry date ಇಲ್ಲ; ಅವಕಾಶ ಕೂಡಿ ಬಂದಾಗ ಈ ಅರ್ಹತೆ ಬೆನ್ನಿಗೆ ನಿಲ್ಲುತ್ತದೆ. ಖಾಸಗಿ ಕಾಲೇಜುಗಳೂ ನೆಟ್ ತೇರ್ಗಡೆಯಾದ ಅಭ್ಯರ್ಥಿಗಳಿಗೇ ಮಣೆ ಹಾಕುತ್ತವೆ. ಅತ್ಯುನ್ನತ ಶ್ರೇಣಿಯಲ್ಲಿ ನೆಟ್ ತೇರ್ಗಡೆಯಾದವರು ಪಿಎಚ್‍ಡಿ ಸಂಶೋಧನೆ ಕೈಗೊಳ್ಳುವುದಕ್ಕೆ ಸರ್ಕಾರದಿಂದ ಆಕರ್ಷಕ ಶಿಷ್ಯವೇತನ (JRF) ಪಡೆಯುವುದೂ ನೆಟ್ ಜನಪ್ರಿಯತೆಗೆ ಇನ್ನೊಂದು ಕಾರಣ.
ಕಷ್ಟದ ಪರೀಕ್ಷೆಯೇ?
ಕಷ್ಟವೆನ್ನುವವರಿಗೆ ಕಷ್ಟ, ಸುಲಭವೆನ್ನುವವರಿಗೆ ಸುಲಭ. ಈಜು ಬಲ್ಲವರಿಗೆ ಅದೊಂದು ಆಟ, ನಿಂತು ನೋಡುವವರಿಗೆ ಆತಂಕ. ಆದರೆ ಇದು ಎಂ.ಎ., ಎಂಎಸ್ಸಿ ಪರೀಕ್ಷೆಗಳನ್ನು ಬರೆದಂತೆ ಅಲ್ಲ. ರಾಷ್ಟೀಯ ಅರ್ಹತಾ ಪರೀಕ್ಷೆ. ತೇರ್ಗಡೆಯಾದವರು ದೇಶದ ಯಾವ ಭಾಗದಲ್ಲಾದರೂ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಬಹುದು. ಸ್ನಾತಕೋತ್ತರ ಹಂತದ ಪಠ್ಯಕ್ರಮವೇ ಆದರೂ, ಪರೀಕ್ಷಾ ವಿಧಾನ ಹಾಗೂ ಪ್ರಶ್ನೆಗಳ ಸಂಕೀರ್ಣತೆಯಿಂದಾಗಿ ಗಟ್ಟಿ ಮನಸ್ಸು, ಅಪಾರ ಬದ್ಧತೆ ಹಾಗೂ ಶ್ರದ್ಧೆಯ ತಯಾರಿಯನ್ನು ಅಪೇಕ್ಷಿಸುತ್ತದೆ.
ಯಾರು ಬರೆಯಬಹುದು?
ಸ್ನಾತಕೋತ್ತರ ಪದವೀಧರರು ಅಥವಾ ಅದರ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು ಈ ಪರೀಕ್ಷೆ ಬರೆಯಬಹುದು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇ. 55, ಒಬಿಸಿ/ಎಸ್‍ಸಿ/ಎಸ್‍ಟಿ ಅಭ್ಯರ್ಥಿಗಳು ಶೇ. 50 ಅಂಕ ಪಡೆದಿರಬೇಕು. ಸ್ನಾತಕೋತ್ತರ ಪದವಿ ಅಂತಿಮ ವರ್ಷದಲ್ಲೇ ನೆಟ್ ತೇರ್ಗಡೆಯಾದರೆ, ಪದವಿ ಫಲಿತಾಂಶ ಬಂದಮೇಲಷ್ಟೇ ಅರ್ಹತಾ ಪ್ರಮಾಣಪತ್ರ ದೊರೆಯುತ್ತದೆ.
ನೆಟ್ ಬರೆದು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಪಡೆಯುವುದಕ್ಕೆ ಗರಿಷ್ಠ ವಯೋಮಿತಿ ಇಲ್ಲ. ಆದರೆ ಸಂಶೋಧನಾ ಫೆಲೋಷಿಪ್ (ಜೆಆರ್‍ಎಫ್) ಪಡೆಯಲು ಅರ್ಹರಾಗಬೇಕೆಂದರೆ 30 ವರ್ಷದ ಒಳಗಿನವರಾಗಿರಬೇಕು. ಒಬಿಸಿ/ಎಸ್‍ಸಿ/ಎಸ್‍ಟಿ/ಭಿನ್ನಲಿಂಗಿ ಅಭ್ಯರ್ಥಿಗಳಿಗೆ 35 ವರ್ಷದವರೆಗೆ ಅವಕಾಶವಿದೆ.
ಹೇಗಿರುತ್ತದೆ ನೆಟ್?
ಈಗ ಎನ್‍ಇಟಿ ಪರೀಕ್ಷೆ ಆನ್‍ಲೈನ್ ಮಾದರಿಯಲ್ಲಿ ನಡೆಯುತ್ತದೆ. ಕಲೆ/ವಾಣಿಜ್ಯ/ಸಾಹಿತ್ಯ ವಿಷಯಗಳಲ್ಲಿ ಎರಡು ಪ್ರತ್ಯೇಕ ಪತ್ರಿಕೆಗಳಿದ್ದು ಒಟ್ಟು ಮೂರು ಗಂಟೆಯ ಅವಧಿ ಇರುತ್ತದೆ. ಪ್ರಶ್ನೆಗಳು ಬಹುಆಯ್ಕೆಯ ವಸ್ತುನಿಷ್ಠ ಮಾದರಿಯವು. ಮೊದಲನೇ ಪತ್ರಿಕೆ ಎಲ್ಲ ವಿಷಯಗಳ ಅಭ್ಯರ್ಥಿಗಳಿಗೂ ಸಾಮಾನ್ಯ. ಇದರಲ್ಲಿ ಎರಡು ಅಂಕಗಳ 50 ಪ್ರಶ್ನೆಗಳಿದ್ದು ಅವು ಬೋಧನೆ ಹಾಗೂ ಸಂಶೋಧನ ಕೌಶಲಗಳಿಗೆ ಸಂಬಂಧಪಟ್ಟವು. ಎರಡನೇ ಪತ್ರಿಕೆ ಆಯಾ ಅಭ್ಯರ್ಥಿಗಳ ಸ್ನಾತಕೋತ್ತರ ಪದವಿಯಲ್ಲಿ ಓದಿದ ವಿಷಯಗಳಿಗೆ ಸಂಬಂಧಪಟ್ಟವು; ಉದಾ: ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ವಾಣಿಜ್ಯಶಾಸ್ತ್ರ, ಕನ್ನಡ, ಇಂಗ್ಲಿಷ್, ಇತ್ಯಾದಿ. ಇದರಲ್ಲಿ ತಲಾ ಎರಡು ಅಂಕಗಳ 100 ಪ್ರಶ್ನೆಗಳಿರುತ್ತವೆ. ಎರಡೂ ಪರೀಕ್ಷೆಗಳ ನಡುವೆ ಬ್ರೇಕ್ ಇಲ್ಲ. ಪ್ರಶ್ನೆಗಳ ನಡುವೆ ಆಯ್ಕೆ ಇಲ್ಲ, ನೆಗೆಟಿವ್ ಮಾರ್ಕಿಂಗ್ ಕೂಡ ಇಲ್ಲ.
ವಿಜ್ಞಾನ ವಿಷಯಗಳಲ್ಲಿ ಮೂರು ಗಂಟೆ ಅವಧಿಯ ಒಂದೇ ಪರೀಕ್ಷೆ. ಎರಡು ಪತ್ರಿಕೆಗಳಿಲ್ಲ. 200 ಅಂಕಗಳ ಬಹು ಆಯ್ಕೆಯ ವಸ್ತುನಿಷ್ಠ ಮಾದರಿಯ ಪತ್ರಿಕೆ. ಇದರಲ್ಲಿ ಮೂರು ವಿಭಾಗಗಳಿರುತ್ತವೆ: ಮೊದಲನೇ ಭಾಗ (30 ಅಂಕ) ಎಲ್ಲರಿಗೂ ಸಾಮಾನ್ಯ; ಎರಡನೇ ಭಾಗ (70 ಅಂಕ) ಅವರವರ ಎಂಎಸ್ಸಿ ವಿಷಯಗಳಿಗೆ ಸಂಬಂಧಿಸಿದ್ದು; ಮೂರನೇ ಭಾಗ (100 ಅಂಕ) ಅದೇ ವಿಷಯ, ಕೊಂಚ ಹೆಚ್ಚಿನ ಸಂಕೀರ್ಣತೆ ಹೊಂದಿರುವ ಪ್ರಶ್ನೆಗಳಿರುತ್ತವೆ. ಇಲ್ಲಿ ಪ್ರಶ್ನೆಗಳ ಆಯ್ಕೆಯೂ ಇರುತ್ತದೆ, ನೆಗೆಟಿವ್ ಮಾರ್ಕಿಂಗ್ ಕೂಡ ಇರುತ್ತದೆ.
ತಯಾರಿ ಹೇಗೆ?
ಎನ್‍ಇಟಿ ಪರೀಕ್ಷೆಗೆ ಕನಿಷ್ಠ ಆರು ತಿಂಗಳ ಗಂಭೀರ ತಯಾರಿ ಬೇಕು. ಮಾನವಿಕ ವಿಷಯಗಳ ಪಠ್ಯಕ್ರಮ www.ugcnetonline.in ಜಾಲತಾಣದಲ್ಲಿಯೂ, ವಿಜ್ಞಾನ ವಿಷಯಗಳ ಪಠ್ಯಕ್ರಮ https://csirhrdg.res.in ಜಾಲತಾಣದಲ್ಲಿಯೂ ಲಭ್ಯವಿದೆ. ತಯಾರಿಯ ಮೊದಲು ಪಠ್ಯಕ್ರಮದ ಸಂಪೂರ್ಣ ಪರಿಚಯ ಮಾಡಿಕೊಳ್ಳುವುದು ಅಗತ್ಯ.
ನೆಟ್ ಸಾಮಾನ್ಯ ಪತ್ರಿಕೆಯ ಪಠ್ಯಕ್ರಮದಲ್ಲಿ 10 ಅಧ್ಯಾಯಗಳಿವೆ. ಬೋಧನೆ ಹಾಗೂ ಸಂಶೋಧನೆಯ ಕೌಶಲ, ವಿಷಯ ಗ್ರಹಿಕೆ, ಸಂವಹನ, ಪ್ರಾಥಮಿಕ ಗಣಿತ, ತಾರ್ಕಿಕ ಚಿಂತನೆ, ದತ್ತಾಂಶ ವಿಶ್ಲೇಷಣೆ, ಮಾಹಿತಿ ಸಂವಹನ ತಂತ್ರಜ್ಞಾನ (ICT), ಅಭಿವೃದ್ಧಿ ಮತ್ತು ಪರಿಸರ, ಉನ್ನತ ಶಿಕ್ಷಣ ವ್ಯವಸ್ಥೆ- ಹೀಗೆ ವೈವಿಧ್ಯಮಯ ವಿಷಯಗಳಿರುತ್ತವೆ. ಐಚ್ಛಿಕ ವಿಷಯದ ಪಠ್ಯಕ್ರಮ ಸ್ನಾತಕೋತ್ತರ ಕೋರ್ಸಿಗೆ ಸಮಾನವಾಗಿದ್ದು, ಸಮಗ್ರ ಹಾಗೂ ಆಳವಾದ ಅಧ್ಯಯನ ಅಗತ್ಯ.
ಒಂದು ವೇಳಾಪಟ್ಟಿಯನ್ನು ಹಾಕಿಕೊಂಡು ದಿನದಲ್ಲಿ ಕನಿಷ್ಠ 3-4 ಗಂಟೆಯನ್ನಾದರೂ ಅಭ್ಯಾಸಕ್ಕೆ ಮೀಸಲಿಡುವುದು ಒಳ್ಳೆಯದು. ಪರೀಕ್ಷೆ ವಸ್ತುನಿಷ್ಠ ಮಾದರಿಯದ್ದಾಗಿರುವುದರಿಂದ ಸಣ್ಣಸಣ್ಣ ವಿವರಗಳಿಗೂ ಹೆಚ್ಚಿನ ಗಮನ ಕೊಡುವುದು ಮುಖ್ಯ. ಓದುತ್ತಲೇ ನೋಟ್ಸ್ ಮಾಡಿಕೊಳ್ಳುವುದು ಕೊನೆಯ ಕ್ಷಣದ ರಿವಿಶನ್‍ಗೆ ಬಹಳ ಅಗತ್ಯ. ಈಗ ಮಾರುಕಟ್ಟೆಯಲ್ಲಿ ಎಲ್ಲಾ ವಿಷಯಗಳ ಬಗ್ಗೆ ಸಾಕಷ್ಟು ಪುಸ್ತಕಗಳು ಲಭ್ಯ. ಹತ್ತಾರು ಪುಸ್ತಕಗಳನ್ನು ತಂದು ಗುಡ್ಡೆ ಹಾಕಿ ಗೊಂದಲಕ್ಕೆ ಬೀಳುವುದಕ್ಕಿಂತ ಉತ್ತಮ ಗುಣಮಟ್ಟದ ಒಂದೋ ಎರಡೋ ಪುಸ್ತಕ ಸಾಕು.
ಹಳೆಯ ಪ್ರಶ್ನೆಪತ್ರಿಕೆಗಳ ಅಭ್ಯಾಸ ಅತ್ಯಂತ ಮುಖ್ಯ. ಕನಿಷ್ಠ 7-8 ವರ್ಷಗಳ ಹಿಂದಿನ ಎಲ್ಲ ಪ್ರಶ್ನೆಪತ್ರಿಕೆಗಳನ್ನು ಬಿಡಿಸಲು ಕಲಿತರೆ ಪರೀಕ್ಷೆ ತೇರ್ಗಡೆಯಾಗುವುದರಲ್ಲಿ ಅನುಮಾನವೇ ಇಲ್ಲ. ಆಯಾ ಪರೀಕ್ಷೆಗಳ ವೆಬ್‍ಸೈಟಿನಿಂದ ಅನೇಕ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಹಾಗೆ ನೋಡಿದರೆ ಈ ಪರೀಕ್ಷೆಗೆ ಪ್ರತ್ಯೇಕ ಕೋಚಿಂಗ್ ಅನಿವಾರ್ಯವೇನೂ ಅಲ್ಲ. ಪರಿಶ್ರಮಪಟ್ಟು ಸ್ವಂತ ಅಧ್ಯಯನ ಮಾಡಿದರೆ ಸಾಕು. ಈಗಂತೂ ಇಂಟರ್ನೆಟ್ಟಲ್ಲಿ ಧಾರಾಳ ಅಭ್ಯಾಸ ಸಾಮಗ್ರಿಗಳು, ಮಾಕ್ ಟೆಸ್ಟ್ ಗಳು ದೊರೆಯುತ್ತವೆ. ತೀರಾ ಅರ್ಥವಾಗದ ವಿಷಯಗಳಿದ್ದರೆ ಸ್ನೇಹಿತರ ಅಥವಾ ಅಧ್ಯಾಪಕರ ಬಳಿ ಪಾಠ ಹೇಳಿಸಿಕೊಳ್ಳಬಹುದು. ವಿದ್ಯಾರ್ಥಿಗಳಾಗಿರುವಾಗಲೇ ನೆಟ್ ಬರೆಯುವುದು ತಯಾರಿ ದೃಷ್ಟಿಯಿಂದ ತುಂಬ ಒಳ್ಳೆಯದು.
ಏನಿದು ಜೆಆರ್‍ಎಫ್?
ನೆಟ್ ಪರೀಕ್ಷೆಯನ್ನು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಜೂನಿಯರ್ ರಿಸರ್ಚ್ ಫೆಲೋಷಿಪ್ (JRF) ಎಂಬ ಬಂಪರ್ ಬಹುಮಾನವಿದೆ. ಪಿಎಚ್‍ಡಿ ಮಾಡಲು ಯುಜಿಸಿ ಪ್ರತೀ ತಿಂಗಳೂ ಕೈತುಂಬ ಫೆಲೋಷಿಪ್ ನೀಡುತ್ತದೆ. ಮೊದಲ ಎರಡು ವರ್ಷ ಪ್ರತೀ ತಿಂಗಳೂ ರೂ. 31,000, ಮುಂದಿನ ಮೂರು ವರ್ಷ (SRF) ಪ್ರತೀ ತಿಂಗಳೂ ರೂ. 35,000 ಲಭ್ಯ. ಬೇರೆ ಭತ್ಯೆಗಳೂ ಇವೆ. ಯಾವ ಉದ್ಯೋಗ ಹಿಡಿಯುವ ಆತಂಕವೂ ಇಲ್ಲದೆ ನೆಮ್ಮದಿಯಾಗಿ ಸಂಶೋಧನೆಯಲ್ಲಿ ನಿರತರಾಗಬಹುದು. ಜೆಆರ್‍ಎಫ್ ಬಯಸುವವರು ನೆಟ್ ಅರ್ಜಿ ತುಂಬುವಾಗ ಮಾತ್ರ ‘ಅಸಿಸ್ಟೆಂಟ್ ಪ್ರೊಫೆಸರ್ & ಜೆಆರ್‍ಎಫ್’ ಎಂಬ ಅಂಕಣವನ್ನು ಕಡ್ಡಾಯ ತುಂಬಬೇಕು. ಕೇವಲ ‘ಅಸಿಸ್ಟೆಂಟ್ ಪ್ರೊಫೆಸರ್’ ಎಂದು ತುಂಬಿದರೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರೂ ಫೆಲೋಷಿಪ್‍ಗೆ ಪರಿಗಣಿಸುವುದಿಲ್ಲ.
- ಸಿಬಂತಿ ಪದ್ಮನಾಭ ಕೆ. ವಿ.
ಹೀಗೆ ಮುಂದುವರಿಯುತ್ತದೆ ವಿಶ್ವಕವಿ ರವೀಂದ್ರರ ‘ಪ್ರಾರ್ಥನೆ’ ಎಂಬ ಪ್ರಸಿದ್ಧ ಗೀತೆ (ಕನ್ನಡಾನುವಾದ ಎಂ. ಎನ್. ಕಾಮತ್). ತಮ್ಮ ಸುಂದರ ನಾಡಿನ ಕನಸನ್ನು ಬಿಚ್ಚಿಡುತ್ತಲೇ ಕೊನೆಗೆ, ‘ಅಲ್ಲಿಯಾ ಬಂಧನರಹಿತ ಸುಖದ ಸ್ವರ್ಗದಲಿ, ಪಾಲಿಸೈ ಪಿತ! ನಮ್ಮ ನಾಡೆಚ್ಚರಿಸಲಿ’ ಎಂದು ಮುಕ್ತಾಯಗೊಳಿಸುತ್ತಾರೆ. ಇದು ಅವರಿಗೆ ನೋಬೆಲ್ ಪ್ರಶಸ್ತಿ ತಂದುಕೊಟ್ಟ ‘ಗೀತಾಂಜಲಿ’ಯ ಕವಿತೆಗಳಲ್ಲೊಂದು ಕೂಡ.
ಹಾಗೆ ನೋಡಿದರೆ, ‘ಗೀತಾಂಜಲಿ’ಯಲ್ಲಿರುವ ಎಲ್ಲ ಕವಿತೆಗಳೂ ‘ಪ್ರಾರ್ಥನೆ’ಗಳೇ. ಅವೆಲ್ಲವೂ ರವೀಂದ್ರರು ತಮ್ಮ ಕಲ್ಪನೆಯ ದೇವರೆದುರು ಮಾಡಿಕೊಂಡ ನಿವೇದನೆಗಳೇ. ‘ನಿನ್ನ ಕರುಣೆಗೆಣೆಯಿಲ್ಲ ಪ್ರಭುವೆ/ ನೀನೆನ್ನ ಅನಂತವಾಗಿಸಿರುವೆ/ ಕಾಯವೆಂಬ ಗಡಿಗೆಯ ಖಾಲಿಯಾಗಿಸಿ/ ನವ ಚೈತನ್ಯವ ತುಂಬಿರುವೆ// ಬರಿದೆ ಬಿದ್ದ ಕೊಳಲು ನಾನು/ ಗಿರಿ ಗಹ್ವರಕೆ ಕೊಂಡೊಯ್ವೆ ನೀನು/ ಹೊಸಗಾಳಿಯ ಉಸಿರ ತುಂಬಿ/ ಜೀವರಾಗ ನೀ ನುಡಿಸಿರುವೆ’ ಎಂದು ಒಂದೆಡೆ ಹೇಳಿದರೆ, ಇನ್ನೊಂದೆಡೆ ‘ನಿನ್ನ ಕಾಣ್ಕೆಯಲಿ ನನ್ನ ಕವಿತನದ ಬಿಮ್ಮು ನಾಚಿ ಅಳಿಯಿತು’ ಎನ್ನುತ್ತಾರೆ. ಮತ್ತೊಂದೆಡೆ, ‘ಪ್ರಾರ್ಥಿಸುವೆ ನಿನ್ನ ಪ್ರಭುವೆ/ ಬಡಿಬಡಿದು ಎಚ್ಚರಿಸು/ ನನ್ನೆದೆಯ ಅರಿವಿನ ಬೇರು’ ಎಂದು ಬೇಡಿಕೊಳ್ಳುತ್ತಾರೆ (ಎಲ್ಲವೂ ಸುಧಾ ಅಡುಕಳ ಅವರ ಕನ್ನಡಾನುವಾದ).
ಅವರಿಗೆ ದೇವರೆಂದರೆ ಶುದ್ಧ ನಿರಾಕಾರ ಸ್ವರೂಪಿ; ಅಂತರಂಗವನ್ನು ಬೆಳಗುವ, ಒಳಗನ್ನು ಸದಾ ಎಚ್ಚರದಲ್ಲಿರಿಸುವ ಅಗೋಚರ ಶಕ್ತಿ. ಒಂದು ವೇಳೆ ಭಗವಂತನನ್ನು ಪ್ರತ್ಯಕ್ಷವಾಗಿ ನೋಡುವುದು ಸಾಧ್ಯವಾದರೆ ಅದು ಪ್ರಕೃತಿಯ ಮೂಲಕ ಎಂಬುದು ಅವರು ಕೊನೆಯವರೆಗೂ ಇಟ್ಟುಕೊಂಡಿದ್ದ ನಂಬಿಕೆ. ಅವರ ಕೃತಿಗಳಲ್ಲೆಲ್ಲ ಗಾಢವಾಗಿ ಎದ್ದುಕಾಣುವುದು ಪ್ರಕೃತಿಯೆಡೆಗಿನ ಅನಂತ ಪ್ರೇಮ.
ಗುರುದೇವ, ಕವಿಗುರು, ವಿಶ್ವಕವಿ- ಹೀಗೆಲ್ಲ ಜಗತ್ತಿನಿಂದ ಕರೆಸಿಕೊಂಡ ರವೀಂದ್ರನಾಥ ಟಾಗೋರ್ ಅಪ್ರತಿಮ ಪ್ರತಿಭಾವಂತರು ಮಾತ್ರವಲ್ಲ, ಮಹಾನ್ ದಾರ್ಶನಿಕರು ಕೂಡ. ಅವರ ಕೃತಿಗಳಲ್ಲೆಲ್ಲ ಮತ್ತೆಮತ್ತೆ ಕಾಣುವುದು ಮಾನವೀಯ ಮೌಲ್ಯಗಳ ನಿರಂತರ ಹುಡುಕಾಟ, ಪ್ರಕೃತಿಯೊಂದಿಗೆ ಒಂದಾಗಿ ಬಿಡಬೇಕೆನ್ನುವ ಎಡೆಬಿಡದ ತುಡಿತ. ‘ಪ್ರಕೃತಿಯಿಂದ ದೂರವಾದವನೇ ನಿಜವಾದ ಬಡವ. ಪ್ರಕೃತಿಯೊಂದಿಗೆ ಬಾಳುವುದೆಂದರೆ ದೇವರೊಂದಿಗೆ ಇರುವುದು. ಪ್ರಕೃತಿ ಮಾತ್ರ ಮನುಷ್ಯನ ಭೌತಿಕ ಹಾಗೂ ಮಾನಸಿಕ ಗಾಯಗಳನ್ನು ಗುಣಪಡಿಸಬಲ್ಲುದು’ ಎಂಬುದು ರವೀಂದ್ರರ ಗಟ್ಟಿ ನಂಬಿಕೆಯಾಗಿತ್ತು. ತಮ್ಮ ದಿನಚರಿಯ ಬಹುಭಾಗವನ್ನೂ ಅವರು ಪ್ರಕೃತಿಯ ನಡುವೆಯೇ ಕಳೆಯುತ್ತಿದ್ದವರು. ಗೋಡೆಗಳ ಅವಶ್ಯಕತೆ ಅವರಿಗೆ ಇರಲಿಲ್ಲ. ಗಿಡ, ಮರ, ಬಳ್ಳಿ, ಹೂವು, ತೊರೆ, ಬಿಸಿಲು, ನೆರಳುಗಳ ಮೂಲಕ ತಮ್ಮ ಕಲ್ಪನೆಯ ಲೋಕವನ್ನು ವಿಸ್ತರಿಸಿಕೊಳ್ಳಬಹುದಾದ ಭಾವಜಗತ್ತೊಂದು ಅವರೊಳಗೆ ಸದಾ ಜೀವಂತವಾಗಿತ್ತು.
ಸ್ವತಃ ಔಪಚಾರಿಕ ಶಿಕ್ಷಣವನ್ನು ಪಡೆಯದ ಟಾಗೋರರಿಗೆ ತರಗತಿ ಕೊಠಡಿಗಳ ಪಾಠಪ್ರವಚನಗಳಲ್ಲಿ ವಿಶೇಷವಾದ ಆಸಕ್ತಿಯೂ ಇರಲಿಲ್ಲ. ಅನುಭವಕ್ಕಿಂತ ದೊಡ್ಡ ಗುರುವಿಲ್ಲ, ಪ್ರಕೃತಿಗಿಂತ ದೊಡ್ಡ ಪಾಠಶಾಲೆಯಿಲ್ಲ ಎಂಬುದೇ ಅವರು ಬದುಕಿನಲ್ಲಿ ಕಂಡುಕೊಂಡ ಸತ್ಯ. ಅವರು ಸ್ಥಾಪಿಸಿದ ಶಾಂತಿನಿಕೇತನ ಅಂತಹದೊಂದು ನಂಬಿಕೆಯ ಅನುಷ್ಠಾನದ ಪ್ರಯತ್ನವೂ ಆಗಿತ್ತು. ಅವರು ತರಗತಿ ಕೊಠಡಿಗಳಿಂದಾಚೆ, ಮರಗಿಡಗಳ ಮಧ್ಯೆ ಕುಳಿತೇ ತಮ್ಮ ಶಿಷ್ಯರೊಂದಿಗೆ ಸಂವಾದ ನಡೆಸುತ್ತಿದ್ದರು. ‘ಮಾಹಿತಿಯನ್ನಷ್ಟೇ ಕೊಡುವುದು ಶಿಕ್ಷಣ ಅಲ್ಲ. ಸೃಷ್ಟಿಯೊಂದಿಗೆ ಸೌಹಾರ್ದತೆಯಿಂದ ಬದುಕಲು ಕಲಿಯುವುದೇ ಅತ್ಯುನ್ನತವಾದ ಶಿಕ್ಷಣ’ ಅದು ಅವರ ಕಾಣ್ಕೆ.
ಪರಮ ಧಾರ್ಮಿಕರಾದರೂ, ಗುಡಿ-ವಿಗ್ರಹಗಳಿಂದಾಚೆ ದೇವರ ಇರವನ್ನು ಕಾಣಬಲ್ಲವರಾಗಿದ್ದರು. ದೇವರನ್ನು ಹಾಗೆ ಕಾಣಲು ಸಾಧ್ಯವಾಗಬೇಕು ಎಂಬುದೇ ಅವರ ಒಟ್ಟಾರೆ ಪ್ರತಿಪಾದನೆ ಕೂಡ.
(ಕನ್ನಡಾನುವಾದ: ಸುಧಾ ಅಡುಕಳ)
ಎಂದು ಹೇಳುವಾಗ ರವೀಂದ್ರರಿಗೂ ‘ದುಡಿಮೆಯೇ ದೇವರು’ ಆಗಿತ್ತೆನ್ನುವುದು ಸ್ಪಷ್ಟ. ಗುಡಿಯೊಳಗೆ ದೇವರಿದ್ದಾನೆಯೇ ಎಂಬ ಪ್ರಶ್ನೆಗಿಂತಲೂ ಹೊರಗೆ ದುಡಿಯುವವರ ಕಸುವಲ್ಲಿ ದೇವರಿದ್ದಾನೆ ಎಂಬ ಅರಿವು ಅವರಿಗೆ ಮುಖ್ಯ.
ರವೀಂದ್ರರನ್ನು ಅತ್ಯಂತ ಸೂಕ್ತವಾಗಿ ಏನೆಂದು ಗುರುತಿಸಬಹುದು? ಕವಿ? ಲೇಖಕ? ನಾಟಕಕಾರ? ಸಮಾಜ ಸುಧಾರಕ? ಕಾದಂಬರಿಕಾರ? ತತ್ತ್ವಜ್ಞಾನಿ? ಚಿತ್ರಕಾರ? ಅವರು ಅದೆಲ್ಲವೂ ಆಗಿದ್ದರು. ಒಂದರೊಳಗೆ ಇನ್ನೊಂದು ಬೆಸೆದುಕೊಂಡ ಅಸಾಧಾರಣ ವ್ಯಕ್ತಿತ್ವ ಅವರದ್ದು. ಒಂದರಿಂದ ಇನ್ನೊಂದನ್ನು ಬೇರ್ಪಡಿಸಲಾಗದು. ಅವರ ಗದ್ಯಗಳಲ್ಲಿ ಒಂದು ಕಾವ್ಯವಿದೆ, ಕಾವ್ಯದೊಳಗೊಂದು ದರ್ಶನವಿದೆ. ನಾಟಕ, ಕಾದಂಬರಿ, ಪ್ರಬಂಧ, ಚಿತ್ರ – ಯಾವುದನ್ನು ಎತ್ತಿಕೊಂಡರೂ ಅಲ್ಲೊಂದು ಮಾನವಪ್ರೀತಿಯ ಒರತೆಯಿದೆ.
‘ಮನುಷ್ಯನನ್ನು ಪ್ರೀತಿಸದ ಹೊರತು ನಾವು ಎಂದಿಗೂ ನಿಜವಾದ ದೃಷ್ಟಿಕೋನವನ್ನು ಹೊಂದಲು ಸಾಧ್ಯವಿಲ್ಲ. ನಾಗರಿಕತೆಯನ್ನು ಗೌರವಿಸಬೇಕಿರುವುದು ಅದು ಅಭಿವೃದ್ಧಿಪಡಿಸಿದ ಶಕ್ತಿಯ ಪ್ರಮಾಣದಿಂದಲ್ಲ; ಬದಲಾಗಿ, ಅದು ಎಷ್ಟು ವಿಕಾಸಗೊಂಡಿದೆ ಮತ್ತು ಮಾನವ ಜನಾಂಗದ ಪ್ರೀತಿಗೆ ಎಷ್ಟರಮಟ್ಟಿನ ಅಭಿವ್ಯಕ್ತಿ ನೀಡಿದೆ ಎಂಬುದರ ಮೇಲೆ’ ಎಂಬುದು ವಿಶ್ವಕವಿಯ ಮಾತು.
ವಿಶ್ವಮಾನವತೆಯ ಮಹಾಮಾದರಿಯೊಂದನ್ನು ಕಟ್ಟಿಕೊಟ್ಟದ್ದು ರವೀಂದ್ರರು. ಅವರು ಎಲ್ಲರನ್ನೂ ಪ್ರೀತಿಸಬಲ್ಲವರಾಗಿದ್ದರು. ವಿಶ್ವದ ಶ್ರೇಷ್ಠ ವ್ಯಕ್ತಿತ್ವಗಳೊಂದಿಗೆ ಸಂವಾದ ನಡೆಸಬಲ್ಲವರಾಗಿದ್ದರು. ಗಾಂಧೀಜಿಯವರೊಂದಿಗೆ ಒಂದಷ್ಟು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಅವರು ಪ್ರತಿಪಾದಿಸಿದ ಸತ್ಯ ಮತ್ತು ಅಹಿಂಸೆಯನ್ನು ಸದಾ ಬೆಂಬಲಿಸಿದರು. ವಿಶ್ವವಿಖ್ಯಾತ ವಿಜ್ಞಾನಿ ಐನ್‌ಸ್ಟೀನ್‌ರೊಂದಿಗೆ ಜಗತ್ತನ್ನು ಮುನ್ನಡೆಸುವ ಶಕ್ತಿಯ ಕುರಿತು ಚರ್ಚಿಸಿದರು. ‘ಪಶ್ಚಿಮದ ನಾಗರಿಕತೆ ಇಂಥದೊಂದು ಸಾಹಿತ್ಯ ಕೃತಿಗಾಗಿ [ಗೀತಾಂಜಲಿ] ಬಹುದಿನಗಳಿಂದ ಪ್ರಾರ್ಥಿಸುತ್ತಿತ್ತು’ ಎಂಬ ಪ್ರಶಂಸೆಯನ್ನು ಇಂಗ್ಲೀಷ್‌ನ ಪ್ರಸಿದ್ಧ ಕವಿ ಡಬ್ಲ್ಯು. ಬಿ. ಯೇಟ್ಸ್ ನಿಂದ ಪಡೆದುಕೊಂಡರು. ಭಾರತವನ್ನು ಅಪಾರವಾಗಿ ಪ್ರೀತಿಸಿದರೂ ಅವರಿಗೆ ಪಶ್ಚಿಮದ ಕುರಿತು ಅಗೌರವ ಇರಲಿಲ್ಲ. ಪೂರ್ವ-ಪಶ್ಚಿಮ ಎರಡನ್ನೂ ಸಮನ್ವಯದ ದೃಷ್ಟಿಯಿಂದ ನೋಡಬೇಕು ಎಂಬುದೇ ಅವರ ಪ್ರತಿಪಾದನೆ ಆಗಿತ್ತು. ‘ಎಲ್ಲ ಶ್ರೇಷ್ಠ ಮಾನವೀಯ ಮೌಲ್ಯಗಳಿಗೆ ಒಂದು ಕೌಟುಂಬಿಕ ಬಂಧವಿದೆ. ಈ ಮೌಲ್ಯಗಳು ರಾಷ್ಟ್ರಗಳ ಮಧ್ಯೆ ಪರಸ್ಪರ ಬೆಸೆದುಕೊಳ್ಳಬೇಕು’ ಎಂದಿದ್ದರು ಅವರು.
ಅವರು ಬಡವರಿಗಾಗಿ ಮಿಡಿದರು. ಅಶಕ್ತರಲ್ಲಿ ಸಹಾನುಭೂತಿ ಹೊಂದಿದರು. ಮನುಷ್ಯಪ್ರೀತಿಯ ಶ್ರೇಷ್ಠತೆಯನ್ನು ನಂಬಿದರು. ಕುಲೀನ ಮನೆತನದಿಂದ ಬಂದರೂ ಸರಳವಾಗಿಯೇ ಬದುಕಿದರು. ಭವಿಷ್ಯದ ಬಗ್ಗೆ ಅಪಾರ ಆಶಾವಾದ ಹೊಂದಿದ್ದರು. ಇವುಗಳನ್ನೆಲ್ಲ ತಮ್ಮ ಕವಿತೆ, ನಾಟಕಗಳಲ್ಲಿ ನಿರಂತರ ಅಭಿವ್ಯಕ್ತಿಸಿದರು. ಪುರಾಣ ಪಾತ್ರಗಳನ್ನೆಲ್ಲ ವರ್ತಮಾನದ ಬೆಳಕಿನಲ್ಲಿ ನೋಡುವ ನಮ್ಯತೆಯನ್ನೂ ಆಧುನಿಕ ಮನೋಭಾವವನ್ನೂ ಹೊಂದಿದ್ದರು. ಜಂಜಡಗಳಿಂದ ತುಂಬಿರುವ ಇಂದಿನ ಜಗತ್ತಿಗೆ ರವೀಂದ್ರರು ಹಚ್ಚಿದ ಬೆಳಕು ನೆಮ್ಮದಿಯ ಹಾದಿ ತೋರಬಲ್ಲುದು.
- ಸಿಬಂತಿ ಪದ್ಮನಾಭ ಕೆ. ವಿ.
12-18 ಮಾರ್ಚ್ 2022 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ
ಬದುಕೊಂದು ಅಚ್ಚರಿಗಳ ಮೂಟೆ. ದಿನಾ ಓಡಾಡುವ ಹಾದಿಗಳಲ್ಲೇ ಅಂದುಕೊಂಡಂತೆ ಹೋಗಿ ವಾಪಸ್ ಬರುತ್ತೇವೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ. ಇನ್ನು ಕ್ಷಣಕ್ಷಣ ಬದಲಾಗುವ ಬದುಕಿನಲ್ಲಿ ನಾವಂದುಕೊಂಡಂತೆ ಎಲ್ಲವೂ ನಡೆಯುತ್ತದೆ ಎಂದು ಹೇಳುವುದು ಹೇಗೆ?
ಒಳ್ಳೆಯ ಬಿಸಿಲೆಂದು ಬಕೆಟುಗಟ್ಟಲೆ ಬಟ್ಟೆ ಒಗೆದು ಹರವಿ ಎಲ್ಲೋ ಹೊರಗೆ ಹೋಗಿರುತ್ತೇವೆ; ಎಂದೂ ಇಲ್ಲದ ಮಳೆ ಅಂದೇ ಬರುತ್ತದೆ. ಅಪರೂಪಕ್ಕೊಮ್ಮೆ ಪೂರ್ತಿ ದಿನ ಬಿಡುವು ದೊರೆತಿದೆ, ಒಳ್ಳೆಯ ಅಡುಗೆ ಮಾಡಿಕೊಂಡು ಉಣ್ಣಬೇಕು ಎಂದು ಕನಸು ಕಾಣುತ್ತೇವೆ; ಇಡೀ ದಿನ ಕರೆಂಟೇ ಇರುವುದಿಲ್ಲ. ಕುಟುಂಬ ಸಮೇತ ಪ್ರವಾಸ ಹೋಗಬೇಕೆಂದು ದಿನಗಟ್ಟಲೆ ಸಿದ್ಧತೆ ಮಾಡಿಕೊಂಡು ಕುಳಿತಿರುತ್ತೇವೆ; ಹೊರಡುವ ಮುನ್ನಾದಿನ ಅದ್ಯಾವುದೋ ಅನಾರೋಗ್ಯ ಅಮರಿಕೊಳ್ಳುತ್ತವೆ. ಸಂಜೆಯತನಕವೂ ಹತ್ತಿರದ ಬಂಧುವಿನೊಂದಿಗೋ ಸ್ನೇಹಿತನೊಂದಿಗೋ ಸಂತೋಷವಾಗಿ ಮಾತಾಡಿಕೊಂಡು ಕಾಲ ಕಳೆದಿರುತ್ತೇವೆ; ಬೆಳಗ್ಗೆ ಏಳುವಾಗ ಆತ ಬದುಕಿಲ್ಲ ಎಂಬ ಸುದ್ದಿ ಬರುತ್ತದೆ.ದಿನನಿತ್ಯದ ಜೀವನದಲ್ಲಿ ಎದುರಾಗುವ ಸಣ್ಣಪುಟ್ಟ ಘಟನೆಗಳಿಂದ ತೊಡಗಿ ಮನಸ್ಸು ವಿಹ್ವಲಗೊಳ್ಳುವ ಆಘಾತಗಳವರೆಗೆ ಇಂಥವು ನಡೆಯುತ್ತಲೇ ಇರುತ್ತವೆ. ಆಗೆಲ್ಲ ‘ಬದುಕೆಂದರೆ ಇಷ್ಟೇ ಏನು?’ ಎಂಬ ಪ್ರಶ್ನೆ ಮತ್ತೆಮತ್ತೆ ಕಾಡುತ್ತದೆ. ನಾವಂದುಕೊಂಡಂತೆ ಯಾವುದೂ ನಡೆಯುವುದಿಲ್ಲ ಎಂದ ಮೇಲೆ ಹಾಗಾಗಬೇಕು ಹೀಗಾಗಬೇಕು ಎಂದು ಹಂಬಲ ಕಟ್ಟಿಕೊಳ್ಳುವ, ಏನೇನೋ ಕನಸು ಕಾಣುವ ಅಗತ್ಯವಾದರೂ ಏನು ಎಂದೆನಿಸುತ್ತದೆ. ಅಂತಹ ಸಂದರ್ಭಗಳಲ್ಲೆಲ್ಲ ಗಾಢ ನೈರಾಶ್ಯ ಆವರಿಸಿಕೊಳ್ಳುತ್ತದೆ. ಮನಸ್ಸು ಕೈಕಾಲುಗಳನ್ನು ಒಳಸರಿಸಿಕೊಂಡು ಮುದುಡಿ ಕೂರುತ್ತದೆ.
ಎಲ್ಲರೂ ಇಂತಹದೊಂದು ಮನಸ್ಥಿತಿಗೆ ಬಂದರೆ ಜಗತ್ತು ವರ್ಣಮಯವಾಗುವುದು ಹೇಗೆ? ಜೀವನದಲ್ಲಿ ಉಲ್ಲಾಸ ನಲಿದಾಡುವುದು ಹೇಗೆ? ಬದುಕನ್ನು ಮತ್ತೆ ಉತ್ಸಾಹದ ಹಳಿಗಳ ಮೇಲೆ ಎಳೆದುತರುವುದು ಹೇಗೆ?
ಹೌದು, ಬಹುತೇಕ ನಿರಾಶೆಗಳೆಲ್ಲ ಕ್ಷಣಿಕ. ಕೆಲವು ಒಂದೆರಡು ಗಂಟೆಗಳಲ್ಲಿ, ಮತ್ತೆ ಕೆಲವು ಒಂದೆರಡು ದಿನಗಳಲ್ಲಿ ಹೊರಟುಹೋಗಬಹುದು. ಇನ್ನು ಕೆಲವು ವಾರಗಟ್ಟಲೆ, ತಿಂಗಳುಗಟ್ಟಲೆ ಉಳಿಯಬಹುದು. ಕೆಲವೇ ಕೆಲವು ಬದುಕಿಡೀ ಕಾಡಬಹುದು. ಅಂಥವುಗಳ ಪ್ರಮಾಣ ತೀರಾ ಕಮ್ಮಿ. ಅವುಗಳಿಗೆ ಕಾಲವೇ ಪರಿಹಾರ ಎಂದುಕೊಳ್ಳಬೇಕಷ್ಟೆ. ಆದರೆ ಎಲ್ಲದಕ್ಕೂ ಹಾಗೆಂದು ಭಾವಿಸಿದರೆ ನಮ್ಮ ಪ್ರಯತ್ನ ಏನೂ ಇಲ್ಲ ಎಂಬಂತಾಗುತ್ತದೆ.
ಅನಿರೀಕ್ಷಿತ ಘಟನೆಗಳು ತೀರಾ ಸಾಮಾನ್ಯವಾದ್ದೇ ಇರಲಿ, ಗಂಭೀರವಾದ್ದೇ ಇರಲಿ, ವಾಸ್ತವವನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸಿಕೊಂಡರೆ ಆಗಬಹುದಾದ ನಿರಾಸೆಯನ್ನು ಒಂದಿಷ್ಟಾದರೂ ಕಡಿಮೆ ಮಾಡಿಕೊಳ್ಳಬಹುದು. ಇಂಥದ್ದೊಂದು ನಡೆದುಹೋಗಿದೆ, ಅದನ್ನು ಮತ್ತೆ ಹಿಮ್ಮುಖವಾಗಿಸಲಾಗದು ಎಂಬುದನ್ನು ನಮಗೆ ನಾವೇ ಅರ್ಥಮಾಡಿಸಿಕೊಳ್ಳುವುದು ಮುಖ್ಯ. ಅಪಘಾತ, ಸಾವುಗಳಂತಹ ದೊಡ್ಡ ಪ್ರಮಾಣದ ಆಘಾತಗಳು ಸಂಭವಿಸಿದಾಗ ಇಂತಹ ಮಾತುಗಳನ್ನು ಹೇಳುವುದು ತಕ್ಷಣಕ್ಕೆ ಅರ್ಥಹೀನ ಅನ್ನಿಸಬಹುದು, ಆದರೆ ಅದು ನಿಜ.
ಮನಸ್ಸು ಉತ್ಸಾಹದಿಂದ ಕೂಡಿದ್ದಾಗ ನಡೆಯುವ ಕೆಲವು ಅನಿರೀಕ್ಷಿತಗಳು ದೊಡ್ಡಮಟ್ಟದ್ದಾಗಿದ್ದರೂ ಅವುಗಳನ್ನು ಎದುರಿಸಲು ನಾವು ಹೇಗೋ ಸಿದ್ಧರಾಗುತ್ತೇವೆ. ಮನಸ್ಸು ದುರ್ಬಲವಾಗಿರುವ ಹೊತ್ತು ಸಣ್ಣಪುಟ್ಟ ಏಟು ಸಿಕ್ಕರೂ ನಿರಾಶೆಯ ಸಮುದ್ರದಲ್ಲಿ ಬೀಳುತ್ತೇವೆ. ಸಾಧ್ಯವಾದಷ್ಟು ಮನಸ್ಸು ಉಲ್ಲಾಸದಿಂದ ಕೂಡಿರುವಂತೆ ನೋಡಿಕೊಳ್ಳುವುದೇ ಇದನ್ನು ನಿಭಾಯಿಸುವ ಸುಲಭದ ದಾರಿ. ಒಳ್ಳೆಯ ಪುಸ್ತಕಗಳ ನಿರಂತರ ಓದು, ಉತ್ತಮ ಗೆಳೆಯರ ಒಡನಾಟ, ಧನಾತ್ಮಕ ಚಿಂತನೆಯಿಂದ ಇದು ಸಾಧ್ಯವಾದೀತು.
ಧನಾತ್ಮಕವಾಗಿ ಯೋಚಿಸುವುದರಿಂದ ಪರ್ವತವನ್ನು ಜರುಗಿಸಲಾದೀತೋ ಗೊತ್ತಿಲ್ಲ, ಪರ್ವತದಂತಹ ಸವಾಲುಗಳನ್ನಂತೂ ಅಲುಗಾಡಿಸಬಹುದು. ಅನೇಕ ಸಲ ಬದುಕಿನಲ್ಲಿ ಸಂಭವಿಸುವ ಋಣಾತ್ಮಕವೆನ್ನಿಸುವ ಘಟನೆಗಳು ಪರೋಕ್ಷವಾಗಿ ವರದಾನವೂ ಆಗಬಹುದು. ಆಗುವುದೆಲ್ಲ ಒಳ್ಳೆಯದಕ್ಕೆ ಎಂಬ ಸಕಾರಾತ್ಮಕ ಯೋಚನೆ ಯಾವುದೇ ಘಟನೆಯ ಇನ್ನೊಂದು ಮಗ್ಗುಲನ್ನೂ ನಾವು ಅವಲೋಕಿಸುವಂತೆ ಮಾಡಬಹುದು. ಎಲ್ಲೋ ಅಡಗಿದ್ದ ಛಲವೊಂದು ಛಂಗನೆ ಪುಟಿದೇಳುವಂತೆಯೂ ಆಗಬಹುದು.
ಯಾವುದೋ ಒಂದು ಗುರಿಯನ್ನು ಸಾಧಿಸಲೇಬೇಕೆಂದು ಹೊರಟಿರುತ್ತೇವೆ; ಅನಿರೀಕ್ಷಿತವಾಗಿ ಅದು ಕೈತಪ್ಪಿಹೋದಾಗ ಒಂದು ಕ್ಷಣ ಮನಸ್ಸು ಕುಗ್ಗಬಹುದು. ಆದರೆ ಇನ್ನೊಂದು ರೀತಿಯಲ್ಲಿ ಅದರಿಂದಾಗಿ ನಮಗೆ ಅನುಕೂಲವೂ ಆಗಿರಬಹುದು. ಅದನ್ನು ಅರ್ಥ ಮಾಡಿಕೊಂಡರೆ ಅರ್ಧ ನಿರಾಶೆ ಅಲ್ಲೇ ಕರಗಿಹೋಗುತ್ತದೆ. ಇನ್ನೊಂದು ಮುಖ್ಯವಾದ ಸಂಗತಿಯೆಂದರೆ, ಜೀವನದಲ್ಲಿ ಯಾವುದೇ ಉಪಕ್ರಮಕ್ಕೆ ಹೊರಟಾಗಲೂ ನಮ್ಮಲ್ಲೊಂದು ಪರ್ಯಾಯ ವ್ಯವಸ್ಥೆ ಇರಲೇಬೇಕು. ಪ್ಲಾನ್-ಎ ಯಶಸ್ವಿಯಾಗದಿದ್ದರೆ ತಕ್ಷಣಕ್ಕೆ ಏನು ಮಾಡಬೇಕೆನ್ನುವ ಪ್ಲಾನ್-ಬಿ ಕೂಡ ನಮ್ಮಲ್ಲಿರಬೇಕು. ಸೋಲು ಗೆಲುವು ಎರಡಕ್ಕೂ ಸಿದ್ಧವಾದ ಮನಸ್ಥಿತಿಯೊಂದಿಗೆ ಯೋಜನೆಯನ್ನು ಕೈಗೆತ್ತಿಕೊಂಡಾಗ, ಅಕಸ್ಮಾತ್ ಗೆಲುವು ದೊರೆಯದೆ ಹೋದರೆ ಕುಸಿದುಬೀಳುವಂತಹ ದುರಂತವೇನೂ ಸಂಭವಿಸದು. ಮೆಡಿಕಲ್ ಓದಲೇಬೇಕೆಂದು ಹಗಲು ರಾತ್ರಿ ಪ್ರಯತ್ನಪಡುವ ವಿದ್ಯಾರ್ಥಿಯೂ ಪ್ಲಾನ್-ಬಿ ಒಂದನ್ನು ಇಟ್ಟುಕೊಂಡಿರಲೇಬೇಕು. ಆಗ ಬಯಸಿದ ಯಶಸ್ಸು ಸಿಗದೇ ಹೋದರೂ ತಾನು ಸಾಗಬೇಕಾದ ಹಾದಿಯ ಬಗ್ಗೆ ಸ್ಪಷ್ಟತೆ, ಮನಸ್ಸಿನ ದೃಢತೆ ಇದ್ದೇ ಇರುತ್ತದೆ.
ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಘಟನೆ ದುಃಖ ತರುವುದೇ ಆಗಬೇಕಿಲ್ಲ. ಸಂತೋಷದಾಯಕವೂ ಆಗಿರಬಹುದು. ಆದರೆ ಅದನ್ನು ಸ್ವೀಕರಿಸುವುದಕ್ಕೂ ಒಂದು ಹದಗೊಂಡ ಮನಸ್ಸು ಬೇಕು. ಅತಿಯಾದ ಆಘಾತ, ಅತಿಯಾದ ಸಂತೋಷ ಎರಡರ ಪರಿಣಾಮವೂ ಅಂತಿಮವಾಗಿ ಒಂದೇ ಆಗಿರಬಹುದು. ಜೀವನದ ಸುದೀರ್ಘ ಪಯಣದ ನಂತರ ಯಾರೋ ಗುರುತಿಸಿ ತನಗೊಂದು ಯೋಗ್ಯ ಪ್ರಶಸ್ತಿ ಘೋಷಿಸಿದರು ಎಂಬ ಸಂತೋಷದ ಪರಾಕಾಷ್ಠೆಯಲ್ಲಿ ಕಲಾವಿದರೊಬ್ಬರು ಇತ್ತೀಚೆಗೆ ಇಹಲೋಕ ತ್ಯಜಿಸಿಬಿಟ್ಟರಂತೆ. ದುಃಖವನ್ನು ಸಂಭಾಳಿಸಿಕೊಂಡಂತೆ ಸಂತೋಷದ ಪ್ರವಾಹವನ್ನು ನಿಭಾಯಿಸಿಕೊಳ್ಳುವುದು ಕೂಡ ಮುಖ್ಯ. ಎಷ್ಟಾದರೂ ಪ್ರವಾಹ ಪ್ರವಾಹವೇ ಅಲ್ಲವೇ? ಕೊಚ್ಚಿಕೊಂಡು ಹೋಗುವುದು ಅದರ ಗುಣ.
ದುಃಖೇಷ್ವನುದ್ವಿಗ್ನಮನಾಃ ಸುಖೇಷು ವಿಗತಸ್ಪೃಹಃ|
ವೀತರಾಗಭಯಕೋಧಃ ಸ್ಥಿತಧೀರ್ಮುನಿರುಚ್ಯತೇ||
“ದುಃಖದಾಯಕ ಪ್ರಸಂಗದಲ್ಲಿ ಯಾರ ಮನಸ್ಸು ಉದ್ವಿಗ್ನಗೊಳ್ಳುವುದಿಲ್ಲವೋ, ಸುಖಗಳ ಪ್ರಾಪ್ತಿಯಲ್ಲಿ ಯಾರಿಗೆ ಸರ್ವಥಾ ಇಚ್ಛೆಯಿಲ್ಲವೋ, ಹಾಗೆಯೇ ಯಾರಿಗೆ ಪ್ರೀತಿ, ಭಯ, ಕ್ರೋಧ ಇವು ಇಲ್ಲವಾಗಿವೆಯೋ, ಇಂತಹ ಮುನಿಯೇ ಸ್ಥಿರಬುದ್ಧಿಯವನು” ಎನ್ನುತ್ತಾನೆ ಗೀತಾಚಾರ್ಯ. “ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ” ಎಂದು ಅರ್ಜುನನಿಗೆ ಆತ ಹೇಳಿದ್ದೂ ಇದೇ ಅರ್ಥದಲ್ಲಿ. ಸ್ಥಿತಪ್ರಜ್ಞನೆಂದರೆ ಯಾರು ಎಂಬ ಕೌತುಕ ಪಾರ್ಥನದ್ದು.
ಸ್ಥಿತಪ್ರಜ್ಞನ ಅತಿದೊಡ್ಡ ಲಕ್ಷಣ ತಾಳ್ಮೆ. ಎಂತಹ ಆಘಾತ ಎದುರಾದರೂ ಎರಡು ಕ್ಷಣ ತಾಳ್ಮೆ ತೆಗೆದುಕೊಂಡರೆ ಪರಿಹಾರದ ಸಣ್ಣ ಎಳೆಯೊಂದು ಕಂಡೇ ಕಾಣುತ್ತದೆ. ಈ ಎರಡು ಕ್ಷಣಗಳ ತಾಳ್ಮೆ ನೂರಾರು ಕದನಗಳನ್ನು, ಸಾವಿರಾರು ಸಾವುಗಳನ್ನು ತಪ್ಪಿಸಬಲ್ಲುದು. ಯುದ್ಧವೇ ಆರಂಭವಾಗದಿದ್ದರೆ ಕದನವಿರಾಮ ಘೋಷಿಸುವ ಅಗತ್ಯವೂ ಬಾರದು ಅಲ್ಲವೇ?
- ಸಿಬಂತಿ ಪದ್ಮನಾಭ ಕೆ. ವಿ.