ಭಾನುವಾರ, ನವೆಂಬರ್ 29, 2020

ಶಿಕ್ಷಣದಲ್ಲಿ ಕನ್ನಡ: ಸಾಧ್ಯತೆ, ಸವಾಲು

ನವೆಂಬರ್ 2020ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾದ ಲೇಖನ

(ಇದೇ ವಿಚಾರವನ್ನು 2019ರಲ್ಲಿ ನಡೆದ ಕಡಬ ತಾಲೂಕು ಮೊದಲನೇ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಲಾಗಿತ್ತು).

ಕನ್ನಡವೆಂಬ ಭಾಷೆಯಿಂದಲೇ ಅಸ್ಮಿತೆಯನ್ನು ಪಡೆದುಕೊಂಡಿರುವ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಬಗ್ಗೆ
ಆಂದೋಲನಗಳು ನಡೆಯಬೇಕಾಗಿ ಬಂದಿರುವುದು ಕಾಲದ ವಿಪರ್ಯಾಸವೇ ಇರಬೇಕು. ಕನ್ನಡದ ಅಳಿವು-ಉಳಿವಿನ ಪ್ರಶ್ನೆ ಬಂದಾಗಲೆಲ್ಲ ಶಿಕ್ಷಣದ ವಿಚಾರ ಮುನ್ನೆಲೆಗೆ ಬರುತ್ತದೆ. ಏಕೆಂದರೆ ಒಂದು ಭಾಷೆಯ ವರ್ತಮಾನ ಮತ್ತು ಭವಿಷ್ಯದ ಚರ್ಚೆಗಳಲ್ಲಿ ಶಿಕ್ಷಣದ ಪಾತ್ರ ತುಂಬ ದೊಡ್ಡದು. ಇಲ್ಲಿ ನಾವು ಶಿಕ್ಷಣದಲ್ಲಿ ಕನ್ನಡವನ್ನು ಬಳಸುವ ಸವಾಲು ಹಾಗೂ ಸಾಧ್ಯತೆಗಳನ್ನು ವಿಶ್ಲೇಷಿಸಬೇಕಾಗಿದೆ. ‘ಶಿಕ್ಷಣದಲ್ಲಿ ಕನ್ನಡ’ ಎಂಬ ವಿಚಾರವನ್ನು ಎರಡು ಆಯಾಮಗಳಿಂದ ನೋಡಬಹುದು. ಮೊದಲನೆಯದು, ಭಾಷೆಯಾಗಿ ಕನ್ನಡವನ್ನು ಕಲಿಯುವುದು; ಎರಡನೆಯದು, ಕನ್ನಡ ಮಾಧ್ಯಮದಲ್ಲಿ ಕಲಿಯುವುದು. 

ಕನ್ನಡ ಕಲಿಕೆಯ ಸ್ಥಿತಿಗತಿ:

ಸಮಾಜದ ಒಂದು ಭಾಗ ಕನ್ನಡದಲ್ಲಿ ಉತ್ತಮ ಸಾಹಿತ್ಯ ಕೃತಿಗಳನ್ನು ರಚಿಸುತ್ತಾ ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ತನ್ನ ಕೊಡುಗೆಯನ್ನು ನೀಡುತ್ತಿದ್ದರೆ, ಇನ್ನೊಂದೆಡೆ ಭಾಷೆಯ ಬಗ್ಗೆ ತೀವ್ರ ಅನಾದರ ಹಾಗೂ ಅನಾಸಕ್ತಿಯನ್ನು ಹೊಂದಿರುವ ಮಂದಿಯನ್ನು ಇಂದು ನಾವು ಕಾಣುತ್ತಿದ್ದೇವೆ. ವಿಶ್ವವಿದ್ಯಾನಿಲಯ ಹಂತದಲ್ಲಿ ಶಿಕ್ಷಣ ಪಡೆಯುತ್ತಿರುವವರಲ್ಲೂ ಸಾಕಷ್ಟು ಮಂದಿ ಸ್ವತಂತ್ರವಾದ, ಅರ್ಥಪೂರ್ಣ, ತಪ್ಪಿಲ್ಲದ ಒಂದು ಕನ್ನಡ ವಾಕ್ಯ ಬರೆಯುವ ಸಾಮರ್ಥ್ಯವನ್ನು ಹೊಂದಿಲ್ಲ. ವಿಪರೀತವಾದ ಕಾಗುಣಿತ ತಪ್ಪುಗಳು, ವಾಕ್ಯರಚನೆಯ ದೋಷಗಳು ನಮ್ಮನ್ನು ಕಂಗೆಡಿಸುತ್ತವೆ. ಜ್ಞಾನಸಂಪಾದನೆಯ ವಿಷಯ ಹಾಗಿರಲಿ, ಕಡೇಪಕ್ಷ ತಪ್ಪಿಲ್ಲದೆ ತಮ್ಮ ಮಾತೃಭಾಷೆಯನ್ನು ಬಳಸುವ ಸಾಮರ್ಥ್ಯವನ್ನಾದರೂ ನಮ್ಮ ಯುವಕರು ಏಕೆ ಕರಗತ ಮಾಡಿಕೊಂಡಿಲ್ಲ ಎಂಬ ಆತಂಕ ಸಮಾಜದ ಪ್ರಜ್ಞಾವಂತರನ್ನು ಕಾಡದೆ ಇರದು.

ಇಂತಹ ಪರಿಸ್ಥಿತಿಗೆ ಏನು ಕಾರಣವೆಂದು ಪ್ರಶ್ನೆಮಾಡಿದರೆ, ವಿಶ್ವವಿದ್ಯಾನಿಲಯಗಳು ಕಾಲೇಜುಗಳತ್ತಲೂ, ಕಾಲೇಜುಗಳು ಪ್ರೌಢಶಾಲೆಗಳತ್ತಲೂ, ಪ್ರೌಢಶಾಲೆಗಳು ಪ್ರಾಥಮಿಕ ಶಾಲೆಗಳತ್ತಲೂ ಬೊಟ್ಟು ಮಾಡುವುದು ನಡೆದೇ ಇದೆ. ಅಂದರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಸ್ನಾತಕ ಮತ್ತು ಪದವಿಪೂರ್ವ ಉಪನ್ಯಾಸಕರು ಸರಿಯಾಗಿ ಕನ್ನಡ ಕಲಿಸಿಲ್ಲ ಎಂದು ಟೀಕಿಸುವುದು, ಕಾಲೇಜು ಉಪನ್ಯಾಸಕರು ಪ್ರೌಢಶಾಲೆಗಳಲ್ಲಿ ಸರಿಯಾಗಿ ಕನ್ನಡ ಕಲಿಸಿಲ್ಲ ಎಂದು ದೂರುವುದು, ಅವರು ಪ್ರಾಥಮಿಕ ಶಾಲೆಗಳ ಅಧ್ಯಾಪಕರು ಸರಿಯಾದ ರೀತಿಯಲ್ಲಿ ಪಾಠ ಮಾಡಿಲ್ಲ ಎಂದು ತೆಗಳುವುದು ಸರ್ವೇಸಾಮಾನ್ಯವಾಗಿದೆ. ಸಮಸ್ಯೆಗಳ ವಿಚಾರ ಬಂದಾಗ ಒಬ್ಬರು ಇನ್ನೊಬ್ಬರತ್ತ ಕೈತೋರಿಸುವುದು ಹೊಸದೇನಲ್ಲ. ಆದರೆ ಇದು ಅಷ್ಟಕ್ಕೇ ಬಿಟ್ಟುಬಿಡಬಹುದಾದ ವಿಚಾರ ಅಲ್ಲ. ಏಕೆಂದರೆ ಇದು ಶಿಕ್ಷಣಕ್ಕೆ ಹಾಗೂ ಸಮಾಜದ ಒಟ್ಟಾರೆ ಭವಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೆ.

ಕನ್ನಡದ ಕಲಿಕೆ ಈ ಬಗೆಯ ಕಳವಳಕಾರಿ ಪರಿಸ್ಥಿತಿಯನ್ನು ತಲುಪುವುದಕ್ಕೆ ಯಾರು ಕಾರಣ ಎಂಬ ಚರ್ಚೆಗಿಂತಲೂ, ವಿದ್ಯಾರ್ಥಿಗಳಿಗೆ ಕನ್ನಡವನ್ನು ಸಮರ್ಥವಾಗಿ ಕಲಿಸುವ ಜವಾಬ್ದಾರಿ ಶಿಕ್ಷಣದ ಎಲ್ಲ ಹಂತದಲ್ಲೂ ಇದೆ ಎಂಬುದನ್ನು ಒಪ್ಪಿಕೊಳ್ಳುವುದು ಮುಖ್ಯ. ಭಾಷೆಯನ್ನು ಕಲಿಸುವುದು ಪ್ರಾಥಮಿಕ ಶಾಲಾ ಶಿಕ್ಷಕರ ಜವಾಬ್ದಾರಿಯೆಂದು ಹೇಳಿ ಉಳಿದವರು ಕೈತೊಳೆದುಕೊಳ್ಳುವುದು ಸರಿಯಲ್ಲ. ಆದರೂ ಬುನಾದಿ ಸರಿ ಇರಬೇಕು ಎಂದು ಅಪೇಕ್ಷಿಸುವುದರಲ್ಲಿ ತಪ್ಪಿಲ್ಲ. ಆರಂಭದಲ್ಲೇ ಸರಿಯಾದುದನ್ನು ಹೇಳಿಕೊಡದೇ ಹೋದರೆ ತಪ್ಪಾಗಿರುವುದೇ ಭದ್ರವಾಗುತ್ತದೆ ಮತ್ತು ಅದೇ ಮುಂದುವರಿಯುತ್ತದೆ. ಕಾಲೇಜು ಹಂತದಲ್ಲಿ ಬರೆವಣಿಗೆಯಲ್ಲಿ ಕಾಗುಣಿತ ತಪ್ಪು, ವಾಕ್ಯರಚನೆಯ ದೋಷಗಳನ್ನು ಮಾಡುವ ವಿದ್ಯಾರ್ಥಿಗಳಲ್ಲಿ ಬಹುತೇಕರಿಗೆ ತಾವು ಬರೆಯುತ್ತಿರುವುದು ತಪ್ಪು ಎಂಬುದನ್ನು ಮನದಟ್ಟು ಮಾಡುವುದೇ ದೊಡ್ಡ ಸಾಹಸವೆನಿಸಿದೆ. ‘ನಮಗೆ ಕಲಿಸಿದ್ದೇ ಹೀಗೆ ಸಾರ್’ ಎಂದು ಎಷ್ಟೋ ವಿದ್ಯಾರ್ಥಿಗಳು ಹೇಳುವುದನ್ನು ಕೇಳಿದ್ದೇನೆ. ಈ ಆರಂಭದ ಕಲಿಕೆಯ ದೋಷ ಎಷ್ಟು ತೀವ್ರವೆಂದರೆ ಈ ವಿದ್ಯಾರ್ಥಿಗಳಿಗೆ ಸರಿಯಾದ ಒಂದು ಪಠ್ಯವನ್ನು ನಕಲು ಮಾಡಲೂ ಬರುವುದಿಲ್ಲ. ಕಣ್ಣೆದುರೇ ಇರುವ ಪಠ್ಯವೊಂದನ್ನು ನೋಡಿ ಟಿಪ್ಪಣಿ ಮಾಡಲು ಹೇಳಿದರೂ ಅದರಲ್ಲಿ ಹತ್ತಾರು ತಪ್ಪುಗಳು ನುಸುಳಿರುತ್ತವೆ. ಇದು ಪ್ರಾಥಮಿಕ ಶಾಲೆಯಲ್ಲೇ ಆರಂಭವಾದ ಸಮಸ್ಯೆ ಎಂಬುದು ನಿಸ್ಸಂಶಯ. ಎಂದರೆ, ಪ್ರಾಥಮಿಕ ಶಾಲಾ ಹಂತದಲ್ಲೇ ಉತ್ತಮ ಕನ್ನಡವನ್ನು ಕಲಿಸುವ ಸಮರ್ಥ ಶಿಕ್ಷಕರ ಕೊರತೆ ನಮ್ಮಲ್ಲಿ ಇದೆ ಎಂದಂತಾಯಿತು. ಇದು ಕಡೆಗಣಿಸಲಾಗದ ಒಂದು ಗಂಭೀರ ಸವಾಲೇ ಹೌದು. 

ಇನ್ನೊಂದು ಸೂಕ್ಷ್ಮವಾದ ವಿಚಾರವೆಂದರೆ, ಪ್ರಾಥಮಿಕ ಶಾಲೆಯನ್ನೂ ಒಳಗೊಂಡಂತೆ ಶಿಕ್ಷಣದ ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯ ಸಮಸ್ಯೆ ಇದೆ. ಎಷ್ಟೋ ಮಕ್ಕಳು ನಿಯಮಿತವಾಗಿ ತರಗತಿಗಳಿಗೆ ಹೋಗುವುದೇ ಇಲ್ಲ. ಶಾಲೆಗೆ ದಾಖಲಾಗುವುದು, ಪರೀಕ್ಷೆ ಬರೆಯುವುದು, ಮುಂದಿನ ತರಗತಿಗೆ ಪ್ರವೇಶ ಪಡೆಯುವುದು- ಇಷ್ಟಕ್ಕೆ ಮಾತ್ರ ಪ್ರಾಮುಖ್ಯತೆ ಕೊಡುವ ಸಾವಿರಾರು ಮಕ್ಕಳು (ಮತ್ತು ಅವರ ಪೋಷಕರು) ನಮ್ಮಲ್ಲಿದ್ದಾರೆ. ಇದಕ್ಕೆ ಬಡತನ, ಮಕ್ಕಳೂ ಹೆತ್ತವರೊಂದಿಗೆ ದುಡಿಮೆಯಲ್ಲಿ ಕೈಜೋಡಿಸುವ ಅನಿವಾರ್ಯತೆ ಇತ್ಯಾದಿ ಮಾನವೀಯ ಮುಖವೂ ಇದೆ. ಆದರೆ ವಿದ್ಯಾರ್ಥಿಗಳು ಪ್ರಾಥಮಿಕ ಶಾಲಾ ಹಂತದಲ್ಲೇ ನಿಯಮಿತವಾಗಿ ತರಗತಿಗೆ ಹಾಜರಾಗದೆ ಇದ್ದಾಗ ಅವರಿಗೆ ಉತ್ತಮ ಭಾಷಾ ಕೌಶಲಗಳ ಪಾಠ ದೊರೆಯುವುದು ಕಷ್ಟವೇ. ಇದು ಮುಂದಿನ ಹಂತಗಳಲ್ಲಾದರೂ ಸರಿ ಹೋಗದೆ ಇದ್ದಾಗ ಅವರು ಮುಖ್ಯವಾಹಿನಿಯೊಂದಿಗೆ ಸೇರುವುದೇ ಇಲ್ಲ.

ಭಾಷಾ ಬಳಕೆಯಲ್ಲಿ ಪ್ರಾದೇಶಿಕ ವಿಭಿನ್ನತೆಯ ಇನ್ನೊಂದು ವಿಷಯವನ್ನೂ ಇಲ್ಲಿ ಪ್ರಸ್ತಾಪಿಸಬಹುದು. ಕರ್ನಾಟಕದಲ್ಲಿ ಹಲವು ಕನ್ನಡಗಳಿವೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಾಷಾ ಬಳಕೆ ವ್ಯತ್ಯಾಸವಾಗುತ್ತದೆ, ಆದರೆ ಪಠ್ಯಪುಸ್ತಕ ಒಂದೇ ಇರುತ್ತದೆ. ತಾವು ರೂಢಿಯಲ್ಲಿ ಆಡುವ ಮಾತಿಗೂ, ಪಠ್ಯಪುಸ್ತಕದ ಭಾಷೆಗೂ ವ್ಯತ್ಯಾಸವಿದೆ ಎಂಬುದನ್ನು ಅನೇಕ ವಿದ್ಯಾರ್ಥಿಗಳು ಗಮನಿಸುವುದಿಲ್ಲ. ಭಾಷಾ ವೈವಿಧ್ಯತೆಗಳನ್ನು ಗೌರವಿಸುವುದು, ಒಂದು ಪ್ರಮಾಣಿತ ಭಾಷೆಯನ್ನು ಅಭ್ಯಾಸ ಮಾಡುವುದು ಎರಡೂ ಪ್ರಮುಖ ಸಂಗತಿಗಳೇ. ಇವೆರಡನ್ನೂ ಸಮತೋಲನದಿಂದ ಒಯ್ಯುವುದು ಒಂದು ದೊಡ್ಡ ಸವಾಲೇ. ಪ್ರಾದೇಶಿಕ ವೈವಿಧ್ಯತೆಗಳನ್ನು ಉಳಿಸಿಕೊಳ್ಳುವಷ್ಟೇ ಕುಮಾರವ್ಯಾಸ, ರಾಘವಾಂಕರನ್ನೂ ನಮ್ಮ ವಿದ್ಯಾರ್ಥಿಗಳು ಓದಿ ಆಸ್ವಾದಿಸುವುದು ತುಂಬ ಮುಖ್ಯ ಅಲ್ಲವೇ?

ಇಂಜಿನಿಯರಿಂಗ್‍ನಂತಹ ಕೋರ್ಸುಗಳಲ್ಲಿ ಒಂದು ಭಾಷೆಯಾಗಿ ಕನ್ನಡವನ್ನು ಅಭ್ಯಾಸ ಮಾಡುವುದು ಕಡ್ಡಾಯವಾಗಿದ್ದರೂ, ಬಹುತೇಕ ಕಡೆ ಅದೊಂದು ಕಾಟಾಚಾರವಾಗಿ ಉಳಿದಿರುವುದು ಸುಳ್ಳಲ್ಲ. ಅಲ್ಲಿ ಕನ್ನಡ ಕಲಿಕೆಗೆ ಎಷ್ಟು ಪೂರಕವಾದ ವಾತಾವರಣ ಇದೆ, ಪ್ರಾಧಾನ್ಯತೆ ಇದೆ, ಪರೀಕ್ಷೆಗಳನ್ನು ಎಷ್ಟು ಆಸ್ಥೆಯಿಂದ ಮಾಡುತ್ತಾರೆ ಎಂಬುದೆಲ್ಲವೂ ವಿದ್ಯಾರ್ಥಿಗಳ ಮನಸ್ಥಿತಿಯನ್ನು ನಿರ್ಧರಿಸುತ್ತದೆ.

ಉಳಿದಂತೆ, ಅಂಕಗಳಿಕೆಯ ಓಟಕ್ಕಷ್ಟೇ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಖಾಸಗಿ ಕಾಲೇಜುಗಳೆಂಬ ಕಾರ್ಖಾನೆಗಳಲ್ಲಿ ಭಾಷೆಯ ಬಗ್ಗೆ ತೀವ್ರ ಅನಾದರ ಇದೆ. ಅಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಇತ್ಯಾದಿ ವಿಜ್ಞಾನದ ವಿಷಯಗಳಿಗಷ್ಟೇ ಮನ್ನಣೆ; ಭಾಷೆಯ ಬಗ್ಗೆ ಉಪೇಕ್ಷೆ. ಅವರಿಗೆ ಭಾಷಾ ಶಿಕ್ಷಕರು ‘ಬಿಟ್ಟ ಸ್ಥಳ ತುಂಬುವುದಕ್ಕಷ್ಟೇ’ ಬೇಕು. ಆಡಳಿತ ಮಂಡಳಿಗಳ ಈ ಮನಸ್ಥಿತಿ ಸಹಜವಾಗಿಯೇ ವಿದ್ಯಾರ್ಥಿಗಳ ಮನಸ್ಥಿತಿಯನ್ನೂ ನಿರ್ಧರಿಸುತ್ತದೆ. ತಮಗೆ ‘ಕೋರ್ ಸಬ್ಜೆಕ್ಟ್’ಗಳು ಮಾತ್ರ ಮುಖ್ಯ, ಭಾಷಾ ವಿಷಯಗಳಲ್ಲಿ ತೇರ್ಗಡೆಯಾದರೆ ಸಾಕು ಎಂಬ ಧೋರಣೆಯನ್ನು ಅವರೂ ಬೆಳೆಸಿಕೊಂಡರೆ ಭಾಷಾ ವಿಷಯಗಳ ಅಧ್ಯಾಪಕರ ಗತಿ ದೇವರಿಗೇ ಪ್ರೀತಿ.

ಮಾಧ್ಯಮವಾಗಿ ಕನ್ನಡ

ಕನ್ನಡ ಮಾಧ್ಯಮ ಶಿಕ್ಷಣದ ವಿಷಯವೂ ಮೇಲ್ನೋಟಕ್ಕೆ ಕಾಣುವಷ್ಟು ಸರಳ ಅಲ್ಲ. ಇದಕ್ಕೆ ಕಾನೂನು ಹಾಗೂ ಮನಸ್ಥಿತಿ ಎಂಬ ಎರಡು ಮುಖಗಳಿವೆ. ಕನ್ನಡ ಮಾಧ್ಯಮಕ್ಕೆ ಸಂಬಂಧಿಸಿದ ಕಾನೂನಿನ ಹೋರಾಟಕ್ಕೆ ದಶಕಗಳ ಇತಿಹಾಸ ಇದೆ. 1980ರ ದಶಕದ ಗೋಕಾಕ ವರದಿಯ ಬಳಿಕ ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಹೋರಾಟಗಳು ನಡೆದಿವೆ. ಇವುಗಳ ಫಲವೆಂಬಂತೆ, 4ನೇ ತರಗತಿಯವರೆಗೆ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಿ 1994ರಲ್ಲಿ ರಾಜ್ಯ ಸರ್ಕಾರ ಆದೇಶ ನೀಡಿತು. ಆದರೆ ಇದರ ವಿರುದ್ಧ ಖಾಸಗಿ ಶಾಲೆಗಳು ಸರ್ವೋಚ್ಛ ನ್ಯಾಯಾಲಯದ ಮರೆ ಹೊಕ್ಕವು. ಈ ನಡುವೆ 2006ರಲ್ಲಿ, ಎಲ್ಲ ಕನ್ನಡ ಮಾಧ್ಯಮ ಮತ್ತು ಭಾಷಾ ಅಲ್ಪಸಂಖ್ಯಾತರ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಬೇಕೆಂದು ರಾಜ್ಯ ಸರ್ಕಾರ ಇನ್ನೊಂದು ಆದೇಶ ಹೊರಡಿಸಿತು. 2014ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿ, ‘ಭಾಷಾ ಮಾಧ್ಯಮದ ಆಯ್ಕೆ ಪೋಷಕರ ವಿವೇಚನೆಗೆ ಬಿಟ್ಟದ್ದು, ಸರ್ಕಾರ ಬಲವಂತ ಮಾಡುವಂತಿಲ್ಲ’ ಎನ್ನುವ ಮೂಲಕ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡುವಂತಿಲ್ಲ ಎಂಬ ಒತ್ತಾಯಕ್ಕೆ ಬೆಂಬಲವಾಗಿ ನಿಂತಿತು.

ಅಲ್ಲಿಗೆ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣವನ್ನಾದರೂ ನೀಡಬೇಕೆಂಬ ಚಿಂತನೆಗೆ ಬಲವಾದ ಹಿನ್ನಡೆ ಉಂಟಾಯಿತು. ವಾಸ್ತವವಾಗಿ ಕನ್ನಡ ಮಾಧ್ಯಮದ ವಿಷಯ ಕೇವಲ ಕಾನೂನಿಗೆ ಸಂಬಂಧಿಸಿದ್ದಲ್ಲ. ಅದು ಮನಸ್ಥಿತಿಗೆ ಸಂಬಂಧಿಸಿದ್ದು. ಯಾವ ಮಾಧ್ಯಮವನ್ನೂ ಬಲವಂತವಾಗಿ ಹೇರುವಂತಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿರುವಾಗ ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡುವ ಅವಕಾಶವೂ ಹೆತ್ತವರಿಗಿದೆ ಎಂದಾಯಿತು. ಆ ಅವಕಾಶವನ್ನು ಉಪಯೋಗ ಮಾಡಿಕೊಳ್ಳುವ ಮನಸ್ಥಿತಿ ಎಷ್ಟು ಮಂದಿಗಿದೆ? 

ಯುನೇಸ್ಕೋ ಒಳಗೊಂಡಂತೆ ಎಲ್ಲ ಸ್ತರದ ಸಂಸ್ಥೆಗಳು, ಶಿಕ್ಷಣ ತಜ್ಞರು ಮಾತೃಭಾಷೆಯ ಶಿಕ್ಷಣವನ್ನು ಪ್ರತಿಪಾದಿಸುತ್ತಲೇ ಬಂದಿದ್ದಾರೆ. “ಮಾನಸಿಕ ಬೆಳವಣಿಗೆ ಹಾಗೂ ಚಿಂತನೆಗಳನ್ನು ಬಲಪಡಿಸುವುದಕ್ಕೆ ತಾಯ್ನುಡಿ ಸಹಕಾರಿ. ಇದು ಪರಿಕಲ್ಪನಾತ್ಮಕ ಯೋಚನೆಯನ್ನು ಬೆಳೆಸುತ್ತದೆ” ಎಂದು ಯುನೇಸ್ಕೋ ಹೇಳಿದೆ. ಪೋಷಕರಿಗೆ ಇರುವ ಮೂರು ಬಗೆಯ ತಪ್ಪು ಕಲ್ಪನೆಗಳ ಬಗ್ಗೆ ಅದು ಹೇಳುತ್ತದೆ:

1. ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಅತ್ಯುತ್ತಮ ರೀತಿ ಎಂದರೆ ಇಂಗ್ಲಿಷ್ ಮಾಧ್ಯಮದಲ್ಲೇ ಕಲಿಸುವುದು.

2. ಇಂಗ್ಲಿಷ್ ಕಲಿಕೆಯನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಆರಂಭಿಸಬೇಕು.

3. ಇಂಗ್ಲಿಷ್ ಕಲಿಕೆಗೆ ಮಾತೃಭಾಷೆ ಅಡ್ಡಿಯಾಗುತ್ತದೆ.

ಈ ತಪ್ಪುಕಲ್ಪನೆಯೇ ನಮ್ಮ ಜನರನ್ನು ಇಂಗ್ಲಿಷ್ ಮಾಧ್ಯಮದ ಕುರಿತು ಅತಿಯಾದ ವ್ಯಾಮೋಹ ಹೊಂದುವಂತೆ ಮಾಡಿದೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ಭವಿಷ್ಯ ಇಲ್ಲ, ಉತ್ತಮ ಉದ್ಯೋಗಾವಕಾಶಗಳು ದೊರೆಯುವುದಿಲ್ಲ ಎಂಬ ಯೋಚನೆ ಸಮಾಜದ ಬಹುಪಾಲು ಮಂದಿಯಲ್ಲಿ ಭದ್ರವಾಗಿ ಬೇರೂರಿದೆ. ಆದರೆ ಇದಕ್ಕೆ ಯಾವುದೇ ಆಧಾರ ಇಲ್ಲ ಎಂಬುದನ್ನು ಇನ್ಫೋಸಿಸ್ ಅನ್ನು ಹುಟ್ಟುಹಾಕಿದ ನಾರಾಯಣ ಮೂರ್ತಿ, ಭಾರತರತ್ನ ಸಿ. ಎನ್. ಆರ್. ರಾವ್, ಉದ್ಯಮಿ ಕ್ಯಾ| ಗೋಪಿನಾಥ್ ಮೊದಲಾದ ಗಣ್ಯಾತಿಗಣ್ಯರು ಸಾಬೀತುಪಡಿಸಿದ್ದಾರೆ. ಆದರೆ ಜನರು ಇದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ. ಇದರ ಬೀಜ ಭಾರತಕ್ಕೆ ಇಂಗ್ಲಿಷ್ ಶಿಕ್ಷಣವನ್ನು ತಂದ ಮೆಕಾಲೆಯ ಚಿಂತನೆಯಲ್ಲೇ ಇದೆ. ಇದನ್ನು ಅಳಿಸಿಹಾಕುವುದೋ ಪರಿವರ್ತನೆ ತರುವುದೋ ಅಷ್ಟು ಸುಲಭದ ಕೆಲಸ ಅಲ್ಲ.

ಇಂಗ್ಲಿಷ್ ಮಾತೃಭಾಷೆಯಲ್ಲದ ಯಾವ ದೇಶದಲ್ಲೂ ಶಿಕ್ಷಣದ ಮಾಧ್ಯಮ ಇಂಗ್ಲಿಷ್ ಅಲ್ಲ ಎಂಬುದನ್ನು ನಾವು ಗಮನಿಸಬೇಕು. ಅಲ್ಲಿ ಇಂಗ್ಲಿಷ್ ಶ್ರೇಷ್ಠ, ಅದರಿಂದಲೇ ಜನರ ಉದ್ಧಾರ ಎಂಬ ಮನಸ್ಥಿತಿಯೇ ಇಲ್ಲ. “ಇಂಗ್ಲಿಷ್ ಮಾಧ್ಯಮದ ಶಿಕ್ಷಣವು ಗ್ರಹಿಕೆಯ ಅಭಿವೃದ್ಧಿಯನ್ನು, ವಿಚಾರದ ಖಚಿತತೆಯನ್ನು, ಅಭಿಪ್ರಾಯಗಳ ಸ್ಪಷ್ಟತೆಯನ್ನು ಕುಂಠಿತಗೊಳಿಸುತ್ತದೆ. ವಿಚಾರಗಳ ಶ್ರೀಮಂತ ಪರಂಪರೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮಾತ್ರವಲ್ಲ, ತಮ್ಮನ್ನು ಪರಿಣಾಮಕಾರಿಯಾಗಿ, ಸ್ಪಷ್ಟವಾಗಿ ಮತ್ತು ಸರಳವಾಗಿ ಅಭಿವ್ಯಕ್ತಿಗೊಳಿಸುವುದಕ್ಕೆ ಮಾತೃಭಾಷೆಯೇ ಸಹಕಾರಿ” ಎಂದು ಮಹಾತ್ಮ ಗಾಂಧೀಜಿ ಬಹಳ ಹಿಂದೆಯೇ ಹೇಳಿದ್ದಾರೆ.

ಅನ್ನದ ಭಾಷೆಯಾಗಲಿ ಕನ್ನಡ

ಕನ್ನಡ ಮಾಧ್ಯಮದಲ್ಲಿ ಕಲಿತವರೂ ಒಳ್ಳೆಯ ಉದ್ಯೋಗ ಪಡೆದು, ಸಾಧನೆ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಬಹುದು ಎಂಬುದು ಸಿದ್ಧವಾಗುವವರೆಗೆ ಇಂಗ್ಲಿಷ್ ಮೇಲಿನ ವ್ಯಾಮೋಹ ಕರಗದು, ಕನ್ನಡದ ಮೇಲಿನ ಅಭಿಮಾನ ಗಟ್ಟಿಯಾಗದು. ಕನ್ನಡ ಅನ್ನದ ಭಾಷೆಯಾಗುವುದು ಇಂದಿನ ಅನಿವಾರ್ಯತೆ. ಹಾಗೆಂದು ಇದು ಒಂದೆರಡು ದಿನಗಳಲ್ಲಿ ಆಗುವ ಕೆಲಸ ಅಲ್ಲ.

ಪ್ರಾಥಮಿಕ ಶಾಲೆಯಿಂದಲೇ ಮಕ್ಕಳಲ್ಲಿ ಕನ್ನಡದ ಬಗ್ಗೆ ಪ್ರೀತಿ, ಅಭಿಮಾನ ಬೆಳೆಸುವ ಕೆಲಸ ಆಗಬೇಕು. ಅದನ್ನು ಅಧ್ಯಾಪಕರು, ಹೆತ್ತವರು ಮನಃಪೂರ್ವಕವಾಗಿ ಮಾಡಬೇಕು. ಮನೆಯಲ್ಲೂ, ಸಂಬಂಧಿಕರ ನಡುವೆಯೂ ಮಕ್ಕಳೊಂದಿಗೆ ಇಂಗ್ಲಿಷಿನಲ್ಲಿ ಮಾತನಾಡುವ, ಮಕ್ಕಳೂ ಹಾಗೆಯೇ ವರ್ತಿಸುವುದು ಪ್ರತಿಷ್ಠೆಯ ವಿಚಾರ ಎಂದು ತಿಳಿಯುವ ಪೋಷಕರಿರುವವರೆಗೆ ಈ ಬದಲಾವಣೆ ಆರಂಭವಾಗುವುದೇ ಕಷ್ಟ. ಕಲಿಕೆಯ ಪ್ರತೀ ಹಂತದಲ್ಲೂ ಕನ್ನಡ ಭಾಷೆಯನ್ನು ಉತ್ತಮಪಡಿಸುವ, ಅದರ ಕುರಿತು ಪ್ರೀತಿಯನ್ನು ಬೆಳೆಸುವ ಜವಾಬ್ದಾರಿಯನ್ನು ಎಲ್ಲ ಹಂತದ ಅಧ್ಯಾಪಕರೂ ವಹಿಸಿಕೊಳ್ಳಬೇಕು. ಕನ್ನಡದ ಬಗ್ಗೆ ಕಾಳಜಿ ಮಾಡಬೇಕಾದವರು, ಮಕ್ಕಳಿಗೆ ಕನ್ನಡ ಕಲಿಸಬೇಕಾದವರು ಕನ್ನಡ ಅಧ್ಯಾಪಕರು ಮಾತ್ರ ಎಂಬ ಧೋರಣೆಯೂ ತೊಲಗಬೇಕು. ಶಾಲಾ ಕಾಲೇಜುಗಳಲ್ಲಿ ಭಾಷಾ ಶಿಕ್ಷಕರಿಗೆ ಉಳಿದ ಶಿಕ್ಷಕರಷ್ಟೇ ಪ್ರಾಧಾನ್ಯತೆ ದೊರೆತಾಗ ವಿದ್ಯಾರ್ಥಿಗಳಲ್ಲೂ ಭಾಷೆ ಪ್ರಮುಖವಾದದ್ದು ಎಂಬ ಮನಸ್ಸು ದೃಢವಾಗುತ್ತದೆ.

ಕನ್ನಡವನ್ನು ಅನ್ನದ ಭಾಷೆಯಾಗಿಸುವಲ್ಲಿ ಸರೋಜಿನಿ ಮಹಿಷಿ ವರದಿಯ ಪರಿಣಾಮಕಾರಿ ಜಾರಿಗೆ ಪ್ರಮುಖ ಪಾತ್ರವಿದೆ. ಸರೋಜಿನಿ ಮಹಿಷಿ ವರದಿಯು ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಕೆಲವು ಪ್ರಮುಖ ಸಲಹೆಗಳನ್ನು ನೀಡಿದೆ. ಉದಾಹರಣೆಗೆ, ‘ಎ’ ಗುಂಪಿನ ಉದ್ಯೋಗಗಳಲ್ಲಿ ಶೇ. 65ನ್ನೂ ‘ಬಿ’ ಗುಂಪಿನ ಹುದ್ದೆಗಳಲ್ಲಿ ಶೇ. 80ನ್ನೂ ಸ್ಥಳೀಯರಿಗೆ ಮೀಸಲಿಡಬೇಕು, ‘ಸಿ’ ಗುಂಪಿನ ಹುದ್ದೆಗಳಲ್ಲಿ ಶೇ. 100 ನ್ನೂ ಸ್ಥಳೀಯರಿಗೇ ನೀಡಬೇಕು ಎಂಬ ಶಿಫಾರಸು ಸಮರ್ಪಕವಾಗಿ ಜಾರಿಗೆ ಬಂದಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳ ಉದ್ಯೋಗಾವಕಾಶ ಹೆಚ್ಚಾಗಬಹುದು. ಆದರೆ ನಾವು ಕೇವಲ ಉದ್ಯೋಗಾವಕಾಶಗಳಿಗಾಗಿ ಹಕ್ಕುಮಂಡಿಸಿದರೆ ಸಾಲದು, ಆಧುನಿಕ ಕಾಲ ಬಯಸುವ ಜ್ಞಾನವನ್ನೂ ಕೌಶಲವನ್ನೂ ರೂಢಿಸಿಕೊಳ್ಳುವುದು ಅನಿವಾರ್ಯ. ಕನ್ನಡ ಮಾಧ್ಯಮವನ್ನು ಪ್ರತಿಪಾದಿಸುತ್ತಾ ಹೆಚ್ಚು ಉದ್ಯೋಗಾವಕಾಶಗಳನ್ನು ಅಪೇಕ್ಷಿಸುತ್ತಾ ಆಧುನಿಕ ಕಾಲ ಬಯಸುವ ಜ್ಞಾನ-ಕೌಶಲಗಳನ್ನು ನಮ್ಮ ಮಕ್ಕಳು ರೂಢಿಸಿಕೊಳ್ಳದೇ ಹೋದರೆ ನಮ್ಮ ಪ್ರತಿಪಾದನೆಗಳಲ್ಲಿ ಯಾವ ತಿರುಳೂ ಉಳಿಯುವುದಿಲ್ಲ.

ಕನ್ನಡ ಭಾಷೆಯ ಅಳಿವು-ಉಳಿವು ಕೇವಲ ಕಾನೂನಿನ ಕೆಲಸವೂ ಅಲ್ಲ, ಸರ್ಕಾರದ ಕೆಲಸವೂ ಅಲ್ಲ. ಅದು ಎಲ್ಲರೂ ಸೇರಿ ಮಾಡಬೇಕಾದ ಕೆಲಸ. ಧೋರಣೆಯಲ್ಲಿ ಆಗಬೇಕಾದ ಬದಲಾವಣೆಯ ವಿಚಾರ. ಎಲ್ಲವನ್ನೂ ಸರ್ಕಾರ ಮತ್ತು ಕಾನೂನು ಮಾಡುತ್ತದೆಂದು ನಿರೀಕ್ಷಿಸುತ್ತಾ ಕೂರಲಾಗದು. ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಕಟಿಬದ್ಧವಾಗಿರುವ ಸುಳ್ಯದ ‘ಸ್ನೇಹ’ ಶಿಕ್ಷಣ ಸಂಸ್ಥೆಯಂತಹ ಪ್ರಯತ್ನಗಳು ನಮಗೆ ಸ್ಫೂರ್ತಿಯಾಗಬೇಕು.

- ಸಿಬಂತಿ ಪದ್ಮನಾಭ ಕೆ. ವಿ.

ಭಾನುವಾರ, ನವೆಂಬರ್ 1, 2020

ಮರೆಯಲಾಗದ ಮಹಾನುಭಾವ ಲಾಲ್ ಬಹಾದುರ್ ಶಾಸ್ತ್ರೀಜಿ

 'ಕೋಟೇಶ್ವರ ಮೈತ್ರಿ' ತ್ರೈಮಾಸಿಕದ ಜುಲೈ-ಸೆಪ್ಟೆಂಬರ್ 2020ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಭ್ರಷ್ಟಾಚಾರ, ಸ್ವಜಾತಿಪ್ರೇಮ, ವಶೀಲಿಬಾಜಿ, ಸ್ವಾರ್ಥಪರತೆಗಳಿಂದಲೇ ಕೂಡಿರುವ ಧರಣಿಮಂಡಲ ಮಧ್ಯದಲ್ಲಿ ನಿಂತು ಲಾಲ್ ಬಹಾದುರ್ ಶಾಸ್ತ್ರಿಯವರಂಥ ರಾಜಕಾರಣಿಗಳೂ ನಮ್ಮ ದೇಶದಲ್ಲಿ ಇದ್ದರೇ ಎಂದು ಪ್ರಶ್ನಿಸಿಕೊಂಡರೆ ವಿಸ್ಮಯವೆನಿಸುತ್ತದೆ. ಪಾರದರ್ಶಕ, ಸರಳ, ಪ್ರಾಮಾಣಿಕ ಬದುಕಿನ ಪ್ರತಿರೂಪವಾಗಿದ್ದ ಶಾಸ್ತ್ರಿಯವರು ನಮ್ಮ ದೇಶದ ಪ್ರಧಾನಿ ಆಗಿದ್ದರು ಎಂಬುದೇ ನಾವೆಲ್ಲ ಹೆಮ್ಮೆ ಪಡಬೇಕಾದ ಸಂಗತಿ. 

ಪ್ರಧಾನಿಯಾದ ಬಳಿಕವೂ ಶಾಸ್ತ್ರಿಯವರ ಬಳಿ ಸ್ವಂತದ ಕಾರು ಇರಲಿಲ್ಲವಂತೆ. ತಮ್ಮ ಕುಟುಂಬದ ಒತ್ತಾಯದ ಮೇರೆಗೆ ರೂ. 12,000 ಬೆಲೆಯ ಫಿಯಟ್ ಕಾರೊಂದನ್ನು ಕೊಳ್ಳಲು ಅವರು ನಿರ್ಧರಿಸಿದರು. ಆದರೆ ಅವರ ಬಳಿ ರೂ. 5,000 ಕಡಿಮೆಯಿತ್ತು. ಅದಕ್ಕಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಅರ್ಜಿ ಸಲ್ಲಿಸಿದರು. ತಕ್ಷಣ ಸಾಲವೂ ಮಂಜೂರಾಯಿತು. ಶಾಸ್ತ್ರಿಯವರು ಅಷ್ಟಕ್ಕೆ ಮುಗಿಸದೆ ಬ್ಯಾಂಕ್ ಮ್ಯಾನೇಜರನ್ನು ಕರೆಸಿ 'ಜನಸಾಮಾನ್ಯರ ಸಾಲದ ಅರ್ಜಿಯನ್ನೂ ಇಷ್ಟು ಚುರುಕಾಗಿ ವಿಲೇವಾರಿ ಮಾಡುತ್ತೀರಾ?' ಎಂದು ವಿಚಾರಿಸಿಕೊಂಡರಂತೆ.

ಇನ್ನೊಂದು ಸಂದರ್ಭದಲ್ಲಿ, ಶಾಸ್ತ್ರಿಯವರ ಮಗನಿಗೆ ಉದ್ಯೋಗದಲ್ಲಿ ಭಡ್ತಿ ದೊರೆಯಿತು. ಅದು ಅರ್ಹವಾಗಿ ಬಂದದ್ದಲ್ಲ ಎಂದು ಅವರಿಗೆ ತೋಚಿತಂತೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಮಗನ ಭಡ್ತಿಯನ್ನು ವಾಪಸ್ ಪಡೆಸಿಕೊಂಡರಂತೆ.

ಇದಕ್ಕೂ ಹಿಂದೆ ಶಾಸ್ತ್ರಿಯವರು ಸ್ವಾತಂತ್ರ್ಯ ಚಳುವಳಿಯ ಹಿನ್ನೆಲೆಯಲ್ಲಿ ಜೈಲುವಾಸ ಅನುಭವಿಸುತ್ತಿದ್ದಾಗ, ಅವರ ಪತ್ನಿ ಅವರನ್ನೊಮ್ಮೆ ಭೇಟಿಯಾದರಂತೆ. ತಮಗೆ ಬರುತ್ತಿದ್ದ ರೂ. ೫೦ ಪಿಂಚಣಿಯಲ್ಲಿ ರೂ. 10ನ್ನು ಉಳಿಸುತ್ತಿರುವುದಾಗಿ ಪತ್ನಿ ತಿಳಿಸಿದರಂತೆ. ಓಹೋ, ಅವಶ್ಯಕತೆಗಿಂತ ಹೆಚ್ಚು ಆದಾಯ ಇದೆ ಎಂದ ಶಾಸ್ತ್ರಿಯವರು ಪಿಂಚಣಿ ಕೊಡುತ್ತಿದ್ದ ಲೋಕ ಸೇವಕ ಮಂಡಲದ ಕಾರ್ಯಕರ್ತರಿಗೆ ಮುಂದಿನ ತಿಂಗಳಿನಿಂದ ತಮಗೆ ರೂ. 40 ಮಾತ್ರ ಪಿಂಚಣಿ ಕೊಟ್ಟರೆ ಸಾಕೆಂದು ಕೇಳಿಕೊಂಡರಂತೆ.

ಜನಸಾಮಾನ್ಯರ ಕಷ್ಟಗಳ ಕಡೆಗೆ ಸಾಕಷ್ಟು ಉದಾರಿಗಳಾಗಿದ್ದ ಶಾಸ್ತ್ರೀಜಿ ತಮ್ಮ ಕುಟುಂಬದ ಬಗ್ಗೆ ನಿರ್ದಯಿಗಳೇ ಆಗಿದ್ದರು. ಅದು ಸಾಮಾಜಿಕ ಬದುಕಿನಲ್ಲಿ ಅವರಿಗಿದ್ದ ಎಚ್ಚರ. ಇದೇ ಕಾರಣಕ್ಕೆ ಅವರು ನಮಗೆ ದೊಡ್ಡ ವಿಸ್ಮಯವಾಗಿ ಕಾಣುವುದು. ಅವಕಾಶ ಸಿಕ್ಕಲ್ಲೆಲ್ಲ ತಮ್ಮ ಕುಟುಂಬದವರನ್ನು, ಬಂಧುಬಾಂಧವರನ್ನು, ಸ್ವಜಾತಿಯವರನ್ನು ಕೂರಿಸಿ ಲಾಭಪಡೆಯುವ ಇಂದಿನ ಅನೇಕ ಭ್ರಷ್ಟ ರಾಜಕಾರಣಿಗಳ ನಡುವೆ ಶಾಸ್ತ್ರೀಜಿಯಂತಹವರು ಇದ್ದರೇ ಎಂದು ಮತ್ತೆಮತ್ತೆ ಕೇಳಿಕೊಳ್ಳಬೇಕೆನಿಸುತ್ತದೆ.

ಆರಂಭಿಕ ಜೀವನ:

ಲಾಲ್ ಬಹಾದುರ್ ಶಾಸ್ತ್ರಿಯವರು ಹುಟ್ಟಿದ್ದು 1904 ಅಕ್ಟೋಬರ್ 2ರಂದು. ಇಂದಿನ ಉತ್ತರ ಪ್ರದೇಶದ ಮುಘಲ್‌ಸರಾಯ್ ಅವರ ಜನ್ಮಸ್ಥಳ. ತಂದೆ ಶಾರದಾಪ್ರಸಾದ್ ಶ್ರೀವಾಸ್ತವ, ತಾಯಿ ರಾಮ್‌ದುಲಾರಿ ದೇವಿ. ಒಂದೂವರೆ ವರ್ಷದ ಮಗುವಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡ ಶಾಸ್ತ್ರಿಯವರು ತಮ್ಮ ಬಾಲ್ಯಜೀವನ ಹಾಗೂ ವಿದ್ಯಾಭ್ಯಾಸದ ಅವಧಿಯನ್ನು ತಾಯಿಯ ತವರಿನಲ್ಲಿ ಕಳೆಯಬೇಕಾಯಿತು. 

ಕಷ್ಟದ ಬಾಲ್ಯ ಅವರದ್ದಾಗಿತ್ತು. ಆದರೆ ಪರಮ ಸ್ವಾಭಿಮಾನಿಯೂ ಆಗಿದ್ದರು. ಎಳವೆಯಿಂದಲೇ ಎಲ್ಲ ಜಾತಿಪಂಥಗಳೂ ಸಮಾನ ಎಂಬ ದೃಷ್ಟಿಕೋನ ಅವರಿಗಿತ್ತು. ಅದಕ್ಕೇ ತಮ್ಮ ಹೆಸರಿನೊಂದಿಗಿದ್ದ ’ಶ್ರೀವಾಸ್ತವ’ ಎಂಬ ಪದವನ್ನು ತೆಗೆದುಹಾಕಿದರು. 

ವಾರಾಣಸಿಯ ಹರಿಶ್ಚಂದ್ರ ಹೈಸ್ಕೂಲಿನ ಶಿಕ್ಷಕ ನಿಷ್ಕಾಮೇಶ್ವರ ಪ್ರಸಾದ್ ಮಿಶ್ರಾ ಅವರು ಶಾಸ್ತ್ರಿಯವರ ವಿದ್ಯಾಭ್ಯಾಸದ ಕನಸನ್ನು ಪೋಷಿಸಿದವರು. ಅವರದ್ದೇ ಪ್ರೇರಣೆಯಿಂದ ಸ್ವಾತಂತ್ರ್ಯ ಚಳುವಳಿಯಲ್ಲಿ ಸೇರಿಕೊಂಡರು. ಅದಕ್ಕೆ ಅವರ ಮೇಲಿದ್ದ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ ಹಾಗೂ ಆನಿ ಬೆಸೆಂಟರ ಬರೆಹಗಳ ಪ್ರಭಾವವೂ ಕಾರಣ. ಇನ್ನೇನು 10ನೇ ತರಗತಿ ಪೂರೈಸುವುದಕ್ಕೆ ಮೂರು ತಿಂಗಳಿದ್ದಾಗಲೇ ಅದನ್ನು ಅರ್ಧಕ್ಕೆ ತೊರೆದು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿಬಿಟ್ಟರು.

ಹೋರಾಟದ ಹಾದಿ:

1921ರಲ್ಲಿ ಗಾಂಧೀಜಿ ಹಾಗೂ ಮದನಮೋಹನ ಮಾಳವೀಯರು ವಾರಾಣಸಿಯಲ್ಲಿ ನಡೆಸಿದ ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಿದ್ದೇ ಶಾಸ್ತ್ರಿಯವರ ಬದುಕಿಗೆ ತಿರುವು ನೀಡಿತು. ಆಗಿನ್ನೂ 16ರ ಹರೆಯದಲ್ಲಿದ್ದ ಅವರು ಅಸಹಕಾರ ಚಳುವಳಿಗೆ ಸೇರಿಕೊಂಡರು. ಬ್ರಿಟಿಷ್ ಪೊಲೀಸರು ಅವರನ್ನು ಬಂಧಿಸಿ, ಇನ್ನೂ ಪ್ರಾಯಪ್ರಬುದ್ಧರಾಗಿಲ್ಲವಾದ್ದರಿಂದ ಬಿಡುಗಡೆಗೊಳಿಸಿದರು. ಮುಂದೆ ಜೆ. ಬಿ. ಕೃಪಲಾನಿಯವರ ಪ್ರೇರಣೆಯಿಂದ ಕಾಶಿ ವಿದ್ಯಾಪೀಠದಲ್ಲಿ ವಿದ್ಯಾಭ್ಯಾಸ ಮುಂದುವರಿಸಿ 1925ರಲ್ಲಿ ತತ್ತ್ವಶಾಸ್ತ್ರದಲ್ಲಿ ಪದವಿ ಪಡೆದು 'ಶಾಸ್ತ್ರಿ' (ವಿದ್ವಾಂಸ) ಎನಿಸಿಕೊಂಡರು.

ಲಾಲಾ ಲಜಪತರಾಯರು ಸ್ಥಾಪಿಸಿದ್ದ ಲೋಕ ಸೇವಕ ಮಂಡಲದ ಸಕ್ರಿಯ ಸದಸ್ಯರಾಗಿ ಶಾಸ್ತ್ರಿಯವರು ಹರಿಜನರ ಉದ್ಧಾರಕ್ಕೆ ಅಪಾರವಾಗಿ ಶ್ರಮಿಸಿದರು. 1928ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸಿನ ಪೂರ್ಣಾವಧಿ ಕಾರ್ಯಕರ್ತರಾಗಿ ಸ್ವಾತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡರು. ಎರಡೂವರೆವರ್ಷ ಜೈಲುವಾಸ ಅನುಭವಿಸಿದರು. ಅನೇಕ ಆಯಕಟ್ಟಿನ ಜವಾಬ್ದಾರಿಗಳನ್ನು ನಿರ್ವಹಿಸಿದರು. ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ 1940ರಲ್ಲಿ ಮತ್ತೆ ಒಂದು ವರ್ಷದ ಜೈಲುವಾಸ ಅನುಭವಿಸಿದರು.

ರಾಜಕೀಯ ಬದುಕು:

ಸ್ವಾತಂತ್ರ್ಯಾನಂತರದ ಭಾರತಕ್ಕೆ ಶಾಸ್ತ್ರಿಯವರ ನಾಯಕತ್ವ ಹಾಗೂ ದೂರದೃಷ್ಟಿಯ ಅವಶ್ಯಕತೆ ಇತ್ತು. ಆಗಷ್ಟೇ ದೇಶ ಇಬ್ಭಾಗವಾಗಿತ್ತು. ಅಪಾರ ಸಂಖ್ಯೆಯ ವಲಸಿಗರನ್ನು ನಿಭಾಯಿಸಬೇಕಿತ್ತು. ಇನ್ನೊಂದು ಕಡೆ ಭೀಕರ ಕ್ಷಾಮ ದೇಶವನ್ನು ಅಲುಗಾಡಿಸಿತ್ತು. ಆಹಾರದ ಕೊರತೆಯಿಂದ ಭಾರತ ಕಂಗಾಲಾಗಿತ್ತು. ಇಂತಹ ಸಂಕ್ರಮಣ ಕಾಲದಲ್ಲಿ ಅನೇಕ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ ಶಾಸ್ತ್ರೀಜಿ ದೇಶದ ಅಭಿವೃದ್ಧಿಗೆ ಕೊಟ್ಟ ಕೊಡುಗೆ ಅಪಾರ. 

ನೆಹರೂ ಅವರ ಮಂತ್ರಿಮಂಡಲದಲ್ಲಿ ರೈಲ್ವೇ ಸಚಿವರಾಗಿ (1951-56), ಗೃಹಸಚಿವರಾಗಿ (1961-63), ವಿದೇಶಾಂಗ ವ್ಯವಹಾರಗಳ ಸಚಿವರಾಗಿ (1964) ಅವರು ಸಲ್ಲಿಸಿದ ಸೇವೆ ಚರಿತ್ರೆಯಲ್ಲಿ ದಾಖಲಾಗಿದೆ. ನೆಹರೂ ಅವರ ನಿಧನಾನಂತರ 1964-66ರ ನಡುವೆ ದೇಶದ ಎರಡನೇ ಪ್ರಧಾನಿಯಾಗಿ ಅವರು ತೆಗೆದುಕೊಂಡ ನಿರ್ಧಾರಗಳಂತೂ ಜನತೆ ಹೆಮ್ಮೆಪಡುವಂಥದ್ದು.

ದೇಶದ ಆರ್ಥಿಕತೆ ಎಂದೂ ಮರೆಯದ ಹಸಿರುಕ್ರಾಂತಿ ಮತ್ತು ಶ್ವೇತಕ್ರಾಂತಿಗಳ ಹಿಂದೆ ಶಾಸ್ತ್ರೀಜಿಯವರ ದೂರದರ್ಶಿತ್ವ ಇದೆ. ಗುಜರಾತಿನ ಆನಂದ್‌ನಲ್ಲಿ ವರ್ಗೀಸ್ ಕುರಿಯನ್ ಅವರಿಂದ ಸ್ಥಾಪಿತವಾಗಿದ್ದ ಅಮುಲ್ ಅನ್ನು ಅಪಾರವಾಗಿ ಬೆಂಬಲಿಸಿದರು. ಸಹಕಾರಿ ಮಾದರಿಯಲ್ಲಿ ನಡೆಯುತ್ತಿದ್ದ ಅಮುಲ್‌ನ ಯಶಸ್ಸಿನ ಗುಟ್ಟನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ 1964ರ ಅಕ್ಟೋಬರ್ 31ರಂದು ಆನಂದ್‌ನ ಹಳ್ಳಿಯೊಂದರಲ್ಲಿ ಇಡೀದಿನ ಗ್ರಾಮವಾಸ್ತವ್ಯ ಮಾಡಿ, ಅಮುಲ್‌ನ ಮಾದರಿಯನ್ನು ದೇಶದ ಇತರ ಭಾಗಗಳಲ್ಲೂ ಹೇಗೆ ಅನುಷ್ಠಾನಕ್ಕೆ ತರಬಹುದೆಂದು ವಿಚಾರ ವಿಮರ್ಶೆ ನಡೆಸಿದರು. ಅದರ ಪರಿಣಾಮವಾಗಿಯೇ 1965ರಲ್ಲಿ ಅದೇ ಆನಂದ್‌ನಲ್ಲಿ ರಾಷ್ಟ್ರೀಯ ಹೈನುಗಾರಿಕಾ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದರು. ಗ್ರಾಮವಾಸ್ತವ್ಯದ ಪರಿಕಲ್ಪನೆಯನ್ನು ಅರ್ಧಶತಮಾನದ ಹಿಂದೆ ಯೋಚಿಸಿ ಜಾರಿಗೆ ತಂದವರು ಶಾಸ್ತ್ರೀಜಿ. ಇದಕ್ಕೂ ಮುನ್ನ ಅವರು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾವನ್ನು ಸ್ಥಾಪಿಸಿದ್ದರು.

ದೇಶದ ಆಹಾರದ ಕೊರತೆ ನೀಗಿಸಲು ಹಸಿರುಕ್ರಾಂತಿಯೊಂದೇ ಪರಿಹಾರ ಎಂದು ಚಿಂತಿಸಿದ ಶಾಸ್ತ್ರೀಯವರು ದೆಹಲಿಯ ತಮ್ಮ ಅಧಿಕೃತ ನಿವಾಸದ ಜಮೀನಿನಲ್ಲಿ ತಾವೇ ಉತ್ತು ರೈತರಲ್ಲಿ ಪ್ರೇರಣೆ ತುಂಬಿದರು. ಅಧಿಕ ಇಳುವರಿ ಕೊಡುವ ಗೋಧಿಯನ್ನು ಪರಿಚಯಿಸಿ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶಗಳಲ್ಲಿ ಅಧಿಕ ಆಹಾರೋತ್ಪಾದನೆಯ ಕನಸನ್ನು ನನಸಾಗಿಸಿದರು. ಅದೇ ಹಸಿರುಕ್ರಾಂತಿ ಎನಿಸಿಕೊಂಡಿತು. ದೇಶದ ಎಲ್ಲ ಜನರೂ ವಾರದ ಒಂದು ಹೊತ್ತು ಊಟ ಬಿಡುವಂತೆ ಕರೆನೀಡಿದ ಶಾಸ್ತ್ರೀಜಿ ಅದನ್ನು ತಾವೇ ಮೊದಲು ಆಚರಿಸಿ ತೋರಿಸಿದರು. ಇಂದಿಗೂ ಶಾಸ್ತ್ರಿಯವರ ಸೋಮವಾರ ರಾತ್ರಿಯ ಉಪವಾಸ 'ಶಾಸ್ತ್ರಿ ವ್ರತ' ಎಂದೇ ಜನಜನಿತವಾಗಿದೆ.

ಯುದ್ಧ ಮತ್ತು ರಾಜನೀತಿ:

ನೆಹರೂ ಅವರ ಅಲಿಪ್ತ ನೀತಿಯನ್ನೇ ಶಾಸ್ತ್ರಿಯವರು ಅನುಸರಿಸಿದರೂ ದೇಶಕ್ಕೆ ಕಂಟಕ ಒದಗಿದಾಗ ಎದೆಸೆಟೆಸಿ ನಿಂತರು. 1965ರಲ್ಲಿ ಪಾಕ್ ಅನ್ನು ಸಮರ್ಥವಾಗಿ ಎದುರಿಸಿ ದೇಶದ ಸಾರ್ವಭೌಮತೆಯನ್ನು ಎತ್ತಿಹಿಡಿದರು. ಸೋವಿಯತ್ ಒಕ್ಕೂಟದೊಂದಿಗೆ ಉತ್ತಮ ಸಂಬಂಧ ಹೊಂದುವುದು ಭಾರತಕ್ಕೆ ಅವಶ್ಯಕ ಎಂಬುದನ್ನು ಮನಗಂಡಿದ್ದರು. ಅನೇಕ ದೇಶಗಳಿಗೆ ಭೇಟಿ ನೀಡಿ ಭಾರತದ ಅಂತರ ರಾಷ್ಟ್ರೀಯ ಸಂಬಂಧಗಳನ್ನು ಗಟ್ಟಿಗೊಳಿಸಿದ್ದರು.

'ಜೈ ಜವಾನ್ ಜೈ ಕಿಸಾನ್' ಎಂಬ ಅವರ ಘೋಷಣೆ ಸೈನಿಕರಲ್ಲೂ ರೈತರಲ್ಲೂ ಅಪಾರ ಹುರುಪನ್ನು ತುಂಬಿತು. ಇಂದಿಗೂ ಅವರ ಘೋಷಣೆ ತುಂಬ ಜನಪ್ರಿಯ. ದೇಶದ ರಕ್ಷಣೆಗೂ, ಜನರ ಆಹಾರದ ಅವಶ್ಯಕತೆಗೂ ಅವರು ಎಷ್ಟು ಮಹತ್ವ ನೀಡಿದ್ದರು ಎಂಬುದು ಇದರಿಂದ ಗೊತ್ತಾಗುತ್ತದೆ.

ನಿಗೂಢ ಸಾವು:

ತಮ್ಮ ಬದುಕನ್ನೆಲ್ಲ ಶುದ್ಧಚಾರಿತ್ರ್ಯದಿಂದ ಯಾವುದೇ ವಾದವಿವಾದಗಳಿಗೆ ಎಡೆಮಾಡಿಕೊಡದಂತೆ ಕಳೆದ ಶಾಸ್ತ್ರೀಜಿಯವರು ತಮ್ಮ ಸಾವಿನಲ್ಲಿ ಮಾತ್ರ ನಿಗೂಢತೆಯನ್ನು ಉಳಿಸಿಹೋದದ್ದು ಮಾತ್ರ ದೇಶ ಎಂದೂ ಮರೆಯದ ಒಂದು ಘಟನೆ.

ಪಾಕ್‌ನೊಂದಿಗಿನ ಯುದ್ಧವನ್ನು ಅಧಿಕೃತವಾಗಿ ನಿಲ್ಲಿಸುವ ಸಂಬಂಧ ಒಪ್ಪಂದವೊಂದಕ್ಕೆ ಸಹಿ ಮಾಡಲು ಅವರು ತಾಷ್ಕೆಂಟ್‌ಗೆ ತೆರಳಿದ್ದರು. ರಷ್ಯಾದ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದ ಬಳಿಕ ಪಾಕಿಸ್ತಾನದ ಪ್ರಧಾನಿ ಅಯ್ಯೂಬ್ ಖಾನ್ ಅವರೊಂದಿಗೆ 'ತಾಷ್ಕೆಂಟ್ ಒಪ್ಪಂದ'ಕ್ಕೆ 1966ರ ಜನವರಿ 11ರಂದು ಸಹಿಯನ್ನೂ ಮಾಡಿದರು. ಆದರೆ ಅದಾದ ಕೆಲವೇ ಗಂಟೆಗಳಲ್ಲಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದರೆಂಬ ವಾರ್ತೆ ಭಾರತಕ್ಕೆ ಅಪ್ಪಳಿಸಿತು.

ಈ ಘಟನೆ ಮಾತ್ರ ಇಂದಿಗೂ ವಿವಾದದಿಂದ ಹೊರತಾಗಿಲ್ಲ. ಅವರ ಸಾವಿನ ಸುದ್ದಿ ಬಂದ ಬೆನ್ನಲ್ಲೇ ಅವರಿಗೆ ವಿಷಪ್ರಾಶನವಾಗಿತ್ತು ಎಂಬ ಗುಮಾನಿಯೂ ದಟ್ಟವಾಗಿ ಹಬ್ಬಿಕೊಂಡಿತ್ತು. ಅವರಿಗೆ ಹೃದಯದ ಕಾಯಿಲೆ ಮೊದಲೇ ಇತ್ತು, ಅದಕ್ಕೂ ಮೊದಲು ಎರಡು ಬಾರಿ ಹೃದಯಾಘಾತವಾಗಿತ್ತು, ಅವರು ಹೃದಯಾಘಾತದಿಂದಲೇ ಸಾವನ್ನಪಿದರು ಎಂದು ಸಾಕಷ್ಟು ಮಂದಿ ಹೇಳಿದ್ದರೂ, ಸ್ವತಃ ಅವರ ಕುಟುಂಬದ ಮಂದಿಯೇ ಇಂದಿಗೂ ಈ ವಾದವನ್ನು ಒಪ್ಪಿಕೊಂಡಿಲ್ಲ.

ಪ್ರಧಾನಿಯೊಬ್ಬರ ಅನಿರೀಕ್ಷಿತ ಸಾವಿನ ಕುರಿತು ಸಮರ್ಪಕವಾದ ತನಿಖೆಯಾಗಿಲ್ಲ ಎಂಬ ಆರೋಪ ಇಂದಿಗೂ ಉಳಿದುಕೊಂಡಿದೆ. ಶಾಸ್ತ್ರಿಯವರ ಮಾಧ್ಯಮ ಸಲಹೆಗಾರರಾಗಿ ಅವರ ಜೊತೆಗೆ ತಾಷ್ಕೆಂಟಿನಲ್ಲಿದ್ದ ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಅವರು ಶಾಸ್ತ್ರಿಯವರ ಸಾವಿನ ಕುರಿತು ಅನುಮಾನ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದರೂ, ಶಾಸ್ತ್ರಿಯವರ ಪತ್ನಿ ಲಲಿತಾಶಾಸ್ತ್ರಿಯವರ ಸಂದೇಹಕ್ಕೆ ಸೂಕ್ತ ಉತ್ತರ ದೊರೆತಿರಲಿಲ್ಲ ಎಂಬುದನ್ನೂ ಅವರು ಹೇಳಿಕೊಂಡಿದ್ದಾರೆ. ಶಾಸ್ತ್ರಿಯವರ ದೇಹವನ್ನು ಭಾರತಕ್ಕೆ ತಂದಾಗ ಅದು ನೀಲಿಬಣ್ಣಕ್ಕೆ ತಿರುಗಿದ್ದೇಕೆ ಎಂಬ ಲಲಿತಾಶಾಸ್ತ್ರಿಯವರ ಪ್ರಶ್ನೆಗೆ ಯಾರೂ ಸರಿಯಾದ ಉತ್ತರ ನೀಡಿರಲಿಲ್ಲ.

ವಿಚಿತ್ರವೆಂದರೆ ಒಬ್ಬ ಪ್ರಧಾನಿ ನಿಧನರಾದರೂ ಅವರ ದೇಹದ ಮರಣೋತ್ತರ ಪರೀಕ್ಷೆ ನಡೆದಿಲ್ಲ!  ತಾಷ್ಕೆಂಟಿನಲ್ಲಿ ಅವರ ದೇಹದ ಮರಣೋತ್ತರ ಪರೀಕ್ಷೆ ನಡೆಸಲಿಲ್ಲ. ಭಾರತಕ್ಕೆ ತಂದ ಮೇಲಾದರೂ ನಡೆಯಿತೇ ಎಂಬ ಬಗ್ಗೆ ಈಗಲೂ ಯಾವುದೇ ಸ್ಪಷ್ಟತೆಯಿಲ್ಲ. ಶಾಸ್ತ್ರೀಜಿಯರ ಮರಣಕ್ಕೆ ಸಂಬಂಧಿಸಿದ ಯಾವುದೇ ಕಡತಗಳು ತಮ್ಮಲ್ಲಿಲ್ಲ ಎಂದು ದೆಹಲಿ ಪೊಲೀಸರು ಕೆಲವೇ ವರ್ಷಗಳ ಹಿಂದೆ ಒಂದು ಆರ್‌ಟಿಐ ಅರ್ಜಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಇರುವ ಒಂದೇ ಒಂದು ಕಡತವನ್ನು 'ಅತಿ ರಹಸ್ಯ ಕಡತ’ಗಳ ಸಾಲಿಗೆ ಸೇರಿಸಿದ್ದು, ಅದು ಮಾಹಿತಿ ಹಕ್ಕಿನ ವ್ಯಾಪ್ತಿಗೂ ಬರುವುದಿಲ್ಲ. ಅದನ್ನು ಬಹಿರಂಗಗೊಳಿಸುವುದರಿಂದ ಭಾರತದ ಅಂತರ ರಾಷ್ಟ್ರೀಯ ಸಂಬಂಧಗಳಿಗೆ ಧಕ್ಕೆಯಾಗುತ್ತದೆ ಎಂದಿರುವ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಅದನ್ನು ಸಾರ್ವಜನಿಕಗೊಳಿಸುವಂತಿಲ್ಲ ಎಂದಿದೆ. ಇದರ ಅರ್ಥ ಏನು? ಒಟ್ಟಾರೆ ಘಟನೆಯ ಬಗ್ಗೆ ಜನರು ಅನುಮಾನ ತಾಳುವುದು ಸಹಜವೇ ಅಲ್ಲವೇ?

ಮರೆತುಹೋದ ಮಹಾನುಭಾವ:

ಇಷ್ಟೆಲ್ಲ ಗೊಂದಲಗಳ ನಡುವೆಯೂ ಶಾಸ್ತ್ರಿಯವರಿಗೆ ಸಿಗಬೇಕಾದ ಗೌರವ ದೊರೆತಿದೆಯೇ ಎಂದು ನೋಡಿದರೆ ಅಲ್ಲಿಯೂ ನಿರಾಸೆಯೇ ಇದೆ. ಶಾಸ್ತ್ರಿಯವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸಿನ ಸಕ್ರಿಯ ಸದಸ್ಯರಾಗಿ ಮುಂದೆ ಸರ್ಕಾರದಲ್ಲಿ ಪ್ರಧಾನಿವರೆಗಿನ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದರೂ ಕಾಂಗ್ರೆಸಿಗೆ ಅವರು ಬೇಡವಾಗಿದ್ದಾರೆ. ಗಾಂಧೀ ಜಯಂತಿಯಂದೇ ಶಾಸ್ತ್ರಿಯವರ ಜನ್ಮದಿನವಾಗಿದ್ದರೂ ಅಂದು ಅವರನ್ನು ಸ್ಮರಿಸಿಕೊಳ್ಳುವ ವಿಷಯದಲ್ಲಿ ಅನೇಕ ಮಂದಿಗೆ ಜಾಣಮರೆವು. 

ಗಾಂಧಿ, ನೆಹರೂ ಅವರ ಸಮಾಧಿ ಇದ್ದ ಪ್ರದೇಶದಲ್ಲಿ ಶಾಸ್ತ್ರಿಯವರ ಸಮಾಧಿ ಮಾಡುವುದಕ್ಕೂ ಕಾಂಗ್ರೆಸಿನವರದ್ದೇ ವಿರೋಧ ಇತ್ತು. ಕೊನೆಗೆ ಲಲಿತಾಶಾಸ್ತ್ರಿಯವರು ತಾನು ಈ ವಿಷಯವನ್ನು ಸಾರ್ವಜನಿಕಗೊಳಿಸಬೇಕಾಗುತ್ತದೆ ಎಂದು ಪ್ರತಿಭಟಿಸಿದ ಮೇಲೆಯಷ್ಟೇ ಕಾಂಗ್ರೆಸ್ ಅದಕ್ಕೆ ಒಪ್ಪಿಗೆ ನೀಡಿತ್ತು. ಹೆಚ್ಚೇಕೆ, ಶಾಸ್ತ್ರಿಯವರಿಗೆ ಅತ್ಯಂತ ಪ್ರಿಯವಾಗಿದ್ದ 'ಜೈ ಜವಾನ್ ಜೈ ಕಿಸಾನ್’ ಘೋಷಣೆಯನ್ನು ಅವರ ಸಮಾಧಿಯ ಮೇಲೆ ಕೆತ್ತಿಸುವುದನ್ನೂ ಅವರ ಪಕ್ಷದವರೇ ವಿರೋಧಿಸಿದ್ದರು. ಇಂದಿರಾಗಾಂಧಿಯವರಿಗಂತೂ ಕಾಂಗ್ರೆಸಿನ ಹಳಬರ ಬಗ್ಗೆ ನಿರ್ಲಕ್ಷ್ಯವೇ ಇತ್ತು ಎಂದು ನಯ್ಯರ್ ಬರೆದುಕೊಂಡಿದ್ದಾರೆ.

ಶಾಸ್ತ್ರಿಯವರ ನಿಧನಾನಂತರವಾದರೂ ಅವರಿಗೆ ಭಾರತರತ್ನ ಘೋಷಿಸಲಾಯಿತು (1966ರಲ್ಲಿ) ಎಂಬುದೊಂದೇ ನಾವು ಸಮಾಧಾನಪಡಬಹುದಾದ ಸಂಗತಿ. ದೇಶ ಎಂದೂ ಮರೆಯಲಾಗದ, ಮರೆಯಬಾರದ ವ್ಯಕ್ತಿತ್ವ ಅವರದ್ದು. ಅವರನ್ನು ಮರೆಯುವುದಾಗಲೀ ಅಲಕ್ಷಿಸುವುದಾಗಲೀ ದೇಶ ತನಗೆ ತಾನೇ ಮಾಡಿಕೊಳ್ಳುವ ಆತ್ಮವಂಚನೆ ಎನ್ನದೆ ಬೇರೆ ವಿಧಿಯಿಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.


ಶನಿವಾರ, ಅಕ್ಟೋಬರ್ 17, 2020

ನಕಲಿ ಡಾಕ್ಟರೇಟುಗಳ ಮಾಯಾಲೋಕದಲ್ಲಿ

'ವಿದ್ಯಾರ್ಥಿಪಥ' ಪತ್ರಿಕೆಯ ಅಕ್ಟೋಬರ್ 2020ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಅಸಲಿಗಳಿಗಿಂತ ನಕಲಿಗಳೇ ತುಂಬಿಹೋದಾಗ ಅಸಲಿ ಯಾವುದು, ನಕಲಿ ಯಾವುದು ಎಂದು ಗುರುತಿಸುವುದು ಕಷ್ಟ. ಅನೇಕ
ಬಾರಿ ನಕಲಿಗಳನ್ನೇ ಅಸಲಿಗಳೆಂದುಕೊಂಡು, ಅಸಲಿಗಳನ್ನೇ ನಕಲಿಗಳೆಂದುಕೊಂಡು ಗೊಂದಲಕ್ಕೆ ಬೀಳುವ ಸಾಧ್ಯತೆ ಉಂಟು. ಕೆಲವೊಮ್ಮೆ ಅಸಲಿಗಿಂತ ನಕಲಿಯೇ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಆದರೆ ಈ ಪರಿಸ್ಥಿತಿ ಶಿಕ್ಷಣ ವಲಯಕ್ಕೆ ಬಂದಿರುವುದು ಮಾತ್ರ ಒಂದು ದೊಡ್ಡ ವಿಪರ್ಯಾಸ.

ಹೆಸರಿಗಿಂತ ಮೊದಲು ‘ಡಾ.’ ಎಂಬ ಅಕ್ಷರ ಕಂಡರೆ ಅದಕ್ಕೊಂದು ದೊಡ್ಡ ಮರ್ಯಾದೆ ಇತ್ತು. ಹಾಗೆ ಹೆಸರು ಆರಂಭವಾದರೆ ಒಂದೋ ಅವರು ವೈದ್ಯರು, ಇಲ್ಲವೇ ವರ್ಷಾನುಗಟ್ಟಲೆ ಸಂಶೋಧನೆ ಮಾಡಿ ಪಿಎಚ್‍ಡಿ ಪಡೆದವರು, ಅಥವಾ ಬಹಳ ಸಾಧನೆ ಮಾಡಿ ಯಾವುದೋ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್‍ನ ಗೌರವಕ್ಕೆ ಪಾತ್ರರಾದವರು ಎಂಬ ಭಾವ ಮೂಡುತ್ತಿತ್ತು. ಈಗಿನ ಪರಿಸ್ಥಿತಿ ಬೇರೆ. ‘ಡಾ.’ ಎಂದು ಕಂಡಕೂಡಲೇ ಜನರು ‘ಇವರು ಯಾವ ಡಾ? ಎಲ್ಲಿಂದ ತಂದಿರಬಹುದು? ಎಷ್ಟು ಕೊಟ್ಟಿರಬಹುದು?’ ಎಂಬ ಯೋಚನೆಗೆ ಬೀಳುವ ಸಾಧ್ಯತೆಯೇ ಹೆಚ್ಚು.

ಇದೇ ಈ ಕಾಲದ ದುರಂತ. ಡಾಕ್ಟರೇಟ್ ಎಂದ ಕೂಡಲೇ ವಿದ್ವತ್ತಿನ ಚಿತ್ರ ಕಣ್ಣೆದುರು ಬರುವ ಬದಲು ನಕಲಿಗಳ ಸರ್ಕಸ್ಸೇ ಕುಣಿದಾಡತೊಡಗುತ್ತದೆ. ಸಂಶೋಧನೆಯೆಂದು ಊರೂರು ಅಲೆದಾಡಿಕೊಂಡು, ಪುಸ್ತಕಗಳ ನಡುವೆ ನಿದ್ದೆಗೆಟ್ಟು, ನಾಲ್ಕೈದು ವರ್ಷ ಪರಿಶ್ರಮಪಟ್ಟು ಪಿಎಚ್‍ಡಿ ಪದವಿ ಪಡೆದು ಇದೊಂದು ಜನ್ಮಕ್ಕೆ ಇಷ್ಟು ಸಾಕಪ್ಪ ಎಂದು ಸಂಶೋಧಕನೊಬ್ಬ ನಿಟ್ಟುಸಿರುಬಿಡುವ ಹೊತ್ತಿಗೆ, ನಿನ್ನೆಯವರೆಗೆ ಆರಾಮವಾಗಿ ಓಡಾಡಿಕೊಂಡಿದ್ದವರೆಲ್ಲ ಇವತ್ತು ಹೆಸರಿನೆದುರು ‘ಡಾ’ ನೇತಾಡಿಸಿಕೊಂಡು ಊರತುಂಬೆಲ್ಲ ಕಟೌಟ್ ಹಾಕಿಸಿಕೊಂಡು ಮೆರೆಯುತ್ತಿರುತ್ತಾರೆ. ಅವರಲ್ಲಿ ರಿಯಲ್ ಎಸ್ಟೇಟ್ ಏಜೆಂಟರು, ಗುತ್ತಿಗೆದಾರರು, ರಾಜಕೀಯ ಪುಢಾರಿಗಳು, ಸ್ಥಳೀಯ ವಿದ್ಯಾವಾಚಸ್ಪತಿಗಳು, ಹವ್ಯಾಸಿ ಹೋರಾಟಗಾರರು, ಅರೆಕಾಲಿಕ ಕಲಾವಿದರು, ಸ್ವಘೋಷಿತ ಸಮಾಜಸೇವಕರು, ಕೊಲೆ ಆರೋಪಿಗಳು ಮುಂತಾದವರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ.

ಪಿಎಚ್‍ಡಿ ಎಂಬುದು ಇಷ್ಟೊಂದು ಅಗ್ಗವಾಗಿ ಹೋಯಿತೇ? ಯಾರು ಬೇಕಾದರೂ ಡಾಕ್ಟರೇಟ್ ಗೌರವ ಪಡೆಯಬಹುದೇ? ಇಂತಹ ಪ್ರಶ್ನೆಗಳು ಶೈಕ್ಷಣಿಕ ವಲಯದಲ್ಲಿ ಮತ್ತು ಜನಸಾಮಾನ್ಯರಲ್ಲಿ ಮೂಡುವುದು ಸಹಜ. ಇತ್ತೀಚಿನ ವರ್ಷಗಳಲ್ಲಿ ಪಿಎಚ್‍ಡಿ ಎಂಬುದು ಯಾವುದೇ ನೈತಿಕ ನೆಲೆಗಟ್ಟಿಲ್ಲದ ಒಂದು ದಂಧೆಯಾಗಿ ಮಾರ್ಪಟ್ಟಿರುವುದೇ ಇದಕ್ಕೆ ಪ್ರಮುಖ ಕಾರಣ.

ಪರಿಶ್ರಮದ ಹಾದಿ ಬೇಕಿಲ್ಲ:

ಇದು ಶಾರ್ಟ್‍ಕಟ್‍ಗಳ ಯುಗ. ಸಮಾಜದ ಅನೇಕ ಮಂದಿಗೆ ಪರಿಶ್ರಮ ಬೇಕಾಗಿಲ್ಲ. ಎಲ್ಲರೂ ಸುಲಭದ ದಾರಿ ಹುಡುಕುವವರೇ. ಸುಲಭದ ವಿಧಾನಗಳಿರುವಾಗ ಕಷ್ಟಪಡುವುದು ಮೂರ್ಖತನ ಎಂಬುದೇ ಬಹುತೇಕರ ಭಾವನೆ. ಜ್ಞಾನವಿಜ್ಞಾನಗಳಿಗೂ ಈ ರೋಗ ಅಂಟಿಕೊಂಡರೆ ಏನಾಗುತ್ತದೆ ಎಂದು ನಕಲಿ ಪದವಿಗಳ ಲೋಕವನ್ನು ನೋಡಿದರೆ ಗೊತ್ತಾಗುತ್ತದೆ. ನಾನು ಸರಿಯಾದ ದಾರಿಯಲ್ಲೇ ಸಂಶೋಧನೆ ನಡೆಸಿ ಪಿಎಚ್‍ಡಿ ಪಡೆಯುತ್ತೇನೆ ಎಂದು ಹೊರಟವನಿಗೂ ‘ಅಯ್ಯೋ ಸುಮ್ಮನಿರೋ ಹುಚ್ಚಾ, ಎಲ್ಲರೂ ಬೆತ್ತಲೆಯಾಗಿ ಓಡಾಡುವಾಗ ಇವನೊಬ್ಬ ಹೊಸ ದಿರಿಸು ಧರಿಸಿಕೊಂಡು ಓಡಾಡಬೇಕಂತೆ. ಏನೋ ಒಂದು ಪ್ರಬಂಧ ಬರೆದು ಮುಗಿಸು. ನಾಳೆ ನಿನ್ನ ಪಿಎಚ್‍ಡಿ ಯಾರಿಗೆ ಬೇಕು?’ ಎಂದು ಕೇಳುವವರಿರುವಾಗ, ಆತನಿಗೆ ಅದೇ ಸರಿ ಎಂದು ಅನಿಸುವುದರಲ್ಲಿ ತಪ್ಪೇನೂ ಇಲ್ಲ.

ನಾಳೆ ನಮ್ಮ ಪಿಎಚ್‍ಡಿ ಯಾರಿಗೆ ಬೇಕು? ಯಾರಿಗೆ ಬೇಡದಿದ್ದರೂ ನಮಗೆ ಬೇಕು. ಯಾಕೆಂದರೆ ಅದರ ಹಿಂದೆ ಸಾಕಷ್ಟು ಪರಿಶ್ರಮವಿರುತ್ತದೆ. ಶಿಲ್ಪದ ಬಗ್ಗೆ ಶಿಲ್ಪಿಗಾದರೂ ಗೌರವ ಇರುತ್ತದೆ. ಒಂದು ಪಿಎಚ್‍ಡಿ ಪೂರೈಸಿದಾಗ ಒಂದು ಹೊಸ ಚಿಂತನೆ ಬೆಳೆಯಬೇಕು. ನೂರು ಹೊಸ ಸಾಧ್ಯತೆಗಳು ಗೋಚರವಾಗಬೇಕು. ಆ ಸಾಧ್ಯತೆಗಳಿಂದ ಜ್ಞಾನಜಗತ್ತು ವಿಸ್ತಾರವಾಗಬೇಕು. ಅದರಿಂದ ಸಮಾಜಕ್ಕೊಂದಿಷ್ಟು ಪ್ರಯೋಜನವಾಗಬೇಕು. ಆದ್ದರಿಂದ ನಮ್ಮ ಪಿಎಚ್‍ಡಿ ನಮಗಷ್ಟೇ ಅಲ್ಲ, ಸುತ್ತಲಿನ ಸಮಾಜಕ್ಕೂ ಬೇಕು. ಆ ಪದವಿ ಪಡೆದವನಿಗೆ ಉತ್ತರದಾಯಿತ್ವ ಇರಬೇಕು.

ಹೀಗೆ ಮಾತಾಡುವುದು ಕೇವಲ ಆದರ್ಶ ಎಂದು ಅನೇಕ ಸಲ ಅನೇಕ ಮಂದಿಗೆ ಅನಿಸುತ್ತದೆ. ಏಕೆಂದರೆ ಶಿಕ್ಷಣರಂಗದಲ್ಲಿ ಇಂದು ಬಹುಪಾಲು ಈ ಆದರ್ಶ ಬೇಕಾಗಿಲ್ಲ. ಅಲ್ಲಿ ಅಗತ್ಯವಿರುವುದು ಸರ್ಟಿಫಿಕೇಟು. ಕಷ್ಟಪಟ್ಟು ಸಂಶೋಧನೆ ನಡೆಸಿ ಪಿಎಚ್‍ಡಿ ಪಡೆದನೋ, “ಹೆಂಗೋ ಥೀಸೀಸ್ ಬರೆದು ಬಿಸಾಕಿ” ಪಿಎಚ್‍ಡಿ ತಂದನೋ, ಕೊನೆಗೆ ಗಣನೆಗೆ ಬರುವುದು ಅದೇ ಪ್ರಮಾಣಪತ್ರ. ಉದ್ಯೋಗದಲ್ಲಿ ಭಡ್ತಿ ನೀಡುವುದಕ್ಕೆ, ವೇತನ ಹೆಚ್ಚಿಸುವುದಕ್ಕೆ ಆ ಪ್ರಮಾಣಪತ್ರ ಬೇಕು. ಅಲ್ಲಿ ಪಿಎಚ್‍ಡಿ ಪ್ರಮಾಣಪತ್ರ ಅಸಲಿಯೋ ನಕಲಿಯೋ ಎಂದಷ್ಟೇ ಪರಿಶೀಲನೆ ನಡೆಯುವುದೇ ಹೊರತು, ಅಭ್ಯರ್ಥಿಯ ಮನಸ್ಥಿತಿ ಅಸಲಿಯೋ ನಕಲಿಯೋ ಎಂಬ ವಿಚಾರಣೆ ಅಲ್ಲ. ಸಂಶೋಧನೆಯ ಮಾನದಂಡಗಳನ್ನು ಸರಿಯಾಗಿ ಅನುಸರಿಸಿ ಪದವಿ ಪಡೆದವನಿಗೂ, ಸಂಶೋಧನೆಯ ನಾಟಕ ಆಡಿದವನಿಗೂ ದೊರೆಯುವ ಭಡ್ತಿ, ವೇತನ ಏರಿಕೆ ಒಂದೇ ಆಗಿರುವಾಗ ‘ನಿನ್ನ ಆದರ್ಶ ಕಟ್ಟಿಕೊಂಡು ಏನಾಗಬೇಕೋ ಮಹರಾಯ?’ ಎಂಬ ಪ್ರಶ್ನೆಯಲ್ಲಿ ಅಸಹಜವಾದದ್ದೇನೂ ಇಲ್ಲ.

ಆದರೆ ಇದರಿಂದ ನಮ್ಮ ಶಿಕ್ಷಣ-ಸಂಶೋಧನ ವಲಯಗಳು ಎಂತಹ ಬೆಲೆ ತೆರಬೇಕಾಗಿದೆ ಎಂಬುದು ನಮ್ಮ ಮುಂದಿರುವ ಗಂಭೀರ ಪ್ರಶ್ನೆ.

ನಕಲಿ ಪದವಿಗಳ ಹಾವಳಿ:

ನಕಲಿ ಅಂಕಪಟ್ಟಿಗಳ, ನಕಲಿ ಪದವಿಗಳ ವಿಚಾರ ಹೊಸದೇನೂ ಅಲ್ಲ. ಎಲ್ಲ ಕಾಲದಲ್ಲೂ ಇದೆ. ಎಷ್ಟೋ ಸಲ ಎಲ್ಲ ಪರಿಶೀಲನೆಗಳ ಕಣ್ಣುತಪ್ಪಿಸಿ ಇದೇ ನಕಲಿ ಅಂಕಪಟ್ಟಿ, ಪದವಿಗಳ ಆಧಾರದಲ್ಲಿ ಉದ್ಯೋಗ ಪಡೆದವರು ಅನೇಕ ವರ್ಷಗಳ ಬಳಿಕ ಸಿಕ್ಕಿಹಾಕಿಕೊಳ್ಳುವುದುಂಟು, ಯಾರ ಕಣ್ಣಿಗೂ ಬೀಳದೆ ನಿವೃತ್ತರಾಗುವುದೂ ಉಂಟು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಮಿತಿಮೀರಿದೆ. 

2009 ಹಾಗೂ 2016ರಲ್ಲಿ ಕರ್ನಾಟಕದಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ನಡೆದ ಸಂದರ್ಭದಲ್ಲಿ ನಕಲಿ ಪ್ರಮಾಣಪತ್ರಗಳ ವಿಚಾರ ಸಾಕಷ್ಟು ಚರ್ಚೆಗೆ ಬಂತು. 2009ರಲ್ಲಿ 2250 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‍ಸಿ)ದ ಮೂಲಕ ನೇಮಕಾತಿ ನಡೆದಾಗ ಅವರ ಪೈಕಿ 1718 ಮಂದಿ ಪಿಎಚ್‍ಡಿ ಹಾಗೂ ಎಂಫಿಲ್ ಪದವಿ ಹೊಂದಿದವರಿದ್ದು, ಅವರ ಪ್ರಮಾಣಪತ್ರಗಳ ಸಿಂಧುತ್ವ ಪರಿಶೀಲನೆ ಮಾಡದಿದ್ದುದರಿಂದ ವಿವಾದ ಕೋರ್ಟ್ ಮೆಟ್ಟಿಲೇರಿತ್ತು. ಇವರಲ್ಲಿ ಸಾಕಷ್ಟು ಮಂದಿ ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾರೆ ಎಂಬ ಆರೋಪ ಇತ್ತು. ಆಮೇಲೆ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಎಂಫಿಲ್ ಮಾನದಂಡವನ್ನು ತೆಗೆದುಹಾಕಿತು.

2016ರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಮೂಲಕ 2160 ಸಹಾಯಕ ಪ್ರಾಧ್ಯಾಪಕರ ನೇಮಕ ಪ್ರಕ್ರಿಯೆ ನಡೆಯುತ್ತಿದ್ದಾಗ ಪ್ರಮಾಣಪತ್ರಗಳ ಸಿಂಧುತ್ವ ಪರಿಶೀಲನೆ ವೇಳೆ ಒಟ್ಟು 40 ಅಭ್ಯರ್ಥಿಗಳು ಸಲ್ಲಿಸಿದ್ದ ಪಿಎಚ್‍ಡಿ ಪ್ರಮಾಣಪತ್ರಗಳು ನಕಲಿ ಎಂದು ಸಾಬೀತಾಯಿತು. ಇವರಲ್ಲಿ 25 ಇಂಗ್ಲಿಷ್ ವಿಷಯದ ಅಭ್ಯರ್ಥಿಗಳು, 7 ವಾಣಿಜ್ಯ ವಿಷಯದ ಅಭ್ಯರ್ಥಿಗಳು, 6 ಕಂಪ್ಯೂಟರ್ ಸೈನ್ಸ್ ಅಭ್ಯರ್ಥಿಗಳು, ತಲಾ ಒಬ್ಬರು ಗಣಿತ ಹಾಗೂ ರಾಜ್ಯಶಾಸ್ತ್ರ ವಿಷಯದವರು ಇದ್ದರು. ಕೆಇಎ ವರದಿಯ ಆಧಾರದಲ್ಲಿ ಉನ್ನತ ಶಿಕ್ಷಣ ಇಲಾಖೆ ಇಂಥ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತು.

ಈ 40 ನಕಲಿ ಪಿಎಚ್‍ಡಿ ಪ್ರಮಾಣಪತ್ರಗಳ ಪೈಕಿ, 16 ಉತ್ತರ ಪ್ರದೇಶದ ಝಾನ್ಸಿಯ ಬುಂದೇಲ್‍ಖಂಡ ವಿಶ್ವವಿದ್ಯಾನಿಲಯದ ಹೆಸರಲ್ಲಿದ್ದವು; 9 ಬಿಹಾರದ ಬೋಧ್‍ಗಯಾದ ಮಗಧ್ ವಿವಿ ಹೆಸರಲ್ಲಿದ್ದವು; 8 ಮೇಘಾಲಯದ ಶಿಲ್ಲಾಂಗ್‍ನಲ್ಲಿರುವ ಸಿಎಂಜೆ ವಿಶ್ವವಿದ್ಯಾನಿಲಯದ ಹೆಸರಲ್ಲಿದ್ದವು; 3 ಉತ್ತರ ಪ್ರದೇಶದ ವಾರಾಣಸಿಯ ಮಹಾತ್ಮ ಗಾಂಧಿ ವಿವಿ ಹೆಸರಲ್ಲಿದ್ದವು; 2 ಕಾನ್ಪುರದ ಛತ್ರಪತಿ ಶಿವಾಜಿ ವಿವಿ ಹೆಸರಲ್ಲಿದ್ದರೆ ತಲಾ ಒಂದೊಂದು ಪ್ರಮಾಣಪತ್ರ ಅಸ್ಸಾಂನ ನಲ್ಬರಿ ಜಿಲ್ಲೆಯ ಕುಮಾರ ಭಾಸ್ಕರವರ್ಮ ವಿವಿ ಹಾಗೂ ಶಿಲ್ಲಾಂಗ್‍ನ ಟೆಕ್ನೋ ಗ್ಲೋಬಲ್ ವಿವಿ ಹೆಸರಲ್ಲಿದ್ದವು. ಇವುಗಳಲ್ಲಿ ಸಿಎಂಜೆ ವಿವಿ ಮತ್ತು ಟೆಕ್ನೋ ಗ್ಲೋಬಲ್ ವಿವಿ ಮಾತ್ರ ಖಾಸಗಿಯವು, ಉಳಿದವೆಲ್ಲ ಆಯಾ ರಾಜ್ಯ ಸರ್ಕಾರಗಳೇ ನಡೆಸುತ್ತಿದ್ದವು. 

ಆದರೆ ಇಂತಹ ಬಹುತೇಕ ನಕಲಿ ಪ್ರಮಾಣಪತ್ರಗಳು ಉತ್ತರ ಭಾರತದ ವಿವಿಗಳ ಹೆಸರಿನಲ್ಲೇ ಇವೆ. ಬಿಹಾರ, ಉತ್ತರಪ್ರದೇಶ, ಮೇಘಾಲಯ, ರಾಜಸ್ಥಾನಗಳಲ್ಲಿರುವ ವಿವಿಗಳ ಹೆಸರು ಹೆಚ್ಚಾಗಿ ಕೇಳಿರುತ್ತದೆ. ಸರ್ಕಾರಿ ವಿಶ್ವವಿದ್ಯಾನಿಲಯಗಳ ಹೆಸರಿನಲ್ಲೂ ನಕಲಿ ಪ್ರಮಾಣಪತ್ರಗಳು ಕಂಡುಬರುವಾಗ ಇದರ ಹಿಂದೆ ಕೇವಲ ದಂಧೆಕೋರರ ಕೈವಾಡ ಅಷ್ಟೇ ಅಲ್ಲದೆ ಆಯಾ ವಿವಿಗಳ ನೌಕರರ ಪಾಲ್ಗೊಳ್ಳುವಿಕೆಯೂ ಇದೆ ಎಂಬ ಅನುಮಾನ ಗಟ್ಟಿಯಾಗುತ್ತದೆ.

ನಕಲಿ ಪಿಎಚ್‍ಡಿಗಳ ಹಾವಳಿ ಉತ್ತರ ಭಾರತದಲ್ಲಷ್ಟೇ ಇಲ್ಲ. ಬೆಂಗಳೂರು ವಿಶ್ವವಿದ್ಯಾನಿಲಯದ ಹೆಸರಿನಲ್ಲೂ ಸಾಕಷ್ಟು ನಕಲಿ ಪ್ರಮಾಣಪತ್ರಗಳು ಬಂದಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಬೆಂಗಳೂರು ವಿವಿ ಹೆಸರಿನಲ್ಲಿದ್ದ ನಕಲಿ ಪಿಎಚ್‍ಡಿ ಪ್ರಮಾಣಪತ್ರ ಸಲ್ಲಿಸಿ ಹೈದರಾಬಾದಿನ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆ ಪಡೆದಿದ್ದ ಇಬ್ಬರು ಅಭ್ಯರ್ಥಿಗಳು 2018ರಲ್ಲಿ ಕೆಲಸ ಕಳೆದುಕೊಂಡಿದ್ದರು. ಕುಲಪತಿ, ಕುಲಸಚಿವರ ಸಹಿಗಳನ್ನೇ ಇಲ್ಲಿ ಫೋರ್ಜರಿ ಮಾಡಲಾಗಿತ್ತು. 2017ರಲ್ಲಿ ಉದ್ಯೋಗ ನೇಮಕಾತಿಗೆ ಸಂಬಂಧಿಸಿದಂತೆ ಸಿಂಧುತ್ವ ಪರಿಶೀಲನೆಗೆಂದು 180 ಪ್ರಮಾಣಪತ್ರಗಳನ್ನು ದುಬೈನಿಂದ ಬೆಂಗಳೂರು ವಿವಿಗೆ ಕಳಿಸಿಕೊಡಲಾಗಿತ್ತು. ಅವುಗಳಲ್ಲಿ 62 ಪ್ರಮಾಣಪತ್ರಗಳು ನಕಲಿ ಎಂದು ಸಾಬೀತಾಗಿತ್ತು.  

ನಕಲಿ ಪ್ರಮಾಣಪತ್ರ ನೀಡುವವರೆಲ್ಲ ಉದ್ದೇಶಪೂರ್ವಕವಾಗಿಯೇ ಕೊಟ್ಟಿದ್ದಾರೆಂದೂ ಇದರರ್ಥವಲ್ಲ. ಖೋಟಾ ಸಂಸ್ಥೆಗಳ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದೆ ಏಜೆಂಟರ ಬಲೆಗೆ ಬಿದ್ದು ಮೋಸಹೋಗುವವರೂ ಇದ್ದಾರೆ. ಇಂತಹ ಕನಿಷ್ಠ 25 ನಕಲಿ ವಿವಿಗಳ ಪಟ್ಟಿಯನ್ನು ಯುಜಿಸಿ ಪ್ರಕಟಿಸಿದೆ.

ನಮ್ಮಲ್ಲಷ್ಟೇ ಅಲ್ಲ ನಕಲಿ:

ಈ ನಕಲಿ ಡಿಗ್ರಿಗಳ ಹಾವಳಿ ಯಾವ ರಾಜ್ಯ, ದೇಶಗಳನ್ನೂ ಬಿಟ್ಟಿಲ್ಲ. ನಕಲಿ ಪಿಎಚ್‍ಡಿ ಪ್ರಮಾಣಪತ್ರ ಸಲ್ಲಿಸಿದ್ದಕ್ಕಾಗಿ ಕಳೆದ ವರ್ಷ ತಮಿಳುನಾಡಿನಲ್ಲಿ 11 ಉಪನ್ಯಾಸಕರು ಅಮಾನತಾದರು. ಹರ್ಯಾಣದಲ್ಲಿ ಸುಮಾರು 500 ಉಪನ್ಯಾಸಕರುಗಳ ಪಿಎಚ್‍ಡಿಗಳ ಸಾಚಾತನದ ಬಗ್ಗೆ ಇತ್ತೀಚೆಗಷ್ಟೇ ದೂರು ದಾಖಲಾಗಿದೆ.

ಶಿಕ್ಷಣ-ಸಂಶೋಧನೆಗಳ ಗುಣಮಟ್ಟಕ್ಕೆ ಹೆಸರಾದ ಅಮೇರಿಕಕ್ಕೂ ನಕಲಿಯ ಕಳಂಕ ತಪ್ಪಿಲ್ಲ. ಕೆಲವು ವರ್ಷಗಳ ಹಿಂದೆ ಅಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ, ಅಮೇರಿದಲ್ಲಿ ವರ್ಷವೊಂದರಲ್ಲಿ ಹೊರಬಂದ ಕ್ರಮಬದ್ಧ ಪಿಎಚ್‍ಡಿಗಳ ಸಂಖ್ಯೆ 45 ಸಾವಿರವಾದರೆ, ನಕಲಿ ಪಿಎಚ್‍ಡಿಗಳ ಸಂಖ್ಯೆ 50 ಸಾವಿರವಂತೆ! ಅಲ್ಲಿಯೂ ಅಸಲಿಗಳಿಗಿಂತ ನಕಲಿಗಳೇ ಹೆಚ್ಚು ಇವೆ ಎನ್ನಬಹುದೇ? ನಕಲಿಗಳಿಗೆ ಕಾಲ-ದೇಶಗಳ ಹಂಗಿಲ್ಲ.

‘ಗೌ.ಡಾ.’ಗಳ ಮಾಯಾಲೋಕ

ಅಕಡೆಮಿಕ್ ಕ್ಷೇತ್ರದ ಪಿಎಚ್‍ಡಿಗಳದ್ದು ಒಂದು ಕಥೆಯಾದರೆ, ‘ಗೌ.ಡಾ.’ಗಳದ್ದೇ ಇನ್ನೊಂದು ಕಥೆ. ಅಧಿಕೃತ ವಿಶ್ವವಿದ್ಯಾನಿಲಯಗಳೇ ನೀಡುವ ಗೌರವ ಡಾಕ್ಟರೇಟುಗಳ ತಮಾಷೆ ಒಂದೆಡೆಯಾದರೆ ಎಲ್ಲೂ ಅಸ್ತಿತ್ವದಲ್ಲಿಲ್ಲದ ‘ವರ್ಚುವಲ್’ ವಿಶ್ವವಿದ್ಯಾನಿಲಯಗಳು ಮಾರುವ ಗೌರವ ಡಾಕ್ಟರೇಟುಗಳ ಹಂಗಾಮ ಇನ್ನೊಂದೆಡೆ.

ವಿಸ್ಮಯವೆನಿಸುವಂಥ ಬದುಕು ನಡೆಸಿದ ಸಾಧಕರಿಗೆ ವಿಶ್ವವಿದ್ಯಾನಿಲಯಗಳು ಗೌರವಪೂರ್ವಕ ಡಾಕ್ಟರೇಟ್ ನೀಡುವಂಥ ಪದ್ಧತಿ ಬಹು ಹಿಂದಿನಿಂದಲೂ ಇದೆ. ಮರಗಳನ್ನೇ ಮಕ್ಕಳೆಂದು ಬಗೆದು ಬದುಕು ಸಾಗಿಸಿದ ಸಾಲು ಮರದ ತಿಮ್ಮಕ್ಕ, ಯಕ್ಷಗಾನ ರಂಗದ ದಂತಕಥೆಯಾಗಿ ಮೆರೆದ ಶೇಣಿ ಗೋಪಾಲಕೃಷ್ಣ ಭಟ್, ಸಾವಿರಾರು ಗ್ರಾಮೀಣ ಹೆಣ್ಮಕ್ಕಳಿಗೆ ಸುಖಪ್ರಸವ ಮಾಡಿಸಿದ ಸೂಲಗಿತ್ತಿ ನರಸಮ್ಮ ಮುಂತಾದವರನ್ನು ಕರೆದು ವಿವಿಗಳು ಡಾಕ್ಟರೇಟ್ ಪದವಿ ನೀಡಿದಾಗ ಜನಸಾಮಾನ್ಯರೂ ಸಂಭ್ರಮಿಸಿದರು. ಇವರ್ಯಾರೂ ಪ್ರಾಥಮಿಕ ಶಾಲೆಗಿಂತ ಆಚೆ ಕಾಲಿಟ್ಟವರಲ್ಲ, ಬಿರುದು ಬಾವಲಿಗಳ ಬೆನ್ನು ಬಿದ್ದವರಲ್ಲ, ಕೀರ್ತಿಶನಿಯನ್ನು ಹುಡುಕಿ ಹೋದವರಲ್ಲ. ಗೌರವ ಅವರನ್ನು ಅರಸಿಕೊಂಡು ಬಂತು, ಡಾಕ್ಟರೇಟುಗಳ ಮೌಲ್ಯ ಹೆಚ್ಚಾಯಿತು.

ಯಾವುದೇ ಕ್ಷೇತ್ರದಲ್ಲಾಗಲೀ, ನಾಲ್ಕು ಜನ ಮೆಚ್ಚುವಂತಹ ಸಾಧನೆ ಮಾಡಿದವರನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿದರೆ ಯಾರೂ ಆಕ್ಷೇಪಿಸುವುದಿಲ್ಲ. ಯಾವಾಗ ಗೌರವ ಡಾಕ್ಟರೇಟ್ ಎಂಬುದು ನೂರಕ್ಕೆ ನೂರು ದುಡ್ಡಿನ ವ್ಯವಹಾರವಾಗಿ ಬದಲಾಯಿತೋ ಅಲ್ಲಿಗೆ ‘ಗೌ.ಡಾ.’ಗಳನ್ನು ಜನಸಾಮಾನ್ಯರೂ ಲೇವಡಿ ಮಾಡುವಂತಾಯಿತು. ಉದ್ಯಮಿಗಳು, ನಕಲಿ ಸಮಾಜ ಸೇವಕರು, ಹೆಸರಿಗಾಗಿ ಹಪಹಪಿಸುವವರು, ವಶೀಲಿಬಾಜಿಗಳು ವಿಶ್ವವಿದ್ಯಾನಿಲಯಗಳೊಂದಿಗೆ ದಂಧೆ ಕುದುರಿಸಿಕೊಂಡಾಗ ‘ಗೌ.ಡಾ.’ಗಳು ಮಾರಾಟಕ್ಕಿಟ್ಟ ಸರಕುಗಳಾದವು.

ಅಧಿಕೃತ ವಿಶ್ವವಿದ್ಯಾನಿಲಯಗಳೇ ಇಂತಹ ಅನರ್ಥ ಪರಂಪರೆ ಹುಟ್ಟುಹಾಕಿದ ಮೇಲೆ ನಿಜವಾಗಿಯೂ ಬಿಸಿನೆಸ್ಸಿಗೆ ಹೊರಟವರು ಸುಮ್ಮನಿರುತ್ತಾರೆಯೇ? ಬಿರುದು ಬಾವಲಿಗಳ ಹಿಂದೆ ಬಿದ್ದವರೂ, ವ್ಯಾಪಾರಕ್ಕೆ ಕೂತವರೂ ಒಂದೇ ದಾರಿಗೆ ಬಂದ ಮೇಲೆ ಕೆಲಸ ಸಲೀಸು. ಈಗ ಗೌರವ ಡಾಕ್ಟರೇಟ್ ನೀಡುವ ನೂರಾರು ಸಂಸ್ಥೆಗಳು ಪ್ರಪಂಚದ ನಾನಾ ಕಡೆ ಹುಟ್ಟಿಕೊಂಡಿವೆ. ಅಮೇರಿಕ, ಶ್ರೀಲಂಕಾ, ಸಿಂಗಾಪುರದ ಡಾಕ್ಟರೇಟುಗಳು ಬೆಂಗಳೂರು, ಮೈಸೂರುಗಳಲ್ಲೇ ಸಿಗುವುದಾದರೆ ಯಾರಿಗೆ ಬೇಡ? ದುಡ್ಡು ಸುರಿದರೆ ಈ ಜಗತ್ತಿನಲ್ಲಿ ಸಿಗದಿರುವುದೇನುಂಟು?

ಇಂಡಿಯನ್ ವರ್ಚುವಲ್ ಯುನಿವರ್ಸಿಟಿ, ಯುನಿವರ್ಸಲ್ ತಮಿಳ್ ಯುನಿವರ್ಸಿಟಿ, ಕಿಂಗ್ಸ್ ಯುನಿವರ್ಸಿಟಿ, ಇಂಟರ್‍ನ್ಯಾಷನಲ್ ಪೀಸ್ ಯುನಿವರ್ಸಿಟಿ, ಇಂಟರ್‍ನ್ಯಾಷನಲ್ ತಮಿಳ್ ಯುನಿವರ್ಸಿಟಿ, ಯುನಿವರ್ಸಿಟಿ ಆಫ್ ಏಷ್ಯಾ... ಇಂತಹ ಹತ್ತಾರು ಯುನಿವರ್ಸಿಟಿಗಳು ಯಾರೆಲ್ಲ ಹಣಕೊಡಲು ಸಿದ್ಧರಿದ್ದಾರೋ ಅವರಿಗೆಲ್ಲ ಡಾಕ್ಟರೇಟಿನ ಗೌರವ ದಯಪಾಲಿಸುತ್ತವೆ. ಡಾ. ರಾಧಾಕೃಷ್ಣನ್ ಅವರ ಹೆಸರು ಇಟ್ಟುಕೊಂಡಿರುವ ಬೆಂಗಳೂರಿನ ‘ಸಂಶೋಧನ ಸಂಸ್ಥೆ’ಯೊಂದು ದೇಶವಿದೇಶಗಳ ಡಾಕ್ಟರೇಟುಗಳಲ್ಲದೆ ನೀವು ಬಯಸುವ ಯಾವುದೇ ಪದವಿಯನ್ನು ಹಂಚಲು ಸಿದ್ಧವಿದೆ. ನ್ಯಾಷನಲ್ ವರ್ಚುವಲ್ ಯುನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಶನ್, ಇಂಡಿಯನ್ ವರ್ಚುವಲ್ ಅಕಾಡೆಮಿ ಫಾರ್ ಪೀಸ್ ಅಂಡ್ ಎಜುಕೇಶನ್ ಇವೆಲ್ಲ ಬೆಂಗಳೂರಿನಲ್ಲಿ ಅಕ್ಕಪಕ್ಕದಲ್ಲಿ ಅಂಗಡಿ ಇಟ್ಟುಕೊಂಡಿವೆ. ‘ವರ್ಚುವಲ್’ ಆಗಿರುವುದರಿಂದ ನಿಮ್ಮ ಕ್ಯಾಂಪಸ್ ಎಲ್ಲಿ, ಆಡಳಿತ ಕಚೇರಿ ಎಲ್ಲಿ ಎಂದು ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇಂಟರ್‍ನ್ಯಾಷನಲ್ ತಮಿಳ್ ಯುನಿವರ್ಸಿಟಿ ಎಂಬ ‘ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯ’ಕ್ಕೆ ಸ್ವಂತ ಜಾಲತಾಣವೂ ಇಲ್ಲ. ಬಹ್ರೈನ್, ಯುಎಇ, ಮಲೇಷ್ಯಾ, ಸಿಂಗಾಪುರ ಮುಂತಾದ ಕಡೆ ತನ್ನ ಕಾರ್ಯವ್ಯಾಪ್ತಿ ಇದೆ ಎಂದು ಹೇಳಿಕೊಳ್ಳುವ ಈ ಸಂಸ್ಥೆ ತನ್ನ ಅಷ್ಟೂ ದಂಧೆಯನ್ನು ನಡೆಸುವುದು ಒಂದು ಬ್ಲಾಗ್ ಮೂಲಕ ಎಂದರೆ ನಂಬಲೇಬೇಕು.

ಇತ್ತೀಚೆಗೆ ಇಂತಹ ಸಂಸ್ಥೆಗಳು ತಮ್ಮ ಗೌರವ ಡಾಕ್ಟರೇಟುಗಳಿಗೆ ಸರ್ಕಾರದ ಮಾನ್ಯತೆ ಇಲ್ಲವೆಂದೂ, ಇವು ‘ಅಲಂಕಾರಿಕ’ ಪದವಿಗಳೆಂದೂ ಮುಕ್ತವಾಗಿಯೇ ತಮ್ಮ ಜಾಲತಾಣಳಗಳಲ್ಲಿ ಪ್ರಕಟಿಸಿಕೊಳ್ಳುತ್ತಿವೆ. ಆದರೆ ಅವುಗಳಿಗೆ ಗಿರಾಕಿಗಳ ಕೊರತೆಯೇನೂ ಇಲ್ಲ. ಮೂರು ವರ್ಷಗಳ ಹಿಂದೆ ಸಚಿವ ಸುರೇಶ್ ಕುಮಾರ್ ಅವರು ವಿಕ್ಟೋರಿಯಾ ಗ್ಲೋಬಲ್ ಯುನಿವರ್ಸಿಟಿ ಎಂಬ ಇಂಗ್ಲೆಂಡ್ ಮೂಲದ ಸಂಸ್ಥೆಯೊಂದು ಗೌರವ ಡಾಕ್ಟರೇಟ್ ನೀಡುವುದಾಗಿ ಸಂಪರ್ಕಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಅವರಿಗೆ ಬಂದ ಪತ್ರದ ಪ್ರಕಾರ ಗೌರವ ಡಾಕ್ಟರೇಟಿನ ದರ ರೂ. 1.75 ಲಕ್ಷ, ಗೌರವ ಡಿ.ಲಿಟ್ ಪದವಿಯ ದರ ರೂ. 2.25 ಲಕ್ಷ. ಪದವಿ ಪ್ರದಾನ ಸಮಾರಂಭ ಬೆಂಗಳೂರಿನ ಪ್ರತಿಷ್ಠಿತ ಹೋಟೆಲಲ್ಲಿ ನಡೆಯುವುದಾಗಿಯೂ ಅದಕ್ಕೆ ಅಂದಿನ ರಾಜ್ಯ ಪೊಲೀಸ್ ವರಿಷ್ಠ ಆರ್. ಕೆ. ದತ್ತಾ ಮುಖ್ಯ ಅತಿಥಿಯಾಗಿರುವುದಾಗಿಯೂ ಪತ್ರದಲ್ಲಿತ್ತು. ಜತೆಗೆ ಇನ್ನೊಬ್ಬರನ್ನು ಕರೆದುಕೊಂಡು ಹೋದರೆ ಹತ್ತುಸಾವಿರ, ವೀಡಿಯೋ/ಫೋಟೋ ಬೇಕಾದರೆ ಏಳು ಸಾವಿರ ರೂ. ಹೆಚ್ಚುವರಿಯಾಗಿ ನೀಡಬೇಕಿತ್ತು.

ಇದಕ್ಕಿಂತ ಕಡಿಮೆ ದರದ ಗೌ.ಡಾ.ಗಳೂ ಲಭ್ಯ ಇವೆ. ಕಳೆದೆರಡು ವರ್ಷಗಳಿಂದ ಸುದ್ದಿಯಲ್ಲಿರುವ ಮಂಡ್ಯ-ಮೈಸೂರು ಗೌ.ಡಾ.ಗಳ ದರ 25 ಸಾವಿರದಿಂದ 1 ಲಕ್ಷದವರೆಗೂ ಇದೆ. 25 ಸಾವಿರದ ಗೌ.ಡಾ.ದಲ್ಲಿ ಐದು ಸಾವಿರ ನೋಂದಣಿಗೆ, ಹತ್ತು ಸಾವಿರ ಪ್ರಮಾಣಪತ್ರಕ್ಕೆ, ಐದು ಸಾವಿರ ಗೌನಿಗೆ, ಇನ್ನೈದು ಸಾವಿರ ಪದವಿ ಪಡೆದವನ ಸಾಧನೆಗಳನ್ನು ವೆಬ್ಸೈಟಿನಲ್ಲಿ ಪ್ರಕಟಿಸುವುದಕ್ಕೆ. ರಾತ್ರಿ ಬೆಳಗಾಗುವುದರೊಳಗೆ ಹೆಸರಿನೆದುರು ಡಾ. ಎಂದು ಹಾಕಿಕೊಳ್ಳುವುದು ಸಾಧ್ಯವಿರುವಾಗ ವರ್ಷಗಟ್ಟಲೆ ಒದ್ದಾಡುವವರೇ ಮೂರ್ಖರು.

ಗೌ.ಡಾ.ಗಳನ್ನು ನೀಡಲು ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸುವಂತೆ 2016ರಲ್ಲೇ ಕರ್ನಾಟಕದ ರಾಜ್ಯಪಾಲರು ವಿವಿಗಳಿಗೆ ಆದೇಶ ನೀಡಿದ್ದರು. ಕಳೆದ ವರ್ಷವಷ್ಟೇ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ಕರ್ನಾಟಕ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಗೌ.ಡಾ.ಗಳ ಸಾಚಾತನದ ವಿಚಾರವಾಗಿ ಸ್ಪಷ್ಟ ಮಾರ್ಗದರ್ಶೀ ಸೂತ್ರಗಳನ್ನು ರೂಪಿಸುವಂತೆ ಕೇಂದ್ರ ಸರ್ಕಾರ ಹಾಗೂ ಯುಜಿಸಿಗೆ ನೋಟೀಸ್ ಜಾರಿ ಮಾಡಿತ್ತು. ಕಳೆದ ವರ್ಷ ಮಂಡ್ಯದ 150ಕ್ಕೂ ಹೆಚ್ಚು ‘ಸಾಧಕರು’ ಗೌ.ಡಾ. ಪಡೆದ ತಮಾಷೆ ಇನ್ನೂ ಹಸಿಹಸಿಯಾಗಿರುವಾಗಲೇ ಈ ವರ್ಷ ಮತ್ತೆ ಅಷ್ಟೇ ಸಂಖ್ಯೆಯ ‘ಸಾಧಕರಿಗೆ’ ಗೌ.ಡಾ. ನೀಡುವ ಕಾರ್ಯಕ್ರಮಕ್ಕೆ ಪೊಲೀಸರೇ ದಾಳಿ ಮಾಡಿ ಕಾರ್ಯಕ್ರಮವನ್ನು ನಿಲ್ಲಿಸುವ ಪರಿಸ್ಥಿತಿ ಬಂದಿದೆ. ಇನ್ನು ಯಾವ ಕಾನೂನು, ಮಾರ್ಗದರ್ಶೀ ಸೂತ್ರಗಳಿಗೆ ಎಲ್ಲಿ ಬೆಲೆ?

ಪಿಎಚ್‍ಡಿ ಪ್ರಕ್ರಿಯೆ ಸುಲಭವಲ್ಲ:

ಅಕಡೆಮಿಕ್ ವಲಯದಲ್ಲಿ ಪಿಎಚ್‍ಡಿ ಪಡೆಯುವುದು ವಾಸ್ತವವಾಗಿ ಸುಲಭದ ವಿಚಾರವಲ್ಲ. ಪಿಎಚ್‍ಡಿ ನೀಡುವ ವಿವಿಗೆ ಯುಜಿಸಿಯ ಮಾನ್ಯತೆ ಇರಬೇಕು. ಅಭ್ಯರ್ಥಿ ನಿಯಮಾನುಸಾರ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಂಡು 3ರಿಂದ 6 ವರ್ಷ ಸಂಶೋಧನೆ ನಡೆಸಬೇಕು. ಸಂಶೋಧನ ವಿಧಾನಗಳನ್ನು ಅಭ್ಯಸಿಸುವುದಕ್ಕಾಗಿ ಆರಂಭದಲ್ಲಿ ಆರು ತಿಂಗಳ ಕೋರ್ಸ್ ವರ್ಕ್ ಪೂರೈಸಬೇಕು. ವಿವಿಯಿಂದ ಮಾನ್ಯತೆ ಪಡೆದಿರುವ ಮಾರ್ಗದರ್ಶಕರ ಉಸ್ತುವಾರಿಯಲ್ಲಿ ಕ್ಷೇತ್ರಕಾರ್ಯಾದಿ ಹಲವು ವಿಧಾನಗಳನ್ನು ಅನುಸರಿಸಿ ಸಂಶೋಧನೆ ಕೈಗೊಂಡು ಪ್ರಬಂಧ ರಚಿಸಬೇಕು. ಈ ನಡುವೆ ಸಂಶೋಧನೆ ನಡೆಸುವ ಕ್ಷೇತ್ರದ ವ್ಯಾಪ್ತಿಯಲ್ಲೇ ಕನಿಷ್ಠ ಎರಡು ಸಂಶೋಧನ ಲೇಖನಗಳನ್ನು ಸಿದ್ಧಪಡಿಸಿ ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಪ್ರಕಟಿಸಬೇಕು. ಪ್ರತೀ ಆರು ತಿಂಗಳಿಗೊಮ್ಮೆ ಸಂಶೋಧನೆಯ ಪ್ರಗತಿ ವರದಿಯನ್ನು ವಿವಿಗೆ ಸಲ್ಲಿಸಬೇಕು. ಅಂತಿಮವಾಗಿ ರಚನೆಯಾಗುವ ಪ್ರಬಂಧವನ್ನು ಇಬ್ಬರು ಬಾಹ್ಯ ಪರೀಕ್ಷಕರು ಮೌಲ್ಯಮಾಪನಕ್ಕೆ ಒಳಪಡಿಸಬೇಕು. ಕೃತಿಚೌರ್ಯ ನಡೆದಿಲ್ಲವೆಂದು ರುಜುವಾತಾಗಬೇಕು. ಅಭ್ಯರ್ಥಿ ಮುಕ್ತ ಸಂದರ್ಶನದಲ್ಲಿ ಸಂಶೋಧನೆಯ ಫಲಿತಾಂಶಗಳನ್ನು ಮಂಡಿಸಿ ಅವುಗಳನ್ನು ಸಮರ್ಥಿಸಿಕೊಳ್ಳಬೇಕು. ಇಷ್ಟಾದಮೇಲೆಯೇ ಪಿಎಚ್‍ಡಿ ಒಲಿಯುವುದು. ಅನೇಕ ಮಂದಿ ಮೂರ್ನಾಲ್ಕು ವರ್ಷಗಳಲ್ಲಿ ಪೂರೈಸಬೇಕಾದ ಪಿಎಚ್‍ಡಿಗೆ ಏಳೆಂಟು ವರ್ಷ ತೆಗೆದುಕೊಳ್ಳುವುದೂ ಇದೆ.

ಗೌರವ ಡಾಕ್ಟರೇಟುಗಳಾದರೂ ಅಷ್ಟು ಸುಲಭದಲ್ಲಿ ಮಾರಾಟಕ್ಕಿಡುವ ಸರಕುಗಳಲ್ಲ. ವಿಶ್ವವಿದ್ಯಾನಿಲಯ ಗುರುತಿಸುವ ಸಾಧಕರ ಪಟ್ಟಿ ಅಕಡೆಮಿಕ್ ಕೌನ್ಸಿಲ್, ಸಿಂಡಿಕೇಟ್‍ನಲ್ಲಿ ಚರ್ಚೆಗೆ ಬಂದು ಅಂತಿಮಗೊಳಿಸುವ ಪಟ್ಟಿಯನ್ನು ಕುಲಾಧಿಪತಿಗಳಾದ ರಾಜ್ಯಪಾಲರಿಗೆ ಕಳಿಸಿಕೊಡಬೇಕು. ರಾಜ್ಯಪಾಲರು ತಮ್ಮ ವಿವೇಚನೆಯನ್ನು ಬಳಸಿ ಯಾರಿಗೆ ಗೌರವ ಡಾಕ್ಟರೇಟ್ ನೀಡಬಹುದೆಂದು ನಿರ್ಧಾರ ಮಾಡುತ್ತಾರೆ. ಅವರಿಗಷ್ಟೇ ವಿವಿ ತನ್ನ ಘಟಿಕೋತ್ಸವದಲ್ಲಿ ಗೌರವ ಪ್ರದಾನ ಮಾಡಬಹುದು. 2016ರಿಂದ ಒಂದು ಘಟಿಕೋತ್ಸವದಲ್ಲಿ ಮೂವರಿಗೆ ಮಾತ್ರ ಗೌರವ ಡಾಕ್ಟರೇಟ್ ನೀಡಬಹುದೆಂಬ ನಿಯಮ ಜಾರಿಯಲ್ಲಿದೆ. ಹೋಟೆಲುಗಳು ಮಸಾಲೆ ದೋಸೆ ಹಂಚುವಂತೆ ಅಂತಹದೇ ಹೋಟೆಲುಗಳಲ್ಲಿ ಗೌರವ ಡಾಕ್ಟರೇಟ್‍ಗಳು ಹಂಚಲ್ಪಡಿತ್ತಿರುವುದು ಮಾತ್ರ ಇಂದಿನ ವ್ಯಂಗ್ಯ.

ಅಧಿಕೃತ ವಿಶ್ವವಿದ್ಯಾನಿಲಯಗಳದ್ದೇ ಹೆಸರಿನಲ್ಲಿ ನಕಲಿ ಪಿಎಚ್‍ಡಿ ಮತ್ತಿತರ ಪ್ರಮಾಣಪತ್ರ ತಯಾರಿಸಿ ಸಲ್ಲಿಸುವ ದಂಧೆಯಿಂದ ತೊಡಗಿ, ‘ವರ್ಚುವಲ್’ ವಿವಿಗಳು ಬಿಕರಿ ಮಾಡುತ್ತಿರುವ ಗೌ.ಡಾ.ಗಳವರೆಗೆ, ಈ ಎಲ್ಲ ಬೇಕಾಬಿಟ್ಟಿ ದಂಧೆಗಳಿಗೆ ಕಾನೂನಿನ ಕಡಿವಾಣ ತೊಡಿಸದೇ ಹೋದರೆ ನಮ್ಮ ಶೈಕ್ಷಣಿಕ ಹಾಗೂ ಸಂಶೋಧನ ವಲಯಕ್ಕೆ ಉಳಿಗಾಲವಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರವೇ ಸೂಕ್ತ ನಿರ್ಧಾರ ಕೈಗೊಂಡು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿ ಈ ಅವ್ಯವಹಾರಗಳನ್ನು ಮಟ್ಟಹಾಕುವುದು ಅನಿವಾರ್ಯ. ಕಳ್ಳತನ, ಕೊಲೆ, ಸುಲಿಗೆಗಳಂಥದ್ದೇ ಕ್ರಿಮಿನಲ್ ಕೃತ್ಯಗಳನ್ನಾಗಿ ಇಂಥವುಗಳನ್ನು ಪರಿಗಣಿಸಿ ಕ್ರಮ ಕೈಗೊಳ್ಳದೆ ಹೋದರೆ ನ್ಯಾಯಮಾರ್ಗದಲ್ಲಿ ಪದವಿಗಳನ್ನು ಪಡೆದವರನ್ನೇ ಸಮಾಜ ಕ್ರಿಮಿನಲ್‍ಗಳಂತೆ ನಡೆಸಿಕೊಳ್ಳುವ ದಿನ ದೂರವಿಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.

ಬುಧವಾರ, ಅಕ್ಟೋಬರ್ 7, 2020

ಬಂಧನದ ಬೆಸುಗೆಗೊಂದು ಒಸಗೆ

07 ಅಕ್ಟೋಬರ್ 2020ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ಅಲ್ಲೇ ಓದಲು ಇಲ್ಲಿ ಕ್ಲಿಕ್ಕಿಸಿ.

ಇಂತಹ ಮದುವೆ ನೋಡದೆ ವರ್ಷಗಳೆಷ್ಟಾದವು ಅಂತನ್ನಿಸಿತ್ತು. ಅಬ್ಬಬ್ಬಾ ಎಂದರೆ ಐವತ್ತರ ಆಸುಪಾಸಿನಲ್ಲಿದ್ದರು ಜನ. ಆದರೂ ಮದುವೆ ಮನೆಯ ಗದ್ದಲ ಒಂದು ಫರ್ಲಾಂಗಿನಾಚೆಗೂ ಕೇಳಿಸುತ್ತಿತ್ತು. ಹಾಗೆಂದು ಧ್ವನಿವರ್ಧಕ, ಬ್ಯಾಂಡು ವಾಲಗ ಇರಲಿಲ್ಲ. ಮನೆಯ ಸುತ್ತ ಅಲಂಕಾರಿಕ ವಿದ್ಯುದ್ದೀಪಗಳು ಝಗಮಗಿಸುತ್ತಿರಲಿಲ್ಲ. ಬಿಸಿಲು ಮಳೆಗಳಿಂದ ತೊಂದರೆಯಾಗದಂತೆ ಮನೆಯೆದುರು ಸಣ್ಣದೊಂದು ಶಾಮಿಯಾನ ಇತ್ತು.  ಪ್ರವೇಶದ್ವಾರದಲ್ಲಿ ಎರಡು ಬಾಳೆ ಕಂದು, ಮಾವಿನೆಲೆಯ ಪುಟ್ಟ ತೋರಣ.

ಚಪ್ಪರದ ತುಂಬ ನಗು, ಮಾತು, ಗೌಜು ಗದ್ದಲ. ಕುಟುಂಬದ ಸದಸ್ಯರು, ತೀರಾ ಹತ್ತಿರದ ಬಂಧುಬಳಗದ ಹೊರತಾಗಿ ಬೇರೆ ಯಾರೂ ಇರಲಿಲ್ಲ. ಹಳಬರು ಹಳೆ ಕಥೆಗಳನ್ನು ಬಿಚ್ಚುತ್ತಿದ್ದರೆ, ಹೊಸಬರು ಹೊಸ ಕನಸು ಕಟ್ಟಿಕೊಂಡು ಓಡಾಡುತ್ತಿದ್ದರು. ದಿನವಿಡೀ ಮಾತು, ತಮಾಷೆ, ಕೀಟಲೆ; ಮಧ್ಯಾಹ್ನಕ್ಕೆ ಬಂಧುಬಳಗವೇ ಬಡಿಸಿದ ಹಿತಮಿತ ಊಟ. ಮದುವೆ ಗಂಡು-ಹೆಣ್ಣು ಬಿಡುವಾಗಿ, ನಿರಾಳವಾಗಿ, ಬಂದವರ ಕ್ಷೇಮ ಸಮಾಚಾರ ವಿಚಾರಿಸಿಕೊಂಡು ಓಡಾಡುತ್ತಿದ್ದರು. ಹಳ್ಳಿ ಮನೆಯಾದ್ದರಿಂದ ಮಧ್ಯಾಹ್ನ ದಾಟುವ ಹೊತ್ತಿಗೆ ಪಕ್ಕದ ಹೊಲಗಳಿಂದ ಜೋಡಿ ನವಿಲುಗಳೆರಡು ಬಂದು ಅಂಗಳದಾಚೆ ನರ್ತನಕ್ಕೇ ನಿಂತು ಬಿಟ್ಟವು- ಹೇಳಿ ಕರೆಸಿದ ಹಾಗೆ.

ಕೊರೋನ ನಿಜವಾಗಿಯೂ ಎಂತಹ ಮದುವೆ ಉಡುಗೊರೆ ನೀಡಿಹೋಯಿತಲ್ಲ ಎಂದನ್ನಿಸಿಬಿಟ್ಟಿತು. ಮನೆಯಲ್ಲಿ ಮದುವೆ ನಿಶ್ಚಯವಾಯಿತೆಂದರೆ ಅದರೊಂದಿಗೆ ಚಿಂತೆಯೇ ಉಡುಗೊರೆಯಾಗಿ ಬರುವ ಕಾಲವಿದು. ಉಳಿದ ಖರ್ಚುಗಳೆಲ್ಲ ಒತ್ತಟ್ಟಿಗಿರಲಿ, ಮದುವೆ ಸುತ್ತಮುತ್ತಲಿನ ಒಂದೆರಡು ದಿನದ ಖರ್ಚುಗಳೇ ಎರಡೂ ಕುಟುಂಬದವರನ್ನು, ಅದರಲ್ಲೂ ಹೆಣ್ಣುಹೆತ್ತವರನ್ನು ಹೈರಾಣಾಗಿಸುವುದಿದೆ. ಜೀವಮಾನವಿಡೀ ಕೂಡಿಟ್ಟ ಉಳಿತಾಯ, ಹೊಲ, ಸೈಟ್ ಮಾರಿಸುವ ಮದುವೆಯೆಂಬುದು ಅನೇಕ ಮಧ್ಯಮವರ್ಗದವರಿಗೊಂದು ದುಃಸ್ವಪ್ನ.

ಊರಲ್ಲೇ ಹೆಚ್ಚು ಬಾಡಿಗೆ ವಿಧಿಸುವ ದೊಡ್ಡ ಚೌಲ್ಟ್ರಿಯನ್ನು ಗೊತ್ತುಮಾಡಬೇಕು; ವಿವಾಹದ ಆಮಂತ್ರಣಪತ್ರಿಕೆಯಲ್ಲೇ ಎರಡೂ ಕಡೆಯವರ ಸ್ಥಾನಮಾನಗಳು ಪ್ರತಿಫಲಿಸಬೇಕು; ಊಟದ ಮೆನು ಕನಿಷ್ಟ ಹತ್ತು ಮೀಟರ್ ಇರಬೇಕು; ಅದಕ್ಕೆ ಒಪ್ಪುವ ಕ್ಯಾಟರಿಂಗ್ ವ್ಯವಸ್ಥೆ ಆಗಬೇಕು; ಏನಿಲ್ಲವೆಂದರೂ ಒಂದು ಸಾವಿರ ಮಂದಿಯನ್ನು ಕರೆಯಬೇಕು; ಮದುವೆಯ ದಿನವಲ್ಲದೆ ಪ್ರಿ-ವೆಡ್ಡಿಂಗ್, ಪೋಸ್ಟ್-ವೆಡ್ಡಿಂಗ್ ಫೋಟೋಶೂಟುಗಳಾಗಬೇಕು; ಛತ್ರವನ್ನು ಲಕ್ಷಗಟ್ಟಲೆ ರೂಪಾಯಿ ವ್ಯಯಿಸಿ ಲೋಡುಗಟ್ಟಲೆ ಹೂವು, ವಿದ್ಯುದ್ದೀಪಗಳಿಂದ ಸಿಂಗರಿಸಬೇಕು. ಉಂಡದ್ದಕ್ಕಿಂತಲೂ ಹೆಚ್ಚು ಎಸೆಯುವಷ್ಟು ಭಕ್ಷ್ಯ-ಭೋಜ್ಯಗಳು ರಾರಾಜಿಸಬೇಕು. ಒಟ್ಟಿನಲ್ಲಿ ಮದುವೆ ಅದ್ದೂರಿಯಾಗಿಯಾಗಬೇಕು. 

ಬಹುತೇಕ ಮದುವೆಗಳು ನಡೆಯುವುದು ಹೀಗೆ. ಅಲ್ಲಿ ವೈಭವ, ಆಡಂಬರಗಳಿಗೆ ಆದ್ಯತೆಯೇ ಹೊರತು ಪರಸ್ಪರ ಸಂಬಂಧಗಳು ಹುಡುಕಿದರೂ ಸಿಗಲಾರವು. ಮೇಲೆ ಹೇಳಿದಷ್ಟು ವ್ಯವಸ್ಥೆಗಳಾಗಬೇಕು ಎಂದ ಮೇಲೆ ಸಂಬಂಧ, ಪ್ರೀತಿ, ವಿಶ್ವಾಸ ಎಂದೆಲ್ಲ ಮಾತನಾಡಿ ಪ್ರಯೋಜನವೂ ಇಲ್ಲ. ಎಲ್ಲರೂ ಒಂದೊಂದು ಅಡಾವುಡಿಯಲ್ಲಿ ಕಳೆದುಹೋಗಿರುತ್ತಾರೆ. ವ್ಯವಸ್ಥೆಗಳ ನಿರ್ವಹಣೆಯಲ್ಲಿ ನಿತ್ರಾಣರಾಗಿರುವ ಮನೆಮಂದಿಗೆ ಬಂದವರೆಷ್ಟು, ಹೋದವರೆಷ್ಟು, ಉಂಡವರೆಷ್ಟು, ತಿಂದವರೆಷ್ಟು ಎಂದೆಲ್ಲ ವಿಚಾರಿಸಿಕೊಳ್ಳುವ ವ್ಯವಧಾನವಾಗಲೀ, ಚೈತನ್ಯವಾಗಲೀ ಉಳಿದಿರುವುದಿಲ್ಲ. ಖುದ್ದು ಮದುಮಗ-ಮದುಮಗಳೇ ಸಾಲುಗಟ್ಟಿದ ಅತಿಥಿಗಳೆದುರು ನಗುಮುಖ ಪ್ರದರ್ಶಿಸಿ, ಕಣ್ಣುಕೋರೈಸುವ ಕ್ಯಾಮರಾ ಬೆಳಕಿಗೆ ಮುಖವೊಡ್ಡಿ, ವಾಸ್ತವವಾಗಿ ಏನೇನು ನಡೆಯಿತು ಎಂದು ನೆನಪಿಟ್ಟುಕೊಳ್ಳುವ ಪರಿಸ್ಥಿತಿಯೂ ಇರುವುದಿಲ್ಲ. 

ಸಾಂಪ್ರದಾಯಿಕ ಮದುವೆಗಳಲ್ಲಿ 'ಉಡುಗೊರೆ ಭಾರವೇ’ ಎಂದು ಪುರೋಹಿತರ ಮೂಲಕ ಮನೆಯ ಯಜಮಾನ ವಿಚಾರಿಸಿಕೊಳ್ಳುವ ಪದ್ಧತಿ ಇತ್ತು. ಈಗ ವೇದಿಕೆಯ ನಾಲ್ಕು ಮೂಲೆಗಳಲ್ಲಿ ಮಾರ್ಷಲ್‌ಗಳನ್ನು ನಿಲ್ಲಿಸಿ ಅತಿಉತ್ಸಾಹದ ಅತಿಥಿಗಳನ್ನು ಎತ್ತಿಎಸೆಯುವ ಸಂಪ್ರದಾಯವಿದೆ. ಊಟದ ಹಾಲ್ ಪ್ರವೇಶಿಸಿ ಬಡಿಸಿದ್ದನ್ನು ದಕ್ಕಿಸಿಕೊಂಡು ಹೋಗುವುದೇ ದೊಡ್ಡದೊಂದು ಸವಾಲು. ಎಲ್ಲರೂ ಊಟದ ಸಮಯಕ್ಕೆ ಆಗಮಿಸವವರಾದ್ದರಿಂದ ಅಲ್ಲಿ ಅತಿಹೆಚ್ಚು ನೂಕುನುಗ್ಗಲು. ಊಟಕ್ಕೆ ಕುಳಿತವರು ಎದ್ದತಕ್ಷಣ ಸೀಟು ಹಿಡಿಯಬೇಕಾದ್ದರಿಂದ ಅವರ ಊಟ ಆರಂಭವಾಗುವಾಗಲೇ ಬೆನ್ನಹಿಂದೆ ಸರತಿಸಾಲು. ಇವರ ಊಟ ಯಾವಾಗ ಮುಗಿಯುತ್ತದೋ ಎಂಬ ಅಸಹನೆಯ ಮುಖಹೊತ್ತ ಮಂದಿ ಬೆನ್ನಹಿಂದೆ ನಿಂತಿರುವುದರಿಂದ ಊಟಕ್ಕೆ ಕುಳಿತವನಿಗೂ 'ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂಥ’ ಅನುಭವ.

ಕೊರೋನಾದಿಂದ ಜಗತ್ತೇ ಥರಗುಟ್ಟಿದ್ದೇನೋ ನಿಜ. ಅದು ಹೊತ್ತು ತಂದ ಎಲ್ಲ ಕಂಟಕಗಳ ನಡುವೆಯೂ, ಅತಿ ಆಡಂಬರದ ಮದುವೆಗಳು ತತ್ಕಾಲಕ್ಕಾದರೂ ನಿಯಂತ್ರಣಕ್ಕೆ ಬಂದವು ಎಂಬುದೊಂದು ಸಮಾಧಾನದ ಸಂಗತಿ. ಕೊರೋನದಿಂದ ಅನೇಕ ಮದುವೆಗಳು ಮುಂದೂಡಲ್ಪಟ್ಟವು. ಮಾಡಿದ ತಯಾರಿಗಳು ನಷ್ಟವಾದವು. ಇನ್ನೇನು ಮುಂದಿನ ವಾರ ಮದುವೆ ಎಂದು ಕಾಯುತ್ತಿದ್ದವರು ನಿರಾಸೆಗೊಳಗಾದರು. ಎಲ್ಲವೂ ನಿಜ. ಆದರೆ ಸೀಮಿತ ಸಂಖ್ಯೆಯ ನೆಂಟರನ್ನು ಸೇರಿಸಿಕೊಂಡು ಮದುವೆ ನಡೆಸಬಹುದು ಎಂಬ ಸೂಚನೆ ಬರುತ್ತಿದ್ದಂತೆಯೇ ಜನರ ಒಟ್ಟಾರೆ ದೃಷ್ಟಿಯೇ ಬದಲಾಗಿಹೋಯಿತು. ವೈಭವದ ಚೌಲ್ಟ್ರಿಗಳನ್ನೆಲ್ಲ ಬಿಟ್ಟು ಜನ ಮನೆಗೆ ಮರಳಿದರು. ಇರುವ ವ್ಯವಸ್ಥೆಯಲ್ಲೇ ಸರಳ ಮದುವೆಗಳು ಆರಂಭವಾದವು. ತೀರಾ ಹತ್ತಿರದ ಬಂಧುವರ್ಗ, ಸ್ನೇಹಿತರು ಮಾತ್ರ ಒಟ್ಟಾದರು. ಪರಸ್ಪರ ಕಲೆತರು, ಮನಸಾರೆ ಮಾತಾಡಿದರು, ಅಚ್ಚಳಿಯದ ಚಿತ್ರವೊಂದಕ್ಕೆ ಚೌಕಟ್ಟು ತೊಡಿಸಿ ಹೃದಯದಲ್ಲಿ ಭದ್ರವಾಗಿಸಿಕೊಂಡರು.

ಈ ಬೆಳವಣಿಗೆಯಿಂದ ಆಗಿರುವ ತೊಂದರೆಗಳೇನೂ ಕಮ್ಮಿಯಿಲ್ಲ. ಇರುವ ಒಬ್ಬನೇ/ಒಬ್ಬಳೇ ಮಗನ/ಮಗಳ ಮದುವೆಯನ್ನು ವರ್ಣರಂಜಿತವಾಗಿ ನಡೆಸಬೇಕು, ನೂರಾರು ಬಂಧುಬಳಗ ಸ್ನೇಹಿತರನ್ನು ಕರೆದು ಅದ್ದೂರಿಯಾಗಿ ಊಟಹಾಕಿಸಬೇಕು ಎಂದು ಕಾಯುತ್ತಿದ್ದವರಿಗೆ ನಿರಾಸೆ ಆಗಿದೆ. ಒಂದು ದೊಡ್ಡಮಟ್ಟದ ಮದುವೆ ನಡೆದರೆ ಅದರಿಂದ ತಮ್ಮ ದಿನದ ಕೂಲಿ ದುಡಿಯುವ ಹತ್ತಾರು ಮಂದಿಯ ಆದಾಯಕ್ಕೆ ಪೆಟ್ಟುಬಿದ್ದಿದೆ. ಮದುವೆ ಹಾಲ್‌ನ ಮಂದಿ, ಅಡುಗೆಯವರು, ಶಾಮಿಯಾನದವರು, ಹೂವಿನ ವ್ಯಾಪಾರಿಗಳು, ಛಾಯಾಗ್ರಾಹಕರು, ವಾಹನಗಳ ಮಾಲೀಕರು-ಚಾಲಕರು, ಸಹಾಯಕರು- ಎಲ್ಲರ ವ್ಯವಹಾರ ಕುಂಠಿತವಾಗಿದೆ. ಅವರಿಗಾದ ನಷ್ಟ ತುಂಬ ದೊಡ್ಡಮಟ್ಟದ್ದು.

ಆದರೆ ಒಟ್ಟಾರೆ ಬೆಳವಣಿಗೆ ಸರಳ ವಿವಾಹಗಳನ್ನು ಇಷ್ಟಪಡುವವರಿಗೆ ವರದಾನವಾಗಿ ಪರಿಣಮಿಸಿದೆ. ಮದುವೆ ಮನೆಗಳಲ್ಲಿ ಮತ್ತೆ ಮನುಷ್ಯ ಸಂಬಂಧಗಳು ಚಿಗುರಿಕೊಂಡಿವೆ. ಮದುವೆಯೇನೋ ಸ್ವರ್ಗದಲ್ಲಿ ನಡೆಯುತ್ತದೆ. ಮದುವೆ ಮಾಡಿಸಿದವನ ಬದುಕು ನರಕವಾಗಬಾರದಲ್ಲ? ಹಾಗಾಗದಂತಹ ಭಾರೀ ಒಸಗೆಯೊಂದನ್ನು ಕೊರೋನಾ ತಂದಿತೇ? ಇದು ಹೀಗೆಯೇ ಉಳಿದೀತೇ?

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಸೆಪ್ಟೆಂಬರ್ 29, 2020

ಬಲ್ಲಿರೇನಯ್ಯ! ಇಳೆಯಣ್ಣನಿಗೀಗ ಮೂವತ್ತು ವರ್ಷ

ಸೆಪ್ಟೆಂಬರ್ 29, 2020ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

ಏನೂ ಗೊತ್ತಿಲ್ಲದವರ ಪ್ರತಿನಿಧಿ ಇವನು. ಆದರೆ ಇವನಿಗೆ ಎಲ್ಲವೂ ಗೊತ್ತಿದೆ. ಇವನು ವಿದ್ಯೆ ಎಷ್ಟು ಮುಖ್ಯವೆಂದು ಸಾರುತ್ತಾನೆ. ಮೂಢನಂಬಿಕೆಗಳಿಂದ ಹೊರಬನ್ನಿರೆಂದು ಬೇಡಿಕೊಳ್ಳುತ್ತಾನೆ. ಮಿತಸಂತಾನ ಒಳ್ಳೆಯದೆಂದು ಪ್ರತಿಪಾದಿಸುತ್ತಾನೆ. ಕುಡಿತ-ಜೂಜು ಬಿಡಿರೆಂದು ಒತ್ತಾಯಿಸುತ್ತಾನೆ. ಕಡ್ಡಾಯ ಮತದಾನ ಮಾಡಿ, ಸಾಂಕ್ರಾಮಿಕ ರೋಗಗಳಿಂದ ದೂರವಿರಿ, ಏಡ್ಸನ್ನು ಓಡಿಸಿ, ಪರಿಸರ ರಕ್ಷಿಸಿ, ಜೀವವೈವಿಧ್ಯ ಕಾಪಾಡಿ ಎಂದೆಲ್ಲ ಜನರ ಮನವೊಲಿಸುತ್ತಾನೆ. ಅಂತಿಂಥ ವ್ಯಕ್ತಿಯಲ್ಲ, ಈತ ಇಳೆಯಣ್ಣ.

ಇವನು ಹುಟ್ಟಿದ್ದು 1990ರ ಅಕ್ಟೋಬರ್ 2ರಂದು. ಹುಟ್ಟಿದಲ್ಲಿಂದಲೇ ಇವನ ತಿರುಗಾಟ ಶುರು. ಹಳ್ಳಿ ಪಟ್ಟಣ ಎನ್ನದೆ ಕರ್ನಾಟಕದ ಮೂಲೆಮೂಲೆಗಳನ್ನು ಸುತ್ತಿದ್ದಾನೆ. ಸಂದೇಶಗಳನ್ನು ಸಾರಿದ್ದಾನೆ. ಜನರ ಮನಸ್ಸನ್ನು ತಲುಪಲು ಪ್ರಯತ್ನಿಸಿದ್ದಾನೆ. ಹುಟ್ಟಿದಾಗಲೇ ಇವನು ಮಧ್ಯವಯಸ್ಕ ಆಗಿದ್ದರಿಂದ ಇವನಿಗೀಗ ಮೂವತ್ತು ಆಯಿತು ಎಂದರೆ ಜನರು ಒಪ್ಪವುದು ಕಷ್ಟ.

ಇದು ಇಳೆಯಣ್ಣನ ಕಥೆ. ಕಲೆಯ ಮೂಲಕ ಜನರನ್ನು ಹೇಗೆ ಮುಟ್ಟಬಹುದು, ತಟ್ಟಬಹುದು ಎಂಬ ಯೋಚನೆಯ ಕೂಸು ಈ ಇಳೆಯಣ್ಣ. ಸಮಾಜದಲ್ಲಿ ಪರಿವರ್ತನೆ ತರಬೇಕೆಂದರೆ ಮೊದಲು ಜನರ ಮನಸ್ಸಿನಲ್ಲಿ ಅಂತಹ ಅದು ಆರಂಭವಾಗಬೇಕು; ಹೊಸ ವಿಚಾರಗಳಿಗೆ ಅವರು ತೆರೆದುಕೊಳ್ಳಬೇಕು. ಅವರ ಮನಸ್ಸಿಗೆ ಹತ್ತಿರವಾದ ಕಲೆಗಳನ್ನೇ ಮಾಧ್ಯಮವಾಗಿಸಿದರೆ ಈ ಕೆಲಸ ಸುಲಭ ಎಂಬ ಚಿಂತನೆ ಈ ಇಳೆಯಣ್ಣನ ಹಿಂದೆ ಇದೆ. ಈ ರೀತಿ ಯೋಚಿಸುತ್ತಿದ್ದವರನ್ನು ಪ್ರಯೋಗಶೀಲತೆಗೆ ಹೆಸರಾಗಿದ್ದ ಯಕ್ಷಗಾನ ಆಕರ್ಷಿಸಿದ್ದರಲ್ಲಿ ಅಚ್ಚರಿಯೇನೂ ಇಲ್ಲ.

1990ರ ದಶಕದಲ್ಲಿ ಸಕ್ರಿಯವಾಗಿದ್ದ ಸಂಪೂರ್ಣ ಸಾಕ್ಷರತಾ ಆಂದೋಲನದ ಪ್ರಚಾರದಲ್ಲಿ ಯಕ್ಷಗಾನ ವಹಿಸಿದ ಪಾತ್ರ ದೊಡ್ಡದು. ಯೋಜನೆಯ ಉದ್ದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಆ ಕಾಲದಲ್ಲಿ ರಚನೆಯಾದ ಪ್ರಸಂಗಗಳು 25ಕ್ಕಿಂತಲೂ ಹೆಚ್ಚು. ಮಂಗಳೂರಿನ ಕಲಾಗಂಗೋತ್ರಿಯ ನೇತೃತ್ವದಲ್ಲಿ ಸಾಕ್ಷರತಾ ಯಕ್ಷಗಾನಗಳ ಹತ್ತಾರು ಪ್ರದರ್ಶನಗಳು ನಡೆದರೆ, ಬೆಂಗಳೂರಿನ ‘ಯಕ್ಷದೇಗುಲ’ವು ‘ಇಳೆಯಣ್ಣನ ಕಥೆ’ ಅಥವಾ ‘ಅಕ್ಷರ ವಿಜಯ’ ಎಂಬ ಪ್ರಸಂಗದೊಂದಿಗೆ ರಾಜ್ಯಾದ್ಯಂತ ಪ್ರವಾಸ ಮಾಡಿತು.

‘ಇಳೆಯಣ್ಣನ ಕಥೆ’ಯ ಮೊದಲ ಪ್ರದರ್ಶನವಾದದ್ದು 1990ರ ಗಾಂಧೀಜಯಂತಿಯಂದು. ಭಾರತ ಜ್ಞಾನ ವಿಜ್ಞಾನ ಸಮಿತಿಯು ಬೆಂಗಳೂರು ನಗರ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಕಲಾಜಾಥಾಕ್ಕೆ ಹೊಸ ಮೆರುಗು ನೀಡಿದ್ದು ಈ ಯಕ್ಷಗಾನ. ಆರಂಭದಲ್ಲಿ ಸಾಕ್ಷರತಾ ಆಂದೋಲನದ ಪ್ರಚಾರವೇ ಇದರ ಪ್ರಮುಖ ವಸ್ತುವಾಗಿದ್ದರೂ ಮುಂದೆ ಅನೇಕ ಸಂದೇಶಗಳ ಪ್ರಸಾರಕ್ಕೆ ಬಳಕೆಯಾಯಿತು.

ಮಾಲಿನ್ಯ ನಿಯಂತ್ರಣ, ಪರಿಸರ ಸಂರಕ್ಷಣೆ, ದುಶ್ಚಟಗಳ ಬಗ್ಗೆ ಎಚ್ಚರ, ಏಡ್ಸ್ ಜಾಗೃತಿ, ಪೌಷ್ಟಿಕ ಆಹಾರ, ಸಣ್ಣ ಕುಟುಂಬ, ವರದಕ್ಷಿಣೆ ವಿರೋಧ, ಮತದಾನಕ್ಕೆ ಪ್ರೇರಣೆ ಇತ್ಯಾದಿಗಳಿಂದ ತೊಡಗಿ ಆಯಾ ಸಂದರ್ಭ ಬಯಸುವ ಯಾವುದೇ ವಿಚಾರಗಳನ್ನೂ ಜನರಿಗೆ ತಲುಪಿಸುವ ಸಾಧ್ಯತೆಯನ್ನು ‘ಇಳೆಯಣ್ಣನ ಕಥೆ’ ತೋರಿಸಿಕೊಟ್ಟಿತು.

ಇದು ಹಿರಿಯ ರಂಗಕರ್ಮಿ ಗೋಪಾಲಕೃಷ್ಣ ನಾಯರಿಯವರ ಪರಿಕಲ್ಪನೆ. ಹಿಂದಿಯ ‘ಏಕ್ ಚಿಟ್ಟಿ’ ಎಂಬ ಕಿರುನಾಟಕವೇ ಇದಕ್ಕೆ ಪ್ರೇರಣೆ. ಇಳೆಯಣ್ಣನೆಂಬ ವ್ಯಕ್ತಿ ಅನಕ್ಷರತೆಯೇ ಕಾರಣವಾಗಿ ತನ್ನ ಜೀವನದಲ್ಲಿ ಅನುಭವಿಸುವ ಪಡಿಪಾಟಲು ಈ ಯಕ್ಷಗಾನದ ಹೂರಣ. ಇಲ್ಲಿ ನಿರಕ್ಷರ ರಕ್ಕಸನೊಂದಿಗಿನ ಯುದ್ಧದಲ್ಲಿ ಅಕ್ಷರದೇವ ಗೆಲ್ಲುತ್ತಾನೆ. “ಸಾಮಾಜಿಕ ತುರ್ತೊಂದರ ಸಂದರ್ಭದಲ್ಲಿ ಹುಟ್ಟಿಕೊಂಡ ಯಕ್ಷರೂಪಕ ಇಳೆಯಣ್ಣನ ಕಥೆ. ರಂಗಭೂಮಿ ಹಿನ್ನೆಯಿಂದ ಬಂದ ನಾನು ಸಂದೇಶವೊಂದನ್ನು ಯಕ್ಷಗಾನದ ಭಾಷೆಯಲ್ಲಿ ಜನಸಾಮಾನ್ಯರಿಗೆ ತಲುಪಿಸುವುದು ಸಾಧ್ಯವೇ ಎಂದು ಯೋಚಿಸಿದೆ. ಗುಂಡ್ಮಿ ರಘುರಾಂರಂತಹ ಪ್ರತಿಭಾವಂತರ ಸಹಕಾರ ದೊರೆಯಿತು.  ಇಳೆಯಣ್ಣನ ಕಥೆಯ ಅಷ್ಟೂ ಸಾಧ್ಯತೆಗಳನ್ನು ಸಮರ್ಥವಾಗಿ ಪ್ರಯೋಗಕ್ಕೆ ತಂದದ್ದು ಯಕ್ಷದೇಗುಲ” ಎಂದು ನೆನಪಿಸಿಕೊಳ್ಳುತ್ತಾರೆ ನಾಯರಿ.

ಯಕ್ಷದೇಗುಲದ ನೇತೃತ್ವ ವಹಿಸಿಕೊಂಡಿದ್ದವರು ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ಉಡುಪಿ ಮೂಲದ ಕೆ. ಮೋಹನ್.  “ಕಲೆಗಾಗಿ ಕಲೆಯೋ, ಸಮಾಜಕ್ಕಾಗಿ ಕಲೆಯೋ ಎಂಬ ಚರ್ಚೆ ಆಗಲೂ ಇತ್ತು, ಈಗಲೂ ಇದೆ. ಆದರೆ ಕಲೆಯೊಂದನ್ನು ಅದರ ಚೌಕಟ್ಟಿನಲ್ಲಿಯೇ ಸಮಾಜದ ಒಳಿತಿಗಾಗಿ ಬಳಸಬಹುದು ಎಂಬುದು ನಮ್ಮ ಸ್ಪಷ್ಟ ನಂಬಿಕೆಯಾಗಿತ್ತು. ಕೇಂದ್ರ ಸಂಗೀತ ಮತ್ತು ನಾಟಕ ವಿಭಾಗ, ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಆರೋಗ್ಯ ಇಲಾಖೆಗಳ ಬೆಂಬಲದಿಂದ ಇಳೆಯಣ್ಣನ ಕಥೆಯ ಪ್ರದರ್ಶನಗಳು ನಡೆಯುತ್ತಾ ಹೋದವು. ಇದುವರೆಗೆ 2000ಕ್ಕೂ ಹೆಚ್ಚು ಪ್ರದರ್ಶನಗಳನ್ನು ಮಾಡಿದ್ದೇವೆ,” ಎನ್ನುತ್ತಾರೆ ಮೋಹನ್.

(ಚಿತ್ರಕೃಪೆ: ಸುದರ್ಶನ ಉರಾಳ)

- ಸಿಬಂತಿ ಪದ್ಮನಾಭ ಕೆ. ವಿ.

ಗುರುವಾರ, ಸೆಪ್ಟೆಂಬರ್ 24, 2020

ಲಘುವಾಗಬಾರದು ಗುರು

ಸೆಪ್ಟೆಂಬರ್ 2020ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾದ ಲೇಖನ

ಒಬ್ಬ ಕೆಟ್ಟ ಶಿಕ್ಷಕ ಸದಾ ಜಗಳವಾಡುವುದರಲ್ಲಿ, ನೆಪಗಳನ್ನು ಹುಡುಕುವುದರಲ್ಲಿ ಕಾಲ ಕಳೆಯುತ್ತಾನೆ. ಸಾಮಾನ್ಯ ಶಿಕ್ಷಕ ವಿಷಯವನ್ನು ವಿವರಿಸಿ ಕಲಿಸುತ್ತಾನೆ. ಉತ್ತಮ ಶಿಕ್ಷಕ ಮಕ್ಕಳನ್ನು ಉದ್ದೀಪನಗೊಳಿಸಿ ಅವರೇ ಸ್ವತಃ ಕಲಿತುಕೊಳ್ಳುವಂತೆ ಮಾಡುತ್ತಾನೆ – ಎಂಬ ಒಂದು ಮಾತಿದೆ. ಸಾಮಾನ್ಯ ಶಿಕ್ಷಕರಿಗೂ ಶ್ರೇಷ್ಠ ಶಿಕ್ಷಕರಿಗೂ ಇರುವ ವ್ಯತ್ಯಾಸ ಇಷ್ಟೇ. ಪಾಠ ಮಾಡುವವರೆಲ್ಲರೂ ಗುರುಗಳಾಗಲಾರರು. ಅದು ಕೇವಲ ಉದ್ಯೋಗ ಸೂಚಕ ಪದವಲ್ಲ. ಅದೊಂದು ಸ್ವಯಂಸಿದ್ಧಿ. ‘ವರ್ಣಮಾತ್ರಂ ಕಲಿಸಿದಾತಂ ಗುರು’ – ಒಂದಕ್ಷರವನ್ನು ಕಲಿಸಿದಾತನೂ ಗುರುವೇ. ಆದರೆ ಆ ಕಲಿಕೆ ಬದುಕನ್ನು ಪ್ರಭಾವಿಸಿರಬೇಕು ಅಷ್ಟೇ. ವ್ಯಕ್ತಿಯನ್ನು ಉದ್ದೀಪಿಸುವುದು ಎಂದರೆ ಅದೇ ತಾನೇ?

“ಆರೋಗ್ಯವಂತರಾದ ಮತ್ತು ತಿಳುವಳಿಕೆಯುಳ್ಳ ಒಂದು ಡಜನ್ ಶಿಶುಗಳನ್ನೂ, ಅವನ್ನು ಬೆಳೆಸುವುದಕ್ಕೆ ಬೇಕಾದ ನನ್ನದೇ ಕಲ್ಪನೆಯ ವಿಶೇಷ ಪ್ರಪಂಚವನ್ನೂ ಒದಗಿಸಿರಿ. ಆದ ನಾನು ಯಾವುದೇ ಪೂರ್ವ ನಿರ್ಧಾರವಿಲ್ಲದೆಯೇ, ಅವರಲ್ಲೊಬ್ಬನನ್ನು ಆಯ್ದು- ಅವನ ಪ್ರತಿಭೆ, ಒಲವು, ಪ್ರವೃತ್ತಿ, ಸಾಮಥ್ರ್ಯ, ವೃತ್ತಿ ಹಾಗೂ ವಂಶದ ಪರಂಪರೆಯು ಯಾವುದೇ ಇರಲಿ- ಆತನನ್ನು ತಜ್ಞ ವೈದ್ಯನೋ, ನ್ಯಾಯವಾದಿಯೋ, ಕಲಾವಿದನೋ, ವ್ಯಾಪಾರಿಯೋ, ನಾಯಕನೋ, ಅಷ್ಟೇ ಏಕೆ ಭಿಕ್ಷುಕನೋ ಅಥವಾ ಕಳ್ಳನೋ ಆಗುವಂತೆ ತರಬೇತಿ ನೀಡುವುದಾಗಿ ಭರವಸೆ ಕೊಡುತ್ತೇನೆ” – ಎಂದು ಜೆ. ಬಿ. ವಾಟ್ಸನ್ ಎಂಬ ವರ್ತನಾವಾದಿ ಹೇಳಿದ್ದುಂಟು.

ಒಬ್ಬ ವ್ಯಕ್ತಿಯ ಬದುಕಿನಲ್ಲಿ ಶಿಕ್ಷಕನ ಪಾತ್ರವೇನು ಎಂಬುದನ್ನು ಬಹುಶಃ ಇದಕ್ಕಿಂತ ಸಮರ್ಥವಾಗಿ ಬಣ್ಣಿಸುವುದು ಕಷ್ಟವೇನೋ? ಶಿಕ್ಷಕ ಮನಸ್ಸು ಮಾಡಿದರೆ ಎಂತಹ ಅದ್ಭುತವನ್ನೂ ಸಾಧಿಸಬಲ್ಲ. ಆತ ಮೈಮರೆತರೆ ಎಂತಹ ಶಾಶ್ವತ ದುರಂತಗಳಿಗೂ ಕಾರಣವಾಗಬಲ್ಲ. ಅದನ್ನು ಚಿಂತಕನೊಬ್ಬ ತುಂಬ ಚೆನ್ನಾಗಿ ವಿವರಿಸುತ್ತಾನೆ: “ವೈದ್ಯರ ತಪ್ಪುಗಳು ಹೂಳಲ್ಪಡುತ್ತವೆ; ವಕೀಲರ ತಪ್ಪುಗಳು ನೇಣುಹಾಕಲ್ಪಡುತ್ತವೆ. ಆದರೆ ಶಿಕ್ಷಕರ ತಪ್ಪುಗಳು ಶತಮಾನದುದ್ದಕ್ಕೂ ಅನಾಥ ಪ್ರೇತಗಳಾಗಿ ವಿಹರಿಸುತ್ತವೆ.”

ಒಬ್ಬ ವ್ಯಕ್ತಿ ವಿದ್ಯಾಭ್ಯಾಸವನ್ನು ಪೂರೈಸಿ ಉದ್ಯೋಗ ಹಿಡಿಯುವವರೆಗಿನ ಅವಧಿಯಲ್ಲಿ ಬಹುಪಾಲು ಸಮಯವನ್ನು ತಂದೆ-ತಾಯಿಗಿಂತಲೂ ಹೆಚ್ಚು ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಜತೆಯಲ್ಲೇ ಕಳೆದಿರುತ್ತಾನೆ. ಮನೆಯೆ ಮೊದಲ ಪಾಠಶಾಲೆ, ಜನನಿಯೇ ಮೊದಲ ಗುರುವಾದರೂ ವ್ಯಕ್ತಿಯ ಒಟ್ಟಾರೆ ವರ್ತನೆಯ ಮೇಲೆ ಅಪಾರ ಪ್ರಭಾವವನ್ನು ಬೀರುವವರು ಶಿಕ್ಷಕರೇ. ಪ್ರಾಥಮಿಕ ಶಾಲಾ ಹಂತದಲ್ಲಂತೂ ಶಿಕ್ಷಕರು ಹೇಳಿದ್ದೆಲ್ಲವನ್ನೂ ಒಂದಿಷ್ಟೂ ಅನುಮಾನಿಸದೆ ಸ್ವೀಕರಿಸುವ ಮುಗ್ಧ ಮನಸ್ಸು ಮಕ್ಕಳದು. ಶಿಕ್ಷಕರು ತಪ್ಪನ್ನೇ ಹೇಳಿಕೊಟ್ಟರೂ ಅದೇ ಸರಿ ನಂಬುವ ವಯಸ್ಸು ಅದು. ಅಮಾಯಕ ಮಕ್ಕಳು ತಮ್ಮ ಗುರುಗಳ ಮೇಲೆ ಇಡುವ ವಿಶ್ವಾಸ ಆ ಮಟ್ಟದ್ದು. ಅವರದ್ದು ಹೂವು-ಬಳ್ಳಿಯ ಸಂಬಂಧ. ನೀವು ಎಷ್ಟಾದರೂ ಪದವಿಗಳನ್ನು ಪಡೆದಿರಿ, ಕ್ಷಣಕಾಲ ಕಣ್ಮುಚ್ಚಿ ಕುಳಿತು ನಿಮ್ಮ ಜೀವನದಲ್ಲಿ ನಿಜವಾಗಿಯೂ ಅತಿದೊಡ್ಡ ಪ್ರಭಾವ ಬೀರಿದವರು ಯಾರೆಂದು ಯೋಚಿಸಿದರೆ ಮನಸ್ಸು ಅನಾಯಾಸವಾಗಿ ಪ್ರಾಥಮಿಕ ಶಾಲಾ ದಿನಗಳ ಕಡೆಗೇ ಹೊರಳುತ್ತದೆ.

ಗುರು ಗೋವಿಂದ ದೋವೂ ಖಡೇ ಕಾಕೇ ಲಾಗೂ ಪಾಯ್|

ಬಲಿಹಾರಿ ಗುರು ಆಪ್‍ನೀ ಗೋವಿಂದ ದಿಯೋ ಬತಾಯ್||

ಎಂಬುದು ಸಂತ ಕಬೀರರ ಪ್ರಸಿದ್ಧ ದ್ವಿಪದಿ. ಗುರು ಹಾಗೂ ದೇವರು ಜತೆಗೇ ನಿಂತಿದ್ದರೆ ನೀನು ಮೊದಲು ಯಾರಿಗೆ ನಮಸ್ಕರಿಸುತ್ತೀ ಎಂದು ಕಬೀರರನ್ನು ಯಾರೋ ಕೇಳಿದರಂತೆ. ನಾನು ಮೊದಲು ಗುರುಗಳಿಗೇ ನಮಸ್ಕರಿಸುತ್ತೇನೆ, ಏಕೆಂದರೆ ದೇವರನ್ನು ತೋರಿಸಿಕೊಟ್ಟವರು ಗುರುಗಳು ಎಂದರಂತೆ ಕಬೀರರು.

ಗುರುವಿಗೆ ಸಮಾಜದಲ್ಲಿ ಇರುವ ಸ್ಥಾನವೇನೋ ದೊಡ್ಡದೇ. ಆದರೆ ಆ ಸ್ಥಾನವನ್ನು ಉಳಿಸಿಕೊಳ್ಳುವುದೂ ಅವನÀ ಜವಾಬ್ದಾರಿ. ಅಧ್ಯಾಪಕರ ಬಗ್ಗೆ ತೀರಾ ಕನಿಷ್ಟವೆನಿಸುವ ಮಾತುಗಳೂ ಸಮಾಜದಲ್ಲಿ ಆಗಾಗ ಕೇಳಿ ಬರುವುದಿದೆ. ಅದಕ್ಕೆ  ಗುರು ಎಂಬ ಸ್ಥಾನ ಶಿಕ್ಷಕ ಎಂಬ ವೃತ್ತಿಯಾಗಿ ಬದಲಾಗಿರುವುದೇ ಪ್ರಮುಖ ಕಾರಣ. ಜೀವನೋಪಾಯಕ್ಕೆ ಯಾವುದಾದರೂ ವೃತ್ತಿ ಅಗತ್ಯ. ಅಧ್ಯಾಪನವನ್ನು ಆರಿಸಿಕೊಂಡವರಿಗೂ ಸಂಬಳ ಬೇಕು. ಆದರೆ ಸಂಬಳವನ್ನು ಪಡೆಯುವುದಷ್ಟೇ ಶಿಕ್ಷಕನ ಪ್ರಮುಖ ಗುರಿ ಆದಾಗ ಅವನ ವೃತ್ತಿಯ ನಿಜವಾದ ಉದ್ದೇಶ ಹಿನ್ನೆಲೆಗೆ ಸರಿಯುತ್ತದೆ.

‘ಬಹುತೇಕ ಶಿಕ್ಷಕರು ಐಶ್ವರ್ಯವನ್ನು ಬೆನ್ನು ಹತ್ತಿಕೊಂಡು ಹೋಗುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ತಮ್ಮ ಶಿಷ್ಯರ ಭವಿಷ್ಯದ ಕಲ್ಪನೆ ಬಿಸಿಲುಕುದುರೆಯಾಗುತ್ತದೆ’ ಎಂದಿದ್ದಾರೆ ಡಾ. ಡಿ. ಎಂ. ನಂಜುಂಡಪ್ಪನವರು. ಗುರುವು ಶಿಷ್ಯನ ಚಿತ್ತಾಪಹಾರಕನಾಗಿರಬೇಕೆಂದು ನಿರೀಕ್ಷಿಸುವ ಹೊತ್ತಲ್ಲಿ ಆತ ವಿತ್ತಾಪಹಾರಕನಾಗಿ ಬದಲಾದರೆ ಅವನ ಬಗ್ಗೆ ಸಮಾಜದಲ್ಲಿ ಯಾವ ಗೌರವ ತಾನೇ ಉಳಿಯಬಲ್ಲುದು?

ಡಾ. ಡಿ. ಎಂ. ನಂಜುಂಡಪ್ಪನವರು ಇನ್ನೊಂದು ಕಡೆ ಬರೆಯುತ್ತಾರೆ: ‘ಶಿಕ್ಷಕ ತಾನು ಮೊದಲು ನೀತಿವಂತನಾಗಿರಬೇಕು. ಶಿಕ್ಷಕನೇ ಅನೀತಿ ಮಾರ್ಗದಲ್ಲಿ ನಡೆಯುತ್ತಿದ್ದರೆ ವಿದ್ಯಾರ್ಥಿಗಳಿಗೆ ತಿಳಿಹೇಳುವ ನೈತಿಕ ಆಧಾರವೇ ಆತನಲ್ಲಿ ಲಯವಾಗಿ ಹೋಗುತ್ತದೆ. ಶಿಕ್ಷಕರು ಆದರ್ಶರಾಗಿ ಜೀವನ ನಡೆಸದಿದ್ದರೆ ವಿದ್ಯಾರ್ಥಿಗಳು ಅಂತಹ ಶಿಕ್ಷಕರಿಗೆ ಯಾವ ರೀತಿಯ ಗೌರವಗಳನ್ನೂ ನೀಡಲಾರರು. ಅಲ್ಲದೆ ವಿದ್ಯಾರ್ಥಿಗಳು ಸಹ ಆದರ್ಶರಹಿತರಾಗುತ್ತಾರೆ’.

ಶಿಕ್ಷಕನಿಂದ ಲೈಂಗಿಕ ಕಿರುಕುಳ, ಶಿಕ್ಷಕನಿಂದಲೇ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಇತ್ಯಾದಿ ಸುದ್ದಿಗಳನ್ನು ದಿನನಿತ್ಯ ಎಂಬಂತೆ ಕೇಳುತ್ತೇವೆ. ಯಾಕೆ ಹೀಗಾಗುತ್ತಿದೆ? ಅತ್ಯುನ್ನತ ನೈತಿಕ ಮೌಲ್ಯಗಳನ್ನು ತಾನು ಹೊಂದುತ್ತಲೇ ತನ್ನನ್ನು ನಂಬಿರುವ ವಿದ್ಯಾರ್ಥಿಗಳಿಗೂ ಅವನ್ನು ದಾಟಿಸುವ ಮಹತ್ತರ ಹೊಣೆಗಾರಿಕೆ ಗುರುವಿನದ್ದು. ಅವನೇ ಅನೈತಿಕ ಕೆಲಸಗಳಿಗೆ ಜಾರಿದರೆ ವಿದ್ಯಾರ್ಥಿಗಳು ಯಾವ ಮಾದರಿಯನ್ನು ಅನುಸರಿಸಬೇಕು? ಬೇಲಿಯೇ ಎದ್ದು ಹೊಲವನ್ನು ಮೇಯುವುದಕ್ಕೆ ಇದರಿಂದ ದೊಡ್ಡ ನಿದರ್ಶನ ಇದೆಯೇ? ವಿದ್ಯಾರ್ಥಿಗಳಿಗೆ ಅಧ್ಯಾಪಕನೇ ನಿಜವಾದ ಪಠ್ಯಪುಸ್ತಕ. ಕೈಯಲ್ಲಿರುವ ಪುಸ್ತಕಗಳಿಗಿಂತಲೂ ಎದುರಿಗಿರುವ ಗುರುವನ್ನೇ ಅವರು ಹೆಚ್ಚು ಓದುತ್ತಾರೆ ಮತ್ತು ಅನುಕರಿಸುತ್ತಾರೆ. ಪುಸ್ತಕ ತಪ್ಪಿದರೆ ಮಸ್ತಕದ ಗತಿಯೇನು?

ಶಿಕ್ಷಕರ ವಲಯದ ಬಗ್ಗೆ ಸಮಾಜ ಗೌರವ ಕಳೆದುಕೊಳ್ಳುವುದರ ಹಿಂದೆ ಇರುವ ಇನ್ನೊಂದು ಪ್ರಮುಖ ಕಾರಣವನ್ನೂ ನಂಜುಂಡಪ್ಪನವರು ಗುರುತಿಸಿದ್ದುಂಟು: ‘ಇಂದು ಪ್ರತಿಭಾಹೀನರು, ವೃತ್ತಿನಿಷ್ಠೆ ಇಲ್ಲದವರು ಅಧ್ಯಾಪಕ ವೃತ್ತಿಗೆ ಪ್ರವೇಶಿಸುವುದು ಹೆಚ್ಚಾಗುತಿದೆ. ಜಾತಿ, ಕೋಮು, ಶಿಫಾರಸು, ರಾಜಕೀಯವೇ ಅರ್ಹತೆಯಾಗಿದೆ’. ಶಿಕ್ಷಕವೃತ್ತಿಯನ್ನು ಆಯ್ಕೆ ಮಾಡಿಹೋಗುವವರ ವರ್ಗ ಒಂದು ಕಡೆಯಾದರೆ, ಬೇರೆ ಯಾವ ಉದ್ಯೋಗ ದೊರೆಯದ ಮೇಲೆ ‘ಎಲ್ಲಾದರೂ ಪಾಠ ಮಾಡಿಕೊಂಡಿರೋಣ’ ಎಂದು ಶಿಕ್ಷಕ ವೃತ್ತಿಗೆ ಬರುವವರ ವರ್ಗ ಇನ್ನೊಂದು ಕಡೆ ಇದೆ. ಇದು ಶಿಕ್ಷಕ ವೃತ್ತಿಗೆ ಮಾಡುವ ಅವಮಾನ ಮಾತ್ರವಲ್ಲ, ಒಂದು ತಲೆಮಾರಿಗೆ ಮಾಡುವ ಅನ್ಯಾಯ ಕೂಡ. ಜೀವನೋಪಾಯಕ್ಕಾಗಿಯಷ್ಟೇ ದುಡಿಯುವ ಇಂತಹ ಶಿಕ್ಷಕರು ಸಮಾಜಕ್ಕೆ ತಾವೆಂತಹ ಕೇಡನ್ನು ಬಗೆಯುತ್ತಿದ್ದೇವೆ ಎಂದು ಅರ್ಥವೇ ಮಾಡಿಕೊಳ್ಳುವುದಿಲ್ಲ. 

ಇದರ ಜೊತೆಗೆ, ಶಿಕ್ಷಕರು ತಾವು ಮಾಡಬೇಕಾದ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವ ಸನ್ನಿವೇಶ ಇದೆಯೇ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕಾಗುತ್ತದೆ. ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎಂದೇನೋ ದಾಸರು ಹೇಳಿದ್ದಾರೆ. ದುರದೃಷ್ಟವಶಾತ್ ಅನೇಕ ಸಂದರ್ಭಗಳಲ್ಲಿ ಶಿಕ್ಷಕರನ್ನೇ ಸರ್ಕಾರಗಳು ಗುಲಾಮರು ಎಂದುಕೊಂಡಿವೆಯೇನೋ ಎಂದು ಭಾಸವಾಗುತ್ತದೆ. ಅದರಲ್ಲೂ ಪ್ರಾಥಮಿಕ ಶಾಲಾ ಹಂತದ ಶಿಕ್ಷಕರ ಕೈಯ್ಯಲ್ಲಂತೂ ಮಾಡಿಸದ ಕೆಲಸವೇ ಇಲ್ಲ. ವಿವಿಧ ಬಗೆಯ ಗಣತಿಗಳಿಂದ ತೊಡಗಿ ಚುನಾವಣಾ ಕರ್ತವ್ಯದವರೆಗೆ ಅವರಿಗೆ ವರ್ಷದಲ್ಲಿ ನೂರೆಂಟು ಜವಾಬ್ದಾರಿಗಳಿರುತ್ತವೆ. ಎಲ್ಲ ಕೆಲಸಗಳನ್ನು ಮಾಡಿ ಸಮಯ ಉಳಿದರೆ ಪಾಠ ಮಾಡುವುದು ಎಂಬ ಪರಿಸ್ಥಿತಿ ಇದೆ. ಇಷ್ಟೊಂದು ಒತ್ತಡಗಳ ನಡುವೆ ಅವರಿಂದ ಯಾವ ಬಗೆಯ ಶ್ರದ್ಧೆ ಮತ್ತು ಬದ್ಧತೆಗಳನ್ನು ನಿರೀಕ್ಷಿಸುವುದು ಸಾಧ್ಯ?

ನಮ್ಮ ಅನೇಕ ಖಾಸಗಿ ಶಾಲಾ ಕಾಲೇಜುಗಳಲ್ಲಂತೂ ಅಧ್ಯಾಪಕರು ಆಡಳಿತ ಮಂಡಳಿ ಹೇಳುವ ಕೆಲಸಗಳನ್ನು ಪೂರೈಸುವ ಕಾರ್ಮಿಕರಷ್ಟೇ. ಮ್ಯಾನೇಜ್ಮೆಂಟಿನ ಇಷ್ಟಾನಿಷ್ಟಗಳ ಪ್ರಕಾರ ನಡೆದುಕೊಳ್ಳಬೇಕಾದ ಅನಿವಾರ್ಯತೆಯಿರುವ ಈ ಅಧ್ಯಾಪಕರಿಗೆ ತಮ್ಮದೇ ಆದ ಉತ್ತಮ ದೃಷ್ಟಿಕೋನವಿದ್ದರೂ ಅದನ್ನು ಅನುಷ್ಠಾನಗೊಳಿಸುವ ಸ್ವಾತಂತ್ರ್ಯವಿಲ್ಲ. ಸಂಬಳ ಕೊಡುತ್ತೇವೆ ಎಂಬ ಏಕೈಕ ಕಾರಣಕ್ಕೆ ಶಿಕ್ಷಕರೆಂಬ ತಮ್ಮ ಉದ್ಯೋಗಿಗಳು ಜೀತದಾಳುಗಳಂತೆ ದುಡಿಯಬೇಕು ಎಂಬ ಧೋರಣೆ ಬಹುತೇಕ ಮ್ಯಾನೇಜ್ಮೆಂಟುಗಳಿಗಿದೆ. ವಿದ್ಯಾರ್ಥಿಗಳಿಂದ ಲಕ್ಷಗಟ್ಟಲೆ ಶುಲ್ಕ ಕಟ್ಟಿಸಿಕೊಂಡಿರುವ ಈ ಸಂಸ್ಥೆಗಳಿಗೆ ತಮ್ಮ ಅಧ್ಯಾಪಕರ ಹಿತಕ್ಕಿಂತಲೂ ವಿದ್ಯಾರ್ಥಿಗಳೆದುರು ತಗ್ಗಿಬಗ್ಗಿ ನಡೆಯುವುದೇ ಮುಖ್ಯವಾಗುತ್ತದೆ. ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳಿಂದ ಉತ್ತಮ ನಡವಳಿಕೆ, ಹಾಜರಾತಿ ನಿರೀಕ್ಷಿಸುವ ಹಾಗಿಲ್ಲ; ಮನೆಗೆಲಸ ಕೊಡುವಂತಿಲ್ಲ; ನೋಟ್ಸ್ ಬರೆಯಿರಿ ಎಂದು ಹೇಳುವಂತಿಲ್ಲ. ಅವರು ಕೇಳಿದಾಗೆಲ್ಲ ಸಿದ್ಧಪಡಿಸಿದ ನೋಟ್ಸ್ ಒದಗಿಸುತ್ತಿದ್ದರಾಯಿತು. ಇಂತಹ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಾದರೂ ತಮ್ಮ ಅಧ್ಯಾಪಕರ ಬಗ್ಗೆ ಇನ್ನೆಂತಹ ಆದರವನ್ನು ಉಳಿಸಿಕೊಂಡಾರು?

ಅಂತರ ರಾಷ್ಟ್ರೀಯ ಸಂಸ್ಥೆಯೊಂದು ಎರಡು ವರ್ಷಗಳ ಹಿಂದೆ 35 ದೇಶಗಳಲ್ಲಿ ಸಮೀಕ್ಷೆ ನಡೆಸಿ ತಯಾರಿಸಿದ ‘ಜಾಗತಿಕ ಶಿಕ್ಷಕರ ಸ್ಥಾನಮಾನ ಸೂಚ್ಯಂಕ’ದ ಪ್ರಕಾರ, ಭಾರತಕ್ಕೆ 8ನೇ ರ್ಯಾಂಕ್. ಆಯಾ ದೇಶಗಳು ಶಿಕ್ಷಕರನ್ನು ನಡೆಸಿಕೊಳ್ಳುವ ರೀತಿ, ಅವರಿಗೆ ನೀಡುವ ಗೌರವ ಮತ್ತು ವೇತನ, ನಾಗರಿಕರು ಹಾಗೂ ಪೋಷಕರು ಶಿಕ್ಷಕರ ಬಗ್ಗೆ ಹೊಂದಿರುವ ಭಾವನೆ ಇತ್ಯಾದಿ ಮಾನದಂಡಗಳ ಆಧಾರದಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಚೀನಾ, ಮಲೇಷ್ಯಾ, ತೈವಾನ್, ರಷ್ಯಾ ಹಾಗೂ ಇಂಡೋನೇಷ್ಯಾ ಮೊದಲ ಐದು ಸ್ಥಾನದಲ್ಲಿದ್ದವು. ಅರ್ಜೆಂಟೈನಾ, ಘಾನಾ, ಇಟೆಲಿ, ಇಸ್ರೇಲ್ ಹಾಗೂ ಬ್ರೆಜಿಲ್ ಕೊನೆಯ ಐದು ಸ್ಥಾನದಲ್ಲಿದ್ದವು. ಎಲ್ಲರೂ ಹುಬ್ಬೇರಿಸಿಕೊಂಡು ನೋಡುವ ಅಮೇರಿಕಕ್ಕೆ 16ನೇ ರ್ಯಾಂಕ್. ಈ ವಿಚಾರದಲ್ಲಿ ಭಾರತದ ರ್ಯಾಂಕ್ ಅಮೇರಿಕ್ಕಿಂತ ಸಾಕಷ್ಟು ಮೇಲ್ಮಟ್ಟದಲ್ಲಿದೆ ಎಂಬುದನ್ನೂ ಗಮನಿಸಬೇಕು.

ಏನೇ ಇರಲಿ, ಒಬ್ಬ ವ್ಯಕ್ತಿಯ ಜೀವನದಲ್ಲಿ ಗುರುವಿನ ಸ್ಥಾನ ಹಾಗೂ ಅನಿವಾರ್ಯತೆಯನ್ನು ಅಲ್ಲಗಳೆಯಲಾಗದು. ಏಕಲವ್ಯನ ಹಿಂದೆ ಒಬ್ಬ ದ್ರೋಣಾಚಾರ್ಯರಿದ್ದರು. ಶಿವಾಜಿಯ ಹಿಂದೆ ಒಬ್ಬ ಸಮರ್ಥ ರಾಮದಾಸರಿದ್ದರು. ಹಕ್ಕಬುಕ್ಕರ ಹಿಂದೆ ವಿದ್ಯಾರಣ್ಯರಿದ್ದರು. ವಿವೇಕಾನಂದರ ಹಿಂದೊಬ್ಬ ರಾಮಕೃಷ್ಣ ಪರಮಹಂಸರಿದ್ದರು. ಯಾವ ಮಹಾತ್ಮರ ಜೀವನ ಚರಿತ್ರೆಯನ್ನು ತೆರೆದರೂ ಗುರುಗಳು ಅವರ ಮೇಲೆ ಬೀರಿದ ಅದ್ಭುತ ಪ್ರಭಾವ ಕಣ್ಣಿಗೆ ಕಟ್ಟುತ್ತದೆ. ಭಾರತದ ಗುರುಪರಂಪರೆಯೇ ಅಂತಹದು. ಗುರು ಇಲ್ಲದ ಬದುಕು ಕತ್ತಲ ಹಾದಿಯ ಪಯಣವಷ್ಟೇ. ‘ವಿದ್ಯಾರ್ಥಿ ಕಲಿಯಲು ವಿಫಲನಾದರೆ, ಅಧ್ಯಾಪಕ ಕಲಿಸಲು ವಿಫಲನಾಗಿದ್ದಾನೆಂದು ಅರ್ಥ’ ಎಂಬ ಮಾತೂ ಮತ್ತೆ ಗುರುವಿನ ಜವಾಬ್ದಾರಿಯನ್ನೇ ಬೊಟ್ಟುಮಾಡುತ್ತದೆ.

ಗುರುವನ್ನು ಗೌರವಿಸಿ, ಅವರ ಸದಾಶಯದ ಶ್ರೀರಕ್ಷೆ ನಿಮ್ಮ ಮೇಲಿದ್ದರೆ ಜೀವನದಲ್ಲಿ ಎಷ್ಟು ಎತ್ತರಕ್ಕಾದರೂ ಏರಬಲ್ಲಿರಿ. ಹೀಗೆಂದು ಹೇಳುವುದರ ಜೊತೆಗೆ ಅಂತಹ ಎತ್ತರದ ವ್ಯಕ್ತಿತ್ವವನ್ನು ಗುರುವೂ ಉಳಿಸಿಕೊಳ್ಳಬೇಕು ಎಂಬುದನ್ನೂ ಹೇಳಬೇಕು. ‘ಒಬ್ಬ ವ್ಯಕ್ತಿ ಮೊದಲು ತನ್ನ ದಾರಿ ಯಾವುದು ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಆಮೇಲಷ್ಟೇ ಇನ್ನೊಬ್ಬರಿಗೆ ಬೋಧಿಸಬೇಕು’ ಎಂಬುದು ಗೌತಮ ಬುದ್ಧನ ಮಾತು. ಅಧ್ಯಾಪಕನಾದವನಿಗೆ ಇಂಥದ್ದೊಂದು ಎಚ್ಚರ ಇರಬೇಕು. ತನ್ನ ನಡತೆ ಹಾಗೂ ವ್ಯಕ್ತಿತ್ವದಿಂದ ಶಿಷ್ಯರಿಗೆ ಮಾದರಿಯಾಗಬೇಕು. ಸಮಾಜದ ಎದುರು ಸಣ್ಣವನಾಗಬಾರದು. ಎಲ್ಲ ಸಣ್ಣತನಗಳನ್ನು ಮೀರಲು ಅವನಿಗೆ ಸಾಧ್ಯವಾದಾಗಲಷ್ಟೇ ನಿಜವಾದ ಗುರುತ್ವ ಲಭಿಸುತ್ತದೆ. ಗುರು ಲಘುವಾಗಬಾರದು.

- ಸಿಬಂತಿ ಪದ್ಮನಾಭ ಕೆ. ವಿ.


ಬುಧವಾರ, ಸೆಪ್ಟೆಂಬರ್ 16, 2020

Lessons from a fruit and vegetable’s tussle for supremacy

Article published in 'Deccan Herald' (Spectrum) on 12th September 2020.

Read it in Deccan Herald here.

The following is the unedited version.

SIBANTHI PADMANABHA K. V.

Can an argument between onion and mango expose the irrelevance of class conflict and highlight the need for coexistence?  A rare Yakshagana titled ‘Palandu Charitre’ has answered this question. It has also provided a proof for the belief that any piece of art or literature will not lose its relevance if it survives even a century.

Palandu Charitre is a Yakshagana prasanga written by late Kerodi Subba Rao in 1896. Srimanmadhvasiddhanta Granthalaya, Udupi, has published this work in 1930. Interestingly, it is a plot narrating the arguments and fight between tubers and fruits over supremacy. Non-mythological themes are not new to Yakshagana, though it is considered a ‘religious art’ originated and evolved in temple yards. Though themes from Ramayana, Mahabharata, Bhagavata, etc. are prominent in this 500-year-old genre, Yakshagana has welcomed historical, folk and imaginary tales too long back.

Kasaragod-based Siribagilu Venkappayya Samskrutika Pratishtana, in collaboration with Kannada Natya Ranga, Hyderabad, performed the 125-year-old Palandu Charitre recently, exploring its newer dimensions. The prasaga had once been staged by Yakshagana exponent late Hostota Manjunath Bhagawat decades ago. He had also composed ‘Sasya Sandhana’ (means ‘treaty of plants’) for children based on Palandu Charitre.

The plot begins with Lord Shiva explaining Parvathi the story of Palandu (means onion in Sanskrit). The prasanga thus follows a flashback technique. There takes place a tussle between Chutaraja (mango, the king of fruits and vegetables) and Palandu (onion, the king of tubers) over the question of supremacy. An egoistic Chutaraja boasts of his greatness and ridicules Palandu for he does not have much freedom, being under soil.

After a skirmish, both parties approach Lord Sri Krishna, anticipating a judgement. Krishna asks them to rest in his guest house for three days, hinting that a solution will emerge on its own. As three days pass, Chutaraja and his companions such as jackfruit, pumpkin, ash gourd, and lady’s finger, start decomposing, while Palandu and his companions such as radish, elephant yam and sweet potato start sprouting.

Krishna gives a re-birth to Chutaraja and enlightens him of his limitations. All fruits, vegetables and tubers are convinced that each living organism is distinct of its qualities, and no one is superior or inferior by nature.

“A Yakshagana prasanga becomes special because of the artistes. Though it has a simple plot, it spoke about the irrelevance of class conflict, feudal mindset, and the need for human coexistence since the artistes could find a unique message in it,” says scholar D. S. Shreedhara.

“You (mango) are one whose essence is known after peeling the skin; and you (onion) are the one whose heart is known after removing layers one after another” – that is how Krishna (performed by Vasudeva Ranga Bhat) visualizes the nature of Chutaraja and Palandu.

“One can be of light-weight being at certain height. At the same time, a heavier one can also be at a high position. One’s value need not be judged just for the reason that it is at a higher place,” Krishna says at another point, indirectly criticising at the egoistic nature of mango.

He concludes by saying that “Good quality is to admit the other person’s unique qualities without disregarding the self. If someone is at a higher position, he should bend himself and be accessible for others. Nobody is superior or inferior in Nature’s creation.” The roles of Chutaraja and Palandu were performed by Radhakrishna Navada Madhur and Permude Jayaprakash Shetty respectively.

According to senior artiste Radhakrishna Kalchar, the performance became special because of the interpretations by the artistes, which were very relevant to the human society.

Scholar Kabbinale Vasanth Bharadwaj said Kerodi Subbarao who lived between 1863 and 1928, was one of the prominent writers of modern Kannada literature.  He was a known person in literature, yakshagana, journalism, agriculture and social service. According to writer B. Janardana Bhat, Subba Rao was editing Sri Krishna Sukti, a monthly literary journal in Udupi as early as 1906. With command over Kannada, English and Sanskrit languages, he also authored several works, including Yakshagana prasangas like Jarasandha Vadhe and Pandava Digvijaya.

Ramakrishna Mayya Siribagilu, a renowned Yakshagana Bhagavata, who was responsible for the performance, said the restrictions caused by Covid-19 allowed the Pratishtana to experiment with innovative ideas.

“When I came to know about a rare prasanga, I thought of bringing it on stage. However, due to the restrictions we could not perform it in public. Therefore we recorded the performance and broadcast the same through YouTube and other social media. We could reach thousands of viewers across the world,” he explained. Thus, the Yakshagana has shown the possibilities of integrated use of art and technology too.

Photos by: Shyam Kunchinadka