ಹಿಂದಿನ ಸರ್ಕಾರ ಅನೇಕ ಜಯಂತಿಗಳ ರಜೆಗಳನ್ನು ರದ್ದುಪಡಿಸಿ ಅವುಗಳನ್ನು ಪರಿಮಿತ ರಜೆಗಳನ್ನಾಗಿ ಪರಿವರ್ತಿಸಿ ಆದೇಶ ಹೊರಡಿಸಿತ್ತು. ಅದು ನಿಸ್ಸಂಶಯವಾಗಿ ಒಂದು ಸ್ವಾಗತಾರ್ಹ ಕ್ರಮ. ಇದರ ಜಾಡಿನಲ್ಲಿ ಹೊಸ ಸರ್ಕಾರ ಈಗ ಇನ್ನೊಂದು ನಿರ್ಧಾರವನ್ನೂ ತೆಗೆದುಕೊಂಡರೆ ನಿಜಕ್ಕೂ ಅದೊಂದು ಐತಿಹಾಸಿಕ ಮತ್ತು ಪ್ರಶಂಸಾರ್ಹ ಕಾರ್ಯವಾದೀತು. ಅದೇನೆಂದರೆ, ಗಣ್ಯ ವ್ಯಕ್ತಿಗಳ ನಿಧನದ ಸಂದರ್ಭದಲ್ಲಿ ರಜೆ ಘೋಷಿಸುವ ಪದ್ಧತಿಯನ್ನು ಕೈಬಿಡುವುದು. ಇದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಗಬೇಕಿರುವ ಅತ್ಯಂತ ಪ್ರಮುಖ ಕೆಲಸ.
ಗಣ್ಯ ವ್ಯಕ್ತಿಗಳು ನಿಧನರಾದಾಗ ರಜೆ ಘೋಷಿಸುವುದು ನಮ್ಮಲ್ಲೊಂದು ದೊಡ್ಡ ಸಂಪ್ರದಾಯವಾಗಿ ಬೆಳೆದುಬಿಟ್ಟಿದೆ. ರಜೆ ಘೋಷಿಸದೆ ಹೋದರೆ ’ನಮ್ಮ ನಾಯಕರಿಗೆ’ ಅಗೌರವ ತೋರಿದರು ಎಂಬ ಗಲಾಟೆಯೇ ಆರಂಭವಾಗುತ್ತದೆ. ನಿಧನರಾದವರು ರಾಜಕೀಯ ವ್ಯಕ್ತಿಯಾಗಿದ್ದು, ಅವರ ಪ್ರತಿಸ್ಪರ್ಧಿ ಪಕ್ಷದವರು ಅಧಿಕಾರದಲ್ಲಿದ್ದರಂತೂ ಈ ಗಲಾಟೆಗೆ ತಕ್ಷಣ ರಾಜಕೀಯ ಬಣ್ಣ ಬಂದುಬಿಡುತ್ತದೆ. ಅದರೊಂದಿಗೆ ’ಜಾತಿ’ಯ ಆಯಾಮ ಸಿಕ್ಕಿದರಂತೂ ಮುಂದಿನ ತಮಾಷೆಯ ಬಗ್ಗೆ ಹೇಳುವುದೇ ಬೇಡ.
ಶೋಕಾಚರಣೆ ಮಾಡುವುದು, ಮೃತರಿಗೆ ಗೌರವ ಸಲ್ಲಿಸುವುದು, ಅವರ ಸಾಧನೆ-ಕೊಡುಗೆಗಳ ಬಗ್ಗೆ ಸಮಾಜದ ಗಮನ ಸೆಳೆಯುವುದು, ಸಾರ್ವಜನಿಕರಿಗೆ ಹಾಗೂ ಸಾರ್ವಜನಿಕ ಆಸ್ತಿಗೆ ಆಗಬಹುದಾದ ಸಂಭಾವ್ಯ ಹಾನಿಯನ್ನು ತಪ್ಪಿಸುವುದು - ಇವೆಲ್ಲ ಗಣ್ಯ ವ್ಯಕ್ತಿಗಳ ನಿಧನದ ಹಿನ್ನೆಲೆಯಲ್ಲಿ ರಜೆ ಘೋಷಿಸುವುದಕ್ಕೆ ಕೊಡಬಹುದಾದ ಸಮರ್ಥನೆಗಳು. ಸಾರ್ವಜನಿಕರಿಗೆ ಆಗಬಹುದಾದ ಸಂಭಾವ್ಯ ತೊಂದರೆಗಳನ್ನು ತಪ್ಪಿಸುವ ಒಂದು ಸಂಗತಿಯ ಹೊರತಾಗಿ ಬೇರೆ ಯಾವುದಾದರೂ ಉದ್ದೇಶ ಈವರೆಗೆ ವಾಸ್ತವವಾಗಿ ಈಡೇರಿದ್ದಿದೆಯೇ?
ಶೋಕಾಚರಣೆ ಮಾಡುವುದು ಅಥವಾ ಮೃತರಿಗೆ ಗೌರವ ಸೂಚಿಸುವುದು ಎಂದರೇನು? ಆ ವ್ಯಕ್ತಿ ಸಮಾಜದ ಯಾವುದಾದರೂ ಕ್ಷೇತ್ರಕ್ಕೆ ಸಲ್ಲಿಸಿರಬಹುದಾದ ಕೊಡುಗೆಗಳನ್ನು ಸ್ಮರಣೆ ಮಾಡಿಕೊಳ್ಳುವುದು, ಅವುಗಳ ಬಗ್ಗೆ ತಮ್ಮೊಳಗೆ ಸಂವಾದ ನಡೆಸಿ ಅಭಿಮಾನಪಟ್ಟುಕೊಳ್ಳುವುದು, ಗಣ್ಯ ವ್ಯಕ್ತಿಯ ಸಾಧನೆಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವುದು ಮತ್ತು ಆ ಮೂಲಕ ಅವರೂ ಪ್ರೇರಣೆ ಪಡೆಯುವಂತೆ ಮಾಡುವುದು... ಇತ್ಯಾದಿ ವಿವರಣೆಗಳನ್ನು ಕೊಡಬಹುದು. ರಜೆ ಘೋಷಿಸುವುದರಿಂದ ವಾಸ್ತವವಾಗಿ ಈ ಗುರಿ ಈಡೇರುತ್ತದೆಯೇ? ಅಥವಾ ರಜೆ ಕೊಡುವುದರಿಂದ ಮಾತ್ರವೇ ಈ ಗುರಿ ಈಡೇರುತ್ತದೆಯೇ? ರಜೆ ನೀಡದೆಯೂ ಈ ಉದ್ದೇಶಗಳನ್ನು ಸಾಧಿಸುವುದು ಸಾಧ್ಯವಿಲ್ಲವೇ?
ಸಹೋದ್ಯೋಗಿಯೊಬ್ಬರು ತಮ್ಮ ಚಾಲನಾ ಪರವಾನಗಿ ನವೀಕರಣಕ್ಕಾಗಿ ಇತ್ತೀಚೆಗೆ ಮೈಸೂರಿಗೆ ಹೋಗಿದ್ದರಂತೆ. ಗಂಟೆಗಟ್ಟಲೆ ಸರತಿಯಲ್ಲಿ ಕಾದು ಇನ್ನೇನು ಅವರ ಕೆಲಸ ಆಗಬೇಕು ಅನ್ನುವಷ್ಟರಲ್ಲಿ ಗಣ್ಯ ವ್ಯಕ್ತಿಯೊಬ್ಬರ ನಿಧನದ ಪ್ರಯುಕ್ತ ರಜೆಯ ಘೋಷಣೆ ಹೊರಬಿತ್ತು. ಎಷ್ಟಾದರೂ ಸರ್ಕಾರಿ ನೌಕರರು, ರಜೆ ಘೋಷಣೆಯಾಗುತ್ತಿದ್ದಂತೆ ಫೈಲುಗಳನ್ನೆಲ್ಲ ಮಡಚಿಟ್ಟು ಹೊರಟೇಬಿಟ್ಟರಂತೆ. ನಿಮಿಷಾರ್ಧದಲ್ಲಿ ಕಚೇರಿಯೆಲ್ಲ ಖಾಲಿಯಾದ್ದರಿಂದ ನಾಲ್ಕು ಗಂಟೆ ಪ್ರಯಾಣ ಮಾಡಿ ಮೈಸೂರಿಗೆ ಹೋಗಿದ್ದ ಸಹೋದ್ಯೋಗಿ ಪೆಚ್ಚುಮೋರೆ ಹಾಕಿಕೊಂಡು ಪುನಃ ಬಸ್ ಹತ್ತಿದರಂತೆ.
ಇದೊಂದು ಸಣ್ಣ ನಿದರ್ಶನ ಅಷ್ಟೇ. ಇಂತಹ ಎಷ್ಟು ಸಾವಿರ ಕೆಲಸಗಳು ಒಂದು ರಜೆಯಿಂದ ಬಾಕಿಯಾಗಬಹುದು? ಎಷ್ಟು ಲಕ್ಷ ಗಂಟೆ ಮಾನವ ಶ್ರಮ ವ್ಯರ್ಥವಾಗಬಹುದು? ಎಷ್ಟು ಕೋಟಿ ರೂಪಾಯಿ ಹಣಕಾಸು ನಷ್ಟ ಆಗಬಹುದು? ಸ್ವಾತಂತ್ರ್ಯಾನಂತರ ಗಣ್ಯವ್ಯಕ್ತಿಗಳ ನಿಧನದ ಶೋಕಾಚರಣೆಗಾಗಿ ಎಷ್ಟು ರಜೆಗಳನ್ನು ಘೋಷಣೆ ಮಾಡಿರಬಹುದು? ಅವುಗಳಿಂದ ಆಗಿರಬಹುದಾದ ಒಟ್ಟು ನಷ್ಟ ಎಷ್ಟಿರಬಹುದು? ಅಧ್ಯಯನಕ್ಕೊಳಪಡಿಸಿದರೆ ಅದೊಂದು ಮಹಾಗ್ರಂಥವೇ ಆದೀತು. ಗಣ್ಯರ ನಿಧನದಿಂದ ಸಮಾಜಕ್ಕೆ ’ತುಂಬಲಾರದ ನಷ್ಟ’ವೆಂದು ಹೇಳುವುದು ಮಾಮೂಲಿ ಆಗಿ ಬಿಟ್ಟಿದೆ; ವಾಸ್ತವವಾಗಿ ತುಂಬಲಾರದ ನಷ್ಟ ಆಗುವುದು ಅವರ ನಿಧನದ ಹೆಸರಿನಲ್ಲಿ ರಜೆ ಘೋಷಿಸುವುದರಿಂದ.
ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡು, ಪಿಂಚಣಿ, ಪೋಸ್ಟಾಪೀಸು, ಬ್ಯಾಂಕ್ ಕೆಲಸ ಎಂದು ದೂರದೂರದ ಹಳ್ಳಿಗಳಿಂದ ತಾಲೂಕು ಕೇಂದ್ರ, ಜಿಲ್ಲಾ ಕೇಂದ್ರಗಳಿಗೆ ಹತ್ತಾರು ಮೈಲಿ ದೂರದಿಂದ ಪ್ರತಿದಿನ ಪ್ರಯಾಣ ಮಾಡುವ ರೈತರು, ಕೂಲಿಕಾರ್ಮಿಕರು, ಬಡ ಮಹಿಳೆಯರು, ವಯೋವೃದ್ಧರು ಸಾವಿರಾರು. ಇದ್ದಕ್ಕಿದ್ದ ಹಾಗೆ ಒಂದು ರಜೆ ಘೋಷಣೆ ಮಾಡುವುದರಿಂದ ಇಂತಹ ಜನಸಾಮಾನ್ಯರಿಗೆ ಆಗುವ ತೊಂದರೆ ಏನೆಂದು ಸರ್ಕಾರ ಎಂದಾದರೂ ಆಲೋಚಿಸಿದ್ದಿದೆಯೇ? ತಮ್ಮ ಹೊಲದ ಕೆಲಸಕ್ಕೋ, ದಿನನಿತ್ಯದ ಕೂಳಿನ ಮೂಲವಾದ ಕೂಲಿ ಕೆಲಸಕ್ಕೋ ಮೀಸಲಿರುವ ಒಂದು ದಿನವನ್ನು ಹೇಗೋ ಹೊಂದಿಸಿಕೊಂಡು ಕಚೇರಿಗಳಿಗೆ ಎಡತಾಕುವ ಈ ಜನರಿಗೆ ರಜೆ ಘೋಷಣೆಯಿಂದ ಆಗುವ ನಷ್ಟ ಎಷ್ಟೆಂದು ಯಾರಾದರೂ ಅರ್ಥ ಮಾಡಿಕೊಂಡಿದ್ದಾರೆಯೇ? ಒಂದಿಡೀ ದಿನ ವ್ಯರ್ಥವಾಯಿತಲ್ಲ ಎಂದು ನೊಂದುಕೊಳ್ಳುವ ಇವರು ನಿಧನರಾದ ಗಣ್ಯ ವ್ಯಕ್ತಿಯ ಗೌರವಾರ್ಥ ಶೋಕಾಚರಿಸಿ ಅವರ ಸಾಧನೆಗಳನ್ನು ಕೊಂಡಾಡುವ ಸಾಧ್ಯತೆ ಎಷ್ಟು?
ಇನ್ನು ಶಾಲಾ-ಕಾಲೇಜುಗಳ ಸಮಾಚಾರ ಕೇಳುವುದೇ ಬೇಡ. ಅವರಿಗೆ ರಜೆಯೆಂದರೆ ಸಂಭ್ರಮಾಚರಣೆ ಅಷ್ಟೆ. ಅದು ವಿದ್ಯಾರ್ಥಿಗಳ ಸಹಜ ಗುಣ. ವರ್ಷದಲ್ಲಿ ಎರಡು-ಮೂರು ತಿಂಗಳು ರಜೆಯಿದ್ದು, ಹಬ್ಬಹರಿದಿನಗಳೆಂದು ಮತ್ತಷ್ಟು ರಜೆಗಳಿದ್ದರೂ, ಇನ್ನೂ ಒಂದಷ್ಟು ರಜೆ ಸಿಕ್ಕಿದರೆ ಅವರೇನು ಬೇಡ ಅನ್ನುವುದಿಲ್ಲ. ಗಣ್ಯರ ನಿಧನಕ್ಕೆ ರಜೆ ಘೋಷಿಸಿದರೆ ಅವರಿಗಿಂತ ಹೆಚ್ಚು ಸಂಭ್ರಮಿಸುವವರು ಬೇರೆ ಇರಲಿಕ್ಕಿಲ್ಲ. ಇದು ಕೊಂಚ ಬೀಸು ಹೇಳಿಕೆ ಅನ್ನಿಸಿದರೂ ಇದು ನಿಜ ಮತ್ತು ಅತ್ಯಂತ ಗಂಭೀರವಾದ ವಿಚಾರ.
ನಿಧನ ಹೊಂದಿದ ಗಣ್ಯರ ಸಾಧನೆ-ಕೊಡುಗೆಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದು ಶಾಲಾ-ಕಾಲೇಜುಗಳ, ಅಧ್ಯಾಪಕರ ಕರ್ತವ್ಯ ಎಂಬುದು ನಿಜ. ಆದರೆ ರಜೆ ಘೋಷಿಸುವುದರಿಂದ ಅದನ್ನು ಮಾಡಿದಂತಾಗುತ್ತದೆಯೇ? ಅನೇಕ ವಿದ್ಯಾರ್ಥಿಗಳು ಸ್ವಯಂ ರಜೆ ಘೋಷಿಸಿಕೊಂಡು ಅಂದು ಕಾಲೇಜುಗಳಿಗೆ ಕಾಲಿಡುವುದೇ ಇಲ್ಲ; ಬಹುತೇಕರು ರಜೆ ಘೋಷಣೆಯಾದ್ದೇ ಕ್ಯಾಂಪಸ್ ಖಾಲಿ ಮಾಡುತ್ತಾರೆ. ಅವರಲ್ಲಿ ಬಹುತೇಕರು ದಿನದ ಉಳಿದ ಸಮಯವನ್ನು ಹೇಗೆ ಕಳೆಯುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಇನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಮಸ್ಯೆ ಬೇರೆ. ಅವರಿಗೆ ರಜೆ ಕೊಟ್ಟರೂ ಸಮಸ್ಯೆ, ಕೊಡದಿದ್ದರೂ ಸಮಸ್ಯೆ. ಆಗಷ್ಟೇ ಶಾಲೆಗೆ ಬಂದ ಪುಟಾಣಿಗಳನ್ನು ಮತ್ತೆ ಅವರವರ ಮನೆಗಳಿಗೆ ತಲುಪಿಸುವುದು ತುಂಬ ತ್ರಾಸದ ಕೆಲಸ. ರಜೆ ಕೊಡದೇ ಇದ್ದರೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ. ಅತ್ತ ಶಾಲೆಗಳಿಗೆ ಸಂಕಟ, ಇತ್ತ ಹೆತ್ತವರಿಗೆ ಆತಂಕ.
ಒಟ್ಟಾರೆ ಈ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಲೇಬೇಕು. ಇದಕ್ಕೆ ಎಲ್ಲರೂ ಪಕ್ಷಾತೀತವಾಗಿ ಒಂದು ಒಮ್ಮತದ ತೀರ್ಮಾನಕ್ಕೆ ಬರಲೇಬೇಕು. ಆ ದಿನ ಎಲ್ಲರೂ ಒಂದು ಗಂಟೆ ಹೆಚ್ಚು ಕೆಲಸ ಮಾಡಲಿ. ಕಚೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ನಿಧನ ಹೊಂದಿದ ಗಣ್ಯರ ಬಗ್ಗೆ ಒಳ್ಳೆಯ ಉಪನ್ಯಾಸ-ಸಂವಾದ ಕಾರ್ಯಕ್ರಮ ಏರ್ಪಡಿಸಲಿ. ಮೃತರಿಗೆ ಇದಕ್ಕಿಂತ ದೊಡ್ಡ ಗೌರವ ಉಂಟೇ?
-ಸಿಬಂತಿ ಪದ್ಮನಾಭ ಕೆ. ವಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ