ಬುಧವಾರ, ಏಪ್ರಿಲ್ 10, 2019

ಕ್ರೆಡಿಟ್ ಕಾರ್ಡ್: ಜಾಣ ಬಳಕೆಗೆ ಹತ್ತಾರು ಹಾದಿ

ವಿಜಯವಾಣಿ (ವಿತ್ತವಾಣಿ) 18 ಫೆಬ್ರವರಿ 2019ರಂದು ಪ್ರಕಟವಾದ ಲೇಖನ
ವಿಜಯವಾಣಿ | ವಿತ್ತವಾಣಿ | 18 ಫೆಬ್ರವರಿ 2019

ಜೇಬಲ್ಲಿ ಒಂದು ನಾಣ್ಯವನ್ನೂ ಇಟ್ಟುಕೊಳ್ಳದೆ ಸಾವಿರಾರು ರೂಪಾಯಿ ವ್ಯವಹಾರ ಮಾಡುವ ಸ್ಮಾರ್ಟ್ ಜಗತ್ತಿನಲ್ಲಿ ನಾವಿದ್ದೇವೆ. ಹೋಟೆಲ್, ಆಸ್ಪತ್ರೆ, ಮಾಲ್, ಚಿತ್ರಮಂದಿರ, ಪೆಟ್ರೋಲ್ ಬಂಕ್, ಮೆಡಿಕಲ್, ಮಾರ್ಕೆಟ್ - ಎಲ್ಲೇ ಹೋಗಲಿ, ಒಳಗೆ ಕಾಲಿಡುವ ಮುನ್ನ 'ಕಾರ್ಡ್ ಬಳಸಬಹುದೇ?’ ಎಂದು ಕೇಳುವುದು ಸಾಮಾನ್ಯವಾಗಿದೆ. ಕೈಯಲ್ಲಿ ನಗದು ಹಿಡಿದುಕೊಂಡು ಊರೆಲ್ಲ ಓಡಾಡಬೇಕಿಲ್ಲ, ಪದೇ ಪದೇ ಚೇಂಜ್ ಇದೆಯಾ ಅಂತ ಕೇಳಿಸಿಕೊಳ್ಳಬೇಕಿಲ್ಲ. ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಎಂಬ ನಾಲ್ಕು ಪದಗಳು ಬದಲಾದ ಬದುಕಿನ ಪಾಸ್ವರ್ಡ್‌ಗಳಾಗಿವೆ.

2012ರಲ್ಲಿ ಭಾರತದಲ್ಲಿ 17.65 ಮಿಲಿಯನ್‌ನಷ್ಟು ಕ್ರೆಡಿಟ್ ಕಾರ್ಡ್ ಬಳಕೆದಾರರಿದ್ದರು. 2014ರಲ್ಲಿ ಇದು 19.9 ಮಿಲಿಯನ್‌ಗೆ ಏರಿತು. ಕಳೆದ ವರ್ಷ ಇದು ಗರಿಷ್ಠ ಏರಿಕೆಯನ್ನು ಕಂಡಿತು. ಭಾರತೀಯ ರಿಸರ್ವ್ ಬ್ಯಾಂಕ್ ವರದಿಯ ಪ್ರಕಾರ 2017ರ ಮಾರ್ಚ್ ಅಂತ್ಯಕ್ಕೆ ದೇಶದಲ್ಲಿ ಒಟ್ಟು 29.8 ಮಿಲಿಯನ್‌ನಷ್ಟು ಕ್ರೆಡಿಟ್ ಕಾರ್ಡ್ ಗ್ರಾಹಕರಿದ್ದಾರೆ. ಐದೇ ವರ್ಷಗಳಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ನಡೆದ ಹಣಕಾಸು ವ್ಯವಹಾರದ ಏರಿಕೆ ಶೇ. 275ರಷ್ಟು ಎಂದರೆ ನಂಬಲೇಬೇಕಾಗಿದೆ.
ನೋಟಿನ ಅಮಾನ್ಯೀಕರಣದಿಂದ ದಿನನಿತ್ಯದ ವ್ಯವಹಾರಗಳಿಗೆ ತಟ್ಟಿದ ಬಿಸಿ, ಎಲ್ಲೆಡೆ ದೊರೆಯುತ್ತಿರುವ ಅಗ್ಗದ ಡೇಟಾ, ಹೆಚ್ಚುತ್ತಿರುವ ಆಂಡ್ರಾಯ್ಡ್ ಮೊಬೈಲ್ ಫೋನುಗಳ ಬಳಕೆ ಹಾಗೂ ಜನಪ್ರಿಯವಾಗುತ್ತಿರುವ ಆನ್‌ಲೈನ್ ವ್ಯಾಪಾರದಿಂದಾಗಿ ಕ್ರೆಡಿಟ್ ಕಾರ್ಡುಗಳ ಬಳಕೆ ಗಣನೀಯವಾಗಿ ಏರಿಕೆಯಾಗಿದೆ. ೨೦೨೦ರ ವೇಳೆಗೆ ಒಟ್ಟಾರೆ ಕ್ರೆಡಿಟ್ ಕಾರ್ಡ್ ಬಳಕೆ ೧೦ ಪಟ್ಟು ಹಿಗ್ಗಲಿದೆ ಎಂಬುದು ಬ್ಯಾಂಕಿಂಗ್ ತಜ್ಞರ ವಿಶ್ಲೇಶಣೆ.

ಕ್ರೆಡಿಟ್ ಕಾರ್ಡೆಂಬ ಪ್ಲಾಸ್ಟಿಕ್ ಮನಿಯಿಂದಾಗಿ ವ್ಯವಹಾರವೇನೋ ಸ್ಮಾರ್ಟ್ ಆಯಿತು. ಅದನ್ನು ಎಲ್ಲೆಂದಲ್ಲಿ ಗೀರಿ ಗೆಲುವಿನ ನಗೆ ಬೀರುವ ನಾವು ನಿಜವಾಗಿಯೂ ಸ್ಮಾರ್ಟ್ ಆಗಿದ್ದೇವೆಯೇ ಎಂದು ಪ್ರಶ್ನಿಸಿಕೊಳ್ಳುವ ಕಾಲ ಬಂದಿದೆ. ಬಾಂಬ್ ಹಾಕಿ, ರಕ್ತಪಾತ ಮಾಡಿ ದೇಶಗಳನ್ನು ಸೋಲಿಸುವ ಕಾಲ ಹಳತಾಗುತ್ತಿದೆ; ಇನ್ನೇನಿದ್ದರೂ ಕಂಪ್ಯೂಟರ್ ಜಾಲವನ್ನೇ ನಿಸ್ತೇಜಗೊಳಿಸಿ ಇಡೀ ದೇಶದ ಆರ್ಥಿಕತೆ ಮತ್ತು ಆಡಳಿತವನ್ನು ರಾತ್ರಿ ಬೆಳಗಾಗುವುದರೊಳಗೆ ಬುಡಮೇಲು ಮಾಡುವ ಸೈಬರ್ ಯುದ್ಧದ ಕಾಲ. ಹೀಗಾಗಿ ನಮ್ಮ ಸ್ಮಾರ್ಟ್ ವ್ಯವಹಾರಗಳ ಬಗ್ಗೆ ಕ್ಷಣಕ್ಷಣವೂ ಎಚ್ಚರಿಕೆಯಿಂದ ಇರುವುದು ಅನಿವಾರ್ಯವಾಗಿದೆ. ಕ್ರೆಡಿಟ್ ಕಾರ್ಡುಗಳನ್ನು ಸಾಧ್ಯವಾದಷ್ಟು ನಿರಪಾಯಕಾರಿಯಾಗಿ ಬಳಸುವುದು ಹೇಗೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ.

ಪೂರ್ವಾಪರ ತಿಳಿದುಕೊಳ್ಳಿ: ಕ್ರೆಡಿಟ್ ಕಾರ್ಡ್ ಜನಪ್ರಿಯಗೊಳ್ಳುತ್ತಿರುವುದರಿಂದ ಹಲವಾರು ಬ್ಯಾಂಕುಗಳು ವಿವಿಧ ಬಗೆಯ ಕ್ರೆಡಿಟ್ ಕಾರ್ಡ್‌ಗಳನ್ನು ಪರಿಚಯಿಸುತ್ತಿವೆ. ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ನಂತರವೇ ಮುಂದುವರಿಯಿರಿ. ತಕ್ಷಣಕ್ಕೆ ಗೋಚರಿಸುವ ಲಾಭಗಳಿಗೆ ಮಾರುಹೋಗದೆ ಆಯಾ ಬ್ಯಾಂಕಿನ ನಿಯಮಾವಳಿಗಳನ್ನು ತಿಳಿದುಕೊಳ್ಳಿ. ನಿಮ್ಮ ಕ್ರೆಡಿಟ್ ಲಿಮಿಟ್ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಿ.

ಮರುಪಾವತಿಗೆ ರಿಯಾಯಿತಿ ಅವಧಿ: ನೀವು ಪಡೆದುಕೊಳ್ಳಲು ಬಯಸಿರುವ ಕ್ರೆಡಿಟ್ ಕಾರ್ಡಿಗೆ ಸಂಬಂಧಿಸಿದಂತೆ ಖರ್ಚು ಮಾಡಿದ ಹಣದ ಮರುಪಾವತಿಗೆ ಇರುವ ರಿಯಾಯಿತಿ ಅವಧಿ (ಗ್ರೇಸ್ ಪಿರಿಯಡ್) ಎಷ್ಟು ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದರಿಂದ ಅನಗತ್ಯ ದಂಡ ಪಾವತಿಸುವುದನ್ನು ತಪ್ಪಿಸಿಕೊಳ್ಳಬಹುದು.

ಷರತ್ತುಗಳನ್ನು ಗಮನಿಸಿ: ಇದು 'ಷರತ್ತುಗಳು ಅನ್ವಯಿಸುವ’ ಕಾಲ. ಮೇಲ್ನೋಟಕ್ಕೆ ಕಂಡದ್ದೆಲ್ಲ ನಿಜ ಇರುವುದಿಲ್ಲ. ಯಾವುದೇ ಕೊಡುಗೆಯ ಹಿಂದೆಯೂ 'ಕಂಡೀಶನ್ಸ್ ಅಪ್ಲೈ’ ಇದ್ದೇ ಇರುತ್ತದೆ. ಅದೇನೆಂದು ತಿಳಿದುಕೊಳ್ಳಿ. ಎಲ್ಲವೂ ಸರಳ-ಸುಲಭವಾಗಿ ಕಂಡರೂ ನಿಮ್ಮ ವ್ಯವಹಾರದ ಹಿಂದೆ ಕೆಲವು ’ಹಿಡನ್ ಚಾರ್ಜಸ್’ ಇರಬಹುದು. ಅವುಗಳ ವಿವರ ಕೇಳಿಕೊಳ್ಳಿ.

ಆಫರ್‌ಗಳಿಗೆ ಮಾರುಹೋಗಬೇಡಿ: ಗ್ರಾಹಕರನ್ನು ಆಕರ್ಷಿಸುವುದಕ್ಕೋಸ್ಕರ ಬ್ಯಾಂಕುಗಳು ವಿವಿಧ ರೀತಿಯ ಕೊಡುಗೆಗಳನ್ನು ಘೋಷಿಸುತ್ತವೆ. ಆಫರ್‌ಗಳಿಗಿಂತಲೂ ಒಟ್ಟಾರೆ ವ್ಯವಹಾರದಲ್ಲಿ ನಿಮಗಾಗುವ ಅನುಕೂಲಗಳ ಬಗ್ಗೆ ಹೆಚ್ಚು ಗಮನಹರಿಸುವುದು ಮುಖ್ಯ.

ಸಕಾಲದಲ್ಲಿ ಪಾವತಿ ಮಾಡಿ: ಕ್ರೆಡಿಟ್ ಕಾರ್ಡ್ ಬಳಸಿ ವಸ್ತುಗಳನ್ನು ಕೊಂಡ ಬಳಿಕ ನಿಗದಿತ ಅವಧಿಯೊಳಗೆ ಖರ್ಚನ್ನು ಮರುಪಾವತಿ ಮಾಡಿ. ತಡಮಾಡಿದಷ್ಟು ಹೆಚ್ಚುವರಿ ಬಡ್ಡಿ ಮತ್ತಿತರ ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಬಿಲ್ ಬಂದಾಗ ಶಾಕ್ ಆಗುವ ಸರದಿ ನಿಮ್ಮದಾಗಬಹುದು.

ದುಂದುವೆಚ್ಚ ಒಳ್ಳೆಯದಲ್ಲ: ಕ್ರೆಡಿಟ್ ಕಾರ್ಡ್ ನಮಗರಿವಿಲ್ಲದಂತೆಯೇ ಕೊಳ್ಳುಬಾಕ ಪ್ರವೃತ್ತಿ ಬೆಳೆಸಿಬಿಡುತ್ತದೆ. ನಗದು ವ್ಯವಹಾರ ಮಾಡುವಾಗ ಕೈಯಲ್ಲಿ ಇರುವಷ್ಟೇ ಖರ್ಚು ಮಾಡುತ್ತೇವೆ. ಕಾರ್ಡ್ ಇರುವಾಗ 'ಲಿಮಿಟ್ ಇನ್ನೂ ಇದೆ. ಈಗ ಆಫರ್ ಇರುವಾಗಲೇ ಇದೊಂದು ಖರೀದಿ ಮಾಡಿಬಿಡೋಣ ಅಥವಾ ಹೆಚ್ಚು ರಿವಾರ್ಡ್ ಪಾಯಿಂಟ್ಸ್ ಬರುತ್ತದೆ’ ಎಂದು ಮನಸ್ಸು ಹೇಳುತ್ತಿರುತ್ತದೆ. ಸಾಮರ್ಥ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದರಿಂದ ಮುದೊಂದು ದಿನ ಅಪಾಯದಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಕ್ರೆಡಿಟ್ ಲಿಮಿಟ್‌ನ ಸರಾಸರಿ ಶೇ. 40ರಷ್ಟು ವ್ಯವಹಾರ ಮಾಡುವುದು ಜಾಣತನ.

ಸಾಧ್ಯವಾದಷ್ಟು ನಗದು ವಿದ್‌ಡ್ರಾ ಮಾಡಬೇಡಿ: ಕ್ರೆಡಿಟ್ ಕಾರ್ಡ್ ಬಳಸಿ ನಗದು ಹಣವನ್ನೂ ವಿದ್‌ಡ್ರಾ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಆದರೆ ಸಾಧ್ಯವಾದಷ್ಟು ಕ್ಯಾಶ್ ಪಡೆದು ಬಳಸುವುದನ್ನು ತಪ್ಪಿಸಿ. ವಸ್ತುಗಳ ಖರೀದಿಗೆ ಮಾಡಿದ ಖರ್ಚಿಗಿಂತ ನಗದು ಪಡೆದುದಕ್ಕೆ ಹೆಚ್ಚಿನ ಬಡ್ಡಿ ಇರುತ್ತದೆ. ನಗದು ಬಳಕೆಗೆ ಬಡ್ಡಿರಹಿತ ಅವಧಿ ಇಲ್ಲ. ನಗದು ವಿದ್‌ಡ್ರಾ ಮಾಡಿದ ದಿನದಿಂದಲೇ ಶೇ. 24-40ರಷ್ಟು ಬಡ್ಡಿ ಅನ್ವಯವಾಗುತ್ತದೆ. ನಮ್ಮದಲ್ಲದ ಹಣವನ್ನು ಬಳಸುವಾಗ ಜಿಪುಣರಾಗಿರುವುದೇ ವಾಸಿ. ಕ್ರೆಡಿಟ್ ಕಾರ್ಡ್ ಸಾಲಕ್ಕೆ ಪರ್ಯಾಯವಲ್ಲ ಎಂಬುದನ್ನು ನೆನಪಿಡಿ.

ರಿವಾರ್ಡ್ ಪಾಯಿಂಟ್ಸ್ ಸದ್ಬಳಕೆ ಮಾಡಿ: ಕ್ರೆಡಿಟ್ ಕಾರ್ಡ್ ಬಳಸುವಾಗ ಪ್ರತೀ ವ್ಯವಹಾರಕ್ಕೆ ಇಂತಿಷ್ಟು ರಿವಾರ್ಡ್ ಪಾಯಿಂಟ್ಸ್ ಸಂಗ್ರಹವಾಗುತ್ತಿರುತ್ತದೆ. ಅದನ್ನು ಗಮನಿಸಿ ಆಗಿಂದಾಗ್ಗೆ ಸದ್ಬಳಕೆ ಮಾಡಿ. ಅದರ ಅವಧಿ ಮುಗಿದರೆ ವಿನಾಕಾರಣ ನಮಗಿರುವ ರಿವಾರ್ಡ್ ಪಾಯಿಂಟುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಕ್ಯಾಶ್‌ಬ್ಯಾಕ್ ಆಫರ್‌ಗಳಿದ್ದಾಗ ಸದುಪಯೋಗಪಡಿಸಿಕೊಳ್ಳಿ.

ಸ್ಟೇಟ್‌ಮೆಂಟ್ ಗಮನಿಸುತ್ತಿರಿ: ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್ ಅನ್ನು ಆಗಾಗ್ಗೆ ಗಮನಿಸುತ್ತಿರಿ. ಎಷ್ಟು ಖರ್ಚಾಗಿದೆ, ನಿಮಗೆ ನೀಡಲಾಗಿರುವ ಲಿಮಿಟ್‌ನಲ್ಲಿ ಇನ್ನೆಷ್ಟು ಉಳಿದಿದೆ, ಮಿತಿ ಮೀರಿ ಖರ್ಚು ಮಾಡಿದ್ದೀರಾ, ನಿಮಗೆ ಗೊತ್ತಿಲ್ಲದಂತೆ ಯಾವುದಾದರೂ ಖರ್ಚು ನಡೆದಿದೆಯೇ ಎಂಬುದನ್ನು ತಿಳಿದುಕೊಳ್ಳಲು ಇದು ಅಗತ್ಯ.

ಜವಾಬ್ದಾರಿಯಿಂದ ವರ್ತಿಸಿ: ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಜವಾಬ್ದಾರಿ ಮತ್ತು ಶಿಸ್ತು ಇರಲಿ. ಕ್ರೆಡಿಟ್ ಕಾರ್ಡ್ ಎಂದರೆ ಸಾಲದ ಅಸುರಕ್ಷಿತ ರೂಪ ಎಂದೇ ಅರ್ಥ. ಕಾಲ ಆಧುನಿಕವಾಗುತ್ತಿದ್ದಂತೆ ಕಳ್ಳರೂ ಹೆಚ್ಚುಹೆಚ್ಚು ಬುದ್ಧಿವಂತರಾಗುತ್ತಿದ್ದಾರೆ. ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ನಿಮ್ಮ ಪಾಸ್‌ವರ್ಡ್‌ಗಳನ್ನು ಕದಿಯುವ, ನಿಮಗೆ ಗೊತ್ತಿಲ್ಲದಂತೆ ನಿಮ್ಮ ಕಾರ್ಡುಗಳ ಅನುಕೂಲ ಪಡೆಯುವ ಖದೀಮರ ಬಗ್ಗೆ ಸದಾ ಎಚ್ಚರವಹಿಸಿ.


ಕಾಮೆಂಟ್‌ಗಳಿಲ್ಲ: