ಮಂಗಳವಾರ, ಮೇ 14, 2019

ಮಾಫಿ ಅಂದ್ರೆ ತ್ರಾಸು, ಮರುಪಾವತಿ ಲೇಸು!

ಮೇ 13, 2019ರ ವಿಜಯವಾಣಿ (ವಿತ್ತವಾಣಿ)ಯಲ್ಲಿ ಪ್ರಕಟವಾದ ಲೇಖನ

ವಿಜಯವಾಣಿ | ವಿತ್ತವಾಣಿ | 13-05-2019
ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಿರುವಾಗಲೇ, ಹತ್ತಿರ ಹತ್ತಿರ ತೊಂಬತ್ತರ ಇಳಿವಯಸ್ಸಿನಲ್ಲಿರುವ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ನಿಂಗಮ್ಮ ಕರಿಯಪ್ಪ ಮೂರುಣ್ಣಿ ಎಂಬ ಅಜ್ಜಮ್ಮ ಬೇರೊಂದು ವಿಷಯಕ್ಕೆ ಸುದ್ದಿಯಾದರು. ಅದೇನೆಂದರೆ, ಸಾಲ ಮರುಪಾವತಿಯ ಬಗ್ಗೆ ಅವರಿಗಿರುವ ಬದ್ಧತೆ. ಸಾಲ ಮನ್ನಾ ಆಗಲಿ, ಆಗದಿರಲಿ, ಅಜ್ಜಿಯಂತೂ ಪ್ರತೀ ವರ್ಷ ತಮ್ಮ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಪಡೆದ ಸಾಲವನ್ನು ಅವಧಿಗೆ ಮುನ್ನವೇ ತೀರಿಸಿಯೇ ಸಿದ್ಧ. 

‘ಸುಮ್ನಿರು ಅಜ್ಜೀ, ಸಾಲ ಯಾಕೆ ಕಟ್ತೀ? ಹೆಂಗೂ ಎಲ್ಲ ಮನ್ನಾ ಆಗುತ್ತೆ’ ಎಂದು ಪರಿಚಯದವರು ಕೀಟಲೆ ಮಾಡಿದರೆ ಅಜ್ಜಿಯ ಉತ್ತರ ಇದು: ‘ನಾವು ಸಂಕಷ್ಟದಲ್ಲಿರೋವಾಗ ಸೊಸೈಟಿಯೋರು ಹಿಂದೆ ಮುಂದೆ ನೋಡದೆ ಸಾಲ ಕೊಟ್ಟಿದ್ದಾರೆ ಅಂದ್ರೆ ಅದನ್ನ ಸಮಯದಲ್ಲಿ ಮರುಪಾವತಿಸೋದು ನನ್ನ ಧರ್ಮ. ಸಾಲ ನೀಡೋ ಸೊಸೈಟಿಯೊಂದಿಗೆ ನಂಬಿಕೆ ಉಳಿಸ್ಕೋಬೇಕು. ಸರ್ಕಾರದ ಋಣ ಇಟ್ಕೋಬಾರದು. ಸಾಲ ಕಟ್ರಿ ಅಂತ ಯಾರೂ ನನ್ನ ಮನೆಗೆ ಮರೋದು ನಂಗೆ ಇಷ್ಟವಿಲ್ಲ.’

ಬ್ಯಾಂಕುಗಳಿಗೆ ನೂರಾರು ಕೋಟಿ ಪಂಗನಾಮ ಹಾಕಿ ದೇಶ ವಿದೇಶಗಳಲ್ಲಿ ಅಡ್ಡಾಡಿಕೊಂಡಿರುವ ದುಡ್ಡಿನದೊರೆಗಳು ನಿಂಗಮ್ಮನಂತಹ ಪರಮಪ್ರಾಮಾಣಿಕ ರೈತರ ಎದುರು ತೀರಾ ಕುಬ್ಜರಾಗಿ ಕಾಣುತ್ತಾರೆ. ವಿಜಯ್ ಮಲ್ಯ, ನೀರವ್ ಮೋದಿಯಂಥವರದು ಕೇವಲ ಆರ್ಥಿಕ ವಿಚಾರ ಅಲ್ಲ. ಅದಕ್ಕಿಂತಲೂ ಸಂಕೀರ್ಣವಾದ ರಾಜಕೀಯ ಸಂಗತಿ ಎಂಬುದು ದೇಶದ ಪ್ರತಿಯೊಬ್ಬ ಪ್ರಜೆಗೂ ಗೊತ್ತು.

ಇರಲಿ, ಇಲ್ಲಿ ಚರ್ಚಿಸ ಹೊರಟಿರುವುದು ಪ್ರಸ್ತುತ ಕೃಷಿ ಕ್ಷೇತ್ರದಲ್ಲಿ ಏರುತ್ತಿರುವ ಸಾಲ ಮರುಪಾವತಿ ಸಮಸ್ಯೆಯ ಬಗ್ಗೆ. ಒಂದೆಡೆ ರೈತರು ಸಾಲದ ಹೊರೆ, ಸರ್ಕಾರದ ಕೃಷಿ ನೀತಿ, ಭ್ರಷ್ಟಾಚಾರ, ಮಾನ್ಸೂನ್ ವೈಫಲ್ಯ, ಕೌಟುಂಬಿಕ ಕಾರಣಗಳಿಂದ ಕಂಗಾಲಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದರೆ, ಇನ್ನೊಂದೆಡೆ ದೇಶದ ಕೃಷಿ ಕ್ಷೇತ್ರದ ಸಾಲದ ಮೊತ್ತ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಇದೆ. ಪ್ರಸ್ತುತ ದೇಶದ ಕೃಷಿ ಸಾಲದ ಮೊತ್ತ ರೂ. 12.6 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.

ಸಾಲಮನ್ನಾ ಎಂಬ ವರದಾನ:
ವೈಫಲ್ಯಗಳಿಂದ ಕಂಗೆಟ್ಟ ರೈತರಿಗೆ ಸಾಲಮನ್ನಾಕ್ಕಿಂತ ದೊಡ್ಡ ನಿರಾಳತೆ ಇನ್ನೊಂದಿಲ್ಲ. ಮುಂದೇನು ಎಂದು ದಾರಿತೋಚದೆ ಕುಳಿತ ರೈತರಿಗೆ ಸಾಲಮನ್ನಾ ಎಂಬುದು ಜೀವದಾನವೇ ಸರಿ. ದುರಂತವೆಂದರೆ ಸಾಲಮನ್ನಾ ರೈತರಿಗೆ ಸಹಾಯ ಮಾಡುವುದಕ್ಕಿಂತಲೂ ರಾಜಕಾರಣಿಗಳ ಓಲೈಕೆ ತಂತ್ರದ ಒಂದು ಭಾಗವಾಗಿ ಬಳಸಲ್ಪಡುತ್ತಿರುವುದು. ಚುನಾವಣೆ ಸಮೀಪಿಸುತ್ತಿದ್ದಂತೆ ಜನರನ್ನು ಸೆಳೆಯಲು ರಾಜಕೀಯ ಪಕ್ಷಗಳಿಗೆ ಇರುವ ಸುಲಭದ ತಂತ್ರವೆಂದರೆ ತಾವು ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿಬಿಡುವುದು. 

ಕಳೆದೊಂದು ವರ್ಷದಲ್ಲಿ ದೇಶದ 8 ರಾಜ್ಯಗಳು ಸುಮಾರು ರೂ. 1.9 ಟ್ರಿಲಿಯನ್‍ನಷ್ಟು ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿವೆ. ಉತ್ತರ ಪ್ರದೇಶದಿಂದ ಆರಂಭವಾದ ಈ ಅಭಿಯಾನ ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಛತ್ತೀಸ್‍ಗಡ, ರಾಜಸ್ತಾನ ಹಾಗೂ ಮಧ್ಯಪ್ರದೇಶಗಳಲ್ಲೆಲ್ಲ ಸುದ್ದಿ ಮಾಡಿದೆ. ಇತ್ತ ರಾಹುಲ್ ಗಾಂಧಿಯವರು ಕಾಂಗ್ರೆಸ್ ಮಿತ್ರಕೂಟ ಅಧಿಕಾರಕ್ಕೆ ಬಂದರೆ ದೇಶದ ಅಷ್ಟೂ ರೈತರ ಸಾಲ ಮನ್ನಾ ಮಾಡುವುದಾಗಿ ಭಾಷೆ ಕೊಟ್ಟಿದ್ದಾರೆ. ಇಡೀ ದೇಶದ ರೈತರ ಸಾಲ ಮನ್ನಾ ಮಾಡಲು ಎಷ್ಟು ಹಣ ಬೇಕು, ಅದರಿಂದಾಗಬಹುದಾದ ಪರಿಣಾಮಗಳೇನು ಎಂದವರು ಕನಿಷ್ಟ ಪಕ್ಷ ಕಲ್ಪಿಸಿಕೊಂಡಿದ್ದಾರೋ ಇಲ್ಲವೋ?

‘ಸಾಲಮನ್ನಾ ಒಂದು ಬ್ಯಾಂಡೇಜ್ ಪರಿಹಾರ ಅಷ್ಟೇ. ತಕ್ಷಣದ ಪರಿಹಾರ ಒದಗಿಸಲು ಕೆಲವೊಮ್ಮೆ ಇದು ಅಗತ್ಯವೂ ಹೌದು. ಆದರೆ ಹೆಚ್ಚುತ್ತಿರುವ ಖರ್ಚು ಮತ್ತು ಕುಸಿಯುತ್ತಿರುವ ಲಾಭ ಮುಂತಾದ ಮೂಲಭೂತ ಸಮಸ್ಯೆಗಳಿಗೆ ಇದು ಪರಿಹಾರ ನೀಡುವುದಿಲ್ಲ. ಇದು ರಾಜಕಾರಣಿಗಳ ಮಟ್ಟಿಗೆ ಮಾತ್ರ ಒಂದು ಸುಲಭದ ಪರಿಹಾರ’ ಎನ್ನುತ್ತಾರೆ ಮುಂಬೈ ಸಮಾಜ ವಿಜ್ಞಾನಗಳ ಟಾಟಾ ಸಂಸ್ಥೆಯ ಪ್ರಾಧ್ಯಾಪಕರೊಬ್ಬರು.

ನೈತಿಕ ಅಶಿಸ್ತು:
ರೈತರಿಗೆ ತಕ್ಷಣದ ಒತ್ತಡದಿಂದ ಸಾಲಮನ್ನಾ ಒಂದಿಷ್ಟು ಬಿಡುಗಡೆ ನೀಡಬಹುದೇನೋ? ಆದರೆ ಅದೊಂದು ದೂರದೃಷ್ಟಿಯ ಉಪಕ್ರಮ ಅಲ್ಲವೆಂಬುದನ್ನು ಇದುವರೆಗಿನ ಬೆಳವಣಿಗೆಗಳು ದೃಢಪಡಿಸಿವೆ. ವಾಸ್ತವವಾಗಿ ರೈತರಿಗೆ ಅಗತ್ಯವಿರುವುದು ಸಾಲಮನ್ನಾ ಅಲ್ಲ, ಸಾಲದ ವಿಷವರ್ತುಲದಿಂದ ಶಾಶ್ವತ ಬಿಡುಗಡೆ ಎಂಬುದನ್ನು ಸ್ವಾಮಿನಾಥನ್ ಆಯೋಗದ ವರದಿ ಸರಿಯಾಗಿಯೇ ಬೊಟ್ಟು ಮಾಡಿದೆ. ರೈತರ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ, ಬೆಂಬಲ ಬೆಲೆ ಒದಗಿಸುವುದರಿಂದ ರೈತರ ಸಮಸ್ಯೆಗಳಿಗೆ ದೀರ್ಘಕಾಲೀನ ಪರಿಹಾರ ಲಭಿಸೀತೇ ಹೊರತು ಸಾಲಮನ್ನಾ ಎಂಬ ತಕ್ಷಣದ ಆಕರ್ಷಣೆಯಿಂದ ಅಲ್ಲ.

ಇನ್ನೊಂದು ವಿಷಯವೆಂದರೆ ಸಾಲಮನ್ನಾದ ಹೆಚ್ಚಿನ ಲಾಭ ಪಡೆಯುತ್ತಿರುವುದು ದೊಡ್ಡ ಹಿಡುವಳಿಯ ಕುಳಗಳೇ ಹೊರತು ಸಣ್ಣಪುಟ್ಟ ಕೃಷಿ ಮಾಡಿಕೊಂಡು ಬದುಕುತ್ತಿರುವ ಬಡ ಕುಟುಂಬಗಳಲ್ಲ. ರೈತರಿಗೆ ದೊರೆಯುವ ಬಡ್ಡಿರಹಿತ ಸಾಲಸೌಲಭ್ಯದ ದೊಡ್ಡ ಫಲಾನುಭವಿಗಳೂ ಇವರೇ. ತಮಗೆ ಅಗತ್ಯವಿಲ್ಲದಿದ್ದರೂ ಸಹಕಾರ ಸಂಘಗಳಿಂದ ಶೂನ್ಯಬಡ್ಡಿದರದ ಗರಿಷ್ಠ ಸಾಲಗಳನ್ನು ಪಡೆದು ಅದೇ ಮೊತ್ತವನ್ನು ಮತ್ತೆ ಉಳಿತಾಯ ಖಾತೆಗೆ ಜಮಾ ಮಾಡಿ ಬಡ್ಡಿ ಪಡೆಯುವುದು ಅಥವಾ ಬೇರೆ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದು ಹಳ್ಳಿಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಸಹಜವಾಗಿಯೇ ಸಾಲಮನ್ನಾ ಆದಾಗ ಹೆಚ್ಚಿನ ಲಾಭ ಪಡೆಯುವುದೂ ಇದೇ ಕುಳಗಳು.

ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ರಘುರಾಂ ರಾಜನ್, ಊರ್ಜಿತ್ ಪಟೇಲ್ ಮುಂತಾದವರು ಸಾಲಮನ್ನಾ ಘೋಷಣೆಗಳಿಗೆ ಆಗಿಂದಾಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದರು. ‘ಸಕಾರಗಳು ಜನಪ್ರಿಯತೆ ಗಳಿಸುವ ಉದ್ದೇಶದಿಂದ ಘೋಷಿಸುವ ರೈತರ ಸಾಲಮನ್ನಾ ನಿರ್ಧಾರವು ಒಂದು ನೈತಿಕ ಅಶಿಸ್ತು. ಇದು ಹಣದುಬ್ಬರಕ್ಕೆ ಕಾರಣವಾಗುತ್ತದೆಯಲ್ಲದೆ, ಪ್ರಾಮಾಣಿಕ ಸಾಲ ಸಂಸ್ಕೃತಿ ದುರ್ಬಲವಾಗುತ್ತದೆ. ಮರುಪಾವತಿಯ ಶಿಸ್ತಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ’ ಎಂದು 2017ರಲ್ಲೇ ಊರ್ಜಿತ್ ಪಟೇಲ್ ಎಚ್ಚರಿಸಿದ್ದರು.

ಪ್ರಾಮಾಣಿಕರ ನಿರ್ಲಕ್ಷ್ಯ:
‘ಸಾಲ ಮನ್ನಾದಿಂದ ಪ್ರಾಮಾಣಿಕವಾಗಿ ಸಾಲ ಹಿಂದಿರುಗಿಸುವವರನ್ನು ನಿರ್ಲಕ್ಷಿಸಿದಂತಾಗುತ್ತದೆ. ಇದು ಸಾಲ ಮರುಪಾವತಿ ಶಿಸ್ತಿಗೆ ಧಕ್ಕೆ ತರುತ್ತದೆ. ಇನ್ನು ಮುಂದೆ ಸಾಲ ಪಡೆಯುವವರು ಸಾಲ ತೀರಿಸಲು ಹಿಂದೇಟು ಹಾಕಲಾರಂಭಿಸುತ್ತಾರೆ. ತೆರಿಗೆದಾರರ ಹಣ ಸಾಲ ಪಡೆದವರಿಗೆ ಹೋದಂತಾಗುತ್ತದೆ’ ಎಂಬ ಇತ್ತೀಚೆಗೆ ಪ್ರಕಟವಾದ ಆರ್‍ಬಿಐ ದ್ವೈಮಾಸಿಕ ವಿತ್ತನೀತಿಯ ಹೇಳಿಕೆಯನ್ನು ಗಮನಿಸಬೇಕು.

ಕಾಲಕಾಲಕ್ಕೆ ಸಾಲ ಮರುಪಾವತಿಸುವವರಿಗೆ ಸರ್ಕಾರ ನೀಡುವ ಉತ್ತೇಜನ ಏನು? ಅವರು ಸಕಾಲಕ್ಕೆ ಸಾಲ ಮರುಪಾವತಿಸುತ್ತಲೇ ಇರುತ್ತಾರೆ. ಇನ್ನೊಂದೆಡೆ ವರ್ಷಾನುಗಟ್ಟಲೆ ಸಾಲ ತೀರಿಸದೆ ಉಳಿಯುವವರು ಮನ್ನಾದ ಲಾಭ ಪಡೆಯುತ್ತಾರೆ. ಇದು ಪ್ರಾಮಾಣಿಕರಿಗೆ ಮಾಡುವ ಅನ್ಯಾಯ ಅಲ್ಲವೇ ಎಂಬುದು ಕೂಡ ಗಂಭೀರ ಪ್ರಶ್ನೆಯೇ. ಇದಕ್ಕಿಂತ ಅಸಲು ಮರುಪಾವತಿಸಿದರೆ ಬಡ್ಡಿ ಮನ್ನಾ ಎಂಬ ಉಪಕ್ರಮಗಳು ನಿಜಕ್ಕೂ ಉತ್ತಮ ಹೆಜ್ಜೆ ಎನಿಸಬಲ್ಲವು. ಆಗ ಅಸಲನ್ನಾದರೂ ಪಾವತಿಸುವವರ ಪ್ರಮಾಣವಾದರೂ ಕೊಂಚ ಹೆಚ್ಚಾದೀತು. ಉತ್ತಮ ಬೆಳೆ ಹಾಗೂ ಧಾರಣೆ ದೊರಕಿದರೆ ಸಾಲ ಮರುಪಾವತಿ ಮಾಡದೆ ಇರುವಷ್ಟು ನಮ್ಮ ದೇಶದ ಯಾವ ರೈತನೂ ಅಪ್ರಾಮಾಣಿಕನಲ್ಲ. ಸಾಲಮನ್ನಾವನ್ನು ಮತಬೇಟೆಯ ತಂತ್ರವನ್ನಾಗಿ ಬಳಸುವ ಬದಲು ರಾಜಕೀಯ ಪಕ್ಷಗಳು ರೈತರ ಸಮಸ್ಯೆಗಳ ಪರಿಹಾರದ ಬಗ್ಗೆ ನೈಜ ಮನಸ್ಸಿನಿಂದ ಕೆಲಸ ಮಾಡಿದರೆ ಸಾಲಮರುಪಾವತಿ ಸಂಸ್ಕøತಿ ಮತ್ತೆ ನಿಸ್ಸಂಶಯವಾಗಿ ಬಲಗೊಳ್ಳುವುದು ಕಷ್ಟವೇನಲ್ಲ.

ಏರುತ್ತಿರುವ ಅನುತ್ಪಾದಕ ಆಸ್ತಿ
ಪಂಜಾಬ್ ಸರ್ಕಾರವು ಸಣ್ಣ ಮತ್ತು ಅತಿಸಣ್ಣ ರೈತರ ರೂ. 2 ಲಕ್ಷದವರೆಗಿನ ಸಾಲಗಳನ್ನು ಘೋಷಿಸಿದ ಮೇಲೆ ಕಟ್ಟಲು ಅನುಕೂಲವಿದ್ದವರೂ ಕಟ್ಟುವುದನ್ನು ನಿರ್ಲಕ್ಷಿಸಿದರು. ಇದು ಬಹುತೇಕ ಸಂದರ್ಭಗಳಲ್ಲಿ/ ರಾಜ್ಯಗಳಲ್ಲಿ ನಡೆಯುವ ವಿದ್ಯಮಾನ. ಸಾಲ ಮರುಪಾವತಿ ಮಾಡುವುದು ಹಾಗಿರಲಿ ಖಾತೆಗಳಲ್ಲಿ ಹಣವಿದ್ದರೆ ಬ್ಯಾಂಕ್ ಸಾಲದ ಕಂತನ್ನು ತೆಗೆದುಕೊಂಡೀತು ಎಂಬ ಆತಂಕದಿಂದ ಕೆಲವು ರೈತರು ಬ್ಯಾಂಕುಗಳಲ್ಲಿ ಹಣ ಡೆಪಾಸಿಟ್ ಮಾಡುವುದನ್ನೇ ನಿಲ್ಲಿಸಿಬಿಟ್ಟರಂತೆ. ಇದರಿಂದಾಗಿ ಬ್ಯಾಂಕುಗಳಲ್ಲಿನ ಅನುತ್ಪಾದಕ ಆಸ್ತಿ (ಎನ್‍ಪಿಎ) ಬೆಳೆಯುತ್ತಲೇ ಇದೆ. 

ಕುಸಿಯುತ್ತಿರುವ ಸಾಲಸೌಲಭ್ಯ
ವಾಸ್ತವವಾಗಿ ಸಣ್ಣ ರೈತರಿಗೆ ದೊರೆಯುವ ಸಾಲಸೌಲಭ್ಯ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. ಒಟ್ಟಾರೆ ಕೃಷಿ ಸಾಲದಲ್ಲಿ ರೂ. 2 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಸಾಲ ಪಡೆದವರ ಪ್ರಮಾಣ 2016ರಲ್ಲಿ ಶೇ. 45 ಇತ್ತು, ಇದು 2017ರಲ್ಲಿ ಶೇ. 40ಕ್ಕೆ ಇಳಿಯಿತು. ಹಾಗೆ ನೋಡಿದರೆ ದೊಡ್ಡ ಸಾಲಗಳನ್ನು ಪಡೆಯುವವರ ಪ್ರಮಾಣ ಹೆಚ್ಚಿದೆ. ಉದಾಹರಣೆಗೆ, ಎರಡು ಲಕ್ಷಕ್ಕಿಂತ ಹೆಚ್ಚು ಮತ್ತು ಒಂದು ಕೋಟಿಗಿಂತ ಕಡಿಮೆ ಸಾಲ ಪಡೆಯುವವರು ನಮ್ಮಲ್ಲಿ ಶೇ. 47 ಇದ್ದಾರೆ. ಒಂದು ಕೋಟಿಗಿಂತಲೂ ಕೃಷಿ ಸಾಲ ಪಡೆಯುವವರು ಶೇ. 13 ಇದ್ದಾರೆ. ದುರದೃಷ್ಟವೆಂದರೆ ದಾಸ್ತಾನು ಮಳಿಗೆಗಳು, ಕೋಲ್ಡ್ ಸ್ಟೋರೇಜ್, ರಸಗೊಬ್ಬರಗಳ ತಯಾರಕರು, ಅಹಾರ ಉತ್ಪನ್ನಗಳ ತಯಾರಕರೇ ಮೊದಲಾದ ದೊಡ್ಡ ಕುಳಗಳೇ ಇಂತಹ ಕೃಷಿ ಸಾಲದ ಪ್ರಯೋಜನೆ ಪಡೆಯುತ್ತಾರೆ.

ಗರಿಷ್ಠ ವಿತ್ತೀಯ ಕೊರತೆ
ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಸರ್ಕಾರದ ವಿತ್ತೀಯ ಕೊರತೆ ಗರಿಷ್ಠ ಹಂತವನ್ನು ತಲುಪಿದೆ. ಇದು ಹಣದುಬ್ಬರಕ್ಕೆ ಎಡೆ ಮಾಡಿಕೊಟ್ಟಿದೆ. ಸಾಲಮನ್ನಾ ನಿರ್ಧಾರಗಳು ಈ ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸಿವೆ. ಹಾಗೆಯೇ, ಸಾಲಮನ್ನಾ ನಿರ್ಧಾರವು ಭವಿಷ್ಯದಲ್ಲಿ ಸಾಲಗಾರರು ಸುಸ್ತಿದಾರರಾಗಲು ಉತ್ತೇಜನ ನೀಡುತ್ತದೆ. ಮುಂದೆ ಸಾಲ ಮರುಪಾವತಿಸುವ ಸಂದರ್ಭವೇ ಬರಲಿಕ್ಕಿಲ್ಲ ಎಂದು ಭಾವಿಸುವ ಸಾಲಗಾರರು ಹೆಚ್ಚೆಚ್ಚು ಪ್ರಮಾಣದಲ್ಲಿ ಸಾಲ ಪಡೆದು ಮರುಪಾವತಿಯನ್ನು ನಿರ್ಲಕ್ಷಿಸತೊಡಗುತ್ತಾರೆ ಎನ್ನುತ್ತಾರೆ ಆರ್ಥಿಕ ತಜ್ಞರು. 

ರೈತರ ಆತ್ಮಹತ್ಯೆ
ರೈತರ ಆತ್ಮಹತ್ಯೆ ಭಾರತದ ಕೃಷಿ ಕ್ಷೇತ್ರದ ಬಲುದೊಡ್ಡ ಸವಾಲು. ಉದಾರೀಕರಣದ ನೀತಿಯೊಂದಿಗೆ ದೇಶವನ್ನು ಪ್ರವೇಶಿಸಿದ ಈ ಭೂತ ಇನ್ನೂ ತನ್ನ ಆಟಾಟೋಪವನ್ನು ನಿಲ್ಲಿಸಿಲ್ಲ. ರಾಷ್ಟ್ರೀಯ ಅಪರಾಧ ದಾಖಲು ಬ್ಯೂರೋದ ಪ್ರಕಾರ, 1995ರಿಂದೀಚೆಗೆ ದೇಶದಲ್ಲಿ 2.96 ಲಕ್ಷದಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಲ್ಲಿ ಸುಮಾರು 60,000ದಷ್ಟು ರೈತರು ಮಹಾರಾಷ್ಟ್ರದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಒಡಿಶಾ, ತೆಲಂಗಾಣ, ಆಂಧ್ರ, ಮಧ್ಯಪ್ರದೇಶ, ಗುಜರಾತ್ ಹಾಗೂ ಛತ್ತೀಸ್‍ಗಡ ನಂತರದ ಸಾಲಿನಲ್ಲಿವೆ. ಕೋಟಿಗಟ್ಟಲೆ ರೂಪಾಯಿಯಷ್ಟು ಸಾಲಮನ್ನಾ ಘೋಷಣೆ ಮಾಡಿದ್ದರಿಂದಲೂ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಕಡಿಮೆಯಾಗಿಲ್ಲ ಎಂದರೆ ಸಾಲಮನ್ನಾ ಒಂದು ಪರಿಣಾಮಕಾರಿ ಉಪಕ್ರಮ ಅಲ್ಲ ಎಂಬುದು ದೃಢವಾಗುತ್ತದೆ.

ಕಾಮೆಂಟ್‌ಗಳಿಲ್ಲ: