ಶುಕ್ರವಾರ, ಡಿಸೆಂಬರ್ 24, 2021

ಸಾಹಿತ್ಯ ಪ್ರೀತಿ ಮತ್ತು ಹೊಸ ತಲೆಮಾರಿನ ವೈರುಧ್ಯ

ಡಿಸೆಂಬರ್ 2021ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾದ ಲೇಖನ

ಈಗಿನ ಯುವಜನರಲ್ಲಿ ಭಾಷೆ-ಸಾಹಿತ್ಯ ಪ್ರೀತಿ ಹೇಗಿದೆ ಎಂದು ಸೂಕ್ಷ್ಮವಾಗಿ ಗಮನಿಸಿದರೆ ಎರಡು ವೈರುಧ್ಯಗಳು ಗೋಚರಿಸುತ್ತವೆ: ಒಂದು ಕಡೆ, ಭಾಷೆ-ಸಾಹಿತ್ಯದ ಕುರಿತು ಸಾಕಷ್ಟು ಅಭಿಮಾನ ಬೆಳೆಸಿಕೊಂಡಿರುವ, ಸಾಹಿತ್ಯದ ಅಧ್ಯಯನ ಮತ್ತು ರಚನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿರುವ ಯುವಜನತೆ; ಇನ್ನೊಂದು ಕಡೆ, ಭಾಷೆ-ಸಾಹಿತ್ಯದ ಕುರಿತು ಯಾವ ಆದರಾಭಿಮಾನವೂ ಇಲ್ಲದ, ಬದುಕು ಹಾಗೂ ಭವಿಷ್ಯದ ಕುರಿತು ಹೇರಳವಾದ ಸಿನಿಕತೆಯನ್ನು ಬೆಳೆಸಿಕೊಂಡಿರುವ ಯುವಜನತೆ. ಈ ಎರಡು ಅಂಚುಗಳು ನಮ್ಮನ್ನು ಚಕಿತರನ್ನಾಗಿಯೂ, ವಿಷಣ್ಣರನ್ನಾಗಿಯೂ ಮಾಡುವುದಿದೆ. ಸಮಾಜದಲ್ಲಿರುವ ಎಲ್ಲರೂ ಏಕಪ್ರಕಾರವಾಗಿ ಸಾಹಿತ್ಯ-ಮಾನವಿಕಶಾಸ್ತ್ರಗಳ ಬಗ್ಗೆ ಪ್ರೀತಿಯನ್ನೋ ಅಭಿಮಾನವನ್ನೋ ಬೆಳೆಸಿಕೊಳ್ಳಬೇಕಾಗಿಲ್ಲ ನಿಜ, ಆದರೆ ಅವುಗಳಿಂದ ತೀರಾ ದೂರಸರಿದರೆ ಬದುಕಿಗೇನು ಸ್ವಾರಸ್ಯ? ನಾವಿರುವ ಕ್ಷೇತ್ರ, ಮಾಡುತ್ತಿರುವ ಉದ್ಯೋಗಗಳು ಭಿನ್ನವಾಗಿರಬಹುದು, ಆದರೆ ಭಾಷೆ-ಸಾಹಿತ್ಯದ ಪ್ರೀತಿ ಒಟ್ಟಾರೆ ಜೀವನಕ್ಕೆ ತಂದುಕೊಡುವ ವೈವಿಧ್ಯತೆ, ಜೀವಂತಿಕೆ, ಚೆಲುವು, ಒಲವುಗಳು ಸುಖಾಸುಮ್ಮನೆ ಹೇಗೆ ಬರುವುದು ಸಾಧ್ಯ?

ಇಂತಹದೊಂದು ಸನ್ನಿವೇಶ ಉದ್ಭವಿಸಲು ಏನು ಕಾರಣ ಎಂದು ಯೋಚಿಸಿದರೆ ಅನೇಕ ಅಂಶಗಳು ಕಣ್ಣಮುಂದೆ ಬರುತ್ತವೆ. ಕಾಲದ ಓಟದಲ್ಲಿ ನಾವು ಬಹಳ ದೂರ ಸಾಗಿ ಬಂದಿದ್ದೇವೆ. ಬದುಕಿನ ಉದ್ದೇಶ, ವಿಧಾನ, ದೃಷ್ಟಿಕೋನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದರಲ್ಲೂ ಬದುಕಿನ ಮೊದಲ ಹದಿನೈದು-ಇಪ್ಪತ್ತು ವರ್ಷಗಳು ಅನೇಕ ಪ್ರಭಾವಗಳಿಂದ ಸುತ್ತುವರಿದಿವೆ. ಜೀವನ ರೂಪೀಕರಣಗೊಳ್ಳುವ ಈ ಸುವರ್ಣಕಾಲದಲ್ಲಿ ವಾಸ್ತವವಾಗಿಯೂ ಏನು ನಡೆಯುತ್ತಿದೆ ಎಂದು ನೋಡೋಣ.

ಕೌಟುಂಬಿಕ ವಾತಾವರಣ:

ಬಾಲ್ಯಕಾಲವು ನಮ್ಮ ಜೀವನವನ್ನು ನಿರ್ಧರಿಸುವ ಬಹುಮುಖ್ಯ ಘಟ್ಟ ಎಂಬುದನ್ನು ಎಲ್ಲರೂ ಬಲ್ಲೆವು. ಈ ಬಾಲ್ಯ ಎಷ್ಟರಮಟ್ಟಿಗೆ ಬಾಲ್ಯವಾಗಿ ಉಳಿದಿದೆ? ಯೋಚಿಸಿದರೆ ಅನೇಕ ಸಲ ಆತಂಕವಾಗುತ್ತದೆ. ಸಮಾಜದ ವಿನ್ಯಾಸ, ಚಲನೆ, ಚಟುವಟಿಕೆಗಳು ಬದಲಾಗಿವೆ. ಕುಟುಂಬದ ಸ್ವರೂಪದಲ್ಲಿ ಮಹತ್ವದ ಸ್ಥಿತ್ಯಂತರಗಳುಂಟಾಗಿವೆ. ಕೂಡುಕುಟುಂಬಗಳು ಇಲ್ಲವೇ ಇಲ್ಲ ಎಂಬಷ್ಟು ಇಲ್ಲ. ನ್ಯೂಕ್ಲಿಯರ್ ಕುಟುಂಬಗಳ ದೆಸೆಯಲ್ಲಿ ಅಜ್ಜಿ, ತಾತ, ಅತ್ತೆ, ಮಾವ, ದೊಡ್ಡಪ್ಪ, ಚಿಕ್ಕಮ್ಮ, ಅತ್ತಿಗೆ, ಸೊಸೆ ಇತ್ಯಾದಿ ಸಂಬಂಧಗಳೆಲ್ಲ ಬಹುತೇಕ ಹೊರಟುಹೋಗಿವೆ. ಪರಿಚಯವಾಗುವ ಹೊಸ ವ್ಯಕ್ತಿ ಒಂದೋ ಅಂಕಲ್ ಇಲ್ಲವೇ ಆಂಟಿ. 

ಕೌಟುಂಬಿಕ ಸಮಾರಂಭಗಳು, ಹಬ್ಬ-ಹರಿದಿನಗಳು ಇತ್ಯಾದಿಗಳೆಲ್ಲ ಮಾಯವಾಗಿವೆ; ಇದ್ದರೂ ಎಲ್ಲವೂ ಯಾಂತ್ರಿಕ, ಎಲ್ಲದರಲ್ಲೂ ವಾಣಿಜ್ಯಕ ದೃಷ್ಟಿಕೋನ. ಎಲ್ಲರೂ ತಮ್ಮ ಉದ್ಯೋಗ, ಸಾಧನೆಗಳಲ್ಲಿ ವ್ಯಸ್ತರಾಗಿದ್ದಾರೆ. ಬಾಲ್ಯಕಾಲದಲ್ಲಿ ವ್ಯಕ್ತಿಯ ಭಾವಪೋಷಣೆ ಮಾಡುವ ಸಹಜ ಸುಂದರ ವಾತಾವರಣ ಈಗ ಹಳ್ಳಿಗಳಲ್ಲೂ ಉಳಿದುಕೊಂಡಿಲ್ಲ. ಮನೆಗಳಲ್ಲಿ ಪತ್ರಿಕೆ, ಪುಸ್ತಕ ಓದುವ ವಾತಾವರಣ ಇದ್ದರೆ ಮಕ್ಕಳಲ್ಲೂ ಆ ಪ್ರೀತಿ ಸಹಜವಾಗಿಯೇ ಬೆಳೆಯುತ್ತದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಬದುಕನ್ನು ಸ್ಪರ್ಧೆಯನ್ನಾಗಿ ತೆಗೆದುಕೊಂಡಿರುವ ಅನೇಕ ಕುಟುಂಬಗಳಲ್ಲಿ ಇಂತಹ ಸನ್ನಿವೇಶ ನಿಧಾನಕ್ಕೆ ಮರೆಯಾಗುತ್ತಿದೆ. ದೊರೆತ ಅಲ್ಪಸ್ವಲ್ಪ ಸಮಯವನ್ನು ಮೊಬೈಲ್, ಟಿವಿಗಳು ಆವರಿಸಿಕೊಂಡಿವೆ.

ಶಾಲಾ ಪರಿಸರ:

ಮೊದಲ ಪಾಠಶಾಲೆಯೆನಿಸಿದ ಮನೆಯಲ್ಲಿ ಆರಂಭವಾದ ಭಾವಪೋಷಣೆ ಶಾಲೆಯಲ್ಲಿ ಮುಂದುವರಿಯಬೇಕು; ಅದು ಎರಡನೆಯ ಮನೆ, ಅಥವಾ ಮನೆಯ ವಿಸ್ತರಣೆ. ಆದರೆ ಅಂತಹ ವಾತಾವರಣವೂ ಉಳಿದುಕೊಂಡಿಲ್ಲ. ಬದುಕಿನ ವೇಗದ ಓಟಕ್ಕೆ ಶಾಲೆಯಲ್ಲಿಯೇ ಟೊಂಕ ಕಟ್ಟಿಯಾಯಿತು. ಇದು ಸ್ಪರ್ಧಾತ್ಮಕ ಜಗತ್ತು, ನೀನು ಓಡದೇ ಇದ್ದರೆ ಹಿಂದೆ ಉಳಿಯುತ್ತೀಯಾ ಎಂಬ ಮಂತ್ರಪಠನೆ ಅಲ್ಲಿಯೇ ಆರಂಭವಾಗುತ್ತದೆ. ಅಲ್ಲಿಗೆ ಪಠ್ಯಪುಸ್ತಕ, ಪರೀಕ್ಷೆಗಳ ಹೊರತಾಗಿ ಬೇರೇನೂ ಬೇಡ ಎಂಬ ಮನಸ್ಥಿತಿ ಮೂಡಿಯಾಯಿತು; ಈ ಮಕ್ಕಳಿಗೆ ಇನ್ನೇನೂ ಮುಖ್ಯವಲ್ಲ. ಮೊದಲಾದರೆ ಆರಂಭದ ಆರು ವರ್ಷದ ಅವಧಿಯಾದರೂ ಮನೆಯಲ್ಲಿಯೇ ಕಳೆದುಹೋಗುತ್ತಿತ್ತು. ಈಗ ಮಗುವಿಗೆ ಉಸಿರಾಡಲೂ ಸಮಯವಿಲ್ಲ. ಅಂಬೆಗಾಲಿಕ್ಕುವ ಮಗು ಹಾಗೆ ಎದ್ದುನಿಲ್ಲಲು ಪ್ರಯತ್ನಿಸುವ ಹೊತ್ತಿಗೆ ಪ್ಲೇಹೋಂ ಸೇರಿಯಾಯಿತು. ಆಮೇಲೆ ಪ್ರೀನರ್ಸರಿ, ನರ್ಸರಿ, ಕೇಜಿಗಳ ಗೌಜು ಆರಂಭ. ಹಾಗೆ ಕಳೆದುಹೋದ ಮಗು ಮತ್ತೆ ಕೈಗೆ ಸಿಗುವುದೇ ಇಲ್ಲ.

ಬದಲಾದ ವಿದ್ಯಾರ್ಥಿ ಜೀವನ:

ದಶಕಗಳ ಹಿಂದೆ ಶಾಲಾ-ಕಾಲೇಜುಗಳಲ್ಲಿ ಭಾಷೆ-ಸಾಹಿತ್ಯ-ಸಂಸ್ಕೃತಿಯ ಪ್ರೀತಿ ಪೋಷಣೆಗೆ ಹೇರಳ ಅವಕಾಶಗಳಿದ್ದವು. ವಾರಕ್ಕೊಂದಾದರೂ ಚರ್ಚಾಕೂಟ, ಆಗಿಂದಾಗ್ಗೆ ಸ್ಪರ್ಧೆಗಳು, ವ್ಯಕ್ತಿತ್ವ ವಿಕಸನ ಶಿಬಿರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರವಾಸ, ಸಂಭ್ರಮದ ವಾರ್ಷಿಕೋತ್ಸವ- ಎಲ್ಲವೂ ವಿದ್ಯಾರ್ಥಿ ಬದುಕಿನ ಭಾಗವಾಗಿದ್ದವು. ಈಗ ಅವುಗಳಿಗೆ ಬಿಡುವಿಲ್ಲ, ಇದ್ದರೂ ಎಲ್ಲವೂ ಪ್ರಚಾರಕ್ಕಾಗಿ ಎಂಬಷ್ಟು ಕೃತಕ.

ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಬಿಡುವಿನ ವೇಳೆ ಎಂಬುದೇ ಇಲ್ಲ. ಗ್ರಂಥಾಲದ ಅವಧಿ, ಆಟದ ಅವಧಿಗಳಿಲ್ಲ. ಅನೇಕ ಶಾಲೆ-ಕಾಲೇಜುಗಳಲ್ಲಿ ಗ್ರಂಥಾಲಯಗಳೇ ಇಲ್ಲ. ಲಕ್ಷಗಟ್ಟಲೆ ಶುಲ್ಕ ಪೀಕುವ ಸಂಸ್ಥೆಗಳು ಎಲ್ಲವನ್ನೂ ‘ರೆಡಿ-ಟು-ಈಟ್’ ಮಾದರಿಯಲ್ಲಿ ವಿದ್ಯಾರ್ಥಿಗಳೆದುರು ತಂದು ಸುರಿಯುತ್ತಿರುವಾಗ ಅವರಿಗೆ ಗ್ರಂಥಾಲಯ ಅವಶ್ಯಕ ಎಂದು ಅನಿಸುವುದೂ ಇಲ್ಲ. ಗ್ರಂಥಾಲಯ ಮಾಡಿ ಜಾಗ ಕಳೆಯುವ ಬದಲು ಹೊಸದೊಂದು ಸೆಕ್ಷನ್ ತೆರೆಯಬಹುದಲ್ಲ ಎಂಬುದೇ ಈ ಸಿರಿ ಗರ ಬಡಿದ ಆಡಳಿತ ಮಂಡಳಿಗಳ ಯೋಚನೆ.

ವೃತ್ತಿಪರ ಕೋರ್ಸೇ ಸರ್ವಸ್ವ:

ಸ್ಪರ್ಧೆಯಲ್ಲಿ ಗೆಲ್ಲುವುದೇ ಶ್ರೇಷ್ಠ ಎಂಬ ಭಾವನೆ ಬಿತ್ತುವುದರ ಜೊತೆಗೆ ಈ ಶಿಕ್ಷಣ ಸಂಸ್ಥೆಗಳು ವೃತ್ತಿಪರ ಕೋರ್ಸುಗಳಿಂದಲೇ ಜೀವನ ಉದ್ಧಾರವೆಂಬ ಭಾವನೆಯನ್ನು ವಿದ್ಯಾರ್ಥಿಗಳಲ್ಲೂ ಪೋಷಕರಲ್ಲೂ ಪರಿಣಾಮಕಾರಿಯಾಗಿ ಬೆಳೆಸಿಬಿಟ್ಟಿವೆ. ಇದರ ಹಿಂದಿರುವುದು ಇವರ ದುಡ್ಡಿನ ದುರಾಸೆಯ ರಾಜಕಾರಣ. ಇಂತಹದೊಂದು ಮನಸ್ಥಿತಿಯನ್ನು ಬೆಳೆಸದೆ ಹೋದರೆ ಲಕ್ಷಗಟ್ಟಲೆ ಶುಲ್ಕ ವಿಧಿಸುವುದಾದರೂ ಹೇಗೆ?

ಎಂಬಲ್ಲಿಗೆ ಇಂಟರ್‍ನ್ಯಾಷನಲ್ ಶಾಲೆ-ಕಾಲೇಜುಗಳ ಮೆರವಣಿಗೆ, ಎಂಟನೇ ತರಗತಿಯಿಂದಲೇ ಇಂಜಿನಿಯರಿಂಗ್-ಮೆಡಿಕಲ್ ಸೀಟುಗಳಿಗೆ ತರಬೇತಿ, ಇದೇ ಅಧ್ಯಾಪಕರು ಹೊರಗೆ ತಮ್ಮದೇ ಕೋಚಿಂಗೆ ಸೆಂಟರುಗಳನ್ನು ತೆರೆದು ಕೋಚಿಂಗ್‍ಗೆ ಸೇರದ ವಿದ್ಯಾರ್ಥಿಗಳು ನಿಷ್ಪ್ರಯೋಜಕರು ಎಂಬ ಭಾವನೆಯನ್ನು ಬಿತ್ತುವುದು: ಎಲ್ಲವೂ ಆರಂಭವಾಯಿತು. ಜತೆಗೆ ವೃತ್ತಿಪರ ಕೋರ್ಸುಗಳನ್ನು ಓದುವವರಿಗೆ ಭಾಷಾ ಪಾಠಗಳು ಮುಖ್ಯವಲ್ಲ ಎಂಬ ಭಾವನೆಯನ್ನೂ ವ್ಯವಸ್ಥಿತವಾಗಿ ಬಿತ್ತುವ ಪ್ರವೃತ್ತಿ ಆರಂಭವಾಯಿತು. ಇವರಿಗೆಲ್ಲ ಭಾಷಾ ಶಿಕ್ಷಕರುಗಳು ಎಂದರೆ ಉಳಿದ ಅಧ್ಯಾಪಕರಿಗೆ ಪಾಠದ ನಡುವೆ ಕೊಂಚ ವಿರಾಮ ಒದಗಿಸುವ ಗ್ಯಾಪ್ ಫಿಲ್ಲರುಗಳು ಮತ್ತು ವಿದ್ಯಾರ್ಥಿಗಳಿಗೆ ಒಂದಿಷ್ಟು ನಿರಾಳತೆ ನೀಡುವ ಹಾಸ್ಯಗಾರರು.

ಅಧ್ಯಾಪಕರು ಹೇಗಿದ್ದಾರೆ?

ವಿದ್ಯಾರ್ಥಿಗಳಲ್ಲಿ ಸಾಹಿತ್ಯ-ಸಂಸ್ಕೃತಿ-ಭಾಷೆಗಳ ಬಗ್ಗೆ ಪ್ರೀತಿ, ಅಭಿಮಾನ ಬೆಳೆಸುವಲ್ಲಿ ಅಧ್ಯಾಪಕರ ಪಾತ್ರವೂ ಮಹತ್ವದ್ದು. ಈ ವಿಚಾರದಲ್ಲಿ ಅವರು ಏನು ಮಾಡುತ್ತಿದ್ದಾರೆ ಎಂದರೆ ಮತ್ತೆ ಅಲ್ಲಿಯೂ ಕಾಡುವುದು ನಿರಾಶೆಯೇ. ಪ್ರಾಥಮಿಕ ಶಾಲೆಯಲ್ಲಿ ಭಾಷೆಯನ್ನು ಸುಪುಷ್ಟವಾಗಿ ಬೋಧಿಸುವ ಕೆಲಸ ಬಹುತೇಕ ಕಡೆ ಯಶಸ್ವಿಯಾಗಿ ನಡೆದಿಲ್ಲ. ಅಧ್ಯಾಪಕರೇ ಸಮರ್ಪಕವಾಗಿ ಕಲಿತಿಲ್ಲವೋ, ಮಕ್ಕಳಿಗೆ ಕಲಿಸುವಲ್ಲಿ ಆಸಕ್ತಿ-ಬದ್ಧತೆಗಳಿಲ್ಲವೋ, ಅಂತೂ ಎಲ್ಲಿ ಗಟ್ಟಿ ತಳಹದಿ ದೊರೆಯಬೇಕಿತ್ತೋ ಅಲ್ಲಿ ದೊರೆಯುತ್ತಿಲ್ಲ. ಇದೇ ಸಡಿಲ ಪಾಯದೊಂದಿಗೆ ಮಕ್ಕಳು ಪ್ರೌಢಶಾಲೆ, ಅಲ್ಲಿಂದ ಪಿಯುಸಿ, ಅಲ್ಲಿಂದ ಕಾಲೇಜುಗಳಿಗೆ ಭಡ್ತಿ ಪಡೆಯುತ್ತಿದ್ದಾರೆ. ಆಗಿರುವ ತಪ್ಪುಗಳಿಗೆ ಒಬ್ಬರು ಇನ್ನೊಬ್ಬರೆಡೆಗೆ ಬೆರಳು ತೋರಿಸುವ ಕೆಲಸ ನಡೆಯುತ್ತಿದೆಯೇ ಹೊರತು ಆತ್ಮಾವಲೋಕನ ನಡೆಸಲು ಯಾರೂ ಸಿದ್ಧರಿಲ್ಲ. ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ನಡೆಸುತ್ತಿರುವ ವಿದ್ಯಾರ್ಥಿಗಳಲ್ಲೂ ಕಾಗುಣಿತ ತಿದ್ದಿಲ್ಲ, ಸ್ವತಂತ್ರವಾಗಿ ಅರ್ಥಪೂರ್ಣ ವಾಕ್ಯಗಳನ್ನು ರಚಿಸಲು ಬರುತ್ತಿಲ್ಲ ಎಂದರೆ ಏನರ್ಥ?

ಅಧ್ಯಾಪಕರು ಮನಸ್ಸು ಮಾಡಿದರೆ ಭಾಷೆ, ಸಾಹಿತ್ಯ ಎರಡರ ಕಡೆಗೂ ಮಕ್ಕಳನ್ನು ಧಾರಾಳವಾಗಿ ಸೆಳೆಯಬಹುದು. ಪ್ರೌಢಶಾಲೆ, ಕಾಲೇಜು ಹಂತದಲ್ಲಂತೂ ಇದಕ್ಕೆ ಹೇರಳ ಅವಕಾಶ ಇದೆ. ಸಾಹಿತ್ಯ ಪ್ರೀತಿ ಮೂಡಿಸುವ ನಾಲ್ಕು ಒಳ್ಳೆಯ ಕಾರ್ಯಕ್ರಮಗಳನ್ನು ಏರ್ಪಡಿಸುವುದು, ಕಡೇ ಪಕ್ಷ ತಮ್ಮ ವಿದ್ಯಾರ್ಥಿಗಳಿಗೆ ಒಳ್ಳೊಳ್ಳೆಯ ಪುಸ್ತಕಗಳನ್ನು ಓದಿಸುವುದು, ಅವರು ಆ ಬಗ್ಗೆ ವಿಚಾರ ವಿನಿಮಯ ಮಾಡುವಂತೆ ನೋಡಿಕೊಳ್ಳುವುದು- ಇಷ್ಟನ್ನು ಮಾಡಿದರೂ ಹೊಸ ತಲೆಮಾರಿನ ಹುಡುಗರಿಗೆ ಉಪಕಾರ ಮಾಡಿದ ಪುಣ್ಯ ಅವರಿಗೆ ಸಲ್ಲುತ್ತದೆ. ಆದರೆ ಅವರಿಗೇ ಸ್ವತಃ ಭಾಷೆ-ಸಾಹಿತ್ಯಗಳ ಮೇಲೆ ಅಭಿಮಾನ ಇಲ್ಲದೇ ಹೋದರೆ ಮುಂದಿನದನ್ನು ಮಾತಾಡುವುದು ವ್ಯರ್ಥ. ಸಂಬಳ, ಭಡ್ತಿ, ವರ್ಗಾವಣೆ- ವೃತ್ತಿಜೀವನಕ್ಕೆ ಮುಖ್ಯವಾದ ವಿಚಾರಗಳು ನಿಜ, ಆದರೆ ಉಳಿದ ಉದ್ಯೋಗಗಳಿಗಿಂತ ಭಿನ್ನವಾದ ಬದ್ಧತೆಯೊಂದು ಅಧ್ಯಾಪಕರಿಗೆ ಇದೆಯಲ್ಲ?

ಪಠ್ಯಪುಸ್ತಕಗಳ ಕಥೆ 

ಪ್ರಾಥಮಿಕ ಹಂತದಿಂದ ತೊಡಗಿ ಉನ್ನತಶಿಕ್ಷಣದವರೆಗೆ ಪಠ್ಯಪುಸ್ತಕಗಳ ಸ್ವರೂಪವೇ ಬದಲಾಗಿದೆ. ಮೂವತ್ತು ವರ್ಷಗಳ ಹಿಂದಿನ ಪಠ್ಯವನ್ನೇ ಈಗಲೂ ಬೋಧಿಸಲು ಬರುತ್ತದೆಯೇ ಎಂಬುದು ನ್ಯಾಯವಾದ ಪ್ರಶ್ನೆ. ಆದರೆ ಕಾಲ ಎಷ್ಟೇ ಬದಲಾದರೂ ಶಿಕ್ಷಣದ ಮೂಲ ಉದ್ದೇಶ ಬದಲಾಗಬಾರದಲ್ಲ? ಹೊಸ ಕಾಲಕ್ಕೆ ಹೊಂದುವ ನೆಪದಲ್ಲಿ, ಹೊಸ ಚಿಂತನೆಗಳನ್ನು ಬೆಳೆಸುವ ನೆಪದಲ್ಲಿ ನಾವು ಪಠ್ಯಪುಸ್ತಕಗಳ ಸೊಗಸನ್ನೇ ಹಾಳುಗೆಡವಿದ್ದೇವೆಯೇ ಎಂದು ಅನೇಕ ಸಲ ಅನಿಸುವುದಿದೆ. 

ಖಾಸಗಿ ಶಾಲೆಗಳ ದರ್ಬಾರಿನಲ್ಲಂತೂ ಪಠ್ಯಪುಸ್ತಕಗಳಲ್ಲಿ ವಿವಿಧ ಮಾದರಿಗಳು ಬಂದಿವೆ. ಒಂದೊಂದು ಶಾಲೆ ಒಂದೊಂದು ‘ಕಂಪೆನಿ’ಯ ಪಠ್ಯಕ್ರಮವನ್ನು ಅನುಸರಿಸುವುದೂ ಇದೆ. ಈ ಪುಸ್ತಕಗಳೆಲ್ಲ ಬಣ್ಣಬಣ್ಣ, ಫಳಫಳ, ಸಾಮಾನ್ಯರ ಕೈಗೆ ಎಟುಕದಷ್ಟು ತುಟ್ಟಿ. ಹಾಗೆ ನೋಡಿದರೆ ಅವುಗಳಲ್ಲಿರುವ ಹೂರಣವೂ ಚೆನ್ನಾಗಿದೆ, ಆದರೆ ದಶಕದ ಹಿಂದೆ ಇರುತ್ತಿದ್ದ ಪಠ್ಯಗಳ ಸೊಗಸು ಅಲ್ಲಿ ಕಾಣುತ್ತಿಲ್ಲ. ಅವೆಲ್ಲ ಮುಗ್ಧತೆ ಮಾಸಿದ ಮಕ್ಕಳಂತೆ ಪೇಲವವಾಗಿವೆ ಎನಿಸುತ್ತದೆ. ಬಾಲ್ಯಕ್ಕೆ ತರ್ಕಕ್ಕಿಂತಲೂ ಭಾವಪೋಷಣೆಯೇ ಮುಖ್ಯವಲ್ಲವೇ?

ಹೊಸ ಸಾಧ್ಯತೆಗಳು

ಕಾಲದೊಂದಿಗೆ ಓದು-ಅಧ್ಯಯನದ ಸ್ವರೂಪ ಬದಲಾಗಿದೆ. ಮಾಧ್ಯಮಗಳು ಬದಲಾಗಿವೆ. ಹೊಸ ತಲೆಮಾರಿನ ಆಯ್ಕೆಗಳು ಬದಲಾಗಿವೆ. ಎಲ್ಲವನ್ನೂ ಮುದ್ರಿತ ಪುಸ್ತಕ ರೂಪದಲ್ಲೇ ಓದಬೇಕಾಗಿಲ್ಲ. ಯುವಕರು ಅಂತರಜಾಲವನ್ನು ಧಾರಾಳವಾಗಿ ಬಳಸುತ್ತಿದ್ದಾರೆ. ಅಂತರಜಾಲದ ಬಳಕೆಯೂ ಸಾಹಿತ್ಯದ ಓದಿನ ಒಂದು ಪ್ರಮುಖ ಭಾಗ ಆಗಿರಬಹುದು. ಪುಸ್ತಕಗಳು ಡಿಜಿಟಲ್ ರೂಪದಲ್ಲಿ, ಆಡಿಯೋ ರೂಪದಲ್ಲಿ ದೊರೆಯುತ್ತಿವೆ. ಹೊಸ ತಲೆಮಾರಿಗೆ ಅವುಗಳನ್ನು ಬಳಸುವುದು ಸುಲಭವೆನಿಸಬಹುದು. ಹೀಗಾಗಿ ಇಂದಿನ ವಿದ್ಯಾರ್ಥಿಗಳು ಮುದ್ರಿತ ಪುಸ್ತಕಗಳನ್ನು ಓದುವುದು ಕಡಿಮೆಯಾಗಿದೆ ಎಂದು ತೀರಾ ಆತಂಕಪಡುವ ಅಗತ್ಯವೇನೂ ಇಲ್ಲ. ಆದರೆ ಈ ಪ್ರವೃತ್ತಿಯಲ್ಲಾದರೂ ಇರುವವರ ಸಂಖ್ಯೆ ಎಷ್ಟು ಎಂದು ಯೋಚಿಸಬೇಕು.

ಕಂಪ್ಯೂಟರ್, ಮೊಬೈಲ್ ಬಳಸುವ ಯುವಕರೆಲ್ಲರೂ ಅವುಗಳನ್ನು ಸಾಹಿತ್ಯ-ಭಾಷೆ ಇತ್ಯಾದಿಗಳ ಅಭ್ಯಾಸಕ್ಕೂ ಬಳಸುತ್ತಿದ್ದಾರೆ ಎಂದು ಹೇಳಲು ಬರುವುದಿಲ್ಲ. ಬಹುಪಾಲು ಮಂದಿ ಸೋಶಿಯಲ್ ಮೀಡಿಯಾದಲ್ಲಿ, ವೀಡಿಯೋ ಗೇಮ್‍ಗಳಲ್ಲಿ ಕಳೆದುಹೋಗುತ್ತಿದ್ದಾರೆ. ಆಧುನಿಕ ಮಾಧ್ಯಮಗಳನ್ನು ಬಳಸುತ್ತಿರುವ ಈ ತಲೆಮಾರು ಅವುಗಳನ್ನು ಒಳ್ಳೆಯ ಓದು, ಅಧ್ಯಯನಕ್ಕೆ ಬಳಸುವಂತೆ ಮಾಡುವ ಜವಾಬ್ದಾರಿ ನಾಗರಿಕ ಸಮಾಜಕ್ಕೆ ಇದೆ.

ಕೊರೋನೋತ್ತರ ಕಾಲದಲ್ಲಂತೂ ಶಿಕ್ಷಣ-ಸಂವಹನದ ಪರಿಕರಗಳು ಆಮೂಲಾಗ್ರ ಬದಲಾವಣೆ ಕಂಡಿವೆ. ಗೂಗಲ್ ಮೀಟ್, ಜೂಮ್‍ನಂತಹ ಆನ್ಲೈನ್ ವೇದಿಕೆಗಳು ಪ್ರಸಿದ್ಧಿಗೆ ಬಂದಿವೆ. ಇವುಗಳು ಭಾಷೆ, ಸಾಹಿತ್ಯ, ಸಮಾಜ ಹಿತಚಿಂತನೆಯ ಸಂವಾದಗಳಿಗೂ ಒಳ್ಳೆಯ ವೇದಿಕೆಗಳಾಗಿ ಬಳಕೆಯಾಗುತ್ತಿವೆ. ಕ್ಲಬ್‍ಹೌಸಿನಂತಹ ಪರಿಕರಗಳನ್ನೂ ಒಳ್ಳೆಯ ಅಧ್ಯಯನಕೂಟಗಳನ್ನಾಗಿ ಬಳಸಿಕೊಳ್ಳುವುದಕ್ಕೆ ಅವಕಾಶವಿದೆ. ಉಪಕ್ರಮ ವಹಿಸುವವರಿದ್ದರೆ ಅವರನ್ನು ಅನುಸರಿಸುವ ಮಂದಿಯೂ ಇರುತ್ತಾರೆ. ಇಂತಹ ಸಾಕಷ್ಟು ಪ್ರಯತ್ನಗಳೂ ವಿದ್ಯಾರ್ಥಿಗಳ ನಡುವೆ, ಯುವತಲೆಮಾರಿನ ನಡುವೆ ಈಚೆಗೆ ನಡೆಯುತ್ತಿವೆ. ಒಳ್ಳೆಯದು ಎಲ್ಲಿ, ಹೇಗೆ ನಡೆದರೂ ಸಂತೋಷದ ವಿಷಯವೇ. ಆದರೆ ಇವೆಲ್ಲ ಆರಂಭಶೂರತನ ಆಗಬಾರದು ಅಷ್ಟೇ.

- ಸಿಬಂತಿ ಪದ್ಮನಾಭ ಕೆ. ವಿ.

1 ಕಾಮೆಂಟ್‌:

Unknown ಹೇಳಿದರು...

ಸಿಬಂತಿಯವರ ಅಭಿಪ್ರಾಯ ನೂರಕ್ಕೆ ನೂರು ಸತ್ಯ. ಶಿಕ್ಷಕರು ನಿರಾಸಕ್ತರು ಮಾತ್ರವಲ್ಲ, ಅಪ್ರಬುದ್ಧರು ಕೂಡಾ. ಉಡುಪಿಯ ಎಡ್ ಕಾಲೇಜಿನ ಮುಖ್ಯ ಪ್ರಾಧ್ಯಾಪಿಕೆ ಹೇಳುತ್ತಿದ್ದ ಮಾತು ಅಚ್ಚರಿಯೆನಿಸಿತ್ತು. ನೂರು ಮಂದಿ ಶಿಕ್ಷಕ ವೃತ್ತಿಗೆ ಬರುವ ವಿದ್ಯಾರ್ಥಿ ಗಳಲ್ಲಿ ಶಿಕ್ಷಣದ ಕುರಿತು ನೈಜ ಆಸಕ್ತಿ ಉಳ್ಳವರು ಒಂದಿಬ್ಬರು ಮಾತ್ರ. ಉಳಿದವರು ಮನೆ ಮಂದಿಯ ಒತ್ತಾಯ, ಶಿಕ್ಷಕ ವೃತ್ತಿಯ ಅನುಕೂಲತೆಗಳಿಗಾಗಿ ಬರುವವರು. ಎಲ್ಲ ವೃತ್ತಿ ಕ್ಷೇತ್ರಗಳೂ ಹೀಗೇ ಆಗಿವೆ.