ಬುಧವಾರ, ಮೇ 29, 2019

ಮೌಲ್ಯಮಾಪನದ ಎಡವಟ್ಟು: ಯಾರು ಹೊಣೆ?

ಮೇ 29, 2019ರ ವಿಜಯವಾಣಿ ('ಮಸ್ತ್' ಪುರವಣಿ)ಯಲ್ಲಿ ಪ್ರಕಟವಾದ ಲೇಖನ

ವಿಜಯವಾಣಿ | 29.05.2019
ಎರಡು ವರ್ಷಗಳ ಹಿಂದಿನ ಘಟನೆ. ಎಲ್ಲ ವಿಷಯಗಳಲ್ಲೂ ತೊಂಬತ್ತಕ್ಕಿಂತ ಹೆಚ್ಚು ಅಂಕ, ಹಿಂದಿಯಲ್ಲಿ ಮಾತ್ರ 60. ತರಗತಿಯಲ್ಲಿ ಸದಾ ಟಾಪರ್ ಆಗಿರುತ್ತಿದ್ದ ನೆಲಮಂಗಲದ ಹುಡುಗಿಯೊಬ್ಬಳು ಎಸ್ಸೆಸ್ಸೆಲ್ಸಿ ಫಲಿತಾಂಶ ನೋಡುತ್ತಿದ್ದಂತೆಯೇ ಆಘಾತಕ್ಕೊಳಗಾಗಿ ವಿಷ ಕುಡಿದುಬಿಟ್ಟಿದ್ದಳು. ಅವಳ ಅದೃಷ್ಟ ಚೆನ್ನಾಗಿತ್ತು, ಅವಳಮ್ಮ ವಿಷಯ ತಿಳಿದು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಪ್ರಾಣ ಉಳಿಯಿತು. ಕೆಲವು ದಿನಗಳಲ್ಲಿ ಮರುಮೌಲ್ಯಮಾಪನದ ಫಲಿತಾಂಶ ಬಂತು. ಹುಡುಗಿ ಹಿಂದಿಯಲ್ಲಿ ಒಂದೂ ಕಮ್ಮಿಯಿಲ್ಲದಂತೆ 100ಕ್ಕೆ 100 ಅಂಕ ಗಳಿಸಿದ್ದಳು. ಮುಗ್ಧ ಹುಡುಗಿ ಒಂದುವೇಳೆ ಪ್ರಾಣ ಕಳೆದುಕೊಂಡಿದ್ದರೆ ಆ ನಷ್ಟಕ್ಕೆ ಯಾರು ಹೊಣೆ?

ಇಂಜಿನಿಯರಿಂಗ್ ಓದುತ್ತಿದ್ದ ಜಮ್ಮು-ಕಾಶ್ಮೀರದ ಯುವಕನೊಬ್ಬನಿಗೆ ಭೌತಶಾಸ್ತ್ರದಲ್ಲಿ 28 ಅಂಕ ಬಂದಿತ್ತು. ಫೇಲಾಗಿದ್ದರಿಂದ ಅವಮಾನಿತನಾದ ಯುವಕ ಝೀಲಂ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ. ಮಗನನ್ನು ಕಳೆದುಕೊಂಡ ಆಘಾತದ ನಡುವೆಯೂ ಆತನ ತಂದೆ ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದರು. ನಾಲ್ಕು ತಿಂಗಳ ಬಳಿಕ ಫಲಿತಾಂಶ ಬಂತು. ಯುವಕ 48 ಅಂಕಗಳೊಂದಿಗೆ ತೇರ್ಗಡೆಯಾಗಿದ್ದ. ‘ಇದು ನನ್ನ ಮಗ ಮಾಡಿಕೊಂಡ ಆತ್ಮಹತ್ಯೆ ಅಲ್ಲ, ಶಿಕ್ಷಣ ವ್ಯವಸ್ಥೆ ಮಾಡಿಸಿದ ಕೊಲೆ’ ಎಂದು ಯುವಕನ ತಂದೆ-ತಾಯಿ ಗೋಳಾಡಿದರು. ಅವರಿಗಾದ ನಷ್ಟವನ್ನು ತುಂಬುವವರು ಯಾರು?

ಮೊನ್ನೆಮೊನ್ನೆ ತೆಲಂಗಾಣದಲ್ಲಿ ಪಿಯುಸಿ ಫಲಿತಾಂಶ ಬಂದ ಬಳಿಕ ಒಂದೇ ವಾರದಲ್ಲಿ 23 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಸೊನ್ನೆ ಅಂಕ ಪಡೆದ ವಿದ್ಯಾರ್ಥಿನಿಯೊಬ್ಬಳ ಉತ್ತರ ಪತ್ರಿಕೆ ತರಿಸಿಕೊಂಡು ನೋಡಿದಾಗ ಆಕೆಗೆ 99 ಅಂಕ ಬಂದಿರುವುದು ಗೊತ್ತಾಯಿತು.

ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿ ಪಾವಗಡದ ಬಡ ಹುಡುಗಿಯೊಬ್ಬಳು ಐದೂ ವಿಷಯಗಳಲ್ಲಿ 90ಕ್ಕಿಂತ ಹೆಚ್ಚು ಅಂಕ ಪಡೆದಿದ್ದಳು, ಕನ್ನಡದಲ್ಲಿ ಮಾತ್ರ 10 ಅಂಕ. ರೂ. 530 ತೆತ್ತು ಉತ್ತರ ಪತ್ರಿಕೆ ತರಿಸಿ ನೋಡಿದರೆ ಆಕೆ 79 ಅಂಕ ಪಡೆದಿದ್ದಳು. ‘ಫೀಸ್ ಕಟ್ಟೋದೇ ಕಷ್ಟ. ಇನ್ನು ಹಿಂಗೆಲ್ಲ ಸುಮ್‍ಸಮ್ನೇ ದುಡ್ಡುಕಟ್ಟೋ ಪರಿಸ್ಥಿತಿ ಬಂದ್ರೆ ಏನ್ಮಾಡೋಣ?’ ಎಂಬುದು ಕೂಲಿಕೆಲಸಕ್ಕೆ ಹೋಗುವ ಆಕೆಯ ಹೆತ್ತವರ ಪ್ರಶ್ನೆ. ಉತ್ತರ ಕೊಡಬೇಕಾದವರು ಯಾರು?

ಒಟ್ಟು 509 ಅಂಕ ಪಡೆದಿದ್ದ ನಾಗವಾರದ ಗಾರೆ ಕೆಲಸದವರ ಮಗಳೊಬ್ಬಳು ಕನ್ನಡದಲ್ಲಿ ಫೇಲ್ ಆಗಿ ಖಿನ್ನತೆಯಲ್ಲಿ ಬಿದ್ದಿದ್ದಳು. ಮರುಮೌಲ್ಯಮಾಪನದ ಬಳಿಕ ಆಕೆ ಪಡೆದ ಅಂಕ 17 ಅಲ್ಲ, 75 ಅಂತ ರಿಸಲ್ಟ್ ಬಂತು.

ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದಾಗ 625ರಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಇಬ್ಬರು ಟಾಪರ್ ಎನಿಸಿದ್ದರು. ಕಳೆದ ವಾರ ಮರುಮೌಲ್ಯಮಾಪನ ಫಲಿತಾಂಶ ಬಂದ ಬಳಿಕ 625 ಅಂಕ ಪಡೆದವರ ಸಂಖ್ಯೆ ಐದಕ್ಕೆ ಏರಿದೆ! ರಿಸಲ್ಟಿನ ಮರುದಿವಸ ಸಹಜವಾಗಿ ಇಬ್ಬರು ಸಾಧಕರು ಪತ್ರಿಕೆಗಳ ಮುಖಪುಟಗಳಲ್ಲಿ, ಟಿವಿ ಪರದೆಗಳಲ್ಲಿ ಮಿಂಚುವ ಅವಕಾಶ ಪಡೆದರು. ಅದೇ ಸಾಧನೆ ಮಾಡಿದ ಉಳಿದ ಮೂವರ ಸಂತೋಷ ಎಲೆಕ್ಷನ್ ರಿಸಲ್ಟಿನ ಭರಾಟೆಯಲ್ಲಿ ಕರಗಿ ಹೋಯಿತು. ಅವರು ಕೆಲವೇ ಪತ್ರಿಕೆಗಳ ಮೂಲೆಗಳಲ್ಲಿ ಸಣ್ಣ ಸುದ್ದಿಯಾದರು. ಪಿಯುಸಿಯಲ್ಲೂ ಹೀಗೇ ಆಯಿತು. ವಿಜ್ಞಾನ ವಿಭಾಗದಲ್ಲಿ 600ಕ್ಕೆ 594 ಅಂಕ ಪಡೆದಿದ್ದ ಬೆಂಗಳೂರಿನ ಹುಡುಗನೊಬ್ಬ ಟಾಪರ್ ಎನಿಸಿದ್ದ. ಮರುಮೌಲ್ಯಮಾಪನದ ಬಳಿಕ ಶಿವಮೊಗ್ಗದ ಇನ್ನೊಬ್ಬ ಹುಡುಗನೂ ಅದೇ ಸಾಧನೆಗೆ ಪಾತ್ರನಾದ. ಮರುಮೌಲ್ಯಮಾಪನ ಮಾಡಿದಾಗ ಇಂಗ್ಲಿಷಿನಲ್ಲಿ ಆತ 6 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದಿದ್ದ.

ಫಲಿತಾಂಶ ಕೊಂಚ ಹೆಚ್ಚುಕಡಿಮೆಯಾದ ಕೂಡಲೇ ಆತ್ಮಹತ್ಯೆ ಮಾಡಿಕೊಳ್ಳುವುದೇ? ಶೇ. 90ಕ್ಕಿಂತ ಹೆಚ್ಚು ಅಥವಾ ನೂರಕ್ಕೆ ನೂರು ಅಂಕ ಗಳಿಸುವುದೇ ದೊಡ್ಡ ಸಾಧನೆಯೇ? ಮಕ್ಕಳೇನು ಅಂಕ ಗಳಿಸುವ ಯಂತ್ರಗಳೇ? ಇವನ್ನೆಲ್ಲ ಮೀರುವಂತೆ ನಮ್ಮ ಮಕ್ಕಳನ್ನು ರೂಪಿಸಬೇಡವೇ? ಇಂತಹ ಹತ್ತಾರು ಪ್ರಶ್ನೆಗಳು ಆಗಾಗ ನಮಗೆದುರಾಗುತ್ತವೆ. ಈ ಪ್ರಶ್ನೆಗಳೆಲ್ಲ ಸಮಂಜಸವಾದವುಗಳೇ. ಅವುಗಳ ಬಗ್ಗೆ ಪ್ರತಿದಿನ ಎಂಬಂತೆ ಚರ್ಚೆಗಳು ನಡೆಯುತ್ತವೆ. ಆದರೆ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಆಗುವ ಎಡವಟ್ಟುಗಳು, ತದನಂತರದ ಪರಿಣಾಮಗಳು, ಅವುಗಳನ್ನು ತಡೆಯುವ ಬಗೆಗೂ ಗಂಭೀರವಾಗಿ ಯೋಚಿಸುವ ಅಗತ್ಯ ಇಲ್ಲವೇ?

ಕಳೆದ ವರ್ಷ ಪಿಯುಸಿ ಮರುಮೌಲ್ಯಮಾಪನದ ಬಳಿಕ ಸುಮಾರು ಎರಡೂವರೆ ಸಾವಿರದಷ್ಟು ವಿದ್ಯಾರ್ಥಿಗಳ ಅಂಕಗಳಲ್ಲಿ 10ರಿಂದ 35ರವರೆಗೆ ಏರಿಕೆಯಾಗಿತ್ತು. ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದವರ ಪೈಕಿ ಸುಮಾರು ಹನ್ನೊಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಂಕಗಳಲ್ಲಿ ಯಾವುದೇ ಬದಲಾವಣೆ ಇರಲಿಲ್ಲವಾದರೂ 2500 ಸಣ್ಣ ಸಂಖ್ಯೆ ಅಲ್ಲ ಎಂಬುದನ್ನು ಗಮನಿಸಬೇಕು.

ಅಂಕಗಳ ಬಗೆಗಿನ ಚರ್ಚೆಗಳು ಏನೇ ಇದ್ದರೂ, ಫಲಿತಾಂಶದ ದಿನದ ವಿದ್ಯಾರ್ಥಿಗಳ ಮಾನಸಿಕತೆ ತುಂಬ ಸೂಕ್ಷ್ಮವಾದದ್ದು. ಇಡೀ ವರ್ಷ ಪಟ್ಟ ಪರಿಶ್ರಮ ಮುಖದ ಮೇಲೆ ಮಂದಹಾಸ ತರಿಸುವ, ಅದೇ ಸಮಯಕ್ಕೆ ನೂರಾರು ಮನಸ್ಸುಗಳು ಆಘಾತಕ್ಕೊಳಗಾಗುವ ಸಂದರ್ಭ ಅದು. ಒಂದೊಂದು ಅಂಕವೂ ವಿದ್ಯಾರ್ಥಿಗಳಿಗೆ ಬಹುಮುಖ್ಯ. ಇಂಜಿನಿಯರಿಂಗ್ ಮೆಡಿಕಲ್ ರ್ಯಾಂಕುಗಳಲ್ಲಂತೂ ಒಂದೇ ಅಂಕದಲ್ಲಿ ಭಾರೀ ವ್ಯತ್ಯಾಸಗಳಾಗುತ್ತವೆ.  ಕಷ್ಟಪಟ್ಟ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ನಿರೀಕ್ಷಿಸುವುದರಲ್ಲಿ ತಪ್ಪೇನೂ ಇಲ್ಲ. ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಬಹುದಾದ ಮಗು ಇದ್ದಕ್ಕಿದ್ದಂತೆ ಯಾವುದೋ ವಿಷಯದಲ್ಲಿ ಫೇಲ್ ಅಂತ ಫಲಿತಾಂಶ ಬಂದಾಗ ಶಾಕ್ ಅನುಭವಿಸುವುದು ಸಹಜವೇ. ಅಂಕಗಳನ್ನು ಪರಾಂಬರಿಸಿ ನೋಡುವುದಕ್ಕೆ ಬೇಕಾದಷ್ಟು ಅವಕಾಶ ಇದೆ, ರಿವ್ಯಾಲುವೇಶನ್‍ನಲ್ಲಿ ಸರಿ ಹೋಗಬಹುದು, ಇದೇ ಜೀವನದ ಕೊನೆ ಅಲ್ಲ ಎಂದು ಯೋಚಿಸುವ ಪ್ರಬುದ್ಧತೆ ಅಷ್ಟಾಗಿ ಬಂದಿರದ ವಯಸ್ಸು ಅದು.

10ನೇ ತರಗತಿ, ಪಿಯುಸಿ ಸೇರಿದಂತೆ ಎಲ್ಲ ಪರೀಕ್ಷೆಗಳ ಫಲಿತಾಂಶ ಬಂದಾಗಲೂ ನೂರಾರು ವಿದ್ಯಾರ್ಥಿಗಳು ಖಿನ್ನತೆಗೊಳಗಾಗುವುದು, ಭವಿಷ್ಯದ ವಿಶ್ವಾಸ ಕಳಕೊಳ್ಳುವುದು, ಅನೇಕ ಮಂದಿ ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಡೆದೇ ಇದೆ. ಪದವಿ ಮತ್ತು ಅದಕ್ಕಿಂತ ಮೇಲಿನ ಹಂತದ ವಿದ್ಯಾರ್ಥಿಗಳಾದರೂ ಪ್ರಾಯಪ್ರಬುದ್ಧರು. ಅನಿರೀಕ್ಷಿತ ಆಘಾತಗಳನ್ನು ಕೊಂಚಮಟ್ಟಿಗೆ ತಡೆದುಕೊಳ್ಳಬಲ್ಲರು. ಇವರು ಹಾಗಲ್ಲ. ಹದಿಹರೆಯದ ತುದಿಗೆ ತಲುಪಿದವರು. ದೇಹ, ಮನಸ್ಸುಗಳೆಲ್ಲವೂ ಚಂಚಲ. ತಕ್ಷಣದ ಏಟುಗಳನ್ನು ನುಂಗಿ ನಿರಾಳರಾಗುವ ಮನಸ್ಥಿತಿ ಅವರದ್ದಲ್ಲ.

ಸಿದ್ಧತೆಯ ಕೊರತೆ, ಪರೀಕ್ಷಾ ಭಯ ಇತ್ಯಾದಿ ಕಾರಣಗಳಿಂದಾಗಿ ಫಲಿತಾಂಶ ಕಡಿಮೆಯಾದವರಿಗೆ ಆತ್ಮಾವಲೋಕನಕ್ಕೆ ಕೊಂಚ ಅವಕಾಶ ಇದೆ. ತಮ್ಮದಲ್ಲದ ತಪ್ಪಿಗೆ, ಅಂದರೆ ಮೌಲ್ಯಮಾಪನದ ಸಂದರ್ಭದಲ್ಲಿ ಆಗುವ ತಪ್ಪುಗಳಲ್ಲಿ ಮಾತ್ರ ಅವರ ಪಾಲು ಏನೂ ಇರುವುದಿಲ್ಲ. ಯಾರೋ ಮಾಡುವ ಎಡವಟ್ಟುಗಳು ಎಷ್ಟೋ ವಿದ್ಯಾರ್ಥಿಗಳ ಖಿನ್ನತೆಗೆ, ಆತ್ಮಹತ್ಯೆಗೆ ಕಾರಣವಾಗುವುದು ಅಕ್ಷಮ್ಯ ಅಲ್ಲವೇ? ಮೌಲ್ಯಮಾಪಕರು ಇದನ್ನು ಗಂಭೀರವಾಗಿ ಪರಿಗಣಿಸಬೇಡವೇ?

ಸರಿಯಾದ ಉತ್ತರವನ್ನೂ ತಪ್ಪು ಎಂದು ಬಗೆದು ಅಂಕ ನೀಡದಿರುವುದು, ಒಂದೆರಡು ಪುಟಗಳನ್ನೇ ಮೌಲ್ಯಮಾಪನ ಮಾಡದೆ ಮುಂದಕ್ಕೆ ಹೋಗುವುದರಿಂದ ತೊಡಗಿ ಅಂಕಗಳ ಎಣಿಕೆಯಲ್ಲಿ ತಪ್ಪುವವರೆಗೆ ಹಲವು ಬಗೆಯ ಯಡವಟ್ಟುಗಳನ್ನು ಮೌಲ್ಯಮಾಪಕರು ಮಾಡುವುದಿದೆ. ಹಾಗೆಂದು ಫಲಿತಾಂಶದಲ್ಲಿ ಆಗುವ ಯಡವಟ್ಟುಗಳೆಲ್ಲವಕ್ಕೂ ಮೌಲ್ಯಮಾಪಕರೇ ಕಾರಣವಾಗಿರಬೇಕಿಲ್ಲ. ಕೆಲವೊಮ್ಮೆ ಕಂಪ್ಯೂಟರುಗಳ ತಂತ್ರಾಂಶ ದೋಷದಿಂದಲೂ ಫಲಿತಾಂಶ ಉಲ್ಟಾಪಲ್ಟಾ ಆಗುವ ಸಾಧ್ಯತೆಗಳಿವೆ. ಆದರೆ ಅಂತಿಮ ಬಲಿಪಶುಗಳು ವಿದ್ಯಾರ್ಥಿಗಳು ಮತ್ತವರ ಪೋಷಕರು.

ಯಾವ ಶಿಕ್ಷಕರೂ ಬೇಕೆಂದೇ ತಪ್ಪುಗಳನ್ನು ಮಾಡಲಾರರು. ಅವು ಅಯಾಚಿತವಾದುದರಿಂದಲೇ ಅವುಗಳಿಗೆ ಎಡವಟ್ಟು ಎನ್ನುವುದು. ಮನುಷ್ಯ ಸಹಜ ತಪ್ಪುಗಳು ಘಟಿಸುವುದು ಸಾಮಾನ್ಯ. ಒಬ್ಬ ವಿದ್ಯಾರ್ಥಿಯನ್ನು ಫೇಲ್ ಮಾಡಿಬಿಡಬೇಕೆಂಬ ಆಸೆ ಯಾವ ಮೌಲ್ಯಮಾಪಕನಿಗೂ ಇರುವುದಿಲ್ಲ. ಸಾಧ್ಯವಾದಷ್ಟೂ ವಿದ್ಯಾರ್ಥಿಗಳು ತೇರ್ಗಡೆಯಾಗಿ ಮುಂದಿನ ತರಗತಿಗೆ ಹೋಗಲಿ ಎಂಬ ಆಶಯವೇ ಎಲ್ಲ ಅಧ್ಯಾಪಕರದ್ದೂ ಆಗಿರುತ್ತದೆ. ತಕ್ಕಮಟ್ಟಿನ ಅಂಕಗಳನ್ನು ಪಡೆದಿದ್ದರೆ ಇನ್ನೊಂದಷ್ಟು ಗ್ರೇಸ್ ಅಂಕಗಳನ್ನು ನೀಡಿ ಅಂತಹ ವಿದ್ಯಾರ್ಥಿಗಳನ್ನು ಪಾಸ್ ಮಾಡುವ ಪದ್ಧತಿ ಶಿಕ್ಷಣ ಇಲಾಖೆಯಲ್ಲಿ ಅಧಿಕೃತವಾಗಿಯೇ ಇದೆ.

ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ 8.41 ಲಕ್ಷ. ಪಿಯುಸಿ ಪರೀಕ್ಷೆ ಬರೆದವರ ಸಂಖ್ಯೆ 6.71 ಲಕ್ಷ. ಪಿಯು ಪರೀಕ್ಷೆಗಳ ಮೌಲ್ಯಮಾಪನವನ್ನು ಮಾಡಿದ ಅಧ್ಯಾಪಕರ ಸಂಖ್ಯೆ ಬರೋಬ್ಬರಿ 22,746. ಹಿಂದೆ ಬೆರಳೆಣಿಕೆಯ ಕೇಂದ್ರಗಳಲ್ಲಷ್ಟೇ ಮೌಲ್ಯಮಾಪನ ನಡೆಯುತ್ತಿತ್ತು.  ಈಗ ಈ ಕಾರ್ಯವನ್ನು ಗಣನೀಯವಾಗಿ ವಿಕೇಂದ್ರೀಕರಣಗೊಳಿಸಲಾಗಿದೆ. ಈ ವರ್ಷ ರಾಜ್ಯದ 54 ಕೇಂದ್ರಗಳಲ್ಲಿ ಪಿಯು ಮೌಲ್ಯಮಾಪನ ನಡೆಸಲಾಯಿತು. ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮಗಳಿವೆ. ಒಬ್ಬ ಅಧ್ಯಾಪಕ ಒಂದು ದಿನ ಇಂತಿಷ್ಟೇ ಉತ್ತರ ಪತ್ರಿಕೆಗಳನ್ನು ಇಂತಿಷ್ಟು ಅವಧಿಯಲ್ಲಿ ವ್ಯಾಲ್ಯುವೇಶನ್ ಮಾಡಬೇಕೆಂಬ ನಿಯಮಗಳಿವೆ. ಈ ಬಾರಿಯಂತೂ ಮೌಲ್ಯಮಾಪನ ಮಾಡಿದ ಶಿಕ್ಷಕರೇ ಅಂಕಗಳನ್ನು ಕಂಪ್ಯೂಟರಿಗೆ ಫೀಡ್ ಮಾಡುವ ಕ್ರಮವೂ ಆರಂಭವಾಯಿತು. ಇವೆಲ್ಲವೂ ಮೌಲ್ಯಮಾಪಕರ ಮೇಲಿರುವ ಒತ್ತಡಗಳನ್ನು ಹಾಗೂ ಆಗಬಹುದಾದ ಯಡವಟ್ಟುಗಳನ್ನು ಕಡಿಮೆಗೊಳಿಸಲು ಇಲಾಖೆ ತೆಗೆದುಕೊಂಡ ಕ್ರಮಗಳು. ಇಷ್ಟನ್ನೂ ಮೀರಿ ತಪ್ಪುಗಳು ಆಗುತ್ತವೆಂದರೆ ಶಿಕ್ಷಕರು ಅವುಗಳ ಬಗ್ಗೆ ಮತ್ತು ತಮ್ಮ ಬಗ್ಗೆ ಗಂಭೀರವಾಗಿ ಯೋಚಿಸುವ ಅಗತ್ಯವಿದೆ ಅನಿಸುವುದಿಲ್ಲವೇ?

2017ರಲ್ಲಿ ಬಿಹಾರದಲ್ಲಿ ನಡೆದ ಘಟನೆ. ಪ್ರಿಯಾಂಕ ಸಿಂಗ್ ಎಂಬ ವಿದ್ಯಾರ್ಥಿನಿಗೆ ಸಂಸ್ಕೃತದಲ್ಲಿ 9 ಅಂಕ ಹಾಗೂ ವಿಜ್ಞಾನದಲ್ಲಿ 29 ಅಂಕ ಬಂದಿತ್ತು. ಪ್ರಿಯಾಂಕ ಪರೀಕ್ಷಾ ಮಂಡಳಿಯ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿಬಿಟ್ಟಳು. ಕೋರ್ಟು ವಿಚಾರಣೆ ನಡೆಸಿದಾಗ ಮಂಡಳಿಯು ತನ್ನಿಂದ ತಪ್ಪಾಗಿದೆಯೆಂದು ಒಪ್ಪಿಕೊಂಡಿತು. ವಿದ್ಯಾರ್ಥಿನಿಗೆ ಸಂಸ್ಕೃತದಲ್ಲಿ  80 ಹಾಗೂ ವಿಜ್ಞಾನದಲ್ಲಿ 61 ಅಂಕಗಳು ಬಂದವು. ಉಚ್ಚನ್ಯಾಯಾಲಯವು ಮಂಡಳಿಗೆ ರೂ. 5 ಲಕ್ಷ ದಂಡ ವಿಧಿಸಿತು. ಇತ್ತೀಚೆಗೆ ತೆಲಂಗಾಣದಲ್ಲಿ 99 ಅಂಕ ಪಡೆದಿದ್ದ ವಿದ್ಯಾರ್ಥಿಗೆ ಆರಂಭದಲ್ಲಿ ಸೊನ್ನೆ ಅಂಕ ನೀಡಿದ್ದಕ್ಕಾಗಿ ಮೌಲ್ಯಮಾಪಕರಿಗೆ ರೂ. 5000 ದಂಡ ವಿಧಿಸಿದ ಘಟನೆಯೂ ನಡೆದಿದೆ.

ನಮ್ಮಲ್ಲಿ ಈ ಬಗೆಯ ಕಟ್ಟುನಿಟ್ಟಿನ ಕ್ರಮಗಳನ್ನು ವಾಸ್ತವವಾಗಿ ತೆಗೆದುಕೊಳ್ಳುತ್ತಿಲ್ಲವೋ ಅಥವಾ ತೆಗೆದುಕೊಂಡುದು ಸಾರ್ವಜನಿಕರ ಗಮನಕ್ಕೆ ಬರುತ್ತಿಲ್ಲವೋ, ಅಂತೂ ಪ್ರತೀ ವರ್ಷ ದುರ್ಘಟನೆಗಳು ನಡೆಯುತ್ತಲೇ ಇವೆ. ಎಲ್ಲ ದೋಷಗಳೂ ಕಾನೂನು ಕ್ರಮಗಳಿಂದ ಪರಿಹಾರವಾಗಲಾರವು. ಇದು ಶಿಕ್ಷಕ ವೃತ್ತಿ ಕೈಗೊಂಡವರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ವಿಚಾರ ಅಷ್ಟೇ. ವೈದ್ಯರು ಮಾಡುವ ತಪ್ಪುಗಳು ಹೂಳಲ್ಪಡುತ್ತವೆ, ವಕೀಲರು ಮಾಡುವ ತಪ್ಪುಗಳು ನೇಣು ಹಾಕಲ್ಪಡುತ್ತವೆ, ಶಿಕ್ಷಕರು ಮಾಡುವ ತಪ್ಪುಗಳು ಶತಮಾನಗಳ ಕಾಲ ಸಮಾಜವನ್ನು ಕಾಡುತ್ತಿರುತ್ತವೆ ಎಂಬ ಮಾತು ಎಷ್ಟೊಂದು ನಿಜ ಅಲ್ಲವೇ?

- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: