ಸೋಮವಾರ, ಮೇ 20, 2019

ಶಾಲೆ ತೆರೆಯುವ ಹೊತ್ತು

ಮೇ 19, 2019ರ 'ವಿಜಯ ಕರ್ನಾಟಕ' ಸಾಪ್ತಾಹಿಕ ಪುರವಣಿ (ಲವಲVK)ಯಲ್ಲಿ ಪ್ರಕಟವಾದ ಲೇಖನ

ವಿಜಯ ಕರ್ನಾಟಕ | ಸಾಪ್ತಾಹಿಕ ಲವಲVK | 19-05-2019
‘ಎದ್ದೇಳ್ತೀಯೋ ಇಲ್ಲ ತಲೆ ಮೇಲೆ ತಣ್ಣೀರು ಹೊಯ್ಯಲೋ?’ ಎಂಬುದು ಎಲ್ಲ ಮನೆಗಳಲ್ಲೂ ಶತಮಾನಗಳಿಂದ ಜಾರಿಯಲ್ಲಿರುವ ಜನಪ್ರಿಯ ಸುಪ್ರಭಾತ. ಇದು ವಿವಿಧ ರಾಗ, ತಾಳಗಳಲ್ಲಿ ಹೊರಹೊಮ್ಮಲು ಶುರುವಾಯಿತೆಂದರೆ ರಜೆ ಬಹುತೇಕ ಮುಗಿದು ಶಾಲಾಪ್ರಸಂಗ ಆರಂಭವಾಗುತ್ತಿದೆಯೆಂದು ಅರ್ಥ. ಸ್ಕೂಲಿನ ಮೊದಲನೇ ದಿನ ಬೆಳಗ್ಗೆ ಮನೆ ತುಂಬೆಲ್ಲ ನಡೆಯುವ ಮಹಾಪ್ರದರ್ಶನಕ್ಕೆ ಕನಿಷ್ಟ ಒಂದು ವಾರದ ಗ್ರ್ಯಾಂಡ್ ರಿಹರ್ಸಲ್ ಆದರೂ ನಡೆಯದಿದ್ದರೆ ಹೇಗೆ!

‘ಅಯ್ಯೋ ಯಾಕೆ ಹಾಗೆ ಗೋಳು ಹೊಯ್ಕೋತೀಯಾ, ಒಂದೈದು ನಿಮಿಷ ಮಲಗಲಿ ಬಿಡೇ’ ಎಂದು ಈ ರಿಹರ್ಸಲಿನ ಮಧ್ಯೆ ಗೌರವ ಪಾತ್ರದಲ್ಲಿ ಕಾಣಿಸಿಕೊಂಡು ಸದಾ ಮಕ್ಕಳ ಪರ ವಕಾಲತ್ತಿಗೆ ನಿಲ್ಲುವವನು ಅಪ್ಪನೇ. ಹಾಗೆಂದು ಅಮ್ಮ ಮಹಾ ನಿರ್ದಯಿ ಅಲ್ಲವೆಂದು ಖುದ್ದು ಮುಸುಕಿನೊಳಗಿನ ಮುದ್ದುಮನಸಿಗೂ ಗೊತ್ತು. ದಶಾವತಾರಿ ಅಮ್ಮನ ಶತಾವಧಾನದ ಕಲೆ ಸಂಪೂರ್ಣವಾಗಿ ಹೊರಹೊಮ್ಮುವುದು ಮಕ್ಕಳು ಶಾಲೆಗೆ ಹೊರಡುವ ಬೆಳಗ್ಗಿನ ಒಂದೆರಡು ಗಂಟೆಗಳಲ್ಲಿ.

ಮನೆಮಂದಿಗಿಂತ ಮೊದಲೇ ಎದ್ದು ದೀಪ ಹಚ್ಚಿ ಹೊಸಿಲಿಗೆ ಎರಡು ಗೆರೆ ರಂಗೋಲಿ ಎಳೆಯುತ್ತಲೇ ಕಾಲಿಗೆ ಚಕ್ರ ಕಟ್ಟಿಕೊಳ್ಳುವ ಅಮ್ಮನೆಂಬ ನಾನ್‍ಸ್ಟಾಪ್ ಎಕ್ಸ್‍ಪ್ರೆಸ್‍ಗೆ ಆಯಾಸವೆಂಬುದೇ ಇಲ್ಲ. ಹಾಲು ಬಿಸಿಮಾಡುವ, ಚಹಾಕ್ಕಿಡುವ, ತರಕಾರಿ ಹೆಚ್ಚುವ, ಕುಕ್ಕರ್ ಒಲೆಗೇರಿಸುವ, ಒಗ್ಗರಣೆಗಿಡುವ, ಚಪಾತಿ ಹಿಟ್ಟು ಕಲಸುವ, ಅದು ಇಷ್ಟವಾಗದವರಿಗೆ ಪುಳಿಯೋಗರೆ ಬೆರೆಸುವ, ಮಿಕ್ಸಿ ಸ್ವಿಚ್ ಅದುಮುವ, ಆ ಮಕ್ಕಳನ್ನು ಎಬ್ಬಿಸಿ ಮಾರಾಯ್ರೇ ಎಂದು ನಡುನಡುವೆ ನೆನಪಿಸುವ, ಯೂನಿಫಾರ್ಮ್‍ಗೆ ಇಸ್ತ್ರಿ ಹಾಕುವ, ಶೂ-ಸಾಕ್ಸ್ ಜೋಡಿಸಿಡುವ, ಮಕ್ಕಳನ್ನು ಸ್ನಾನಕ್ಕೆ ಅಟ್ಟುವ, ಟಿಫಿನ್ ಬಾಕ್ಸ್ ಸಿದ್ಧಪಡಿಸುವ, ಸ್ವತಃ ಕಚೇರಿಗೆ ಓಡಬೇಕಿರುವ ಗಂಡನಿಗೂ ತನಗೂ ಬೇಕಾದ ಸಮಸ್ತ ತಯಾರಿಗಳನ್ನೂ ಏಕಕಾಲಕ್ಕೆ ಮಾಡಿಕೊಳ್ಳುವ ಈ ಅಮ್ಮನಿಗೆ ಒಟ್ಟು ಕೈಕಾಲುಗಳೆಷ್ಟು ಎಂಬುದು ಈವರೆಗೆ ಯಾವ ಗಿನ್ನೆಸ್ ಪುಸ್ತಕದಲ್ಲೂ ದಾಖಲಾಗಿಲ್ಲ. ಮಕ್ಕಳಿಗೆ ಇದೆಲ್ಲ ಅರ್ಥವಾಗದ ಸಂಗತಿಯಲ್ಲವಾದರೂ ರಜೆಯ ಮಜಾ, ಬೆಳ್ಳಂಬೆಳಗ್ಗಿನ ಸಕ್ಕರೆ ನಿದ್ದೆಯ ತೆಕ್ಕೆಯಿಂದ ಹೊರಬರುವುದು ಕಡುಕಷ್ಟ.

ಆ ಹಳೆಯ ನೆನಪು
ದೊಡ್ಡ ರಜೆಯ ಗಮ್ಮತ್ತು, ಹೊಸ ಶಾಲೆ, ಹೊಸ ತರಗತಿಯಲ್ಲಿ ಕುಳಿತುಕೊಳ್ಳುವ ರೋಮಾಂಚನದ ಕತೆಯನ್ನು ಹೊಸ ಕಾಲದ ಮಕ್ಕಳಿಗೆ ಒಂದಾನೊಂದು ಕಾಲದ ಪುರಾಣದಂತೆ ಹೇಳುವ ಯುಗಕ್ಕೆ ಬಂದು ನಿಂತಿದ್ದೇವಾದರೂ ಅಪ್ಪ-ಅಮ್ಮಂದಿರಿಗೆ ಆ ಹಳೆಯ ನೆನಪುಗಳಿಂದ ಕಳಚಿಕೊಳ್ಳುವುದು ಕಷ್ಟ. ಅಜ್ಜನ ಮನೆ, ಸೋದರತ್ತೆ ಮನೆ, ಚಿಕ್ಕಮ್ಮನ ಮನೆಯೆಂದು ಸುತ್ತಾಡಿ ಕಸಿನ್ಸ್ ಎಂಬೋ ಅಪ್ಪಟ ಗೆಳೆಯರೊಂದಿಗೆ ಮಸ್ತಿ ಮಾಡಿ ಹೊಟ್ಟೆಬಿರಿಯುವಷ್ಟು ಉಂಡು ಕಣ್ತುಂಬ ನಿದ್ದೆ ಮಾಡಿ ಒಂದೆರಡು ಕೆಜಿಯಷ್ಟಾದರೂ ತೂಕ ಹೆಚ್ಚಿಸಿಕೊಂಡು ಮನಸು ಹಗುರಾಗಿಸಿ ಹೊಸ ಶೈಕ್ಷಣಿಕ ವರ್ಷಕ್ಕೆ ತಯಾರಾಗುತ್ತಿದ್ದ ಕಾಲ ಅದು. ಏಪ್ರಿಲ್ ಹತ್ತರಂದು ರಿಸಲ್ಟ್ ಬಂದಲ್ಲಿಂದ ಮೇ ಮೂವತ್ತೊಂದರವರೆಗೂ ನಡೆಯುವ ವಿದ್ಯಮಾನಗಳಿಗೆಲ್ಲ ದೊಡ್ಡರಜೆಯೆಂದು ಹೆಸರು. ಬೋರ್ ಎನಿಸುವುದಕ್ಕೆ, ಬೇಜಾರಾಗುವುದಕ್ಕೆ ಸಮಯವೇ ಇಲ್ಲದಷ್ಟು ಬ್ಯುಸಿ ಆಗಿರುತ್ತಿದ್ದ ದಿನಗಳವು. ಸುತ್ತುವುದಕ್ಕೆ ಮನೆಹಿಂದಿನ ತೋಟಗುಡ್ಡಗಳೇ ಸಾಕು, ತಿನ್ನುವುದಕ್ಕೆ ಕಾಡುಹಣ್ಣುಗಳು ಅನೇಕ ವಿಧದವು ದೊರೆತಾವು. ಇಲ್ಲದಿದ್ದರೆ ಅಮ್ಮನೋ ಅಜ್ಜಿಯೋ ಮಾಡಿಟ್ಟ ತಿನಿಸೇನಾದರೂ ಡಬ್ಬದಲ್ಲಿದ್ದೀತು! ಅವರಿಗೆ ಗೊತ್ತಾಗದಂತೆ ಲಪಟಾಯಿಸಿ ಗೆಳೆಯರೊಂದಿಗೆ ಹಂಚಿ ತಿಂದರೆ ಸುಖವೇ ಬೇರೆ.

ಮೇ ಇಪ್ಪತ್ತು ದಾಟುತ್ತಿದ್ದ ಹಾಗೇ ಎಲ್ಲೋ ಮೂಲೆಯಲ್ಲಿ ಮರೆಸಿಬಿಟ್ಟಿದ್ದ ಕಳೆದ ವರ್ಷದ ಬ್ಯಾಗು ನೆನಪಾಗಬೇಕು. ಹಾಗೇ ಅದರೊಳಗೆ ತುಂಬಿಟ್ಟಿದ್ದ ಪುಸ್ತಕಗಳಲ್ಲಿ ಖಾಲಿ ಉಳಿದ ಪುಟಗಳನ್ನು ಹರಿದು ತೆಗೆದು ನೀಟಾಗಿ ಜೋಡಿಸಿ ಹೊಲಿದು ಬೈಂಡು ಹಾಕಿದರೆ ಮುಂದಿನ ವರ್ಷದ ರಫ್ ಬುಕ್ ರೆಡಿ. ಮಿಕ್ಕವನ್ನೆಲ್ಲ ರದ್ದಿಗೆ ಹಾಕಿ ಹೊಸಪುಸ್ತಕಗಳಿಗೆ ಜಾಗ ಮಾಡಿಕೊಡಬೇಕು. ಹೊಸಪುಸ್ತಕಗಳ ಪರಿಮಳವೇ ಹಾಗೆ. ಹಟ್ಟಿಯಲ್ಲಿ ಹುಟ್ಟಿದ ಹೊಸ ಕರುವಿನ ನೆತ್ತಿಯನ್ನು ನೆಕ್ಕುವ ನಂದಿನಿಗೂ ಈಗಷ್ಟೇ ಹೊತ್ತುಕೊಂಡು ಬಂದ ಪಾಠಪುಸ್ತಕಗಳ ವಿಚಿತ್ರ ಸುವಾಸನೆಯನ್ನು ಆಘ್ರಾಣಿಸುತ್ತಾ ಕನಸು ಕಾಣುವ ಮುಗ್ಧ ಕಂದಮ್ಮನಿಗೂ ಏನೇನೂ ವ್ಯತ್ಯಾಸ ಇಲ್ಲ ಎಂದು ಅನಿಸುವುದು ಇಂತಹಾ ಹೊತ್ತಿನಲ್ಲೇ.

ರಜೆಯ ಗುಂಗು, ಹೊಸ ಪುಸ್ತಕಗಳ ರಂಗಿನ ನಡುವೆ ಆತಂಕದ ಬುಗ್ಗೆಯೊಂದು ನಾಭಿಯಿಂದ ಆರಂಭವಾಗಿ ಮೈಯೆಲ್ಲ ವ್ಯಾಪಿಸಿದಂತಾಗುವುದು ಟೀಚರ್ ಹೇಳಿದ್ದ ಮನೆಗೆಲಸ ಮಾಡದಿರುವುದು ಯೋಚನೆಯಾದಾಗ. ಕಾಪಿ ಬರೆಯಲೇ ಇಲ್ಲವಲ್ಲ, ಆಕಸ್ಮಾತ್ ಶಾಲೆ ತೆರೆದ ದಿನವೇ ಕೇಳಿದರೆ ಏನು ಗತಿ ಎಂಬುದು ನೆನಪಾದಾಗ. ಕನ್ನಡ, ಇಂಗ್ಲಿಷ್, ಹಿಂದಿ ಮೂರು ಭಾಷೆಗಳವೂ ದಿನಕ್ಕೆ ಅರ್ಧಪುಟದ ಲೆಕ್ಕದಲ್ಲಿ ಮೂವತ್ತು ಪುಟ ಬರೆಯಬೇಕು. ಮೇ ಮೂವತ್ತರಿಂದ ಶುರುವಾಗುವ ಕಾಪಿ ಅಭಿಯಾನದಲ್ಲಿ ಕೊನೆಗೆ ಅಪ್ಪ ಅಮ್ಮನೂ ಕೈಜೋಡಿಸಬೇಕು. ಅಕ್ಕಂದಿರ ಕೆಲಸವೂ ಕಮ್ಮಿಯಲ್ಲ. ರಜೆಯ ಅಷ್ಟೂ ಆನಂದವನ್ನು ಕಬಳಿಸುತ್ತಿದ್ದ ಅನುಭವ ಅದು. ಅಷ್ಟು ಸಾಲದ್ದಕ್ಕೆ ಇಪ್ಪತ್ತಿಪ್ಪೋತ್ಲಿವರೆಗೆ ಮಗ್ಗಿ ಬಾಯಿಪಾಠ ಬರಬೇಕು. ಆ ಒತ್ತಡದಿಂದ ಪಾರಾಗಿ ಮರುದಿನ ಬೆಳಗ್ಗೆ ಬೇಗನೇ ಎದ್ದು ಮಿಂದು ರೆಡಿಯಾಗಿ ಹಳೆಯ ಯೂನಿಫಾರಮ್ಮನ್ನು ಕೊಡವಿ ಹಾಕಿಕೊಂಡರೆ ಹೊಸಪಯಣ ಆರಂಭ.

ಬದುಕು ಬದಲಾಗಿದೆ. ಎಲ್ಲವೂ ಬದಲಾಗಿವೆ. ಹಳೆಯದನ್ನು ಹೊಸತಾಗಿಸುವ ಮಧುರವಾದ ಗುಂಗು ಇಂದಿಲ್ಲ. ಮಾರ್ಚ್ ತಿಂಗಳಲ್ಲಿಯೇ ಫಲಿತಾಂಶ ಗೊತ್ತಾಗುತ್ತದೆ. ಮತ್ತೊಂದೆರಡು ವಾರಗಳಲ್ಲಿ ಮುಂದಿನ ತರಗತಿಯ ಪಠ್ಯಪುಸ್ತಕಗಳೂ ಶಾಲೆಯಿಂದಲೇ ಕೊಡಲ್ಪಡುವ ನೋಟ್ ಬುಕ್ಕುಗಳೂ ಸಿಕ್ಕಿರುತ್ತವೆ. ಖಾಕಿ ಬೈಂಡು, ಶಾಲೆಯದ್ದೇ ಲೇಬಲ್ಲು! ಎಲ್ಲರ ಪುಸ್ತಕಗಳೂ ಒಂದೇ ಥರ ಇರಬೇಕು, ತಾರತಮ್ಯವಿಲ್ಲದಂತೆ. ಬ್ಯಾಗೂ ಅಷ್ಟೇ. ‘ನೀನೆಲ್ಲಿ ತಗೊಂಡೆ, ಎಷ್ಟು ಕೊಟ್ಟೆ? ಹೊಸದು ಕೊಡಿಸುವುದಕ್ಕೆ ಅಪ್ಪ ಒಪ್ಪಿದರಾ?’ ಎಂಬಿತ್ಯಾದಿ ಪ್ರಶ್ನೆಗಳಿಗೆ ಆಸ್ಪದವೇ ಇಲ್ಲ. ಶಾಲೆಯ ಫೀಸು ಕಟ್ಟಿದಂತೆ ಎಲ್ಲವೂ ಸಿದ್ಧ ಪ್ಯಾಕೇಜು ಎಂಬಂತೆ ದೊರೆತಾಗುತ್ತದೆ. ವರ್ಷದ ಕೊನೆಗೆ ಸೀನಿಯರ್‍ಗಳು ಯಾರಾದರೂ ಅರ್ಧ ರೇಟಿಗೆ ಮುಂದಿನ ವರ್ಷದ ಪುಸ್ತಕಗಳನ್ನು ಕೊಡುತ್ತಾರೋ ಎಂದು ಆಸೆಪಡುತ್ತಿದ್ದ, ಹಳೆ ಪತ್ರಿಕೆಯ ಪುಟಗಳನ್ನು ಐದು ಪೈಸೆಗೊಂದರಂತೆ ತಂದು ಪುಸ್ತಕಗಳಿಗೆ ಬೈಂಡು ಮಾಡುತ್ತಿದ್ದ ಪುರಾತನ ದಿನಗಳನ್ನು ನೆನೆದಾಗ ಒಂದಿನಿತು ಸಂಕಟವೆನಿಸಿದರೂ, ಆ ದಿನಗಳಲ್ಲೇ ಏನೋ ಸುಖವಿತ್ತಲ್ಲವೇ ಅನಿಸುವುದಿದೆ.

ಈಗಿನ ಕತೆ ಬೇರೆ. ಎಲ್‍ಕೆಜಿಗೆ ಸೀಟು ಬೇಕೆಂದರೆ ಮಗು ಇಂಟರ್‍ವ್ಯೂ ಪಾಸಾಗಬೇಕು. ಮಗು ಪಾಸಾಗಬೇಕು ಎನ್ನುವುದಕ್ಕಿಂತಲೂ ಅಪ್ಪ-ಅಮ್ಮಂದಿರು ಪಾಸಾಗಬೇಕು. ನೇರವಾಗಿ ಒಂದನೇ ತರಗತಿಗೆ ಸೇರುವ ಪ್ರಶ್ನೆ ಇಲ್ಲ. ಅದಕ್ಕಿಂತ ಮೊದಲೇ ಕನಿಷ್ಟ ಮೂರು ವರ್ಷದ ಶಿಕ್ಷಣ ಆಗಿರಬೇಕು. ಮಗುವಿಗೆ ಎರಡೂವರೆ ಮೂರು ವರ್ಷಗಳಾಗುವುದಕ್ಕೆ ಪುರುಸೊತ್ತಿಲ್ಲ, ಹೋಗಿ ಬಾ ಶಾಲೆಗೆ ಎಂದು ಅಟ್ಟಲೇಬೇಕು. ತೊಟ್ಟಿಲಿನಲ್ಲಿ ಎದ್ದು ಕುಳಿತು ನಗುವ ಮಗುವಿಗೆ ಸೀದಾ ಶಾಲೆಯ ಪುಟಾಣಿ ಕುರ್ಚಿಗೆ ಭಡ್ತಿ. ಹಾಗಾಗಬೇಕಾದರೂ ಸುಮಾರು ಸಿದ್ಧತೆಗಳು ಬೇಕು. ಎಬಿಸಿಡಿ, ಒನ್ ಟೂ ತ್ರೀ ಸರಾಗವಾಗಿ ಹೇಳಲು ಬರಬೇಕು. ವಾಟ್ ಈಸ್ ಯುವರ್ ನೇಮ್ ಅಂದರೆ ಮೈ ನೇಮ್ ಈಸ್.... ಎನ್ನಲು ಬರಬೇಕು. ಹೀಗೇ ಅಪ್ಪನ, ಅಮ್ಮನ ಹೆಸರೆಲ್ಲಾ ಹೇಳಲು ಬರಬೇಕು. ಫೋನ್ ನಂಬರ್ರು ಹೇಳಲು ಬಂದರೆ ಇನ್ನೂ ಉತ್ತಮ.

ಆದರೂ ಶಾಲೆಗೆ ಸೇರುವುದೆಂದರೆ ಸಂಭ್ರಮಪಡುವುದು ಮಕ್ಕಳ ಕಾಲಾತೀತ, ದೇಶಾತೀತ ಗುಣ. ಕೆಲವರಿಗೆ ಹೊಸ ಶಾಲೆಗೆ ಸೇರುವ ತವಕವಾದರೆ ಇನ್ನು ಕೆಲವರಿಗೆ ಹೊಸ ತರಗತಿಯಲ್ಲಿ ಕುಳಿತುಕೊಳ್ಳುವ ಕಾತರ. ಹೊಸ ಶಾಲೆ ಹೇಗಿರುತ್ತದೋ ಅಲ್ಲಿ ಎಂತಹ ಮಿಸ್ಸುಗಳಿರುತ್ತಾರೋ, ಎಂತಹ ಫ್ರೆಂಡ್ಸು ಸಿಗುತ್ತಾರೋ, ಆಟವಾಡಲು ಸಾಕಷ್ಟು ಸಮಯ-ಜಾಗ ಇದೆಯೋ, ಹೆಚ್ಚೆಚ್ಚು ರಜೆ ಕೊಡುತ್ತಾರೋ, ಹೋಂವರ್ಕು ಎಷ್ಟಿರತ್ತೋ ಎಂಬಿತ್ಯಾದಿ ನೂರೆಂಟು ಪ್ರಶ್ನೆ ಮೂಡದ ಮನಸ್ಸುಗಳೇ ಇಲ್ಲ. ಅಪ್ಪಾ ಹೊಸ ಶೂ-ಸಾಕ್ಸು ಯಾವಾಗ ಕೊಡಿಸ್ತೀ, ಅಮ್ಮಾ ಯೂನಿಫಾರ್ಮ್ ತಗೊಳೋಕೆ ಹೋಗೋದು ಯಾವಾಗ, ಬಾರ್ಬಿ ಜಾಮೆಟ್ರಿ ಬಾಕ್ಸು, ಆಂಗ್ರಿ ಬರ್ಡ್ ಲಂಚ್ ಬ್ಯಾಕ್ ತರೋದಕ್ಕೆ ಫ್ರೀ ಮಾಡ್ಕೋ... ಮಕ್ಕಳ ಪ್ರಶ್ನೆಗಳಿಗಂತೂ ಮಿತಿಯೇ ಇಲ್ಲ. ಬ್ಯಾಗಿನೊಳಗೆ ನೂರೆಂಟು ಪೆನ್ಸಿಲ್, ಕ್ರೇಯಾನು, ಇರೇಸರು, ಶಾರ್ಪನರ್ ಇದ್ದರೂ ಹೊಸ ಕ್ಲಾಸು ಶುರುವಾಗೋ ಹೊತ್ತಿಗೆ ಎಲ್ಲವೂ ಹೊಸಹೊಸದಾಗಿ ಇರಲೇಬೇಕು. ರಜೆಗೆ ಇನ್ನು ಎಷ್ಟು ದಿನ ಎಂದು ವರ್ಷದ ಕೊನೆಗೆ ಕೇಳಿದ್ದಕ್ಕಿಂತಲೂ ಎರಡು ಪಟ್ಟು ಚಡಪಡಿಕೆಯಲ್ಲೇ ಸ್ಕೂಲು ಶುರುವಾಗೋದಕ್ಕೆ ಇನ್ನು ಎಷ್ಟು ದಿನವಮ್ಮಾ ಎಂದು ಕೇಳದೇ ಹೋದರೆ ಅವರು ಮಕ್ಕಳೇ ಅಲ್ಲ.

ಹೈಸ್ಕೂಲಿನ ಮೆಟ್ಟಿಲು ಹತ್ತುವ ಹೊತ್ತು
ಸಣ್ಣ ಮಕ್ಕಳ ಕತೆ ಇದಾದರೆ, ಹೈಸ್ಕೂಲು ಮೆಟ್ಟಿಲು ಹತ್ತುವವರ ಅವಸ್ಥೆಯೇ ಬೇರೆ. ಎಂಟನೇ ತರಗತಿಗೆ ಬಂದರೆಂದರೆ ಮಕ್ಕಳಿಗಿಂತಲೂ ಹೆತ್ತವರೇ ಘನಗಂಭೀರ. ಅಯ್ಯೋ ಇನ್ನೇನು ಎಸ್ಸೆಸೆಲ್ಸಿಗೆ ಬಂದುಬಿಡ್ತಾನೆ/ಳೆ, ಒಂದಿಷ್ಟೂ ಸೀರಿಯಸ್‍ನೆಸ್ ಇಲ್ಲ, ಹಿಂಗೇ ಆದ್ರೆ ಮುಂದೆ ಇವನಿ/ಳಿಗೆ ಯಾರು ಸೀಟ್ ಕೊಡ್ತಾರೆ... ಎಂಬಿತ್ಯಾದಿಯಾಗಿ ಅಪ್ಪ-ಅಮ್ಮ ತಲೆ ಮೇಲೆ ಆಕಾಶ ಬಿದ್ದವರಂತೆ ಚರ್ಚಿಸುವುದು ನೋಡಿದರೆ ಆಗಷ್ಟೇ ಹದಿಹರೆಯಕ್ಕೆ ಕಾಲಿಟ್ಟ ಮಗುವಿನ ತಲೆ ತುಂಬ ಗೊಂದಲ.

ಹತ್ತನೇ ತರಗತಿ ಆರಂಭವಾಗುತ್ತಿದ್ದರಂತೂ ಮನೆಯಲ್ಲೊಂದು ಬಗೆಯ ಅಘೋಷಿತ ತುರ್ತುಪರಿಸ್ಥಿತಿ. ಶನಿವಾರ, ಭಾನುವಾರ, ಹಬ್ಬಹರಿದಿನಗಳೇ ಇಲ್ಲದ ಕ್ಯಾಲೆಂಡರು. ಎಂಗೇಜ್ಮೆಂಟು, ಮದುವೆ, ಬರ್ತ್‍ಡೇ, ಫ್ಯಾಮಿಲಿ ಗೆಟ್ ಟುಗೆದರ್ ಎಲ್ಲವೂ ರದ್ದು. ಸಂಗೀತ, ನೃತ್ಯ, ಕರಾಟೆ, ಸ್ಪೋಟ್ರ್ಸ್ ಕೇಳಲೇಬೇಡಿ. ಎಲ್ಲ ಪ್ರಶ್ನೆಗೂ ಒಂದೇ ಉತ್ತರ- ಅವ್ನು/ಅವ್ಳು ಎಸ್ಸೆಸ್ಸೆಲ್ಸಿ! ಅಮ್ಮನ ಉಳಿದೆಲ್ಲ ಜವಾಬ್ದಾರಿಗಳ ಜತೆ, ರಾತ್ರಿಯೆಲ್ಲ ಓದುವ ಮಗುವಿನ ಜತೆ ಎಚ್ಚರವಿದ್ದು ಟೀ-ಕಾಫಿ ತಯಾರಿಸುವ ಕೆಲಸ ಸೇರ್ಪಡೆ. ಹತ್ತನೇ ತರಗತಿಗೆ ಸೇರಿಸೋವಾಗ್ಲೂ ಆಯ್ಕೆಯ ಸಮಸ್ಯೆ. ಪಿಯುಸಿ, ಅದರ ನಂತರದ ಪರೀಕ್ಷೆಗಳಿಗೆ ಸಂಬಂಧಿಸಿದ ಕೋಚಿಂಗ್ ಇರೋ ಹೈಸ್ಕೂಲನ್ನು ಹುಡುಕುವ ಕಾಲ ಇದು. ಕೂಸು ಹುಟ್ಟುವ ಮುನ್ನವೇ ಸ್ಕೂಲು ಹುಡುಕುವ ಯುಗದಲ್ಲಿ ಇದೆಲ್ಲ ವಿಸ್ಮಯದ ವಿಷಯವಲ್ಲ ಬಿಡಿ.

ಪಿಯುಸಿಗೆ ಬಂದವರ ಕತೆ ಕೇಳಲೇ ಬೇಡಿ. ರಜೆಗಳ ಸಂಗತಿ ಹಾಗಿರಲಿ, ರಾತ್ರಿ-ಹಗಲುಗಳ ವ್ಯತ್ಯಾಸವೂ ಗೊತ್ತಾಗದ ಎರಡು ವರ್ಷವದು. ಕಾಲೇಜಿನಲ್ಲಿ ಸೀಟು ಸಿಕ್ಕರೆ ಸಾಕಪ್ಪಾ ಎಂದು ಹರಕೆ ಹೊರುವ ಕಾಲ ಹೋಗಿ ನಮ್ಮ ಕಾಲೇಜಿನಲ್ಲಿ ಕಡಿಮೆ ರೇಟಿನಲ್ಲಿ ಸೀಟು ಪಡೆಯಿರಿ ಎಂದು ಮನೆಮುಂದೆ ಬಂದು ದುಂಬಾಲು ಬೀಳುವ ಪ್ರೈವೇಟು ಕಾಲೇಜುಗಳಿಂದ ತಪ್ಪಿಸಿಕೊಂಡು ತಮ್ಮ ಆದ್ಯತೆಯ ಕಾಲೇಜು ಹುಡುಕುವ ಪಡಿಪಾಟಲು ಹೆತ್ತವರಿಗೇ ಪ್ರೀತಿ. ಒಳ್ಳೆಯ ಕಾಲೇಜು ಸಿಕ್ಕರೆ ಸಾಲದು, ಅಲ್ಲಿ ನೀಟ್ ಜೆಇಇ ಕೋಚಿಂಗ್ ಇರಬೇಕು, ಕಾಮರ್ಸ್ ಆದರೆ ಸಿಎ ಕೋಚಿಂಗ್ ಇರಬೇಕು. ಅದೇ ಊರಲ್ಲಿ ಮನೆಯಿದ್ದರೂ ಹಾಸ್ಟೆಲ್‍ಗೆ ಸೇರಿಸಿಕೊಳ್ಳಬೇಕು.

ಕಾಲ ಎಲ್ಲಿಯವರೆಗೆ ಬದಲಾಗಿದೆಯೆಂದರೆ ಶಾಲಾ ಕಾಲೇಜು ಆರಂಭವಾದ ಮೇಲೆ ಮಕ್ಕಳಿಗೆ ಪರೀಕ್ಷೆ, ಅದಕ್ಕೆ ಮೊದಲು ಅಪ್ಪ-ಅಮ್ಮಂದಿರಿಗೆ ಪರೀಕ್ಷೆ. ಫಲಿತಾಂಶ ಮಾತ್ರ ಒಂದೇ ಸಲ.

ಕಾಮೆಂಟ್‌ಗಳಿಲ್ಲ: