ಸೋಮವಾರ, ಜುಲೈ 1, 2019

ಮುಂಗಾರು ಮಳೆಯ ಹೊಂಗಿರಣ

ಜೂನ್ 29-ಜುಲೈ 6ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಬೋಧಿವೃಕ್ಷ, ಜೂನ್ 29-ಜುಲೈ 6, 2019
ಎಲ್ಲಿ ಓಡುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ ಎಂಬ ರೈತನ ಮೊರೆ ಆಗಸವನ್ನು ತಲುಪಿದಂತೆ ಕಾಣುತ್ತಿದೆ. ದಿಕ್ಕಿನಿಂದ ದಿಕ್ಕಿಗೆ ಬರಿದೇ ಅಲೆದಾಡುತ್ತಿದ್ದ ಮೋಡಗಳು ಕೊಂಚ ನಿಧಾನಿಸಿ ಕರುಣೆಯ ತಂಪೆರೆಯುವ ಲಕ್ಷಣ ಗೋಚರಿಸುತ್ತಿದೆ. ಬಾಯೊಣಗಿದಾಗ ಮಾತ್ರ ನೀರಿನ ನೆನಪಾಗುವ ಆಸೆಬುರುಕ ಜಗತ್ತನ್ನಾದರೂ ಅವು ನಿರ್ಲಕ್ಷಿಸಿ ಮುಂದುವರಿದಾವು, ಆದರೆ ನೇಗಿಲ ಧರ್ಮವನ್ನೇ ನಂಬಿ ಬದುಕುವ ರೈತರನ್ನಲ್ಲ. ಕಾಯಕನಿಷ್ಠೆಗೆ ಒಲಿಯದ ವರ ಇದ್ದರೆಷ್ಟು ಬಿಟ್ಟರೆಷ್ಟು?

ಮಣ್ಣ ಕಣದಲ್ಲಿ ಚಿನ್ನ ಕಾಣುವ ರೈತನಂತಹ ಮತ್ತೊಬ್ಬ ಸಂತ ಭೂಮಿ ಮೇಲೆ ಸಿಗಲಾರ. ತಾನು ಬೆವರು ಬಸಿದು ಹಸನು ಮಾಡಿದ ನೆಲದಲ್ಲಿ ಚಿಗಿಯುವ ಒಂದೊಂದು ಮೊಳಕೆಯೂ ಅವನ ಸಂಭ್ರಮಾಚರಣೆಗೆ ಸಾಕ್ಷಿ. ಅದು ಬೆಳೆದು ತೆನೆ ಬಲಿತು ಫಲ ನೀಡುವ ಹಾದಿಯನ್ನು ಎದುರು ನೋಡುವುದೇ ಅವನಿಗೆ ಯುಗಾದಿ, ದೀಪಾವಳಿ ಎಲ್ಲ. ಅವನು ಅಷ್ಟೈಶ್ವರ್ಯ ಬೇಡುವುದಿಲ್ಲ, ಮಹಡಿ ಮನೆಯ ಕನಸು ಕಾಣುವುದಿಲ್ಲ, ದೊಡ್ಡ ಕಾರಿನ ಸುಖ ಬಯಸುವುದಿಲ್ಲ. ಒಳ್ಳೆಯ ಮಳೆಯಾಗಲಿ, ಹುಲುಸಾದ ಬೆಳೆಯಾಗಲಿ, ಜಗದ ಹೊಟ್ಟೆ ತಣ್ಣಗಿರಲಿ- ಅದಷ್ಟೇ ಅವನ ಪ್ರಾರ್ಥನೆ.

‘ಫಲವನು ಬಯಸದೆ ಸೇವೆಯ ಪೂಜೆಯ ಕರ್ಮವೆ ಇಹಪರ ಸಾಧನವು’ ಎಂದರು ರೈತನನ್ನು ನೇಗಿಲಯೋಗಿಯೆಂದು ಕರೆದ ಮಹಾಕವಿ ಕುವೆಂಪು. ರೈತನಿಗೆ ಕಾಯಕನಿಷ್ಠೆಗಿಂತ ಮಿಗಿಲಾದ ಪೂಜೆಯಿಲ್ಲ. ಚುನಾವಣೆ ಬರಲಿ, ಬಾರದಿರಲಿ, ಸರ್ಕಾರ ಬೀಳಲಿ, ಏಳಲಿ, ರಾಜಕಾರಣಿಗಳು ಸೋಲಲಿ, ಗೆಲ್ಲಲಿ, ರೈತನ ಚಿತ್ತ ನೆಟ್ಟಿರುವುದು ಮುಂಗಾರು ಮಳೆಯ ಹನಿಗಳ ಲೀಲೆಯ ಮೇಲೆ. ಕಾಯಕನಿಷ್ಠೆ ಧರ್ಮದ ಬುನಾದಿಯಾಗಬೇಕು ಎಂಬ ಶರಣರ ಆಶಯವನ್ನು ಮೊತ್ತಮೊದಲು ಜಾರಿಗೆ ತಂದವನು ನಮ್ಮ ಅನ್ನದಾತ.

‘ಕೃತ್ಯಕಾಯಕವಿಲ್ಲದವರು ಭಕ್ತರಲ್ಲ, ಸತ್ಯಶುದ್ಧವಿಲ್ಲವಾದುದು ಕಾಯಕವಲ್ಲ’ ಎಂದಳು ಶಿವಶರಣೆ ಕಾಳವ್ವೆ. ಖುದ್ದು ತನಗಾಗಿ ಏನನ್ನು ಬಯಸದೆ ನಿಷ್ಕಾಮನಿಷ್ಠೆಯಿಂದ ದುಡಿಯುವ ರೈತನಿಗಿಂತ ಮಿಗಿಲಾದ ಭಕ್ತರು ಯಾರು? ಲೋಕದ ಹಸಿವಿನ ನಿವಾರಣೆಯೇ ಪರಮಗುರಿಯಾಗಿರುವ ಬೇಸಾಯಕ್ಕಿಂತ ಹೆಚ್ಚು ಸತ್ಯಶುದ್ಧವಾದ ಕಾಯಕ ಯಾವುದು?

ಅಂತಹ ಭಕ್ತಿ, ಅಂತಹದೊಂದು ಕಾಯಕ ಸಾರ್ಥಕವಾಗಬೇಕಾದರೆ ಬಾನು-ಭುವಿಯನ್ನು ಮುಂಗಾರಿನ ಮೋಡ ಒಂದು ಮಾಡಬೇಕು. ಮೊದಮೊದಲ ಸೋನೆಯಿಂದ, ಆಮೇಲಿನ ಧಾರಾಕಾರ ವರ್ಷದಿಂದ ದ್ಯಾವಾಪೃಥಿವೀಗಳ ಬೆಸುಗೆ ಆದ್ರ್ರಗೊಂಡು ಪ್ರೇಮಭಾವ ಮೊಳೆಯಬೇಕು. ‘ಮುಂಗಾರಿನ ಅಭಿಷೇಕಕೆ ಮಿದುವಾಯಿತು ನೆಲವು | ಧಗೆ ಆರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು’ (ಜಿಎಸ್ಸೆಸ್) ಎಂದು ಕವಿ ಮನಸ್ಸು ಹಾಡುವುದಕ್ಕೆ ಆ ಪ್ರೇಮಭಾವವೇ ನಿಮಿತ್ತ.

‘ಭರವಸೆಗಳ ಹೊಲಗಳಲ್ಲಿ ನೇಗಿಲ ಗೆರೆ ಕವನ | ಶ್ರಾವಣದಲಿ ತೆನೆದೂಗುವ ಜೀವೋತ್ಸವ ಗಾನ’ ಎಂದು ಹಾಡಿದರು ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ. ರೈತನಾದಿಯಾಗಿ ಜಗತ್ತಿನ ಸಮಸ್ತ ಜೀವ ಸಂಕುಲಕ್ಕೆ ವರ್ಷಧಾರೆಯೇ ಬದುಕಿನ ಭರವಸೆ. ಮನುಷ್ಯ ಚಂದ್ರನ ಮೇಲೆ ವಿಹರಿಸಿದ್ದಾನೆ; ಮಂಗಳನನ್ನು ತಲುಪಿದ್ದಾನೆ; ಪಾತಾಳಕ್ಕೂ ಈಜಿದ್ದಾನೆ; ಸೂರ್ಯನ ಬೆಳಕನ್ನೂ, ಹರಿಯುವ ನೀರನ್ನೂ, ಬೀಸುವ ಮಾರುತನನ್ನೂ ವಿದ್ಯುತ್ತಾಗಿ ಪರಿವರ್ತಿಸಿ ಜಗತ್ತನ್ನೇ ಬದಲಾಯಿಸಿದ್ದಾನೆ; ಪಂಚಭೂತಗಳೆಲ್ಲಾ ತನ್ನ ಮುಷ್ಟಿಯೊಳಗೆ ಇವೆ ಎಂಬಂತೆ ಆಡುತ್ತಿದ್ದಾನೆ. ಇಷ್ಟೆಲ್ಲ ಬಡಾಯಿ ಕೊಚ್ಚಿಕೊಳ್ಳುವ ಮನುಷ್ಯ ಸತ್ತ ಜೀವಿಯನ್ನು ಬದುಕಿಸಲಾರ. ಹೋಗಲಿ, ಒಂದು ಪುಟ್ಟ ಬೀಜವನ್ನು ತನ್ನ ಶಕ್ತಿಯಿಂದ ಮೊಳಕೆಯೊಡೆಯುವಂತೆ ಮಾಡಲಾರ. ಅದಕ್ಕೆ ಪ್ರಕೃತಿಯೇ ಮನಸ್ಸು ಮಾಡಬೇಕು.

ವೈಶಾಖದ ಬೇಗೆಯಲ್ಲಿ ಒಣಗಿ ನಿಸ್ತೇಜಗೊಂಡ ಬಯಲಿಗೆ ದೂರದ ಕೆರೆಗಳಿಂದ ಟ್ಯಾಂಕರುಗಳಲ್ಲಿ ನೀರು ತಂದು ಸುರಿದರೆ ಎಲ್ಲೋ ನಾಲ್ಕು ಗಿಡಗಳು ಚಿಗುರಿಕೊಂಡಾವೋ ಏನೋ? ಅದೇ ಎರಡು ದಿನ ಒಂದರ್ಧ ಗಂಟೆ ಸೋನೆ ಸುರಿದು ನೆಲ ತಂಪಾಗಲಿ, ಇಡೀ ಬಯಲು ಹೊಸ ಜೀವಕಳೆಯಿಂದ ನಳನಳಿಸಲು ಆರಂಭಿಸುತ್ತದೆ. ಇಂಚಿಂಚು ಜಾಗದಲ್ಲೂ ಹಸುರು ಮೊಳೆತು ಒಂದೇ ವಾರಕ್ಕೆ ಇಡೀ ಪರಿಸರ ಪಚ್ಚೆ ಸೀರೆ ಉಟ್ಟು ಮದುವಣಗಿತ್ತಿಯಂತೆ ಕಂಗೊಳಿಸುತ್ತದೆ. ಮನುಷ್ಯ ಸಾಧನೆಯೆಂಬ ಬೊಗಳೆಗೆ ಇದಕ್ಕಿಂತ ಹೆಚ್ಚಿನ ನಿದರ್ಶನ ಬೇಕೆ?

ಕೊಡಗಿನ ಗುಡ್ಡಗಳು ಕುಸಿದು ಸಹಸ್ರಾರು ಕುಟುಂಬಗಳು ನಿರಾಶ್ರಿತವಾದಾಗ, ಕೇರಳದ ಪ್ರವಾಹದಲ್ಲಿ ಮನೆ, ಮಠ, ಕಾರು, ತೇರುಗಳು ಅಡೆತಡೆಯೇ ಇಲ್ಲದೆ ಕೊಚ್ಚಿಕೊಂಡು ಹೋದಾಗ ಯಾವ ತಂತ್ರಜ್ಞಾನದಿಂದಲೂ ಪರಿಹಾರ ದೊರೆಯಲಿಲ್ಲ. ಆಗ ನೆರವಿಗೆ ಬಂದದ್ದು ಕರುಣೆ ಮತ್ತು ಸಹಾನುಭೂತಿ ಮಾತ್ರ. ‘ಹೊನ್ನ ನೆಕ್ಕಿ ಬಾಳ್ವರಿಲ್ಲ, ಅನ್ನ ಸೂರೆ ಮಾಡಿರಿ | ಅಣ್ಣಗಳಿರಾ ಅನ್ನದಲ್ಲಿ ಮಣ್ಣ ಕಲಸಬೇಡಿರಿ’ ಎಂದು ಬೇಡಿಕೊಂಡರು ಬೇಂದ್ರೆ. ಈ ಮುಂಗಾರು ನಮ್ಮ ಭ್ರಮೆಗಳನ್ನು ತೊಳೆದೀತೇ?

- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: