ಏಪ್ರಿಲ್ 27-ಮೇ 3, 2019ರ ಬೋಧಿವೃಕ್ಷದಲ್ಲಿ ಪ್ರಕಟವಾದ ಬರಹ
ಸಂಸ್ಕೃತ ಕವಿ ಭಾರವಿಯ ಕುರಿತು ಒಂದು ಸ್ವಾರಸ್ಯಕರ ಕಥೆಯಿದೆ. ಪ್ರತಿಭಾಸಂಪನ್ನನಾಗಿದ್ದ ಭಾರವಿ ಬಾಲ್ಯದಿಂದಲೇ ಉತ್ತಮ ರಚನೆಗಳಿಂದ ಗಮನ ಸೆಳೆದಿದ್ದ. ಅವನ ಕಾವ್ಯವನ್ನು ಇಷ್ಟಪಟ್ಟು ಎಲ್ಲರೂ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರು. ಆದರೂ ಭಾರವಿಗೆ ಒಂದು ಕೊರಗು ಹಾಗೇ ಉಳಿದಿತ್ತು. ಅದೇನೆಂದರೆ ಎಷ್ಟೇ ಉತ್ತಮ ಕಾವ್ಯ ರಚನೆ ಮಾಡಿದರೂ ಅವನ ತಂದೆ ಅವನನ್ನು ಹೊಗಳುತ್ತಿರಲಿಲ್ಲ.
ಈ ಬೇಸರ ಯಾವ ಮಟ್ಟಕ್ಕೆ ಹೋಯಿತೆಂದರೆ, ಅದು ದ್ವೇಷವಾಗಿ ಬದಲಾಗುವಷ್ಟು. ಒಂದು ರಾತ್ರಿ ಹಿಟ್ಟು ಅರೆಯುವ ಕಲ್ಲನ್ನು ಎತ್ತಿಕೊಂಡು ಭಾರವಿ ಅಟ್ಟದ ಮೇಲೆ ಅಡಗಿ ಕುಳಿತನಂತೆ. ಇನ್ನೇನು ಅದನ್ನು ತಂದೆಯ ಮೇಲೆ ಎತ್ತಿಹಾಕುವ ಯೋಚನೆ ಮಾಡುತ್ತಿದ್ದವನಿಗೆ ತಂದೆ-ತಾಯಿ ಮಾತಾಡುತ್ತಿರುವುದು ಕೇಳಿಸಿತು.
‘ಅಲ್ಲಾ, ಆ ಮಗು ನಿಮಗೇನು ಮಾಡಿದೆ? ಎಷ್ಟು ಒಳ್ಳೆಯ ಕಾವ್ಯ ಬರೆಯುತ್ತಾನೆ! ನೀವು ಒಮ್ಮೆಯೂ ಅವನ ಬಗ್ಗೆ ಮೆಚ್ಚುಗೆಯ ಮಾತಾಡುವುದಿಲ್ಲವಲ್ಲ... ಪಾಪ, ಎಷ್ಟು ನೊಂದುಕೊಳ್ಳುತ್ತಾನೋ ಏನೋ?’ ಅಮ್ಮ ಅಪ್ಪನಿಗೆ ಕೇಳುತ್ತಿದ್ದಳು. ಭಾರವಿ ಚುರುಕಾಗಿ ಕಿವಿಗೊಡತೊಡಗಿದ. ಅಪ್ಪನ ಉತ್ತರ ಹೀಗಿತ್ತು:
‘ನೀನು ಹೇಳುವುದು ನಿಜ. ನಮ್ಮ ಮಗ ತುಂಬ ಪ್ರತಿಭಾವಂತ. ಉತ್ತಮ ಕಾವ್ಯ ರಚನೆ ಮಾಡುತ್ತಾನೆ. ಆದರೆ ಈಗಲೇ ನಾವು ಹೊಗಳಲು ಆರಂಭಿಸಿದರೆ ಆತನಿಗೆ ತಾನು ಬರೆಯುತ್ತಿರುವುದು ಶ್ರೇಷ್ಠ ಎಂಬ ಭಾವನೆ ಬಂದುಬಿಡಬಹುದು; ಮುಂದಕ್ಕೆ ಇನ್ನಷ್ಟು ಉತ್ತಮವಾದದ್ದನ್ನು ಬರೆಯಲು ಪ್ರಯತ್ನಿಸುವುದೇ ಇಲ್ಲ. ಅವನು ಇನ್ನೂ ಎತ್ತರಕ್ಕೆ ಏರಬೇಕಾಗಿದೆ...’.
ಈ ಸಂಭಾಷಣೆ ಕೇಳಿ ಭಾರವಿಯ ಮನಸ್ಸಿನಲ್ಲಿದ್ದ ದ್ವೇಷ ಜರ್ರನೆ ಇಳಿದು ಮನಸ್ಸಿನಲ್ಲಿ ಬೆಳಕು ಮೂಡಿತಂತೆ. ಕೂಡಲೇ ಕೆಳಗಿಳಿದು ಬಂದು ತಂದೆಯ ಕಾಲಿಗೆ ಬಿದ್ದು ಕ್ಷಮೆ ಕೋರಿದನಂತೆ. ಕೊಂಚ ದುಡುಕಿದ್ದರೂ ಎಂತಹ ಪಾಪಕೃತ್ಯ ಎಸಗುತ್ತಿದ್ದೆ ಎಂದು ಮಮ್ಮಲ ಮರುಗಿದನಂತೆ. ಮುಂದೆ ಅದೇ ಭಾರವಿ ‘ಕಿರಾತಾರ್ಜುನೀಯಮ್’ನಂತಹ ಅಜರಾಮರ ಕೃತಿ ರಚನೆ ಮಾಡಿದ್ದು ಈಗ ಇತಿಹಾಸ.
ಜಗತ್ತಿನಲ್ಲಿ ಟೀಕೆ ಇಷ್ಟಪಡುವವರು ಎಷ್ಟು ವಿರಳವೋ ಹೊಗಳಿಕೆಗೆ ಉಬ್ಬಿಹೋಗದವರೂ ಅಷ್ಟೇ ವಿರಳ. ಎರಡನ್ನೂ ಸಮಾನವಾಗಿ ಸ್ವೀಕರಿಸುವವರಂತೂ ವಿರಳಾತಿವಿರಳ. ‘ಜನರು ನಿಮ್ಮನ್ನು ಟೀಕಿಸುವಂತೆ ಕೇಳಿಕೊಳ್ಳುತ್ತಾರೆ. ಆದರೆ ಅವರು ಬಯಸುವುದು ಪ್ರಶಂಸೆಯನ್ನು ಮಾತ್ರ’ ಎನ್ನುತ್ತಾನೆ ಪ್ರಸಿದ್ಧ ಲೇಖಕ ಸಾಮರ್ಸೆಟ್‍ಮಾಮ್. ಎಂತಹ ಕಠಿಣ ಮನಸ್ಸಿನವನೂ ಹೊಗಳಿದಾಗ ಕೊಂಚ ಮೃದುವಾಗುತ್ತಾನೆ. ಅದು ಅಪರಾಧವೇನೂ ಅಲ್ಲ, ಮನುಷ್ಯನ ಸಹಜ ಗುಣ. ಸ್ವತಃ ಭಗವಂತನಿಗೇ ಸ್ತುತಿಯೆಂದರೆ ಇಷ್ಟವಂತೆ; ಇನ್ನು ಜನಸಾಮಾನ್ಯರ ಪಾಡೇನು?
ಆದರೆ ಹೊಗಳಿಕೆಯನ್ನು ಇಷ್ಟಪಡುವವರು ನಿಂದೆಗಳಿಗೂ ಮನಸ್ಸು ತೆರೆಯದಿದ್ದರೆ ಬದುಕು ನಿಶ್ಚಲವಾಗಿಬಿಡುತ್ತದೆ. ಬದುಕಿನ ಶ್ರೇಯಸ್ಸಿಗೆ ಸ್ತುತಿನಿಂದೆಗಳೆರಡೂ ಅಗತ್ಯ. ಹೊಗಳುವವರಿಲ್ಲದಿದ್ದರೂ ಸರಿ, ನಿಂದಕರಂತೂ ಇರಲೇಬೇಕು ಎಂದರು ಎಲ್ಲ ದಾರ್ಶನಿಕರು.
ನಿಂದಕರಿರಬೇಕು ಜಗದೊಳು ನಿಂದಕರಿರಬೇಕು|
ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ದಿಯೋ ಹಾಂಗೆ||
ಎಂದರು ಪುರಂದರದಾಸರು. ‘ಅಂದಂದು ಮಾಡಿದ ಪಾಪವೆಂಬ ಮಲ/ ತಿಂದು ಹೋಗುವರಯ್ಯ ನಿಂದಕರು’ ಎಂದ ದಾಸರು, ಟೀಕೆಗಳು ಆತ್ಮಶೋಧನೆಗೆ ಎಷ್ಟು ಅನಿವಾರ್ಯವೆಂಬುದನ್ನು ಒತ್ತಿಹೇಳಿದರು. ಅಂದಂದು ಮಾಡಿದ ಪಾಪವೆಂಬ ಕೊಳೆ ತೊಳೆದುಹೋಗಬೇಕಾದರೆ ಟೀಕಾಕಾರರು ಇರಲೇಬೇಕೆಂಬ ಅವರ ನಿಲವು ತುಂಬ ಮನೋಜ್ಞವಾಗಿದೆ.
ಟೀಕೆ ಮಾಡುವವರು ಇಲ್ಲದೇ ಹೋದರೆ ನಮಗೆ ನಮ್ಮ ಸ್ಥಾನ ಅರ್ಥವೇ ಆಗುವುದಿಲ್ಲ. ನಾನು ಮಾಡಿದ್ದೇ ಸರಿ ಎಂಬ ಭಾವನೆ ಗಟ್ಟಿಯಾಗಿಬಿಡುತ್ತದೆ. ಅಲ್ಲಿಗೆ ಬೆಳವಣಿಗೆಯೂ ನಿಂತುಹೋಗುತ್ತದೆ. ಎಲ್ಲಿ ನಿಂದೆ ಎದುರಾಗುತ್ತದೋ, ಅದು ಆತ್ಮಾವಲೋಕನಕ್ಕೆ ದಾರಿ ಮಾಡಿಕೊಡುತ್ತದೆ. ಅನೇಕ ಬಾರಿ ಪಂಥಾಹ್ವಾನದಂತೆಯೂ ಗೋಚರಿಸಿ, ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತದೆ. ನಿನ್ನಿಂದೇನು ಸಾಧ್ಯ ಎಂಬ ಒಂದೇ ಮಾತಿಗೆ ಸಿಡಿದೆದ್ದು ತಮ್ಮ ಭವಿಷ್ಯವನ್ನೇ ಭವ್ಯವಾಗಿ ಕಟ್ಟಿಕೊಂಡ ನೂರಾರು ಮಂದಿಯ ಯಶೋಗಾಥೆಗಳು ಹೇರಳವಾಗಿ ಸಿಗುತ್ತವೆ.
ನಿಂದಂತು ನೀತಿ ನಿಪುಣಾ ಯದಿ ವಾ ಸ್ತುವಂತು ಲಕ್ಷ್ಮೀಃ
ಸಮಾವಿಶತು ಗಚ್ಛತು ವಾ ಯಥೇಷ್ಟಮ್|
ಅದ್ಯೈವ ವಾ ಮರಣಮಸ್ತು ಯುಗಾಂತರೇ ವಾ ನ್ಯಾಯಾತ್
ಪಥಾತ್ ಪ್ರವಿಚಲಂತಿ ಪದಂ ನ ಧೀರಾಃ||
ಎಂಬ ಸಂಸ್ಕೃತ ಸುಭಾಷಿತವೊಂದಿದೆ. ಅಂದರೆ- ‘ನಾವು ಕೈಗೊಳ್ಳುವಕಾರ್ಯವನ್ನು ನೀತಿಕುಶಲರು ನಿಂದಿಸಲಿ ಅಥವಾ ಹೊಗಳಲಿ, ನಮಗೆ ಲಾಭವಾಗಲಿ ಅಥವಾ ನಷ್ಟವೇ ಆಗಲಿ, ಇಂದೇ ಸಾವು ಬರಲಿ ಅಥವಾ ಯುಗಾಂತರದವರೆಗೆ ಬದುಕಲಿ, ಧೈರ್ಯಶಾಲಿಗಳು ನ್ಯಾಯವಾದ ಮಾರ್ಗದಿಂದ ಕದಲುವುದಿಲ್ಲ’ ಎಂಬುದು ಇದರರ್ಥ.
ಇದನ್ನೇ ಅಕ್ಕಮಹಾದೇವಿಯು ‘ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆತೆರೆಗಳಿಗಂಜಿದಡೆಂತಯ್ಯ’ ಎಂದು ಪ್ರಶ್ನೆ ಮಾಡಿದ್ದು. ಮನುಷ್ಯ ವಿಶಾಲ ಸಮಾಜದ ಒಂದು ಭಾಗವೆನಿಸಿದ ಮೇಲೆ ಅಲ್ಲಿನ ಸುಖಸಂತೋಷಗಳನ್ನಷ್ಟೇ ಅಲ್ಲದೆ ಎಡರುತೊಡರುಗಳನ್ನೂ ಎದುರಿಸಲು ಸಿದ್ಧನಿರಬೇಕು.
ಬಸವಣ್ಣನವರಂತೂ ಟೀಕಾಕಾರರಿಗಿಂತಲೂ ಹೊಗಳುವವರೇ ಹೆಚ್ಚು ಅಪಾಯಕಾರಿಗಳೆಂದು ಹೇಳಿದರು. ‘ಎನ್ನವರೊಲಿದು ಹೊನ್ನಶೂಲದಲ್ಲಿಕ್ಕಿದರೆನ್ನ ಹೊಗಳಿ ಹೊಗಳಿ’ ಎಂದ ಬಸವಣ್ಣನವರು ‘ನಿಮ್ಮ ಮನ್ನಣೆಯ ಮಸೆದಲಗಾಗಿ ತಾಗಿತ್ತಲ್ಲಾ’ ಎಂದು ನೊಂದುಕೊಂಡರು. ‘ನೀನೆನಗೆ ಒಳ್ಳಿದನಾದಡೆ ಎನ್ನ ಹೊಗಳಿಕೆಗಡ್ಡಬಾರಾ ಧರ್ಮೀ!’ ಎಂಬ ಕೋರಿಕೆಯಂತೂ ಅದ್ಭುತವಾಗಿದೆ. ಒಂದು ವೇಳೆ ನೀನು ನನ್ನ ಶ್ರೇಯೋಭಿಲಾಷಿಯಾಗಿದ್ದರೆ ನನ್ನನ್ನು ಯಾರೂ ಹೊಗಳದಂತೆ ನೋಡಿಕೋ ಎಂಬ ಮಾತಂತೂ ಅತ್ಯಪೂರ್ವವಾದದ್ದು.
ಕತ್ತಲೆ ಇದ್ದಾಗಲಷ್ಟೇ ಬೆಳಕಿಗೆ ಬೆಲೆ. ಕಹಿ ಇದ್ದಾಗಲಷ್ಟೇ ಸಿಹಿಗೆ ಬೆಲೆ. ಕಷ್ಟಗಳಿದ್ದಾಗಲೇ ಸುಖಕ್ಕೆ ಬೆಲೆ. ನಿಂದಕರಿದ್ದಾಗಲೇ ಪ್ರಶಂಸೆಗೆ ಬೆಲೆ.

ಏಪ್ರಿಲ್ 27-ಮೇ 3, 2019 | ಬೋಧಿವೃಕ್ಷ |

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ