ಬುಧವಾರ, ನವೆಂಬರ್ 4, 2015

ಮಾಹಿತಿ ಮಹಾನದಿಯ ಮಧ್ಯೆ

ಫೇಸ್‌ಬುಕ್ ಮುಖಹೀನರ ಮುಖವಾಣಿಯಾಗುತ್ತಿದೆ ಎಂದೂ (ಸಂಗತ, ಅ. 19), ಇಲ್ಲ, ಅದು ಸಮಾಜದಲ್ಲಿ ಸಂವಾದಗಳನ್ನು ಹೆಚ್ಚಿಸಿರುವ ಸಂವಹನದ ಕುಡಿ ಎಂದೂ (ಚರ್ಚೆ, ಅ. 22) ಹೇಳುವ ಎರಡು ವಾದಗಳು ಗಮನಕ್ಕೆ ಬಂದವು. ಎರಡಕ್ಕೂ ತಮ್ಮದೇ ಆದ ಸಮರ್ಥನೆಗಳೂ, ಪ್ರತಿವಾದಗಳೂ ಇವೆ. ಅವುಗಳ ಪರವಾಗಿಯಾಗಲೀ ವಿರೋಧವಾಗಿಯಾಗಲೀ ಮಾತನಾಡುವುದು ಈ ಲೇಖನದ ಉದ್ದೇಶವಲ್ಲ. ಅವುಗಳ ನಿಮಿತ್ತದಿಂದ ಒಟ್ಟಾರೆ ಸಾಮಾಜಿಕ ಮಾಧ್ಯಮ ಅಥವಾ ಮಾಹಿತಿ ತಂತ್ರಜ್ಞಾನದ ಪರಿಣಾಮ ಕುರಿತ ಮೂಲಪ್ರಶ್ನೆಯೊಂದನ್ನು ಗಮನಿಸುವುದು ಇಲ್ಲಿನ ಉದ್ದೇಶ.
ಅಭಿವ್ಯಕ್ತಿಯ ಅವಕಾಶಗಳ ಕೊರತೆ ಅನುಭವಿಸುತ್ತಿದ್ದ ಜನಸಾಮಾನ್ಯರಿಗೆ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳು ಪರ್ಯಾಯ ಮಾಧ್ಯಮಗಳಾದವು ಎಂಬುದರಲ್ಲಿ ಎರಡು ಮಾತೇ ಇಲ್ಲ. ಆದರೆ ಯಾವುದೇ ಸಾಧನದ ಬಳಕೆ ಅರಿತ ಜನ ಅದರ ದುರ್ಬಳಕೆ ಕಲಿಯುವುದಕ್ಕೂ ಹೆಚ್ಚು ದಿನ ತೆಗೆದುಕೊಳ್ಳಲಾರರು ಎಂಬುದು ಅಷ್ಟೇ ನಿಜ. ಸಾಮಾಜಿಕ ಮಾಧ್ಯಮಗಳು ಅನಾಮಧೇಯರು ಹಾಗೂ ವಿಘ್ನ ಸಂತೋಷಿಗಳಿಗೂ ದೊಡ್ಡ ಆಡುಂಬೊಲವಾಗಿರಬಹುದು. ಇವೆರಡಕ್ಕೂ ಹೊರತಾದ ಇನ್ನೊಂದು ಸಂಗತಿ ಬಗ್ಗೆಯೂ ಯೋಚಿಸಬೇಕಾಗಿದೆ.
ಟ್ಯಾಬ್, ಆ್ಯಂಡ್ರಾಯ್ಡ್ ಮೊಬೈಲ್‌ಗಳ ಯುಗದಲ್ಲಿ ವಿಶ್ವವೇ ಅಂಗೈಯಲ್ಲಿ ಬಂದು ಕುಳಿತಿರುವುದು ನಿಜ. ಮಾಹಿತಿಯ ಕೊರತೆ ಎಂಬ ಪ್ರಶ್ನೆಯೇ ಈಗ ಇಲ್ಲ. ಫೇಸ್‌ಬುಕ್, ವಾಟ್ಸ್‌ ಆ್ಯಪ್‌, ಟ್ವಿಟರ್ ಮತ್ತಿತರ ಆ್ಯಪ್‌ಗಳು ಕ್ಷಣಕ್ಷಣಕ್ಕೂ ಹೊಚ್ಚಹೊಸ ಭರಪೂರ ಮಾಹಿತಿಗಳನ್ನು ತಂದು ನಮ್ಮೆದುರು ಸುರಿಯಬಲ್ಲವು. ಆದರೆ ಸಮಸ್ಯೆಯ ಮೂಲವಿರುವುದೇ ಇಲ್ಲಿ. ಏಕೆಂದರೆ ಮನುಷ್ಯನಿಗೆ ಮಾಹಿತಿ ಏಕೆ ಬೇಕು ಎಂಬುದಕ್ಕಿಂತಲೂ ಎಷ್ಟು ಬೇಕು ಎಂಬುದು ಪ್ರಮುಖ ಪ್ರಶ್ನೆ.
ಮಾಹಿತಿ ಪಡೆಯುವ, ಹಂಚಿಕೊಳ್ಳುವ ಸಾಮಾಜಿಕ ಜಾಲತಾಣಗಳ ಒಂದಷ್ಟು ಆ್ಯಪ್‌ಗಳನ್ನು ಆ್ಯಂಡ್ರಾಯ್ಡ್ ಮೊಬೈಲ್‌ನಲ್ಲಿ ಕೂರಿಸಿಕೊಂಡಿರುವ ಮತ್ತು ಅವುಗಳನ್ನು ಸಕ್ರಿಯವಾಗಿ ಬಳಸಿಕೊಳ್ಳುವ ಒಬ್ಬ ವ್ಯಕ್ತಿಯ ಪರಿಸ್ಥಿತಿ  ಊಹಿಸಿಕೊಳ್ಳಿ. ಆತ ಒಂದು ಕಡೆ ವಾಟ್ಸ್‌ ಆ್ಯಪ್ ಸಂದೇಶಗಳ ಮೇಲೆ ಬೆರಳಾಡಿಸುತ್ತಿರುತ್ತಾನೆ; ಬೇಕಾದ್ದೋ ಬೇಡದ್ದೋ ಎಲ್ಲವನ್ನೂ ತೆರೆದು ಅರೆಕ್ಷಣ ಕಣ್ಣಾಡಿಸುತ್ತಾನೆ; ಫೋಟೊ, ವಿಡಿಯೊಗಳಲ್ಲಿ ಒಂದಷ್ಟನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಾನೆ. ಅಷ್ಟರಲ್ಲಿ ಫೇಸ್‌ಬುಕ್ ಹೊಸ ನೋಟಿಫಿಕೇಶನ್ ತೋರಿಸುತ್ತದೆ. ಅವನ ಗಮನ ಅತ್ತ ಕಡೆ ಹೋಗುತ್ತದೆ.
ಇನ್ನೊಂದು ಹೊಸ ಲೋಕದೊಳಕ್ಕೆ ಇಳಿಯುತ್ತಾನೆ. ಎಂದೂ ಮುಗಿಯದ ಸಮುದ್ರದ ಅಲೆಗಳಂತೆ ಆತ ಸ್ಕ್ರೋಲ್ ಮಾಡಿದಷ್ಟೂ ಹೊಸಹೊಸ ವಿಷಯ ಕಾಣಿಸುತ್ತಲೇ ಹೋಗುತ್ತದೆ. ಸಾಕಿನ್ನು ಮುಚ್ಚಿಡೋಣವೆಂದರೂ ಅದ್ಯಾವುದೋ ಹೊಸ ಪೋಸ್ಟ್ ಅವನಿಗೆ ಕುತೂಹಲ ಮೂಡಿಸಿಬಿಡುತ್ತದೆ. ಬೇರೆ ಯೋಚಿಸೋಣ ಎಂದುಕೊಂಡರೆ ಹೊಸ ಇ-ಮೇಲ್‌ಗಳು ಬಂದಿರುತ್ತವೆ. ಟ್ವಿಟರ್‌ನಲ್ಲಿ ನೂರಾರು ಹೊಸ ಸಂದೇಶಗಳು ಕಾಯುತ್ತಿರುತ್ತವೆ. ಎಲ್ಲದರ ಕಡೆ ಒಂದು ಸುತ್ತು ಹೊಡೆಯುವಷ್ಟರಲ್ಲಿ ಮತ್ತೆ ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ನಲ್ಲಿ ಹೊಸದೇನು ಬಂದಿರಬಹುದೆಂಬ ಕುತೂಹಲ. ಅಂತೂ ಈ ಹುಡುಕಾಟದ ವರ್ತುಲಕ್ಕೆ ಕೊನೆಯೇ ಇಲ್ಲ. ಅನೇಕರನ್ನು ಮೆಟ್ಟಿಕೊಂಡಿರುವ ‘ಮಾಹಿತಿ ವ್ಯಸನ’ ಅವರನ್ನು ಅಂತಿಮವಾಗಿ ಎಲ್ಲಿಗೆ ಕೊಂಡೊಯ್ದೀತು ಎಂದು ಯೋಚಿಸಿದರೆ ಆತಂಕವಾಗುತ್ತದೆ.
ಮನುಷ್ಯನಿಗೆ ಮಾಹಿತಿ ಬೇಕು, ಸಂವಹನ ಬೇಕು, ತನ್ನವರೊಂದಿಗೆ ಸ್ನೇಹ, ವಿಚಾರ ವಿನಿಮಯ ಎಲ್ಲ ಬೇಕು. ಈ ಎಲ್ಲವನ್ನೂ ಮೀರಿದ ಏಕಾಂತವೆಂಬುದೂ ಒಂದು ಇದೆ; ಅದು ಬೇಡವೇ? ಎಲ್ಲ ಗದ್ದಲಗಳ ನಡುವೆ ಒಂದು ನಿಮಿಷ ಕಣ್ಮುಚ್ಚಿ ಕುಳಿತು ಏನನ್ನಾದರೂ ಯೋಚಿಸುವ ಅಥವಾ ಯೋಚಿಸದೆ ಇರುವ ಅವಕಾಶ ಬೇಡವೇ? ಒಂದು ಕವಿತೆಯೋ ಕಥೆಯೋ ಬರಹವೋ ಒಡಮೂಡುವುದು ಇಂತಹ ಏಕಾಂತದಲ್ಲಿ. ಹಾಗಂತ ಏಕಾಂತವೆಂಬುದು ಒಬ್ಬ ಬರಹಗಾರನಿಗಷ್ಟೇ ಬೇಕಾಗಿರುವ ಅವಕಾಶ ಅಲ್ಲ. ಪ್ರತಿ ವ್ಯಕ್ತಿಯೂ ತಾನು ನಿರ್ವಹಿಸುತ್ತಿರುವ ಕ್ಷೇತ್ರದಲ್ಲಿ ಸಂತೃಪ್ತಿ ಕಾಣಬೇಕಾದರೆ ಅಲ್ಲೊಂದು ಏಕಾಂತ ಬೇಕೇ ಬೇಕು.
ಅದು ಸೃಜನಶೀಲ ಚಟುವಟಿಕೆಯಲ್ಲಿ ತೊಡಗುವ ಮಂದಿ ಬಯಸುವ ಏಕಾಂತಕ್ಕಿಂತ ವಿಭಿನ್ನವಾಗಿರಬಹುದು ಅಷ್ಟೇ. ಆದರೆ ನಮ್ಮ ಸುತ್ತ ತುಂಬಿ ತುಳುಕುತ್ತಿರುವ ಸಾಮಾಜಿಕ ಮಾಧ್ಯಮಗಳು, ಅವುಗಳನ್ನು ಜನರಿಗೆ ತಲುಪಿಸುವ ಆ್ಯಪ್‌ಗಳು ಪ್ರತಿ ಮನುಷ್ಯನಿಗೂ ಅವಶ್ಯಕತೆಯಿರುವ ಅವನದ್ದೇ ಆದ ವಿಶಿಷ್ಟ ಏಕಾಂತವೊಂದನ್ನು ಕಸಿದುಕೊಂಡಿರುವುದು ಒಂದು ಗಂಭೀರ ವಿಚಾರ. ಈ ಮಾಹಿತಿಯ ಮಾಧ್ಯಮಗಳು ಏಕಾಏಕಿ ಕೈಗೆ ಬಂದಾಗ ಹೊಸದೊಂದು ಲೋಕ ಪ್ರವೇಶಿಸಿದಂತೆ, ಅಭಿವ್ಯಕ್ತಿಯ ಹೊಸ ದಾರಿಗಳು ತೆರೆದುಕೊಂಡಂತೆ ಹಲವರಿಗೆ ಅನ್ನಿಸಿದರೂ ಇವೆಲ್ಲವೂ ತಾನು ಬಯಸಿದ್ದಕ್ಕಿಂತ ಹೆಚ್ಚಾಯಿತು ಎಂದು ಒಂದು ಹಂತದಲ್ಲಿ ಪ್ರಾಮಾಣಿಕವಾಗಿ ಅನ್ನಿಸದೆ ಇರದು.
ಜ್ಞಾನದ ಓಟದಲ್ಲಿ ವಿವೇಕವನ್ನೂ, ಮಾಹಿತಿಯ ಮಹಾಪೂರದಲ್ಲಿ ಜ್ಞಾನವನ್ನೂ ನಾವು ಕಳೆದುಕೊಂಡಿದ್ದೇವೆಯೇ ಎಂದು ಕೇಳಿದ್ದ ಪ್ರಸಿದ್ಧ ಇಂಗ್ಲಿಷ್ ಕವಿ ಟಿ.ಎಸ್.ಎಲಿಯಟ್ ಅವರ ಪ್ರಶ್ನೆ, ಸಾಮಾಜಿಕ ಮಾಧ್ಯಮಗಳ ಈ ಕಾಲದಲ್ಲಿ ಅತ್ಯಂತ ಪ್ರಸ್ತುತ ಎನಿಸುತ್ತದೆ. ಇಂಟರ್ನೆಟ್ ಭೂಮಿ ಮೇಲೆ ಕಣ್ತೆರೆಯುವ ಹತ್ತಾರು ವರ್ಷಗಳ ಹಿಂದೆಯೇ ಗರ್ಟ್ರೂಡ್ ಸ್ಟೈನ್ ಎಂಬ ಅಮೆರಿಕನ್ ಬರಹಗಾರ್ತಿ ಒಂದು ಮಾತು ಹೇಳಿದ್ದರು: ‘ಪ್ರತಿದಿನ ಪ್ರತಿಯೊಬ್ಬರೂ ಎಷ್ಟೊಂದು ಮಾಹಿತಿಗಳನ್ನು ಪಡೆಯುತ್ತಾರೆಂದರೆ ಅವುಗಳ ಭರಾಟೆಯಲ್ಲಿ ಅವರು ತಮ್ಮ ಸಾಮಾನ್ಯ ವಿವೇಕವನ್ನೇ ಕಳೆದುಕೊಂಡುಬಿಡುತ್ತಾರೆ’.
ಇನ್ನು ಮಾಹಿತಿ ತಂತ್ರಜ್ಞಾನದ ತುರೀಯಾವಸ್ಥೆಯ ಈ ಕಾಲದಲ್ಲಿ ಜನರ ವಿವೇಕಕ್ಕೆ ಬಡಿಯುವ ಗ್ರಹಣದ ಬಗ್ಗೆ ನಾವು ಯೋಚಿಸಬೇಡವೇ? ಜ್ಞಾನಾಧಾರಿತ ಅರ್ಥ ವ್ಯವಸ್ಥೆಯ ಈ ಕಾಲದಲ್ಲಿ ಮಾಹಿತಿಯೇ ಸರ್ವಸ್ವ ಎಂಬ ಭಾವನೆ ಅತಿರೇಕದ್ದೇನೂ ಅಲ್ಲ. ಅದಕ್ಕೇ, ಅಮೆರಿಕದ ಉಪಾಧ್ಯಕ್ಷರಾಗಿದ್ದ ಅಲ್ ಗೋರೆ ಇಂಟರ್ನೆಟ್‌ ಅನ್ನು ‘ಇನ್‌ಫರ್ಮೇಶನ್‌ ಸೂಪರ್‌ಹೈವೇ’ ಎಂದಾಗ ಜಗತ್ತು  ಕಣ್ಣರಳಿಸಿ ನೋಡಿದ್ದು. ಆದರೆ ಬದುಕೆಂದರೆ ಬರೀ ಮಾಹಿತಿಯಷ್ಟೇ ಅಲ್ಲ. ಎಲ್ಲದಕ್ಕೂ ಒಂದು ಮಿತಿಯಿದೆ. ಎಷ್ಟು ಹಸಿದವನಿಗೂ ಹೊಟ್ಟೆ ತುಂಬಿದ ಮೇಲೆ ಮೃಷ್ಟಾನ್ನ ಸುರಿದರೂ ಅದು ಬೇಡ. ಉಪ್ಪಿಗಿಂತ ರುಚಿ ಇನ್ನಿಲ್ಲವಾದರೂ ಅದನ್ನೇ ಊಟ ಮಾಡುವುದಕ್ಕಾಗದು.
ಮಾಹಿತಿಯ ಮಹಾಪೂರ ಕೆಲವೊಮ್ಮೆ ಅನುಕೂಲಕ್ಕಿಂತಲೂ ಅಧ್ವಾನವನ್ನೇ ಉಂಟುಮಾಡೀತು ಎಂಬ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ‘ಇನ್‌ಫರ್ಮೇಶನ್‌ ಗ್ಲಟ್’ ಅಥವಾ ‘ಇನ್‌ಫರ್ಮೇಶನ್‌ ಓವರ್‌ಲೋಡ್’ ಕುರಿತು ನಮ್ಮಲ್ಲೂ ಗಹನವಾದ ಚರ್ಚೆಗಳಾಗಬೇಕಿದೆ. 
ಹೈವೇಗಳು, ಸೂಪರ್‌ಹೈವೇಗಳು ಇದ್ದರೆ ಒಳ್ಳೆಯದೇ. ಆದರೆ ಕೆಲವೊಮ್ಮೆ ಬರೀ ಹೆದ್ದಾರಿಗಳೇ ಸಾಕಾಗುವುದಿಲ್ಲ. ಒಬ್ಬರೇ ಧ್ಯಾನಸ್ಥವಾಗಿ ನಡೆಯುವುದಕ್ಕೆ  ಸಣ್ಣ ಕಾಲುಹಾದಿಯೂ ಬೇಕಾಗುತ್ತದೆ, ಅಲ್ಲವೇ?

ಶುಕ್ರವಾರ, ಅಕ್ಟೋಬರ್ 2, 2015

ಅಭಿನಂದನೆಗೊಂದು ಪ್ರಸ್ತಾವನೆ

(ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಪ್ರಾಧ್ಯಾಪಕ, ಜನಪ್ರಿಯ ನುಡಿಚಿತ್ರಕಾರ ಡಾ. ನಿರಂಜನ ವಾನಳ್ಳಿಯವರ 50ನೇ ಜನ್ಮದಿನದ ಸಂದರ್ಭದಲ್ಲಿ ಅರ್ಪಿಸಲಾದ ಗೌರವ ಗ್ರಂಥ 'ನುಡಿರಂಜನ'ಕ್ಕೆ ಬರೆದ ಪ್ರಸ್ತಾವನೆ)

ರಕ್ಷಾಪುಟ ವಿನ್ಯಾಸ: ಲಕ್ಷ್ಮೀಕಾಂತ್ ಬಸ್ರೀಕಟ್ಟೆ
ಅರ್ಧ ಶತಮಾನವೆಂಬುದು ಈ ಸೂಪರ್ ಸಾನಿಕ್ ಯುಗದಲ್ಲಿ ಬಹುದೊಡ್ಡ ಅವಧಿ. ನಿಮಿಷ-ಗಂಟೆಗಳ ಅಂತರದಲ್ಲಿ ಪ್ರಪಂಚದ ಸ್ಥಿತಿಗತಿಗಳೇ ಬದಲಾಗುವ ಕಾಲ ಇದು. ಹೀಗಾಗಿ ಒಬ್ಬ ವ್ಯಕ್ತಿಯ ಬದುಕಿನಲ್ಲಿ ಐವತ್ತು ವರ್ಷವೆಂಬುದು ಅತ್ಯಂತ ಮಹತ್ವದ ಮತ್ತು ಸಾಕಷ್ಟು ದೀರ್ಘವಾದ ಪ್ರಯಾಣವೇ ಹೌದು.

ನಿರಂಜನ ವಾನಳ್ಳಿಯವರಿಗೆ ಸಂಬಂಧಿಸಿದಂತೆ ಹೀಗೊಂದು ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ ಎಂದಾಗ ಸಂಭ್ರಮಿಸಿದವರು ನೂರಾರು ಮಂದಿ. 'ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಶುಭವಾಗಲಿ' ಎಂದು ಬೆನ್ನು ತಟ್ಟಿದವರು ಹಲವರು. 'ಈಗಲೇ ಸನ್ಮಾನ ಮಾಡುತ್ತೀರಾ?' ಎಂದು ನೇರವಾಗೇ ಕೇಳಿದವರು ಕೆಲವರು ಇದ್ದಾರೆ. ಅವರಿಗೆ ನಮ್ಮ ಪ್ರಶ್ನೆ ಅಥವಾ ಉತ್ತರ ಇಷ್ಟೇ: ಒಬ್ಬ ವ್ಯಕ್ತಿಯನ್ನು ಅಭಿನಂದಿಸುವುದಕ್ಕೆ ಸೂಕ್ತವಾದದ್ದು ಎಂಬ ಸಮಯವೊಂದು ಇದೆಯೇ?

ಒಬ್ಬ ವ್ಯಕ್ತಿ ಸಮಾಜಕ್ಕೆ ಒಳಿತಾಗುವ ಕೆಲಸ ಮಾಡುತ್ತಿದ್ದಾಗ ಅದರ ಬಗ್ಗೆ ದಿವ್ಯಮೌನ ವಹಿಸುವುದು, ಇಲ್ಲವೇ ಸಾಧ್ಯವಾದಷ್ಟು ಆತನ ಕಾಲೆಳೆಯಲು ಯತ್ನಿಸುವುದು, ಆತ ಕಾಲವಾದ ಮೇಲೆ ಅವನನ್ನು ತಿಂಗಳುಗಟ್ಟಲೆ ಹೊಗಳುವುದು, ಮಣಗಟ್ಟಲೆ ಬರೆಯುವುದು ನಮ್ಮ ಸಮಾಜದ ಅವಿಭಾಜ್ಯ ಲಕ್ಷಣವಾಗಿಬಿಟ್ಟಿದೆ - ಹೀಗೆಂದು ಹೇಳಿದರೆ ಕೊಂಚ ನಿಷ್ಠುರದ ಮಾತಾಗಬಹುದೇನೋ? ಆದರೆ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರ ತೀರಾ ಇತ್ತೀಚಿನ ಉದಾಹರಣೆಯೂ ಸೇರಿದಂತೆ ನೂರಾರು ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ.

ಮಾಡಬೇಕಾದ್ದನ್ನು ಮಾಡಬೇಕಾದಾಗ ಮಾಡದೆ ಸಮಯ ಮೀರಿದ ಮೇಲೆ 'ಇದನ್ನೆಲ್ಲ ಸ್ವಲ್ಪ ಮೊದಲೇ ಮಾಡಬೇಕಿತ್ತು' ಎಂಬ ಬುದ್ಧಿವಂತಿಕೆಯ ಮಾತಾಡುವವರಿಗೂ ನಮ್ಮಲ್ಲಿ ಕಡಿಮೆಯಿಲ್ಲ. ಸಾಧಕನೊಬ್ಬ ತನ್ನ ಜೀವನದ ನಿರ್ಣಾಯಕ ಹಂತದಲ್ಲಿರುವಾಗಲೇ ಆತನಿಗೊಂದು ಮನಃಪೂರ್ವಕ ಅಭಿನಂದನೆ ಹೇಳಿ 'ನಿಮ್ಮಿಂದ ನಮ್ಮ ಸಮಾಜ ಇನ್ನೂ ಹೆಚ್ಚಿನದನ್ನು ಬಯಸುತ್ತದೆ' ಎಂದು ನೆನಪಿಸುವುದರಲ್ಲಿ ತಪ್ಪೇನಿದೆ?

ಪ್ರಶಸ್ತಿ-ಪುರಸ್ಕಾರಗಳನ್ನು ಅರ್ಜಿ ಹಾಕಿಯೇ ಪಡೆದುಕೊಳ್ಳಬೇಕಾದ ಈ ನಾಡಿನಲ್ಲಿ ಒಂದಷ್ಟು ಮಂದಿ ತಾವಾಗಿಯೇ ಆಸಕ್ತಿ ವಹಿಸಿ ತಮ್ಮೆದುರಿನ ಒಬ್ಬ ಸಾಧಕನಿಗೆ ಗೌರವ ಸಲ್ಲಿಸುತ್ತಾರೆಂದರೆ ಜನ ಅನುಮಾನಪಡುವುದೂ ಸಹಜವಾಗಿಯೇ ಇದೆ.

ಅಂದಹಾಗೆ, ಈ ಗೌರವ ಗ್ರಂಥವನ್ನು ರೂಪಿಸಿರುವುದಕ್ಕೆ ಕಾರಣಗಳನ್ನು ಪಟ್ಟಿ ಮಾಡುವುದು ಈ ಪ್ರಸ್ತಾವನೆಯ ಉದ್ದೇಶ ಅಲ್ಲ. ಈ ಎಲ್ಲ ಕಾರಣಗಳಿಗಾಗಿ ನಿರಂಜನ ವಾನಳ್ಳಿಯವರನ್ನು ಅಭಿನಂದಿಸುತ್ತಿದ್ದೇವೆ ಎಂದು ಹೇಳುವುದು ವಾಸ್ತವವಾಗಿ ಅವರನ್ನು ಅಗೌರವಿಸಿದಂತೆಯೇ. ನಾಲ್ಕು ಅರ್ಥಪೂರ್ಣ ಮಾತುಗಳನ್ನು ಆಡುವುದಕ್ಕೋ ಬರೆಯುವುದಕ್ಕೋ ಬಾರದ ಕಾಲೇಜು-ವಿಶ್ವವಿದ್ಯಾನಿಲಯಗಳ ಅಧ್ಯಾಪಕರು ನೂರಿನ್ನೂರು ಪುಟಗಳ ಬಯೋಡಾಟಾ ಹಿಡಿದುಕೊಂಡು ಓಡಾಡುವುದುನ್ನು ನಾವು ಕಾಣುತ್ತೇವೆ. ಅವರ ವ್ಯಕ್ತಿತ್ವಕ್ಕೂ ಆ ಬಯೋಡಾಟಾಕ್ಕೂ ಸಂಬಂಧವೇ ಇರುವುದಿಲ್ಲ.

ನಿರಂಜನ ವಾನಳ್ಳಿಯವರು ಬಯೋಡಾಟಾದ ಚೌಕಟ್ಟನ್ನು ಮೀರಿ ನಿಂತವರು. ಅವರು ಬರೆದಿರುವ ನೂರಾರು ಲೇಖನಗಳು, ಹತ್ತಾರು ಪುಸ್ತಕಗಳು, ನಡೆಸಿರುವ ತರಬೇತಿ ಶಿಬಿರಗಳು, ನಿರ್ವಹಿಸಿರುವ ಆಡಳಿತಾತ್ಮಕ ಜವಾಬ್ದಾರಿಗಳು- ಇವನ್ನೆಲ್ಲ ಪಟ್ಟಿ ಮಾಡಬಹುದು. ತಮ್ಮ ಹೃದ್ಯ ಬರೆವಣಿಗೆಯ ಮೂಲಕ ಅವರು ತಲುಪಿರುವ ಸಾವಿರಾರು ಜನರ ಮನಸ್ಸಿನ ಮಿಡಿತವನ್ನು ಪಟ್ಟಿ ಮಾಡಬಹುದೇ? ಅವರಿಂದ ತರಬೇತಿ, ಪ್ರೋತ್ಸಾಹ ಪಡೆದು ಬರೆವಣಿಗೆಯಲ್ಲಿ ಬದುಕು ಕಂಡುಕೊಂಡ ನೂರಾರು ಮಂದಿಯ ಮನಸ್ಸಿನ ಕೃತಜ್ಞತಾಭಾವವನ್ನು ಪಟ್ಟಿ ಮಾಡಬಹುದೇ? ನೀವು ಮೇಷ್ಟ್ರಾಗಿ ಸಿಕ್ಕಿದ್ದು ನಮ್ಮ ಪುಣ್ಯ ಸಾರ್ ಎಂದು ಹೇಳುವ ಸಾಲುಸಾಲು ವಿದ್ಯಾರ್ಥಿಗಳ ಧನ್ಯತೆಯ ಕ್ಷಣಗಳನ್ನು ಪಟ್ಟಿ ಮಾಡಬಹುದೇ?

ವಿಶ್ವವಿದ್ಯಾನಿಲಯಗಳ ಅಧ್ಯಾಪಕರುಗಳೆಂದರೆ ಜನ ಅನುಮಾನದಿಂದ ನೋಡುವ ಕಾಲ ಬಂದಿದೆ. ಅಧ್ಯಾಪನದಿಂದ ತೊಡಗಿ ಸಂಶೋಧನೆಯವರೆಗೆ ಎಲ್ಲವನ್ನೂ ಕಾಗದಪತ್ರಗಳಲ್ಲಿ ಮಾತ್ರ ತೋರಿಸುವ, ವಿದ್ಯಾರ್ಥಿಗಳನ್ನು ಮಾರುದೂರದಲ್ಲಿಟ್ಟು ತಮ್ಮ ಸ್ಟೇಟಸ್ ಮತ್ತು ಬುದ್ಧಿವಂತಿಕೆಯನ್ನು ಕಾಪಾಡಿಕೊಳ್ಳುವ, ಕೆಲವೇ ವಿದ್ಯಾರ್ಥಿಗಳನ್ನು/ಸಂಶೋಧನಾರ್ಥಿಗಳನ್ನು ಮಾತ್ರ ತೀರಾ ಹತ್ತಿರ ಮಾಡಿಕೊಂಡು ಆಮೇಲೆ ಲೆಕ್ಕಾಚಾರ ತಪ್ಪಿ ಮಾಧ್ಯಮಗಳಲ್ಲಿ ಸುದ್ದಿಯಾಗಿ ಜನಸಾಮಾನ್ಯರ ಶಾಪಕ್ಕೆ ತುತ್ತಾಗುವ, ಜಾತಿ ರಾಜಕೀಯ ಮಾಡುತ್ತಲೇ ತಮ್ಮ ಆಯಸ್ಸನ್ನು ಕಳೆದುಬಿಡುವ ಅಧ್ಯಾಪಕರೇ ನಮ್ಮ ವಿ.ವಿ.ಗಳಲ್ಲಿ ಹಲವು ಮಂದಿ ಇರುವಾಗ ಈ ಅನುಮಾನ ಅಮಾನುಷವೂ ಅಲ್ಲ, ಅತಿರಂಜಿತವೂ ಅಲ್ಲ. ನಿರಂಜನ ವಾನಳ್ಳಿಯವರು ಯೂನಿವರ್ಸಿಟಿಗಳ ಇಂತಹ ಅನುಮಾನಾಸ್ಪದ ಗೋಡೆಗಳಿಗಿಂತಲೂ ಆಚೆ ನಿಲ್ಲುವ ವ್ಯಕ್ತಿತ್ವ ಹೊಂದಿರುವವರು.

ವಿದ್ಯಾರ್ಥಿಗಳೆಂದರೆ ತಮ್ಮ ದಿವ್ಯಜ್ಞಾನವನ್ನು ಸ್ವೀಕರಿಸಿ ಒಪ್ಪಿಕೊಂಡು ಹೋಗಬೇಕಾದ ಜಡ ವಸ್ತುಗಳೆಂಬ ಭಾವನೆಯನ್ನು ಎಂದೂ ಹೊಂದಿದವರಲ್ಲ ವಾನಳ್ಳಿಯವರು. ಅವರು ವಿದ್ಯಾರ್ಥಿಗಳ ನಡುವಿನ ಅಧ್ಯಾಪಕರು. ತಾವೂ ಬರೆಯುತ್ತ ಉಳಿದವರನ್ನೂ ಬರೆಸಿದವರು; ತಾವೂ ಬೆಳೆಯುತ್ತಲೇ ತಮ್ಮೊಂದಿಗಿನವರನ್ನೂ ಬೆಳೆಸಿದವರು. ಮುಖ್ಯವಾಗಿ ಅವರು ತಮ್ಮ ಬೇರುಗಳನ್ನು ಮರೆತಿಲ್ಲ. ನೆಲವನ್ನು ಬಿಟ್ಟು ಮೇಲಕ್ಕೇರಿಲ್ಲ. ಅದಕ್ಕೇ ಅವರು ನಮ್ಮ ಮನಸ್ಸಿನಲ್ಲಿ ತುಂಬ ಎತ್ತರವನ್ನು ತಲುಪಿದ್ದಾರೆ. ಅವರ ಗುರುಗಳ, ಸಹಪಾಠಿಗಳ, ಸಮಕಾಲೀನರ, ಸ್ನೇಹಿತರ, ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಅದಕ್ಕೆ ಈ ಪುಸ್ತಕದಲ್ಲಿರುವ ಬರೆಹಗಳಿಗಿಂತ ಹೆಚ್ಚಿನ ಸಾಕ್ಷಿ ಬೇಕಾಗಿಲ್ಲ.

ಮಾಧ್ಯಮರಂಗ ಮತ್ತು ಮಾಧ್ಯಮ ಶಿಕ್ಷಣ ಹೊರಳು ಹಾದಿಯಲ್ಲಿವೆ. ಮಾಧ್ಯಮರಂಗದ ಬಗ್ಗೆ ಮಾತನಾಡುವುದು ಈ ಪುಸ್ತಕದ ವ್ಯಾಪ್ತಿಗೆ ಮೀರಿದ್ದು. ಆದರೆ ಮಾಧ್ಯಮ ಶಿಕ್ಷಣದ ಬಗ್ಗೆ ಒಂದು ಮಾತು ಬರೆಯುವುದು ಅಪ್ರಸ್ತುತ ಆಗಲಾರದು. ಮಾಧ್ಯಮ ಶಿಕ್ಷಣ ಎರಡು ವೈಪರೀತ್ಯಗಳ ನಡುವೆ ಇದೆ. ಸರ್ಕಾರಿ ಕಾಲೇಜುಗಳು, ವಿಶ್ವವಿದ್ಯಾನಿಲಯಗಳಲ್ಲಿ ಮಾಧ್ಯಮ ಶಿಕ್ಷಣಕ್ಕೆ ಅಗತ್ಯವಿರುವ ಮೂಲಕಸೌಕರ್ಯ ಹಾಗೂ ಪ್ರಾಯೋಗಿಕ ಜ್ಞಾನವುಳ್ಳ ನುರಿತ ಅಧ್ಯಾಪಕರ ಕೊರತೆಯಾದರೆ, ಇವೆರಡೂ ಇರುವ ಒಂದಷ್ಟು ಖಾಸಗಿ ಸಂಸ್ಥೆಗಳು ತಾವು ನಿರೀಕ್ಷಿಸುವ ಲಕ್ಷಗಟ್ಟಲೆ ಶುಲ್ಕದಿಂದಾಗಿ ಜನಸಾಮಾನ್ಯರಿಗೆ ಕನ್ನಡಿಯ ಗಂಟುಗಳಾಗಿವೆ. ಇವೆಲ್ಲದರ ನಡುವೆ ಮಾಧ್ಯಮ ಶಿಕ್ಷಣದ ಸ್ವರೂಪ ಏನೆಂಬುದರ ಬಗೆಗೇ ಗೊಂದಲಗಳು ಬಗೆಹರಿದಿಲ್ಲ. ಒಂದೆಡೆ, ಪ್ರಾಯೋಗಿಕ ತಿಳುವಳಿಕೆಯೇ ಇಲ್ಲದೆ ವಿಶ್ವವಿದ್ಯಾನಿಲಯಗಳಿಂದ ಹೊರಬರುವ ಈ ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ನಾವೇನು ಮಾಡಲಿ ಎಂದು ಪತ್ರಿಕಾ ಕಚೇರಿಗಳು ಕೇಳುತ್ತಿವೆ. ಇನ್ನೊಂದೆಡೆ, 'We are not here to produce journalists; we are here to produce researchers'  ಎಂದು ಪ್ರಾಧ್ಯಾಪಕರು ಹೇಳುವುದನ್ನು ನಾನು ಕೇಳಿದ್ದೇನೆ. ನಮ್ಮ ವಿಶ್ವವಿದ್ಯಾನಿಲಯಗಳಿಂದ ಪ್ರಾಮಾಣಿಕ ಹಾಗೂ ಶ್ರೇಷ್ಠ ಸಂಶೋಧಕರು ಹೊರಬರುವುದಿದ್ದರೆ ಅದು ನೂರಕ್ಕೆ ನೂರು ಸ್ವಾಗತಾರ್ಹ, ಆದರೆ ಪತ್ರಿಕೋದ್ಯಮ ವಿಭಾಗಗಳಿಂದ ಕೇವಲ ಸಂಶೋಧಕರು ಹೊರಬಂದರೆ ಸಾಕೇ? ಹಾಗಾದರೆ ಮಾಧ್ಯಮ ವಿಭಾಗ ಎಂದು ಹೆಸರಿಟ್ಟುಕೊಂಡು ಮಾಧ್ಯಮರಂಗಕ್ಕೆ ನಾವು ನೀಡುವ ಕೊಡುಗೆ ಏನು?

ಸಿದ್ಧಾಂತ ಮತ್ತು ಪ್ರಯೋಗದ ನಡುವೆ ನಾವೊಂದು ಸಮನ್ವಯತೆ ಸಾಧಿಸಲೇಬೇಕಾಗಿದೆ. ಪತ್ರಿಕೋದ್ಯಮದ ಉನ್ನತ ಶಿಕ್ಷಣ ಬಯಸಿ ಹೋಗುವವರಲ್ಲಿ ಸಂಶೋಧನೆ, ಪ್ರಯೋಗ - ಹೀಗೆ ವಿಭಿನ್ನ ಆಸಕ್ತಿ ಹೊಂದಿರುವವರು ಇರಬಹುದು. ಅವರ ಆಸಕ್ತಿ ಅಭಿಲಾಷೆಗಳನ್ನು ಗಮನಿಸಿಕೊಂಡು ಅವರನ್ನು ಮುನ್ನಡೆಸುವ ಕೆಲಸವನ್ನು ಅಧ್ಯಾಪಕರು ಮಾಡಬೇಕಿದೆ. ವಿದ್ಯಾರ್ಥಿಯ ಆಸಕ್ತಿಯ ಕ್ಷೇತ್ರವನ್ನು ಗಮನಿಸಿಕೊಂಡು ಆತನನ್ನು ಬೆಳೆಯಗೊಡುವ ಪದ್ಧತಿ ಬರಬೇಕೆಂಬುದು ಎಲ್ಲಾ ಕಾಲಕ್ಕೂ ಎಲ್ಲ ದೇಶಗಳಿಗೂ ಸಲ್ಲುವ ವಾದ. ಶಿಕ್ಷಣ ವ್ಯಕ್ತಿಯ ಬದುಕು ರೂಪಿಸುವಂಥದ್ದಾಗಬೇಕೆಂಬ ಮಾತನ್ನು ಬಹುಶಃ ಯಾರೂ ಅಲ್ಲಗಳೆಯಲಾರರು.

***

ಈ ಒಟ್ಟಾರೆ ಹಿನ್ನೆಲೆಯಲ್ಲಿ ರೂಪುಗೊಂಡಿರುವುದು 'ನುಡಿರಂಜನ’ ಎಂಬ ಈ ಅಭಿನಂದನ ಗ್ರಂಥ. ಐವತ್ತೇ ವರ್ಷಕ್ಕೆ ಈ ಕೆಲಸ ಯಾಕೆ, ಅರುವತ್ತಕ್ಕೆ ಮಾಡಿದರೆ ಸಾಕೇ ಎಂಬಂತಹ ಗೊಂದಲಗಳು ನಮ್ಮ ಮನಸ್ಸಿನಲ್ಲಿ ಇಲ್ಲ. ನಮ್ಮ ಕಣ್ಣ ಮುಂದಿರುವುದು ಅವರ ನಿರ್ಮಲ ವ್ಯಕ್ತಿತ್ವ ಮತ್ತು ಆ ವ್ಯಕ್ತಿತ್ವವನ್ನು ಗೌರವಿಸಬೇಕೆನ್ನುವ ಭಾವ; ಅವರಿಂದ ಪತ್ರಿಕೋದ್ಯಮ ಹಾಗೂ ಪತ್ರಿಕೋದ್ಯಮ ಶಿಕ್ಷಣಕ್ಕೆ ಇನ್ನಷ್ಟನ್ನು ನಿರೀಕ್ಷಿಸುವ ಸಣ್ಣ ಸ್ವಾರ್ಥ; ಮೇಷ್ಟ್ರು ಹೇಗಿದ್ದರೆ ವಿದ್ಯಾರ್ಥಿಗಳು ಅವರನ್ನು ನೆನಪಿಸಿಕೊಳ್ಳುತ್ತಾರೆ ಎಂಬುದಕ್ಕೂ ಇದೊಂದು ಸಂಕೇತವಾಗಿ ಉಳಿಯಬಹುದು ಎಂಬ ಆಸೆ.

ಅನುಬಂಧವೂ ಸೇರಿ ಈ ಪುಸ್ತಕದಲ್ಲಿ ಐದು ವಿಭಾಗಗಳಿವೆ. ವಾನಳ್ಳಿಯವರ ಗುರುಗಳು, ಗೆಳೆಯರು, ಸಮಕಾಲೀನರು, ವಿದ್ಯಾರ್ಥಿಗಳು ವಾನಳ್ಳಿಯವರ ಕುರಿತಾಗಿ ಬರೆದ ಲೇಖನಗಳು ಮೊದಲ ಭಾಗ 'ಬಿಂಬ'ದಲ್ಲಿ ಇದೆ. ಎರಡನೇ ಭಾಗ 'ದೃಷ್ಟಿ'ಯಲ್ಲಿ ವಾನಳ್ಳಿಯವರು ಅಂಕಣಕಾರರಾಗಿ, ನುಡಿಚಿತ್ರಕಾರರಾಗಿ ಮಾಡಿದ ಬರೆವಣಿಗೆ ಬಗೆಗಿನ ವಿಶ್ಲೇಷಣೆಯಿದೆ. ಮೂರನೇ ಭಾಗ 'ಸೃಷ್ಟಿ'ಯಲ್ಲಿ ಅವರ ಕೆಲವು ಆಯ್ದ ನುಡಿಚಿತ್ರ ಹಾಗೂ ಪ್ರಬಂಧಗಳಿವೆ. ಮೂವತ್ತು ವರ್ಷಗಳ ಫ್ರೀಲಾನ್ಸ್ ಪತ್ರಿಕೋದ್ಯಮದಲ್ಲಿ ಅವರು ಬರೆದಿರುವ ನೂರಾರು ಲೇಖನಗಳ ಪೈಕಿ ಇಲ್ಲಿ ಬಳಸಿಕೊಂಡವು ಬೆರಳೆಣಿಕೆಯಷ್ಟು. ಇಲ್ಲಿ ಸಂಕಲಿಸಿದ್ದಕ್ಕಿಂತ ಉತ್ತಮವಾದ ಬರೆಹಗಳೂ ಅವರ ಕೃತಿಗಳಲ್ಲಿ ಕಾಣಸಿಗಬಹುದು. ಇವು ಕೇವಲ ಪ್ರಾತಿನಿಧಿಕ. ನಾಲ್ಕನೇ ಭಾಗ ಚಿತ್ರಸಂಪುಟ. ಅನುಬಂಧದಲ್ಲಿ ವಾನಳ್ಳಿಯವರ ಈವರೆಗಿನ ಕೃತಿಗಳ ಸಂಕ್ಷಿಪ್ತ ಪರಿಚಯ ಮಾಡುವ ಪ್ರಯತ್ನ ಇದೆ.

'ಡಾ. ನಿರಂಜನ ವಾನಳ್ಳಿ ಅಭಿನಂದನ ಸಮಿತಿ'ಯ ಗೆಳೆಯರು ವಯಸ್ಸು-ಅನುಭವ ಎರಡರಲ್ಲೂ ಕಿರಿಯನಾಗಿರುವ ನನ್ನ ಮೇಲೆ ವಿಶ್ವಾಸ ಇಟ್ಟು ಈ ಪುಸ್ತಕವನ್ನು ಸಂಪಾದಿಸುವ ಜವಾಬ್ದಾರಿ ಕೊಟ್ಟಿದ್ದಾರೆ. ಅವರಿಗೆ ನನ್ನ ಮೊದಲ ಕೃತಜ್ಞತೆ ಸಲ್ಲಬೇಕು. ಈ ಕೃತಿಯೇನಾದರೂ ಚೆನ್ನಾಗಿ ಮೂಡಿಬಂದಿದ್ದರೆ ಅದರ ಮನ್ನಣೆಗಳು ಇಡೀ ಸಮಿತಿಗೆ ಸಲ್ಲಬೇಕು. ಈ ಪುಸ್ತಕದ ಕೆಲಸದಲ್ಲಿ ಕೈಜೋಡಿಸಿದವರು ತುಂಬ ಮಂದಿ ಇದ್ದಾರೆ. ಮುಖ್ಯವಾಗಿ ನನ್ನ ಗುರುಗಳಾದ ಶ್ರೀ ಭಾಸ್ಕರ ಹೆಗಡೆ, ಗೆಳೆಯರಾದ ಡಾ. ಮಾಧವ, ಚಂದ್ರಮೋಹನ ಮರಾಠೆ, ಡಾ. ಎಚ್. ಜಿ. ಶ್ರೀಧರ, ಶ್ರೀಶ ಪುಣಚ, ಮೌಲ್ಯ ಜೀವನ್, ರಾಕೇಶ ಕುಮಾರ್ ಕಮ್ಮಜೆ, ಜೀವನ ಸಂಗಾತಿ ಆರತಿ ಪಟ್ರಮೆ ಎಲ್ಲರೂ ನನಗೆ ಹೆಗಲೆಣೆಯಾಗಿ ಕೆಲಸ ಮಾಡಿದ್ದಾರೆ. ಗುರುಗಳ ಅಭಿನಂದನೆಯ ಪುಸ್ತಕ ಎಂಬ ಪ್ರೀತಿಯಿಂದ ಗೆಳೆಯ ಲಕ್ಷ್ಮೀಕಾಂತ್ ಬಸ್ರೀಕಟ್ಟೆ ದೂರದ ಮಸ್ಕತ್‌ನಿಂದಲೇ ಸುಂದರ ರಕ್ಷಾಪುಟ ಮಾಡಿ ಕಳಿಸಿದ್ದಾರೆ. ಅವರ ಸಹಾಯವನ್ನೆಲ್ಲ ಈ ಸಂದರ್ಭ ಸ್ಮರಿಸಿಕೊಳ್ಳುತ್ತೇನೆ. ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಬಿ. ಎಸ್. ಕುಲಾಲ್ ಹಾಗೂ ಸರ್ವಸದಸ್ಯರಿಗೆ ವಂದನೆಗಳು.

ವಾನಳ್ಳಿಯವರ ಮೇಲಿನ ಪ್ರೀತಿ-ಅಭಿಮಾನಗಳಿಂದ ಕೇವಲ ಒಂದು ಇ-ಮೇಲ್ ಅಥವಾ ಒಂದು ನಿಮಿಷದ ದೂರವಾಣಿ ಕರೆಗೆ ಸ್ಪಂದಿಸಿ ಸಕಾಲದಲ್ಲಿ ಬರೆಹಗಳನ್ನು ತಲುಪಿಸಿದ ಎಲ್ಲ ಲೇಖಕರಿಗೂ ಪ್ರತ್ಯೇಕ ವಂದನೆಗಳು. ಈ ನಿಮಿತ್ತದಿಂದ ಅನೇಕ ಮಂದಿ ಹಿರಿಯರ ಸಂಪರ್ಕ ನನಗೆ ದೊರೆತಿರುವುದು ಒಂದು ಸುಯೋಗ. ವಿಚಾರ ಗೊತ್ತಾಗಿದ್ದರೆ ನಾವೂ ಬರೆಯುತ್ತಿದ್ದೆವು ಎಂದುಕೊಳ್ಳುವ ವಾನಳ್ಳಿಯವರ ಇನ್ನೂ ಹಲವು ಒಡನಾಡಿಗಳು, ವಿದ್ಯಾರ್ಥಿಗಳು ಇರಬಹುದು. ಅವರೆಲ್ಲರನ್ನು ಸಂಪರ್ಕಿಸಲು ಸಾಧ್ಯವಾಗದ್ದು ನಮ್ಮ ಮಿತಿ.

ಅಂದಹಾಗೆ, 'ನುಡಿರಂಜನ' ಎಂಬ ಈ ಪದದ ಕಾಪಿರೈಟು ಹಿರಿಯ ಪತ್ರಕರ್ತರೂ ಗುರುಸಮಾನರೂ ಆಗಿರುವ ಶ್ರೀ ನಾಗೇಶ ಹೆಗಡೆಯವರದ್ದು. ಅವರ ಲೇಖನದ ಶೀರ್ಷಿಕೆ ನೋಡಿದ ಕೂಡಲೇ ಅದರ ಒಂದು ಪದವನ್ನು ಈ ಪುಸ್ತಕದ ಶೀರ್ಷಿಕೆಯಾಗಿ ಬಳಸಿಕೊಳ್ಳಬೇಕೆಂಬ ತಹತಹ ಉಂಟಾಯಿತು. ಹೀಗಾಗಿ ಅವರ ಅನುಮತಿಯೊಂದಿಗೇ 'ನುಡಿರಂಜನ' ಎಂಬ ಪದವನ್ನು ಅವರಿಗೆ ಧನ್ಯವಾದ ಹೇಳುವುದು ನನ್ನ ಕರ್ತವ್ಯ. ಪುಸ್ತಕವನ್ನು ಸಕಾಲದಲ್ಲಿ ಅಂದವಾಗಿ ಮುದ್ರಿಸಿಕೊಟ್ಟ ಮೆ| ರಾಜಾ ಪ್ರಿಂಟರ್ಸ್, ಬೆಂಗಳೂರು, ಇವರಿಗೂ ನನ್ನ ಕೃತಜ್ಞತೆಗಳು.

ನನ್ನ ಯಾವತ್ತೂ ಚಟುವಟಿಕೆಗಳನ್ನು ಕಂಡು ಸಂತೋಷಪಡುವ, ಬೆಂಬಲಿಸುವ ಸ್ನೇಹಿತರಾದ ಟಿ. ಎನ್. ಹರಿಪ್ರಸಾದ್, ವೆಂಕಟರೆಡ್ಡಿ ರಾಮರೆಡ್ಡಿ, ಸುಬ್ರಹ್ಮಣ್ಯ ಶರ್ಮ, ಶಶಾಂಕ್, ಶಮ, ಅಶ್ವಿನಿ, ನನ್ನ ವಿದ್ಯಾರ್ಥಿಗಳು- ಎಲ್ಲರನ್ನೂ ನೆನಪಿಸಿಕೊಳ್ಳುತ್ತೇನೆ. ಪುಸ್ತಕದ ವಿವಿಧ ಹಂತಗಳಲ್ಲಿ ನನಗೆ ಸಹಕಾರ ನೀಡಿದ ಡಾ. ವಾನಳ್ಳಿ, ಅವರ ಪತ್ನಿ ಶ್ರೀಮತಿ ಸವಿತ, ಬಾಯ್ತುಂಬ ಅಣ್ಣಾ ಎಂದು ಕರೆಯುವ ಸ್ಫೂರ್ತಿ-ಸಿರಿಯವರನ್ನು ಮರೆಯಲಾರೆ.

ನೆರಳಿನಂತೆ ನನ್ನೊಂದಿಗಿರುವ ಆರತಿ, ಪುಟಾಣಿಗಳಾದ ಖುಷಿ-ಸಂವೃತ, ಮೌನವಾಗಿ ಸಂಭ್ರಮಿಸುವ ಅಪ್ಪ-ಅಮ್ಮ ಎಲ್ಲರೂ ಹಗಲು ಇರುಳು ಕಂಪ್ಯೂಟರಿನೆದುರು ಕುಳಿತಿದ್ದ ನನ್ನನ್ನು ಬೇಷರತ್ತಾಗಿ ಕ್ಷಮಿಸಿದ್ದಾರೆ. ಅವರಿಗೆ ಧನ್ಯವಾದ ಎಂದರೆ ಅದು ಕಡಿಮೆಯೂ ಕೃತಕವೂ ಆಗುತ್ತದೆ.

ಹೇಳುವುದು ಇನ್ನೂ ತುಂಬಾ ಇದೆ.

ಆಗಸ್ಟ್ 18, 2015/ ತುಮಕೂರು                                      ಸಿಬಂತಿ ಪದ್ಮನಾಭ ಕೆ. ವಿ./ಸಂಪಾದಕ

ಮಂಗಳವಾರ, ಸೆಪ್ಟೆಂಬರ್ 22, 2015

ಕಾಗದದ ದೋಣಿ ಕಾಣೆಯಾಯಿತೇ?

ಸೆಪ್ಟೆಂಬರ್ 23, 2015ರ 'ಕನ್ನಡ ಪ್ರಭ'ದಲ್ಲಿ ಪ್ರಕಟವಾದ ಲೇಖನ

ಬದುಕು ಬದಲಾಗಿರೋದಾ? ಬರಡಾಗಿರೋದಾ? ಪಡೆದುಕೊಂಡಿರೋದು ಹೆಚ್ಚಾ? ಕಳೆದುಕೊಂಡಿರೋದು ಹೆಚ್ಚಾ? ಕಿರಿದಾಗುತ್ತಿರುವ ಪ್ರಪಂಚದೊಳಗೆ ನಾವು ಹತ್ತಿರವಾಗುತ್ತಿದ್ದೇವಾ? ದೂರ ಸರಿಯುತ್ತಿದ್ದೇವಾ?

ಹಾಗೆಂದು ಎದುರು ಹರಡಿಕೊಂಡಿರುವ ರಾಶಿರಾಶಿ ಪತ್ರಗಳು ಜಗ್ಗಿಜಗ್ಗಿ ಕೇಳುತ್ತಲೇ ಇವೆ. ಅವೆಲ್ಲ ಕನಿಷ್ಠ ಹತ್ತು-ಹದಿನೈದು ವರ್ಷಗಳ ಹಿಂದಿನವು ಎಂದು ಅವುಗಳ ಮೇಲಿರುವ ತಾರೀಕುಗಳಷ್ಟೇ ಹೇಳಬೇಕು. ಅವು ಹಳೆಯವು ಎನ್ನಲೂ ಮನಸ್ಸಂತೂ ಸುತಾರಾಂ ಒಪ್ಪದು. ಈಗಷ್ಟೇ ತಲೆಗೆ ಮಿಂದು ಘಮ್ಮೆಂದು ಹೊರಬಂದ ಮನದನ್ನೆಯಂತೆ, ಬಳ್ಳಿಯಿಂದ ಮೆತ್ತಗೆ ಬಿಡಿಸಿಕೊಂಡು ತಂದಿರುವ ಮುದ್ದಾದ ಮೊಗ್ಗುಗಳಂತೆ, ನಿಮಿಷದ ಹಿಂದೆ ಪ್ರೆಸ್‌ನಿಂದ ಬಂದ ಹೊಚ್ಚಹೊಸ ಪುಸ್ತಕದ ಮಾದಕ ಪರಿಮಳದಂತೆ, ಬಿರಿದ ನೆಲಕ್ಕೆ ಸೋಕಿದ ಮೊದಲ ಸೋನೆ ಹೊಮ್ಮಿಸುವ ನರುಗಂಪಿನಂತೆ... ಅವುಗಳ ಮೇಲಿನ ಹೊಚ್ಚಹೊಸ ಮುಗುಳ್ನಗು ಒಂದಿನಿತೂ ಮಸುಕಾಗಿಲ್ಲ.

ಈಗಷ್ಟೇ ಅಂಚೆಯಣ್ಣ ಧುತ್ತನೆ ಪ್ರತ್ಯಕ್ಷನಾಗಿ ಕೊಟ್ಟುಹೋದ ಪತ್ರಗಳಂತೆ ಅವುಗಳ ತುಂಬೆಲ್ಲ ಕಾತರದ ಕನವರಿಕೆಗಳು. ಒಳಗಿನ ಒಂದಾದರೂ ಅಕ್ಷರ ಎಲ್ಲಿ ಕಾಣೆಯಾದೀತೋ ಎಂಬ ಭಯಾತಂಕದೊಂದಿಗೆ ಬೆರಳುಗಳು ಅತಿನಾಜೂಕಾಗಿ ಲಕೋಟೆಯನ್ನು ಹರಿಯುವ ಪರಪರ ಸದ್ದು, ಅದನ್ನು ಮೀರಿಸುವ ಹೃದಯದ ಲಬ್‌ಡಬ್ ಎಲ್ಲವೂ ಕಿವಿಗೆ ಕೇಳಿಸುತ್ತಿದೆ.

'ನನ್ನ ಪ್ರೀತಿಯ ಒಡವೆಯೇ... ಕಾಪಿಟ್ಟ ಕನಸುಗಳು ಮೊಲ್ಲೆಯ ಮೊಗ್ಗಿನಂತೆ ನಸು ಬಿರಿದು ನಮ್ಮಿಬ್ಬರ ಪಯಣದುದ್ದಕ್ಕೂ ಕಂಪ ಬೀರಲಿ...’ ಅವಳು ಕೈಯಾರೆ ಬರೆದ ಸಾಲುಗಳು ಸರಸರನೆ ಕಣ್ಣೆದುರು ಹಾದುಹೋಗುತ್ತವೆ. 'ಒಲವೇ... ಸಾವಿರ ಸ್ವಪ್ನಗಳು ಕೈಗೂಡುವುದಕ್ಕೆ, ಚಿಗುರೊಡೆದು ಹೂವಾಗುವುದಕ್ಕೆ ಬಲು ದೂರವಿಲ್ಲ... ಒಲವಿಗಿನ್ನು ಹೊಸಬಣ್ಣ, ಒಲವಿನೊಂದಿಗೆ ಹೊಸಹೆಜ್ಜೆ... ಹೆಜ್ಜೆಗಳು ಬಿರುಸಾಗಲಿ ಸಾಧನೆಯ ಪಥದಲ್ಲಿ ನಮಗೆ- ಒಲವೇ ಬೆಳಕಾಗಲಿ...’ ಧಾರಾವಾಹಿಯಾಗಿ ಹರಿದುಬರುತ್ತಿದ್ದ ಅವಳ ಮಹಾಕಾವ್ಯದ ಪುಟಗಳು ಅಲ್ಲಿಂದಲೇ ಕಣ್ಣು ಮಿಟುಕಿಸುತ್ತಿವೆ.

'ಕ್ಯಾನ್ ಯೂ ಗೆಸ್ ಮಿ?’ ಎಂಬ ಪ್ರಶ್ನೆಯನ್ನು ಬೆನ್ನಿಗೆ ಅಂಟಿಸಿಕೊಂಡ ನಸುನೀಲಿ ಬಣ್ಣದ ಇನ್‌ಲ್ಯಾಂಡ್ ಲೆಟರುಗಳು... 'ಓಪನ್ ವಿದ್ ಎ ಸ್ಮೈಲ್’ ಎಂದು ಕಚಗುಳಿಯಿಡುವ ಕೆನೆಬಣ್ಣದ ಲಕೋಟೆಗಳು... ’ನಿನ್ನ ಗೆಳೆತನಕ್ಕೆ ಯಾವ ಹೆಸರಿಡಲಿ’ ಎಂದು ಕೇಳುವ ಗೆಳೆಯರ ಗ್ರೀಟಿಂಗ್ ಕಾರ್ಡುಗಳು, 'ಬದುಕೆಂದರೆ ಪ್ರೀತಿಸುವುದು... ಪ್ರೀತಿಸುವುದೆಂದರೆ ನಿನ್ನ ಜತೆಗಿರುವುದು...’ ಎಂದು ಮತ್ತೆಮತ್ತೆ ರೋಮಾಂಚನ ಹುಟ್ಟಿಸುವ ಸುಂದರ ಶುಭಾಶಯ ಪತ್ರಗಳು...

ಒಂದೊಂದು ಪತ್ರವೂ ಸಜೀವ. ಒಂದೊಂದರಲ್ಲೂ ಒಬ್ಬೊಬ್ಬನ ವ್ಯಕ್ತಿತ್ವ. ಅದು ಯಾರದೆಂದು ಹೇಳಲು ವಿಳಾಸ ನೋಡಬೇಕಿಲ್ಲ. ಕೈಬರಹವೇ ಅವರೆಲ್ಲರ ಐಡೆಂಟಿಟಿ ಕಾರ್ಡು. ಪೆನ್ನುಹಿಡಿದರೆ ಬರೀ ಅಕ್ಷರವಲ್ಲ, ಗ್ರೀಟಿಂಗ್ ಕಾರ್ಡೇ ತಯಾರು ಮಾಡುವ ಸ್ನೇಹಿತ; ಸಾಸಿವೆ ಕಾಳು ಉದುರಿಸುವುದಕ್ಕೂ ಜಾಗ ಬಿಡದೆ ಕಾಗದದ ಮೂಲೆಮುಡುಕುಗಳಲ್ಲೆಲ್ಲ ಬರೆದು ಕೊನೆಗೆ ಕಾಗದ ತಯಾರು ಮಾಡಿದವನನ್ನೇ ಶಪಿಸುವ ಗೆಳತಿ; 'ಕೊರೆತ ಕಛೇರಿಗೆ ಸ್ವಾಗತ’ ಎಂಬ ಬೆದರಿಕೆಯೊಂದಿಗೇ ಪತ್ರ ಆರಂಭಿಸಿ, 'ಇಂತೀ ನಿನ್ನ ತುಂಬ ತುಂಬ ತಲೆ ತಿನ್ನುವ ತಂಗಿ’ ಎಂದು ಮುಕ್ತಾಯ ಮಾಡುವ ಕೂಸು; 'ಶತಮಾನದ ನಂತರ ಕಾಗದ ಬರೆದಿದ್ದಿ. ನಾಕು ಸಾಲು ಜಾಸ್ತಿ ಬರೆಯಲು ನಿನಗೇನು ಧಾಡಿ?’ ಎಂದು ಬೆನ್ನಿಗೊಂದು ಗುದ್ದುವ ಸ್ನೇಹಿತೆ; 'ನಾನಿಲ್ಲಿ ಮಾರ್ಕಿನ ಮರುಭೂಮಿಯಲ್ಲಿ ಓಯಸಿಸ್‌ನ ಹುಡುಕಾಟದಲ್ಲಿ ನಿರತನಾಗಿದ್ದೇನೆ, ನಿನ್ನ ಗೊಂಡಾರಣ್ಯ ಹೇಗಿದೆ?’ ಎಂದು ಯೂನಿವರ್ಸಿಟಿಯ ಕ್ಷೇಮಸಮಾಚಾರವನ್ನು ವಿಚಾರಿಸುವ ಗೆಳೆಯ; ಬರ್ತ್‌ಡೇ, ಯುಗಾದಿ, ದೀಪಾವಳಿ, ಕೃಷ್ಣಜನ್ಮಾಷ್ಟಮಿಗೆಲ್ಲ ಕಾರ್ಡು ಕಳಿಸಿದ ಮೇಲೂ ರಕ್ಷಾಬಂಧವನ್ನು ಮಾತ್ರ ಒಂಚೂರೂ ಮರೆಯದೆ ಪ್ರೀತಿಯಿಂದ ರೇಷ್ಮೆ ದಾರ ಕಳುಹಿಸುವ ದೂರದೂರಿನ ತಂಗಿ... ಆ ರಾಶಿಯೊಳಗೆ ಎಲ್ಲರೂ ಇನ್ನೂ ಅವಿತು ಕುಳಿತಿದ್ದಾರೆ.

'ನಿನ್ನ ದೃಢಹೆಜ್ಜೆ, ಆತ್ಮವಿಶ್ವಾಸಗಳೇ ಭವಿತವ್ಯದ ಅಡಿಗಲ್ಲು. ಭದ್ರವಾಗಿ ಬೆಳೆ...’ ಹೊಸ ಉದ್ಯೋಗ ಅರಸಿ ಹೊರಟಾಗ ಸಹೋದ್ಯೋಗಿ ಕೊಟ್ಟ ಪುಟ್ಟ ಚೀಟಿ; 'ನಿಮ್ಮಂತಹ ಶಿಷ್ಯರಿಂದ ನಮ್ಮ ಅಧ್ಯಾಪಕ ಜೀವನದ ಖುಷಿ, ಸಂತೃಪ್ತಿ ಹೆಚ್ಚಿದೆ. ನೀವು ಬಯಸಿದ್ದೆಲ್ಲ ಸಿಗಲಿ...’ ಎಂದು ಪ್ರೀತಿಯ ಮೇಷ್ಟ್ರು ಖುದ್ದು ಮದುವೆ ಮಂಟಪಕ್ಕೆ ತಲುಪಿಸಿದ ಗ್ರೀಟಿಂಗು; 'ಸಾಕ್ಷಾತ್ ಜೋಗದ ಎದುರೇ ಇದೆ ನಮ್ಮ ಮನೆ... ನೀವು ಜುಲೈನಲ್ಲಿ ಬಂದರೆ ಜಲಪಾತದ ಎದುರೇ ಕುಳಿತು ಕವಿತೆ ಬರೆಯಬಹುದು’ ಎಂದು ಆಸೆ ಹುಟ್ಟಿಸುವ ಹೊಸ ಗೆಳೆಯ; ಮತ್ತೆ ಬೆಂಗಳೂರಿಗೆ ನಿನ್ನ ದರುಶನ ಯಾವಾಗಲೋ ತಮ್ಮಾ, ಎಂದು ಅಕ್ಕರೆಯಿಂದ ಕೇಳುವ ಅಣ್ಣ; 'ಕಾಲ ಕೆಳಗಿನ ಬೆಂಕಿಗಿಂತ ಕಣ್ಣ ಮುಂದಿನ ಬೆಂಕಿ ದೊಡ್ಡದು...’ ಎಂಬಂತಹ ಸ್ಟೇಟ್‌ಮೆಂಟುಗಳಿಂದಲೇ ಸದಾ ಪತ್ರವನ್ನು ನಿಲ್ಲಿಸಿ ತಮಾಷೆ ನೋಡುವ ಸ್ನೇಹಿತೆ.

ಎಲ್ಲವುಗಳ ನಡುವೆ 'ಶ್ರೀದೇವರ ದಯದಿಂದ ಮೇಲಿನ ತಾರೀಕಿನವರೆಗೆ ನಾವಿಲ್ಲಿ ತಕ್ಕಮಟ್ಟಿಗೆ ಕ್ಷೇಮ’ ಎಂದು ಪ್ರತೀಬಾರಿಯೂ ಆರಂಭವಾಗುವ ಅಪ್ಪನ ಇನ್‌ಲ್ಯಾಂಡು ಲೆಟರುಗಳಂಲ್ಲಂತೂ ಥೇಟ್ ಅಪ್ಪನದೇ ಬಿಂಬ. 'ಉಂಡೆಹುಳಿ ಕೊಯ್ದಾಗಿಯದೆ. ಕ್ರಯ ಮಾತ್ರ ಕಮ್ಮಿಯಂತೆ. ಇಲ್ಲಿ ತೋಟಕ್ಕೆ ನೀರು ದಿನಕ್ಕೆ ಮುಕ್ಕಾಲು ಗಂಟೆ ಮಾತ್ರ ಸಿಗುತ್ತಿದೆ. ಮನೆ ರಿಪೇರಿ ಮುಗಿಯುತ್ತಾ ಉಂಟು. ಮೂಲೆಹೆಂಚು ಕೂರಿಸುವುದು ಬಾಕಿ. ಕೃಷಿ ಲೋನಿಗೆ ಅರ್ಜಿ ಹಾಕಿದ್ದೇನೆ. ಯಾವಾಗ ಪಾಸಾಗುತ್ತದೋ ಗೊತ್ತಿಲ್ಲ’ ಎಂಬಿತ್ಯಾದಿ ತರಹೇವಾರಿ ವಾರ್ತೆ ಹೊತ್ತುಬರುವ ಎಲ್ಲ ಪತ್ರಗಳ ಅಂತ್ಯ ಒಂದೇ: 'ಬೇರೇನೂ ವಿಶೇಷವಿಲ್ಲ. ಬಾಕಿ ಮುಖತಾ’.

ಹತ್ತು ವರ್ಷ ಕಳೆಯುವಲ್ಲಿ ಪ್ರಪಂಚ ಎಷ್ಟೊಂದು ಬದಲಾಗಿದೆ ಎಂದು ಮತ್ತೆ ಅಚ್ಚರಿ ಕಾಡುತ್ತದೆ. ಮರುಕ್ಷಣ ಮತ್ತವೇ ಪ್ರಶ್ನೆಗಳು ಧುತ್ತನೆ ಕಣ್ಣೆದುರು ಪ್ರತ್ಯಕ್ಷವಾಗತ್ತವೆ: ಬದುಕು ಬದಲಾಗಿರೋದಾ? ಬರಡಾಗಿರೋದಾ? ಪಡೆದುಕೊಂಡಿರೋದು ಹೆಚ್ಚಾ? ಕಳೆದುಕೊಂಡಿರೋದು ಹೆಚ್ಚಾ?

ಇನ್‌ಲ್ಯಾಂಡ್ ಲೆಟರಿನ ಅಚ್ಚರಿ, ಜತನವಾಗಿ ಕಾಪಿಡುವ ಸ್ಟ್ಯಾಂಪು, ಇನ್ನೂ ಆರದ ಪೆನ್ನಿನ ಶಾಯಿ, ಕೆ.ಜಿ.ಗಟ್ಟಲೆ ಸಮಾಚಾರ, ಬರೆದಷ್ಟೂ ಮುಗಿಯದ ಸುದ್ದಿಗಳೆಲ್ಲ ಎಲ್ಲಿ ಹೋದವು? ಎಲ್ಲ ಪ್ರಶ್ನೆಗಳಿಗೆ ಉತ್ತರ ಕಣ್ಣೆದುರಿನ ಪತ್ರಗಳ ಗುಡ್ಡೆಯೊಳಗೆ ಇದೆ. ಇನ್ನೇನು ತೆರೆದು ನೋಡಬೇಕು ಎಂದರೆ ಫೇಸ್‌ಬುಕ್ ನೋಟಿಫಿಕೇಶನ್ ಕಾಯುತ್ತಿದೆ; ವಾಟ್ಸಾಪ್ ಸಂದೇಶಗಳು ಸದ್ದುಮಾಡುತ್ತಿವೆ; ಟ್ವಿಟರ್ ಲೊಚಗುಡುತ್ತಿದೆ; ಇ-ಮೇಲ್‌ಗಳು ಸರತಿಯಲ್ಲಿ ಕುಳಿತಿವೆ. ಅಯ್ಯೋ ಆಫೀಸಿಗೆ ಬೇರೆ ತಡವಾಯಿತು.

ಈಗ ನನಗೆ ನಾನೇ ಒಂದು ಎಸ್ಸೆಮ್ಮೆಸ್ ಹಾಕಿಕೊಳ್ಳಬೇಕು: ನಾವು ನಾವಾಗುವುದು ಯಾವಾಗ?

ಅಪ್ಪ ಎಂಬ ಮಹಾ ಒಗಟು

ಸೆಪ್ಟೆಂಬರ್ 6, 2015ರ ಉದಯವಾಣಿ 'ಸಾಪ್ತಾಹಿಕ ಸಂಪದ'ದಲ್ಲಿ ಪ್ರಕಟವಾದ ಪ್ರಬಂಧ

'ಅಯ್ಯೋ ಎಷ್ಟೊಂದು ಜಾಗವನ್ನು ದಂಡ ಮಾಡಿದ್ದಾರೆ ಈ ಪುಣ್ಯಾತ್ಮರು!’ ಅದು ಖಾಲಿ ಸೈಟನ್ನು ನೋಡಿ ಅಪ್ಪ ತೆಗೆದ ಮೊದಲ ಉದ್ಗಾರ. ಜೋಗದ ಜಲಪಾತವನ್ನು ನೋಡಿ ವಿಶ್ವೇಶ್ವರಯ್ಯನವರು ತೆಗೆದ ಉದ್ಗಾರಕ್ಕಿಂತ ಇದು ಏನೇನೂ ಕಮ್ಮಿಯಿರಲಿಲ್ಲ.

ನಗರದ ನಡುವೆ ನಾವು ಬಾಡಿಗೆಗಿದ್ದ ಮನೆಯ ಮಾಲೀಕರದ್ದೇ ಆಗಿತ್ತು ಅದಕ್ಕೆ ಹೊಂದಿಕೊಂಡಂತಿದ್ದ ಈ ಪುಟ್ಟ ಸೈಟು. ಕಳೆ ಬೆಳೆಯಲೆಂದೇ ಮೀಸಲಿಟ್ಟಿದ್ದಾರೇನೋ ಎಂಬಂತಹ ಗೊಂಡಾರಣ್ಯವಾಗಿದ್ದ ಸೈಟು ಪಟ್ಟಣದ ಸಕಲ ಹಂದಿಗಳಿಗೂ ನೆಮ್ಮದಿಯ ಆವಾಸಸ್ಥಾನವಾಗಿತ್ತು. ಅಂದಮೇಲೆ ಅದು ಆ ಭಾಗದ ಅಷ್ಟೂ ನಿವಾಸಿಗಳ ಮನೆಯ ಕಸಮುಸುರೆಗಳನ್ನು ಸುರಿಸಿಕೊಳ್ಳುವ ಉದಾರ ಮನಸ್ಸಿನ ತಿಪ್ಪೆಯೂ ಆಗಿತ್ತು ಎಂದು ಬೇರೆ ಹೇಳಬೇಕಿಲ್ಲ.

'ಎಂಥಾ ದಡ್ಡ ಸೋಮಾರಿಗಳು ಈ ಜನ? ಜಾಗವನ್ನು ಹೀಗೆ ಹಡ್ಳು ಹಾಕುವ ಬದಲು ಎರಡು ತೊಂಡೆ ಬುಡ ಆದರೂ ಮಾಡಬಾರದಿತ್ತಾ?' ಅಪ್ಪ ನಮ್ಮೂರಿನಿಂದ ಪರ್ಮನೆಂಟಾಗಿ ಪಟ್ಟಣಕ್ಕೆ ಬಂದ ಮರುದಿನವೇ ಈ ಖಾಲಿ ಸೈಟು ನೋಡಿ ಗೊಣಗಿಕೊಂಡಿದ್ದರು. ಕರುವನ್ನು ಬಿಟ್ಟುಬಂದ  ಪುಣ್ಯಕೋಟಿಯಂತೆ ಹಳ್ಳಿಯ ನಾಲ್ಕು ಎಕರೆ ಹಸುರು ತೋಟವನ್ನು ಕೊಟ್ಟು ಬಂದಿದ್ದ ಅಪ್ಪನಿಗೆ ಕಾಂಕ್ರೀಟು ಕಾಡಿನ ನಡುವೆ ಅಡಗಿದ್ದ ಈ ಖಾಲಿ ಸೈಟು ಚಿನ್ನದ ಗಣಿಯಂತೆಯೇ ಕಂಡಿತ್ತು.

ಇಲ್ಲಿಂದ ಅಲ್ಲಿಯವರೆಗೆ ಒಂದು ಬದನೆ ಸಾಲು, ಪಕ್ಕದಲ್ಲೊಂದು ಅಲಸಂಡೆ ಸಾಲು, ಅದರಾಚೆಗೊಂದು ಹರಿವೆ ಗುಪ್ಪೆ, ಆ ತುದಿಯಲ್ಲಿ ಪಾತ್ರೆ ತೊಳೆದ ನೀರು ಸಂಗ್ರಹವಾಗುವ ಕಡೆ ಒಂದು ತೊಂಡೆ ಬುಡ, ಪಕ್ಕದಲ್ಲೊಂದು ಬಸಳೆ ಚಪ್ಪರ, ಉಳಿದ ಜಾಗದಲ್ಲಿ ಎರಡು ಹಾಗಲ ಬಳ್ಳಿ, ಮತ್ತೊಂದು ಟೊಮೇಟೋ ಗಿಡ... ಅಪ್ಪ ನಿಂತ ನಿಲುವಿನಲ್ಲೇ ಸೈಟಿಗೊಂಡು ಪ್ಲಾನು ತಯಾರಿಸಿದ್ದರು. ಮಾರನೆಯ ದಿನವೇ ಚುಮುಚುಮು ಬೆಳಕು ಹರಿಯುತ್ತಿರಬೇಕಾದರೆ ಅಪ್ಪ ಬಲು ಜತನದಿಂದ ಊರಿನಿಂದ ತಂದಿದ್ದ ಹಾರೆ ಗುದ್ದಲಿ ಕತ್ತಿ ಹೆಗಲಿಗೇರಿಸಿಕೊಂಡು ಆ ಸೈಟಿಗೆ ಪಾದಾರ್ಪಣೆ ಮಾಡಿಯೂ ಆಯಿತು.

'ನಿನ್ನ ಅಪ್ಪಂಗೆ ಮರುಳು. ಎಂತ ಇವರ ಸ್ವಂತ ಜಾಗವಾ ಅದು? ನಾಳೆ ಅಲ್ಲಿ ಯಾರೋ ಬಂದು ಮನೆ ಕಟ್ಟಿದರೆ ಇವರ ತೊಂಡೆ ಚಪ್ಪರವನ್ನು ಟೆರೇಸಿಗೆ ಸಾಗಿಸುತ್ತಾರಂತಾ?’ ಅಮ್ಮ ಕಿಟಕಿಯಿಂದಲೇ ಹೊರಗೆ ನೋಡಿ ಗೊಣಗಿಕೊಳ್ಳುತ್ತಿದ್ದರು. 'ಮನೆ ಕಟ್ಟಿಕೊಳ್ಳುವವರು ಕಟ್ಟಿಕೊಳ್ಳಲಿ ಬಿಡು. ನಾವೇನು ಬೇಡ ಅಂತೀವಾ?' ನಾಳೆಯ ಚಿಂತೆಯೇ ಇಲ್ಲದವರಂತೆ ಅಪ್ಪ ಸೈಟು ನೈರ್ಮಲ್ಯ ಅಭಿಯಾನ ಆರಂಭಿಸಿಯೇಬಿಟ್ಟಿದ್ದರು.

ಅಪ್ಪ ಮೊದಲಿನಿಂದಲೂ ಹಾಗೆಯೇ. ನಾಳೆಯ ಬಗ್ಗೆ ನೂರು ಯೋಚನೆ ಮಾಡಿ ಇಂದು ಮಾಡಬೇಕಾದ ಒಂದಾದರೂ ಕೆಲಸ ಮಾಡದೆ ಉಳಿಸಿಕೊಂಡವರಲ್ಲ. ಎರಡೇ ವರ್ಷಕ್ಕೆ ಅಮ್ಮನನ್ನೂ ಮತ್ತೆ ನಾಲ್ಕು ವರ್ಷಕ್ಕೆ ಅಪ್ಪನನ್ನೂ ಕಳಕೊಂಡು ಯಾರ‍್ಯಾರದೋ ಹಿತ್ತಿಲಲ್ಲಿ ಚಾಕರಿ ಮಾಡಿಕೊಂಡು ಬಂದವರು. 'ನಿಮ್ಮಪ್ಪ ನಿಮಗೂ ತುಂಬ ಕಥೆ ಹೇಳುತ್ತಿದ್ದರಾ ಅಪ್ಪ?’ ಪ್ರತೀ ರಾತ್ರಿ ಅಪ್ಪ ನನಗಾಗಿ ರಂಗುರಂಗಿನ ಕಥೆಗಳನ್ನು ಹೇಳುತ್ತಿದ್ದರೆ ನಾನು ಹಾಗೆ ಕೇಳುತ್ತಿದ್ದೆ. 'ನೀವು ತುಂಬ ಯಕ್ಷಗಾನ ನೋಡುತ್ತಿದ್ದಿರಾ ಅಪ್ಪ?’ ರೇಡಿಯೋದಲ್ಲಿ ಪ್ರತೀ ಬುಧವಾರ ಅಪ್ಪ ತಾಳಮದ್ದಳೆ ಹಾಕುತ್ತಿದ್ದರೆ ನಾನು ಹಾಗೆ ಕೇಳುತ್ತಿದ್ದೆ. 'ನಿಮ್ಮ ಅಪ್ಪ ಕೂಡ ನಿಮ್ಮನ್ನು ಹೀಗೆಯೇ ಹೆಗಲಲ್ಲಿ ಹೊತ್ತುಕೊಂಡು ಹೋಗುತ್ತಿದ್ದರಾ ಅಪ್ಪ?’ ಅವರು ನನ್ನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಕಾಡುಹಾದಿ ದಾಟಿ ಆಮೇಲೆ ನೇತ್ರಾವತಿಯ ದಂಡೆಯುದ್ದಕ್ಕೂ ಉರಿಬಿಸಿಲಿನಲ್ಲಿ ಹೆಜ್ಜೆ ಹಾಕಿ ಪೇಟೆಗೆ ಕರೆದುಕೊಂಡುಹೋಗುತ್ತಿರಬೇಕಾದರೆ ನಾನು ಹಾಗೆ ಕೇಳುತ್ತಿದ್ದೆ. 'ನಿಮಗೆ ಇಂತಹದೇ ಪಾಠ ಪುಸ್ತಕಗಳಿದ್ದವಾ ಅಪ್ಪ?’ ನಾನು ಹೊಸಾ ಪಾಠ ಪುಸ್ತಕಕ್ಕೆ ನೀಟಾಗಿ ಬೈಂಡು ಹಾಕುತ್ತಿರುವುದನ್ನು ಅಪ್ಪ ನೋಡುತ್ತಾ ಕುಳಿತಿದ್ದರೆ ನಾನು ಹಾಗೆ ಕೇಳುತ್ತಿದ್ದೆ.

ಅಪ್ಪ ಮಾತಾಡುತ್ತಿರಲಿಲ್ಲ. ಸುಮ್ಮನೇ ಹೂಂಗುಡುತ್ತಿದ್ದರು ಇಲ್ಲವೇ ಮುಗುಳ್ನಗುತ್ತಿದ್ದರು. ಅಪ್ಪನಿಗೆ ಕಥೆ ಕೇಳುವ ಬಾಲ್ಯವೇ ಇರಲಿಲ್ಲ ಎಂದು ನನಗೆ ಅರ್ಥವೇ ಆಗಿರಲಿಲ್ಲ. ಯಕ್ಷಗಾನ ನೋಡಬಹುದಾದ ಸಮಯದಲ್ಲಿ ಅವರು ಕಣ್ಣಿಗೆ ಎಣ್ಣೆ ಹಚ್ಚಿ ಯಾರದ್ದೋ ಅಡಿಕೆ ತೋಟ ಕಾಯಬೇಕಿತ್ತು ಎಂದು ನನಗೆ ಹೊಳೆದೇ ಇರಲಿಲ್ಲ. ಅಪ್ಪನ ಹೆಗಲಲ್ಲಿ ವಿರಾಜಮಾನವಾಗಿ ಸಾಗಬೇಕಾದ ವಯಸ್ಸಿಗೆ ಅವರು ತಮಗಿಂತ ತೂಕದ ಕಷ್ಟಗಳ ಮೂಟೆಗೆ ಹೆಗಲು ಕೊಡಬೇಕಿತ್ತೆಂದು ತಿಳಿದೇ ಇರಲಿಲ್ಲ. ಪಾಠಪುಸ್ತಕ ಹಿಡಿಯಬೇಕಾದ ಕಾಲಕ್ಕೆ ಧಣಿಯ ಮಕ್ಕಳ ಪಾಟೀಚೀಲಗಳನ್ನು ಹೊತ್ತು ಅಪ್ಪ ನಡೆಯಬೇಕಾಗಿತ್ತು ಎಂದು ನನಗೆ ಗೊತ್ತೇ ಇರಲಿಲ್ಲ.

ಯಾರದೋ ಬದುಕುಗಳನ್ನು ತಮ್ಮ ಬದುಕಿನಂತೆಯೇ ಬದುಕಿದ ಅಪ್ಪನಿಗೆ ಯಾರದೋ ಸೈಟಿನಲ್ಲಿ ತರಕಾರಿ ಸಾಲು ಮಾಡುತ್ತಿರುವುದು ಒಂದು ನಿಷ್ಪ್ರಯೋಜಕ ಕೆಲಸ ಎಂದು ಬಹುಶಃ ಅನಿಸಲೇ ಇಲ್ಲ. ಇಪ್ಪತ್ತೈದು ವರ್ಷ ತಮ್ಮ ರಕ್ತ ಬಸಿದು ಬೆಳೆದ ತೋಟ ಫಲ ಕೊಡುವ ಹೊತ್ತಿಗೆ ಕೈತಪ್ಪಿಹೋದ ಕರಾಳ ನೆನಪನ್ನು ಒಡಲಲ್ಲಿಟ್ಟುಕೊಂಡು ಕ್ಷಣಕ್ಷಣವೂ ಕೊರಗುವ ಅಪ್ಪ ಮತ್ತೆ ತಮ್ಮದಲ್ಲದ ಜಾಗದಲ್ಲಿ ಒಂದು ಹಸುರು ಕನಸನ್ನು ಚಿಗುರಿಸುತ್ತಿದ್ದಾರೆಂದರೆ ಅವರ ನೆಲದ ನಂಟು ಎಷ್ಟು ಗಾಢವಾದದ್ದೆಂಬುದನ್ನು ನನಗೆ ಕೊನೆಗೂ ಅಳೆಯಲಾಗಲೇ ಇಲ್ಲ. ಅದಕ್ಕೇ ಅಪ್ಪ ನನಗೆ ಎಂದೆಂದಿಗೂ ಒಂದು ಮಹಾ ಒಗಟು.

ನೋಡನೋಡುತ್ತಿದ್ದ ಹಾಗೆಯೇ ತಿಪ್ಪೆಗುಂಡಿಯಂತಿದ್ದ ಸೈಟು ಹಸನಾಯಿತು. ಹಸನಾದ ನೆಲದಲ್ಲಿ ಹಸಿರು ಮೊಳೆಯಿತು. ಅಪ್ಪ ಊರಿನಿಂದ ಬರುವಾಗ ಹೆಗಲಿಗೆ ಜೋತುಹಾಕಿಕೊಂಡಿದ್ದ ಚೀಲದೊಳಗೊಂದು ಖಾಲಿ ಪರ್ಸು ಇತ್ತೆಂದು ಮಾತ್ರ ನಮಗೆ ಗೊತ್ತಿತ್ತು. ಅದರೊಳಗೆ ಒಂದಿಷ್ಟು ಕನಸಿನ ಬೀಜಗಳಿದ್ದವೆಂದು ಗಮನಿಸಿಯೇ ಇರಲಿಲ್ಲ. ಖಾಲಿ ಸೈಟಿನಲ್ಲಿ ಹಾಗಲಬಳ್ಳಿ, ಬದನೆ ಗಿಡ, ಹರಿವೆ ರಾಶಿ ಚಿಗುರೊಡೆದಾಗಲೇ ಅದು ಅರ್ಥವಾದದ್ದು.

ಅಯ್ಯೋ ಆ ಬರಡು ಸೈಟಿನಲ್ಲಿ ಏನು ಬೆಳೆಯುತ್ತೀರಿ ಎಂದು ಸುತ್ತಮುತ್ತಲ ಜನ ತಮಾಷೆ ಮಾಡಿದರು. ಅಪ್ಪ ಚಿಂತೆ ಮಾಡಲಿಲ್ಲ. ಅಡುಗೆ ಮನೆಯಿಂದ ಹೊರಹೋಗುತ್ತಿದ್ದ ನೀರಿನ ಪೈಪಿನ ತುದಿಗೊಂದು ಹಳೇ ಬಕೆಟ್ ಇಟ್ಟರು. ದಿನಕ್ಕೆ ಏನಿಲ್ಲವೆಂದರೂ ಏಳೆಂಟು ಬಕೆಟ್ ನೀರು ಯಾವುದಾದರೊಂದು ರೂಪದಲ್ಲಿ ಅಲ್ಲಿ ಹರಿದುಹೋಗುತ್ತದೆ ಎಂದು ಆವಾಗಲೇ ನಾವು ಗಮನಿಸಿದ್ದು. 'ತರಕಾರಿಯಲ್ಲ, ಒಂದು ಬಾಳೆ ತೋಟವನ್ನೇ ಮಾಡಬಹುದು ಈ ನೀರಿನಲ್ಲಿ’ ಅಪ್ಪ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಅವರು ರಸ್ತೆಯುದ್ದಕ್ಕೂ ಒಮ್ಮೆ ಓಡಾಡಿ ಬಂದರೆ ಬುಟ್ಟಿ ತುಂಬಾ ಸೆಗಣಿ ಇರುತ್ತಿತ್ತು. 'ಓಯ್ ನಿಮ್ಮ ಪೇಟೆಯಲ್ಲೂ ಸಾವಯವ ಕೃಷಿ ಮಾಡಬಹುದು ನೋಡು!’ ಅಪ್ಪನ ಮಾತಲ್ಲಿ ಯಾವತ್ತೂ ಹಳೆಯ ಮಧುರ ನೆನಪು.

ಈ ನಡುವೆ ಒಮ್ಮೆ ಅಪ್ಪ ಊರಿಗೆ ಹೋಗಿ ಹಿಂತಿರುಗುವಾಗ ತಲೆಯ ಮೇಲೊಂದು ದೊಡ್ಡ ಹೊರೆ ಇತ್ತು. ಅಪ್ಪ ಊರಲ್ಲಿ ಕಾಡು ಗುಡ್ಡ ಸುತ್ತಿ ಐದಾರು ಅಡಿಯ ಹತ್ತು ಕಂಬಗಳನ್ನೂ ಒಂದಷ್ಟು ಹಸಿ ಬಳ್ಳಿಗಳನ್ನೂ ಕಟ್ಟಿ ತಂದಿದ್ದರು. ಅಯ್ಯೋ ಇದನ್ನೆಲ್ಲ ಯಾಕೆ ಹೊತ್ತುಕೊಂಡು ಬಂದಿರಿ ಎಂದು ಮನೆಮಂದಿ ಸುಸ್ತಾಗಿ ಕುಳಿತಿರಬೇಕಾದರೆ ಅಪ್ಪ, 'ಈ ಬೀಡಾಡಿ ಹಸುಗಳಿಂದ ಬಚಾವಾಗಬೇಕಲ್ಲ ಮಾರಾಯ್ರೆ... ನನ್ನ ತರಕಾರಿ ತೋಟಕ್ಕೊಂದು ಸಣ್ಣ ಮಟ್ಟಿನ ಬೇಲಿಯಾದರೂ ಹಾಕಬೇಕಲ್ಲ? ನಮ್ಮ ತೊಂಡೆ ಚಪ್ಪರಕ್ಕೆ ನಾಕು ಅಡರು ಕಡಿದಿಟ್ಟಿದ್ದೆ; ಆ ಬಸ್ಸಿನ ಕಂಡಕ್ಟರು ಇಷ್ಟನ್ನಾದರೂ ತರುವುದಕ್ಕೆ ಬಿಟ್ಟದ್ದೇ ಹೆಚ್ಚು’ ಎಂದು ತಮ್ಮ ಕೆಲಸವನ್ನು ಆರಂಭಿಸಿಯೇ ಬಿಟ್ಟಿದ್ದರು.

ಅಪ್ಪನ ಗಿಡಗಳು ಬಲಿತವು. ಬಳ್ಳಿಗಳು ಅದೇ ಬೇಲಿಯ ಮೇಲೆ ಹಬ್ಬಿದವು. ಹಾಗಲ ಬಳ್ಳಿಯಲ್ಲಿ ಮೊದಲ ಹೂವು ಕಾಣಿಸಿಕೊಂಡ ದಿನ, ಟೊಮೇಟೋ ಗಿಡದಲ್ಲಿ ಮೊದಲ ಹೀಚು ಇಣುಕಿದ ದಿನ ಅಪ್ಪ ಮಗುವಿನಂತೆ ಕಾಣುತ್ತಿದ್ದರು. ಮೊದಲ ಬಾರಿ ಹಾಗಲ ಪಲ್ಯ ಮಾಡಿದ ದಿನ ಅಪ್ಪ ಎರಡು ತುತ್ತು ಹೆಚ್ಚೇ ಉಂಡಿದ್ದರು ಎನಿಸುತ್ತದೆ.

ತೊಂಡೆ ಬಳ್ಳಿ ಚಪ್ಪರ ತುಂಬ ಹಬ್ಬುವ, ಅದೇ ಚಪ್ಪರಕ್ಕೊಂದು ಹೀರೆ ಬಳ್ಳಿ ಜೋಡಿಸುವ ಕನಸನ್ನು ಅಪ್ಪ ಪ್ರತೀಕ್ಷಣ ಕಾಣುತ್ತಿದ್ದರು. ಆದರೆ ಆ ಮುಹೂರ್ತ ಮಾತ್ರ ಬರಲೇ ಇಲ್ಲ. ಬಂದದ್ದು ಆ ಸೈಟಿನಲ್ಲಿ ಮುಂದಿನ ವಾರ ಭೂಮಿಪೂಜೆ ನಡೆಯಲಿದೆ ಎಂಬ ಸುದ್ದಿ. ಈ ಶುಭಸುದ್ದಿ ಒಂದಲ್ಲ ಒಂದುದಿನ ಬಂದೇ ಬರುತ್ತದೆ ಎಂದು ಗೊತ್ತಿದ್ದರೂ ಅಪ್ಪನಿಗೆ ಅದನ್ನು ಅರಗಿಸಿಕೊಳ್ಳುವುದು ಸಾಧ್ಯವಾಗಲೇ ಇಲ್ಲ. ಬೆಳೆದು ನಿಂತ ಫಸಲು ಕೈಗೆ ಬರುವ ಮೊದಲೇ ಬೇರೆಯವರ ಪಾಲಾಗುವುದು ಅಪ್ಪನಿಗೆ ಹೊಸತೇನೂ ಆಗಿರಲಿಲ್ಲ. ಆದರೆ ಅಂತಹ ಮತ್ತೊಂದು ಘಟನೆಯನ್ನು ನೋಡುವುದಕ್ಕೆ ಅವರ ಮನಸ್ಸು ಏನೇನೂ ಸಿದ್ಧವಿರಲಿಲ್ಲ. ಅಪ್ಪನ ಬಿಳಿಚಿದ ಮುಖ, ತುಂಬಿದ ಕಣ್ಣು, ಆ ಮಹಾಮೌನಗಳನ್ನು ನಾನೇ ಏಕೆ, ಆ ಸೈಟು ಕೂಡ ಎಂದೂ ಮರೆಯದು. ಮತ್ತೊಂದು ಗಂಟೆಯೊಳಗೆ ತಮ್ಮ ತರಕಾರಿ ತೋಟದ ಒಂದೊಂದು ಹೂವು, ಹೀಚುಕಾಯಿಗಳನ್ನೂ ಬಿಡದೆ ಅಪ್ಪ ಕೊಯ್ದು ತಂದು ಅಡಿಗೆ ಮನೆಯಲ್ಲಿಟ್ಟಿದ್ದರು.

ಆ ಬುಟ್ಟಿಯಲ್ಲಿದ್ದ ಒಂದೊಂದು ಕನಸೂ ಭೂಮಿಯಷ್ಟು ಭಾರವಾಗಿತ್ತು. ಅಪ್ಪನಷ್ಟೇ ಒಗಟಾಗಿತ್ತು.

ಶುಕ್ರವಾರ, ಆಗಸ್ಟ್ 21, 2015

ಸಂಗೀತದ ಎಂಜಿನಿಯರ್ ಗೆ 75ರ ಸಂಭ್ರಮ

ಆಗಸ್ಟ್ 22, 2015ರ 'ಪ್ರಜಾಪ್ರಗತಿ'ಯಲ್ಲಿ ಪ್ರಕಟವಾದ ಲೇಖನ

ನಸುಕಿನ ಆರು ಗಂಟೆಯಿಂದ ರಾತ್ರಿಯ ಎಂಟೂವರೆ ನಡುವಿನ ಯಾವುದಾದರೂ ಒಂದು ಹೊತ್ತು; ನೀವು ತುಮಕೂರಿನ ಸಪ್ತಗಿರಿ ಬಡಾವಣೆಯ ಟಿ. ಪಿ. ಕೈಲಾಸಂ ರಸ್ತೆಗೆ ಹೊಂದಿಕೊಂಡಂತಿರುವ ಮೊದಲನೇ ಕ್ರಾಸ್‍ನಲ್ಲಿ ಬಿರಬಿರನೆ ಹೆಜ್ಜೆ ಹಾಕುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಸ್ವಲ್ಪದರಲ್ಲೇ ನಿಮ್ಮ ನಡಿಗೆ ನಿಧಾನವಾಗುತ್ತದೆ. ಕಿವಿ ಚುರುಕಾಗುತ್ತದೆ. ಆಹ್ಲಾದಕರ ವಯೋಲಿನ್ ನಾದವೋ ಕಿವಿಗೆ ತಂಪೆರೆಯುವ ಸುಮಧುರ ಸಂಗೀತವೋ ನಿಮ್ಮನ್ನು ಅಲೆಯಲೆಯಾಗಿ ಬಂದು ತಲುಪಿ, ಹಾಗೆಯೇ ಹಿಡಿದು ನಿಲ್ಲಿಸುತ್ತದೆ. ಕತ್ತೆತ್ತಿ ಮೇಲೆ ನೋಡಿದರೆ ‘ಸಂಭವೇ ಗಾನ ಕಲಾ ಕೇಂದ್ರ’ ಎಂಬ ಪುಟ್ಟದೊಂದು ಬೋರ್ಡು ಕಾಣಿಸೀತು.

ಕುತೂಹಲದಿಂದ ಮುಂದುವರಿದರೆ ಮುಖದ ತುಂಬ ತೇಜಸ್ಸನ್ನೂ ವಿದ್ವತ್ತಿನ ಗಾಂಭೀರ್ಯವನ್ನೂ ಹೊತ್ತ ಹಿರಿಯರೊಬ್ಬರು ನಿಮ್ಮನ್ನು ಮುಗುಳ್ನಗೆಯೊಂದಿಗೆ ಸ್ವಾಗತಿಸಿಯಾರು.

‘ಗುರುಗಳೇ, ನನಗೂ ಸಂಗೀತ ಕಲಿಯುವ ಆಸೆ. ಆದರೆ ಈಗಲೇ ಮೂವತ್ತು ಕಳೆದಿದೆ. ಈ ವಯಸ್ಸಿನಲ್ಲಿ ನನಗೇನಾದರೂ ತಲೆಗೆ ಹತ್ತೀತೇ?’ ಹಾಗೆಂದು ನೀವು ಕೇಳುವ ಸಾಧ್ಯತೆಯಿದೆ. ಅದಕ್ಕೆ ಉತ್ತರವಾಗಿ ಅವರ ಪ್ರಶ್ನೆ ಸಿದ್ಧವಿರುತ್ತದೆ: ‘ಹೇಳಿ, ನನ್ನ ವಯಸ್ಸು ಎಷ್ಟಿರಬಹುದು?’

‘ಸರಿಯಾಗಿ ಊಹಿಸಲಾರೆ. ಅರುವತ್ತಂತೂ ದಾಟಿರಬಹುದು.’

‘ಅಷ್ಟೊಂದು ಕಮ್ಮಿ ಯಾಕೆ ಹೇಳುತ್ತೀರಿ? ನನಗೀಗ ಎಪ್ಪತ್ತೈದು. ಈ ವಯಸ್ಸಿನಲ್ಲಿ ನಾನು ನೂರೈವತ್ತು ಮಂದಿಗೆ ಪಾಠ ಹೇಳಬಹುದಾದರೆ ನನ್ನ ಅರ್ಧದಷ್ಟೂ ವಯಸ್ಸಾಗಿರದ ನೀವೇಕೆ ಪಾಠ ಹೇಳಿಸಿಕೊಳ್ಳಬಾರದು?’

ಅವರು ಹಾಗೆಂದು ಕೇಳುತ್ತಿದ್ದರೆ ನೀವೇ ಆಯಾಚಿತವಾಗಿ ಎದ್ದು ನಿಂತು ಗುರುಗಳೇ ಎಂದು ಕೈಮುಗಿಯುತ್ತೀರಿ. ನಿಮ್ಮ ಎದುರಿಗಿರುವ ವ್ಯಕ್ತಿಯ ಹೆಸರು ವಿದ್ವಾನ್ ಎಚ್. ಎಸ್. ಬಾಲಕೃಷ್ಣ ಎಂದು.

‘ವಿದ್ಯೆಗೆ ವಯಸ್ಸು, ಉದ್ಯೋಗ, ಸ್ಥಾನಮಾನಗಳ ಕಟ್ಟುಪಾಡು ಇಲ್ಲ.  ಶ್ರದ್ಧಾವಾನ್ ಲಭತೇ ಜ್ಞಾನಮ್. ವಿದ್ಯೆ ಬಯಸುವವನಿಗೆ ಬೇಕಾದದ್ದು ಶ್ರದ್ಧೆ, ಆಸಕ್ತಿ ಮತ್ತು ನಿರಂತರ ಅಭ್ಯಾಸ ಮಾಡುವ ಗುಣ. ಇವು ನಿಮ್ಮಲ್ಲಿದ್ದರೆ ಎಂತಹ ವಿದ್ಯೆಯೂ ನಿಮಗೊಲಿಯದಿರದು’ ಅದು ಬಾಲಕೃಷ್ಣ ಅವರ ಖಚಿತ ನುಡಿ. ಅದು ಅವರ ಅನುಭವದಿಂದ ಮೊಳಕೆಯೊಡೆದ ಮಾತು.

ವಿದ್ವಾನ್ ಎಚ್. ಎಸ್. ಬಾಲಕೃಷ್ಣ ಸಂಭವೇ ಗಾನಕಲಾ ಕೇಂದ್ರದ ಸಂಸ್ಥಾಪಕರು. ಅವರನ್ನು ಹೀಗೆಂದು ಪರಿಚಯಿಸಿದರೆ ಸಾಗರದಿಂದ ಒಂದೇ ಒಂದು ಮುತ್ತನ್ನು ಹೆಕ್ಕಿ ತೋರಿಸಿದಂತೆ ಮಾತ್ರ ಆಗುತ್ತದೆ. ಅವರು ಹಲವು ವೈಶಿಷ್ಟ್ಯಗಳ ಸಂಗಮ. ಆಕಾಶದಲ್ಲಿ ಮಿಂಚು ಉತ್ಪತ್ತಿಯಾಗುವ ಸಂಕೀರ್ಣತೆಗಳನ್ನು ಅವರು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅವರದೇ ಪರಿಭಾಷೆಯಲ್ಲಿ ಹೇಳಬಲ್ಲರು; ಆ ಮಿಂಚನ್ನು ಬಂಧಿಸುವ ತಾಂತ್ರಿಕತೆಯನ್ನೂ ಅಷ್ಟೇ ನೈಪುಣ್ಯತೆಯಿಂದ ವಿವರಿಸಬಲ್ಲರು. ಮೆಕ್ಯಾನಿಕಲ್ ಎಂಜಿನಿಯರಿಂಗಿನ ಗುಣಾಕಾರ ಭಾಗಾಕಾರಗಳನ್ನು ಕುಳಿತಲ್ಲೇ ಚಿತ್ರಿಸಬಲ್ಲರು. ಮರುಕ್ಷಣದಲ್ಲೇ, “ನೀವು ದೇವರನ್ನು ಕಾಣಬೇಕೆಂದಿದ್ದರೆ ಇನ್ನೇನೂ ಮಾಡಬೇಡಿ. ನಾದದ, ಸಂಗೀತದ ಉಪಾಸನೆ ಮಾಡಿ ಅಷ್ಟೇ ಸಾಕು. ಭಗವಂತ ತಾನಾಗಿಯೇ ನಿಮ್ಮ ಮನಸ್ಸಿನೊಳಗೆ ನೆಲೆನಿಂತು ಶಾಂತಿಯನ್ನೂ ಆನಂದವನ್ನೂ ಕೊಡುತ್ತಾನೆ,” ಎಂದು ಸಂಗೀತದ ಮಹಿಮೆಯನ್ನು ಹೆಮ್ಮೆಯಿಂದ ಕೊಂಡಾಡಬಲ್ಲರು. ಕಣ್ತುಂಬುವಂತೆ ಹಾಡಬಲ್ಲರು. ಅದೇ ಭಾವವನ್ನು ಪಿಟೀಲಿನ ತಂತಿಗಳಿಂದಲೂ ಹೊಮ್ಮಿಸಿ ಮುಗುಳ್ನಗಬಲ್ಲರು. ಹಾಗೇ ನಿಧಾನವಾಗಿ ವೇದೋಪನಿಷತ್ತುಗಳ ಕಡೆಗೆ ಹೊರಳಿ ಆರ್ಷೇಯ ಜ್ಞಾನದ ಮಹತ್ತನ್ನು ಎಳೆಎಳೆಯಾಗಿ ಬಿಡಿಸಿಡಬಲ್ಲರು.

ಎತ್ತಣ ಎಂಜಿನಿಯರಿಂಗ್, ಎತ್ತಣ ಸಂಗೀತ, ಎತ್ತಣ ಅಧ್ಯಾತ್ಮ, ಎತ್ತಣಿಂದೆತ್ತ ಸಂಬಂಧವಯ್ಯ ಎಂದು ಹುಬ್ಬೇರಿಸದೆ ಬೇರೆ ದಾರಿಯೇ ಇಲ್ಲ. ಆದರೆ ಅವೆಲ್ಲವನ್ನೂ ಮೇಳೈಸಿಕೊಂಡಿರುವ ಬಾಲಕೃಷ್ಣ ಅವರು ನಮ್ಮೆದುರಿಗಿರುವಾಗ ಒಪ್ಪದೇ ಇರಲೂ ಸಾಧ್ಯವಿಲ್ಲ.

ಬಾಲಕೃಷ್ಣ ಅವರು ವೃತ್ತಿಯಿಂದ ಎಂಜಿನಿಯರ್. ಅವರ ಕುಟುಂಬದ ಬೇರುಗಳಿರುವುದು ಚಿಕ್ಕಮಗಳೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ. ಪದವಿಯನ್ನೂ (1959), ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಇ. ಮೆಕ್ಯಾನಿಕಲ್ (1965) ಪದವಿಯನ್ನೂ ಪ್ರಥಮ ಶ್ರೇಣಿಯಲ್ಲಿ ಪಡೆದು ತೀರಾ ಈಚಿನವರೆಗೂ ಎಂಜಿನಿಯರಿಂಗ್‍ನ ವಿವಿಧ ಮಜಲುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಜಪಾನ್ ಸಹಯೋಗ ಹೊಂದಿದ್ದ ರಾಜ್ಯದ ಪ್ರತಿಷ್ಠಿತ ರ್ಯೆಮ್ಕೋ ಕಂಪೆನಿಯ ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ವಿಭಾಗದಲ್ಲಿ (ಈಗಿನ ಬಿಎಚ್‍ಇಎಲ್ ಎಲೆಕ್ಟ್ರಾನಿಕ್ಸ್ ವಿಭಾಗ) ಸಹಾಯಕ ಎಂಜಿನಿಯರ್ ಆಗಿ ವೃತ್ತಿ ಜೀವನ ಆರಂಭಿಸಿದ ಬಾಲಕೃಷ್ಣ ಅವರು ತಮ್ಮ ಪ್ರತಿಭೆ, ನೈಪುಣ್ಯತೆ ಮತ್ತು ಪರಿಶ್ರಮಗಳಿಂದ ಸತತ ನಾಲ್ಕು ದಶಕಗಳವರೆಗೆ ವಿವಿಧ ಕಂಪೆನಿಗಳ ಉನ್ನತ ಜವಾಬ್ದಾರಿಗಳನ್ನು ನಿರ್ವಹಿಸಿದರು.

1973ರಲ್ಲಿ ಅವರು ಸಂಸ್ಥಾಪಕ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಬೆಂಗಳೂರಿನಲ್ಲಿ ಆರಂಭಿಸಿದ ಹೈ ವೋಲ್ಟೇಜ್ ಎಕ್ವಿಪ್‍ಮೆಂಟ್ ಕಂಪೆನಿ ಅವರ ವೃತ್ತಿಜೀವನದ ಮಹತ್ವದ ಘಟ್ಟಗಳಲ್ಲೊಂದಾಗಿತ್ತು. ದೆಹಲಿಯ ಇನ್ಸ್‍ಟಿಟ್ಯೂಟ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿಯಲ್ ಡೆವಲಪ್‍ಮೆಂಟ್ 1980ರಲ್ಲಿ ತನ್ನ ಐದನೇ ಆರ್ಥಿಕ ಅಭಿವೃದ್ಧಿ ಸಮಾವೇಶದಲ್ಲಿ ಅವರನ್ನು ‘ಸ್ವನಿರ್ಮಿತ ಕೈಗಾರಿಕೋದ್ಯಮಿ’ ಎಂದು ಗುರುತಿಸಿ ಪ್ರತಿಷ್ಠಿತ ‘ಉದ್ಯೋಗ ಪತ್ರ’ ಪುರಸ್ಕಾರವನ್ನು ನೀಡಿದ್ದು ಬಾಲಕೃಷ್ಣ ಅವರ ಪರಿಶ್ರಮ ಹಾಗೂ ನಾಯಕತ್ವಕ್ಕೆ ಸಾಕ್ಷಿ. ಅಂದಿನ ಉಪರಾಷ್ಟ್ರಪತಿ ಎಂ. ಹಿದಾಯತುಲ್ಲ ಅವರಿಂದ ಈ ಪ್ರಶಸ್ತಿ ಸ್ವೀಕರಿಸಿದ ನೆನಪು ಅವರಲ್ಲಿ ಈಗಲೂ ಹೊಚ್ಚಹೊಸದಾಗಿಯೇ ಇದೆ.

ಸರಿಸುಮಾರು 2008ರವರೆಗೂ ವೃತ್ತಿಯಲ್ಲಿ ಸಕ್ರಿಯರಾಗಿದ್ದ ಬಾಲಕೃಷ್ಣ ಅವರು ತಮ್ಮ ಅಷ್ಟೂ ಕೆಲಸಗಳ ಮಧ್ಯೆ ಸಂಗೀತ-ಸಂಸ್ಕೃತಿ-ಅಧ್ಯಾತ್ಮಗಳ ಕವಲು ಹಾದಿಗಳನ್ನೇ ಹೆದ್ದಾರಿಗಳನ್ನಾಗಿ ರೂಪಿಸಿಕೊಂಡು ಬಂದಿರುವುದು ಅವರ ಪರಿಶ್ರಮ ಹಾಗೂ ಉತ್ಸಾಹಗಳಿಗೆ ಹಿಡಿದ ಕೈಗನ್ನಡಿ. ಈ ಪರಿಣತಿಯ ಹಿಂದೆ ಅವರ ಮನೆತನದ ಸಂಸ್ಕಾರದ ಕೊಡುಗೆಯೂ ಇದೆ. ಅವರ ತಂದೆ ವೇದವಿದ್ವಾಂಸರಾದ ಶ್ರೀಕಂಠ ಘನಪಾಠಿಗಳು, ತಾಯಿ ಶ್ರೀಮತಿ ಕಮಲಮ್ಮ. ಚಿಕ್ಕಪ್ಪ ಪ್ರಸಿದ್ಧ ಕೊಳಲು ವಿದ್ವಾಂಸರು. ಅಣ್ಣ ಎಚ್. ಎಸ್. ಚಂದ್ರಶೇಖರ ಶಾಸ್ತ್ರಿ ಉತ್ತಮ ತಬಲಾ ಪಟು.

ಅವರಿಂದಲೇ ಸಂಗೀತದ ಪ್ರೇರಣೆಯನ್ನು ಪಡೆದ ಬಾಲಕೃಷ್ಣ ಅವರು ಬಿಎಸ್ಸಿ ಪದವಿ ಬಳಿಕ ಉದ್ಯೋಗ ಮಾಡುತ್ತಲೇ ಸಂಜೆಯ ವೇಳೆ ಪ್ರಸಿದ್ಧ ಪಿಟೀಲು ವಿದ್ವಾಂಸರಾದ ರತ್ನಗಿರಿ ಸುಬ್ಬಾಶಾಸ್ತ್ರಿಗಳಲ್ಲಿ ವಯೋಲಿನ್ ತರಬೇತಿ ಪಡೆದರು. ಮುಂದೆ ಪ್ರಸಿದ್ಧ ವಿದ್ವಾಂಸರಾದ ಆನೂರು ಎಸ್. ರಾಮಕೃಷ್ಣ ಅವರಿಂದ ಹೆಚ್ಚಿನ ಕೌಶಲಗಳನ್ನು ರೂಢಿಸಿಕೊಂಡರು. ಶ್ರೀ ಕೆ. ಎಸ್. ಕೃಷ್ಣಮೂರ್ತಿಯವರಿಂದ ಭಜನೆಯೇ ಮೊದಲಾದ ಪಾಠಗಳನ್ನೂ, ಶ್ರೀ ಲಕ್ಷ್ಮೀನರಸಿಂಹಮೂರ್ತಿ ಹಾಗೂ ಶ್ರೀ ಪುಟ್ಟನರಸಿಂಹಶಾಸ್ತ್ರಿಯವರಿಂದ ವೇದಗಳ ಜ್ಞಾನವನ್ನೂ ಪಡೆದುಕೊಂಡರು.

ತಮ್ಮ ಗುರುಗಳ ಜತೆಗೇ ವಯೋಲಿನ್ ಕಛೇರಿ ನೀಡಿರುವ ಹಿರಿಮೆ ಬಾಲಕೃಷ್ಣ ಅವರದ್ದು. ಮುಂದೆ ಅನೇಕ ಕಾರ್ಯಕ್ರಮಗಳಲ್ಲಿ ವಯೋಲಿನ್ ಸೋಲೋ, ದ್ವಂದ್ವ ಕಛೇರಿಗಳನ್ನು ನಡೆಸಿಕೊಟ್ಟಿರುವುದಲ್ಲದೆ ಹಲವಾರು ಸಂಗೀತ ವಿದ್ವಾಂಸರಿಗೆ ಪಕ್ಕವಾದ್ಯವನ್ನೂ ಒದಗಿಸಿದರು.

ಶಾಸ್ತ್ರೀಯ ಸಂಗೀತದಲ್ಲೂ ವಿಶೇಷ ಪರಿಣತಿಯಿರುವ ಬಾಲಕೃಷ್ಣ ಅವರಿಗೆ ನೂರಾರು ಕೃತಿಗಳು ಕಂಠಸ್ಥ. ಸ್ವಾರಸ್ಯವೆಂದರೆ ಅವರೆಂದೂ ಶಾಸ್ತ್ರೀಯ ಹಾಡುಗಾರಿಕೆಯನ್ನು ಗುರುಮುಖೇನ ಕಲಿತವರಲ್ಲ. ಅವರದ್ದು ಏಕಲವ್ಯನ ಸಾಧನೆ. ಅವರ ಸಾಧನೆಯ ಫಲವನ್ನೀಗ ‘ಸಂಭವೇ’ ಮೂಲಕ ನೂರಾರು ಸಂಗೀತಾಸಕ್ತರು ಉಣ್ಣುತ್ತಿದ್ದಾರೆ. ತಮ್ಮ 73ನೇ ವಯಸ್ಸಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿ.ವಿ.ಯಿಂದ ಎಂ.ಮ್ಯೂಸಿಕ್ (ಹಾಡುಗಾರಿಕೆ) ಪದವಿಯನ್ನು ಬಾಲಕೃಷ್ಣ ಅವರು ಪಡೆದಿದ್ದಾರೆ ಎಂದರೆ ಅವರ ಇಳಿವಯಸ್ಸಿನ ಹುಮ್ಮಸ್ಸನ್ನು ಯಾರಾದರೂ ಅರ್ಥಮಾಡಿಕೊಳ್ಳಬಹುದು. ಈ ಪದವಿಗಾಗಿ ಅವರು ರಚಿಸಿದ ಸಂಶೋಧನ ಪ್ರಬಂಧವನ್ನು ‘ನಾದೋಪಾಸನೆಯಿಂದ ಭಗವತ್‍ಪ್ರಾಪ್ತಿ’ ಎಂಬ ಕೃತಿಯಾಗಿ ಅವರು ಈಚೆಗೆ ಪ್ರಕಟಿಸಿದ್ದು ಸಂಗೀತದ ಪರಿಣಾಮಗಳ ಕುತೂಹಲಿಗಳೆಲ್ಲರಿಗೂ ಒಂದು ಆಕರ ಗ್ರಂಥವಾಗಿದೆ. ಅಭಿಮಾನಿಗಳು ಅವರನ್ನು ‘ಸ್ವರನಾದವೇದವಿಭುದ’, ‘ವಿದ್ಯಾಪೀಠ ಗುರುವರ’ ಎಂದೆಲ್ಲ ಪ್ರೀತಿಯಿಂದ ಕರೆದಿದ್ದಾರೆ. ಇಷ್ಟೆಲ್ಲದರ ನಡುವೆಯೂ ಪ್ರಚಾರವೆಂದರೆ ಮೈಲುದೂರ ಓಡುವ ಅವರದು ‘ನಾನು ಮಾಡಿರುವುದು ಏನೂ ಅಲ್ಲ’ ಎಂಬ ವಿನೀತ ಭಾವ. 

ಸಾಧನೆಯ ಹಾದಿಯಲ್ಲಿ ತಮ್ಮೊಂದಿಗೆ ಹೆಗಲೆಣೆಯಾಗಿರುವ ಪತ್ನಿ ಶ್ರೀಮತಿ ಜ್ಯೋತಿಯವರೊಂದಿಗೆ ಸಂಗೀತದ ಮಧುರ ಯಾನದಲ್ಲಿ ಸಾಗಿ ಬಂದಿರುವ ವಿದ್ವಾನ್ ಬಾಲಕೃಷ್ಣ ಅವರು ಆಗಸ್ಟ್ 20ರಂದು ತಮ್ಮ 75ನೇ ಜನ್ಮದಿನದ ಸಾರ್ಥಕ್ಯದಲ್ಲಿದ್ದಾರೆ. ಊರು ಪರವೂರುಗಳಲ್ಲಿರುವ ಅವರ ನೂರಾರು ಶಿಷ್ಯರು, ಸ್ನೇಹಿತರು, ಅಭಿಮಾನಿಗಳಿಗೆ ಇದಕ್ಕಿಂತ ಸಂಭ್ರಮದ ವಿಷಯ ಇನ್ನೇನಿದೆ?

 

ಶುಕ್ರವಾರ, ಜುಲೈ 10, 2015

ಐಎಎಸ್‍ನಲ್ಲಿ ಕನ್ನಡಿಗರ ಹೊಸ ಪರ್ವ

ಜುಲೈ 10, 2015ರ 'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಲೇಖನ

ಕನ್ನಡಿಗರು ಮತ್ತೊಂದು ಮಿಥ್ಯೆಯನ್ನು ಭೇದಿಸಿದ್ದಾರೆ. ಯಾವುದನ್ನು ತಮ್ಮ ‘ಕಪ್ ಆಫ್ ಟೀ’ ಅಲ್ಲವೆಂದು ಭಾವಿಸಿದ್ದರೋ, ಅದನ್ನೇ ಅವರೀಗ ತಮ್ಮ ಸಾಧನೆಯ ಅಂಗಳವಾಗಿಸಿಕೊಂಡಿದ್ದಾರೆ. ಅಶ್ವಮೇಧದ ಕುದುರೆಯನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ.

ನಾಗರಿಕ ಸೇವಾ ಪರೀಕ್ಷೆಗಳಲ್ಲಿನ ಯಶಸ್ಸು ತೀರಾ ಇತ್ತೀಚಿನವರೆಗೂ ಕನ್ನಡಿಗರಿಗೆ ಕನ್ನಡಿಯ ಗಂಟೇ ಆಗಿತ್ತು. ನಮ್ಮ ಸುತ್ತಮುತ್ತಲಿನ ರಾಜ್ಯಗಳ ಯುವಕ ಯುವತಿಯರು ಪ್ರತಿವರ್ಷ ರಾಶಿರಾಶಿ ಐಎಎಸ್, ಐಪಿಎಸ್ ರ್ಯಾಂಕುಗಳನ್ನು ಬಾಚಿಕೊಳ್ಳುತ್ತಿದ್ದರೆ ನಾವು ವಿಸ್ಮಯದಿಂದ ಮತ್ತು ನಿರಾಸೆಯಿಂದ ನಿಂತು ಅವರನ್ನು ನೋಡುವ ಪರಿಸ್ಥಿತಿಯಿತ್ತು.

ಕಾಲ ಬದಲಾಗಲೇಬೇಕು; ಬದಲಾಗಿದೆ. ಕಳೆದ ಹತ್ತು ವರ್ಷಗಳಿಂದ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಕನ್ನಡಿಗರು ಇಟ್ಟಿರುವ ಹೆಜ್ಜೆಯ ದಿಕ್ಕು ಬದಲಾಗಿದೆ. ಅದಕ್ಕಿಂತ ಮೊದಲು ವರ್ಷಕ್ಕೆ ಒಂದಿಬ್ಬರು ಕನ್ನಡಿಗರು ಐಎಎಸ್ ಸಾಧನೆ ಮಾಡಿದರೂ ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳುವ ಸನ್ನಿವೇಶ ಇತ್ತು. ನಿಧಾನವಾಗಿ ನಮ್ಮ ಪರಿಸ್ಥಿತಿ ಸುಧಾರಿಸತೊಡಗಿತು. 2005ರಲ್ಲಿ 23 ಮಂದಿ ಕನ್ನಡಿಗರು ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾದರು. 2009ರಲ್ಲಿ 16 ಮಂದಿ, 2010ರಲ್ಲಿ 23 ಮಂದಿ, 2011ರಲ್ಲಿ ಬರೋಬ್ಬರಿ 65 ಮಂದಿ ಐಎಎಸ್ ಸಾಧನೆ ಮಾಡಿದರು. ಈ ಸಂಖ್ಯೆಗೆ ಹೋಲಿಸಿದರೆ ಕಳೆದೆರಡು ವರ್ಷಗಳ ಫಲಿತಾಂಶ ಕೊಂಚ ಇಳಿಮುಖವಾದಂತೆ ಕಂಡರೂ ಅದು ತಾತ್ಕಾಲಿಕ ಎಂಬುದನ್ನು ಈ ವರ್ಷದ ಫಲಿತಾಂಶ ದೃಢಪಡಿಸಿದೆ. 2012ರಲ್ಲಿ 25 ಮಂದಿ, 2013ರ ಪರೀಕ್ಷೆಯಲ್ಲಿ 45 ಮಂದಿ ಯಶಸ್ಸು ಕಂಡಿದ್ದರು. ಈ ವರ್ಷ ಮತ್ತೆ ಆತ್ಮವಿಶ್ವಾಸ ಗರಿಗೆದರಿದೆ. ಒಟ್ಟು 61 ಮಂದಿ ರ್ಯಾಂಕ್ ಗಳಿಸಿರುವುದು ನೋಡಿ ಇಡೀ ರಾಜ್ಯವೇ ಸಂಭ್ರಮಿಸಿದೆ.

2011ರ ಸಂಖ್ಯೆಗೆ ಹೋಲಿಸಿದರೆ ಇದು ಕೊಂಚ ಕಡಿಮೆ ಅನಿಸಿದರೂ, ಗುಣಾತ್ಮಕವಾಗಿ ನೋಡಿದರೆ ಈ ವರ್ಷದ್ದೇ ಕನ್ನಡಿಗರ ಶ್ರೇಷ್ಠ ಸಾಧನೆ. ಒಟ್ಟಾರೆ 65 ರ್ಯಾಂಕ್ ಗಳಿಸಿದ್ದರೂ ಮೊದಲ 25 ರ್ಯಾಂಕುಗಳ ಪೈಕಿ ನಮ್ಮದು ಒಂದೂ ಇರಲಿಲ್ಲ. ಆದರೆ ಈ ವರ್ಷ ಟಾಪ್-50 ರ್ಯಾಂಕುಗಳಲ್ಲಿ ನಮ್ಮವರು ನಾಲ್ಕು ರ್ಯಾಂಕುಗಳನ್ನು ಬಾಚಿಕೊಂಡಿದ್ದಾರೆ. ಅದರಲ್ಲೂ ಕನ್ನಡಿಗರು ಮೊದಲ ಹತ್ತರ ಪಟ್ಟಿಯಲ್ಲಿ ಕಾಣಿಸಿಕೊಳ್ಳದೆ ಒಂದು ದಶಕವೇ ಕಳೆಯಿತು. ಈ ವರ್ಷ ಆ ಆಸೆಯೂ ಈಡೇರಿದೆ. ಉಡುಪಿಯ ನಿತೀಶ್ ಕೆ. 8ನೇ ರ್ಯಾಂಕ್ ಗಳಿಸಿಬಿಟ್ಟಿದ್ದಾರೆ. ಬೆಂಗಳೂರಿನ ಫೌಸಿಯಾ ತರನಮ್-31, ಕೊರಟಗೆರೆಯ ಡಿ. ಕೆ. ಬಾಲಾಜಿ-36 ಹಾಗೂ ಬೆಂಗಳೂರಿನ ಎಂ. ಎಸ್. ಪ್ರಶಾಂತ್ 47ನೇ ರ್ಯಾಂಕ್ ಗಳಿಸಿ ಎಲ್ಲರೂ ಹೆಮ್ಮೆಪಡುವಂತೆ ಮಾಡಿದ್ದಾರೆ.

ಉತ್ತರ ಪ್ರದೇಶ ಮತ್ತು ಬಿಹಾರ ಇಂದಿಗೂ ಅತಿಹೆಚ್ಚು ಐಎಎಸ್ ಅಧಿಕಾರಿಗಳನ್ನು ಕೊಡುವ ರಾಜ್ಯಗಳಾಗಿವೆ. ಉಳಿದಂತೆ ತಮಿಳುನಾಡು, ಆಂಧ್ರ ಪ್ರದೇಶ, ದೆಹಲಿ, ರಾಜಸ್ತಾನ, ಪಂಜಾಬ್, ಮಹಾರಾಷ್ಟ್ರ, ಹರ್ಯಾಣ ಮತ್ತು ಮಧ್ಯಪ್ರದೇಶ ಟಾಪ್-10 ಪಟ್ಟಿಯಲ್ಲಿ ಸ್ಥಾನ ಗಳಿಸಿಕೊಂಡಿವೆ. ನಮ್ಮ ನೆರೆಯ ರಾಜ್ಯಗಳೆಲ್ಲ ಈ ಪಟ್ಟಿಯಲ್ಲಿದ್ದರೂ ನಾವು ಇನ್ನೂ ಅಲ್ಲಿಗೆ ಏರದಿರುವುದು ಯೋಚಿಸಬೇಕಾದ ವಿಷಯವಲ್ಲವೇ?

ಪ್ರಪಂಚದಲ್ಲೇ ಶ್ರೇಷ್ಠ ಡಾಕ್ಟರುಗಳನ್ನು ಹಾಗೂ ಎಂಜಿನಿಯರುಗಳನ್ನು ತಯಾರು ಮಾಡುತ್ತಿರುವ ಕರ್ನಾಟಕ ತನ್ನ ಪ್ರತಿಭೆಗಳನ್ನು ನಾಗರಿಕ ಸೇವೆಯತ್ತ ತಿರುಗಿಸುವ ಅವಶ್ಯಕತೆ ಇಂದು ದಟ್ಟವಾಗಿದೆ. ನಮ್ಮಲ್ಲಿರುವುದು ಜಾಗೃತಿ ಮತ್ತು ಆತ್ಮವಿಶ್ವಾಸದ ಕೊರತೆಯೇ ಹೊರತು ಪ್ರತಿಭೆಯದ್ದಲ್ಲ. ಎಂಜಿನಿಯರಿಂಗ್-ವೈದ್ಯಕೀಯಗಳಷ್ಟೇ ಭೂಮಿ ಮೇಲಿನ ಶ್ರೇಷ್ಠ ಉದ್ಯೋಗಗಳೆಂಬ ಭ್ರಮೆಯಿಂದ ನಮ್ಮ ಯುವಕರು ಮತ್ತು ಅವರ ಹೆತ್ತವರು ಹೊರಬರಲೇಬೇಕಿದೆ.

ಈ ಜಾಗೃತಿ ಮೂಡಿಸುವ ಕೆಲಸ ಶಾಲಾ-ಕಾಲೇಜು ಹಂತದಲ್ಲೇ ನಡೆಯುವುದು ಅನಿವಾರ್ಯ. ಮಾನವಿಕ ಶಾಸ್ತ್ರ ಮತ್ತು ಮೂಲವಿಜ್ಞಾನಗಳು ಮೂಲೆಗುಂಪಾಗುತ್ತಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಅವುಗಳತ್ತ ಆಕರ್ಷಿಸಿ ಅವರು ಮುಂದೆ ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಾಗುವಂತೆ ಪ್ರೇರೇಪಿಸುವ ಹೊಣೆಗಾರಿಕೆ ನಮ್ಮ ಕಾಲೇಜುಗಳಿಗಿದೆ. ಈ ನಿಟ್ಟಿನಲ್ಲಿ ಪ್ರತೀ ಕಾಲೇಜಿನಲ್ಲೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳನ್ನು ತೆರೆಯುವುದು ಮತ್ತು ಅವು ಸಕ್ರಿಯವಾಗಿರುವಂತೆ ನೋಡಿಕೊಳ್ಳುವುದು ಅತ್ಯವಶ್ಯಕ. ರೋಲ್ ಮಾಡೆಲ್‍ಗಳೀಗ ನಮ್ಮ ನಡುವೆಯೇ ಇದ್ದಾರೆ. ನಾವು ಪ್ರೇರಣೆ ಪಡೆದುಕೊಳ್ಳುವುದಷ್ಟೇ ಬಾಕಿಯಿದೆ.

‘ಯಶಸ್ಸಿನ ಮುಖವನ್ನು ನೋಡುವುದು ಈ ಪ್ರಪಂಚದಲ್ಲಿ ಅಷ್ಟೇನೂ ಸುಲಭದ ಕೆಲಸವಲ್ಲ’ ಎಂದಿದ್ದರು ಠ್ಯಾಗೋರ್. ಅದೇ ಯಶಸ್ಸನ್ನು ಹುಡುಕಿ ತಂದು ತಮ್ಮೆದುರೇ ಪ್ರತಿಷ್ಠಾಪಿಸಿಕೊಂಡಿದ್ದಾರೆ ನಮ್ಮ ಯುವಕರು. ಇನ್ನದು ತಪ್ಪಿಸಿಕೊಂಡರೆ ಅದಕ್ಕೆ ನಾವೆಲ್ಲರೂ ಬಾಧ್ಯಸ್ಥರು.

ಸಂಶೋಧನೆ ಗೊಂದಲ

ಜೂನ್ 15, 2015ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ಪೃಥ್ವಿ ದತ್ತ ಚಂದ್ರ ಶೋಭಿಯವರು ಸಂಶೋಧನಾ ಕ್ಷೇತ್ರದಲ್ಲಿನ ಅಪಸವ್ಯಗಳನ್ನು ಎತ್ತಿತೋರಿಸಿರುವುದು (ಪ್ರಜಾವಾಣಿ, ಜೂನ್ 12) ಅತ್ಯಂತ ಸಕಾಲಿಕವೂ ಸ್ವಾಗತಾರ್ಹವೂ ಆಗಿದೆ. ಅವರ ವಿಚಾರಗಳಿಗೆ ಪೂರಕವಾಗಿ, ಸಂಶೋಧನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಬೇಕೆಂಬ ಆಸಕ್ತಿಯಿರುವ ಬೆರಳೆಣಿಕೆ ಮಂದಿಯನ್ನು ನಮ್ಮ ವಿಶ್ವವಿದ್ಯಾನಿಲಯ ವ್ಯವಸ್ಥೆಯು ಹೇಗೆ ನಿರುತ್ತೇಜಿಸಿ ಅಜ್ಞಾತವಾಸಕ್ಕೆ ಕಳುಹಿಸುತ್ತದೆ ಎಂಬುದರ ಬಗೆಗೂ ಕೆಲವು ಸ್ವಾನುಭವದ ಮಾತುಗಳನ್ನು ಸೇರಿಸಬೇಕೆನಿಸುತ್ತದೆ.

ಸುಮಾರು ಎರಡೂವರೆ ವರ್ಷಗಳ ಹಿಂದೆ ಕರ್ನಾಟಕದ ಪ್ರಮುಖ ವಿಶ್ವವಿದ್ಯಾನಿಲಯವೊಂದರಲ್ಲಿ ಪಿಎಚ್.ಡಿ. ಸಂಶೋಧನಾರ್ಥಿಯಾಗಿ ನನ್ನ ತಾತ್ಕಾಲಿಕ ನೋಂದಣಿಯಾಯ್ತು. ಯು.ಜಿ.ಸಿ. ನಿಯಮಾನುಸಾರ ಪ್ರವೇಶ ಪರೀಕ್ಷೆ, ಅಭ್ಯರ್ಥಿಗಳ ಹಂಚಿಕೆ, ಆರು ತಿಂಗಳ ಕೋರ್ಸ್‍ವರ್ಕ್, ಅದರ ಮೇಲೆ ಮತ್ತೊಂದು ಪರೀಕ್ಷೆ ಎಲ್ಲ ಆಯಿತು. ಫಲಿತಾಂಶ, ಅಂಕಪಟ್ಟಿ ಬಂತು. ಸಂಶೋಧನೆಗೆ ಆಯ್ದುಕೊಂಡಿರುವ ವಿಷಯದ ಸಾರಲೇಖವನ್ನೂ ಸೂಕ್ತ ಪರಾಮರ್ಶೆ ಬಳಿಕ ವಿ.ವಿ. ಸ್ವೀಕರಿಸಿತು.

ಇಷ್ಟೆಲ್ಲ ಮಾಡಿದ ವಿಶ್ವವಿದ್ಯಾನಿಲಯವು ಈ ಹಂತದಲ್ಲಿ ನನಗೆ (ಮತ್ತು ಸಹಸಂಶೋಧನಾರ್ಥಿಗಳಿಗೆ) ಮಾರ್ಗದರ್ಶಕರಾಗಿದ್ದವರ ಮಾನ್ಯತೆಯನ್ನೇ ರದ್ದುಗೊಳಿಸಿತು. ಸದರಿ ಮಾರ್ಗದರ್ಶಕರು ಯತಾರ್ಥವಾಗಿ ಆ ಹುದ್ದೆಗೆ ಅರ್ಹರಲ್ಲ ಎಂಬ ಆಕ್ಷೇಪಣೆಗಳು ವಿ.ವಿ. ಗಮನಕ್ಕೆ ಬಂದು, ಅವು ಅಧ್ಯಯನ ಮಂಡಳಿ ಮತ್ತು ಸಿಂಡಿಕೇಟ್‍ಗಳಲ್ಲಿ ಚರ್ಚೆಗೊಳಗಾಗಿ, ಸದರಿ ಮಾರ್ಗದರ್ಶಕರಿಗೆ ನೀಡಿದ ಸ್ಥಾನಮಾನವನ್ನು ವಿ.ವಿ.ಯೇ ವಾಪಸ್ ಪಡೆದುಕೊಂಡಿತು.

ಮಾನ್ಯತೆ ರದ್ದಾದ ಮಾರ್ಗದರ್ಶಕರ ಜತೆಗಿದ್ದ ಎಂಟು ಮಂದಿ ಸಂಶೋಧನಾರ್ಥಿಗಳ ಪೈಕಿ ನಾಲ್ವರನ್ನು ವಿ.ವಿ.ಯು ಅದೇ ವಿಭಾಗದಲ್ಲಿರುವ ಇತರ ಮಾರ್ಗದರ್ಶಕರಿಗೆ ಹೆಚ್ಚುವರಿಯಾಗಿ ಹಂಚಿಕೆ ಮಾಡಿತು. ನಮಗೂ ಅದೇ ವ್ಯವಸ್ಥೆ ಮಾಡಿ ಎಂದರೆ ‘ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಈಗಾಗಲೇ ಯು.ಜಿ.ಸಿ. ಸೂಚಿಸಿರುವ ಮಿತಿಗಿಂತ ಹೆಚ್ಚು ಸಂಶೋಧನಾರ್ಥಿಗಳನ್ನು ಅವರಿಗೆ ಹಂಚಿಕೆ ಮಾಡಿದ್ದೇವೆ. ಇನ್ನೂ ಹೆಚ್ಚು ಮಂದಿಗೆ ಮಾರ್ಗದರ್ಶನ ಮಾಡಿ ಎಂದು ಅವರ ಮೇಲೆ ಒತ್ತಡ ಹೇರಲು ಬರುವುದಿಲ್ಲ. ನಿಮಗೆ ಬೇರೆ ಪರಿಹಾರ ಹುಡುಕೋಣ’ ಎಂದಿತು ವಿ.ವಿ.

ಈ ನಡುವೆ ‘ಕರ್ನಾಟಕದ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ನಿಮ್ಮ ವಿಷಯದಲ್ಲಿ ಮಾನ್ಯತೆ ಪಡೆದಿರುವ ಮಾರ್ಗದರ್ಶಕರನ್ನು ಆಯ್ಕೆ ಮಾಡಿಕೊಂಡು ಅವರ ಒಪ್ಪಿಗೆ ಪತ್ರವನ್ನು ತಂದರೆ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು’ ಎಂಬ ಬುದ್ಧಿವಂತಿಕೆಯ ಪತ್ರವೊಂದು ವಿ.ವಿ.ಯಿಂದ ಬಂತು. ಮಾರ್ಗದರ್ಶಕರನ್ನು ನೇಮಿಸಿಕೊಂಡು ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುವ ಜವಾಬ್ದಾರಿ ವಿಶ್ವವಿದ್ಯಾನಿಲಯದ್ದೇ ಹೊರತು ವಿದ್ಯಾರ್ಥಿಗಳದ್ದಲ್ಲ. ಅಂತೂ ಹೀಗಾದರೂ ಸಮಸ್ಯೆ ಬಗೆಹರಿದರೆ ಸಾಕು ಎಂದುಕೊಂಡು ಕರ್ನಾಟಕದ ಎಲ್ಲ ವಿಶ್ವವಿದ್ಯಾನಿಲಯಗಳಿಗೂ ಎಡತಾಕಿದ್ದಾಯಿತು. ಮತ್ತೆ ಅಲ್ಲಿಯೂ ನಿರಾಸೆ. ನಮ್ಮ ಬಳಿ ಸೀಟುಗಳು ಖಾಲಿಯಿಲ್ಲವೆಂದೋ, ಬೇರೆ ವಿ.ವಿ.ಯ ವಿದ್ಯಾರ್ಥಿಗಳಿಗೆ ಗೈಡ್ ಮಾಡಲು ನಮ್ಮಲ್ಲಿ ತಾಂತ್ರಿಕ ತೊಂದರೆಗಳಿವೆ ಎಂದೋ ನಾನಾ ಕಾರಣಗಳನ್ನು ನೀಡಿ ಎಲ್ಲರೂ ವಾಪಸ್ ಅಟ್ಟಿದರು.

ಕೆಲವರು ಕೂಡಲೇ ನಿರಾಸೆ ಮಾಡಬಾರದೆಂದು ಒಂದಷ್ಟು ಸಮಯ ನಮ್ಮ ಅರ್ಜಿಗಳನ್ನು ಇಟ್ಟುಕೊಂಡು ಆಮೇಲೆ ತಣ್ಣಗೆ ಜಾರಿಕೊಂಡರು. ಹೇಗಾದರೂ ಈ ‘ತಾಂತ್ರಿಕ ತೊಂದರೆ’ಗಳನ್ನು ನಿವಾರಿಸಿ ನಮಗೊಂದು ಸಹಾಯ ಮಾಡಿಕೊಡಿ ಸಾರ್ ಎಂದು ಕರ್ನಾಟಕದ ದೊಡ್ಡ ವಿ.ವಿ.ಯೊಂದರ ಕುಲಪತಿಗಳ ಬಳಿಗೇ ಖುದ್ದು ಹೋಗಿ ಕೈಮುಗಿದೆ. ‘ಅಯ್ಯೋ ನಿಮಗೆ ಸಹಾಯ ಮಾಡಹೊರಟರೆ ನಮ್ಮ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತೆ. ನಿಮಗೆ ಸಹಾಯ ಮಾಡಬೇಕಾದ್ದು ನಿಮ್ಮ ಯೂನಿವರ್ಸಿಟಿಯೇ ಹೊರತು ನಾವಲ್ಲ’ ಎಂದು ಸ್ಪಷ್ಟವಾಗಿ ಹೇಳಿ ಕೈಚೆಲ್ಲಿದರು.

ಆ ವಿಷಯವನ್ನೂ ನಮ್ಮ ವಿ.ವಿ. ಗಮನಕ್ಕೆ ತಂದಾಯಿತು. ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಯಾರಾದರೊಬ್ಬರು ನಿವೃತ್ತ ಪ್ರಾಧ್ಯಾಪಕರನ್ನಾದರೂ ಗೈಡ್ ಆಗಿ ನೇಮಿಸಿಕೊಂಡು ನಮ್ಮ ಸಂಶೋಧನೆ ಮುಂದುವರಿಸುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಬೇಡಿಕೊಂಡದ್ದಾಯಿತು. ಅದು ವಿ.ವಿ.ಯ ನಿಯಮಗಳಲ್ಲಿ ಇಲ್ಲ. ‘ನಾವು ನಿಯಮಗಳ ಪ್ರಕಾರ ಕೆಲಸ ಮಾಡಬೇಕಾಗುತ್ತೆ. ನಾವು ಅವುಗಳನ್ನು ಬೆಂಡ್ ಮಾಡಬಹುದೇ ಹೊರತು ಬ್ರೇಕ್ ಮಾಡೋಹಾಗಿಲ್ಲ. ಇನ್ನೇನಾದರೂ ಪರಿಹಾರ ಹುಡುಕೋಣ. ನೀವು ತಾಳ್ಮೆಯಿಂದ ಕಾಯಿರಿ’ ಎಂದಿತು ವಿ.ವಿ.

ಇವರು ಯಾವ ನಿಯಮಗಳ ಬಗ್ಗೆ ಮಾತನಾಡುತ್ತಿದ್ದಾರೆ? ಒಬ್ಬ ವ್ಯಕ್ತಿಗೆ ಪಿಎಚ್.ಡಿ. ಮಾರ್ಗದರ್ಶಕನಾಗಲು ಅರ್ಹತೆಯಿಲ್ಲ ಎಂದಾದಮೇಲೆ ವಿ.ವಿ.ಯು ಆತನನ್ನು ಮಾರ್ಗದರ್ಶಕನನ್ನಾಗಿ ಹೇಗೆ ನೇಮಿಸಿಕೊಂಡಿತು? ಸದರಿ ಮಾರ್ಗದರ್ಶಕರ ನೇತೃತ್ವದಲ್ಲಿ ಸಂಶೋಧನೆ ನಡೆಸಿ ಅದಾಗಲೇ ಇಬ್ಬರು ತಮ್ಮ ಪಿಎಚ್.ಡಿ. ಪೂರ್ಣಗೊಳಿಸಿದ್ದಾರೆ; ಅದೇ ವಿ.ವಿ.ಯಿಂದ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ! ಮಾನ್ಯತೆ ಕಳೆದುಕೊಂಡ ಮಾರ್ಗದರ್ಶಕರ ಅಡಿಯಲ್ಲಿ ಸಂಶೋಧನೆ ನಡೆಸಿರುವ ಅವರ ಪಿಎಚ್.ಡಿ.ಯೂ ಅನೂರ್ಜಿತವೇ? ಹಾಗಾದರೆ ಅವರ ಭವಿಷ್ಯವೇನು? ನಾವು ಯಾವ ಪಾಪಕ್ಕೆ ಈಗ ಪ್ರಾಯಶ್ಚಿತ್ತ ಅನುಭವಿಸುತ್ತಿದ್ದೇವೆ? ವಿ.ವಿ. ನಿಯಮಗಳ ಪ್ರಕಾರ ಅರ್ಹತೆಯಿಲ್ಲದಿದ್ದರೂ ಮಾರ್ಗದರ್ಶಕನಾಗಬೇಕೆಂದು ಬಯಸಿದ ವ್ಯಕ್ತಿಯನ್ನು ನಾವು ಹಳಿಯಬೇಕೆ? ಆಗ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈಗ ಭೂತಗನ್ನಡಿ ಹಿಡಿದಿರುವ ವಿ.ವಿ.ಯನ್ನು ಹಳಿಯಬೇಕೆ? ಈ ವಿ.ವಿ.ಯ ಸಹವಾಸವನ್ನು ಯಾಕಾದರೂ ಮಾಡಿದೆವೋ ಎಂದು ನಮ್ಮನ್ನು ನಾವೇ ಹಳಿದುಕೊಳ್ಳಬೇಕೆ? ನಮ್ಮ ವೃತ್ತಿಜೀವನದ ಭವಿಷ್ಯಕ್ಕೆ ಯಾರು ಜವಾಬ್ದಾರಿ? ನಾನೊಂದು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕ. ಪಿಎಚ್.ಡಿ. ಪದವಿ ನನ್ನ ವೃತ್ತಿಜೀವನದ ಭವಿಷ್ಯಕ್ಕೂ ಅನಿವಾರ್ಯ. ಈ ಅಡಾವುಡಿಗಳ ನಡುವೆ ಓಡಾಡಿಕೊಂಡು ನಾನು ಬರಿದೇ ಕಳೆದಿರುವ ಎರಡೂವರೆ ವರ್ಷವನ್ನು, ಮಾನಸಿಕ ನೆಮ್ಮದಿಯನ್ನು ನನಗೆ ತುಂಬಿಕೊಡುವವರು ಯಾರು?

‘ರೈತ ಚಳುವಳಿಯನ್ನು ಕಟ್ಟಿಬೆಳೆಸುವಲ್ಲಿ, ಪ್ರಭಾವಿಸುವಲ್ಲಿ ಕರ್ನಾಟಕದ ಮುದ್ರಣ ಮಾಧ್ಯಮ ವಹಿಸಿದ ಪಾತ್ರ ಏನು’ ಎಂಬ ಅತ್ಯಂತ ಗಂಭೀರವಾದ ವಿಷಯವೊಂದನ್ನು ಆಯ್ದುಕೊಂಡು ನಾನು ಸಂಶೋಧನೆಗೆ ಇಳಿದಿದ್ದೆ. ಆ ದಿನಗಳಲ್ಲಿ ನನ್ನಲ್ಲಿದ್ದ ಮಹತ್ವಾಕಾಂಕ್ಷೆ, ನಿರೀಕ್ಷೆ, ಆತ್ಮವಿಶ್ವಾಸ ನೆನಪಾಗುತ್ತದೆ. ನಾಮಕಾವಾಸ್ತೆ ಪಿಎಚ್.ಡಿ. ಆಗಬಾರದು; ನನ್ನ ಸಂಶೋಧನಾ ಪ್ರಬಂಧ ನಿಜದರ್ಥದಲ್ಲಿ ಒಂದು ದಿಕ್ಸೂಚಿ ಕೃತಿಯಾಗಬೇಕು; ಅದಕ್ಕಾಗಿ ಎಷ್ಟು ಶ್ರಮಪಡಬೇಕಾಗಿ ಬಂದರೂ ಸರಿ, ಅದನ್ನು ಮಾಡಿಯೇ ತೀರಬೇಕು ಎಂದೆಲ್ಲ ತೀರ್ಮಾನಿಸಿಕೊಂಡಿದ್ದೆ. ಈ ಎರಡೂವರೆ ವರ್ಷದ ಅಲೆದಾಟದಲ್ಲಿ ನನ್ನ ಉತ್ಸಾಹವೇ ಉಡುಗಿದೆ. ಭ್ರಮನಿರಸನ ಕಾಡಿದೆ. ಇನ್ನೂ ನಿಜವಾದ ಅಧ್ಯಯನ ಆರಂಭವಾಗುವ ಮೊದಲೇ ಸಾಕಪ್ಪಾ ಸಾಕು ಈ ಪಿಎಚ್.ಡಿ. ಸಹವಾಸ ಎಂಬ ವಿಷಣ್ಣತೆ ಬಂದುಬಿಟ್ಟಿದೆ.

ಇದೇನಾ ನಮ್ಮ ವಿಶ್ವವಿದ್ಯಾನಿಲಯಗಳು ಸಂಶೋಧನೆಯನ್ನು ಉತ್ತೇಜಿಸುವ ರೀತಿ? ಇದೇನಾ ಇವರು ಹೊಸ ತಲೆಮಾರಿನ ಸಂಶೋಧಕರನ್ನು ಬೆಳೆಸುವ ವಿಧಾನ? ಮಾತೆತ್ತಿದರೆ ಯುಜಿಸಿ ನಿಯಮ, ಗುಣಮಟ್ಟ, ಸಂಶೋಧನೆಗೆ ಪೂರಕ ವಾತಾವರಣ ಎಂದೆಲ್ಲ ಬಡಬಡಿಸುವ ವಿ.ವಿ.ಗಳು ತಾವು ಅನುಷ್ಠಾನಗೊಳಿಸಬೇಕಿರುವ ಸಂಶೋಧನಾ ಸಂಸ್ಕøತಿಯನ್ನು ನಿಜದರ್ಥದಲ್ಲಿ ಜಾರಿಗೆ ತಂದಿವೆಯೇ? ಒಂದು ವ್ಯವಸ್ಥೆ ಸುಗಮವಾಗಿ ನಡೆದುಕೊಂಡುಹೋಗಬೇಕೆಂದರೆ ನೀತಿನಿಯಮಗಳು ಅನಿವಾರ್ಯ. ಆದರೆ ಆ ವ್ಯವಸ್ಥೆಯೊಳಗೆ ನಮ್ಮನ್ನು ನಾವೇ ಕಟ್ಟಿಹಾಕಿಕೊಳ್ಳುವ ಪರಿಸ್ಥಿತಿ ಬಂದರೆ ಅಂತಹ ವ್ಯವಸ್ಥೆಯ ಸುಸಂಬದ್ಧತೆ ಏನು?

ಶೈಕ್ಷಣಿಕ ಅರ್ಹತೆಗಾಗಿ ಒಂದು ಪಿಎಚ್.ಡಿ. ಇದ್ದರಾಯಿತಪ್ಪ ಎಂದು ಮಾರ್ಗದರ್ಶಕ-ಸಂಶೋಧಕ ಇಬ್ಬರೂ ಪರಸ್ಪರ ಭಾವಿಸಿಕೊಳ್ಳುವುದು, ಸಂಶೋಧನೆಯ ಗುಣಮಟ್ಟ ಪಾತಾಳ ತಲುಪಿರುವುದು, ಸಂಶೋಧನಾ ಯೋಜನೆಗಳ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣ ಲೂಟಿಯಾಗುತ್ತಿರುವುದು ಎಲ್ಲವೂ ನಿಜ; ಇವೆಲ್ಲವುಗಳನ್ನೂ ಮೀರಿ ಹೋಗಬೇಕು ಎಂಬ ನೈಜ ಉತ್ಸಾಹದಲ್ಲಿರುವವರಿಗೆ ನಮ್ಮ ವಿ.ವಿ.ಗಳು ಏನು ಕೊಟ್ಟಿವೆ?

ಬುಟ್ಟಿ ತುಂಬಾ ಬುದ್ಧಿಗಿಂತ...

ಜೂನ್ 15, 2015ರ 'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಲೇಖನ.


ಟ್ರಾಫಿಕ್ ಸಿಗ್ನಲ್‍ಗಾಗಿ ಕಾಯುತ್ತಿದ್ದೆ. ಭರ್ರಂತ ಬಂದ ನವೀನ ಶೈಲಿಯ ಬೈಕೊಂದು ನನಗಿಂತ ಎರಡಡಿ ಮುಂದಕ್ಕೆ ಹೋಗಿ ಛಕ್ಕನೆ ನಿಂತಿತು. ಇಪ್ಪತ್ತರ ಆಜುಬಾಜಿನಲ್ಲಿದ್ದ ಬೈಕ್ ಸವಾರ ಅಸಹನೆಯಿಂದ ಚಡಪಡಿಸುತ್ತಿದ್ದ. ಈ ಟ್ರಾಫಿಕ್ ಸಿಗ್ನಲ್ ಎಂಬ ವ್ಯವಸ್ಥೆ ಭೂಮಿಯ ಮೇಲೆ ಯಾಕಾದರೂ ಇದೆಯೋ ಎಂಬ ಸಿಟ್ಟು ಅವನ ಮುಖದ ಮೇಲೆ ಎದ್ದು ಕಾಣುತ್ತಿತ್ತು. ಅವನ ಬೈಕ್‍ನ ಹಿಂದೆ ಇದ್ದ ಒಂದು ಸಾಲಿನ ಬರಹದ ಕಡೆಗೆ ಅಯಾಚಿತವಾಗಿ ನನ್ನ ದೃಷ್ಟಿ ಹರಿಯಿತು: “ಈಫ್ ಯೂ ಫೈಂಡ್ ದ ಡ್ರೈವಿಂಗ್ ರ್ಯಾಶ್ (rash)... ಮೈಂಡ್ ಯುವರ್ ಓನ್ ಬಿಸಿನೆಸ್...” (ಈ ವಾಹನವು ಬೇಕಾಬಿಟ್ಟಿ ಚಾಲನೆಯಾಗುತ್ತಿದ್ದರೆ...ನಿಮ್ಮ ಕೆಲಸವನ್ನು ನೀವು ನೋಡಿಕೊಳ್ಳಿ...).

ಎಲಾ ಇವನಾ! ನಾನು ಅರೆಕ್ಷಣ ದಂಗಾಗಿ ಹೋದೆ. “ಈಫ್ ಯೂ ಫೈಂಡ್ ದ ಡ್ರೈವಿಂಗ್ ರ್ಯಾಶ್, ಪ್ಲೀಸ್ ಇನ್‍ಫಾರ್ಮ್ ದ ಸೇಮ್ ಟು ದಿಸ್ ನಂಬರ್...” (ಈ ವಾಹನವು ಬೇಕಾಬಿಟ್ಟಿ ಚಾಲನೆಯಾಗುತ್ತಿದ್ದರೆ, ದಯವಿಟ್ಟು ಈ ನಂಬರಿಗೆ ಮಾಹಿತಿ ನೀಡಿ...) ಎಂಬಂತಹ ಸಾಲುಗಳನ್ನು ನೀವು ಕೆಲವು ವಾಹನಗಳ ಮೇಲೆ ನೋಡಿರುತ್ತೀರಿ. ಬಾಡಿಗೆ ಕಾರು, ಶಾಲಾ ಬಸ್ಸು ಅಥವಾ ಸರ್ಕಾರಿ ಇಲಾಖೆಗಳ ವಾಹನಗಳ ಹಿಂದೆ ಈ ರೀತಿ ನಮೂದಿಸುವುದು ಸಾಮಾನ್ಯ. ಆದರೆ ಮೇಲೆ ಹೇಳಿದ ಬೈಕ್ ಹಿಂದೆ ಕಂಡ ಸಾಲು ನನ್ನನ್ನು ಚಕಿತಗೊಳಿಸಿತು. ಇಡೀ ದಿನ ಮತ್ತೆ ಮತ್ತೆ ಅದೇ ವಾಕ್ಯ ಕಣ್ಣೆದುರು ಬರುತ್ತಿತ್ತು. ನಾನು ನಿಜವಾಗಿಯೂ ಯೋಚನೆಗೆ ಬಿದ್ದಿದ್ದೆ.

If you find the driving rash...mind your own business...! ಹೊಸ ತಲೆಮಾರಿನ ಒಂದು ವರ್ಗದ ಒಟ್ಟಾರೆ ಮನಸ್ಥಿತಿಗೆ ಈ ಸಾಲು ಕನ್ನಡಿ ಹಿಡಿದಂತಿದೆ ಎಂದು ನನಗನ್ನಿಸಿತು. ಇದು ಕೇವಲ ವಯಸ್ಸಿನ ಪೌರುಷವೇ ಅಥವಾ ನಾವು ಬದುಕುತ್ತಿರುವ ಕಾಲದ ಕರಾಮತ್ತೇ? ನಮ್ಮ ಯುವಕರೇಕೆ ಈ ಮನಸ್ಥಿತಿಯಿಂದ ಹೊರಗೆ ಬರುತ್ತಿಲ್ಲ?

ನಾನು ನನಗೆ ಸರಿ ಅನ್ನಿಸಿದ್ದನ್ನು ಮಾಡುತ್ತೇನೆ, ನಿಮ್ಮ ಕೆಲಸವನ್ನು ನೀವು ನೋಡಿಕೊಳ್ಳಿ, ನನ್ನ ಉಸಾಬರಿ ನಿಮಗೇಕೆ ಎಂಬ ಉಡಾಫೆ ವಯೋಸಹಜವಾದದ್ದೋ ಏನೋ? ಆದರೆ ಈ ಹಂತವನ್ನು ದಾಟುವ ಮೊದಲೇ ಬದುಕು ಮುಗಿದು ಹೋದರೆ ಆ ನಷ್ಟವನ್ನು ಯಾರು ತುಂಬಿಕೊಡುತ್ತಾರೆ? ಅಷ್ಟು ಸಮಯ ಮುಚ್ಚಟೆಯಿಂದ ಪೋಷಿಸಿದ ಅಪ್ಪ-ಅಮ್ಮಂದಿರ ಕಣ್ಣೀರನ್ನು ಯಾರು ಒರೆಸುತ್ತಾರೆ?

ಸ್ನೇಹಿತರೊಬ್ಬರು ಇತ್ತೀಚೆಗೆ ಒಂದು ಘಟನೆಯನ್ನು ನೆನಪಿಸಿಕೊಂಡರು. ಅಪ್ಪ-ಅಮ್ಮ ತುಂಬ ಕಾಳಜಿಯಿಂದ ಬೆಳೆಸಿದ್ದರಂತೆ ತಮ್ಮ ಏಕೈಕ ಮಗನನ್ನು. ಆತ ಪಿಯುಸಿ ಓದುತ್ತಿದ್ದ. ಅವನಿಗೆ ವಾಹನಗಳ ಹುಚ್ಚು. ಇಷ್ಟು ಬೇಗನೇ ವಾಹನ ಏಕೆಂದು ಅವನ ಕೈಗೆ ಕಾರು ಬೈಕು ಕೊಟ್ಟಿರಲಿಲ್ಲ. ಪಿಯುಸಿ ಪರೀಕ್ಷೆ ಮುಗಿಯುತ್ತಿದ್ದಂತೆ ಅದರ ಸಂಭ್ರಮಾಚರಣೆಗೆ ಸ್ನೇಹಿತರೊಂದಿಗೆ ಗೋವಾಕ್ಕೆ ಪ್ರವಾಸ ಹೋಗುವುದಾಗಿ ಮನೆಯಲ್ಲಿ ಹಠ ಹಿಡಿದ. ಹೋಗುವುದೇನೋ ಸರಿ, ಬಸ್ಸಿನಲ್ಲಿ ಹೋಗಿ ಎಂದು ಅಪ್ಪ-ಅಮ್ಮ ಪಟ್ಟುಹಿಡಿದರು. ಇವರೋ ಮಹಾಜಾಣರು. ಕಾಯ್ದಿರಿಸಿದ ಟಿಕೇಟುಗಳನ್ನೇ ತಂದು ತೋರಿಸಿದರು. ಮನೆಯಲ್ಲಿ ಒಪ್ಪಿಗೆ ಸಿಕ್ಕಿತು. ಇವರು ಹೊರಟೇಬಿಟ್ಟರು. ಬಸ್ಸಿನಲ್ಲಲ್ಲ, ಬಾಡಿಗೆ ಕಾರುಗಳಲ್ಲಿ. ಹೊಸ ವಿನ್ಯಾಸದ ಆಧುನಿಕ ಕಾರುಗಳನ್ನು ಬಾಡಿಗೆಗೆ ಪಡೆದುಕೊಂಡು ತಾವೇ ಡ್ರೈವ್ ಮಾಡಿಕೊಂಡು ಹೆದ್ದಾರಿಯಲ್ಲಿ ಓಟ ಆರಂಭಿಸಿದರು, ಅದೂ ಕತ್ತಲಾದ ಮೇಲೆ. ಯಾರ ಮನೆಯಲ್ಲೂ ಈ ವಿಷಯ ಗೊತ್ತಿಲ್ಲ. ಆದರೆ ಏನು ಆಗಬಾರದಿತ್ತೋ ಅದು ಆಗಿಹೋಯಿತು. ಮಧ್ಯರಾತ್ರಿ ಭೀಕರ ಅಪಘಾತ. ಅಪ್ಪ-ಅಮ್ಮಂದಿರ ಮುದ್ದಿನ ಮಗ ಇನ್ನೂ ಕೋಮಾದಲ್ಲೇ ಇದ್ದಾನೆ.

ಹೇಳಿ, ಇದಕ್ಕೆ ಯಾರು ಹೊಣೆ? ತಪ್ಪುಗಳನ್ನು ತಿದ್ದಿಕೊಳ್ಳಬಹುದು, ಕಳೆದುಹೋದ ಬದುಕನ್ನು ವಾಪಸ್ ತರಬಹುದೇ? ನಮ್ಮ ಯುವಕರೇಕೆ ಹೀಗೆ ಆಡುತ್ತಿದ್ದಾರೆ? ಅಪ್ಪ-ಅಮ್ಮಂದಿರಿಗೆ ಕ್ಷಣಕ್ಷಣಕ್ಕೂ ತಮ್ಮ ಮಕ್ಕಳದ್ದೇ ಚಿಂತೆ. ಮಗ ಎಸ್.ಎಸ್.ಎಲ್.ಸಿ. ಎಂದರೆ ಅವರಿಗೆ ನಿದ್ದೆಯಿಲ್ಲ. ಮಗಳು ಪಿ.ಯು.ಸಿ. ಎಂದರೆ ಅವರಿಗೆ ಊಟವಿಲ್ಲ. ಮಗು ಯಾವುದಾದರೊಂದು ದೊಡ್ಡ ಕೆಲಸ ಹಿಡಿದು ತಮ್ಮನ್ನು ಹಗುರಗೊಳಿಸುತ್ತದೆ ಎಂಬ ನಿರೀಕ್ಷೆಯೇ ಅವರೆಲ್ಲ ತುಡಿತಗಳ ಬುನಾದಿ. ಈ ಬಿಸಿರಕ್ತದ ಉಡಾಫೆಗಳಿಗೆ ಅದ್ಯಾವುದರ ಪರಿವೆಯೇ ಇಲ್ಲ. ಅವರು ಲೈಫ್ ಎಂಜಾಯ್ ಮಾಡಬೇಕು ಅಷ್ಟೇ.

ಇನ್ನೂ ಹದಿವಯಸ್ಸಿನ ಹುಡುಗರು ಟ್ರಾಫಿಕ್ ನಿಯಮಗಳ ಗೊಡವೆಯೇ ಇಲ್ಲದೆ ಕಿಕ್ಕಿರಿದ ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನ ಚಲಾಯಿಸುವಾಗ, ‘ಸ್ವಲ್ಪ ನೋಡ್ಕೊಂಡು ಹೋಗ್ರೋ’ ಎಂದು ಯಾರಾದರೂ ಹಿರಿಯರು ದನಿಯೆತ್ತಿದರೆ ಅದು ಅವರದ್ದೇ ಅಪರಾಧ ಎಂಬಹಾಗೆ ಕಣ್ಣುಕೊಂಕಿಸಿಕೊಂಡು ಕುಹಕದ ನಗೆ ನಕ್ಕು ಸಾಗುವಾಗ, ಮೊಬೈಲ್ ಹಿಡಿದುಕೊಂಡೇ ಬೈಕ್ ಚಲಾಯಿಸುವುದು ಒಂದು ಶ್ರೇಷ್ಠ ಅರ್ಹತೆಯೋ ಎಂಬ ಹಾಗೆ ವರ್ತಿಸುವುದನ್ನು ಕಂಡಾಗ ಇವರೆಲ್ಲ ‘ಮೈಂಡ್ ಯುವರ್ ಓನ್ ಬಿಸಿನೆಸ್’ ವ್ಯವಸ್ಥೆಯ ಪ್ರತಿನಿಧಿಗಳೋ ಎಂದು ಭಾಸವಾಗುತ್ತದೆ.

ತನ್ನ ಒಂದು ಕ್ಷಣದ ಅಜಾಗರೂಕತೆ, ಉಡಾಫೆ ಇಡೀ ಬದುಕನ್ನೇ ಬಲಿತೆಗೆದುಕೊಂಡೀತು ಎಂದು ಇವರೆಲ್ಲ ಅರೆಕ್ಷಣ ಚಿಂತಿಸಿದರೆ ಸಾಕಲ್ಲವೇ? ಒರಟುತನ ಪ್ರದರ್ಶಿಸಿ ಇನ್ನೊಬ್ಬನ ಬಾಯಿಮುಚ್ಚಿಸಿದರೆ ತಾವು ಶ್ರೇಷ್ಠರು ಎಂದೇ ಅನೇಕ ಮಂದಿ ಭಾವಿಸಿಕೊಂಡಿದೆ. ಅವರ ಪ್ರಕಾರ ನಯವಿನಯದಂತಹ ಗುಣಗಳು ವ್ಯಕ್ತಿಯ ದೌರ್ಬಲ್ಯದ ಸಂಕೇತ. ಅಂಥವರಿಗೆ ಎಮರ್ಸನ್‍ನ ಮಾತನ್ನು ನೆನಪಿಸಬೇಕು: “ಒರಟುತನವೆಂಬುದು ದುರ್ಬಲ ವ್ಯಕ್ತಿಯ ಬಲಾಢ್ಯತೆಯ ಸೋಗು”.

ಪ್ರಪಂಚಕ್ಕೆ ಯುವಕರ ಸಾಧನೆ, ಕೊಡುಗೆಗಳ ವಿಷಯದಲ್ಲಿ ಎರಡು ಮಾತಿಲ್ಲ. ಅವರೇ ಈ ಸಮಾಜದ ಬೆನ್ನೆಲುಬು. ಆದರೆ ಬಿಸಿರಕ್ತದ ಹುಮ್ಮಸ್ಸಿನಲ್ಲಿ ಅವರು ತೋರುವ ಕೆಲವು ವರ್ತನೆಗಳು ಇಡೀ ಸಮೂಹಕ್ಕೇ ಕೆಟ್ಟಹೆಸರನ್ನು ತರಬಲ್ಲವು. ಸಮಾಜ ಯುವಜನತೆಯ ಬಗ್ಗೆ ಹೊಂದಿರುವ ಅಪಾರ ಅಭಿಮಾನವನ್ನು ಕಾಪಾಡಿಕೊಳ್ಳುವ ಹೊಣೆ ಅವರಿಗೇ ಇದೆ. ಚೀನಾದಲ್ಲಿ ಪ್ರಸಿದ್ಧ ಗಾದೆಯೊಂದಿದೆ: “ಬುಟ್ಟಿ ತುಂಬಾ ಬುದ್ಧಿಗಿಂತ ಮುಷ್ಟಿಯಷ್ಟು ತಾಳ್ಮೆ ಬೇಕು”. ಈ ಗಾದೆ ನಮ್ಮ ಯುವಕರ ಅಂತರಂಗದಲ್ಲಿ ನೆಲೆಗೊಳ್ಳಬೇಕು.
 

ಶನಿವಾರ, ಮೇ 30, 2015

ಅಂಕ ಗಳಿಸುವ ಯಂತ್ರಗಳೇ?

ಮೇ 30, 2015ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಬರೆಹ.

ಶೇಕಡಾ ತೊಂಬತ್ತೈದು, ತೊಂಬತ್ತಾರು, ತೊಂಬತ್ತೆಂಟು ಅಂಕ... ನೂರಕ್ಕೆ ನೂರು... 625ಕ್ಕೆ ಎರಡೋ ಮೂರೋ ಮಾತ್ರ ಕಮ್ಮಿ... ರಾಜ್ಯಕ್ಕೇ ಪ್ರಥಮ... ಪರೀಕ್ಷಾ ಫಲಿತಾಂಶಗಳ ಪರ್ವ ಆರಂಭವಾಗುತ್ತಿದ್ದಂತೆ ಪತ್ರಿಕೆ-ಟಿವಿಗಳಲ್ಲಿ ಒಂದಾದಮೇಲೊಂದರಂತೆ ಸುದ್ದಿ ಪ್ರಕಟವಾಗುತ್ತಿರುತ್ತದೆ. ಅಪ್ಪ-ಅಮ್ಮಂದಿರು ತಮ್ಮ ಮುದ್ದಿನ ಮಗಳಿಗೆ ಇಲ್ಲವೇ ಮಗನಿಗೆ ಸಿಹಿ ತಿನ್ನಿಸುವ, ರಮಿಸುವ ಚಿತ್ರಗಳು ಬರುತ್ತವೆ. ಫೇಸ್‍ಬುಕ್, ವಾಟ್ಸ್ಯಾಪ್‍ಗಳಲ್ಲಿ ಹೆಮ್ಮೆಯ ಘೋಷಣೆಗಳು ಕಾಣಿಸಿಕೊಳ್ಳುತ್ತವೆ. ಮಾಧ್ಯಮಗಳಲ್ಲಿ ವ್ಯಕ್ತವಾಗುವ ಅಪ್ಪ-ಅಮ್ಮಂದಿರ ಸಡಗರ, ಬಂಧು-ಮಿತ್ರರ ಸಂಭ್ರಮ ನೋಡುತ್ತಿದ್ದರೆ ನಮಗೂ ಒಂದು ಕ್ಷಣ ಹೆಮ್ಮೆಯೆನಿಸುವುದು ಸಹಜ. ರಾಜ್ಯವೇ ಬೆರಗುಗೊಳ್ಳುವಂಥ ಸಾಧನೆ ಮಾಡಿದ ಮಕ್ಕಳನ್ನು ಕಂಡಾಗ ಯಾರಾದರೂ ಮನತುಂಬಿ ಶಹಬ್ಬಾಸ್ ಎನ್ನದಿರಲು ಸಾಧ್ಯವೇ ಇಲ್ಲ.

ಆದರೆ ಈ ಸಂತೋಷ ವಿಸ್ಮಯಗಳ ಬೆನ್ನಲ್ಲೇ ಸಣ್ಣ ಆತಂಕವೊಂದು ಮನಸ್ಸಿನ ಮೂಲೆಯಲ್ಲಿ ಹುಟ್ಟಿ ನಿಧಾನಕ್ಕೆ ಬೆಳೆಯತೊಡಗುತ್ತದೆ.  ಏನಿದು ಅಂಕಗಳ ಭರಾಟೆ? ಎಲ್ಲಿಯವರೆಗೆ ಈ ಪರ್ಸೆಂಟೇಜುಗಳ ಓಟ? ಮಕ್ಕಳನ್ನು ಇವರೆಲ್ಲ ಏನೆಂದು ಭಾವಿಸಿಕೊಂಡಿದ್ದಾರೆ? ಇವರೆಲ್ಲ ಅಂಕ ಮೊಗೆಯುವ ಯಂತ್ರಗಳಾಗಿಬಿಟ್ಟಿದ್ದಾರೆಯೇ?
ಮೊನ್ನೆ ಎಸ್.ಎಸ್.ಎಲ್.ಸಿ./ಪಿಯುಸಿ ಫಲಿತಾಂಶದ ಸಂಭ್ರಮಾಚರಣೆಯ ನಡುವೆ ಹಿರಿಯರೊಬ್ಬರು ಹೇಳುತ್ತಿದ್ದರು: ಎಂಥಾ ಪರ್ಸೆಂಟೇಜು ಕಣ್ರೀ ಇದು? ತೊಂಬತ್ತೇಳು, ತೊಂಬತ್ತೆಂಟು...! ನಮ್ಮ ಕಾಲಕ್ಕೆಲ್ಲ 60 ದಾಟಿಬಿಟ್ಟರೆ ಅದೇ ಬರೋಬ್ಬರಿಯಾಯಿತು. ಈಗ ತೊಂಬತ್ತಕ್ಕಿಂತ ಕಡಿಮೆ ಸ್ಕೋರ್ ಮಾಡಿದರೆ ಆತ/ಆಕೆ ಲೆಕ್ಕಕ್ಕೇ ಇಲ್ಲ...

ಕಾಲ ಬದಲಾಗಿದೆ. ಪ್ರಥಮ ದರ್ಜೆ, ಶೇಕಡಾ ಅರುವತ್ತರ ಕಾಲ ಈಗ ಉಳಿದಿಲ್ಲ. ಎಲ್ಲರಿಗೂ ಅವರವರ ಭವಿಷ್ಯದ ಪ್ರಶ್ನೆ. ಎಸ್.ಎಸ್.ಎಸ್.ಸಿ. ಮುಗಿಸಿದವರಿಗೆ ಪ್ರತಿಷ್ಠಿತ ಸಂಸ್ಥೆಯಲ್ಲಿ ಪಿಯುಸಿಗೆ ಸೀಟು ಗಿಟ್ಟಿಸಿಕೊಳ್ಳುವ ಒತ್ತಡ, ಪಿಯುಸಿ/ಸಿಇಟಿ ಮುಗಿಸಿದವರಿಗೆ ಟಾಪ್ ಎಂಜಿನಿಯರಿಂಗ್/ಮೆಡಿಕಲ್ ಕಾಲೇಜುಗಳಿಗೆ ಪ್ರವೇಶ ಪಡೆಯುವ ಒತ್ತಡ. ಇದು ಸಾಧ್ಯವಾಗಬೇಕಾದರೆ ಒಳ್ಳೊಳ್ಳೆ ಪರ್ಸೆಂಟೇಜು ಇರಲೇಬೇಕು. ಪರ್ಸೆಂಟೇಜು ಏರಿದಷ್ಟೂ ಅವರು ನಿರಾಳ.

ಎಲ್ಲವೂ ನಿಜ. ಆದರೆ ಇಂತಹದೊಂದು ಪರಿಸ್ಥಿತಿ ಹೇಗೆ ಸೃಷ್ಟಿಯಾಯಿತು? ನಮ್ಮ ಮಕ್ಕಳು ಹೀಗೆ ಅಂಕ ಮೊಗೆಯುವ ಯಂತ್ರಗಳಾಗುತ್ತಾ ಹೋದರೆ ಅವರ ಮತ್ತು ಒಟ್ಟಾರೆ ಸಮಾಜದ ಭವಿಷ್ಯ ಏನು? ತೊಂಬತ್ತಾರು ತೊಂಬತ್ತೆಂಟು ಶೇಕಡಾ ಅಂಕ ಗಳಿಸಲು ತಯಾರಾದಂತೆ ಇವರು ಜೀವನವನ್ನು ಎದುರಿಸಲೂ ತಯಾರಾಗಿದ್ದಾರಾ? ಅದಕ್ಕೆ ಅಧ್ಯಾಪಕರು ಮತ್ತು ಹೆತ್ತವರ ಕೊಡುಗೆ ಏನು? ಒಳ್ಳೆಯ ಎಂಜಿನಿಯರಿಂಗ್ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಸಿಕ್ಕಿದ ಕೂಡಲೇ ಈ ಮಕ್ಕಳ ಬದುಕು ಬಂಗಾರವಾಯಿತೇ?

ಸ್ನೇಹಿತರೊಬ್ಬರು ತಮ್ಮ ನೆಂಟರ ಮನೆಯ ಕಥೆ ಹೇಳುತ್ತಿದ್ದರು. ಆ ಮನೆಯ ಹೆಣ್ಣುಮಗು ಎಸ್.ಎಸ್.ಎಲ್.ಸಿ.ಯಲ್ಲಿ 625ಕ್ಕೆ 619 ಅಂಕ ಗಳಿಸಿದ್ದಳಂತೆ. ಅವಳ ಹೆತ್ತವರು ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದಾರಂತೆ, ಇನ್ನೂ ಐದು ಅಂಕ ಹೆಚ್ಚಿಗೆ ಬರಬೇಕಿತ್ತೆಂದು. ಆ ಹೆಣ್ಣುಮಗಳ ತಂದೆ ಪದವಿ ಕಾಲೇಜೊಂದರ ಪ್ರಾಂಶುಪಾಲರು.

ಅದೇ ಸ್ನೇಹಿತರು ಇನ್ನೂ ಒಂದು ಮಾತು ಹೇಳಿದರು: ಈ ತೊಂಬತ್ತೈದು ತೊಂಬತ್ತೆಂಟು ಪರ್ಸೆಂಟೇಜಿನ ಒಬ್ಬ ಹುಡುಗನ ಕೈಗೆ ನೂರು ರೂಪಾಯಿ ನೋಟು ಕೊಟ್ಟು ಇವತ್ತಿಗೆ ಬೇಕಾದ ದಿನಸಿ ತೆಗೆದುಕೊಂಡು ಬಾ ಎಂದು ಕಳಿಸಿನೋಡು; ಆತ ಇಪ್ಪತ್ತು ರೂಪಾಯಿಯ ಅಕ್ಕಿ, ಇಪ್ಪತ್ತು ರೂಪಾಯಿಯ ಮೆಣಸು, ಇಪ್ಪತ್ತು ರೂಪಾಯಿಯ ಉಪ್ಪು, ಇಪ್ಪತ್ತು ರೂಪಾಯಿಯ ಹುಳಿ ಹೊತ್ತುಕೊಂಡು ಬರುತ್ತಾನೆ; ಅವನ ಪರ್ಸೆಂಟೇಜಿನ ಕಥೆ ಇಷ್ಟೇ.

ಅವರು ಹೇಳಿದ ಮಾತು ಎಲ್ಲ ಹುಡುಗರಿಗೂ ಅನ್ವಯಿಸದೇ ಇರಬಹುದು. ಆದರೆ ಪರ್ಸೆಂಟೇಜು ಯಂತ್ರಗಳಂತೆ ಕಾಣುವ ಬಹುತೇಕ ಮಕ್ಕಳ ಕಥೆ ಇದಕ್ಕಿಂತ ತೀರಾ ಭಿನ್ನವಾಗಿಯೇನೂ ಇಲ್ಲವೆಂದು ನಾವು ಅರ್ಥ ಮಾಡಿಕೊಳ್ಳಬೇಕು. ಇದಕ್ಕೆ ಆ ಮಕ್ಕಳನ್ನು ಹೊಣೆಗಾರರನ್ನಾಗಿಸಿ ಏನೂ ಪ್ರಯೋಜನ ಇಲ್ಲ. ನಾವು ಯೋಚಿಸಬೇಕಿರುವುದು ಅವರನ್ನು ಈ ಪರಿಸ್ಥಿತಿಗೆ ನೂಕಿರುವ ಹೆತ್ತವರು, ಅಧ್ಯಾಪಕರು ಮತ್ತು ಒಟ್ಟಾರೆ ಸಾಮಾಜಿಕ ಸನ್ನಿವೇಶದ ಬಗ್ಗೆ; ಎಂಜಿನಿಯರಿಂಗ್ ಮೆಡಿಕಲ್ ಬಿಟ್ಟರೆ ಈ ಪ್ರಪಂಚದಲ್ಲಿ ಬೇರೆ ಅವಕಾಶಗಳೇ ಇಲ್ಲವೇನೋ ಎಂಬ ಭ್ರಮೆಯ ಬಗ್ಗೆ.

ಈ ಮಕ್ಕಳ ಬುದ್ಧಿಮತ್ತೆ ಸೂಚ್ಯಂಕವನ್ನು ಬೆಳೆಸಿದಂತೆ ನಾವು ಅವರ ಭಾವನಾ ಪ್ರಪಂಚವನ್ನು ಪೋಷಿಸಿದ್ದೇವೆಯೇ? ಅಂಕಗಳನ್ನು ಅಗೆದುಹಾಕಲು ತರಬೇತುಗೊಳಿಸಿದಂತೆ ದಿನನಿತ್ಯದ ಬದುಕಿಗೆ ಅವಶ್ಯಕವಿರುವ ಕಾಮನ್ ಸೆನ್ಸನ್ನೂ ಕಲಿಸಿದ್ದೇವೆಯೇ? ತೊಂಬತ್ತು ಶೇಕಡಾಕ್ಕಿಂತ ಹೆಚ್ಚು ಅಂಕ ಗಳಿಸುವುದೇ ಅತಿದೊಡ್ಡ ಸವಾಲೆಂದು ಮಕ್ಕಳೆದುರು ಬಿಂಬಿಸುವ ಹೊತ್ತಿಗೆ ಬದುಕಿನ ನಿಜವಾದ ಸವಾಲುಗಳು ಏನೆಂಬುದನ್ನು ಹೇಳಿಕೊಟ್ಟಿದ್ದೇವೆಯೇ? ಅವುಗಳನ್ನು ಎದುರಿಸುವ ಮಾನಸಿಕ ದೃಢತೆಯನ್ನು ಮಕ್ಕಳಲ್ಲಿ ಬೆಳೆಸಿದ್ದೇವೆಯೇ? ಇಂದು ತೊಂಬತ್ತೈದು ತೊಂಬತ್ತಾರು ಶೇಕಡಾ ಅಂಕ ಕೂಡಿ ಹಾಕುವ ಮಗು ನಾಳೆ ಬದುಕಿನ ಸಣ್ಣದೊಂದು ಆತಂಕವನ್ನೂ ಎದುರಿಸಲಾರದೆ ಆಘಾತ, ಖಿನ್ನತೆಗೊಳಗಾದರೆ ಅದಕ್ಕೆ ಯಾರು ಹೊಣೆ?
ಬಾಲ್ಯದ, ತಾರುಣ್ಯದ ಸುಂದರ ಕನಸುಗಳು ಮೊಳೆತು ಪಲ್ಲವಿಸುವ ಕಾಲಕ್ಕೆ ಮಕ್ಕಳನ್ನು ನಾಲ್ಕು ಗೋಡೆಗಳ ನಡುವೆ ಬಂಧಿಗಳನ್ನಾಗಿಸಿ ಅವರೆದುರು ತೊಂಬತ್ತು ಶೇಕಡಾದ ಮಹಾಮಂತ್ರವೊಂದನ್ನೇ ಪಠಿಸುತ್ತಾ ಕೂತರೆ ಅವರ ಭಾವಪ್ರಪಂಚ ವಿಕಸಿಸುವುದು ಯಾವಾಗ? ಅನುರಾಗ, ಸಹಬಾಳ್ವೆ, ಅನುಕಂಪ, ವಿನಯ, ಸಹಾನುಭೂತಿಗಳು ಗಟ್ಟಿಗೊಳ್ಳುವುದು ಹೇಗೆ? ತಮ್ಮ ಆತ್ಮವಿಶ್ವಾಸ, ಸ್ಥೈರ್ಯಗಳನ್ನು ಕುಂದಿಸುವ ಹತ್ತುಹಲವು ಸೂಜಿಮೊನೆಗಳೂ ಕೂಡ ತಮ್ಮ ಸುತ್ತಮುತ್ತ ಇವೆ ಎಂದು ಅವರು ಅರ್ಥಮಾಡಿಕೊಳ್ಳುವುದೆಂತು? ತಮ್ಮೆದುರು ಪಠ್ಯಪುಸ್ತಕಗಳಷ್ಟೇ ಅಲ್ಲದೆ ಸುಂದರ ಬೆಳಗು, ಚಂದದ ಸೂರ್ಯಾಸ್ತ, ಹುಣ್ಣಿಮೆಯ ಆಕಾಶ, ಮೈಮನಗಳಿಗೆ ಹಿತ ನೀಡುವ ಸುಂದರ ಪ್ರಕೃತಿ, ನದಿ, ಸಮುದ್ರ, ಪರ್ವತ, ಜಲಪಾತ ಇವೆಲ್ಲ ಇವೆ ಎಂದು ಅವರು ತಿಳಿದುಕೊಳ್ಳುವುದಕ್ಕೆ ಅವಕಾಶ ಎಲ್ಲಿ?

ಮಕ್ಕಳ ಎಸ್.ಎಸ್.ಎಲ್.ಸಿ./ಪಿಯುಸಿ ಫಲಿತಾಂಶದ ಕುರಿತಾಗಿರುವ ಹೆತ್ತವರ, ಅಧ್ಯಾಪಕರ ಆತಂಕಗಳು ಹುರುಳಿಲ್ಲದ್ದು ಎಂದು ಈ ಮಾತಿನ ಅರ್ಥವಲ್ಲ. ಇದು ಟಾರ್ಗೆಟ್ ಜಮಾನ. ಇಂದು ಎಲ್ಲರ ಎದುರೂ ಟಾರ್ಗೆಟ್‍ಗಳಿವೆ. ಎಲ್ಲ ವಿದ್ಯಾರ್ಥಿಗಳೂ ಇಂತಿಷ್ಟು ಶೇಕಡಾ ಅಂಕ ಗಳಿಸಬೇಕೆಂದು ಅಧ್ಯಾಪಕರಿಗೆ ಕಟ್ಟುನಿಟ್ಟಿನ ಸೂಚನೆಯಿದೆ. ಏಕೆಂದರೆ ಇಷ್ಟು ವಿದ್ಯಾರ್ಥಿಗಳು ನಮ್ಮಲ್ಲಿ ಡಿಸ್ಟಿಂಕ್ಷನ್, ರ್ಯಾಂಕ್ ಗಳಿಸಿದ್ದಾರೆ, ಇಷ್ಟು ಮಕ್ಕಳು ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ ಎಂಬ ಜಾಹೀರಾತೇ ಶಿಕ್ಷಣ ಸಂಸ್ಥೆಗಳ ಮೂಲಬಂಡವಾಳ. ಹೆತ್ತವರಂತೂ ಯಾವ ಸಂಸ್ಥೆಗೆ ಎಡತಾಕಿದರೂ ಅಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ಮಾತ್ರ ಸೀಟು. ಹಾಗಾದರೆ ಅದಕ್ಕಿಂತ ಕಡಿಮೆ ಅಂಕ ಗಳಿಸಿದವರು ಎಲ್ಲಿಗೆ ಹೋಗಬೇಕು? ಅತ್ಯುನ್ನತ ಶ್ರೇಣಿ ಪಡೆದವರೇ ಲಕ್ಷಗಳಲ್ಲಿ ಶುಲ್ಕ ಪಾವತಿಸಬೇಕು; ಉಳಿದವರ ಗತಿ ಏನು?

ಶಿಕ್ಷಣದ ವ್ಯಾಪಾರೀಕರಣದ ಘೋರ ಪರಿಣಾಮಗಳನ್ನು ಕಣ್ಣಾರೆ ಕಾಣುತ್ತಿದ್ದೇವೆ. ಮಕ್ಕಳನ್ನು ಅಂಕ ಮೊಗೆಯುವ ಯಂತ್ರಗಳನ್ನಾಗಿ ಪರಿವರ್ತಿಸಿರುವುದು ಇದೇ ವ್ಯಾಪಾರೀಕರಣದ ಭೂತ. ನಾವು ವಾಪಸ್ ಹೋಗಲಾರದಷ್ಟು ದೂರ ಬಂದುಬಿಟ್ಟಿದ್ದೇವೆಯೇ?


ಭಾನುವಾರ, ಮಾರ್ಚ್ 8, 2015

ಭಾರತರತ್ನಕ್ಕೊಂದು ವಿಶಿಷ್ಟ ಗೌರವ: ತುಮಕೂರು ವಿ.ವಿ.ಯ ಮಾಳವೀಯ ಭವನ

(ಮಾರ್ಚ್ 08, 2015ರಂದು 'ವಿಜಯವಾಣಿ' ಪತ್ರಿಕೆಯ ಭಾನುವಾರದ ಪುರವಣಿ 'ವಿಜಯ ವಿಹಾರ'ದಲ್ಲಿ ಪ್ರಕಟವಾದ ಲೇಖನ)

ಪಂ| ಮಾಳವೀಯ
ಸತ್ಯವನ್ನೇ ಮಾತನಾಡಿ, ಸತ್ಯವನ್ನೇ ಜೀವಿಸಿ, ಸತ್ಯವನ್ನೇ ಯೋಚಿಸಿ. ಅಧ್ಯಯನವನ್ನು ನಿಮ್ಮ ಜೀವನದುದ್ದಕ್ಕೂ ಮುಂದುವರಿಸಿ. ನ್ಯಾಯಯುತರಾಗಿರಿ ಮತ್ತು ಯಾರಿಗೂ ಹೆದರಬೇಡಿ. ಕೆಟ್ಟದ್ದನ್ನು ಮಾಡುವುದಕ್ಕೆ ಮಾತ್ರ ಹಿಂಜರಿಯಿರಿ. ಇಷ್ಟಪಟ್ಟು ನಿಮ್ಮ ಸಹವಾಸಿಗಳ ಸೇವೆ ಮಾಡಿ. ಮಾತೃಭೂಮಿಯನ್ನು ಪ್ರೀತಿಸಿ. ಒಳ್ಳೆಯದನ್ನು ಮಾಡುವುದಕ್ಕೆ ಅವಕಾಶ ದೊರೆತಾಗಲೆಲ್ಲ ಅದನ್ನು ಮಾಡಿ... ಹೀಗೆನ್ನುವ ಫಲಕವನ್ನು ಓದುತ್ತಲೇ ನೀವು ಆ ಭವ್ಯ ಭವನದ ಒಳಗೆ ಅಡಿಯಿಡುತ್ತೀರಿ.
ಅಷ್ಟರಲ್ಲಿ ಮತ್ತೊಂದು ಫಲಕ ನಿಮ್ಮ ಕಣ್ಣಿಗೆ ಬೀಳುತ್ತದೆ. ಕೇವಲ ಕೈಗಾರಿಕಾ ಪ್ರಗತಿ ಯಾವ ಜನರಿಗೂ ಸಂತೋಷ ಹಾಗೂ ಅಭ್ಯುದಯವನ್ನು ತಂದುಕೊಡದು. ನೈತಿಕ ಪ್ರಗತಿಯೇ ಎಲ್ಲಕ್ಕಿಂತ ಮಿಗಿಲಾದದ್ದು... ಹಾಗೇ ಮುಂದುವರಿದರೆ ಇನ್ನೊಂದು, ಮತ್ತೊಂದು. ಆಯಸ್ಕಾಂತದಂತೆ ಸೆಳೆಯುವ ಆ ಹೇಳಿಕೆಗಳನ್ನೆಲ್ಲ ನೀವು ಓದುತ್ತಲೇ ಹೋಗುತ್ತೀರಿ, ಮತ್ತೆ ಯೋಚನಾಮಗ್ನರಾಗುತ್ತೀರಿ. ನಡುನಡುವೆ ಇಣುಕುವ ಅಪೂರ್ವ ಚಿತ್ರಪಟಗಳನ್ನು ಕಂಡು ಸೋಜಿಗಪಡುತ್ತೀರಿ, ಇತಿಹಾಸಕ್ಕೆ ಜಾರುತ್ತೀರಿ.

ಅದು ತುಮಕೂರು ವಿಶ್ವವಿದ್ಯಾನಿಲಯದ ಪಂಡಿತ ಮದನ ಮೋಹನ ಮಾಳವೀಯ ಭವನ. ತುಮಕೂರು ನಗರದ ಹೆಬ್ಬಾಗಿಲಿನಲ್ಲೇ ಬಿ. ಎಚ್. ರಸ್ತೆಯ ಮಗ್ಗುಲಿಗೆ ಹೊಂದಿಕೊಂಡಂತಿರುವ ತುಮಕೂರು ವಿಶ್ವವಿದ್ಯಾನಿಲಯದ ಒಳ ಹೊಕ್ಕರೆ ಇಡೀ ಕ್ಯಾಂಪಸ್‌ಗೆ ಕಳಶಪ್ರಾಯದಂತೆ ಕಂಗೊಳಿಸುತ್ತದೆ ಮಾಳವೀಯ ಭವನ. ಎದುರಿಗೆ ಹಬ್ಬಿರುವ ಹಸಿರು ಉದ್ಯಾನದ ಒಂದು ಪಾರ್ಶ್ವಕ್ಕೆ ಭಾರತರತ್ನ ಡಾ. ಎಂ. ಎಸ್. ಸುಬ್ಬುಲಕ್ಷ್ಮಿಯವರ ಕಂಚಿನ ವಿಗ್ರಹ, ಇನ್ನೊಂದು ಅಂಚಿಗೆ ಶಹನಾಯ್ ದಿಗ್ಗಜ ಭಾರತರತ್ನ ಬಿಸ್ಮಿಲ್ಲಾ ಖಾನ್ ಅವರ ಪುತ್ಥಳಿ; ಮತ್ತೊಂದೆಡೆ ಭಾರತರತ್ನ ಡಾ. ಸಿ. ಎನ್. ಆರ್. ರಾವ್ ಉನ್ನತ ಸಂಶೋಧನ ಕೇಂದ್ರ. ಮಾಳವೀಯ ಅವರಿಗೆ ಕಳೆದ ಜನವರಿ 26ರಂದು ಭಾರತರತ್ನ ಪ್ರಶಸ್ತಿ ಮರಣೋತ್ತರವಾಗಿ ಸಂದಾಯವಾಗಿರುವುದರೊಂದಿಗೆ ಕ್ಯಾಂಪಸಿನ ಒಟ್ಟಾರೆ ಪರಿಸರದಲ್ಲಿ ಈಗ ಹೊಸದೊಂದು ಕಾಂತಿ ನಳನಳಿಸತೊಡಗಿದೆ. ನಾಲ್ಕೂ ಭಾರತರತ್ನಗಳು ಹೀಗೆ ಕಣ್ಣಳತೆಯ ದೂರದಲ್ಲಿ ರಾರಾಜಿಸುತ್ತಿರುವುದು ಎಂತಹ ಕಾಕತಾಳೀಯ!

ತುಮಕೂರು ವಿ.ವಿ.ಯಲ್ಲಿರುವ ಪಂ| ಮಾಳವೀಯ ಭವನ
2012ರಲ್ಲಿ ಅಂದಿನ ಕುಲಪತಿ ಡಾ. ಎಸ್. ಸಿ. ಶರ್ಮಾ ಅವರ ನೇತೃತ್ವದಲ್ಲಿ ಮಾಳವೀಯ ಭವನ ಸ್ಥಾಪನೆಯಾದಾಗ ಮಾಳವೀಯರಿಗೆ ಮುಂದೊಂದು ದಿನ ಭಾರತರತ್ನ ಘೋಷಣೆಯಾಗಬಹುದೆಂಬ ಊಹೆ ಯಾರಿಗೂ ಇದ್ದಿರಲಾರದು. ಭವನ ಸ್ಥಾಪನೆಯ ಹಿಂದೆ ಇದ್ದುದು ದೇಶ ಕಂಡ ಅಪರೂಪದ ದಾರ್ಶನಿಕ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಶಿಕ್ಷಣ ತಜ್ಞನಿಗೆ ತನ್ನದೇ ಆದ ರೀತಿಯಲ್ಲಿ ಗೌರವವನ್ನು ಅರ್ಪಿಸುವ ಉದ್ದೇಶ.

ವಿಶ್ವವಿದ್ಯಾನಿಲಯಕ್ಕೆ ಆಗಮಿಸುವ ಅತಿಗಣ್ಯ ವ್ಯಕ್ತಿಗಳಿಗಾಗಿ ಒಂದು ವಿಶಿಷ್ಟ ಅತಿಥಿಗೃಹವನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದೆವು. ಮಹಾತ್ಮ ಗಾಂಧೀಜಿಯವರಿಂದಲೇ ಮಹಾಮನ ಎಂದು ಕರೆಸಿಕೊಂಡ, ದೇಶದ ಉದ್ದಗಲ ಸುತ್ತಿ ಒಂದೊಂದು ಪೈಸೆ ದೇಣಿಗೆ ಸಂಗ್ರಹಿಸಿ ಏಷ್ಯಾದಲ್ಲೇ ಅತಿದೊಡ್ಡ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯವನ್ನು ಕಟ್ಟಿದ ಮಾಳವೀಯ ಅವರಿಗೇ ಏಕೆ ಈ ವಿಶೇಷ ಭವನವನ್ನು ಸಮರ್ಪಿಸಬಾರದು ಎಂಬ ಆಲೋಚನೆ ಬಂತು. ನನಗೆ ಜತೆಯಾಗಿದ್ದ ಕುಲಸಚಿವ ಪ್ರೊ. ಡಿ. ಶಿವಲಿಂಗಯ್ಯ ಅವರೂ ಇದರಲ್ಲಿ ತುಂಬ ಮುತುವರ್ಜಿ ವಹಿಸಿದರು. ತಕ್ಷಣ ಅದನ್ನು ಕಾರ್ಯಗತಗೊಳಿಸಿದೆವು. ಜನರಿಂದ ಅದಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಅಭೂತಪೂರ್ವ. ಬಹುಶಃ ದೇಶದಲ್ಲೇ ಮಾಳವೀಯರಿಗೆ ಇಂಥದ್ದೊಂದು ಸ್ಮಾರಕ ಇನ್ನೊಂದಿಲ್ಲ, ಎಂದು ನೆನಪಿಸಿಕೊಳ್ಳುತ್ತಾರೆ ಮಾಜಿ ಕುಲಪತಿ ಡಾ. ಶರ್ಮಾ. ಅವರೀಗ ಛತ್ತೀಸ್‌ಘಡದ ಕೇಂದ್ರೀಯ ತಾಂತ್ರಿಕ ವಿಶ್ವವಿದ್ಯಾನಿಲಯದ ಕುಲಪತಿ.

ಬನಾರಸ್ ಹಿಂದೂ ವಿ.ವಿ. ಹೀಗೆ ಆರಂಭವಾಯ್ತಂತೆ...
ಮಾಳವೀಯ ಭವನ ಬರೀ ಅತಿಥಿಗೃಹವಾಗಿ ಉಳಿದಿಲ್ಲ. ಮಾಳವೀಯ ಅವರ ಚಿಂತನೆ, ಜೀವನ ಮತ್ತು ಸಾಧನೆಗಳನ್ನು ಸಮಾಜಕ್ಕೆ ಪರಿಚಯಿಸುವ ಅಪರೂಪದ ನಿರ್ಮಾಣವಾಗಿ ಬೆಳೆದುನಿಂತಿದೆ. ಭವನದ ಪ್ರವೇಶದ್ವಾರದಲ್ಲೇ ಸುಂದರ ಚೌಕಟ್ಟಿನೊಳಗೆ ಶೋಭಿಸುವ ಮಾಳವೀಯ ಅವರ ಆಳೆತ್ತರದ ವರ್ಣಚಿತ್ರ ವೀಕ್ಷಕರನ್ನು ಸೆಳೆಯುತ್ತದೆ. ಅದರ ಇಕ್ಕೆಲಗಳಲ್ಲಿ ಇಡಲಾಗಿರುವ ಮಾಳವೀಯ ಅವರ ಜೀವನದ ವಿವಿಧ ಮಜಲುಗಳನ್ನು ಪರಿಚಯಿಸುವ ಇನ್ನೆರಡು ಫಲಕಗಳು ನೋಡುಗರನ್ನು ಭವನದ ಭೇಟಿಗೆ ಸಿದ್ಧಗೊಳಿಸುತ್ತವೆ.

1919ರಿಂದ 1936ರವರೆಗೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಮಾಳವೀಯರು ವಿವಿಧ ಸಂದರ್ಭಗಳಲ್ಲಿ ಅಲ್ಲಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆಡಿದ ಮಾತುಗಳನ್ನು ಆಯ್ದು ಸುಂದರ ಚೌಕಟ್ಟುಗಳಲ್ಲಿ ವಿನ್ಯಾಸಗೊಳಿಸಿ ಭವನದ ತುಂಬೆಲ್ಲ ಪ್ರದರ್ಶಿಸಲಾಗಿದೆ. ಮಾಳವೀಯ ಅವರು ತಮ್ಮ ಕನಸಿನ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಯೋಜನೆಯನ್ನು ಸಾಕಾರಗೊಳಿಸುವ ಮುನ್ನವೇ ಅದರ ಸಂವಿಧಾನವನ್ನು ಬರೆದಿಟ್ಟಾಗಿತ್ತು. ಭವನದ ಗೋಡೆಯ ಮೇಲೆ ರಾರಾಜಿಸುವ ಅಂತಹದೊಂದು ಫಲಕ ಹೀಗೆನ್ನುತ್ತದೆ: ವಿದ್ಯಾರ್ಥಿಗಳ ಮೆದುಳಿನಷ್ಟೇ ಅವರ ಹೃದಯವನ್ನೂ ಬೆಳೆಸದೇ ಹೋದರೆ ಒಂದು ವಿಶ್ವವಿದ್ಯಾನಿಲಯ ತನ್ನ ಕಾರ್ಯದಲ್ಲಿ ಎಡವಿದಂತೆ. ಹೀಗಾಗಿ ಯುವಕರ ಚಾರಿತ್ರ್ಯವನ್ನು ಬೆಳೆಸುವುದು ಪ್ರಸ್ತಾಪಿತ ವಿಶ್ವವಿದ್ಯಾನಿಲಯ ಒಂದು ಪ್ರಮುಖ ಉದ್ದೇಶವಾಗಲಿದೆ. ವ್ಯಕ್ತಿಗಳನ್ನು ಕೇವಲ ಎಂಜಿನಿಯರುಗಳನ್ನಾಗಿ, ವಿಜ್ಞಾನಿಗಳನ್ನಾಗಿ, ವೈದ್ಯರುಗಳನ್ನಾಗಿ, ವ್ಯಾಪಾರಿಗಳನ್ನಾಗಿ, ಧರ್ಮಶಾಸ್ತ್ರಕಾರರನ್ನಾಗಿ ತಯಾರಿಸುವುದು ಇದರ ಗುರಿಯಲ್ಲ. ಅವರು ಉನ್ನತ ಚಾರಿತ್ರ್ಯ, ಪ್ರಾಮಾಣಿಕತೆ ಹಾಗೂ ಗೌರವದ ಬದುಕನ್ನು ಬಾಳುವಂತಾಗಬೇಕು... ಮಾಳವೀಯ ಅವರ ವಿಶ್ವವಿದ್ಯಾನಿಯದ ಪರಿಕಲ್ಪನೆ ನಮ್ಮ ಇಂದಿನ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮಾಡಿದ ನೀತಿಪಾಠದಂತಿದೆ.

ಮಾಳವೀಯ ಭವನದಲ್ಲಿ ಪ್ರದರ್ಶಿಸಲಾಗಿರುವ ಒಂದು ಅಪರೂಪದ ಚಿತ್ರ.
ಅಸಹಕಾರ ಚಳುವಳಿಯೂ ಸೇರಿದಂತೆ ಇಡೀ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಮಾಳವೀಯ ಅವರು ವಿವಿಧ ನಾಯಕರುಗಳೊಂದಿಗೆ ಇದ್ದ ಕ್ಷಣಗಳು, ಮಹಾತ್ಮ ಗಾಂಧೀಜಿ, ಸರೋಜಿನಿ ನಾಯ್ಡು, ಜವಾಹರಲಾಲ್ ನೆಹರೂ, ಡಾ. ಎಸ್. ರಾಧಾಕೃಷ್ಣನ್ ಅವರೊಂದಿಗಿನ ಒಡನಾಟ ಎಲ್ಲದರ ಕಥೆ ಹೇಳುತ್ತವೆ ಅಲ್ಲಲ್ಲಿ ಜೋಡಿಸಲಾಗಿರುವ ಅಪೂರ್ವ ಛಾಯಾಚಿತ್ರಗಳು. ಎಲ್ಲವನ್ನೂ ಖುದ್ದು ಬನಾರಸ್ ವಿಶ್ವವಿದ್ಯಾನಿಲಯಕ್ಕೇ ಭೇಟಿ ನೀಡಿ ಸಂಗ್ರಹಿಸಿ, ಸಂಸ್ಕರಿಸಿ ಇಲ್ಲಿ ಪ್ರದರ್ಶಿಸಲಾಗಿದೆ. ಮಾಳವೀಯ ಅವರ ಶಿಕ್ಷಣ ಹಾಗೂ ನೈತಿಕ ಬದುಕಿನ ದರ್ಶನವನ್ನು ಸ್ವಲ್ಪಮಟ್ಟಿಗಾದರೂ ನಮ್ಮ ವಿಶ್ವವಿದ್ಯಾನಿಲಯದ ಆವರಣದಲ್ಲಿ ಪ್ರತಿಫಲಿಸುವ ಸಣ್ಣ ಪ್ರಯತ್ನ ಇದು, ಎನ್ನುತ್ತಾರೆ ಭವನದ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದ ತುಮಕೂರು ವಿವಿ ಇತಿಹಾಸ ಹಾಗೂ ಪ್ರಾಚ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಉದಯರವಿ ಎಸ್. ಮೂರ್ತಿ. ಬನಾರಸ್ ವಿಶ್ವವಿದ್ಯಾನಿಲಯದಿಂದ ಸಂಗ್ರಹಿಸಲಾದ ಮಾಳವೀಯ ಅವರನ್ನು ಕುರಿತ ಹತ್ತಾರು ಪುಸ್ತಕಗಳು, ಅವರು ಆರಂಭಿಸಿದ ಪತ್ರಿಕೆಗಳ ಕೆಲವು ಪುಟಗಳು, ಅವರ ಭಾಷಣ ಹಾಗೂ ಬರಹಗಳ ಸಂಗ್ರಹ ಕೂಡ ಮಾಳವೀಯ ಭವನದಲ್ಲಿ ಇವೆ.

ಮಾಳವೀಯ ಅವರೊಬ್ಬ ಶ್ರೇಷ್ಠ ದಾರ್ಶನಿಕ, ಶಿಕ್ಷಣ ತಜ್ಞ, ಮಾನವತಾವಾದಿ, ನೈತಿಕ ಬದುಕಿನ ಪ್ರತಿಪಾದಕ. ಭವನದ ಪ್ರತಿ ಕೊಠಡಿಯಲ್ಲೂ ಮಾಳವೀಯ ಅವರ ಮಹತ್ವದ ಹೇಳಿಕೆಗಳು, ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ವಿಶ್ವವಿದ್ಯಾನಿಲಯಕ್ಕೆ ಭೇಟಿನೀಡುವ ಗಣ್ಯ ವ್ಯಕ್ತಿಗಳು ಇಲ್ಲಿ ವಿಶ್ರಾಂತಿಯನ್ನಷ್ಟೇ ಪಡೆಯುವುದಿಲ್ಲ. ತಾವು ತೆರಳುವಾಗ ದೇಶದ ದಾರ್ಶನಿಕನೊಬ್ಬನ ಉನ್ನತ ಚಿಂತನೆಗಳನ್ನೂ ತಮ್ಮೊಂದಿಗೆ ಒಯ್ಯುತ್ತಾರೆ. ಮಾಳವೀಯ ಅವರಿಗೆ ಭಾರತರತ್ನ ಸಲ್ಲುತ್ತಿರುವುದು ವಿಶ್ವವಿದ್ಯಾನಿಲಯಕ್ಕೆ ಖಂಡಿತಕ್ಕೂ ಹೆಮ್ಮೆಯ ಕ್ಷಣವೇ, ಎನ್ನುತ್ತಾರೆ ತುಮಕೂರು ವಿವಿ ಕುಲಪತಿ ಪ್ರೊ. ಎ. ಎಚ್. ರಾಜಾಸಾಬ್ ಮತ್ತು ಕುಲಸಚಿವ ಪ್ರೊ. ಡಿ. ಶಿವಲಿಂಗಯ್ಯ.

ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ನಿಮಗೆ ಮನೋಬಲ ಇರಬೇಕು ಎನ್ನುತ್ತದೆ ಭವನದ ಗೋಡೆಯ ಮೇಲಿನ ಒಂದು ಫಲಕ. ಅಂತಹದೊಂದು ಮನಸ್ಸು ಹಾಗೂ ಪ್ರಯತ್ನಗಳ ಫಲದಂತೆ ಭಾಸವಾಗುತ್ತದೆ ಮದನ ಮೋಹನ ಮಾಳವೀಯ ಭವನ.

ಬುಧವಾರ, ಜನವರಿ 14, 2015

ಬೆಂಕಿ ಬೆಳಕಾಗುವ ಪರಿ

ಮುಖಪುಟ ಚಿತ್ರಕೃಪೆ: ಇಂಟರ್ನೆಟ್
ನಾಲ್ಕೂವರೆ ವರ್ಷಗಳ ಹಿಂದೆ ಅಧ್ಯಾಪಕನಾಗಿ ಮೊದಲ ತರಗತಿ ತೆಗೆದುಕೊಂಡಾಗ ಶೈಲಜ ಎಂಬೊಂದು ಕೂಸು ಕೊನೇ ಬೆಂಚಿನ ಮೂಲೆಯಲ್ಲಿ ಭಯದಿಂದ ಮುದುರಿ ಕುಳಿತಿತ್ತು. ಎಲ್ಲ ವಿದ್ಯಾರ್ಥಿಗಳು ಪರಿಚಯ ಮಾಡಿಕೊಂಡರೂ ಈಕೆಗೆ ಎದ್ದುನಿಲ್ಲುವುದಕ್ಕೂ ಮುಜುಗರ, ಸಂಕೋಚ. ಐದು ನಿಮಿಷ ಒತ್ತಾಯಿಸಿದ ಮೇಲೆ ಕಷ್ಟಪಟ್ಟು ಹೆಸರು, ಊರು ಹೇಳಿ ಧಡಕ್ಕಂತ ಕುಳಿತುಬಿಟ್ಟಿದ್ದಳು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬೆಲೆ ಎಂಬ ಹಳ್ಳಿಯ ಹುಡುಗಿ ಅದು. ಕೂಲಿ, ಬೇಸಾಯ ಬಿಟ್ಟರೆ ಅಪ್ಪ-ಅಮ್ಮನಿಗೆ ಬೇರೆ ಜೀವನಾಧಾರ ಇಲ್ಲ. ಕೆಲ ಸಮಯದ ಬಳಿಕ 'ಸಾರ್' ಅಂತ ಬಂದು ಎರಡು ಕವಿತೆ ಟೇಬಲ್ ಮೇಲೆ ಇಟ್ಟು ಒಂದು ನಿಮಿಷವೂ ನಿಲ್ಲದೆ ತಪ್ಪಿಸಿಕೊಂಡಿದ್ದಳು. ಓದಿದರೆ ಅವು ಆಕೆಯೇ ಬರೆದದ್ದಾ ಎಂಬ ಸಂಶಯ ಸಹಜವಾಗಿಯೇ ಮೂಡುವಂತಿತ್ತು. ಅವಳ ಬಾಹ್ಯ ತೋರ್ಪಡಿಕೆಗೂ ಕವಿತೆಗಳಿಗೂ ಅಜಗಜಾಂತರ ಇತ್ತು. ಆದರೆ ಅದು ತುಂಬ ಸಮಯ ಉಳಿಯಲಿಲ್ಲ. ದಿನಾ ಏನಾದರೊಂದು ಬರೆಯುತ್ತಲೇ ಇದ್ದಳು. ಅವಳೊಳಗೆ ಆಶ್ಚರ್ಯವೆನಿಸುವ ಮಿಂಚಿನಂತಹ ಸಾಲುಗಳಿದ್ದವು. ಮೊನ್ನೆ ಕನ್ನಡ ಪುಸ್ತಕ ಪ್ರಾಧಿಕಾರದ 'ಚೊಚ್ಚಲ ಕೃತಿ ಪ್ರಕಟಣೆ ಯೋಜನೆ'ಯಲ್ಲಿ ಅವಳು ಬರೆದ ಅಷ್ಟೂ ಕವಿತೆಗಳ ಸಂಗ್ರಹ ಆಯ್ಕೆಯಾಗೇಬಿಟ್ಟಿತು. ಇಷ್ಟಾದ ಮೇಲೆ ಅದನ್ನು ಪ್ರಿಂಟೂ ಮಾಡಿಸದೆ ಇದ್ದರೆ ಹೇಗೆ ಎಂಬ ಯೋಚನೆ ಬಂತು. ಎಂಬಲ್ಲಿಗೆ ನಮ್ಮ 'ಮಾಧ್ಯಮ ಪ್ರಕಾಶನ' ಅತ್ಯಂತ ಅಚಾನಕ್ಕಾಗಿ ಕಣ್ಣು ತೆರೆದಿದೆ. 'ಬೆಳಕ ಗರ್ಭದೆಡೆಗೆ' ಪ್ರಿಂಟೂ ಆಗಿದೆ.
ಅಂದಹಾಗೆ, ಕವನ ಸಂಕಲನಕ್ಕೆ ಸಹೋದ್ಯೋಗಿ ಕವಯಿತ್ರಿ ಡಾ. ಗೀತಾ ವಸಂತ ತುಂಬ ಚೆಂದದ ಮುನ್ನುಡಿ ಬರೆದಿದ್ದಾರೆ. ಅದನ್ನಿಲ್ಲಿ ಪ್ರಕಟಿಸಿದ್ದೇನೆ. ಶೈಲಜಗೆ ಒಳ್ಳೆಯದಾಗಲಿ.
                                                                  * * *

ನಿರಂತರ ಚಡಪಡಿಕೆಯಿಲ್ಲದೇ ಕವಿಯಾಗಲು ಸಾಧ್ಯವಿಲ್ಲ. ಅದು ಬೆಂಕಿಯಂತೆ ಉರಿಯುತ್ತ, ಉರಿಸುತ್ತ ಬೆಳಕಾಗುವ ಪರಿಯೇ ಸೋಜಿಗ. ಅನುಭವವು ಅರಿವಾಗಿ ಪರಿವರ್ತನೆಯಾಗುವ ಮಾಯಕ ಕ್ಷಣಗಳನ್ನುಸೆರೆಹಿಡಿಯುವ ಸೂಕ್ಷ್ಮಶಕ್ತಿಯು ಕಾವ್ಯಕ್ಕಿದೆ. ಕಾವ್ಯವು ಲೋಕ ಹಾಗೂ ಮನಸ್ಸಿನ ಒಳಲೋಕದ ನಡುವಿನ ಮಾತುಕತೆ. ಅಂಥ ಮಾತುಕತೆ ನಡೆಸಲು ಹೊಸದೊಂದು ಭಾಷೆಯೇ ಬೇಕು. ಕವಿತೆ ಪರಿಚಿತ ಭಾಷೆಗೆ ಹೊಸ ಸ್ವರೂಪವನ್ನು ನೀಡಿ ಅನನ್ಯವಾಗುತ್ತದೆ. ಅನುಭವ-ಅರಿವು-ಅಭಿವ್ಯಕ್ತಿಗಳ ತುಂಡಾಗದ ಎಳೆಯಲ್ಲಿ ಕಾವ್ಯವನ್ನು ನೇಯುವ ಅಸಲು ಕಸುಬುದಾರಿಕೆ ಸುಲಭದ್ದಲ್ಲ. ಇರುವುದನ್ನು ’ಕಾಣುವ’ ಹಾಗೂ ’ಕಟ್ಟುವ’ ಕಾವಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶೈಲಜ ಅವರ ಪ್ರಯತ್ನ ನಿಜಕ್ಕೂ ಸ್ತುತ್ಯರ್ಹ.

ಭಂಗುರವಾದ ಕ್ಷಣಗಳನ್ನು ಸೃಷ್ಟಿಸಿ ಕಾಲವು ಸರಿದುಹೋಗುತ್ತದೆ. ಅದನ್ನು ಕಾವ್ಯವು ತನ್ನ ಒಡಲಲ್ಲಿ ಧರಿಸಿ 'ರೂಪ’ ಕೊಡುತ್ತದೆ. ಕವಿತೆಯ ಕಾವಿನಲ್ಲಿ ರೂಪ, ರಸ, ಗಂಧ ಸ್ಪರ್ಷಗಳ ಜಗತ್ತು ಮತ್ತೆಮತ್ತೆ ಜನ್ಮತಾಳುತ್ತದೆ. ಚಿತ್ತಭಿತ್ತಿಯನ್ನು ಸೀಳಿ ಕಾವ್ಯದ ಬೀಜಾಂಕುರವಾಗುವ ಕ್ಷಣ ಸಂಕಟಕರವಾದುದು. ಆದರೆ ಸೃಷ್ಟಿಶೀಲತೆಯ ಅಗಾಧ ಬೆರಗಿನೆದುರು ಸಂಕಟ ಗೌಣವಾಗಿಬಿಡುತ್ತದೆ. ಆಗಲೇ ಬದುಕಿನ ಪಾಡುಗಳು ಹಾಡಾಗಲು ಸಾಧ್ಯವಾಗುತ್ತದೆ. ಜಗತ್ತಿನ ನೋವಿಗೆ ಕಿವಿಯಾಗುವ ಕವಿ ಅವುಗಳನ್ನು ತನ್ನೊಳಗೆ ಹರಿದುಬಿಡುತ್ತಾನೆ/ಳೆ. ಮನದ ಕುಲುಮೆಯಲ್ಲಿ ಹದಗೊಂಡು ಪದಗಳ 'ಮಾಟ’ದಲ್ಲಿ ಅವು ಕಾವ್ಯವಾಗುತ್ತವೆ. ಹೂ ಮಾರುವ ಹುಡುಗಿ ಹೂ ಕಟ್ಟುವ ಕ್ರಿಯೆಯಲ್ಲಿ ತನ್ನ ಹಸಿವು-ನೋವುಗಳನ್ನು ಮರೆಯುತ್ತಾಳೆ. ಹೂವು ನಲುಗದಂತೆ, ದಾರ ಹರಿಯದಂತೆ, ಆಕಾರ ಕೆಡದಂತೆ ಕಟ್ಟುತ್ತಾಳೆ. ಕವಿಯ ಸಾರ್ಥಕ ಕ್ಷಣ ಕಊಡ ಅಂತಹುದೇ. ಕಾವ್ಯದಲ್ಲಿ ಉಜ್ವಲ ಅನುಭವ ಜಗತ್ತನ್ನು ನಿರ್ಮಿಸಿದ ಜಗತ್ತಿನ ಎಲ್ಲ ಕಾಲದ ಕವಿಗಳಿಗೂ ಇದು ಸಾಮಾನ್ಯವಾದ ಅನುಭವ. ಕಾವ್ಯ ಜಗತ್ತಿನನಲ್ಲಿ ಇನ್ನೂ ಮೊದಲ ಅಡಿಯಿಡುತ್ತಿರುವ ಎಳೆ ಹರೆಯದ ಹುಡುಗಿ ಶೈಲಜ ಅಂಥ ಕಾವ್ಯಪರಂಪರೆಯ ಕೊಂಡಿಯೂ ಆಗಿರುವುದು ಖುಷಿಯ ಸಂಗತಿ.

ಶೈಲಜ ತಮ್ಮ ಮುಗ್ಧ ಕಣ್ಣುಗಳಲ್ಲಿ ಲೋಕವನ್ನು ನೋಡುತ್ತಾರೆ. ಮುಗ್ಧವಾಗಿ ನೋಡುವುದೆಂದರೆ ಶುದ್ಧವಾಗಿ ಪರಿಭಾವಿಸುವುದು. ಅವರ ಮುಗ್ಧತೆಯ ಭಿತ್ತಿಯಲ್ಲಿ ಅರಿವಿನ ಸಾಲುಗಳು ಮಿಂಚಿನಂತೆ ಫಳಫಳಿಸುತ್ತವೆ. ನಮ್ಮನ್ನು ಚಕಿತಗೊಳಿಸಿ ಅರೆಕ್ಷಣ ಆ ಸಾಲುಗಳಲ್ಲಿ ಮನಸ್ಸನ್ನು ಹಿಡಿದು ನಿಲ್ಲಿಸುತ್ತವೆ. 'ಬೆಳಕಿನ ಗರ್ಭದೆಡೆಗೆ...’ ಪಯಣಿಸುವಾಗ ಅಯಾಚಿತವಾಗಿ ಆವರಿಸಿಕೊಳ್ಳುವ ಬೆಳಕು 'ಅವಳ ಅರಿವ’ನ್ನು ತೆರೆದುತೋರಿಸುತ್ತವೆ.

ಈ ಕವಿತೆಗಳಲ್ಲಿ ಕೊನೆಯಿಲ್ಲದ ಹುಡುಕಾಟವಿದೆ. ಅದು ಕವಿತೆಗೆ ಚಲನಶೀಲತೆಯನ್ನು ನೀಡಿದೆ. ಮೂರ್ತ ಬದುಕಿನ ತಲ್ಲಣಗಳಿಗೆ ಸ್ಪಂದಿಸುತ್ತಲೇ ಅಮೂರ್ತಕ್ಕೆ ಕೈಚಾಚುವ ದಾಹ ಕವಿತೆಗಳಲ್ಲಿ ಆರ್ತತೆಯನ್ನೂ ಆರ್ದ್ರತೆಯನ್ನೂ ತುಂಬಿದೆ.

ಸಿಕ್ಕದ, ದಕ್ಕದ ಅದ್ಯಾವುದೋ ಸ್ವರವನ್ನ
ನುಡಿಸಹೊರಟಿದೆ ಕೈಬೆರಳು
ಜೀವಸ್ವರವನ್ನು ಕೈವಶಮಾಡಿಕೊಂಡು ನುಡಿಸಲೆತ್ನಿಸುವ ಕವಯತ್ರಿ ಪ್ರೇಮದ ಮಾರ್ದವತೆಯಲ್ಲಿ ಅದನ್ನು ಕಾಣುತ್ತಾಳೆ. ಕವಿತೆಗಳ ಒಳಗೆ ಪ್ರೇಮದ ಕನಸುಗಳು ಹರಡಿವೆ. ಪ್ರೇಮ ಭಾವದ ಉಸಿರು ತಾಕುವ ಹಾಗೆ ತಾದಾತ್ಮ್ಯದಲ್ಲಿ ಬರೆಯುವ ಕವಯತ್ರಿ ವಯೋಸಹಜ ನವಿರು ಭಾವನೆಗಳಿಗೆ ನಿರೀಕ್ಷೆಯ ಬೆಚ್ಚನೆಯ ಹೊದಿಕೆ ತೊಡಿಸುತ್ತಾರೆ. ನಿಲ್ಲದ ಹುಡುಕಾಟ, ಕೋರಿಕೆ, ಆಲಾಪನೆ, ನಿರೀಕ್ಷಕಿ ಮುಂತಾದ ಕವಿತೆಗಳಲ್ಲಿ ಈ ರಾಗದ ಪಲಕುಗಳು ಗುಂಯ್‌ಗುಡುತ್ತವೆ.
ಕವಿತೆಗಳಲ್ಲಿ 'ಅವನ’ ಪ್ರೇಮಕ್ಕಾಗಿ ಸದಾ ತುಡಿಯುವ ಈ ಹೆಣ್ಣುದನಿ ಪ್ರೇಮದ ಗಾಢ ವ್ಯಾಮೋಹದಲ್ಲಿ ತೇಲಿಹೋಗುವಂಥಹುದಲ್ಲ. ಇದು ಜಾಗೃತ ಸ್ತ್ರೀ ಧ್ವನಿಯೂ ಹೌದು. ಇಲ್ಲಿ ಹೆಣ್ತನದ ಸುಕುಮಾರತೆಗೆ ಸ್ವಾಭಿಮಾನದ ವಜ್ರಲೇಪವಿದೆ. ವಿಚಾರದ ವಿವೇಕವಿದೆ. ಆದ್ದರಿಮದ ಅವಳು ಕಾಯುತ್ತಿರುವ 'ಅವನು’ ರಾಮನಂತೆಯೋ, ದುಷ್ಯಂತನಂತೆಯೋ - ಸ್ತ್ರೀ ಮನ ಭಂಜಕನಲ್ಲ. ಹೆಣ್ಣುಮನವನ್ನು ಹೊಸಕಿ ಹಾಕದೇ ಜೀವಭಾವದ ಉದ್ದೀಪಕನಾಗಿ ಇರುವಂಥವನು ಅವನು.

ಇಂದ್ರಿಯ ಸೈನಿಕರೆಲ್ಲ ಎಚ್ಚರಗೊಂಡು
ಕಾಯುತ್ತಿದ್ದಾರೆ ಅವನ ಆಗಮನಕ್ಕೆ
ಪ್ರಕೃತಿ ಸಹಜವಾದ ಇಂದ್ರಿಯಾನುಭೂತಿಗೆ ಕಾತರಿಸುತ್ತಲೇ ಹೆಣ್ಣನ್ನು ತುಳಿಯುವ ಸೋಗಲಾಡಿತನವನ್ನು ಧಿಕ್ಕರಿಸುವ ಎಚ್ಚರವನ್ನೂ ತಾಳುವ ಕವಿತೆ ಪರಂಪರೆಯೊಂದಿಗೆ ಮಾತಿಗಿಳಿವ ಪರಿ ಚೇತೋಹಾರಿಯಾಗಿದೆ. ಹೆಣ್ಣಿನ ಒಳಲೋಕದ ಆಕಾಂಕ್ಷೆಗಳನ್ನು ಸೂಚ್ಯವಾಗಿ ಪ್ರತಿಪಾದಿಸುವ 'ನಿನಗಾಗಿ ಕಾದಿರುವೆ ಪುಟ್ಟ ಹಣತೆಯ ಹಚ್ಚಿ’ ಕವಿತೆಯಲ್ಲಿ ಪ್ರೇಮದ ಪ್ರಭೆ ಪಸರಿಸುತ್ತದೆ. ಆ ಪ್ರಭೆ ಹಲವು ಕವಿತೆಗಳಲ್ಲಿ ಪ್ರತಿಫಲಿಸಿದೆ.

ಕವಯತ್ರಿ ಶೈಲಜಾರ ಬರವಣಿಗೆಯ ಕುರಿತು ಆಸ್ಥೆ ಮೂಡುವುದು ಅವರು ಇಡಿಯಾಗಿ ಬದುಕನ್ನು ಪರಿಭಾವಿಸುವ ಪ್ರಬುದ್ಧತೆಯಿಂದಾಗಿ. ಆ ಪ್ರಬುದ್ಧತೆ ಅವರಿಗೆ 'ಒಳನೋಟ’ವನ್ನು ನೀಡಿದೆ. ಬದುಕಿನಿಂದಲೇ ಮೂಡಿದ ಫಿಲಾಸಫಿಯನ್ನು ಹಸಿಹಸಿಯಾಗಿ ಮುಂದಿಡದೆ, ಘೋಷಣೆಯಾಗಿಸದೆ ಪ್ರತಿಮೆಗಳಲ್ಲಿ ಧ್ವನಿಸುವ ಕೌಶಲ ಇಲ್ಲಿನ ಕೆಲವು ಕವಿತೆಗಳಲ್ಲಿ ಸಿದ್ಧಿಸಿದೆ. ಹುಲುಗೂರು ಸಂತೆ ಇನ್ನೆಷ್ಟು ದಿನ? ಎಂಬ ಕವಿತೆಯಲ್ಲಿ ಷರೀಫರು ಕಂಡ ಬದುಕೆಂಬ ಸಂತೆಯ ನೆರಳಿದೆ. ಅದನ್ನು ತಮ್ಮೊಳಗೂ ಕಂಡು ಶೈಲಜ ಮರುಸೃಷ್ಟಿಸುತ್ತಾರೆ. ವ್ಯವಸ್ಥೆಯ ಕರಾಳ ಮುಖಗಳು, ಸರಕು ಸಂಸ್ಕೃತಿಯ ಕ್ರೌರ್ಯ ಇವೆಲ್ಲವನ್ನೂ ಕಂಡು ದಿಗ್ಭ್ರಾಂತಗೊಂಡ ಮನಸ್ಥಿತಿ ಕವಿತೆಯಲ್ಲಿ ಕಂಡರಿಸಲ್ಪಟ್ಟಿದೆ.

ಹೌದು, ಸಂತೆಗೆ ಬಂದುಬಿಟ್ಟಿದ್ದೇನೆ
ನಾನು ಸಹ ನಿಮ್ಮೊಂದಿಗೆ.
ಯಾರು ಕರೆತಂದರು? ಎಲ್ಲಿದ್ದೆ?
ಎಲ್ಲಿಂದ? ಅದೇಕೆ? ಎಂದು ಯೋಚಿಸುತ್ತಾ
ಹೋದಂತೆಲ್ಲ ಪ್ರಶ್ನೆಗಳ ಸರಮಾಲೆ.
ಅವುಗಳಿಗೆ ಅರ್ಥವೂ ಇಲ್ಲ ಉತ್ತರವೂ ಇಲ್ಲ
ಸಂತೆಯ ಸಂಭ್ರಮದಲ್ಲಿ ಕಳೆದುಕೊಳ್ಳುತ್ತಿರುವಂತೆಯೇ ವ್ಯವಹಾರ ಜಗತ್ತಿನ ದ್ರೋಹ ಧುತ್ತೆಂದು ಎದುರಾಗಿ ದಿಗಿಲುಗೊಳಿಸುತ್ತದೆ.
ಅರೆ! ಹುಲುಗೂರು ಸಂತೆಯಲ್ಲಿ ಹೆಣ್ಣುಗಳು
ಮಾರಾಟವಾಗುತ್ತವೆಯಂತೆ
ನನಗೆ ತಿಳಿದೇ ಇರಲಿಲ್ಲ
.........................................
ಸರಕು ಮಾರಾಟವಾಗುತ್ತಿದೆ ತನಗೆ ಗೊತ್ತಿಲ್ಲದಂತೆ
ಮತ್ಯಾವ ದೇಶಕ್ಕೋ, ಮತ್ತೆಷ್ಟು ಜನರ ಕೈಯಡಿಗೋ
ಅದೆಷ್ಟು ಬೇಡುವ ಕಾಡಿಸುವ ಕೈಗಳಿಗೋ
ಅದ್ಯಾವ ಮಹಡಿಗೋ, ಮಂಚಕ್ಕೋ!
ಬಂಡವಾಳಶಾಹಿಯ ಕ್ರೌರ್ಯವನ್ನು ಸೂಕ್ಷ್ಮವಾಗಿ ಹೇಳುವ ಕವಿತೆ ತನ್ನ ಬಹುಸ್ಪರೀಯತೆಯಿಂದ ಗಮನಸೆಳೆಯುತ್ತದೆ.
'ಬೆಳಕ ಗರ್ಭದೆಡೆಗೆ...’ ಕೂಡ ಭರವಸೆಯ ಕವಿತೆ. ಹುಟ್ಟು-ಸಾವುಗಳು ಹಗಲು ಇರುಳುಗಳಂತೆ ಒಂದರ ಹಿಂದೆ ಇನ್ನೊಂದು ಇವೆ. ಇವುಗಳ ಮಧ್ಯೆಯೇ ಬದುಕಿನ ಓಟ ಸಾಗಿದೆ. ಬೆಳಕನ್ನು ಹೊಂದುವ ಹಂಬಲ ಹಾಗೂ ಬದುಕುವ ಹಂಬಲಗಳೆರಡೂ ಇಲ್ಲಿ ಒಂದೇ ಆಗಿವೆ. ಬೆಳಕನ್ನು ಕೆಲಕಾಲ ಹಿಡಿದಿಡುವ ಹಣತೆಯಂತೆ ನಮ್ಮ ಬದುಕು... ಹೀಗೆ ಬದುಕಿನ ಒಳಮರ್ಮವನ್ನು ಕವಿತೆ ಬೆದಕುತ್ತ ಹೋಗುತ್ತದೆ.

ಅಶ್ವವೂ ನೀನೆ ಬಯಲೂ ನಿನ್ನದೆ
ಓಡುವುದಷ್ಟೆ ನಿನ್ನ ಕೆಲಸ, ಅದ ನೋಡುವುದಷ್ಟೆ 
ನನ್ನ ಭಾಗ್ಯ.
ಯಾರ ಹಂಗೂ ಇಲ್ಲ ನಿನಗೆ 
ಜೀವದ ಹಂಗೂ ಸಹ!
ಈ ಹಣತೆ ಕಲಾವಿದನ ಕೈಯಲ್ಲಿ 
ಅರಳಿದ ಬೆಳಕು.
ಆದರೆ ಸಾವಿನೊಂದಿಗೆ ಲೋಕ ಕೊನೆಯಾಗುವುದಿಲ್ಲ. ಹಣತೆಯಿಂದ ಹಣತೆ ಹಚ್ಚುತ್ತ ಜಗತ್ತು ಚಲಿಸುತ್ತದೆ. ಮುಂದುವರೆದು ಅದನ್ನು ಮಿಂಚುಹುಳದ ಪ್ರತಿಮೆಯಲ್ಲಿ ಕವಯತ್ರಿ ಕಂಡರಿಸುತ್ತಾಳೆ. ಒಂದು ಮಿಂಚುಹುಳದ ಬೆಳಕು ಆರುತ್ತಿದ್ದಂತೆಯೇ ಮತ್ತಷ್ಟು ಹೊಸಜೀವಗಳು ಆ ಬೆಳಕನ್ನು ತಮ್ಮ ಪುಟ್ಟ ಮೈಯ್ಯಲ್ಲಿ ಹೊತ್ತೊಯ್ಯುತ್ತಿರುತ್ತವೆ.

ಕಮಟು ಮಣ್ಣಿನ ಮೇಲೆ ಪವಡಿಸಿ 
ಮಿನುಗುವೆ, ಮಿಂಚುವೆ, ಬೆಳಗುವೆ ಬೆಳಕ.
ನಿನ್ನ ಬೆಳಕು ಆರುವ ಮುನ್ನ,
ಬೆಳಗುತ್ತಿದೆ ಮತ್ತೊಂದು ಬೆಳಕು.
ಅಲ್ಲಿ ಚಿಲಿಪಿಲಿಗಳುಲಿಯಲ್ಲಿ 
ಅವುಗಳಿಂಚರದ ಪಲುಕು.

'ಅನುಭವದ ಅಡುಗೆ’ ಕವಿತೆಯಲ್ಲಿ ಕವಯತ್ರಿ ನಡೆಸುವ ಅನುಭವ ಶೋಧದ ಪರಿ ಆಸಕ್ತಿದಾಯಕವಾದುದು. ಬದುಕಿನ ಬವಣೆಗಳಲ್ಲಿ ಉರಿದಾಗಲೇ ಅನುಭವವು ಸಿಗುವುದು. ಬದುಕಿನ ಪೈಪೋಟಿಯಲ್ಲಿ ಉರಿಯುವ ನಾವು ಕೆಲವೊಮ್ಮೆ ಹಸಿಯಾಗಿ ಉರಿಯಲಾಗದೇ ಹೊಗೆ ಕಾರುತ್ತೇವೆ! ಅಡುಗೆ ಒಲೆ ಉರಿಯುವ ಹಂತ ಹಂತವಾದ ಪ್ರಕ್ರಿಯೆಯ ಮೂಲಕ ಬದುಕಿನ ಸತ್ಯವನ್ನು ಕವಯತ್ರಿ ಕಾಣಿಸುತ್ತಾಳೆ. ಈ ಅನುಭವದ ಅಡುಗೆ 'ಮಾಡಿ’ದ್ದಲ್ಲ 'ಆಗಿ’ದ್ದು. ನಮ್ಮ ಯೋಚನೆ, ಯೋಜನೆಗಳನ್ನು ಮೀರಿ ಅನುಭವವು 'ಆಗು’ತ್ತದೆ. ಅನುಭವದ ಹಸಿವು ಎಂದಿಗೂ ತಣಿಯದೆ ಮುಂದುವರಿಯುತ್ತಲೇ ಇರುತ್ತದೆ.

ಅನುಭವದ ಅಡುಗೆ
ಆ ನಳಮಹಾರಾಜನ ಪಾಕದಂತೆ,
ಸವಿದಷ್ಟು ಸ್ವಾದ, ಉಂಡಷ್ಟೂ ಹಸಿವು.
'ಉಂಡಷ್ಟೂ ಹಸಿವು’ ಎಂಬ ಕವಿತೆಯ ಕೊನೆ ಮತ್ತೆಮತ್ತೆ ಅನುರಣಿಸುವ ಗುಣ ಹೊಂದಿದೆ.

'ಇನ್ಯಾವ ಹಣ್ಣು ತರಲಿರುವೆ ಜಾಬ್ಸ್...?’ ಕವಿತೆ ಈ ಸಂಕಲನದಲ್ಲಿ ಕಾಡುವ ಮತ್ತೊಂದು ಕವಿತೆ. ತಾಂತ್ರಿಕ ಜಗತ್ತಿನ ಮೇಧಾವಿ ಸ್ಟೀವ್ ಜಾಬ್ಸ್ ಬಗ್ಗೆ ಹುಟ್ಟಿದ ಕವಿತೆ ಬರಿಯ ಅವನ ಕಥೆ ಹೇಳದೆ ಮನುಕುಲದ ಕಥೆಯಾಗಿಬಿಡುತ್ತದೆ. ಇದೇ ಉತ್ತಮ ಕಾವ್ಯದ ಲಕ್ಷಣ. 'ಆಪಲ್’ ಪದವನ್ನು ಧ್ವನಿಪೂರ್ಣವಾಗಿ ದುಡಿಸಿಕೊಳ್ಳುವಲ್ಲಿ ಕವಿತೆ ಯಶಸ್ವಿಯಾಗಿದೆ. ಸ್ಟೀವ್ ಎಷ್ಟು ಎತ್ತರಕ್ಕೆ ಬೆಳೆದರೂ ಸಾವು ಅವನನ್ನು ಬಿಡಲಿಲ್ಲ ಎಂಬುದು ಮನುಕುಲದ ಮುಂದಿರುವ ಸತ್ಯ. ಒಂದರ ಅಂತ್ಯ ಇನ್ನೊಂದರ ಆರಂಭವೆಂಬುದೂ ಅಷ್ಟೇ ಸತ್ಯ.

ಆಪಲ್ ತೊಟ್ಟು ಕಳಚಿ 
ಮತ್ತೆ ಹುಟ್ಟು ಪಡೆಯಲು ಹೋಯಿತೇ
.......................................
ಈಗ ಮತ್ಯಾವ ಹಣ್ಣು 
ತರಲು ಹೊರಟಿರುವೆ ಜಾಬ್ಸ್?
ಇಂತಹ ಗಹನ ಪ್ರಶ್ನೆಗಳನ್ನು ಕೇಳುವ ಮೂಲಕ ಕಾವ್ಯ ಪ್ರಪಂಚಕ್ಕೆ ಅಡಿಯಿರಿಸುತ್ತಿರುವ ಶೈಲಜ ನಿಂಬೇನಹಳ್ಳಿ ನಿಜಕ್ಕೂ ಭರವಸೆ ಮೂಡಿಸುತ್ತಾರೆ. ಇನ್ನೂ ವಿದ್ಯಾರ್ಥಿನಿಯಾಗಿರುವ ಅವರೊಳಗಿನ ಜಿಜ್ಞಾಸೆ ಹಾಗೂ ಅರಿವಿನ ದಾಹ ಗಮನನಿಸುವಂಥದ್ದು.

ನನಗೆ ಅರಿವು ಬಂದಾಗಿನಿಂದ 
ಆಗಸಕ್ಕೆ ಕೈಚಾಚಿಯೇ ಇದ್ದೇನೆ
ಎಂಬ ಮಹತ್ವಾಕಾಂಕ್ಷೆಯುಳ್ಳ ಕವಯತ್ರಿಯು ಬರೆದ ಕವಿತೆಗಳು ಮೆಚ್ಚಿಗೆ ಮೂಡಿಸುವಂತೆ ಬರೆಯಬಹುದಾದ ಕವಿತೆಗಳ ಕುರಿತು ಕುತೂಹಲ ಮೂಡಿಸುತ್ತವೆ. ಅನುಭವದ ದಾಹ, ಅರಿವಿನ ಎಚ್ಚರ ಎರಡನ್ನೂ ಹೊಂದಿರುವ ಶೈಲಜ ಅವುಗಳನ್ನು ಧರಿಸಿ ದಕ್ಕಿಸಿಕೊಳ್ಳುವ ಅಭಿವ್ಯಕ್ತಿಯನ್ನು ಸಾಧಿಸಿಕೊಳ್ಳಬೇಕಾದುದು ಅಗತ್ಯವಾಗಿದೆ. ಅಂತಹ ಸಾಧ್ಯತೆ ಅವರಿಗಿದೆ. ಶೈಲಜರೊಂದಿಗೆ ಅವರ ಕಾವ್ಯವೂ ಬೆಳೆಯಲಿ ಎಂಬುದು ಹಾರೈಕೆ.