ಸೆಪ್ಟೆಂಬರ್ 23, 2015ರ 'ಕನ್ನಡ ಪ್ರಭ'ದಲ್ಲಿ ಪ್ರಕಟವಾದ ಲೇಖನ
ಬದುಕು ಬದಲಾಗಿರೋದಾ? ಬರಡಾಗಿರೋದಾ? ಪಡೆದುಕೊಂಡಿರೋದು ಹೆಚ್ಚಾ? ಕಳೆದುಕೊಂಡಿರೋದು ಹೆಚ್ಚಾ? ಕಿರಿದಾಗುತ್ತಿರುವ ಪ್ರಪಂಚದೊಳಗೆ ನಾವು ಹತ್ತಿರವಾಗುತ್ತಿದ್ದೇವಾ? ದೂರ ಸರಿಯುತ್ತಿದ್ದೇವಾ?
ಹಾಗೆಂದು ಎದುರು ಹರಡಿಕೊಂಡಿರುವ ರಾಶಿರಾಶಿ ಪತ್ರಗಳು ಜಗ್ಗಿಜಗ್ಗಿ ಕೇಳುತ್ತಲೇ ಇವೆ. ಅವೆಲ್ಲ ಕನಿಷ್ಠ ಹತ್ತು-ಹದಿನೈದು ವರ್ಷಗಳ ಹಿಂದಿನವು ಎಂದು ಅವುಗಳ ಮೇಲಿರುವ ತಾರೀಕುಗಳಷ್ಟೇ ಹೇಳಬೇಕು. ಅವು ಹಳೆಯವು ಎನ್ನಲೂ ಮನಸ್ಸಂತೂ ಸುತಾರಾಂ ಒಪ್ಪದು. ಈಗಷ್ಟೇ ತಲೆಗೆ ಮಿಂದು ಘಮ್ಮೆಂದು ಹೊರಬಂದ ಮನದನ್ನೆಯಂತೆ, ಬಳ್ಳಿಯಿಂದ ಮೆತ್ತಗೆ ಬಿಡಿಸಿಕೊಂಡು ತಂದಿರುವ ಮುದ್ದಾದ ಮೊಗ್ಗುಗಳಂತೆ, ನಿಮಿಷದ ಹಿಂದೆ ಪ್ರೆಸ್‌ನಿಂದ ಬಂದ ಹೊಚ್ಚಹೊಸ ಪುಸ್ತಕದ ಮಾದಕ ಪರಿಮಳದಂತೆ, ಬಿರಿದ ನೆಲಕ್ಕೆ ಸೋಕಿದ ಮೊದಲ ಸೋನೆ ಹೊಮ್ಮಿಸುವ ನರುಗಂಪಿನಂತೆ... ಅವುಗಳ ಮೇಲಿನ ಹೊಚ್ಚಹೊಸ ಮುಗುಳ್ನಗು ಒಂದಿನಿತೂ ಮಸುಕಾಗಿಲ್ಲ.
ಈಗಷ್ಟೇ ಅಂಚೆಯಣ್ಣ ಧುತ್ತನೆ ಪ್ರತ್ಯಕ್ಷನಾಗಿ ಕೊಟ್ಟುಹೋದ ಪತ್ರಗಳಂತೆ ಅವುಗಳ ತುಂಬೆಲ್ಲ ಕಾತರದ ಕನವರಿಕೆಗಳು. ಒಳಗಿನ ಒಂದಾದರೂ ಅಕ್ಷರ ಎಲ್ಲಿ ಕಾಣೆಯಾದೀತೋ ಎಂಬ ಭಯಾತಂಕದೊಂದಿಗೆ ಬೆರಳುಗಳು ಅತಿನಾಜೂಕಾಗಿ ಲಕೋಟೆಯನ್ನು ಹರಿಯುವ ಪರಪರ ಸದ್ದು, ಅದನ್ನು ಮೀರಿಸುವ ಹೃದಯದ ಲಬ್‌ಡಬ್ ಎಲ್ಲವೂ ಕಿವಿಗೆ ಕೇಳಿಸುತ್ತಿದೆ.
'ನನ್ನ ಪ್ರೀತಿಯ ಒಡವೆಯೇ... ಕಾಪಿಟ್ಟ ಕನಸುಗಳು ಮೊಲ್ಲೆಯ ಮೊಗ್ಗಿನಂತೆ ನಸು ಬಿರಿದು ನಮ್ಮಿಬ್ಬರ ಪಯಣದುದ್ದಕ್ಕೂ ಕಂಪ ಬೀರಲಿ...’ ಅವಳು ಕೈಯಾರೆ ಬರೆದ ಸಾಲುಗಳು ಸರಸರನೆ ಕಣ್ಣೆದುರು ಹಾದುಹೋಗುತ್ತವೆ. 'ಒಲವೇ... ಸಾವಿರ ಸ್ವಪ್ನಗಳು ಕೈಗೂಡುವುದಕ್ಕೆ, ಚಿಗುರೊಡೆದು ಹೂವಾಗುವುದಕ್ಕೆ ಬಲು ದೂರವಿಲ್ಲ... ಒಲವಿಗಿನ್ನು ಹೊಸಬಣ್ಣ, ಒಲವಿನೊಂದಿಗೆ ಹೊಸಹೆಜ್ಜೆ... ಹೆಜ್ಜೆಗಳು ಬಿರುಸಾಗಲಿ ಸಾಧನೆಯ ಪಥದಲ್ಲಿ ನಮಗೆ- ಒಲವೇ ಬೆಳಕಾಗಲಿ...’ ಧಾರಾವಾಹಿಯಾಗಿ ಹರಿದುಬರುತ್ತಿದ್ದ ಅವಳ ಮಹಾಕಾವ್ಯದ ಪುಟಗಳು ಅಲ್ಲಿಂದಲೇ ಕಣ್ಣು ಮಿಟುಕಿಸುತ್ತಿವೆ.
'ಕ್ಯಾನ್ ಯೂ ಗೆಸ್ ಮಿ?’ ಎಂಬ ಪ್ರಶ್ನೆಯನ್ನು ಬೆನ್ನಿಗೆ ಅಂಟಿಸಿಕೊಂಡ ನಸುನೀಲಿ ಬಣ್ಣದ ಇನ್‌ಲ್ಯಾಂಡ್ ಲೆಟರುಗಳು... 'ಓಪನ್ ವಿದ್ ಎ ಸ್ಮೈಲ್’ ಎಂದು ಕಚಗುಳಿಯಿಡುವ ಕೆನೆಬಣ್ಣದ ಲಕೋಟೆಗಳು... ’ನಿನ್ನ ಗೆಳೆತನಕ್ಕೆ ಯಾವ ಹೆಸರಿಡಲಿ’ ಎಂದು ಕೇಳುವ ಗೆಳೆಯರ ಗ್ರೀಟಿಂಗ್ ಕಾರ್ಡುಗಳು, 'ಬದುಕೆಂದರೆ ಪ್ರೀತಿಸುವುದು... ಪ್ರೀತಿಸುವುದೆಂದರೆ ನಿನ್ನ ಜತೆಗಿರುವುದು...’ ಎಂದು ಮತ್ತೆಮತ್ತೆ ರೋಮಾಂಚನ ಹುಟ್ಟಿಸುವ ಸುಂದರ ಶುಭಾಶಯ ಪತ್ರಗಳು...
ಒಂದೊಂದು ಪತ್ರವೂ ಸಜೀವ. ಒಂದೊಂದರಲ್ಲೂ ಒಬ್ಬೊಬ್ಬನ ವ್ಯಕ್ತಿತ್ವ. ಅದು ಯಾರದೆಂದು ಹೇಳಲು ವಿಳಾಸ ನೋಡಬೇಕಿಲ್ಲ. ಕೈಬರಹವೇ ಅವರೆಲ್ಲರ ಐಡೆಂಟಿಟಿ ಕಾರ್ಡು. ಪೆನ್ನುಹಿಡಿದರೆ ಬರೀ ಅಕ್ಷರವಲ್ಲ, ಗ್ರೀಟಿಂಗ್ ಕಾರ್ಡೇ ತಯಾರು ಮಾಡುವ ಸ್ನೇಹಿತ; ಸಾಸಿವೆ ಕಾಳು ಉದುರಿಸುವುದಕ್ಕೂ ಜಾಗ ಬಿಡದೆ ಕಾಗದದ ಮೂಲೆಮುಡುಕುಗಳಲ್ಲೆಲ್ಲ ಬರೆದು ಕೊನೆಗೆ ಕಾಗದ ತಯಾರು ಮಾಡಿದವನನ್ನೇ ಶಪಿಸುವ ಗೆಳತಿ; 'ಕೊರೆತ ಕಛೇರಿಗೆ ಸ್ವಾಗತ’ ಎಂಬ ಬೆದರಿಕೆಯೊಂದಿಗೇ ಪತ್ರ ಆರಂಭಿಸಿ, 'ಇಂತೀ ನಿನ್ನ ತುಂಬ ತುಂಬ ತಲೆ ತಿನ್ನುವ ತಂಗಿ’ ಎಂದು ಮುಕ್ತಾಯ ಮಾಡುವ ಕೂಸು; 'ಶತಮಾನದ ನಂತರ ಕಾಗದ ಬರೆದಿದ್ದಿ. ನಾಕು ಸಾಲು ಜಾಸ್ತಿ ಬರೆಯಲು ನಿನಗೇನು ಧಾಡಿ?’ ಎಂದು ಬೆನ್ನಿಗೊಂದು ಗುದ್ದುವ ಸ್ನೇಹಿತೆ; 'ನಾನಿಲ್ಲಿ ಮಾರ್ಕಿನ ಮರುಭೂಮಿಯಲ್ಲಿ ಓಯಸಿಸ್‌ನ ಹುಡುಕಾಟದಲ್ಲಿ ನಿರತನಾಗಿದ್ದೇನೆ, ನಿನ್ನ ಗೊಂಡಾರಣ್ಯ ಹೇಗಿದೆ?’ ಎಂದು ಯೂನಿವರ್ಸಿಟಿಯ ಕ್ಷೇಮಸಮಾಚಾರವನ್ನು ವಿಚಾರಿಸುವ ಗೆಳೆಯ; ಬರ್ತ್‌ಡೇ, ಯುಗಾದಿ, ದೀಪಾವಳಿ, ಕೃಷ್ಣಜನ್ಮಾಷ್ಟಮಿಗೆಲ್ಲ ಕಾರ್ಡು ಕಳಿಸಿದ ಮೇಲೂ ರಕ್ಷಾಬಂಧವನ್ನು ಮಾತ್ರ ಒಂಚೂರೂ ಮರೆಯದೆ ಪ್ರೀತಿಯಿಂದ ರೇಷ್ಮೆ ದಾರ ಕಳುಹಿಸುವ ದೂರದೂರಿನ ತಂಗಿ... ಆ ರಾಶಿಯೊಳಗೆ ಎಲ್ಲರೂ ಇನ್ನೂ ಅವಿತು ಕುಳಿತಿದ್ದಾರೆ.
'ನಿನ್ನ ದೃಢಹೆಜ್ಜೆ, ಆತ್ಮವಿಶ್ವಾಸಗಳೇ ಭವಿತವ್ಯದ ಅಡಿಗಲ್ಲು. ಭದ್ರವಾಗಿ ಬೆಳೆ...’ ಹೊಸ ಉದ್ಯೋಗ ಅರಸಿ ಹೊರಟಾಗ ಸಹೋದ್ಯೋಗಿ ಕೊಟ್ಟ ಪುಟ್ಟ ಚೀಟಿ; 'ನಿಮ್ಮಂತಹ ಶಿಷ್ಯರಿಂದ ನಮ್ಮ ಅಧ್ಯಾಪಕ ಜೀವನದ ಖುಷಿ, ಸಂತೃಪ್ತಿ ಹೆಚ್ಚಿದೆ. ನೀವು ಬಯಸಿದ್ದೆಲ್ಲ ಸಿಗಲಿ...’ ಎಂದು ಪ್ರೀತಿಯ ಮೇಷ್ಟ್ರು ಖುದ್ದು ಮದುವೆ ಮಂಟಪಕ್ಕೆ ತಲುಪಿಸಿದ ಗ್ರೀಟಿಂಗು; 'ಸಾಕ್ಷಾತ್ ಜೋಗದ ಎದುರೇ ಇದೆ ನಮ್ಮ ಮನೆ... ನೀವು ಜುಲೈನಲ್ಲಿ ಬಂದರೆ ಜಲಪಾತದ ಎದುರೇ ಕುಳಿತು ಕವಿತೆ ಬರೆಯಬಹುದು’ ಎಂದು ಆಸೆ ಹುಟ್ಟಿಸುವ ಹೊಸ ಗೆಳೆಯ; ಮತ್ತೆ ಬೆಂಗಳೂರಿಗೆ ನಿನ್ನ ದರುಶನ ಯಾವಾಗಲೋ ತಮ್ಮಾ, ಎಂದು ಅಕ್ಕರೆಯಿಂದ ಕೇಳುವ ಅಣ್ಣ; 'ಕಾಲ ಕೆಳಗಿನ ಬೆಂಕಿಗಿಂತ ಕಣ್ಣ ಮುಂದಿನ ಬೆಂಕಿ ದೊಡ್ಡದು...’ ಎಂಬಂತಹ ಸ್ಟೇಟ್‌ಮೆಂಟುಗಳಿಂದಲೇ ಸದಾ ಪತ್ರವನ್ನು ನಿಲ್ಲಿಸಿ ತಮಾಷೆ ನೋಡುವ ಸ್ನೇಹಿತೆ.
ಎಲ್ಲವುಗಳ ನಡುವೆ 'ಶ್ರೀದೇವರ ದಯದಿಂದ ಮೇಲಿನ ತಾರೀಕಿನವರೆಗೆ ನಾವಿಲ್ಲಿ ತಕ್ಕಮಟ್ಟಿಗೆ ಕ್ಷೇಮ’ ಎಂದು ಪ್ರತೀಬಾರಿಯೂ ಆರಂಭವಾಗುವ ಅಪ್ಪನ ಇನ್‌ಲ್ಯಾಂಡು ಲೆಟರುಗಳಂಲ್ಲಂತೂ ಥೇಟ್ ಅಪ್ಪನದೇ ಬಿಂಬ. 'ಉಂಡೆಹುಳಿ ಕೊಯ್ದಾಗಿಯದೆ. ಕ್ರಯ ಮಾತ್ರ ಕಮ್ಮಿಯಂತೆ. ಇಲ್ಲಿ ತೋಟಕ್ಕೆ ನೀರು ದಿನಕ್ಕೆ ಮುಕ್ಕಾಲು ಗಂಟೆ ಮಾತ್ರ ಸಿಗುತ್ತಿದೆ. ಮನೆ ರಿಪೇರಿ ಮುಗಿಯುತ್ತಾ ಉಂಟು. ಮೂಲೆಹೆಂಚು ಕೂರಿಸುವುದು ಬಾಕಿ. ಕೃಷಿ ಲೋನಿಗೆ ಅರ್ಜಿ ಹಾಕಿದ್ದೇನೆ. ಯಾವಾಗ ಪಾಸಾಗುತ್ತದೋ ಗೊತ್ತಿಲ್ಲ’ ಎಂಬಿತ್ಯಾದಿ ತರಹೇವಾರಿ ವಾರ್ತೆ ಹೊತ್ತುಬರುವ ಎಲ್ಲ ಪತ್ರಗಳ ಅಂತ್ಯ ಒಂದೇ: 'ಬೇರೇನೂ ವಿಶೇಷವಿಲ್ಲ. ಬಾಕಿ ಮುಖತಾ’.
ಹತ್ತು ವರ್ಷ ಕಳೆಯುವಲ್ಲಿ ಪ್ರಪಂಚ ಎಷ್ಟೊಂದು ಬದಲಾಗಿದೆ ಎಂದು ಮತ್ತೆ ಅಚ್ಚರಿ ಕಾಡುತ್ತದೆ. ಮರುಕ್ಷಣ ಮತ್ತವೇ ಪ್ರಶ್ನೆಗಳು ಧುತ್ತನೆ ಕಣ್ಣೆದುರು ಪ್ರತ್ಯಕ್ಷವಾಗತ್ತವೆ: ಬದುಕು ಬದಲಾಗಿರೋದಾ? ಬರಡಾಗಿರೋದಾ? ಪಡೆದುಕೊಂಡಿರೋದು ಹೆಚ್ಚಾ? ಕಳೆದುಕೊಂಡಿರೋದು ಹೆಚ್ಚಾ?
ಇನ್‌ಲ್ಯಾಂಡ್ ಲೆಟರಿನ ಅಚ್ಚರಿ, ಜತನವಾಗಿ ಕಾಪಿಡುವ ಸ್ಟ್ಯಾಂಪು, ಇನ್ನೂ ಆರದ ಪೆನ್ನಿನ ಶಾಯಿ, ಕೆ.ಜಿ.ಗಟ್ಟಲೆ ಸಮಾಚಾರ, ಬರೆದಷ್ಟೂ ಮುಗಿಯದ ಸುದ್ದಿಗಳೆಲ್ಲ ಎಲ್ಲಿ ಹೋದವು? ಎಲ್ಲ ಪ್ರಶ್ನೆಗಳಿಗೆ ಉತ್ತರ ಕಣ್ಣೆದುರಿನ ಪತ್ರಗಳ ಗುಡ್ಡೆಯೊಳಗೆ ಇದೆ. ಇನ್ನೇನು ತೆರೆದು ನೋಡಬೇಕು ಎಂದರೆ ಫೇಸ್‌ಬುಕ್ ನೋಟಿಫಿಕೇಶನ್ ಕಾಯುತ್ತಿದೆ; ವಾಟ್ಸಾಪ್ ಸಂದೇಶಗಳು ಸದ್ದುಮಾಡುತ್ತಿವೆ; ಟ್ವಿಟರ್ ಲೊಚಗುಡುತ್ತಿದೆ; ಇ-ಮೇಲ್‌ಗಳು ಸರತಿಯಲ್ಲಿ ಕುಳಿತಿವೆ. ಅಯ್ಯೋ ಆಫೀಸಿಗೆ ಬೇರೆ ತಡವಾಯಿತು.
ಈಗ ನನಗೆ ನಾನೇ ಒಂದು ಎಸ್ಸೆಮ್ಮೆಸ್ ಹಾಕಿಕೊಳ್ಳಬೇಕು: ನಾವು ನಾವಾಗುವುದು ಯಾವಾಗ?

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ