ಸಿಬಂತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಿಬಂತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಜನವರಿ 27, 2024

ಭಾರತೀಯ ಪತ್ರಿಕಾಲೋಕದ ಹಿಂದಿನ ಕಥೆ

28 ಜನವರಿ 2024ರ ʻಉದಯವಾಣಿ ಸಾಪ್ತಾಹಿಕ ಸಂಪದʼದಲ್ಲಿ ಪ್ರಕಟವಾದ ಲೇಖನ

ಕಾಫಿಯಿಲ್ಲದ ಬೆಳಗನ್ನಾದರೂ ಊಹಿಸಬಹುದು, ಪತ್ರಿಕೆಯಿಲ್ಲದ ಮುಂಜಾವನ್ನು ಊಹಿಸಿಕೊಳ್ಳುವುದು ಕಡುಕಷ್ಟ. ಪತ್ರಿಕೆಯ ಜಾಗದಲ್ಲಿ ಮೊಬೈಲೇನೋ ಬಂದು ಕೂತಿರಬಹುದು, ಆದರೆ ಮನುಷ್ಯನ ದಿನದ ಬಾಗಿಲನ್ನು ತೆರೆಯುವುದು ಯಾವುದೋ ಒಂದು ಮಾಧ್ಯಮ ಎಂಬುದರಲ್ಲಿ ಎರಡು ಮಾತಿಲ್ಲ. ಯಾವ ಮಾಧ್ಯಮ ಬಂದರೂ ಪತ್ರಿಕೆಯ ಮೇಲೆ ಕಣ್ಣಾಡಿಸದೆ ತೃಪ್ತಿಯಿಲ್ಲ ಎನ್ನುವ ಮಂದಿಯಂತೂ ಬೇಕಾದಷ್ಟಿದ್ದಾರೆ.

ಪತ್ರಿಕೆಗಳನ್ನು ಇಷ್ಟೊಂದು ಹಚ್ಚಿಕೊಂಡಿರುವ ಎಲ್ಲರಿಗೂ ‘ಜನರನ್ನು ಈ ಮಟ್ಟಕ್ಕೆ ಪ್ರಭಾವಿಸಿರುವ ಇಂತಹದೊಂದು ಮಾಧ್ಯಮ ಹೇಗೆ ಹುಟ್ಟಿಕೊಂಡಿತು? ಯಾವಾಗ ಹುಟ್ಟಿಕೊಂಡಿತು?’ ಎಂಬ ಪ್ರಶ್ನೆ ಕಾಡದಿರದು.  ಆ ಕಥೆ ಬಹಳ ಸ್ವಾರಸ್ಯಕರವಾಗಿದೆ. ಸದ್ಯಕ್ಕೆ ನಾವು ಭಾರತದಲ್ಲಿ ಪತ್ರಿಕೆಗಳು ಹೇಗೆ ಹುಟ್ಟಿಕೊಂಡವು? ನಮ್ಮ ದೇಶದ ಮೊದಲ ಪತ್ರಿಕೆಯ ಕಥೆ ಏನು? ಆರಂಭಿಸಿದವರು ಯಾರು? ಇತ್ಯಾದಿಗಳನ್ನು ಗಮನಿಸೋಣ. 

ಸುಮಾರು ಇನ್ನೂರೈವತ್ತು ವರ್ಷಗಳ ಹಿಂದೆ ಭಾರತದಲ್ಲಿ ಪತ್ರಿಕೆಗಳೇ ಇರಲಿಲ್ಲ. ಇರಲಿಲ್ಲ ಎಂದರೆ ಜನ ಪತ್ರಿಕೆಗಳನ್ನು ಕಂಡೇ ಇರಲಿಲ್ಲ ಎಂದಲ್ಲ. ಯುರೋಪಿನ ಪತ್ರಿಕೆಗಳನ್ನು ಜನರು ಓದುತ್ತಿದ್ದುದುಂಟು. ಇಲ್ಲಿ ಬ್ರಿಟಿಷರ ವ್ಯಾಪಾರ ವ್ಯವಹಾರ ಜೋರಾಗಿದ್ದುದರಿಂದ, ಇಂಗ್ಲೆಂಡಿನಿಂದ ಹಡಗುಗಳ ಮೂಲಕ ಪತ್ರಿಕೆಗಳೂ ಆಗೊಮ್ಮೆ ಈಗೊಮ್ಮೆ ಬರುತ್ತಿದ್ದವು. ಅವು ಮೂರ್ನಾಲ್ಕು ತಿಂಗಳು ಹಳೆಯ ಪತ್ರಿಕೆಗಳು. ಅವನ್ನೇ ಇಲ್ಲಿನ ಮಂದಿ ಬಿಸಿಬಿಸಿ ಸುದ್ದಿಗಳೆಂದು ಭಾವಿಸಿ ಓದಬೇಕಿತ್ತು.

ವ್ಯಾಪಾರಿಯ ಕನಸು:

ಭಾರತದಲ್ಲೇ ಪತ್ರಿಕೆಗಳನ್ನು ಮುದ್ರಿಸಬೇಕು ಎಂಬ ಯೋಚನೆ ಮೊದಲು ಬಂದದ್ದು ವಿಲಿಯಂ ಬೋಲ್ಟ್ಸ್ ಎಂಬ ಯುರೋಪಿಯನ್ ವ್ಯಾಪಾರಿಗೆ. ಭಾರತದಲ್ಲಿ ಪತ್ರಿಕೆಗಳಿಲ್ಲದೆ ವ್ಯಾಪಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ ಎಂದೂ, ಯಾರಾದರೂ ಮುದ್ರಣಾಲಯವನ್ನು ಸ್ಥಾಪಿಸುವ ಆಸಕ್ತರಿದ್ದರೆ ಅವರಿಗೆ ತಾನು ಸಹಾಯ ಮಾಡುತ್ತೇನೆ ಎಂದೂ, ತನ್ನಲ್ಲಿ ಸಾಕಷ್ಟು ವಿಶೇಷ ಸುದ್ದಿಗಳಿದ್ದು ಅವನ್ನು ಓದಬಯಸುವವರು ತನ್ನಮನೆಗೆ ಬೆಳಗ್ಗಿನ ಹೊತ್ತು ಬರಬಹುದು ಎಂದೂ ಒಂದು ಕರಪತ್ರವನ್ನು ಸಿದ್ಧಪಡಿಸಿ ಅವನು ಕಲ್ಕತ್ತಾದ ಕೌನ್ಸಿಲ್ ಹೌಸಿನ ಹೆಬ್ಬಾಗಿಲಿನಲ್ಲಿ ಅಂಟಿಸಿದ. ಅದು 1760ರ ದಶಕದ ಕೊನೆಯ ಭಾಗ.

ಕಂಪೆನಿ ಸರ್ಕಾರಕ್ಕೆ ಅಲ್ಲೇ ಅಪಾಯದ ಮುನ್ಸೂಚನೆ ಕಂಡಿತು. ಇದನ್ನು ಚಿಗುರಲ್ಲೇ ಚಿವುಟದೆ ಹೋದರೆ ನಮಗೇ ಸಂಚಕಾರ ಉಂಟಾದೀತು ಎಂದು ಭಾವಿಸಿದ ಕಂಪೆನಿ ಅಧಿಕಾರಿಗಳು ಬೋಲ್ಟ್ಸ್‍ನನ್ನು ಗಡಿಪಾರು ಮಾಡುವುದೇ ಸರಿ ಎಂದು ಯೋಚಿಸಿದರು. ಆತ ಕೂಡಲೇ ಬಂಗಾಲ ತೊರೆದು ಮದ್ರಾಸಿಗೆ ಹೋಗಿ, ಅಲ್ಲಿಂದ ಇಂಗ್ಲೆಂಡ್‍ನ ಹಡಗು ಹಿಡಿಯಬೇಕು ಎಂದು ಸರ್ಕಾರ ಆದೇಶಿಸಿತು. ಅಲ್ಲಿಗೆ ಭಾರತದ ಮೊದಲ ಪತ್ರಿಕೆ ಹುಟ್ಟುವ ಮೊದಲೇ ಸತ್ತುಹೋಯಿತು.

ಬೆಂಗಾಲ್ ಗಜೆಟ್:

ಇದಾಗಿ ಹನ್ನೆರಡು ವರ್ಷಗಳ ಬಳಿಕ ಭಾರತದ ಮೊತ್ತಮೊದಲ ಪತ್ರಿಕೆ ‘ಬೆಂಗಾಲ್ ಗಜೆಟ್’ನ ಉಗಮವಾಯಿತು. 1780ರ ಜನವರಿ 29ರಂದು ಜೇಮ್ಸ್ ಆಗಸ್ಟಸ್ ಹಿಕಿ ಎಂಬ ಇನ್ನೊಬ್ಬ ಯುರೋಪಿಯನ್ ವ್ಯಾಪಾರಿ ‘ಬೆಂಗಾಲ್ ಗಜೆಟ್’ನ ಮೊದಲ ಸಂಚಿಕೆಯನ್ನು ಹೊರಡಿಸಿದ. ಅದಕ್ಕೆ ‘ದಿ ಒರಿಜಿನಲ್ ಕಲ್ಕತ್ತಾ ಜನರಲ್ ಅಡ್ವಟೈಸರ್’ ಎಂಬ ಇನ್ನೊಂದು ಹೆಸರೂ ಇತ್ತು. ಆ ಪತ್ರಿಕೆಗೆ ಹಿಕಿಯೇ ಲೇಖಕ, ವರದಿಗಾರ, ಪ್ರಕಾಶಕ, ಮುದ್ರಕ ಎಲ್ಲವೂ ಆಗಿದ್ದರಿಂದ ಅದಕ್ಕೆ ‘ಹಿಕೀಸ್ ಗಜೆಟ್’ ಎಂಬ ಹೆಸರೂ ಇತ್ತು.

ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕೇಂದ್ರಸ್ಥಾನ ಬಂಗಾಳದ ಕಲ್ಕತ್ತಾವೇ ಆಗಿದ್ದುದರಿಂದ ನಮ್ಮ ಪತ್ರಿಕೋದ್ಯಮದ ಜನ್ಮಸ್ಥಳವೂ ಅದೇ ಆಯಿತು. ‘ಬೆಂಗಾಲ್ ಗಜೆಟ್’ ಇಂಗ್ಲಿಷ್ ಭಾಷೆಯ ವಾರಪತ್ರಿಕೆ ಆಗಿತ್ತು. 12 ಇಂಚು ಉದ್ದ, 8 ಇಂಚು ಅಗಲದ ಈ ಪುಟ್ಟ ಪತ್ರಿಕೆಯಲ್ಲಿ ನಾಲ್ಕು ಪುಟಗಳಿದ್ದವು. ಪುಟಗಳನ್ನು ತಲಾ ಮೂರು ಕಾಲಂಗಳಾಗಿ ವಿಭಾಗಿಸಲಾಗಿತ್ತು. ಕಂಪೆನಿ ಅಧಿಕಾರಿಗಳು, ಇಂಗ್ಲಿಷ್ ಬಲ್ಲ ಕೆಲವು ಭಾರತೀಯರು ಇದರ ಓದುಗರಾಗಿದ್ದರು. ಸರಾಸರಿ 400 ಪ್ರತಿಗಳಷ್ಟು ‘ಗಜೆಟ್’ ಪ್ರಕಟವಾಗುತ್ತಿತ್ತು. ಅದರ ಮುದ್ರಣವೇನೂ ಅಷ್ಟೊಂದು ಸೊಗಸಾಗಿರಲಿಲ್ಲ. ಸುದ್ದಿಗಳಿಗಿಂತ ಜಾಹೀರಾತುಗಳೇ ಹೆಚ್ಚಾಗಿದ್ದವು.

ಯಾರೀತ ಹಿಕಿ?

‘ಈಸ್ಟ್ ಇಂಡಿಯಾ ಕಂಪೆನಿಯ ಮಾಜಿ ಮುದ್ರಕ’ ಎಂದು ಜೇಮ್ಸ್ ಆಗಸ್ಟಸ್ ಹಿಕಿ ತನ್ನನ್ನು ತಾನು ಪರಿಚಯಿಸಿಕೊಂಡಿದ್ದ. ಆತ ಮೂಲತಃ ಐರ್ಲೆಂಡಿನವನು. 1740ರ ಆಸುಪಾಸಿನಲ್ಲಿ ಜನಿಸಿದ. ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಹಿಕಿ 1772ರಲ್ಲಿ ಭಾರತಕ್ಕೆ ಬಂದು ಈಸ್ಟ್ ಇಂಡಿಯಾ ಕಂಪೆನಿ ಸೇರಿಕೊಂಡ. ‘ಶಸ್ತ್ರಚಿಕಿತ್ಸಕ’ನಾಗಿ, ಮುದ್ರಣ ಸಹಾಯಕನಾಗಿ ಆತ ಕಾರ್ಯನಿರ್ವಹಿಸುತ್ತಿದ್ದ. ವ್ಯಾಪಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿ ಸಾಲ ತೀರಿಸಲಾಗದೆ ಜೈಲುಪಾಲಾದ. ಜೈಲಿನಲ್ಲಿದ್ದಾಗಲೇ ಒಂದು ಮುದ್ರಣ ಯಂತ್ರ ಪಡೆದುಕೊಂಡು ಮುದ್ರಣದ ಕೆಲಸ ಆರಂಭಿಸಿದ. 1777ರಲ್ಲಿ ಜೈಲಿನಿಂದ ಹೊರಬಂದು ತನ್ನದೇ ಪ್ರಿಂಟಿಂಗ್ ಪ್ರೆಸ್ ಆರಂಭಿಸಿದ. ಮೂರು ವರ್ಷಗಳ ಬಳಿಕ ಅವನಿಂದಲೇ ಭಾರತದ ಮೊದಲ ಪತ್ರಿಕೆ ಆರಂಭವಾಯಿತು.

ಹಿಕಿ ಒಬ್ಬ ವಿಲಕ್ಷಣ ಪ್ರವೃತ್ತಿಯ ವ್ಯಕ್ತಿ. ಆತನ ‘ಬೆಂಗಾಲ್ ಗಜೆಟ್’ ಆರಂಭದಲ್ಲಿ ಗಂಭೀರವಾಗಿಯೇ ಪ್ರಕಟವಾಗುತ್ತಿತ್ತು. ತನ್ನದು “ಎಲ್ಲ ಪಕ್ಷಗಳಿಗೂ ಮುಕ್ತವಾದ ಆದರೆ ಯಾರಿಂದಲೂ ಪ್ರಭಾವಕ್ಕೊಳಗಾಗದ ಪತ್ರಿಕೆ” ಎಂದು ಪತ್ರಿಕೆಯ ಮೇಲ್ಭಾಗದಲ್ಲೇ ಹಿಕಿ ಪ್ರಕಟಿಸುತ್ತಿದ್ದ. ಆದರೆ ಎಂಟ್ಹತ್ತು ತಿಂಗಳಲ್ಲಿ ‘ಇಂಡಿಯಾ ಗಜೆಟ್’ ಎಂಬ ಇನ್ನೊಂದು ಪತ್ರಿಕೆ ಆರಂಭವಾದಾಗ, ಹಿಕಿಗೆ ಆತಂಕವಾಯಿತು. ತನ್ನ ಓದುಗರು ಎಲ್ಲಿ ಕಡಿಮೆಯಾಗುತ್ತಾರೋ ಎಂಬ ಆತಂಕದಲ್ಲಿ ತನ್ನ ಪತ್ರಿಕೆಯ ಧ್ವನಿಯನ್ನೇ ಬದಲಾಯಿಸಿಕೊಂಡ. ಸುದ್ದಿಗಳಲ್ಲಿ, ಲೇಖನಗಳಲ್ಲಿ ಅಲ್ಲಿಯವರೆಗೆ ಇದ್ದ ಸಮತೋಲನ ಕಳೆದುಹೋಗಿ ವೈಯಕ್ತಿಕ ಪ್ರಹಾರಗಳನ್ನು ಆರಂಭಿಸಿದ.

ಪ್ರಖರ ಟೀಕಾಕಾರ:

ಸ್ವತಃ ಯುರೋಪಿಯನ್ನನಾಗಿದ್ದೂ ಹಿಕಿ ಈಸ್ಟ್ ಇಂಡಿಯಾ ಕಂಪೆನಿಯ ಪ್ರಖರ ಟೀಕಾಕಾರನಾಗಿದ್ದ. ಅಲ್ಲಿನ ಅಧಿಕಾರಿಗಳ ದಬ್ಬಾಳಿಕೆ ಹಾಗೂ ಭ್ರಷ್ಟಾಚಾರಗಳನ್ನು ತೀಕ್ಷ್ಣವಾಗಿ ಖಂಡಿಸಿ ಲೇಖನಗಳನ್ನು ಪ್ರಕಟಿಸುತ್ತಿದ್ದ. ‘ಬೆಂಗಾಲ್ ಗಜೆಟ್’ ಬ್ರಿಟಿಷ್ ಅಧಿಕಾರಿಗಳ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿತ್ತು. ಆಗ ಭಾರತದ ಗವರ್ನರ್ ಜನರಲ್ ಆಗಿದ್ದ ವಾರನ್ ಹೇಸ್ಟಿಂಗ್ಸ್, ಸುಪ್ರೀಂಕೋರ್ಟಿನ ಮುಖ್ಯನಾಯಾಧೀಶರಾಗಿದ್ದ ಸರ್ ಎಲಿಜಾ ಇಂಪೆಯವರನ್ನೂ ಬಿಡದೆ ಕಾಡಿದ ಹಿಕಿ.

ಆದರೆ ಟೀಕೆಯ ಭರದಲ್ಲಿ ಹಿಕಿ ವೈಯಕ್ತಿಕ ದಾಳಿಯಲ್ಲಿ ತೊಡಗಿದ. ತನಗಾಗದಿದ್ದವರ ಖಾಸಗಿ ಬದುಕಿನ ಕುರಿತು ವ್ಯಂಗ್ಯವಾಡಿದ. ಹೇಸ್ಟಿಂಗ್ಸ್‍ನ ಪತ್ನಿಯ ಕುರಿತೂ ದೋಷಾರೋಪಣೆ ಮಾಡಿದ. ಇದರಿಂದಾಗಿ ಹಿಕಿ ಪದೇಪದೇ ಮಾನನಷ್ಟ ಮೊಕದ್ದಮೆಗಳನ್ನು ಎದುರಿಸಬೇಕಾಯಿತು. ಕೋರ್ಟು ಕಚೇರಿ ಅಲೆದಾಡಬೇಕಾಯಿತು. ಸಾವಿರಾರು ರುಪಾಯಿ ದಂಡ ಹಾಕಿಸಿಕೊಳ್ಳಬೇಕಾಯಿತು. ಬೆಂಗಾಲ್ ಗಜೆಟ್‍ನ ಅಂಚೆ ಸೌಲಭ್ಯ ರದ್ದಾಯಿತು. ಕೊನೆಗೊಂದು ದಿನ ಹಿಕಿಯ ಮುದ್ರಣಾಲಯವನ್ನೇ ಸರ್ಕಾರ ವಶಪಡಿಸಿಕೊಂಡು ಬೀಗ ಜಡಿಯಿತು. 1782ರ ಮಾರ್ಚ್ 23ರಂದು ಗಜೆಟ್‍ನ ಕೊನೆಯ ಸಂಚಿಕೆ ಪ್ರಕಟವಾಯಿತು.

ಮರೆತುಹೋದ ಮಹಾನುಭಾವ:

ಹಿಕಿಯ ಬಗ್ಗೆ ಇತಿಹಾಸದಲ್ಲಿ ಅಂತಹ ಒಳ್ಳೆಯ ಅಭಿಪ್ರಾಯವೇನೂ ಇಲ್ಲ. ಆದರೆ ಆತನಿಂದಲೇ ಭಾರತೀಯ ಪತ್ರಿಕಾಲೋಕ ಹುಟ್ಟಿಕೊಂಡಿತು ಎಂಬುದರಲ್ಲಿ ಎರಡು ಮಾತಿಲ್ಲ. ಆತ ಒಳ್ಳೆಯ ಉದ್ದೇಶದಿಂದಲೇ ಪತ್ರಿಕೆ ಆರಂಭಿಸಿದ, ಬ್ರಿಟಿಷರ ಭ್ರಷ್ಟಾಚಾರಗಳನ್ನು ಕಟುವಾಗಿ ಟೀಕಿಸಿದ. ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಕೊನೆಯವರೆಗೂ ಹೋರಾಡಿದ. ಆದರೆ ಒಂದು ಹಂತದಲ್ಲಿ ಆತ ಬೆಳೆಸಿಕೊಂಡ ಕೀಳು ಅಭಿರುಚಿ ಹಾಗೂ ಕಂಪೆನಿಯ ಪೂರ್ವಗ್ರಹದಿಂದ ಆತನಿಗೆ ಹೆಚ್ಚುಸಮಯ ಪತ್ರಿಕೆಯನ್ನು ನಡೆಸಲಾಗಲಿಲ್ಲ. ಆತನನ್ನು ‘ಮರೆತುಹೋದ ಮಹಾನುಭಾವ’ ‘ಭಾರತೀಯ ಪತ್ರಿಕೋದ್ಯಮದ ಪಿತಾಮಹ’ ಅಂತಲೂ ಇತಿಹಾಸಕಾರರು ದಾಖಲಿಸಿದ್ದುಂಟು.

ಒಟ್ಟಿನಲ್ಲಿ, ಬೆಂಗಾಲ್ ಗಜೆಟ್‍ನ ಹುಟ್ಟಿನ ನೆನಪಲ್ಲಿ ಜನವರಿ 29 ‘ಭಾರತೀಯ ಪತ್ರಿಕಾ ದಿನ’ ಎಂದು ಪ್ರಸಿದ್ಧಿಪಡೆದಿದೆ. ನಮ್ಮ ಪತ್ರಿಕಾಲೋಕದ ಸಿಂಹಾವಲೋಕನಕ್ಕೆ ಇದು ಸುದಿನ.

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಮಾರ್ಚ್ 31, 2020

ಕಾಡಿನ ನಡುವೆ ಕಲಿಕೆಯ ಕನಸು: ಮುಂಡೂರುಪಳಿಕೆ ಶಾಲೆ ಎಂಬ ಊರ ಸಮಸ್ತರ ಕೂಸು

ಸುಮಾರು 11 ವರ್ಷಗಳ ಹಿಂದೆ, ಅಂದರೆ 2009ರಲ್ಲಿ, ಅಪ್ಪನ ನೆನಪುಗಳನ್ನು ಕೆದಕಿ ನಿರೂಪಿಸಿದ ಬರೆಹ  ಇದು. ನಮ್ಮ ಮುಂಡೂರುಪಳಿಕೆ ಶಾಲೆ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದಾಗ ಬೆಳ್ತಂಗಡಿಯ 'ಸುದ್ದಿ ಬಿಡುಗಡೆ'ಗಾಗಿ ಬರೆದದ್ದು. ಆಗ ಅದು ಪ್ರಕಟವಾಗಲಿಲ್ಲ. ಯಾಕೆ ಎಂದು ನನಗೆ ನೆನಪಿಲ್ಲ. ಈಗ ಯಾಕೋ ಪ್ರಕಟಿಸಬೇಕೆನಿಸಿತು.


ಗೊಂಡಾರಣ್ಯ. ಮೈಲುದೂರಕ್ಕೊಂದು ಮನೆ. ಜನರ ಮುಖ ಕಾಣಸಿಗುವುದೇ ಅಪರೂಪ.  ರಸ್ತೆ, ವಾಹನಗಳಂತೂ ಕನಸಿಗೂ ಮೀರಿದ ವಿಷಯಗಳು. ಇಂತಿಪ್ಪ ಮುಂಡೂರುಪಳಿಕೆಯೆಂಬೋ ಕಾಡೂರಿನಲ್ಲಿ ಒಂದು ಶಾಲೆ ಬೇಕೆಂಬ ಬಯಕೆ ನಮ್ಮಲ್ಲಿ ಯಾವ ಕ್ಷಣ ಮೊಳಕೆಯೊಡೆಯಿತೋ ಗೊತ್ತಿಲ್ಲ. ಆದರೆ ನಮ್ಮ ಮಕ್ಕಳಾದರೂ ಒಳ್ಳೆ ವಿದ್ಯಾವಂತರಾಗಿ ಈ ಊರಿಗೆ ಅಂಟಿರುವ ಪ್ರಗತಿಯ ತೊಡಕುಗಳನ್ನು, ಇಲ್ಲಿನ ಬಡತನವನ್ನು ನಿವಾರಿಸುವಂತಾಗಬೇಕು ಎಂಬುದು ನಮ್ಮೆಲ್ಲರ ಮಹದಂಬಲವಾಗಿದ್ದಂತೂ ನೂರಕ್ಕೆ ನೂರು ನಿಜ.

ನಾನು 1975ರ ಜೂನಿನಲ್ಲಿ ಮುಂಡೂರುಪಳಿಕೆಗಿಂತ ಇನ್ನೂ ಎರಡು ಮೈಲು ಆಚೆಗಿರುವ ಸಿಬಂತಿಯಲ್ಲಿ ಬಂದು ನೆಲೆಯೂರಿದ್ದೆ. ನಾನಿದ್ದ ಗುಡಿಸಲು ಬಿಟ್ಟರೆ ಅಲ್ಲೆಲ್ಲೋ ದೂರದ ಸಂಕುವೈಲು, ಅದರಾಚೆಯ ಬಾಳ್ತಿಮಾರು, ಕಕ್ಕುದೋಳಿಗಳಲ್ಲಿ ಎರಡು ಮೂರು ಕುಟುಂಬಗಳು. ಮೈಲುಗಳಷ್ಟು ದೂರ ದಟ್ಟ ಕಾಡಿನಲ್ಲಿ ನಡೆಯಲು ಸಾಧ್ಯವಾದರೆ ನೇತ್ರಾವತಿ ದಂಡೆಯಲ್ಲಿರುವ ಬೀಬಿಮಜಲು, ಸುದೆಪೊರ್ದು, ಚೆಂಬುಕೇರಿ, ಮೈಪಾಳ. ಇನ್ನೊಂದು ದಿಕ್ಕಿನಲ್ಲಿ ಹೋದರೆ  ಮಿತ್ತಡ್ಕ, ಪೊನ್ನಿತ್ತಿಮಾರು, ಕುರ್ಲೆ, ತೆಂಕುಬೈಲು, ಬದಿಜಾಲು. ನೀವು ನಂಬಲೇಬೇಕು- ಇಷ್ಟು ವಿಸ್ತಾರವಾದ ವ್ಯಾಪ್ತಿಯಲ್ಲಿ ಹುಟ್ಟಿದ ಯಾವುದೇ ಮಗುವೂ ಶಿಕ್ಷಣದಿಂದ ವಂಚಿತವಾಗಿಯೇ ಉಳಿಯಬೇಕಿತ್ತು. ಶಾಲೆ ಬೇಕೆಂದರೆ ಎಂಟೋ ಹತ್ತೋ ಕಿಲೋಮೀಟರ್ ನಡೆಯಬೇಕು. ಐದು ವರ್ಷದ ಒಂದು ಮಗು ಅಷ್ಟು ದೂರ ನಡೆದುಹೋಗಿ ಒಂದನೇ ಕ್ಲಾಸಾದರೂ ಮುಗಿಸುವುದುಂಟೇ?

ಮೊದಲೇ ಹೇಳಿದಂತೆ ನಮ್ಮದು ಅಂತಹ ಜನದಟ್ಟಣೆಯ ಊರಂತೂ ಆಗಿರಲಿಲ್ಲ. ಹಾಗೆಂದು ಇರುವ ಮಕ್ಕಳಿಗಾದರೂ ಶಿಕ್ಷಣದ ಬೆಳಕು ಕಾಣಿಸಲೇಬೇಕಿತ್ತು. ನಾನು ಪ್ರಾಥಮಿಕ ಶಿಕ್ಷಣವನ್ನೇ ಪೂರ್ತಿಯಾಗಿ ಮುಗಿಸಿರಲಿಲ್ಲವಾದರೂ ಜೀವನಾನುಭವದ ಪಾಠ ನನಗಿತ್ತು. ಒಂದು ಶಾಲೆ ಕೇವಲ ಅಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕಷ್ಟೇ ಸೀಮಿತವಲ್ಲ, ಅದಕ್ಕೆ ಇಡೀ ಊರಿನ ಚಿತ್ರಣ ಬದಲಾಯಿಸುವ ಸಾಮರ್ಥ್ಯವಿದೆ ಎಂಬುದು ನನಗೆ ತಿಳಿದಿತ್ತು. ಆ ಪ್ರದೇಶದ ಕೆಲವು ಹಿರಿಕಿರಿಯ ತಲೆಗಳೂ ನನ್ನ ಯೋಚನೆಯನ್ನು ಬೆಂಬಲಿಸಿದವು. ಹಾಗೆ ಹುಟ್ಟಿಕೊಂಡಿತು ಒಂದು ಶಾಲೆಯ ಕನಸು.

ಆದರೆ ಸ್ವಂತ ಹಣ ಹಾಕಿ ಒಂದು ಖಾಸಗಿ ಶಾಲೆ ಆರಂಭಿಸುವ ಸಾಮರ್ಥ್ಯದವರು ನಾವ್ಯಾರೂ ಆಗಿರಲಿಲ್ಲ. ಮೂರು ಹೊತ್ತು ಗಂಜಿ ಊಟಕ್ಕೆ ಪರದಾಡುವವರೇ ಎಲ್ಲರೂ. ಹೆಚ್ಚಿನವರೂ ಕೂಲಿನಾಲಿ ಮಾಡಿ ಬದುಕುವವರು. ನಮಗೆ ಒಂದು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯೇ ಬೇಕಾಗಿತ್ತು.

ಅವು 1980ರ ದಶಕದ ಆರಂಭಿಕ ವರ್ಷಗಳು. ಕೊಕ್ಕಡ ಪಟ್ರಮೆ ಗ್ರಾಮಗಳಿಗೆ ಮಂಗನ ಕಾಯಿಲೆ (KFD)ಯ ಬರಸಿಡಿಲು ಬಡಿದಿತ್ತು. ಸಾವಿನ ಸಂಖ್ಯೆ ದಿನೇದಿನೇ ಬೆಳೆಯುತ್ತಲೇ ಇತ್ತು. ಊರಿನ ಅಭಿವೃದ್ಧಿಯ ಕನಸು ಹೊತ್ತಿದ್ದ ನಾವು ಅದಾಗಲೇ ಅಡ್ಡೈ-ಮುಂಡೂರುಪಳಿಕೆ-ಮೈಪಾಳ ರಸ್ತೆ ನಿರ್ಮಿಸಿಯಾಗಿತ್ತು. ವಿಪರ್ಯಾಸವೆಂದರೆ ಅದೇ ಹೊಸ ರಸ್ತೆಯಲ್ಲಿ ಬಂದ ಮೊದಲ ವಾಹನ ಮಂಗನಕಾಯಿಲೆಗೆ ಬಲಿಯಾದ ಇಬ್ಬರ ಶವವನ್ನು ಹೊತ್ತು ತಂದುದಾಗಿತ್ತು... ಇದೇ ಕೊನೆ, ಇನ್ನು ಈ ಊರಿನಲ್ಲಿ ಈ ರೀತಿ ಮೃತ್ಯುವಿನ ಪ್ರವೇಶವಾಗಬಾರದು ಎಂದು ನಿರ್ಧರಿಸಿದ ನಾವು ಊರಿನ ಹತ್ತು ಸಮಸ್ತರು ಒಂದಾಗಿ ಹೋಗಿ ಕೊಕ್ಕಡ ಮತ್ತು ಸೌತೆಡ್ಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಮನಸಾರೆ ಪ್ರಾರ್ಥಿಸಿದೆವು. ಹೌದು, ಅದೇ ದಿನ ನಾವು ದೇವರ ಎದುರು ನಿಂತು ನಮ್ಮೂರಿಗೊಂದು ಶಾಲೆ ತರುವ ಸಂಕಲ್ಪವನ್ನೂ ಮಾಡಿದೆವು.

ನಾನೂ ಮುಂಡೂರು ಲಕ್ಷ್ಮೀನಾರಾಯಣ ಶಬರಾಯರೂ ಒಂದೆಡೆ ಕುಳಿತು ಶಾಲೆ ಆರಂಭವಾದರೆ ಎಷ್ಟು ಮಕ್ಕಳು ಒಂದನೇ ಕ್ಲಾಸಿಗೆ ಸೇರಬಹುದೆಂದು ಒಂದು ಪಟ್ಟಿ ತಯಾರಿಸಿದೆವು. ಮೂವತ್ತು ಮಕ್ಕಳ ಪಟ್ಟಿ ಸಿದ್ಧವಾಯಿತು. ನಿಜ ಹೇಳಬೇಕೆಂದರೆ ಆ ಊರಿನಲ್ಲಿ ಏಕಾಏಕಿ ಆ ಕಾಲದಲ್ಲಿ 30 ಮಕ್ಕಳನ್ನು ಶಾಲೆಗೆ ಕರೆತರುವುದು ಸಾಧ್ಯವೇ ಇರಲಿಲ್ಲ. ಹಾಗೆಂದು ಒಂದು ಉತ್ಸಾಹದಾಯಕ ಸಂಖ್ಯೆಯನ್ನು ಸರ್ಕಾರಕ್ಕೆ ನಾವು ತೋರಿಸಲೇಬೇಕಿತ್ತು. ಆ ಪಟ್ಟಿ ಹಿಡಿದುಕೊಂಡು ನಾನೂ ಶಬರಾಯರೂ ಬೆಳ್ತಂಗಡಿಯಲ್ಲಿದ್ದ ಎಇಒ ಕಚೇರಿಗೆ ಹೋದೆವು. ನಮ್ಮ ಬೇಡಿಕೆ ಆಲಿಸಿದ ಆಗಿನ ಎಇಒ ರಾಮಚಂದ್ರರಾಯರು ನಮಗೇ ಆಶ್ಚರ್ಯವಾಗುವ ಹಾಗೆ, ಇಷ್ಟು ದಿನ ಯಾಕೆ ಬರಲಿಲ್ಲ? ಈಗ ಮೈಲಿಗೊಂದು ಶಾಲೆ ಎಂಬ ಸರ್ಕಾರದ ಕಾನೂನೇ ಇದೆಯಲ್ಲ? ಎಂದು ಕೇಳಿ ನಮ್ಮ ಉತ್ಸಾಹವನ್ನು ಇಮ್ಮಡಿಸಿದರು. ನಾಡಿದ್ದು ಮಂಗಳೂರಲ್ಲಿ ಡಿಡಿಪಿಐ ಅವರ ಮೀಟಿಂಗಿದೆ. ಎಲ್ಲ ವಿವರಗಳನ್ನು ನಾಳೆ ಸಂಜೆಯೊಳಗೆ ತಂದುಕೊಡಿ. ತಡ ಮಾಡಿದರೆ ಮುಂದಿನ ವರ್ಷದವರೆಗೆ ಕಾಯಬೇಕಾಗುತ್ತೆ, ಎಂದು ಪ್ರತ್ಯೇಕವಾಗಿ ನೆನಪಿಸಿದರು.
ಅಪ್ಪ
ಸರಿ, ತಿರುಗಿ ಬಂದವರೇ ನಾಳೆ ಮಾಡಬೇಕಾದ ಕೆಲಸಗಳ ತಯಾರಿಗೆ ತೊಡಗಿದೆವು. ಎಇಒ ಗ್ರಾಮನಕ್ಷೆ ಕೇಳಿದ್ದರು. ಅದು ಬೋಳೋಡಿ ವೆಂಕಟ್ರಮಣ ಭಟ್ರ ಕೈಲಿತ್ತು. ರಾತೋರಾತ್ರಿ ಅಲ್ಲಿಂದ ಅದನ್ನು ತಂದಾಯಿತು. ಮರುದಿನವೇ ನಮ್ಮ ಅರ್ಜಿ ಮತ್ತಿತರ ವಿವರಗಳನ್ನು ಎಇಒ ಅವರಿಗೆ ತಲುಪಿಸಿಯೂ ಆಯಿತು. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಸೌತೆಡ್ಕದಲ್ಲಿ ನಾವೆಲ್ಲ ಸೇರಿ ಪ್ರಾರ್ಥನೆ ಸಲ್ಲಿಸಿದ 14ನೇ ದಿನಕ್ಕೆ ಮುಂಡೂರುಪಳಿಕೆಗೆ ಶಾಲೆ ಮಂಜೂರಾಯಿತು. ಬಹುಶಃ ಈಗಿನ ಕಾಲದಲ್ಲೂ ಸರ್ಕಾರಿ ಸೌಲಭ್ಯವೊಂದು ಇಷ್ಟೊಂದು ಶೀಘ್ರವಾಗಿ ಮಂಜೂರಾಗದೇನೋ?

ಅಲ್ಲಿಗೆ ದೊಡ್ಡದೊಂದು ಕೆಲಸ ಮುಗಿಯಿತು. ಆಗಿನ ಕೊಕ್ಕಡದ ಗ್ರಾಮಲೆಕ್ಕಿಗರಾಗಿದ್ದ ಭಂಡಾರಿ ಎಂಬವರೊಬ್ಬರು ಶಾಲೆಗೆಂದು ಒಂದೂವರೆ ಎಕ್ರೆಯಷ್ಟು ಜಾಗ ಅಳೆದು ಕೊಟ್ಟರು. ಆದರೆ ಕೂಡಲೇ ತರಗತಿ ಆರಂಭಿಸಬೇಕಿದ್ದರಿಂದ ನಮಗೆ ಮತ್ತೆ ಸಂಕಷ್ಟಕ್ಕಿಟ್ಟುಕೊಂಡಿತು. ಅಷ್ಟು ಬೇಗ ಕಟ್ಟಡ ಎಲ್ಲಿಂದ ಬರಬೇಕು? ಆ ಹೊತ್ತಿಗೆ ಮತ್ತೆ ಆಪದ್ಬಾಂಧವರಾದವರು ಮುಂಡೂರು ಶಬರಾಯರು. ತಮ್ಮ ಮನೆಯ ಒತ್ತಿಗಿದ್ದ ಕೊಟ್ಟಿಗೆಯಲ್ಲೇ ತತ್ಕಾಲಕ್ಕೆ ಶಾಲೆ ಆರಂಭಿಸಬಹುದೆಂದರು. ಜೂನ್ 27, 1984ರ ಶುಭಮುಹೂರ್ತದಲ್ಲಿ ಎಲಿಕಳ ಸೂರ್ಯನಾರಾಯಣ ಶರ್ಮರ ಅಧ್ಯಕ್ಷತೆಯಲ್ಲಿ ದ.ಕ.ಜಿ.ಪ. ಕಿರಿಯ ಪ್ರಾಥಮಿಕ ಶಾಲೆ ಉದ್ಘಾಟನೆಯಾಯಿತು. ಹಾಗೂಹೀಗೂ 13 ವಿದ್ಯಾರ್ಥಿಗಳು ಸೇರ್ಪಡೆಗೊಂಡರು. ಶಬರಾಯರನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆವು. ಆಗ ಜೋಡುಮಾರ್ಗ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ದಿ. ಲಿಗೋರಿ ಮಿನೆಜಸ್ ಡೆಪ್ಯುಟೇಶನ್ ಮೇಲೆ ಮೊದಲ ಅಧ್ಯಾಪಕರಾಗಿ ನಮ್ಮಲ್ಲಿಗೆ ಬಂದರು. ಆ ನಂತರ ಸ್ವಲ್ಪ ಸಮಯ ಅಶೋಕ ಮಾಸ್ಟ್ರು ಎಂಬವರು ಇದ್ದರು; ಅವರು ಪರವೂರಿನವರಾದ್ದರಿಂದ ನಮ್ಮ ಜೋಪಡಿಯಲ್ಲೇ ಉಳಿದುಕೊಂಡಿದ್ದರು.

ಅಲ್ಲಿಗೆ ನಮ್ಮ ಬಹುದಿನಗಳ ಕನಸೊಂದು ನನಸಾಯಿತಾದರೂ ಜವಾಬ್ದಾರಿ ಮುಗಿದಿರಲಿಲ್ಲ. ಶಾಲೆಗೊಂದು ಸ್ವಂತ ಕಟ್ಟಡ ಬೇಕಿತ್ತು. ಅದರ ಕೆಲಸವೂ ಆರಂಭವಾಯಿತು. ನಿಜ ಹೇಳಬೇಕೆಂದರೆ, ನಮ್ಮ ಶಾಲಾ ಕಟ್ಟಡಕ್ಕೆ ಯಾವ ಎಂಜಿನಿಯರೂ ಇರಲಿಲ್ಲ, ಯಾವ ಬಜೆಟ್ಟೂ ಇರಲಿಲ್ಲ. ಊರಿನ ಹಿರಿತಲೆಗಳೇ ಎಂಜಿನಿಯರುಗಳು, ನಮ್ಮ ಶ್ರಮದಾನವೇ ಬಜೆಟ್ಟು! ಅದೊಂದು ಏಕಕೊಠಡಿಯ ಮುಳಿಹುಲ್ಲು ಛಾವಣಿಯ ಮಣ್ಣಿನ ಗೋಡೆಯ ಸಣ್ಣ ಶಾಲಾ ಕಟ್ಟಡ. ಬದಿಜಾಲು ರಾಮಣ್ಣ ಗೌಡರು ಗೋಡೆ ಇಟ್ಟರು; ಕುರ್ಲೆಯ ಕಿಟ್ಟಣ್ಣ ಅದಕ್ಕೆ ಪೊಳಿಮ್ಮಣೆ ಹಾಕಿದರು; ಮುಂಡೂರಿನ ಶಬರಾಯ ಸಹೋದರರು ಎರಡು ಕಿಟಕಿ ಕೊಟ್ಟರು; ತೆಂಕುಬೈಲು ಶ್ಯಾಮ ಭಟ್ರು ಬಾಗಿಲು ಮಾಡಿಸಿಕೊಟ್ಟರು; ಸಿಬಂತಿಯ ಚಣ್ಣ ಗೌಡರು, ಸುದೆಪೊರ್ದು ಈಶ್ವರಗೌಡರು, ಕೊರಗಪ್ಪ ಗೌಡರು, ಚೆಂಬುಕೇರಿಯ ಬೋರ ಗೌಡರು ಹಗಲಿರುಳು ದುಡಿದರು. ಊರಿನ ಮಂದಿಯೆಲ್ಲ ಎಷ್ಟು ಉತ್ಸುಕರಾಗಿದ್ದರೆಂದರೆ ಪ್ರತೀ ಮನೆಯಿಂದ ಕನಿಷ್ಟ ಒಬ್ಬರಾದರೂ ಖುದ್ದು ಬಂದು ಶ್ರಮದಾನದಲ್ಲಿ ಪಾಲ್ಗೊಂಡರು. ಮೂರು ಪ್ರತ್ಯೇಕ ತಂಡಗಳಲ್ಲಿ ಜನ ದುಡಿದರು. ಒಟ್ಟು ೪೦ ಆಳಿನ ಕೆಲಸದಲ್ಲಿ ನಮ್ಮ ಶಾಲಾ ಕಟ್ಟಡ ಎದ್ದು ನಿಂತಿತು.
ನಮ್ಮೂರ ಮುಂಡೂರುಪಳಿಕೆ ಶಾಲೆ
ಇದೆಲ್ಲ ನಡೆದು ಈಗ 25 ವರ್ಷಗಳೇ ಉರುಳಿಹೋಗಿವೆ [ಈಗ 36 ವರ್ಷ ಆಯಿತು]. ನನಗೆ 78 ವರ್ಷ ದಾಟಿದೆ [ಈಗ 90]. ಅರೆ, ಇಷ್ಟು ಬೇಗ ನಮ್ಮ ಶಾಲೆಗೆ ರಜತ ಸಂಭ್ರಮ ಬಂತೇ ಎಂದು ಆಶ್ಚರ್ಯವಾಗುತ್ತದೆ. ಶಾಲೆಯಲ್ಲಿ, ಊರಿನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಶಾಲೆಗೆ ಸಿಮೆಂಟಿನ ಗೋಡೆ, ಹೆಂಚಿನ ಮಾಡು, ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಬಂದಿದೆ. ನೂರಾರು ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಹತ್ತಾರು ಅಧ್ಯಾಪಕರು ಬಂದು ಹೋಗಿದ್ದಾರೆ. ಊರಿನಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಜನ ಮೊದಲಿನಷ್ಟು ಬಡವರಾಗಿಲ್ಲ. ಅವರು ಬೇರೆಬೇರೆ ವಿಚಾರದಲ್ಲಿ ಜಾಗೃತಿ ಹೊಂದಿದ್ದಾರೆ. ಆದಾಗ್ಯೂ ಜನರ ಹತ್ತು ಹಲವು ಬೇಡಿಕೆಗಳು ಹಾಗೆಯೇ ಇವೆ. ಈಗ ಶಾಲೆಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ [ಈಗ 36] ಮುಖ್ಯೋಪಾಧ್ಯಾಯರಾಗಿರುವ ಜೋಸೆಫ್ ಪಿರೇರಾ ಅವರು ಈ ಊರಿಗೆ ಏನಾದರೂ ಶಾಶ್ವತವಾದ ಕೊಡುಗೆ ನೀಡಬೇಕೆಂಬ ವಿಶಿಷ್ಟ ಯೋಜನೆ ಹಾಕಿಕೊಂಡಿದ್ದಾರೆ. ಊರಿನ ಮಂದಿಯನ್ನೆಲ್ಲ ಒಟ್ಟು ಸೇರಿಸಿ ಇಲ್ಲಿನ ಸಮಸ್ಯೆ ಸವಾಲುಗಳಿಗೆ ಅವರ ಮೂಲಕವೇ ಪರಿಹಾರ ಹುಡುಕಿಸುವ ಹೊಸ ಪ್ರಯತ್ನಕ್ಕೆ ಧುಮುಕಿದ್ದಾರೆ. ಜನರೆಲ್ಲ ಅವರೊಂದಿಗೆ ಕೈಗೂಡಿಸಿ ಒಗ್ಗಟ್ಟಾಗಿ ದುಡಿದರೆ ಇದೊಂದು ಮಾದರಿ ಊರಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಅಲ್ಲಿಗೆ ಕಾಡಿನ ನಡುವೆ ಹುಟ್ಟಿದ ಈ ಕಲಿಕೆಯ ಕನಸಿಗೆ ನಿಜವಾದ ಅರ್ಥ ಬರುತ್ತದೆ.
- ಸಿಬಂತಿ ವೆಂಕಟ್ರಮಣ ಭಟ್