ಸೋಮವಾರ, ಆಗಸ್ಟ್ 7, 2023

ಕಂಪ್ಯೂಟರಿಗೆ ಕನ್ನಡ ಕಲಿಸಿದ ಕೆ.ಪಿ.ರಾವ್

06 ಆಗಸ್ಟ್‌ 2023ರ ʼಉದಯವಾಣಿʼ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ಲೇಖನ

ಕರಾವಳಿ ತೀರದ ಕಿನ್ನಿಕಂಬಳದ ಪುಟ್ಟದೊಂದು ಮನೆ. ಅಲ್ಲಿನ ಹೆಣ್ಣುಮಗುವೊಂದಕ್ಕೆ ಅಕ್ಷರಾಭ್ಯಾಸ ಮಾಡಿಸುವುದಕ್ಕೆ ಪುರೋಹಿತರು ಬಂದಿದ್ದರು. ರಂಗೋಲಿ ಪುಡಿಯಲ್ಲಿ ʻಗʼ ಮತ್ತು ʻಶ್ರೀʼ ಎಂಬೆರಡು ಅಕ್ಷರಗಳನ್ನು ಒಂದೆಡೆ ಬರೆದಿದ್ದರು. ಇದನ್ನು ನೋಡುತ್ತ ಕುಳಿತಿದ್ದ ಹೆಣ್ಮಗುವಿನ ಎರಡು ವರ್ಷದ ತಮ್ಮ ಅದೇ ರಂಗೋಲಿ ಪುಡಿಯನ್ನೆತ್ತಿಕೊಂಡು ಸಂಜೆ ವೇಳೆಗೆ ಮನೆ ತುಂಬಾ ʻಗʼ ಮತ್ತು ʻಶ್ರೀʼ ಬರೆದುಬಿಟ್ಟಿದ್ದ. ಎರಡು ವರ್ಷದ ಕಂದಮ್ಮನ ಒಳಗೆ ಅದ್ಯಾವ ಶಕ್ತಿಯಿತ್ತೋ, ಮುಂದೆ ಅದೇ ಕಂದಮ್ಮ ಕಂಪ್ಯೂಟರುಗಳಿಗೆ ಕನ್ನಡ ಕಲಿಸಿಬಿಟ್ಟಿತು! ಹೌದು, ಆ ಮಗು ಬೇರಾರೂ ಅಲ್ಲ; ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸವನ್ನು ರೂಪಿಸಿದ ಪ್ರೊ. ಕಿನ್ನಿಕಂಬಳ ಪದ್ಮನಾಭ ರಾವ್, ಅಂದರೆ ಕೆ. ಪಿ. ರಾವ್.

ಹಾಗೆ ನೋಡಿದರೆ, ಕೆ. ಪಿ. ರಾವ್ ಅವರನ್ನು ಕಂಪ್ಯೂಟರಿಗೆ ಕನ್ನಡ ಕಲಿಸಿದವರು ಎಂದರೆ ಸಾಲದು; ಭಾರತೀಯ ಭಾಷೆಗಳನ್ನು ಕಂಪ್ಯೂಟರಿಗೆ ಕಲಿಸಿದವರು ಎನ್ನಬೇಕು. ಯಾವುದೇ ಭಾರತೀಯ ಭಾಷೆ ಕಂಪ್ಯೂಟರಿನಲ್ಲಿ ಇಲ್ಲದ ಕಾಲದಲ್ಲಿ ಅವುಗಳನ್ನು ಕಂಪ್ಯೂಟರಿನಲ್ಲಿ ಮೂಡಿಸುವುದಕ್ಕೆ ಹಗಲಿರುಳು ಶ್ರಮಿಸಿದವರು ಕೆ. ಪಿ. ರಾವ್. ಬಡುಗ, ತುಳು, ಬ್ರಾಹ್ಮಿ, ಖರೋಷ್ಠಿ, ಕದಂಬ ಮುಂತಾದ ಅನೇಕ ಲಿಪಿಗಳನ್ನು ಕಂಪ್ಯೂಟರಿನಲ್ಲಿ ಮೂಡಿಸುವುದಕ್ಕೆ ಅವರು ಪಟ್ಟ ಶ್ರಮ ಅದ್ವಿತೀಯ. ʼಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹʼ ಎಂಬ ಅಭಿದಾನ ಅವರಿಗೆ ಚೆನ್ನಾಗಿಯೇ ಒಪ್ಪುತ್ತದೆ.

ಗುರುವಿನ ಕೃಪೆ ಅಂದರು...

ಬಾಲ್ಯದ ಪರಿಸರ ಹಾಗೂ ಶ್ರೇಷ್ಠ ಅಧ್ಯಾಪಕರೇ ತಮ್ಮ ಎಲ್ಲ ಅನ್ವೇಷಣೆಗಳ ಪ್ರೇರಣೆ ಎಂಬುದನ್ನು ರಾಯರು ಮುಕ್ತ ಮನಸ್ಸಿನಿಂದ ಹೇಳುತ್ತಾರೆ. ಅದರಲ್ಲೂ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಾವು ಬಿಎಸ್ಸಿ ಓದುತ್ತಿದ್ದಾಗ ಕನ್ನಡ ಪ್ರಾಧ್ಯಾಪಕರಾಗಿದ್ದ ಸೇಡಿಯಾಪು ಕೃಷ್ಣ ಭಟ್ಟರು ತಮಗೆ ಪ್ರಾತಃಸ್ಮರಣೀಯರು ಎನ್ನುತ್ತಾರೆ. “ಸೇಡಿಯಾಪು ನನ್ನ ಮರೆಯಲಾಗದ ಗುರು. ಪಾಣಿನಿಯನ್ನು ಅರ್ಥ ಮಾಡಿಸಿದವರು ಅವರು. ಲೋಕದ ಎಲ್ಲ ಭಾಷೆಗಳ ಮೂಲ ತತ್ವ ಏನು ಎಂಬುದನ್ನು ಮನಸ್ಸಿನಲ್ಲಿ ನಾಟಿಸಿಬಿಟ್ಟಿದ್ದರು. ಅವರಿಂದಾಗಿ ಕನ್ನಡದ ಜತೆಜತೆಗೆ ಜಗತ್ತಿನ ಎಲ್ಲ ಭಾಷೆಗಳ ಮೇಲೆ ನನಗೆ ಮಮತೆ ಹುಟ್ಟಿಬಿಟ್ಟಿತು,” ಎಂದು ನೆನಪಿಸಿಕೊಳ್ಳುತ್ತಾರೆ ರಾಯರು.

ಅವರಿಗೆ ಮೊದಲಿನಿಂದಲೂ ಗಣಿತವೆಂದರೆ ಪ್ರೀತಿ. ಜಗತ್ತಿನ ಎಲ್ಲ ಜ್ಞಾನಶಿಸ್ತು ಹಾಗೂ ಭಾಷೆಗಳ ಹಿಂದೆ ಇರುವ ಮೂಲತತ್ವ ಗಣಿತದ್ದು ಎಂಬುದನ್ನು ಅವರು ವಿದ್ಯಾರ್ಥಿದೆಸೆಯಲ್ಲೇ ಅರ್ಥಮಾಡಿಕೊಂಡಿದ್ದರು. ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳನ್ನು ಕಂಪ್ಯೂಟರಿನಲ್ಲಿ ಮೂಡಿಸುವುದಕ್ಕೆ ಅವರಿಗೆ ಸಾಧ್ಯವಾದದ್ದು ಇದೇ ಕಾರಣದಿಂದ. ಕಂಪ್ಯೂಟರ್ ಅಂತೂ ಗಣಿತವನ್ನೇ ಆಧಾರವಾಗಿಸಿಕೊಂಡಿರುವ ʻಗಣಕಯಂತ್ರʼ ಅಲ್ಲವೇ?

ವೈವಿಧ್ಯಮಯ ವೃತ್ತಿಬದುಕು:

ವೈವಿಧ್ಯಮಯ ವೃತ್ತಿಬದುಕು ಕೆ. ಪಿ. ರಾವ್ ಅವರದ್ದು. ಅವರ ವೃತ್ತಿಜೀವನ ಆರಂಭವಾದದ್ದು ಮುಂಬೈಯ ಪ್ರತಿಷ್ಠಿತ ಬಾಬಾ ಅಟೊಮಿಕ್ ರೀಸರ್ಚ್ ಸೆಂಟರಿನಲ್ಲಿ. ಅಲ್ಲಿ ಹೋಮಿ ಭಾಭಾ, ಡಿ. ಡಿ. ಕೊಸಾಂಬಿ, ಎ.ಕೆ. ಗಂಗೂಲಿ, ರಾಜಾರಾಮಣ್ಣ ಮೊದಲಾದ ದಾರ್ಶನಿಕರ ಒಡನಾಟ.  ಮುಂದೆ ಟಾಟಾ ಪ್ರೆಸ್ಸಿಗೆ ಇಂಜಿನಿಯರ್ ಆಗಿ ಸೇರಿಕೊಂಡಾಗಲೂ ಮುದ್ರಣದ ಹೊಸ ಸಾಧ್ಯತೆಗಳ ಕುರಿತ ಚಿಂತನೆ ಸಾಧ್ಯವಾಯಿತು. ಬೆರಳಚ್ಚು ಯಂತ್ರಕ್ಕೆ ಸಿಂಧೂ ಕಣಿವೆ ಲಿಪಿಯ ಸಂಕೇತಗಳನ್ನು ಅಳವಡಿಸುವ ಮಹತ್ತರ ಕಾರ್ಯವೂ ರಾಯರಿಂದ ಇದೇ ಸಮಯದಲ್ಲಿ ನಡೆಯಿತು.

ಟಾಟಾ ಪ್ರೆಸ್ಸಿನಲ್ಲಿ ಅಕ್ಷರಗಳೊಂದಿಗೆ ಆರಂಭವಾದ ರಾಯರ ಒಡನಾಟ ಬೆಂಗಳೂರಿನ ಮಾನೋಟೈಪ್ ಇಂಡಿಯಾ ಕಂಪೆನಿಯಲ್ಲಿ ಯಶಸ್ವಿಯಾಗಿ ಮುಂದುವರಿಯಿತು. ಭಾರತೀಯ ಭಾಷೆಗಳಿಗೆ ಫಾಂಟ್ಗಳನ್ನು ವಿನ್ಯಾಸಮಾಡುವ ಮಹತ್ಕಾರ್ಯಕ್ಕೆ ಅವರ ಪ್ರತಿಭೆ ಬಳಕೆಯಾಯಿತು. ಕಂಪ್ಯೂಟರಿನಲ್ಲಿ ಕನ್ನಡವನ್ನು ಮೂಡಿಸುವ ಬೇರೆಬೇರೆ ಪ್ರಯತ್ನಗಳು ಆ ಹಂತದಲ್ಲಿ ನಡೆದಿದ್ದರೂ, ಅವೆಲ್ಲವನ್ನು ಏಕಸೂತ್ರದಲ್ಲಿ ಒಯ್ಯುವ ಕೆಲಸ ಆಗಿರಲಿಲ್ಲ. ಆ ಕೆಲಸ ಸಾಧ್ಯವಾದದ್ದು ಕೆ. ಪಿ. ರಾಯರು ಒಂದು ಪ್ರಮಾಣಿತ ಕೀಲಿಮಣೆ ವಿನ್ಯಾಸವನ್ನು ಸಂಶೋಧಿಸಿದಾಗ. ರಾಯರು ತಮ್ಮ ಶಬ್ದಾಧಾರಿತ ಕೀಲಿಮಣೆಗೆ ʻಸೇಡಿಯಾಪುʼ ಎಂದು ನಾಮಕರಣ ಮಾಡಿದರು. 

ರಾಯರು ತಮ್ಮ ತಂತ್ರಾಂಶಕ್ಕೆ ತಮ್ಮ ಗುರುಗಳ ಹೆಸರನ್ನಿಟ್ಟು ಕೃತಾರ್ಥರಾದರೆ, ಕರ್ನಾಟಕ ಸರ್ಕಾರ 2002ರಲ್ಲಿ ಇದನ್ನೇ ರಾಜ್ಯದ ಅಧಿಕೃತ ಕೀಲಿಮಣೆ ವಿನ್ಯಾಸ ಎಂದು ಸ್ವೀಕರಿಸಿ ರಾಯರ ಶ್ರಮವನ್ನು ಗೌರವಿಸಿತು. ಇಂದು ಇದೇ ತಂತ್ರಾಂಶ ʻನುಡಿʼ ಎಂದು ಪ್ರಸಿದ್ಧವಾಗಿರುವುದು ಎಲ್ಲರಿಗೂ ತಿಳಿದದ್ದೇ. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಮಾಡಲು ಇನ್ನೂ ಕೆಲವು ತಂತ್ರಾಂಶಗಳು ಬಳಕೆಯಾಗುತ್ತಿದ್ದರೂ, ʻನುಡಿʼ ತನ್ನ ಸರಳ ಪ್ರಮಾಣಿತ ಸ್ವರೂಪದಿಂದಾಗಿ ಹೆಚ್ಚು ಜನಪ್ರಿಯವೆನಿಸಿದೆ. 

ದುಡ್ಡಿನಿಂದ ಸಂತೋಷ ಸಿಗಲ್ಲ...

ವಿಶೇಷವೆಂದರೆ, ತಮ್ಮದೇ ತಂತ್ರಾಂಶ ʻಸೇಡಿಯಾಪುʼವಿನ ಸಂಶೋಧನೆಗೆ ರಾಯರು ಪೇಟೆಂಟ್ ಪಡೆದುಕೊಂಡಿಲ್ಲ. 80ರ ದಶಕದಲ್ಲೇ ಅದನ್ನು ಕೇಳಿದವರಿಗೆಲ್ಲ ಅವರು ಉಚಿತವಾಗಿ ಕೊಟ್ಟಿದ್ದರು. ಕರ್ನಾಟಕ ಸರ್ಕಾರದ ಗಣಕ ಪರಿಷತ್ತು ಕೂಡ ʼನುಡಿʼಯನ್ನು ಉಚಿತವಾಗಿಯೇ ಒದಗಿಸುತ್ತಿದೆ. “ನೀವು ಪೇಟೆಂಟ್ ತೆಗೆದುಕೊಂಡಿದ್ದರೆ ಸಾಕಷ್ಟು ಹಣಸಂಪಾದನೆ ಮಾಡಬಹುದಿತ್ತು ಎಂದು ತುಂಬ ಮಂದಿ ನನಗೆ ಹೇಳುತ್ತಾರೆ. ನನ್ನ ದೊಡ್ಡ ಸಮಸ್ಯೆ ಎಂದರೆ ನನಗೆ ದುಡ್ಡಿನ ಬೆಲೆ ಗೊತ್ತಿಲ್ಲ. ಈ ತಂತ್ರಾಂಶವನ್ನಿಟ್ಟುಕೊಂಡು ಹಣಸಂಪಾದಿಸಬೇಕು ಎಂದು ನನಗೆಂದೂ ಅನಿಸಿಯೇ ಇಲ್ಲ. ನಮ್ಮ ಭಾಷೆಗಾಗಿ, ತಂತ್ರಜ್ಞಾನದೊಂದಿಗೆ ಅದನ್ನು ಬೆಳೆಸುವುದಕ್ಕಾಗಿ ಕೆಲಸ ಮಾಡುವುದರಲ್ಲಿ ನನಗೆ ದೊರೆಯುವ ಸಂತೋಷ ಹಣದಿಂದ ದೊರೆಯದು ಅನಿಸುತ್ತದೆ,” ಎಂದು ಮುಗುಳ್ನಗುತ್ತಾರೆ ಕೆ. ಪಿ. ರಾಯರು. ಇಂತಹ ಮಂದಿ ಈ ಕಾಲದಲ್ಲಿ ದೊರೆಯುವುದು ಬಹಳ ಕಷ್ಟ.

ಮಾನೋಟೈಪ್ನ ನಿರ್ದೇಶಕರಾಗಿ ನಿವೃತ್ತಿ ಹೊಂದಿದ ಬಳಿಕ ರಾಯರು ಮಣಿಪಾಲ ವಿಶ್ವವಿದ್ಯಾನಿಲಯ ಹಾಗೂ ಗೌಹಾಟಿಯ ಐಐಟಿಯಲ್ಲಿ ಪ್ರಾಧ್ಯಾಪಕರಾಗಿ ತಮ್ಮ ಜ್ಞಾನ-ಅನುಭವವನ್ನು ಹೊಸಪೀಳಿಗೆಗೆ ಧಾರೆಯೆರೆದರು. ಪ್ರತಿಷ್ಠಿತ ಅಡೋಬಿ ಕಂಪೆನಿಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.  ಅನೇಕ ವೈಜ್ಞಾನಿಕ ಹಾಗೂ ಸೃಜನಶೀಲ ಕೃತಿಗಳನ್ನು ರಚಿಸಿದರು.

ಪ್ರಶಸ್ತಿ-ಗೌರವ:

ರಾಯರ ಸಾಧನೆ-ಶ್ರಮವನ್ನು ಗುರುತಿಸಿ ಅನೇಕ ಪ್ರಶಸ್ತಿಗಳು ಸಂದಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,  ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಗೌರವ, ಆಳ್ವಾಸ್ ನುಡಿಸಿರಿ ಪ್ರಶಸ್ತಿಗಳು ಪ್ರಮುಖವಾದವು. ಕನ್ನಡ ಮಾಧ್ಯಮದಲ್ಲಿ ಕಲಿತ ಹಳ್ಳಿಗಾಡಿನ ಬಡಕುಟುಂಬದ ಹುಡುಗನೊಬ್ಬ ದೇಶವಿದೇಶ ಸುತ್ತಿ ಕನ್ನಡಕ್ಕಾಗಿ ಇಂತಹದೊಂದು ಶಾಶ್ವತ ಕೊಡುಗೆ ನೀಡಿರುವುದು ಕನ್ನಡಿಗರು ಎಂದೂ ಮರೆಯಲಾಗದ ವಿಷಯ. ಅದರಲ್ಲೂ “ನನಗೇನೂ ಬೇಡ, ಭಾಷೆ ಬೆಳೆದರೆ ಅಷ್ಟೇ ಸಾಕು,” ಎನ್ನುವುದಂತೂ ಯಾವ ಪ್ರಶಸ್ತಿಯೂ ಸರಿಗಟ್ಟದ ಒಂದು ಮನಸ್ಥಿತಿ. ಇಂತಹವರ ಸಂತತಿ ಅಸಂಖ್ಯವಾಗಲಿ.

- ಸಿಬಂತಿ ಪದ್ಮನಾಭ ಕೆ. ವಿ.


ಕಾಮೆಂಟ್‌ಗಳಿಲ್ಲ: