03 ಏಪ್ರಿಲ್ 2023ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ
ನಮ್ಮ ಶಿಕ್ಷಣ ವ್ಯವಸ್ಥೆ ಹಾಗೂ ಉದ್ಯೋಗರಂಗದ ನಡುವೆ ಅಡ್ಡ ನಿಂತಿರುವ ದೊಡ್ಡ ಗೋಡೆ ಕೌಶಲಗಳ ಕೊರತೆ. ಶಿಕ್ಷಣ ಸಂಸ್ಥೆಗಳಿಂದ ಲಕ್ಷಾಂತರ ಪದವೀಧರರು ಪ್ರತಿವರ್ಷ ಹೊರಬರುತ್ತಲೇ ಇದ್ದರೂ ಉದ್ಯೋಗಜಗತ್ತಿನ ಅವಶ್ಯಕತೆಗಳು ಪೂರೈಕೆಯಾಗುತ್ತಿಲ್ಲ. ಒಂದೆಡೆ ಖಾಲಿ ಉಳಿದಿರುವ ಅಸಂಖ್ಯ ಉದ್ಯೋಗಗಳು, ಇನ್ನೊಂದೆಡೆ ಹೆಚ್ಚುತ್ತಲೇ ಇರುವ ನಿರುದ್ಯೋಗ.ಈ ವೈರುಧ್ಯವನ್ನು ಸರಿಪಡಿಸುವ ಏಕೈಕ ದಾರಿಯೆಂದರೆ ಶಿಕ್ಷಣ ಹಾಗೂ ಉದ್ಯೋಗಜಗತ್ತಿನ ನಡುವಿನ ಅಂತರವನ್ನು ನಿವಾರಿಸುವುದು; ಅಂದರೆ ನಮ್ಮ ಯುವಕರನ್ನು ಹೊಸಕಾಲದ ಕೌಶಲ್ಯಗಳೊಂದಿಗೆ ಸಶಕ್ತರೂ ಸಮರ್ಥರೂ ಆಗಿ ಬೆಳೆಸುವುದು. ಕಾಲ ಬದಲಾಗಿದೆ, ಉದ್ಯೋಗಗಳೂ ಬದಲಾಗಿವೆ, ಅದಕ್ಕೆ ತಕ್ಕಂತೆ ಶಿಕ್ಷಣ ಹಾಗೂ ತರಬೇತಿ ಬದಲಾಗದೆ ಇರುವುದೇ ಇಂದಿನ ಎಲ್ಲ ಸಮಸ್ಯೆಗಳ ಮೂಲ.
ಉದ್ಯೋಗ ಜಗತ್ತು ಡೇಟಾ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಸೈಬರ್ ಸೆಕ್ಯುರಿಟಿ, ವರ್ಚುವಲ್ ರಿಯಾಲಿಟಿ, 3-ಡಿ ಪ್ರಿಂಟಿಂಗ್, ರೋಬೋಟಿಕ್ಸ್, ಕ್ಲೌಡ್ ಕಂಪ್ಯೂಟಿಂಗ್ ಮುಂತಾದ ಕ್ಷೇತ್ರಗಳೆಡೆಗೆ ಭರದಿಂದ ವ್ಯಾಪಿಸುತ್ತಿದೆ. ನಾವು ಕೇವಲ ಸಾಂಪ್ರದಾಯಿಕ ಉದ್ಯೋಗಗಳ ಕಡೆಗಷ್ಟೇ ಗಮನಹರಿಸಿದರೆ ಏನೇನೂ ಸಾಲದು. ಹೊಸತನದತ್ತ ತೆರೆದುಕೊಳ್ಳುವುದು ಇಂದಿನ ಅನಿವಾರ್ಯ.
ಹೊಸ ಉದ್ಯೋಗ ಸಾಧ್ಯತೆಗಳನ್ನು ಗಮನಿಸಿದಾಗ ತಕ್ಷಣಕ್ಕೆ ಇವೆಲ್ಲ ತಾಂತ್ರಿಕ ಹುದ್ದೆಗಳು ಎನಿಸಿದರೂ, ಇವು ಎಲ್ಲ ಹಿನ್ನೆಲೆಯ ಮಂದಿಯನ್ನೂ ಸ್ವಾಗತಿಸುವ ಕ್ಷೇತ್ರಗಳೆಂಬುದು ವಾಸ್ತವ ಸಂಗತಿ. ಬಿಎ, ಬಿಕಾಂ, ಬಿಎಸ್ಸಿಯಂತಹ ಸಾಂಪ್ರದಾಯಿಕ ಪದವಿಗಳನ್ನು ಪಡೆದವರೂ ಇವುಗಳನ್ನು ಪ್ರವೇಶಿಸಿ ಯಶಸ್ಸು ಸಾಧಿಸಬಹುದು. ದೊಡ್ಡದೊಡ್ಡ ಕಂಪೆನಿಗಳು ಇಂದು ಎದುರು ನೋಡುತ್ತಿರುವುದು ಕೌಶಲಗಳನ್ನೇ ಹೊರತು ಅಂಕಪಟ್ಟಿಗಳನ್ನಲ್ಲ. ಪದವಿ ವ್ಯಾಸಂಗ ಮಾಡುತ್ತಿರುವವರು ಅದರ ಜೊತೆಜೊತೆಗೆ ಕಲಿಯಬಹುದಾದ ನೂರಾರು ಕೋರ್ಸುಗಳು ಈಗ ಲಭ್ಯವಿವೆ. ಇವುಗಳಲ್ಲಿ ಅನೇಕವು ಉಚಿತ ಹಾಗೂ ಆನ್ಲೈನ್ ವಿಧಾನದಲ್ಲಿ ಲಭ್ಯ. ಬಿಡುವಿನ ವೇಳೆಯಲ್ಲಿ ಒಂದೆರಡು ಕೋರ್ಸುಗಳನ್ನು ಮಾಡಿಕೊಂಡರೆ ಇವುಗಳ ನೆರವಿನಿಂದಲೇ ಒಳ್ಳೆಯ ಉದ್ಯೋಗಗಳನ್ನೂ ಪಡೆಯಬಹುದು.
ಡಿಜಿಟಲ್ ಮಾರ್ಕೆಟಿಂಗ್: ಯಾವುದೇ ಉತ್ಪನ್ನದ ಮಾರಾಟಗಾರರೂ ಇಂದು ಪ್ರಚಾರಕ್ಕಾಗಿ ಅವಲಂಬಿಸಿರುವುದು ಡಿಜಿಟಲ್ ಮಾಧ್ಯಮವನ್ನು. ಸಾಂಪ್ರದಾಯಿಕ ಮಾಧ್ಯಮಗಳ ಜಾಹೀರಾತು ಸಾಕಾಗುವುದಿಲ್ಲ. ಕಂಟೆAಟ್ ಡೆವಲಪ್ಮೆಂಟ್, ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ಸರ್ಚ್ ಇಂಜಿನ್ ಆಪ್ಟಿಮೈಸೇಶನ್- ಹೀಗೆ ಡಿಜಿಟಲ್ ಮಾರ್ಕೆಟಿಂಗ್‌ಗೆ ಸಂಬಂಧಿಸಿದಂತೆ ಹತ್ತಾರು ಆನ್ಲೈನ್ ಕೋರ್ಸುಗಳಿವೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್: ಬಹುತೇಕ ಆನ್ಲೈನ್ ಚಟುವಟಿಕೆಗಳು ಇಂದು ಕೃತಕ ಬುದ್ಧಿಮತ್ತೆ ಆಧರಿತವಾಗಿವೆ. ಅದನ್ನು ಬಳಸಿಕೊಂಡು ವ್ಯವಹಾರ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಹತ್ತಾರು ಉಚಿತ ಕೋರ್ಸುಗಳು ಲಭ್ಯವಿವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರಾಜೆಕ್ಟ್ಸ್, ಇಂಟ್ರೊಡಕ್ಷನ್ ಟು ಎಐ, ಸೆಕ್ಯೂರ್ & ಪ್ರೈವೇಟ್ ಎಐ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಫಾರ್ ರೋಬೋಟಿಕ್ಸ್, ಡೆವಲಪಿಂಗ್ ಎಐ ಅಪ್ಲಿಕೇಶನ್ಸ್ – ಈ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ಕೋರ್ಸುಗಳು.
ಡೇಟಾ ಅನಲಿಟಿಕ್ಸ್: ತಂತ್ರಜ್ಞಾನ ಬೆಳೆದಂತೆ ವಿವಿಧ ರಂಗಗಳಿಗೆ ಸಂಬಂಧಿಸಿದ ದತ್ತಾಂಶ ಬೆಟ್ಟದಂತೆ ಬೆಳೆಯುತ್ತಿದೆ. ಇದರ ವಿಶ್ಲೇಷಣೆ ಮತ್ತು ಅನ್ವಯ ದುಸ್ತರವಾಗುತ್ತಿದೆ. ಹೀಗಾಗಿ ಡೇಟಾ ಅನಲಿಟಿಕ್ಸ್ ಎಂಬ ಪ್ರಧಾನ ಉದ್ಯೋಗ ಕ್ಷೇತ್ರವೊಂದು ತೆರೆದುಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಕಂಪ್ಯೂಟಿಂಗ್ ಫಾರ್ ಡೇಟಾ ಅನಾಲಿಸಿಸ್, ಕ್ರಿಪ್ಟೋಗ್ರಫಿ & ನೆಟ್ವರ್ಕ್ ಸೆಕ್ಯುರಿಟಿ, ಡೇಟಾ ಅನಲಿಟಿಕ್ಸ್ ವಿದ್ ಪೈಥಾನ್. ಡೇಟಾ ಅನಾಲಿಸಿಸ್ ಫಾರ್ ಡಿಸಿಶನ್ ಮೇಕಿಂಗ್, ವಿಶುವಲೈಸೇಶನ್ ಫಾರ್ ಡೇಟಾ ಜರ್ನಲಿಸಂ- ಇಂತಹ ಹತ್ತಾರು ಕೋರ್ಸುಗಳಿವೆ.
ಸೈಬರ್ ಸೆಕ್ಯುರಿಟಿ: ಆನ್ಲೈನ್ ಜಗತ್ತಿನ ಕಳ್ಳಕಾಕರಿಂದ ಸುರಕ್ಷಿತವಾಗಿರುವುದು ಇಂದಿನ ಆದ್ಯತೆಗಳಲ್ಲೊಂದು. ಹೀಗಾಗಿ ಸೈಬರ್ ಭದ್ರತೆಯ ಜ್ಞಾನ ಹಾಗೂ ಕೌಶಲಗಳನ್ನು ಬೆಳೆಸಿಕೊಂಡವರಿಗೆ ಸಾಕಷ್ಟು ಉದ್ಯೋಗಾವಕಾಶಗಳು ದೊರೆಯುತ್ತವೆ. ಸರ್ಟಿಫಿಕೇಟ್ ಇನ್ ಸೈಬರ್ ಸೆಕ್ಯುರಿಟಿ, ಇನ್ಫಾರ್ಮೇಶನ್ ಸೆಕ್ಯುರಿಟಿ & ಸೈಬರ್ ಫಾರೆನ್ಸಿಕ್ಸ್, ಆನ್ಲೈನ್ ಪ್ರೈವಸಿ, ಸೈಬರ್ ಸೆಕ್ಯುರಿಟಿ ಇನ್ ಹೆಲ್ತ್ಕೇರ್ ಪ್ರೋಗ್ರಾಮ್ಸ್- ಈ ಕ್ಷೇತ್ರದಲ್ಲಿ ಲಭ್ಯವಿರುವ ಕೆಲವು ಕೋರ್ಸುಗಳು.
ಡೇಟಾ ಸೈನ್ಸ್: ದತ್ತಾಂಶ ನಿರ್ವಹಣೆ ಕುರಿತ ಆನ್ಲೈನ್ ಕೋರ್ಸುಗಳನ್ನು ಇಂದು ಅಂತಾರಾಷ್ಟ್ರೀಯ ಮಟ್ಟದ ಕಂಪೆನಿಗಳು ಹಾಗೂ ವಿಶ್ವವಿದ್ಯಾನಿಲಯಗಳು ನೀಡುತ್ತಿವೆ. ಇವು ಉಚಿತವಾಗಿಯೂ ಲಭ್ಯವಿವೆ. ಪರ್ಡ್ಯು ಯೂನಿವರ್ಸಿಟಿಯ ಡೇಟಾ ಸೈನ್ಸ್ ಫಾರ್ ಸ್ಮಾರ್ಟ್ ಸಿಟೀಸ್, ಎಂಐಟಿ ಕೇಂಬ್ರಿಜ್‌ನ ಕೊಲಾಬೊರೇಟಿವ್ ಡೇಟಾ ಸೈನ್ಸ್ ಫಾರ್ ಹೆಲ್ತ್ಕೇರ್, ಐಬಿಎಂನ ಡೇಟಾ ಸೈನ್ಸ್ ಟೂಲ್ಸ್, ಯೂನಿವರ್ಸಿಟಿ ಆಫ್ ಲಂಡನ್‌ನ ಫೌಂಡೇಶನ್ಸ್ ಆಫ್ ಡೇಟಾ ಸೈನ್ಸ್ ಇಂತಹ ಉಪಯುಕ್ತ ಕೋರ್ಸುಗಳಿಗೆ ಉದಾಹರಣೆಗಳು.
ಗ್ರಾಫಿಕ್ ಡಿಸೈನಿಂಗ್: ಯೋಚನೆ-ಯೋಜನೆಗಳ ದೃಶ್ಶಿಕ ವಿವರಣೆ ಹೊಸಕಾಲದ ಅವಶ್ಯಕತೆಗಳಲ್ಲೊಂದು. ಹೀಗಾಗಿ ಎಲ್ಲೆಡೆಯೂ ಗ್ರಾಫಿಕ್ ವಿನ್ಯಾಸಕಾರರು ಇಂದು ಬೇಕೇಬೇಕು. ಜಾಹೀರಾತಿನಿಂದ ತೊಡಗಿ ಸಿನಿಮಾರಂಗದವರೆಗೆ ನೂರಾರು ಕ್ಷೇತ್ರಗಳು ಅವರನ್ನು ಸ್ವಾಗತಿಸುತ್ತವೆ. ಇಂಟ್ರೊಡಕ್ಷನ್ ಟು ಗ್ರಾಫಿಕ್ ಡಿಸೈನ್ ವಿದ್ ಫೋಟೋಶಾಪ್, ಫಂಡಮೆಂಟಲ್ಸ್ ಆಫ್ ಗ್ರಾಫಿಕ್ ಡಿಸೈನ್, ಗ್ರಾಫಿಕ್ಸ್ & ಅನಿಮೇಶನ್ ಡೆವಲಪ್ಮಂಟ್, ಕಂಪ್ಯೂಟರ್ ಗ್ರಾಫಿಕ್ಸ್- ಹೀಗೆ ಅನೇಕ ಕೋರ್ಸುಗಳು ಉಚಿತವಾಗಿ ದೊರೆಯುತ್ತವೆ.
ಫೋಟೋಗ್ರಫಿ & ವೀಡಿಯೋಗ್ರಫಿ: ಕೌಟುಂಬಿಕ ಕಾರ್ಯಕ್ರಮಗಳಿಂದ ತೊಡಗಿ ಕಾರ್ಪೋರೇಟ್ ಸಮಾರಂಭಗಳವರೆಗೆ ಎಲ್ಲರಿಗೂ ಬೇಕಾಗಿರುವುದು ಛಾಯಾಗ್ರಹಣ ಮತ್ತು ವೀಡಿಯೋಗ್ರಫಿ. ಹೀಗಾಗಿ ಕ್ಯಾಮೆರಾ ನಿರ್ವಹಿಸಬಲ್ಲವರಿಗೆ ಈಗ ಎಲ್ಲೆಡೆಯೂ ಬೇಡಿಕೆ. ಫೋಟೋಗ್ರಫಿ, ವೀಡಿಯೋಗ್ರಫಿ ಬಲ್ಲವರು ನಿರುದ್ಯೋಗಿಗಳಾಗಿ ಕುಳಿತುಕೊಳ್ಳುವ ಪ್ರಮೇಯವೇ ಇಲ್ಲ. ಹತ್ತಾರು ಸಂಖ್ಯೆಯಲ್ಲಿ ಲಭ್ಯವಿರುವ ಉಚಿತ ಆನ್ಲೈನ್ ಕೋರ್ಸುಗಳ ಮೂಲಕ ನಮ್ಮ ಫೋಟೋಗ್ರಫಿ ಕೌಶಲಗಳನ್ನು ಸುಲಭವಾಗಿ ಬೆಳೆಸಿಕೊಳ್ಳಬಹುದು.
ವೆಬ್ ಡಿಸೈನಿಂಗ್: ತಾಂತ್ರಿಕ ಪದವಿಗಳ ವ್ಯಾಸಂಗ ಮಾಡದೆಯೂ ಜಾಲತಾಣಗಳನ್ನು ಹಾಗೂ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವುದು ಈಗಿನ ಪ್ರವೃತ್ತಿಗಳಲ್ಲೊಂದು. ಅನೇಕ ಯುವಕರು ಇದನ್ನೊಂದು ಹವ್ಯಾಸವನ್ನಾಗಿ ಬೆಳೆಸಿಕೊಂಡು ದೊಡ್ಡ ಯಶಸ್ಸು ಸಾಧಿಸಿರುವುದುಂಟು. ಇಂಟ್ರೊಡಕ್ಷನ್ ಟು ವೆಬ್ ಡೆವಲಪ್ಮೆಂಟ್, ಯುಎಕ್ಸ್ ಡಿಸೈನ್ ಫಾರ್ ಮೊಬೈಲ್ ಡೆವಲಪರ್ಸ್, ಯೂಸರ್ ಇಂಟರ್‌ಫೇಸ್ ಡಿಸೈನ್. ಯೂಸರ್ ಎಕ್ಸ್ಪೀರಿಯನ್ಸ್ ಡಿಸೈನ್- ಈ ವರ್ಗಕ್ಕೆ ಸಂಬಂಧಿಸಿದ ಕೆಲವು ಕೋರ್ಸುಗಳು.
ಎಲ್ಲಿ ದೊರೆಯುತ್ತವೆ?
ಪ್ರಧಾನಮಂತ್ರಿ ಕೌಶಲ ವಿಕಾಸ್ ಯೋಜನಾ (PMKVY), ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮ (NSDC), ಸ್ವಯಂ (SWAYAM) ಮುಂತಾದ ಸರ್ಕಾರಿ ಸಂಸ್ಥೆಗಳಲ್ಲದೆ ನಾಸ್‌ಕಾಮ್, ಇನ್ಫೋಸಿಸ್‌ನಂತಹ ಸರ್ಕಾರೇತರ ಸಂಸ್ಥೆಗಳು ನೂರಾರು ಉಚಿತ ಹಾಗೂ ಪಾವತಿ ಕೋರ್ಸುಗಳನ್ನು ಒದಗಿಸುತ್ತಿವೆ. ಪ್ರಮಾಣಪತ್ರವನ್ನೂ ನೀಡುತ್ತವೆ. ಕೆಲವು ಉಪಯುಕ್ತ ಲಿಂಕ್‌ಗಳು ಇಲ್ಲಿವೆ:
https://infyspringboard.onwingspan.com/
2020ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪದವಿ ಹಾಗೂ ಉದ್ಯೋಗಗಳ ನಡುವಿನ ಅಂತರವನ್ನು ಮೌಲ್ಯ ಹಾಗೂ ಕೌಶಲ್ಯಗಳ ಚೌಕಟ್ಟಿನಲ್ಲಿ ನಿವಾರಿಸಿಕೊಳ್ಳುವ ದೊಡ್ಡ ಕನಸು ಇಟ್ಟುಕೊಂಡಿದೆ. ಇದರ ಸಮರ್ಥ ಅನುಷ್ಠಾನ ವಿದ್ಯಾರ್ಥಿಗಳ ಉತ್ಸಾಹ ಹಾಗೂ ಅಧ್ಯಾಪಕರ ಬದ್ಧತೆಯ ಮೇಲೆ ನಿಂತಿದೆ. ಕೌಶಲಾಭಿವೃದ್ಧಿ ಕೋರ್ಸುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಇದಕ್ಕಿರುವ ಸರಳ ಮಾರ್ಗ.
- ಸಿಬಂತಿ ಪದ್ಮನಾಭ ಕೆ. ವಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ