ಶುಕ್ರವಾರ, ಆಗಸ್ಟ್ 2, 2019

ನಮ್ಮೊಳಗೆ ಗೆಲುವಿನ ಬೆಳಕು ಪಸರಿಸಲಿ

03 ರಿಂದ 09 ಆಗಸ್ಟ್ 2019ರ ಬೋಧಿವೃಕ್ಷದಲ್ಲಿ ಪ್ರಕಟವಾದ ಲೇಖನ.

ಜೀವಶಾಸ್ತ್ರದ ಅಧ್ಯಾಪಕರು ಎಂಟನೇ ತರಗತಿಯಲ್ಲಿ ಪ್ರತಿಕಾಯಗಳ ಬಗ್ಗೆ ಪಾಠ ಮಾಡುತ್ತಿದ್ದರೆ, ತಲೆಯೊಳಗೆ ಅದೇನೋ ಮಿಂಚು ಹೊಳೆದವನಂತೆ ಜ್ಯಾಕ್ ಆ್ಯಂಡ್ರೆಕಾ ‘ಯೆಸ್!’ ಎಂದು ಉದ್ಗರಿಸಿದ್ದ. ಇಡೀ ತರಗತಿ ಜ್ಯಾಕ್‍ನತ್ತ ತಿರುಗಿ ನೋಡುತ್ತಿದ್ದರೆ ಆತ ಮಾತ್ರ ಏನನ್ನೋ ಶೋಧಿಸಿದವನ ಹುಮ್ಮಸ್ಸಿನಲ್ಲಿ ಬೀಗುತ್ತಿದ್ದ.

ಹತ್ತಿರದ ಸಂಬಂಧಿಯೊಬ್ಬರು ಮೇದೋಜೀರಕ ಗ್ರಂಥಿಯ ಕ್ಯಾನ್ಸರಿನಿಂದ ಸಾವಿಗೀಡಾದ ಬಳಿಕ ಅದರದ್ದೇ ಯೋಚನೆಯಲ್ಲಿ ಮುಳುಗಿದ್ದ ಜ್ಯಾಕ್‍ಗೆ ಥಟ್ಟನೆ ಏನೋ ಹೊಳೆದು ಹೊಸದೊಂದು ಮಾರ್ಗ ಗೋಚರಿಸತೊಡಗಿತ್ತು. ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‍ಗೆ ತುತ್ತಾದವರು ಸಾವಿಗೀಡಾಗುವುದೇ ಬಹಳ. ಕಾರಣ ಅದು ಗೊತ್ತಾಗುವುದೇ ಸಾವು ಸಮೀಪಿಸಿದ ಮೇಲೆ. ಆರಂಭದ ಹಂತದಲ್ಲೇ ಗೊತ್ತಾದರೆ ಚಿಕಿತ್ಸೆ ಕೊಡಬಹುದು ಮತ್ತು ಯಶಸ್ಸು ಪಡೆಯಬಹುದು ಎಂದು ಜ್ಯಾಕ್ ಎಲ್ಲೋ ಓದಿದ್ದ.

ಅಂತಹ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಅನ್ನು ಆರಂಭದಲ್ಲೇ ಪತ್ತೆ ಮಾಡುವ ಸಾಧನವೊಂದರ ಪ್ರಮೇಯ ಬಯಾಲಜಿ ತರಗತಿಯಲ್ಲಿ ಕುಳಿತ ಜ್ಯಾಕ್ ಮೆದುಳಿನಲ್ಲಿ ಸ್ಫುರಿಸಿತ್ತು. ಆ ಚಿತ್ರ ಕಾರ್ಯರೂಪಕ್ಕೆ ಬಂದದ್ದೇ ಆದರೆ ಅದು ಈಗಾಗಲೇ ಇದ್ದ ವಿಧಾನಗಳಿಗಿಂತ 10 ಪಟ್ಟು ಪರಿಣಾಮಕಾರಿಯೂ, 26,000 ಪಟ್ಟು ಅಗ್ಗವೂ ಆಗಿತ್ತು! ಎಲ್ಲವೂ ನಿಜ, ಆದರೆ ತನ್ನ ಕಲ್ಪನೆಯನ್ನು ಸಾಕಾರಗೊಳಿಸುವುದಕ್ಕೆ ಬೇಕಾದ ಮೂಲಭೂತ ಸೌಕರ್ಯ ಮತ್ತು ತಾಂತ್ರಿಕ ಬೆಂಬಲವೇ ಜ್ಯಾಕ್ ಬಳಿ ಇರಲಿಲ್ಲ.

ನಿರಾಶನಾಗದ ಜ್ಯಾಕ್ ಆಧುನಿಕ ಸೌಲಭ್ಯಗಳಿದ್ದ ಅಮೇರಿಕಾದ ವಿವಿಧ ವಿಶ್ವವಿದ್ಯಾನಿಲಯಗಳಿಗೆ ಅರ್ಜಿ ಸಲ್ಲಿಸುತ್ತಾ ಬಂದ. ದುರದೃಷ್ಟವಶಾತ್ ಈ ಹೈಸ್ಕೂಲು ಹುಡುಗನ ಪ್ರಸ್ತಾಪವನ್ನು ಎಲ್ಲರೂ ಹುಡುಗಾಟಿಕೆಯೆಂದೇ ಭಾವಿಸಿದರು. ಒಂದಲ್ಲ, ಎರಡಲ್ಲ, 199 ಲ್ಯಾಬೋರೆಟರಿಗಳು ಜ್ಯಾಕ್‍ಗೆ ಸೌಲಭ್ಯ ಒದಗಿಸಲು ನಿರಾಕರಿಸಿದವು. ಸಾಮಾನ್ಯ ಹುಡುಗರಾಗಿದ್ದರೆ ನಾಲ್ಕು ಮಂದಿ ‘ಇಲ್ಲ’ ಎಂದಾಗ ಜೀವನದಲ್ಲಿ ಎಂದೂ ಇಂತಹದರ ತಂಟೆಗೇ ಹೋಗಬಾರದೆಂದು ಸುಮ್ಮನಿದ್ದುಬಿಡುತ್ತಿದ್ದರು.

ಆದರೆ ಜ್ಯಾಕ್‍ಗೆ ಅಪಾರ ಮನೋಬಲ ಇತ್ತು. ಅನೇಕ ಬಾರಿ ಅಧೀರತೆ ಕಾಡಿದರೂ ಆಶಾವಾದದಿಂದ ಪ್ರಯತ್ನಿಸುತ್ತಲೇ ಇದ್ದ. ಆತನ 200ನೇ ಯತ್ನ ಫಲ ನೀಡಿತು. ಜಾನ್ ಹಾಪ್ಕಿನ್ಸ್ ವೈದ್ಯಕೀಯ ವಿವಿಯ ಪ್ರಾಧ್ಯಾಪಕರೊಬ್ಬರು ಜ್ಯಾಕ್ ಪ್ರಸ್ತಾವನೆಯನ್ನು ಒಪ್ಪಿಕೊಂಡು ಆತನನ್ನು ತಮ್ಮ ಪ್ರಯೋಗಾಲಯಕ್ಕೆ ಆಹ್ವಾನಿಸಿದರು. ಆಮೇಲಿನದ್ದು ಏನಿದ್ದರೂ ಇತಿಹಾಸ.

ಹೌದು, ಸೋಲು ಒಂದು ಬಾರಿ ಎಲ್ಲರನ್ನೂ ಅಧೀರರನ್ನಾಗಿಸುತ್ತದೆ, ಕಂಗೆಡಿಸುತ್ತದೆ. ಮತ್ತೆ ಮತ್ತೆ ಸೋತರಂತೂ ಮುಂದೆ ಜೀವನದಲ್ಲಿ ಏನೂ ಇಲ್ಲ ಎಂಬ ಕತ್ತಲು ಆವರಿಸಿಕೊಂಡುಬಿಡುತ್ತದೆ. ಈ ಹಂತದಲ್ಲಿ ಧೈರ್ಯ ಕಳೆದುಕೊಂಡರಂತೂ ಬದುಕು ಅಲ್ಲಿಗೆ ಅಂತ್ಯವಾದಂತೆ. ಎಲ್ಲರೂ ಹೀಗೆಯೇ ಆಗಿದ್ದರೆ ಈ ಜಗತ್ತಿನಲ್ಲಿ ಸಾಧಕರೇ ಇರುತ್ತಿರಲಿಲ್ಲ. ಏಕೆಂದರೆ ಪ್ರತಿಯೊಬ್ಬ ಸಾಧಕನ ಹಿಂದೆ ಇರುವುದೂ ಬಹುಪಾಲು ಸೋಲಿನ ಕಥೆಗಳೇ.

ಸೋತೆವೆಂದು ಸುಮ್ಮನಾಗುತ್ತಿದ್ದರೆ ನಮ್ಮ ಇತಿಹಾಸ ಬಟಾಬಯಲಿನಂತೆ ಖಾಲಿಯಾಗಿರುತ್ತಿತ್ತು. ತಮ್ಮದೇ ಉದ್ಯಮದ ಸಾಮ್ರಾಜ್ಯಗಳನ್ನು ಕಟ್ಟಿದ ಸೋಶಿರೋ ಹೋಂಡಾ, ರತನ್ ಟಾಟಾ, ಸ್ಟೀವ್ ಜಾಬ್ಸ್, ವಾಲ್ಟ್ ಡಿಸ್ನಿ, ಧೀರೂಬಾಯಿ ಅಂಬಾನಿ, ನಾರಾಯಣ ಮೂರ್ತಿ, ಮನೋಬಲದಿಂದಲೇ ಯಶೋಗಾಥೆಗಳನ್ನು ಬರೆದ ಅರುಣಿಮಾ ಸಿನ್ಹಾ, ಸುಶೀಲ್ ಕುಮಾರ್, ಅಬ್ದುಲ್ ಕಲಾಂ, ರಜನೀಕಾಂತ್– ಇವರೆಲ್ಲ ತಮ್ಮ ಸೋಲಿನಿಂತ ಕಂಗೆಟ್ಟು ಕುಳಿತಿದ್ದರೆ ನಾವಿಂದು ಇವರನ್ನೆಲ್ಲ ನೆನಪಿಸಿಕೊಳ್ಳುವ ಅವಕಾಶವೇ ಇರುತ್ತಿರಲಿಲ್ಲ.

“ನಾನು ಸಾವಿರ ಬಾರಿ ಸೋತಿಲ್ಲ. ಸಾವಿರ ವಿಧಾನಗಳು ನನ್ನ ಪ್ರಯೋಗಕ್ಕೆ ಅನುಕೂಲವಾಗಲಿಲ್ಲ ಎಂಬುದನ್ನು ಕಲಿತೆನಷ್ಟೆ” ಎಂಬುದು ಬಲ್ಬ್ ಕಂಡುಹಿಡಿದ ಥಾಮಸ್ ಆಲ್ವಾ ಎಡಿಸನ್‍ನ ಪ್ರಸಿದ್ಧ ಮಾತು. ಸೋಲು ಎದುರಾದಾಗ ನಾವು ನೆನಪಿಸಿಕೊಳ್ಳಬೇಕಾದದ್ದು ಇದೇ ಮಾತನ್ನು. ಸೋಲು ನಮ್ಮ ತಪ್ಪುಗಳನ್ನು ತೋರಿಸಿಕೊಡುವ ಕೈದೀವಿಗೆಯಾಗಬೇಕೇ ಹೊರತು ನಮ್ಮನ್ನೇ ಸುಡುವ ಬೆಂಕಿಯಾಗಬಾರದು. “ಯಶಸ್ಸಿನಷ್ಟು ದೊಡ್ಡ ವೈಫಲ್ಯ ಇನ್ನೊಂದಿಲ್ಲ, ಏಕೆಂದರೆ ನಾವು ಅದರಿಂದ ಏನನ್ನೂ ಕಲಿಯುವುದಿಲ್ಲ. ಆದರೆ ಸೋಲುಗಳಿಂದ ನಾವು ಕಲಿಯವುದು ಬಹಳಷ್ಟಿದೆ” ಎಂದು ಬೌಲ್ಡಿಂಗ್ ಕೆನೆತ್ ಹೇಳಿರುವುದೂ ಇದೇ ಅರ್ಥದಲ್ಲಿ.

ಉದ್ಯೋಗ, ಶಿಕ್ಷಣ, ವ್ಯಾಪಾರ, ಸಂಸಾರ, ಕೃಷಿ ಎಲ್ಲದರಲ್ಲೂ ಒಂದಲ್ಲ ಒಂದು ಬಾರಿ ಸೋಲು ಎದುರಾಗುವುದು ಸಾಮಾನ್ಯ. ಆಗ ಮಾಡಬೇಕಿರುವುದು ಆತ್ಮಾವಲೋಕನವೇ ಹೊರತು ಆತ್ಮಹತ್ಯೆ ಅಲ್ಲ. ಸೋತುಬಿಟ್ಟೆ ಎಂದು ಬೇಜಾರಾಗುತ್ತೇವೆಯೇ ಹೊರತು ಯಾಕೆ ಸೋತೆ ಎಂದು ಯೋಚಿಸುವುದೇ ಇಲ್ಲ. ಸೋಲಿಗೆ ಏನಾದರೊಂದು ಕಾರಣ ಇರಲೇಬೇಕಲ್ಲ? ಅದನ್ನು ಅರ್ಥ ಮಾಡಿಕೊಂಡರೆ ಯಶಸ್ಸಿನ ಅರ್ಧ ದಾರಿ ಕ್ರಮಿಸಿದಂತೆಯೇ.

ಸೋತಾಗ ಸೋತು ಗೆದ್ದವರ, ನಮಗಿಂತಲೂ ಹೆಚ್ಚು ಪೆಟ್ಟು ತಿಂದವರ ಕಥೆಗಳು ನೆನಪಾಗಬೇಕು. ಅದು ಮನಸ್ಸಿಗೊಂದಿಷ್ಟು ಸಮಾಧಾನವನ್ನು ಕೊಡುತ್ತದೆ. ಸೋಲು ಛಲವಾಗಿ ಬದಲಾಗಬೇಕು. ಸೋತಿದ್ದೇನೆ, ಆದರೆ ಸತ್ತಿಲ್ಲ ಎಂಬುದನ್ನು ಸೋಲಿಸಿದವರಿಗೆ ತೋರಿಸಿಕೊಡಬೇಕೆಂದರೆ ಅವರೆದುರೇ ನಾವು ಪುಟಿದು ನಿಲ್ಲಬೇಕು. ಯಾರು ನಮ್ಮನ್ನು ಅಸಡ್ಡೆಯಿಂದ ಕಂಡರೋ ಅವರೇ ಮುಂದೊಂದು ದಿನ ನಮ್ಮನ್ನು ನೋಡಿ ಕರುಬುವಂತೆ ಬೆಳೆಯುವ ಪಣ ತೊಡಬೇಕು.

ಮನಸ್ಸು ಮ್ಲಾನವಾದಾಗ ವಿಶ್ವಾಸವುಳ್ಳ ಒಬ್ಬ ವ್ಯಕ್ತಿಯೊಂದಿಗೆ ಒಂದಷ್ಟು ಹೊತ್ತು ಕಳೆಯುವುದು ತುಂಬ ಮುಖ್ಯ. ನಿರಾಸೆ, ದುಃಖಗಳನ್ನು ಹಂಚಿಕೊಂಡಾಗ ಅದು ಕಡಿಮೆಯಾಗುತ್ತದೆ, ತುಸು ನಿರಾಳವೆನಿಸುತ್ತದೆ. ಆಗಷ್ಟೇ ಮನಸ್ಸು ಸ್ವಪರೀಕ್ಷೆಗೆ, ಮುಂದಿನ ದಾರಿಯ ಯೋಚನೆಗೆ ಸಿದ್ಧವಾಗುತ್ತದೆ. ನಮ್ಮೆದುರಿನ ವ್ಯಕ್ತಿಯ ಸಲಹೆ ಒಂದಿಷ್ಟು ಧೈರ್ಯವನ್ನೂ ನೀಡುತ್ತದೆ. ಯಾವುದೂ ಆಗದಿದ್ದರೆ ಸರ್ವಶಕ್ತನೆಂಬ ಒಂದು ಶಕ್ತಿಯ ಮೇಲೆ ನಂಬಿಕೆಯಿಟ್ಟು ಮುನ್ನಡೆಯಬೇಕು. ‘ನೀನೊಲಿದರೆ ಕೊರಡು ಕೊನರುವುದಯ್ಯಾ’ ಎಂಬ ಭರವಸೆಯಿಂದ ನಿರುಮ್ಮಳವಾಗಿ ಧ್ಯಾನಿಸಿದರೆ ದೂರದಲ್ಲೆಲ್ಲೋ ಆಶಾವಾದದ ಬೆಳಕಿಂಡಿಯೊಂದು ತೆರೆಯಬಹುದು. ಆಶಾವಾದವೇ ಗೆಲುವಿನ ಮೆಟ್ಟಿಲು.

- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: