2 ಆಗಸ್ಟ್ 2019ರ 'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಲೇಖನ
'ಶ್ರಾವಣ ಮಾಸ ಬಂದಾಗ ಆನಂದ ತಂದಾಗ/ ವಿರಹಗೀತೆ ಇನ್ನಿಲ್ಲ ಪ್ರಣಯಗೀತೆ ಬಾಳೆಲ್ಲ...’ ಡಾ. ರಾಜ್‌ಕುಮಾರ್-ವಾಣಿ ಜಯರಾಂ ಧ್ವನಿಯಲ್ಲಿ ಈ ಸಾಲುಗಳನ್ನು ಕೇಳದ ಕನ್ನಡಿಗರಿಲ್ಲ. ಒಮ್ಮೆ ಕೇಳಿದರೆ ದಿನವಿಡೀ ಅದನ್ನೇ ಗುನುಗುವ ಗುಂಗುಹಿಡಿಸುವ ಚಿ. ಉದಯಶಂಕರ್ ಅವರ ಮೆಚ್ಚಿನ ಗೀತೆ ಅದು.
ಶ್ರಾವಣವೆಂದರೆ ಹಾಗೆಯೇ- ಬೇಸರವೆಲ್ಲವೂ ಕಳೆಯಿತು, ಇನ್ನೇನಿದ್ದರೂ ಹಿತವಾದ ಮಳೆ-ಬೆಳೆಗಳ ಸಂತಸದ ಬದುಕು ಎಂಬ ರಮ್ಯ ಕಲ್ಪನೆಗಳನ್ನು ಜನಮಾನಸದಲ್ಲಿ ತುಂಬುವ ಕಾಲ. ಆಷಾಢ ಮುಗಿಯಿತಲ್ಲ ಎಂಬುದೇ ದೊಡ್ಡ ಸಮಾಧಾನ. ಜನಪದರಿಗೆ ಆಷಾಢವೆಂದರೆ ಒಂದಿಷ್ಟು ಆತಂಕ, ಇನ್ನೊಂದಿಷ್ಟು ಭಯ. ಅದಿನ್ನೂ ಮಳೆಗಾಲದ ಆರಂಭ. ಧಾರಾಕಾರ ಸುರಿವ ವರ್ಷಧಾರೆಗೆ ಇನ್ನೂ ಒಂದು ಹದ ಬಂದಿರುವುದಿಲ್ಲ. ಗುಡುಗು, ಮಿಂಚು, ಪ್ರವಾಹ, ಅವುಗಳಿಂದ ಒಂದಿಷ್ಟು ಜೀವ-ಆಸ್ತಿ-ಪಾಸ್ತಿ ಹಾನಿ. ಎಲ್ಲಿ ಅಶುಭ ಕಾಡುತ್ತದೆಯೋ ಎಂದು ಪ್ರತಿದಿನ ಚಿಂತೆ. 'ಶ್ರಾವಣದ ಶ್ರೀಗೌರಿಯವತಾರವೆಂದಹುದೊ ಎಂದು ಕಾದಿದೆ ಜೀವ ಗೂಡಿನೊಳಗೆ!’ ಎಂದು ಉದ್ಗರಿಸುತ್ತಾರೆ ರಾಷ್ಟ್ರಕವಿ ಜಿಎಸ್ಸೆಸ್.
ಆಷಾಢ ಮುಗಿದು ಶ್ರಾವಣ ಬಂತೆಂದರೆ ಎಲ್ಲ ಆತಂಕಗಳೂ ಮಾಯ. ಮಳೆ ತನ್ನ ರಭಸ ಕಡಿಮೆಯಾಗಿಸಿಕೊಂಡು ಹಿತವಾಗಿ ಭೂರಮೆಯನ್ನು ತೋಯಿಸುವ ಕಾಲ. ತೋಟ ಬಯಲುಗಳಲ್ಲಿ ಹಸಿರು ಮೊಳೆತು ಪ್ರಕೃತಿ ಮತ್ತೆ ರಂಗು ತುಂಬಿಕೊಳ್ಳುವ ಮಾಸ. ಆಷಾಢದ ನೆಪದಲ್ಲಿ ದೂರವಾದ ದಂಪತಿ ಮತ್ತೆ ಒಂದಾಗಿ ವಿರಹದುರಿಯನ್ನು ತಣಿಸಿಕೊಳ್ಳುವ ಪ್ರೇಮಮಯ ಸಮಯ.
ಆಷಾಢದ ಕೊನೆಯಲ್ಲಿನ ಭೀಮನ ಅಮಾವಾಸ್ಯೆ ಕಳೆಯಿತೆಂದರೆ, ಶ್ರಾವಣದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಂತೆಯೇ. ಒಂದೂ ಶುಭಕಾರ್ಯವಿಲ್ಲದೆ ಮ್ಲಾನವಾದ ಜನಜೀವನಕ್ಕೆ ಸಡಗರ ಸಂಭ್ರಮಗಳನ್ನು ತುಂಬಲು ಸಾಲು ಸಾಲು ಹಬ್ಬಗಳು. ನಾಗರ ಪಂಚಮಿ, ರಕ್ಷಾ ಬಂಧನ, ಗೋಕುಲಾಷ್ಟಮಿ, ವರಮಹಾಲಕ್ಷ್ಮಿ ವ್ರತ, ಉಪಾಕರ್ಮ, ಗಣೇಶ ಚತುರ್ಥಿ, ಸ್ವರ್ಣಗೌರಿ ಪೂಜೆ... ಒಂದೇ ಎರಡೇ? ಹೆಂಗಳೆಯರಿಗೆ, ಪುರುಷರಿಗೆ, ಮಕ್ಕಳಿಗೆ, ವೃದ್ಧರಿಗೆ... ಎಲ್ಲರಿಗೂ ಸಡಗರಕ್ಕೆ ನೂರೆಂಟು ಕಾರಣ. ಪ್ರತಿ ಮನೆಗಳಲ್ಲೂ ಹಬ್ಬದ ಸಂಭ್ರಮ. ಒಂದು ಮುಗಿಯುತ್ತಿದ್ದಂತೆ ಇನ್ನೊಂದಕ್ಕೆ ತಯಾರಿ. ಪ್ರತಿದಿನ ಪೂಜೆಪುರಸ್ಕಾರ, ಪ್ರತಿದಿನ ಸಿಹಿ ಭೋಜನ.
ಅನಾದಿ ಕಾಲದಿಂದ ನಡೆದುಕೊಂಡು ಬಂದ ಶ್ರಾವಣದ ಆಚರಣೆಗಳಿವು. ತಮ್ಮ ಕೆಲಸ ಕಾರ್ಯಗಳನ್ನು ಮರೆತು ತಿಂದುಂಡು ಮಲಗುವುದರಲ್ಲೇ ಕಳೆದುಹೋಗುವ ಜಾಯಮಾನ ನಮ್ಮ ಜನಪದರದ್ದಲ್ಲ. ಹಬ್ಬಹರಿದಿನಗಳೆಲ್ಲ ಅವರ ಬದುಕಿನ ಅನಿವಾರ್ಯ ಭಾಗ. ದಿನನಿತ್ಯದ ಚಟುವಟಿಕೆಗಳೆಲ್ಲ ಹಬ್ಬಗಳಷ್ಟೇ ಸಹಜವಾಗಿ ಕಳೆದುಹೋಗುತ್ತವೆ. ಆಚರಣೆಗಳೇನಿದ್ದರೂ ಜನಜೀವನಕ್ಕೆ ಶಕ್ತಿ ಉತ್ಸಾಹಗಳನ್ನು ತುಂಬುವ ಶಕ್ತಿಮದ್ದು ಅಷ್ಟೇ.
ಜನಪದರ ನಂಬಿಕೆಯ ಪ್ರಕಾರ ಶ್ರಾವಣ ಶಿವ-ಪಾರ್ವತಿಯರ ಪೂಜೆಗೆ ವಿಶೇಷವಾಗಿ ಮೀಸಲಾದ ಸಮಯ. ಶಿವನನ್ನು ಭಕ್ತಿಯಿಂದ ಪೂಜಿಸಿದರೆ ಇಚ್ಛೆಗಳೆಲ್ಲ ಈಡೇರುತ್ತವೆ ಎಂಬುದು ಅವರ ನಂಬಿಕೆ. ಈಶ್ವರನಿಗೆ ಪ್ರಿಯವಾದ ವಸ್ತುಗಳನ್ನು ತಂದು ಆರಾಧಿಸಿದರೆ ಅವನೂ ಸಂತುಷ್ಟನಾಗುತ್ತಾನೆ, ಬದುಕನ್ನೂ ಹಸನುಗೊಳಿಸುತ್ತಾನೆ ಎಂಬುದು ಅವರ ವಿಶ್ವಾಸ. ಅದಕ್ಕೇ ಉಪವಾಸ, ಪೂಜೆ, ನೈವೇದ್ಯ, ಅಲಂಕಾರ, ಆರಾಧನೆ ಎಲ್ಲ. ಸಮುದ್ರ ಮಥನ ನಡೆದಾಗ ಹುಟ್ಟಿದ ಹಾಲಾಹಲವನ್ನು ನುಂಗಿ ವಿಷಕಂಠನಾಗಿ ಜಗತ್ತನ್ನು ಕಾಪಾಡಿದ ಶಿವನ ಕಥೆಯೂ ಶ್ರಾವಣ ಮಾಸದೊಂದಿಗೆ ತಳಕು ಹಾಕಿಕೊಂಡಿದೆ.
ಒಂದೆರಡು ತಿಂಗಳು ಜಡವಾಗಿದ್ದ ಮಾರುಕಟ್ಟೆಯಲ್ಲಿ ವ್ಯಾಪಾರ ಗರಿಗೆದರುವುದಕ್ಕೂ ಶ್ರಾವಣವೇ ಬರಬೇಕು. ಹೂವು, ಹಣ್ಣು, ಬಟ್ಟೆಬರೆ, ಸಿಹಿತಿನಿಸು, ಆಹಾರ ಪದಾರ್ಥಗಳ ಮಾರಾಟದ ಭರಾಟೆ ಜೋರು. ಹಬ್ಬಗಳ ಆಚರಣೆಗೆ ಇವುಗಳನ್ನೆಲ್ಲ ಯಥಾಸಾಧ್ಯ ಮನೆಗೊಯ್ಯುವ ತರಾತುರಿ ಜನಸಾಮಾನ್ಯರದ್ದಾದರೆ, ಆ ನೆಪದಲ್ಲಿ ಮಳೆಗಾಲದಲ್ಲಿ ಕುಂದಿದ ಥೈಲಿಗೆ ಮತ್ತೆ ಜೀವತುಂಬುವ ತವಕ ವ್ಯಾಪಾರಿಗಳದ್ದು. ಮಳೆಗಾಲದಲ್ಲಿ ಹೂವು ಹಣ್ಣುಗಳ ಲಭ್ಯತೆ ಕೊಂಚ ವಿರಳವಾಗುವುದೂ ಈ ಬೆಲೆಯೇರಿಕೆಯ ಬಿಸಿಗೆ ಒಂದು ಕಾರಣ.
ಶ್ರಾವಣವನ್ನು ನಮ್ಮ ಕವಿಸಂಕುಲದಷ್ಟು ಸಂಭ್ರಮಿಸಿದವರು ಬೇರೆ ಯಾರೂ ಇರಲಾರರು. ಶ್ರಾವಣದ ಸೊಬಗನ್ನು ಕೊಂಡಾಡುವ ಕವಿತೆಗಳು ಸಾವಿರಾರು. ಸುತ್ತ ಹಸಿರೊಡೆದ ಪ್ರಕೃತಿ, ತಣ್ಣನೆಯ ಮಳೆ, ವಿಶಾಲ ಬಾನಿನಲ್ಲಿ ಓಡಾಡುವ ಮೋಡ, ಅಡಿಗಡಿಗೆ ಹಬ್ಬ ಹರಿದಿನ- ಇವುಗಳ ನಡುವೆ ಕವಿಹೃದಯ ಸುಮ್ಮನೆ ಉಳಿದೀತಾದರೂ ಹೇಗೆ?
ವರಕವಿ ಬೇಂದ್ರೆಯವರಂತೂ ಶ್ರಾವಣದ ಬಗೆಗೇ ಹತ್ತಾರು ಕವಿತೆಗಳನ್ನು ಕಟ್ಟಿದ್ದಿದೆ. 'ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ | ಬಂತು ಬೀಡಿಗೆ... ಕಡಲಿಗೆ ಬಂತು ಶ್ರಾವಣಾ| ಕುಣಿದ್ಹಾಂಗ ರಾವಣಾ| ಕುಣಿದಾವ ಗಾಳಿ | ಭೈರವನೆ ರೂಪ ತಾಳಿ’ ಸಿ. ಅಶ್ವಥ್ ಕಂಠಸಿರಿಯಲ್ಲಿ ಮೊಳಗಿದ ಬೇಂದ್ರೆಯವರ ಈ ಸಾಲುಗಳ ಶಕ್ತಿಯೇ ಅಸದೃಶ. 'ಭರವಸೆಗಳ ಹೊಲಗಳಲ್ಲಿ ನೇಗಿಲ-ಗೆರೆ ಕವನ; ಶ್ರಾವಣದಲ್ಲಿ ತೆನೆದೂಗುವ ಜೀವೋತ್ಸವವ ಗಾನ’ ಎಂಬ ಜಿಎಸ್ಸೆಸ್ ಅವರ ಸಾಲುಗಳಂತೂ ಶ್ರಾವಣದ ಅಷ್ಟೂ ಹುರುಪನ್ನು ಅದ್ಭುತವಾಗಿ ತೆರೆದಿಡುತ್ತವೆ.
ಅರ್ಧ ನಾಡಿನಲ್ಲಿ ಮಳೆ, ಇನ್ನರ್ಧ ನಾಡಿನಲ್ಲಿ ಬರ-ಬಿಸಿಲು. ವಾಡಿಕೆಯಂತೆ ಈ ಬಾರಿ ಮಳೆ-ಬೆಳೆ ಆಗಿಲ್ಲ. ಮುಂದಿನ ವರ್ಷದ ನೀರು ಕೂಳಿನ ಕಥೆಯೇನು ಎಂಬ ಚಿಂತೆ ಜನರಲ್ಲಿ ಮನೆ ಮಾಡಿರುವುದು ಸುಳ್ಳಲ್ಲ. ಆದರೂ ಅದು ಶ್ರಾವಣ ಸಂಭ್ರಮದಿಂದ ಜನರನ್ನು ವಿಮುಖರನ್ನಾಗಿಸಿಲ್ಲ. ಸಾಲು ಹಬ್ಬಗಳ ಆಚರಣೆಗೆ ಜನರು ಸಿದ್ಧರಾಗಿದ್ದಾರೆ. ಕಡೇ ಪಕ್ಷ ಈ ಶ್ರಾವಣ ಒಳ್ಳೆಯ ಮಳೆ-ಬೆಳೆಗಳ ಶುಭವಾರ್ತೆಯನ್ನಾದರೂ ತಂದೀತು ಎಂಬ ವಿಶ್ವಾಸದಿಂದ ಅವರು ಕಾಯುತ್ತಿದ್ದಾರೆ. ಪ್ರಕೃತಿ ನಮ್ಮೆಲ್ಲರ ಕನಸುಗಳನ್ನು ನನಸಾಗಿಸಲಿ.
- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ