ಭಾನುವಾರ, ಜೂನ್ 12, 2016

ಇದು ಯಾವ ಜನ್ಮದ ಮೈತ್ರಿ?

ಜೂನ್ 11-17, 2016ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ನೀವು ಈ ಮೊದಲು ಭೇಟಿ ನೀಡಿರದ ಯಾವುದೋ ಒಂದು ಸ್ಥಳಕ್ಕೆ ಹೋದಾಗ ‘ಅರೆ! ಈ ಜಾಗದಲ್ಲಿ ಹಿಂದೆಂದೋ ನಾನು ಓಡಾಡಿರುವ ಹಾಗಿದೆಯಲ್ಲ?’ ಎಂಬ ಭಾವ ನಿಮ್ಮನ್ನು ಕಾಡಿದ್ದುಂಟೇ? ಇನ್ಯಾವುದೋ ಒಂದು ಹೊಸ ಸನ್ನಿವೇಶ ಎದುರಾದಾಗ ಇಂತಹದೇ ಒಂದು ಘಟನೆ ಹಿಂದೆಯೂ ಒಮ್ಮೆ ಘಟಿಸಿತ್ತಲ್ಲ ಎಂದು ನಿಮಗೆ ಬಲವಾಗಿ ಅನಿಸುದ್ದುಂಟೇ? ಯಾವನೋ ಒಬ್ಬ ಅಪರಿಚಿತ ವ್ಯಕ್ತಿಯನ್ನು ಮೊದಲ ಬಾರಿ ಭೇಟಿಯಾದಾಗ ಈತ ನನಗೆ ತುಂಬ ಹತ್ತಿರದವನು, ಬಹಳ ಬೇಕಾದವನು ಎಂಬ ನವಿರಾದ ಸೆಳೆತವೊಂದು ಹುಟ್ಟಿಕೊಂಡದ್ದುಂಟೇ? ‘ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ!’ ಎಂಬ ಕುವೆಂಪು ಅವರ ಸಾಲುಗಳು ಥಟ್ಟನೆ ಮನದಲ್ಲಿ ಮೂಡಿ ಮೈ ಝುಮ್ಮೆನ್ನಿಸಿದ್ದುಂಟೇ?

ಹೌದೇ ಹೌದೆಂದು ನಿಮ್ಮ ಮನಸ್ಸು ಹೇಳುತ್ತಿದೆಯಾದರೆ ಒಂದು ಕ್ಷಣ ಕಣ್ಮುಚ್ಚಿ ಕುಳಿತುಕೊಂಡು ಧ್ಯಾನಸ್ಥರಾಗಿ. ನಿಮ್ಮ ಪೂರ್ವಿಕರನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿ. ಗರಿಷ್ಠ ಎಷ್ಟು ಮಂದಿಯ ಹೆಸರು ಪಟ್ಟಿಮಾಡಬಲ್ಲಿರಿ? ಅಪ್ಪ-ಅಮ್ಮ, ತಾತ-ಅಜ್ಜಿ, ಮುತ್ತಾತ-ಮುತ್ತಜ್ಜಿ... ಇಷ್ಟು ಮಂದಿಯನ್ನು ಮನಸ್ಸಿಗೆ ತಂದುಕೊಳ್ಳುವಾಗಲೇ ಸುಸ್ತೆದ್ದು ಹೋಗುತ್ತೀರಿ, ಇನ್ನು ಅದರ ಹಿಂದಿನ ಐದೋ ಹತ್ತೋ ತಲೆಮಾರನ್ನೋ ನೆನಪಿಸಿಕೊಳ್ಳುವ ಮಾತು ಅಷ್ಟಕ್ಕೇ ಉಳಿಯಿತು ಅಲ್ಲವೇ?

ನಮ್ಮ ಪೂರ್ವಜರು ಇಂತಹ ಕಡೆ ಇದ್ದರಂತೆ, ಮುತ್ತಾತನ ಕಾಲದಲ್ಲಿ ಅವರು ಇಂತಹ ಕಡೆಗೆ ವಲಸೆ ಬಂದರಂತೆ, ತಾತನ ಕಾಲದಿಂದ ಈಗ ನಾವಿರೋ ಜಾಗದಲ್ಲಿ ಇದ್ದೇವೆ ಎಂದು ನಿಮ್ಮ ಮನೆ ಹಿರಿಯರು ಹೇಳುವುದನ್ನು ನೀವು ಗಮನಿಸಿರಬಹುದು. ಅವರು ಹೇಳುವ ಪೂರ್ವಜರು ಎಷ್ಟು ವರ್ಷ ಹಿಂದಿನವರು? ಒಂದು ಎಂಟುನೂರು ವರ್ಷವೇ? ಹಾಗಾದರೆ ಅದರ ಹಿಂದಿನ ಕಥೆ ಏನು? ಅವರ ತಾತ ಮುತ್ತಾತಂದಿರು ಎಲ್ಲಿದ್ದರು? ಹೇಗಿದ್ದರು? ಅವರ ಕುಟುಂಬದಿಂದ ಒಡೆದ ಕವಲುಗಳು ಇನ್ನೆಲ್ಲಿ ಹಬ್ಬಿ ಪಸರಿಸಿರಬಹುದು? ಅವೆಲ್ಲ ಈಗಲೂ ಜೀವಂತವಾಗಿವೆಯೇ? ಇದ್ದರೆ ಇದೇ ದೇಶದಲ್ಲಿ ಇವೆಯೇ? ದೇಶದ ಗಡಿಗಳನ್ನು ದಾಟಿ ಖಂಡಾಂತರ ವ್ಯಾಪಿಸಿವೆಯೇ? ನಮ್ಮ ಕುಟುಂಬದ ಯಾವುದೋ ಅಜ್ಞಾತ ಬೇರು ಆಫ್ರಿಕಾದಲ್ಲೋ ಚೀನಾದಲ್ಲೋ ಇನ್ನೂ ಉಳಿದುಕೊಂಡಿದೆಯೇ? ಅಲ್ಲೆಲ್ಲೋ ಅರಳಿದ ಹೂವಿನ ಪರಾಗ ಇನ್ಯಾವುದೋ ದೇಶದ ಪುಷ್ಪದ ಮೇಲೆ ಬಿದ್ದು ಹುಟ್ಟಿಕೊಂಡ ಹಣ್ಣು ಕಾಲಾಂತರದಲ್ಲೊಂದು ದಿನ ಧುತ್ತೆಂದು ನಮ್ಮೆದುರು ಬಂದಾಗ ಇದು ‘ಎಮ್ಮ ಮನೆಯಂಗಳದಿ ಬೆಳೆದೊಂದು’ ಫಲವೆಂದು ಅನಿಸಲಾರದೆಂದು ಹೇಗೆ ಹೇಳುವುದು?

ವಿಸ್ಮಯವೆನಿಸುತ್ತಿದೆ ಅಲ್ಲವೇ? ಹೌದು ಈ ಬದುಕೊಂದು ವಿಸ್ಮಯದ ವಂಶವೃಕ್ಷ. ದ್ಯಾವಾ ಪೃಥಿವೀಗಳನ್ನು ಆವರಿಸಿಕೊಂಡಿರುವ ಈ ಹೆಮ್ಮರದ ಮೊತ್ತಮೊದಲ ಬೇರಾಗಲೀ ಕಟ್ಟಕಡೆಯ ಕವಲಾಗಲೀ ಎಲ್ಲಿದೆಯೆಂದು ಹೇಗೆ ತಾನೇ ಹುಡುಕಿಯೇವು! ಹಾಗಂತ ಇದು ಭಾರತೀಯ ನಂಬಿಕೆಗಳ ಪರಂಪರೆಯಲ್ಲಿ ಸಾಗಿಬಂದ ಜನ್ಮಾಂತರದ ಕಥೆಗಿಂತ ಸಂಪೂರ್ಣ ಭಿನ್ನ. ನಾವಿಲ್ಲಿ ಪೂರ್ವಜನ್ಮ, ಮರುಜನ್ಮಗಳ ಬಗ್ಗೆ ಮಾತಾಡುತ್ತಿಲ್ಲ. ಅದೊಂದು ಬೇರೆಯದೇ ಪರಿಕಲ್ಪನೆ. ಭೂಮಿಯ ಮೇಲಿನ ಪ್ರತಿಯೊಂದು ಜೀವಕ್ಕೂ ಜನ್ಮಾಂತರದ ನಂಟಿದೆ ಎಂಬುದೇ ಆ ನಂಬಿಕೆ. ಶ್ರೀಹರಿಯು ಭೂಭಾರಹರಣಕ್ಕಾಗಿ ದಶಾವತಾರಗಳನ್ನು ಎತ್ತಿಬಂದ ಪುರಾಣದ ಕಥೆ ನಮ್ಮ ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಂತೆ ಇದೆ. ಕರ್ಮಫಲದಲ್ಲಿ ನಂಬಿಕೆಯಿರುವ ಬಹುಪಾಲು ಭಾರತೀಯರು ಪೂರ್ವಜನ್ಮ, ಮರುಜನ್ಮಗಳ ಕಥೆಗಳನ್ನು ನಂಬುವುದೂ ಇದೆ. ಅಚ್ಚಣ್ಣಯ್ಯನ ಮಗ ವಿಶ್ವೇಶ್ವರನು ಜೋಯಿಸರ ಮನೆಯಲ್ಲಿ ಕ್ಷೇತ್ರಪಾಲನಾಗಿ ಹುಟ್ಟಿ ಎರಡು ವರ್ಷದವನಿರುವಾಗಲೇ ‘ನನಗೆ ಮದುವೆಯಾಗಿದೆ. ಹಂಡ್ತಿ ಹೆಸ್ರು ವೆಂಕಮ್ಮ. ಒಂದು ಗಂಡು ಮಗೂನೂ ಇದೆ’ ಎಂದು ದಂಗುಹಿಡಿಸುವ ಕಥೆಯುಳ್ಳ ಎಸ್. ಎಲ್. ಭೈರಪ್ಪನವರ ‘ನಾಯಿ ನೆರಳು’ ಕೂಡ ಹೊಸದೊಂದು ಲೋಕಕ್ಕೆ ನಮ್ಮನ್ನು ಕೊಂಡೊಯ್ಯಬಲ್ಲುದು. ಈಗಂತೂ ಜನ್ಮಾಂತರದ ಕಥೆಗಳೆಲ್ಲ ನಮ್ಮ ಟಿವಿ ಚಾನೆಲ್‍ಗಳಿಗೆ ಒಳ್ಳೆಯ ಟಿಆರ್‍ಪಿ ತಂದುಕೊಡುವ ಕಾರ್ಯಕ್ರಮಗಳು!

ಆದರೆ ಇಲ್ಲಿ ಹೇಳುತ್ತಿರುವ ಪೂರ್ವಜರ ಕಥೆ ಜನ್ಮಾಂತರದ ನಂಬಿಕೆಯಲ್ಲ, ವಂಶವಾಹಿನಿಯ ಕವಲುಗಳ ವೈಜ್ಞಾನಿಕ ಹುಡುಕಾಟ. ಕಳೆದ ಇಪ್ಪತ್ತು ವರ್ಷಗಳಿಂದೀಚೆಗೆ ವಂಶವಾಹಿಶಾಸ್ತ್ರ (Genealogy) ದಲ್ಲಿ ಅಭೂತಪೂರ್ವ ಬೆಳವಣಿಗೆ ಆಗಿದೆ, ಹೊಸಹೊಸ ಸಂಶೋಧನೆಗಳು ನಡೆದಿವೆ. ಮಾನವರು ಆಫ್ರಿಕಾ ಖಂಡದಿಂದ ಪೂರ್ವ ಏಷ್ಯಾ ದೇಶಗಳಿಗೆ ನೇರವಾಗಿ ಬಂದವರೆಂದೇ ಕೆಲವು ವರ್ಷಗಳ ಹಿಂದಿನವರೆಗೆ ನಂಬಲಾಗಿತ್ತು. ಆದರೆ ಏಷ್ಯಾದ ಹತ್ತು ರಾಷ್ಟ್ರಗಳಲ್ಲಿ ಈಚೆಗೆ ನಡೆಸಲಾದ ಮಾನವ ಅನುವಂಶೀಯತೆಯ ಪತ್ತೆ ಅಧ್ಯಯನವು ಈ ತಿಳುವಳಿಕೆಯ ದಿಕ್ಕನ್ನೇ ಬದಲಾಯಿಸಿತು. ಅದರ ಪ್ರಕಾರ, ದಕ್ಷಿಣ ಆಫ್ರಿಕಾದಿಂದ ಮಾನವರು ಲಕ್ಷ ವರ್ಷಗಳ ಹಿಂದೆ ಮೊತ್ತಮೊದಲು ವಲಸೆ ಬಂದದ್ದು ಭಾರತಕ್ಕೆ. ಇಲ್ಲಿಂದ ಅವರು ದಕ್ಷಿಣ ಏಷ್ಯಾ ಮತ್ತು ಪೂರ್ವ ಏಷ್ಯಾಗಳಿಗೆ, ಕೊನೆಗೆ ಅಮೇರಿಕಕ್ಕೆ ಪಸರಿಸಿಕೊಂಡರು. ಹಾಗಾಗಿ ಏಷ್ಯಾ ಖಂಡದ ಪ್ರತಿಯೊಬ್ಬರೂ ಭಾರತದೊಂದಿಗೆ ಆನುವಂಶಿಕ ಸಂಬಂಧ ಹೊಂದಿದ್ದಾರೆ ಎಂದು ಆ ಅಧ್ಯಯನವು ಬಹಿರಂಗಪಡಿಸಿತು.

ತಮ್ಮ ಪೂರ್ವಜರ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲ ಈಚಿನ ವರ್ಷಗಳಲ್ಲಿ ತುಸು ಹೆಚ್ಚೇ ಆಗಿರುವುದು ಒಂದು ಸೋಜಿಗದ ಸಂಗತಿ. ‘ವಂಶ ಎನ್ನುವ ಕಲ್ಪನೆ ನಮ್ಮ ಬೇರು. ನಾವು ಯಾರಿಗೆ ಹುಟ್ಟಿದ್ದು? ಯಾವ ಕ್ಷೇತ್ರದಲ್ಲಿ ಹುಟ್ಟಿದ್ದು? ಕ್ಷೇತ್ರ ಅಂದರೆ ಹೆಣ್ಣು, ಬೇರು ಅಂದರೆ ಬೀಜ. ಈ ಕುರಿತು ಎಲ್ಲರಿಗೂ ಎಲ್ಲ ಸಮಾಜದಲ್ಲೂ ದೇಶಗಳಲ್ಲೂ ಕುತೂಹಲ ಇದೆ’ ಎಂದು ‘ವಂಶವೃಕ್ಷ’ದ ಕರ್ತೃ ಎಸ್.ಎಲ್. ಭೈರಪ್ಪ ಸಂದರ್ಶನವೊಂದರಲ್ಲಿ ಹೇಳಿದ್ದಿದೆ. ಪೂರ್ವಜರ ಕುರಿತಾದ ಆಧುನಿಕರ ಕುತೂಹಲಕ್ಕೆ ಕಾರಣ ಮೇಲೆ ಹೇಳಿರುವ ವಂಶವಾಹಿಶಾಸ್ತ್ರದಲ್ಲಿ ಆಗಿರುವ ವೈಜ್ಞಾನಿಕ ಪ್ರಗತಿ. ಒಂದು ಸಂತತಿಯ ನಿಜವಾದ ಬಾಧ್ಯಸ್ತರು ಯಾರು ಎಂಬುದನ್ನು ಪತ್ತೆಮಾಡುವ ಸಾಫ್ಟ್‍ವೇರ್‍ಗಳು ಅಭಿವೃದ್ಧಿಯಾಗಿರುವುದೂ ಈ ಹೊಸ ಕುತೂಹಲಕ್ಕೆ ಕಾರಣ. ಲೀಗಸಿ ಫ್ಯಾಮಿಲಿ ಟ್ರೀ, ಫ್ಯಾಮಿಲಿ ಟ್ರೀ ಮೇಕರ್, ರೂಟ್ಸ್ ಮ್ಯಾಜಿಕ್ ಎಸೆನ್ಷಿಯಲ್ ಎಂಬ ಸಾಪ್ಟ್‍ವೇರ್‍ಗಳು, ಆನ್ಸಿಸ್ಟರಿ ಡಾಟ್ ಕಾಮ್‍ನಂತಹ ಜಾಲತಾಣಗಳು ಇಂದು ಜೀನಿಯಾಲಜಿ ಅಥವಾ ಪೆಡಿಗ್ರೀಯ ಹುಡುಕಾಟಕ್ಕೆ ಕುತೂಹಲಿಗಳ ಬೆನ್ನಿಗೆ ನಿಂತಿವೆ. ಒಂದು ಮೂಲದ ಪ್ರಕಾರ, ವಂಶವಾಹಿನಿಯ ಅಧ್ಯಯನ ಇಂದು ಅಂತರ್ಜಾಲದ ಅತ್ಯಂತ ಜನಪ್ರಿಯ ಹುಡುಕಾಟಗಳಲ್ಲಿ ಒಂದು.

ವಂಶವೃಕ್ಷದ ಆಳ ಅಗಲಗಳನ್ನು ತಿಳಿದುಕೊಳ್ಳುವಲ್ಲಿ ಇಂದು ಮೂರು ಬಗೆಯ ವೈಜ್ಞಾನಿಕ ವಿಧಾನಗಳು ಪ್ರಚಲಿತದಲ್ಲಿವೆ. ಮೊದಲನೆಯದು, ಅಟೋಸೋಮಲ್ ಡಿಎನ್‍ಎ ಟೆಸ್ಟಿಂಗ್. ಇದು ಮಗುವಿನ ಲಿಂಗ ನಿರ್ಧಾರದಲ್ಲಿ ಪಾತ್ರ ವಹಿಸದ ಇಪ್ಪತ್ತೆರಡು ಜತೆ ವರ್ಣತಂತುಗಳ ಅಧ್ಯಯನ. ತಂದೆ ತಾಯಿಯರಿಂದ ಮತ್ತು ಅವರ ಹಿರೀಕರಿಂದ ಸಮಾನವಾಗಿ ಪ್ರವಹಿಸಿಕೊಂಡು ಬಂದ ಈ ವರ್ಣತಂತುಗಳ ಪರೀಕ್ಷೆ ವಂಶವೃಕ್ಷದ ಬೇರುಗಳ ಹುಡುಕಾಟಕ್ಕೆ ತುಂಬ ಮಖ್ಯ. ಎರಡನೆಯದು, ಮೈಟೋಕಾಂಡ್ರಿಯಲ್ ಡಿಎನ್‍ಎ ಟೆಸ್ಟಿಂಗ್. ಇದು ತಾಯಿಯಿಂದ ಮಗುವಿಗೆ ವರ್ಗಾವಣೆಯಾಗುವ ಅಂಶದ ಪರೀಕ್ಷೆ. ತಾಯಿಯ ಕಡೆಯ ಪೂರ್ವಜರ ಪತ್ತೆಗೆ ಇದು ತುಂಬ ಸಹಕಾರಿ. ಮೂರನೆಯದು, ವೈ ಕ್ರೊಮೋಸೋಮ್ ಟೆಸ್ಟಿಂಗ್. ಇದು ಗಂಡಸಿನಲ್ಲಿ ಮಾತ್ರ ಇರುವ ಇಪ್ಪತ್ಮೂರನೆಯ ವರ್ಣತಂತು ಜೋಡಿಯ ಅಧ್ಯಯನ. ತಂದೆಯ ಕಡೆಯ ಪೂರ್ವಜರ ಪತ್ತೆ ಈ ಪರೀಕ್ಷೆಯಿಂದ ಸಾಧ್ಯ.

ಈ ವೈಜ್ಞಾನಿಕ ವಿಧಾನಗಳಿಗೂ ಸಾಕಷ್ಟು ಇತಿಮಿತಿಗಳಿವೆ ಮತ್ತು ಇವುಗಳಿಂದಾಗಿ ವಂಶವಾಹಿನಿಯ ಚರಿತ್ರೆಯನ್ನು ಹೆಕ್ಕಿ ತೆಗೆಯುವಾಗ ದಾರಿ ತಪ್ಪುವ ಅಪಾಯಗಳೂ ಇವೆ ಎಂಬುದನ್ನು ವಿಜ್ಞಾನಿಗಳೂ ಒಪ್ಪಿಕೊಂಡಿದ್ದಾರೆ. ಆದರೂ ಈ ವಂಶವೃಕ್ಷದ ಕಥೆ ತುಂಬ ರೋಚಕವಾದ್ದು. ಎದುರಿಗೆ ನಿಂತಿರುವ ಆಗಂತುಕನೊಬ್ಬನ ಕುರಿತು ನಮಗೆ ಅರಿವೇ ಇಲ್ಲದಂತೆ ನಮ್ಮ ಮನಸ್ಸು ‘ಇವ ನಮ್ಮವ ಇವ ನಮ್ಮವ’ ಎಂದು ಗುನುಗಿಕೊಂಡರೆ ಅದರಾಚೆಗೆ ನಮ್ಮ ನೆನಪು ಅಥವಾ ತಿಳುವಳಿಕೆಗೆ ಮೀರಿದ ಯಾವುದೋ ಒಂದು ಪುರಾತನ ನಂಟು ಇದ್ದರೂ ಇರಬಹುದು ಎಂಬ ಕಲ್ಪನೆಯೇ ವಿಸ್ಮಯಕಾರಿ.

‘ಎನ್ನ ಒಡಹುಟ್ಟಿದವನೋ ಸಂಬಂಧವೋ ತಿಳಿಯೆನು, ಕರ್ಣನಾರೈ?’ ಎಂದು ಕುರುಕ್ಷೇತ್ರದ ರಣಾಂಗಣದಲ್ಲಿ ಇದ್ದಕಿದ್ದಂತೆ ಅರ್ಜುನ ಮನಸಿಜ ಪಿತನಾದ ಕೃಷ್ಣನನ್ನು ಪಟ್ಟು ಹಿಡಿದು ಕೇಳಿದನಂತೆ. ಕಣ್ಣರಿಯದಿದ್ದರೂ ಕರುಳು ಅರಿಯುತ್ತದೆ ಎಂಬ ಗಾದೆಯ ಹಿಂದೆ ಇರುವುದು ವಂಶವಾಹಿನಿಯ ಕಥೆಯೇ?

ಕಾಮೆಂಟ್‌ಗಳಿಲ್ಲ: